ಅಧ್ಯಾಯ ನಲ್ವತ್ತೊಂಬತ್ತು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] 
ವಿ-ಧಾರಾವಾಹಿಯ ಐವತ್ತೊಂದನೇ ಕಂತು

ಒಂದು ದಿನ ಬೆಳಗ್ಗೆ ಕೇಂಟರ್ಬರಿಯಿಂದ ನನಗೊಂದು ಪತ್ರ ಬಂತು. ಪತ್ರ ಹೀಗಿತ್ತು –
ಪ್ರಿಯ ಮಹನೀಯರೇ

ನಮ್ಮ ನಿಮ್ಮೊಳಗಣ ಸ್ನೇಹ ಸಂಬಂಧಗಳ ವಿವಿಧ ಸಂದರ್ಭಗಳನ್ನು ನನ್ನ ನೆನಪಿನ ಕನ್ನಡಿಯಲ್ಲಿ ನೋಡಿದಾಗ ತೋರಿಬರುವ ಅನೇಕಾನೇಕ ನೆನವರಿಕೆಗಳು, ಈವರೆಗೆ ಮಾತ್ರವಲ್ಲದೆ, ಇನ್ನು ಮುಂದೂ ಸಹ, ನನ್ನ ಅಲ್ಪ ವಾಕ್ಚಾತುರ್ಯದಲ್ಲಿ ವಿವರಿಸಲಸಾಧ್ಯವಾದ ಅನೇಕಾನೇಕ ಆನಂದಯುತ ಭಾವನೆಗಳಿಗೆ ಪ್ರಚೋದಕವಾಗಿರುವುವು. ಹೀಗಿದ್ದರೂ ಇತ್ತೀಚೆಗೆ ಕೆಲಕಾಲದಿಂದ ನಾನು ಸ್ವಾತಂತ್ರ್ಯರಹಿತನಾಗಿ – ಪಾರತಂತ್ರನೇ ಆಗಿ – ಇರುವುದರಿಂದ ನನಗೆ ದೊರಕುವ ಕಿಂಚಿತ್ ಸಮಯಾವಕಾಶದಲ್ಲಾದರೂ ಅಂತಹ ನೆನವರಿಕೆಗಳನ್ನು ಗ್ರಹಿಸಿ ಆನಂದಿಸುವ ಯೋಗವನ್ನೇ ಕಳೆದುಕೊಂಡಿದ್ದೇನೆ. ಸ್ನೇಹದ ಬಳಸು ಕಡಿಮೆಯಾದ ಹಾಗೆಲ್ಲ ಅಳುಕು ಹೆಚ್ಚಾಗುವುದರಿಂದಲೂ ನೀವು ಸಾಹಿತ್ಯ ರಂಗದಲ್ಲಿ ಕೀರ್ತಿಯ ಔನ್ನತ್ಯವನ್ನು ಪಡೆದಿರುವುದರಿಂದ ನನ್ನಲ್ಲುಂಟಾಗುವ ಸ್ವಾಭಾವಿಕ ಅಂಜಿಕೆಯಿಂದಲು ನನಗೆ ಪರಮ ಪ್ರಿಯವಾದ ಮಿ. ಡೇವಿಡ್ ಕಾಪರ್ಫೀಲ್ಡ್ ಎಂಬ ನಿಮ್ಮ ಅಭಿದಾನದಿಂದ ನಿಮ್ಮನ್ನು ಸೀದಾ ಸಂಬೋಧಿಸಲು ನನ್ನ ಮನಸ್ಸು ಹೆದರುತ್ತಿದೆ. ನನ್ನ ಯೌವನ ಕಾಲದಲ್ಲಿ ಸಹೋದ್ಯೋಗಿಯಾಗಿದ್ದ, ಯಾರ ಹೆಸರನ್ನು ಇಲ್ಲಿ ಪ್ರಸ್ತಾಪಿಸಿದ ಭಾಗ್ಯವು ನನ್ನದಿದೆಯೋ ಆ ಹೆಸರನ್ನು, ನಮ್ಮ ಕುಟುಂಬದ ಘನಚರಿತ್ರೆಯ ಒಂದು ಪ್ರಾಮುಖ್ಯ ಅಂಶವಾಗಿ ಕಾದಿರಿಸುವ ಜವಾಬ್ದಾರಿಯನ್ನು ನನ್ನ ಧರ್ಮಪತ್ನಿಯು ನಿರ್ವಹಿಸುವಳೆಂದರೆ ಇಲ್ಲಿ ಅಪ್ರಸಂಗವಾಗಲಾರದು.

ಮೊದಲೇ ಕೂಡಿಕೊಂಡು ಬಂದಿದ್ದ ನನ್ನ ದುಃಖಗಳ ಜತೆಗೆ ಹೊಸ ಹೊಸ ದುರ್ಘಟನೆಗಳು ಒದಗಿಸಿದ ದುಃಖಗಳೂ ಸೇರಿ ಇಂದು ಆಗಿರುವ ದುಃಖ ಸಾಗರದಲ್ಲಿ ನಾನು ಮುಳುಗಿ, ಬದುಕಿಗಾಗಿ ಈಜಲು ಪ್ರಯತ್ನಿಸುವ ನನ್ನ ಕೈಗಳಿಂದ ತಮ್ಮ ಪ್ರಶಸ್ತಿಗಳನ್ನು ಬರೆದು ಕೊಂಡಾಡುವುದು ಕೇವಲ ಹಾಸ್ಯಾಸ್ಪದ. ಇಂಥ ಶ್ಲಾಘನೀಯ ಕಾರ್ಯವನ್ನು ನನ್ನ ಕರಗಳಿಗಿಂತ ಹೆಚ್ಚು ಶಕ್ತಿ ಮತ್ತೂ ಪರಿಶುದ್ಧತೆಯುಳ್ಳ ಕರಗಳಿಗೆ ಒಪ್ಪಿಸುವೆನು.

ತಮ್ಮ ಅನೇಕಾನೇಕ ವಿಶೇಷಪಟ್ಟ ಕಾರ್ಯಗಳ ನಡುವೆ ಈ ಪತ್ರವನ್ನು ಪೂರ್ತಿ ಓದಲು ತಮಗೆ ಸಮಯವಿರದಿದ್ದರೆ, ಈ ಪತ್ರದ ಮುಖ್ಯೋದ್ದೇಶವನ್ನಾದರೂ ಚುಟುಕಿನಿಂದ ತಮಗೆ ತಿಳಿಸುವೆನು. ಹಣದ ಬಗ್ಗೆ ಈ ಪತ್ರವನ್ನು ಬರೆಯುತ್ತಿರುವುದಲ್ಲವೆಂಬುದನ್ನು ನಾನು ಪ್ರಪ್ರಥಮಮವಾಗಿ ತಮಗೆ ತಿಳಿಸಬೇಕಾಗಿದೆ. ಹಾಗಾದರೆ, ನನ್ನ ಉದ್ದೇಶ ಇನ್ನೇನಿರಬಹುದೆಂದು ತಾವು ಪ್ರಶ್ನಿಸುವುದು ಸ್ವಾಭಾವಿಕವು.

ದುಷ್ಟರನ್ನು ಧ್ವಂಸ ಮಾಡಿ, ಕ್ರೂರಿಗಳನ್ನು ಉರಿಸಿ ನಾಶಪಡಿಸಬಲ್ಲ ಸಾಮರ್ಥ್ಯ ನನಗಿದೆಯಾದರೂ ಆ ಸಾಮರ್ಥ್ಯವನ್ನು ಕುರಿತು ಪ್ರಸ್ತುತದಲ್ಲಿ ಪ್ರಸ್ತಾಪಿಸದೆ – ಸದ್ಯಕ್ಕೆ ನನ್ನ ಆ ಶಕ್ತಿ ಸಾಮರ್ಥ್ಯಗಳನ್ನು ತಡೆ ಹಿಡಿದು – ನನಗೆ ಒದಗಿಸಿರುವ ಕಷ್ಟಗಳನ್ನು ತಮಗೆ ತಿಳಿಸಲಿಚ್ಛಿಸುವೆನು. ನನ್ನ ಸುಂದರ ನಿರೀಕ್ಷಣೆಗಳು ನಾಶವಾಗಿವೆ. ಶಾಂತಿಯು ಕ್ರಾಂತಿಯಾಗಿ ಪರಿಣಮಿಸಿದೆ. ನನ್ನ ಹೃದಯವೇ ಸ್ಥಳ ತಪ್ಪಿ ನಿಂತು ಬಡಿದಾಡ ತೊಡಗಿದೆ. ಇವೆಲ್ಲ ಕಷ್ಟಗಳ ಪರಿಣಾಮವಾಗಿ ನಾನು ಸಮಾಜದ ಒಬ್ಬ ಗಣ್ಯ ವ್ಯಕ್ತಿಯಾಗಿ, ಧೈರ್ಯದಿಂದ ನೆಟ್ಟಗೆ ನಡೆದು, ನಾಲ್ಕು ಜನರೆದುರು ಬರಲಾರೆ. ನನ್ನ ಸರ್ವನಾಶ ನಡೆದಿದೆ. ನನ್ನ ಹುರುಪಿನ ಹೂ ಬಾಡಿ ಮುದುಡಿದೆ. ಆಶಾಪಾತ್ರದಲ್ಲಿ ವಿಷ ತುಂಬಿದೆ. ಸತ್ಯಸಿಂಹನು ಕುತಂತ್ರಿಗಳ ಜಾಲದಲ್ಲಿ ಸಿಕ್ಕಿಬಿದ್ದು ಕುರಿಯಾಗಿ ಮೃತಿಗೈವನು. ಏನೇ ಬರುವುದಿದ್ದರೂ ಆದಷ್ಟು ಬೇಗನೆ ಬರಲಿ! ನನ್ನ ಅಪ್ರಸಂಗಗಳಿಂದ ತಮ್ಮ ಸಮಯವನ್ನು ಹಾಳು ಮಾಡಲಾರೆ. ಆದರೂ ಸ್ವಲ್ಪ, ದಯಮಾಡಿ ಕೇಳಿ.

ನನ್ನ ಮಾನಸಿಕ ಪರಿಸ್ಥಿತಿ ಬಹುವಾಗಿ ಕೆಡತೊಡಗಿದೆ. ಸ್ತ್ರೀಯಾಗಿ ಮನವೊಲಿಸಿ ಪತ್ನಿಯಾಗಿ ಪ್ರೀತಿಸಿ, ಮಾತೆಯಾಗಿ ಸಂಸಾರವನ್ನು ಸಾಕಿ ಸಲಹಬಲ್ಲ – ತ್ರಿಶಕ್ತಿಯಂತೆ, ನನ್ನ ಪತ್ನಿಯ ಇಂಗಿತಕ್ಕೂ ಎಟುಕದ, ಶಕ್ತಿಗೆ ಮೀರಿದ ನನ್ನ ಭಾರವನ್ನು ತಮ್ಮೊಡನೆ ಹೇಳಿಕೊಂಡು ಹಗುರ ಮಾಡಿಕೊಳ್ಳಲು ಬಯಸುತ್ತೇನೆ. ಅದಕ್ಕಾಗಿ ತಮ್ಮ ಭೇಟಿಯನ್ನು ಯಾಚಿಸುತ್ತೇನೆ. ಹಿಂದೆ ನಾನು ನಾನಾ ವಿಧದ ಸುಖ ಸಂತೋಷಗಳನ್ನು ಅನುಭವಿಸಿದ ಲಂಡನ್ ನಗರದ ಮಹಾ ಸ್ಥಳಗಳಲ್ಲೊಂದಾದ ಕಿಂಗ್ಸ್ ಬೆಂಚ್ ಬಂಧೀಖಾನೆಯ ವಠಾರದಲ್ಲಿ (ದೇವರ ದಯವೊಂದಿದ್ದರೆ) ನಲವತ್ತೆಂಟು ಘಂಟೆ ವಿಶ್ರಮಿಸಲು ನಿಶ್ಚೈಸಿರುತ್ತೇನೆ. ಆ ಜೈಲಿನ ಪೂಜ್ಯ ನೆನವರಿಕೆಗಳನ್ನು ತಮ್ಮಲ್ಲಿ ವಿವರಿಸಿಕೊಳ್ಳುವುದು ಅಗತ್ಯವಿಲ್ಲವಷ್ಟೆ! ಆ ಕಟ್ಟಡದ ದಕ್ಷಿಣದ ಪಾಗಾರ ಗೋಡೆಯ ಹೊರಬದಿ ತಾವು ದಯಮಾಡಿ ನಾಡಿದ್ದು ಸಂಜೆ ಏಳು ಘಂಟೆಗೆ, ತಪ್ಪದೆ, ಸಿಕ್ಕಬೇಕೆಂದು ತಮ್ಮನ್ನು ಕೇಳಿಕೊಳ್ಳುವುದೇ ಈ ಪತ್ರದ ಉದ್ದೇಶವು. ಅನುಕೂಲವಿದ್ದರೆ ಮಿ. ಥಾಮಸ್ ಟ್ರೇಡಲ್ಸ್ ವಕೀಲ ಸಾಹೇಬರನ್ನೂ ಅವರು ಬರುವ ಅನುಗ್ರಹ ಮಾಡಬಹುದಾದರೆ, ತಮ್ಮ ಜತೆಯಲ್ಲಿ ಕರೆದುಕೊಂಡು ಬನ್ನಿ. ಹೀಗೆ ಗೊತ್ತುಮಾಡಿದ ದಿನದಲ್ಲಿ, ಆ ಸ್ಥಳದಲ್ಲಿ, ನಿಮಗೆ ಸಿಕ್ಕುವ,
ಒಂದು ಕಾಲದಲ್ಲಿ ನ್ಯಾಯ-ಧರ್ಮ-ಉನ್ನತಿ-ಉತ್ಸಾಹಗಳ ಭವ್ಯ ಗೋಪುರವಾಗಿ ಮೆರೆದಿದ್ದ,
ಗೋಪುರದ,
ಕುಸಿದ,
ಅವಶೇಷ,
ವಿಲ್ಕಿನ್ಸ್ ಮೈಕಾಬರ್
ಪುನಃ ಸೇರಿಸಿದ್ದು – ಈ ಎಲ್ಲಾ ವಿಷಯವು ನನ್ನ ಪತ್ನಿಯ ತಿಳಿವಳಿಕೆಗೆ ಬಂದಿರುವುದಿಲ್ಲವೆಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡಿರಬೇಕು.
ವಿ.ಮೈ.

ಈ ಪತ್ರವನ್ನು ಓದಿದಷ್ಟು ಆಶ್ಚರ್ಯವಾಯಿತು. ಅದನ್ನು ಓದಿ ಮುಗಿಯುವಷ್ಟರಲ್ಲೇ ಟ್ರೇಡಲ್ಸನು ಬಂದನು. ನನ್ನ ಕೈಯ್ಯಲ್ಲಿದ್ದ ಪತ್ರವನ್ನು ಕಂಡು, ತನ್ನ ಕೈಯ್ಯಲ್ಲೂ ಇದ್ದ ಒಂದು ಪತ್ರವನ್ನು ನನಗೆ ಕೊಟ್ಟನು. ನನಗೆ ಬಂದಿದ್ದ ಪತವನ್ನು ಓದಲೆಂದು ಅವನಿಗೆ ಕೊಟ್ಟು, ಅವನ ಪತ್ರವನ್ನು ನಾನು ಓದ ತೊಡಗಿದೆನು. ಪತ್ರವು ಟ್ರೇಡಲ್ಸನಿಗೆ ಮಿಸೆಸ್ ಎಮ್ಮಾ ಮೈಕಾಬರರು ಬರೆದುದಾಗಿತ್ತು. ಅದು ಹೀಗಿತ್ತು:

“ನನ್ನ ಅತಿ ದುಃಖದ ಸಂಗತಿಯನ್ನು ನನ್ನ ಆಪತ್ಕಾಲದಲ್ಲಿ ರಕ್ಷಕನಾಗಿ ಬಂದಿದ್ದ ಮಿ. ಥಾಮಸ್ ಟ್ರೇಡಲ್ಸರಿಗಲ್ಲದೆ ಮತ್ತೆ ಯಾರಿಗೆ ಬರೆದು ತಿಳಿಸಲಿ? ಅವರು ಬುದ್ಧಿವಂತರೂ ಕರುಣಾಳುಗಳೂ ಆಗಿರುವುದರಿಂದ ಅವರ ಸಹಾಯವನ್ನು ಯಾಚಿಸಿ ಇದನ್ನು ಬರೆಯುತ್ತಿದ್ದೇನೆ. ನಮ್ಮ ಸಂಸಾರದಲ್ಲಿ ಬೆರೆತು, ಮೈಮರೆತು ತಾವೇ ಸಂಸಾರವೆಲ್ಲ ಎಂಬಂತಿರುತ್ತಿದ್ದ ಮಿ. ಮೈಕಾಬರರು ಇಂದು ನಮ್ಮೆಲ್ಲರಿಂದ ಪ್ರತ್ಯೇಕವಾಗಿದ್ದಾರೆ. ನಮ್ಮನ್ನು ಪ್ರೀತಿಸದೇ ತನ್ನಲ್ಲಿ ತಾನೇ ಜಿಗುಪ್ಸೆಗೊಳ್ಳುತ್ತಾ ಮಕ್ಕಳು, ಹೆಂಗುಸರೆನ್ನದೇನೇ ಚೂರಿ ತೋರಿಸಿ ಹೆದರಿಸುತ್ತಾರೆ. ಇವರು ನಾಡಿದ್ದು ಲಂಡನ್ನಿಗೆ ಹೋಗುವುದಾಗಿ ಇವರ ಟ್ರಂಕಿಗೆ ಅಂಟಿಸಿರುವ ಚೀಟಿಯಿಂದ ತಿಳಿದಿದ್ದೇನೆ. ದಯಮಾಡಿ, ಅವರ ದುಃಖದ ಮತ್ತೂ ಈಗಿನ ರೀತಿಯ ಬದಲಾವಣೆಯ ಕಾರಣವನ್ನು ಕಂಡು ಹಿಡಿದು, ಅವರನ್ನೂ ನಮ್ಮ ಸಂಸಾರವನ್ನೂ ರಕ್ಷಿಸಬೇಕು.”

ಈ ಪತ್ರವನ್ನೋದಿ ನಾವು ತುಂಬಾ ಆಲೋಚನೆಗೀಡಾದೆವು. ಈ ಪತ್ರಗಳನ್ನು ನೋಡುವಾಗ ಅವರ ಸಂಸಾರದಲ್ಲಿ ಹೊಸತೊಂದು ಗುಪ್ತ ದುಃಖಪ್ರದೇಶವಾಗಿರಬೇಕೆಂದು ನಮಗೆ ಸ್ಪಷ್ಟವಾಗಿ ತೋರಿತು. ಆದ್ದರಿಂದ ನಾವು ಮಿ. ಮೈಕಾಬರರನ್ನು ಭೇಟಿಮಾಡಿ, ಮಾತಾಡಿ, ನಮ್ಮ ಮನೆಗೆ ಕರೆ ತರುವುದೇ ಒಳ್ಳೆಯದೆಂದು ನಿಶ್ಚೈಸಿದೆವು.

ನಾವು ನಿಶ್ಚೈಸಿಕೊಂಡಿದ್ದ ಪ್ರಕಾರ, ನಿಶ್ಚೈಸಿದ್ದ ದಿನ, ಮತ್ತೂ ಸ್ಥಳದಲ್ಲಿ ಮಿ. ಮೈಕಾಬರರನ್ನು ಭೇಟಿ ಮಾಡಿದೆವು. ನಮ್ಮನ್ನು ಕಂಡು ಅವರು ಸಂತೋಷಪಟ್ಟರು. ಆದರೂ ಅವರಲ್ಲಿ ಪೂರ್ವದ ಸ್ನೇಹ ಸಲಿಗೆಗಳ ಆಡಂಬರವಿರಲಿಲ್ಲ – ಬಹು ಬಗ್ಗಿದವರಂತೆ, ಹೆದರಿಕೊಂಡವರಂತೆ, ಬಹು ಮೌನವಾಗಿರಲು ಪ್ರಯತ್ನಿಸುತ್ತಿದ್ದರು. ಅವರು ಆ ರೀತಿ ಇರಬಾರದೆಂದು ನಾವು ಕೇಳಿಕೊಂಡು, ನಾವೇ ಸಲಿಗೆಯಿಂದ ಮಾತಾಡುತ್ತಾ ಅವರನ್ನು ನಮ್ಮ ಮಟ್ಟದ ಪೂರ್ವದ – ಸ್ನೇಹ, ಸಲಿಗೆಗೆ ತಂದೆವು. ಆ ವರೆಗೆ ನಮಗೆ ಹಸ್ತಲಾಘವವನ್ನೀಯಲು ಹಿಂಜರಿಯುತ್ತಿದ್ದ ಮಿ. ಮೈಕಾಬರರು ನಮಗೆ ಹಸ್ತಲಾಘವವನ್ನಿತ್ತರು. ಅನಂತರ ನಮ್ಮನ್ನು ಕುರಿತು –
“ನಿಮ್ಮ ಆದರವು ನನಗೆ ಕಣ್ಣೀರು ಬರುವಂತೆ ಮಾಡುತ್ತಿದೆ. ಈಗ ಕುಸಿದು ಬಿದ್ದಿರುವುದಾದರೂ ಹಿಂದೊಂದು ಕಾಲದಲ್ಲಿ ಭವ್ಯವಾಗಿ ಶೋಭಿಸುತ್ತಿದ್ದ ದೇವಮಂದಿರದಂತೆ. ಇಂದು ನಾನಿರುವ ಪರಿಸ್ಥಿತಿ ಎಂಥಾದ್ದೇ ಆಗಿದ್ದರೂ ಹಿಂದೊಮ್ಮೆ ತಮ್ಮೆಲ್ಲರಂತೆ ಯೋಗ್ಯನೂ ಧರ್ಮಪರಾಯಣನೂ ನಾನು ಆಗಿದ್ದೆ. ನಿಮ್ಮ ಇಂದಿನ ನನ್ನ ಮೇಲಿನ ಗೌರವ, ಆದರವೆಲ್ಲ ನನ್ನ ಹಿಂದಿನ ಯೋಗ್ಯತೆಗಳ ಕಾರಣವಾಗಿ ಎಂಬುದನ್ನು ನಾನು ಬಲ್ಲೆನು” ಎಂದು ಹೇಳಿದರು. ಹೀಗೆ ಮಾತಾಡುತ್ತಾ ನಾವು ಅಲ್ಲೇ ಸ್ವಲ್ಪ ತಿರುಗಾಡಿದೆವು. ಅನಂತರ ಸಾಂಪ್ರದಾಯಿಕವಾದ ಕುಶಲ ಪ್ರಶ್ನೆಗಳನ್ನು ವಿಶೇಷವಾಗಿ ಕೇಳದೆ ನಾವು ಮೂವರೂ ನಮ್ಮ ಮನೆಗೆ ಬಂದೆವು. ನಮ್ಮ ಮನೆಯಲ್ಲಿ ಹೆಚ್ಚಿನ ವಿಷಯಗಳನ್ನು ಮಾತಾಡಬಹುದೆಂದು ಮಿ.ಮೈಕಾಬರರೇ ಹೇಳಿದ್ದರು.

ಬರುತ್ತಾ ದಾರಿಯಲ್ಲೊಮ್ಮೆ ಉರೆಯ ಹೇಗಿದ್ದಾನೆಂದು ಮಿ. ಮೈಕಾಬರರನ್ನು ವಿಚಾರಿಸಿದೆ. ಉರೆಯನ ಹೆಸರು ಕೇಳಿದ ಕೂಡಲೇ ಅವರು ಉದ್ವಿಗ್ನರಾದರು. ಆದರೂ ಉತ್ತರ ಕೊಟ್ಟರು –
“ನಿಮ್ಮ ಸ್ನೇಹಿತ ಉರೆಯ ಹೇಗಿದ್ದಾನೆಂದು ಕೇಳಿದರೆ – ಆ ಸ್ನೇಹಿತನನ್ನು ಕುರಿತು ವಿಷಾದಪಡತಕ್ಕದ್ದಿದೆ, ಎಂದನ್ನುವೆನು. ಇನ್ನು, ನನ್ನ ಯಜಮಾನ ಉರೆಯನು ಹೇಗಿದ್ದಾನೆಂದು ವಿಚಾರಿಸಿದ್ದಾದರೆ, ಅವನು ದೇಹದಲ್ಲಿ ಹ್ರಷ್ಟಪುಷ್ಟನಾಗಿದ್ದು, ಮುಖದಲ್ಲಿ ನರಿಯಂತೆ ತೋರುತ್ತಾ ಮನಸ್ಸು ಕೃತಿಗಳಲ್ಲಿ ರಾಕ್ಷಸನಾಗಿರುವನೆಂದು ಮಾತ್ರ ಹೇಳಿ, ಅವನ ವಿಷಯದಿಂದ ಬೇರೆ ವಿಷಯಕ್ಕೆ ದಾಟೋಣವೆಂದನ್ನುವೆನು” ಅಂದರು.

ನಮ್ಮ ಮನೆಯಲ್ಲಿ ಮಾತಾಡಿದರೆ ಡೋರಾಳಿಗೆ ತೊಂದರೆಯಾಗಬಹುದೆಂದು ತಿಳಿದು ನಾವು ಅತ್ತೆ ಮನೆಗೆ ಹೋದೆವು. ಅಲ್ಲಿ ಅತ್ತೆಯ ಪರಿಚಯ ಮಾಡಿಕೊಟ್ಟೆ. ಅನಂತರ ಮಿ. ಡಿಕ್ಕರ ಪರಿಚಯ ಮಾಡಿಕೊಟ್ಟೆ. ಅತ್ತೆ ಬಹು ಗಂಭೀರವಾಗಿ ಅವರನ್ನು ಸ್ವಾಗತಿಸಿದಳು. ಮಿ. ಡಿಕ್ಕರು ಮಿ.ಮೈಕಾಬರರನ್ನು ನೋಡಿದ್ದು ಅಂದೇ ಮೊದಲು, ದೀನ ದುಃಖಿತರನ್ನು ಕಂಡರೆ ಮರುಕಗೊಳ್ಳುತ್ತಿದ್ದ ಮಿ. ಡಿಕ್ಕರು ಅವರನ್ನು ಕಂಡೊಡನೆಯೇ ಅವರು ದುಃಖಿತರೆಂದು ನಿಶ್ಚಯ ಮಾಡಿಕೊಂಡರು. ಅಪರಿಚಿತ ಗೃಹಸ್ಥರೊಬ್ಬರು ತನ್ನ ಕುರಿತು ಹೀಗೆ ತೋರಿಸುತ್ತಿದ್ದ ಆದರ, ಅನುಕಂಪವನ್ನು ತಿಳಿದು ಮಿ. ಮೈಕಾಬರರು ಬಹಳ ಸಂತೋಷಪಟ್ಟರು. ಮಿ. ಡಿಕ್ಕರು ಅವರನ್ನು ಎಡೆಬಿಡದೆ ನೋಡುತ್ತಾ ಅವರೇನಾದರೂ ವಿಶೇಷ ಡೌಲಿನಿಂದಲೋ ದುಃಖದಿಂದಲೋ ಮಾತಾಡಿದಾಗ ಆ ಕೂಡಲೇ ಅವರ ಕೈಯ್ಯನ್ನು ಹಿಡಿದು ಕುಲುಕಿ ತನ್ನ ಮೆಚ್ಚುಗೆಯನ್ನು ತೋರಿಸುತ್ತಿದ್ದರು.

ಮಿ. ಮೈಕಾಬರರಂತೂ ಇಂಥ ಒಬ್ಬ ಸನ್ಮಿತ್ರರು ತನಗೆ ದೊರಕಿದ್ದನ್ನು ಹೇಗೆ ಹೇಳಿಕೊಂಡು ಸಂತೋಷಿಸುವುದೆಂದೇ –
“ಈ ಗೃಹಸ್ಥರಂಥ ಸನ್ಮಿತ್ರರನ್ನು ನಾನೆಂದೂ ನೋಡಿರುವುದಿಲ್ಲ. ಅವರ ಪ್ರೀತಿ ಆದರಗಳಿಗಾಗಿ ನಾನು ಅವರಿಗೆ ತುಂಬಾ ಆಭಾರಿಯಾಗಿರುವೆನು” ಎಂದು ಹೇಳಿಕೊಂಡರು.
“ಮಿ. ಡಿಕ್ಕರು ಸಾಧಾರಣದೊಬ್ಬ ಗೃಹಸ್ಥರಲ್ಲ – ಅವರು ಪರಮ ಯೋಗ್ಯರು” ಅಂದಳು ಅತ್ತೆ.
“ಆ ವಿಷಯವನ್ನು ನಾನು ಪ್ರಾರಂಭದಿಂದಲೇ ಕಂಡುಕೊಂಡಿದ್ದೇನೆ – ಅವರ ಸದ್ಗುಣ, ಸದ್ವರ್ತನೆಗಳಿಗೆ ತಕ್ಕದಾಗಿ ನಾನು ನಡೆದುಕೊಳ್ಳಬಲ್ಲೆನೇ ಎಂಬುದು ನನಗೆ ತೋರುವ ಕಷ್ಟ” ಎಂದು ಮಿ. ಮೈಕಾಬರರೆಂದರು.

ಈ ಮಾತನ್ನು ಕೇಳಿ ಮಿ. ಡಿಕ್ಕರು ಮಿ. ಮೈಕಾಬರರ ಕೈ ಹಿಡಿದು ಕುಲುಕುತ್ತಾ ಆ ವಿಧಾನದಿಂದ ಅವರನ್ನು ಉತ್ತಮ ಮಾನಸಿಕ ಸ್ಥಿತಿಗೆ ತರಬಹುದೆಂದು ನಿಶ್ಚೈಸಿಕೊಂಡು,
“ಈಗ ಹೇಗಿದ್ದೀರಿ, ಸರ್?” ಎಂದು ಕೇಳಿದರು.
“ಯಾವುದು ಬಂದರೂ ಎದುರಿಸುವಷ್ಟು, ಏನು ಬಂದರೂ ಸಹಿಸುವಷ್ಟು, ಧೈರ್ಯದ ಸ್ಥಿತಿಗೆ ಈಗ ತಲುಪಿರುವೆನು” ಎಂದು ಅವರು ಸಂತೋಷಿಸುತ್ತಾ ಉತ್ತರವಿತ್ತರು.
“ನೀವು ಹರ್ಷಚಿತ್ತರಾಗಬೇಕು – ಅದಕ್ಕಾಗಿ ಪ್ರಯತ್ನಿಸಿರಿ. ಈ ಸ್ಥಳವೇ ನಿಮ್ಮದು, ಇಲ್ಲಿನ ಜನರೆಲ್ಲ ನಿಮ್ಮವರು ಎಂದು ಮಾಡಿಕೊಂಡು ಶಾಂತರಾಗಿರಿ, ಸರ್” ಎಂದನ್ನುತ್ತಾ ಪುನಃ ಮಿ.ಮೈಕಾಬರರ ಹಸ್ತವನ್ನು ಮಿ.ಡಿಕ್ಕರು ಕುಲುಕಿದರು.

ಇದನ್ನೆಲ್ಲ ಕಂಡು, ಅನುಭವಿಸಿ, ಮಿ. ಮೈಕಾಬರರಿಗಾದ ಆನಂದ ಅಷ್ಟಿಷ್ಟಲ್ಲ. ಅವರು ಒಂದೆಡೆ ಮಹತ್ತಾದ ಆನಂದ, ಇನ್ನೊಂದೆಡೆ ಹಿಂಬಾಲಿಸಿ ಬರುತ್ತಿದ್ದ ದುಃಖ, ಇವುಗಳನ್ನೆಲ್ಲ ತಿಳಿಯುತ್ತಾ ಅವರ ಸ್ವಾಭಾವಿಕವಾದ ಆವೇಶದಿಂದಲೇ ಅಂದರು –
“ಚಿತ್ರ ವಿಚಿತ್ರಗಳನ್ನೊಳಗೊಂಡ ಮನುಷ್ಯ ಜೀವನವೆಂಬುದು ಕೆಲವೊಮ್ಮೆ ಮರುಭೂಮಿಯಾಗಿಯೇ ಕಂಡು ಬರಬಹುದಾದರೂ ಆ ಮರುಭೂಮಿಯಲ್ಲೇ ಸುಂದರ, ಶಾಂತ, ತಂಪನ್ನೀಯುವ ಸ್ಥಳಗಿರುವುದೂ ಇದೆಯಷ್ಟೆ. ಅಂಥ ಸಂದರ್ಭ ಸನ್ನಿವೇಶವನ್ನಿಂದು ನೋಡುತ್ತಿದ್ದೇನೆ. ಅರ್ಥಾತ್ ನನ್ನ ಮಾನಸಿಕ ಮರುಭೂಮಿಯಲ್ಲಿ ಮಿ. ಡಿಕ್ಕರಂಥ ಸಂತೋಷಪ್ರದ ಪ್ರದೇಶವನ್ನು ನಾನೆಂದೂ ನೋಡಿರುವುದಿಲ್ಲ.” ಹೀಗನ್ನುವಾಗ ಅವರು ಆನಂದಬಾಷ್ಪವನ್ನೇ ಸುರಿಸುತ್ತಿದ್ದರು.

ಮಿ. ಮೈಕಾಬರರು ಪಂಚ್ ಪಾನೀಯವನ್ನು ತಯಾರಿಸುವುದರಲ್ಲಿ ಬಹು ನಿಪುಣರಾಗಿದ್ದುದರಿಂದಲೂ ಆ ಕೆಲಸವನ್ನು ಅವರಿಗೆ ವಹಿಸಿದರೆ ಅವರ ಮನಸ್ಸು ಶಾಂತಗೊಳ್ಳುವುದೆಂದೂ ನಮಗೆ ಗೊತ್ತಿದ್ದುದರಿಂದಲೂ ಪಂಚಿಗೆ ಬೇಕಾದ ಸಾಹಿತ್ಯಗಳನ್ನೆಲ್ಲ ಅವರೆದುರು ತಂದಿಟ್ಟು, ಪಂಚನ್ನು ತಯಾರಿಸಬೇಕೆಂದು ನಾವು ಅವರನ್ನು ಕೇಳಿಕೊಂಡೆವು.

ಇಷ್ಟರಲ್ಲೇ ಅತ್ತೆಯೂ ಸಹ ಅವರನ್ನು ಸಮಾಧಾನಗೊಳಿಸಲು-
“ನೀವು ನಮ್ಮ ಅಳಿಯನ ಬಹು ಹಳೇ ಸ್ನೇಹಿತರೆಂದು ಕೇಳಿದ್ದೇನೆ. ನನಗೆ ನಿಮ್ಮ ಪರಿಚಯವು ಈ ಮೊದಲು ಆಗದಿದ್ದುದಕ್ಕೆ ವಿಷಾದಪಡುತ್ತೇನೆ” ಅಂದಳು.

“ಸರಿ, ತಾಯೀ – ನಾನೂ ತಮ್ಮ ವಿಷಯ ಕೇಳಿದ್ದೇನೆ. ತಮ್ಮಂಥವರ ಪರಿಚಯವನ್ನು ಬಹುಶ್ರದ್ಧೆಯಿಂದ ಬಯಸಿದ್ದೇನೆ. ಆದರೆ, ಇಂದು ತಮ್ಮ ಪರಿಚಯವಾಗುವ ಸಂದರ್ಭದಲ್ಲಿ ಮಾತ್ರ ನಾನು ಆ ಮೊದಲಿನವನಾಗಿಲ್ಲ. ನಾನು ಈಗ ತೋರುವಷ್ಟರ ನತದೃಷ್ಟ, ಪಾಪಿ ಹಿಂದೆಂದೂ ಆಗಿರಲಿಲ್ಲ” ಎಂದು ಬಹು ಮರ್ಯಾದೆಯಿಂದ ಉತ್ತರಕೊಟ್ಟರು ಮಿ. ಮೈಕಾಬರರು.
“ನಿಮ್ಮ ಸಂಸಾರ ಸುಖವಾಗಿದೆಯೇ” ಎಂದು ಅತ್ತೆಯು ವಿಚಾರಿಸಿದಳು.
“ಇದ್ದಾರಮ್ಮಾ – ಸುಖವೇ! ದೇಶಭ್ರಷ್ಟ, ಜಾತಿಭ್ರಷ್ಟರಂತಿದ್ದಾರೆ” ಹೀಗನ್ನುತ್ತಾ ಮುಂದಿನ ವಿಷಯವೆಲ್ಲ ನಮಗೆ ಹೇಗೂ ಗೊತ್ತಿರಬೇಕೆಂದು ತಿಳಿದು ನಮ್ಮನ್ನು ನೋಡುತ್ತಾ ಮಾತನ್ನು ಮುಂದರಿಸಿ –
“ನಮ್ಮ ಜೀವನದ ಆಧಾರ ಬಹು ಅಸ್ಥಿರಸ್ಥಿತಿಯಲ್ಲಿದೆ. ನನ್ನನ್ನು ನೌಕರಿಯಲ್ಲಿಟ್ಟುಕೊಂಡಿರುವ ಯಜಮಾನನು * * *” ಎಂದು ಮಾತ್ರ ಹೇಳಿ, ಪಂಚಿನ ಕೆಲಸವನ್ನು ಪ್ರಾರಂಭಿಸಿದರು. ಆದರೆ, ತಾವು ಹಿಡಿದಿರುವ ಕೆಲಸವನ್ನು ಮರೆತು ತಮ್ಮ ಆಲೋಚನೆಗಳಲ್ಲಿ ಉದ್ವಿಗ್ನರಾಗುತ್ತಾ ಅವರು ಪಂಚನ್ನು ತಯಾರಿಸುವ ವಿಧಾನದಲ್ಲಿ ತಪ್ಪಿ ಬೀಳತೊಡಗಿದರು. ಅವರ ಕೈಯು ನಡುಗತೊಡಗಿತು. ಪಂಚಿಗೆ ಬೇಕಾದ ಸಾಮಾನುಗಳನ್ನು ಮಿಶ್ರ ಮಾಡುವುದರಲ್ಲಿ ಹದ ತಪ್ಪಿದರು. ಹೀಗೆ ತಪ್ಪುತ್ತಿರುವುದನ್ನು ಅವರೇ ತಿಳಿದರು. ಅವರ ದುಃಖವೂ ಕೋಪವೂ ಏರುತಿದ್ದುವೆಂದು ನಮಗೆ ತಿಳಿಯಿತು. “ಮನಸ್ಸು ನೆಮ್ಮದಿಯಿಲ್ಲದವನಿಗಲ್ಲ ಈ ಕೆಲಸ” ಎಂದಂದುಕೊಂಡು ಹಠಾತ್ತಾಗಿ ಎದ್ದು ನಿಂತರು.

“ನೀವು ಸ್ನೇಹಿತರ ಮಧ್ಯದಲ್ಲಿದ್ದೀರಲ್ಲವೇ ಮಿ. ಮೈಕಾಬರ್? ದುಃಖಪಡಬೇಡಿ, ಸಮಾಧಾನ ತೆಗೆದುಕೊಳ್ಳಿ” ಎಂದು ನಾನಂದೆ. ಆದರೆ ಅವರಿಗೆ ದುಃಖದಿಂದಲೂ ಸಿಟ್ಟಿನಿಂದಲೂ ಪ್ರಜ್ಞೆಯೇ ಇರಲಿಲ್ಲ. ಆದರೂ ತಮ್ಮ ಸ್ವರವನ್ನೇ ತಾವು ಕೇಳಿ ತನ್ನ ಇರುವಿಕೆಗಲ್ಲಿ ನೆನಪಿನಲ್ಲಿ ಸ್ಥಿರಪಡಿಸಲೋ ಎಂಬಂತೆ, ದೊಡ್ಡ ಸ್ವರದಿಂದ ಮಾತಾಡತೊಡಗಿದರು.
“ಸರಿ, ನಾನು ಸ್ನೇಹಿತರ ಮಧ್ಯದಲ್ಲಿರುವುದರಿಂದಲೇ ನನ್ನ ಮನಸ್ಸು ಮೃದುವಾಗಿ ಉಳಿದಿದೆ. ಕಠೋರತೆಗೆ ಏರುವುದರ ಬದಲು ವ್ಯಾಕುಲಕ್ಕೆ ಪರಿವರ್ತನೆ ಹೊಂದಿದೆ. ನನಗಾದದ್ದೇನು? ಭ್ರಮೆಯೇ? ಅಲ್ಲ! – ಹಾಗಾದರೆ, ಮತ್ತೇನು? ನನ್ನನ್ನೇ ನಾನು ತಿಳಿದು ಹೀಗಾಗಿದ್ದೇನೆ. ನಾನು ಪಾಪಿ! ಅನ್ಯಾಯ ಕಾರ್ಯಗಳ ಮಹಾ ಪಾಪದಲ್ಲಿ ಭಾಗಿಯಾಗಿದ್ದೇನೆ! ಮೋಸ, ಕಳ್ಳತನ, ವಂಚನೆ, ಒಳಸಂಚು – ಇವೆಲ್ಲವುಗಳ ಕರಾಳ ಮೂರ್ತಿ ಹೀಪನ ಜತೆಯಲ್ಲಿದ್ದೇನೆ. ಇದ್ದೇನೆಂಬ ಸತತವಾದ ನೆನಪಿನಿಂದ ಹೀಗಾಗಿದ್ದೇನೆ!” ಹೀಗೆಲ್ಲಾ ಹೇಳುತ್ತಾ ಬರುತ್ತಿದ್ದ ಕಣ್ಣೀರನ್ನು ಒರೆಸಿಕೊಂಡು –
“ಕಷ್ಟಪಟ್ಟು ಸಾಕಾಯಿತು – ಇನ್ನು ಮುಂದೂ ಹೀಗೆ ಕಷ್ಟಪಟ್ಟು ಬಾಳಲಾರೆ. ಈಗಲೇ ಮಹಾಪಾಪಿ ನಾನು! ಅಧಮಾಧಮನ ಚಾಕರಿಯಲ್ಲಿ ಸಮಾಜ ದ್ರೋಹಿಯಾಗಿದ್ದೇನೆ. ನನ್ನ ಪಾಪಕರ್ಮಗಳ ಅಭ್ಯಾಸದಿಂದ ಧರ್ಮಬದ್ಧ ಜೀವನ ಏನೆಂಬುದನ್ನೇ ಮರೆಯತೊಡಗಿದ್ದೇನೆ. ನನಗೆ ಬೇಡ ಆತನ ನೌಕರಿ, ನನಗೆ ಸಲ್ಲದು ಆತನ ಸಹವಾಸ. ಜೀವನಕ್ಕಾಗಿ ಆ ರಾಕ್ಷಸನ ಜತೆ ಸೇರಿ, ಹೆಂಡತಿ ಮಕ್ಕಳನ್ನೇ ಮರೆತು ಮೃಗವಾಗಿ ಬದುಕುವ ಬದಲು ಊರು ಬಿಟ್ಟು ಊರೂರು ತಿರುಗಿ, ಸಂತೋಷದಿಂದ ಸಬಳವನ್ನು ನುಂಗಿ ಹಣ ಸಂಪಾದಿಸುವ ಡೊಂಬನಾಗುವೆನು! ನಾನಿನ್ನು ಯಾರ ಜತೆಯನ್ನೂ ಸೇರೆನು. ಹಾಗೆ ಸೇರಬೇಕಾದರೂ ನಾನು ಉದ್ದೇಶಿಸಿರುವ ಕಾರ್ಯ ಮುಗಿಯಬೇಕು. ಆ ಮೂರ್ಖ, ಕ್ರೂರಿ, ಪಾಪಿ, ದ್ರೋಹಿ, ಹೀಪನ ತಲೆಯನ್ನು ಪುಡಿಮಾಡಿದ ನಂತರ ಮಾತ್ರ ಇತರ ಕೆಲಸ. ಹೀಪನನ್ನು ಜ್ವಾಲಾಮುಖಿಯಲ್ಲಿ ಸುಟ್ಟು, ಹೀಪನ ಕತ್ತನ್ನು ಹಿಸುಕಿ ಬಿಸಿ ರಕ್ತ ಸುರಿಸಿ, ಅನಂತರ ಮಾತ್ರ ಈ ಪಂಚನ್ನು ಮುಟ್ಟುವೆನು.” ಈ ರೀತಿಯಾಗಿ ಮೈಯೆಲ್ಲಾ ನಡುಗುತ್ತಾ ಅಳುತ್ತಾ ಆರ್ಭಟಿಸುತ್ತ ರೇಗಿ ದಣಿದು ಕುರ್ಚಿಯಲ್ಲಿ ಕುಳಿತರು.

ಅವರನ್ನು ಸಮಾಧಾನಪಡಿಸಲು ನಾನು ಸ್ವಲ್ಪ ಪ್ರಯತ್ನಿಸಿದೆನು. ಅದಕ್ಕೆ ಅವರು ಎಡೆ ಕೊಡಲಿಲ್ಲ. ನೀರಲ್ಲಿ ಪ್ರಾಣದಾಸೆಗೆ ಕೈ ಬಡಿಯುವವರಂತೆ ತಮ್ಮ ಎರಡೂ ಕೈಗಳನ್ನು ಬೀಸುತ್ತಾ ಅವರ ಸಮೀಪ ಹೋದ ನನ್ನನ್ನು ದೂರ ನೂಕಿ –
“ಯಾವುದೂ ಬೇಡ – ನನ್ನನ್ನು ಮಾತಾಡಿಸಬೇಡಿ. ಆ ಪುಣ್ಯವಂತೆ ಮಿಸ್ ವಿಕ್ಫೀಲ್ಡಳನ್ನು ಉದ್ಧರಿಸಿ, ಅವಳ ಕೈ ಹಿಡಿಯಲೋಸ್ಕರ ನಡೆಸುವ ಹೀಪನ ಕುತಂತ್ರ, ಕೃತ್ರಿಮಗಳನ್ನೆಲ್ಲ ಬಹಿರಂಗಪಡಿಸಿ, ಶತ್ರುಗಳನ್ನು ನಾಶಪಡಿಸುವವರೆಗೂ ನನಗೆ ಏನೂ ಬೇಡ. ಬರುವ ವಾರ ಇದೇ ದಿನ ಕೇಂಟರ್ಬರಿಯ ಹೋಟೆಲಿಗೆ ನೀವೆಲ್ಲರೂ ಬರಬೇಕು. ಆ ವರೆಗೆ ಎಲ್ಲರೂ ಮೌನ! ಅಲ್ಲಿ ನಾನು ಹೀಪನ ಚಿತ್ರವನ್ನು ಬಿಡಿಸಿ, ಕುತಂತ್ರವನ್ನು ಬಯಲಿಗೆ ಎಳೆದು, ನ್ಯಾಯವನ್ನು ಕಾಪಾಡಿ ಕೊಡುವೆನು. ದಯಮಾಡಿ ನೀವೆಲ್ಲರೂ ಬರಬೇಕು. ಹೀಪನ ನಾಶಕ್ಕೆ ಮೊದಲು ನಾನು ಯಾರಿಂದಲೂ ಯಾವ ಆತಿಥ್ಯವನ್ನೂ ಸ್ವೀಕರಿಸೆನು” ಎಂದು ಹೇಳಿ, ನಿಂತು, ಬೆನ್ನು ನೆಟ್ಟಗೆ ಮಾಡಿ, ಮಿ. ಮೈಕಾಬರರು ನಮ್ಮ ಮಧ್ಯದಿಂದ ಹೋಗಿಯೇಬಿಟ್ಟರು.

ಅವರು ಹೋಗಿ ಸ್ವಲ್ಪ ಹೊತ್ತಾಗುವಾಗ ಅವರದೇ ಒಂದು ಪತ್ರ ಬಂತು. ಆ ಪತ್ರವನ್ನು ಅವರು ದಾರಿಯಲ್ಲೇ ಬರೆದಿರಬೇಕು. ಪತ್ರವು ಹೀಗಿತ್ತು:
ಪ್ರಿಯರೇ
ಈ ಪತ್ರವು ಅತ್ಯಂತ ಗಹನವಾದುದು, ಆದುದರಿಂದ ರಹಸ್ಯವಾಗಿರತಕ್ಕದ್ದು.
ನಿಮ್ಮ ಅತ್ತೆಯ ಮನೆಯಲ್ಲಿ ಉದ್ವೇಗದಿಂದ ಮಾತಾಡಿ ಸ್ವಲ್ಪ ಹೊಲಸು ಮಾಡಿಬಿಟ್ಟದ್ದಕ್ಕೆ ನನ್ನನ್ನು ಕ್ಷಮಿಸಬೇಕು. ಹೃದಯದಿಂದುಕ್ಕಿದ ಜ್ವಾಲಾಮುಖಿಯನ್ನು ಹತೋಟಿಗೆ ತರುವುದು ಕಷ್ಟತರವಾದದ್ದು. ತಡೆ ಹಿಡಿದು ಆದ ಆಸ್ಫೋಟವೇ ಅದು. ಇದೆಲ್ಲ ಕಷ್ಟಗಳನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು.
ನೀವು ಮರೆಯದೆ ಕೇಂಟರ್ಬರಿಗೆ ಬನ್ನಿ. ನನ್ನ ಜೀವಮಾನದ ಮುಖ್ಯ ಕೆಲಸ ಅಲ್ಲಿ ಆಗತಕ್ಕದ್ದಿದೆ. ಮುಖ್ಯವಾಗಿ, ಈಗ ನಮ್ಮೊಳಗೆ ನಿಶ್ಚೈಸಿಕೊಂಡಿರುವ ಕಾರ್ಯವನ್ನು ಅಲ್ಲಿ ಮಾಡುವೆನು. ಅನಂತರ ನನ್ನ ಜೀವನದಲ್ಲಿ ಉಳಿಯುವ ಕಾರ್ಯ ಒಂದು ಮಾತ್ರ. ಅಂದರೆ, ಈವರೆಗಿನ ನನ್ನ ಪಾಪ ಕರ್ಮಗಳಿಗೆ ತಕ್ಕಂಥ ಪ್ರಾಯಶ್ಚಿತ್ತವನ್ನು ಕೈಕೊಳ್ಳುವುದು. ಇಷ್ಟು ಮಾಡಿ, ಸಮಾಜದಲ್ಲಿ ತಲೆಯೆತ್ತಿ ನಡೆಯುವಂತಾದರೆ ಸಾಕು. ಅದಕ್ಕಿಂತ ಹೆಚ್ಚಿನ ಇಹಲೋಕದ ಆಸೆ ನನಗಿಲ್ಲ. ಅಥವಾ ಅಂಥ ಆಸೆ ಏನಾದರೂ ಇದ್ದರೆ –
“ಅಧಿಕಾರ, ಕೀರ್ತಿಯನು ಬಯಸಿ ಜೀವಿಸದ –
ಕೃಷಿವಂತ, ಶ್ರಮವಂತ, ಮಂದಿ ಮಡದಿಯರು
ಆರೇಳು ಗೇಣೊಳಗೆ ಚಿರಶಾಂತಿ ಪಡೆದಿಹರು”
ಎಂಬ ಕವಿ ವಚನಗಳಂತೆ, ಶಾಂತಿಯನ್ನೀಯಬಲ್ಲ ಸಮಾಧಿಯಲ್ಲಿ ನನ್ನನ್ನು ಮಲಗಿಸಿ, ಅನಾಡಂಬರದ, ಮುಂದಿನ ಹೆಸರನ್ನು ಮಾತ್ರ ಅಲ್ಲಿ ಬರೆಸಿಡಬೇಕೆಂಬುದು ಮಾತ್ರ –
ವಿಲ್ಕಿನ್ಸ್ ಮೈಕಾಬರ್

(ಮುಂದುವರಿಯಲಿದೆ)