(ಭಾಗ ಒಂದು)
ಗಡಿಯಾರದ ಪ್ರತಿ ಮೈಮುರಿತಕ್ಕೂ ಅಲಾರಾಂ ಈಗ ಹೊಡೆಯುತ್ತದೆ, ಗಂಟೆ ಎರಡೂವರೆಯಾಗುತ್ತದೆ, ಏಳಬೇಕು, ಹೊರಡಬೇಕು, ಮೂರೂವರೆಗೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ನಿನ ಪ್ರಾದೇಶಿಕ ಕಚೇರಿ ಎದುರು ಸೇರಬೇಕು ಎಂಬ ತಹತಹದಲ್ಲಿ ಮೊನ್ನೆ ಶುಕ್ರವಾರ (೧೩-೩-೧೫) ರಾತ್ರಿಯಿಡೀ ನಿದ್ದೆಯಿಲ್ಲ. ಇದು ನನ್ನೊಬ್ಬನ ಭ್ರಮೆಯಲ್ಲ, ಹೆಚ್ಚು ಕಡಿಮೆ ಎಲ್ಲಾ ಭಾಗಿಗಳ ಕತೆ! ಅಂತೂ ಅಪರಾತ್ರಿಯೋ ತೀರಾ ಮುಂಜಾನೆಯೋ ಎಂದು ಹೇಳಲಾಗದ ಮೂರೂವರೆ ಗಂಟೆಗೆ ಐದು ಹತ್ತು ಮಿನಿಟಿನ ಅಂತರದಲ್ಲಿ ಹದಿನೆಂಟೂ ಸವಾರರು ತಂತಮ್ಮ ವೈವಿಧ್ಯಮಯ ಸೈಕಲ್ಲೇರಿ ಆರಂಭದ ಧ್ವಜ ಎದುರಿಸಲು ಸಜ್ಜಾಗಿದ್ದರು. ಕಂಪೆನಿ ಎಲ್ಲರಿಗೂ ಗಾಢವರ್ಣದ ಪ್ರಚಾರ-ಶರ್ಟನ್ನು ಕೊಟ್ಟು ತಮ್ಮ ಜಾಹೀರಾತನ್ನೂ ತಂಡದ ವಿಶಿಷ್ಟ ಸಾಹಸವನ್ನೂ ಲೋಕಕ್ಕೆ ಸಾರುವ ಕೆಲಸ ಮಾಡಿದ್ದರು. ನಮ್ಮ ಸವಾರಿಗೆ ಅಗತ್ಯವಿಲ್ಲದ ವೈಯಕ್ತಿಕ ಹೊರೆ ಹೊತ್ತು, ತುರ್ತು ಅಗತ್ಯಗಳಿಗೆ ಒದಗಲು ಚಾಲಕನ ಸಹಿತ ಪ್ರಸನ್ನ ತನ್ನ ಇನ್ನೋವಾ ಕಾರನ್ನೇ ಸಜ್ಜುಗೊಳಿಸಿದ್ದ. ಅದರಲ್ಲಿ ಪ್ರಾಯೋಜಕನ ನೆಲೆಯಲ್ಲಿ, ಸದಾ ನಗೆಮುಖದ ತರುಣ ಅಧಿಕಾರಿ ಮಹೇಶ್ ಇದ್ದರು. ಸಂಯೋಜನೆಯ ಎಲ್ಲ ಜವಾಬ್ದಾರಿ ಹೊತ್ತು ಇವರು ಪ್ರಸಂಗಕ್ಕೆ ತಕ್ಕಂತೆ ಮಹಾಯಾನದ ಹಿಂದೋ ಮುಂದೋ ಲಭ್ಯರಿರುತ್ತಿದ್ದರು, ದಕ್ಷವಾಗಿ ಕೆಲಸ ನಡೆಸಿಕೊಡುತ್ತಿದ್ದರು. ಅಗತ್ಯಗಳಲ್ಲೂ ಅನಿವಾರ್ಯತೆಗಳಲ್ಲೂ ಸೈಕಲ್ಲುಗಳನ್ನು ಹೊರಲು ಒಂದು ಲಾರಿಯೂ ಹಿಂಬಾಲಿಸುವುದಿತ್ತು. ಲಾರಿಯಲ್ಲಿ ತಾಜ್ ಸೈಕಲ್ ಕಂಪೆನಿಯ ರಿಪೇರಿ ಪ್ರವೀಣ ಸಯ್ಯದ್ ಪೀರ್, ಪ್ರಮುಖ ಬಿಡಿಭಾಗಗಳ ಸಹಿತ ತನ್ನ ಹಡಪ ಹೊತ್ತು ಜತೆಗೊಡಲಿದ್ದರು.
ಇಂಡಿಯನ್ ಆಯಿಲ್ಲಿನ ಪ್ರಾದೇಶಿಕ ಮುಖ್ಯಸ್ಥ – ರಾಮಚಂದ್ರ ಮೆನನ್ ಎರಡು ಮಾತಿನ ಶುಭ ಹಾರೈಕೆ ಕೊಟ್ಟರು. ಹಿಂದಿನ ದಿನವಷ್ಟೇ ಹುದ್ದೆಯನ್ನಲಂಕರಿಸಿದ್ದ, ಮಂಗಳೂರು ಮಹಾನಗರಪಾಲಿಕೆಯ ಉಪಮೇಯರ್ – ಪುರುಷೋತ್ತಮ ಚಿತ್ರಾಪುರ, ಅವೇಳೆಯಲ್ಲೂ ಸಮಯಕ್ಕೆ ಸರಿಯಾಗಿ ಬಂದು, ಅಷ್ಟೇ ಚುಟುಕಾಗಿ ಉತ್ತೇಜಕ ನುಡಿಗಳನ್ನಾಡಿ ಧ್ವಜ ಬೀಸಿದರು. ನಾಲ್ಕು ಕಳೆದು ಐದು ಮಿನಿಟಿಗೆ ಮಂಗಳೂರು – ಬೆಂಗಳೂರು ಮಹಾಯಾನ ಪ್ರಾರಂಭವಾಗಿತ್ತು.
ಎದುರು ಕತ್ತಲಿರಿವ ಬಿಳಿದೀಪ, ಹಿಂದೆ ಹಿಂಬಾಲಿಸುವವರನ್ನು ಎಚ್ಚರಿಸುವ ಕೆಂಪು ಮಿನುಗುದೀಪ ಹೊತ್ತ ಹದಿನೆಂಟು ಸೈಕಲ್ಲುಗಳು ಕೊಟ್ಟಾರ ಚೌಕಿ, ಹೆದ್ದಾರಿಯಲ್ಲೇ ನಂತೂರು, ಪಡೀಲುಗಳನ್ನು ಹಾಯುತ್ತಾ ಮುನ್ನೂರ ಎಂಬತ್ತು ಕಿಮೀಗೂ ಉದ್ದಕ್ಕೆ ಬಿಚ್ಚಿ ಬಿದ್ದ ಬೆಂಗಳೂರ ದಾರಿಯನ್ನು ಸುತ್ತಿಕೊಳ್ಳತೊಡಗಿದುವು. ಪುರಾಣದಲ್ಲಿ ಅಂಕಿ ಹದಿನೆಂಟು (ಅಕ್ಷೋಹಿಣಿ), ಧರ್ಮದ ಹೆಸರಿನಲ್ಲಿ ಪರಸ್ಪರ ಮಹಾಯುದ್ಧ ನಡೆಸಿ, ಬಹುದೊಡ್ಡ ಸಾಮಾಜಿಕ ದುರಂತಕ್ಕೆ ಕಾರಣವಾದ್ದನ್ನು ಕಾಣುತ್ತೇವೆ. ಆದರಿಲ್ಲಿನ ಹದಿನೆಂಟು (ಮಹಾರಥಿಗಳು) ಒಂದಾಗಿ ಬಹುದೊಡ್ಡ ಸಾಮಾಜಿಕ ಉತ್ಥಾನಕ್ಕೆ ಮಹಾಯಾನ ಹೊರಟಿದ್ದವು! ಚತುಷ್ಪಥ ದಾರಿ, ತೀರಾ ವಿರಳ ವಾಹನ ಸಂಚಾರ, ತುಸು ಚಳಿಯೆನ್ನಿಸುವಂತಿದ್ದ ವಾತಾವರಣ ನಮಗೆ ಅಪ್ಯಾಯಮಾನವಾಗಿತ್ತು. ಸೈಕಲ್ ತುಳಿಯುವ ಬಿಸಿಗೆ ಹಿತವೂ ನಮ್ಮ ದೀಪಗಳ ಬೆಳಕೋಲಿನಿಂದಾಚೆಗೆ ದಿಟ್ಟಿ ಹರಿದು ವಿಳಂಬಿಸದಂತೆಯೂ ಧಾರಾಳ ಹೊಂದಿಕೊಂಡಿತು. ಸಣ್ಣಪುಟ್ಟ ಸಮ ಸವಾರಿಗಳಲ್ಲಿ ಗೆಳೆಯರೊಳಗೆ ಮಾತುಗಳಾದರೂ ದಾರಿ ಪೆಡಲುಗಳ ಸಂಯೋಗದಲ್ಲಿ ಕೊರತೆಯಾಗದಂತೆ ಸಾಗಿ, ಮುಕ್ಕಾಲೇ ಗಂಟೆಯಲ್ಲಿ ಜೋಡುಮಾರ್ಗ ಕಳೆದು, ಬಂಟ್ವಾಳ ಬಳಸು ದಾರಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ತಲಪಿದ್ದೆವು.
ಇನ್ನೂ ಮೊದಲ ಪಾದವಾದ್ದರಿಂದ ಬಂಕಿನವರು ನಮಗೆ ನೀರು, ಬಿಸ್ಕೆಟ್, ಚಾಕಲೇಟುಗಳ ಆತಿಥ್ಯ ನೀಡಿದ್ದೇ ಧಾರಾಳವಾಯ್ತು. ಸಮಯ ಸೋರಿಹೋಗದ ಎಚ್ಚರದಲ್ಲಿ ನಾಲ್ಕೈದು ಮಿನಿಟುಗಳ ಅಂತರದಲ್ಲೇ ಎಲ್ಲ ಮತ್ತೆ ಸೇರಿದ್ದನ್ನು ಖಾತ್ರಿಪಡಿಸಿಕೊಂಡು ಮುಂದುವರಿದೆವು.
ನೇತ್ರಾವತಿ ಬಲಬದಿಗಿದ್ದರೂ ಕತ್ತಲ ಮುಸುಕಿನಲ್ಲಿ ಕಾಣುತ್ತಿರಲಿಲ್ಲ. ಈ ಸೇತುವೆ ಮಣಿಹಳ್ಳದ್ದು. ಹಿಂದೆ ಆ ಹಳ್ಳದ ಪಾತ್ರೆಯಲ್ಲೇ ಕಂಬಳ ನೋಡಿದ್ದು ನನ್ನ ಮನಃಪಟಲದಲ್ಲಿ ಸರಿದರೂ ಅಂದು ನಾನು ಸೈಕಲ್ ದೀಪದ ಬೆಳಕೋಲಿನುದ್ದಕ್ಕಷ್ಟೇ ನೋಡಬಲ್ಲ, ಕಣ್ಗಪ್ಪಡಿ ಕಟ್ಟಿದ ಸವಾರ. ಎದುರಿನ ಕೆಂದೀಪಗಳನ್ನು ಹಿಡಿಯುವ ಅವಸರ, ಬೆಂಬತ್ತಿದ ಬೆಳ್ದೀಪಕ್ಕೆ ಸೋಲದ ಆತುರ, ಸೂರ್ಯ ಮೂಡಲಮನೆ ಬಿಡುವ ಮೊದಲೇ ಕಾವೇರಿಪೋಷಿತ ನಗರದತ್ತ ಅದೆಷ್ಟು ಹೆಚ್ಚು ಮಾರ್ಗ ಸವೆಸುತ್ತೇವೋ ಎಂಬ ಕಾತರ. ಇಲ್ಲಿ ದಾರಿ ದ್ವಿಪಥ ಮಾತ್ರ. ಹೆದ್ದಾರಿಯ ಶಿಸ್ತಿಲ್ಲದ ಏರಿಳಿತ, ಅಂಕುಡೊಂಕು. ಶಿರಾಡಿಘಾಟೀ ಮುಚ್ಚಿದ್ದರ ಪರಿಣಾಮವಾಗಿ ನಮಗೆ ಇದು ಅನಿವಾರ್ಯ. ಅದೇ ಅನಿವಾರ್ಯತೆಯಲ್ಲಿ ಅತ್ತಣಿಂದಲೂ ಬರುವ ನಿಶಾಚರಿ ಬಸ್ಸು ಲಾರಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ನಮಗೆ ರಗಳೆ ಆಗದಿರಲಿಲ್ಲ. ಆದರೆ ಹದಿನೆಂಟೂ ಸವಾರರ ಪರಿಣತಿ ಸಣ್ಣದಲ್ಲವಾದ್ದರಿಂದ ಓಟ ಏಕಪ್ರಕಾರವಾಗಿತ್ತು.
ತಂಡದ ಮುಖ್ಯ ಸತ್ತ್ವ ಮತ್ತು ಬಲ ಮಂಗಳೂರು ಸೈಕಲ್ ಸವಾರರ ಸಂಘದ ಹದಿನಾಲ್ಕು ಸಕ್ರಿಯ ಸದಸ್ಯರು. ಸಂಘಕ್ಕೆ ಯಾವುದೇ ಔಪಚಾರಿಕ ಬಂಧಗಳಿಲ್ಲ (ಇದು ನೊಂದಾಯಿತ ಕೂಟವಲ್ಲ. ಸದಸ್ಯತ್ವದ ದಾಖಲಾತಿ, ಶುಲ್ಕಗಳೇನೂ ಇಲ್ಲ). ಸದ್ಯ ಉದ್ಯೋಗ ನಿಮಿತ್ತ ವಿದೇಶದಲ್ಲಿರುವ ಗಾಡ್ಫ್ರೆಡ್ ಪಿಂಟೋ ಕಟ್ಟಿದ ಕೂಟವಿದು. ವ್ಯಕ್ತಿನಾಮ ಮೀರಿದಂತೊಂದು ಕೇವಲ ಹೆಸರು – ಮಂಗಳೂರು ಸೈಕಲ್ ಕ್ಲಬ್. (ನಮ್ಮದೇ ಆರೋಹಣ ಪರ್ವತಾರೋಹಿಗಳು ಸಾಹಸಿಗಳು, ಮಂಗಳೂರು ಇದ್ದ ಹಾಗೇ.) ಅದನ್ನು ಹಾಗೇ ಮುಂದುವರಿಸಿರುವವರು ಅನಿಲ್ ಶೇಟ್. ನಿತ್ಯದಲ್ಲಿ ಬೆಳಿಗ್ಗೆ ಸುಮಾರು ಆರರಿಂದ ಎಂಟು ಗಂಟೆಯವರೆಗೆ ಇವರ ಸೈಕಲ್ ತುಳಿಯುವ ಸಂತೋಷಕ್ಕೆ ಜತೆಯಾದವರೆಲ್ಲ ಕೂಟದ ಸದಸ್ಯರೆಂದೇ ಅರ್ಥ. (ಪಿಂಟೋ ಇದ್ದಾಗಲೇ ನಾನು ಎರಡು ಬಾರಿ ತಂಡದ ಕಲಾಪದಲ್ಲಿ ಜತೆಗೊಟ್ಟಿದ್ದೆ.) ರಜಾದಿನಗಳಂದು ತಂಡ ಸೂರ್ಯೋದಯಕ್ಕು ಎಷ್ಟೋ ಮೊದಲು ತೊಡಗಿ, ದಿನವೆಲ್ಲ ದೂರದ ಸವಾಲುಗಳು, ಅಂದರೆ – ಚಾರ್ಮಾಡಿ, ಆಗುಂಬೆ, ಕುಂದಾದ್ರಿ, ಕುದುರೆಮುಖ ಎಂದಿತ್ಯಾದಿ ಬೆಂಬತ್ತುತ್ತಲೇ ಇರುತ್ತಿದ್ದರು. ಇಂಡಿಯನ್ ಆಯಿಲ್ ಕರೆಕೊಟ್ಟಮೇಲಂತೂ ಮಲ್ಪೆ, ಉಪ್ಪಿನಂಗಡಿಗಳಿಗೆ ಇವರೋಡಿ ಬಂದದ್ದು ನಿಮಗೆ ತಿಳಿದೇ ಇದೆ.
ಸೈಕಲ್ ಸಂಘದ ಅನಿಲ್ ಶೇಟ್, ರಾಜೇಶ್ ಶೇಟ್, ಮಹೇಶ್ವರಿ ಮುಂತಾದವರು ಸ್ವತಂತ್ರವಾಗಿ ಉದ್ಯಮಿಗಳು. ಹಾಗೇ ಕಿಶನ್ ಕುಮಾರ್ ರೈಲ್ವೇ ನೌಕರ, ಜಗನ್ನಾಥ ರೈ ಪಶುವೈದ್ಯ, ಅನಿಲ್ ಶೇಟ್ ರಾಯ್ಕರ್ ಆಭರಣ ವ್ಯಾಪಾರಿ, ಪ್ರಜ್ವಲ್ ಬಾಗಲೋಡಿ ಮೆರೈನ್ ಇಂಜಿನಿಯರ್, ಲಕ್ಷ್ಮೀಶ್, ಜೀಹಾನ್ ಮತ್ತು ಅಂಚಲ್ ರಥಿ ವಿದ್ಯಾರ್ಥಿಗಳು, ಪ್ರವೀಣ್ ಔಷಧ ವ್ಯಾಪಾರಿ, ಸಮರ್ಥ ಮಾರಾಟಗಾರ, ಅಲ್ಲದೆ ಶಶಾಂಕ್ ಪಾಲ್ ಮಾತ್ತು ಧನರಾಜ್ ಪಾಲ್ಕೆಮಹಾಯಾನದಲ್ಲಿ ಪಾಲ್ಗೊಂಡ ಸಂಘದ ಸದಸ್ಯರು. ಸೈಕಲ್ ಚಲಾವಣೆಯಲ್ಲಿ ವಿವಿಧ ಹಂತಗಳಲ್ಲಿ ತೀವ್ರ ಪಳಗಿದ ಈ ಹದಿನಾಲ್ಕು ಬೆಂಗಳೂರ ಹಾದಿಯಲ್ಲಿದ್ದುದರಿಂದ ಒಟ್ಟಾರೆ ತಂಡದ ಯಶಸ್ಸಿನಲ್ಲಿ ಸಂದೇಹವೇನೂ ಇರಲಿಲ್ಲ. ತಂಡದ ಉಳಿದ ನಾಲ್ವರ ಸ್ತರ ಬೇರೆ, ಆದರೆ ಸಂಕಲ್ಪ ದೊಡ್ಡದೇ. ಪ್ರಸನ್ನ ಮತ್ತು ನಾನು ಸೈಕಲ್ ಸಂಘದ ಜತೆಗಿದ್ದೂ ಹೊರಗಿನವರಂತೆ ಪೂರ್ವಾಭ್ಯಾಸ ನಡೆಸಿದ್ದು ನಿಮಗೆಲ್ಲ ತಿಳಿದೇ ಇದೆ. (ನೋಡಿ: ಬೆಂಗಳೂರಿನ ದಾಳಿಗೆ ಮಂಗಳೂರ ದಂಡು) ಉಳಿದಂತೆ ಸುಳ್ಯದಿಂದ ಬಂದ ಕೃಷಿಕ ಶ್ಯಾಮಪಾರೆಯಾದರೋ ನನ್ನ ಪ್ರಥಮ ಬೆಂಗಳೂರು-ಮಂಗಳೂರು ಯಾತ್ರೆಯ ಪ್ರೇರಕ, ಜತೆಗಾರ. ಅಷ್ಟೇ ಅಲ್ಲ, ಆ ಯಾತ್ರೆಯ ನಡುವೆ ನಾನು ಕಳಚಿಕೊಂಡರೂ ಛಲ ಹಿಡಿದು ತನ್ನ ಸುಳ್ಯದ ಲಕ್ಷ್ಯವನ್ನು ಏಕಾಂಗಿಯಾಗಿಯೇ ಸಾಧಿಸಿದ ಸಾಹಸಿ. ದಂತವೈದ್ಯ ಜಯಪ್ರಸಾದ ಆನೇಕಾರ ಶ್ಯಾಮನ (ಹಾಗೂ ನನ್ನ) ಗೆಳೆಯ, ಸುಳ್ಯ ಪರಿಸರದವರೇ. ಮಂಗಳೂರು ಆಸುಪಾಸಿನಂತೆ ಬಹುತೇಕ ಸಮತಳದ, ನುಣ್ಣನೆ ದಾರಿ-ಹೆದ್ದಾರಿಗಳ ಜಾಲ ಸುಳ್ಯದಲ್ಲಿ ಇಲ್ಲ.
ಆದರೆ ಈತ ಸ್ವಂತ ಆಸಕ್ತಿಯಿಂದ ಕೆಲಕಾಲದಿಂದ ಕಚ್ಚಾದಾರಿ, ವಿಪರೀತ ಏರಿಳಿವುಗಳ ಒಳದಾರಿಗಳಲ್ಲಿ ಸೈಕಲ್ ಸವಾರಿ ನಡೆಸಿ, ಅರಿವಿಲ್ಲದ ಅನುಭವ ಸಂಚಯಿಸಿದ್ದರು. ಅದರ ಜತೆಗೆ ಶ್ಯಾಮ್ ಸಾಂಗತ್ಯದ ಧೈರ್ಯದಲ್ಲಿ ಮಹಾಯಾನಕ್ಕೆ ಹೆಸರು ದಾಖಲಿಸಿ ಬಂದಿದ್ದರು. “ಇದುವರೆಗೆ ಒಂದು ದಿನದಲ್ಲಿ ಗರಿಷ್ಠ ನಲ್ವತ್ತಾರು ಕಿಮೀ ಸವಾರಿ ನಡೆಸಿದ್ದ ಹುಚ್ಚು ಧೈರ್ಯದಲ್ಲಿ ಬಂದುಬಿಟ್ಟೆ” ಎಂಬ ಜಯಪ್ರಸಾದರ ಮಾತಿನಲ್ಲಿ ವಿನಯದಷ್ಟೇ ಸಾಧಿಸುತ್ತೇನೆ ಎಂಬ ವಿಶ್ವಾಸವಿತ್ತು.
ಸೂರ್ಯೋದಯದ ವಿಕಾಸವನ್ನು “ಇಂದು ಹೊಸತು, ಇದು ಹೊಸತು” ಎಂಬಂತೆ ಹಾಡಿಹೊಗಳಲು ತೋಟ ಕಾಡುಗಳಲ್ಲಿ ಅದೆಷ್ಟು ಕಂಠಗಳು. ಸುಮಾರು ಏಳೂವರೆ ಗಂಟೆಗೆ ನಾವು ಬೆಳ್ತಂಗಡಿಯ ಹೊರವಲಯದ ಪೆಟ್ರೋಲ್ ಬಂಕ್ ಸೇರುವಾಗ ಹಿಮ್ಮೇಳವೂ ಸಜ್ಜುಗೊಂಡಿದೆ ಎನ್ನುವಂತೆ ಚಂಡೆಡೋಲುಗಳ ನಾದವೂ ಅನುರಣಿಸಿತು. ವರ್ಣಮಯ ಧ್ವಜ ಅಲುಗಿಸುತ್ತಾ ಪುಟ್ಟ ಮಕ್ಕಳ ತಂಡ ಔಪಚಾರಿಕ ಸ್ವಾಗತವನ್ನೇ ಬಯಸಿತು. ಇಂಡಿಯನ್ ಆಯಿಲ್ಲಿನವರ ಬರಿದೇ ಸೂಚನೆಯನ್ನು ಆ ಪೆಟ್ರೋಲ್ ಬಂಕಿನ ಯಜಮಾನರು ತನ್ನ ಪ್ರೀತಿಯ ಕಾಣಿಕೆಯಾಗಿ ನಿರೂಪಿಸಿದ್ದರು. ನಮ್ಮ ಆರಂಭಿಕ ವೇಗ ಅವರ ನಿರೀಕ್ಷೆಯ ಸಮಯವನ್ನು ಸೋಲಿಸಿದ್ದರಿಂದ ಅವರು ವ್ಯವಸ್ಥೆ ಮಾಡಿದ್ದ ಬೆಳಗ್ಗಿನ ಉಪಾಹಾರ ತಲಪುವಲ್ಲಿ ತುಸು ವಿಳಂಬವಾಯ್ತು. ಸಹಜವಾಗಿ ಮುಂದಿನ ದಾರಿಗೆ ಬಿಸಿಲೇರುತ್ತಿದೆ ಎಂಬ ತಂಡದ ಆತಂಕ ಸಣ್ಣ ಅಸಹನೆಯ ರೂಪದಲ್ಲಿ ಪ್ರಕಟವಾಗಿತ್ತು. ಆದರೆ ಆ ಬಂಕಿನ ಯಜಮಾನರು ಅದನ್ನು ಅರ್ಥಮಾಡಿಕೊಂಡು, ಸೌಜನ್ಯ ಕಳೆಯದೆ, ಉದಾರವಗಿತ್ತ ತಿಂಡಿ, ತೀರ್ಥದ ರುಚಿ ಖಂಡಿತವಾಗಿಯೂ ಎಲ್ಲರನ್ನು ಸಮಾಧಾನಿಸಿತ್ತು.
ಮುಂದಿನ ದಾರಿಗೆ ಘಟ್ಟಮಾಲೆಯ ಪಾದಸ್ಪರ್ಷವಾಗಿತ್ತು. ಹಾಗಾಗಿ ಸುಮಾರು ಐದೇ ಕಿಮೀ ಅಂತರದ ಉಜಿರೆ ಪೆಟ್ರೋಲ್ ಬಂಕಿನವರು ಕೊಟ್ಟ ನೀರು ಮತ್ತು ಗ್ಲುಕೋಸ್ ಪ್ಯಾಕೇಟು ಎಲ್ಲರಿಗೂ ಆವಶ್ಯಕ ಉತ್ತೇಜನವನ್ನೇ ಕೊಟ್ಟಿತು. ದೀರ್ಘ ಹಾಗೂ ಹೆಚ್ಚು ಕಡಿದಾದ ಏರುದಾರಿಗಳು ಎದುರಾಗುವುದರೊಂದಿಗೆ ಡಾಮರಿನಾಚಿನ ನೆಲ ನಮಗೆ ಅಪಾಯಕಾರಿಯಾಗಿಯೂ ಪರಿವರ್ತನೆಗೊಂಡಿತ್ತು.
ಇಲ್ಲಿ ದೊಡ್ಡ ವಾಹನಗಳ ಅಸಹನೆ ನಮಗೆ ಹೆಚ್ಚಿನ ಆತಂಕವನ್ನು ಮಾಡುತ್ತಿತ್ತು. ಮಹಾಯಾನದ ಕೊನೆಯಲ್ಲಿ ನಾವು ಸರಕಾರಕ್ಕೆ ಕೊಡಲಿದ್ದ ಮನವಿಯ ಪುಣ್ಯಫಲ – ದಾರಿಗಳಲ್ಲೆಲ್ಲ ಸೈಕಲ್ ಓಣಿ, ಬೇಗ ಸಿದ್ಧಿಸಲಿ ಎಂಬ ಹಾರೈಕೆಗೆ ಹೆಚ್ಚು ಔಚಿತ್ಯವನ್ನೂ ಕಾಣಿಸಿತು. ನಾನಂತೂ ಒಂದು ಚಡಾವಿನಲ್ಲಿ (ಏರುದಾರಿ) ಬಲು ಹಿಂದಿನಿಂದ ಭೋರ್ಗರೆದು ಬಂದು, ಕಿವಿಹೊಟ್ಟುವಂತೆ ಅರಬ್ಬಾಯಿ (ಅಬ್ಬರದ ಮಾತು, ಇಲ್ಲಿ ಹಾರ್ನ್) ಕೊಟ್ಟ ಸರಕಾರಿ ಬಸ್ಸಿಗೆ ಒಂದಿಂಚೂ ಜಗ್ಗುವ ಲಕ್ಷಣ ತೋರದೇ ಡಾಮರಿನಂಚನ್ನು ಗಟ್ಟಿಯಾಗಿ ನೆಚ್ಚಿ ಮುಂದುವರಿದಿದ್ದೆ.
ಆತ ಅನಿವಾರ್ಯವಾಗಿ ನಿಧಾನಿಸಿ, ಗೇರು ಬದಲಾಯಿಸಿ, ಸ್ವಲ್ಪ ದೂರ ನನ್ನ ಶ್ರುತಿಗೆ ಹೊಂದುವಂತೆ ಅನುಸರಿಸಿ, ಎದುರಿನಲ್ಲಿ ವಾಹನಗಳಿಲ್ಲದಾಗ ಬಲಕ್ಕೆ ಸರಿದು ಮುಂದುವರಿದ. ರಸ್ತೆ ಬಳಕೆಯಲ್ಲಿ ಸೈಕಲ್ಲುಗಳು ದೊಡ್ಡ ವಾಹನಗಳೊಡನೆ ಸಮಾನ ಸ್ಥಳ ಕೇಳುವುದಿಲ್ಲ, ಆದರೆ ಹಕ್ಕು ಸಮಾನವೇ ಇದೆ ಎಂದು ಆತನಿಗೆ ಮನವರಿಕೆಯಾಗಿದ್ದರೆ ಸಂತೋಷ. ಆಮೇಲೆ ತಿಳಿಯಿತು, ಅಲ್ಲೇ ಎಲ್ಲೋ ಇಂಥದ್ದೇ ಸನ್ನಿವೇಶದಲ್ಲಿ ಜಯಪ್ರಸಾದ, ಗಾಬರಿಯಲ್ಲಿ ಡಾಮರ್ ಬಿಟ್ಟು ಪಕ್ಕದಲ್ಲಿ ಕೊರಕಲುಬಿದ್ದ ಮಣ್ಣಿಗಿಳಿದು, ಬಳಲಿದ್ದ ಕಾಲಿಗೆ ಒಮ್ಮೆಲೆ ಒತ್ತಡ ಹೆಚ್ಚಿಸಿ, ಸ್ನಾಯುಸೆಳೆತ ಅನುಭವಿಸುವಂತಾಗಿತ್ತಂತೆ. ಅನಂತರ ಎಲ್ಲೋ ಸಿಕ್ಕಾಗ ಅದನ್ನು ನಿರೂಪಿಸುತ್ತಾ ನಗುತ್ತಾ “ಅದರ ಟಯರಡಿಗೆ ಬೀಳುವುದಕ್ಕಿಂತ ಒಳ್ಳೇದು ಮಾರಾಯ್ರೇ” ಎಂದೇ ಹೇಳಿ ಮುಗಿಸಿದ್ದರು!
ಬೆಳ್ತಂಗಡಿಯಿಂದಲೇ ಎದುರು ಕಣ್ತುಂಬುತ್ತಿದ್ದ ಚಾರ್ಮಾಡಿವಲಯದ ಘಟ್ಟ, ಅದರಲ್ಲೂ ಮುಖ್ಯವಾಗಿ ಏರಿಕಲ್ಲಿನ ಶಿಖರ ಕಾಣತೊಡಗಿದಮೇಲೆ ನನ್ನ ಉತ್ಸಾಹಕ್ಕೆ ಕೊನೆಯಿರಲಿಲ್ಲ. ಇದೇ ದಾರಿ ೧೯೮೦ರಲ್ಲಿ ನಮ್ಮ ತೊಂಬತ್ತಕ್ಕೂ ಮಿಕ್ಕ ಸದಸ್ಯರ `ನಿಶೆಯಲ್ಲಿ ನಡಿಗೆ’ ಕಂಡಿತ್ತು. ಇಲ್ಲಿ ಎಡಕ್ಕೆ ಕೊನೆಯಲ್ಲಿ ಕುಗ್ರಾಮ ದಿಡುಪೆ, ಅಂತರ್ಪಿಶಾಚಿ ಯಳನೀರು, ಆನಡ್ಕ ಅಬ್ಬಿ ಒಂದೊಂದೂ ನೋಡುವಂಥವೇ. ಅವಕ್ಕೂ ಮೊದಲೇ ವಳಂಬ್ರದಲ್ಲಿ ಕವಲಿದರೆ ಬಂಡಾಜೆ ಅಬ್ಬಿ, ಬಲ್ಲಾಳರಾಯನ ದುರ್ಗ ಅಸಾಮಾನ್ಯ ಸವಾಲುಗಳು.. ಓಹ್, ಎದುರು ಪೀನಾಕಾರದಲ್ಲಿ ಬಲು ಎತ್ತರಕ್ಕೆ ನಿಂತಿರುವುದೇ ಏರಿಕಲ್ಲು. ಅದರ ತಪ್ಪಲಲ್ಲಿ ನಿಶೆನಡಿಗೆಯವರು ಹೂಡಿದ ಶಿಬಿರ, ನೆತ್ತಿಗೇರುವಲ್ಲಿ ನೂರಾರು ಮೀಟರ್ ಬಂಡೆ ಹತ್ತಿದ ವಿವರ, ಇಳಿದು ಬರುವಲ್ಲಿನ ನೂರೆಂಟು ಬವಣೆ… ಹೀಗೆ ಇಂದಿನ ರೀಲು ಸುತ್ತುವುದರೊಡನೆ ಅಂದಿನ ರೀಲು ಬಿಚ್ಚಿಕೊಳ್ಳುತ್ತಲೇ ಇತ್ತು! ಅದನ್ನು ಸಹ ಸವಾರರು ಕೇಳುವುದಾಗಲೀ ಸ್ವತಃ ಸುತ್ತು ನೋಡಿ ಕುತೂಹಲ ತಾಳುವುದಾಗಲೀ ಅಸಾಧ್ಯವೆಂಬಂತೆ ಎಲ್ಲರೂ ವಿವಿಧ ಅಂತರಗಳಲ್ಲಿ ನೆಲನೋಟಕರಾಗಿ “ದಮ್ಮು ಕಟ್ಟಿ, ಸೈಕಲ್ ಮೆಟ್ಟಿ” ಮಂತ್ರ ಜಪದಲ್ಲಿದ್ದರು. ಕಕ್ಕಿಂಜೆಯಿಂದ ತುಸು ಮುಂದೆ, ಪೂರ್ಣ ಪ್ರಮಾಣದ ಘಾಟಿ ರಸ್ತೆ ತೊಡಗುವ ಚಾರ್ಮಾಡಿಹಳ್ಳಿಗಿಂತಲೂ ಸ್ವಲ್ಪ ಹಿಂದೆ ನಮ್ಮ ಮೊದಲ ಹಂತದ ಸವಾರಿ ಕೊನೆಗೊಂಡಿತು. ಅಲ್ಲಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕಿನಲ್ಲಿ ನಮಗೆ ಶೈತ್ಯೋಪಚಾರದ ವ್ಯವಸ್ಥೆಯೂ ಮುಂದಿನ ಯಾನ ಬದಲಾವಣೆಗಾಗಿ ಮಿನಿ ಬಸ್ಸೂ ಕಾದಿತ್ತು.
ಸುಮಾರು ಐದು ಗಂಟೆಯ ಅವಧಿಯಲ್ಲಿ ಎಲ್ಲ ಆದರೋಪಚಾರಗಳ ವಿಳಂಬ ಸಹಿತ ನಾವು ೭೮ ಕಿಮೀ ಕ್ರಮಿಸಿದ್ದೆವು. ಏರು ಸೂರ್ಯನೊಡನೆ ದಕ ಜಿಲ್ಲೆಯ ಸೆಕೆಗಿದ್ದ ಗೆಳೆತನ ಗಾಢವಾಗುವ ಮುನ್ನ ಸೈಕಲ್ಲುಗಳನ್ನು ನಮ್ಮ ಲಾರಿಗೇರಿಸಿ, ನಾವು ಬಸ್ಸೇರಿದೆವು. ಸಂಘಟಕನ ಹಲವು ಸಂಕಟಗಳ ನಡುವೆ ಪ್ರಸನ್ನ ಲಾರಿಯಲ್ಲಿ ಸೈಕಲ್ ಸಾಗಣೆಗೆ ತುಂಬ ಒಳ್ಳೆಯ ಕೆಲಸವನ್ನೇ ಮಾಡಿದ್ದ. ನಮ್ಮ ಸೈಕಲ್ಲುಗಳಾದರೋ ಇಪ್ಪತ್ತು-ಮೂವತ್ತು ಸಾವಿರ ರೂಪಾಯಿಯಿಂದ ತೊಡಗಿ ಒಂದೂವರೆ ಲಕ್ಷದವರೆಗೂ ಬೆಲೆ ಬಾಳುವವು. ಅವುಗಳ ಚಕ್ರದೋಟದ ಸಾಮರ್ಥ್ಯ ಅಪರಿಮಿತ. ಹಾಗೆಂದು ಅವುಗಳನ್ನು ಸವಾರಿಯೇತರ ಆಘಾತಕ್ಕೀಡು ಮಾಡಿದರಾದೀತೇ. ಭಾರೀ ಎತ್ತರದ ಬಾಗಿಲು, ಬೀಗ ಸಹಿತ ಪೂರ್ಣಮುಚ್ಚಿಗೆಯ ಲಾರಿ, ಸಂಯಮದ ಚಾಲಕನನ್ನೇ ಆಯ್ದಿದ್ದ. ಒಳಗೆ ಸರಿ ಅಡ್ಡಕ್ಕೆ ಒದಗುವಂತೆ ಮೂರು ಬಲವಾದ ಕಂಬ, ಸಾಕಷ್ಟು ರಟ್ಟಿನ ತುಂಡು ಮತ್ತು ಹಗ್ಗದ ಸಂಗ್ರಹವಿತ್ತು. ಆರೇಳು ಸೈಕಲ್ಲುಗಳನ್ನು ಒಳಗೆ ಉದ್ದುದ್ದಕ್ಕೆ ನಿಲ್ಲಿಸಿ, ಅವುಗಳ ನಡುವಿನಿಂದ ಕಂಬ ತೂರಿಸಿ, ಅಗತ್ಯವಿದ್ದಲ್ಲೆಲ್ಲ ರಟ್ಟಿನ ಮಧ್ಯಸ್ಥಿಕೆ ಕೊಟ್ಟು, ಬಿಡಿಯಾಗಿಯೂ ಅಂಚಿನಲ್ಲೂ ಕಟ್ಟಿದ್ದರು. ಹೀಗೆ ಮೂರೇ ಪಂಕ್ತಿಗಳಲ್ಲಿ ನಮ್ಮೆಲ್ಲ ಸೈಕಲ್ಲುಗಳು ಲಾರಿಯ ಯಾವುದೇ ಓಲಾಟಕ್ಕೆ ಅಲುಗದೆ, ಪರಸ್ಪರ ಉಜ್ಜಿಕೊಳ್ಳದೇ ದೃಢವಾಗಿ ನಿಲ್ಲುವಂತಾಗಿತ್ತು. (ಕೊನೆಯಲ್ಲಿ ಬೆಂಗಳೂರು – ಮಂಗಳೂರು ಸಾಗಣೆಗಾಗುವಾಗ ಓರ್ವ ಸದಸ್ಯ – ಪ್ರವೀಣ್, ತನ್ನ ಒಂದೂವರೆ ಲಕ್ಷದ ಸೈಕಲ್ಲಿನ ಆಯಕಟ್ಟಿನ ಭಾಗಗಳಿಗೆ ದಪ್ಪದ ಫೋಮ್, ಅಂಟುಪಟ್ಟಿ ಎಲ್ಲ ಬಳಸಿ ಹೆಚ್ಚಿನ ಬಂದೋಬಸ್ತು ಮಾಡಿದ್ದರು. ನನಗಂತೂ ಅಲ್ಲಿ, ಸದ್ಯ ರದ್ಧತಿಯ ಅಂಚಿನಲ್ಲಿರುವ ಕಂಬಳ ಮತ್ತು ಅದರ ಕೋಣಗಳ ಯಜಮಾನರ ಪ್ರೀತಿ ಕಾಣುತ್ತಿತ್ತು!)
ಬಸ್ಸು ಹೊರಟದ್ದೇ ಬಹುತೇಕ ಮಂದಿ ನಿದ್ರೆ, ಬಳಲಿಕೆಗಳಿಗೆ ಶರಣಾದರು. ತಪ್ಪಲ್ಲ, ಆದರೆ ಮಹಾಯಾನದ ಅಂಶವಾದ ಘಾಟಿ ವೀಕ್ಷಣೆಯೂ ನನ್ನ ಲೆಕ್ಕದಲ್ಲಿ ಒಂದು ವ್ರತ. ಚಾರ್ಮಾಡಿವಲಯವನ್ನು ಪೂರ್ವಸಜ್ಜುಗೊಳಿಸದೇ ರಿಪೇರಿಗೆಂದು ಶಿರಾಡಿ ಮುಚ್ಚಿದವರ ಬುದ್ಧಿವಂತಿಕೆ, ತತ್ಪರಿಣಾಮವಾಗಿ ಏರ್ಪಟ್ಟ ಗೊಂದಲ, ಅವಸರದ ಅಪರಿಪೂರ್ಣ ಪರಿಹಾರ ಕ್ರಮಗಳೆಲ್ಲ ಅನಾವರಣಗೊಳ್ಳುತ್ತಲೇ ಇದ್ದುವು. ಆದರೆ ಮಾರ್ಗಕ್ಕೇ ಸಂಬಂಧಿಸಿದಂತೆ ಒಂದು ಸಾರ್ವಜನಿಕ ಜಾಗೃತಿಯ ಘನ ಕಾರ್ಯವನ್ನು ಹಮ್ಮಿಕೊಂಡೇ ಹೊರಟ ನಮ್ಮ ತಂಡ ಪೂರಕ ಸಾಕ್ಷಿಗಳನ್ನು ಕಾಣುವ ಕಣ್ಣುಗಳನ್ನು ಮುಚ್ಚಿತ್ತು. ನನಗೆ ಅದನ್ನು ಮೀರಿ, ಅದೇ ಶ್ರೇಣಿಯ ನೆತ್ತಿಯ ಕೊಡೆಕಲ್ಲಿಗೇರಿದ್ದು, ಅದನ್ನುತ್ತರಿಸಿ ಬಿದಿರುತಳ ಹಾದದ್ದು, ಮತ್ತಾಚಿನ ದುರ್ಗದಹಳ್ಳದ ಆಳಕ್ಕೆ ಜಾರಿದ್ದು, ಕತ್ತಲಲ್ಲಿ ಶಿಬಿರಹೂಡಿದ್ದು, ಆಘಾತ ಸುಧಾರಿಕೆಗೆ ದಿನವೆಲ್ಲಾ ವಿಹರಿಸಿದ್ದು, ಹಳ್ಳ ಅನುಸರಿಸಿ ಚಾರ್ಮಾಡಿ ಹಳ್ಳಿಯಲ್ಲಿ ಬೆಳಕು ಕಂಡದ್ದು ಹೀಗೆ ಇನ್ನೂ ಹೆಚ್ಚಿಗೆ ಹೇಳುವುದಿತ್ತು. ಆದರೆ ಸೈಕಲ್ಲೇ ಸಾಹಸವೆಂದು ಭ್ರಮಿಸಿದ್ದ ತಂಡದ ಕಿವಿಗಳು ಅನ್ಯ ಸಾಧ್ಯತೆಗೆ ಕಿವುಡಾಗಿದ್ದುವು. ನಮ್ಮ ಬಸ್ಸು ಅಣ್ಣಪ್ಪನ ಗುಡಿಯ ಬಳಿ ಆರತಿ ತಟ್ಟೆಯ ದ್ರೋಹದಲ್ಲಿ ವಿಳಂಬಿಸಿದ್ದಕ್ಕೆ, ಸಾರ್ವಜನಿಕ ಹಣದ ಅಪಾಪೋಲು ಎಂದೇ ಕುಖ್ಯಾತವಾದ ಮಲಯಮಾರುತದ ಪ್ರವೇಶದ್ವಾರವೇ ಮುಚ್ಚಿಕೊಂಡಿದ್ದದ್ದಕ್ಕೆ, ಕೊಟ್ಟಿಗೆಹಾರದಲ್ಲೇ ಘಟ್ಟದಾರಿ ಮುಗಿದದ್ದಕ್ಕೆ, ಬಣಕಲ್ಲು ಕಳೆದು ಮೂಡಿಗೆರೆಗೂ ಮೊದಲೇ ಸಿಗುವ ಹ್ಯಾಂಡ್ ಪೋಸ್ಟಿನಲ್ಲಿ ಬೇಲೂರಿನತ್ತ ಕವಲಿದ್ದಕ್ಕೆಲ್ಲ ಸ್ಪಂದಿಸಬೇಕಾದ ಜೀವಗಳು ಸೈಕಲ್ ಮೆಟ್ಟುವುದೊಂದೇ ಪರಬ್ರಹ್ಮ ಎಂಬಂತೆ ಜಡವಾಗಿದ್ದುವು. ಇವೆಲ್ಲ ಬೇಸರದ ನುಡಿಗಳಲ್ಲ, ಪಶ್ಚಾತ್ ಚಿಂತನೆಯ ಮಾತುಗಳು ಮಾತ್ರ. ಅದನ್ನು ಸ್ಪಷ್ಟಪಡಿಸಲು ನಮ್ಮ ಮಹಾಯಾನವನ್ನೇ ಉದಾಹರಿಸಿ ತುಸು ಹೆಚ್ಚಿನ ವಿವರಣೆ ಕೊಡುತ್ತೇನೆ.
ಮಹಾಯಾನದ ಲಕ್ಷ್ಯ – ಸೈಕಲ್ಲನ್ನು ಸಾರ್ವಜನಿಕ ನಿತ್ಯೋಪಯೋಗಿಯಾಗಿ ಪುನಃಸ್ಥಾಪಿಸುವುದು, ಸರಿಯಾಗಿಯೇ ಇತ್ತು. ಆದರೆ ನಮ್ಮ ತಂಡದ ಬಹುತೇಕ ಮಂದಿ ಸೈಕಲ್ಲನ್ನು ಕ್ರೀಡೆಯ ಮಟ್ಟದಲ್ಲಷ್ಟೇ ಕಾಣಬಲ್ಲವರಾಗಿದ್ದರು. ಕ್ರೀಡೆ ತಪ್ಪಲ್ಲ. ಅದರ ಅಭ್ಯಾಸ ಪಥದಲ್ಲಿ ಶಕ್ತಿ ಯುಕ್ತಿಗಳ ಪ್ರಯೋಗ, ವಿರಾಮದಲ್ಲಿ ಪರಸ್ಪರ ವಿಚಾರ ವಿನಿಮಯ, ಅಂತಿಮವಾಗಿ ಸ್ಪರ್ಧೆ ಎಲ್ಲ ಇದ್ದದ್ದೇ. ಆದರೆ ಕ್ರೀಡೆಯೂ ಸೇರಿದಂತೆ ಸೈಕಲ್ಲಿನ ಸಾಮಾನ್ಯ ಬಳಕೆಗೆ ತಕ್ಕ ಪರಿಸರ ನಿರ್ಮಾಣ ನಮ್ಮ ಮಹಾಯಾನದ ಉದ್ದೇಶ. ಮಹಾಯಾನ ಸ್ಪರ್ಧೆಯಲ್ಲ. ಸಹಜವಾಗಿ ಸವಾರಿ ಪೂರೈಸುವಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಒದಗುವಂತಿರಬೇಕು ಮತ್ತೆ ಸಾಧನೆಯಲ್ಲಿ ಎಲ್ಲರದೂ ಸಮಪಾಲು. ಈ ವಿಚಾರ ತಿಳಿಗೊಳಿಸಿಕೊಳ್ಳದೇ ತಂಡ ಮಂಗಳೂರು ಬಿಟ್ಟಿತ್ತು. ವಾಸ್ತವವಾಗಿ ಆಗ ತಂಡದ ನಿಜ ಸಂಖ್ಯೆ ಅಥವಾ ಎಲ್ಲ ಭಾಗಿಗಳ ಆವಶ್ಯಕ ವೈಯಕ್ತಿಕ ವಿವರಗಳ ಒಂದು ಪಟ್ಟಿಯೇ ಯಾರಲ್ಲು ಇರಲಿಲ್ಲ. ಬಂದವರಲ್ಲಿ ಯಾರಿಗೆ ಯಾರೂ ಜವಾಬ್ದಾರರಲ್ಲವೆಂಬಂತೆ ವೇಗಿ, ಮಂದಗಾಮಿ, ನಿಧಾನಿ ಎಂಬ ಮೂರು ವರ್ಗಗಳು ರೂಪುಗೊಂಡಿತು. ಜೋಡುಮಾರ್ಗದ ಮೊದಲ ವಿರಾಮತಾಣಕ್ಕಾಗುವಾಗ ತಂಡದ ನಿಜ ಸದಸ್ಯ ಸಂಖ್ಯೆ ಅಂದಾಜಿನ ಪಟ್ಟಿಯಲ್ಲಿದ್ದಂತೆ ೨೩ ಅಲ್ಲ, ಕೇವಲ ೧೮ ಎನ್ನುವುದು ಸ್ಪಷ್ಟವಾದದ್ದು! ಕೆಲವು ಹೆಸರಿಗೆ ಬದಲಿ ಜನ ಬಂದಿದ್ದರು, ಹೆಸರಿಸಿದ್ದ ಇನ್ನು ಕೆಲವರು ಬಂದೇ ಇರಲಿಲ್ಲ. ಮಾರ್ಗಕ್ರಮಣದಲ್ಲಿ ಸೋತೋ ಅವಘಡಕ್ಕೀಡಾಗಿಯೋ ಕಾಣಿಸಿದಲ್ಲಿ ಸಹಾಯಕ್ಕೊದಗಲು ಅಥವಾ ತುಂಬಿಕೊಳ್ಳಲು ಕಾರು, ಲಾರಿಯೇನೋ ಇತ್ತು. ಆದರೆ ಒಂಟಿಯಾಗಿ ಸಂಚರಿಸುವಾಗ ದಾರಿ ತಪ್ಪಿದವರ (ಗುರುವಾಯನಕೆರೆಯಲ್ಲಿ ಜಯಪ್ರಸಾದ ಅರಿವಿಲ್ಲದೇ ನಾರಾವಿಯತ್ತ ತಿರುಗಿದ್ದನ್ನು ನಾನೇ ತಪ್ಪಿಸಿದ್ದೆ.), ಅವಘಡ ದೊಡ್ಡದೇ ಆಗಿ (ಅದೃಷ್ಟವಶಾತ್ ಆಗಲಿಲ್ಲ. ಉದಾಹರಣೆಗೆ ದೊಡ್ಡ ಚರಂಡಿ, ಸೇತುವೆ ದಾಟುವಲ್ಲಿ ಹೊಳೆಗೆ ಬಿದ್ದುಹೋಗಿ,) ದಾರಿಯಿಂದ ಪೂರ್ಣ ಕಣ್ಮರೆಯಾಗಿದ್ದರೆ? ಅಂಥ ಸಂದರ್ಭಗಳನ್ನು ಮುಂಗಂಡು, ಅಕ್ಕಪಕ್ಕದಲ್ಲಲ್ಲದಿದ್ದರೂ ಕನಿಷ್ಠ ಕಣ್ಣಳವಿಯಲ್ಲಾದರೂ ಇನ್ನೊಬ್ಬರಿರುವ ಆವಶ್ಯಕತೆ ತುಂಬಾ ಇತ್ತು. ಇದು ಮಹಾಯಾನದ ಅಲಿಖಿತ ಸಂವಿಧಾನವೂ ಆಗಬೇಕಿತ್ತು. ತಂಡದಲ್ಲಿನ ಸೈಕಲ್ ಸಂಘದವರ ಸಂಖ್ಯಾಬಲದಲ್ಲಿ ಅನಿಲ್ ಶೇಟ್ ಸರ್ವನಾಯಕನಾಗಿ ಕಾಣಿಸಿದರೂ ವಾಸ್ತವದಲ್ಲಿ ಸಂಘಟನಾ ಪ್ರತಿನಿಧಿಯ ಸ್ಥಾನದಿಂದ ತಂಡದಲ್ಲೇ ಇದ್ದ ಪ್ರಸನ್ನ ಸಹಜ ನಾಯಕನಾಗಿದ್ದ. ಅನಿಲ್ಲರ ಅನನುಭವ, ಪ್ರಸನ್ನನ ವಿನಯ ಒಟ್ಟಾರೆ ತಂಡಕ್ಕೆ ಸ್ಪಷ್ಟ ಧೋರಣೆಗಳನ್ನು ನಿರ್ಧರಿಸುವಲ್ಲಿ ಸೋತಿತು. ಪ್ರಸನ್ನನಿಗೆ ಜೋಡುಮಾರ್ಗ, ಬೆಳ್ತಂಗಡಿಗಳಲ್ಲೇ ತಂಡದ ವರ್ತನೆ, ಯಾಕೋ ತಪ್ಪುದಾರಿಯಲ್ಲಿದೆ ಎನ್ನುವ ಸೂಚನೆ ಸಿಕ್ಕಿತ್ತು. ಅದು ಕಕ್ಕಿಂಜೆಯಲ್ಲಿ ನಿರ್ಧಾರಾತ್ಮಕ ಮಾತಾಗಿ ಪ್ರಕಟವಾಗಿತ್ತು.
ಮೂರು ನಾಲ್ಕು ಸದಸ್ಯರು ಸೈಕಲ್ ಬಿಟ್ಟು ಬಸ್ಸೇರುವುದನ್ನು ಬಯಸಲಿಲ್ಲ. ಸೈಕಲ್ಲುಗಳನ್ನು ಲಾರಿಗೇರಿಳಿಸುವ ಸಮಯ ಮತ್ತೆ ಅದಕ್ಕೆ ಗೊಂದಲದ ಘಾಟಿಮಾರ್ಗದಲ್ಲಿ ಪಯಣಿಸಲು ತಗಲುವ ಸಮಯಗಳ ಒಳಗೆ, ಆ ಅಂತರವನ್ನು ತಾವು ಸೈಕಲ್ ಸವಾರಿಯಲ್ಲಿ ಪೂರೈಸಲು ಸಮರ್ಥರಿದ್ದೇವೆ ಎಂದೇ ವಾದಿಸಿದರು. (ಕಕ್ಕಿಂಜೆಯಲ್ಲಿ ಸೈಕಲ್ಲುಗಳನ್ನೇರಿಸಿ ಕಟ್ಟಲು ಮತ್ತೆ ಸವಾರಿಗೆ ತೊಡಗುವಲ್ಲಿ ಇಳಿಸಲು ತಲಾ ಸುಮಾರು ಒಂದೊಂದು ಗಂಟೆ ತಗುಲಿದ್ದೂ ಘಾಟಿ ಮಾರ್ಗದ ಅವ್ಯವಸ್ಥೆಯಲ್ಲಿ ಲಾರಿ ಬಸ್ಸಿನ ಪ್ರಯಾಣ ವಿಪರೀತ ವಿಳಂಬಿಸಿದ್ದೂ ನಿಜವೇ.) ಆಗ ಅನಿವಾರ್ಯವಾಗಿ ಪ್ರಸನ್ನ “ತಂಡ ಒಂದು” ಎನ್ನುವುದನ್ನು ಕಂಡುಕೊಂಡ, ಗಟ್ಟಿಯಾಗಿ ಸ್ಥಾಪಿಸಿದ! ಮಹಾಯಾನ ವೈಯಕ್ತಿಕ ಸಾಧನೆಗೆ ಹೊರಟದ್ದಲ್ಲ. “ಎಲ್ಲರಿಗೂ ಎಲ್ಲದಕ್ಕೂ ಸೈಕಲ್” ಎಂಬ ಸಾಮಾಜಿಕ ನ್ಯಾಯದ ಪ್ರದರ್ಶನಕ್ಕೆ ಈ ಮಹಾಯಾನ ಒಂದು ಸಾಧನಾ ಮಾದರಿ. ಇಲ್ಲಿ ಭಾಗಿಗಳು ಒಂದೇ ಲಕ್ಷ್ಯಸಾಧನೆಗೆ ಒಂದು ತಂಡವಾಗಿಯೇ ಕಾಣಿಸಬೇಕು, ಪರಸ್ಪರ ಸಹಕರಿಸಲೇಬೇಕು. ಎಲ್ಲರೂ ಒಳ್ಳೆಯವರೇ ಮತ್ತು ಯಾವುದೇ ದುರುದ್ದೇಶಗಳು ಇದ್ದವರೂ ಅಲ್ಲ. ಈ ಸತ್ಯದ ಅರಿವಾದ ಮೇಲೆ, ವಾದ ಬೆಳೆಸದೆ, ಎಲ್ಲರೂ ಸೈಕಲ್ ಲಾರಿಗೆ ಕೊಟ್ಟು, ಬಸ್ಸಿನಲ್ಲಿ ಪಯಣಿಸಿದರು.
ಯೋಜನೆಯಂತೇ ಹಗಲಿನ ಪಯಣದ ಅವಧಿಯನ್ನು ಲೆಕ್ಕಹಾಕಿ, ಹೊರಟಲ್ಲಿಂದ ಸುಮಾರು ೫೮ ಕಿಮೀ ಅಂತರದಲ್ಲಿ ಅಂದರೆ ಬೇಲೂರಿಗೂ ಸುಮಾರು ಹತ್ತು ಕಿಮೀ ಮೊದಲು ಬಸ್ ಪ್ರಯಾಣ ಮುಗಿಸಿದೆವು. ಕಾಫೀ ತೋಟ ಪರಿಸರದಲ್ಲಿ ಬಸ್ಸಿಳಿದು, ಅದನ್ನು ಬೀಳ್ಕೊಟ್ಟೆವು. ಹಿಂಬಾಸಿದ್ದ ಲಾರಿಯಿಂದ ಸೈಕಲ್ಲಿಳಿಸಿ, ದಿನದ ಎರಡನೇ ಅಥವಾ ಅಂತಿಮ ಹಂತದ ಸವಾರಿ ಶುರು ಮಾಡಿದೆವು. ಕರಾವಳಿಗೆ ಹೋಲಿಸಿದರೆ ಅಂದು ಅಲ್ಲಿನ ವಾತಾವರಣ ತುಂಬ ಪ್ರಶಸ್ತವಾಗಿತ್ತು – ಇಕ್ಕೆಲಗಳ ಮರಗಳ ನೆರಳು, ಬೀಸುತ್ತಿದ್ದ ತಂಗಾಳಿ, ಬಿಳಿಹೊದ್ದು ನಿಂತಂತೆ ಘಮಾಯಿಸುವ ಹೂಬಿಟ್ಟ ಕಾಫಿ, ಹೆಚ್ಚು ಕಡಿಮೆ ನುಣ್ಣನೆ ಮಟ್ಟಸ ದಾರಿ. ಹೆಚ್ಚಿನ ಅನುಕೂಲಕ್ಕೋ ಎನ್ನುವಂತೆ ಮುಂದೆ ಸಂಜೆಯವರೆಗೂ ಆಗಿಂದಾಗ್ಗೆ ಮೋಡದ ಛತ್ರಿಯೂ ಆಗಸದಲ್ಲಿ ವಿಸ್ತರಿಸಿ ನಮ್ಮನ್ನು ಪ್ರೋತ್ಸಾಹಿಸಿತ್ತು. ನಾವು ಬೆಳಗ್ಗಿನ ೭೮ ಕಿಮೀ ಸವಾರಿಯ ಶ್ರಮವನ್ನು ಮರೆತು ಹೊಸತೇ ಉತ್ಸಾಹದಲ್ಲಿ ಪೆಡಲಿದೆವು.
ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಂದ ಟಾಟಾ, ಹಾಯ್ಬಾಯ್ಗಳು, ವಿಚಾರಣೆಗಳು ಉದ್ದಕ್ಕೂ ಬರುತ್ತಿತ್ತು. ನಾನಂತೂ ನಿಯತ ವೇಗದಲ್ಲೇನೂ ಕಡಿತ ಮಾಡಿಕೊಳ್ಳದೆ ಬೀಸು ಪ್ರತಿಕ್ರಿಯೆಗಳನ್ನು ಕೊಡುವುದರಲ್ಲಿ ಸಂತೋಷ ಕಾಣುತ್ತಿದ್ದೆ. ಉಳಿದಂತೆ ಚಿತ್ರಗ್ರಹಣ, ತೋಟ, ಗದ್ದೆ, ಹೊಲಗಳ ವೈಶಿಷ್ಟ್ಯಕ್ಕೊಂದು ನಿಲುಗಡೆಯ ನೋಟ, ಬೇಲೂರು ಶ್ರವಣಬೆಳ್ಗೊಳಗಳಂಥ ವಿಶ್ವಪ್ರಸಿದ್ಧ ತಾಣಕ್ಕೆ ಭೇಟಿಗಳೆಲ್ಲ ಮಹಾಯಾನಕ್ಕೆ ವರ್ಜ್ಯ – ಸಮುದ್ರೋಲ್ಲಂಘನಕ್ಕಿಳಿದ ಹನುಮ ತಿರಸ್ಕರಿಸಿದ ಮೈನಾಕಾತಿಥ್ಯದಂತೆ!
ಮಂಗಳೂರಿನಲ್ಲೇ ಎಲ್ಲರಿಗೂ ತಲಾ ಐದೈದು ಎಲೆಕ್ಟ್ರೋಲೈಟ್ ಪ್ಯಾಕೇಟ್ ಕೊಟ್ಟಿದ್ದರು. ಅದನ್ನು ಸೂಕ್ತ ಪ್ರಮಾಣದಲ್ಲಿ ನೀರಿಗೆ ಬೆರೆಸಿ ಕುಡಿಯುವುದನ್ನು ಬಹುತೇಕ ಮಂದಿ ಒಂದು ಆವಶ್ಯಕತೆಯೆಂದೇ ಭಾವಿಸಿದ್ದರು. (ನಾನು ಕೊನೆಯಲ್ಲಿ ಐದೂ ಪ್ಯಾಕೇಟುಗಳನ್ನು ಹಾಗೇ ಮರಳಿಸಿದ್ದೇನೆ.) ಅದರ ಮೇಲಿನಿಂದ ಇನ್ಯಾವುದೋ ಪೆಟ್ರೋಲ್ ಬಂಕಿನಲ್ಲಿ ಗ್ಲುಕೋಸ್ ಪ್ಯಾಕೇಟ್ ಕೊಟ್ಟರು. ಅದನ್ನೂ ನೀರಿಗೆ ಬೆರೆಸಿಯೋ ಹುಡಿಹುಡಿ ಮುಕ್ಕಿಯೋ ದಿಢೀರ್ ಶಕ್ತಿಯ ಆವಾಹನೆ ನಿರೀಕ್ಷಿಸಿದವರು ಕೆಲವರಿದ್ದರು! ಅದೇನೇ ಇರಲಿ ನೀರಂತೂ ತೀರಾ ಅವಶ್ಯ. ಸೈಕಲ್ಲುಗಳಲ್ಲೆಲ್ಲ ಸಣ್ಣ ನೀರಿನ ಬಾಟಲಿಟ್ಟುಕೊಳ್ಳಲು ವಿಶಿಷ್ಟ ಕ್ಲಿಪ್ಪಿನ ವ್ಯವಸ್ಥೆಯಿದೆ. ಅದರಿಂದ ಯಾರೂ ಸವಾರಿಯಲ್ಲೇ `ಬುಂಡೆ ಎತ್ತಿ ಕುಡುದ್ಬುಟ್ಟೆ’ ಎನಿಸಬಹುದು. ನನ್ನ ಬಾಟಲು ದೊಡ್ಡದು. ಕ್ಲಿಪ್ ತಡೆಯದೆಂದು ಪ್ರತ್ಯೇಕ ಹಗ್ಗದಲ್ಲಿ ಕಟ್ಟಬೇಕಾಗುತ್ತಿತ್ತು. ಸಹಜವಾಗಿ ಸೈಕಲ್ಲಿಳಿಯದೆ ನೀರು ಕುಡಿಯುವುದಾಗುತ್ತಿರಲಿಲ್ಲ. ಇಂಥ ಸಮಸ್ಯೆಗೆ ಪ್ರವೀಣ್ ಪ್ರತ್ಯೇಕ ಪ್ರಾವೀಣ್ಯ ಮೆರೆದಿದ್ದರು. ತುಸು ದೊಡ್ಡದೇ ನೀರಂಡೆಯನ್ನು ಬೆನ್ನಚೀಲದೊಳಗಿರಿಸಿ, ಅದಕ್ಕೊಂದು ಬಳುಕು ಕೊಳವೆ ಸಿಕ್ಕಿಸಿಬಿಟ್ಟಿದ್ದರು. ಅಗತ್ಯಬಿದ್ದಾಗೆಲ್ಲಾ ಬಗಲಲ್ಲೇ ನೇತಿದ್ದ ಕೊಳವೆಯ ಇನ್ನೊಂದು ತುದಿಯನ್ನು ಬಾಯಿಗಿಟ್ಟು ಚೀಪಿಕೊಳ್ಳುತ್ತಿದ್ದರು. ಅವರನ್ನು ನಾನಂತೂ `ಇಂಟ್ರಾವೀನಸ್’ ಎಂದೇ ಗುರುತಿಸಿದ್ದೆ! ಬಹುತೇಕ ಸವಾರರು ಸಣ್ಣಪುಟ್ಟ ಚೀಲವನ್ನು ಒಂದೋ ಸೈಕಲ್ಲಿಗೆ ಇಲ್ಲಾ ತಮ್ಮ ಬೆನ್ನಿಗೇರಿಸಿಕೊಂಡು, ತಮಗೆ ತಿಳಿದಂತೆ ಸಣ್ಣಪುಟ್ಟ ಶಕ್ತಿವರ್ಧಕ ತಿನಿಸುಗಳನ್ನು ಸಂಗ್ರಹಿಸಿದ್ದರು. ಇವೆಲ್ಲ ಸೋಲುವಲ್ಲಿ ಮಹೇಶ್ ಧಾರಾಳ ಒದಗುತ್ತಿದ್ದರು. ಕಾರಿನಲ್ಲಿ ನೀರಿನ ದೊಡ್ಡ ದೊಡ್ಡ ಕ್ಯಾನುಗಳನ್ನಿಟ್ಟುಕೊಂಡಿದ್ದರು. ಅವರು ಕೆಲವೆಡೆ ಕಿತ್ತಳೆ, ಬಾಳೆ ಹಣ್ಣುಗಳನ್ನೂ ಒದಗಿಸಿದ್ದಿತ್ತು. ಸೈಕಲ್ ಸವಾರಿಯಲ್ಲೇ ಇದ್ದ ಪ್ರಸನ್ನನೊಡನೆ ಆಗಿಂದಾಗ್ಗೆ ಚರವಾಣಿ ಸಂಪರ್ಕದಲ್ಲಿದ್ದುಕೊಂಡು ಉಸ್ತುವಾರಿ ಅರ್ಥಪೂರ್ಣವಾಗಿ ನಡೆಯಿತು. ಒಂದೆರಡು ಬಾರಿ ಲೋಕಜ್ಞಾನ ಕಡಿಮೆಯಿರುವ ಸವಾರರು ಅರಿವಿಲ್ಲದೆ ಎಸಗುತ್ತಿದ್ದ ಅವಮಾನವನ್ನು ಮಹೇಶ್ ಅಲಕ್ಷಿಸಿ, ನಗುತ್ತಲೇ ಕೆಲಸ ನಡೆಸುತ್ತಿದ್ದದ್ದಂತೂ ನಿಜಕ್ಕೂ ಶ್ಲಾಘನೀಯ.
ನಾವು ಬೇಲೂರು ತಲಪುವಾಗಲೇ ಊಟಕ್ಕೆ ಸಮಯ ಪ್ರಶಸ್ತವಾಗಿತ್ತು. ಆದರೆ ನಮ್ಮ ನಿಗದಿತ ಊಟ ಹಾಸನದಲ್ಲಿ ಕಾಯುತ್ತಿದ್ದುದರಿಂದ ಎರಡೆರಡು ಮಜ್ಜಿಗೆನೀರು ಕೇಂದ್ರಗಳಲ್ಲಷ್ಟೇ ತೃಪ್ತರಾಗಿ ಹಾಸನದತ್ತ ಚಕ್ರ ಉರುಳಿಸಿದೆವು. ಚಕ್ರ ಎನ್ನುವಾಗ – ವೈದ್ಯಕೀಯ ರಂಗದ ಹಾಸ್ಯ ನೆನಪಾಗುತ್ತದೆ. ಸ್ಪೆಶಲೈಸೇಶನ್ನನ್ನು ಹಗುರ ಮನಸ್ಸಿನಿಂದ “ಎಡಗಾಲು ವೈದ್ಯ, ಬಲಗಾಲು ವೈದ್ಯ” ಎಂದು ಗೇಲಿ ಮಾಡುವುದಿಲ್ಲವೇ? ಹಾಗೇ ಸೈಕಲ್ ಎಷ್ಟು ಸರಳ ಎಂದರೂ ರಚನೆ ಹಾಗೂ ಸೂಕ್ಷ್ಮಗಳಲ್ಲಿ ಅಪಾರ ವೈವಿಧ್ಯವನ್ನು ಕಾಣಿಸುತ್ತದೆ. ಬರಿಯ ಚಕ್ರಗಳ ರಚನೆ, ಗಾತ್ರಗಳ ಜಿಜ್ಞಾಸೆ ಮತ್ತು ಎಲ್ಲಕ್ಕೂ ಯುಕ್ತ ಪೂರೈಕೆ ನೋಡಿದರೆ ಆಶ್ಚರ್ಯವಾಗುತ್ತದೆ. ನನ್ನ ಎಂಟೀಬೀ ಚಕ್ರ (ಸರಳವಾಗಿ ಹೇಳುವುದಿದ್ದರೆ ಪರ್ವತಾರೋಹಿ ಚಕ್ರ) ಶುದ್ಧ ನುಣ್ಣನೆ ಡಾಮರಿನಲ್ಲಿ ಅದೂ ಬಲುದೀರ್ಘವಾದ ಓಟಕ್ಕೆ ಹೇಳಿದ್ದೇ ಅಲ್ಲ. ಇದರ ದಪ್ಪ ಗಾತ್ರದ ಟಯರು, ತನ್ನ ಅಸಂಖ್ಯ ಕಚ್ಚುಗಳಿಂದ ಮಾರ್ಗ ಘರ್ಷಣೆ ಹೆಚ್ಚಿಸಿ ಪ್ರಗತಿ ಕಡಿಮೆ, ಶ್ರಮ ಜಾಸ್ತಿ ಮಾಡಿತ್ತು. ಯಾರದೋ ಸಲಹೆಯ ಮೇರೆಗೆ, ಅದರಲ್ಲೂ ತುಸು ಉತ್ತಮ ಗುಣ ಕಂಡುಕೊಳ್ಳಲು ೩೦-೪೦ರ ಆಸುಪಾಸಿನಲ್ಲಿರುವ ಚಕ್ರದ ಗಾಳಿಯನ್ನು ೫೦ಕ್ಕೇರಿಸಿದ್ದೆ. ಇದು ವೇಗ ಕೊಡುವುದಿರಬಹುದು ಆದರೆ ಜತೆಗೇ ದಾರಿಯ ಸಣ್ಣ ಒಡಕು, ಕಲ್ಲ ಹರಳುಗಳನ್ನೂ ಉತ್ಪ್ರೇಕ್ಷಿಸಿ ಸೈಕಲ್ಲಿಗೂ ನನಗೂ ಸಾಕಷ್ಟು ಆಘಾತವನ್ನೂ ಕೊಡುತ್ತಿತ್ತು. ಮಹಾಯಾನದ ಕೊನೆಯಲ್ಲಿ ಪ್ರಾಸಂಗಿಕವಾಗಿ ರಾಜೇಶ್ ಶೇಟ್ ನನ್ನ ಸೈಕಲ್ಲನ್ನು ಸುಮಾರು ಇಪ್ಪತ್ತೆಂಟು ಕಿಮೀ ಓಡಿಸಿದರು. ಆಗ ಅವರು ತನ್ನ ಮಾಮೂಲೀ ಸಪುರ ಮತ್ತು ನುಣ್ಣನೆ ಚಕ್ರದ ಸವಾರಿ ಸುಖವನ್ನು ಹೋಲಿಸಿಕೊಂಡು “ಸರ್, ನೀವು ಮೊದಲು ನಿಮ್ಮ ಈ ಚಕ್ರ ಬದಲಾಯಿಸಲೇಬೇಕು. ಇದನ್ನಿಟ್ಟುಕೊಂಡು ನಮ್ಮೊಡನೆ ಇಷ್ಟು ದೂರದ ಸವಾರಿಯನ್ನು ನೀವು ನಡೆಸಿದ್ದು ನಿಜಕ್ಕೂ ಗ್ರೇಟ್!” ಅದೇನೇ ಇರಲಿ ಉಳಿದ ಬಹುತೇಕ ಸೈಕಲ್ಲುಗಳು ಸಪುರ ಚಕ್ರದವು, ಸಹಜವಾಗಿ ರಸ್ತೆಯ ಸಣ್ಣಪುಟ್ಟ ದೋಷಗಳಿಗೂ ಸೂಕ್ಷ್ಮ ಸಂವೇದಿಯವು. ಗಾಳಿ ಏರಿಸುವುದು, ಇಳಿಸುವುದು, ಪಂಚೇರ್, ಬಿರಿ ಹೊಂದಾಣಿಕೆ ಮುಂತಾದವೆಲ್ಲಕ್ಕೂ `ಡಾ| ಸಯ್ಯದ್ ಪೀರ್’ ಅಲ್ಲಲ್ಲೇ ಸಮರ್ಥ ಇಲಾಜ್ ಒದಗಿಸುತ್ತಿದ್ದುದರಿಂದ ನಮ್ಮ ಓಟ ನಿರ್ವಿಘ್ನವಾಗಿತ್ತು.
ಸುಮಾರು ಎರಡೂವರೆ ಗಂಟೆಯ ಸುಮಾರಿಗೆ ನಮ್ಮ ದಂಡು ಹಾಸನವನ್ನು ಕೈವಶ ಮಾಡಿಕೊಂಡಿತು. ಆಹಾರಕ್ಕೆ ಬೇಲೂರೇ ಸಾಕಿತ್ತು, ಇದು ಶ್ರಮ ಹೆಚ್ಚಾಯ್ತು, ತುಂಬಾ ತಡವಾಯ್ತು ಎಂಬೆಲ್ಲ ಗೊಣಗುಗಳು ಹೂತುಹೋಗುವಷ್ಟು ಪರಿಷ್ಕಾರ ಆತಿಥ್ಯ ಅಲ್ಲಿ ದೊರೆಯಿತು. ಅಲ್ಲಿನ ಇಂಡಿಯನ್ ಆಯಿಲ್ `ಸಾಮಂತರು’ (ಏಜಂಟರು) ನಮಗೆ ಜ್ಯೂಯೆಲ್ ರಾಕ್ ಎಂಬ ಭರ್ಜರಿ ಹೋಟೆಲಿನಲ್ಲಿ ಸಮೃದ್ಧ ಭೋಜನದ ವ್ಯವಸ್ಥೆ ಮಾಡಿದ್ದರು. ಸಣ್ಣ ಸೂಚನೆ ಕೊಟ್ಟರೆ ಸಾಕು, ರಾತ್ರಿಯೂ ಸೇರಿ, ವಿಶ್ರಮಿಸುವ ವ್ಯವಸ್ಥೆಯನ್ನೂ ಮಾಡಲು ಸಜ್ಜಾಗಿದ್ದರು. ಆದರೆ ಮೂಲ ಯೋಜನೆಯಂತೆ ಮತ್ತೆ ನಲ್ವತ್ತು ಕಿಮೀ ದೂರದ ಚೆನ್ನರಾಯಪಟ್ಟಣದತ್ತ ನಮ್ಮ ಸವಾರಿ ಹೊರಡಲೇ ಬೇಕಿತ್ತು. ವಾಸ್ತವದಲ್ಲಿ ಇಂದು ದೂರ ಅನ್ನಿಸುವ ಅಂತರ ಮಾರಣೇ ದಿನಕ್ಕೆ ನಮಗೆ ಬೆಂಗಳೂರನ್ನು ಅಷ್ಟು ಹತ್ತಿರ ಮಾಡುತ್ತದೆ ಎನ್ನುವ ತಿಳುವಳಿಕೆ ಚೇತೋಹಾರಿಯಾಗಿತ್ತು.
ವಿವಿಧ ಇಲಾಖೆಗಳು, ಮುಖ್ಯವಾಗಿ ಆರೋಗ್ಯ ಸಂಸ್ಥೆಗಳು ಏನೇನೋ ಉದಾತ್ತ ವಿಷಯಗಳನ್ನು ಉಲ್ಲೇಖಿಸಿ ಹೀಗೇ ಸಾರ್ವಜನಿಕ ಪ್ರದರ್ಶನ, ಓಟ ಇಟ್ಟುಕೊಳ್ಳುವುದನ್ನು ಬೇಕಾದ್ದು ನೋಡಿದ್ದೇವೆ. ಅಲ್ಲೆಲ್ಲ ಉಚಿತವಾಗಿ ವಿತರಿಸುವ ಬನಿಯನ್ನು, ಟೋಪಿ, ಭಾಗವಹಿಸುವ ಗಣ್ಯರು ಎಲ್ಲಕ್ಕೂ ಮುಖ್ಯವಾಗಿ ಮಾಧ್ಯಮಗಳ ಹಾಜರಾತಿಯನ್ನು ಪರಿಗಣಿಸಿ ಸೇರುವ ಜನಸಂಖ್ಯೆ ಸಾಮಾನ್ಯವಾಗಿ ಭಾರಿಯೇ ಇರುತ್ತದೆ. ಆದರೆ ನಿಜದ ಕೆಲಸ ಅಥವಾ ಓಟವನ್ನು (ಸೇರುವವರ ಮರ್ಜಿ ನೋಡಿ ಸಣ್ಣದೇ ಇರುತ್ತದೆ) ಪೂರೈಸುವ ಮನೋಸ್ಥಿತಿ (ದೇಹಸ್ಥಿತಿಯೂ ಹೌದು) ಅಂಥ ಗುಂಪಿಗೆ ಕಡಿಮೆಯೇ ಇರುತ್ತದೆ. ಆದರೆ ನಮ್ಮ ಮಹಾಯಾನದ ಸ್ಥಿತಿಯೇ ಬೇರೆ. ಪ್ರಾಯೋಜಕರಿಗೆ ಒಂದು ಕಲಾಪವಷ್ಟೇ ಬೇಕಿತ್ತು. ಆದರದನ್ನು ಬೆಂಗಳೂರಿನ ದೂರಕ್ಕೆ ಲಂಬಿಸುವಲ್ಲಿ ಮತ್ತು ಖಚಿತವಾಗಿ ಪೂರೈಸುವಲ್ಲಿ ಇದ್ದ ಧೈರ್ಯ ಒಂದೇ – ಮಂಗಳೂರು ಸೈಕಲ್ಲಿಗರ ಸಂಘ. ಇವರಿಗೆ ಮತ್ತೆ ನಲ್ವತ್ತು ಕಿಮೀ ಅಂತರ ಸಮಸ್ಯೆಯಾಗಿ ಕಾಣಿಸಲೇ ಇಲ್ಲ. ನಾಲ್ಕೂವರೆಗೆ ಎಲ್ಲರೂ ಚೆನ್ನರಾಯಪಟ್ನ ಚಲೋ – ಹೊರಟಾಗಿತ್ತು.
[ಕ್ಷಮಿಸಿ, ಬೆಂಗಳೂರಿನ ಮಹಾಯಾನ ಮುಂದಿನ ವಾರದ ಕಂತಿನಲ್ಲಿ ಮುಗಿಯಲಿದೆ]
ಮುಂದಿನ ಕಂತಿನ ನಿರೀಕ್ಷೆ ಯಲ್ಲಿದ್ದೇನೆ .
ನಿಮ್ಮ ಮಹಾಯಾನಕ್ಕೆ All the best!
ಮಹಾಯಾನದ ವಿವರಗಳು ಮಂಗಳೂರು ಸುತ್ತ ಚಿಕ್ಕ ಪುಟ್ಟ ಯಾನಗಳ ನೆನಪನ್ನು ಮರುಕಳಿಸಿದವು. ಎಲ್ಲ ಸವಾರರಿಗೆ ಹಾರ್ದಿಕ ಅಭಿನಂದನೆಗಳು
ಹೌದು. ಇದು ಸೈಕಲ್ ಯಾನ. ಬಸ್ ಯಾನವಾದರೆ ಈ ಕಂತಿನಲ್ಲೇ ಮುಗಿಯುತ್ತಿತ್ತು! ಹಾಗಾಗಿ ಸಮಂಜಸವಾಗಿದೆ.
ನಿಮ್ಮ ಮಂಗಳೂರು-ಬೆಂಗಳೂರು ಸೈಕಲ್ ಯಾನ ಓದಿ ಖುಶಿ ಆಯಿತು. ಮುಂದಿನ ಕಂತಿಗಾಗಿ ಕಾತರದಿಂದ ಕಾಯುತ್ತಲಿರುವೆ. ಸದ್ಯ May ತಿಂಗಳಿನಲ್ಲಿ ಫ಼್ರಾನ್ಸನ ಹಳ್ಳಿವಲಯಗಳಲ್ಲಿ ೩-೪ ದಿನಗಳ ಸೈಕಲ್ ಯಾನ ಮಾಡುವ ತಯಾರಿಯಲ್ಲಿದ್ದೇವೆ.
Kannige kattuva hage[kan kat alla] bareididdiri sir.May be the nil experience of ours in trekking is the reason to be deaf to The Charmadi [ against “Mountain “experience of yours in trekking]But for a few, apprehension in finishing the days cycling was may be the sole reason for going fast than the competition. You have rightly said sir since it was a team effort we should have cycled together encouraging,supporting each other or at least a group of 5-6 lead by an experienced one.But for all of us, it was like Narada carrying filled pot of oil….Thank you sir for your keen observation, candid photos & nice videos….awaiting for the part 2..
ಯಾಕೆ ಇನ್ನೂ ಸೈಕಲ್ ಮಹಾಯಾನ ಕಥಾನಕ ಬಂದಿಲ್ಲ ಎಂದು ಯೋಚಿಸುತ್ತಿದ್ದೆ. ಅಂತೂ ಬಂತು 🙂
ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಮಹಾಯಾನದ ಬಗ್ಗೆ ವಿಮರ್ಶಾತ್ಮಕ ನೋಟ ಬೀರಿದ್ದು ಪ್ಲಸ್ ಪಾಯಿಂಟ್. ಮುಂಜಾನೆ ಮಂಗಳೂರಿನಿಂದ ಹೊರಟು ಹಾಸನ ಸೇರುವ ವರೆಗೂ ನಿಮ್ಮ ಪದಪೋಣಿಸುವಿಕೆಯಿಂದ ಸೈಕಲ್ ಪಟುಗಳ ಅನುಭವವೇ ನಮಗೂ ಆಗಿದ್ದು ನಿಜ.
Odi bahala santhosha vayithu….Mahayanakke All the best..
GOOD….. NATURAL PHOTOS ALL THE BEST