ಅಧ್ಯಾಯ ಮೂವತ್ನಾಲ್ಕು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಮೂವತ್ತಾರನೇ ಕಂತು
ಡೋರಾಳ ಮತ್ತೂ ನನ್ನೊಳಗೆ ನಡೆದಿದ್ದ ಮಾತುಕತೆ, ವಾಗ್ದಾನಗಳನ್ನು ಕುರಿತಾಗಿ ಏಗ್ನೆಸಳಿಗೆ ಸೂಕ್ಷ್ಮವಾಗಿ ನಾನೊಂದು ಪತ್ರ ಬರೆದೆನು. ನನ್ನ ಜೀವನವೇ ಉದ್ವೇಗಯುತವಾಗಿ ಸಾಗುತ್ತಿರುವಂತೆ ತೋರುತ್ತಿತ್ತು. ಏಗ್ನೆಸ್ಸಳ ಅಭಿಪ್ರಾಯಗಳಿಗೆ ನಾನು ತುಂಬಾ ಬೆಲೆಕೊಡುತ್ತಿದ್ದುದರಿಂದ ನನ್ನ ಈವರೆಗಿನ ಕಾರ್ಯಗಳನ್ನು ಏಗ್ನೆಸ್ಸಳು ಒಪ್ಪುವಳೋ ಆಕ್ಷೇಪಿಸುವಳೋ ಎಂಬ ಹೆದರಿಕೆಯೂ ನನಗಿತ್ತು. ಏಗ್ನೆಸ್ಸಳ ಒಪ್ಪಿಗೆಯಿದ್ದು ನಡೆದ ಕಾರ್ಯವೆಲ್ಲ ಶುಭಪ್ರದವಾಗುವುದೆಂಬ ಭಾವನೆಯೂ ನನ್ನಲ್ಲಿದ್ದುದರಿಂದ, ಅವಳ ಸಮ್ಮತಿಯನ್ನೂ ಹಾರೈಸುತ್ತಿದ್ದೆನು. ಡೋರಾಳ ರೂಪ, ಗುಣ, ಲಾವಣ್ಯ ಎಲ್ಲವನ್ನೂ ವಿವರಿಸಿ ಬರೆದಿದ್ದೆ. ಅಲ್ಲದೆ, ನಾನು ಸಾವಧಾನವಾಗಿಯೇ ಮುಂದುವರಿಯುತ್ತಿದ್ದೆನಾಗಿಯೂ ಪತ್ರದಲ್ಲಿ ಬರೆದಿದ್ದೆನು. ಅವಳಲ್ಲಿ ದೋಷಗಳೇನೂ ಇಲ್ಲವೆಂದೂ ಬರೆದಿದ್ದೆನು.
ನನ್ನ ಪತ್ರಕ್ಕೆ ಏಗ್ನೆಸ್ಸಳಿಂದ ಮರು ಟಪಾಲಿಗೇ ಉತ್ತರ ಬಂತು. ಅವಳು ಮುಖತಃ ನನ್ನೊಡನೆ ಮಾತಾಡಿದ್ದರೆ ಹೇಗೆ ಹೇಳುತ್ತಿದ್ದಳೋ ಅದೇ ಪರಿಣಾಮ ಕೊಡಬಲ್ಲಂಥ ಉತ್ತರವನ್ನೇ ಬರೆದಿದ್ದಳು. ಅವಳು ಯಾವುದನ್ನೂ ಆಕ್ಷೇಪಿಸಲಿಲ್ಲ – ಸಹೃದಯಳಾಗಿ, ಸೌಮ್ಯವಾಗಿ, ನನ್ನ ಸಂತೋಷದಲ್ಲಿ ಭಾಗಿಯಾಗುವ ಪ್ರಿಯ ಭಗಿನಿಯ ಮೃದು ಭಾವನೆಗಳು ಮಾತ್ರ ಪತ್ರದಲ್ಲಿದ್ದುವು.
ಟ್ರೇಡಲ್ಸನೂ ಇದೇ ಸಮಯದಲ್ಲಿ ನನ್ನ ಮನೆಗೆ ಬಂದನು. ಅವನೊಡನೆ ಮಾತಾಡುತ್ತಾ ಅವನ ಕಷ್ಟ ಸುಖಗಳ ವರದಿಯನ್ನು ಕೇಳಿದೆ. ಮಿ. ಮೈಕಾಬರರ ಸಾಲಕ್ಕಾಗಿ ಅವನ ಸಾಮಾನುಗಳು ಸಹ ಕೋರ್ಟು ಹರಾಜಿನಲ್ಲಿ ಮಾರಾಟವಾಗಿ ಹೋದ ಕಥೆಗಳನ್ನೆಲ್ಲ ಹೇಳಿದನು. ಮಿ. ಮೈಕಾಬರರಿಗೆ ಜಾಮೀನು ನಿಂತಿದ್ದ ಜವಾಬ್ದಾರಿ ಪೂರ್ಣ ಮುಗಿಯಲಿಲ್ಲವೆಂದೂ ಟ್ರೇಡಲ್ಸನು ಹೇಳಿದನು. ಈ ಕಥೆಗಳನ್ನೆಲ್ಲ ತಾನು ಯಾರದೋ ಬೇರೊಬ್ಬನ ಕಥೆ ಹೇಳುವವನಂತೆ ನಿರುದ್ವೇಗದಿಂದ ಹೇಳಿದನು.
ಟ್ರೇಡಲ್ಸನು ತನ್ನ ಅತ್ತೆ ಮನೆಯ ಅನೇಕ ಸ್ವಾರಸ್ಯದ ಸಂಗತಿಗಳನ್ನೂ ತಿಳಿಸಿದನು. ಇವನು ಮದುವೆಯಾಗಲಿದ್ದ ಸೋಫಿ ಸಮೇತಳಾಗಿ ಅತ್ತೆಗೆ ಒಂಬತ್ತು ಜನ ಹೆಣ್ಣುಮಕ್ಕಳಿದ್ದರು. ಅತ್ತೆ ಸದಾ ರೋಗಿಯೇ ಆಗಿದ್ದುದರಿಂದ ಅವಳು ಮನೆಗೆಲಸವನ್ನು ಸ್ವಲ್ಪವೂ ಮಾಡುತ್ತಿರಲಿಲ್ಲ. ಸೋಫಿಯ ಅಕ್ಕ ಎಲ್ಲರಿಗಿಂತ ಸುಂದರಿಯಾಗಿದ್ದುದರಿಂದ – ಆ ವಿಷಯದಲ್ಲಿ (ಸೋಫಿ ಸಮೇತವಾಗಿ) ಅವರ ಸಂಸಾರವೇ ಹೆಮ್ಮೆ ಪಡುತ್ತಿತ್ತು. ಆ ಅಕ್ಕ ಅವಳ ಸೌಂದರ್ಯವನ್ನು ಕಾಪಾಡಿಕೊಳ್ಳಲು ತಕ್ಕಷ್ಟು ಮತ್ತೂ ತಕ್ಕಂಥ ಕೆಲಸಗಳನ್ನು ಮಾತ್ರ ಮಾಡುತ್ತಿದ್ದಳು. ಇನ್ನುಳಿದ ಏಳು ಜನ ತಂಗಿಯವರು ಚಿಕ್ಕವರೇ ಆಗಿದ್ದುದರಿಂದ ಅವರೆಲ್ಲರ ಕೆಲಸವನ್ನೂ ಸೋಫಿಯೇ – ಹದಿನೆಂಟು ಕೈಗಳಿದ್ದವಳಂತೆ, ಮಾಡುತ್ತಿದ್ದಳು. ಸೋಫಿಯೇ ಆ ಮನೆ ಕೆಲಸವನ್ನು ಮಾಡಿ ಕಷ್ಟಪಡುತ್ತಿದ್ದಳೆಂಬುದು ಟ್ರೇಡಲ್ಸನ ಗಮನಕ್ಕೆ ವಿಶೇಷವಾಗಿ ಬಂದಿರಲಿಲ್ಲ. ಆದರೆ, ಸೋಫಿಯು ಎಂಥ ಗುಣಸಂಪನ್ನೆ, ಕಾರ್ಯ, ಕರ್ತವ್ಯತತ್ಪರಳು ಎಂಬುದನ್ನು ಮಾತ್ರ ಗಮನಿಸಿ, ಗ್ರಹಿಸಿ, ಸಂತೋಷಿಸುತ್ತಿದ್ದನು. ಸೋಫಿಯ ಅವಳ ಸಂಸಾರದ ಭಾರವನ್ನು ಹೊರುತ್ತಿದ್ದ ಕಷ್ಟವನ್ನೂ ಟ್ರೇಡಲ್ಸನು ಬಹು ಸಮಾಧಾನದಿಂದ – ಒಂದು ವಿಧದ ನಿರ್ಲಿಪ್ತತೆಯಿಂದ ಸುಧಾರಿಸಿಕೊಂಡು ಹೇಳುತ್ತಿದ್ದನೇ ಹೊರತು, ಈ ವಿಷಯವನ್ನು ನಾನು ಕೇಳಿ ಸಿಟ್ಟುಗೊಂಡಷ್ಟು ಅವನು ಸಿಟ್ಟುಗೊಂಡಿರಲಿಲ್ಲ. ಟ್ರೇಡಲ್ಸನು ಇನ್ನು ಒಂದು ವಿಷಯವನ್ನು ತಿಳಿಸಿದನು. ಮಿ.ಮೈಕಾಬರರು ತಮ್ಮ ಸಾಲಿಗರ ಬಾಧೆಯನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಮಿ. ಮಾರ್ಟಿಮರ್ ಎಂಬ ಹೊಸ ಹೆಸರಿನಿಂದ, ತಮ್ಮ ಪೂರ್ವ ಕ್ರಮದಲ್ಲೇ ಜೀವನ ನಡೆಸುತ್ತಿದ್ದರೆಂದೂ ಅವನಿಂದ ತಿಳಿದೆನು.
ನಾನು ಒಂದು ದಿನ ತಿರುಗಾಡಿ ಮನೆಗೆ ಬರುವಾಗ ಅನಿರೀಕ್ಷಿತವಾಗಿ ನನ್ನ ಅತ್ತೆ ನಮ್ಮ ಮನೆಗೆ ಬಂದು ಕುಳಿತಿದ್ದುದನ್ನು ಕಂಡೆನು. ಕೆಲವು ಪೆಟ್ಟಿಗೆಗಳು, ಮೂಟೆಗಳು, ಅವಳ ಹಕ್ಕಿಯ ಪಂಜರ, ಬೆಕ್ಕು, ಮತ್ತಿತರ ಕೆಲವು ವಸ್ತುಗಳನ್ನು ರಾಶಿ ಹಾಕಿಕೊಂಡು – ರಾಬಿನ್ಸನ್ ಕ್ರೂಸೋವಿನಂತೆ, ಅವಳ ಸಾಮಾನುಗಳ ಮಧ್ಯೆ ಕುಳಿತಿದ್ದಳು. ಮಿ. ಡಿಕ್ಕರೂ ಅವರ ಗಾಳೀಪಟ ಸಮೇತರಾಗಿ, ಅಲ್ಲೇ ಸಮೀಪದಲ್ಲಿ ಕುಳಿತಿದ್ದರು.
ಈ ರೀತಿಯ ಅನಿರೀಕ್ಷಿತ ಆಗಮನವನ್ನು ಕಂಡು ನಾನು ಗಾಬರಿಯಾದೆನು. ಈ ನೂತನ ಸಂದರ್ಭವನ್ನು ಕುರಿತು ಅತ್ತೆ ತಾನಾಗಿಯೇ ತಿಳಿಸುವ ಮೊದಲು ನಾನು ವಿಚಾರಿಸುವುದು ಸರಿಯಲ್ಲವೆಂದು, ಇತರ ವಿಷಯಗಳನ್ನು ಕುರಿತಾಗಿ ಮಾತಾಡತೊಡಗಿದೆನು. ನಮಗೆ ಚಹಾ ತಂದುಕೊಡುವಂತೆ ಪೆಗಟಿಗೆ ಹೇಳಿದೆನು. ನಾನು ಮಾತಾಡುತ್ತಿದ್ದ ಹಾಗೆಯೇ ಪೆಗಟಿ ಚಹ ತಂದುಕೊಟ್ಟಳು. ಪೆಗಟಿಯನ್ನು ಕಂಡೊಡನೆ ಅತ್ತೆ ಕೇಳಿದಳು-
“ನನ್ನ ಗುರುತು ಸಿಕ್ಕಿತೇ ನಿನಗೆ? ನಿನ್ನ ಹೆಸರು? ಅದೇನೋ – ಒಂದು ನೀಗ್ರೋ ಹೆಸರಿನಂತೆ – ಅವಳು ತಾನೆ, ನೀನು?” “ನನ್ನ ಹೆಸರು ಕ್ಲೇರಾ ಪೆಗಟಿ ಬಾರ್ಕಿಸ್” ಎಂದು ಪೆಗಟಿ ಅಂಜಿಕೆಯಿಂದಲೇ ಹೇಳಿದಳು. “ಪೆಗಟಿ’ ಒಂದನ್ನು ಮಾತ್ರ ತೆಗೆದು ಮತ್ತೇನಂದರೂ ಕೇಳೋಣ – ಕೇಳಬಹುದೂಂತ ತೋರುತ್ತೆ” ಎಂದು ಅತ್ತೆ ಮುಗುಳು ನಗೆ ಆಡುತ್ತಾ ತಮಾಶೆಗೆಂದು ಗೊತ್ತಾಗುವಂತೆ ಹೇಳಿದಳು. ಚಹ ಸೇವನೆಯನಂತರ ಅತ್ತೆ ಹಠಾತ್ತಾಗಿ ನನ್ನನ್ನು ಪ್ರಶ್ನಿಸಿದಳು – “ನಾನು ಈ ಆಸನದಲ್ಲಿ ಇಷ್ಟೊಂದು ಸ್ಥಿರವಾಗಿ ಕುಳಿತಿರುವುದು ಏಕೆಂದು ಗೊತ್ತಿದೆಯೇ, ಟ್ರಾಟ್?” “ಇಲ್ಲ.” “ನಾನು ಕುಳಿತಿರಬೇಕಾದುದು ನನ್ನ ಆಸ್ತಿಯಲ್ಲಿ ತಾನೆ? ಹಾಗಾಗಿ ಹೀಗೆ ಕುಳಿತಿದ್ದೇನೆ” ಅಂದಳು ಅತ್ತೆ, ಅರೆ ನಗೆ ನಕ್ಕು. “ಅದೆಲ್ಲ ಕಾಣುತ್ತದೆ – ನನಗೆ ಏನೂ ಅರ್ಥವಾಗಲಿಲ್ಲ – `ಆಸ್ತಿ’ ಅಂದರೇನು” ಎಂದು ನಾನು ಕೇಳಿದೆನು. “ನನ್ನ `ಆಸ್ತಿ’ ಅಂದರೆ ನಾನು ಇಲ್ಲಿ ತಂದಿರುವುದು ಮಾತ್ರ ನನ್ನ ಆಸ್ತಿ – ಅಷ್ಟಲ್ಲದೆ ನನಗೆ ಇನ್ನೇನೂ ಇಲ್ಲ?” ಅಂದಳು ಅತ್ತೆ.
ನನಗೆ ವಿಶೇಷ ಅರ್ಥವಾಗದೆ ನಾನು ಆಶ್ಚರ್ಯಪಟ್ಟೆನು. ಮಿ. ಡಿಕ್ಕರು ನನ್ನನ್ನೂ ನನ್ನತ್ತೆಯನ್ನೂ ನೋಡುತ್ತಾ ಬಹು ದುಃಖಪಡುತ್ತಿರುವವರಂತೆ ತೋರಿದರು. “ಡೋವರಿನ ಮನೆ, ಮತ್ತು ಅಲ್ಲಿನ ಹಿತ್ತಲೂ ಈಗ ಇಲ್ಲಿರುವ ಸಾಮಾನುಗಳು ಇಷ್ಟು ಮಾತ್ರ ನನ್ನ ಇಂದಿನ ವಿಶಿಷ್ಟವಾದ ಆಸ್ತಿ ಟ್ರಾಟ್ – ಬಾಕಿ ಎಲ್ಲವನ್ನೂ ಅಪಹರಿಸಿರುತ್ತಾರೆ” ಎಂದು ಅತ್ತೆ ತಿಳಿಸಿದಳು. ನನಗೆ ಆಶ್ಚರ್ಯವೂ ದುಃಖವೂ ಆಯಿತು. ನನ್ನ ದುಃಖವನ್ನು ಕಂಡು ಅತ್ತೆ ನನ್ನನ್ನು ತಬ್ಬಿಕೊಂಡು ಅತ್ತಳು. ತನಗಾಗಿ ತಾನು ಎಂಥ ಕಷ್ಟವನ್ನಾದರೂ ಸಹಿಸಲು ಸಿದ್ಧಳಾಗಿದ್ದರೂ ನನಗೆ ಇದರಿಂದ ಕಷ್ಟವಾಗಬಹುದೆಂದು ಯೋಚಿಸಿ ತಾನು ದುಃಖಿಸುತ್ತಿರುವುದಾಗಿ ತಿಳಿಸಿದಳು. ಹೀಗೆ ಹೇಳಿ ಸ್ವಲ್ಪ ಹೊತ್ತು ಅತ್ತೆ ಮೌನವಾಗಿ ಕುಳಿತಿದ್ದಳು. ಕೊನೆಗೆ ಅವಳ ಸ್ವಭಾವಸಿದ್ಧವಾದ ಮನೋದಾರ್ಢ್ಯದಿಂದ ಅತ್ತೆ – “ನಮ್ಮ ಕಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು, ಟ್ರಾಟ್. ನಾವು ಪರಿಸ್ಥಿತಿಗಳನ್ನು ಸರಿಪಡಿಸತಕ್ಕ ಅವುಗಳ ಯಜಮಾನರೇ ಆಗಬೇಕೇ ಹೊರತು, ಪರಿಸ್ಥಿತಿಗಳೇ ನಮ್ಮನ್ನು ನಡೆಸಬಹುದಾದಂಥ ಅವುಗಳ ಅಡಿಯಾಳಾಗಕೂಡದು. ಸೋಲುಗಳನ್ನು ಮೆಟ್ಟಿ ಮೇಲೆದ್ದು ನಿಂತು ಧೀರರಾಗಿ ವರ್ತಿಸುವ ಪಾತ್ರವನ್ನು ಮಾತ್ರ ನಾವು ಈ ಪ್ರಾಪಂಚಿಕ ಜೀವನರಂಗದಲ್ಲಿ ವಹಿಸಬೇಕು” ಎಂದು ಸ್ಫೂರ್ತಿಯುತವಾಗಿ ನುಡಿದಳು.
(ಮುಂದುವರಿಯಲಿದೆ)
ತುಂಬ ಚಿಕ್ಕದಾಯಿತು. ಎರಡು ಅಧ್ಯಾಯಗಳನ್ನು ಓದಬಹುದು. ಧನ್ಯವಾದಗಳು