“ಶ್ರೀ ಶನಿ ಪ್ರಭಾವ ಅಥವಾ ನಳದಮಯಂತಿ, ಈ ಬಾರಿ ನಮ್ಮಲ್ಲಿ ಶಿವರಾತ್ರಿಯ ವಿಶೇಷ ನಾಟಕ. ಕಲಾವಿದರು ಹುಯ್ಲಾಳು ಹುಂಡಿಯ ಹಳ್ಳೀ ಸಮಸ್ತರು” ಅಂತ ನನ್ನ ಮೈಸೂರಿನ ತಮ್ಮ – ಅನಂತವರ್ಧನ, ಎಂದಿನಂತೆ ಅಕ್ಕರೆಯ ಕರೆ(ಯೋಲೆ)-ಕರೆ ನೀಡಿದ. ಮೈಸೂರು ಹೊರವಲಯದ ಕೆ.ಹೆಮ್ಮನ ಹಳ್ಳಿಯಲ್ಲಿ ಅನಂತ ಹಲವು ವರ್ಷಗಳ ಹಿಂದೆ ಆಕಸ್ಮಿಕವಾಗಿ ಕಾಡುಬಿದ್ದ ಪುರಾತನ ರಚನೆಗಳನ್ನು ಕಂಡದ್ದು, ಹಳ್ಳಿಗರನ್ನು ಸಂಘಟಿಸಿ ಜೀರ್ಣೋದ್ಧಾರ ನಡೆಸಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೆಸರಿನಲ್ಲಿ ಕಾರ್ಯದರ್ಶಿಯಾಗಿಯೇ ನಿಂತು ನಡೆಸುತ್ತ ಬಂದಿರುವುದು ನಿಮಗೆಲ್ಲ ಗೊತ್ತೇ ಇದೆ. ಅಲ್ಲಿನ ನಾಟಕ ಒಂದಕ್ಕೆ ಹಿಂದೊಮ್ಮೆ ನಾನು ನಿಂತು, ಅರ್ಧದಲ್ಲೇ ಓಡಿ ಬಂದ ನೆನಪು ನನಗೆ ಮಾಸಿರಲಿಲ್ಲ. ಅದನ್ನು ನೆಪವಾಗಿಟ್ಟು ಅಮ್ಮನನ್ನೂ ಸೇರಿಸಿದಂತೆ ಇಷ್ಟ ಮಿತ್ರರನ್ನೂ ಭೇಟಿಯಾಗುವ ಸಂತೋಷ ಸಣ್ಣದಲ್ಲ. ಅದಕ್ಕೂ ಮಿಗಿಲಾಗಿ ಹಳ್ಳಿಗರ ಜೀವನೋತ್ಸಾಹವನ್ನು ಹೆಚ್ಚಿಸಲು, ಅವರೇ ಪಾಲ್ಗೊಳ್ಳುವ ಮಹೋತ್ಸವವನ್ನು ತನ್ನದೇ ಎಂಬಂತೆ ಆಯೋಜಿಸಿ ನಡೆಸುವ ಅನಂತನ ಉತ್ಸಾಹ ನೋಡುವಂತದ್ದೇ! ಶಿವರಾತ್ರಿಯಂದು ಹಗಲು ಸುಮಾರು ಹನ್ನೆರಡು ಗಂಟೆಗೆ ನಾನು, ದೇವಕಿ ಮೈಸೂರತ್ರಿಗೆ ಹೋದೆವು.

ಅನಂತ ಬೆಳಿಗ್ಗೆ ಐದಕ್ಕೇ ದೇವಸ್ಥಾನಕ್ಕೆ ಹೋಗಿಯಾಗಿತ್ತು. ಮತ್ತೆ ಮರಳುವುದೇನಿದ್ದರೂ ಮರುಬೆಳಿಗ್ಗೆಯೇ ಎನ್ನುವಷ್ಟು ಜವಾಬ್ದಾರಿ ಹೊತ್ತಿದ್ದ. ಕ್ಷೇತ್ರಕ್ಕೆ ತಕ್ಕ ಪರಿವೇಶದೊಡನೆ ಸಹಕರಿಸಲು ಅಲ್ಲಿ ಅವನಿಗೆ ದೊಡ್ಡ ಪರಿವಾರವೇ ಇತ್ತು. ದೇವಳದ ಅರ್ಚಕತನವನ್ನು ನಿರ್ವಹಿಸುವಲ್ಲಿ ಅವಧೂತ ಜೋಶಿಯವರಲ್ಲದೆ ತತ್ಕಾಲೀನ ನೆಲೆಯಲ್ಲಿ ಅಗ್ನಿಹೋತ್ರಿ, ನಾರಾಯಣ ಭಟ್ಟರ ಸಹಕಾರವಿತ್ತು. ಮಂಗಳೂರಿನಿಂದ ವಿಶೇಷವಾಗಿ ಬಂದ (ಚಿಕ್ಕಮ್ಮನ ಮಗ) ತಮ್ಮ ಪ್ರಕಾಶ, ದೇವಳದ ಒಳಗಿನ ದರ್ಶನ ಸೇವೆಗಳಿಗೆ ಶಿಸ್ತು, ಪ್ರಾಮಾಣಿಕತೆಯ ಒಪ್ಪಕೊಡಲು ಇಪ್ಪತ್ನಾಲ್ಕು ಗಂಟೆಯ ವ್ರತವನ್ನೇ ಹಿಡಿದವನಂತಿದ್ದ. ಉಳಿದಂತೆ ಜಾತ್ರಾ ನಿರ್ವಹಣೆ, ಸಾಂಸ್ಕೃತಿಕ ಕಲಾಪ, ಅನ್ನದಾನಾದಿಗಳನ್ನು ಅನಂತನ ಕಛೇರಿಯ ಪುಟ್ಟಸಿದ್ಧ ನಾಯ್ಕ, ವೇಣುಗೋಪಾಲರಾದಿ ಸಿಬ್ಬಂದಿ ಹಾಗೂ ಹಳ್ಳಿಯ ಸ್ವಯಂಸೇವಕರು ಪ್ರೀತಿ ಭಕ್ತಿಗಳಿಂದಲೇ ನಡೆಸುತ್ತಿದ್ದರು. ಇಷ್ಟರ ಮೇಲೆ, ಅಂದರೆ ಜನ ಕೊರತೆಯಿಲ್ಲದಲ್ಲಿ, ದೇವಭಕ್ತಿಗೆ ಸಲ್ಲದ ನಾನು ಮೀಸೆ ತೂರುವ ಅಗತ್ಯವೇನೂ ಬರಲಿಲ್ಲ.

ನಾವು ಮನೆಯವರು ತಡ ಸಂಜೆ ದೇವಸ್ಥಾನದ ವಠಾರಕ್ಕೆ ಹೋದೆವು. (ಅನಂತನ ಹೆಂಡತಿ ರುಕ್ಮಿಣಿ ಮತ್ತು ಮಗಳು ಅಕ್ಷರಿ. ಅಮ್ಮ ಮಾತ್ರ ಗಂಟುವಾತ ಮತ್ತು ನಿಶ್ಶಕ್ತಿಗಳ ಮನೋದೈಹಿಕ ವಿಕ್ಷಿಪ್ತತೆಯಲ್ಲಿ ಹೊರಹೊರಟು ಹಿಂದುಳಿದಿದ್ದಳು.) ಬಂದು ಹೋಗುತ್ತಿದ್ದ ಹಲವು ಸಂಬಂಧಿಕರು ಮತ್ತು ಮಿತ್ರರೊಡನೆ ಪಟ್ಟಾಂಗ ನಡೆಯುತ್ತಲೇ ಇತ್ತು. ದೇವಾಲಯದೊಳಗೆ ಅರ್ಚನೆ, ಅಭಿಷೇಕ, ಆರತಿ, ತೀರ್ಥಗಳ ವಿಲೇವಾರಿ ಪುರುಸೊತ್ತಿಲ್ಲದೆ ಸಾಗಿತ್ತು. ಹಣ್ಣುಕಾಯಿ ಕೊಟ್ಟವರ ಬುಟ್ಟಿ ಬದಲಿದ ಗೊಂದಲ, ಆರತಿ ತಟ್ಟೆಯಲ್ಲಿ ನೋಟಿಗೆ ಬೆಂಕಿ ಮುಟ್ಟಿದ ಗಾಬರಿ, ದೇವಾಲಯದ ಒಳಾಂಗಣಕ್ಕೂ ನುಗ್ಗಿ ದರ್ಶನ ಪಡೆಯ ಬಯಸುವವರಿಗೆ ತಡೆ (ಮಾಮೂಲೀ ದಿನಗಳಲ್ಲಿ ಇಲ್ಲಿ ಯಾರೂ ದೇವಬಿಂಬಗಳನ್ನು ಮುಟ್ಟಿ ಆರಾಧಿಸಬಹುದು. ಹೆಚ್ಚುಗಟ್ಟಳೆ ದಿನಗಳಲ್ಲಿ ಒಳಾವರಣದ ಕಿಷ್ಕಿಂಧೆಯಲ್ಲಿ, ಜನನಿರ್ವಹಣೆಯ ಸಮಸ್ಯೆ ತಪ್ಪಿಸಲು ಮಾತ್ರ ಸಾರ್ವಜನಿಕರಿಗೆ ನಿರ್ಬಂಧ ಹೇರುತ್ತಾರೆ.), ನೇತುಬಿದ್ದ ಗಂಟೆಗಳನ್ನು ಅನಿಯತವಾಗಿ ಬಾರಿಸುವ ಹುಡುಗುಬುದ್ಧಿಗಳ ಕೀಟಲೆ ಜಾತ್ರೆಯ ಸಂಭ್ರಮಕ್ಕೆ ಸಹಜವಾಗಿಯೇ ಇತ್ತು.

ಇಲ್ಲಿ ಭಕ್ತರೊಪ್ಪಿಸುವ ದೇವಸೇವಾ ಸಾಮಗ್ರಿಗಳಲ್ಲಿ ಊದು ಬತ್ತಿಯ ಕಟ್ಟುಗಳು ಬರುತ್ತಲೇ ಇರುತ್ತವೆ. ಅರ್ಚಕರು ಅವನ್ನು ಕೇವಲ ಡಬ್ಬಿಯೊಡೆದು ದೇವಬಿಂಬದೆದುರು ನಿವಾಳಿಸಿ ಕರೆಗೆ ತಳ್ಳುತ್ತಾರೆ. ಸೀಮಿತ ವಾತಾಯನ ಸೌಕರ್ಯದ ಗರ್ಭಗುಡಿ ಅಥವಾ ಒಳಾಂಗಣದೊಳಗೆ ಅವನ್ನೆಲ್ಲ ನಿಜದಲ್ಲಿ ಉರಿಸಿದ್ದೇ ಆದರೆ ಜೀವಾಪಾಯವೇ ಬಂದೀತು. ಆ ಊದುಬತ್ತಿಗಳನ್ನು ಇನ್ಯಾವುದೋ ದೇವಾಲಯದವರು ಬಯಸಿ, ಸಂಗ್ರಹಿಸಿ, ಅನಂತನ ತಲೆನೋವು ಕಡಿಮೆ ಮಾಡಿದ್ದಾರೆ.

ಅವುಗಳ ಡಬ್ಬಿ ಕಸಗಳ ಸುಲಭ ವಿಲೇವಾರಿಗಾಗಿ, ಎದುರಂಗಳದ ಕಲ್ಲ ಕಟ್ಟೆ ಬಳಿ ಸ್ವಯಂಸೇವಕರು ಪುಟ್ಟ ಅಗ್ನಿಕುಂಡವನ್ನೇ ಮಾಡಿದ್ದರು. ಇಂಥಲ್ಲೆಲ್ಲ ಚರಾಚರಗಳಲ್ಲಿ ದೇವನಲ್ಲದೆ ಇನ್ನೊಂದನ್ನು ಕಾಣದ ಭಕ್ತಜನರು ಆ ಕಸದ ಕುಂಡಕ್ಕೂ ಕೈ ಮುಗಿದು, ಬಲಿಬಂದು ದೇವಳದೊಳಕ್ಕೆ ಸಾಗಿದ್ದರು; ಜನಮರುಳೋ ಜಾತ್ರೆ ಮರುಳೋ!

ಉತ್ಸವದ ಅಂಗವಾಗಿ ಅನ್ನದಾನ ನಡೆದಿತ್ತು. ನಾನು ಅನುಭವಿಸಿದ ಹಲವು ಅನ್ನದಾನಗಳಂತೆ ಇಲ್ಲಿ ಪಾಕವೈವಿಧ್ಯದ ವೈಭವ ಇಲ್ಲ. ಆದರೆ ದಾನ ಬಂದ ಬೇಳೆ, ಕಾಳು, ಜಿನಸು, ತರಕಾರಿಗಳನ್ನು ಸರದಿಯ ಮೇಲೆ ಏಕಾಹಾರವಾಗಿ ಪಾಕಗೊಳಿಸುತ್ತ, ಹೊಟ್ಟೆ ತುಂಬುವಷ್ಟು ಕ್ರಮವಾಗಿ ಬಡಿಸುತ್ತಲಿದ್ದರು. (ಅಂದು ಬೆಳಗ್ಗೆ ಸುಮಾರು ಒಂಬತ್ತಕ್ಕೆ ಸುರು ಹಚ್ಚಿದ ಅನ್ನದಾನ ರಾತ್ರಿ ಹನ್ನೊಂದರವರೆಗೂ ನಡೆದಿತ್ತು. ಅನಂತನ ಅಂದಾಜಿನ ಮೇಲೆ ಕನಿಷ್ಠ ಐದು ಸಾವಿರ ಮಂದಿಯಾದರೂ ಎರಡು ಅಥವಾ ಮೂರು ಹೊತ್ತಿನ ಹಸಿವೆ ನೀಗಿಸಿಕೊಂಡಿದ್ದರು) ನಾನು ಹೋಗುವಾಗ ಬಿಸಿಬೇಳೆಭಾತ್, ಪೊಂಗಲ್, ಚಿತ್ರಾನ್ನಗಳ ಸರದಿ ಮುಗಿದು ಉಪ್ಪಿಟ್ಟಿನ ಬಕೆಟ್ಟುಗಳು ಚಲಾವಣೆಯಲ್ಲಿದ್ದುವು. ಉದ್ದನ್ನ ಕೊಟ್ಟಿಗೆಯ ಒಂದಂಚಿನ ಎರಡು ಸಾಲು ಕಲ್ಲಕಟ್ಟೆಯಲ್ಲಿ ಸಾರ್ವಜನಿಕರು ಕುಳಿತು, ಕಲ್ಲಚಪ್ಪಡಿ ಮೇಜುಗಳ ಮೇಲೆ, ಚೊಕ್ಕ ಮಂದಾರದೆಲೆಯ ಬಟ್ಟಲಿನಲ್ಲಿ ಪ್ರಸಾದ ಸೇವನೆ ನಡೆಸಿದ್ದರು. ಇನ್ನೊಂದು ಒತ್ತಿನ ಕೊಟ್ಟಿಗೆಯಲ್ಲಿ ಪಾಕಪ್ರವೀಣರು ತಿನಿಸುಗಳ ಸಾಲು ಕಡಿಯದಂತೆ ನೋಡಿಕೊಂಡಿದ್ದರು. ಸ್ವಯಂಸೇವಕರು ಅವಿರತ ಬಟ್ಟಲು ಕೊಡುವ, ಬಡಿಸುವ, ನೀರು ಕುಡಿಸುವ, ಎಲ್ಲ ಎದ್ದ ಮೇಲೆ ಮೇಜು ಶುಚಿ ಮಾಡುವ ಕೈಂಕರ್ಯಬದ್ಧರಾಗಿದ್ದರು. ಜತೆಗೆ ನಡುನಡುವೆ ಗಟ್ಟಿಯಾಗಿ ಘೋಷಿಸುತ್ತಿದ್ದ ಮಂತ್ರ ಸ್ಮರಣೀಯ “ಹೊಟ್ಟೆ ತುಂಬ ತಿನ್ನಿ, ಆದರೆ ಹಾಳು ಮಾಡಬೇಡಿ.”

ರುಕ್ಮಿಣಿ, ಅಕ್ಷರಿಯರು ಬೆಳಗ್ಗಿನ ದೇವಾಲಯ ಭೇಟಿ ಮುಗಿಸಿ ಮನೆಗೆ ಮರಳುವಾಗ ಅಮ್ಮನಿಗೆಂದು ಬಿಸಿಬೇಳೆ ಬಾತ್, ಪೊಂಗಲ್ ಕಟ್ಟಿಸಿ ತಂದಿದ್ದರು. ಅದರ ರುಚಿ ನೋಡಿದಾಗಲೇ ನಾನು “ರಾತ್ರಿಯ ಊಟ ದೇವಳದಲ್ಲೇ” ಎಂದು ನಿಶ್ಚಯಿಸಿದ್ದೆ. ತರಕಾರಿ, ಕಾಳು ಧಾರಾಳ ಸೇರಿಸಿದ ಉಪ್ಪಿಟ್ಟು ಸ್ವಾದಿಷ್ಟವಾಗಿತ್ತು – ಹರಕೆ ಪಾಕವಾಗಿರಲಿಲ್ಲ. ತಿಂದು ಮುಗಿದವರು ಅವರವರ ಎಲೆ ಎತ್ತಿ, ಕೈ ತೊಳೆಯುವ ನಲ್ಲಿ ಪಕ್ಕದ ಗಾಡಿಗೇ ಹಾಕುತ್ತಿದ್ದರು. ಗಾಡಿ ತುಂಬಿದಾಗ ಆಚಿನ ಕೊಳೆಗುಂಡಿಗೆ (ಕಾಂಪೋಸ್ಟ್) ರವಾನಿಸುವುದು, ಒಟ್ಟಾರೆ ಪರಿಸರ ಶುಚಿಯಾಗಿಡುವುದನ್ನಂತೂ ಸ್ವಯಂಸೇವಕರು ಉತ್ಸವದ ಮುಖ್ಯ ಕಲಾಪವೆನ್ನುವಂತೇ ನಡಿಸಿದ್ದರು.

ನಗರದ ರಕ್ಕಸ ತಬ್ಬಿನಲ್ಲಿ ಮೂಢನಂಬಿಕೆಗಳನ್ನೇ ಜನಪದವಾಗಿಯೂ ಸಾಂಸ್ಕೃತಿಕ ಕಲಾಪವಾಗಿಯೂ ಭ್ರಮಿಸಿದ ಸ್ಥಿತಿ ಮೈಸೂರಿನ ಆಸುಪಾಸಿನ ಹಳ್ಳಿಗಳಲ್ಲಿ ಧಾರಾಳ ಕಾಣಬಹುದು. ಆ ಅರಿವಿನೊಡನೆ ಹಳ್ಳಿಗರ ಸ್ತರಕ್ಕಿಳಿದು ಅವರನ್ನು ವಿಚಾರದ ಎತ್ತರಕ್ಕೇರಿಸಲು ಅನಂತನಿಗೆ ದೇವಸ್ಥಾನ ಕೇಂದ್ರಿತವಾದ ಎಲ್ಲ ಚಟುವಟಿಕೆಗಳೂ ಮುಖ್ಯವಾಗಿಯೇ ಕಾಣುತ್ತವೆ.

ಆದರೆ ಎಲ್ಲೂ ತಾನು ಅವರನ್ನು ಉದ್ಧರಿಸುವ ಉತ್ತಮನೆಂಬ ಪ್ರದರ್ಶನವಿಲ್ಲದೇ ಕ್ಷೇತ್ರದ ಕಲಾಪಗಳನ್ನು ನಡೆಸುವುದು ಅನಂತನ ಕ್ರಮ. ಇದರಲ್ಲಿ ವೈಯಕ್ತಿಕವಾಗಿ ಆತನಿಗೆ ಯಾವ ಲಾಭಗಳ ಲಕ್ಷ್ಯವೂ ಇಲ್ಲ. ವಾಸ್ತವದಲ್ಲಿ ಅಪರಿಮಿತ ಶ್ರಮ ಮತ್ತು ಕೈಯಿಂದ ಕಳೆದುಕೊಳ್ಳುವ ಹಣವೇ ಹೆಚ್ಚು. ಈ ಘನಕಾರ್ಯಕ್ಕೆ ಸ್ಥಳೀಯವಾದ ಎಲ್ಲಾ ಹಬ್ಬಗಳೂ ಜನಪದ ಆಚರಣೆಗಳೂ ಮನರಂಜನೆಗಳೂ ಅವನಿಗೆ ಸಲಕರಣೆಗಳೇ ಆಗುತ್ತಿದ್ದುವು. ಮಹಾಲಿಂಗೇಶ್ವರನ ಸಾನ್ನಿಧ್ಯದ ಹತ್ತೆಂಟು ಬಗೆಯ ವೈಯಕ್ತಿಕ ಪೂಜೆಗಳು, ನಾಮಕರಣ, ಉಪನಯನ, ನಿಶ್ಚಿತಾರ್ಥ, ಮದುವೆ, ಸಂತೆ, ಕುಸ್ತಿ, ಇಂಗ್ಲಿಷ್ ಪಾಠ, ಭಜನೆ ಕೂಟ, ಕೊಂತಿ ಪೂಜೆ, ಯುಗಾದಿ, ಚೌತಿ ಇತ್ಯಾದಿ ಮುಗಿಯದ ಸರಣಿಯಲ್ಲಿ ಶಿವರಾತ್ರಿ ನಿರ್ವಿವಾದವಾಗಿ ಶಿಖರ. ಅದರಲ್ಲೂ ರಾತ್ರಿಯಿಡೀ ನಡೆಯುವ ನಾಟಕ ಸುತ್ತಣ ಹತ್ತು ಗ್ರಾಮಗಳನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸುವ ಮಕುಟ.

ಶ್ರೀ ಮಹಾಲಿಂಗೇಶ್ವರ ದೇವಳದ ಶಿವರಾತ್ರಿ ನಾಟಕವೆಂದದ್ದೇ ಗುಬ್ಬಿ, ಹಿರಣ್ಣಯ್ಯರನ್ನು ನೆನೆಯದಿರಿ, ರಂಗಾಯಣ ನೀನಾಸಂಗಳನ್ನು ಕನಸದಿರಿ – ಇದು ಅಪ್ಪಟ ಗ್ರಾಮೀಣ ಛಾಪಿನ ಒಂದು ರಂಗಕ್ರಿಯೆ. ವರ್ಷಕ್ಕೊಮ್ಮೆ ಒಂದು ಬಳಗಕ್ಕಷ್ಟೇ ಒದಗುವ ಈ ಅವಕಾಶಕ್ಕೆ ಸುತ್ತಣ ಹತ್ತು ಹಳ್ಳಿಗಳ ಹೈಕಳು ನಾಮುಂದು ತಾಮುಂದೆಂದು ಹೋರುತ್ತಾರೆ. ಹಾಗೆ ಕಳೆದ ವರ್ಷವೇ ನಿಗದಿಯಾದಂತೆ ಈ ವರ್ಷದ ಪಾಳಿ ಹುಯ್ಲಾಳು ಹುಂಡಿಯವರದ್ದು, ಕಥಾನಕ ಶ್ರೀ ಶನೀಶ್ವರ ಪ್ರಭಾವ ಅಥವಾ ನಳದಮಯಂತಿ.

ದೇವಾಲಯದ ಚಟುವಟಿಕೆಗಳಿಗಾಗಿಯೇ ಎದುರಿನ ಒಂದು ಹೊಲ ಬಹಳ ಹಿಂದೆಯೇ ದಾನವಾಗಿ ಬಂದಿತ್ತು. ಅದರ ಹಿಂದಿನ ಮೂಲೆಯಲ್ಲಿಂದು ಪುಟ್ಟ ಗರಡಿಮನೆ ಕುಳಿತಿದೆ. ಅದಕ್ಕೆ ತಾಗಿದಂತೆ ಬಯಲಿನಂಚಿನಲ್ಲಿರುವ ಮಣ್ಣ ದಿಬ್ಬ ವೇದಿಕೆಗೆ. ಇತ್ತಣ ಅಷ್ಟೂ ಹರಹು ಹಿಂದೊಮ್ಮೆ ವಾರದ ಸಂತೆ ಹೊತ್ತದ್ದಿತ್ತು, ಕುಸ್ತಿಸ್ಪರ್ಧೆಯಂದು ಜಟ್ಟಿಗಳ ಮಟ್ಟಿಯಾಗುವುದೂ ಇತ್ತು; ಸದ್ಯ ಸ್ವಂತ ಚಾಪೆಯೋ ಗೋಣಿಯೋ ಹಾಸಿ ಕೂರುವವರ ಪ್ರೇಕ್ಷಾಂಗಣ. ದಾರಿಯಂಚಿನ ದಿಬ್ಬಕ್ಕೆ ಅರ್ಧಚಂದ್ರಾಕೃತಿಯಲ್ಲಿ ಸೋಪಾನಗಳನ್ನು ಕಟ್ಟಿಸಿದ್ದು ಒಟ್ಟು ವಠಾರವನ್ನು ಗ್ರಾಮೀಣ ಬಯಲುರಂಗ ಎಂದೇ ಧಾರಾಳ ಹೇಳಬಹುದು. ಈ ಮೂಲವ್ಯವಸ್ಥೆಯಲ್ಲಿ ಸಂಜೆಗೆ ಮುನ್ನವೇ ಭವ್ಯ ರಂಗಮಂಚವರಳಿಸಿದವರು – ಶ್ರೀಮಲ್ಲಿಕಾರ್ಜುನ ಡ್ರಾಮಾ ಸೀನ್ ಕಂಪೆನಿ. ಅದುವರೆಗೆ ಸುದೂರದಲ್ಲೆಲ್ಲೋ ಕುಳಿತ ವಿದ್ಯುಜ್ಜನಕ ಗುರುಗುಟ್ಟುತ್ತ, ದೇವಾಲಯದ ಆಸುಪಾಸಿನಲ್ಲಿ ಮಾಲೆಗಟ್ಟಿದ ನೀಲ ಹಸುರು ಮಿನಿ ಬಲ್ಬುಗಳಲ್ಲಿಗಳಲ್ಲಿ ಮಿಣುಕುತ್ತಿತ್ತು. ರಂಗಮಂಚವರಳಿದ್ದೇ ಅಲ್ಲಿಗೆ ಬೆಳಕಿನ ಪ್ರವಾಹ ಹರಿಸಿ, ಆ ಲೋಕ ಝಗಮಗಿಸಿತು. ಹಗಲೆಲ್ಲ ರುದ್ರಪಾಠ, ಗಂಟಾನಾದಗಳು ಸಹಜ ಧ್ವನಿಯಲ್ಲಿ ದೇವಾಲಯದೊಳಗಷ್ಟೇ ಅನುರಣಿಸಿಕೊಂಡಿತ್ತು. ಈಗ ಒಮ್ಮೆಲೇ ಸುತ್ತಣ ಹಳ್ಳಿಗಳೆಲ್ಲ ಜಾಗೃತವಾಗುವಂತೆ ಧ್ವನಿವರ್ಧಕದ ಆಕ್ರಮಣವಾಗಿತ್ತು. ಎಲ್ಲೋ ಗಲ್ಲಿಗಲ್ಲಿಗಳಲ್ಲಾಡುತ್ತಿದ್ದ ಬಾಲಕರ ದಂಡು ಇತ್ತ ದೌಡಾಯಿಸಿತ್ತು. ರಂಗದ ಪರದೆ ಮುಚ್ಚಿದ್ದರೇನು, ಎದುರಿನ ಪ್ರೇಕ್ಷಾಂಗಣದಷ್ಟೂ ಹರಹು ಇವರದೇ ರಾಜ್ಯಭಾರ. ಲಾಗಾ ಹೊಡೆದರು, ಮಣ್ಣಹೆಂಟೆ ಎಡವಿದರು, ದೂಳುಮುಕ್ಕಾ ಹೊರಳಿದರು, ನಾಟಕದ ಅಣಕಾಟ ನಡೆಸಿದರು – ಹುಯ್ಲೋ ಹುಯ್ಲು! ದಾರಿ ಬದಿಯಲ್ಲಿ ಸೀಮೆಣ್ಣೆ ಬುಡ್ಡಿಯಿಟ್ಟು, ಗೋಣಿ ಹರಡಿ ಆಗಲೇ ನಾಲ್ಕೈದು ಜಾತ್ರಾ ಮಳಿಗೆಗಳು ಗಡಿ ನಿರ್ಣಯದ ಗೊಂದಲದಲ್ಲಿದ್ದುವು. ಮೈಕಾಸುರ ತಾರದಲ್ಲಿ ಸೀತಾಸ್ವಯಂವರವೆಂಬ ಪುಣ್ಯ ಕಥಾನಕವನ್ನು `ಗೋಳ್ಕೊಟ್ಟೆ ದಾಸ’ರ ಕಂಚಿನ ಕಂಠದಲ್ಲಿ ಪ್ರಸರಿಸುತ್ತಿತ್ತು. ನಡ ನಡುವೆ ವೇದಿಕೆ ಮೇಲಿನ ಮೈಕುಗಳ ತಪಾಸಣೆಗೆ “ಮೈಕ್ ಚಕ್ಕ್ ಹಲೋ”ಗಳು ಬರತೊಡಗಿದಾಗ ರಸ್ತೆಯಂಚಿನ ಕತ್ತಲ ಮರೆಗಳ ದಿಬ್ಬಗಳ ಮೇಲೆ ಕೆಲವು ಮುದುಕಿಯರೂ ಬೀಡುಬಿಟ್ಟದ್ದು ಪ್ರಕಟವಾಯ್ತು – “ಮಗಾ ನಾಟ್ಕಕ್ಕಿನ್ನೂ ಹೊತ್ತಯ್ತ್ಲಾ, ನಿನ್ ಮೈಕ್ಚಕ್ ಆಮ್ಯಾಗ್ ಮಾಡೀವಂತೆ. ಸೀತಮ್ಮನ್ ಕಥೆ ನಡ್ನಡ್ವೇ ನಿಂದೇನ್ಲಾ – ಅಲೊಚಕ್ಕೂ ಅಲೊಚಕ್ಕೂ…”

ಹೆಚ್ಚಿನ ಹಳ್ಳಿಗರು ತಮ್ಮ ಹೆಣ್ಣುಗಳನ್ನು `ಲೇಡೀಸ್ ಪಾಲ್ಟ್ ಮಾಡಕ್ಕೆ’ ಕರೆಸಿಕೊಳ್ಳದಷ್ಟು ಸಂಪ್ರದಾಯಸ್ಥರೇ ಆಗಿದ್ದಾರೆ. ಆದರೆ ನಗರದ ವೃತ್ತಿಪರ ನಟಿಯರನ್ನು ಸೇರಿಸಿಕೊಳ್ಳುವುದರಲ್ಲಿ ಅಷ್ಟೇ `ಮಾಡ್ರನ್ನೂ’ ಆಗಿದ್ದಾರೆ! ವಾಸ್ತವದಲ್ಲಿ ಹಾಗೆ ಒದಗಿದ ನಟಿಯರನ್ನು ವಿಶೇಷವಾಗಿ ಹೆಸರಿಸಿ ಹೆಚ್ಚುಗಾರಿಕೆಯನ್ನೇ ಸಾಧಿಸುತ್ತಾರೆ! ಸಾಮಾನ್ಯವಾಗಿ ಇವರಾಡುವ ಪೌರಾಣಿಕ ಅಥವಾ ಸಾಮಾಜಿಕ ಪ್ರಸಂಗಗಳ ಪರಿಚಯ ಆ ನಟಿಯರಿಗೆ ಇದ್ದೇ ಇರುತ್ತದೆ. ಆದರೆ ಹಳ್ಳಿಗರನ್ನು ಪಳಗಿಸಲು `ಸಂಗೀತಮೇಸ್ಟ್ರು’ ವರ್ಷದುದ್ದಕ್ಕೆ ತರಬೇತಿ ಇಟ್ಟುಕೊಳ್ಳುತ್ತಾರೆ. ಈ ನಟಿಯರು ಕೊನೆಯ ಒಂದೆರಡು ಅವಧಿಗಳಿಗಷ್ಟೇ ಹಾಜರಾಗಿ, ಪ್ರದರ್ಶನದಲ್ಲಿ ಗಂಡು ಪಾತ್ರಧಾರಿಗಳನ್ನು ಮೀರಿಸಿ ಜನಪ್ರಿಯರಾಗಿಬಿಡುತ್ತಾರೆ. ಹಾಗೇ ಈ ವರ್ಷದ ಪ್ರದರ್ಶನಕ್ಕೆ ಕಳೆದ ಶಿವರಾತ್ರಿಯಂದೇ ವೀಳ್ಯಪಡೆದ ಹುಯ್ಲಾಳು ಹುಂಡಿಯವರು ಖ್ಯಾತ ನಟೀಮಣಿಯರನ್ನು ಸಂಪರ್ಕಿಸಿದ್ದರು. ಮುಖ್ಯವಾಗಿ ದಮಯಂತಿ, ಹೆಚ್ಚೆಂದರೆ ಒಬ್ಬ ಸಖೀ ಇವರಿಗೆ ಬೇಕಿತ್ತು. ಆಗ ಅತ್ತಣಿಂದ “ಅಣ್ಣೋ ಸಿವ್ರಾತ್ರಿ ಸೀಝನ್ ಅಲ್ವಾ” ಎಂದು ಭಾರೀ ಹಣ ಕೇಳಿದ್ದಾರೆ. ಇವರೋ ಬರೇ ಚಪಲಕ್ಕೆ ಕೈಯಿಂದ ದುಡ್ಡು ಹಾಕಿ ಮಾಡುವ ಮಂದಿ. ಅಷ್ಟು ದುಡ್ಡು ಹೊಂದಿಸಲಾಗದೇ ಚಪ್ಪೆ ಮುಖ ಹೊತ್ತು ಬಂದರು. ಮನಸ್ಸಿಲ್ಲದ ಮನಸ್ಸಿನಿಂದ ತಮ್ಮಲ್ಲೇ ಪುರುಷರನ್ನು ಸ್ತ್ರೀಪಾತ್ರಕ್ಕೆ ಸಜ್ಜುಗೊಳಿಸಿಕೊಂಡರು. ಶಿವರಾತ್ರಿ ಇನ್ನೇನು ಬಂತು ಎನ್ನುವಾಗ ಅತ್ತ ನಟೀಮಣಿಯ ನಿರೀಕ್ಷೆ ಸೋತಿತ್ತು; ಗಿರಾಕಿನೇ ಹುಟ್ಟಲಿಲ್ಲ. ಆಕೆ ಹಳ್ಳಿಗರಿಗೆ ದುಂಬಾಲು ಬಿದ್ದು `ಇಳಿಸಿದ ದರ’ಗಳಲ್ಲಿ ಬಂದಿದ್ದಳು; ಪಾಪ, ಅವಳದ್ದು ಹೊಟ್ಟೇಪಾಡು. ನಾಟಕದ ಪೀಠಿಕೆ ಪ್ರಕರಣದಲ್ಲಾದರೂ `ಲೇಡೀಸ್’ ಸೇರಿಸಿ, ತಮ್ಮ ಹೆಚ್ಚುಗಾರಿಕೆ ಮೆರೆಯುವ ಹುಂಬ ಹಂಬಲ ಹಳ್ಳಿಗರದ್ದು! ಅಂದು ಆಕೆ ರಂಗಮಂಚದ ಒತ್ತಿನ ಗರಡಿಮನೆಯೊಳಗೆ “ಬಲ್ಪಾಕ್ಸ್ಕೊಂಡು, ಬಾಗ್ಲಿಕ್ಕೊಂಡು” ಸಜ್ಜಾಗುತ್ತಿದ್ದಳು.

ರಂಗಮಂಚದ ಭಾಗವಾಗಿಯೇ ಹಿತ್ತಿಲಲ್ಲಿ ವಿಸ್ತರಿಸಿದ್ದ ಗುಡಾರ ಗಂಡುಮಕ್ಕಳ ಬಣ್ಣದ ಮನೆ (ಮೇಕಪ್ರೂಂ), ವೇಷಭೂಷಣಗಳ ಕೋಠಿ. ಇದು ಒಮ್ಮೆಗೆ ನಮ್ಮ ಯಕ್ಷಗಾನದ ಚೌಕಿಯನ್ನೇ ನೆನಪಿಗೆ ತರುವಂತಿತ್ತು. ಅದರೊಂದು ಮೂಲೆಯಲ್ಲಿ ಬಣ್ಣದ ಬಂಡುವಾಳ ಹರಡಿ ಬಣ್ಣಗಾರ – ಮೇಕಪ್ ಮ್ಯಾನ್, ಕೂತಿದ್ದ. ಉಳಿದಂತೆ ಗುಡಾರದ ಅಂಚುಗಳಲ್ಲಿದ್ದ (ವೇಷಭೂಷಣ ತಂದ) ಭಾರೀ ಮರದ ಪೆಟಾರಿಗಳ ಮೇಲೆ, ಸಿಕ್ಕ ಒಂದೆರಡು ಕುರ್ಚಿಗಳ ಮೇಲೆ ಹಳೆತಲೆಮಾರಿನ `ನಾಟಕಬ್ರಹ್ಮ’ರು ವಿರಾಜಮಾನರಾಗಿದ್ದರು. ಹೊತ್ತೇರುತ್ತಿದ್ದಂತೆ ಮೈಕಿನಲ್ಲಿ `ಮೈಕ್ಚಕ್’ ಹೋಗಿ ನಾಟಕ ತಂಡದ ಮಣೆಗಾರನ ಕರೆ ಕೇಳಲಿಕ್ಕೆ ಶುರುವಾಗಿತ್ತು “ಉಯ್ಲಾಳುಂಡಿ ನಾಟ್ಕ್ದೋರು ಕೂಡ್ಳೇ ಸ್ಟೇಜ್ ತಾವ್ ಬರ್ಬೋಕೂ. ಎಂಟೂವರೆಗೆ ಕರೆಷ್ಟಾಗಿ ನಾಟ್ಕ ಸುರೂ ಮಾಡ್ಬೋಕೂ.” ತಮಾಷೆ ಎಂದರೆ ಆಗಲೇ ಗಂಟೆ ಎಂಟೂವರೆ ಮೀರಿತ್ತು.

ರಂಗದ ಮೇಲಿನ ನಾಟಕಕ್ಕಿಂತ ದೊಡ್ಡ ನಾಟಕ ಮೂರ್ನಾಲ್ಕು ದಿನ ಮೊದಲೇ ತೊಡಗಿದ್ದು, ನನಗೆ ಅನಂತನಿಂದ ಆಮೇಲೆ ತಿಳಿಯಿತು. ಇಲ್ಲಿನ ಬಹುಮಂದಿ `ಕಲಾವಿದರು’ ಕೂಲಿಕಾರರು ಮತ್ತು ಬಡ ಹಿಡುವಳಿಯ ಕೃಷಿಕರು – ನಿರಕ್ಷರಿಗಳು. ನಾಟಕದ ಸಾಹಿತ್ಯ, ಪುರಾಣ ಜ್ಞಾನವೆಲ್ಲ ನಿತ್ಯ (ಹಾರ್ಮೋನಿಯಂ) ಪೆಟ್ಟಿಗೆ ಹಿಡಿದ ಗುರುವಿನಿಂದ ಕೇಳಿದ್ದು ಮತ್ತೆ ರಂಗದ ಮೇಲೆ ನಾಲಿಗೆಗೆ ದಕ್ಕಿದ್ದು. ವಾಸ್ತವದಲ್ಲಿ ಅವರ ಲೆಕ್ಕಕ್ಕೆ ಅದು ನಾಟಕವೇ ಅಲ್ಲ, ‘ಸನಿ ದೇವ್ರ ಸೇವೆ’. ಶಿವರಾತ್ರಿ ಇನ್ನೇನು ಬಂತು ಎನ್ನುವಾಗ ಓರ್ವ ಮುಖ್ಯ ಪಾತ್ರಧಾರಿಯ (ನಳನ ಮಾವ ಭೀಮಕ ಮಹಾರಾಜನಾಗಬೇಕಾದವ) ಅಣ್ಣ ತೀರಿಹೋದ. ಇನ್ನು ಮೈಲಿಗೇಲಿ ಶನಿಸೇವೆ ಸರಿಯೇ – ಆತನ ತಿಳುವಳಿಕೆಗೆ ಜೀರ್ಣಿಸಿಕೊಳ್ಳಲಾಗದ ಜಿಡುಕು. ಮಹಾಲಿಂಗೇಶ್ವರ ದೇವರ ವಕ್ತಾರ ಅನಂತ (ಹಳ್ಳಿಗರ ಲೆಕ್ಕಕ್ಕೆ ಧರ್ಮಾಧಿಕಾರಿ?), ಅವನ ಭಾವ – ಮಾತಾ ಅಮೃತಾನಂದಮಯಿಯವರ ಶಿಷ್ಯ ಶ್ಯಾಮ ಭಟ್ಟರು ಮತ್ತು ವೇದಪುರಾಣ ಪೌರೋಹಿತ್ಯಗಳಲ್ಲೆಲ್ಲ `ಭಾರೀಕುಳ’ ಎಂದೇ ಹಳ್ಳಿಗರು ಕಂಡು, ಕೇಳಿದ (ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ) ಗಂಗಾಧರ ಭಟ್ಟರೆಲ್ಲ ಮತ್ತಿನ ದಿನಗಳಲ್ಲಿ `ಭೀಮಕ ಮಹಾರಾಜ’ನಿಗೆ ಧೈರ್ಯ ತುಂಬಿದ್ದೇ ತುಂಬಿದ್ದು. ಆದರೂ ಧರ್ಮಯುದ್ಧದ ನಾಂದೀಕ್ಷಣದಲ್ಲೂ ಅರ್ಜುನನನ್ನು ಕಾಡಿದ ದ್ವಂದ್ವ `ಭೀಮಕ’ನನ್ನು ಅಂದು ಸಂಜೆ ಕಾಡಿತ್ತು. ಇವರು ಆತನನ್ನು ದೇವಳದ ಒಳಗೇ ಕೂರಿಸಿ, ವಿಶೇಷಪೂಜೆ ಮಾಡಿಸಿ, ತೀರ್ಥ ಕೊಡಿಸಿ ಬಣ್ಣದ ಮನೆಗೆ ತಂದಿದ್ದರು. ಹಾಗೇ ಉಳಿದ ಪಾತ್ರಧಾರಿಗಳಾದರೋ ಪರೀಕ್ಷೆ ಎದುರಿಸುವ ಬಾಲರಂತೆ ಮರೆಯುವ ಪದ್ಯ, ಮಾತುಗಳನ್ನು ನಾಲಿಗೆಗೆ ತಂದುಕೊಳ್ಳಲು ಕಷ್ಟಪಡುತ್ತ ಮಾಲಿಂಗೇಶ್ವರನ ತೀರ್ಥ ಆರತಿ ಪಡೆದಿದ್ದಾರೆ. ಹೀಗೆ ಬಂದ ಅಪಾರ ಪುಣ್ಯ ಬಲಕ್ಕೆ ಯಥೇಷ್ಟ ಉಪ್ಪಿಟ್ಟಿನ ಬಲವನ್ನೂ ಕೂಡಿಸಿಕೊಂಡು, ಅಪರಾಧಿಗಳಂತೆ, ಒಬ್ಬೊಬ್ಬರೇ ಬಣ್ಣದಮನೆಯಲ್ಲಿ ಪ್ರತ್ಯಕ್ಷವಾಗತೊಡಗಿದರು.

“ಯಾರಪ್ಪಾ ರಾಜಾ ಪಾಲ್ಟು? ಹೂಂ ಬಟ್ಟೆ ಬಿಚ್ಚಾಕೀ. ಏಟೊತ್ತಿಂದಾ ನಾಯಿಲ್ಲೀ…” ಬಣ್ಣಗಾರ ಬಡಬಡಾಯಿಸುತ್ತಿದ್ದ. ಆತನ ವಾಕ್ಯ ಮುಗಿಯುವ ಮುನ್ನ ನಡು ಪ್ರಾಯದ ವ್ಯಕ್ತಿಯೊಬ್ಬರು ಬರೀ ನಿಕ್ಕರಿನಲ್ಲಿ ಆತನೆದುರು ಕುಳಿತಾಗಿತ್ತು. ಎಲ್ಲ ಪಾತ್ರಧಾರಿಗಳೂ ತಂತಮ್ಮ ವೈಯಕ್ತಿಕ ಇನಾಮೋ ಎಂಬಂತೆ ಐವತ್ತೋ ನೂರೋ ನೋಟೊಂದನ್ನು ಬಣ್ಣಗಾರನ ಕೈಗಿಟ್ಟು ವಿನೀತರಾಗಿ ಒಪ್ಪಿಸಿಕೊಳ್ಳುತ್ತಿದ್ದರು. ಈತ ಕರ್ತಾರನ ಗಾಂಭೀರ್ಯದಲ್ಲಿ, ಪಾತ್ರಧಾರಿಯ ರಂಗದಲ್ಲಿ ಕಾಣುವಷ್ಟೂ ಕರಿಚರ್ಮಕ್ಕೆ ಹೊಂಬಣ್ಣದ ಅಡಿಪಾಯ ಹಾಕಿ, ಮೇಲಷ್ಟು ಮಿರುಗು-ಪುಡಿ ಉಜ್ಜಿ, ಕುಸುರಿ ಕೆಲಸಕ್ಕಿಳಿಯುತ್ತಿದ್ದ. ಶಸ್ತ್ರಕ್ರಿಯಾ ಕೊಠಡಿಯಲ್ಲಿ ಚೂರಿ ಕತ್ತರಿಗಳನ್ನು ಜೋಡಿಸಿಟ್ಟ ಶಿಸ್ತಿನಲ್ಲೇ ವಿವಿಧ ಗಾತ್ರದ ಕುಂಚ, ನೀರಲ್ಲದ್ದಿದ ಸ್ಪಂಜುಗಳು, ವಿವಿಧ ಬಣ್ಣಗಳ ಡಬರಿಗಳು ಸಜ್ಜಾಗಿದ್ದುವು. ಹುಬ್ಬು ತಿದ್ದಿ, ಕಪೋಲಕೇಶ ಬರೆದು, ನಾಮ ಹಾಕಿ, ಕಣ್ಣಂಚು ಕೆನ್ನೆ ಮುಂತಾದೆಡೆ ಭಿನ್ನ ಚಿತ್ತಾರಗಳನ್ನು ಬರೆದು ತುಟಿಯಲ್ಲಿ ತೊಂಡೇ ಹಣ್ಣೇ ಕೂರಿಸಿಬಿಡುತ್ತಿದ್ದ. ಪಾತ್ರೋಚಿತವಾದ ಮೀಸೆಯೇ ಬೇಕಾದಲ್ಲಿ ಸೈಕಲ್-ಪಂಚೇರ್ ಗಮ್ ಬಳಿದು, ತನ್ನಲ್ಲಿದ್ದ ಹೊಟ್ಟೆಯುಬ್ಬಿದ ನೋಟ್ ಬುಕ್ಕಿನ ಸಂಗ್ರಹದಿಂದ ಆಯ್ದ ಮೀಸೆಯನ್ನು ಅಂಟಿಸುತ್ತಿದ್ದ. ಪಾಪ, ಆ ವೇಷಧಾರೀ ಹಳ್ಳಿಗ ಪ್ರದರ್ಶನದ ಕೊನೆಯಲ್ಲಿ, ವೇದಿಕೆಯ ಮೇಲೆ ಮೆರೆದ ಧನ್ಯತೆಯಲ್ಲಿ ಮೀಸೆ ಕಳಚಿಕೊಳ್ಳುವ ಹಿಂಸೆ ಮರೆಯಬೇಕಾಗುತ್ತದೋ ಏನೋ!

ಬಣ್ಣದಿಂದೆದ್ದವರಿಗೆ ಆಚೆ ಇಬ್ಬರು ಭರ್ಜರಿ ವೇಷಭೂಷಣ ಹೇರಿ, ಪಾತ್ರೋಚಿತ ಟೋಫನ್ನು, ಕಿರೀಟ ಕೂರಿಸಿ ಸ್ವತಂತ್ರಗೊಳಿಸುತ್ತಿದ್ದರು. ಅಜ್ಜಯ್ಯನೊಬ್ಬ ಸಕಾಲಿಕವಾಗಿ ತನ್ನ ಅನುಭವ ನೆನಪಿಸಿಕೊಂಡು ಉದ್ಗರಿಸಿದ “ಉಸಾರೂ!…” (ಕ್ಷಮಿಸಿ, ನಾನು ಅಜ್ಜಯ್ಯನ ಮಾತಿನ ಚಂದವನ್ನು ಕಟ್ಟಿಕೊಡುವಲ್ಲಿ ಸೋತಿದ್ದೇನೆ.) ಆತ ತಾರುಣ್ಯದಲ್ಲಿ ಒಮ್ಮೆ ಟೋಫನ್ ಇಟ್ಟು ಕೃಷ್ಣನಾಗಿ ರಂಗಕ್ಕೇರಿದ್ದನಂತೆ. ಆಗ ಬಣ್ಣದ ಮನೆಯ ಗೊಂದಲದಲ್ಲಿ ಟೋಫನ್ನಿನೊಳಗೆ ಸೇರಿದ್ದ ಕುರುವಾಯಿಯೊಂದು ಚುರುಕಾಯಿತಂತೆ. ಮತ್ತೆ ಕೃಷ್ಣನ ರಾಸಲೀಲೆ ನೃತ್ಯವನ್ನು ಕುರುವಾಯಿಯೇ ಸಂಯೋಜಿಸಿತಂತೆ.

ರಂಗದ ವಕ್ತಾರ, ಅನಂತನ ಶಿಷ್ಯ – ಪುಟ್ಟಸಿದ್ಧ ನಾಯ್ಕ, ಸಮಯಪಾಲನೆಗಾಗಿ ರಂಗಕಲಾಪಕ್ಕೆ ತೊಡಗಿಯೇ ಬಿಟ್ಟಿದ್ದರು. ರಂಗದ ಮುಂದೆ ಕುರ್ಚಿ ಕೊಟ್ಟು ಹಳ್ಳಿಯ ಹತ್ತು ಹಿರಿಯರನ್ನು ಕೂರಿಸಿಯಾಗಿತ್ತು. ಅನಂತ ಶಿಷ್ಯವರ್ಗದ ಓರ್ವ ತರುಣ – ಕೆಮ್ಮನಹಳ್ಳಿಯ ಗ್ರಾಮಪಂಚಾಯತ್ ಸದಸ್ಯ ಮತ್ತು ಶಾಲೆಯೊಂದರ ಯಜಮಾನ, ಭಾರೀ ಉತ್ಸಾಹದಿಂದ ಸ್ವಾಗತಕ್ಕಿಳಿದಿದ್ದರು. ಒಬ್ಬೊಬ್ಬರನ್ನೇ ಹೆಸರಿಸಿ, ಅವರ ಸ್ಥಾನ ಗೌರವವನ್ನು ಒಂದೇ ಶಬ್ದದಲ್ಲಿ ಗುರುತಿಸಿ, “ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಸ್ವಾಗತ ಬಯಸುತ್ತೇನೆ” ಹೇಳುತ್ತಲೇ ಇದ್ದರು. ಅನುಪಲ್ಲವಿಯಾಗಿ “….ಅವರಿಗೆ…… ಇವರಿಂದ ಮಾಲಾರ್ಪಣೆ” ಹಿಂಬಾಲಿಸುತ್ತಿತ್ತು. (ಅತಿ-ನಾಗರಿಕ ಸಭಾ ನಿರ್ವಾಹಕರಂತೆ ಅಸಂಬದ್ಧ ಶಬ್ದ ಜೋಡಿಸಿ, ಸಮಯ ಕೊಲ್ಲುವ ಸಿದ್ಧಿ ಇನ್ನೂ ಈ ಪುಣ್ಯಾತ್ಮನಿಗಿಲ್ಲ!) ಸ್ವಾಗತಕಾರ ಒಮ್ಮೊಮ್ಮೆ ಉತ್ಸಾಹದಲೆಯಲ್ಲಿ ಕೊಚ್ಚಿ ಹೋಗಿ, “ಗ್ರಾಮ ಪಂಚಾಯತ್ ವತಿಯಿಂದ” ಅಥವಾ “ಶಾಲಾಡಳಿತ ಮಂಡಳಿಯ ವತಿಯಿಂದ” ಸ್ವಾಗತ ಕೋರಿದ್ದೂ ಉಂಟು. ಮರುಕ್ಷಣಕ್ಕೆ ತಪ್ಪಿನರಿವಾಗಿ, ದೊಡ್ಡದಾಗಿ ಹಲ್ಲು ಕಿಸಿದು, ಅಷ್ಟೇ ಮುಗ್ಧವಾಗಿ ತಿದ್ದಿಕೊಳ್ಳುತ್ತಿದ್ದ ಪರಿ, ನನಗಂತೂ ನಾಟಕ ಶುರುವಾದಂತೆಯೇ ಭಾಸವಾಯ್ತು!

ಮೂರೇ ಮೂರು ಜನರಿಗೆ ಪೇಟಾ ತೊಡಿಸಿ, ಫಲಪುಷ್ಪ ಕೊಟ್ಟು ವಿಶೇಷ ಸಮ್ಮಾನವನ್ನೂ ನಡೆಸಿದರು. ಇವೆಲ್ಲದರ ಕೊನೆಯಲ್ಲಿ ನಾನು ಕಂಡ ಒಂದು ದೊಡ್ಡ ಗುಣಾತ್ಮಕ ಅಂಶ – ವೇದಿಕೆಯ ಮೇಲೆ ಆಸೀನರಾಗಿದ್ದ ಯಾರಿಗೂ “…ಅವರೇ, …ಅವರೇ…” ತಿಂದು ಕೊನೆಗೆ ಪ್ರೇಕ್ಷಕರ ತಲೆಯನ್ನೂ ತಿನ್ನುವ ಭಾಷಣದ ಚಪಲ ಇರಲೇ ಇಲ್ಲ. ರಂಗ ತುಂಬಿದಷ್ಟೇ ಚುರುಕಾಗಿ ಖಾಲಿಯಾಗಿತ್ತು.

ರಂಗದ ಬಲಮೂಲೆಯಲ್ಲಿ ಶನಿದೇವರ ಸ್ಥಾಪನೆ ಹಳ್ಳಿಗರಿಗೆ ಬಹುಮುಖ್ಯ ಧಾರ್ಮಿಕ ವಿಧಿ; ವಿಜೃಂಭಣೆಯಲ್ಲಿ ನಡೆಯಿತು. ರಂಗದ ಮುಂದಿನ ತಗ್ಗಿನಲ್ಲಿ ಕುಳಿತಿದ್ದ ಮೇಳ (ಹಾರ್ಮೋನಿಯಂ, ತಬ್ಲಾ, ಪಿಟೀಲು, ಗಿಲಕಿಯಲ್ಲದೆ ಹೊಸ ತಲೆಮಾರಿನ ಸಿಂಥೆಸೈಸರೂ ಸೇರಿ) ಭರ್ಜರಿ ಮ್ಯೂಸಿಕ್ ಹೊಡೆಯತೊಡಗಿತು. ನಾನು ಮತ್ತೆ ಬಣ್ಣದ ಮನೆಗಿಣುಕಿದೆ.

“ಅಣ್ಣೋ ನಂದು ಸೂತ್ರಧಾರನ ಪಾಲ್ಟು. ಮೊದಲು ಓಗ್ಬೋಕು” ಒಬ್ಬ ಅವಸರಿಸುತ್ತಿದ್ದ. ಬಣ್ಣಗಾರ ಸ್ಥಿತಿಜಾಗೃತಿಯಿದ್ದವ. ನಾಟಕ ತಡವಾದರೂ ಸರಿ, ಮೊದಲ ದೃಶ್ಯದ ಪಾತ್ರಧಾರಿಗಳೆಲ್ಲ ಸಜ್ಜುಗೊಳ್ಳದೆ ಸೂತ್ರಧಾರನನ್ನು ಬಿಡುವುದಿಲ್ಲ ಎಂಬ ಪ್ರಾಯೋಗಿಕ ಪಟ್ಟು ಹಾಕಿ ಆತನನ್ನು ಮಾತಿನಲ್ಲೇ ಹಿಂತಳ್ಳುತ್ತಿದ್ದ. `ನಳ ಮಹಾರಾಜ’ ವಾರೆಯಲ್ಲಿ ನೇತುಬಿದ್ದಿದ್ದ ಕನ್ನಡಿಯಲ್ಲಿ ತನ್ನಂದ ಕಂಡು ಮೋಹಪರವಶನಾಗಿದ್ದ. (ಇನ್ನು ದಮಯಂತಿ ಸೋತದ್ದು ತಪ್ಪಲ್ಲ ಬಿಡಿ!) ಬಣ್ಣಗಾರ ಮಂತ್ರಿಯ `ಮೀಸೆ’ಯ ಹದಮೀರಿದ ಕೂದಲಿಗೆ ಕತ್ತರಿ, ಕಪೋಲಕೇಶದ ಬಣ್ಣ ಮಾಸಿದ್ದಕ್ಕೆ ಕೊನೆಯ ಸ್ಪರ್ಷ ಕೊಡುತ್ತಿದ್ದ. ಹಿಂದೊಬ್ಬ ನರಪೇತಲ ಚಡ್ಡಿ ಬನಿಯನ್ನಿನಲ್ಲಿ ಏನೋ ಪೋಸ್ ಕೊಡುತ್ತಿದ್ದ. ಅವನ ಹಿಂದೆ ಮೂರು ಜೊತೆ ಬೆರಗುಗಂಗಳ ಹುಡುಗರು. ನಾನು ಕೇಳಿದೆ “ಯಾವ ಪಾತ್ರ?”

ನರಪೇತಲ ಗತ್ತಿನಲ್ಲಿ “ಸೇನಾಪತಿ” ಎಂದಿದ್ದ. ಆತನ ಗತ್ತಿನ ಚಂದ, ವೇಷದ ಅಂದ ಎರಡನ್ನೂ ಇಲ್ಲೇ ಚಿತ್ರಗಳಲ್ಲಿ ನೀವೇ ನೋಡಿ ಆನಂದಿಸಿ. ಬೆರಗುಗಂಗಳ ಪೋರರು “ವನಚರರು” ಎಂದದ್ದಂತೂ ನನಗೆ “ವಾನರರು” ಎಂದದ್ದಕ್ಕೇನೂ ಭಿನ್ನವಾಗಿ ಕೇಳಲಿಲ್ಲ! ಅಂತೂ ಇಂತೂ ಹತ್ತು ಗಂಟೆಯ ಸುಮಾರಿಗೆ ಸೂತ್ರಧಾರನ ಪ್ರವೇಶದೊಡನೆ ನಿಜ ನಾಟಕ ತೊಡಗಿತು ಎನ್ನಬಹುದು. ಈತ ಪ್ರಾರ್ಥನೆಯ ಪದ ಹೊಡೆದು, ಪೀಠಿಕೆಯ ಒಂದೆರಡು ಮಾತು ಬಿಡುವವರೆಗೆ ಅಡ್ಡಿಯಿಲ್ಲ ಅನ್ನಿಸಿತು. ಆದರೆ ಮತ್ತೆ ಬಂದ `ನಟೀಮಣಿ’ಯ ಎದುರು ಪೂರ್ಣ ಪೇಲವವಾಗಿಬಿಟ್ಟ. ನಟೀಮಣಿಯ ಬಾಗು, ಬಳಕು, ಸೂತ್ರಧಾರನನ್ನು ಒಳಗೊಳ್ಳುವ ಹೆಜ್ಜೆಗಾರಿಕೆಯೆಲ್ಲ ಮಲ್ಲಕಂಬದೊಡನೆ ನಡೆಸಿದ ಕಸರತ್ತಿನಂತೆ ತೋರಿತು.

ಆಕೆಯಂತೂ ನಿರ್ಭಿಡೆಯಿಂದ ತಾರಶ್ರುತಿಯಲ್ಲಿ ಹಾಡೂ ಒಪ್ಪಿಸಿದ್ದಳು. ಆದರೆ ಎಲ್ಲಾ ಮೈಕುಗಳು ಗರಿಷ್ಠ ಶಕ್ತಿಯಲ್ಲೇ ಕೆಲಸ ಮಾಡುತ್ತಿದ್ದು, ಮೇಳಗಾರರೆಲ್ಲ ಮೈಕ್ ಬಾಯಿಯೊಳಗೇ ಬಿದ್ದಂತಿದ್ದುದರಿಂದ, ಅಡ್ಡಾಡಿ ಒದರಬೇಕಾದ ಪಾತ್ರಧಾರಿಗಳ ಸಾಹಿತ್ಯ ಹೂತು ಹೋಗಿತ್ತು, ರಾಗ ಕಲೆತು ಹೋಗಿತ್ತು; ಫಲಿತಾಂಶ ನನ್ನ ಲೆಕ್ಕಕ್ಕೆ ಬರೀ ಗದ್ದಲ! ಆದರೆ ಕ್ಷಮಿಸಿ, ಪ್ರೇಕ್ಷಾಂಗಣದ ಉದ್ದಗಲಕ್ಕೂ ದಾರಿಯಂಚಿನವರೆಗೂ ಭರ್ತಿ ತುಂಬಿದ್ದ ಜನಮಾತ್ರ ಸಂತೋಷದ ಉತ್ತುಂಗದಲ್ಲಿದ್ದರು. ನಮ್ಮ ಹಳ್ಳಿಯವನೇ ಆದ ಸೂತ್ರಧಾರನ ಅಭಿಮಾನಿಗಳಂತೂ ಆಗಿಂದಾಗ ವೇದಿಕೆಗೆ ನುಗ್ಗಿ, ಆತನಿಗೆ ಹಾರ ಹಾಕುವುದು, ಆತನ ಶಲ್ಯಕ್ಕೆ ನೋಟು ಪಿನ್ನ್ ಮಾಡುವುದೆಲ್ಲ ನಡೆಸಿದ್ದರು. ರಂಗದ ಶನಿಮೂಲೆಯ ನೆಲದಲ್ಲಿ ಸಭೆಗೆ ಕಾಣುವಂತೇ ಒಂದೆರಡು ಮಂದಿ ಅನುಭವೀ ಹಿರಿಯರು ಕುಳಿತಿದ್ದರು. ಅವರು ನಟರ ಕ್ರಿಯೆ, ಮಾತು, ಸಂಗೀತಕ್ಕೆಲ್ಲ ನಿರ್ದಾಕ್ಷಿಣ್ಯವಾಗಿ ಸೂಚನೆಗಳನ್ನು ಕೊಡುತ್ತಲೇ ಇದ್ದರು.

ಮೊದಲು ಬಣ್ಣದ ಮನೆಯಲ್ಲಿ ಕುರ್ಚಿ ಹಾಕಿ ಕುಳಿತಿದ್ದ ಹಿರಿಯ ಕಲಾವಿದರಿಬ್ಬರು ಈಗ ತಮ್ಮ ಗೌರವಕ್ಕೆ ಕುಂದು ಬಾರದಂತೆ ರಂಗದ ಎಡಮೂಲೆಯನ್ನು ಕುರ್ಚಿ ಸಮೇತ ಆಕ್ರಮಿಸಿದ್ದರು. ಅವರು ಅಲ್ಲಿಂದಲೇ ಎಲ್ಲವನ್ನು ಆಸ್ವಾದಿಸುತ್ತ, ಕೆಲವೊಮ್ಮೆ ಶನಿಮೂಲೆಯ ಸೂಚಕರನ್ನು ಅನುಮೋದಿಸುತ್ತ, ಕಲಾವೈಭವಕ್ಕೆ ತಮ್ಮ ಅಳಿಲ ಸೇವೆ ನಡೆಸಿದ್ದರು. ಆಗೀಗ ರಂಗಸೂಚಕರ ಉದ್ವೇಗ ಹೆಚ್ಚುವುದಿತ್ತು – ನಡುರಂಗಕ್ಕೇ ನುಗ್ಗಿ, ಸೂತ್ರಧಾರನನ್ನು ಆಚೀಚೆ ತಳ್ಳಿ, ಮೈಕಿನ ಕತ್ತನ್ನು ಮೇಲೆ ಕೆಳಗೆ ಎಳೆಯುತ್ತಿದ್ದರು. ಇದರಿಂದ ನಾಟಕದೋಟ ಕಡಿದು, ತಡವರಿಸಿ ಸಾಗುವುದೆಲ್ಲವನ್ನೂ ಪ್ರದರ್ಶನದ ಉತ್ತಮಿಕೆಗಾಗಿ ಎಂಬ ಮಹಾ ಔದಾರ್ಯದಲ್ಲಿ ಸಭೆ ಸ್ವೀಕರಿಸಿ ಅನುಭವಿಸುತ್ತಿತ್ತು.

ಸಂಭ್ರಮದ ಹುಯ್ಯಲಿನಲ್ಲಿ ಹುಯ್ಲಾಳು ಹುಂಡಿಯ ಕಲಾವಿದರ ಕಲಾಕುಸುಮದ ಮೊದಲ ದೃಶ್ಯ – ನಳ ಮಹಾರಾಜನ ಆಸ್ಥಾನ ಅನಾವರಣಗೊಳ್ಳುತ್ತಿದ್ದಂತೆ ನನ್ನ ಔದಾರ್ಯದ ಕಟ್ಟೆ ಹರಿಯಿತು. ಅನಂತನೋ ಪ್ರೇಕ್ಷಾಂಗಣದ ನಡುವೆಯೆಲ್ಲೋ ಜಮಖಾನದಲ್ಲಿ ಜಾಗಹಿಡಿದಿದ್ದ. ತಣ್ಣನೆ ರಾತ್ರಿಗೂ ದೂಳಿಗೂ ಶಾಲು ಮುಸುಕು ಹಾಕಿ, ಆಚೀಚಿನವರ ಬೆವರು, ಬೀಡಿ, ಹೆಂಡಗಳ ಸಮ್ಮಿಶ್ರ ವಾಸನೆಗಳನ್ನು `ಡೋಂಟ್ಕೇರ್’ ಮಾಡಿ, ನಾಟಕದ ಮಝಾಕ್ಕಿಂತ ಆಡುವವರ ಸಂಭ್ರಮದ ಪೂರ್ಣ ಪಾಲುದಾರನಂತೆ ಎದ್ದು ಬಿದ್ದು ನಗುತ್ತಲಿದ್ದ. ನಾನು ಮನೆಯತ್ತ ಸರಿದು, ನಿದ್ರೆಗೆ ಶರಣಾದೆ.

ಬೆಳಿಗ್ಗೆ ಎಂಟು ಗಂಟೆಯ ಸುಮಾರಿಗೆ ಶ್ರಮ, ನಿದ್ರೆಗಳ ಭಾರೀ ಹೊರೆಯೊಡನೆ ಎರಡು ಹುಂಡಿ ಮತ್ತು ಆರತಿ ತಟ್ಟೆಗಳ ಹಣದ ಗಂಟನ್ನೂ ಹೊತ್ತು ಅನಂತ ಮತ್ತು ಪ್ರಕಾಶರು ಮನೆಗೆ ಮರಳಿದರು. ಪ್ರಾತರ್ವಿಧಿಗಳನ್ನು ತೀರಿಸಿದ್ದೇ ಅನಂತ ತನ್ನ ಕಛೇರಿಯ ಕರೆಗೋಡಲೇಬೇಕಾಯ್ತು. ಪ್ರಕಾಶನ ಉತ್ಸಾಹ ಇನ್ನೂ ಇಳಿಯದ್ದಕ್ಕೆ ಆತ ನಿದ್ರೆ ನಿರಾಕರಿಸಿದ್ದ. ಹಾಗೆ ಮನೆಯವರೆಲ್ಲ ಸೇರಿ ಸಂಗ್ರಹದ ಹಣದ ಲೆಕ್ಕಕ್ಕಿಳಿದೆವು. ಇಪ್ಪತ್ತು ಪೈಸೆಯ ನಾಣ್ಯದಿಂದ ಸಾವಿರ ರೂಪಾಯಿಯ ನೋಟಿನವರೆಗೆ ಅಟ್ಟಿಯಲ್ಲಿ, ಕಾಗದದ ಕಟ್ಟಿನಲ್ಲಿ ಭಕ್ತರು ಅಹವಾಲುಗಳನ್ನು ತುಂಬಿದ್ದರು. ಎಲ್ಲಿ ಕೂಲಿಯ ಹಣವೋ ಯಾವ ಸಾಲದ ಕಾಸೋ ಎಂಥಾ ಪಾಪಕರ್ಮಕ್ಕೆ ರುಸುಮೋ ಧನ್ಯತೆಗೆ ಇನಾಮೋ ಹೆಚ್ಚಿದ್ದಕ್ಕೆ ಹರಿದದ್ದೋ ಕೊರತೆ ಕಂಡು ತುಂಬಿದ್ದೋ ನಾವಂತೂ ಎಣಿಸಿದ್ದೇ ಎಣಿಸಿದ್ದು. ನಾಣ್ಯ, ನೋಟುಗಳನ್ನೆಲ್ಲ ಮೌಲ್ಯ ಕ್ರಮದಲ್ಲಿ ವಿಂಗಡಿಸಿ, ನಿಗದಿತ ಗೋಪುರ ಕಟ್ಟಿ, ಪೆನ್ನು ಕಾಗದ ಹಿಡಿದು ಮೊತ್ತ ಎಳೆಯುವಾಗ ಎಲ್ಲರ ಸೊಂಟ ಬಿದ್ದುಹೋಗಿತ್ತು, ಊಟದ ವೇಳೆ ಮೀರಿಹೋಗಿತ್ತು! ಬ್ರಹ್ಮಕಲಶೋತ್ಸವ, ಧರ್ಮನೇಮೋತ್ಸವ, ಅಷ್ಟಬಂಧ ನಾಗದರ್ಶನ, ಇನ್ನೆಂಥದ್ದೋ ಉರೂಸು, ಮತ್ತೆಂಥದ್ದೋ ಫೆಃಸ್ಟ್ ಎಂದಿತ್ಯಾದಿ ಕೋಟ್ಯಂತರ ರೂಪಾಯಿಗಳ ವಹಿವಾಟಿನಲ್ಲಿ ಕಳೆದುಹೋದಂತೆಯೇ ಅನ್ನಿಸುವ ಭಾವಕಲಶ ಇಲ್ಲಿನ ಬರಿಯ ಮೂವತ್ತು-ನಲ್ವತ್ತು ಸಾವಿರದ ಸಂಗ್ರಹದಲ್ಲಿ ಮೇರೆವರಿದಿತ್ತು.