ಅಧ್ಯಾಯ ಐವತ್ತೊಂಬತ್ತು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಅರವತ್ತೊಂದನೇ ಕಂತು

ಶರತ್ಕಾಲದ ಒಂದು ಸಂಜೆ ನಾನು ಲಂಡನ್ನಿಗೆ ತಲುಪಿದೆನು. ಆಗ ಕತ್ತಲಾಗುತ್ತಾ ಬಂದಿತ್ತು. ಮತ್ತು ಬಲವಾದ ಮಳೆಯೂ ಸುರಿಯುತ್ತಿತ್ತು. ನಾನು ಪರ ಊರುಗಳಲ್ಲಿ ಒಂದು ವರ್ಷ ಕಾಲದಲ್ಲಿ ಒಟ್ಟಾಗಿ ಕಾಣದಿದ್ದಷ್ಟು ಹಿಮ ಮತ್ತು ಕೆಸರನ್ನು ಇಲ್ಲಿ ಒಂದೆರಡು ಮಿನಿಟುಗಳಲ್ಲೇ ಕಂಡೆನು. ಸುಂಕದ ಕಟ್ಟೆಯಿಂದ ಮಾನ್ಯುಮೆಂಟ್ ರಸ್ತೆಯವರೆಗೆ ನಾನು ನಡೆದೇ ಹೋಗಬೇಕಾಯಿತು. ಚರಂಡಿಗಳಲ್ಲು ಉಕ್ಕಿ ಹರಿಯುತ್ತಿದ್ದ ಕೆಸರು ನೀರನ್ನು ನೋಡುತ್ತಾ ನಡೆದು ಹೋಗುವಾಗ ಬದಿಯಲ್ಲೇ ನಿಂತಿದ್ದ ಪೂರ್ವದ ಕೆಲವು ಮನೆಗಳನ್ನು ಕಂಡೆನು. ಕಂಡದ್ದು ಹಳತು ಮತ್ತು ಕೊಳಕು ಮನೆಗಳಾಗಿದ್ದರೂ ಅವನ್ನು ಕಂಡಾಗ ಹಳೆ ಸ್ನೇಹಿತರನ್ನು ಕಂಡಷ್ಟೆ ಸಂತೋಷವಾಯಿತು.

ಇಷ್ಟರಲ್ಲಿ ಬಾಡಿಗೆ ಬಂಡಿಯೊಂದು ಬರುತ್ತಿದ್ದುದನ್ನು ಕಂಡು ಅದನ್ನು ಹತ್ತಿ ಮುಂದುವರಿದೆನು. ನಾನು ಪರವೂರಿಗೆ ಹೋಗಿದ್ದ ಸಮಯವೇ ಬದಲಾವಣಾ ಕಾರ್ಯಗಳನ್ನು ಕೈಗೊಳ್ಳಲು ಸುಮುಹೂರ್ತವೆಂದು ಜನರು ಗ್ರಹಿಸಿ ಕಾರ್ಯ ಕೈಗೊಂಡಿದ್ದಂತೆ ದಾರಿಯ ಉದ್ದಕ್ಕೂ ನಗರದ ಕಟ್ಟಡಗಳಲ್ಲೂ ರಸ್ತೆಗಳಲ್ಲೂ ತುಂಬಾ ಬದಲಾವಣೆ ನಡೆದಿತ್ತು. ನಾನು ಪರದೇಶಗಳಲ್ಲಿದ್ದಾಗ ಅತ್ತೆ ಲಂಡನ್ನನ್ನು ಬಿಟ್ಟು, ತನ್ನ ಪೂರ್ವದ ಡೋವರಿನ ಮನೆ ಪಡೆದು ಅದರಲ್ಲೇ ಹೋಗಿ ನೆಲೆಸಿದ್ದಳು. ಈ ರಾತ್ರಿಯೇ ಮಲಗುವ ಸಮಯಕ್ಕೆ ಮೊದಲು ಟ್ರೇಡಲ್ಸನನ್ನು, ಸಾಧ್ಯವಾದರೆ ಇತರ ಸ್ನೇಹಿತರನ್ನೂ ಕಾಣಬೇಕೆಂದು ಮನಸ್ಸು ಹಂಬಲಿಸುತ್ತಿತು. ಇದಕ್ಕಾಗಿ ಒಳ್ಳೆಯ ಹೋಟೆಲ್ ಒಂದನ್ನು ಗೊತ್ತು ಮಾಡಿಕೊಂಡು, ಅದರಲ್ಲೇ ಒಂದು ಕೋಣೆಯನ್ನೂ ಗೊತ್ತು ಮಾಡಿಕೊಂಡೆನು.

ಅನಂತರ ಟ್ರೇಡಲ್ಸನನ್ನು ಕುರಿತು ಹೋಟೆಲಿನವರಿಗೆ ಏನಾದರೂ ಪರಿಚಯವಿದೆಯೇ ಅವನನ್ನು ನೋಡಲು ಹೋಗತಕ್ಕ ಕೆಲಸವಿದೆ, ಎಂದು ಮೊದಲಾಗಿ ತಿಳಿಸಿ ವಿಚಾರಿಸಿ ನೋಡಿದೆನು. ಆದರೆ ಹೋಟೆಲಿನವರು ಅವನಂಥ ಬಡಜನರ ವಿಚಾರವಾಗಿ ಆ ಹೋಟೆಲಿನಲ್ಲಿ ವಿಚಾರಿಸಿದ್ದೇ ನನ್ನ ಹೆಡ್ಡುತನವೆಂಬಂತೆ ಮಾತಾಡಿ, ಕಾರ್ಯಗಳಲ್ಲು ವರ್ತಿಸಿದರು. ಈ ಸಂಬಂಧದ ನಮ್ಮ ಮಾತುಗಳಲ್ಲಿ ಹೋಟೆಲಿನವರ ಸಂಪತ್ತು, ಸಮಾಜದ ಗಣ್ಯ ವ್ಯಕ್ತಿಗಳ ಪರಿಚಯ, ಮತ್ತೂ ಅವರ ವ್ಯವಹಾರಗಳಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ತಾರತಮ್ಯದಿಂದ ಭೇದವನ್ನು ಮಾಡುತ್ತಿರುವ ಒಂದು ಮರ್ಮ, ಇವೆಲ್ಲ ನನಗೆ ತಿಳಿಯಿತು. ನಿರ್ವಂಚಕನಾಗಿ, ಸರಳವಾಗಿ, ಭಯದಿಂದ ಎಲ್ಲರೊಡನೆಯೂ ನಡೆದು ಬರುತ್ತಿರುವ ಟ್ರೇಡಲ್ಸನ ವಕೀಲ ವೃತ್ತಿಯಲ್ಲಿ ಅವನು ಎಷ್ಟು ಅಭಿವೃದ್ಧಿ ಪಡೆದಿರಬಹುದು, ಎಂಬಿತ್ಯಾದಿ ಸಂಶಯಗಳು ಈ ಹೋಟೆಲಿನ ಶ್ರೀಮಂತಿಕೆ, ಮತ್ತು ವ್ಯವಹಾಹರಧರ್ಮಗಳನ್ನು ನೋಡಿ ನನಗೆ ಉಂಟಾಯಿತು. ಅಂತೂ ಹೇಗೋ ಮಾಡಿಕೊಂಡು….. ಟ್ರೇಡಲ್ಸನ ಪತ್ರ ವ್ಯವಹಾರಗಳ ಕೆಲವು ಮಟ್ಟಿನ ಆಧಾರದಿಂದ ಸಹ – ನಾನು ಟ್ರೇಡಲ್ಸನ ವಿಳಾಸವನ್ನು ಗೊತ್ತು ಹಚ್ಚಿ ಅವನ ಮನೆಗೆ ಆ ರಾತ್ರಿಯೇ ಹೋದೆನು.

ಟ್ರೇಡಲ್ಸನ ಮನೆಯೂ ಆಫೀಸೂ ಒಂದೇ ಕಟ್ಟಡಲ್ಲಿದ್ದವು. ನಾನು ಅವನ ಆಫೀಸಿಗೆ ನುಗ್ಗುವ ಮೊದಲು ಒಳಗಿನಿಂದ ತುಂಬಾ ನಗಾಟ, ಗೌಜುಗಳು ಕೇಳಿ ಬರುತ್ತಿದ್ದವು. ನಾನು ಟ್ರೇಡಲ್ಸನ ಆಫೀಸಿಗೆ ನುಗ್ಗಿ ನೋಡುವಾಗ ಟ್ರೇಡಲ್ಸನು ಒಬ್ಬನೇ ಸ್ವಲ್ಪ ಶ್ರಮಪಟ್ಟಿದ್ದವನಂತೆ ತೋರುತ್ತಾ ಕುಳಿತಿದ್ದನು. ಅವನ ಆಫೀಸಿನ ಒಳಗೂ ಕುರ್ಚಿ, ಬೆಂಚು, ಕಾಗದಗಳ ಅವ್ಯವಸ್ಥೆ ತೋರಿಬರುತ್ತಿದ್ದವು. ನನ್ನನ್ನು ಕಂಡ ಕೂಡಲೇ ಟ್ರೇಡಲ್ಸನು ಬಹು ಸಂತೋಷದಿಂದ ನನ್ನನ್ನು ಆಲಂಗಿಸಿ ಹಸ್ತ ಲಾಘವವನ್ನಿತ್ತನು. ಅನಂತರ ಬಹು ಸಂತೋಷದಿಂದ – “ನೀನು ಸಮಯ ನೋಡಿ ಇಲ್ಲಿಗೆ ಬಂದ ಹಾಗಾಗಿದೆ, ಕಾಪರ್ಫೀಲ್ಡ್! ನನ್ನ ಪತ್ನಿ ಸೋಫಿಯ ಅಕ್ಕತಂಗಿಯರು ಲಂಡನ್ ನೋಡುವುದಕ್ಕೆಂದು ಇಲ್ಲಿಗೆ ಬಂದಿರುವರು. ಅವರೆಲ್ಲ ನಮ್ಮ ಮನೆಯಲ್ಲಿರುವಾಗ ನೀನೂ ಬಂದದ್ದು ಬಹಳ ಸಂತೋಷ” ಅಂದನು ಟ್ರೇಡಲ್ಸ್. “ನಿನ್ನ ಮದುವೆಯ ವಿಷಯ ನನಗೆ ಗೊತ್ತೇ ಇಲ್ಲವಷ್ಟೇ” ಎಂದು ನಾನು ಅನ್ನಬೇಕಾಯಿತು. “ನಿನಗೆ ಪತ್ರವನ್ನು ಬರೆದಿದ್ದೆ – ಅದು ತಲುಪಲಿಲ್ಲವೆಂದು ತೋರುತ್ತದೆ. ನನಗೆ ಮದುವೆಯಾಗಿ ಒಂದು ವಾರವಾಯಿತು. ನಮ್ಮ ಅತ್ತೆ ಮೊದಲಿನಂತೆಯೇ ರೋಗಿಷ್ಠಳು. ಅವರ ಹಳ್ಳಿ ಮನೆಯಲ್ಲೇ ಇದ್ದ ಮಕ್ಕಳಿಗೆ ಸ್ವಲ್ಪ ಊರು ನೋಡಬೇಕೆಂದು ತೋರುವುದರಲ್ಲಿ ಆಶ್ಚರ್ಯವಿಲ್ಲ. ನೀನು ಬರುವಾಗ ನಾನು ಅವರ ಜತೆಯಲ್ಲಿ ಹುಗ್ಗಾಟವಾಡುತ್ತಿದೆ” ಎಂದು ಟ್ರೇಡಲ್ಸನು ಅಂದನು.

ಹೀಗೆ ನಾವಿಬ್ಬರೂ ತುಂಬಾ ಮಾತಾಡುತ್ತಾ ಸ್ವಲ್ಪ ಹೊತ್ತು ಕುಳಿತಿದ್ದೆವು. ಮುಖ್ಯವಾಗಿ ಟ್ರೇಡಲ್ಸನನ್ನು ನೋಡಿ ಬರಬೇಕೆಂಬ ಉದ್ದೇಶ ಮಾತ್ರ ನನ್ನದಾಗಿದ್ದುದರಿಂದ ನಾನು ರಾತ್ರಿಯೇ ಅಲ್ಲಿಂದ ಹೊರಟೆನು. ಆದರೆ ಟ್ರೇಡಲ್ಸನ ಒತ್ತಾಯಕ್ಕಾಗಿ ನಾವು ಸ್ವಲ್ಪ ಚಹ ಸೇವಿಸಿದೆವು. ನಾನು ನಮ್ಮ ಹೋಟೆಲಿನಲ್ಲಿ ರಾತ್ರಿಯ ಊಟ ಮುಗಿಸಿ ಎದುರು ಕಡೆ ಜಗುಲಿಯಲ್ಲಿ ತಿರುಗಾಡುವಾಗ್ಗೆ, ಅದೇ ಜಗುಲಿಯ ಒಂದು ಮೂಲೆಯಲ್ಲಿ ಡಾಕ್ಟರ್ ಚಿಲ್ಲಿಪ್ಪರನ್ನು ಕಂಡೆನು. ಅವರು ಯಾರಿಗೂ ಉಪದ್ರವವಾಗಬಾರದೆಂದು ಆದಷ್ಟು ಸ್ವಲ್ಪ ಸ್ಥಳ ಮಾತ್ರ ಉಪಯೋಗಿಸಿ ಕುಳಿತುಕೊಂಡು ಒಂದು ಪತ್ರಿಕೆಯನ್ನು ಓದುತ್ತಿದ್ದರು. ನನ್ನ ಪರಿಚಯವನ್ನು ನಾನೇ ಅವರಿಗೆ ಮಾಡಿಕೊಡುವ ಮೊದಲು ಅವರಿಗೆ ನನ್ನ ಗುರುತು ಸಿಕ್ಕಲಿಲ್ಲ. ಅದೊಂದು ಆಶ್ಚರ್ಯವೂ ಅಲ್ಲ, ಏಕೆಂದರೆ ನನ್ನ ತಾಯಿಯು ಬದುಕಿದ್ದಾಗ ಮಾತ್ರ ನನ್ನನ್ನು ಕಂಡಿದ್ದ ಚಿಲ್ಲಿಪ್ಪರು ನನ್ನನ್ನು ಅನಂತರ ಹೆಚ್ಚಾಗಿ ಕಂಡಿರಲಿಲ್ಲ.

ಅವರೊಡನೆ ಸ್ವಲ್ಪ ಹೊತ್ತು ಮಾತಾಡುತ್ತ ಕುಳಿತಿದ್ದೆ. ಅವರ ಹೆಂಡತಿಯ ತಂದೆ ಬರೆದಿಟ್ಟಿದ್ದ ಒಂದು ಉಯಿಲಿನ ಮೂಲಕ ಡಾ| ಚಿಲ್ಲಿಪ್ಪರ ಪತ್ನಿಗೆ ಸ್ವಲ್ಪ ಆಸ್ತಿ ಸಿಕ್ಕಿತ್ತು. ಡಾ| ಚಿಲ್ಲಿಪ್ಪರು ಅದೇ ಊರಲ್ಲಿ ಒಂದು ಚಿಕ್ಕ ಆಸ್ಪತ್ರೆಯನ್ನು ತೆರೆದು ತಮ್ಮ ವೃತ್ತಿಯನ್ನು ಸಾಗಿಸುತ್ತಿದ್ದರು. ಅವರಿಗೆ ಪ್ರಾಯವಾಗುತ್ತಾ ಬಂದಿದ್ದುದು ಅವರನ್ನು ನೋಡುವಾಗ, ಅವರ ಮಾತುಕತೆಗಳಲ್ಲಿ ಸಹ ಗೊತ್ತಾಗುತ್ತಿತ್ತು. ಆದರೂ ಅವರು ಅವರ ಸಂಸಾರ ಸಮೇತರಾಗಿ ಈ ಹೊಸ ಸ್ಥಳದಲ್ಲಿ ಸುಖವಾಗಿ ತಮ್ಮ ವೃತ್ತಿಯನ್ನು ನಡೆಸುತ್ತಿದ್ದರು. ಅವರ ಮಾತುಗಳಲ್ಲೂ ಅವರಾಗಿಯೇ ತಿಳಿಸಿದ ಅವರ ವ್ಯವಹಾರಗಳಲ್ಲೂ ಮೊದಲಿನ ವಿನೀತತೆಯು ಈಗಲೂ ಮೊದಲಿನಂತೆಯೇ ಇತ್ತು. ಮಾತುಗಳ ಕೆಲವು ಸಂದರ್ಭಗಳಲ್ಲಿ ತನ್ನ ಹೆಂಡತಿ ತುಂಬಾ ಬುದ್ಧಿವಂತಳೆಂದು ತಿಳಿಸುತ್ತಾ ನನ್ನ ಅತ್ತೆಯನ್ನೂ ಜ್ಞಾಪಿಸಿಕೊಂಡು, ಅತ್ತೆಯು ಕುಶಾಗ್ರ ಬುದ್ಧಿಯವಳೆಂದೂ ಹೇಳಿದರು.

ಡಾ| ಚಿಲ್ಲಿಪ್ಪರು ಮಿ. ಮರ್ಡ್ಸ್ಟನ್ನರ ಜೀವನ ಚರಿತ್ರೆಯ ಸ್ವಲ್ಪಾಂಶವನ್ನೂ ತಿಳಿಸಿದರು. ಈ ಮರ್ಡ್ಸ್ಟನ್ ಅಣ್ಣತಂಗಿಯರ ಚರಿತ್ರೆಯನ್ನು ಹೇಳುತ್ತಿದ್ದಾಗ ಸ್ವಲ್ಪ ಹಾಸ್ಯ ವಿನೋದದಿಂದಲೇ ಹೇಳುತ್ತಿದರು. ಡಾ| ಚಿಲ್ಲಿಪ್ಪರು ಮಿ. ಮರ್ಡ್ಸ್ಟನ್ನರ ಎರಡನೇ ಹೆಂಡತಿಗೆ ಔಷಧಿ ಕೊಟ್ಟು ಸ್ವಲ್ಪ ಚಿಕಿತ್ಸೆ ನಡೆಸಿದ್ದರಂತೆ. ಮಿ. ಮರ್ಡ್ಸ್ಟನ್ನರು ಈ ಎರಡನೇ ಹೆಂಡತಿಗೂ ಅವರ ಶಿಸ್ತು, ವ್ಯವಸ್ಥೆ, ಮನೋನಿಗ್ರಹ, ಧೈರ್ಯ ಮೊದಲಾದ ತತ್ತ್ವಾನುಷ್ಠಾನಗಳನ್ನು ಜಾರಿಗೊಳಿಸಿ, ಆ ಪತ್ನಿಯನ್ನು ಸಾಕಷ್ಟು ಹದಬರಿಸಿ ಮುರಿದಿದ್ದರಂತೆ. ಇದರ ಪರಿಣಾಮವಾಗಿ ಈ ಪತ್ನಿ ಮನೋರೋಗ, ಮಾನಸಿಕ ನಿಶ್ಶಕ್ತಿಗಳಿಂದ ನರಳುತ್ತಿದ್ದಳಂತೆ. ಡಾ| ಚಿಲ್ಲಿಪ್ಪರ ಮಾತುಗಳಲ್ಲೇ ಇದನ್ನು ಹೇಳುವುದಾದರೆ – “ಈ ಮರ್ಡ್ಸ್ಟನ್ ಪಂಥದವರು ಅಂತರ್ಮುಖವಾಗಿ ತಮ್ಮ ವಿಷಮಯ ಹೃದಯವನ್ನೇ ಪರಿಶೋಧಿಸಿ, ಅಂಥ ಹೃದಯದ ಅನುಭವಗಳನ್ನು ಮಾನಸಿಕ ಆಹಾರವಾಗಿ ಜಗಿದು, ತಿಂದು ಜೀರ್ಣಿಸಿ ತಾವು ಮುಟ್ಟುವುದನ್ನೆಲ್ಲಾ ವಿಷಮಯವಾಗಿಯೂ ವಿನಾಶಕಾರಕವಾಗಿಯೂ ಪರಿವರ್ತಿಸುವರು. ಈ ಪ್ರಯೋಗದಿಂದಲೇ ತನ್ನ ಪತ್ನಿಯನ್ನೂ ಪರಿವರ್ತಿಸುವರು.”

ಡಾಕ್ಟರ್ ಚಿಲ್ಲಿಪ್ಪರೊಡನೆ ಈ ವಿಧವಾಗಿ ಮಾತಾಡುತ್ತಾ ಸ್ವಲ್ಪ ಹೊತ್ತು ಕುಳಿತಿದ್ದು, ಅವರ ಗೌರವಕ್ಕಾಗಿ ನಾನು ತರಿಸಿದ ವೈನನ್ನು ಇಬ್ಬರೂ ಸೇವಿಸಿ, ನಾವು ನಮ್ಮ ನಮ್ಮ ಕೋಣೆಯಲ್ಲಿ ಮಲಗಿದೆವು. ಮರುದಿನ ಬೆಳಗ್ಗೆ ನಾನು ಡೋವರಿಗೆ ಹೋದೆನು. ಅತ್ತೆ, ಪೆಗಟಿ ಮತ್ತು ಮಿ. ಡಿಕ್ಕರು ನನ್ನನ್ನು ಆನಂದಾಶ್ರುಗಳಿಂದ ಸ್ವಾಗತಿಸಿದರು. ಅತ್ತೆಯ ಹಣದ ಅನುಕೂಲವು ತುಂಬಾ ಸುಧಾರಿಸಿದ್ದುದರಿಂದ ಅವಳ ಡೋವರಿನ ಮನೆ ಈಗ ಬಹು ಚೆನ್ನಾಗಿ ಅಲಂಕರಿಸಲ್ಪಟ್ಟಿತ್ತು. ಒಳ್ಳೊಳ್ಳೆ ಮೇಜು, ಕುರ್ಚಿ, ಕಪಾಟು ಮೊದಲಾದ ಸಾಹಿತ್ಯಗಳು ಮನೆಯಲ್ಲಿ ತುಂಬಾ ಇದ್ದುವು.

ಅವರೆಲ್ಲರಿಗೂ ನನ್ನ ಅನೇಕ ಅನುಭವಗಳನ್ನೂ ಕಥೆಗಳನ್ನೂ ಹೇಳುತ್ತಾ ಕಾಲಕಳೆದೆವು. ಈ ಸಂದರ್ಭದಲ್ಲಿ ಡಾ. ಚಿಲ್ಲಿಪ್ಪರ ವಿನೀತತೆ, ಅವರಿಗೆ ಅತ್ತೆಯ ಮೇಲಿದ್ದ ಅಭಿಪ್ರಾಯಗಳನ್ನು ಹೇಳುವಾಗ ಎಲ್ಲರಿಗೂ ಸಂತೋಷವಾಯಿತು; ಅತ್ತೆ ನಗಾಡಿದಳು. ಆದರೆ, ನಾನು ಮರ್ಡ್ಸ್ಟನ್ ದ್ವಯರನ್ನು ಕುರಿತಾಗಿ ಮಾತಾಡಿದಾಗ ಎಲ್ಲರಿಗೂ ಕೋಪ ಬರುತ್ತಿತ್ತು. ಅತ್ತೆಯಂತೂ ಬಹು ಉದ್ವೇಗದಿಂದಲೇ ಮಾತಾಡುತ್ತಿದ್ದಳು. ಅತ್ತೆ ಮಿ. ಮರ್ಡ್ಸ್ಟನ್ನರ ತಂಗಿಯ ಹೆಸರನ್ನು ಎಂದೂ ಅವಳ ಕ್ರಿಶ್ಚಿಯನ್ ಹೆಸರಿನಿಂದ – ವಾಸ್ತವಿಕವಾದ ಹೆಸರಿನಿಂದ – ಹೇಳಲೊಲ್ಲಳು. ಮಿಸ್ ಜೇನ್ ಮರ್ಡ್ಸ್ಟನ್ನಳ ಹೆಸರನ್ನು ಹೇಳಬೇಕಾದಲ್ಲೆಲ್ಲ ಅವಳು `ಆ ಮಾರಣಕಾರೀ ಹೆಂಗುಸು’ ಎಂದು ಮಾತ್ರ ಹೇಳುತ್ತಿದ್ದಳೇ ಹೊರತು, ಬೇರೆ ವಿಧದಿಂದ ಹೇಳಲು ಎಂದೂ ಸಿದ್ಧಳಾಗಿರಲಿಲ್ಲ.

(ಮುಂದುವರಿಯಲಿದೆ)