ಅಧ್ಯಾಯ ಮೂವತ್ತಾರು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಮೂವತ್ತೆಂಟನೇ ಕಂತು

ಅತ್ತೆಯ ಬಡತನದ ಪರಿಸ್ಥಿತಿ ತಿಳಿದು ಬಂದನಂತರ ನನ್ನ ಜೀವನ ಕ್ರಮಗಳನ್ನೆಲ್ಲ ಬದಲಾಯಿಸತೊಡಗಿದ್ದೆ. ಅನೇಕ ವಿಷಯಗಳಲ್ಲಿ ಬದಲಾವಣೆಯನ್ನೇ ತಂದಿದ್ದೆ. ಇಂಥ ಕಷ್ಟ ಕಾಲದಲ್ಲಾದರೂ ಸಹ ಅತ್ತೆಗೆ ಒಪ್ಪುವ ವಿಧದಲ್ಲಿ, ಅವಳಂತೆಯೇ ಧೈರ್ಯದಿಂದ ಕಷ್ಟಗಳನ್ನು ಸಹಿಸಿ, ಅಭ್ಯುದಯದ ಮಾರ್ಗವನ್ನು ನಿರ್ಮಿಸಿ, ನನ್ನ ಮೇಲೆ ಅವಳು ಈವರೆಗೆ ತೋರಿಸಿದ್ದ ಪ್ರೀತಿ ವಿಶ್ವಾಸಕ್ಕಾಗಿ ಕೃತಜ್ಞತೆಯಿಂದ ವರ್ತಿಸಿ ಅವಳ ಶ್ಲಾಘನೆಯನ್ನೇ ಪಡೆಯಬೇಕೆಂದೂ ನಿರ್ಧರಿಸಿದ್ದೆನು.

ಮರುದಿನ ಬೆಳಗ್ಗೆ ಹೈಗೇಟಿನಲ್ಲಿದ್ದ ಡಾ| ಸ್ಟ್ರಾಂಗರ ಮನೆಗೆ ಹೊರಡುವ ಮೊದಲು ತಣ್ಣೀರಿನಲ್ಲಿ ಸ್ನಾನ ಮಾಡಿದೆ. ಒಳ್ಳೊಳ್ಳೆ – ಹೆಚ್ಚು ಕ್ರಯದ ಉಡುಪುಗಳನ್ನೆಲ್ಲ ಮಾರಿ, ಸಾಧಾರಣ ಕ್ರಯದ, ಮತ್ತು ಹಳೆ ಉಡುಪುಗಳನ್ನು ಮಾತ್ರ ಉಪಯೋಗಿಸ ತೊಡಗಿದ್ದುದರಿಂದ, ಈ ದಿನವೂ ಹಳೆ ಉಡುಪುಗಳನ್ನು ಧರಿಸಿ ಹೊರಟೆ. ಹೀಗೆ ಹಳೆ ಉಡುಪು ಧರಿಸುವುದೇ ಒಂದು ಪ್ರಶಂಸನೀಯ ಕಾರ್ಯವೆಂದೇ ತಿಳಿದು ನನ್ನ ಮಾರ್ಗದಲ್ಲಿ ಹುರುಪಿನಿಂದ ಸಾಗಿದೆ.

ನನ್ನ ನಡಿಗೆಯ ಜತೆಯಲ್ಲೇ ನನ್ನ ಭವಿಷ್ಯದ ಕಾರ್ಯಕ್ರಮಗಳನ್ನು ಆಲೋಚಿಸುತ್ತಾ ನಿರ್ಧರಿಸುತ್ತಾ ಹೋದೆ. ದೇಹ ಮತ್ತು ಮಾನಸಿಕ ಪರಿಶ್ರಮಗಳಿಂದ ಸಾಕಷ್ಟು ಹಣ ಸಂಪಾದಿಸಿ, ಡೋರಾಳನ್ನು ಪಡೆದು ಪೂಜಿಸುವ ಗುರಿಯನ್ನು ನನ್ನ ಮಾನಸಿಕ ದೃಷ್ಟಿಪಥದಲ್ಲಿಟ್ಟುಕೊಂಡೆನು. ಕೈಯ್ಯಲ್ಲಿ ಕೊಡಲಿ ಹಿಡಿದು ಡೋರಾಳನ್ನು ಸೇರಲಿರುವ ಕಷ್ಟಗಳ ಗೊಂಡಾರಣ್ಯವನ್ನು ಬೇಧಿಸಿ, ಪ್ರಖ್ಯಾತನಾಗಿ, ಡೋರಾಳ ಬಳಿ ಸೇರುವುದೂ ಆ ಮಾರ್ಗವಲ್ಲದಿದ್ದರೆ, ಕೈಯ್ಯಲ್ಲಿ ಚಮ್ಮಟಿ ಹಿಡಿದು ಕರ್ಗಲ್ಲಿನ ಪರ್ವತಗಳನ್ನಾದರೂ ಪುಡಿ ಮಾಡಿ ಡೋರಾಳ ಬಳಿ ಸೇರುವುದೂ ಇಂತಹ ಯಾವುದಾದರೊಂದು ನ್ಯಾಯ ಸಮ್ಮತವಾದ, ಎಷ್ಟೇ ಕಡಿದಾದ ಕೆಲಸವನ್ನಾದರೂ ಮಾಡಿ ಡೋರಾಳನ್ನು ಪಡೆಯುವುದೂ ನನ್ನ ಜೀವನದ ಗುರಿಯಾಗಿ ಇಟ್ಟುಕೊಂಡೆನು. ಈ ತೆರನಾಗಿ ಆಲೋಚಿಸುತ್ತಾ ಡಾ| ಸ್ಟ್ರಾಂಗರ ಮನೆಗೆ ತಲುಪಿದೆನು.

ಡಾಕ್ಟರರು ಕೇಂಟರ್ಬರಿಯಲ್ಲಿದ್ದಂತೆಯೇ ಆಲೋಚನಾಮಗ್ನರಾಗಿ ಹೂದೋಟದಲ್ಲಿ ತಿರುಗಾಡುತ್ತಿದ್ದರು. ಅವರ ಕೈಯ್ಯಲ್ಲಿ, ಕಂಕುಳಲ್ಲಿ ಮತ್ತು ಜೇಬಿನಲ್ಲಿ ಕಾಗದಗಳಿದ್ದುವು. ಅವರು ನೆಲವನ್ನೇ ನೋಡುತ್ತಾ ಒಂದು ನಿರ್ದಿಷ್ಟ ದೂರಕ್ಕೆ ಮಾತ್ರ ಹಿಂದಕ್ಕೂ ಮುಂದಕ್ಕೂ ಹೋಗುತ್ತಾ ಯಾರ ಕಡೆ ಮುಖವಿದ್ದರೂ ಎದುರಿದ್ದವರು ಯಾರನ್ನು ಗುರುತಿಸದೆ, ತಮ್ಮ ಘನವಾದ ಡಿಕ್ಷನರಿಯನ್ನು ಕುರಿತಾಗಿ ಆಲೋಚಿಸುತ್ತಿದ್ದರು.

ಡಾಕ್ಟರರು ನನ್ನನ್ನು ನೋಡುವಂತೆ ಮಾಡಿಕೊಂಡು ಅವರಿಗೆ ನಮಸ್ಕರಿಸಿ ಅವರ ಯೋಗಕ್ಷೇಮವನ್ನು ವಿಚಾರಿಸಿದೆನು. ಅವರೂ ನಮ್ಮ ಮನೆಯವರ ಯೋಗಕ್ಷೇಮವನ್ನು ವಿಚಾರಿಸಿದರು. ಆಗಲೇ ಅವರು ತಮ್ಮ ಪತ್ನಿಯನ್ನು ಕರೆದು ನಾನು ಮಧ್ಯಾಹ್ನದ ಊಟಕ್ಕೆ ಅವರಲ್ಲೇ ಇರುವೆನಾಗಿ ತಿಳಿಸಿದರು. ಅನಂತರ ಕೆಲವು ಸಂಗತಿಗಳನ್ನು ಮಾತಾಡುತ್ತಾ ಕುಳಿತೆವು.

ನಮ್ಮ ಊಟದ ಸಮಯದಲ್ಲಿ ನಾನು ಬಂದ ಕಾರ್ಯವನ್ನು ಏಗ್ನೆಸ್ಸಳು ನನಗೆ ತಿಳಿಸಿದ್ದ ವಿಷಯಗಳನ್ನೂ ಡಾಕ್ಟರರಿಗೆ ತಿಳಿಸಿದೆನು. ಆದರೆ ನನ್ನಷ್ಟು ಯೋಗ್ಯತೆಯುಳ್ಳವನಿಗೆ ಅವರು ಕೊಡಬಹುದಾದ ಕೆಲಸವು ಭೂಷಣವಲ್ಲವೆಂದು ಅವರು ತರ್ಕ ಮಾಡಿದರು. ಕೊನೆಗೆ ನನ್ನ ಒತ್ತಾಯಕ್ಕಾಗಿ ಅವರು ನನ್ನನ್ನು ದಿನಕ್ಕೆ ನಾಲ್ಕು ಘಂಟೆಯಂತೆ, ವಾರಗಳಲ್ಲಿ ಐದು ದಿನಗಳಲ್ಲಿ ಕೆಲಸ ಮಾಡುವ ಗುಮಾಸ್ತಿಕೆಗೆ ನೇಮಿಸಿಕೊಂಡರು. ಈ ನನ್ನ ಕೆಲಸಕ್ಕೆ ಬೋನಸ್ ಅಲ್ಲದೆ ವರ್ಷ ಒಂದರ ಎಪ್ಪತ್ತು ಪೌಂಡು ಸಂಬಳ ಕೊಡುವುದಾಗಿಯೂ ತಿಳಿಸಿದರು.

ಆ ದಿನ ಅಲ್ಲಿ ಜಾಕ್ ಮಾಲ್ಡನ್ನನ್ನೂ ಇದ್ದನು. ಅನಾರೋಗ್ಯದ ಕಾರಣವಾಗಿ ಅವನು ಇಂಡಿಯಾದಿಂದ ಹಿಂತಿರುಗಿದ್ದನಂತೆ. ಆ ದಿನ ಊಟವಾದನಂತರ ನಾನು ನಮ್ಮ ಮನೆಗೆ ಬಂದೆ. ಆದರೆ, ನಮ್ಮ ಮಾತುಗಳ ಮಧ್ಯೆ ಜಾಕ್ ಮಾಲ್ಡನ್ನನು ಡಾ| ಸ್ಟ್ರಾಂಗರ ಒಪ್ಪಿಗೆಯನ್ನು ಪಡೆದೇ ಅವರ ಪತ್ನಿ ಮಿಸೆಸ್ ಅನ್ನಿಯನ್ನು ರಾತ್ರಿ ನಾಟಕಕ್ಕೆ ಹೋಗೋಣವೆಂದು ಎಷ್ಟೇ ಒತ್ತಾಯಿಸಿದರೂ ಮಿಸೆಸ್ ಅನ್ನಿಯು ಜಾಕ್ ಮಾಲ್ಡನ್ನನ ಜತೆಯಲ್ಲಿ ಹೋಗಲು ನಿರಾಕರಿಸಿದ ಸಂಗತಿ ನನ್ನ ಮನಸ್ಸಿನಲ್ಲಿ ಒಂದು ವಿಶೇಷದ ಅನುಭವವಾಗಿ ಉಳಿಯಿತು.

ನನಗೆ ಸಂಪಾದನೆ ಮಾಡಲೆಡೆಯಿದ್ದ ಒಂದು ವೃತ್ತಿ ಸಿಕ್ಕಿದಂತೆಯೇ ಮಿ. ಡಿಕ್ಕರಿಗೂ ಒಂದು ಸಂಪಾದನೆಯ ಮಾರ್ಗವನ್ನು ನಾನೂ ಟ್ರೇಡಲ್ಸನೂ ಸೇರಿ ಕಂಡು ಹಿಡಿದೆವು. ಮಿ. ಡಿಕ್ಕರ ಕೈ ಬರಹದ ಅಕ್ಷರ ಬಹು ಸೊಗಸಾಗಿದ್ದುದರಿಂದ ಅವರನ್ನು ರಿಕಾರ್ಡುಗಳ ನಕಲು ತೆಗೆಯುವ ಕೆಲಸಕ್ಕೆ ನೇಮಿಸಬೇಕೆಂದು ಇಚ್ಛಿಸಿದೆವು. ಆದರೆ ಅವರಿಗೆ ಅವರ ಬರಹಗಳಲ್ಲು ತಪ್ಪದೆ ಬಂದುಬಿಡುತ್ತಿದ್ದ `ಚಾರ್ಲ್ಸ್ ದೊರೆಯ ತಲೆ’ಯನ್ನು ತಪ್ಪಿಸುವುದು ಹೇಗೆಂಬುದೇ ನಮ್ಮೆದುರಿದ್ದ ಕಷ್ಟವಾಯಿತು. ಕೊನೆಗೆ ಆ ಕಷ್ಟ ನಿವಾರಣಾ ಮಾರ್ಗವನ್ನೂ ಕಂಡು ಹಿಡಿದೆವು.

ಮಿ. ಡಿಕ್ಕರು ನಕಲು ತೆಗೆಯಲು ಉಪಯೋಗಿಸುತ್ತಿದ್ದ ಮೇಜದ ಪಕ್ಕದಲ್ಲೇ ಇನ್ನೊಂದು ಮೇಜು, ಕಾಗದ, ಲೇಖನಿ ಮೊದಲಾದುವನ್ನು ಇಟ್ಟು, ಮಿ. ಡಿಕ್ಕರಿಗೆ `ಚಾರ್ಲ್ಸ್ ದೊರೆಯ ತಲೆ’ ಕಂಡಕೂಡಲೇ ಅದನ್ನು ಮಾತ್ರ ಈ ಪಕ್ಕದ ಮೇಜಿನಲ್ಲಿ ಕುಳಿತು ಬರೆದು, ಮೊದಲಿನ ಮೇಜಿನಲ್ಲಿ ನಿಜವಾದ ನಕಲು ತಯಾರಿ ಕೆಲಸ ಮಾಡಬಹುದೆಂದು ಕಂಡುಹಿಡಿದೆವು.

ಮಿ.ಡಿಕ್ಕರು ಹೇಗಾದರೂ ತಾನು ಹಣ ಸಂಪಾದನೆ ಮಾಡಿ ಅತ್ತೆಯನ್ನು ಸಂತೋಷಪಡಿಸಬೇಕೆಂಬ ಅವರ ಆಸೆ ಉತ್ಸಾಹಗಳ ಕಾರಣವಾಗಿ ಒಂದೆರಡು ಸರ್ತಿ ಈ ವಿಧದ ಪ್ರಯತ್ನ ಮಾಡಿ ಅಭ್ಯಾಸ ಮಾಡಿದನಂತರ ನಕಲು ತೆಗೆಯುವ ಕೆಲಸದಲ್ಲಿ ಯಶಸ್ವಿಯಾದರು. ಇದರ ಫಲಿತಾಂಶವಾಗಿ ಮೊದಲಿನ ವಾರದಲ್ಲೇ ಮಿ. ಡಿಕ್ಕರು ಹತ್ತು ಶಿಲಿಂಗ್ ಒಂಬತ್ತು ಪೆನ್ಸ್ ಸಂಪಾದಿಸಿದರು. ತನ್ನ ಸಂಪಾದನೆಯ ಹಣವನ್ನೆಲ್ಲಾ ಆರು ಪೆನ್ಸುಗಳ ನಾಣ್ಯಗಳನ್ನಾಗಿ ಮಾಡಿಕೊಂಡು, ಒಂದು ತಟ್ಟೆಯಲ್ಲಿ ಒಂದು ಚಿತ್ರದಂತೆ ಆ ನಾಣ್ಯಗಳನ್ನೆಲ್ಲ ಇಟ್ಟುಕೊಂಡು, ಕಣ್ಣುಗಳಲ್ಲಿ ಆನಂದಬಾಷ್ಪ ಸುರಿಸುತ್ತಾ ಮುಖದಲ್ಲಿ ಸ್ವಲ್ಪ ಹೆಮ್ಮೆಯನ್ನೇ ತೋರಿಸುತ್ತಾ ಮಿ. ಡಿಕ್ಕರು ತನ್ನ ಸಂಪಾದನೆಯನ್ನು ಅತ್ತೆಗೆ ಒಪ್ಪಿಸಿದ ಚಿತ್ರವನ್ನು ನಾನೆಂದಿಗೂ ಮರೆಯೆನು. ಮಿ. ಡಿಕ್ಕರು ನನ್ನನ್ನು ನೋಡಿ ಹಿಗ್ಗುತ್ತಾ ಅಂದರು – “ಟ್ರಾಟೂಡ್, ಇನ್ನು ಹೆದರಬೇಡಿ. ಅತ್ತೆಯ ಜೀವನದ ದಾರಿ ನನ್ನ ಕೈಯ್ಯಲ್ಲಿ ಸುರಕ್ಷಿತವಾಗಿದೆ” ಹೀಗೆ ಹೇಳಿ ಅವರು ತನ್ನ ಕೈಬೆರಳುಗಳನ್ನು ಎತ್ತಿ ಹಿಡಿದು ತೋರಿಸಿ, ಆ ಬೆರಳುಗಳೇ ತನ್ನ ಹಣದ ಬೇಂಕು ಎಂಬಂತೆ ಸಂತೋಷಪಟ್ಟರು. ಹೀಗೆ ನಾವು ಒಂದೊಂದು ವಿಧದಲ್ಲಿ ಜೀವನ ವೃತ್ತಿಯನ್ನು ಕೈಕೊಂಡೆವು.

ಒಂದು ದಿನ ಟ್ರೇಡಲ್ಸನು ನಮ್ಮ ಮನೆಗೆ ಬಂದು ಮಿ. ಮೈಕಾಬರರ ಒಂದು ಪತ್ರವನ್ನು ತಂದು ಕೊಟ್ಟನು. ಆ ಪತ್ರವು ನನಗೇ ಬರೆಯಲ್ಪಟ್ಟಿದ್ದುದಾದರೂ ಅದರ ಮೇಲ್ಗಡೆ `ಮಿ.ಟ್ರೇಡಲ್ಸ್ ವಕೀಲರು ನೋಡಿ, ಮಿ. ಕಾಪರ್ಫೀಲ್ಡರಿಗೆ ತಲುಪಿಸುವುದು’ ಎಂದು ಬರೆಯಲಾಗಿತ್ತು. ಪತ್ರವು ಈ ಮುಂದೆ ತೋರುವಂತಿತ್ತು:

ಪ್ರಿಯ ಕಾಪರ್ಫೀಲ್ಡ್,

ನಾನು ನಿರೀಕ್ಷಿಸುತ್ತಿದ್ದ ಅಭ್ಯುದಯವು ಸದ್ಯವೇ ಸಿದ್ಧಿಸಲಿದೆಯೆಂಬ ವರ್ತಮಾನ ಕೇಳಿದರೆ ನಿಮಗೆ ಆಶ್ಚರ್ಯವಾಗದು. ಏಕೆಂದರೆ ನನ್ನ ಸಂದರ್ಭಗಳು ಈ ತೆರನಾಗಿ ಮುಂದುವರಿಯುತ್ತಿದ್ದ ವಿಷಯವನ್ನು ನಾನು ನಿಮಗೆ ಈ ಮೊದಲೇ ತಿಳಿಸಿರುವೆನಷ್ಟೆ.

ದೈವಾನುಗ್ರಹವುಳ್ಳ ನಮ್ಮ ಇಂಗ್ಲೆಂಡಿನ ಹೆಸರುಗೊಂಡ ಒಂದು ನಗರದಲ್ಲಿ ನಾನು ಕುಟುಂಬ ಸಮೇತನಾಗಿ ಒಂದು ವೃತ್ತಿಯನ್ನು ತೊಡಗಿ, ಸದ್ಯವೇ ಅಲ್ಲಿ ನೆಲೆಸಲಿರುವೆನು. ಕಲಾವಿದರಿಂದಲೂ ಕೃಷಿ ಕುಶಲಿಗಳಿಂದಲೂ ಸಮ್ಮಿಶ್ರಿತವಾಗಿರುವ ಈ ಪಟ್ಟಣದಲ್ಲಿ ನಾನು ಅವಲಂಬಿಸುವ ವೃತ್ತಿಯು ನ್ಯಾಯ, ಧರ್ಮ, ಪಾಂಡಿತ್ಯಗಳಿಗೆ ಸಂಬಂಧಿಸಿರುವಂಥಾದ್ದೆಂದು ಸ್ವಲ್ಪ ಹೆಮ್ಮೆಯಿಂದಲೇ ತಿಳಿಸುತ್ತಿದ್ದೇನೆ. ನನ್ನ ಧರ್ಮಪತ್ನಿಯೂ ನಮ್ಮ ಔರಸ ಕುಟುಂಬವೂ ಈ ಪ್ರಸಂಗದಲ್ಲಿ ಭಾಗವಹಿಸುವರು. ನಮ್ಮ ಅಭ್ಯುದಯವು ಈ ರೀತಿಯಲ್ಲಿ ಮುಂದುವರಿದು, ಭವಿಷ್ಯತ್ಕಾಲದಲ್ಲಿ ನಮ್ಮ ಪಾರ್ಥಿವ ಶರೀರವು ಇದೇ ಜಗದ್ವಿಖ್ಯಾತ ನಗರದ ಪವಿತ್ರ ಶ್ಮಶಾನದಲ್ಲಿ, ಇತರ ಮಹಾತ್ಮರುಗಳ ಚಿರಸ್ಮರಣೀಯ ಕುರುಹುಗಳ ಎಡೆಯಲ್ಲಿ ಸ್ಥಾಪಿಸಲ್ಪಡುವ ಸುಯೋಗವನ್ನು ಇಂದು ಊಹಿಸಿ ಸಂತೋಷಿಸಿದರೆ ತಪ್ಪಾಗಲಾರದು.

ಸಂಸಾರದ ಸುಖದುಃಖಗಳನ್ನು ಅನುಭವಿಸಿ ನೆಲೆಸಿದ್ದ ನಮ್ಮ ಸುರಪುರ ಸದೃಶ ಲಂಡನ್ ನಗರವನ್ನು ನಾವು ಇಂದು ಬಿಟ್ಟು ಹೊರಟ ಮೇಲೆ ಪುನಃ ಈ ಕಡೆಗೆ ಬರದೇ ಇರಬಹುದು. ಹಾಗೆಯೇ ನಮ್ಮ ಕೌಟುಂಬಿಕ ಜೀವನದಲ್ಲಿ ಬೆರೆತು ಕಲೆತು ನಮ್ಮವರೇ ಆಗಿದ್ದ ನಿಮ್ಮನ್ನು ಶಾಶ್ವತವಾಗಿಯೋ ಅಥವಾ ದೀರ್ಘ ಕಾಲವೋ ಅಗಲುವ ಸಂಭವವೂ ಇರಬಹುದು. ಇಂತಹ ಮಹತ್ವದ ಸಂದರ್ಭಕ್ಕೆ ತಕ್ಕಂತೆ, ಮಿ. ಥಾಮಸ್ ಟ್ರೇಡಲ್ಸರವರನ್ನು ಜತೆಗೂಡಿಕೊಂಡು, ನೀವು ಈ ದಿನವೇ ನಮ್ಮ ಭವನಕ್ಕೆ ಬರುವ ಮಹದುಪಕಾರವನ್ನು ಮಾಡಬೇಕೆಂದು ಪ್ರಾರ್ಥಿಸುವ

ನಿಮ್ಮ ಚಿರಸ್ನೇಹಾಭಿಲಾಷಿ
ವಿಲ್ಕಿನ್ಸ್ ಮೈಕಾಬರ್

ಈ ಆಮಂತ್ರಣವನ್ನು ಸ್ವೀಕರಿಸದಿರುವುದು ಅಸಾಧ್ಯವಾಗಿತ್ತು. ನಾವು ಆ ದಿನವೇ ಮಿ. ಮೈಕಾಬರರ ಮನೆಗೆ ಹೋದೆವು. ಮಿ. ಮತ್ತೂ ಮಿಸೆಸ್ ಮೈಕಾಬರರು ಬಹು ಘನಸ್ಥಿಕೆಯಿಂದ ನಮ್ಮನ್ನು ಸ್ವಾಗತಿಸಿದರು. ನಮ್ಮನ್ನು ಉಚಿತವಾದ ಆಸನಗಳಲ್ಲಿ ಕುಳ್ಳಿರಿಸಿ, ನಮ್ಮ ಯೋಗಕ್ಷೇಮಗಳನ್ನು ವಿಚಾರಿಸಿ, ಔತಣದ ಬಗ್ಗೆಯ ಕೆಲಸವನ್ನು ಮಾಡತೊಡಗಿದರು. ಆ ಮಧ್ಯೆ ಪತಿಪತ್ನಿಯರು ತಂತಮ್ಮೊಳಗೆ ಪತಿಯ ಮುಂದಿನ ಘನಹುದ್ದೆಯನ್ನು ಕುರಿತೂ ಮಾತಾಡಿಕೊಳ್ಳುತ್ತಿದ್ದರು. ನಾವೂ ಅವರ ಮಾತುಗಳಲ್ಲಿ ಸಂದರ್ಭಾನುಸಾರ ಭಾಗವಹಿಸಿದೆವು. ತಮ್ಮ ಮುಂದಿನ ಘನವೃತ್ತಿಯನ್ನು ಕುರಿತಾಗಿ ನಮ್ಮೊಡನೆ ಮಾತಾಡಬೇಕೆಂದು ಮಿ.ಮೈಕಾಬರರು ತುಂಬಾ ತವಕಪಡುತ್ತಿದ್ದರು. ಕೊನೆಗೆ ಅವರು ಮಾತು ಪ್ರಾರಂಭಿಸಿದರು.

“ಮಿ. ಕಾಪರ್ಫೀಲ್ಡರೇ ಮತ್ತು ಮಿ. ಟ್ರೇಡಲ್ಸರವರೇ,

“ಸ್ವಲ್ಪ ಸಮಯದ ಹಿಂದೆ ನಾನು ನಮ್ಮ ದೇಶದ ಜನರಿಗೆ ಪತ್ರಿಕೆಗಳ ಮೂಲಕ ಒಂದು ಕರೆಯನ್ನು ಕೊಟ್ಟಿದ್ದೆ. ಸಮಾಜವು ನಮ್ಮಂಥವರಿಗೆ ವೃತಿಯನ್ನು ಕೊಟ್ಟು ತನ್ನ ಅಭ್ಯುದಯವನ್ನು ಸಾಧಿಸುವುದೇ ಅಥವಾ ಆಲಸ್ಯದಿಂದ ಸುಮ್ಮನಿದ್ದು ತನ್ನ ಅಧಃಪತನವನ್ನೇ ತಂದುಕೊಳ್ಳುವುದೇ ಎಂಬ ಒಂದು ಪ್ರಶ್ನೆಯನ್ನು ಮಿಸೆಸ್ ಮೈಕಾಬರಳು, ನನ್ನ ಕರೆಯ ಪೂರ್ವಭಾವಿಯಾಗಿ, ಸಮಾಜಕ್ಕೆ ಹಾಕಿದ್ದಳಷ್ಟೆ. ಆ ಕರೆಗೆ ಯಾರು ಉತ್ತರ ಕೊಡದಿದ್ದರೂ ಕೇಂಟರ್ಬರಿ ನಗರದ ವಕೀಲ ಜತೆಕೂಟದ – ಅಂದರೆ, ವಿಕ್ಫೀಲ್ಡ್ ಮತ್ತು ಹೀಪ್ ಜತೆಕೂಟದ, ಪ್ರಮುಖ ಪಾಲುದಾದರಾದ ಮಿ. ಹೀಪ್ ಎಂಬವರು ಉತ್ತರ ಕೊಟ್ಟಿರುವರು. ಅವರಿಗೂ ನನಗೂ ಮಾತುಕಥೆಗಳು ನಡೆದು, ಪ್ರಕೃತ ನನ್ನನ್ನು ಅವರು ತಮ್ಮ ಸ್ವಂತ ಕಾರ್ಯದರ್ಶಿಯಾಗಿ ನೇಮಿಸಿರುತ್ತಾರೆ. ನನ್ನ ಅನುಭವವು ಬೆಳೆದಂತೆ ಇದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ನನಗೆ ಕೊಡಲು ಒಪ್ಪಿರುವರು. ಈಗ ನನಗೆ ನಿಶ್ಚೈಸಿರುವ ಸಂಬಳ ವಿಶೇಷ ಆಕರ್ಷಣೀಯವಾಗಿಲ್ಲವಾದರೂ ನನ್ನ ಅನಿವಾರ್ಯವಾದ ಸಾಲಗಳನ್ನೆಲ್ಲ ಅವರೇ ಹಣಕೊಟ್ಟು ಪರಿಹರಿಸಿರುವ ಸಂಗತಿಯೇ ಅವರ ಔದಾರ್ಯವನ್ನು ಸೂಚಿಸುತ್ತದೆ. ನಾನಿನ್ನು ಕಾನೂನಿನ ಗಹನ ವಿಚಾರವನ್ನು ಸ್ವಲ್ಪ ಪರಿಶ್ರಮದಿಂದ ಅಭ್ಯಸಿಸಿದರೆ ಆಯಿತು. ಮುಂದೆ ನಮ್ಮ ಕುಟುಂಬದ ಔನ್ನತ್ಯವು ತಾನಾಗಿಯೇ ಸಿದ್ಧಿಸುವುದು” ಅಂದರು ಮಿ. ಮೈಕಾಬರರು.

ಮಿ.ಮೈಕಾಬರರ ಮಾತನ್ನು ಕುರಿತು ಅವರ ಪತ್ನಿಯು ಸ್ವಲ್ಪ ಆಕ್ಷೇಪಿಸುತ್ತಾ – “ಎಲ್ಲವನ್ನೂ ನೀವು ಅಷ್ಟೊಂದು ಮುಂದಾಗಿಯೇ ಹೇಳಬಾರದು. ನೀವು ಹೇಳುವುದೆಲ್ಲ ನಿಜವಾದ ಸಂಗತಿಗಳೇ ಆದಾಗ್ಯೂ ಕೇವಲ ಮರ್ಯಾದೆ ದೃಷ್ಟಿಯಿಂದಲಾದರೂ ಭವಿಷ್ಯವನ್ನು ಈಗಲೇ ಚಿತ್ರಿಸಬಾರದು. ವಿಕ್ಫೀಲ್ಡ್ ಮತ್ತೂ ಹೀಪ್ ಜತೆಕೂಟದಲ್ಲಿ ಕ್ರಮೇಣವಾಗಿ ಒಬ್ಬ ಪಾಲುಗಾರರೇ ಆಗುವುದೂ ನ್ಯಾಯಶಾಸ್ತ್ರವನ್ನು ನೀವು ವ್ಯಾಸಂಗಮಾಡಿ, ಈಗಲೇ ಸಿವಿಲ್ ವಿಭಾಗದಲ್ಲಿ ಪ್ರತಿವಾದಿ ಸ್ಥಾನದ ಕಾನೂನು ಕಾಯಿದೆಗಳ ಅನುಭವ ನಿಮಗಿರುವುದರ ಜತೆಗೆ, ಹೊಸ ಹೊಸ ಅನುಭವ ಪಡೆದು ಕೊನೆಗೆ ಜಡ್ಜರೇ ಆಗುವುದೂ ಈ ಎಲ್ಲ ವಿಷಯಗಳನ್ನು ಈಗಲೇ ಮಾತಾಡುವುದು ನ್ಯಾಯವಾಗಲಾರದು” ಎಂದು ಅವರಂದರು.

ಪತ್ನಿಯ ಅಭಿಪ್ರಾಯ ಸರಿಯೆಂದು ಮಿ. ಮೈಕಾಬರರು ಒಪ್ಪಿ, ಈ ವಿಧದ ಮಾತನ್ನು ನಿಲ್ಲಿಸಿದರು. ಅನಂತರ ನಮ್ಮ ಊಟವಾಯಿತು. ಮಿ. ಮೈಕಾಬರರು ಮಾತ್ರ ಪರಿಷ್ಕಾರವಾಗಿ ತಯಾರಿಸಬಲ್ಲ ಪಂಚು ಪಾನೀಯವನ್ನು ಅವರೇ ತಯಾರಿಸಿದರು – ನಾವೆಲ್ಲಾ ಕುಡಿದೆವು. ಪಂಚನ್ನು ಕುಡಿಯುತ್ತಾ ಮಿ. ಮೈಕಾಬರರು ಅಂದಿನ ಸಮಾರಂಭದ ಉದ್ದೇಶ ಮತ್ತೂ ಗೌರವವನ್ನು ಅರಿಯತೊಡಗಿದರು. ಕೊನೆಗೆ ಒಂದು ವಿದಾಯಕೂಟದ ಉಪಸಂಹಾರ ಭಾಷಣ ಕ್ರಮದಿಂದ ಅವರು ಮಾತಾಡತೊಡಗಿದರು – “ನನ್ನ ಯೌವ್ವನ ಕಾಲದ ಜತೆಗಾರರಾಗಿದ್ದ ಸನ್ಮಿತ್ರ ಮಿ. ಕಾಪರ್ಫೀಲ್ಡರೇ ಅನಂತರ ಪರಿಚಯವಾದವರಾದಾಗ್ಯೂ ಮೊದಲಿನವರಷ್ಟೇ ಪ್ರಿಯರಾದ ಮಿತ್ರ ಮಿ. ಥಾಮಸ್ ಟ್ರೇಡಲ್ಸರೇ ಈ ದಿನ ತಾವುಗಳು ನಮ್ಮ ಮನೆಗೆ ಆಗಮಿಸಿ, ನಮಗೆ ಶುಭವನ್ನು ಬಯಸಿ ಹರಸಿದುದಕ್ಕೆ ನಾನು ನನ್ನ ಪರವಾಗಿಯೂ ನನ್ನ ಸಹಧರ್ಮಿಣಿಯ ಪರವಾಗಿಯೂ ನಮ್ಮ ಕುಟುಂಬದವರೆಲ್ಲರ ಪರವಾಗಿಯೂ ಹೃತ್ಪೂರ್ವಕವಾಗಿ ವಂದಿಸುತ್ತೇನೆ. ನಾವು ಸದ್ಯವೇ ಪರಪ್ರಾಂತ್ಯಕ್ಕೆ ಪಯಣ ಬೆಳೆಸಲಿರುವೆವು. (ಅವರು ಈ ಮಾತುಗಳನ್ನು ಉಚ್ಚರಿಸಿದಾಗ ಕೇಂಟರ್ಬರಿಯು ಲಂಡನ್ನಿನಿಂದ ಕೊನೆಯ ಪಕ್ಷ ಐನೂರು ಮೈಲುಗಳ ದೂರದಲ್ಲಿ ಇರಬೇಕೆಂಬ ಭಾವನೆ ನಮಗುಂಟಾಯಿತು.) ನಾವು ಕೈಕೊಳ್ಳಲಿರುವ ವೃತ್ತಿಯಲ್ಲಿ ನಾವು ನಿಷ್ಠೆಯಿಂದಲೂ ಘನಸ್ಥಿಕೆಯಿಂದಲೂ ಮಿಸೆಸ್ ಮೈಕಾಬರಳ ಕುಟುಂಬದ ಮತ್ತೂ ನಮ್ಮ ಕುಟುಂಬದ ಕೀರ್ತಿ ಹೆಚ್ಚುವಂತೆಯೂ ನಡೆಯುವೆವು. ಆರ್ಥಿಕ ಮುಗ್ಗಟ್ಟಿನಲ್ಲಿ ಸಿಕ್ಕಿ ದುಃಖಿಸುತ್ತಿದ್ದ ನನ್ನ ಮಾನಸಿಕ ಆಕಾಶವು ಇಂದು ಶುಭ್ರವಾಗಿದೆ. ನಮ್ಮ ನವಜೀವನ ಜ್ಯೋತಿಯು, ಪರ್ವತ ಶಿಖರದ ಮೇಲಿರುವ ಪ್ರಸ್ತಭೂಮಿಗೆ ಬೀಳುವ ಸೂರ್ಯಪ್ರಭೆಯಂತೆ, ನಮ್ಮ ಭವಿಷ್ಯದ ಸುಂದರ ಪ್ರದೇಶದ ಮೇಲೆ ಪ್ರಭೆಯನ್ನು ಬೀರಿ, ಈಗಾಗಲೇ ನಮ್ಮ ಉನ್ನತ ಭವಿಷ್ಯವು ಎದ್ದು ಬೆಳಗುತ್ತಿದೆ! ಸೋಮವಾರ ದಿನ ಸಂಜೆಯಲ್ಲಿ, ಕೇಂಟರ್ಬರಿಗೆ ಹೋಗುವ ಕುದುರೆ ಬಂಡಿಯಲ್ಲಿ ನೀವು ಕಾಣುವ ವ್ಯಕ್ತಿಯೇ ಮಿ. ಮೈಕಾಬರ್…” ಎಂದು ಘೋಷಿಸಿದರು. “…ವ್ಯಕ್ತಿಯೇ ಮಿ. ಮೈಕಾಬರ್…” ಎಂದು ಅವರು ನುಡಿಯುವಾಗ ಅವರ ಪ್ರಕೃತದ ಹೆಸರು ಮಿ. ಮಾರ್ಟಿಮರ್ ಎಂಬುದು ನಮಗೆ ಜ್ಞಾಪಕಕ್ಕೆ ಬಂತು. ಇಷ್ಟು ಹೇಳಿ, ಪುನಃ ಒಂದು ಗ್ಲಾಸ್ ಪಂಚ್ ಪಾನೀಯವನ್ನು ಕುಡಿದು, ಪುನಃ ಮಾತಾಡತೊಡಗಿದರು.

“ಇಂಗ್ಲೆಂಡಿನ ರಾಜಧಾನಿಯಾದ ಈ ಲಂಡನ್ ಮಹಾ ನಗರದಿಂದ ಪರದೇಶಕ್ಕೆ ಹೋಗುವ ಮೊದಲು ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿ ಪೂರೈಸುವ ಕರ್ತವ್ಯವು ನನ್ನ ಚಿಂತನೆಯಲ್ಲಿ ಸದಾ ಇದೆ. ಮುಂದೆ ನಾನು ಪ್ರವೇಶಿಸಲಿರುವ ವೃತ್ತಿಯು ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದ ಮೇಲಂತೂ ಆ ಜವಾಬ್ದಾರಿಯನ್ನು ಮತ್ತಷ್ಟು ತೀವ್ರವಾಗಿ ಗ್ರಹಿಸಿರುತ್ತೇನೆ. ಒಬ್ಬರಿಗೆ ನಮ್ಮಿಂದ ಹಣ ಸಲ್ಲತಕ್ಕದ್ದಿದ್ದರೆ ನಾವು ಹಣವನ್ನೇ ಕೊಡಬೇಕು. ಒಂದು ವೇಳೆ ಹಣವಿಲ್ಲದಿದ್ದರೆ ಹಣಕ್ಕೆ ಸರಿಸಮಾನವಾದ ರಿಕಾರ್ಡನ್ನು ಮಾಡಿಕೊಡಬೇಕು. ಅರ್ಥಾತ್, ಕೇಳಿದ ಕೂಡಲೇ ಪಾವತಿಯಾಗತಕ್ಕ, ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾಯಿಸಬಲ್ಲ, ಪ್ರಾಮಿಸರಿ ನೋಟನ್ನು ಬರಕೊಡಬೇಕು. ಈ ತೆರನಾದ ನ್ಯಾಯಬದ್ಧ ಸರಳ ಕ್ರಮವನ್ನು ಬಲ್ಲ ನನ್ನಂಥವರು ಮಿ. ಥಾಮಸ್ ಟ್ರೇಡಲ್ಸರವರಿಗೆ ಸಲ್ಲಬೇಕಾದ ನಲವತ್ತೊಂದು ಪೌಂಡು, ಹತ್ತು ಶಿಲಿಂಗ್, ಹನ್ನೊಂದೂವರೆ ಪೆನ್ಸನ್ನು ಈ ಪ್ರೋನೋಟು ಮೂಲಕ ಸಲಾಯಿಸುವೆನು. ನಮ್ಮೊಳಗಿನ ಲೆಕ್ಕಾಚಾರದ ಬಗ್ಗೆ ಈ ಪ್ರೋನೋಟನ್ನು ನೀವು ಸ್ವೀಕರಿಸಿ, ಸಮಾಜದೆದುರು ಸಾಲದ ಭಾರದಿಂದ ಬೆನ್ನು ಬಗ್ಗಿಸಿ ನಡೆಯುವ ಪ್ರಜೆಯೊಬ್ಬನ ಬೆನ್ನು ಪುನಃ ನೆಟ್ಟಗಾಗುವಂತೆ ಸಹಾಯ ನೀಡಬೇಕು” ಎಂದು ಹೇಳುತ್ತ ಪ್ರೋನೋಟನ್ನು ಅವರು ಟ್ರೇಡಲ್ಸನಿಗೆ ಕೊಟ್ಟರು. ಮಿ. ಮೈಕಾಬರರ ಭಾಷಣದಿಂದ ಆವೇಶಭರಿತನಾಗಿದ್ದ ಟ್ರೇಡಲ್ಸನು ಆ ನೋಟು ಹಣವೇ ಹೌದೆಂಬಷ್ಟು ನಂಬುತ್ತಾ ಅದನ್ನು ಸ್ವೀಕರಿಸಿದನು. ಟ್ರೇಡಲ್ಸನು ಈ ರೀತಿಯಲ್ಲಿ ತಾನು ಸಂತೋಷಪಟ್ಟನಲ್ಲದೆ ಮಿ. ಮೈಕಾಬರರನ್ನೂ ಸಂತೋಷಗೊಳಿಸಿದನು.

ಈ ರೀತಿಯ ನಮ್ಮ ಊಟೋಪಚಾರ ಭಾಷಣಗಳೆಲ್ಲ ಮುಗಿದ ಮೇಲೆ ನಾವು ಸಂತೋಷದಿಂದ ಹೊರಟು ಬಂದೆವು. ನಮ್ಮನ್ನು ಕಳುಹಿಸಿಕೊಡುವ ಗೌರವಕ್ಕಾಗಿಯೇ ಮಿ. ಮೈಕಾಬರರು ನಮ್ಮ ಜತೆಯಲ್ಲಿ ಸ್ವಲ್ಪ ದೂರ ನಡೆದು ಬಂದರು. ಸಾಲದ ಭಾರದಿಂದ ನಿವೃತ್ತರಾಗಿದ್ದ ಅವರು ಈಗ ಮೊದಲಿಗಿಂತ ಎಷ್ಟೆಷ್ಟೋ ನೆಟ್ಟಗೆ ನಡೆಯುತ್ತಿದ್ದರು. ಅವರ ಎದೆಯು ಮೊದಲಿದ್ದುದರ ಒಂದೂವರೆ ಪಾಲಿನಷ್ಟು ಉಬ್ಬಿ, ಅವರ ಮಾನಸಿಕ ನೆಮ್ಮದಿಯ ಉಬ್ಬನ್ನೂ ಸೂಚಿಸುತ್ತಿತ್ತು.

ನನ್ನನ್ನು ನನ್ನ ಬಾಲ್ಯದಿಂದಲೇ ತಿಳಿದಿದ್ದ ಮಿ. ಮೈಕಾಬರರು, ತನ್ನ ಶಕ್ತಿಯನ್ನೂ ಎಳೆತನದ ಕಾರಣವಾಗಿದ್ದ ನನ್ನ ಅಶಕ್ತಿಯನ್ನೂ ತಿಳಿದಿದ್ದೂ ಸಹ ನನ್ನಲ್ಲಿ ಸಾಲ ಕೇಳಲಿಲ್ಲವೆಂಬುದನ್ನು ಗ್ರಹಿಸಿ ಅವರ ಮೇಲಿನ ಗೌರವ ನನ್ನಲ್ಲಿ ಹೆಚ್ಚಿತು.

(ಮುಂದುವರಿಯಲಿದೆ)