(ಚಕ್ರೇಶ್ವರ ಪರೀಕ್ಷಿತ – ೮)

[ನಿತ್ಯದ ಸೈಕಲ್ ಸವಾರಿ ನನಗೆ ವ್ಯಾಯಾಮದೊಡನೆ ಲೋಕಜ್ಞಾನಕ್ಕೊಂದು ಕಿಟಕಿಯೂ ಸಾಮಾಜಿಕ ಜವಾಬ್ದಾರಿಯತ್ತ ಒಂದು ಪ್ರೇರಕ ಶಕ್ತಿಯೂ ಆಗಿ ಒದಗುತ್ತಲೇ ಇದೆ. ಅಂದಂದಿನ ಅನುಭವವನ್ನು ನಾನು ಫೇಸ್ ಬುಕ್ಕಿನಲ್ಲಿ ಸೈಕಲ್ ಸರ್ಕೀಟೆಂದೋ ಕಟ್ಟೆಪುರಾಣವೆಂದೋ ದಾಖಲಿಸುತ್ತಿರುವುದನ್ನು ಕಂಡವರು ಬಹುಮಂದಿ, ಓದಿದವರು ಕೆಲ ಮಂದಿ, ಪ್ರತಿಕ್ರಿಯಿಸಿದವರು ಬೆರಳೆಣಿಕೆಯವರು, ಕೊನೆಗೆ ತಮ್ಮ ಪರಿಚಯದ ವಲಯದಲ್ಲೂ ಪ್ರಚುರಿಸಿದವರೂ ಒಬ್ಬಿಬ್ಬರಿದ್ದಾರೆ. ದೈನಿಕ ಪತ್ರಿಕೆಗಳಲ್ಲಿ ಬಂದ ವಿಚಾರಗಳು ಎಷ್ಟು ಗಂಭೀರವಿದ್ದರೂ ಬಹುತೇಕ ಮರುದಿನಕ್ಕೆ ಗಜೇಟಿಗೆ (ರದ್ದಿ) ಸಂದು ಹೋಗುವಂತದ್ದೇ ಸ್ಥಿತಿ ಫೇಸ್ ಬುಕ್ಕಿನದು. ವಿಷಯವಾರು ವಿಂಗಡಣೆ, ಸುಲಭ ಆಕರವಾಗಿ ಒದಗುವ ಸ್ಥಿತಿಗಳು ಅಲ್ಲಿ ಕಷ್ಟ ಸಾಧ್ಯ. ಮತ್ತೆ ಅಲ್ಲಿನ ಬರೆಹವೂ ಕಾಲಿಕವೂ ಅವಸರದ್ದೂ ಆಗುವುದಿದೆ. ಅವುಗಳಲ್ಲಿ ಒಂದಷ್ಟನ್ನು ಆಯ್ದು, ಪರಿಷ್ಕರಿಸಿ ಜಾಲತಾಣದಲ್ಲಿ ನೆಲೆನಿಲ್ಲಿಸುವ ಕೆಲಸವನ್ನು ಈ ಹಿಂದೆ `ಚಕ್ರೇಶ್ವರ ಪರೀಕ್ಷಿತ’ ಮಾಲಿಕೆಯಲ್ಲಿ ಮಾಡಿದಂತೆ, ಅದರದೇ ಇನ್ನೊಂದು ಕಂತಾಗಿ ಈಗ ಹದಿನಾರು ಟಿಪ್ಪಣಿಗಳನ್ನು (ಅವುಗಳು ಪ್ರಕಟವಾದ ದಿನಾಂಕಗಳನ್ನು ಅಲ್ಲಲ್ಲೇ ಕಾಣಿಸಿದೆ) ಇಲ್ಲಿ ಸಂಕಲಿಸಿದ್ದೇನೆ. ನೆನಪಿರಲಿ, ಈ ಟಿಪ್ಪಣಿಗಳು ಸ್ವತಂತ್ರ ಬರೆಹಗಳಾದರೂ ಆಶಯ – ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆ ಮಾತ್ರ. ದಯವಿಟ್ಟು ಇದನ್ನು ನನ್ನ ಹೆಚ್ಚುಗಾರಿಕೆ ಎಂದು ಕಾಣಬೇಡಿ. ಉತ್ತಮ ಸಮಾಜ ನಿರ್ಮಾಣಕ್ಕೆ ನಿಮ್ಮ ಅನುಭವ ಮತ್ತು ವಿಚಾರಗಳನ್ನು ಸೇರಿಸಲು ಅವಕಾಶ ಎಂದೇ ಭಾವಿಸಿ. ತಪ್ಪಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ತೋರಿ, ವೈಚಾರಿಕ ವಿಶ್ಲೇಷಣೆಯಿಂದ ಸಮೃದ್ಧಗೊಳಿಸಿ ಹೀಗೊಂದು ದಾಖಲೀಕರಣದ ಮೌಲ್ಯವರ್ಧನೆಗೆ ಕಾರಣರಾಗುತ್ತೀರಿ ಎಂದು ಭಾವಿಸುತ್ತೇನೆ.]

೧. ದ್ವಿಚಕ್ರಿಗಳ `ಕಂಬಳ’ಕ್ಕಿಲ್ಲ ನಿಷೇಧ!!

“ಕಂಬಳ ನಿಷೇಧವಾದರೇನು, ನೀವೇ ಕೋಣಗಳಾಗಿ” ಎಂದರು ಗೆಳೆಯ ಪಂಡಿತಾರಾಧ್ಯ. ಇವತ್ತು ಬೆಳಗ್ಗೆ (೨೧-೧೧-೨೦೧೪) ಪತ್ರಿಕೆ ನೋಡಿದಾಗ “ಮಂಗಳೂರಿಗೆ ಬರಲಿದೆ ಮೋಟೋಕ್ರಾಸ್” ವರದಿ ಕಾಣಿಸಿತು. ಇದು ಯಾಂತ್ರಿಕ ಕಂಬಳವೇ ಅನ್ನಿಸಿ, ತಯಾರಿ ನೋಡಲು ಸೈಕಲ್ ಸರ್ಕೀಟನ್ನು ಕೂಳೂರಿನತ್ತ ಬಿಟ್ಟೆ.

ವೀಯಾರೆಲ್/ ವಿಜಯವಾಣಿ ಕಛೇರಿಗೂ ತುಸು ಮೊದಲೇ ಬಲಬದಿಯ ಬೀಳುಭೂಮಿಯಲ್ಲಿ ಭಾರೀ ಕೆಮ್ಮಣ್ಣಿನ `ಅವ್ಯವಸ್ಥೆ’, ಸುತ್ತುವರಿದಂತೆ ನಾಲ್ಕಡಿ ಎತ್ತರದ ತಗಡಿನ ಬೇಲಿ, ಬಟ್ಟೇಚಪ್ಪರ, ಸೋಪಾನಗಳ ಅಟ್ಟಳಿಗೆ, ವಿರಾಮದಲ್ಲಿ ಕೆಲಸ ಮಾಡುವ ಒಂದಷ್ಟು ಜನ ಎಲ್ಲಾ ಕಾಣಿಸಿದ್ದೇ ಅತ್ತ ನುಗ್ಗಿದೆ.

ಫೆಡೆರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಇನ್ ಇಂಡಿಯಾ (ಎಫ್.ಎಂ.ಎಸ್.ಸಿ.ಐ) ಅಖಿಲ ಭಾರತ ಮಟ್ಟದಲ್ಲಿ ವರ್ಷಾವಧಿ ನಡೆಸುತ್ತಿರುವ ಯಂತ್ರಚಾಲಿತ ದ್ವಿಚಕ್ರಿಗಳ ಸ್ಪರ್ಧಾತ್ಮಕ ಶಕ್ತಿಪ್ರದರ್ಶನದ ಕಣ ಇದು. ೨೦೧೪ರ ಈ ಸರಣಿಯ ಹೆಸರು `ಎಂಆರೆಫ್ ಮೋಗ್ರಿಪ್ ಸೂಪರ್ ಕ್ರಾಸ್’. ದೇಶದೊಳಗೆ ಆರೆಡೆಗಳಲ್ಲಿ ನಡೆಯುವ ಸರಣಿಯಲ್ಲಿ ಮಂಗಳೂರಿನದು ಐದನೆಯದು.

೧೯೭೦ರ ದಶಕದಲ್ಲಿ ಇಲ್ಲೇ ಆಕಾಶವಾಣಿಯ ಹಿತ್ತಿಲಿನಲ್ಲಿ ನಾನು ಪ್ರಥಮತಃ ಕಂಡ ಮೋಟೋಕ್ರಾಸ್ ನೆನಪು ಎಂದೂ ಮಾಸುವಂತದ್ದಲ್ಲ. ಅದು ಎಷ್ಟೋ ವರ್ಷ ವರ್ಷಾವಧಿ ಜಾತ್ರೆಯಂತೆ ಅಲ್ಲೂ ತುಸು ಬದಲಿದ ಜಾಗಗಳಲ್ಲೂ ನಡೆಯುತ್ತಿತ್ತು. ದೀರ್ಘ ಓಟದ ರ್ಯಾಲೀ, ಕಚ್ಚಾಮಾರ್ಗಗಳ ಅಲೆದಾಟದ ನಿಧಿಶೋಧ ಎಂದೇನೇನೋ ಹೆಸರಿನಲ್ಲಿ ಆ ಕಾಲದಲ್ಲಿ ಮಂಗಳೂರಿನ ಯುವಜನತೆ ಪುಟಿಯುತ್ತಿತ್ತು. ಕೇವಲ ಅದರ ನೆನಪಾಗಿ ಇಂದು ಮಂಗಳೂರು ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಶನ್ ಉಳಿದಂತಿದೆ. ಇಂದು ಹಳೆ ಹುಲಿಗಳ ಪೈಕಿ ಸುಧೀರ್ ಸಂಸ್ಥೆಯ ವರಿಷ್ಠ. ಅಖಿಲ ಭಾರತದ ಮಟ್ಟದಲ್ಲಿ ಇಂಥ ಕ್ರೀಡೆಗಳ ನಿರ್ವಹಣೆಯಲ್ಲಿ ಏಕೈಕ ಮಂಗಳೂರು ಪದವೀಧರನಾಗಿ ಲ್ಯಾನ್ಸಿಲಾಟ್ ಸಲ್ಡಾನ ಸುಧೀರಿಗೆ ಭುಜ ಜೋಡಿಸಿ, ಹನ್ನೆರಡು ವರ್ಷಗಳನಂತರ ಮಂಗಳೂರಿಗೆ ಬಂದ ಈ ಕಲಾಪ ನಡೆಸುತ್ತಿದ್ದರು.

ಲಾರಿಗಟ್ಟಳೆ ಕೆಮ್ಮಣ್ಣನ್ನು ಪೇರಿಸಿ ವಿವಿಧ ಎತ್ತರ ಮತ್ತು ಅಂತರಗಳಲ್ಲಿ ತರಹೇವಾರಿ ಮಣ್ಣಿನ ದಿಬ್ಬಗಳನ್ನು ಮಾಡಿ, ನೀರು ಹಾಕಿ ಒಂದು ಹದಕ್ಕೆ ಗಟ್ಟಿ ಮಾಡುತ್ತಿದ್ದರು. ವಾಹನ ಹಾಗೂ ಸವಾರರ ಸಾಮರ್ಥ್ಯಗಳ ಆಧಾರದ ಮೇಲೆ ಕೆಲವು ವಿಭಾಗಗಳಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಕಂಬಳದ ಕೆನ್ನೀರ ಬದಲಿಗೆ ಕೆಂದೂಳು ಗಗನಕ್ಕೇರಲಿದೆ. ಆದಿತ್ಯವಾರ (೨೩-೧೧-೨೦೧೪) ಬೆಳಗ್ಗೆ ಸ್ಪರ್ಧೆಯಲ್ಲಿ ದಿಬ್ಬಗಳ ಸರಣಿಯನ್ನು ಆರ್ಭಟಿಸುತ್ತ ನೆಗೆಯುವ ಬೈಕ್ ರೋಮಾಂಚನ ನೋಡಲು ನಾನಂತೂಊಊಊ… ನೀವು??

೨. ಭಾರತ್‍ನಿಂದ ಸ್ವಚ್ಛ ಭಾರತ್:

ಹ್ವಾಯ್! ಸೈಕಲ್ ಸರ್ಕೀಟ್ನಲ್ಲಿ ನಿನ್ನೆ ಕ್ವಾಣಿಲ್ಲದ ಕಂಬ್ಳದ್ ಕತೆ ಕಂಡ್ ವಾಪಾಸ್ ಬರುವಾಗ, ಕಂಡ ಮಹಾನಗರದ ಒಂದು ಸೆಗಣಿಕುಪ್ಪೆ ಕತೆ ಬಿಟ್ಟೇ ಹೋಯ್ತು ಮಾರಾಯ್ರೇ. ಕುಂಟಿಕಾನ ಮೇಲ್ಸೇತುವೆಯ ಸಮೀಪ ಭಾರೀ ಹೋಮದೂಮ ಏಳ್ತಾ ಇತ್ತು. ಅಲ್ಲೇ ಪಕ್ಕದಲ್ಲಿರುವ ಮಾರುತಿ ಕಾರಿನ ಭಾರತ್ ಏಜೆನ್ಸಿಯ ಸಮವಸ್ತ್ರಧಾರೀ ನೌಕರರು, `ಸ್ವಚ್ಛ ಭಾರತ್ ಆಂದೋಲನ’ವನ್ನು ತಮ್ಮ ಪರಿಸರದಲ್ಲಾದರೂ ಬಹಳ ಗಂಭೀರವಾಗಿ ಪೂರೈಸುವ ಸಾಹಸದಲ್ಲಿದ್ದರು.

ಕಂಪೆನಿಯವರು ಸ್ವಂತ ಖರ್ಚಿನಲ್ಲಿ ಹಿತಾಚಿ ತರಿಸಿ ದಾರಿಗೆ ಮುಗಿಬಿದ್ದ ಕಳೆ, ಅದರ ಮರೆಯಲ್ಲಿ ಬೇಜವಾಬ್ದಾರೀ `ನಾಗರಿಕ’ರು ಪೇರಿಸಿದ ಕೊಳೆ ಮತ್ತು ಮಳೆನೀರ ಚರಂಡಿಯ ಹೂಳೆಲ್ಲವನ್ನೂ ಅಲ್ಲಲ್ಲಿ ಒಟ್ಟಿದ್ದರು. ಮೇಲ್ಸೇತುವೆಯ ಕಾಮಗಾರಿ ಜಾಣಮರೆವಿನಲ್ಲಿ ಒತ್ತಿನ ದಾರಿಗಳ ಸಹಜ ವಿಸ್ತೀರ್ಣದಲ್ಲಿ ಬಾಕಿಯುಳಿಸಿದ್ದ ಮಣ್ಣುಕಲ್ಲನ್ನೂ ಗೋರಿ ಟಿಪ್ಪರಿಗೇರಿಸಿ ಎಲ್ಲೋ ಕೊರಕಲು ತುಂಬುವಲ್ಲಿಗೆ ಸಾಗಿಸಿದ್ದರು. ಸಮವಸ್ತ್ರಾಲಂಕೃತ ಭಾರತ್ ಕಂಪೆನಿ ನೌಕರರು ಎಲ್ಲದರಲ್ಲೂ ಶ್ರದ್ಧೆಯಿಂದ ಕೈಜೋಡಿಸಿದ್ದರು. ಪ್ಲ್ಯಾಸ್ಟಿಕ್, ಕೊಳೆತದ್ದು, ಹುಳಿತದ್ದು ಮೊದಲಾದ ಅನಿವಾರ್ಯಗಳ ಕುಪ್ಪೆಗಳಿಗೆ ಬೆಂಕಿ ಹಚ್ಚಿ ನಿಜದ ಪುಣ್ಯಕಾರ್ಯ ನಡೆಸಿದ್ದರು. `ಭಾರತ್’ ಇಲ್ಲದೆ ಸ್ವಚ್ಛ ಬಾರತ್ ಎಲ್ಲಿ! ಈ ಆದರ್ಶವನ್ನು ಮಂಗಳೂರಿನ ಎಲ್ಲಾ ಉದ್ದಿಮೆಗಳು ಅನುಸರಿಸಲಿ ಎಂದು ಆಶಿಸುತ್ತಾ ಮನೆ ಸೇರಿದ್ದೆ

೩. ಮೋಟೋಕ್ರಾಸಿನ ಬಿಸಿ ಏರಿದೆ!

ನಿನ್ನೆ ನೋಡಿ ಬಂದ ಮಣ್ಣದಿಬ್ಬಗಳ ಮೇಲೆ ವಿಜೃಂಭಿಸುವ ದೈತ್ಯ ಬೈಕ್‍ಗಳ ಅಭ್ಯಾಸ ನೋಡಲು ಇಂದು ಬೆಳಿಗ್ಗೆಯೇ ನಾನಲ್ಲಿ ಹಾಜರು. ಆದರೆ ಸಂಘಟಕರು “ಇಲ್ಲ, ಸಂಜೆ ನಾಲ್ಕರ ಮೇಲೆ ಟ್ರಯಲ್ಸ್” ಅಂದರು. ಸಂಜೆ ಹೋದೆ. ಭಾರೀ ಹಬ್ಬದ ಮುನ್ನಾ ದಿನದ ಸಡಗರ, ಗಡಿಬಿಡಿ ಕಾಣುತ್ತಿತ್ತು. ನಿರೀಕ್ಷೆಯಂತೆ ಬೈಕ್‍ಗಳು ಹಾರಾಡುತ್ತಿದ್ದವು. ಹೊಂಡಾ, ಟೀವಿಯೆಸ್ ಎಂದಿತ್ಯಾದಿ ತಯಾರಕರದ್ದಿದ್ದಂತೆ ಎಂಆರೆಫ್, ಸರ್ವೋ ಮುಂತಾದ ಪೂರಕ ಸಾಮಗ್ರಿಗಳ ತಯಾರಕರವೂ ಕಂಬಳದ ಭಾಷೆಯಲ್ಲಿ ಹೇಳುವುದಿದ್ದರೆ `ಕೊಟ್ಟಿಗೆ’ಗಳು, ನಿಶಾನಿಗಳು ಎಲ್ಲೆಲ್ಲೂ ಮೆರೆದಿತ್ತು.

ಸಾರ್ವಕಾಲಿಕ ಸವಲತ್ತು (ಹಲಬಗೆಯ ಮಾಪಕಗಳು, ಹೆದ್ದೀಪ, ನಿಲ್ಲಿಸುವ ಸಾಧನ ಇತ್ಯಾದಿ) ಮತ್ತು ಅಲಂಕಾರಗಳನ್ನೆಲ್ಲ ಕಳಚಿದ ಬೈಕುಗಳು ಎಲ್ಲೆಲ್ಲೂ ಮೆರೆದಿದ್ದುವು. ನೂರೇಟು ತಿಂದು ಅಕ್ಷರಶಃ ಕಾಲುಕೆದರುತ್ತ, ಭುಸುಗುಡುತ್ತಲಿರುವ (ಭಯದಿಂದಲೂ ಇರಬಹುದು) ಕೋಣನಂತೇ ಕಣಕ್ಕೆ ನುಗ್ಗುತ್ತಿದ್ದುವು. ಪ್ರಾಯೋಜಕರ ಕಮಾನುಗಳಡಿಯಲ್ಲಿ ಮಿಂಚಾಗಿ, ಆರಾರಡಿ ಎತ್ತರದ ದಿಬ್ಬಗಳನ್ನು ನಗಣ್ಯ ಮಾಡಿ ಢೀ ಹೊಡೆದು, ಗಾಳಿಸವಾರಿ ಮಾಡಿ, ಅತ್ತಣ ದಿಬ್ಬದ ಕೊನೆಯಲ್ಲೋ ಕೊರಕಲೊಂದರ ಎದುರು ದಡದಲ್ಲೋ ನೆಲಕ್ಕೆ ಚಕ್ರಗಳನ್ನೇ ಅಪ್ಪಳಿಸಿ ಧಾವಿಸುತ್ತಿದ್ದುವು. ಕಣದ ಅಂಚುಗಟ್ಟಿದ್ದ ಓರೆ ಮಣ್ಣದಿಬ್ಬದಲ್ಲಿ ತೀವ್ರ ತಿರುವು ತೆಗೆದು, ತೀರಾ ಅವಶ್ಯ ಬಂದಲ್ಲಿ ನೆಲವನ್ನು ಒದ್ದು, ಇನ್ನೊಂದಷ್ಟು ದಿಬ್ಬ, ತಿರುವುಗಳನ್ನು ನಿಭಾಯಿಸುತ್ತ ಹಲವು ಸುತ್ತು ತೆಗೆಯುತ್ತಿದ್ದುವು.

ವಾಸ್ತವದ ಸ್ಪರ್ಧಾ ರಂಗಕ್ಕಾಗುವಾಗ ಈ ಉನ್ಮತ್ತ ವಾಹನಗಳನ್ನು ಒತ್ತೊತ್ತಾಗಿ ನಿಲ್ಲಿಸಿ, ಏಕಕಾಲಕ್ಕೆ ಬಿಡಲನುಕೂಲವಾಗುವಂತೆ (ಕುದುರೆ ಓಟದ ಸ್ಪರ್ಧೆಯಲ್ಲಿ ಪ್ರತ್ಯೇಕ ಗೂಡು, ಗೇಟೂ ಇದ್ದಂತೆ) ತಡೆಗೇಟು ಸಜ್ಜಾಗಿತ್ತು. ಆಕಸ್ಮಿಕಗಳಲ್ಲಿ ಸೂಚನೆ (ಹಳದಿ, ಕೆಂಪು) ನಿಶಾನಿಗಳನ್ನು ತೋರಿ ಕೊಡಲೂ ಸಹಾಯಕ್ಕೊದಗಲೂ ಸಜ್ಜಾದ ಸ್ವಯಂಸೇವಕರು ಇಂದೂ ಗಂಭೀರವಾಗಿಯೇ ಕಾರ್ಯವೆಸಗುತ್ತಾ ಹೆಚ್ಚಿನದ್ದಕ್ಕೆ ಹುರಿಗೊಳ್ಳುತ್ತಿದ್ದರು. ಧಣಿಗಳೂ, ಮೆಕ್ಯಾನಿಕ್ಕುಗಳು, ಸಹಾಯಕರು, ಪತ್ರಕರು, ಬಿಟ್ಟಬಾಯಿಯ ಪ್ರೇಕ್ಷಕರೂ ಸೇರಿ ನಾಳಿನ ಕನಸಿಗೆ ಭದ್ರ ಅಡಿಪಾಯ ಹಾಕುತ್ತಿದ್ದಂತೆ, ದಿನಮಣಿ ಕೆಂಪು ನಿಶಾನಿ ಹಾರಿಸಿ ಕಣ್ಮರೆಯಾದ. ನಾನು ಮನೆಗೆ ಮರಳಿದೆ.

೪. ಕನಸು ನನಸಾಗುವ ದಾರಿ:

ಸಂಜೆಯ ಸಮಯಮಿತಿಯ ಸೈಕಲ್ ಸರ್ಕೀಟ್ ಕಳಚಿಕೊಂಡು ಇಂದು (೨-೧೨-೨೦೧೪) ಹಗಲೇ ಹೊರಟೆ. ಜೆಪ್ಪು, ಮಹಾಕಾಳಿಪಡ್ಪುವಿಗಾಗಿ ಹೆದ್ದಾರಿ. ತೊಕ್ಕೊಟ್ಟು, ಕುತ್ತಾರಿಗಾಗಿ ದೇರ್ಲಕಟ್ಟೆಯಲ್ಲಿ ಐದು ಮಿನಿಟು ವಿರಾಮ. ಭಾರೀ ದರೆಯಂಚಿನ ಪೆಟ್ರೋಲ್ ಬಂಕಿನಂಚಿನಲ್ಲಿ ಒಂದು ಹಕ್ಕಿನೋಟ ಹಾಕಿ ಕೊಣಾಜೆಗೆ ಮುಂದುವರಿದೆ. ಅಲ್ಲಿ ಬಹಳ ಹಿಂದೆಯೇ ತಮ್ಮ `ಕನಸು’ ಎಂಬ ಮನೆಯ ಕೊಳಚೆಗೆ ಖಾಯಂ ಜೈವಿಕ ಗೊಬ್ಬರ ಪರಿವರ್ತಕವನ್ನು ಸಂಯೋಜಿಸಿದ್ದ ಭೂಮಿಗೌಡರ ಸಂದರ್ಶನ ಬಯಸಿದ್ದೆ. ಅದೃಷ್ಟ ಚೆನ್ನಾಗಿರಲಿಲ್ಲ, ಮನೆ ಬೀಗ. ಫಜೀರು, ಬೀಜದಗುರಿಗಾಗಿ ಮತ್ತೆ ದೇವಂದಬೆಟ್ಟಕ್ಕೇರಿದೆ.

ಇಲ್ಲಿ ನಿಜದ ಕನಸು, ನಿಜದ ನನಸಾಗುವ ಕೆಲಸ ಬಹುಕಾಲದಿಂದ ನಡೆದೇ ಇದೆ. ಸಂತ ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕ ಪ್ರೊ| ಐವಿ ರಾಯರಿಗೆ ದೈಹಿಕ ಕೊರತೆಯಲ್ಲಿ ದೃಷ್ಟಿ ಹಿಂಗಿಹೋಯ್ತು.

ಆದರೆ ಅಂತಃದೃಷ್ಟಿ ಸ್ಫುಟಗೊಂಡಂತೆ ಅವರ ಕನಸಿನಲ್ಲಿ ಸೋಮನಾಥೇಶ್ವರ ಬಂದು ಪ್ರೇರಣೆ ನೀಡಿದನಂತೆ. ಆ ಪ್ರಕಾರ ನೋಡುವಾಗ ವಾಸ್ತವದಲ್ಲಿ ಈ ದೇವಂದ ಬೆಟ್ಟವೂ ಇಲ್ಲಿ ಪೂರ್ಣ ನೆಲಸಮವಾದ ಸೋಮನಾಥ ದೇವಳದ ಅಂಶಗಳೂ ತತ್ಸಂಬಂಧೀ ಇಲಾಖೆಯಲ್ಲಿ ಖಚಿತ ದಾಖಲೆಗಳೂ ಸಿಕ್ಕವಂತೆ. ರಾಯರು ಯುಕ್ತ ಸಮಿತಿ, ಸಾರ್ವಜನಿಕ ಸಹಾಯಗಳೊಡನೆ ಈಚೆಗೆ ಎಂಟು-ಹತ್ತು ವರ್ಷಗಳಿಂದ ದೇವಳದ ಪುನಾರಚನೆ ಕೈಗೊಂಡಿದ್ದಾರೆ.

ಬೆಟ್ಟದ ತಪ್ಪಲಿನಲ್ಲಿ ಮಹಾ ಅಜಗರನಂತೆ ಮೈಚಾಚಿದ ನೇತ್ರಾವತಿಯನ್ನಷ್ಟು ಕಣ್ಣಿಗೂ ಕ್ಯಾಮರಾಕ್ಕೂ ತುಂಬಿಕೊಂಡೆ. ಮತ್ತೆ ಈ ಹಿಂದಿನಂತೆ ನೇರ ದೋಣಿಗಟ್ಟೆಗೇ ಇಳಿದು, ಅರ್ಕುಳದಲ್ಲಿ ಇತ್ತಣ ಹೆದ್ದಾರಿ ಸೇರಿದೆ. ಮುಂದೆ ಗೊತ್ತಲ್ಲ – ವಳಚಿಲ್, ಅಡ್ಯಾರ್, ಪಡೀಲ್… ಮನೆ

೫. ಸೆಕೆದಿನಗಳಿಗೆ KOOL TOWN

ಸೈಕಲ್ ಸರ್ಕೀಟ್ ಹೊರಡಬೇಕಾದವನಿಗೆ ಇದ್ದಕ್ಕಿದ್ದಂತೆ `ಅಪಾರ್ಟ್ಮೆಂಟ್ ಮಾಫಿಯಾ’ ಕೇಳಿ ಮಂಡೆಬೆಚ್ಚ ಏರಿತು. ಬಿಸಿನೀರಿಗದ್ದಿದ ಉಷ್ಣಮಾಪಕದೊಳಗಿನ ಪಾದರಸದಂತೆ ಸೈಕಲ್ಲನ್ನು ಝರ್ರನೆ ಕದ್ರಿ ಕಂಬಳಕ್ಕಾಗಿ ಆಕಾಶವಾಣಿ ಗುಡ್ಡೆ ಹತ್ತಿಸಿದೆ. ಇಂದು (೩-೧೨-೨೦೧೪) ಹಾಗೇ ಸೆಕೆಯ ದಿನ. ಸಹಜವಾಗಿ ಕದ್ರಿಪದವಿನಲ್ಲಿ ಉದ್ಯಾನಕ್ಕೆ ಮಿತಿಮೀರಿದ ಜನಸಂದಣಿ. ಅವರೆಲ್ಲ ಒಟ್ಟು ಗಾಳಿ ಸೇವಿಸುತ್ತಿದುದಕ್ಕೋ ಏನೋ ಬೀಸುಗಾಳಿಯೇ ಇರಲಿಲ್ಲ. ಸೂರ್ಯ ಗಹಗಹಿಸಿ ನಕ್ಕ. ವಾತಾವರಣ ಮತ್ತಷ್ಟು ಕಾವೇರಿ ನಾನು ಬೊಂದೇಲಾಗಿ ಕಾವೂರನ್ನೇ ಸೇರಿದೆ. ತಣಿಯಬೇಕು, ಇಳಿಸಬೇಕು ಎಂದು ಕಾವೂರು ವೃತ್ತದಲ್ಲಿ ಎಡ ತಿರುಗಿ ಹೆದ್ದಾರಿಯತ್ತ ಇಳಿದಾರಿಯನ್ನೇ ಹಿಡಿದೆ. Cool-ಊರನ್ನು (ಕೂಳೂರು) ಸೇರುವಾಗ ಅಗ್ನಿಮುಖಿ ತುಸು ತಣ್ಣಗಾದ. ಅವನ ರಂಗೇರಿದ ಚಂದ ನೋಡುವ ಉತ್ಸಾಹದಲ್ಲಿ ಅಲ್ಲಿನ ಮೇಲ್ಸೇತುವೆಗೇರಿದೆ. ಊಹೂಂ, ಆತ ಕಾಲನಿಯಮದಲ್ಲಿ ಕೆಳಗೆ ಜಾರಿದ್ದರೂ ಕಿಡಿನೋಟ ಕಳೆದಿರಲಿಲ್ಲ; ಕ್ಯಾಮರಾ ಒಡ್ಡುವಂತಿರಲಿಲ್ಲ. ಹಿಂದೆ ನೋಡಿದೆ – ಮೇಲ್ಸೇತುವೆಯ ಅಂಚಿನಲ್ಲೇ ತಲೆ ಮಾತ್ರ ತೋರಿ ಈ ಹಾಳು ಸುರಿಯುವ KOOL TOWN ಕಟ್ಟಡ ಕಾಣಿಸಿತು.

ಬುಡಮಟ್ಟ ನೋಡಿದೆ. ಅಲಂಕಾರಿಕ ತಾರಸಿಯಲ್ಲದೆ ಒಂದೇ ಮಾಳಿಗೆಯ ಕಟ್ಟಡ. ಕೆಳಗೆ ಒಂದೆರಡು ವ್ಯಾಪಾರಿ ಮಳಿಗೆಗಳು ಮಾತ್ರ ಊರ್ಜಿತದಲ್ಲಿದ್ದಂತಿತ್ತು. ಮಾಳಿಗೆಯ ಪ್ರತಿ ಕಿಟಕಿಗೂ ಎ/ಸಿ ಜೋಡಿಸಿದ್ದರು. ಹೊರಗೆ ಕಾಣುವಂಥ ಅಲಂಕಾರಿಕ ಲಿಫ್ಟ್ ನೋಡಿದಾಗಂತೂ ಮಾಳಿಗೆಯವರಿಗೆ ಏನೋ ಮಹತ್ವಾಕಾಂಕ್ಷೆಯ ಲಕ್ಷ್ಯ ಇದ್ದದ್ದು ಸ್ಪಷ್ಟವಾಗುತ್ತಿತ್ತು. ಆದರೆಲ್ಲವೂ ಈಗ ಹಾಳು ಸುರಿಯುತ್ತಿದೆ. ಬಹುಶಃ ಹೆದ್ದಾರಿ ವಿಸ್ತರಣೆಯ ಪೆಟ್ಟಿನಲ್ಲಿ ಈ ಕಟ್ಟಡ ಮುಖಹೀನವಾಗಿರಬೇಕು. ಹೆಸರಿಗೆ ಕೂಳೂರು (ಕೂಲ್ ಟೌನ್) ಆದರೂ ಇವರಿಗೆ ಉಳಿದದ್ದು ಹಾಳೂರು L ನಾನು ಸಂಜೆಗತ್ತಲಿನ ತಣ್ಪಿನ ಲಾಭ ಪಡೆದುಕೊಂಡು ಮನೆಗೆ ಮರಳಿದೆ.

೬. ಬೀಸಿದ ಬಲೆ, ನಿತ್ಯದ ಬಲಿ

ಇಂದು (೪-೧೨-೨೦೧೪) ಸೈಕಲ್ ಸರ್ಕೀಟಿನ ಮೊದಲ ನಿಲುಗಡೆ ಮಣ್ಣಗುಡ್ಡೆಯ ಆರೆಕ್ಸ್ ಲೈಫಿನ ವ್ಯಾಯಾಮಶಾಲೆ. ಏಳರ ರ್‍ಯಾಲಿಗೆ ನನ್ನ ಮತ್ತು ಸಾಲಿಗ್ರಾಮದ ಗೆಳೆಯ ವೆಂಕಟ್ರಮಣ ಉಪಾಧ್ಯರ ಅಭ್ಯರ್ಥಿತನ ಗಟ್ಟಿ ಮಾಡಿ ಮುಂದುವರಿದೆ. ಅಶೋಕನಗರದಾಚೆ ತೊಟ್ಟಿಲ್ದಗುರಿ ಸಂಕದಲ್ಲಿ ಐದು ಮಿನಿಟು ನಿಂತೆ. ಬೀಸು ಬಲೆಗಾರನ ಕೈಚಳಕ ಕಾದು ವಿಡಿಯೋ ತೆಗೆದವನಿಗೆ, ಪ್ರಾಕೃತಿಕ ಗಾಳಗಾರರ ಕೊಕ್ಕುಚಳಕ ಉಚಿತವಾಗಿ ದಕ್ಕಿತ್ತು.

ಮಿಂಚುಳ್ಳಿ, ಕೊರೆಯುತ್ತಿದ್ದ ಕಾಕರಾಜ ಸರದಿ ಕಾದಿದ್ದಂತೆ ನಾನು ಮುಂದುವರಿದೆ. ದಾರಿಗೆ ಅಂಚುಗಟ್ಟಿದ್ದ ಆಳೆತ್ತರದ ಹುಲ್ಲು, ಮುಂದೆ ತೆಂಗಿನತೋಪು ಮತ್ತೆ ಅನಾವರಣಗೊಂಡ ಗುರುಪುರ ನದಿಯ ದಂಡೆಯುದ್ದಕ್ಕೆ ಸಾಗಿ ಕೂಳೂರು ಸೇರಿದೆ.

ಹೆದ್ದಾರಿ ಅಡ್ಡ ಹೊಡೆದು ಕಾವೂರು ವೃತ್ತದತ್ತ ಏರಿ, ಬೊಂದೇಲಿಗಾಗಿ ಪಾಲಿಟೆಕ್ನಿಕ್ ಸಮೀಪಿಸಿದ್ದೆ. ಸಾಗರದ ಹರಹು, ವಿಸ್ತಾರದ ಬಯಲು, ಮರಗಿಡಗಳ ಚೌಕಟ್ಟು, ಬೆಟ್ಟಗುಡ್ಡಗಳ ಸುಂದರ ರೇಖೆಗಳ ಅಂಚಿನಲ್ಲೆಲ್ಲಾ ದಿನದ ವ್ಯಾಪಾರ ಮುಗಿಸುತ್ತಿದ್ದ ಸೂರ್ಯ ಇಲ್ಲಿ ಕಂಡದ್ದು ದುರಂತ; ಪಾಲಿಟೆಕ್ನಿಕ್ಕಿನ ಗೋಪುರದ ಒತ್ತಿನಲ್ಲಿ ತಂತಿಗಳ ಜಾಲಕ್ಕೆ ಸಿಕ್ಕಿ ರಕ್ತಸಿಕ್ತನಾಗಿ ಅಸ್ತಂಗತನಾದ. ನಾನು ಕದ್ರಿಕಂಬಳಕ್ಕಾಗಿ ಮನೆ ಸೇರಿದೆ.

೭. ಕಚ್ಚಾ ಜಾಡಿನ ರುಚಿ

ನನ್ನಮ್ಮನಿಗಿಂದು (೬-೧೨-೨೦೧೪) ತಂಗಿಯನ್ನು ನೋಡಬೇಕೆನ್ನಿಸಿತು. ಕಾರು ಹೊರಡುವಾಗ ಸೈಕಲ್ “ನಾ ಬರ್ಲಾ” ಕೇಳಿತು. ಏರಿಸಿಕೊಂಡೆ. ಅಲ್ಲಿಗೆ ತಲಪಿದ ಮೇಲೆ ನಾನು ಸೈಕಲ್ಲಿಗೆ “ಕತ್ತೆಯು ಹೇಳಿತು ಓ ಗೆಳೆಯಾ ನೀನನಗಿದ್ದರೆ ನಾನಿನಗೆ” ಎಂದವನೇ ಮೇಲೇರಿ ಸವಾರಿ ಹೊರಟೆ. ಎಡೆಂಬಳೆಯ ಸುಮಾರು ಐವತ್ತೆರಡು ಎಕ್ರೆ ತೋಟ, ಗುಡ್ಡೆಯೊಳಗಿನ ಮಾರ್ಗಜಾಲದಲ್ಲಿ ಸುಮಾರು ಹದಿನೈದು ಕಿಮೀಯಷ್ಟು ಅಂತರವನ್ನು ಮನಸೋಯಿಚ್ಛೆ ಸುತ್ತು ಹಾಕಿದೆ. ಇದುವರೆಗೆ ಬೆಟ್ಟ ಹತ್ತುವ ಸೈಕಲ್ಲನ್ನು (ಎಂಟೀಬಿ = ಮೌನ್ಟೇನ್ ಟೆರೇನ್ ಬೈಕ್) ಪಕ್ಕಾ ರಸ್ತೆಗಳಲ್ಲಷ್ಟೇ ಓಡಿಸುತ್ತಿದ್ದದ್ದಕ್ಕೆ ಪ್ರಾಯಶ್ಚಿತ್ತ ಮಾಡಿಕೊಂಡೆ. ನಾಳಿನ ಆರೆಕ್ಸ್ ಲೈಫಿನ ರ್‍ಯಾಲೀ ಮುಗಿದ ಮೇಲೆ ಅನುಕೂಲದ ಒಂದು ದಿನ ಮಂಗಳೂರು ಸೈಕಲ್ ಕ್ಲಬ್ಬಿನ ಮಿತ್ರರನ್ನು ಇಲ್ಲಿಗೆ ಕರೆತರಬೇಕೆಂದು ಯೋಚಿಸುತ್ತಾ ಅಲ್ಲಿಗೆ ಹೋದಂತೆ ಮರಳಿದೆ.

೮. ಸೈಕಲ್ ಮಹಾಪೂರ

`ಮಂಗಳೂರು ಸೈಕಲ್ ರ್‍ಯಾಲೀ’ ಎಂದು ಹೆಸರಿಸುವ ಮೋಹಕ್ಕಿಳಿಯದೆ ಆದರೆ ಅವಿರೋಧವಾಗಿ ಹಾಗೇ ಖ್ಯಾತವಾಗುವಂತೆ ಆರೆಕ್ಸ್ ಲೈಫ್ ತನ್ನ ಎಂಟನೇ ವಾರ್ಷಿಕ (೨೦೧೪) ಸೈಕಲ್ ರ್‍ಯಾಲೀಯನ್ನು ನಿನ್ನೆ (೭-೧೨-೨೦೧೪) ಹಿಂದೆಂದಿಗಿಂತ ದೊಡ್ಡದಾಗಿಯೂ (ಅಧಿಕೃತ ಭಾಗಿಗಳು ೨೦೮೪, ಹೆಸರು ನೊಂದಾಯಿಸದೇ ಸೇರಿರಬಹುದಾದವರ ಲೆಕ್ಕ ಅಂದಾಜಿಸಿದರೆ ೨೨೦೦) ಯಶಸ್ವಿಯಾಗಿಯೂ ಘೋಷಿತ ಲಕ್ಷ್ಯಗಳನ್ನು ಪ್ರಾಯೋಗಿಕ ಒರೆಗಲ್ಲಿಗೆ ಉಜ್ಜುತ್ತಲೂ ನಡೆಸಿತು. ಎಂದಿನಂತೆ ಆರೂವರೆಗೆ ಲೇಡೀಹಿಲ್ ವೃತ್ತದಿಂದ ತೊಡಗಿದ ಮಹಾ ಸೈಕಲ್ ಪ್ರವಾಹ ಕೊಟ್ಟಾರ, ಕೂಳೂರು, ತಣ್ಣೀರುಬಾವಿಯವರೆಗೆ ಹರಿಯಿತು.

ಸಾಗರಕ್ಕೆ ಪ್ರತಿ ಸಾಗರವಾಗಿ ಭೋರ್ಗರೆದ ಯುವ ಚೇತನಗಳು (ಪ್ರಾಯ ಲೆಕ್ಕಕ್ಕಿಲ್ಲ; ಎಂಟರಿಂದ ಎಂಬತ್ತರ ಹರಯದವರೆಗೂ ಭಾಗಿಗಳಿದ್ದರು) ಮತ್ತದೇ ದಾರಿಯಲ್ಲಿ ಮರಳಿ ಸುಲ್ತಾನ್ ಬತೇರಿ ಬಳಿಯ ಅಮೃತಾನಂದಮಯಿ ಶಾಲೆಯ ವಠಾರದಲ್ಲಿ ಪೂರ್ಣಗೊಂಡಿತು. ಈ ಬಾರಿಯ ವಿಶೇಷವಾಗಿ `ನೇತ್ರಾವತಿ ಉಳಿಸಿ’ ಕರೆ ಗಟ್ಟಿಯಾಗಿ ಕೇಳಿತು. ಹಾಗೇ ಸೈಕಲ್ಲಿನಲ್ಲಿ ವಿವಿಧ ಕಸರತ್ತುಗಳನ್ನು ಸಾಧಿಸಿದ ಮುಂಬೈಯ ಇಬ್ಬರು ತರುಣರ (ಇರ್ಜ್ವಾನ್ ಮತ್ತು ಸಮೀರ್) ಪ್ರದರ್ಶನವೂ ಇತ್ತು.

೯. ಕಲ್ಲು, ಮರಳಿನ ಗೊಂದಲ

ನಂತೂರು, ಕುಲಶೇಖರಕ್ಕಾಗಿ ನೀರುಮಾರ್ಗದತ್ತ ತಿರುಗಿತು ನನ್ನ ಇಂದಿನ (೧೦-೧೨-೨೦೧೪) ಸೈಕಲ್ ಸರ್ಕೀಟ್. ದಾರಿ ಹೊಸದಾಗಿ ಡಾಮರ್ ಹೊದಿಕೆ ಪಡೆದು ನುಣ್ಣಗೆ ಮಲಗಿತ್ತು. ಅವರಿವರನ್ನೆಬ್ಬಿಸಿ ಮೇರ್ಲಪದವಲ್ಲ, ಮೇರಮಜಲು-ಅರ್ಕುಳ ದಾರಿಯನ್ನೇ ವಿಚಾರಿಸಿಕೊಂಡು ಹೋದೆ. ಆದರೆ ಗಗನ-ಕೊಟ್ಟಿಗೆಯ ಮೂಲೆಯಿಂದ ಮೋಡ-ಗೂಳಿ ಗುಟುರು ಹಾಕಿತು. ಅದಕ್ಕೆ ಸೊಪ್ಪು ಹಾಕದೆ, ಮೇರ್ಲಪದವು-ವಳಚ್ಚಿಲ್ ಕವಲು ನಿರಾಕರಿಸಿ ಬೊಂಡತಿಲದ ಪಾತಾಳದಂಥ ತಳಕ್ಕಿಳಿದೆ. ಅಲ್ಲಿ ಕಲ್ಪಣೆ ದಿಕ್ಕು ಬಿಟ್ಟು, ಬಲದ ಕವಲು ಹಿಡಿದೆ. ಅದು ಸೈಕಲ್ಲಿನ ಗೇರು ಪರೀಕ್ಷೆಯಲ್ಲಿ ಹೊಸ ಸವಾಲು! ಅದನ್ನು ಯಶಸ್ವಿಯಾಗಿಯೇ ಉತ್ತರಿಸಿದ್ದಕ್ಕೆ ಪಕ್ಕಳಪಾದೆಯ ಕೆರೆ ದಂಡೆಯಲ್ಲಿ ಐದು ಮಿನಿಟು ವಿರಮಿಸಿದೆ. ಮುಂದೆ ಕೊಡ್ಮಾಣ್ ಸುತ್ತು ಬಿಟ್ಟು, ಬಡ್ಡೂರು ಒಳದಾರಿ ಹಿಡಿದೆ. ಇದು ಸದ್ಯ ಕೋರ್ದಬ್ಬು ದೈವಸ್ಥಾನದವರೆಗೆ ಮಾತ್ರ ಸರ್ವ ವಾಹನ ಯೋಗ್ಯ. ಮುಂದೆ ನೂರಿನ್ನೂರು ಮೀಟರ್ ಕೇವಲ ಕಾಲ್ದಾರಿ; ಸೈಕಲ್ಲಿಗೆ ಅದು ಮಾನ್ಯ. ಮತ್ತೆ ಮೇರಮಜಲಿನ ಮುಖ್ಯ ದಾರಿ ಸೇರಿ, ಅರ್ಕುಳದಲ್ಲಿ ಪುತ್ತೂರು ದಾರಿಗೆ ಸಂಗಮಿಸಿದೆ. ಹೆದ್ದಾರಿ ಸೇರುವ ಸ್ವಲ್ಪ ಮೊದಲು ಬಲಕ್ಕೆ, ಕಾಡು ಕಸ ಮಾಡಿ, ಕೆಮ್ಮಣ್ಣ ಬಗೆದು ಕಗ್ಗಲ್ಲನ್ನು ಚೂರ್ಣ ಮಾಡುವ ಒಂದು ಕಾರ್ಯಾಗಾರ ಕಂಡೆ. ನೀರುಮಾರ್ಗದ ನುಣ್ಣನೆ ಹೊದಿಕೆಯಿಂದ ತೊಡಗಿ, ಗುಡ್ಡೆ ಕಣಿವೆಗಳನ್ನು ನಗಣ್ಯ ಮಾಡಿ ಶೋಭಾಯಮಾನವಾಗಿ ತಲೆ ಎತ್ತಿದ ಬೃಹತ್ ಕಟ್ಟಡಗಳವರೆಗಿನ (ಸಣ್ಣದೇ ಆದರೂ ನನ್ನ ಮನೆಯೂ ಸೇರಿ) ಮೂಲ ಘಟಕ ಈ ಕಲ್ಲ ಚೂರ್ಣ. ಮತ್ತು ತುಸು ಅತ್ತ, ನೇತ್ರಾವತಿ ಹೊಟ್ಟೆ ಬಗಿದು ದಂಡೆಯಲ್ಲಿ ಗುಡ್ಡೆ ಬಿದ್ದ ಮರಳರಾಶಿ.

ಇವುಗಳಲ್ಲಿ ಎಷ್ಟು ಅನಿವಾರ್ಯ, ಎಷ್ಟು ಅನಾಚಾರ ಎಂದು ಯೋಚನೆ ಬರುವಾಗ ನನ್ನ ತಲೆಬಿಸಿಯೇರಿತು. ಆ ಗುಂಗಿನಲ್ಲಿ ವಳಚಿಲ್, ಅಡ್ಯಾರ್, ಪಡೀಲ್, ಮರೋಳಿ, ನಂತೂರು ತುಳಿದು ಕಳೆಯುವಾಗ ಕತ್ತಲಾದ್ದೇ ಗೋಷ್ಠಿ ಮಾಡಿರಲಿಲ್ಲ. ಕನಿಕರಿಸಿದ ಮೋಡ-ಗೂಳಿ ದೀಪದ ಕೋಲು ಬೆಳಗಿಸಿ, ಅಬ್ಬರದಲ್ಲೂ ಕಂಬನಿ ಮಿಡಿಯುವಾಗ ಮನೆ ಸೇರಿದ್ದೆ.\

೧೦. ಗಪ್ಪಿ ಮೀನು, ಬಟಪಾಡಿ ನೀರು

“ನಮ್ಮನೆಯ ಜೈವಿಕ ಅನಿಲ ಓಕೆ, ಸ್ಥಾವರದ ಹೊರ ಆವರಣದಲ್ಲಿ ಸೊಳ್ಳೆಮರಿ ಯಾಕೆ” ಹಾಕಿದಳು ಪ್ರಶ್ನೆ ನನ್ನಾಕೆ. ಅನಿಲ ಸ್ಥಾವರ ಮಾಡಿಕೊಟ್ಟ ಶ್ರೀಕೇಶ ಎರಡೆರಡು ಬಾರಿ ಮತ್ತು ನಗರಸಭೆಯ ಮಲೇರಿಯಾ ವಿಭಾಗದಿಂದ ಒಮ್ಮೆ ಗಪ್ಪಿ ಮೀನು ತಂದು ಬಿಟ್ಟದ್ದೇ ಬಂತು, ಬಾಳಿಕೆ ಬರಲೇ ಇಲ್ಲ.

ಅಲ್ಲೆಲ್ಲ ಮತ್ತೆ ಕೇಳಲು ಹೋದರೆ “ಏನ್ಸ್ವಾಮೀ ಮೀನುಸಾರು ಮಾಡ್ತೀರಾ” ಅಂತ ಕೇಳಿಬಿಟ್ಟರೆ ಎಂಬ ಸಂಕೋಚದಲ್ಲಿ ಸೈಕಲ್ಲೇರಿ ಮೀನುಗಾರಿಕಾ ಕಾಲೇಜಿಗೆ ಹೋದೆ (೧೨-೧೨-೨೦೧೪). “ಸಂಬಂಧಪಟ್ಟವರು ಮೀಟಿಂಗಿನಲ್ಲಿದ್ದಾರೆ, ಸಂಜೆ ಬನ್ನಿ” ಉತ್ತರ ಸಿಕ್ಕಿತು.

ಗಗನದಲ್ಲಿ ಮೋಡದ ಪರಿಸ್ಥಿತಿ ಬಿಗಡಾಯಿಸಿರುವುದು ನೋಡಿ ಈಗಲೇ ಸೈಕಲ್ ಸರ್ಕೀಟ್ ಮುಗಿಸಿ ಬಿಡೋಣವೆಂದು ತೊಕ್ಕೊಟ್ಟು, ಉಳ್ಳಾಲಕ್ಕೆ ಮುಂದುವರಿದೆ. ರೈಲ್ವೇ ನಿಲ್ದಾಣದ ಪಕ್ಕದ ಕಡಲಕಿನಾರೆ ರಸ್ತೆ ಹಿಡಿದೆ. ಅಮೃತ ಸೋಮೇಶ್ವರರ ಬಾಡಿಗೆ ಮನೆ (ಇಲ್ಲ, ಒಳಗೆ ಹೋಗಿ ಅವರ ಕಾವ್ಯ ತಪಸ್ಸಿಗೆ ಭಂಗ ಉಂಟು ಮಾಡಲಿಲ್ಲ) ಕಳೆದು ಸ್ವಲ್ಪ ಮುಂದೆ, ಎದುರಿಂದ ಸಿಕ್ಕ ಲಾರಿ, ಬೈಕ್ “ಮಾರ್ಗ ಬಂದಾಗಿದೆ” ಎಂಬ ಸೂಚನೆ ಕೊಟ್ಟರು. ನೋಡಿದರೆ ಎರಡು ಹಿನ್ನೀರ ತೊರೆಗಳಿಗೆ ಸೇತುಬಂಧ ನಡೆದಿತ್ತು. ಇಲ್ಲೆಲ್ಲ ಸೈಕಲ್ ಸೋಲುವುದಿಲ್ಲ. ಎತ್ತಿ ದಾಟಿಸಿ, ಬಟಪಾಡಿ ಕೊನೆಯವರೆಗೂ ನಿರ್ವಿಘ್ನವಾಗಿ ಹೋದೆ. ಅಲ್ಲಿ ತಿಂಗಳ ಹಿಂದೆ ಊರಿನ ಸ್ವಯಂಸೇವಕರು ಬಿಡಿಸಿದ್ದ ಉಚ್ಚಿಲ ಹೊಳೆಯ ಅಳಿವೆಯನ್ನು ಸಮುದ್ರರಾಜ ಮತ್ತೆ ಅಸಿಂಧುಗೊಳಿಸಿದ್ದ! ಸಂಜೆ ಮಳೆ ಬಂದರೆ ಹೊಳೆಯುಬ್ಬರಿಸುವುದು ಖಾತ್ರಿ. ಊರವರಿಗೆ ಮರುಕಳಿಸುವ ಕಷ್ಟಕ್ಕೆ ನಾನು “ಅಯ್ಯೋ ಪಾಪ” ಎಂದರೆ ನಿವಾರಣೆಯಾದೀತೇ? ಮೌನವಾಗಿ ಮರಳಿ ಮನೆ ಸೇರಿಕೊಂಡೆ.

೧೧. ಸೈಕಲ್ಲಿಗೆ ಜೀವವಿದ್ದರೆ…

“ಮೈ ಪೂರಾ ಜಡವಾಗಿ ಹೋಯ್ತು. ಬಾ ಸರ್ಕೀಟ್” ಅಂತ ಸೈಕಲ್, ಇಂದು (೨೧-೧೨-೨೦೧೪) ಸಂಜೆ ಬಿಜೈ, ಕೊಟ್ಟಾರ, ಕೂಳೂರಾಗಿ ತಣ್ಣೀರು ಬಾವಿಯತ್ತ ಕರೆದೊಯ್ಯಿತು. ಕಲ್ಲೆಣ್ಣೆ ಕೊಳವೆಸಾಲಿನ ತಪ್ಪಲಲ್ಲಿ ರಸವತ್ತಾಗಿ ಮೇಯ್ತಿದ್ದ ಕರಿಯಪ್ಪನ ಭುಜ ತಟ್ಟಿ ಕಾಳಯ್ಯನೂ ಕೆಂಚಪ್ಪನ ಕಿವಿ ಕಚ್ಚಿ ಬಿಳ್ರಾಯನೂ ಕಿಚಾಯಿಸಿ, ಮಸ್ಲತ್ ನಡೆಸಿದ್ದವು. ದಾರಿಯ ಇನ್ನೊಂದು ತಲೆಯಲ್ಲಿ ಮೆಲ್ಕಾಡಿಸ್ಕೊಂಡು ಬಿದ್ದಿದ್ದ ಬಸ್ವಣ್ಣನಿಗೆ `ಅಂಚೆ’ ಕಳಿಸಿದುವು.

ಮುಖ್ಯಾಂಶ ಇಷ್ಟೇ “ಗಂಡಸೇನ್ಲೇ ನೀನು?” ವಿವರದಲ್ಲಿ, “ಮನುಷ್ಯರು ನಡ್ಸೋ ಕೋಣದೋಟಕ್ಕೇ ಈಗಡ್ಡಿ ಇಲ್ವಂತೇ. ಮತ್ ನಮ್ಮೊಳಗಿನ ಕಾಳಗಕ್ಕೆ ಯಾರಡ್ಡಿ?!” ದೊಡ್ಡವರ ಜಗಳ ನೋಡಕ್ಕೆ ನಿಂತು ತನ್ನ ಮೈ ನುಗ್ಗಾದರೇಂತ ಸೈಕಲ್ ಯದ್ವಾ ತದ್ವಾ ಹೆದರಿತು. ತಣ್ಣೀರ್ಬಾವಿ ಕಡಲ ಕಿನಾರೆಗೋಡಿ, ಜೋಡಿಸಿದ್ದ ಕೊಳವೆ ಸಾಲನ್ನೇ ದುರ್ಬೀನೋ ದೂರದರ್ಶನವೋ ಮಾಡಿ, ಇನ್ನೊಂದು ಕೊನೆಯಲ್ಲಿ ಕುಳಿತುಕೊಂಡಿತು.

“ಬಡಕ್ಲು ಸೊಳ್ಳೆಗ್ ಸೋತು, ಮಲೇರಿಯಾಂತ ಮೂರು ದಿನ ಮಲಗಿ ಮತ್ತೆ ಮೂರು ದಿನ ಸುಧಾರಿಕೆ ಮುಗಿಸಿದವ ನಾನು. ಸವಾರಿಗೇಂತ ತಂದು ಹೀಗೆ ಸತಾಯಿಸಬಾರದು” ಅಂತ ಸೈಕಲ್ಲಲ್ಲಿ ಬೇಡಿಕೊಂಡೆ. ಕರುಣಾಹೃದಯಿ ಕನಿಕರಿಸಿ, ಸೂರಪ್ಪನ ಏಳು ಕುದುರೆ ಗಾಡಿ ಜಳ್ಕಾ ಮಾಡಲು ಇಳಿವ ಮೊದಲು, ಮತ್ತೆ ನನ್ನನ್ನು ಮನೆ ಸೇರಿಸಿತು. [ತಿಂಗಳು ಕಳೆದು ಬಂದ ಸುದ್ದಿ: ಬೈಕಂಪಾಡಿ ವಲಯದಲ್ಲೇ ಬೀಡಾಡಿ ಹೋರಿ ಜಗಳದಲ್ಲಿ ಮಹಿಳೆ ಸಾವು]

೧೨. ಸೂರ್ಯನ ಮೇಲ್ಸೇತುವೆ

ಇಂದಿನ (೨೨-೧೨-೨೦೧೪) ಸೈಕಲ್ ಸರ್ಕೀಟಿಗೆ ನಿನ್ನೆಯ ಬೆಂಬಲವಿತ್ತು. ನಂತೂರಿನ ವೃತ್ತವ್ಯೂಹದಲ್ಲಿ ನಾನೇನೋ ಪಾದಚಾರಿಯ ರಿಯಾಯ್ತಿಯಲ್ಲಿ ಪಾರಾದೆ. ಅಲ್ಲಿ ಕೆಳದಾರಿಯೋ ಮೇಲ್ಸೇತುವೆಯೋ, ಎರಡೋಣಿಯೋ ಎಂಟೋಣಿಯೋ, ನಿಂಗಿಷ್ಟು ನಂಗಿಷ್ಟು ಬಗೆಹರಿಯುವುದರೊಳಗೆ ಆಗುವ ಸೊತ್ತು-ಜೀವಹಾನಿಗಳದೆಷ್ಟು? ಇನ್ನಲ್ಲಿ ಬಿಸಿಲು, ದೂಳು, ಹೊಗೆ ತಿನ್ನುವುದರೊಡನೆ ಶಿಸ್ತು ಮೂಡಿಸಲು ಹೆಣಗುವ ಪೋಲಿಸರ ಸಂಕಟಗಳಿನ್ನೆಷ್ಟು? ಅವಸರದಲ್ಲಿ ಬೇಕಿರದ ಕುಲಶೇಖರ ಕೈಕಂಬದ ಮೇಲ್ಸೇತುವೆಯವರೆಗೂ ಕಾಡುತ್ತಲೇ ಇತ್ತು.

ಮರೋಳಿಯ ಇಳಿಜಾರಿಗೆ ಬರುವಾಗ, ಕೆಂಡದ ಮೇಲೆ ಮುಸುಕಿನ ಜೋಳ ಸುಟ್ಟ ಪರಿಮಳ. “ ಆಹಾ ಮೇಲೊಂದಿಷ್ಟು ಉಪ್ಪು, ಕಾರ….” ಎಂದು ಯೋಚಿಸುವುದರೊಳಗೇ ವಾಸ್ತವ ತೆರೆದುಕೊಂಡಿತು. ತಿಂಗಳ ಹಿಂದೆ ನನ್ನ ಧಾವಂತದದುದ್ದಕ್ಕೆ ಚಾಮರ ಸೇವೆ ಕೊಟ್ಟ ಬಿಂಕದ ಹಸಿರು ಹುಲ್ಲು ಧರಾಶಾಯಿಯಾಗಿ ಅರೆಬೆಂದಿತ್ತು.

ಪಡೀಲಿನಲ್ಲಿ ರೈಲ್ವೆ ಮೇಲ್ಸೇತುವೆಯ ಹಸುರು ಸರಳುಗಳು ಇನ್ನಷ್ಟು ಎತ್ತರಕ್ಕೆ ಬೆಳೆದಿದ್ದುವು. ಆಚೆಗಿನ ಸಂಪರ್ಕದಾರಿ ಸಾಧಿಸಲು ದುರುದುಂಡಿ (earth mover) ನೆಲಗೋರುತ್ತಿತ್ತು. ಆದರೆ ಎತ್ತಿಹಾಕಿದ್ದಷ್ಟೂ ಬಹುನಮೂನೆಯ ನಾಗರಿಕ ಕೊಳೆಗುಡ್ಡೆ. ತಾವೇ ಎಸೆದ ಕಸಕ್ಕೆ ತಾವೇ ಹೇಸಿದಂತೆ ಜನ ಮೂಗುಮುಚ್ಚಿ ನೋಡುತ್ತಿದ್ದದ್ದು ತಮಾಷೆಯಾಗಿತ್ತು.

ವರ್ಷಗಳ ಕೆಳಗೆ ಒಮ್ಮೆಲೇ ಕಣ್ಣೂರು ಮಸೀದಿ, ಮುಂದುವರಿದು ತುಂಬೆ ಶಾಲೆಯ ಎದುರು ದಿಢೀರನೆ ಎರಡು ಪಾದಚಾರಿ ಮೇಲ್ಸೇತುವೆ (ಸ್ಕೈ ವಾಕ್) ಎದ್ದಿತ್ತು. ನಾನು ಇಂದಿನ ಸವಾರಿಯನ್ನು ಆ ಶಾಲೆಯವರೆಗೂ ಬೆಳೆಸಿ, ಮೇಲ್ಸೇತುವೆಯ ಉಪಯುಕ್ತತೆಯನ್ನು ಸಚಿತ್ರ ಮನವರಿಕೆ ಮಾಡಿಕೊಂಡೆ.

ಆದರೆ ಹಿಂದೆ ಹಲವು ಸಲ ಮತ್ತು ಇಂದೂ ಮಸೀದಿ ಎದುರಿನ ಸೇತುವೆಯನ್ನು ಉಪಯೋಗಿಸುವವರನ್ನು ಕಾಣಲೇ ಇಲ್ಲ. ಇದು ತಲೆಯಲ್ಲಿ ಕೇವಲ ಸಕಲ ಬ್ಯಾನರ್ ಪ್ರಿಯ! ನಮ್ಮ Poor-ಸಭೆಗಳು ಸಾರ್ವಜನಿಕ ಹಣದಲ್ಲಿ ಊರ ಹೊರಗೆ ಕಟ್ಟಿಮರೆಯುವ ಸ್ವಾಗತ ಕಮಾನುಗಳಂತೆ, ದೇವದೈವಸ್ಥಾನಗಳು ಭಕ್ತಾದಿಗಳ ಕಾಣಿಕೆಯನ್ನು ಎಲ್ಲೋ ಕೈಕಂಬಗಳಲ್ಲಿ ನಿಲ್ಲಿಸುವ ಮಹಾತೋರಣಗಳಂತೆ, ಸಮ್ಮೇಳನವೇ ಮೊದಲಾದ ವಿಶೇಷ ಕಲಾಪ ಕಾಲದಲ್ಲಿ ಹೆಜ್ಜೆಗೊಂದರಂತೆ ಸಂದ ಮಹಾತ್ಮರ ಹೆಸರಿನಲ್ಲಿ ಆದರೆ ಜಾಹೀರಾತು ಕೀಸುವ ಉದ್ದೇಶದಲ್ಲೇ ನಿಲ್ಲಿಸುವ ಮಹಾದ್ವಾರಗಳಂತೆ ಶ್ವಾನವಂದನೆಗಷ್ಟೇ ಮೀಸಲು!

ಆದಾಯ ವೆಚ್ಚದ ಲೆಕ್ಕಿಲ್ಲದ, ಕುಂದ ಮೆಟ್ಟಿಲುಗಳ ಗೋಜಿಲ್ಲದ ಬಲುದೊಡ್ಡ ಮೇಲ್ಸೇತುವೆಯಲ್ಲಿ, ಆದಿತ್ಯ ಎಂದಿನಂತೆ ನಿಶ್ಶಬ್ದವಾಗಿ ಸರಿದು, ಹಗಲಿನ ಹೆಗಲಿಳಿಯುವಾಗ ನಾನು ಮತ್ತೆ ಮನೆ ಸೇರಿದ್ದೆ.

೧೩. ಕಳ್ಳ ವೇದಿಕೆ, ಅಪಕ್ವ ಕಲಾವಿದರು

ನಿನ್ನೆ ಮೊನ್ನೆ ಪುತ್ತೂರು ಸುತ್ತಾಟಕ್ಕೆ ಕಾರು ಬಳಸಿದ್ದೆ. ತಪ್ದಂಡವಾಗಿ, ಇಂದಿನ (೨೬-೧೨-೨೦೧೪) ಸೈಕಲ್ ಸರ್ಕೀಟ್ ಸಣ್ಣದಾಯ್ತು. ಬಿಜೈ, ಕುಂಟಿಕಾನಕ್ಕಾಗಿ ಹೆದ್ದಾರಿಯಲ್ಲಿ ತುಸು ಮುಂದುವರಿದು ಲೋಹಿತ್ ನಗರ ದಾರಿಗಿಳಿದೆ. ಅದು ನೇರ ಕುರುಡು ಕೊನೆ ಕಂಡದ್ದಕ್ಕೆ, ಹಿಂಬಂದು, ಪ್ರಶಾಂತನಗರದ ಕವಲು ಅನುಸರಿಸಿದೆ. ಅದರಲ್ಲಿ ಸುತ್ತಿ ಸುಳಿದು, ಕಾವೂರು-ಕುಂಟಿಕಾನ ರಸ್ತೆಯಲ್ಲಿ ಮುಂದುವರಿದವನಿಗೆ ನಿರೇನ್ ನೆನಪಾಯ್ತು. ಸರಿ ಬ್ಲೂಬೆರಿ ಹಿಲ್ಲಿಗೆ ನೇರ ಏರುವ ಕವಲು ಹಿಡಿದೆ. ಅಲ್ಲಿ ಬಲಕ್ಕೆ ಈಗಾಗಲೇ ಕನಿಷ್ಠ ಎರಡು ಕೂಲಿಕಾರರ ಜೀವ ಬಲಿ ತೆಗೆದುಕೊಂಡರೂ ದೃಢವಾಗಿ ಮೇಲೇರುತ್ತಿರುವ ವಸತಿ ಸಮುಚ್ಛಯದವರು, ಪೂರ್ಣ ಗುಡ್ಡೆಯನ್ನಾಧರಿಸುವ ಗೋಡೆ ಎಬ್ಬಿಸುತ್ತಿದ್ದುದನ್ನು ಕೇವಲ ಕಣ್ತುಂಬಿಕೊಂಡೆ. ನಿರೇನ್ ಮನೆ ಎದುರಿನಿಂದ ಹಾದು, ಒತ್ತಿನಲ್ಲೇ ಕೆಳಗಿಳಿದ ಕಚ್ಚಾದಾರಿಯೊಂದಕ್ಕೆ ಹೊಸ ಡಾಮರ್ ಹೊದಿಕೆ ಸಿಕ್ಕಿದ್ದನ್ನು ಸೈಕಲ್ ಇಳಿಸಿ, ಏರಿಸಿ `ತನಿಖೆ’ ಮುಗಿಸಿ, ಯೆಯ್ಯಾಡಿಗಾಗಿ ಕದ್ರಿ ಉದ್ಯಾನವನ ಸೇರಿದೆ. ಅಲ್ಲಿ ವರ್ಷಾವಧಿ ಸರ್ಕಾರಿ ಜಾತ್ರೆ – ಕ್ಷಮಿಸಿ, ಕರಾವಳಿ ಉತ್ಸವದಂಗವಾಗಿ ಮಕ್ಕಳ ಯಕ್ಷಗಾನ ನಡೆದಿತ್ತು. “ಕಳ್ಳ ವೇದಿಕೆಗಳು ಸೃಷ್ಟಿಯಾದರೆ ಅಪಕ್ವ ಕಲಾವಿದರಿಗೆ ನಮ್ಮಲ್ಲಿ ಕೊರತೆಯಿಲ್ಲ” ಎಂದು ನನ್ನಷ್ಟಕ್ಕೇ ಗೊಣಗಿಕೊಂಡು ಮನೆ ಸೇರಿದೆ.

೧೪. ಪರಿಸರದ ಪ್ರಶ್ನೆ?

ನಿನ್ನೆ ಸಂಜೆ (೬-೧-೨೦೧೫) ಸೈಕಲ್ ಚಕ್ರ ಅವಿರತ ಸುತ್ತಿಕೊಳ್ಳುತ್ತಿತ್ತು – ಕಂಕನಾಡಿ, ಮಾರ್ಗನ್ಸ್ ಗೇಟ್, ಉಳ್ಳಾಲ ಸಂಕ, ತೊಕ್ಕೊಟ್ಟು, ಕೋಟೆಕಾರು ಬೀರಿ, ಮಡ್ಯಾರು, ದೇರಲಕಟ್ಟೆ, ಕುತ್ತಾರು…… ಇನ್ನೇನು ತೊಕ್ಕೊಟ್ಟು ಎನ್ನುವುದರೊಳಗೆ ಎಡಕ್ಕೊಂದು ದೊಡ್ಡ ಪ್ರಶ್ನ ಚಿಹ್ನೆ (?) ತಡೆಯಿತು. ಉತ್ತರಕ್ಕೆ ನನ್ನ ಮನಸ್ಸು ಸುಮಾರು ಒಂದೂವರೆ ದಶಕದ ಹಿಂದಿನ ರೀಲು ಬಿಚ್ಚಿತು.

ತೊಕ್ಕೊಟ್ಟಿನಿಂದೇರಿ ಮುಡಿಪಿನತ್ತ ಹೋಗುವ ದಾರಿಯದು. ಬಬ್ಬುಕಟ್ಟೆ ಕಳೆದದ್ದೇ ತುಸು ಎದುರಾದ ಗುಡ್ಡೆಯ ಕೆಳ ಅಂಚನ್ನು ಸ್ವಲ್ಪ ಒರೆಸಿ, ಎಡಕ್ಕೆ ಬಳುಕಿ, ಬಲಕ್ಕೆ ಡೊಂಕಿ ಓಡಿತ್ತು. ಅದರ ಮೇಲಿನ ಸಾರ್ವಜನಿಕ ಓಡಾಟವನ್ನು ಬಲ ಗುಡ್ಡೆಯ ಮೇಲಿದ್ದ ಒಂಟಿ ಮನೆ ಕಣ್ಣೋಟದಿಂದ ದಾಖಲಿಸಿರಬಹುದು, ಎಡದ ಮರಗಳ ಮರೆಯ ಇಗರ್ಜಿ ಗಂಟೆ ಹೊಡೆದು ಎಣಿಸಿರಬಹುದು, ಅಷ್ಟೆ. ಆ ಒಂದು ದಿನ, ಮಾಯೆಯಿಂದ ಬಂದಂತೆ ಒಂದು ಮಾರಿಹಲಗೆ (ಬುಲ್ಡೋಜರ್) ದಾರಿ ಒರೆಸಿಬಿಟ್ಟ ಗುಡ್ಡೆಯ ಮಗ್ಗುಲನ್ನೇ ಇನ್ನಷ್ಟು ಆಳಕ್ಕೆ ತಿನ್ನುವುದು ಕಂಡೆ. ಕೆಲವೇ ತಿಂಗಳಲ್ಲಿ ಗುಡ್ಡಕ್ಕೊಂದು ಸಪಾಟು ಮೂಲೆ ಅದರ ಮೇಲೊಂದು ಮನೆ ಮತ್ತದಕ್ಕೆ ಜನ ಎಲ್ಲಾ ಬಂದುವು. ಗುಡ್ಡೆಗೆ ಆಶ್ರಯಕೊಟ್ಟ ಸಂತಸ, ಗುಡ್ಡೇ ಮನೆಗೆ ಒಂಟಿತನ ಕಳೆದ ಆನಂದ. ದಿನಗಳು ಮುಂದುವರಿದಂತೆ ಮಾರಿಹಲಗೆಯ ಭೇಟಿ ಹೆಚ್ಚತೊಡಗಿತು. ಅದು ದಾರಿಯ ಕಾಣ್ಕೆಗೆ ದರೆಯ ಮರೆ ಉಳಿಸಿ ಗುಡ್ಡದ ಹೊಟ್ಟೆಗೇ ನುಗ್ಗಿತು. ಗುಡ್ಡೆಮನೆಯನ್ನು ದರೆಯೆತ್ತರದಲ್ಲಿ ಬಿಟ್ಟು ಕಟ್ಟಡಗಳು ಈಗಲೂ ಮೊಳೆಯುತ್ತಲೇ ಇವೆ. ಮೊದಲು ದಾರಿಗೆ ಪಾದದಂಚು ಕೊಟ್ಟು, ನೆತ್ತಿಯಲ್ಲಿ ಮನೆ ಹೊತ್ತು, ಕೊನೆಗೆ ಮೂಲೆತಟ್ಟು ಸೊಂಟಕ್ಕೇ ಏರಿದಾಗ `ತಾನು ಕೊಟ್ಟದ್ದು’ ಎಂದೇ ಗುಡ್ಡೆ ಭಾವಿಸಿದ್ದಿರಬೇಕು.

ತಡವಾಗಿ ಹಾಗಲ್ಲ ಎಂಬ ಅರಿವು ಮೂಡಿದ್ದಕ್ಕೇ ಇರಬೇಕು, ಅದೊಂದು ಕಂತಿನಲ್ಲಿ ಮಾರಿಹಲಗೆ ಮೇಲೇ ತನ್ನೊಂದಂಶವನ್ನು ಮಗುಚಿತು; ಚಾಲಕ ಸತ್ತ! ದರೆ ಸೇಡಿನ ಸರ್ಪದಂತೇ ಕಾಣಿಸಿತ್ತು. ಆದರೆ ಇಂದು ಸುತ್ತುವರಿದ ಕಟ್ಟಡಗಳ ಸಂತೆಯಲ್ಲಿ, ಸಾರ್ವಜನಿಕ ಓಡಾಟದ ಅಬ್ಬರದಲ್ಲಿ, ದಾರಿಗೆ ಸಂಗಾತಿ (ಚತುಷ್ಪಥ) ಬರುವ ಸುದ್ದಿಯಲ್ಲಿ, ಅಸ್ತಮಿಸುವ ಸೂರ್ಯನೆದುರಿನಲ್ಲಿ ಇಲ್ಲೊಂದು ಗುಡ್ಡೆಯಿತ್ತು ಎನ್ನುವುದನ್ನೂ ಮರೆಯಿಸಲು ಇನ್ನೆಷ್ಟು ದಿನ ಎಂಬ ದೊಡ್ಡ ಪ್ರಶ್ನ ಚಿಹ್ನೆಯಾಗಿ, ವಿಷಣ್ಣ ಬೆರಗು ಹುಟ್ಟಿಸಿತು! ಅದನ್ನಾವರಿಸಿದ ಹುಲ್ಲು ಬೀಸುಗಾಳಿಗೆ ಅನುಮೋದನೆಯ ತಲೆ ಹಾಕುತ್ತಿದ್ದಂತೆ, ನಾನು ದಿನದ ಸರ್ಕೀಟನ್ನು ತೊಕ್ಕೊಟ್ಟು, ಉಳ್ಳಾಲ ಸಂಕಕ್ಕಾಗಿ ಮನೆಯಲ್ಲಿ ಕೊನೆಗಾಣಿಸಿದೆ.

೧೫. ನೀರಿನ ಮೌಲ್ಯವರ್ಧನೆ?

ಸೈಕಲ್ ಸರ್ಕೀಟ್ ಇಂದು (೬-೧-೨೦೧೫) ಶುದ್ಧವ್ಯಾಯಾಮ. ನಂತೂರು, ಪಡೀಲಿಗಾಗಿ ವಳಚ್ಚಿಲ್ ಮುಟ್ಟಿ, ಮರಳುವುದೆಂದೇ ಅಂದುಕೊಂಡೆ. ಹಿಂದೆ ದಿನಗಳಿದ್ದುವು – ಕಣ್ಣೂರಿನಿಂದ ಅಡ್ಯಾರ್‍ವರೆಗೆ, ಅತ್ತ ನೇತ್ರಾವತಿಯ ತಂಪು, ಇತ್ತ ವರ್ಷಪೂರ್ತಿ ಕಣ್ತಣಿಸುತ್ತ ಮೂಗರಳಿಸುವ ಗಂಧಶಾಲೀ ಹರಹು (ಬಹುಶಃ ಮೂರು ಬೆಳೆ ತೆಗೆಯುತ್ತಿದ್ದರು). ವಾಹನವೇನು ಚಾರಣವಾದರೂ “ಆಹ್! ವಿಹಾರ” ಎಂದೇ ಭಾವಿಸಿದ್ದೆ. ಆದರೆ ಈಚಿನ ದಿನಗಳಲ್ಲಿ ಕ್ರಮವಾಗಿ ಆ ನೆಲದ ಅವಹೇಳನವಾಗುತ್ತಿರುವುದನ್ನು ಒಮ್ಮೆಯಾದರೂ ದಾಖಲಿಸದೆ ಹೇಗುಳಿಯಲಿ?

ನದಿಮುಖಜ ಭೂಮಿಯಲ್ಲಿ ಹಿನ್ನೀರಿನಷ್ಟೇ ಸಹಜ ಗೊಸರಿನ ಹರಹುಗಳು. ಇಲ್ಲಿನ ಪ್ರಥಮ ಹಂತ – ಜೀವನದ ಒತ್ತಡದ್ದು. ಸಾಧ್ಯವಾದಷ್ಟು ಗುಡ್ಡೆ ಕಡಿದು, ಗಜನಿ ತುಂಬಿ, ಹೊರ ಅಂಚಿನಲ್ಲಿ ಬಸಿಕಾಲುವೆ ತೋಡಿ, ಗದ್ದೆಗಳು ರೂಢಿಸಿದ್ದಿರಬೇಕು. ಮುಂದಿನ ಹಂತ – ಸುಲಭ ಹಣದ್ದು. ಮಣ್ಣು ತೋಡಿ ಇಟ್ಟಿಗೆ ಸುಟ್ಟರು, ಹಂಚಿನ ಕಾರ್ಖಾನೆಗಳಿಗೆ ಮಾರಿಕೊಂಡರು. “ಮಳಿಗೆಗಳಲ್ಲಿ ಅಕ್ಕಿ ಕೊಂಡೂ ಹೆಚ್ಚಿನ ಖರ್ಚಿಗೆ ಹಣ ಮಿಗುತ್ತದೆ ಸ್ವಾಮೀ” ಎಂದೇ ಅರ್ಥಶಾಸ್ತ್ರಿಗಳು ಸಮಜಾಯಿಷಿ ಕೊಟ್ಟರು. ಸಹಜವಾಗಿ ವಿಸ್ತರಿಸಿದ ಜಲಪಾತ್ರೆಯನ್ನು ಉರಿಗಾಲದಲ್ಲಿ `ಜಲಸಮೃದ್ಧಿ’ ಎಂದು ಹೊಗಳಿದರು, ಮಳೆಗಾಲದ ನೆರೆ ಹಾವಳಿಗೆ `ಉಳಿಗಾಲವಿಲ್ಲ’ ಎಂದು ನಿಟ್ಟುಸಿರಿಟ್ಟರು. ಈಗ ಅಂತಿಮ ಹಂತ – ಅಪ್ಪಟ ವಾಣಿಜ್ಯ ದುಡಿಮೆ. ಹೊಂಡದಾಳಕ್ಕೆ ನಗರದ ಹಾಳಮೂಳು, ಮೇಲೆ ಅದ್ಭುತ ಮಹಲು-ಸಾಲು. ಗಿರಾಕಿ ದಕ್ಕದವರು, ತೊಡಗಿಸಿಕೊಳ್ಳಲು ದೊಡ್ಡ ಗಂಟಿಲ್ಲದವರು ತೋರಿಕೆ ಹುಲ್ಲಿನ ತಿಪ್ಪೆ ಸಾರಿಸಿಯೋ ತತ್ಕಾಲೀನ ಆವರಣ ಮಾಡುಗಳನ್ನೆಬ್ಬಿಸಿಯೋ ನೆಲವನ್ನೇ ಬಾಡಿಗೆಗಿಟ್ಟರು. ನಗರದ ಅಭಿವೃದ್ಧಿಯ ರಕ್ಕಸವೇಗಕ್ಕೆ ಸಂವಾದಿಯಾಗಿ ಇಲ್ಲಿ ಜಲಾಕ್ರಮಣ ನಿತ್ಯ ನಡೆದಿದೆ.

ಕೋಮಳೆ ಗಿಡಿದ ಕೊಳಗಳು ಕೊಳೆಯುತ್ತಿವೆ. ಗೊಸರಿನಲ್ಲಿ ಕಾಲೂರಿದ ವಿಶಿಷ್ಟ ಹಕ್ಕಿಗೆ ಕಣ್ಣು ಕೀಲಿಸಿದರೆ ಕಾಣುವುದು ಥರ್ಮಾಕೋಲು. ಬಹುವರ್ಣದ ಹಕ್ಕಿ ಹೂಗಳಾಡುತ್ತಿದ್ದ ಪೊದರು ಮರಗಿಡಗಳಲ್ಲೆಲ್ಲ ಅಷ್ಟೇ ವರ್ಣಮಯ ಪಾಲಿಥಿನ್ ಪತಾಕೆಗಳು. ಲಭ್ಯ ಜಲಮೂಲವನ್ನು ಕೊಳಚೆಗುಂಡಿ ಮಾಡಿ, ಇನ್ನೆಲ್ಲಿನದೋ ಕೊಳಚೆಯನ್ನೇ ಶುದ್ಧ ನೀರೆಂಬ ಹೆಸರಿನಲ್ಲಿ ಪೈಪು, ಸಂಪು, ಪಂಪು ಹಾಯಿಸಿ, ಉನ್ನತ ಟಾಂಕೂ ಹೊಂದಿಸಿ `ಮೌಲ್ಯವರ್ಧನೆ’ ಮಾಡಿದ್ದಾರೆ. ನನಗರಿವಿಲ್ಲದೆ ಬಂದ ಕಣ್ಣೀರು ಹಾರುವ ದೂಳಿಗೋ ಕಾರುವ ಹೊಗೆಗೋ ನೇಸರನ ಕಾಂತಿಗೋ ಎಂಬ ಗೊಂದಲದಲ್ಲೇ ಮರುದಾರಿ ಕ್ರಮಿಸಿ ಮನೆ ಸೇರಿದೆ.

೧೬. ಗುಡ್ಡೆಗಳು ಬಯಲಾಗಿ, ಗುಡ್ಲುಗಳು ಗಗನಕ್ಕೇರುತ್ತಿವೆ!

ಹಿತ್ತಿಲಿನ ಆರೆಂಟು ಮನೆ, ಮೂರು ಬಾವಿ, ಅಸಂಖ್ಯ ಮರ ಗಿಡ ಬಳ್ಳಿ ಸಮೂಲ ಹೋಗುತ್ತಿರುವ ನಾಚಿಕೆಯಲ್ಲಿ ಭೂಮಿಯೇ ಪಾತಾಳಕ್ಕಿಳಿಯುತ್ತಿದೆ. ನಿನ್ನೆಯವರೆಗೆ (೧೦-೧-೨೦೧೫) ಯಾವುದೋ ಖಾಸಗಿ ಮನೆಗೆ ಗಟ್ಟಿ ಕಲ್ಲಿನ ಪಾಗಾರವಾಗಿದ್ದ ಗೋಡೆ ಗಾಬರಿಯಲ್ಲೆಂಬಂತೆ ಬಾಯಿಬಿಟ್ಟು ಜೆಸಿಬಿ, ಲಾರಿಗಳ ಓಡಾಟಕ್ಕೆ ಸಹಕರಿಸಿದೆ. ಇವೆಲ್ಲ ವರ್ಷಾನುಗಟ್ಟಳೆ ನಡೆಯಬಹುದಾದ ಯಾವುದೋ ಮಹಾಯುದ್ಧದ ಪೂರ್ವರಂಗ ಎಂದು ತಿಳಿದಿದ್ದೂ ಗದ್ದಲ, ದೂಳಿಗೆ ಮಂಡೆಬೆಚ್ಚವಾಗಿ ಸೈಕಲ್ಲೇರಿದೆ.

ಮುಖ್ಯ ಪಿಂಟೋ ದಾರಿಯಲ್ಲಿ ಹೋಗಿ ಕಂಬಳ ದಾರಿಗೆ ತಿರುಗಿದೆ. ಕದ್ರಿ `ದೇವರ ಕಂಬಳ’ ಎಂದೇ ಖ್ಯಾತವಾದ ಗದ್ದೆ ಕಳೆದ ವರ್ಷವೇ ದೇವರಿಗೆ ಸೋಡಾಚೀಟಿ ಕೊಟ್ಟು, ಅರ್ಧ ಮೈಮಾರಿಕೊಂಡಿದೆ – ಭಕ್ತರ ವಸತಿ ಸೌಕರ್ಯಕ್ಕೆ. ಉಳಿದ ಗದ್ದೆಯ ಅಂಶವೂ ನಮ್ಮ ಹಿತ್ತಲಿನಂಥ ಇನ್ನೆಲ್ಲಿನದೋ ಹಳೆಗಾಲದ ಕಟ್ಟಡಗಳ ಹುಡಿಯನ್ನು ಬಿತ್ತಿಸಿಕೊಂಡು, ಸುಂದರ ಕಟ್ಟಡ ಬೆಳೆಸಲು ಪ್ರಶಸ್ತವಾಗಿ ಕಾದಿದೆ.ಮುಂದೆ ಕದ್ರಿಗುಡ್ಡೆ ಏರಿಸಿದ್ದು, ಆಕಾಶವಾಣಿ ಬಳಿ ಹೆದ್ದಾರಿ ಕಳೆದದ್ದು, ಯೆಯ್ಯಾಡಿ ಹಿಂದೆ ಸರಿದದ್ದು ಗೊತ್ತೇ ಆಗಲಿಲ್ಲ. ಹಾಗೇ ಪದವಿನಂಗಡಿ ಮರೆವಿಗೆ, ಬೊಂದೆಲ್ ಭೂತಕಾಲಕ್ಕೆ ಸಂದಾಗುವಾಗ ಸ್ವಲ್ಪ ಕಾವಿಳಿದು, ಕಾವೂರು ವೃತ್ತ ಮುಟ್ಟಿದ್ದೆ. “ಕತ್ತಲಾಗುವ ಮುನ್ನ ಮನೆ” – ಸೈಕಲ್ ಸರ್ಕೀಟಿನ ಮಾಮೂಲೀ ಭರತವಾಕ್ಯ, ಮುಂದಾಗಿ ನೆನಪಿಗೆ ಬಂದಿತ್ತು.

ಕೂಳೂರಿನತ್ತ ಹೊರಳಿದೆ. ಇನ್ನೇನು ಹೆದ್ದಾರಿ ಬಂತು ಎನ್ನುವಾಗ ಬಲಕ್ಕೆ ಗಮನ ಸೆಳೆಯಿತು ಈ ಗುಡ್ಡೆ. ವಿವಿಧ ದರ್ಜೆಯ ಮಣ್ಣಿಗಾಗಿ ಪರಿಸರದ ನೆಲಮಟ್ಟದಿಂದ, ನೆತ್ತಿಯವರೆಗೆ ಭೀಕರ ಹಲ್ಲೆಗೊಳಗಾಗಿ ಅರ್ಧ ಅಸ್ತಿತ್ವವನ್ನೇ ಕಳೆದುಕೊಂಡಿದೆ. ನಡು ಬೈತಲೆಯಲ್ಲಷ್ಟೇ ಉದ್ದನ್ನ ಕುಚ್ಚು-ಕೂದಲನ್ನು ಉಳಿಸಿ, ಸುತ್ತ ನುಣ್ಣಗೆ ಬೋಳಿಸಿಕೊಂಡ ದಿಟ್ಟ ಯೋಧನಂತೆ ಇನ್ನೂ ಎದೆಯುಬ್ಬಿಸಿಯೇ ನಿಂತಿದೆಯೋ ಎಂಬ ಭ್ರಮೆ ಬರುವಂತೆಯೂ ಇದೆ. ದಾರಿಬದಿಯ ಟೈಲರಿಣಿಯಲ್ಲಿ ಸ್ಥಳದ ಹೆಸರು ಕೇಳಿದೆ – “ಗುಡ್ಡೆಯಂಗಡಿ” ಉತ್ತರಿಸಿದಳು.

“ಅಲ್ಲ, ಅದು” ಎಂದೆ. “ಅದಾ? ಮಂಜುಗುಡ್ಡೆ” ಒಂದು ಕತ್ತರಿಸಿ, ಇನ್ನೊಂದು ಹೊಲಿದಂತಿತ್ತು! ಹೌದಲ್ಲಾ ಅಷ್ಟು ದೊಡ್ಡ ಕಲ್ಲು, ಮಣ್ಣು, ಜೀವವೈವಿಧ್ಯದ ಕೂಟ, ಪ್ರಾಕೃತಿಕ ಸತ್ತ್ವಪರೀಕ್ಷೆಯಲ್ಲಿ ಜೈಸಿನಿಂತ ಸತ್ಯ, ಹಳಬರು `ಗುಡ್ಡೆ’ ಎಂದು ನಂಬಿ ಆಶ್ರಯಿಸಿ ಅಂಗಡಿ ಮನೆ ಕಟ್ಟಿದ್ದ ಸತ್ಯ ಇಂದು ಮಂಜಿನಂತೆ ಕರಗಿಯೇ ಹೋಗಲಿದೆ!! ಇನ್ನು ನಗರದ ಹೃದಯದಲ್ಲೇ ಇರುವ ನಮ್ಮನೆಯ ಹಿತ್ತಲೇನು ಮಹಾ ಎಂದು ತಣ್ಣಗೆ ಮನೆ ಸೇರಿದೆ.