ಡಿವಿಕೆ ಮೂರ್ತಿ ಬೀಯೇ ಆನರ್ಸಿನಲ್ಲಿ (ಅರ್ಥಶಾಸ್ತ್ರ) ಸ್ವರ್ಣಪದಕ ಗಳಿಸಿ, ಅಧ್ಯಾಪನ ಮತ್ತು ಸಂಶೋಧನ ಅವಕಾಶಗಳು ಕೈಬೀಸಿ ಕರೆಯುತ್ತಿದ್ದಾಗ, ಸ್ವಇಚ್ಛೆಯಿಂದ ಅವನ್ನೆಲ್ಲ ನಿರಾಕರಿಸಿ, ಸ್ಪಷ್ಟ ವಿಚಾರದೊಡನೆ ಪುಸ್ತಕ ಲೋಕಕ್ಕೆ ಕಾಲಿಟ್ಟವರು. ಇವರು ನನ್ನಲ್ಲೇನು ಕಂಡರೋ ಬಿಟ್ಟರೋ ನನ್ನನ್ನೂ ಪುಸ್ತಕಲೋಕಕ್ಕೆ ತಂದರು. ಪ್ರಥಮ ಎಂಎ ಬೇಸಗೆ ರಜೆಯಲ್ಲಿ (೧೯೭೩) ಊರು ಸುತ್ತ ಹೊರಟವನಿಗೆ ಪುಸ್ತಕದ ಗಂಟಿನ ಅಂಟು ಹಾಕಿ, ಮುಂಬೈಯ ನಂಟು ಬೆಳೆಸಿಕೊಟ್ಟರು. ಹಸಿದವನಿಗೆ ಅನ್ನ ಕೊಡುವುದಿರಲಿ, ಅನ್ನ ಗಳಿಸುವ ಮಾರ್ಗವನ್ನೇ ಕಲಿಸಿಬಿಟ್ಟವರಿವರು. ನನಗೊಬ್ಬನಿಗೇಂತ ಅಲ್ಲ, ತನಗೆ ಸಹಜವಾಗಿ ಸ್ಫುರಿಸಿದ್ದನ್ನು (ಪುಸ್ತಕೋದ್ಯಮ) ಸಂಪರ್ಕಕ್ಕೆ ಬಂದವರ ಒಲವು ಗುರುತಿಸಿ ಹೇಳಿಕೊಟ್ಟರು, ಎಷ್ಟು ಕಾಲಕ್ಕೂ ಬಲವಾಗಿ ಬೆಂಬಲಿಸಿದರು. ಏಕಸ್ವಾಮ್ಯ, ವೃತ್ತಿ ಮಾತ್ಸರ್ಯ, ಅನಾರೋಗ್ಯಕರ ಸ್ಪರ್ಧಾಮನೋಭಾವ, ಅನುದಾರತೆ ಮುಂತಾದ ಶಬ್ದಗಳು ಡಿವಿಕೆ ಶಬ್ದಕೋಶದಲ್ಲೇ ಇರಲಿಲ್ಲ! ಈ ಕೆಲಸ ಇವರು ನನಗಿಂತಲೂ ಮೊದಲು ಹಲವರಿಗೆ ಮಾಡಿದ್ದರು. ನನ್ನನಂತರವೂ ಇನ್ನಷ್ಟು ಮಂದಿಗೆ ಮಾಡುತ್ತಲೇ ಇದ್ದರು. ಆದರೆ ಕನ್ನಡಮ್ಮನ ಸೇನೆಗೆ ತಾನೆಷ್ಟು ಹುರಿಯಾಳುಗಳನ್ನು ಸಜ್ಜುಗೊಳಿಸಿದೆನೆಂದು ಲೆಕ್ಕ, ಜಾಹೀರಾತು ಕೊಟ್ಟು ಪರೋಕ್ಷ ಲಾಭಗಳು ಬಿಡಿ, ಕನಿಷ್ಠ ಉಪಕೃತರ ಕೃತಜ್ಞತಾರ್ಪಣೆಗೂ ಅವಕಾಶ ಕೊಟ್ಟವರಲ್ಲ ಡಿವಿಕೆ!

೧೯೭೫ರ ಅಕ್ಟೋಬರಿನಲ್ಲಿ ನಾನು ಮಂಗಳೂರಿನಲ್ಲಿ ಅತ್ರಿ ಮಳಿಗೆ ತೆರೆಯುವ ಕಾಲಕ್ಕೆ ಅವರನ್ನು ಆಹ್ವಾನಿಸಿದ್ದೆ. “ಅಯ್ಯೋ ಬರೋಣಾ. . .” ತೇಲಿಸಿದ್ದರು. ಅಂದು ನನ್ನ ವ್ಯಾಪಾರಕ್ಕೆ ತೊಡಗಿಸಿದ್ದ ಪುಸ್ತಕ ರಾಶಿಯಲ್ಲಿ ಬಲುದೊಡ್ಡ ಪಾಲು ಡಿವಿಕೆಯವರದ್ದೇ ಮತ್ತು ಅಷ್ಟೂ ಸಾಲದ ಲೆಕ್ಕದ್ದು. ಅವರು ಪಾವತಿಗೆ ಯಾವುದೇ ಸಮಯಮಿತಿಯಿಟ್ಟಿರಲಿಲ್ಲ ಮತ್ತು ನನ್ನಲ್ಲಂತೂ ಎಂದೂ ಕೇಳಿದ್ದೂ ಇಲ್ಲ. ಅಂಗಡಿಯಲ್ಲಿ ‘ನನ್ನ’ ಎಂಬ ಭಾವವೇ ಡಿವಿಕೆಯಾಗಿದ್ದಾಗ ಪ್ರತ್ಯೇಕ ಡಿವಿಕೆ ಬರುವುದ್ಯಾಕೆ, ಬಂದರೂ ನೋಡುವುದೇನು ಅನಿಸಿ ಸುಮ್ಮನಾಗಿಬಿಟ್ಟೆ.

೧೯೮೦ರ ಜೂನ್ ತಿಂಗಳಲ್ಲಿ ಪುತ್ತೂರಿನ ಆಸುಪಾಸಿನಲ್ಲಿ ನನ್ನ ಮದುವೆಯಾಯ್ತು. ಕುಂಭದ್ರೋಣ ಮಳೆಯಲ್ಲೂ ನಮ್ಮ ಮನೆಯವರೇ ಆಗಿ ಡಿವಿಕೆ ದಂಪತಿ ನಮ್ಮ ಜೊತೆಗಿದ್ದರು. (ಅವರು ತಾರುಣ್ಯದಲ್ಲಿ ಪುತ್ತೂರೇನು, ಕರ್ನಾಟಕದ ಮೂಲೆಮೂಲೆಗಳಿಗೂ ಕನ್ನಡ ಪುಸ್ತಕ ಹೊತ್ತುಕೊಂಡು ಹೋಗಿ ಮಾರಿದ್ದರ ಸಣ್ಣ ಪರಿಚಯವೂ ಆಗ ನನಗಾಗಿತ್ತು.) ಆಗ ನಾನು ಅಂಗಡಿ ತೆರೆದು ವರ್ಷ ಐದಾದರೂ ಏಕೈಕ ಕಾರಣಪುರುಷ (ಡಿವಿಕೆ) ಅದನ್ನಿನ್ನೂ ನೋಡಿಲ್ಲವೆನ್ನುವುದನ್ನು ನಾನು ಜ್ಞಾಪಿಸಿದೆ. ಅವರ ಉಲ್ಲಾಸದ ನಗೆ ಮತ್ತದೇ “ಈಗ ನೀವೇ ಅಲ್ಲಿರೋಲ್ವಲ್ಲಾ. ಅಯ್ಯೋ ಬರೋಣಾ. . . ” ಮದುವೆ ನೆಲೆಯಿಂದಲೇ ವಾರಕಾಲ ಅನ್ಯ ಊರು ಸುತ್ತುವ ನಾನಾದರೂ ಡಿವಿಕೆಯವರನ್ನು ಮಂಗಳೂರು ಭೇಟಿಗೆ ಒತ್ತಾಯಿಸುವುದು ಸಾಧ್ಯವಾಗಲಿಲ್ಲ.

೧೯೭೧, ಮೈಸೂರಿನಲ್ಲಿ ನಾನಿನ್ನೂ ಬೀಏ ವಿದ್ಯಾರ್ಥಿ. ವಾರಾಂತ್ಯಗಳಲ್ಲಿ ದಖ್ಖಣ ಪರ್ವತಾರೋಹಣ ಸಂಸ್ಥೆಯ ಸಾಮಾನ್ಯ ಆದರೆ ಸಕ್ರಿಯ ಸದಸ್ಯ. ಹೀಗೇ ಗಳಿಸಿದ ಒಂದು ಅನುಭವವನ್ನು ನಾನು ಪುಟ್ಟ ಪುಸ್ತಕದ ಗಾತ್ರಕ್ಕೇ – ‘ತಾತಾರ್ ಶಿಖರಾರೋಹಣ’ ಎಂದು ಬರೆದುಬಿಟ್ಟಿದ್ದೆ. ನಗರದ ಹಿರಿಯ ಉದ್ಯಮಿ – ಎಫ್.ಕೆ ಇರಾನಿ, ನಮ್ಮ ಸಂಸ್ಥೆಯ ಅಧ್ಯಕ್ಷ ಎರಡು ಕರಾರಿನ ಮೇರೆಗೆ ಆ ಪುಸ್ತಕದ ಮುದ್ರಣ ವೆಚ್ಚ ಭರಿಸಲು ಮುಂದಾದರು. ೧. ವಿಶ್ವವಿದ್ಯಾನಿಲಯದ ಹಿರಿಯರು ಯಾರಾದರೂ ಬರವಣಿಗೆ ಪ್ರಕಟಣಯೋಗ್ಯ ಎನ್ನಬೇಕು. ೨. ವೃತ್ತಿಪರ ಪ್ರಕಾಶಕರೊಬ್ಬರು ಇದರ ಮಾರುಕಟ್ಟೆ ಬೇಡಿಕೆಯ ಬಗ್ಗೆ ಭರವಸೆ ಕೊಡಬೇಕು. ಪ್ರೊ| ಎನ್. ಪ್ರಹ್ಲಾದರಾಯರು, ನನ್ನ ತಂದೆಯೊಡನೆ ಕನ್ನಡ ವಿಶ್ವಕೋಶದ ಹಿರಿಯ ಸಂಪಾದಕ ಬಳಗದವರು, ಕುಶಿಯಿಂದ ಓದಿ ಶಿಫಾರಸು ಪತ್ರ ಕೊಟ್ಟರು. ಕುಟುಂಬ ಮಿತ್ರ ಡಿವಿಕೆ ಮಾರುಕಟ್ಟೆಯ ಭರವಸೆ ಕೊಟ್ಟರು. ಮಾತ್ರವಲ್ಲದೆ ಅದು ಪ್ರಕಟವಾದಾಗ ನೇರ ನಗದು ಕೊಟ್ಟು ಅರೆ ವಾಸಿ (ಸುಮಾರು ಐದುನೂರು ಪ್ರತಿ) ದಾಸ್ತಾನು ಖರೀದಿಸಿಯೇ ಬಿಟ್ಟರು.

ಕಾಲಾನುಕ್ರಮದಲ್ಲಿ (ನಾಲ್ಕು ವರ್ಷ ಕಳೆದು) ನಾನು ಪುಸ್ತಕದಂಗಡಿ ತೆರೆದಾಗ, ನನ್ನ ಅಜ್ಞಾನದಲ್ಲಿ ಅಷ್ಟೂ ತಾತಾರ್ ಶಿಖರಾರೋಹಣವನ್ನು ಡಿವಿಕೆ ಮಾರಿಮುಗಿಸಿರಬೇಕೆಂದು ಅಂದುಕೊಂಡಿದ್ದೆ. ಆದರೂ ನಾನು ಹೀಗೇ ಕೇಳಿದಾಗ ಉಳಿದಿದ್ದ ನೂರಕ್ಕೂ ಮಿಕ್ಕು ಪ್ರತಿಗಳನ್ನು ಅವರು ಪೂರೈಸಿದರು. ಅದರ ಬಿಲ್ಲು, ಲೆಕ್ಕ ಎಂದು ನಾನು ವಿಚಾರಿಸಿದಾಗೆಲ್ಲಾ ಮುಂದೂಡುತ್ತಲೇ ಬಂದು ಯಾವುದೋ ‘ಶುಭದಿನ’ ಅಷ್ಟೂ ತನ್ನ ಕೊಡುಗೆ ಎಂದು ಮುಗಿಸಿಬಿಟ್ಟರು. ನನ್ನ ತಂದೆ ಡಿವಿಕೆಯ ಸಮಪ್ರಾಯದವರು ಮತ್ತು ತೀರಾ ಆಪ್ತ ಸ್ನೇಹಾಚಾರ ಇದ್ದವರು. ಆದರೆ ಇಂಥ ತತ್ತ್ವದ ವಿಚಾರಗಳು ಬಂದಾಗ ಅವರು ಹೇಳುತ್ತಿದ್ದರು, “ಡಿವಿಕೆಯಲ್ಲಿ ಚರ್ಚೆಯಿಲ್ಲ, ಸುಮ್ಮನೆ ಒಪ್ಪಿಕೊಳ್ಳಬೇಕು.”

ವಾಸ್ತವವಾಗಿ ನನಗೆ ಮೊದಲ ಪುಸ್ತಕ ಕೊಡುಗೆ ಬಂದದ್ದೇ ಡಿವಿಕೆಯಿಂದ! ನನ್ನ ಬಾಲ್ಯದಲ್ಲಿ ತಂದೆ (ಜಿ.ಟಿ.ನಾರಾಯಣ ರಾವ್) ಮಡಿಕೇರಿ ಕಾಲೇಜಿನ (ಗಣಿತ ಉಪನ್ಯಾಸಕತನದ ಜೊತೆಗೆ) ಸಹಕಾರಿ ಸಂಘದ ಕಾರ್ಯದರ್ಶಿ ಆಗಿದ್ದರು. ಅವರು ದೊಡ್ಡ ಮೊತ್ತದ ಪುಸ್ತಕ ಖರೀದಿಗೆ ಒಮ್ಮೆ ಮೈಸೂರಿಗೆ ಹೋಗಿ ಬರುವಾಗ ಯಾರೋ ದೊಡ್ಡ ಪ್ರಕಾಶಕ ಅಯಾಚಿತವಾಗಿ, “ನಿಮ್ಮನೆ ಮಕ್ಕಳಿಗಿರಲಿ” ಎಂದು ಒಂದಷ್ಟು ಮಕ್ಕಳ ಕಥೆ ಪುಸ್ತಕಗಳ ಕಟ್ಟು ಉಚಿತವಾಗಿ ಕೊಟ್ಟಿದ್ದರು. ಕಾಲೇಜು ಸಹಕಾರಿ ಸಂಘದಲ್ಲಿ ಸ್ವಂತ ಮಗ (ನಾನಾಗ ಐದಾರು ವರ್ಷದ ಬಾಲಕ) ಅಪರೂಪಕ್ಕೆ ತಿಂದ ಒಂದೊಂದು ಚಾಕಲೇಟಿಗೂ (ಒಂದು ಪೈಸೆ?) ಬಿಲ್ಲು ಬರೆದು, ಕಿಸೆಯಿಂದ ಗಲ್ಲಾಕ್ಕೆ ಹಣ ಸೇರಿಸಿಬಿಡುತ್ತಿದ್ದ ತಂದೆಯನ್ನೂ ಮೊದಲ ಪರಿಚಯದಲ್ಲೇ ಹೀಗೆ ಪುಸ್ತಕ ಉಡುಗೊರೆ ಕೊಟ್ಟು ಸೋಲಿಸಿದ ಮಹಾಪ್ರಕಾಶಕ ಡಿವಿಕೆ.

ಡಿವಿಕೆ ಎಂದೂ ಸಾಮಾನ್ಯ ಮಟ್ಟದಲ್ಲಿ ವ್ಯಾಪಾರದ ಮಾತಾಡುತ್ತಿರಲೇ ಇಲ್ಲ. ತಮ್ಮ ಪ್ರಕಟಣೆಯಿರಲಿ, ಅನ್ಯರದ್ದೇ ಇರಲಿ ಅವುಗಳ ಗುಣದ ಬಗ್ಗೆ ಹೇಳುತ್ತಿದ್ದರು. ಅವುಗಳ ಜನೋಪಯೋಗಿತ್ವ, ವ್ಯಾಪಕ ಪ್ರಸಾರದ ಬಗೆಗೇ ಅವರ ಕಾಳಜಿ ಇರುತ್ತಿತ್ತು. ಅವರ ಮನೆಗೆ (ಅದೇ ಅವರ ಕಛೇರಿಯೂ ದಾಸ್ತಾನು ಕೋಠಿಯೂ ಹೌದು) ಯಾರೇ ಪುಸ್ತಕಪ್ರೇಮಿ ಬಂದರೆ ವೈಯಕ್ತಿಕ ಅಗತ್ಯಕ್ಕೆ ಪುಸ್ತಕ ಕೊಳ್ಳಲಾಗುತ್ತಿರಲಿಲ್ಲ! ಧಾರಾಳ ಮಾತಾಡಿಸಿ, ತಿಂಡಿತೀರ್ಥ ಕೊಟ್ಟು, ಅವರು ವಿಚಾರಿಸಿದ ಒಂದಕ್ಕೆ ನಾಲ್ಕು ಪುಸ್ತಕ ಶಿಫಾರಸು ಮಾಡಿ, ಮತ್ತೆಲ್ಲವನ್ನೂ ಉಚಿತವಾಗಿ ಹೊರಿಸಿ ಕಳಿಸುತ್ತಿದ್ದದ್ದು ಡಿವಿಕೆ ಶೈಲಿ. ಪುಸ್ತಕ ಕೊಂಡೇ ಓದುವ ಛಲದವರು, ರಿಯಾಯ್ತಿಗೆ ಗಿಂಜುವ ಹುನ್ನಾರದವರು ಏಕಕಾಲಕ್ಕೆ ಅಪ್ರತಿಭರಾಗುವಂತೆ ಡಿವಿಕೆ ಉದ್ಗರಿಸುತ್ತಿದ್ದರು “ಅಯ್ಯೋ ಇರತ್ತೆ.”

ನಾನು ಮಂಗಳೂರು ಸಮೀಪ ಒಂದೆಕ್ರೆ ಹಾಳುನೆಲ ಕೊಂಡು, ಪ್ರಾಕೃತಿಕ ಪುನರುತ್ಥಾನಕ್ಕಾಗಿ ‘ಅಭಯಾರಣ್ಯ’ ಎಂದು ಹೆಸರಿಸಿ ಅರ್ಥಪೂರ್ಣ ಪ್ರಾರಂಭೋತ್ಸವ ಹಮ್ಮಿಕೊಂಡಿದ್ದೆ. “ನಾನು ಅಂಗಡಿ ತೆರೆದು ಇಪ್ಪತ್ತೈದು ವರ್ಷವಾದರೂ ನೀವು ಬರಲೇ ಇಲ್ಲ. . .” ಎಂದೆಲ್ಲಾ ಡಿವಿಕೆಗೆ ಬರೆದು, ಮಂಗಳೂರಿಗೆ ಕರೆಸಿಕೊಳ್ಳಲು ಒತ್ತಾಯಿಸಿದೆ. ನನ್ನ ಕೆಲಸವನ್ನೇನೋ ತುಂಬಾ ಮೆಚ್ಚಿಕೊಂಡರು. ಎಂದಿನಂತೆ ಏನೇನೋ ಅನಾನುಕೂಲಗಳನ್ನು ಮುಂದೊಡ್ದಿ ಸದ್ಯ ಬರಲಾರೆ ಎಂದೂ ಸ್ಪಷ್ಟಪಡಿಸಿದರು. ಆದರೆ ಕಾರ್ಯಕ್ರಮಕ್ಕೆ ಎರಡುದಿನ ಮುಂಚಿತವಾಗಿ ದೊಡ್ಡದೊಂದು ಪುಸ್ತಕಗಳ ಕಟ್ಟು ಕಳಿಸಿದರು ಮತ್ತು “ಉಡುಗೊರೆ ಗಿಡುಗರೆ ಏನಲ್ಲ. ಉಪಯೋಗಕ್ಕೆ ಬರುತ್ತೆ. ಅದರ ಬಗ್ಗೆ ಏನೂ ಮಾತಾಡೋದು ಬೇಡ” ಎಂದುಬಿಟ್ಟರು. ಇವರಿಗೆ ‘ಕೊಡುವುದರಲ್ಲಿದ್ದ’ ಸಂತೋಷಕ್ಕೆ ಉದಾಹರಣೆಗಳನ್ನು ನನ್ನ ನೆನಪಿನಿಂದ ಹೆಕ್ಕಿದರೂ ಈ ಬರಹದ ಉದ್ದ ಇಮ್ಮಡಿಸೀತು, ಬಿಡಿ.

ಡಿವಿಕೆ ಪತ್ನಿ ವಿಯೋಗಾನಂತರ ಕೆಲವು ಕಾಲ ಏಕಾಂಗಿಯಾಗಿ ಪ್ರಕಾಶನದ ವ್ಯವಹಾರದೊಡನೆ ಗೃಹಕೃತ್ಯವನ್ನೂ ನಡೆಸಿದ್ದರು. ಮೊದಲೇ ಅವರು ಇಷ್ಟದಿಂದ ಒಳ್ಳೆಯ ಪಾಕಶಾಸ್ತ್ರಿಯಂತೆ. ಈಗ ಅವಶ್ಯಕತೆಯೂ ಸೇರಿ ಪ್ರಯೋಗಗಳು ಧಾರಾಳ ನಡೆಸುತ್ತಿದ್ದರು. ಕೆಲವೊಮ್ಮೆ ಯಾವುದೋ ಉತ್ಕೃಷ್ಟ ಪಾಕವನ್ನು ‘ಹೀಗೇ’ ಪಾತ್ರೆಯಲ್ಲಿ ತುಂಬಿಕೊಂಡು, (ಮೈಸೂರಿನ) ನಮ್ಮನೆಗೆ ಕಾರಿನಲ್ಲಿ ಬ್ಯಾಲೆನ್ಸ್ ಮಾಡಿಕೊಂಡು ತಂದು ಕೊಡುವುದೂ ಕೇಳಿದ್ದೆ. ನಾನು ಮೈಸೂರಿಗೆ ಹೋದಾಗೆಲ್ಲಾ ಡಿವಿಕೆ ನೋಡದೇ ಬಂದದ್ದಿಲ್ಲ. ಹಾಗೇ ಈ ಕಾಲದಲ್ಲೂ ಒಮ್ಮೆ ಹೋಗಿದ್ದೆ, ಇವರ ಅಡಿಗೆ ಮತ್ತದರ ಬಟವಾಡೆ ವಿವರಗಳು ಕಂಡು ಬೆರಗಾಗಿದ್ದೆ. ಪ್ರಕಾಶನದ ಸಹಾಯಕರು, ಮನೆಗೆಲಸದ ಸಹಾಯಕರು, ಅವರಿವರೆನ್ನದೆ ಕೊನೆಗೆ ಎದುರಿನ ರಾಘವೇಂದ್ರ ಸ್ವಾಮಿ ಮಠದ ಗೇಟಿನ ಬಳಿಯ ಭಿಕ್ಷುಕನವರೆಗೆ ಎಲ್ಲರಿಗೂ ಲೆಕ್ಕ ಹಾಕಿಯೇ ಪಾಕದ ವಿವರಗಳು ಮತ್ತು ಬಟವಾಡೆ ನಡೆಯುತ್ತಿತ್ತು. (ತಿಂದು ಉಳಿದದ್ದನ್ನೋ ಹಳಸಿದ್ದನ್ನೋ ‘ದಾನ’ ಮಾಡಿದ ಪುಣ್ಯಾತ್ಮ ಡಿವಿಕೆ ಅಲ್ಲ!)

“ಡಿವಿಕೆ ಪ್ರಕಾಶಕ ಮತ್ತು ಸಗಟು ವಿತರಕ. ನಿಮ್ಮಂತ ಬಿಡಿ ಮಾರಾಟಗಾರರೆಂದರೆ ಅಷ್ಟಷ್ಟು ಅವರ ಪ್ರಕಟಣೆಗಳ ಪ್ರಸಾರಾವಕಾಶ ಹೆಚ್ಚಿದಂತೆಯೇ ಸರಿ. ನಿಮ್ಮಂಥವರನ್ನು ಪ್ರೋತ್ಸಾಹಿಸುವುದರಲ್ಲೇನೂ ವಿಶೇಷವಿಲ್ಲ” ಎನ್ನುವ ಸಂಕುಚಿತ ಮನಸ್ಕರನ್ನು ನಾನು ಕೇಳಿದ್ದೇನೆ. ಆದರೆ ಮೂವತ್ನಾಲ್ಕಕ್ಕೂ ಮಿಕ್ಕು ವರ್ಷಗಳ ನನ್ನನುಭವಕ್ಕೆ ಸಿಕ್ಕ ವಾಸ್ತವ ಬೇರೇ. ಅವರ ಉದಾರಚರಿತವನ್ನು ಸ್ಪಷ್ಟೀಕರಿಸಲು ಎರಡೇ ಎರಡು ಉದಾಹರಣೆ.

೧. ಆಲ್ಬರ್ಟ್ ಐನ್ಸ್‌ಟೈನ್ ಜನ್ಮ ಶತಾಬ್ದಿ ಸಮೀಪಿಸುತ್ತಿದ್ದ ಕಾಲದಲ್ಲಿ ಅವರ ಬಗ್ಗೆ ವಿಸ್ತೃತ ವಿಜ್ಞಾನ-ಜೀವನ ಕಥನ ಬರೆಯಲು ನನ್ನ ತಂದೆಗೆ ಪ್ರೇರಣೆ ಕೊಟ್ಟ ಮುಖ್ಯರಲ್ಲಿ ಡಿವಿಕೆ ಒಬ್ಬರು. ತಂದೆ ಬರೆದದ್ದನ್ನು ನಿಷ್ಠೆಯಿಂದ ಪ್ರಕಟಿಸಿ, ಮಾರುಕಟ್ಟೆಯಲ್ಲಿ ಯಶಸ್ವಿಯಾಗಿಸಿದವರು ಡಿವಿ.ಕೆ. ಅದರ ಪ್ರತಿಗಳು ಮುಗಿದು, ಮರುಮುದ್ರಣದ ಬೇಡಿಕೆ ಹೆಚ್ಚಿದ್ದ ಕಾಲದಲ್ಲಿ ನಾನು ಪ್ರಕಾಶನರಂಗದಲ್ಲೂ ಸಣ್ಣದಾಗಿ ತೊಡಗಿಕೊಂಡಿದ್ದೆ. ಸಹಜವಾಗಿ “ನಾನು ಹಾಕಲೇ” ಎಂದು ಕೇಳುವ ಮುನ್ನವೇ ಡಿವಿಕೆ “ಬೇಡಿಕೆ ಇದೆ. ಮರುಮುದ್ರಣ ನೀವೇ ಮಾಡಿ, ನನಗೂ ಪ್ರತಿಗಳನ್ನು ಕೊಡಿ” ಎಂದಿದ್ದರು. ಡಿವಿಕೆ ಎಂದೂ ಯಾವುದೇ ಲೇಖಕನ ಕೃತಿಸ್ವಾಮ್ಯವನ್ನು ತನ್ನ ಒಂದು ಮುದ್ರಣದಿಂದಾಚೆಗೆ ‘ಕೊಂಡದ್ದು’ ಇಲ್ಲ. (ಆ ಕಾಲದಲ್ಲಿ ಲೇಖಕರ ಮತ್ತು ಒಂದು ಮಿತಿಯಲ್ಲಿ ಪ್ರಕಾಶನರಂಗದ್ದೂ ಬಡತನ ಮಹಮಹಾ ಲೇಖಕರನ್ನೂ ನಾಲ್ಕು ಕಾಸಿಗೆ ಕೃತಿಸ್ವಾಮ್ಯ ಮಾರಿಕೊಳ್ಳುವಂತೆ, ಎಷ್ಟೋ ಬಾರಿ ಅದರ ವ್ಯಾಪ್ತಿಯ ಬಗ್ಗೆ ಅರಿವೇ ಇಲ್ಲದೆ ಕಳೆದುಕೊಳ್ಳುವಂತೆ ಮಾಡಿದ್ದಕ್ಕೆ ಉದಾಹರಣೆಗಳು ಅಸಂಖ್ಯ. ಅದರ ವಿಸ್ತರಣೆ ಇಲ್ಲಿ ಅಪ್ರಸ್ತುತ!)

೨. ಸಗಟು ವಿತರಕನ ನೆಲೆಯಲ್ಲಿ ಡಿವಿಕೆ (ಅನ್ಯ) ನಾಮಕಾವಸ್ಥೆ ಪ್ರಕಾಶಕರಿಂದ ಹೆಚ್ಚುವರಿ ರಿಯಾಯ್ತಿದರದಲ್ಲಿ ಪುಸ್ತಕಗಳನ್ನು ನಗದು ಕೊಟ್ಟು ಖರೀದಿಸುತ್ತಿದ್ದದ್ದು ನ್ಯಾಯವಾಗಿತ್ತು. ಇದಕ್ಕೆ ಮೊದಮೊದಲು ನಾನೂ ನನ್ನ ಪ್ರಕಾಶನದ ಪುಸ್ತಕಗಳನ್ನು ಒಡ್ಡಿಕೊಂಡಿದ್ದೆ. ಆದರೆ ಒಂದು ಹಂತದಲ್ಲಿ ಇತರ ಪುಸ್ತಕ ವ್ಯಾಪಾರಿಗಳೊಡನೆ ಪ್ರಕಾಶಕನಾಗಿ ನನ್ನೆಲ್ಲ ನೇರ ಸಂಪರ್ಕಗಳು ಪ್ರಭಾವ ಕಳೆದುಕೊಳ್ಳುತ್ತಾ ಬರುವುದನ್ನು ಗಮನಿಸಿದೆ. ನೂರೆಂಟು ಇತರ ಪ್ರಕಟಣೆಗಳೊಡನೆ ನಾಲ್ಕೆಂಟು ‘ಅತ್ರಿ’ ಪ್ರಕಟನೆಗಳನ್ನು ಅತ್ರಿಯದೇ ರಿಯಾಯ್ತಿ ದರದಲ್ಲಿ ಡಿವಿಕೆಯಿಂದ ಪಡೆಯುವ ಸೌಕರ್ಯಕ್ಕೆ ವ್ಯಾಪಾರಿಗಳು ಒಲಿದದ್ದರಲ್ಲಿ ತಪ್ಪೇನಿರಲಿಲ್ಲ. ಮತ್ತೆ ಡಿವಿಕೆಯವರ ಸಹಜ ವ್ಯಾಪಾರ ಶೈಲಿಯೇ ಅದಾಗಿದ್ದುದರಿಂದ (ನಾನೂ ಅದರ ಫಲಾನುಭವಿಯೇ) ಟೀಕಿಸುವುದಂತು ಸಾಧ್ಯವೇ ಇರಲಿಲ್ಲ. (ಕುರು ಪಿತಾಮಹ ಭೀಷ್ಮರೆದುರು ಪಾಂಡವ ಸೇನೆ ಒಂಬತ್ತು ದಿನ ಹೋರಾಡಿಯೂ ನಿಸ್ತೇಜವಾಯ್ತಂತೆ. ಆಗ ಶ್ರೀಕೃಷ್ಣ ರಾತೋರಾತ್ರಿ ಮೊಮ್ಮಕ್ಕಳನ್ನು ಅಜ್ಜನ ಕಾಲಿಗೆ ಬೀಳಿಸಿ, ಕೇಳಿದಂತೆ) ನಾನು ಡಿವಿಕೆಗೆ ಪತ್ರ ಬರೆದೆ. ‘ನನ್ನ ಪ್ರಕಟಣೆಗಳ ನಿಮ್ಮ ವಿತರಣಾಜಾಲ ನನ್ನನ್ನು ಪ್ರಕಾಶಕನನ್ನಾಗಿ ಸೋಲಿಸುತ್ತಿದೆ. ಏನು ಮಾಡಲಿ?’ ಅವರು ಕೂಡಲೇ ಸಗಟು ವಿತರಕನಾಗಿ ಪಡೆಯುತ್ತಿದ್ದ ವಿಶೇಷ ರಿಯಾಯ್ತಿಯನ್ನು “ನಿಲ್ಲಿಸಿ” ಎಂದರು. ತೀರಾ ಅನಿವಾರ್ಯವಾದಲ್ಲಿಗೆ ಮಾತ್ರ ನಾನು ಕೊಡುವ ಸಾಮಾನ್ಯ ರಿಯಾಯ್ತಿಯಲ್ಲೇ ನನ್ನ ಪ್ರಕಟಣೆಗಳನ್ನು ಕೊಂಡು ವಿತರಣೆ ನಡೆಸಿದರು. ಉಳಿದಂತೆ ಎಲ್ಲರಿಗೂ ನೇರ ನನ್ನೊಡನೆ ವ್ಯವಹರಿಸುವಂತೆ ನಿರ್ವಂಚನೆಯಿಂದ ಹೇಳಿದರು. ಮತ್ತಿದು ಯಾವ ರೀತಿಯಲ್ಲೂ ನನ್ನ ಕುರಿತ ಅವರ ವ್ಯಾಪಾರೀ ಧೋರಣೆಯಲ್ಲಾಗಲೀ ವೈಯಕ್ತಿಕ ಸಂಬಂಧಗಳಲ್ಲಾಗಲೀ ಬದಲಾವಣೆಯನ್ನು ತರಲಿಲ್ಲ.

ಡಿವಿಕೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ‘ಅತ್ಯುತ್ತಮ ಪ್ರಕಾಶಕ’ ಪ್ರಶಸ್ತಿಯ ಪ್ರಸ್ತಾಪ ಬಂದದ್ದು, ಅವರು ನಿರಾಕರಿಸಿದ್ದು ಸಾಕಷ್ಟು ಪ್ರಚಾರದಲ್ಲಿದೆ. ಸರಕಾರೀ ವ್ಯವಸ್ಥೆಯ ಯಾವುದೇ ಪ್ರಶಸ್ತಿ, ಪುರಸ್ಕಾರ, ಬಟವಾಡೆಗಳ ಹಿಂದೆ ವಶೀಲೀಬಾಜಿಯೋ ಹಂಗಿನ ಕುಣಿಕೆಯೋ ಏನಲ್ಲದಿದ್ದರೂ ಸಾರ್ವಜನಿಕ ಆವಶ್ಯಕತೆಯ ದುರುಪಯೋಗವೋ ಇದ್ದೇ ಇರುತ್ತದೆ. ಹೆಚ್ಚೆಂದರೆ ಮೇಲೆ ಹೇಳಿದ ವಿನಿಯೋಗಗಳು ಆಡಳಿತ ವ್ಯವಸ್ಥೆಯ ಅದಕ್ಷತೆಗೆ ಪರೋಕ್ಷ ಸಾಂತ್ವನಗಳು. ಆದರೆ ಮಂಗಳೂರಿನ ‘ಪ್ರೊ| ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿ’ ಅಂಥಾ ಎಲ್ಲಾ ಕಿಲ್ಬಿಷಗಳಿಂದ ದೂರ. ಆ ಪ್ರಶಸ್ತಿಯ ಹಿಂದಿರುವ ವ್ಯಕ್ತಿಗಳು (ಎಸ್ವೀಪೀ ಶಿಷ್ಯಬಳಗ) ಎಸ್ವೀಪೀ ಪ್ರೀತಿ ಮತ್ತು ಸ್ಮರಣೆಯೊಂದೇ ಲಕ್ಷ್ಯವಾದ್ದರಿಂದ ಸ್ವಂತ ದುಡ್ಡು ಹಾಕಿ ವರ್ಷಕ್ಕೊಂದು ಸಾಹಿತ್ಯ ಸೇವಾನಿರತರನ್ನು ಪ್ರಾಮಾಣಿಕವಾಗಿ ಆರಿಸಿ, ಸಾಂಕೇತಿಕವಾಗಿ ಸಮ್ಮಾನಿಸುತ್ತಾರೆ. ಅದೊಂದು ವರ್ಷ ಡಿವಿಕೆ ಹೆಸರು ಇಲ್ಲಿ ಮೇಲಕ್ಕೆ ಬಂತು. ಪರೋಕ್ಷ ಸೂಚನೆಗಳು ಬಂದಾಗಲೇ ಡಿವಿಕೆ ನಿರಾಕರಿಸಿದರು.

ಎಸ್ವೀಪೀ ಸಮಿತಿಯ ಮಿತ್ರರು ನನ್ನ, ಡಿವಿಕೆಯ ಸಂಬಂಧ ತಿಳಿದಿದ್ದುದರಿಂದ “ನೀವಾದರೂ ಹೇಳಿ” ಎಂದರು. ಆ ನೆಪದಲ್ಲಿ ಡಿವಿಕೆಗೆ ನನ್ನಂಗಡಿಯಾದರೂ ತೋರಿಸಬಹುದಲ್ಲವೇ ಎಂದು ನಾನೂ ಉತ್ತೇಜಿತನಾದೆ. ಇಲ್ಲೊಂದು ಸಣ್ಣ ಉಪಕಥೆ. ಹುಬ್ಬಳ್ಳಿಯ ಸಾಹಿತ್ಯ ಭಂಡಾರದ ಮಿತ್ರ ಸುಬ್ರಹ್ಮಣ್ಯ ತನ್ನ ತಂದೆಯ ವರ್ಷಾವಧಿ ನೆನಪಿಗೆ ಹೀಗೇ ಒಬ್ಬೊಬ್ಬ ಪುಸ್ತಕೋದ್ಯಮಿಯನ್ನು ಗೌರವಿಸುವ ಕೆಲಸ ಸುರು ಮಾಡಿದ್ದರು. ಅವರೂ ಒಮ್ಮೆ ಡಿವಿಕೆಯನ್ನು ಅಪಾರ ಗೌರವದಿಂದ ಆರಿಸಿದರು. ಮತ್ತವರ ಜಾರುಪಟ್ಟುಗಳನ್ನು ಸ್ಪಷ್ಟವಾಗಿ ತಿಳಿದಿದ್ದುದರಿಂದ ಸರಳ ಸಮಾರಂಭವನ್ನೇ ಆಯೋಜಿಸಿದ್ದಲ್ಲದೆ, ಡಿವಿಕೆಯ ಹಳೆಗಾಲದ ಹುಬ್ಬಳ್ಳಿ ಮಿತ್ರನ ಸಮಾಗಮದ ಆಮಿಷವನ್ನೂ ಒಡ್ಡಿ ಕಾರ್ಯ ಸಾಧಿಸಿದ್ದರು. ಎಸ್ವೀಪೀ ಪ್ರಶಸ್ತಿ ಸಂದರ್ಭದಲ್ಲಿ ನಾನು ಪ್ರಶಸ್ತಿ ಪ್ರದಾನದ ಪ್ರಾಮಾಣಿಕತೆ, ಸರಳತೆಯನ್ನೆಲ್ಲ ಖಾತ್ರಿಪಡಿಸುವುದರೊಡನೆ, ನನ್ನ ಕಾರ್ಯಕ್ಷೇತ್ರ ನೋಡುವುದನ್ನು ಆಮಿಷವಾಗಿ ಒಡ್ಡಿದೆ. ಆದರೆ ‘ನಿಷ್ಕಾಮಕರ್ಮ’ ಶಬ್ದಕ್ಕೆ ಗೀತಾಶಾಸ್ತ್ರಿ ಏನೇ ಹೇಳಲಿ, ಡಿವಿಕೆ ಅದರ ಮೂರ್ತರೂಪ. ಅವರಿಗೆ ಹುಬ್ಬಳ್ಳಿಯಲ್ಲಿನ ಸಮಕಾಲೀನ ಮಿತ್ರನ ಮರುಭೇಟಿ ಪ್ರಕರಣವನ್ನು ಇಲ್ಲಿ ಕಿರಿಯನೊಡನೆ (ಮಿತ್ರ, ಅಭಿಮಾನಿ, ಶಿಷ್ಯ ಇತ್ಯಾದಿ ಏನು ಗ್ರಹಿಸಿದ್ದರೋ ನನಗೆ ತಿಳಿದಿಲ್ಲ!) ಸಮೀಕರಿಸಲು ಮನಸ್ಸು ಒಪ್ಪಿರಲಾರದು. ಆ ಮುಜುಗರವನ್ನು ತಪ್ಪಿಸಲೋ ಅಥವಾ ನಿಜ ಅನಾನುಕೂಲದಿಂದಲೋ ಪ್ರಶಸ್ತಿ ಒಪ್ಪಿಕೊಳ್ಳಲಿಲ್ಲ, ಅಂದು ಮಂಗಳೂರಿಗೆ ಬರಲಿಲ್ಲ.

೯-೧೨-೨೦೦೯ರ ಬೆಳಿಗ್ಗೆ ಡಿವಿಕೆಯವರ ದೇಹಾಂತ್ಯವಾಯಿತು. ಅವರು ಇನ್ನೆಂದೂ ಮಂಗಳೂರಿಗೆ ಬರುವುದಿಲ್ಲ.