ಅಧ್ಯಾಯ ನಲ್ವತ್ತೊಂದು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ನಲ್ವತ್ಮೂರನೇ ಕಂತು

ಮಿಸ್ ಸ್ಪೆನ್ಲೋ ಸಹೋದರಿಯರ ಉತ್ತರವು ಬಂತು. ಉತ್ತರವು ಬಹು ಎಚ್ಚರಿಕೆಯಿಂದ ಬರೆದಂತಿತ್ತು. ಅವರ ಪತ್ರ ಹೀಗಿತ್ತು:

“ಮಿ. ಕಾಪರ್ಫೀಲ್ಡರ ಪತ್ರದ ಸಂದರ್ಭಕ್ಕೆ ತಕ್ಕದಾದ ಗಮನವು, ಉಭಯ ಪಕ್ಷಗಳ ಹಿತಸಾಧನೆಯೇ ಮುಖ್ಯ ಗುರಿಯಾಗಿಟ್ಟುಕೊಂಡು, ಕೊಡಲಾಗಿದೆ. ಇಂಥ ಗಹನವಾದ ವಿಷಯದಲ್ಲಿ ಪತ್ರ ವ್ಯವಹಾರವು, ಉಭಯ ಪಕ್ಷಗಳ ಹಿತದೃಷ್ಟಿಯಿಂದ ಅಷ್ಟೊಂದು ಹಿತಕರವಲ್ಲ. ಮಿ. ಕಾಪರ್ಫೀಲ್ಡರು, ಬೇಕಾದರೆ ಒಬ್ಬ ಸ್ನೇಹಿತರನ್ನು ಜತೆಗೆ ಕರೆದುಕೊಂಡು, ಒಂದು ನಿರ್ದಿಷ್ಟ ದಿನದಲ್ಲಿ, ಮಿಸ್ ಸ್ಪೆನ್ಲೋರವರ ಮನೆಗೆ ಹೋಗುವುದು ಉತ್ತಮ.”

ಆ ಪತ್ರದಲ್ಲಿ `ನೀವು’, `ನಾವು’ ಎನ್ನಬೇಕಾದಲ್ಲೆಲ್ಲ ಸಂಬಂಧಪಟ್ಟವರ ಹೆಸರನ್ನೇ ಹೇಳುತ್ತಾ ಮೂರನೇ ಒಬ್ಬರ ವಿಷಯ ಮಾತಾಡುವಂತೆ ಬರೆದಿದ್ದರು. `ಉಭಯಪಕ್ಷ’ ಎಂಬ ಶಬ್ದವೂ ತುಂಬಾ ಉಪಯೋಗಿಸಲಾಗಿದ್ದು, ಅಭಿಪ್ರಾಯದ ಸ್ಪಷ್ಟತೆಯಿರಲಿಲ್ಲ. `ಉಭಯಪಕ್ಷದಹಿತ’ವನ್ನೇ ಗ್ರಹಿಸಿರುವುದಾಗಿ ಹೇಳುತ್ತಾ ನನ್ನ ಕೇಳಿಕೆಗಳನ್ನು ನಿರಾಕರಿಸಿಬಿಡುವರೋ ಎಂಬುದು ನನಗೆ ಭಯಪ್ರದವಾದ ಕೌತುಕವಾಗಿತ್ತು. ಏನಿದ್ದರೂ ಡೋರಾ ಇರುವ ಮನೆಗೆ ಹೋಗುವುದೇ ಸಂತೋಷದ ಸಂಗತಿಯಾಗಿದ್ದುದರಿಂದ ನಾನು ಪತ್ರವನ್ನು ಅತ್ಯಾದರದಿಂದ ಸ್ವೀಕರಿಸಿ, ಅಲ್ಲಿಗೆ ಹೋಗುವ ದಿನ ಇಂಥಾದ್ದೇ ಎಂದು ಅವರಿಗೆ ಬರೆದು ತಿಳಿಸಿದೆನು. ನನ್ನ ಜತೆಯಲ್ಲಿ ವಕೀಲ ಟ್ರೇಡಲ್ಸನೂ ಬರುವುದಾಗಿಯೂ ತಿಳಿಸಿದೆನು. ಗೊತ್ತು ಮಾಡಿದ ದಿನ ನಾನೂ ಟ್ರೇಡಲ್ಸನೂ ಪುಟ್ನಿಗೆ ಹೊರಟೆವು. ನಮ್ಮ ಉಡುಗೆ ತೊಡಿಗೆಗಳು ಅನಾಡಂಬರದವುಗಳಾಗಿದ್ದರೂ ಕೇವಲ ಬಡವರು ಧರಿಸಬಹುದಾಗಿದ್ದಂತೆ ಇರದೆ, ಅಂದಿನ ಸಂದರ್ಭಕ್ಕೆ ತಕ್ಕದಾಗಿ ಭೂಷಣವಾಗಿ ಇದ್ದುವು. ಟ್ರೇಡಲ್ಸನ ಉಡುಪು ಬಹು ಚೆನ್ನಾಗಿದ್ದರೂ ಅವನ ತಲೆಗೂದಲಿನ ಮಟ್ಟಿಗೆ ನಾವು ಏನೂ ಮಾಡಲಾರದೆ ಆಗಿದ್ದೆವು. ಆ ಕೂದಲನ್ನು ಎಷ್ಟು ಪ್ರಯತ್ನಪಟ್ಟು ಬಾಚಿ ಒತ್ತಿ ಇಟ್ಟರೂ ಹೇಟು ತೆಗೆದ ಕೂಡಲೇ ಅದು ಮುಳ್ಳು ಹಂದಿಯ ಮುಳ್ಳು ಎದ್ದು ನಿಲ್ಲುವಂತೆ ನೆಟ್ಟಗೆ ಎದ್ದು ನಿಲ್ಲುತ್ತಿತ್ತು. ಈ ಒಂದು ವಿಷಯವೂ ಮತ್ತೂ ನನ್ನ ಮನಸ್ಸಿನ ಗಾಬರಿ ಮುಖದಲ್ಲಿ ತೋರಿಬಿಡಬಹುದೆಂಬ ಹೆದರಿಕೆಯೂ ನಮ್ಮಿಬ್ಬರನ್ನೂ ಬಾಧಿಸುತ್ತಿದ್ದುವು. ನಾವು ಪುಟ್ನಿಗೆ ತಲುಪಿದ ಕೂಡಲೇ ಆ ಸಹೋದರಿಯರ ಮನೆಗೆ ಹೋಗುವ ಮೊದಲು ಒಂದು ಹೋಟೆಲಿಗೆ ಹೋಗಿ ನಾನೊಬ್ಬ ಮಾತ್ರ, ಹಗುರತರದ ಅಮಲು ಪಾನೀಯವನ್ನು – ನನ್ನ ಧೈರ್ಯಕ್ಕಾಗಿ, ತೆಗೆದುಕೊಂಡೆನು.

ಆ ಸಹೋದರಿಯರ ಮನೆಗೆ ತಲುಪಿದಾಗ ಅಲ್ಲಿನ ಕೆಲಸದ ಹೆಂಗುಸು ನಮ್ಮನ್ನು ಕರೆದುಕೊಂಡು ಹೋಗಿ ಸುಸಜ್ಜಿತವಾಗಿದ್ದ ಒಂದು ಬೈಠಖಾನೆಯಲ್ಲಿ ಕುಳ್ಳಿರಿಸಿದಳು. ಆ ಕೋಣೆಯಲ್ಲಿ ಕ್ರಮವಾಗಿ ಇಡಲಾಗಿದ್ದ ಕುರ್ಚಿಗಳೂ ಮೇಜೂ ಇದ್ದುವು. ಅಲ್ಲೇ ಗೋಡೆಯಲ್ಲಿದ್ದ ಒಂದು ಗಡಿಯಾರ ಅದರ ಟಿಕ್ ಟಾಕ್ ಶಬ್ದದಿಂದ ಅಲ್ಲಿನ ನಿಶ್ಶಬ್ದತೆಯನ್ನು ಎತ್ತಿ ತೋರಿಸುತ್ತಿತ್ತು. ನಾನು ಕುಡಿದಿದ್ದ ಪಾನೀಯದ ಅಮಲು ಒಂದು ಕಡೆ, ಮುಂದೆ ನಡೆಯಬೇಕಾಗಿದ್ದ ನಮ್ಮೊಳಗಿನ ಮಾತುಕಥೆಗಳನ್ನು ಕುರಿತು ಯೋಚಿಸಿಯೇ ಆಗಿದ್ದ ನನ್ನ ಮನಸ್ಸಿನ ಅವ್ಯವಸ್ಥೆ ಇನ್ನೊಂದು ಕಡೆ. ಈ ರೀತಿಯಾಗಿ ನಾನು ಬಾಧಿಸಲ್ಪಟ್ಟು, ನಾನೇ ಇಂದಿನ ಪ್ರಸಂಗಗಳಲ್ಲಿ ಭಾಗವಹಿಸುತ್ತಿರುವೆನೋ ಅಥವಾ ಇತರರು ಯಾರೋ ಭಾಗವಹಿಸುತ್ತಿರುವುದನ್ನು ನಾನು ನೋಡುತ್ತಿರುವೆನೋ ಎಂಬ ಭ್ರಮೆಯೇ ನನಗುಂಟಾಯಿತು. ಗಡಿಯಾರದ ಟಿಕ್ ಟಾಕ್ ಶಬ್ದದ ಜತೆಗೆ ನನ್ನ ಹೃದಯ ಬಡಿತದ ಶಬ್ದವೂ ಕೇಳಿಸತೊಡಗಿತ್ತು. ಈ ಎರಡೂ ಶಬ್ದಗಳನ್ನು ತಾಳದ ಮೇಳದಂತೆ ಏಕಕಾಲದಲ್ಲಿ ಕೇಳಿಸಲು ಪ್ರಯತ್ನಪಟ್ಟು, ಸೋತು, ಕೊನೆಗೆ ಹೃದಯವು ಮತ್ತಷ್ಟು ವೇಗವಾಗಿ ಬಡಿಯುತ್ತಿದ್ದುದು ಮಾತ್ರ ನನಗೆ ಗೊತ್ತಾಯಿತು. ಇದೇ ಸಮಯದಲ್ಲಿ ಈ ವಿಧದ ಶಬ್ದಗಳನ್ನು ಕುರಿತಾದ ಏಕಾಗ್ರತೆಯನ್ನು ಹಗುರವಾಗಿ ಭೇದಿಸಿ ಬರುವಂತೆ ದೂರದಿಂದ ಜಿಪ್ಪ್ ಬೊಗಳಿದಂತೆಯೂ ಅದರ ಬಾಯನ್ನು ಯಾರೋ ಮುಚ್ಚಿದಂತೆಯೂ ಕೇಳಿಸಿತು. ಇಂಥ ಪರಿಸ್ಥಿತಿಯಲ್ಲಿ ನಾನಿದ್ದಾಗ ಮಿಸ್ ಸ್ಪೆನ್ಲೋ ಸಹೋದರಿಯರು ನಾವು ಕುಳಿತಿದ್ದ ಬೈಠಖಾನೆಗೆ ಬಂದರು.

ನಾನು ಹೇಗೋ ಧೈರ್ಯ ತಂದುಕೊಂಡು ಅವರನ್ನು ನೋಡಿದೆನು. ಅನಂತರ ಅವರು ಮಾತಾಡಿಸಿದರೆ ಮಾತಾಡಲು ಸಿದ್ಧನಾದೆನು. ಅವರಿಬ್ಬರೂ ಮಿ. ಸ್ಪೆನ್ಲೋರವರಿಗಿಂತ ಹಿರಿಯರೆಂಬುದು ಅವರನ್ನು ನೋಡಿದ ಕೂಡಲೇ ತಿಳಿದೆನು. ಆ ಇಬ್ಬರ ಪೈಕಿ ಪ್ರಾಯ ಸ್ವಲ್ಪ ಕಡಿಮೆ ಇರಬೇಕೆಂದು ತೋರುವವಳ ಕೈಯ್ಯಲ್ಲಿ ನಾನು ಬರೆದಿದ್ದ ಪತ್ರವಿತ್ತು. ಬಂದವರು ನಮ್ಮನ್ನು ಸಂತೋಷದಿಂದ ಸ್ವಾಗತಿಸಿ ಮಾತಾಡತೊಡಗಿದರು.

ಈ ಪ್ರಸಂಗದಲ್ಲಿ ಅವರಿಬ್ಬರ ಪೂರ್ವಚರಿತ್ರೆಯನ್ನು ಸ್ವಲ್ಪ ತಿಳಿಸುವುದು ಉತ್ತಮ. ಈ ಎಲ್ಲಾ ವಿಷಯವನ್ನೂ ನಾನು ಹಿಂದಿನಿಂದ ತಿಳಿದುಕೊಂಡೆನಾದರೂ ಇಲ್ಲಿ ಮಾತ್ರ ನಾನು ಅವನ್ನೆಲ್ಲ ಮೊದಲೇ ತಿಳಿಸುವುದು ಮುಂದಿನ ನಮ್ಮ ಮತ್ತೂ ಅವರ ಮಾತುಗಳನ್ನು ಅರ್ಥಮಾಡಲು ಸಹಾಯವಾಗಬಹುದು.

ಅವರಲ್ಲಿ ಅಕ್ಕನ ಹೆಸರು ಕ್ಲೇರಿಸ, ತಂಗಿಯ ಹೆಸರು ಲೆವಿನ. ಅಕ್ಕ ತಂಗಿಯರಿಗೆ ಆರೆಂಟು ವರ್ಷಗಳ ಅಂತರವಿರಬಹುದಾದಂತೆ ತೋರುತ್ತಿದ್ದರು. ಇಬ್ಬರು ಸಾಧಾರಣ ಒಂದೇ ವಿಧದ ಉಡುಪನ್ನು ಧರಿಸಿದ್ದರು. ತಂಗಿಯ ಉಡುಪು ಅಕ್ಕನದಕ್ಕಿಂತ ಸ್ವಲ್ಪ ಹೆಚ್ಚು ಅಲಂಕಾರಯುತವಾಗಿತ್ತು, ಅಷ್ಟೆ. ಈ ದಿನದ ಕಾರ್ಯದಲ್ಲಿ ತಂಗಿಯ ಅಭಿಪ್ರಾಯವನ್ನು ಕೇಳಿ, ತನ್ನ ಹಿರಿತನದ ಹಕ್ಕಾಗಿ, ಅಕ್ಕನೇ ಆಖೈರು ತೀರ್ಪನ್ನು ಕೊಡುತ್ತಿದ್ದಳು. ಆದರೆ, ತಂಗಿಗೆ ಸೂಕ್ಷ್ಮತರದ್ದೂ ಹೃದಯಕ್ಕೆ ಸಂಬಂಧಿಸಿದ್ದೂ ಆಗಿರುವ ವಿಷಯಗಳಲ್ಲಿ ಅಕ್ಕನಿಗಿಂತ ಹೆಚ್ಚು ಅನುಭವವಿದ್ದುದರಿಂದ, ನನ್ನ ಹತ್ತಿರ ಹೆಚ್ಚು ಮಾತಾಡಿದ್ದೂ ಅಕ್ಕನನ್ನು ಉತ್ತಮ ದಾರಿಗೆ ತಂದದ್ದೂ ಮಿಸ್ ಲೆವಿನಳೇ.

ಮಿಸ್ ಲೆವಿನಳಿಗೆ ಹೃದಯಕ್ಕೆ ಸಂಬಂಧಿಸಿದ – ಅಂದರೆ, ಅನುರಾಗ, ಪ್ರೇಮ, ಸ್ತ್ರೀಪುರುಷರ ಭಾವನೆ ಮೊದಲಾದ ಹಾರ್ದಿಕ ಅನುಭವ ತನಗಿಂತ ಎಷ್ಟೋ ಹೆಚ್ಚು ಇತ್ತೆಂದು ಮಿಸ್ ಕ್ಲೇರಿಸಳು ಸದಾ ಒಪ್ಪುತ್ತಿದ್ದು, ಅಂಥ ಅವರ ಅನುಭವಕ್ಕೆ ತಕ್ಕದಾದ ಗೌರವದಿಂದ ತಂಗಿಯನ್ನು ಕ್ಲೇರಿಸಳು ಕಂಡುಕೊಳ್ಳುತ್ತಿದ್ದಳು. ಇದಕ್ಕೆಲ್ಲ ಆಧಾರವಾಗಿ ಮಿಸ್ ಲೆವಿನಳ ಯೌವ್ವನ ಕಾಲದ ಚರಿತ್ರೆಯೇ ಇದೆ. ಮಿಸ್ ಲೆವಿನಳನ್ನು ಮಿ. ಪಿಡ್ಜರ್ ಎಂಬ ಯುವಕ ಬಹುವಾಗಿ ಪ್ರೀತಿಸುತ್ತಿದ್ದನಂತೆ. ಅವನು ಮಿಸ್ ಲೆವಿನಳನ್ನು ಪ್ರೀತಿಸುತ್ತಿದ್ದುದು ಮಾತ್ರವಲ್ಲ, ಅವನ ಅಂತರಂಗದಲ್ಲೇ ಹೃದಯ ದೇವತೆಯಾಗಿ ಅವಳನ್ನು ಸದಾ ಆರಾಧಿಸುತ್ತಿದ್ದನಂತೆ. ಆದರೆ, ಅವನ ಈ ತೆರನಾದ ಅಂತರಂಗದ ಆರಾಧನೆಗಳೇ ಹೃದಯ ವೇದನೆ ಆಗಿ ಕಾಣಿಸಿಕೊಂಡು, ಅವನ ಅಂತರಂಗವನ್ನು ಬಿಚ್ಚಿ ತೋರಿಸುವ ಮೊದಲೇ ಅವನ ಯೌವ್ವನಾವಸ್ಥೆಯಲ್ಲೇ (ಅರವತ್ತನೇ ವರ್ಷದಲ್ಲಿ) ಅಕಾಲ ಮರಣಕ್ಕೆ ತುತ್ತಾದನು. ಹೀಗೆ ಪ್ರಿಯನನ್ನು ಕಳೆದುಕೊಂಡನಂತರ ಮಿಸ್ ಲೆವಿನಳು ಅವನ ತೈಲಚಿತ್ರವನ್ನು ಬರೆಸಿ ತನ್ನ ಮನೆಯಲ್ಲಿಟ್ಟುಕೊಂಡು, ಮದುವೆಯಾಗದೆ ಜೀವನವನ್ನು ಸವೆಯಿಸುತ್ತಿದ್ದಾಳೆಂದು ಮಿಸ್ ಕ್ಲೇರಿಸಳು ಅನುಕಂಪದಿಂದ ಹೇಳುತ್ತಿದ್ದುದನ್ನು ಕೇಳಿದ್ದೇನೆ. ಇಂಥ ಪ್ರೇಮದ ಪೂರ್ಣಾನುಭವವುಳ್ಳ, ಜ್ಞಾನವೃದ್ಧೆ ಲೆವಿನಳು ನಮ್ಮ ಇಂದಿನ ಕಾರ್ಯದಲ್ಲಿ ಮುಖ್ಯ ಭಾಗವನ್ನು ವಹಿಸಿದಳು.

ಮಿಸ್ ಲೆವಿನಳು ನನ್ನ ಪತ್ರವನ್ನು ಕೈಯ್ಯಲ್ಲಿ ಹಿಡಿದುಕೊಂಡು ಟ್ರೇಡಲ್ಸನನ್ನು ನೋಡಿ – “ಮಿ. ಡೇವಿಡ್ ಕಾಪರ್ಫೀಲ್ಡ್ ತಾವು ತಾನೆ?” ಅಂದರು. “ಅಲ್ಲ, ನಾನು” ಎಂದು ನಾನು ಸ್ವಲ್ಪ ಗಾಬರಿಯಿಂದಲೇ ಹೇಳಿದೆನು. “ಮಿ. ಕಾಪರ್ಫೀಲ್ಡ್, ನನ್ನ ತಂಗಿ ಲೆವಿನಳು ಹೃದಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪಾರಂಗತಳು. ನಿಮಗೆ ಸಂಬಂಧಿಸಿದ ಕಾರ್ಯಗಳಲ್ಲಿ ಅವಳು ಪ್ರಧಾನವಾಗಿ ಮಾತಾಡುವುದಿದ್ದರೂ ನನ್ನ ಹಿರಿಯ ಸ್ಥಾನಕ್ಕೆ ತಕ್ಕದಾಗಿ ಎರಡು ಮಾತಾಡಬೇಕಾಗಿದೆ. ದಿವಂಗತ ಮಿ. ಸ್ಪೆನ್ಲೋನಿಗೂ ನಮಗೂ ವಿಶೇಷ ಪರಿಸ್ಪಂದನ ಇರಲಿಲ್ಲವೆಂದು ಮೊದಲು ನಿಮಗೆ ತಿಳಿಸಬೇಕಾಗಿದೆ. ಅವರ ಮರಣದ ಕಾರಣವಾಗಿ ಮಾತ್ರ ನಮಗೆ ಇಂದು ಈ ಜವಾಬ್ದಾರಿಯು ಬಂದೊದಗಿದೆ. ಅವರ ಪತ್ನಿಯ ಒಂದು ಅಚಾತುರ್ಯದಿಂದ ಆದ ಅಪಮಾನದ ಕಾರಣವಾಗಿ ನಾವು (ರಕ್ತಸಂಬಂಧವಿದ್ದರೂ) ನಮ್ಮ ಇಷ್ಟ ಸಂಬಂಧವನ್ನು ಬಿಟ್ಟಿದ್ದೆವು” ಎಂದು ಮಿಸ್ ಕ್ಲೇರಿಸಳು ಹೇಳಿದಳು.

ಅಷ್ಟರಲ್ಲೇ ತಂಗಿಯು, ಮಾತಿನಲ್ಲಿ ಅಡ್ಡಬಂದು – “ಅಕ್ಕಾ, ಚರಿತ್ರೆಯ ಪೂರ್ವಭಾಗಗಳನ್ನು ಇಂದು ಪುನರಾವರ್ತನೆ ಮಾಡುವುದು ನ್ಯಾಯವಾಗಲಾರದು. ನಮ್ಮ ಪ್ರಿಯ ತಮ್ಮನ ಮರಣಮುದ್ರೆಯಿಂದ ಆ ಪುಟಗಳು ಪವಿತ್ರದ ಗೋಪ್ಯತೆಯಲ್ಲುಳಿಯಲಿ” ಹೀಗನ್ನುತ್ತಾ ಯಾವ ಯಾವ ವಿಷಯವನ್ನು ಎಷ್ಟೆಷ್ಟು ಮಾತಾಡಬೇಕೆಂದು ನಾನು ಬರೆದಿದ್ದ ಪತ್ರದ ಅಂಚಿನಲ್ಲಿ ಬರೆದುಕೊಂಡಿದ್ದ ಟಿಪ್ಪಣಿಗಳನ್ನು ನೋಡಿಕೊಂಡು ಮಾತನ್ನು ಪುನಃ ಪ್ರಾರಂಭಿಸಿದಳು.

“ಮಿ. ಕಾಪರ್ಫೀಲ್ಡ್, ನಮ್ಮ ತಮ್ಮನ ಮರಣಾನಂತರ ಡೋರಾಳ ಲೌಕಿಕ ಪರಿಸ್ಥಿತಿ ಪೂರ್ಣ ಬದಲಾಗಿದೆಯೆಂಬುದನ್ನು ಉಭಯ ಪಕ್ಷದವರೂ ಒಪ್ಪಬೇಕಷ್ಟೆ? ನೀವು ಯೋಗ್ಯರು, ವಿದ್ಯಾವಂತರು, ಪ್ರೇಮದ ಅಭಿರುಚಿಯಿರಬೇಕಾದ ವಯಸ್ಸಿನವರು, ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ…..” ಎಂದು ಅವಳು ಹೇಳಿ ಮುಂದುವರಿಯುವ ಮೊದಲು, ಮಿಸ್ ಕ್ಲೇರಿಸಳು ಮಾತಾಡತೊಡಗಿದಳು. “ಈಗ ನೋಡಿ, ಮಿ. ಕಾಪರ್ಫೀಲ್ಡ್. ಡೋರಾಳ ತಾಯಿಯಿದ್ದಿದ್ದರೆ ಈ ಜವಾಬ್ದಾರಿಯು ನಮ್ಮದಾಗಿರುತ್ತಿರಲಿಲ್ಲ. ಈ ಜವಾಬ್ದಾರಿ ನಮಗೆ ಬಂದದ್ದು ಸ್ಪೆನ್ಲೋನಿಂದಲೋ ಅಥವಾ ಅವನ ಪತ್ನಿಯಿಂದಲೋ? ಇದು ವಿವಾದಾಸ್ಪದವಾದ ಸಂಗತಿ. ಅಂದು ಡೋರಾಳ ನಾಮಕರಣದ ದಿನ, ಇತರರೆಲ್ಲರಿಗೆ ಊಟದ ಆಮಂತ್ರಣವಿತ್ತು ನಮಗೆ ಮಾತ್ರ ಚಹ ಸೇವನೆಗೆ ಆಮಂತ್ರಣವಿತ್ತ ಸಂದರ್ಭದಲ್ಲಿ, ಅವಳ ಊಟದ ಮೇಜು ನಮ್ಮಿಬ್ಬರನ್ನು ಸೇರಿಸಿಕೊಳ್ಳುವಷ್ಟು ವಿಶಾಲವಾಗಿರಲಿಲ್ಲವೆಂಬ ಅವಳ ಬುದ್ಧಿ ಸಂಕುಚಿತತೆಯನ್ನು ಸ್ಪಷ್ಟವಾಗಿ, ನೇರಾಗಿ, ತಿಳಿಸಿಬಿಟ್ಟಿದ್ದಿದ್ದರೆ…..” ಎಂದು ಮಾತನ್ನು ಆಡಿ ಪೂರೈಸುವ ಮೊದಲೇ ಮಿಸ್ ಲೆವಿನಳು…

“ಅಕ್ಕಾ, ನೀನು ಕಳೆದುದನ್ನು ಎತ್ತಿ ಮಾತಾಡಬಾರದು. ನಾವು ನಮ್ಮ ಇಂದಿನ ಕಾರ್ಯಕ್ಕೆ ಗಮನ ಕೊಡೋಣ. ಮಿ. ಕಾಪರ್ಫೀಲ್ಡರು ಡೋರಾಳನ್ನು ಈ ಹಿಂದಿನಿಂದಲೇ ಪ್ರೀತಿಸಿ, ಪರಿಚಯ ಬೆಳೆಸಿಕೊಂಡು, ಅವರೊಳಗಿನ ದಾಂಪತ್ಯ ಪ್ರತಿಜ್ಞೆಯನ್ನು ನಡೆಸಿಕೊಂಡಿರುತ್ತಾರೆ. ವಕೀಲ ಮಿ. ಟ್ರೇಡಲ್ಸರೂ ನಾವೂ ಸೇರಿ ಆ ಪ್ರತಿಜ್ಞೆಯು ಸಿಂಧುವಾಗತಕ್ಕದ್ದೇ ಅದನ್ನು ಕುರಿತು ಪುನರಾಲೋಚನೆ, ತಿದ್ದುಪಡಿ ಏನಾದರೂ ಆಗತಕ್ಕದ್ದಿದೆಯೇ (ಇಷ್ಟುಹೇಳಿ, ಪತ್ರದ ಅಂಚಿನ ಟಿಪ್ಪಣಿಯನ್ನು ನೋಡಿಕೊಂಡು) ಎಂದು ನೋಡಿಕೊಂಡು, ನಮ್ಮ ಕಡೆಯ ನಿರ್ಧಾರ, ವ್ಯವಸ್ಥೆ ಏನೆಂಬುದನ್ನು ನಿಶ್ಚೈಸೋಣ” ಅಂದಳು.

ಈಗಲೇ ನಾನು ಎರಡು ಮಾತುಗಳನ್ನು ಆಡಿಬಿಡುವುದು ಉಚಿತವೆಂದು ನನಗೆ ತೋರಿ – “ಮಿಸ್ ಲೆವಿನರಂದದ್ದು ಸರಿ, ಸಂಪೂರ್ಣ ಸರಿ. ನನ್ನ ಅನುರಾಗವು ಸ್ಥಿರವಾದುದು. ಅಷ್ಟು ತಿಳಿದೇ ಡೋರಾಳು ತನ್ನ ಒಪ್ಪಿಗೆಯನ್ನು ಇತ್ತಿದ್ದಾಳೆ. ಬಾಕಿ ವಿಷಯಗಳನ್ನು – ಅಂದರೆ, ನಮ್ಮಿಬ್ಬರ ಮುಂದಿನ ಸಂಬಂಧದ ವಿಷಯವನ್ನು, ನೀವುಗಳು ನಿಧಾನವಾಗಿ ಆಲೋಚಿಸಲು ಅವಕಾಶ ತೆಗೆದುಕೊಳ್ಳುತ್ತಿರುವಾಗಲೇ ನಾನು ಅವಳನ್ನು ಆಗಿಂದಾಗ್ಗೆ ನೋಡಿ ಮಾತಾಡಿ ಹೋಗಲು ನನಗೆ ಅವಕಾಶ ದೊರಕಬಹುದೇ ಎಂಬುದನ್ನು ದಯಮಾಡಿ ತಿಳಿಸಬೇಕೆಂದು ಕೇಳಿಕೊಳ್ಳುತ್ತೇನೆ” ಎಂದು ಹೇಳಿಕೊಂಡೆನು.

ಮಿಸ್ ಲೆವಿನಳು ಮೃದುವಾಗಿ – ದಿವಂಗತ ಮಿ. ಪಿಡ್ಜರರ ದಿವ್ಯ ಸ್ಮರಣೆಯನ್ನು ತಂದುಕೊಂಡೇ ಎಂಬಂತೆ – “ಅನುರಾಗವು – ಸಂಸ್ಕಾರಹೊಂದಿದ ಅನುರಾಗವು, ಪ್ರೇಮದ ಪರಮೋನ್ನತಿಯ ದಾಸ್ಯ ಭಾವದ ಅನುರಾಗವು, ಅಷ್ಟೊಂದು ಸುಲಭವಾಗಿ ಲಕ್ಷ್ಯಕ್ಕೆ ಬರತಕ್ಕದ್ದಲ್ಲ. ಮನುಷ್ಯನು ತನ್ನ ಹೃದಯದ ಅಂತರಾಳವನ್ನು ಅರಿಯಲಾರನು – ಅರಿಯುವವರಿದ್ದಾರೆ, ಅರಿತವರಿದ್ದರು (ಈಗ ನನಗೆ ಮಿ.ಪಿಡ್ಜರರ ನೆನಪು ಬಂತು). ಆದರೆ ಎಲ್ಲರಿಂದಲೂ ಅದು ಸಾಧ್ಯವಿಲ್ಲ. ವಾಡಿಕೆಯಾಗಿ ತೋರ್ಪಡುವ ಅನುರಾಗವು ಕೇವಲ ಛಾಯೆ ಮಾತ್ರ. ನಿಜವಾದ ಅನುರಾಗವು ಮೃದುವಾದುದು, ತೀಕ್ಷ್ಣವೂ ಆದುದು. ಮುನಿಗಳಿಗೆ ಮಾತ್ರ ಅರ್ಥವಾಗತಕ್ಕಂಥಾದ್ದು. ಅದು ಶಬ್ದರಹಿತವು, ಅಂತರಂಗದಲ್ಲಿ ಶಾಶ್ವತವಾಗಿ ಸ್ಫುರಿಸುತ್ತಿದ್ದು ಅನುಕೂಲ ಪರಿಸ್ಥಿತಿಯಲ್ಲಿ ಮಾತ್ರ ಹೊರ ಹೊಮ್ಮಿ ಪ್ರಕಾಶಿಸುವ ಹೃದಯದ ದಿವ್ಯ ಪ್ರಭೆಯೇ ಅದು. ಶುದ್ಧ ಅನುರಾಗವು ಅನೇಕ ವೇಳೆ ಅಂತರಂಗದಲ್ಲೆ ಇದ್ದು, ಪ್ರಕಾಶಕ್ಕೆ ಬರಲು ತಕ್ಕದಾದ ಅವಕಾಶ ಸಿಗದೇ ಒಂದು ಜನ್ಮವನ್ನೇ ಕಳೆಯಿಸಿ, ಯಾರಿಗೂ ಗೋಚರಿಸದೆ ಮಾಯವಾಗುವುದೂ ಇದೆ” ಅಂದಳು ಮಿಸ್ ಲೆವಿನಳು.

ಶುದ್ಧ ಅನುರಾಗದ ಅನುಭವವನ್ನು ಮಿ. ಪಿಡ್ಜರ್ ಮತ್ತು ಮಿಸ್ ಲೆವಿನ – ಇವರಿಬ್ಬರು ಮಾತ್ರ ಕಂಡಿರಬಹುದೆಂದೂ ಮಿ. ಪಿಡ್ಜರರೂ ಸಹ ತಮ್ಮ ಅನುರಾಗವನ್ನು ಪ್ರಕಾಶಕ್ಕೆ ಬಿಡದೆ ತಮ್ಮ ಜನ್ಮವನ್ನು ದಾಟಿರಬಹುದೆಂದೂ ಆ ಮಾತುಗಳನ್ನು ಕೇಳುತ್ತ, ನನಗೆ ತೋರತೊಡಗಿತು. ಈ ವಿಧದ ವಾಕ್ಯ ಸರಣಿಯಲ್ಲಿ ನನ್ನ ಅನುರಾಗ ಹೇಗೆ ಗ್ರಹಿಸಲ್ಪಡಬಹುದು ಎಂಬುದನ್ನು ಊಹಿಸುತ್ತಾ ನಾನು ಹೆದರತೊಡಗಿದೆ. ಆದರೂ ನನ್ನ ಅನುರಾಗವನ್ನು ಕುರಿತಾಗಿ ನಾನೂ ಎರಡು ಮಾತುಗಳನ್ನಾಡಿದೆನು. ಮಿಸ್ ಲೆವಿನಳ ಅಭಿಪ್ರಾಯವನ್ನು ಸಂಪೂರ್ಣ ಅನುಮೋದಿಸಿದೆ. ಅನಂತರ ನನ್ನ ಅನುರಾಗವೂ ಅವಳು ತಿಳಿದು ಚಿತ್ರಿಸಿದಂಥಾದ್ದೇ ಎಂದು ಸ್ಪಷ್ಟಪಡಿಸಲು ಪ್ರಯತ್ನಿಸಿದೆ. ನಾನು ಏನೆಲ್ಲಾ ಮಾತಾಡುತ್ತಿದ್ದೇನೆಂದು ವಿಶೇಷ ಗ್ರಹಿಸಿಕೊಳ್ಳುವ ಸ್ಥಿತಿಯಲ್ಲೂ ನಾನಿರಲಿಲ್ಲ. ಅಂತೂ ಮಾತಾಡಿದುದರಿಂದ ದುಷ್ಪರಿಣಾಮ ಆಗಲಿಲ್ಲವೆಂಬುದನ್ನು ತಿಳಿಯತೊಡಗಿದೆ. ಏಕೆಂದರೆ, ನನ್ನ ಮಾತುಗಳನ್ನು ಪೂರ್ಣ ಕೇಳಿ ಅರ್ಥಮಾಡಿಕೊಳ್ಳುವಷ್ಟೂ ಮಿಸ್ ಲೆವಿನಳಿಗೆ ವ್ಯವಧಾನವಿರಲಿಲ್ಲ. ತನಗೆ ದೊರಕಿದ್ದ ಅಂದಿನ ಸಂದರ್ಭದಲ್ಲಿ ತನ್ನ ಅನುಭವಗಳನ್ನು ಮೆರೆಯಿಸಿ, ತನ್ನ ಅಧಿಕಾರವನ್ನು ಹೃದಯ ವೇದ್ಯವಾಗುವಂತೆ ಚಲಾಯಿಸಬೇಕೆಂಬ ಲವಲವಿಕೆ ಮಿಸ್ ಲೆವಿನಳಿಗಿದ್ದಂತೆ ತೋರಿತು. ನನಗೂ ಅವಳನ್ನುವ ವಿಷಯಕ್ಕೂ ಸಂಬಂಧವಿಲ್ಲದಿದ್ದಂತೆ, ನನಗಿಂತಲೂ ಮೇಲಾಗಿ ವಕೀಲ ಟ್ರೇಡಲ್ಸನು ಅದನ್ನು ಅರ್ಥಮಾಡಬಲ್ಲನೆಂಬಂತೆ, ಅವನನ್ನು ನೋಡುತ್ತಾ ಮಿಸ್ ಲೆವಿನಳು ಪುನಃ ಮಾತಾಡಲಾರಂಭಿಸಿದಳು – “ನಾನಂದ ಮಾತು ನಿಮಗೆ ಅರ್ಥವಾಗಬಹುದಲ್ಲವೇ, ಮಿ. ಟ್ರೇಡಲ್ಸ್?” ಅಂದಳು.

“ಹೌದು, ನಿಮ್ಮ ಮಾತು ಸರಿ, ಅನುರಾಗವು ಅವಕಾಶವನ್ನು ಕಾಯುತ್ತಿರುವುದೆಂಬುದರಲ್ಲಿ ಏನೂ ಸಂಶಯವಿಲ್ಲ. ಡೆವೊನ್ಷಯರಿನ ಹತ್ತನೇ ನಂಬ್ರದ ಮನೆಯ ಸೋಫಿಯನ್ನು ನಾನು ಬಹುವಾಗಿ ಪ್ರೀತಿಸಿ, ಮದುವೆಯಾಗಲು ನಮ್ಮೊಳಗೆ ಒಪ್ಪಂದವಾಗಿದೆ. ಆದರೆ, ನಾವು ಅನುಕೂಲ ಪರಿಸ್ಥಿತಿಗಳನ್ನು ಕಾಯುತ್ತಾ ಇದ್ದೇವೆ. ಇನ್ನಷ್ಟು ಕಾಲ ಕಾದಿರಲೂ ನಾವು ಸಿದ್ಧರಾಗಿದ್ದೇವೆ. ಹೀಗೆ ಕಾಯುವುದೂ ಒಂದು ಆನಂದದ ಸಂಗತಿಯಲ್ಲವೇ?” ಅಂದನು ಟ್ರೇಡಲ್ಸನು. “ಆದ್ದರಿಂದಲೇ ನಾವಿಬ್ಬರೂ – ಅಲ್ಲವೇ ಕ್ಲೇರಿಸಾ” ಎಂದು ಹೇಳಿ ಅಕ್ಕನನ್ನು ನೋಡಿ, ಹೌದೆನ್ನುವಂತೆ ಅವಳು ತಲೆದೂಗಿದ ಮೇಲೆ – “ಇಂಥ ಅನುರಾಗವನ್ನು ನಮ್ಮ ಪ್ರತ್ಯಕ್ಷ ಪರೀಕ್ಷೆಗೆ ಒಳಪಡಿಸಿ, ನಮ್ಮ ಪರೀಕ್ಷೆಯ ಫಲಿತಾಂಶವನ್ನು ನಮ್ಮ ಅನುಭವದ ಒರೆಯಲ್ಲಿ ಹಚ್ಚಿನೋಡಿ, ಪುನಃ ಪುನಃ ಶೋಧನೆ ಮಾಡಿ, ಪರಿಶುದ್ಧ ಪ್ರೇಮವೇ ಅದೆಂಬುದು ನಮಗೆ ತಿಳಿದು ಬಂದನಂತರ, ಉಭಯಪಕ್ಷಗಳ ಮುಂದಿನ ಮಾರ್ಗವನ್ನು ನಿರ್ಧರಿಸೋಣ” ಅಂದಳು ಮಿಸ್ ಲೆವಿನ.

“ಆ ದಿನ ನನ್ನ ತಮ್ಮನ ಆ ಅನ್ಯಾಯವೊಂದು ನಡೆಯದಿರುತ್ತಿದ್ದರೆ ನಾವು ನಮ್ಮ ತಮ್ಮನ ಕುಟುಂಬದವರಲ್ಲಿ ಮಿಳಿತವಾಗಿ, ಡೋರಾಳನ್ನು ಕುರಿತಾಗಿ ನಮಗಿರುವ ಈಗಿನ ಅನುಭವಕ್ಕಿಂತ ಹೆಚ್ಚಿನ ಅನುಭವವನ್ನು ಪಡೆದಿದ್ದು, ಅವಳ ಹೃದಯದ ಸತ್ಯ ಸ್ಥಿತಿಯ ಪರಿಚಯವು ನಮಗೆ ಆಗಿರುತ್ತಿತ್ತು. ಹೃದಯಕ್ಕೆ ಸಂಬಂಧಿಸಿದ ವಿಷಯದಲ್ಲಿ ನಾವು ಎಷ್ಟು ಎಚ್ಚರದಿಂದಿದ್ದರೂ ಸಾಲದು” ಅಂದಳು ಮಿಸ್ ಕ್ಲೇರಿಸಾ.

“ಈ ಎಲ್ಲಾ ವಿಷಯವನ್ನೂ ಗ್ರಹಿಸಿ ನಾವು ನಿಮಗೆ ಕೆಲವು ಆನುಕೂಲ್ಯಗಳನ್ನು ಒದಗಿಸಿ ಕೊಡುವೆವು. ಆದರೆ ಈ ವಿಧದ ಸಹಾಯದಿಂದ ನಾವು ಯಾವ ವಿಧದಲ್ಲೂ ಪರಸ್ಪರ ಬದ್ಧರಾಗಿರುತ್ತೇವೆಂದು ನೀವು ಗ್ರಹಿಸಿಕೊಳ್ಳಕೂಡದು” ಎಂದು ಲೆವಿನಳು ಹೇಳಿ, ತನ್ನ ಕೈಯ್ಯಲ್ಲಿದ್ದ ಪತ್ರದ ಟಿಪ್ಪಣಿಗಳಲ್ಲಿನ ತನ್ನ ಭಾಗ ಮುಗಿಯಿತೆಂಬಂತೆ ಆ ಪತ್ರವನ್ನು ಅಕ್ಕನ ಕೈಗೆ ಕೊಟ್ಟಳು. ಮಿಸ್ ಕ್ಲೇರಿಸಳು ಪತ್ರದ ಟಿಪ್ಪಣಿಗಳನ್ನು ಒಮ್ಮೆ ನೋಡಿ ಮಾತಾಡಲಾರಂಭಿಸಿದಳು – “ಮಿ. ಕಾಪರ್ಫೀಲ್ಡ್, ನೀವು ಪ್ರತಿ ಆದಿತ್ಯವಾರದ ದಿನ ನಮ್ಮಲ್ಲಿಗೆ ಮಧ್ಯಾಹ್ನದ ಭೋಜನಕ್ಕೆ – ಮೂರು ಘಂಟೆಗೆ, ಬರಬೇಕು. ಮತ್ತು ವಾರದ ಇನ್ನೊಂದು ದಿನ, ನಿಮಗೆ ಅನುಕೂಲವಿದ್ದ ದಿನ, ಸಂಜೆ ಐದು ಘಂಟೆಗೆ ಚಹ ಕುಡಿಯಲೂ ಬರಬೇಕು. ನಿಮಗೆ ನಾವು ಒದಗಿಸುವ ಅನುಕೂಲಗಳು ಇವುಗಳೇ. ಇನ್ನು, ಕೆಲವು ಸಂದರ್ಭಗಳಲ್ಲಿ ಊಟಕ್ಕೂ ಚಹ ಸೇವನೆಗೂ ವಿಶೇಷ ಸಂದರ್ಭಗಳೆಂದು ನಿಮ್ಮನ್ನು ಆಮಂತ್ರಿಸಲೂಬಹುದು. ಈ ವಿಧದಿಂದ ನೀವು ಡೋರಾಳ ಪರಿಚಯವನ್ನು ವೃದ್ಧಿಗೊಳಿಸಿಕೊಳ್ಳಬಹುದು. ಮುಂದಿನ ಪರಿಸ್ಥಿತಿಗಳಿಗನುಸರಿಸಿ ನಾವು ಉಭಯಪಕ್ಷದವರು ವರ್ತಿಸೋಣ” ಅಂದಳು ಕ್ಲೇರಿಸ.

ನಾವು ಈ ಮಾತುಗಳನ್ನಾಡುತ್ತಿದ್ದಾಗಲೇ ಮಧ್ಯೆ ಮಧ್ಯೆ ಜಿಪ್ಪ್ ಬೊಗಳುತ್ತಿದ್ದಂತೆಯೂ ಅದರ ಬಾಯಿಯನ್ನು ಬಿಗಿ ಹಿಡಿದು ಮುಚ್ಚುತ್ತಿದ್ದಂತೆಯೂ ಒಳಗಿನಿಂದ ಶಬ್ದ ಕೇಳಿ ಬರುತ್ತಿತ್ತು. ಡೋರಾಳು ಅಡಗಿ ಕುಳಿತು ನಮ್ಮ ಮಾತುಗಳನ್ನು ಕೇಳುತ್ತಿರಬೇಕೆಂದು ಊಹಿಸಿದೆನು. ಅನಂತರ ನನ್ನನ್ನು ಮಿಸ್ ಲೆವಿನಳು ಪಕ್ಕದ ಒಂದು ಕೋಣೆಗೆ ಕರೆದುಕೊಂಡು ಹೋಗಿ, ಅಲ್ಲಿ ನನ್ನನ್ನು ಬಿಟ್ಟು, ತಾನು ಹೊರಟು ಹೋದಳು. ಆ ಕೋಣೆಯಲ್ಲಿ ಡೋರಾ ಇದ್ದಳು ಮತ್ತು ಜಿಪ್ಪ್ ತನ್ನ ಬಾಯಿಗೆ ಬಟ್ಟೆ ಬಿಗಿಸಿಕೊಂಡು ಒಂದು ಮೂಲೆಯಲ್ಲಿ ಮಲಗಿತ್ತು.

ತನ್ನ ತಂದೆಯು ಮೃತಪಟ್ಟಿದ್ದುದರ ಸೂಚಕವಾದ ಕಪ್ಪು ಬಟ್ಟೆಯ ಉಡುಪುಗಳನ್ನು ಧರಿಸಿದ್ದ ಸುಂದರಿ ಡೋರಾ ಈ ಕರಿಬಟ್ಟೆಗಳನ್ನು ಧರಿಸಿ ಎದುರು ಬಂದಾಗ ಅಲೌಕಿಕ, ಅಪ್ರತಿಮ ಸುಂದರಿಯಾಗಿಯೇ ವಿರಾಜಿಸಿದಳು. ನನ್ನನ್ನು ಕಂಡೊಡನೆ ಆನಂದ ಬಾಷ್ಪಗಳನ್ನು ಸುರಿಸುತ್ತಾ ಆಲಂಗಿಸಿ, ಚುಂಬಿಸಿ, ಅತ್ತಳು. ನನಗೆ ಮಾತೇ ಹೊರಡದಂತಾಗಿತ್ತು.

“ಡೋರಾ, ನನ್ನ ಸರ್ವಸ್ವವೇ – ನನ್ನ ಸರ್ವಸ್ವವಲ್ಲವೇನೇ ನೀನು?” ಎಂದು ಆನಂದದಿಂದ ನಾನಂದೆ.
“ಹೌದು – ಆದರೆ, ನೀನು ಬಹು ಕ್ರೂರಿ. ನನ್ನನ್ನು ಹೀಗೊಂದು ಹೆದರಿಸಬಹುದೇ ನೀನು?” ಎಂದು ಕೇಳಿದಳು ಡೋರಾ.
“ನಾನು ನಿನ್ನನ್ನು ಹೆದರಿಸಿದ್ದು ಯಾವಾಗ್ಗೆ ಡೋರಾ? ನಿನ್ನ ಅತ್ತೆಯವರು ನಿನ್ನನ್ನು ಹೇಗೆ ಸಾಕುತ್ತಿದ್ದಾರೋ ಎಂದು ನಾನೇ ಹೆದರಿಕೊಂಡಿದ್ದೆ!”
“ಪ್ರಶ್ನೆಗಳೆಲ್ಲ ಈಗ ಬೇಡ. ಅವನನ್ನು ಓಡಿಸು, ಅವನನ್ನೇಕೆ ನೀನು ಕರೆದುಕೊಂಡು ಬಂದದ್ದು?” ಎಂದು ತುಟಿಗಳನ್ನು ಉದ್ದ ಮಾಡಿ ಕೇಳಿದಳು.
“ಯಾರನ್ನೇ ಓಡಿಸುವುದು, ಕಂದಾ?”
“ನಿನ್ನ ಜತೆಯಲ್ಲಿ ತಂದಿರುವ ಮುಳ್ಳು ಹಂದಿಯನ್ನು, ಅವನನ್ನು ಕಂಡರೆ ಹೆದರಿಕೆಯಾಗುತ್ತದೆ.”
“ಯಾರನ್ನು? ನನ್ನ ಜತೆಯಲ್ಲಿ ಬಂದ ಟ್ರೇಡಲ್ಸನನ್ನೆ?”
“ಹೌದು, ಜತೆಯಲ್ಲಿ ಬಂದ ಹಂದಿಯನ್ನು.”
“ಹಾಗನ್ನಬಾರದು, ಡೋರಾ. ಅವನೊಬ್ಬ ಬಹು ಯೋಗ್ಯ ಸ್ನೇಹಿತನು. ನಾಡಿದ್ದು ಬರುವಾಗ ಅವನನ್ನು ಬಿಟ್ಟು ಬರುತ್ತೇನೆ, ಬೇಕಾದರೆ ನನ್ನ ಅತ್ತೆಯನ್ನು ಕರೆದುಕೊಂಡು ಬರುತ್ತೇನೆ.”
“ನನಗೆ ಇನ್ನು ಯಾರು ಬರುವುದೂ ಬೇಡ, ನೀನೊಬ್ಬ ಬಂದರೆ ಸಾಕು” ಎಂದು ಹೇಳುತ್ತಾ ಡೋರಾ ನನಗೆ ಮುತ್ತು ಕೊಡುತ್ತಾ ಮರುಳುಮಾಡಿ, ಮುಂದೆ ಮಾತಾಡದಂತೆ ಮಾಡಿಬಿಟ್ಟಳು.

ಸ್ವಲ್ಪ ಹೊತ್ತು ಹೀಗೆ ನಾನೂ ಡೋರಾಳೂ ಸಂತೋಷವಾಗಿ ಅನೇಕ ಸಣ್ಣ ಪುಟ್ಟ ವಿಷಯಗಳನ್ನು ಮಾತಾಡುತ್ತಾ ಕಾಲ ಕಳೆದದ್ದೇ ಗೊತ್ತಾಗಲಿಲ್ಲ. ಅಷ್ಟರಲ್ಲಿ ಮಿಸ್ ಸ್ಪೆನ್ಲೋ ಸಹೋದರಿಯರು (ಅವರು ನಮಗಾಗಿ ಗೊತ್ತು ಮಾಡಿ ಬಿಟ್ಟಿದ್ದ ಸಮಯ ದಾಟಿರಬಹುದಾದ್ದರಿಂದ, ಎಂದು ನಾನು ಊಹಿಸುವಂತೆ) ನಮ್ಮ ಕೋಣೆಯನ್ನು ಪ್ರವೇಶಿಸಿದರು. ಅಲ್ಲಿ ನಮಗಿಬ್ಬರಿಗೂ ಮುಂದಿನ ಉಪಯೋಗಕ್ಕಾಗಿ ಕೆಲವು ಬುದ್ಧಿವಾದಗಳನ್ನು ಹೇಳಿದರು. ನನ್ನ ಅತ್ತೆ ಅವರ ಮನೆಗೆ ಬರಬೇಕೆಂದು ಆಮಂತ್ರಣವಿತ್ತರು. ಅಷ್ಟೂ ಅಲ್ಲದೆ, ತಾವೂ ಸಹ ನಮ್ಮ ಮನೆಗೆ ಬರುವುದಾಗಿಯೂ ಸಂತೋಷದಿಂದ ಆಶ್ವಾಸನೆಯಿತ್ತರು. ಅವರಿಬ್ಬರನ್ನೂ ತುಂಬಾ ವಂದಿಸಿ ಟ್ರೇಡಲ್ಸನೂ ನಾನೂ ನಮ್ಮ ನಮ್ಮ ಮನೆ ಕಡೆಗೆ ಹೊರಟೆವು.

ಆ ಸಹೋದರಿಯರು ನನಗೆ ಕೊಟ್ಟಿದ್ದ ಆನುಕೂಲ್ಯಗಳನ್ನು ನಾನು ತಪ್ಪದೆ ಪಡೆದುಕೊಳ್ಳುತ್ತಾ ಬಂದೆ. ನನ್ನ ಅತ್ತೆ ಅವರ ಮನೆಗೆ ಹೋಗಿ ಬರುವುದೂ ಆ ಸಹೋದರಿಯರು ನಮ್ಮ ಮನೆಗೆ ಬಂದು ಹೋಗುವುದೂ ನಡೆಯಿತು. ಈ ರೀತಿಯಿಂದ ನಮ್ಮ `ಉಭಯಪಕ್ಷ’ದೊಳಗೆ ಸ್ನೇಹ ಸೌಹಾರ್ದ ಬೆಳೆಯತೊಡಗಿತು. ಅತ್ತೆಗೂ ಆ ಸಹೋದರಿಯರಿಗೂ ಸರಿಬಾರದೆಂದು ನಾನು ಸ್ವಲ್ಪ ಅಂಜುತ್ತಿದ್ದರೂ (ಅತ್ತೆ ನನಗಾಗಿ ಎಷ್ಟು ಕಷ್ಟ ಸಹಿಸಲು ತಯಾರಿದ್ದುದರಿಂದ) ಈ ಸೌಮ್ಯ ಸ್ವಭಾವದ, ಸಾತ್ವಿಕ, ಸಹೋದರಿಯರೊಡನೆ, ಅತ್ತೆ ಬಹು ಸ್ವಲ್ಪ ಸಮಯದಲ್ಲೇ ತುಂಬಾ ಸಲಿಗೆ, ಸ್ನೇಹಗಳನ್ನೇ ಬೆಳೆಸಿದಳು.

ನಾನು ಡೋರಾಳ ಮನೆಗೆ ಹೋಗಿ ಬರುತ್ತಾ ದಿನ ಕಳೆದ ಹಾಗೆಲ್ಲ ಅವಳಿಗೆ ಮನೆ ಕೆಲಸಗಳನ್ನು ಸ್ವಲ್ಪ ಸ್ವಲ್ಪ ಕಲಿಸಬೇಕೆಂದು ಇಚ್ಛಿಸತೊಡಗಿದೆನು. ಟ್ರೇಡಲ್ಸನ ಸೋಫಿಯನ್ನು ಡೋರಾಳೊಂದಿಗೆ ಹೋಲಿಸಿ ನೋಡುತ್ತಾ ಸೋಫಿಯ ಗುಣ, ನಡತೆ, ಕಾರ್ಯ ಕೌಶಲಗಳನ್ನು ಕಂಡು ಅವಳಂತೆಯೇ ಡೋರಾಳೂ ಆಗಬೇಕೆಂದು ಬಯಸಿದೆನು. ಈ ಇಬ್ಬರ ಮಾನಸಿಕ ಬೆಳವಣಿಗೆಗಳು ಒಂದೊಂದು ವಿಧವಾಗಿದ್ದುವೆಂದು ತಿಳಿದೆನು. ಸೋಫಿಯೊಬ್ಬಳೇ ಅಷ್ಟೊಂದು ದೊಡ್ಡ ಅವಳ ಕುಟುಂಬದ ದಿನ ನಿತ್ಯದ ಎಲ್ಲಾ ಕೆಲಸವನ್ನು ಬಹು ಚೊಕ್ಕಟವಾಗಿ, ಚುರುಕಾಗಿ ಮಾಡಿ ಬರುತ್ತಿದ್ದಳು. ಅವಳಿಗೆ (ಡೋರಾಳಿಗೆ ಬರುತ್ತಿದ್ದಂತೆ) ಸಂಗೀತ, ಚಿತ್ರ ಲೇಖನ ಬರುತ್ತಿರಲಿಲ್ಲ. ಸೋಫಿಗೆ ಈ ವಿಧದ ಕುಶಲವಿದ್ಯೆಗಳು ಬರುತ್ತಿರಲಿಲ್ಲವಾದರೂ ಅವಳು ಸದಾ ಹಸನ್ಮುಖಿಯಾಗಿರುತ್ತಾ ಸಂತುಷ್ಟಿಯಿಂದ ಸಂಸಾರದ ಕಾಯಕಷ್ಟದ ಕೆಲಸಗಳನ್ನೆಲ್ಲ ಮಾಡಿ ಬರುತ್ತಿದ್ದಳು. ಅವಳು ಡೋರಾಳಷ್ಟು ಸುಂದರಿಯಲ್ಲ. ಆದರೆ ಅವಳು ಮಾಡಿದ ಕಾರ್ಯಗಳೆಲ್ಲವೂ ಸುಂದರವಾಗಿಯೇ ಇರುತ್ತಿದ್ದುವು. ಈ ಎಲ್ಲಾ ವಿಷಯಗಳನ್ನು ನಾನು ಟ್ರೇಡಲ್ಸನಿಂದ ಆಗಿಂದಾಗ್ಗೆ ವಿಚಾರಿಸಿ, ಇತರ ಮಾತುಗಳ ಮಧ್ಯೆ ಸಂಗ್ರಹಿಸಿಕೊಂಡಿದ್ದೆ.

ಇನ್ನು ಡೋರಾಳನ್ನು ಕುರಿತು ನನ್ನ ವಿಮರ್ಶೆ ಹೀಗಿತ್ತು: ಡೋರಾ ಬಹು ಸುಂದರಿ. ಮನಸ್ಸು ನಿರ್ಮಲವಾದುದುದು. ನಡೆನುಡಿಗಳಲ್ಲಿ ಹಸುಳೆಯಷ್ಟೇ ಸರಳತೆ. ಚಿತ್ರಕಲೆ ಅಭ್ಯಸಿಸಿದ್ದವಳು ಡೋರಾ. ಅಲಂಕರಿಸಿಕೊಂಡು ಗಿಟಾರ್ ವಾದ್ಯವನ್ನು ಬಾರಿಸುತ್ತಾ ಮೃದು ಮಧುರಗಾನ ಮಾಡಿದಾಗಲಂತೂ ಅವಳಷ್ಟು ಸುಂದರಿ, ದಿವ್ಯ ತೇಜಸ್ವಿ, ಮನೋಹರಿ ಮತ್ತೊಬ್ಬಳಿಲ್ಲ. ಡೋರಾಳ ಪೂರ್ಣತೆಗೆ ಬೇಕಾದ ಒಂದು ಕೊರತೆಯೆಂದರೆ ಗೃಹಕೃತ್ಯದ ಅಭ್ಯಾಸ ಮಾತ್ರ. ಇನ್ನು ಲೆಕ್ಕಾಚಾರದ ಅನುಭವವೂ ಅವಳಿಗೆ ಸ್ವಲ್ಪ ಬೇಕಾಗಿತ್ತು. ಇವೆರಡು ಲೋಪವಲ್ಲ. ಅವಳಲ್ಲಿ ಅಂತರ್ಗತವಾಗಿದ್ದು ಪ್ರಚೋದಿಸಲ್ಪಡದೆ ಉಳಿದ ಶಕ್ತಿಗಳು ಮಾತ್ರ. ಈ ಹೋಲಿಕೆಯನ್ನು ಮಾಡುತ್ತಾ ಉತ್ತಮ ಪತ್ನಿಯಾಗಲು ಡೋರಾ ಸೋಫಿಗಿಂತಲೂ ಮೇಲೆಂದು ನಾನು ನಿಶ್ಚೈಸಿಕೊಂಡು ಹೆಮ್ಮೆಪಡುತ್ತಿದ್ದೆನು.

ಡೋರಾಳ ಪರಿಚಯ ಬೆಳೆಯುತ್ತಾ ಹೋದ ಹಾಗೆಲ್ಲ ಅವಳಲ್ಲಿದ್ದ ಕೆಲವೇ ಅವಗುಣಗಳಿಗೆ ಇರುವ ಕಾರಣಗಳನ್ನೂ ಕಂಡು ಹಿಡಿದೆನು. ಡೋರಾಳು ಆಟವಾಡಲಿದ್ದ ಒಂದು ಚಂದದ ಗೊಂಬೆಯಂತೆಯೇ ಅವಳನ್ನು ಕಂಡವರೆಲ್ಲಾ ಅವಳೊಡನೆ ವರ್ತಿಸುತ್ತಿದ್ದರು. ಹೀಗೆ ಮಿ. ಸ್ಪೆನ್ಲೋರವರು, ಈಗ ಅವರ ತಂಗಿಯರೂ ಅವಳನ್ನು ಸಾಕಿದ್ದೂ ಬೆಳೆಸಿದ್ದೂ ಇದೇ ಭಾವನೆಯಿಂದ! ನಾನೂ ಸಹ ಮೊದಮೊದಲು ಡೋರಾಳನ್ನು ಅವರೆಲ್ಲರು ಕಂಡಿದ್ದಂತೆಯೇ – ಗೊಂಬೆಯನ್ನು ಕಂಡ ಹಾಗೆಯೇ, ಕಂಡು, ಪ್ರೀತಿಸಿ, ಪೂಜಿಸಿ ಬಂದಿರುವೆನು. ಇದನ್ನು ದಿನ ಹೋದಂತೆ ತಿಳಿದುಕೊಂಡೆನು. ಇಷ್ಟು ತಿಳಿವಳಿಕೆ ಬಂದನಂತರ, ನಮ್ಮ ಮುಂದಿನ ಸಂಸಾರ ಸಾಗೋಣದರ ದೃಷ್ಟಿಯಿಂದ ನಾನು ಡೋರಾಳಿಗೆ ಗೃಹಕೃತ್ಯವನ್ನು ಕುರಿತಾಗಿ ತರಬೇತು ಮಾಡಲು ಪ್ರಯತ್ನಿಸಿದೆ.

ನಾವು ಸ್ವಂತ ಮನೆ, ಸ್ವಂತ ಸಂಸಾರಗಳಿಂದ ಬದುಕುವಾಗ ಅಂಗಡಿ ವ್ಯಾಪಾರ ಮಾಡಬೇಕಾದ್ದರಿಂದ ಗೃಹಕೃತ್ಯದ ಪ್ರಾರಂಭದ ಬೋಧನೆಯಾಗಿ ಲೆಕ್ಕವನ್ನು ಹೇಳಿಕೊಡಲೂ ಅಂಗಡಿ ಲೆಕ್ಕಗಳನ್ನು ಇಡುವ ಕ್ರಮಗಳನ್ನು ಹೇಳಿಕೊಡಲೂ ಪ್ರಾರಂಭಿಸಿದೆನು. ನನ್ನ ಉದ್ದೇಶ, ಪರಿಶ್ರಮ, ಕರ್ತವ್ಯಗಳನ್ನೆಲ್ಲ ಡೋರಾಳು ಬಹು ಸುಲಭವಾಗಿ, ಹಗುರವಾಗಿ ಹಾರಿಸಿಬಿಟ್ಟಳು. ಅವಳ ತರ್ಕ ಈ ತೆರನಾಗಿತ್ತು – “ಮಾರುವ ಕೆಲಸವನ್ನು ಅಂಗಡಿಯವನೇ ಮಾಡುತ್ತಿರುವಾಗ ಆ ಸಂಬಂಧದ ಲೆಕ್ಕವನ್ನೂ ಅವನು ಹೇಗೂ ಇಡಬೇಕಷ್ಟೆ. ಹೀಗಿರುವಾಗ ಅವನು ಮಾಡಬೇಕಾದ ಕೆಲಸವನ್ನು ನಾವು ಏಕೆ ಮಾಡಿ ಕಷ್ಟಪಡಬೇಕು?” ಈ ತರ್ಕದ ಕಾರಣವಾಗಿ ನಾನು ಫಕ್ಕನೆ ಡೋರಾಳನ್ನು ಲೆಕ್ಕದಲ್ಲಿ ತರಬೇತು ಮಾಡಲಾರದೆ ಹೋದೆನು. ಕೆಲವೊಮ್ಮೆ ಅವಳೊಡನೆ ಚರ್ಚಿಸಿ ಲೆಕ್ಕದ ಆವಶ್ಯಕತೆಯನ್ನು ಬೋಧಿಸತೊಡಗಿದಾಗ ಅವಳು ನನ್ನನ್ನು ಮುದ್ದಿಟ್ಟು ಮರುಳುಗೊಳಿಸಿ, ಮಾತೆತ್ತದಂತೆ ಮಾಡಿಬಿಡುತ್ತಿದ್ದಳು. ಲೆಕ್ಕವನ್ನು ಬದಿಗಿಟ್ಟೂ ಪಾಕ ಶಾಸ್ತ್ರವನ್ನು ತೆಗೆದುಕೊಂಡಾಗ – “ಅಡಿಗೆಯವರಿರುವಾಗ ಅವರ ಭಾರವನ್ನು ನಾನು ಹೊರುವುದೇ?” ಎಂದು ಉತ್ತರ ಕೊಟ್ಟು, ನಗಾಡಿ ನನ್ನನ್ನು ಸೋಲಿಸಿಬಿಟ್ಟಳು.

ಈ ವಿಧದ ಒರಟು ಕ್ರಮಗಳಿಂದ ಅವಳನ್ನು ತರಬೇತಿ ಮಾಡುವುದು ಅಸಾಧ್ಯವೆಂದು ಕೊನೆಗೆ ತೋರಿ, ಅವಳಿಗೆ ಗೊತ್ತಿದ್ದ ಸಂಗೀತ, ಚಿತ್ರ, ಮೊದಲಾದವುಗಳ ಮೂಲಕ ತರಬೇತು ಮಾಡಬಹುದಲ್ಲವೆ, ಎಂದು ಸಮಾಧಾನ ತಂದುಕೊಂಡೆನು. ಆದರೂ ನನ್ನನ್ನು ನನ್ನ ಮನಸ್ಸೇ ಆಗಿಂದಾಗ್ಗೆ ಚಾಳಿಸಿ, ನಾನೂ ಸಹ ಇತರರಂತೆಯೇ ಡೋರಾಳನ್ನು ಒಂದು ಆಟದ ಗೊಂಬೆಯಂತೆ ಬೆಳೆಸಿ ತರುತ್ತಿರುವೆನೆಂದು ತಿಳಿಸುತ್ತಿತ್ತು. ಡೋರಾಳನ್ನು ಕುರಿತು ನನ್ನ ಮನಸ್ಸಿನಲ್ಲಿ ಈ ತೆರನಾದ ಒಂದು ಚಿಕ್ಕ ಚಿಂತೆಯೂ ಉದ್ಭವಿಸಿತ್ತು.

(ಮುಂದುವರಿಯಲಿದೆ)