(ಚಕ್ರೇಶ್ವರ ಪರೀಕ್ಷಿತ – ೭)
[ಬೇಸಗೆಯ ಈ ದಿನಗಳಲ್ಲೂ ಮಳೆಯ ಉತ್ಸಾಹ (ಬಹುತೇಕ ಉತ್ಪಾಪತ) ನೋಡುವಾಗ ಕಳೆದ ಅಕ್ಟೋಬರಿಗೂ ಕಾಲು ಚಾಚಿದ್ದ ಮಳೆಗಾಲ ಮರುಕಳಿಸಿದಂತನ್ನಿಸುತ್ತದೆ. ಹಾಗಾಗಿ ಆ ದಿನಗಳ ಕೆಲವು ಸೈಕಲ್ ಸರ್ಕೀಟ್ (ಫೇಸ್ ಬುಕ್ಕಿನಲ್ಲಿ ಅಂದಂದೇ ಪ್ರಕಟವಾದವು) ಟಿಪ್ಪಣಿಗಳನ್ನು ಸಂಕಲಿಸಲು ಇದು ಸಕಾಲ ಅನಿಸುತ್ತಿದೆ. ಇದರಲ್ಲಿ ಕಾಲ ಸೂಚಿಯಾಗಿ ದಿನಾಂಕದ ನಮೂದು ಬಂದರೂ ಅನುಭಾವ ಈ ದಿನಕ್ಕೂ ನಿಲ್ಲುತ್ತದೆ ಎಂದು ಭಾವಿಸಿದ್ದೇನೆ.] ಮೂರು ದಿನದ ಮುಂಗಡ ಮಳೆವಾರ್ತೆ ಇಂದು (೨೪-೧೦-೨೦೧೪) ಮತ್ತೆ ನನ್ನನ್ನು ಸೈಕಲ್ಲೇರಿಸಿತು. ತೊಕ್ಕೊಟ್ಟು ಕಳೆದು ದೇರಳಕಟ್ಟೆ ಬರುವುದರೊಳಗೆ ಮೋಡಗತ್ತಲೆ ನನ್ನ ದೀರ್ಘ ಸವಾರಿಯ ಯೋಜನೆಗೆ ಬಿರಿಹಾಕಿತು. ಮತ್ತೆ ಎಳ್ಯಾರ್ ಪದವು ದಾರಿಯಾಗಿ ಹರೇಕಳ ಕಡವು ಸೇರಿಕೊಂಡೆ. ನಾನೇರಬೇಕಿದ್ದ ದೋಣಿ ಬರುವಾಗ ನನಗೆ ಪರಮಾಶ್ಚರ್ಯ – ಮಂಗಳಯಾನಿಗಳ (ಎಲ್ಲ ಕೆಂಪಗಿದ್ದಾರೆ ನೋಡಿ) ಒಂದು ಲೋಡ್ ತಂದಿತ್ತು. ನಾನೂ ದೋಣಿ ಏರಿ ಮರಳುವಾಗ ತಿಳಿದೆ, ಎಲ್ಲ ಕಡಲಕೊಳದಲ್ಲಿ ಮೀಯಲಿಳಿದ ಮಾಯಗಾರ ಸೂರ್ಯನ ಕರಾಮತ್ತು!!
***
ಮಳೆ ಬೆಳಗ್ಗೆಯೇ ವಿದಾಯ ಹೇಳಿತೆಂದು (೨೬-೧೦-೧೪) ಸೈಕಲ್ಲೇರಿದ್ದೆ. ಉಳ್ಳಾಲ ಸಂಕದಾಚೆ ಕಾಲ್ದಾರಿಯಲ್ಲಿ ನುಗ್ಗಿ, ರೈಲ್ವೇ ಹಳಿಗೇರಿ, ತೊಕ್ಕೊಟ್ಟು ನಿಲ್ದಾಣದಾಚೆಗಿಳಿದು ಹೊಳೆಯಂಚು ಹುಡುಕುತ್ತ ಗಲ್ಲಿ ಗಲ್ಲಿ ಸುತ್ತಿದೆ. ಕೆಲವು ಮನೆಯಂಚಿನಲ್ಲಿ ದೋಣಿಗಳೇನೋ ಇದ್ದವು, ಆಚೆ ಹೊಳೆಗಿಳಿವ ಜಾಡು ಬಲ್ಲೆ ಮುರಿದು ನುಗ್ಗುವವರಿಲ್ಲದೆ ನನಗೂ ಅಬೇಧ್ಯವೆನಿಸಿತು. ಅಂತೂ ಕೊನೆಗೊಂದು ಮನೆಯಂಗಳದಲ್ಲಿ ಬಲೆ ಶುದ್ಧಮಾಡುತ್ತಿದ್ದ ಸವೇರ್ ಫೆರ್ನಾಂಡಿಸ್ ಜಾಡು ತೋರಿದರು. “ಕೊಳ್ಳೆ ಹೇಗೆ” ಎಂದೆ. “ಮೀನು ಪ್ರಯೋಜನವಿಲ್ಲ, ಯಾಕೋ ಗೊತ್ತಿಲ್ಲ” ಬಂತು ಉತ್ತರ.
ಮೊನ್ನೆ ಪಶ್ಚಿಮಮಾಡಿಗೆ ಕೆಂಬಣ್ಣ ಹೆಚ್ಚು ಹೊಡೆದ ರವಿಯಣ್ಣ (ವರ್ಮ?) ಇಂದು ಮಸಿ ಹೆಚ್ಚು ಬಳಸಿದ್ದು ಯಾಕೋ ಗೊತ್ತಿಲ್ಲ ಅಂದುಕೊಂಡು ವಾಪಾಸು ಹೊರಟೆ. ಅದರೆ ರೈಲ್ವೇ ಹಳಿಯ ಪಕ್ಕದ ಹಿನ್ನೀರ ಹರಹು ದಾಟುವಾಗ ಸವೇರ ಫೆರ್ನಾಂಡಿಸ್ ಸಮಸ್ಯೆಯ ಮೂಲ ಸಿಕ್ಕಿತು. ಅಲ್ಲೊಂದು ನೇತ್ರಾವತಿಯ ಸೆರಗಿನ ಗಂಟು; ಪ್ರವಾಹ ಕಾಲದಲ್ಲಿ ವಿಸ್ತಾರ ನೆಲತುಂಬಿ, ಸದ್ಯ ಭೂಬಂಧಿತ ಕೊಳ. ಅದ್ಯಾವ ಪ್ರಾಕೃತಿಕ ಮಾಯೆಯಲ್ಲೋ ಕೊಚ್ಚಿಬಂದ `ಶುದ್ಧನೀರಿ’ನ ಪ್ಲ್ಯಾಸ್ಟಿಕ್ ಬಾಟಲುಗಳ ರಾಶಿ ಅಲ್ಲಿ ಮತ್ತಷ್ಟು ಬೇಡದ ಕಸ ಸೇರಿಸಿಕೊಂಡು ಕೊಳೆತಿತ್ತು. ಮೂಗು ಬಿಡಲಾಗದಂತೆ ವಾಸನೆ ಹೊಡೆಯುತ್ತಿತ್ತು. ನೇತ್ರಾವತಿ ಅಜ್ಜಿ ಮತ್ತೆ ಮತ್ತೆ ಬಂದ ಮಳೆಯಲ್ಲಿ ಮೀಯುತ್ತಿದ್ದರೂ ಸೆರಗಿನ ಈ ಗಂಟು ಬಿಚ್ಚುವುದಾಗಿರಲಿಲ್ಲ. ಬಹುಶಃ ಅದಕ್ಕೇ ರವಿಯಣ್ಣನೂ ಚಪ್ಪರಕ್ಕೆ ಮಸಿಬಳೆದು ವಿಷಾದ ಸೂಚಿಸಿರಬೇಕೆಂದು ನಾನು ತಲೆ ಬಿಸಿಮಾಡಿಕೊಂಡು ಮನೆ ಸೇರಿದೆ.
***
“ನೀಲೋಫರ್ ಬರ್ತಾನೆ, ಮೂರು ದಿನ ಪಶ್ಚಿಮ ಕರಾವಳಿಯ ಬೆಸ್ತರು ನೀರಿಗಿಳಿಯಬಾರದು” – ಪ್ರಕಟಣೆ ಕೇಳಿ, ಕಯಾಕ್ ಸರ್ಕೀಟ್ ಯೋಚನೆ ಮತ್ತೆ ಮುಂದೂಡಿ ಸೈಕಲ್ಲೋಡಿಸಿದೆ. (೨೮-೧೦-೨೦೧೪) ತಣ್ಣೀರುಬಾವಿ, ಬೆಂಗರೆ, ಅಳಿವೆ ಬಾಗಿಲು ಒಂದು ಸುತ್ತು ಹಾಕಿದೆ. ಕಡಲು ಶಾಂತವಾಗಿತ್ತು, ಬೆಸ್ತರು ನಿತ್ಯಕರ್ಮವನ್ನು ತೊಂದರೆಯಿಲ್ಲದೆ ಪೂರೈಸಿದಂತಿತ್ತು. ಕಡಲಕಿನಾರೆಗೆ ಜಾರುತ್ತಿದ್ದ ನೇಸರ, ಗಾಳಿಪಟ ಸಂಘದ ಸದಸ್ಯನಂತೆ ತುಂಡು ಮೋಡಗಳನ್ನು ಸೂತ್ರವಿಲ್ಲದೆ ತೇಲಿಸುತ್ತಾ ಇದ್ದ. “ಬರ್ತಿಯಾ ಮನೆ ಸೇರುವುದರಲ್ಲಿ ಯಾರು ಫಸ್ಟೂಂತ? ರೇಸೂ” ಅಂದವನೇ ನಾನು ಕ್ಯಾಮರಾದಲ್ಲಿ `ಶೂಟ್’ ಮಾಡಿ ದೌಡಾಯಿಸಿದೆ. ಕೂಳೂರು ಬಳಿ ತಟಪಟ ಹನಿಕಲು ತೊಡಗಿತು. “ಸ್ಪರ್ಧೆ ರದ್ದು” ಎಂದು ನಾನೇ ಘೋಷಿಸಿ ಅತ್ತಿತ್ತ ನೋಡಿದೆ. ಜಾಣ ಸೂರ್ಯ ಮೋಡದ ಕೊಡೆ ಬಿಡಿಸಿ ಮರೆಯಾಗಿದ್ದ. ನಾನು ನೆನೆನೆನೆಯುತ್ತ, ಕತ್ತಲಲ್ಲಿ ಮನೆ ಸೇರಿದೆ.
***
ಏಕೋಧ್ಯಾನದಿಂದ ಸೈಕಲ್ ತುಳಿದವನಿಗೆ (೧-೧೧-೨೦೧೪)
ಫರಂಗಿಪೇಟೆ ಸಿದ್ಧಿಸುವಾಗ ಅರ್ಧ ಗಂಟೆ. ನೇತ್ರಾವತಿ ಕಡವಿನಲ್ಲಿ ಇನೋಳಿ ವರ ಕೇಳಿದೆ. ವರ್ಷಾನುಗಟ್ಟಳೆ ಕಠಿಣ ತಪಸ್ಸು ಮಾಡಿದವರಿಗೇ ಭವಸಾಗರ ದಾಟಿಸುವ ನಾವಿಕನೇ ನಿಶ್ಶರ್ತ ವರ ಕೊಟ್ಟದ್ದಿಲ್ಲ ಎಂದ ಮೇಲೆ, ಬಡಕಲು ನೇತ್ರಾವತಿ ಮೇಲಿನ ಐದು ಹತ್ತು ರೂಪಾಯಿಯ ಪೂಜೆ ಒಪ್ಪಿಸಿಕೊಳ್ಳುವ ಫರಂಗಿಪೇಟೆ ಅಂಬಿಗನೇನು ಮಾಡಿಯಾನು – “ಅಮ್ಮೆಂಬಳಗಾಂಟ ಬಲೆ. ಇನೋಳಿಗಾಂಟ ಅರ್ಕುಳಗ್ ಪೋಲೆ” ಅಂದ. ದಾರಿಯಲ್ಲೇ ತುಸು ಹಿಂದೆ – ಅರ್ಕುಳಕ್ಕೆ ಹೋಗಿ, ಭಾರೀ ಮರಳ ಗುಡ್ಡೆಯ ಮರೆಯಲ್ಲಿ ಕಾದೆ, ಹಳದಿ ಹಾಯಿಯೇರಿಸಿದ (ಕನ್ನಡ ಧ್ವಜ?) ದೋಣಿ ಬಂದಾಗ ಏರಿದೆ. ಹಿಂದೆ ಕುಳಿತ ಸಾಯ್ಬ (ಹಸನಬ್ಬಾಂತ ಆಮೇಲೆ ತಿಳಿಯಿತು) ಮೆಲ್ಲನಾಡುತ್ತಿದ್ದ ಪಶ್ಚಿಮ ಗಾಳಿಗೆ ಹಾಯಿ ಹೊಂದಿಸಿ ಕಟ್ಟಿದ. ಒಂದೆರಡು ಬಾರಿ ಗಳ ಹಾಕಿ ನೂಕಿ ಮತ್ತೆ ಚುಕ್ಕಾಣಿಗೆ ಕುಳಿತ. ಮೂಕಿಯಲ್ಲಿದ್ದ ಪಯಣಿಗ – ಚಂದ್ರಹಾಸ, ಒಂದೇ ಬದಿಗೆ ಹುಟ್ಟು ಹಾಕುತ್ತಾ ಹೋದ. ತುಸು ಪೂರ್ವ-ದಕ್ಷಿಣಕ್ಕೆ ಸರಿಯುತ್ತ ಮಂದಪ್ರವಾಹವನ್ನು ಅಡ್ಡ ಹಾಯುತ್ತ ಎದುರು ದಂಡೆಗೆ ಮುಖ ಮಾಡಿದೆವು. ಇನೋಳಿ ದಂಡೆ ಹೆಚ್ಚು ಕಡಿಮೆ ನದಿ ಪಾತ್ರೆಯ ಮಧ್ಯಕ್ಕೇ ಧಾವಿಸಿದಂತಿತ್ತು! ಮಳೆ ಬಿಟ್ಟ ನಾಲ್ಕನೇ ದಿನಕ್ಕೆ ನೇತ್ರಾವತಿ ಸೊರಗಿದ್ದಳು. (ನದಿ ತಿರುಗಿಸುವವರಿಗೆ ಇದು ಗೊತ್ತಿಲ್ಲದ್ದೇನೂ ಅಲ್ಲ) ಬಲಕ್ಕಿದ್ದೊಂದು ಕುದುರು – ನಡುಗಡ್ಡೆ, ಈಗ ಇನೊಳಿ ದಂಡೆಯ ಭಾಗವೇ ಆಗಿತ್ತು.
ದೋಣಿ ಇಳಿದು ಭಾರೀ ಉದ್ದಕ್ಕೆ ದಪ್ಪ ಹೊಯ್ಗೆಯ ಮೇಲೆ ಸೈಕಲ್ ನೂಕಿದೆ. `ಇನೋಳಿ ಇಲೆವೆನ್’ – ದಾಂಡಿಗರ ತಂಡ, ಅಲ್ಲಿ ನಡುವೆ ದಂಡೆಯಿಂದ ಭಾರೀ ಶ್ರಮವಹಿಸಿ ಮಣ್ಣು ಹೊತ್ತು ಹಾಕಿ `ಪೊಯ್ಯೆ ಪಿಚ್’ ಮಾಡಿ ಕಸರತ್ತು ನಡೆಸಿತ್ತು. ನಾನು ಅದನ್ನು ಬಳಸಿ ಹೋಗುವವನಿದ್ದರೂ ಅವರಾಗಿಯೇ ಕ್ರಿಕೆಟ್ ನಿಲ್ಲಿಸಿ, ನನ್ನಲ್ಲಿ ಕಂಡ `ಅಜ್ಜೇರಿ’ಗೆ ತಲೆಗೊಂದು ಕುಶಾಲು, ಶುಭಾಶಯ ಕೊಟ್ಟರು. ನಿಜ ದಂಡೆಯಲ್ಲಿ ಮೊದಲು ಮಣ್ಣ ದಾರಿ. ಇದು ಸುಮಾರು ದೂರ ಅಡಿಕೆ, ತೆಂಗಿನ ತೋಟಗಳ ನಡುವೆ ನನಗೆ ಅಪ್ಪಟ ಕಂಬಳದೋಟ ಕೊಟ್ಟಿತು. ಮಂಗಳೂರಿನಿಂದ ಕೊಣಾಜೆಗಾಗಿ ಸುತ್ತಿ ಬರುವ ಸಿಟಿ ಬಸ್ಸಿನ ಕೊನೆಯ ನಿಲ್ದಾಣದ ಬಳಿ ಡಾಮರು ತೊಡಗಿತ್ತು. ಜತೆಗೆ ಕುತ್ತೇರೂ ಸೇರಿಕೊಂಡಿತು. ಕೆಲವು ವರ್ಷಗಳ ಹಿಂದೆ ಈ ವಲಯದಲ್ಲಿ ಓಡಾಡಿದ ನೆನಪು ನನಗೆ ಮಾಸಿರಲಿಲ್ಲ. ಘಾಟಿ ದಾರಿಯ ಅರ್ಧದಲ್ಲೇ ಎಡ ಹೊರಳಿ `ದೇವಂದ ಬೆಟ್ಟ’ದತ್ತ ಸಾಗಿದೆ. (ನೇರ ಹೋಗಿದ್ದರೆ ಕೊಣಾಜೆ ಪದವು, ಮಂಗಳೂರು ವಿವಿನಿಲಯ.) ಈ ದಾರಿಯೂ ನನ್ನ ನೆನಪಿನ ಕಾಲದ ಸ್ಥಿತಿಯಲ್ಲೇ ಉಳಿದಿತ್ತು. ಮೊದಲ ನೂರಿನ್ನೂರು ಮೀಟರ್ ಮಾತ್ರ ಡಾಮರು ಉಳಿದಂತೆ ನೇರ ಏರು ಜಾಡು, ಅರೆಬರೆ ಜಲ್ಲಿ ಹಾಸು. ಏರುವಲ್ಲಿ ಸೈಕಲ್ಲಿನ ಗರಿಷ್ಠ ಗೇರ್ ಸೌಕರ್ಯ – ೧ ಗುಣಿಸು ೧, ಇಳಿಯುವಲ್ಲಿ ಪವರ್ ಬ್ರೇಕಿನ ತಾಕತ್ತು, ಒಟ್ಟಾರೆ ಎಂಟಿಬಿಯ (= ಮೌಂಟೇನ್ ಟೆರೈನ್ ಬೈಕ್ ಅರ್ಥಾತ್ ಬೆಟ್ಟ ಪ್ರದೇಶದ ಸೈಕಲ್) ಖ್ಯಾತಿ ಇಲ್ಲಿ ಪೂರ್ಣ ಒರೆಗೀ ಹಚ್ಚಿದ್ದೆ ಮತ್ತು ನಿರಾತಂಕವಾಗಿ ಯಶಸ್ವಿಯೂ ಆದೆ. ಹತ್ತಿ, ಇಳಿಯುವಲ್ಲಿ ನಾನು ಸೈಕಲ್ ಸೀಟು ಬಿಟ್ಟಿಳಿಯಲಿಲ್ಲ!
ದೇವಂದ ಬೆಟ್ಟದ ಪ್ರಾಕೃತಿಕ ಸೌಂದರ್ಯದ ಬಗ್ಗೆ, ಅಲ್ಲಿನ ಸೋಮನಾಥ ದೇವಳದ ಕಾರಣಿಕ ಹಾಗೂ ಜೀರ್ಣೋದ್ಧಾರದ ಬಗ್ಗೆ ತುಂಬ ಹೇಳುವುದುಂಟು, ಈಗ ಬೇಡ. ಆ ಎಲ್ಲ ಕಾರ್ಯಗಳ ಪ್ರಧಾನ ಚಾಲನಶಕ್ತಿ, ನನಗೆ ಪೂರ್ವಪರಿಚಿತ ಪ್ರೊ| ಐ.ವಿ. ರಾವ್ ಅಲ್ಲಿದ್ದರು. ಅವರಲ್ಲಿ ಎರಡು ಮಾತಾಡಿ, ನಾಲ್ಕು ಚಿತ್ರ ತೆಗೆಯುವುದರೊಳಗೆ ದಿನಮಣಿ ಕಡಲಂಚಿಗೆ ಜಾರಿಯಾಗಿತ್ತು.
ಮಾತು ಬೆಳೆಸುವುದರೊಳಗೆ, ಅವರೆಲ್ಲ ಕಾದಿದ್ದ ನಮ್ಮ ವಲಯದ ಸಂಸದ ನಳಿನಕುಮಾರ್ ಕಟೀಲ್ ಹತ್ತು-ಹದಿನೈದು ಕಾರುಗಳ ಭರಾಟೆಯಲ್ಲಿ ಬಂದಿಳಿದರು. ಈತ ರಾಜ್ಯದಲ್ಲಿ ಭಾಜಪ ಸರಕಾರವಿದ್ದಾಗ ನೇತ್ರಾವತಿ ತಿರುವಿನ ಪರವಾಗಿಯೂ ಕಾಂಗ್ರೆಸ್ ಬಂದ ಮೇಲೆ ವಿರುದ್ಧವಾಗಿಯೂ ಮಾತಾಡಿದಂತೆ ತೋರುವ ಜಾಣ. ಅವರೆದುರು ಕಾಣಿಸಿಕೊಳ್ಳುವ ಅಗತ್ಯ ಅಥವಾ ಆಸಕ್ತಿ ನನಗಿರಲಿಲ್ಲ. ಹಾಗಾಗಿ ನಾನು ಹೋದಷ್ಟೇ ಚುರುಕಾಗಿ, ಪ್ರಾಕೃತಿಕ ಚಿತ್ರಗಳನ್ನಷ್ಟೇ ದಾಖಲಿಸಿಕೊಳ್ಳುತ್ತಾ ಮರಳ ದಂಡೆಗೆ ಮರಳಿದೆ. ಇನೋಳಿ ದಾಂಡಿಗರು ಬೇಲ್ಸ್ ತೆಗೆದಿದ್ದರು.
ಬೀಸುಗಾಳಿ ಪೂರ್ಣ ತಟಸ್ಥವಾಗಿ ಎದುರು ದಂಡೆಯಿಂದ ಬರುತ್ತಿದ್ದ ದೋಣಿ ನಿಧಾನಕ್ಕೆ ತಟಸ್ತವಾಯ್ತು. ಇತ್ತಣಿಂದ ನಾನೋರ್ವನೇ ಪಯಣಿಗ, ಹಸನಬ್ಬನೊಬ್ಬನೇ ನಾವಿಕ. ನನಗಾಗಿ ಅಲ್ಲದಿದ್ದರೂ ಎಲ್ಲೆಲ್ಲಿಂದಲೋ ಶಾಲೆ, ಕಛೇರಿ ಬಿಟ್ಟು ತಡವಾಗಿ ಬಂದು ಕತ್ತುದ್ದ ಮಾಡುತ್ತಿದ್ದ ಎದುರು ದಂಡೆಯ ಪಯಣಿಗರಿಗಾದರೂ ಆತ ಮತ್ತೆ ಆ ದಂಡೆ ಮಾಡಲೇ ಬೇಕಿತ್ತು. ಆತ ಹೆಚ್ಚು ಉಪಚಾರವಿಲ್ಲದೆ ನನ್ನನ್ನೇ ದೋಣಿಯ ಮೂಕಿಯಲ್ಲಿ ಕೂರಿಸಿ, ಹುಟ್ಟು ಕೈಗಿತ್ತ. ನನಗೋ ಸ್ವಂತ ಕಯಾಕಿನಲ್ಲಿ ಮೂರು ಹೊಳೆ ನೀರು ಕುಡಿದ ಗರ್ವ. ಬಡ್ಡು ಗಾಳಿಮರದ ಕೊನೆಗೆ ತುಂಡು ಹಲಿಗೆ ಬಡಿದ ಹುಟ್ಟನ್ನು ದೋಣಿಯಂಚಿನ ಹಗ್ಗದ ಕೀಲಿನೊಳಗೆ ತೂರಿಬಿಟ್ಟಿದ್ದರು. ನಾನದನ್ನು ಗಾಳಿಯಲ್ಲೆತ್ತಿ ಮುಂದಕ್ಕೂ, ನೀರಿನಲ್ಲಿ ಮುಳುಗಿಸಿ ಹಿಂದಕ್ಕೂ ಎಳೆಯುತ್ತ ಹೋದೆ.
ಹಸನಬ್ಬ ಬೀಡಿ ಕಚ್ಚಿ, ಮೌನವಾಗಿ ಹಿಂದಿನ ಕೊನೆಯಲ್ಲಿ ಕುಳಿತು, ಚುಕ್ಕಾಣಿ ನಿಭಾಯಿಸಿದ. ನನ್ನ ಶ್ರಮ ತಪ್ಪಾಗಿರಲಾರದು, ದೋಣಿ ಬೇಗನೆ ಎದುರು ದಂಡೆ ಸೇರಿತ್ತು! ದಂಡೆಯಲ್ಲಿದ್ದೊಬ್ಬ ಬುದ್ಧಿವಂತ ನನ್ನ ಕ್ಯಾಮರಾ ಕೇಳಿ ಪಡೆದು, ನಾನು ಹುಟ್ಟು ಹಾಕುವ ಪೋಸು ಕೊಡಿಸಿ, ಕ್ಲಿಕ್ಕಿಸಿ ಕೊಟ್ಟ. ಕತ್ತಲು ಪೂರ್ತಿ ಮುಸುಕಿತ್ತು. ನಾನು ಸೈಕಲ್ಲಿಗೆ ದೀಪವನ್ನೂ ಒಯ್ದಿರಲಿಲ್ಲ. ಆತ ತೆಗೆದ ಚಿತ್ರದ ತನಿಖೆ ಯೋಚನೆ ಬಿಟ್ಟು, ಹೆದ್ದಾರಿ ಸೇರಿಕೊಂಡೆ. ಮತ್ತೆ ಚರವಾಣಿಯಲ್ಲಿ ದೇವಕಿಗೆ ಅನಿವಾರ್ಯ ವಿಳಂಬಿಸುವ ಸುದ್ದಿಕೊಟ್ಟು, ಮನೆಯತ್ತ ಹುಶಾರಾಗಿ ಪೆಡಲ್ ಬೆಳೆಸಿದೆ. ಮನೆಯ ವಿರಾಮದಲ್ಲಿ ಟಿಪ್ಪಣಿ ಕುಟ್ಟುತ್ತ, ತೆಗೆದ ಚಿತ್ರಗಳ ಲೆಕ್ಕಿಸುವಾಗ ಆ ಕೊನೆಯದು ಕಾಣಿಸಲಿಲ್ಲ; ಆತ ಒತ್ತಿದ್ದು ಕ್ಲಿಕ್ಕಲ್ಲ, ಆಫ್ ಬಟನ್!
***
ಊರೂರಿನ ಹೆಸರು ಹೊರುವ ಕಿರು ಹಳ್ಳ ಹೊಳೆಗಳ ಪಾಡೇ ಪಾವಂಜೆ ನದಿಯದ್ದು; ವಾಸ್ತವದಲ್ಲಿದು ನಂದಿನಿ. ಪಾವಂಜೆಗೂ ಮೊದಲೇ ಹೆದ್ದಾರಿ ಅಡ್ಡ ದಾಟುವ ಈ ಪಶ್ಚಿಮಮುಖಿ ಬಿನ್ನಾಣದಲ್ಲಿ ಸುಮಾರು ಐದಾರು ಕಿಮೀ ಉದ್ದಕ್ಕೆ ಸಮುದ್ರಕ್ಕೆ ಸಮಾನಾಂತರದಲ್ಲಿ ಹರಿದು, ಅತ್ತಣಿಂದ ಬರುವ ಶಾಂಭವಿಯೊಡನೆ ಕೈ ಮಿಲಾಯಿಸಿ ಸಾಗರ ಸೇರುತ್ತಾಳೆ. ಪರಿಣಾಮದಲ್ಲಿ ತಣ್ಣೀರುಬಾವಿ, ಮರವಂತೆ ಮುಂತಾದವುಗಳಂತೇ ಇಕ್ಕೆಲದಲ್ಲಿ ನೀರಿರುವ ನೆಲವಾಗಿದೆ ಸಸಿಹಿತ್ಲು. ನಾನು ಹಿಂದೆ ಇಲ್ಲಿ ಸೈಕಲ್ ಸವಾರಿ ಮಾಡಿದಾಗ ನದಿಯಾಚೆ ತೋರುವ ಕೊಳುವೈಲು – ಒಂದು ಕುದುರಿಗೆ, ದೋಣಿ ಸಂಪರ್ಕ ಸಿಕ್ಕಿರಲಿಲ್ಲ. ಅದನ್ನು ಮತ್ತೂ ಆಚಿನ ಹಳೆಯಂಗಡಿಯಿಂದ ಬಂದೇ ಕಾಣಬೇದೆಂದೂ ಸಂಕಲ್ಪಿಸಿದ್ದೆ. ಇಂದಿನ ನನ್ನ (೧-೧೧-೨೦೧೪) ಸೈಕಲ್ ಸರ್ಕೀಟ್ ಉಡುಪಿಯ ಹೆದ್ದಾರಿ ಹಿಡಿದು ನೇರ ಹಳೆಯಂಗಡಿಗೇ ಹೊರಟಿತು.
ಪಾವಂಜೆಯ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಡಿ ಹಗಲಿನ ಯಕ್ಷಗಾನ ನಡೆದಿತ್ತು. ಮೂಲ್ಕಿಯ ಮೋಹನರಾಯರು ಅಲ್ಲಿ ಸಿಗೋಣ ಎಂದ ನೆಪಕ್ಕೆ ಅಲ್ಲಿ ಮೂಗು ತೂರಿದೆ. ಭರ್ಜರಿ ಜನ, ಸಂತರ್ಪಣೆ, ಆಟದ ಗದ್ದಲ ನಡೆದಿತ್ತು. ಮೋಹನರಾಯರಿಗೆ ರಸಭಂಗ ಮಾಡದೆ, ಸಾರ್ವಜನಿಕರಿಗೆ ಇಟ್ಟಿದ್ದ ಬಿಟ್ಟಿ ಚಾ ಕುಡಿದು ನೇರ ಹಳೆಯಂಗಡಿ ಸೇರಿದೆ. ಅಲ್ಲಿನ ಆಯುರ್ವೇದ ಪಂಡಿತ ಹರಿಭಟ್ಟರು ನನ್ನ ಆತ್ಮೀಯರು. ಆದರೆ ಅವರ ವಿಶ್ರಾಂತಿಯ ವೇಳೆಯದಾಗಿ ತೊಂದರೆ ಕೊಡದೆ ಮುಂದುವರಿದೆ. ಕಿರಿದಂತರದಲ್ಲಿನ ಸಾಮಾನ್ಯ ಸೇತುವೆಯಲ್ಲಿ ಕೊಳುವೈಲು ಕುದುರಿಗೇ ನುಗ್ಗಿದ್ದೆ. ಜಲಸಮೃದ್ಧಿಯ ಪಕ್ಕಾ ಕೃಷಿಭೂಮಿ. ದುಡಿಯುವ ಕೈಗಳ ಕೊರತೆ ಮೀರಲು, ವಾಹನ ಸಂಚಾರಮೂಲೆ ಮೂಲೆಗೆ ವ್ಯಾಪಿಸಲು ದ್ವೀಪದ ಮಧ್ಯೆ ಹಾಸಿಕೊಂಡ ಸಪುರ ಕಾಂಕ್ರೀಟ್ ಮಾರ್ಗ ಮತ್ತದರಿಂದ ಕವಲೊಡೆಯುವ ಅಸಂಖ್ಯ ಮಣ್ಣದಾರಿಗಳನ್ನು ನೋಡುತ್ತ ಸಾಗಿದೆ.
ಅಲ್ಲಿನ ಗದ್ದೆಯಲ್ಲಿ ಕೊಯ್ಲು ಮುಗಿದಿತ್ತು. ಇದೇ ಮೊದಲಾಗಿ ಅದು ಯಾಂತ್ರಿಕ ಕಟಾವಿಗೆ ಸಿಕ್ಕಿದ್ದಿರಬೇಕು. ಆ ಭೂಮಿಯಲ್ಲಿ ಮೂಡಿದ ರೇಖಾ ವಿನ್ಯಾಸಕ್ಕೆ ಆಕರ್ಷಕವಾಗಿತ್ತು. ಈ ನೀರು ಸಮೃದ್ಧ ಪ್ರದೇಶದಲ್ಲಿ ಬೇರೇನೂ ಇಲ್ಲವೇ ಎಂಬ ನನ್ನ ಮನದ ಹುಡುಕಾಟಕ್ಕೆ ಕಾಣ ಸಿಕ್ಕವರು ಜಾಫ್ರಿ, ಸುಜಲಾನ್ ಉದ್ಯೋಗಿ. ಹದಿನೈದು ವರ್ಷ ಕೊಲ್ಲಿ ದೇಶಗಳಲ್ಲಿದ್ದು ಆರೋಗ್ಯ ಕೊಲ್ಲಿಸಿಕೊಂಡು ಇಲ್ಲಿ ನೆಲೆ ಕಂಡವರು. ಮಳೆಗಾಲ ಉಳಿದಂತೆ ಅಲ್ಲಿನ ನೆಲ-ನೀರಿನಲ್ಲಿ ಬರುವ ಉಪ್ಪಿನ ಪ್ರಭಾವವನ್ನು ಇವರು ವೈಯಕ್ತಿಕವಾಗಿ ಉತ್ತರಿಸಿ ಪುಟ್ಟ ಕೃಷಿ ನಡೆಸಿದ್ದಾರೆ. ಗೋಣಿಚೀಲಗಳಲ್ಲಿ ಮಣ್ಣು ತುಂಬಿ, ವೈವಿಧ್ಯಮಯ ತರಕಾರಿಗಳನ್ನು ಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ.
ಪ್ರತಿ ಬೆಳಗ್ಗೆ ಮೂರುಗಂಟೆಗೇ ಎದ್ದು, ಬಾವಿಯಿಂದ ಕೊಡಪಾನಗಳಲ್ಲಿ ನೀರು ಸೇದಿ, ಹೊತ್ತು ಗಿಡಗಿಡದ ಬುಡಕ್ಕೆ ಹನಿಸುವುದು ಮತ್ತೆ ಹಳೆಯಂಗಡಿಯವರೆಗೆ ಓಡಿ ಹೋಗಿ
ಬರುವುದು (ಜಾಗಿಂಗ್) ಇವರ ಪ್ರಿಯ ಹವ್ಯಾಸದ ಭಾಗ. ಬಾವಿಗೆ ಮೋಟಾರ್ ಇಟ್ಟು, ಕೊಳಾಯಿ ಜೋಡಿಸಿ, ಗಿಡ ತಣಿಸುವ ಆರ್ಥಿಕ ಸೌಕರ್ಯ ಇವರಿಗಿಲ್ಲದಿಲ್ಲ! ಹೀಗೆ ಬಂದ ಫಸಲಿನಲ್ಲಿ ಅವರ ಮನೆಯ ಉಪಯೋಗ ಮೀರಿ ಉಳಿದವನ್ನು ಸದಾ ಮತಪ್ರಚಾರಕನ ಉತ್ಸಾಹದಲ್ಲಿ ನೆರೆಹೊರೆಯಲ್ಲೆಲ್ಲ ಹಂಚುತ್ತಾರಂತೆ. ಉದ್ಯೋಗ ಪ್ರತ್ಯೇಕ ಇರುವಾಗ ಪ್ರಕೃತಿಯೊಡನಾಟದ ಈ ಅವಕಾಶವನ್ನು ಹೇಗೆ ಯಂತ್ರಗಳಿಗೊಪ್ಪಿಸುವುದಿಲ್ಲವೋ ಹಾಗೇ ಅದರ ಫಲವನ್ನು ಆರ್ಥಿಕತೆಗೆ ಪರಿವರ್ತಿಸದ ಅಪೂರ್ವ ಛಲ ಇವರದು! ಕೃಷಿ ತೋರಿ, ಉಚಿತವಾಗಿಯೇ ವಿತರಿಸುವ ಛಲಗಾರ. ಅದೇ ಮೊದಲು ಪರಿಚಯವಾದ ನನಗೂ ಜಾಫ್ರಿ ಎಲ್ಲ ತೋರಿ, ಹರಿವೆಸೊಪ್ಪಿನ ಕಟ್ಟು ಹೊರಿಸಿ ಕಳಿಸಬೇಕೆಂದಿದ್ದರು. ಆದರೆ ಆಗಸದಲ್ಲಿ ಜಾರುತ್ತಿದ್ದ ಸೂರ್ಯನಿಗೆ ಹೆದರಿ, ಸೈಕಲ್ಲಿನ ಮಿತಿಯನ್ನೂ ತಿಳಿಸಿ ಎಲ್ಲ ನಿರಾಕರಿಸಿ ಮರಳಿ ಮಂಗಳೂರಿಸಿದೆ.
***
ಉಳ್ಳಾಲ ಭೂಶಿರ
(ಮೂಗಿಲ್ಲವಾದರೆ)
ಎಷ್ಟೊಂದು ಸುಂದರ
ನಿನ್ನೆ ಸಂಜೆ (೪-೧೧-೨೦೧೪) ನನ್ನ ಸೈಕಲ್ಲನ್ನು ಮೊನ್ನೆಯಷ್ಟೇ ತೊಡಗಿದ ಬಂಟರ ಹಾಸ್ಟೆಲ್ – ಜ್ಯೋತಿ ಕಾಂಕ್ರಿಟೀಕರಣ ತಡೆಯುತ್ತಿರಲಿಲ್ಲ. ಆದರೆ ವ್ಯಾಯಾಮವೆಂದೇ ಸರ್ಕೀಟ್ ಹೊರಟವನಿಗೆ ಒಳದಾರಿ ಬೇಕಿಲ್ಲವೆಂದು ಮಲ್ಲಿಕಟ್ಟೆ, ಏಗ್ನೆಸ್, ಕಂಕನಾಡಿ, ಮೋರ್ಗನ್ಸ್ ಗೇಟ್, ಮಹಾಕಾಳಿ ಪಡ್ಪುವಿಗಾಗಿ ಹೆದ್ದಾರಿ ಸೇರಿಕೊಂಡೆ. ಮತ್ತೆ USA (Uಳ್ಳಾಲ Saಮ್ಕದ Aಚೆ!), ತೊಕ್ಕೊಟ್ಟುಗಾಗಿ ಉಳ್ಳಾಲದ ಅಬ್ಬಕ್ಕ ವೃತ್ತ. ಅಲ್ಲಿ ಬಲಕ್ಕೆ ತಿರುಗಿ ಮುಖ್ಯಪೇಟೆಯ ಉದ್ದಕ್ಕೆ ಹೋಗಿ ನೇತ್ರಾವತಿ ದಂಡೆ ಕಂಡೆ. ಆಚೆ ನೇತ್ರಾವತಿಯ ಮುಖ್ಯ ಪಾತ್ರೆಯನ್ನು ಮರೆ ಮಾಡಿದಂತೆ ಮೂರು ನಾಲ್ಕು ಕುದುರು. ಆದರೆ ಅದನ್ನು ನಮ್ಮೆದುರಿನ ದೊಡ್ಡ ನಾಲೆಗೆ ಅಲ್ಲಲ್ಲಿ ಅಡ್ಡಸೀಳಿನ ಕಿರು ನಾಲೆಗಳು ಸಂಪರ್ಕಿಸಿದ್ದಂತಿತ್ತು. ಆ ಕುದುರುಗಳೆಲ್ಲ ನಿರ್ಜನ ಮತ್ತು ಬೇಸಗೆಯಲ್ಲೂ ದೋಣಿವಿನಾ ಸಂಪರ್ಕರಹಿತ! ನಾನಿದ್ದ ದಂಡೆ ಅಥವಾ ಎಡದಂಡೆ ಪಶ್ಚಿಮೋತ್ತರಕ್ಕೆ ಓರೆಯಲ್ಲಿ ಸಾಗಿತ್ತು. ಆ ಉದ್ದಕ್ಕೂ ದೋಣಿ ಮತ್ತು ಕಡಲುತ್ಪತ್ತಿಗಳದೇ ಕೆಲಸ, ವಹಿವಾಟು. ನಾಲೆದಂಡೆಯ ತುಸು ಕಚ್ಚಾ ರಸ್ತೆಯಲ್ಲಿ ಹೋಗಿ, ಅಬ್ಬಕ್ಕ ವೃತ್ತದಿಂದ ಕಡಲ ಕಿನಾರೆಯಲ್ಲಿ ಬರುವ ಕಾಂಕ್ರೀಟ್ ರಸ್ತೆ ಸೇರಿ ಮುಂದುವರಿದೆ. ಒಂದು ಹಂತದಲ್ಲಿ ಕಡಲ ಕೊರೆತ ತಡೆಯಲು ಹಾಕಿದ ಬಂಡೆರಾಶಿಗಳೂ ಮುಗಿದಿದ್ದವು ಅಥವಾ ಆಚೆಗೂ ಹಾಕಿದ್ದಿರಬಹುದಾದ ಕಲ್ಲುಗಳು ತೊಳೆದು ಹೋದದ್ದೂ ಇರಬಹುದು. ಅಲ್ಲಿಗೆ ರಸ್ತೆ ಹಾಗೂ ಇತರ ಮನುಷ್ಯ ರಚನೆಗಳೆಲ್ಲ ಪ್ರಾಕೃತಿಕ ಶಕ್ತಿಯ ಪಾರಮ್ಯಕ್ಕೆ ಶರಣಾದ್ದು ಸ್ಪಷ್ಟವಿತ್ತು. ಮುಂದೆ ನೆಲ ಅಂದರೆ ಮರಳ ದಿಬ್ಬ – ಕಡಲ ಬದಿಗೆ ಕಡಿದು, ಹೊಳೆ ಬದಿಗೆ ಜಾರು. ಅದೀಗ ಉತ್ತರ ದಿಕ್ಕು ಬಿಟ್ಟು ಪಶ್ಚಿಮಕ್ಕೆ ಹೊರಳುತ್ತ, ಕಣ್ಣೆಟಕುವವರೆಗೂ ಚೂಪುಗೊಳ್ಳುತ್ತಾ ಸಾಗಿತ್ತು. ಅದರ ಚಂದ ನೋಡಿದಷ್ಟೂ ಮುಗಿಯದು. ಆದರೆ ಹಾಗೆಂದು ಹೆಚ್ಚು ನಿಲ್ಲದಂತೆ, ಅಂದರೆ ಸ್ವಸ್ಥ ಉಸಿರಾಡದಂತೆ ದುಸ್ಥಿತಿ. ಆ ನೆಲದಲ್ಲಿ ಮೊದಲೊಂದಷ್ಟು ದೂರಕ್ಕೆ ಮೀನು, ಸಿಗಡಿಗಳನ್ನು ಬಿಸಿಲಿಗೆ ಹರವಿದ್ದರು. ಮೀನು ಸಂಸ್ಕರಣೆಯನಂತರ ಉಳಿದ ಕೊಚ್ಚೆ, ವಿವಿಧ ಇಂಜಿನ್ನುಗಳ ಸವಕಲು ಭಾಗಗಳು, ಮಡ್ಡೆಣ್ಣೆ, ಮನುಷ್ಯ ಗಲೀಜುಗಳು ಎಲ್ಲಕ್ಕೂ ಮುಖ್ಯವಾಗಿ ಕೆಟ್ಟ ಗಟಾರಗಳು ಮೂಗುಬಿಡದ ಸ್ಥಿತಿ ತಂದಿವೆ. ಅವನ್ನೆಲ್ಲ ಕಳೆದು ನೆಲದ ಕೊನೆಯವರೆಗೆ ಮರಳಿನಲ್ಲಿ ಸೈಕಲ್ ಮೆಟ್ಟುವುದು ಅಸಾಧ್ಯ. ಹಿಂದೆ ಬಿಟ್ಟು ಹೋಗಲು ಧೈರ್ಯ ಬರಲಿಲ್ಲ. ಸೈಕಲ್ ನೂಕುತ್ತ ನಡೆದು ನೋಡಲು ಸಮಯ ಉಳಿದಿಲ್ಲವೆಂದು ಮರಳಿ ಮಂಗಳೂರ ದಾರಿ ಸವೆಸಿದೆ.
***
ಬೆಂಗಳೂರು ಮೈಸೂರೆಂದು ನಾಲ್ಕು ದಿನ ರೈಲು, ಬಸ್ಸಿನಲ್ಲಿ ಜಡವಾದ್ದಕ್ಕೆ ನಿನ್ನೆ ಸಂಜೆ (೧೩-೧೧-೧೪) ಸೈಕಲ್ಲೇರಿದೆ. ಆದರೆ ಕರಂಗಲ್ಪಾಡಿ ಅರಳಿಕಟ್ಟೆ ತಲಪುವಷ್ಟರಲ್ಲೇ ದಿನವಿಡೀ ದುಗುಡ ತುಂಬಿದ್ದ ಆಗಸದ ಕಟ್ಟೆ ಒಡೆಯಿತು. ಗಂಟೆ ಮೀರಿ ಭರ್ಜರಿ ಮಳೆ. ಮಾರುಕಟ್ಟೆ ಮಾಡಿನಡಿಯಲ್ಲಿ ಚಪ್ಪೆಗುದ್ದಿ ಮರಳಿದ್ದೆ.
***
ಬಾನಂಗಳದ ಗದ್ದಲ ಇಂದೂ ಮುಗಿದಿಲ್ಲ. (೧೪-೧೧-೧೪) ನಂತೂರು ಕಳೆದು, ಬಿಕರ್ನಕಟ್ಟೆಯ ಹಿಂದಿನ ಗಲ್ಲಿಯಲ್ಲಿ ನುಗ್ಗಿದೆ. ಬಯಲುಸೀಮೆಯ ಅಥವಾ ಯೋಜನಾಬದ್ಧ ನಗರಗಳ ಅನುಕೂಲವಿಲ್ಲದ ರಚನೆಗಳು, ದಾರಿಗಳು. ಒಂದೆರಡು ಗಲ್ಲಿ ನುಗ್ಗಿ ಯಾರ್ಯಾರದೋ ಮನೆಯ ನಾಯಿಗಳ ಆಶೀರ್ವಚನ ಪಡೆದುಕೊಂಡೆ. ಕೊನೆಯಲ್ಲಿ ಪಾತಾಳಕ್ಕಿಳಿದು ತೋಟ, ಗದ್ದೆಯಂಚಿನ ತೋಡು ಹಾರುವ ಕಾಲ್ದಾರಿ ಸೇರಿದೆ. ಸೈಕಲ್ಲೆತ್ತಿ ಹಿಡಿದು ತೊರೆ ದಾಟಿದೆ. ಭಯಾವಹ ಸಿನಿಮಾದಲ್ಲಿ ಅದೇನೋ ರೇಖೆ ಮುಟ್ಟಿದಾಗ ಮಾಯಾಶಕ್ತಿಗಳು ಜಾಗೃತವಾಗುವಂತೆ ಭೋರ್ಗಾಳಿ ಅಬ್ಬರಿಸಿ, ತೆಂತಲೆಗಳು ಕೆದರಿ, ಇನ್ನೇನು ಮಡಲಿನಲ್ಲಿ ಬಡಿಯುತ್ತೋ, ಕಾಯಲ್ಲಿ ಕುಟ್ಟುತ್ತೋ ಎಂದು ಕ್ಷಣಕಾಲ ನಾನು ಕಕ್ಕಾಬಿಕ್ಕಿ. ಆದರೆ ಇದರ ಪರಿವೆಯಿಲ್ಲದಂತೆ ಒತ್ತಿನ ಕೋಮಳೆ ಕೆರೆಯಲ್ಲಿ ನೀರಕ್ಕಿಗಳ ಹಿಂಡೊಂದು ಜಲಕೇಳಿ ಮುಂದುವರಿಸಿತ್ತು. ಮತ್ತೆ ಅತ್ತಲಿಂದ ಸಿಕ್ಕ ತಪ್ಪಲಿನ ಸುತ್ತು ದಾರಿ ಬಹುದೂರ ಅನುಸರಿಸಿದೆ. ಕೆಸರಹೊಂಡಗಳ ಸರಣಿ, ಜಲ್ಲಿಕಿತ್ತ ಕಚ್ಚಾ ಜಾಡು ಸುಮಾರು ದೂರಕ್ಕೊಯ್ದು ಆಯ್ಕೆ ಕೊಟ್ಟಿತು. ಎಡದ ಯೆಯ್ಯಾಡಿ ನಿರಾಕರಿಸಿ ಬಲದ ಕವಲು ಹಿಡಿದು ಶಕ್ತಿನಗರಕ್ಕೇರಿದೆ. ಸಿಕ್ಕಿದ ಉಸಿರು ಬಿಡಿಸಿಕೊಳ್ಳುವಂತೆ ಗೋಪಾಲಕೃಷ್ಣ ದೇವಳದ ದಾರಿಯತ್ತ ಹೊರಳಿಸಿ, ಚಕ್ರ ಉರುಳಿಸಿದೆ.
ದೇವಳದ ಇಳಿಜಾರಿಗೂ ಮೊದಲು ಸಿಗುವ ಎಡದ ದಾರಿ ನಮ್ಮ ಮನೆಗೆ ಜೈವಿಕ ಅನಿಲ ಸ್ಥಾವರ ಕೊಟ್ಟ ಶ್ರೀಕೇಶರ ಕೆಲಸದ ಶೆಡ್ಡಿನದು. ಹಾಗೇ ಮುಂದುವರಿದಲ್ಲಿ ಮತ್ತೆ ಪದವಿನಂಚು. ವಿಹಂಗಮ ನೋಟವೇನೋ ಇತ್ತು, ಆದರೆ ಕವುಚಿಬಿದ್ದ ಕರ್ಮೋಡಗಳ ಭಾಂಡಕ್ಕೆ ಅಲ್ಲೊಂದು ಇಲ್ಲೊಂದು ಗಗನಚುಂಬಿ ಕಟ್ಟಡಗಳ ಕಡಗೋಲು – ಅಷ್ಟೇನೂ ಮೋಹಕವಲ್ಲ. ಮುಂದೆ ಕಣಿವೆಯ ತಳಕ್ಕೆ ತುಸು ಬಳಸುದಾರಿ ಎಂದೇ ಕಂಡರೂ ಅನುಸರಿಸಿದೆ. ಭರದಿಂದ ಇಳಿಯ ಹೊರಟವ ಅರ್ಧದಲ್ಲಿ ಬಿರಿಯೊತ್ತಿ ನಿಲ್ಲಲೇಬೇಕಾಯ್ತು; ದಾರಿಯಲ್ಲೊಂದು ದೊಡ್ಡ ಕೇರೆ ಹಾವು! ಅದು ನನ್ನ ಸೈಕಲ್ಲಿನ ಚಕ್ರದ ಶಬ್ದ ಗುರುತಿಸಿರಬೇಕು. ಬಲ ಅಂಚಿಗೇನೋ ಧಾವಿಸಿತು. ಆದರೆ ಅಲ್ಲಿ ಕಾನ್ವೆಂಟ್ ಒಂದರ ದೊಡ್ಡ ಗೋಡೆ. ಮತ್ತೆ ಅದಕ್ಕೆ ಅನುಕೂಲದ ಸಂದೋ ಜಾಡೋ ಹುಡುಕಲು `ಅಪಾಯಕಾರಿ’ಯಾದ ನಾನಿರುವಾಗ ಸಾಧ್ಯವೇ? ಅದೇ ತರಾತುರಿಯಲ್ಲಿ ಮತ್ತೆ ದಾರಿ ದಾಟಿ ಎಡ ಪೊದರ ಮರೆಗೇ ಸರಿದು ಹೋಯ್ತು. ನಾನು ಮುಂದುವರಿದೆ. ಆದರೆ ನನ್ನ ಸವಾರಿಗೂ ಆ ಕೇರೆ ಹಾವಿನದೇ ಗತಿ. ದಾರಿ ಕುರುಡುಕೊನೆ ತೋರಿದ್ದಕ್ಕೆ ವಾಪಾಸು ಹೊರಟೆ. ಇಷ್ಟರಲ್ಲಿ ಐದು ಮಿನಿಟೇ ಕಳೆದಿರಬಹುದು. ಆದರೆ ಅದೇನು ನಂಟೋ ಮತ್ತದೇ ಕೇರೆ ಹಾವು ಅರ್ಧ ದಾರಿಯಲ್ಲಿತ್ತು. ನನ್ನ ಕಾಳಜಿ ಅದಕ್ಕರ್ಥವಾಗುವ ಮಂತ್ರವೇನೂ ಇಲ್ಲದ್ದಕ್ಕೆ, ಅದು ಪುನಃ ವಿಫಲವಾಗಿ ಮರಳಿತು. ನಾವೆಷ್ಟು ಪುಣ್ಯವಂತರು – ನಮ್ಮ ಮೇಲೆ ಹೊಂಚುವ ಶಕ್ತಿಗಳು ಯಾವವೂ ಇಲ್ಲ!
ನಾನು ಪದವಿನ ಎತ್ತರಕ್ಕೆ ಬರುವಾಗ ಕ್ರಮಿಸಿದ ಅಂತರದಲ್ಲಲ್ಲದಿದ್ದರೂ ಹತ್ತಿಸಿದ ಮೂರು ಗುಡ್ಡದ ಶ್ರಮದಲ್ಲಿ ಸರ್ಕೀಟ್ ಸಾರ್ಥಕ ಎನ್ನುವಂತೆ ಪೂರ್ವಾಗಸದಲ್ಲಿ ಮೋಡದ ಗವಿಯೊಳಗಿಂದೊಂದು ಸಪ್ತರಂಗೀ (ಕಾಮನಬಿಲ್ಲು) ತುಣುಕೊಂದು ಚಿಮ್ಮಿತ್ತು. ಇಂದಿಗಷ್ಟೇ ಲಾಭ ಎಂದುಕೊಂಡು ಕುಲಶೇಖರದತ್ತ ಸಾಗಿ, ಮನೆಗೆ ಮರಳಿದೆ.
***
ನಂದಿನಿ ಹೊಳೆಯ ಮುಖಜಭೂಮಿ (ದೋಣಿ ಸವಾರಿಗೆ) ತನಿಖೆ ಮಾಡಲು ಸೈಕಲ್ ಸರ್ಕೀಟ್ ತುಸು ಬೇಗವೇ ಹೊರಡಿಸಿದೆ (೧೫-೧೧-೧೪). ಉಡುಪಿ ಹೆದ್ದಾರಿಯಲ್ಲಿ ಸುರತ್ಕಲ್ಲಿನವರೆಗೆ `ಕ್ಯಾಪ್ಟನ್’ ದೀಪಿಕಾಪ್ರಸಾದ್ ನನಗೆ ಜತೆ ಕೊಟ್ಟರು. ಆಕೆಯ ಉತ್ಸಾಹಕ್ಕೆ ಯಾಕೋ ಸೌಖ್ಯ ಸಹಕರಿಸಲಿಲ್ಲ, ಅಲ್ಲಿಂದ ಹಿಂದೆ ಸರಿದರು.
ಪಾವಂಜೆ ಸೇತುವೆಗೂ ಮೊದಲೇ ಹೆದ್ದಾರಿ ತೊರೆದು, ಪಕ್ಕದ ನಂದಿನಿ ದಂಡೆದಾರಿ ಅನುಸರಿಸಿದೆ. ನೀರಜಾಲಗಳನ್ನು ನೋಡುತ್ತಾ ಹೊಳೆಯದೇ ಒಂದು ಕವಲು ಅಡ್ಡಗಟ್ಟಿದ ಕೊನೆ ತಲಪಿದೆ. ಅಲ್ಲೊಂದು ಕಾಲುಸಂಕ. ಬಾಗಲಕೋಟೆಯ ಮರಳುಗಾರ ಸೊಂಟಮಟ್ಟದ ನೀರಿನಲ್ಲಿದ್ದು, `ಭರತ’ ನೋಡಿ ದಿನದ ಕಾಯಕಕ್ಕೆ ವಿದಾಯ ಹೇಳುತ್ತಿದ್ದ. ಅವ ನನ್ನ ಲೆಕ್ಕಕ್ಕೆ ನೀರಾಳದ ಸೂಚಿಯೂ ಹೌದು!
ಸಂಕದಾಚೆ ಸಸಿಹಿತ್ತಿಲು ಕಡಲಕಿನಾರೆಯ ಪಕ್ಕಾ ಡಾಮರುದಾರಿ. ಆದರೆ ಸಂಕದಿಂದ ಐವತ್ತು-ನೂರಡಿಯ ಸಂಪರ್ಕ ಮಾರ್ಗ ನಾಸ್ತಿಯಾಗಿ ಮರಳದಿಬ್ಬದಲ್ಲಿ ನಾನು ಸೈಕಲ್ಲಿಳಿದು ನೂಕುವುದಾಯ್ತು. ಹಿಂದೊಮ್ಮೆ ಮಳೆಯ ನೆರಳಲ್ಲಿ ಸಸಿಹಿತ್ತಿಲು ಹಳ್ಳಿಯ ಕೊನೆಯಷ್ಟೇ ನೋಡಿ ಮರಳಿದ್ದು ನೆನಪಿತ್ತು. ಈ ಬಾರಿ ಮುಂದುವರಿದೆ. ಅರಣ್ಯ ಇಲಾಖೆಯ ಗಾಳಿಮರದ ತೋಪಿನೊಳಗಿನ ಕಚ್ಚಾದಾರಿಗೆ ಆಳೆತ್ತರದ ಹುಲ್ಲು ಅಂಚುಗಟ್ಟಿ ಸವಾರಿಯ ದಡಬಡದಲ್ಲೂ ಮುದನೀಡಿತೆಂದೇ ಹೇಳಬೇಕು. ಕೊನೆಯ ಹಂತದಲ್ಲಿ ಬಹುಶಃ ಮಳೆಗಾಲದ ಪ್ರವಾಹ ದಾರಿಯ ಒಂದಷ್ಟನ್ನು ನುಂಗಿದ್ದಿರಬೇಕು. ಆದರೆ ಕಾಲಸಹಜವಾಗಿ ಹಿಂದೆ ಸರಿದ ಹೊಳೆಮುಟ್ಟಲು ಮತ್ತೆ ಸುಮಾರು ನೂರಡಿ ಸೈಕಲ್ ನೂಕಿಯೇ ನಡೆದೆ. ದಿಗಂತದಲ್ಲಿ ಉಷ್ಣ ವಿದ್ಯುತ್ ಸ್ಥಾವರದ ಭಾರೀ
ಚಿಮಣಿ ಊರಿನೆಲ್ಲಾ ಜೀವಾಜೀವಕ್ಕೆ ವಿಷ ಪ್ರಸರಿಸುತ್ತಿರುವುದನ್ನು ಕಂಡದ್ದೇ ನದಿಮುಖಜ ಭೂಮಿಯ ಭೌಗೋಳಿಕ ವಿವರಗಳು ತನ್ನಿಂದ ತಾನೇ ಅನಾವರಣಗೊಂಡಿತು. ನಡಿಬೈಲು, ದೃಷ್ಟಿಗೆ ಮರೆಯಲ್ಲಿದ್ದರೂ ಸರ್ಫಾಶ್ರಮದ ಸ್ಥಾನ, ಶಾಂಭವಿಯ ಬಳುಕು, ಇಲ್ಲಿ ನಂದಿನಿಯ ಸೇಳೆ ಕೊನೆಯಲ್ಲಿ ಎರಡೂ ಕೈ ಕೈ ಹಿಡಿದು ರಿಂಗಣಿಸುತ್ತ ಅಂಚಿಗೆ ಸರಿದಾಗ ಸಮುದ್ರ ಸೆಳೆದಪ್ಪುವ ಚಂದವೆಲ್ಲ ಕಣ್ತುಂಬಿಕೊಂಡೆ. ಹಾಗೇ ಅದೇ ತಾನೆ ಸಮುದ್ರದಿಂದ ಬಂಗುಡೆ ತುಂಬಿ ತಂದ ಮೀನುಗಾರ ಬಾಲಣ್ಣನನ್ನೂ ಕೇವಲ ಕಂಡೆ. ಆದರೆ ಯಾರೋ ನಾಲ್ವರು ಬೈಕೇರಿ ಹೀಗೇ ಬಂದಿದ್ದವರು ಅಷ್ಟಕ್ಕೆ ಉಳಿಯಲಿಲ್ಲ. ಅವರಿಗೆ ಬಾಲಣ್ಣನ `ಸೀ-ಫ್ರೆಶ್’ ಮಾಲು ಮತ್ತೆ ಮಾರುಕಟ್ಟೆಯ ಸುಂಕ ತಪ್ಪಿದ ಉತ್ಸಾಹ ಸೇರಿ, ಅಷ್ಟನ್ನೂ ಕ್ರಯ ಮಾಡಿದರು. ಅಲ್ಲಿ ಉಳಿದಂತೆ ನಾನೊಬ್ಬನೇ ಇದ್ದುದರಿಂದ ಅವರು ಅನುಮಾನದಲ್ಲೇ ನನ್ನನ್ನು ಕೇಳಿದರು “ಭಟ್ರಾ?” ನಾನು ಖಡಕ್ಕಾಗಿ “ಅಲ್ಲ” ಅಂದರೂ ಅವರಿಗೆ ಬೇಕಾದ ಉತ್ತರ – ನನ್ನ ಪುಳಿಚಾರ್ತನ (ಸಸ್ಯಾಹಾರಿತನ) ಸಾರಿದೆ. ಅವರು ಗೊಳ್ಳೆಂದು ನಕ್ಕರು. ಅದು ಪಾಲು ಕೊಡುವುದುಳಿಯಿತು ಎಂಬ ಸಂಭ್ರಮವೋ ನನ್ನ ಅರಸಿಕತನಕ್ಕೆ ಕನಿಕರವೋ ತಿಳಿಯಲಿಲ್ಲ.
ವಾರ-ಹತ್ತು ದಿನದ ಹಿಂದೆ ಕೊಳುವೈಲು ಬದಿಯ ಸರ್ಕೀಟಿನಲ್ಲಿ ನಾನು ದಾಖಲಿಸಿದ ತೂಗುಸೇತುವೆಯ ಅವಶೇಷ ನೆನಪಿದೆಯಲ್ಲಾ. ಇಂದು ಅದರ ಎದುರು ದಂಡೆಯಲ್ಲಿದ್ದೆ; ಒಮ್ಮೆ ಅಲ್ಲೂ ಇಣುಕಿದೆ. ಝಾರ್ಖಂಡಿನ ಮರಳುಗಾರರು ಆರಾಮದಲ್ಲಿ ಕುಳಿತು ಸಾರಿಗೆ ಮೀನು ಸಜ್ಜುಗೊಳಿಸುತ್ತಿದ್ದರು. “ಏನು ರಜೆಯೇ” ವಿಚಾರಿಸಿದೆ. ಅದರದ್ದೇ ಹಿಂದಿ ಅನುವಾದ ಕೊಟ್ಟ ಮೇಲೆ ಉತ್ತರ ಬಂತು – ಎರಡು ವಾರದಿಂದ ಕೆಲಸವಿಲ್ಲ. ಕಾರಣ – ಪರ್ಮಿಟ್ಟಿಲ್ಲ. ಇವರೂ ಅಲ್ಲಿ ಬಾಗಲಕೋಟೆಯವನೂ ಯಾವ್ಯಾವುದೋ ಸಾಹುಕಾರರಿಗೆ ಕೂಲಿಕಾರರು. ಅವನಿಗಿರುವ ಪರ್ಮಿಟ್ಟು ಇವರಿಗ್ಯಾಕಿಲ್ಲ, ಒಮ್ಮೆ ಯೋಚನೆ ಬಂತು. ಆದರೆ ಯಾವ ನೀರಿನಲ್ಲಿ ಎಂಥಾ ಮೀನೋ ಎಂದು ತಲೆಬಿಸಿ ಹಚ್ಚಿಕೊಳ್ಳದೆ, ಮಿಂಚು ನುಲಿಯುತ್ತಿದ್ದು ಸದ್ಯ ಮಳೆಯಲ್ಲದಿದ್ದರೂ ಅಕಾಲಿಕ ಕತ್ತಲಾವರಿಸೀತು ಎಂಬ ಆತುರದಲ್ಲಿ ಮನೆಯತ್ತ ಪೆಡಲಿದೆ.
***
ಗಡಿಯಾರದ ಮುಳ್ಳಿನೊಡನೆ ಸ್ಪರ್ಧೆಗಿಳಿದಂತೆ ಇಂದು (೧೯-೧೧-೨೦೧೪) ನಾಲ್ಕೂಮೂವತ್ತರಿಂದ ಆರೂ ಹತ್ತರವರೆಗೆ ನಿರಂತರ ಸೈಕಲ್ ಸರ್ಕೀಟ್ ನಡೆಸಿದೆ. ದಾರಿಯೇನೂ ಹೊಸತಲ್ಲ – ಮಲ್ಲಿಕಟ್ಟೆ, ಪಂಪ್ವೆಲ್, ಪಡೀಲ್, ವಳಚಿಲ್ವರೆಗೆ ಸಮಾಧಾನದ ಓಟ. ಮತ್ತೆ ಒಮ್ಮೆಗೆ ಆರೇಳು ಹಿಮ್ಮುರಿ ತಿರುವೇರಿ ಮೇರ್ಲಪದವಿನೆತ್ತರಕ್ಕಾಗಿ ನೀರುಮಾರ್ಗ, ಕುಲಶೇಖರ, ಮಲ್ಲಿಕಟ್ಟೆ, ಮನೆ.
ಅಂದಿನ ಕತೆ ಇಷ್ಟೇ – ಮನೆಯ ಹಳೆಯ ತೆಂಗಿನ ಕಾಯಿಗಳನ್ನು ಸುಲಿದು, ಒಡೆದು, ಮೇಲಕ್ಕೆ ಹೊತ್ತು ಹರಗುವವರೆಗೆ ನಾನು ಶ್ರಮಸಂಸ್ಕೃತಿಯನ್ನು ಅವಗಣಿಸಿ, ಸರಸ್ವತಿಯ ಮರೆಯಲ್ಲಿ ಕುಳಿತುಬಿಟ್ಟೆ! ಸರಳವಾಗಿ ಹೇಳುವುದಾದರೆ ಅಷ್ಟನ್ನೂ ದೇವಕಿಯೊಬ್ಬಳೇ ಮಾಡಿ ಮುಗಿಸಿದ್ದಳು. ನನ್ನ ಸೈಕಲ್ ಸರ್ಕೀಟಿನ ಪ್ರತಿಸ್ಪರ್ಧಿ – ಸೂರ್ಯನಿಗೆ, ಕೊಬ್ಬರಿ ಒಣಗಿಸುವ ಕೆಲಸ ವಹಿಸಿದ್ದೆ. ಕೊಬ್ಬರಿಯನ್ನು ಸಂಜೆ ಕೆಳತರುವಲ್ಲಾದರೂ ನಾನಿರುತ್ತೇನೆ ಎಂದೇ ಸೈಕಲ್ ತುಳಿದೇ ತುಳಿದೆ. ಸೂರ್ಯ ಶೀಘ್ರಕೋಪಿ. ನಾನಿನ್ನೂ ನೀರುಮಾರ್ಗ ದಾಟುತ್ತಿದ್ದಂತೆ ಆತ ಕೆಂಪುಕೆಂಪಾಗಿದ್ದ. ಮೊದಲೆಲ್ಲ ಸಾಂತ್ವನ ನೀಡುತ್ತಿದ್ದ ತೆಂಗಿನ ಗರಿಗಳ ಸ್ಥಾನದಲ್ಲಿ ಬಹುಮಹಡಿಯ ಸರಳುಗಳ ಮಂಚ ಆತನನ್ನು ಮತ್ತಷ್ಟು ಕೆರಳಿಸಿತು. ಆ ಉರಿಮುಸುಡಿನ ಫೋಟೋ ತೆಗೆಯಲು ನಾ ನಿಂತಿದ್ದರೆ ಕ್ಯಾಮರವನ್ನೇ ಸುಟ್ಟುಬಿಡುತ್ತಿದ್ದನೋ ಏನೋ! ಇಂದಿನ ಸರ್ಕೀಟಿನ ನೆನಪಿಗೆ ಒಂದೂ ಚಿತ್ರವಿಲ್ಲದಂತೆ ಮನೆಸೇರಿಬಿಟ್ಟೆ. [ಹಾಗಾಗಿ ಚಿತ್ರ ಇಲ್ಲ. ಆದರೆ ಕೊಬ್ಬರಿ ಇಳಿಸುವಲ್ಲಿ ದೇವಕಿಗೆ ಒದಗಿದೆ ಎಂದು ಪ್ರತ್ಯೇಕ ಹೇಳಬೇಕಿಲ್ಲ ತಾನೇ]
***
ನಮ್ಮ ಜಂಟಿ ಸೈಕಲ್ ಸರ್ಕೀಟ್ ಪ್ರಭಾವದಲ್ಲಿ ನನಗೆ ಅಷ್ಟೇನೂ ಪರಿಚಿತರಲ್ಲದ ಅಜಿತ್ ಕಾಮತ್ ಒಂಟಿ ಸೈಕಲ್ ಕೊಂಡದ್ದು ಕೇಳಿದ್ದೆ. ಆದರೆ ಗೆಳೆಯ ವೇಣು ವಿನೋದ್ ಮಾತ್ರ ಬರುವ ವರ್ಷಕ್ಕೆಂದೇ ಬರೆದಿಟ್ಟ ಸೈಕಲ್ ಖರೀದಿ ಯೋಜನೆಯನ್ನು ಹತ್ತು ದಿನದ ಹಿಂದೆಯೇ ಪೂರೈಸಿಬಿಟ್ಟಿದ್ದರು. ಸಾಲದ್ದಕ್ಕೆ ಇಂದು (೨೦-೧೧-೨೦೧೪) ನನ್ನಲ್ಲೇ ಅನುಸರಣ ವೀಳ್ಯ (ಪುಣ್ಯಕ್ಕೆ ರಣವೀಳ್ಯ ಅಲ್ಲ!) ಕೇಳಿದರು. ನಾನು ಕೂಳೂರು ಸಂಕದಾಚೆ ಹೋಗಿ ಸುರತ್ಕಲ್ಲಿನಿಂದ ಬಂದ ಅವರನ್ನು ಕೂಡಿಕೊಂಡೆ. ವೇಣು ಜೊತೆಗೆ ಇಂಜಿನಿಯರಿಂಗ್ ವಿದ್ಯಾರ್ಜನೆಯಲ್ಲಿರುವ ಅಭಿಭಟ್ – ನನಗೆ ಹೊಸ ಪರಿಚಯ, ಬಂದಿದ್ದ.
ಕುದುರೆಮುಖ ಗಣಿಗಾರಿಕೆಯ ಆಯುಷ್ಯ ಮುಗಿಯುತ್ತಿದ್ದ ಕಾಲದಲ್ಲಿ ಆ ಕಂಪೆನಿ ವಿಸ್ತರಣೆಗೆ ಸರಕಾರದ ಮೇಲೆ ಹಲವು ವಿಧದ ಒತ್ತಡ ತರತೊಡಗಿತ್ತು. ಅದರಲ್ಲೊಂದು ಪಣಂಬೂರಿನಲ್ಲಿ ಬೀಡುಕಬ್ಬಿಣದ ಕಾರ್ಖಾನೆಯ ಸ್ಥಾಪನೆ. ಮೂಲದಲ್ಲಿ ಕುದುರೆಮುಖದಿಂದ ಕೊಳವೆಯಲ್ಲಿ ಬಂದ ಅದಿರು ಕೆಸರು ಭೂಗತ ಕೊಳಾವೆಯಲ್ಲಿ ಹೆದ್ದಾರಿಯಿಂದ ಪಶ್ಚಿಮಕ್ಕಿದ್ದ ಅದಿರನ್ನು ಉಂಡೆಗಟ್ಟುವ ಕಾರ್ಖಾನೆಯ ವಠಾರ ಸೇರಿಕೊಳ್ಳುತ್ತಿತ್ತು. ಅದನ್ನೀಗ ಹೆದ್ದಾರಿಯ ಪೂರ್ವಕ್ಕಿದ್ದ ಹೊಸ ಕಾರ್ಖಾನೆಗೆ ರವಾನಿಸಲು ಎತ್ತರದ ಸಾಗಣಾಪಟ್ಟಿ ರಚಿಸಿದ್ದರು. ಆದರೆ ಅವೆಲ್ಲ ಕಾರ್ಯಾಚರಣೆಗೆ ಇಳಿಯುವ ಮೊದಲು ಗಣಿಗಾರಿಕೆ ಮುಚ್ಚಿಹೋಯ್ತು. `ಬಳ್ಳಾರಿ ದರೋಡೆಕೋರ’ರ ಹೂಟ ಬಯಲಾಗುವುದರೊಡನೆ ಅಂತಿಮ ಆಸರೆಯೂ ಇಲ್ಲವಾಗಿ ಕಾರ್ಖಾನೆ ಗರ್ಭಪಾತಕ್ಕೊಳಗಾಯ್ತು! ಇಲ್ಲಿ ಎಂದೂ ಕೆಲಸ ಮಾಡದ ಸಾಗಣಾಪಟ್ಟಿ ಇಂದು ತುಕ್ಕು ಹಿಡಿಯುತ್ತಿದೆ. (ಹೀಗೆ ಕಬ್ಬಿಣವನ್ನು ಪ್ರಕೃತಿ ಮರಳಿಪಡೆಯುತ್ತಿರಬಹುದೇ?) ಇಂದು ಅದರ ಪಕ್ಕದಲ್ಲೇ ಹೊಸದಾಗಿ, ಇನ್ನಷ್ಟು ಭರ್ಜರಿ ಮೇಲ್ಸೇತುವೆಯೊಂದನ್ನು ಎಂಆರ್ಪೀಯೆಲ್ ರಚಿಸಿದೆ. ಇದರಲ್ಲಿ ಕೊಳವೆ ಸಾಲು ಹಾಯಲಿದೆ. ಜನವಸತಿ, ಕೃಷಿಸಂಪತ್ತಿನ ಹೃದಯಭಾಗದಲ್ಲೇ ಬೆಣೆ ಕಳಚಿದ ಬಾಟಲಿಯೊಳಗಿನ ರಕ್ಕಸನಂತೆಯೇ ನೆಲೆಯೂರಿತು ಈ ಪೆಟ್ರೋ ಕಾರ್ಖಾನೆ. ಈಗ ವಿವಿಧ ಹಂತಗಳಲ್ಲಿ ವಿಸ್ತರಿಸುತ್ತಿರುವುದರ ಫಲವೇ ಈ ಮೇಲ್ಸೇತು. ಇದಕ್ಕೆ ಸುಣ್ಣ ಬಣ್ಣ ಕಾಣುತ್ತಿರುವಾಗ ತುಕ್ಕು ಸೇತು ಹೇಳಿಕೊಳ್ತಾ ಇದೆ “ಅತ್ತೆಗೊಂದು ಕಾಲ ಸೊಸೆಗೊಂದು ಕಾಲ”
ನಮ್ಮ ಸರ್ಕೀಟು ಆ ಕೊಳವೆ ಸಾಲಿನುದ್ದಕ್ಕೆ ಹೋಗಿ ಜೋಕಟ್ಟೆ, ಪೊರ್ಕೋಡಿಗಾಗಿ ಬಜ್ಪೆ ಪದವಿಗೆ ಹೋಯ್ತು. ಅಭಿ ಆತನ ಎತ್ತರಕ್ಕೆ ತುಸು ಗಿಡ್ಡವೆನ್ನಿಸುವ ಹಳೇ ಆದರೆ ಗೇರ್ಯುಕ್ತವೇ ಆದ ಸೈಕಲ್ಲಿನಲ್ಲಿದ್ದ. ಆತ ತಾರುಣ್ಯದ ಬಿಸಿಯಲ್ಲಿ ಎಲ್ಲವನ್ನು ಚೆನ್ನಾಗಿಯೇ ನಿಭಾಯಿಸಿದ. ವೇಣು ಇನ್ನೂ ಪಳಗಬೇಕು 😉 ಬಜ್ಪೆ ಇಳಿಜಾರಿನಲ್ಲಿ ರ್ರುಮ್ಮನಿಳಿದು, ಮಳವೂರು ಸಂಕ ದಾಟಿದ ಮೇಲೆ ಕಾವೂರು ವೃತ್ತದವರೆಗೆ ಉಸ್ಸಾಪುಸ್ಸಾ ಮಾಡಿ ತಂಡ ಬರ್ಖಾಸ್ತು ಮಾಡಿದೆವು. ಆಕಾಶದ ಸಾಕ್ಷಿ ಪಣಂಬೂರಿನ ಧುಮುಕು ಹಲಗೆಗೆ ಬಂದು, ಕಡಲಿಗೆ ನೆಗೆಯಲು ಜೀಕುತ್ತಿದ್ದಂತೆ ಅವರಿಬ್ಬರು ಕೂಳೂರಿನ ಮೂಲಕ, ನಾನು ಬೊಂದೇಲ್ ಮಾರ್ಗದಲ್ಲಿ ನೆಲೆ ಸೇರಿಕೊಂಡೆವು.
(ಅನಿಯತವಾಗಿ ಮುಂದುವರಿಯಲಿದೆ)
Anonymous
ಸೊಗಸಾಗಿದೆ. ಸ್ಥಳಪುರಾಣಗಳ ವರ್ಣನೆಯೊಂದಿಗೆ ಕಥಾನಕ ಸಲೀಸಾಗಿ ಸಾಗುತ್ತದೆ. ಕುದುರೆಮುಖದ ಅದುರಿನ ಸಾಗಣೆಪಟ್ಟಿಯ ಕತೆ ಚಿಕ್ಕದರಲ್ಲೇ ದೀರ್ಘ ಇತಿಹಾಸವನ್ನೂ ವರ್ತಮಾನದ ವ್ಯಂಗ್ಯವನ್ನೂ ಹೇಳುತ್ತದೆ.
ಸೈಕಲ್ ತಯಾರಿಸುವವರು ನಿಮಗೆ ಸಂಭಾವನೆ ನೀಡಬೇಕು….
ಸೈಕಲ್ ಕೊಂಡದ್ದು ಸಾರ್ಥಕ. ಪೂರಕವಾಗಿ ಚಿತ್ರಗಳು ಚೆನ್ನಾಗಿವೆ.ಸೈಕಲ್ ಟಯರ್ ತಳೆದು ಹೊಸತು ಹಾಕಿಸಬೇಕಾಯಿತ? ಇಲ್ಲಿ ನನ್ನ ಸೈಕಲ್ ಬೆಚ್ಚಗೆ ಒಳಗಿದೆ! ಸಮಯ ಕಾಯುತ್ತಿದೆ!
ಮಾಲಾ
ravi kaanaddu kavi kanda? motorists kaanaddu cyclist kanda? google guu kaanaddu gubege kaanuthalla (rathri eli sanchara) devara sristige namoo namah?anantha