ಅಧ್ಯಾಯ ಐವತ್ತೆಂಟು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಅರವತ್ತನೇ ಕಂತು
ಪ್ರವಾಸಿಗಳನ್ನು ಕಳುಹಿಸಿ ಕೊಟ್ಟನಂತರ ನನ್ನ ಮನಸ್ಸಿಗೆ ಬೆಳಕೆಂಬುದೇ ಇರಲಿಲ್ಲ – ಪ್ರಕೃತಿದತ್ತವಾದ ಕತ್ತಲಲ್ಲಿ ನಾವು ಹಿಂತಿರುಗಿದ್ದು ಮಾತ್ರವಲ್ಲ, ನನ್ನ ಮನಸ್ಸಿನಲ್ಲೇ ಗಾಢಾಂಧಕಾರ ತುಂಬಿತ್ತು. ಕೈಗೆ ಎಟಕದ ಅನೇಕ ಆಸೆಗಳೂ ಮುಗಿದು ಹೋಗಿದ್ದ ನೂರಾರು ಸವಿನೆನಪುಗಳೂ ಮನಸ್ಸಿದ್ದೂ ಕಾರ್ಯವಾಗದಿದ್ದ ಕಾರ್ಯಲೋಪಗಳೂ ನಷ್ಟಗಳೂ ದುಃಖಗಳೂ ಪಶ್ಚಾತ್ತಾಪಗಳೂ ನನ್ನನ್ನು ಬಹುವಾಗಿ ಬಾಧಿಸತೊಡಗಿದುವು.
ಪ್ರವಾಸಿಗಳನ್ನು ಕಳುಹಿಸಿಕೊಟ್ಟೆ. ನಾನು ಇಂಗ್ಲೆಂಡನ್ನು ಬಿಟ್ಟು ದೇಶಾಟನೆ ಮಾಡತೊಡಗಿದೆ. ಜೀವನದಲ್ಲಿ ಹೊಸ ಮಾರ್ಗವನ್ನು ಅವಲಂಬಿಸಿದೆ. ಇದರಿಂದ, ಇಲ್ಲಿಗೆ ನನ್ನ ದುಃಖಗಳೆಲ್ಲಾ ಮುಗಿಯಿತು, ಮನಸ್ಸು ನೆಮ್ಮದಿಯಾಯಿತು ಎಂದು ಗ್ರಹಿಸಿದೆ. ಆದರೆ, ನಾನು ಹೀಗೆ ಗ್ರಹಿಸಿ ಸಮಾಧಾನ ತೆಗೆದುಕೊಳ್ಳುತ್ತಿದ್ದಾಗಲೇ ಕಟ್ಟವನ್ನು ಮುರಿದು ಪ್ರವಾಹವು ಒಮ್ಮೆಗೇ ಮೇಲೆ ಏರಿಬರುವಂತೆ, ಆವರೆಗೆ ಅಡಗಿದ್ದ ದುಃಖಗಳೂ ವಿಸ್ಮಯಗಳೂ ಆಶಾಭಂಗದಿಂದುಂಟಾಗಿದ್ದ ಸಮಸ್ಯೆಗಳೂ ದಿನದಿಂದ ದಿನಕ್ಕೆ ಬೆಳೆದು ತೋರಲಾರಂಭಿಸಿದುವು. ನಾನು ಏಕಾಂಗಿಯಾಗಿ ತಿರುಗುತ್ತಿರುವೆನೆಂದು ತಿಳಿಯುವಾಗಲೇ ಈ ವಿಧದ ಪ್ರಕ್ಷುಬ್ಧ ಮನಸ್ಸೇ ನನ್ನ ಜತೆಗಾರನಾಗಿ ಎಡೆಬಿಡದೆ ಹಿಂಬಾಲಿಸಿ ಬರತೊಡಗಿತು. ಈ ಪ್ರಕ್ಷುಬ್ಧತೆಯಲ್ಲಿ ವಿಮರ್ಶಾ ದೃಷ್ಟಿಯಿಂದ ನೋಡುವಾಗ ದುಃಖ ಮಾತ್ರವಿದ್ದುದಲ್ಲ, ಅದರಲ್ಲಿ ಪ್ರೇಮ, ಪರೋಪಕಾರ, ಕರುಣೆ, ಹುರುಪು, ನಿರುತ್ಸಾಹ ಇವುಗಳೆಲ್ಲದರ ಭಾವನೆಗಳು ಎದ್ದು ತೋರಬಲ್ಲಂಥ ಜನ, ಸ್ಥಳ , ಸನ್ನಿವೇಶಗಳೂ ಬಂದೊದಗುತ್ತಿದ್ದುವು. ಆದರೂ ದುಃಖವೇ ಪರಮಾಧಿಕ್ಯವಾಗಿತ್ತು. ಪತ್ನಿ, ಬಂಧು, ಸ್ನೇಹಿತ, ದೇಶವನ್ನೆಲ್ಲ ತೊರೆದು ಬಂದಿದ್ದವರ ಜತೆಗೆ, ಅವುಗಳಿಂದ ಉತ್ತಮ ಫಲ ನಿರೀಕ್ಷಿದಾಗಲೇ ದುಃಖಫಲ ಮಾತ್ರ ದೊರೆತ ಸಂದರ್ಭವೂ ಸೇರಿ, ನನ್ನ ಜೀವನದಲ್ಲಿ ಜಿಗುಪ್ಸೆಯುಂಟಾಗಿ ಧೈರ್ಯ, ಆಸಕ್ತಿಗಳು ಕುಸಿದು ಬಿದ್ದುವು.
ಫ್ರಾನ್ಸಿನ ಚರಿತ್ರಾರ್ಹ ಸ್ಥಳಗಳಲ್ಲಿ ತಿರುಗಾಡುವಾಗಲೂ ಯೂರೋಪಿನ ಇನ್ನಿತರ ಮಹಾ ಸ್ಥಳಗಳಲ್ಲಿ ತಿರುಗಾಡುವಾಗಲೂ ನನ್ನಲ್ಲಿ ಲೋಪವಾಗಿದ್ದ – ನನ್ನ ಜೀವನದಲ್ಲಿ ಸಂತೋಷಕ್ಕೆ ಅಗತ್ಯವಾಗಿದ್ದ ಆ ಒಂದು ಶಕ್ತಿಯ ಕಾರಣವಾಗಿ, ಆ ಎಲ್ಲಾ ಸ್ಥಳಗಳಲ್ಲೂ ದಿನಗಳಲ್ಲೂ ಯಾವ ವಿಧದ ಆಕರ್ಷಣೆ, ರುಚಿ, ಸಂತೋಷ ತೋರಲಿಲ್ಲ. ಕೆಲವೊಮ್ಮೆ ನನ್ನ ಪ್ರವಾಸವೇ ಅನಗತ್ಯವಾಗಿತ್ತೆಂದೂ ತಿಳಿಯುತ್ತಿದ್ದೆನು. ಕೆಲವೊಮ್ಮೆ ನಾನು ಸದ್ಯವೇ ಸಾಯಲಿರುವೆನೆಂಬ ಭಾವನೆಯೂ ಮೂಡಿಬರುತ್ತಿತ್ತು. ಇಂಥ ಭಾವನೆಯೇ ಬೆಳೆದು, ನಾನು ಸಾಯುವುದಿದ್ದರೆ ಇಂಗ್ಲೆಂಡಿನಲ್ಲೇ ಸಾಯಬೇಕೆಂದು ಹಿಂದಿರುಗಿ ಕೆಲವು ಮೈಲು ಪ್ರಯಾಣ ಬೆಳೆಸಿದ್ದೂ ಉಂಟು.
ಇಟಲಿ, ಸ್ವಿಝರ್ಲೇಂಡುಗಳಲ್ಲಿ ತಿರುಗಿದೆನು. ಆಲ್ಪ್ಸ್ ಪರ್ವತವನ್ನೇರಿ ನೋಡಿದೆನು. ಶ್ಮಶಾನಸದೃಶ ನಿರ್ಜನ ಪ್ರದೇಶಗಳನ್ನು ದಾಟಿ ಹೋದೆನು. ಆದರೆ ಈ ಯಾವ ಸ್ಥಳಗಳಲ್ಲೂ ಪ್ರಕೃತಿ ವೈಭವವೇನೂ ನನ್ನ ಮನಸ್ಸಿಗೆ ತೋಚದೆ – ನನ್ನ ಅಂತರಂಗವನ್ನು ಸ್ಫುರಿಸದೆ, ನನ್ನ ದೇಶಾಟನೆಯೇ ಉದ್ದೇಶರಹಿತವಾಗಿ ತೋರಿತು.
ಕೊನೆಗೆ, ನೋಡೋಣವೆಂದು ಪರ್ವತ ಪ್ರದೇಶದ ಒಂದು ಚಿಕ್ಕ ಹಳ್ಳಿಗೆ ಹೋಗಿ ನೆಲೆಸಿದೆನು. ಉನ್ನತವಾದ ಗಿರಿಶಿಖರಗಳನ್ನೆಲ್ಲ ತಂದು ಕೈಯ್ಯಲ್ಲಿ ಎರಚಿ ನಿರ್ಮಿಸಿದಂತಿತ್ತು ಈ ಪ್ರದೇಶ. ಇಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಜಲಪಾತಗಳೂ ಹಸಿರು ಕಣಿವೆಗಳೂ ಶುಭ್ರ ಹಿಮಗಿರಿಗಳೂ ಬೇಕಾದಷ್ಟು ನೋಡ ಸಿಕ್ಕುತ್ತಿದ್ದುವು. ಇಲ್ಲಿನ ಮನೆಗಳೆಲ್ಲ ಹಸುರು ಪರ್ವತಗಳ ಮುಂಗಡೆಯಲ್ಲಿ ಪ್ರತ್ಯಪ್ರತ್ಯೇಕ – ದೂರದೂರವಾಗಿದ್ದು, ಮರಗಳ ತೋಪು, ಹೂದೋಟಗಳಿಂದ ಆವೃತವಾಗಿ, ಚಿತ್ರದ ಮನೆಗಳಂತೆ ಬಹು ರಮಣೀಯವಾಗಿ ತೋರುತ್ತಿದ್ದುವು. ನಾನು ವಾಸವಾಗಿದ್ದ ಮನೆಯಲ್ಲಿ ಕುಳಿತು ನೂರಾರು ಅಡಿಗಳ ಪ್ರದೇಶವನ್ನು ನೋಡುವಾಗ ಭೂಪಟವನ್ನು ನೋಡಿದಂತೆ ತೋರುತ್ತಿತ್ತೇ ಹೊರತು ವಾಸ್ತವಿಕ ಸ್ಥಳ, ಮನೆ ಮಠಗಳನ್ನು ನೋಡಿದಂತೆ ತೋರುತ್ತಿರಲಿಲ್ಲ. ಚಿತ್ರದ ನದಿಗೆ ಚಿತ್ರದ ಸೇತುವೆಯೂ ಚಿತ್ರದ ಮೈದಾನಗಳಲ್ಲಿ ಚಿತ್ರದ ಸಾಲುಮರಗಳ ಅಂಚೂ ಇದ್ದಂತೆ ಆ ತಗ್ಗಿನ ಪ್ರದೇಶವೆಲ್ಲ ಬಹು ರಮ್ಯವಾಗಿ ತೋರುತ್ತಿತ್ತು. ಸಂಜೆಗಳಲ್ಲಿ ಕುರುಬರ ಕಂಠದಿಂದ ಹೊರಡುತ್ತಿದ್ದ ಘಂಟೆಮಣಿಗಳ ತಿಂತಿಣಿರವವೂ ನನ್ನ ಮನಸ್ಸಿನ ಮೇಲೆ ಮೃದು ಅಲೆಗಳಾಗಿ ಬಂದು ಮುಟ್ಟಿ, ಕ್ರಮೇಣವಾಗಿ ನನ್ನ ಮನಸ್ಸನ್ನು ಶಾಂತಿಯಲ್ಲಿ ತೇಲಿಸಿಬಿಟ್ಟವು. ದಿನ ಹೋದ ಹಾಗೆ ನನಗೆ ಆ ಸ್ಥಳದಲ್ಲಿ ಶಾಂತಿಯೂ ತೃಪ್ತಿಯೂ ಸಂತೋಷವೂ ಉಂಟಾಯಿತು. ಅಲ್ಲಿನ ಜೀವನದಲ್ಲಿ ಹೃದಯವೇದನೆ ಕಡಿಮೆಯಾಗತೊಡಗಿತು. ಪ್ರಕೃತಿ ತನ್ನ ಮೃದು ಹೆಜ್ಜೆಯಿಂದ, ಸಮಯದ ನುಣುಪಿನ ಮಾರ್ಗದಿಂದ, ನನ್ನ ಮನವನ್ನು ನುಗ್ಗಿ, ಮೃತ ಡೋರಾಳನ್ನು ಕುರಿತು ಕಂಬನಿ ಕರೆಸಿ, ಮನಸ್ಸಿಗೆ ಶಾಂತಿಯನ್ನಿತ್ತಿತು – ಜೀವನದಲ್ಲಿ ಸೊಬಗಿದೆಯೆಂದು ಮಾನಸಿಕ ದಿಗಂತದಲ್ಲಿ ತೋರಿಸಿ ಕೊಟ್ಟಿತು. ಹೀಗೆ, ಈ ಸ್ಥಳದಲ್ಲಿ ನಾನಿರುವಾಗ ಏಗ್ನೆಸ್ಸಳಿಂದ ನನಗೆ ಒಂದು ಪತ್ರವು ಬಂದಿತು.
ಏಗ್ನೆಸ್ಸಳ ಪತ್ರವು ಅವಳಿರುವಂತೆಯೇ ಸೌಮ್ಯವಾಗಿತ್ತು. ಸಾತ್ವಿಕ ಸಂತೋಷವನ್ನೀಯುತ್ತಿತ್ತು. ಆತ್ಮಶಕ್ತಿ, ಉತ್ಸಾಹಗಳನ್ನು ಮೃದುವಾಗಿ ಪ್ರಚೋದಿಸುತ್ತಿತ್ತು. ನನ್ನ ಮೇಲೂ ನನ್ನ ಶಕ್ತಿಗಳ ಮೇಲೂ ಅವಳಿಗೆ ಇದ್ದ ನಂಬಿಕೆಯನ್ನು ಪತ್ರದಲ್ಲಿ ತಿಳಿಸಿದ್ದಳು. ಅವಳ ಪತ್ರವನ್ನೋದಿ ಜೀವನದಲ್ಲಿ ಉತ್ಸಾಹ ತೋರಿತು. ನಿರೀಕ್ಷಣೆಗಳು ಸುಖ ಸಂತೋಷಪ್ರದವಾಗಿ ತೋರಿದುವು. ನಮಗೆ ಜೀವನದಲ್ಲಿ ಎದುರು ಸಿಗುವ ಎಲ್ಲಾ ಅನುಭವಗಳೂ ದೈವಿಕವಾಗಿಯೇ ದೊರಕುವುವು ಎಂದೂ ಆ ಕಾರಣದಿಂದ ಅಂಥಾ ಅನುಭವಗಳಲ್ಲೇ ದೈವಶಕ್ತಿ ಇದ್ದೇ ಇದೆಯೆಂದೂ ಅವು ನಮಗೆ ದೊರಕಿದ್ದುದರಿಂದಲೇ ಆ ಶಕ್ತಿಗಳು ನಮ್ಮದಾಗಿದ್ದು ಅದನ್ನು ಉಪಯೋಗಿಸಿ ನಾವು ಜೀವನದಲ್ಲಿ ಉತ್ಕರ್ಷ, ಕೀರ್ತಿ, ಸಂಪತ್ತನ್ನು ಪಡೆಯಬೇಕೆಂದೂ ಏಗ್ನೆಸ್ಸಳು ತರ್ಕಿಸುತ್ತಿದ್ದಳು. ಇದಕ್ಕೆಲ್ಲ ಅವಳು ನನ್ನ ಅನುಭವಗಳನ್ನೂ ನನ್ನ ಕಾದಂಬರಿಗಳಿಗೆ ಆವರೆಗೆ ದೊರಕಿದ್ದ ಪ್ರಶಸ್ತಿಯನ್ನು ಎತ್ತಿ ತೋರಿಸಿ ಉದಾಹರಿಸುತ್ತಿದ್ದಳು. ಈ ಎಲ್ಲ ತರ್ಕಗಳಿಂದ, ನನ್ನ ಅಂದಿನ ಕಾದಂಬರೀಕಾರನೆಂಬ ಪ್ರಶಸ್ತಿ ಮುಂದಿನ ಪ್ರಶಸ್ತಿಗೆ ಸೋಪಾನವಾಗಿಯೂ ಇಂದಿನ ದೇಶಾಟನ ಮುಂದಿನ ನನ್ನ ಖ್ಯಾತಿಗೆ ಆಧಾರವೆಂದೂ ಅವಳು ನನ್ನನ್ನು ಹುರಿದುಂಬಿಸಿ ಸಂತೋಷಗೊಳಿಸಿದಳು.
ಏಗ್ನೆಸ್ಸಳ ಪತ್ರವನ್ನು ಬಹು ಪ್ರೀತ್ಯಾದರಗಳಿಂದ ಭದ್ರವಾಗಿ ಇಟ್ಟುಕೊಂಡೆನು. ಅವಳ ಸಲಹೆಗಳನ್ನು ನಂಬಿಕೆಯಿಂದ ಅಂಗೀಕರಿಸಿದೆನು. ಅವಳ ಪತ್ರವೇ ಅವಳ ಸಾನ್ನಿಧ್ಯವೆಂದು ತಿಳಿಯುತ್ತಾ ನನ್ನ ವ್ಯಾಸಂಗ, ಪರಿಶ್ರಮಗಳನ್ನು ಹುರುಪಿನಿಂದ ಮಾಡತೊಡಗಿದೆನು. ಒಂದು ಕಾದಂಬರಿಯನ್ನು ಬರೆದು ಟ್ರೇಡಲ್ಸನ ಮುಖಾಂತರ ಅಚ್ಚು ಹಾಕಿಸಿ, ಪ್ರಕಟಿಸಿ, ಸ್ವಲ್ಪ ಹಣವನ್ನೂ ಪ್ರಶಸ್ತಿ, ಪ್ರಚಾರಗಳನ್ನೂ ಸಂಪಾದಿಸಿದೆನು. ಟ್ರೇಡಲ್ಸನೂ ಈ ಕಾಲದಲ್ಲೇ ತನ್ನ ವೃತ್ತಿಯಲ್ಲೂ ಅಭಿವೃದ್ಧಿ ಹೊಂದುತ್ತಿದ್ದನೆಂದೂ ತಿಳಿದು ಬಹಳ ಸಂತೋಷವಾಯಿತು.
ಈ ರೀತಿ ನಾನು ಮೂರು ವರ್ಷಗಳ ಕಾಲ ಪರಸ್ಥಳದಲ್ಲಿದ್ದೆನು. ಆದರೆ ನಾನು ಒಬ್ಬಂಟಿಗನಾಗಿದ್ದುದೂ ನನ್ನ ಜೀವನದ ಸಹಧರ್ಮಿಣಿಯಾಗಿ ಯಾರೂ ಇಲ್ಲದಿದ್ದುದೂ ನನಗೆ ಸ್ವಲ್ಪ ದುಃಖದ ಸಂಗತಿಯಾಗಿ ವೇದನೆ ಕೊಡುತ್ತಿತ್ತು. ಈ ಸಂಗತಿಯನ್ನು ಯೋಚಿಸಿದಾಗೆಲ್ಲ ಡೋರಾಳೂ ಏಗ್ನೆಸ್ಸಳೂ ನನ್ನ ಮನಸ್ಸಿನಲ್ಲಿ ಎದ್ದು ತೋರುತ್ತಿದ್ದರು. ಏಗ್ನೆಸಳೊಬ್ಬಳನ್ನೇ ನಾನು ಕಾಣುತ್ತಿದ್ದು – ಡೋರಾಳ ಪರಿಚಯವೇ ನನಗೆ ಆಗದಿರುತ್ತಿದ್ದರೆ, ನಾನು ಏಗ್ನೆಸ್ಸಳನ್ನು ಯಾವ ವಿಧದಲ್ಲಿ ಪ್ರೀತಿಸುತ್ತಿದ್ದೆ, ಪ್ರೀತಿಸಬಹುದಿತ್ತೂ ಎಂಬ ತರ್ಕಗಳೂ ಮನಸ್ಸಿನಲ್ಲಿ ಮೂಡುತ್ತಿದ್ದುವು. ಇಂಥ ಅಭಿಪ್ರಾಯಗಳು ಮೂಡಿ, ಉತ್ತರ ಸಿಕ್ಕದೆ, ಪುನಃ ಪುನಃ ಪ್ರಶ್ನಿಸುತ್ತಾ ಏಗ್ನೆಸ್ಸಳನ್ನು ನಾನು ಈಗ ಕೇವಲ ಸಹೋದರೀ ಭಾವದಿಂದ ನೋಡುತ್ತಿರುವುದನ್ನು ಬಿಟ್ಟು, ಡೋರಾಳನ್ನು ಕಂಡ ಭಾವದಿಂದ ನೋಡಿದರೆ ನ್ಯಾಯವಾಗಬಹುದೇ, ಇದರಿಂದ ಏಗ್ನೆಸ್ಸಳ ಮೇಲೆ ಪರಿಣಾಮವೇನಾಗಬಹುದು, ಅವಳು ನನ್ನ ಇಂತಹ ಅಭಿಪ್ರಾಯಗಳನ್ನು ತಿಳಿದರೆ ಈಗ ನಮ್ಮೊಳಗಿರುವ ಸ್ನೇಹ ಪರಿಚಯಗಳೇ ನಿಂತುಹೋಗಬಹುದೇ, ಆಗ ನನ್ನ ಭವಿಷ್ಯವೇನಾಗಬಹುದು, ಎಂದೂ ಆಲೋಚಿಸಿಯೇ ಹೆದರುತ್ತಿದ್ದೆ.
ಮೂರು ವರ್ಷಗಳನಂತರ ನಮ್ಮೂರಿಗೆ ಮರಳಿ ಬರುವಾಗ ನನ್ನ ಮನಸ್ಸು ಈ ತೆರನಾಗಿತ್ತು. ನಾನು ಹಠಾತ್ತಾಗಿ – ಯಾರಿಗೂ ಮೊದಲಾಗಿ ತಿಳಿಸದೆ – ಊರಿಗೆ ಬಂದೆನು. ಲಂಡನ್ನಿನಲ್ಲಿ ಬಂಡಿಯಿಂದಿಳಿದು, ಬೀದಿಯಲ್ಲಿ ಏಕಾಂಗಿಯಾಗಿ ನಡೆದು ಮುಂದುವರಿಯುವಾಗ ನಮ್ಮ ದೇಶ, ನಗರ, ಮನೆ, ಎಲ್ಲವು ಬಹು ಪ್ರಿಯವಾಗಿ ತೋರಿದುವು. ಏಗ್ನೆಸ್ಸಳಂತೂ ಪರಮಪ್ರಿಯಳಾಗಿಯೇ ದೃಷ್ಟಿ ಪಥದಲ್ಲಿ ಶೋಭಿಸುತ್ತಿದ್ದಳು. ಆದರೆ ಸಹೋದರೀ, ಸಹಧರ್ಮಿಣಿ ಎಂಬೆರಡು ಅವಳನ್ನು ಕುರಿತಾಗಿದ್ದ ಭೇದ ಭಾವಗಳು ನನ್ನನ್ನು ಹಿಂಸಿಸುತ್ತಿದ್ದುವು.
(ಮುಂದುವರಿಯಲಿದೆ)
ಧನ್ಯ ಓದುಗಳು!