ಅಧ್ಯಾಯ ಐವತ್ತೊಂದು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಐವತ್ತ್ಮೂರನೇ ಕಂತು

ಈ ಮೊದಲು ಹೇಳಿದ ಸಂಗತಿಗಳು ನಡೆದ ಮರುದಿನ ಬೆಳಗ್ಗೆ ಮಿ. ಪೆಗಟಿ ನಮ್ಮ ಮನೆಗೆ ಬಂದರು. ಈ ದಿನಗಳಲ್ಲಿ ಅತ್ತೆ ಡೋರಾಳ ಶುಶ್ರೂಷೆಗಾಗಿ, ಹೆಚ್ಚಾಗಿ, ನನ್ನ ಮನೆಯಲ್ಲೇ ಇರುತ್ತಿದ್ದಳು. ಮಿ. ಪೆಗಟಿ ಬಂದಾಗ ಅತ್ತೆ ವಿಶ್ರಾಂತಿಗಾಗಿ ನಮ್ಮ ಹೂವಿನ ತೋಟದಲ್ಲಿ ತಿರುಗಾಡುತ್ತಿದ್ದಳು. ಎಮಿಲಿ ಸಿಕ್ಕಿದ ವರ್ತಮಾನವನ್ನೆಲ್ಲ ನಾನು ಹಿಂದಿನ ರಾತ್ರಿಯೇ ಅತ್ತೆಗೆ ತಿಳಿಸಿದ್ದುದರಿಂದ, ಅತ್ತೆಗೂ ನನಗೂ ಎಮಿಲಿಯ ಮುಖದಿಂದಲೇ ಮಿ. ಪೆಗಟಿಯು ತಿಳಿದಿರಬಹುದಾದ ವಿಷಯಗಳನ್ನು ತಿಳಿಯಲು ತುಂಬಾ ಕುತೂಹಲವಿತ್ತು. ಮಿ. ಪೆಗಟಿಗೂ ನಮ್ಮೊಡನೆ ಮಾತಾಡಿ ಅವರ ಮುಂದಿನ ಕೆಲವು ಕಾರ್ಯಗಳನ್ನು ಗೊತ್ತು ಮಾಡಿಕೊಳ್ಳಬೇಕಾಗಿದ್ದುದರಿಂದ, ಅವರು ನಮ್ಮೊಡನೆ ಮಾತಾಡಲು ತಯಾರಾಗಿದ್ದರು. ಹಾಗಾಗಿ ಎಮಿಲಿಯ ವರ್ತಮಾನಗಳನ್ನು ತಿಳಿಯ ಬಯಸಿದೆವು. ಮಿ. ಪೆಗಟಿಯು ಹೇಳತೊಡಗಿದರು. ಲಿಟ್ಮರನು ತಿಳಿಸಿದ್ದ ವರ್ತಮಾನ ಬಹು ಅಂಶವೆಲ್ಲ ಸರಿಯೆಂದು ಅವರು ಒಪ್ಪಿದರು. ಲಿಟ್ಮರನಿಗೆ ಗೊತ್ತಿಲ್ಲದ ವಿಷಯವನ್ನು ಮಾತ್ರ ಅವರು ತಿಳಿಸಿದರು. ಎಮಿಲಿ ಲಿಟ್ಮರನ ಬಂಧನದಿಂದ ಕಿಟಕಿಗಾಗಿ ಓಡಿಹೋದವಳು ಎಲ್ಲೆಲ್ಲೋ ಸುತ್ತಿ, ಕೊನೆಗೆ ಬೆಸ್ತರ ಬೀದಿ ಒಂದಕ್ಕೆ ತಲುಪಿದಳಂತೆ. ಅವಳು ಓಡುವಾಗಲೆಲ್ಲ ಸಮುದ್ರದ ದಿಕ್ಕೇ ಹಿಡಿದು, ಬೆಸ್ತರ ಬಿಡಾರಗಳನ್ನು ಹುಡುಕುತ್ತಾ ಓಡಿದ್ದರಿಂದ, ಹೀಗೆ ಬೆಸ್ತರ ಬಿಡಾರಗಳಿದ್ದಲ್ಲಿಗೆ ಅವಳು ತಲುಪಿದಳು. ಆದರೆ ಅಲ್ಲಿಗೆ ತಲುಪುವಾಗ ಅವಳು ಸೋತು, ಅವರ ಗುಡಿಸಿಲ ಬಳಿ ಮೂರ್ಛಿತಳಾಗಿಯೇ ಬಿದ್ದಳಂತೆ. ಅನಂತರ ಅವಳಿಗೆ ಪ್ರಜ್ಞೆ ಬರುವಾಗ ಅವಳು ಬೆಸ್ತರ ಶುಶ್ರೂಷೆಯಲ್ಲಿದ್ದಳಂತೆ. ಆಗಲೇ ಅವಳಿಗೆ ಬಹುವಾದ ಜ್ವರ ಬಂದು ಹುಚ್ಚೇ ಹಿಡಿದಿತ್ತಂತೆ. ಹೀಗೆ ಹುಚ್ಚಿನಲ್ಲಿ ಎಷ್ಟು ದಿನಗಳು ಕಳೆದವೆಂದು ಅವಳಿಂದ ಗೊತ್ತುಮಾಡಲು ಆಗಲಿಲ್ಲ. ಹುಚ್ಚು ಬಿಟ್ಟು, ಹುಷಾರಾಗುವಾಗ ಅವಳು ಇಂಗ್ಲೆಂಡು ಬಿಟ್ಟನಂತರ ಕಲಿತಿದ್ದ ಭಾಷೆಗಳೆಲ್ಲ ಮರೆತು ಹೋಗಿತ್ತು. ಬೆಸ್ತರ ಮನೆಗಳಲ್ಲಿ ಕೆಲ ಕಾಲವಿದ್ದು, ಅಲ್ಲಿಂದ ಹೇಗೋ ಒಬ್ಬ ಕುಲೀನ ಗೃಹಸ್ಥರ ಮನೆಗೆ ಹೋಗಿ ಸೇರಿದಳು. ಎಮಿಲಿಯ ಗುಣ, ನಡತೆ, ರೂಪ, ಪ್ರಾಯಗಳನ್ನೆಲ್ಲ ಕಂಡು ಆ ಮನೆಯವರು ಅವಳನ್ನು ತಮ್ಮ ಮಕ್ಕಳಂತೆ ಸಾಕಿದರು. ಈ ಸಮಯದಲ್ಲಿ ಪುನಃ ಅವಳಿಗೆ ಆರೋಗ್ಯ ಕೆಟ್ಟು ಹುಚ್ಚು ಹಿಡಿಯಿತು. ಈ ಹುಚ್ಚಿನಲ್ಲಿ ಎಷ್ಟು ದಿನ ಕಳೆದಳೆಂಬ ಜ್ಞಾನವೂ ಅವಳಿಗಿರಲಿಲ್ಲ. ಆದರೆ ಅದರಿಂದಲೂ ಅವಳು ಪಾರಾಗಿ, ಸುಖಹೊಂದಿದಳು.

ಈ ಸರ್ತಿ ಅವಳು ಹುಚ್ಚಿನಿಂದೆದ್ದದ್ದು – ಮಿ. ಪೆಗಟಿಯು ಹೇಳಿದಂತೆಯೇ ಹೇಳುವುದಾದರೆ, ಒಂದು ಆಶ್ಚರ್ಯದ ಕ್ರಮದಿಂದಾಗಿತ್ತು. ನೀಲ ವರ್ಣದ ಸಮುದ್ರವು ಪ್ರಶಾಂತವಾಗಿದ್ದು, ಸೂರ್ಯನ ಸಂಧ್ಯಾಕಿರಣಗಳು ತಂಪಾಗುತ್ತಾ ಬಂದು, ಸಮುದ್ರದ ಮೇಲಿನ ತಂಪಿನ ಗಾಳಿ ಎಮಿಲಿಯ ಮುಖದ ಮೇಲೆ ಬಿದ್ದಾಗ ಅವಳಿಗೆ ಹಠಾತ್ತಾಗಿ ಪ್ರಜ್ಞೆ ಬಂದಿತು. ಆಗ ಅವಳು ತನ್ನ ಯಾರ್ಮತ್ತಿನ ಮನೆಯಲ್ಲೇ ತಾನು ಇದ್ದದ್ದಾಗಿ ನಂಬುತ್ತಾ ತನ್ನ ಊರನ್ನು ಗುರುತಿಸಲೂ ತನ್ನ ಕಡೆಯವರನ್ನು ಹುಡುಕಲೂ ಮಲಗಿದ್ದ ಸ್ಥಳದಿಂದ ಹೊರಗೆ ನೋಡಿದಾಗ ದ್ರಾಕ್ಷಿ ಬಳ್ಳಿಗಳೂ ಹಸುರಾದ ಗುಡ್ಡೆಗಳೂ ತೋಪುಗಳು ಅಪರಿಚಿತ ಜನರೂ ಮಾತ್ರ ಕಾಣ ಸಿಕ್ಕಿ ಅವಳು ಅಳತೊಡಗಿದಳು. ಈ ಸರ್ತಿ ರೋಗದಿಂದ ಮೇಲೆದ್ದಾಗ ಹಿಂದೆ ಮರೆತುಹೋಗಿದ್ದ ಭಾಷೆಗಳೆಲ್ಲವೂ ಜ್ಞಾಪಕಕ್ಕೆ ಬಂದವು. ಎಮಿಲಿಯು ಖಾಯಿಲೆಯಿಂದೆದ್ದನಂತರ ತನ್ನ ಊರನ್ನೂ ತನ್ನ ಕಡೆಯ ಜನರನ್ನೂ ಬಯಸಿ, ಹಂಬಲಿಸುವುದನ್ನು ಕಂಡು ಆವರೆಗಿನ ರಕ್ಷಕನು ಕನಿಕರಪಟ್ಟು, ಅವಳನ್ನು ಪೇರಿಸ್ಸಿನವರೆಗೆ ತನ್ನ ಏರ್ಪಾಡುಗಳಿಂದ ಕಳುಹಿಸಿ ಅಲ್ಲಿ ಒಬ್ಬ ಶ್ರೀಮಂತ ಮತ್ತು ಕುಲೀನ ಗೃಹಿಣಿಯ ಸಹಾಯಕಳಾಗಿರುವಂತೆ ಕೆಲಸ ಮಾಡಿಕೊಟ್ಟನು. ಆ ಗೃಹಿಣಿ ತಾತ್ಕಾಲಿಕವಾಗಿ ಪೇರಿಸ್ಸಿನ ಹೋಟೆಲಿನಲ್ಲಿ ಬಿಡಾರ ಬಿಟ್ಟಿದ್ದುದರಿಂದ, ಎಮಿಲಿಯು ಅದೇ ಹೋಟೆಲಿನಲ್ಲಿ ತನ್ನ ಯಜಮಾನಿಯ ಜತೆಯಲ್ಲಿರುವಾಗಲೇ ಲಿಟ್ಮರನನ್ನು ಅದೇ ಹೋಟೆಲಿನಲ್ಲಿ ಕಂಡಳು.

ಲಿಟ್ಮರನನ್ನು ಕಂಡು ಎಮಿಲಿ ಹೆದರಿದಳು. ಅವಳ ಕೈಯ್ಯಲ್ಲಿದ್ದ ಸ್ವಲ್ಪ ಹಣದಿಂದ ಅವಳು, ಯಜಮಾನಿಗೆ ಹೇಳದೆ, ಗುಟ್ಟಾಗಿ ಡೋವರಿಗೆ ಬಂದು, ಡೋವರಿನಿಂದ ಲಂಡನ್ನಿಗೆ ಅನಂತರ ಬಂದಳು. ಎಮಿಲಿಗೆ ಬಾಲ್ಯದಲ್ಲಿ ಹೊಲಿಗೆ ಕೆಲಸ ಕಲಿಸಿದ್ದುದರಿಂದ ಲಂಡನ್ನಿನಲ್ಲಿ ಇವಳು ಒಬ್ಬ ಹೆಂಗುಸು ದರ್ಜಿಯ ಕೈಕೆಳಗೆ ಸಂಬಳಕ್ಕೆ ಹೊಲಿಗೆ ಕೆಲಸ ಮಾಡುತ್ತಾ ದಿನ ಕಳೆಯುತ್ತಿದ್ದಳು. ಇಲ್ಲಿ ಅವಳು ಸ್ವಲ್ಪ ಸುಖವಾಗಿದ್ದಳು. ಆದರೂ ಸತತವೂ ಅವಳಿಗೆ ತನ್ನ ಕಡೆಯವರ ನೆನಪೊಂದು ದುಃಖಕರವಾಗಿ ಬಾಧಿಸುತ್ತಲೇ ಇದ್ದು ಮನಸ್ಸಿನ ನೆಮ್ಮದಿಯನ್ನು ನಾಶಪಡಿಸುತ್ತಿತ್ತು. ಎಮಿಲಿಯು ಹೀಗೆ ದರ್ಜಿಯ ಅಂಗಡಿಯಲ್ಲಿ ಕೆಲಸಕ್ಕೆ ಇದ್ದಾಗಲೇ ಮಾರ್ಥಾಳು ಅವಳನ್ನು ಕಂಡು ಹಿಡಿದು ನಮಗೆ ತಿಳಿಸಿದ್ದಾಗಿದ್ದಿತು.

ಈ ವರದಿಯನ್ನು ಮಿ. ಪೆಗಟಿಯ ಮುಖದಿಂದಲೇ ಕೇಳಿದ್ದಿದ್ದರೆ ಆಗುವಷ್ಟರ ಸ್ಪಷ್ಟತೆ, ಸಂದರ್ಭಗಳಿಗೆ ತಕ್ಕಂಥ ಭಾವನೆ, ನನ್ನ ಈ ನಿರೂಪಣೆಯಲ್ಲಿ ಆಗಲಾರದು. ಎಮಿಲಿಯ ದುಃಖಗಳನ್ನು ಹೇಳುತ್ತಿದ್ದಾಗ ಅವರಿಗೆ ಕಣ್ಣೀರೇ ಬರುತ್ತಿತ್ತು. ಆ ಶ್ರೀಮಂತ ಗೃಹಸ್ಥರ ಮನೆಯಲ್ಲಿನ ಅವಳ ಜೀವನವನ್ನು ವರ್ಣಿಸುವಾಗ ಎಮಿಲಿಯ ಸಂತೋಷವನ್ನು ಊಹಿಸಿ, ಆ ಗೃಹಸ್ಥರ ಕರುಣಾಮಯ ಪೋಷಣೆಗಾಗಿ ಅವರು ಆನಂದಬಾಷ್ಪವನ್ನು ಸುರಿಸುತ್ತಿದ್ದರು. ಜನರ ಪ್ರೀತಿ, ಆದರಗಳನ್ನು ಆಕರ್ಷಿಸುತ್ತಿದ್ದ ಎಮಿಲಿಯ ಈ ಭಾಗದ ಜೀವನವೃತ್ತಾಂತವನ್ನು ಹೇಳುವಾಗ ಅವರ ಮುಖ, ಕೈಕರಣ, ಸ್ವರ ಎಲ್ಲವೂ ಭಾಷೆಗೆ ರೂಪಕೊಟ್ಟು, ಭಾವನೆಗಳನ್ನು ಸ್ಪಷ್ಟಗೊಳಿಸುತ್ತಿದ್ದುವು. ಮಿ. ಪೆಗಟಿ ಮಾತು ನಿಲ್ಲಿಸಿದಾಗ ಅತ್ತೆ ಕೇಳಿದಳು –
“ಹಾಗಾದರೆ,ಮಿ. ಪೆಗಟಿ, ನಿಮ್ಮ ಮುಂದಿನ ಮಾರ್ಗವೋ ವ್ಯವಸ್ಥೆಗಳೋ ಇಂಥವು ಎಂದು ನಿಶ್ಚೈಸಲಾಗಿದೆಯೇನು?”
“ಆಗಿದೆ, ನಾವು ಊರು ಬಿಟ್ಟು ಹೋಗುತ್ತೇವೆ. ಎಮಿಲಿಯನ್ನು ಜನರು ಅಪಹಾಸ್ಯ ಮಾಡದಿರುವ ಪ್ರದೇಶಗಳಿಗೆ ಹೋಗುತ್ತೇವೆ. ಈ ಊರಿನಿಂದ ದೂರವಿರುವ, ಯೋಗ್ಯ ಸ್ಥಳಗಳು ಬೇಕಾದಷ್ಟಿವೆಯೆಂದು ಎಮಿಲಿಯೂ ನಾವು ಮಾತಾಡಿಕೊಂಡು ಆಸ್ಟ್ರೇಲಿಯಕ್ಕೆ ಹೋಗುವುದೆಂದು ನಿಶ್ಚಯವಾಗಿದೆ” ಎಂದಂದರು ಮಿ. ಪೆಗಟಿ.
“ಇಂಥ ಸಮಯದಲ್ಲೇ ಎಂದು ನಿಶ್ಚೈಸಿರುವಿರೇನು?”
“ಸಾಧಾರಣ ಆರು ವಾರ ಅಥವಾ ಎರಡು ತಿಂಗಳ ಒಳಗೆ ಇಲ್ಲಿಂದ ಆಸ್ಟ್ರೇಲಿಯಕ್ಕೆ ಒಂದು ಹಡಗು ಹೋಗುವುದಿದೆಯೆಂದು ಬಂದರಿನಲ್ಲಿ ವಿಚಾರಿಸಿ ತಿಳಿದಿದ್ದೇನೆ. ಅದರಲ್ಲಿ ಹೋಗಬೇಕೆಂದಿದ್ದೇನೆ.”
“ಯಾರೆಲ್ಲಾ ಎಂಬುದು?”
“ಈಗಿನ ಆಲೋಚನೆ ಪ್ರಕಾರ ಎಮಿಲಿಯೂ ನಾನು ಮಾತ್ರ. ಮಿಸೆಸ್ ಗಮ್ಮಿಜ್ಜಳು ಒಬ್ಬಳು ಮಾತ್ರ ಒಂದು ಪ್ರತ್ಯೇಕ ಮನೆಯಲ್ಲಿ ಯಾರ್ಮತ್ತಿನಲ್ಲಿ ಇರುವುದಾಗಿಯೂ ಅವಳ ಖರ್ಚಿಗೆ ತಕ್ಕಷ್ಟು ಬೇಂಕಿನಲ್ಲಿ ಠೇವಣಾತಿ ಕಟ್ಟಿಡುವುದೆಂದೂ ನಿಶ್ಚೈಸಿದ್ದೇನೆ. ಮತ್ತೆ ಹೇಮನೂ ನನ್ನ ತಂಗಿ ಪೆಗಟಿಯೂ ಜತೆಯಲ್ಲೇ ಇರುತ್ತಾರೆ” ಎಂದು ಮಿ. ಪೆಗಟಿ ತಿಳಿಸಿ, ಒಂದು ಗುಟ್ಟಿನ ಸಂಗತಿಯನ್ನು ತಿಳಿಸಿದರು.

ಎಮಿಲಿಯು ಸ್ವಲ್ಪ ಶಾಂತವಾದನಂತರ ಅವಳು ಸ್ಟೀಯರ್ಫೋರ್ತನಿಂದ ಪಡೆದಿದ್ದ ಹಣ ಎಷ್ಟೆಂದು ವಿಚಾರಿಸಿ ತಿಳಿದು, ಆ ಹಣವೆನೆಲ್ಲ ಸ್ಟೀಯರ್ಫೋರ್ತನ ತಾಯಿಗೆ ಕಳುಹಿಸಬೇಕೆಂದು ನಿರ್ಧರಿಸಿದ್ದರು. ಇಷ್ಟು ಮಾಡದೆ ಅವರಿಗೆ ಎಷ್ಟಕ್ಕು ಸಮಾಧಾನ ಸಿಕ್ಕದು ಎಂದು ನಮ್ಮ ಹತ್ತಿರ ಹೇಳಿದರು. ಅವರ ಈ ಎಲ್ಲಾ ವ್ಯವಸ್ಥೆಗಳೂ ನ್ಯಾಯವಾದವುಗಳು ಎಂದು ನಾವು ಒಪ್ಪಿದೆವು.

ಮಿ. ಪೆಗಟಿಯು ಮರುದಿನವೇ ಯಾರ್ಮತ್ತಿಗೆ ಹೋಗಿ ಅಲ್ಲಿನ ಕೆಲಸಗಳನ್ನೆಲ್ಲಾ ಮಾಡಿ ಪೂರೈಸಿ, ಯಾರ್ಮತ್ತನ್ನೂ ಅಲ್ಲಿನ ಜನರನ್ನೂ ತಾನು ಆಖೈರಾಗಿ ನೋಡಿ ಬರುವುದೆಂದು ನಿಶ್ಚೈಸಿದರು. ಅವರ ಜತೆಯಲ್ಲಿ ನಾನೂ ಹೋದರೆ ಅವರಿಗೆ ತುಂಬಾ ಉಪಕಾರವಾಗುತ್ತದೆಂದು ನಾನೂ ಹೋಗುವಂತೆ ಕೇಳಿಕೊಂಡರು. ಮನೆಯಲ್ಲಿ ಡೋರಾಳು ಸ್ವಲ್ಪ ಸುಖಹೊಂದುತ್ತಿದ್ದುದರಿಂದ ನಾನು ಹೋಗಲೊಪ್ಪಿದೆನು.

ಮರುದಿನ ಬೆಳಿಗ್ಗೆ ನಾವು ಯಾರ್ಮತ್ತಿಗೆ ಹೋದೆವು. ಮಿ. ಪೆಗಟಿ ಅವರ ತಂಗಿ, ಹೇಮ್ ಮೊದಲಾದವರೊಡನೆ ತಮ್ಮ ಸಂಸಾರದ ಅಂತರಂಗದ ವಿಷಯಗಳನ್ನು ಮಾತಾಡುವುದಿದ್ದರೆ, ಆ ಕಾಲದಲ್ಲಿ ನಾನು ಅಲ್ಲಿರುವುದು ಸರಿಯಲ್ಲವೆಂದು, ನಾನು ಮಿ. ಓಮರರ ಅಂಗಡಿಗೆ ಹೋಗಿ, ಮಿ. ಪೆಗಟಿಯನ್ನೊಬ್ಬರನ್ನೇ ಅವರ ಮನೆಗೆ ಕಳುಹಿಸಿಕೊಟ್ಟೆನು.

ಮಿ. ಓಮರರು ಅವರ ಆರಾಮ ಕುರ್ಚಿಯಲ್ಲಿ ಕುಳಿತು ಸಿಗಾರ್ ಸೇದುತ್ತಿದ್ದರು. ನಾನು ಅವರಿಗೆ ನಮಸ್ಕರಿಸುತ್ತಾ ಒಳಗೆ ನುಗ್ಗಿದೆನು. ಅವರು ಮುಗುಳ್ನಗೆ ಆಡಿಕೊಂಡು –
“ತಮ್ಮಂಥಾ ಮಹಾನುಭಾವರನ್ನೂ ಸಹ ಕುಳಿತಲ್ಲಿಂದಲೇ ಸ್ವಾಗತಿಸುವ ಘನಸ್ಥಿಕೆ ನನಗೆ ಬಂದಿದೆ” ಎಂದನ್ನುತ್ತಾ ಉಸಿರೇ ಕಟ್ಟಿಹೋಗುವಷ್ಟು ನಗಾಡಿದರು. ಅವರು ನಗಾಡಿದುದರಲ್ಲಿ ಅವರ ಸ್ಥೂಲದೇಹದ ಮಾಂಸಖಂಡಗಳೆಲ್ಲ ತಾವೂ ಅವರ ಅಭಿಪ್ರಾಯವನ್ನು ಅನುಮೋದಿಸಿದಂತೆ ಅಲುಗಾಡಿದವು.

ನಾನು ಅವರಿಗೆ ಸಮಾಧಾನ ಹೇಳಿದೆ –
“ರೋಗಿಗಳೂ ಹಿರಿಯರೂ ಸಂದರ್ಭಕ್ಕೆ ತಕ್ಕಂತೆ ನಡೆಯಲು ಹಕ್ಕುಳ್ಳವರೇ ಅಷ್ಟೆ? ನೀವೆಲ್ಲಾ ಕ್ಷೇಮವಷ್ಟೆ?”
“ಓಹೋ ಕ್ಷೇಮವಪ್ಪಾ, ಕ್ಷೇಮ. ಈ ಖಾಸಶ್ವಾಸ ಒಂದು ಹೊರತು” ಎಂದು ಹೇಳಿ, ಸ್ವಲ್ಪ ಉಬ್ಬಸಬಿಟ್ಟು, ವಿಶ್ರಮಿಸಿಕೊಂಡು –
“ಈಗೀಗ ಕೆಲಸ ಸಾಗುವುದಿಲ್ಲ. ಹಾಗಾಗಿ ಕೆಲಸ ಮಾಡುವುದನ್ನೇ ಬಿಟ್ಟಿದ್ದೇನೆ. ಆದರೆ, ತುಂಬಾ ಓದುತ್ತೇನೆ” ಎಂದು ಹೇಳಿ ನಾನೇ ಸಂಚಿಕೆ, ಸಂಚಿಕೆಯಾಗಿ ಬರೆದು ಪ್ರಕಟಿಸಿದ್ದ ಒಂದು ಕಾದಂಬರಿಯ ಮೂರು ಸಂಚಿಕೆಗಳನ್ನು ಮುಟ್ಟಿ ತೋರಿಸಿದರು, ಅನಂತರ ಅಂದರು –
“ನೋಡಿ ಮಿ. ಕಾಪರ್ಫೀಲ್ಡ್, ಆ ಪುಸ್ತಕಗಳನ್ನು ಓದಿ, ಅದನ್ನು ಎದುರಿಟ್ಟು ಕುಳಿತು, ಅವುಗಳನ್ನೆಲ್ಲ ಬರೆದವರು ನಮ್ಮ ಹಳೇ ಸ್ನೇಹಿತರೆಂದು ಗ್ರಹಿಸುವುದಿದೆಯಲ್ಲಾ ಅದು ಬಹಳ ಸಂತೋಷದ ಸಂಗತಿ” ಅಂದರು. ಆಗ ಅವರ ಕಣ್ಣುಗಳನ್ನು ನೋಡಿದ್ದರೆ ಅವರ ಉತ್ಸಾಹ, ಸಂತೋಷ ಎಷ್ಟಿತ್ತೆಂದು ಗೊತ್ತಾಗುತ್ತಿತ್ತು.

“ನಿಮ್ಮಂಥವರು ಅಪೂರ್ವ, ಮಿ. ಓಮರ್. ಮನುಷ್ಯರಿಗೆ ಇರಬೇಕಾದುದೇನೋ ಈ ಸ್ವಭಾವವೇ ಆದರೂ ನಿಮ್ಮಂಥವರನ್ನು ಕಾಣುವುದು ಅಪೂರ್ವ. ನಮಗೆ ಹೆಚ್ಚಾಗಿ ಸಿಕ್ಕುವುದು ಅವರವರ ದುಃಖಗಳನ್ನು ಎಡೆಬಿಡದೆ ತೋಡಿಕೊಳ್ಳುವವರೇ ಆಗಿದ್ದಾರೆ!” ಎಂದು ನಾನಂದೆ.

ಮಿ. ಓಮರರಿಗೆ ನನ್ನ ಅಭಿಪ್ರಾಯ ಸರಿಯೆಂದು ತೋರಲಿಲ್ಲ. ಅವರು ತಲೆ ಅಡ್ಡ ಅಲ್ಲಾಡಿಸುತ್ತಾ ಅಂದರು –
“ಅದೆಲ್ಲಾ ನನ್ನ ಹತ್ತಿರ ಹೇಳಬೇಡಿ ಸರ್. ಈ ದಪ್ಪದ ದೇಹ, ಈ ಉಸಿರು, ಇವೆರಡಲ್ಲದಿದ್ದರೆ ನಾನು ಮಾಡುವುದೇ ಬೇರೆಯಿತ್ತು! ಆದರೆ ನಾನು ಅವುಗಳಿಗೂ ಹೆದರುವವನಲ್ಲ, ನೋಡಿ. ಅವೂ ಸಹ ನನ್ನ ಸಂತೋಷಕ್ಕಾಗಿಯೇ ಬಂದಿವೆ. ಇಲ್ಲದಿದ್ದರೆ, ನೋಡೀ ನಾನು ಈ ಕುರ್ಚಿ ಬಂಡಿಯಲ್ಲಿ ಕುಳಿತು ಮರಿಯಾನೆ ಮೊಮ್ಮಗನಿಂದ ನೂಕಿಸಿಕೊಂಡು ಸಂತೋಷಪಡುವುದಕ್ಕಿತ್ತೇನು? ಇಲ್ಲಿ ಕೇಳೀ – ಈ ಕುರ್ಚಿಗೆ ಚಕ್ರಗಳಿವೆ. ನೂಕಿದ್ರೆ ಸರ್ರನೆ ಹೋಗುತ್ತೆ. ಇದೆಲ್ಲಾ ಒಂದು ಸುಖಾ ತಾನೆ? ಈ ನೇವಸವಿಲ್ಲದಿದ್ದರೆ ಸಿಗಾರ್ ಬರುತ್ತಿತೇನು? ಅದನ್ನು ಮೂಸಿ ಸಹ ನೋಡುತ್ತಿರಲಿಲ್ಲ” ಹೀಗೆಲ್ಲಾ ಹೇಳಿ, ದಮ್ಮು ಕಟ್ಟಿ ನೆಗಾಡಿ, ಅಳ್ಳೆ ಕೋಸಿಕೊಂಡು, ಸ್ವಲ್ಪ ಕಷ್ಟಪಟ್ಟರು. ಅದರೆ, ಎರಡು ನಿಮಿಷದಲ್ಲೇ ಪೂರ್ವದ ಉತ್ಸಾಹೀ ಹರ್ಷಚಿತ್ತ ಓಮರರ್‍ ಆಗಿಬಿಟ್ಟರು. ಓಮರರಿಗೆ ನಾನು ಎಮಿಲಿಯನ್ನು ಕುರಿತಾಗಿ ತಿಳಿದಿದ್ದ ವರ್ತಮಾನವನ್ನೆಲ್ಲ ಹೇಳಿದೆ.

ಈ ವರ್ತಮಾನ ಕೇಳಿ ಅವರಿಗೆ ಬಹಳ ಸಂತೋಷವಾಯಿತು. ಎಮಿಲಿಯ ಬಾಲ್ಯದ ಚಂದದ ಕಥೆಗಳನ್ನು ಹೇಳಿ ನಗಾಡಿದರು. ಅವಳ ಮುಂದಿನ ಸುಖವನ್ನು ಬಯಸಿ ಮಾತಾಡಿದರು. ಅವರ ಎಲ್ಲಾ ಮಾತುಗಳಲ್ಲೂ ಶಾಂತಿ, ತೃಪ್ತಿ, ಹರ್ಷ ಇವೇ ಕಂಡು ಬರುತ್ತಿದ್ದುವು. ಅವರ ಯಾವ ಮಾತಿನಲ್ಲೂ ದಯಾ, ದಾಕ್ಷಿಣ್ಯ, ಕರುಣೆ ಹೊರತಾಗಿ ಮತ್ತೇನೂ ಇರುತ್ತಿರಲಿಲ್ಲ. ಯಾರ ಮೇಲೂ ಕಟುವಾಗಿ ಯಾವ ತಪ್ಪನ್ನು ಅವರು ಆರೋಪಿಸಲಿಲ್ಲ. ನನ್ನ ಮಾತುಗಳನ್ನು ಕೇಳಿ ಸಂತೋಷದಿಂದ –
“ನೀವೆಲ್ಲಾ ಸೇರಿ ಮಿ. ಪೆಗಟಿಯವರಿಗೆ, ಅವರ ಸಂಸಾರಕ್ಕೆ, ಮತ್ತು ಅವರನ್ನು ಬಲ್ಲ ನಮ್ಮೆಲ್ಲರಿಗೆ ಎಮಿಲಿಯನ್ನು ಹುಡುಕಿಕೊಟ್ಟು ಬಹಳ ಉಪಕಾರ ಮಾಡಿದಿರಿ. ನಿಮ್ಮೆಲ್ಲರ ಜತೆ ಸೇರಿ ನಾನೂ ಏನಾದರೂ ಸಹಾಯ ಮಾಡೋಣವೆಂದರೆ ನಾನು ಈ ಕುರ್ಚಿ ಹಿಡಿದಿದ್ದೇನೆ. ನಿಮ್ಮ ಆಲೋಚನೆ, ಕಾರ್ಯ ಎಲ್ಲವು ಬಹು ಯೋಗ್ಯವಾದವುಗಳೇ ಸರಿ. ಈ ಕಾರ್ಯಗಳ ಜತೆಯಲ್ಲೇ ನಮಗೆ ಇಷ್ಟೊಂದು ಸಹಾಯಮಾಡಿದ ಮಾರ್ಥಾಳನ್ನು ಕುರಿತೂ ಸ್ವಲ್ಪ ಯೋಚಿಸಬೇಡವೇ? ನಮ್ಮ ಹೆಂಗುಸರ ಕಥೆ ಕೇಳ್ತೀರಾ! ಅವರೆಲ್ಲ ಎದುರಿನಿಂದ ಮಾರ್ಥಾ ಪೋಲೀ ಎಂದು ಹೇಳಿಕೊಂಡು, ಹಿಂಬಾಗಿಲಿನಿಂದ ಅವಳಿಗೆ ಮಾಡುವ ಉಪಕಾರ ತುಂಬಾ ಇದೆ! ಏನು ಮಾಡೋದಕ್ಕೆ ಆಗುತ್ತೆ! ನಮ್ಮ ಮಧ್ಯೆ ಆಡಿ, ಬೆಳೆದ ಹುಡುಗೀನ ಬಿಡೋದಕ್ಕೆ ಆಗುತ್ತದೆಯೇ? ಮಾರ್ಥಾಳಿಗೊಂದು ಹಣದ – ಫಂಡಿನ, ವ್ಯವಸ್ಥೆ ಮಾಡ್ಸೀ ಸರ್, ಇನ್ನಾದರೂ ಅವಳು ಮರ್ಯಾದೆಯಿಂದ ಬದುಕಲಿ. ನೀವೇನಾದರೂ ಅಂಥ ಏರ್ಪಾಡು ಮಾಡಿದರೆ, ನನ್ನನ್ನು ಬಿಟ್ಟು ಬಿಡಬೇಡಿ, ನನ್ನನ್ನೂ ಸೇರಿಸಿಕೊಳ್ಳಬೇಕು. ಒಂದಂಶ ಹಣ ನನ್ನ ಪಾಲಿನದು ನಾನು ಕೊಡಬೇಕೂಂತ ಇದ್ದೇನೆ, ಸರ್” ಎಂದರು.

ಮಿ. ಓಮರರ ಪಾಪ. ಪುಣ್ಯ, ಅನುಕಂಪ, ಕರುಣೆಗಳನ್ನು ಯೋಚಿಸಿದಷ್ಟು ಸಂತೋಷವಾಗುತ್ತದೆ. ಮಾರ್ಥಾಳ ಬಗ್ಗೆ ಅವರು ಸೂಚಿಸಿದಂಥ ವ್ಯವಸ್ಥೆಯನ್ನು ಮಾಡಬೇಕೆಂದು ನಾವು ಮೊದಲೇ ನಿಶ್ಚೈಸಿದುದನ್ನೂ ಅವರಿಗೆ ತಿಳಿಸಿದೆ, ಅಗತ್ಯ ಬಿದ್ದಾಗ ಅವರ ಅಂಶದ ಹಣ ತೆಗೆದುಕೊಂಡು ಹೋಗಲು ನಾನು ಬರುವೆನಾಗಿ ಹೇಳಿ, ಅಲ್ಲಿಂದ ಹೇಮನ ಮನೆಗೆ ಹೋದೆನು.

ಹೇಮನೂ ಪೆಗಟಿಯೂ ಹೇಮನ ಹೊಸ ಮನೆಯಲ್ಲಿ ವಾಸ ಮಾಡುತ್ತಿದ್ದರು. ಮಿ. ಬಾರ್ಕಿಸನಿಂದ ಬಂದಿದ್ದ ಮನೆ, ಗಾಡಿ, ಕುದುರೆಯನ್ನೆಲ್ಲ ಇನ್ನೊಬ್ಬ ಗಾಡಿಯವನಿಗೆ ಪೆಗಟಿ ಬಾಡಿಗೆಗೆ ಕೊಟ್ಟಿದ್ದಳು. ನಾನು ಅವರಿಬ್ಬರಿಗೂ ಎಮಿಲಿಯ ಕಡೆಯ ವರ್ತಮಾನವನ್ನೆಲ್ಲ ತಿಳಿಸಿದೆನು. ಹೇಮನು ನನ್ನ ಮಾತುಗಳನ್ನು ಕೇಳುತ್ತಾ ಸಾಧಾರಣ ಅಳುವ ಸ್ಥಿತಿಗೆ ಬಂದನು. ಅವನು ಅಳುಮುಖದಿಂದಲೇ –
“ನೀವು ಅವಳನ್ನು ನೋಡಿದ್ದೀರಾ?” ಎಂದು ನನ್ನ ಮಾತಿನ ಮಧ್ಯವೇ ಕೇಳಿದನು.
“ಆ ಅರೆಬೆಳಕಿನಲ್ಲಿ ಸ್ವಲ್ಪ ಮಾತ್ರ ನೋಡಿದ್ದೇನೆ. `ಮಾವಾ’ ಎಂದನ್ನುತ್ತಾ ಸ್ಮೃತಿ ತಪ್ಪಿ ಮಿ. ಪೆಗಟಿ ಕೈಗೆ ಬೀಳುವಾಗ ಮಾತ್ರ” ಎಂದು ನಾನಂದೆನು.
“ನಾವೆಲ್ಲಾ ಹೋಗಿ ನೋಡಿದರೆ ಅವಳ ದುಃಖ ಮತ್ತಷ್ಟು ಹೆಚ್ಚಬಹುದೂಂತ ಕಾಣುತ್ತದಲ್ಲವೆ, ಮಾಸ್ಟರ್ ಡೇವಿ?” ಎಂದು ಕೇಳಿದ ಹೇಮ್.
“ಹೌದು – ನಮ್ಮೆಲ್ಲರ ಅಭಿಪ್ರಾಯ, ಭಾವನೆಗಳಿಗೆ ಅವಳು ಬೆಲೆ ಕೊಡುವಷ್ಟು ಇನ್ಯಾರ ಅಭಿಪ್ರಾಯ, ಭಾವನೆಗಳಿಗೂ ಅವಳು ಕೊಡುವುದಿಲ್ಲ. ಆದ್ದರಿಂದ ನಮ್ಮನ್ನು ಕಂಡರೆ ಅವಳಿಗೆ ಸಹಿಸಲಾರದ ದುಃಖವೇ ಆಗಬಹುದೆಂದು ಹೆದರಿಯೇ ನಾನೂ ಸಹ ಅವಳನ್ನು ಸರಿಯಾಗಿ ನೋಡಿರುವುದಿಲ್ಲ” ಅಂದೆನು ನಾನು.
“ಹಾಗಾದರೆ ಮಾಸ್ಟರ್ ಡೇವಿ, ಅವಳು ಆಸ್ಟ್ರೇಲಿಯಕ್ಕೆ ಹೋಗುವ ಮೊದಲು ನನ್ನ ನಾಲ್ಕು ಮಾತುಗಳನ್ನು ಅವಳಿಗೆ ದಯಮಾಡಿ ತಿಳಿಸಬೇಕು. ನಾನೇ ಆ ಮಾತುಗಳನ್ನು ಹೇಳುವುದಕ್ಕಿಂತಲೂ ನೀವು ಹೇಳಿದರೆ ಹೆಚ್ಚು ಸರಿಯಾಗಬಹುದು. ನೀವು ವಿದ್ಯಾವಂತರು, ಮಾತಾಡಬಲ್ಲವರು, ಅನುಭವಸ್ಥರೂ ಆಗಿರುವಿರಿ.” ಇಷ್ಟು ಹೇಳಿ ಹೇಮನು ಸ್ವಲ್ಪ ಆಲೋಚಿಸಿದನು, ಅನಂತರ ಹೇಳಿದನು –
“ಎಮಿಲಿ ಮೇಲೆ ನನಗೆ ಕೋಪವಿಲ್ಲ – ಪ್ರೀತಿಯಿದೆ, ಕರುಣೆಯಿದೆ. ಅವಳು ಸಿಕ್ಕಿಬಿದ್ದು ಹಾಗೆ ಮಾಡಿದಳು ಹೊರತಾಗಿ ನನ್ನನ್ನು ವಂಚಿಸಬೇಕೆಂದು ಮಾದಿದ್ದಲ್ಲವೆಂದು ನನಗೆ ಗೊತ್ತಿದೆ. ಅವಳನ್ನು ಬಾಲ್ಯದಿಂದ ಸಾಕಿದವರಿಗೂ ಅವಳ ಕಾರ್ಯದಲ್ಲಿ ಜವಾಬ್ದಾರಿಯಿದೆ, ಅವಳ ತಪ್ಪಿನಲ್ಲಿ ಭಾಗವಿದೆ. ನಾನೂ ಸಹ ಈ ರೀತಿಯಲ್ಲಿ ಅವಳ ಜತೆಯಲ್ಲೇ ತಪ್ಪಿತಸ್ಥನು. ನಾನೇ ಅವಳನ್ನು ಮದುವೆಯಾಗುವುದೆಂದು ಅಷ್ಟೊಂದು ಮುಂದಾಗಿ ಹೇಳಿಕೊಂಡು ಬಂದದ್ದರಿಂದ ಮಾತ್ರ ಅವಳು ತನ್ನ ಮನಸ್ಸಿನ ಚಾಂಚಲ್ಯ, ಕಷ್ಟ, ಪರಪುರುಷನ ಆಕರ್ಷಣಗಳನ್ನು ಹೇಳದೇ ಉಳಿದಳೇ ಹೊರತು, ಇಲ್ಲದಿದ್ದರೆ ಅವಳ ಕಷ್ಟಗಳನ್ನು ನನ್ನಲ್ಲಿ ಹೇಳಿಕೊಳ್ಳುತಿದ್ದಳು. ನಾನು ಅವಳನ್ನು ಮೊದಲಿನಂತೆಯೇ ತಿಳಿದುಕೊಂಡಿದ್ದೇನೆ. ಅವಳದು ಯಾವ ತಪ್ಪೂ ಇಲ್ಲ. ಅವಳು ಯಾರ ಕ್ಷಮಾಪಣೆ ಕೇಳುವ ಅಗತ್ಯವೂ ಇಲ್ಲ. ನಾನು ಅವಳನ್ನು ಸದಾ ಪ್ರೀತಿಸಿಯೇ ಇದ್ದೇನೆ, ಇನ್ನೂ ಹಾಗೆಯೇ ಇರುತ್ತಾ ನಾನು ಯಾರನ್ನೂ ಇನ್ನು ಮದುವೆಯಾಗುವುದಿಲ್ಲ. ಇದನ್ನೆಲ್ಲಾ ದಯಮಾಡಿ ತಿಳಿಸಬೇಕು.”

ಹೇಮನ ಮಾತುಗಳನ್ನು ಕೇಳಿ ನನಗೆ ದುಃಖವಾಯಿತು. ಅವನ ಮೃದುಹೃದಯದ ಪರಿಚಯ ನನಗೆ ಮತ್ತಷ್ಟು ಆಯಿತು. ಅವನ ಮಾತುಗಳನ್ನೆಲ್ಲ ಸರಿಯಾಗಿ ಎಮಿಲಿಗೆ ತಿಳಿಸುವೆನಾಗಿ ಒಪ್ಪಿಕೊಂಡೆನು.

ಹೇಮನ ಮನೆಯಿಂದ ಹೇಮನೂ ನಾನೂ ಮಿ. ಪೆಗಟಿಯ ಮನೆಗೆ ಹೋದೆವು. ಆ ಮನೆಯಲ್ಲಿ ಮಾರಬಹುದಾಗಿದ್ದ ಸಾಮಾನುಗಳನ್ನೆಲ್ಲಾ ಮಾರಿದ್ದರು. ಸಾಗಿಸಿಕೊಂಡು ಹೋಗಬಹುದಾಗಿದ್ದವುಗಳನ್ನೆಲ್ಲ ಗಂಟು ಕಟ್ಟಿ ಮನೆಯ ಎದುರು ಭಾಗದಲ್ಲಿ ಒಂದೇ ಕಡೆ ಇಟ್ಟಿದ್ದರು. ನಾನೂ ಎಮಿಲಿಯೂ ಜತೆಯಲ್ಲೇ ಕುಳಿತಿರುತ್ತಿದ್ದ ಆ ಪೆಟ್ಟಿಗೆಯನ್ನು ಅವರ ಜತೆಯಲ್ಲಿ ತೆಗೆದುಕೊಂಡು ಹೋಗುವುದಾಗಿ ಮಿ. ಪೆಗಟಿ ತಿಳಿಸಿದರು.

ಮಿಸೆಸ್ ಗಮ್ಮಿಜ್ಜಳು ಯಾರ್ಮತ್ತಿನಲ್ಲೇ ಉಳಿಯಬೇಕೆಂದು ಮಿ. ಪೆಗಟಿ ಎಷ್ಟು ಹೇಳಿದರೂ ಗಮ್ಮಿಜ್ಜಳು ಕೇಳಲಿಲ್ಲ. ಅವಳು ಹಟ ಹಿಡಿದು ಪ್ರಾರ್ಥಿಸಿಕೊಂಡು, ಮೃದು ಹೃದಯದ ಮಿ. ಪೆಗಟಿಯ ಮನ ಒಲಿಸಿಕೊಂಡು, ಕೊನೆಗೆ ಮಿಸೆಸ್ ಗಮ್ಮಿಜ್ಜಳೂ ಆಸ್ಟ್ರೇಲಿಯಾಕ್ಕೆ ಮಿ. ಪೆಗಟಿಯ ಜತೆಯಲ್ಲಿ ಹೋಗುವುದೆಂದು ನಿಶ್ಚಯವಾಯಿತು.

ಮರುದಿನ ಬೆಳಗ್ಗೆ ಮಿ. ಪೆಗಟಿ ಮತ್ತು ನಾನು ಲಂಡನ್ನಿಗೆ ಹೋಗುವ ಬಂಡಿಯಲ್ಲಿ ಕುಳಿತು ಹೊರಟೆವು. ನಮ್ಮ ಬಂಡಿಯ ಹಿಂಭಾಗದಲ್ಲಿ ತನ್ನ ಸಾಮಾನುಗಳನ್ನು ಒಂದು ಬುಟ್ಟಿಯಲ್ಲಿಟ್ಟುಕೊಂಡು ಮಿಸೆಸ್ ಗಮ್ಮಿಜ್ಜಳು ಸಂತೋಷದಿಂದ ಕುಳಿತಿದ್ದಳು.

(ಮುಂದುವರಿಯಲಿದೆ)