ಅಧ್ಯಾಯ ನಲ್ವತ್ತ್ಮೂರು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ನಲ್ವತ್ತೈದನೇ ಕಂತು
ನನ್ನ ಜೀವಮಾನದ ಒಂದು ಚಿರಸ್ಮರಣೀಯವಾದ ಘಟ್ಟ ದಾಟುವ ಮೊದಲು ಅದನ್ನು ಸ್ವಲ್ಪ ನಿಂತು ನೋಡುವ ಮನಸ್ಸಿದೆ. ದಾಟಿಹೋದ ಹಿಂದಿನ ದಿನಗಳನ್ನೂ ಆ ದಿನಗಳ ಜತೆಯಲ್ಲಿ ನಾನೂ ಕೂಡಿಕೊಂಡು, ಮೂಕವಾಗಿ, ಸ್ವಪ್ನದ ದೃಶ್ಯಗಳಂತೆ ಕಳೆದುಹೋದ ಘಟನೆಗಳನ್ನೂ ಕಂಡು ದಾಟಿ ಹೋಗುವ ಮೆರವಣಿಗೆಯನ್ನು ನೋಡುವವನಂತೆ, ನಾನು ಒಂದು ಬದಿಯಲ್ಲಿ ನಿಂತು ನೋಡುವೆನು.
ವಾರ, ತಿಂಗಳು, ಋತು, ಇವೆಲ್ಲ ಚಮತ್ಕಾರವಾಗಿ ದಾಟಿ ಮುಗಿಯುತ್ತಿವೆ. ಕಳೆದುಹೋದ ಕಾಲವು ವಸಂತ ಋತುವಿನ ಒಂದು ಪ್ರಭಾತ ಅಥವಾ ಹಿಮಂತ ಋತುವಿನ ಒಂದು ಸಂಧ್ಯೆ ಎಂಬಂತೆ ಮಾತ್ರ ತೋರುವುವು. ಡೋರಾಳ ಜತೆಯಲ್ಲಿ ತಿರುಗಿ ವಿಹರಿಸಿದ ವಿಶಾಲ ಮೈದಾನ ಹಸುರು ಹಚ್ಚೆಯಿಂದ ಮೆರೆದು ಶೋಭಿಸುತ್ತಿದ್ದಂತೆಯೇ ಹಿಮದಿಂದ ತುಂಬಿ, ಶುಭ್ರ ಧವಳ ಪ್ರದೇಶವಾಗಿಯೂ ಶೋಭಿಸುತ್ತಿದೆ. ಮೈದಾನದ ಬಳಿಯ ಆ ನದಿ ಬೇಸಿಗೆಯ ಬಿಸಿಲಲ್ಲಿ ಥಳಥಳಿಸಿ ಹರಿದು ಚಳಿಗಾಲದ ಗಾಳಿಗೆ ಚಲಿಸದೆ ಹೆಪ್ಪುಗಟ್ಟಿ, ಹಿಮದ ಗಟ್ಟಿಯಾಗಿ ಮುಗಿದಿದೆ. ಇವೆಲ್ಲವೂ ಒಂದು ಉಸಿರು ಎಳೆದು ಬಿಡುವುದರ ಒಳಗೆ ಎದ್ದು ತೋರುತ್ತಾ ಬಿದ್ದೂ ಮುಗಿಯುವುವು. ಏನು ಚಲನೆ! ಎಂಥ ರಭಸ! ಯಾವ ಒಂದು ನದಿಯೂ ಸಮುದ್ರಕ್ಕೆ ಹರಿದು ಸೇರುವುದಕ್ಕಿಂತ ರಭಸದಿಂದ ನನ್ನ ಜೀವನದ ನದಿ ಹರಿದು ಸಾಗುತ್ತಿದೆ. ಮಿಸ್ ಲೆವಿನಾ ಮತ್ತು ಮಿಸ್ ಕ್ಲೇರಿಸರ ಮನೆಯೂ ಅಲ್ಲಿನ ಗಡಿಯಾರವೂ ಘಟಿಕಾಯಂತ್ರವೂ ಮೊದಲಿದ್ದಂತೆಯೇ ಈಗಲೂ ಇವೆ. ಗಡಿಯಾರವಾಗಲೀ ಘಟಿಕಾಯಂತ್ರವಾಗಲೀ ಎಂದೂ ಸತ್ಯವನ್ನು ಹೇಳಲಾರವು. ಆದರೆ ನಾವು ಅವುಗಳನ್ನು ಎಂದೂ ನಂಬದೆ ಬಿಡಲಾರೆವು! ನಮ್ಮ ಜೀವನವೇ ಈ ವಿಧದ ಸತ್ಯಾಸತ್ಯಗಳ ಭ್ರಮೆಯಿಂದ ಕೂಡಿದೆ!
ನಾನು ಇಪ್ಪತ್ತೊಂದನೆಯ ವರ್ಷದಲ್ಲಿ ಕಾಲಿಟ್ಟಿದ್ದೇನೆ. ಈಗ ಒಬ್ಬ ಗಣನೀಯ ಪ್ರಜೆಯಾಗಿದ್ದೇನೆ. ಆ ಭಯಂಕರ ಶೀಘ್ರಲಿಪಿಯನ್ನು ಪಳಗಿಸಿ ಪ್ರಾಶಸ್ತ್ಯ ಪಡೆದು, ಪಾರ್ಲಿಂಮೆಂಟಿನ ವರದಿಗಾರನಾಗಿ ಹಣ ಸಂಪಾದಿಸುತ್ತಿದ್ದೇನೆ. ನನ್ನ ಸಮೇತವಾಗಿ ಹನ್ನೆರಡು ಜನರು ಪಾರ್ಲಿಮೆಂಟಿನ ಭಾಷಣಗಳನ್ನು ಪತ್ರಿಕೆಗಳಿಗೆ ಬರೆದು ಕಳುಹಿಸುತ್ತಿದ್ದೇವೆ. ಪಾರ್ಲಿಮೆಂಟಿನ ಕಾರ್ಯ ಕಲಾಪಗಳು ನನಗೆ ಪೂರ್ಣ ಅರ್ಥವಾಗಿರುವುದಿಲ್ಲ! ಬ್ರಿಟಾನಿಯಾ ರಾಜಮಾತೆಯು ರಾಜ್ಯ ಸೂತ್ರಗಳ ಕೆಂಪು ಕಟ್ಟುಗಳಿಂದ ಬಂಧಿತಳಾಗಿ, ಭೋಜನದ ಕೋಳಿಯಂತೆ ಪಾರ್ಲಿಮೆಂಟಿನ ಮೇಜಿನ ಮೇಲೆ ಮಲಗಿರುತ್ತಾಳೆ. ರಾಜಕಾರಣಿಗಳು ಬೇಕು ಬೇಕಾದಂತೆ ವಿಷಯಗಳನ್ನು ಉಪಯೋಗಿಸುತ್ತಿರುತ್ತಾರೆ. ರಾಜಕಾರಣಿಗಳಲ್ಲಿ ನನಗೆ ಶ್ರದ್ಧೆಯಿಲ್ಲ.
ಟ್ರೇಡಲ್ಸನೂ ಶೀಘ್ರಲಿಪಿಯನ್ನು ಮುಟ್ಟಿ ನೋಡಿ, ಮನನೋಯಿಸಿಕೊಂಡು ಸೋತಿರುವನು. ಹಣಸಂಪಾದನೆಯ ಮಾರ್ಗದಲ್ಲಿ ಅವನು ನನಗಿಂತ ಸ್ವಲ್ಪ ಹಿಂದೆ ಬಿದ್ದಿರುವನು. ನಾನು ಕೆಲವು ಚಿಕ್ಕ ಕಥೆಗಳನ್ನು ಬರೆದು, ಗುಪ್ತನಾಮದಿಂದ ಪ್ರಕಟಿಸಿ, ಹಣವನ್ನೂ ಹೆಸರನ್ನೂ ಪಡೆದಿರುವೆನು. ನನ್ನ ಉತ್ಪತ್ತಿಯು ಬೆರಳೊಂದಕ್ಕೆ ನೂರು ಪೌಂಡು ಎಂದು ಎಣಿಸಿದರೆ, ತಿಂಗಳೊಂದರ ಮೂರೂವರೆ ಬೆರಳಿನಷ್ಟು ಹಣ ಸಂಪಾದಿಸುತ್ತಿದ್ದೇನೆ. ನನ್ನದೇ ಆದ ಒಂದು ಚಿಕ್ಕ ಮನೆ, ಮತ್ತು ಅದಕ್ಕೆ ಸಂಬಂಧಿಸಿದ ಚಿಕ್ಕ ಹಿತ್ತಲೂ ಇವೆ. ಅಲ್ಲದೆ ನಾನು ಈಗ ಈ ಮನೆಯಲ್ಲೇ ವಾಸಿಸುತ್ತಿದ್ದೇನೆ. ಇನ್ನು ನಮ್ಮ ಅತ್ತೆಯನ್ನು ನೋಡೋಣ. ಅವಳು ಡೋವರಿನ ಹಿತ್ತಲು ಮನೆಗಳನ್ನು ಮಾರಿ ನನ್ನ ಮನೆಯ ಸಮೀಪದ ಒಂದು ಹಿತ್ತಲನ್ನೂ ಹಿತ್ತಲೊಳಗಿನ ಮನೆಯನ್ನೂ ಕ್ರಯಕ್ಕೆ ಪಡೆದಿದ್ದಾಳೆ. ಅವಳು ಬಾಯಿ ಬಿಟ್ಟು ಹೇಳದಿದ್ದರೂ ಈ ಕಾರ್ಯಕ್ಕೆ ಒಂದು ಅರ್ಥವಿರಬೇಕು ತಾನೆ! ನಾನು ಡೋರಾಳನ್ನು ಮದುವೆಯಾಗಿ ಸಂಸಾರ ನಡೆಸುವಾಗ ತಾನು ನಮ್ಮ ಹತ್ತಿರವೇ ಇದ್ದು ನಮಗೆ ಸಹಾಯ ಸಲಹೆಗಳನ್ನು ಒದಗಿಸಬೇಕೆಂದೇ ಆಗಿರಬೇಕು! ಆ ವಿಷಯವೂ ನಿಜ – ಡೋರಾಳ ಮದುವೆ ನಿಶ್ಚಯವಾಗಿದೆ.
ಮಿಸ್ ಕ್ಲೇರಿಸಾ ಮತ್ತು ಮಿಸ್ ಲೆವಿನರು ನಮ್ಮ ಮನೆಗೆ ಬೇಕಾದ ಸಾಹಿತ್ಯ ಸಾಮಗ್ರಿಗಳನ್ನು ಅಂಗಡಿಯಿಂದ ತಂದು ಒದಗಿಸುತ್ತಿದ್ದಾರೆ. ಅವರು ಡೋರಾಳ ಸಮೇತ ಅಂಗಡಿಗೆ ಹೋಗಿ ಬರುತ್ತಾರೆ. ಡೋರಾ ತನ್ನ ನಾಯಿ ಜಿಪ್ಪನಿಗಾಗಿ ಒಂದು ಚಿಕ್ಕ ಆಟದ ಮನೆಯನ್ನೂ ತಂದಿದ್ದಾಳೆ. ಆ ಆಟದ ಮನೆಯೊಳಗೆ ತುಂಬಾ ಚಿಕ್ಕ ಘಂಟಾಮಣಿಗಳು ತೂಗಾಡಿಕೊಂಡಿರುವುದರಿಂದ ಜಿಪ್ಪನು ಅದರ ಒಳಕ್ಕೆ ನುಗ್ಗುವಾಗ ಆ ಘಂಟೆಗಳು ಶಬ್ದ ಮಾಡುತ್ತವೆ. ಆಗ ಜಿಪ್ಪನು ಹೆದರಿ ಹೊರಗೆ ಹಾರುವುದೂ ಹಾಗೆ ಹಾರುವಾಗ ಘಂಟೆಗಳು ಮತ್ತಷ್ಟು ಝಣ ಝಣಿಸಿ ಅವನನ್ನು ಇನ್ನಷ್ಟು ಹೆದರಿಸುವುದೂ ನಮಗೆಲ್ಲ ಒಂದು ತಮಾಷೆಯೇ ಆಗಿದೆ.
ಡೋರಾಳ ಮದುವೆಯ ಉಡುಪನ್ನು ತಯಾರಿಸಲು ಇಬ್ಬರು ಹೆಂಗುಸರು ತಮ್ಮ ಮೈಗೆ ಸೂಜಿ ಕತ್ತರಿಗಳನ್ನು ಇರಿದಿಟ್ಟುಕೊಂಡು ಕೆಲಸ ಮಾಡುತ್ತಾ ವಾರಗಟ್ಟಲೆ ಕುಳಿತಿದ್ದಾರೆ. ಮದುವೆ ಒಂದೇ ಕಾರ್ಯಕ್ಕೆ ಇಷ್ಟು ಬಟ್ಟೆ ಬೇಕಾದರೆ ಇಡೀ ಜೀವಮಾನದ ಬಗ್ಗೆ ಎಷ್ಟು ಬಟ್ಟೆ ಬೇಕಾಗಬಹುದೆಂಬುದು ನನಗೆ ಒಂದು ಕೌತುಕವೇ ಆಗಿದೆ. ಪೆಗಟಿ ಬಾರ್ಕಿಸಳು ಬಂದು ನಮ್ಮ ಮನೆಯನ್ನು ಶುಚಿಪಡಿಸುತ್ತಿದ್ದಾಳೆ. ಈ ಮನೆಯೇ ಅವಳದಾಗಿದ್ದು, ಇಲ್ಲೇ ಅವಳು ಬಾಳಿ ಬೆಳೆದು ಬಂದಿದ್ದಂತೆ ಅವಳು ಕೆಲಸ ಮಾಡುತ್ತಿದ್ದಾಳೆ. ಮಿ. ಪೆಗಟಿ ಅಪೂರ್ವವಾಗಿ ಕಾಣಸಿಗುತ್ತಾರೆ. ಆದರೆ ನಾವು ಯಾವ ಮಾತನ್ನೂ ಆಡದೆ, ಬರೇ ಒಬ್ಬರನ್ನೊಬ್ಬರು ಗುರುತಿಸಿಕೊಂಡು ಮಾತ್ರ ದಾಟುತ್ತಿರುತ್ತೇವೆ.
ಅಲ್ಲಿ ಬರುತ್ತಿರುವವರು ಯಾರು? ಟ್ರೇಡಲ್ಸನು! ಅವನು ತನ್ನ ಕೈಯ್ಯಲ್ಲಿ ಅಷ್ಟೊಂದು ಗಂಭೀರವಾಗಿ ಹಿಡಿದುಕೊಂಡು ಬರುತ್ತಿರುವುದೇನಿರಬಹುದು? ಓಹೋ ತಿಳಿಯಿತು – ಅದು ನನ್ನ ಮದುವೆಯ ಲೈಸೆನ್ಸ್. ಲೈಸೆನ್ಸಿನಲ್ಲಿ `ಡೇವಿಡ್ ಕಾಪರ್ಫೀಲ್ಡ್ ಮತ್ತು ಡೋರಾ ಸ್ಪೆನ್ಲೋ’ ಎಂಬ ಹೆಸರುಗಳಿವೆ. ಸರ್ಕಾರದ ವ್ಯವಹಾರಗಳಲ್ಲಿ ಬಹು ಮುಖ್ಯ ಪಾತ್ರ ವಹಿಸುವ ಸ್ಟೇಂಪು ಡಿಪಾರ್ಟ್ಮೆಂಟಿನ ಕೆಂಪು ಮೊಹರ ಒಂದು ಕಡೆಯೂ ಕೇಂಟರ್ಬರಿಯ ಬಿಷಪ್ಪರ ಆಶೀರ್ವಚನಗಳು ಇನ್ನೊಂದು ಕಡೆಯೂ ಆ ಲೈಸೆನ್ಸಿನಲ್ಲಿ ಸ್ಪಷ್ಟವಾದ ಅಕ್ಷರಗಳಲ್ಲಿ ಎದ್ದು ಕಾಣುತ್ತಿವೆ.
ಅಗೋ! ಮದುವೆಯ ದಿನ ಬಂತೇ ಬಂತು. ನಾವೆಲ್ಲರೂ ಇಗರ್ಜಿಗೆ ತಲುಪಿದೆವು. ಏಗ್ನೆಸ್ ಮತ್ತು ಸೋಫಿಯರು, ಕ್ಲೇರಿಸಾ ಮತ್ತು ಲೆವಿನಾ, ಜೇನೆಟ್ ಮತ್ತು ಅತ್ತೆ, ಎಲ್ಲರೂ ಬಂದಿದ್ದಾರೆ. ಟ್ರೇಡಲ್ಸ್ ಮತ್ತು ಮಿ. ಡಿಕ್ಕರೂ ಬಂದಿದ್ದಾರೆ. ಹೆಣ್ಣೊಪ್ಪಿಸುವವರು ಮಿ. ಡಿಕ್ಕರು – ಅವರ ಕಡೆಯ ಕನ್ನೆಯರು ಏಗ್ನೆಸ್ಸಳೂ ಮತ್ತು ಸೋಫಿ. ಪೆಗಟಿ ಬಂದು ಗೆಲರಿಯಲ್ಲಿ ನಿಂತು ಮದುವೆಯನ್ನು ನೋಡುತ್ತಿದ್ದಾಳೆ. ಮದುವೆಯ ಗಾಂಭೀರ್ಯಕ್ಕೆ ತಕ್ಕದಾಗಿ ಅತ್ತೆ ಶಿಸ್ತಿನಿಂದ, ಗಂಭೀರಭಾವ ತಾಳಿ, ನೆಟ್ಟಗೆ ನಿಂತಿದ್ದಾಳೆ. ಇಂದು ನವದಂಪತಿಯರ ಅನುರಾಗಜನ್ಯ ಹೃದಯಬಾಂಧವ್ಯವೇ ಇಲ್ಲಿ ದೈವ ಸನ್ನಿಧಿಯಲ್ಲಿ ದೃಢವಾಗಬೇಕಾದ್ದರಿಂದ, ಇಂಥ ವಿಷಯದಲ್ಲಿ ಪರಿಣತಳಾದ ಮಿಸ್ ಲೆವಿನಳು (ಮೂರ್ಛಿತರಾದವರನ್ನೆಬ್ಬಿಸಲು ಬೇಕಾದ ಔಷಧಿಯನ್ನು ತಯಾರಿಸಿಟ್ಟುಕೊಂಡೇ) ದುಃಖ ಮಿಶ್ರಿತವಾದ ಹರ್ಷತೆಯಿಂದ ನಿಂತಿದ್ದಾಳೆ.
ನಾವು ಇಗರ್ಜಿ ಒಳಗೆ ಮೊಣಕಾಲೂರಿಕೊಂಡು ಕುಳಿತೂ ಆಯಿತು. ಏಗ್ನೆಸ್ಸಳು ಡೋರಾಳ ಕೈಯ್ಯನ್ನು ಹಿಡಿದುಕೊಂಡು ಅವಳ ಜತೆಯಲ್ಲೇ ನಿಂತಿದ್ದಾಳೆ. ಗುರುಗಳು ಬಂದು ಮಂತ್ರೋಚ್ಚಾರಣೆ ಮಾಡಿದರು. ಡೋರಾ ಸ್ಪೆನ್ಲೋ ಎಂಬ ಶಬ್ದ ಕೇಳಿದ ಕೂಡಲೇ ತನ್ನ ತಂದೆಯನ್ನು ಸ್ಮರಿಸಿ ಡೋರಾ ಅತ್ತಳು. ಮಿಸ್ ಲೆವಿನಳೂ ಅತ್ತಳು. (ಮಿ. ಪಿಡ್ಜರರನ್ನು ಸ್ಮರಿಸಿ ಆಗಿರಬಹುದು.) ಮದುವೆಯಾದನಂತರ ಮನೆಗೆ ಬರುವಾಗ್ಗೆ ದಾರಿಯಲ್ಲಿ ಜನರು ಆಡಿಕೊಳ್ಳುತ್ತಿದ್ದ ಮಾತೂ ಸಹ ಈಗ ಕೇಳಿ ಬರುತ್ತದಲ್ಲವೇ? “ಎಂಥ ಸ್ಫುರದ್ರೂಪೀ ಹೆಣ್ಣು, ಎಂಥ ಸುಂದರ ಪುರುಷ ಗಂಡು” ಎಂದು ಅವರು ಆಡಿದ ಮಾತುಗಳು ಕೇಳಿಸುತ್ತವೆ!
ಮದುವೆಯ ಊಟಕ್ಕೆ ಅನೇಕ ವಿಧದ ತಿಂಡಿ ತೀರ್ಥಗಳಿದ್ದುವೆಂದು ಮಾತ್ರ ಜ್ಞಾಪಕವಿದೆ. ಅವು ಯಾವುದನ್ನೂ ತಿಂದ ರುಚಿಯ ನೆನಪು ಈಗಿಲ್ಲ. ಊಟ ಮುಗಿದನಂತರ ನನ್ನದೊಂದು ಚಿಕ್ಕ ಭಾಷಣವೇ ಇತ್ತು! ಆಮಂತ್ರಿತರಾಗಿ ಮದುವೆಗೆ ಬಂದಿದ್ದವರೆಲ್ಲ ಹೋದರು. ಡೋರಾಳೂ ನಾನೂ ಜಿಪ್ಪನ ಸಮೇತ ಬಾಡಿಗೆ ಸಾರೋಟಿನಲ್ಲಿ ಕುಳಿತು ವಿಹಾರಕ್ಕಾಗಿ ಹೋದೆವು. “ಹುಚ್ಚು ಪೋರಾ – ನೀನು ಈಗಲಾದರೂ ಸಂತೋಷವಾಗಿದ್ದೀಯೇನು?” ಎಂದು ಡೋರಾಳು ದಾರಿಯಲ್ಲಿ ಕೇಳಿದಳು. ಹೀಗೆ ಗತಕಾಲದ ಚಿತ್ರಗಳ ಮೆರವಣಿಗೆಯನ್ನು ಹಿಂಬಾಲಿಸಿ ಹೋಗಿ ನೋಡಿದ್ದಾಯಿತು. ಇನ್ನು ನನ್ನ ಕಥೆಯ ಪಥದಲ್ಲೇ ಮುಂದುವರಿಸುವೆನು.
(ಮುಂದುವರಿಯಲಿದೆ)
ಭಾರೀ ಚೆನ್ನಾಗಿದೆ ಅಶೋಕ್ . ಥ್ಯಾಂಕ್ಸ್
ಯಾವುದೇ ವ್ಯಕ್ತಿಯಾಗಲಿ,ತನ್ನ ಕಳೆದು ಹೋದ ಬದುಕನನ್ನು,ಪುನಃ ಸ್ಮರಣೆಗೆ ತಂದುಕೊಂಡು ಮೆಲುಕಾಡಿಸುವುದರಲ್ಲಿ,ಖಂಡಿತವಾಗಿ,ಒಂದು ಬಗೆಯ ಸಂತೋಷವಿರುತ್ತದೆ,ಘಟನೆಗಳನ್ನಾಧರಿಸಿ,ಕೆಲವೊಮ್ಮೆ ರೋಮಾಂಚನವನ್ನೂ,ಕೆಲವೊಮ್ಮೆ ”ಇನ್ನು ಅಂತಹ ದಿನ ಮರಳಿ ಬಾರದಲ್ಲ!!” ಎನ್ನುವ ಬೇಸರವನ್ನೂ ಅನುಭವಿಸುವ ಅವಕಾಶವಿದೆ.