(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ –
ದೀಪದಡಿಯ ಕತ್ತಲೆ – ೩)

ಬಾಲ್ಯದ ಈ ಅಭದ್ರತೆಯ ಜೀವನ ನನ್ನಲ್ಲಿ ಎಷ್ಟು ಕೀಳರಿಮೆಯನ್ನು ತುಂಬಿಸಿತೆಂದರೆ ಹೆಚ್ಚು ಕಡಿಮೆ ನಾನು ಮೂಕಳೇ ಆಗಿಬಿಟ್ಟಿದ್ದೆ. ಯಾರು ಪ್ರೀತಿ ತೋರಿಸಿದರೂ ನನ್ನ ಕಣ್ಣು ತೇವಗೊಳ್ಳುತ್ತಿತ್ತು. ಇನ್ನು ನಿಂದಿಸಿದರೆ, ಬೈದರೆ ಪ್ರವಾಹವೇ ಹರಿದು ಬರುತ್ತಿತ್ತು. ಕೀಳರಿಮೆಗೆ ಇನ್ನು ಒಂದು ಕಾರಣವಿತ್ತು. ನನ್ನ ಅಪ್ಪ ಅಮ್ಮ ಇಬ್ಬರೂ ಗೋಧಿ ಮೈ ಬಣ್ಣದವರಾಗಿ ನಾನು ಮಾತ್ರ ತೊಳೆದ ಕೆಂಡದಂತಿದ್ದು ಎಲ್ಲರಿಗೂ ಆಶ್ಚರ್ಯದ ವಿಷಯವೂ ಗೇಲಿಯ ವಿಷಯವೂ ಆಗಿತ್ತು. ಆಸ್ಪತ್ರೆಯಲ್ಲಿ ಮಗು ಬದಲಾಗಿದೆಯೆಂದೂ ನನ್ನ ಅಪ್ಪ ಅಮ್ಮ ಬೇರೆ ಯಾರೋ ಎಲ್ಲೋ ಇದ್ದಾರೆಂದೂ ರೇಗಿಸುವುದನ್ನು ಕೇಳಿ ಬಹುಶಃ ಇದು ಸತ್ಯವಿರಬಹುದೆಂದು ನಾನು ನಂಬಿದ್ದೆ. ನನ್ನನ್ನು ಕರಿಚ್ಚಿಪೆಣ್ ಎಂದು ಕರೆದಾಗ ಸಿಟ್ಟೇನೋ ಉಂಗುಷ್ಠದಿಂದ ಏರುತ್ತಿತ್ತು. ಆದರೆ ಸಿಟ್ಟು ಪ್ರಕಟವಾದರೆ ನನಗೇ ಅಪಾಯವೆಂದು ಗೊತ್ತಿದ್ದುದರಿಂದ ಕೆನ್ನೆ ಮೇಲೆ ಗಂಗಾ ಕಾವೇರಿಯರು ಇಳಿದು ಬರುತ್ತಿದ್ದರು.

ನಾನು ನಾಲ್ಕನೇ ಮಗು. ಮೊದಲ ಮೂರು ಮಕ್ಕಳೂ ಸತ್ತು ಹುಟ್ಟಿದುದರಿಂದ ನನ್ನನ್ನು ಗರ್ಭಿಣಿಯಾಗಿರುವಾಗಲೇ ನನ್ನಪ್ಪನ ಅಕ್ಕ ಉಮ್ಮಲೆ ಅತ್ತೆಯವರು ಅಮ್ಮನನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಿಬಿಟ್ಟರು. ಹೆರಿಗೆಯಾಗುವ ವಾರಗಳ ಮೊದಲೇ ಚಿಕಿತ್ಸೆ ನೀಡಿ ಜೀವಂತ ಮಗುವನ್ನು ಅಮ್ಮ ಹೆರುವಂತಾಯಿತು. ಹೆಗ್ಗಣದಷ್ಟು ದೊಡ್ಡ ಗಾತ್ರದ ಮಗುವನ್ನು ಕಂಡು ಅಮ್ಮನಿಗೂ ಇದು ನನ್ನ ಮಗು ಹೌದೇ ಅಲ್ಲವೇ ಎಂಬ ಸಂದೇಹ ಉಂಟಾಗಿತ್ತಂತೆ. ಸುಖಪ್ರಸವ ಆದುದಕ್ಕೆ ಕೃತಜ್ಞತೆ ಸಲ್ಲಿಸಲು ಅಪ್ಪ ಆ ಲೇಡಿ ಡಾಕ್ಟರರ ಬಳಿ ಹೋದರು. “ದೇವರು ದೊಡ್ಡವನು. ಅವನ ದಯೆಯಿಂದ ಈ ಸಲ ನನ್ನ ಮಗು ಬದುಕಿತು” ಎಂದು ಕಣ್ಣು ತುಂಬಿ ಡಾಕ್ಟರರನ್ನು ವಂದಿಸಿದಾಗ ಆಕೆ “ದೇವರಲ್ಲ, ನಾನು ಬದುಕಿಸಿದ್ದು. ವಾರಗಳ ಮೊದಲೇ ಗರ್ಭಕ್ಕೆ ಟ್ರೀಟ್‌ಮೆಂಟ್ ಕೊಟ್ಟಿದ್ದರಿಂದ ಮಗು ಬದುಕಿತು. ನನ್ನ ಶ್ರಮವನ್ನು ಕಡೆಗಣಿಸಬೇಡಿ” ಎಂದರಂತೆ. ಹೌದು, ೧೯೪೪ನೇ ಇಸವಿಯಲ್ಲಿ ಆಸ್ಪತ್ರೆಗಳೇ ಕಡಿಮೆ ಇದ್ದ ಕಾಲ. ಆಸ್ಪತ್ರೆಗಳಿದ್ದರೂ ಲೇಡಿ ಡಾಕ್ಟರುಗಳ ಸಂಖ್ಯೆಯೇ ಕಡಿಮೆ ಇದ್ದ ಕಾಲದಲ್ಲಿ ಯಾರೋ ಒಬ್ಬ ಲೇಡಿಡಾಕ್ಟರು ತನ್ನದೇ ಬುದ್ಧಿವಂತಿಕೆಯಿಂದ, ಚಾಣಾಕ್ಷತನದಿಂದ ಹೆರಿಗೆ ಮಾಡಿಸಿದ್ದಳು. ಮಾತ್ರವಲ್ಲ ಅದು ತನ್ನ ಸಾಧನೆ ಎಂಬ ಅಭಿಮಾನವೂ ಆಕೆಗಿತ್ತು ಎನ್ನುವುದೇ ನಮಗೆಲ್ಲಾ ಹೆಮ್ಮೆಯ ವಿಷಯ. ಆಕೆ ನಮ್ಮೂರಿನವಳಲ್ಲವೆಂದೂ, ಆಕೆ ಮಲೆಯಾಳವೋ ತಮಿಳೋ ದೇಶದವಳು ಆಗಿರಬೇಕೆಂದೂ ಅದರಲ್ಲೂ ಆಕೆ ಕ್ರೈಸ್ತ ಮತದವಳಿರಬೇಕೆಂದು ಅಪ್ಪ ಆಗಾಗ ಅವಳನ್ನು ನೆನಪು ಮಾಡಿಕೊಳ್ಳುವುದಿತ್ತು. ಕುಂಕುಮ, ಮೂಗುಬೊಟ್ಟು ಇಲ್ಲದಿದ್ದರೆ ಅವರು ಅನ್ಯಧರ್ಮೀಯರೆಂದು ಸುಲಭವಾಗಿ ಗ್ರಹಿಸುವ ಕಾಲವದು. ಒಂದೊಂದು ಹೆರಿಗೆಯಲ್ಲೂ ಅಮ್ಮ ಸತ್ತು ಹುಟ್ಟುತ್ತಿದ್ದಳು. ಹೆರಿಗೆಯ ಸಮಯದಲ್ಲಿ ಮಗುವಿನ ಕಾಲು ಮೊದಲು ಬರುತ್ತಿದ್ದುದರಿಂದ ಮಗು ಬದುಕುತ್ತಿರಲಿಲ್ಲ. ಆಗ `ಪೋರ್‌ಸೆಪ್ಸ್’ ಹಾಕಿ ಮಗುವನ್ನು ಎಳೆಯುತ್ತಿದ್ದರೆಂದೂ ಹಾಗಾಗಿ ಮಗು ಬದುಕುತ್ತಿರಲಿಲ್ಲವೆಂದೂ ಅಮ್ಮ ಹೇಳುತ್ತಿದ್ದಳು. ಮನೆಯಲ್ಲಿ ಹೆರಿಗೆಯಾದರೂ ಮಗು ಬದುಕುವುದಿಲ್ಲ. ಅಸ್ಪತ್ರೆಯಲ್ಲೂ ಮಗು ಬದುಕುವುದಿಲ್ಲ ಎಂಬ ಆಘಾತದಿಂದ ನರಳುತ್ತಿದ್ದ ಅಮ್ಮ ಅಪ್ಪನಿಗೆ, ನಾನು ಬದುಕಿದ್ದು ಪವಾಡವಾಗಿಯೇ ಕಂಡಿತ್ತು. ಆದರೂ ನನ್ನನ್ನು ಕಂಡವರೆಲ್ಲಾ ನಿಂದಿಸುವಾಗ ಅಳದಿರಲು ಸಾಧ್ಯವೇ? ಒಂದು ದಿನ ಅಪ್ಪನ ಮಡಿಲಲ್ಲಿ ಕೂತವಳು ಸಜಲನೇತ್ರಳಾಗಿ “ಹೌದೇ, ನಾನು ನಿಮ್ಮ ಮಗಳಲ್ಲವೇ?” ಎಂದು ಕೇಳಿದ್ದೆ. ಆಗ ಅಪ್ಪ “ಯಾರು ಹಾಗೆ ಹೇಳಿದ್ದು? ನೋಡು, ನಿನ್ನ ಕೈಯ ರೇಖೆಗಳೂ ನನ್ನ ಕೈಯ ರೇಖೆಗಳೂ ಸಮಾನವಾಗಿವೆ. ನೀನು ನನ್ನ ಮಗಳೆಂಬುದಕ್ಕೆ ಇದೇ ಸಾಕ್ಷಿ. ಯಾರು ಏನು ಹೇಳಿದರೂ ನೀನು ನಂಬಬೇಡ ಗೊತ್ತಾಯ್ತಾ?” ಎಂದು ತಲೆಸವರಿ ಹರಸಿದ್ದ ಆ ಪ್ರೀತಿಯ ಸ್ಪರ್ಶವಿದೆಯಲ್ಲಾ ಅದು ನನ್ನಲ್ಲಿ ಚೈತನ್ಯವನ್ನು ತುಂಬಿತ್ತು. ಅಂತಹ ಭಾವನಾತ್ಮಕ ಸಂಬಂಧವುಳ್ಳ ಅವರನ್ನು ಅಗಲಿ ಅಜ್ಜಿ ಮನೆಗೆ ಬಂದ ನನ್ನನ್ನು ಮತ್ತೆ ಹತಾಶಳನ್ನಾಗಿ ಮಾಡಿಸಿತು.

ಬೆಳಗ್ಗೆ ಉರುವಲು ಸಂಗ್ರಹಿಸಲು ಗಾಳಿ ಮರದ ಕಾಡಿಗೆ ಹೋಗುವ ದಾರಿಯಲ್ಲಿ ನಮ್ಮ ಸಂಬಂಧಿಗಳ ಮನೆಯಿತ್ತು. ಅಲ್ಲಿ ಒಬ್ಬರು ಅಜ್ಜಿ ಇದ್ದರು. ಅವರು ನನ್ನನ್ನು ಕಂಡು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಮಾತ್ರವಲ್ಲ ಏನಾದರೂ ತಿಂಡಿ ಕೈಯಲ್ಲಿಡುತ್ತಿದ್ದರು. ಒಮ್ಮೊಮ್ಮೆ ಒಳಗೆ ಕರೆದು ಅಕ್ಕಿ ಉಂಡೆಯೋ ಬೆಲ್ಲ ತುಂಡೋ ನೀಡಿ ನನ್ನನ್ನು ಮುದ್ದು ಮಾಡುತ್ತಿದ್ದರು. ಹಾಗೆ ಮುದ್ದು ಮಾಡಿ “ದೇವರು ನಿನ್ನ ತಲೆಯನ್ನು ಬಿಸಾಡಿಹೋಗಲಿ” ಎಂದು ಹಾರೈಸುತ್ತಿದ್ದರು. ಇದು ನನ್ನಲ್ಲಿ ಭಯ ಹುಟ್ಟಿಸುತ್ತಿತ್ತು. ದೇವರು ತಲೆಯನ್ನು ಬಿಸಾಡುವುದೆಂದರೆ ಸಾಯುವುದೆಂದೇ ನಂಬಿದ್ದ ನನಗೆ ಅವರು ಕೊಟ್ಟ ತಿಂಡಿಯನ್ನು ತಿನ್ನಲೂ ಆಗದೆ ಎಸೆಯಲೂ ಆಗದೆ ಗೊಂದಲಕ್ಕೊಳಗಾಗಿ ಅಮ್ಮನಲ್ಲಿ ಹೇಳಿಕೊಂಡು ಅತ್ತಿದ್ದೆ. ಮೊದಲ ಮಕ್ಕಳನ್ನೆಲ್ಲಾ ದೇವರು ಬೇಗನೇ ಕರೆಸಿಕೊಂಡಿದ್ದ. ನನ್ನ ತಲೆಯನ್ನು ದೇವರು ಮರೆತು ಬಿಸಾಡಿದರೆ ಬದುಕಿಕೊಳ್ಳುತ್ತೇನೆಂಬ ಆಶಯವದು ಎಂದು ತಿಳಿದು ನಂಬಲೋ ನಂಬದಿರಲೋ ಎಂಬ ಅನುಮಾನ ಮೂಡಿದ್ದು ನಿಜ.

ಬದುಕಿಗೊಂದು ಗುರಿ, ಮಣ್ಣು ಮಸಣ ಏನೂ ಇಲ್ಲದ ಬಾಲ್ಯ ನನ್ನದು. ನನ್ನ ಹೆಣವನ್ನು ನಾನೇ ಹೊತ್ತು ಸಾಗಿದಂತಹ ಅನುಭವ. ಆ ಸಮಯದಲ್ಲಿ ಮಂಜೇಶ್ವರಕ್ಕೆ ನನ್ನ ಸೋದರಮಾವನ ಮಕ್ಕಳು ಬಂದರೆ ನಾನು ಮುದುಡಿ ಮೂಲೆ ಸೇರುತ್ತಿದ್ದೆ. ಅವರು ರೂಪ, ಉಡುಪು, ಬಣ್ಣ ಇತ್ಯಾದಿಗಳಿಂದ ಬೆಳಕಿನಂತೆ ಕಂಗೊಳಿಸುತ್ತಿದ್ದರೆ ನಾನು ಕತ್ತಲೆಯ ಸಂದುಗಳಲ್ಲಿ ಮರೆಯಾಗುತ್ತಿದ್ದೆ. ಒಬ್ಬ ಅನಾಥ ಭಿಕ್ಷುಕಿಯನ್ನು ಕಂಡಂತೆ ಅವರು ನನ್ನನ್ನು ನಿರ್ಲಕ್ಷಿಸುತ್ತಿದ್ದ ದೃಶ್ಯಗಳು ಮನಸ್ಸಿನ ಆಳದಲ್ಲಿ ಮಾಯದ ಗಾಯವಾಗಿ ಉಳಿದುಬಿಡುತ್ತಿತ್ತು.

ಹುಟ್ಟು ಆಕಸ್ಮಿಕ. ಹುಟ್ಟಿದ ಮೇಲೆ ಸಾಯಲಿಲ್ಲ ಎಂಬ ಕಾರಣಕ್ಕಾಗಿಯೇ ನಾನು ಬದುಕುತ್ತಿದ್ದೇನೆ ಎಂಬಂತಹ ಹಲವು ಅವಮಾನಗಳ ಸುಳಿಯಲ್ಲಿ ಮುಳುಗಿ ಏಳುತ್ತಾ ಹೇಗೋ ಒಂದು ವರ್ಷವನ್ನು ದೂಡಿದೆ. ಅಲ್ಲಿಂದ ಮತ್ತೆ ನಮ್ಮ ಬದುಕಿನ ಬಂಡಿ ಬಿಕರ್ನಕಟ್ಟೆಯ ಚಂದು ಭಾವನ ಮನೆಗೆ ಬಂದು ಮುಟ್ಟಿತು. ಅಷ್ಟು ಹೊತ್ತಿಗೆ ಅಪ್ಪ ಒಂದು ಗೂಡಂಗಡಿಯನ್ನು ತೆರೆದು ವ್ಯಾಪಾರ ಪ್ರಾರಂಭಿಸಿದ್ದರು. ಹೋಟೆಲಿನ ಕನಸುಗಳನ್ನು ಸುಟ್ಟು ಇಷ್ಟರಲ್ಲೇ ತೃಪ್ತಿ ಪಟ್ಟುಕೊಂಡಿದ್ದರು. ಇದನ್ನು ಕಂಡು ಗೋಪಾಲಣ್ಣ ಸಿ.ಪಿ.ಸಿ. ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ ತನ್ನ ಭವಿಷ್ಯವನ್ನು ಕಂಡುಕೊಂಡಿದ್ದರು. ಏನಿದ್ದರೂ ಇಲ್ಲಿಯೂ ನಮ್ಮದು ಹಂಗಿನ ಮನೆಯೇ ಆಗಿತ್ತು.

ನಮ್ಮ ಚಂದು ಭಾವನ ಬಗ್ಗೆ ಹೇಳಬೇಕು. ಅವರು ಒಬ್ಬ `ದಿಲ್‌ದಾರ್’ ಮನುಷ್ಯ. ಅವರಿಗೆ ಜಾನಮ್ಮ ಎಂಬ ಹುಡುಗಿಯೊಂದಿಗೆ ಪ್ರಣಯವಿತ್ತು. ಹಿರಿಯರು ನಾನಾ ರೀತಿಯಲ್ಲಿ ಬುದ್ಧಿ ಹೇಳಿ ಬೆದರಿಸಿ ನೋಡಿದರೂ ಅವಳ ಸಂಗ ಬಿಡದ ಚಂದು ಭಾವ ತನ್ನನ್ನು ನಂಬಿದ ಹೆಣ್ಣಿನ ಜೊತೆ ಪ್ರೀತಿಯ ಪತಿಯಾಗಿ ಆಧಾರ ನೀಡಿದ್ದರು. ಮನೆ ಮಾಡಿ ಕೊಟ್ಟಿದ್ದರು. ಚಂದು ಭಾವನ ವ್ಯವಹಾರದ ಏಳಿಗೆಯ ಕಾಲವಾಗಿತ್ತದು. ಅವನ ಧನ ದೌಲತ್ತು ಆ ಹೆಣ್ಣಿನ ಪಾಲಾಗುತ್ತದೆ ಎಂಬ ಮತ್ಸರದಿಂದ ಹಿರಿಯರೆಲ್ಲಾ ಸೇರಿ ಚಂದು ಭಾವನಿಗೆ ನನ್ನ ಜಾಯಿರ ದೊಡ್ಡಪ್ಪನ ಮಗಳು ಸುಶೀಲಕ್ಕನನ್ನು ಒತ್ತಾಯದಿಂದ ಮದುವೆ ಮಾಡಿಸಿದರು. ಪ್ರಣಯಿಗಳನ್ನು ಕಂಡು ಸಹಿಸದ ಹಿರಿಯರು ಆಗಲೂ ಇದ್ದರು. ಜಾನಮ್ಮನ ಹಿಡಿತದಿಂದ ಪಾರು ಮಾಡಬೇಕೆಂಬ ಉದ್ದೇಶದಿಂದ ಮಾಡಿದ ಈ ಮದುವೆ ವಿಷಮ ದಾಂಪತ್ಯದ ಕೆಡುಕುಗಳೇನೆಂಬುದಕ್ಕೆ ಸಾಕ್ಷಿಯಾಯಿತು. ಹೊತ್ತಲ್ಲದ ಹೊತ್ತಿನಲ್ಲಿ ಮನೆಗೇನೋ ಬರುತ್ತಿದ್ದರು. ಬರುತ್ತಿದ್ದರು ಅನ್ನುವುದಕ್ಕಿಂತ ಕೆಲಸದವರು ಯಾರಾದರೂ ಕೈಹಿಡಿದು ಕರೆತರುತ್ತಿದ್ದರು. ಕೆಲವೊಮ್ಮೆ ಹೊತ್ತುಕೊಂಡೇ. ಆಗೊಮ್ಮೆ ಈಗೊಮ್ಮೆ ಕುಡಿತದ ಅಭ್ಯಾಸವಿದ್ದವರು ಈಗ `ದೇವದಾಸ’ನೇ ಆಗಿಬಿಟ್ಟರು. ಹಾಗೆ ಬಂದ ಗಂಡನನ್ನು ಹೇಗೆ ಎದುರಿಸುವುದೆಂದು ತಿಳಿಯದೆ ಅಕ್ಕ ಸಹನೆ ಕಳಕೊಂಡಳು. ಇದು ಜಾನಮ್ಮನದೇ ಕಿತಾಪತಿಯೆಂದು ತಿಳಿದ ಅವಳು ಸವತಿ ಮತ್ಸರವನ್ನು ತಡೆಯಲಾಗದೆ ನಖ ಶಿಖಾಂತ ಉರಿದು ತನಗೆ ತಿಳಿದ ಎಲ್ಲಾ ಕೆಟ್ಟ ಬೈಗುಳಗಳಿಂದ ಗಂಡನನ್ನೂ ಅವಳನ್ನೂ ಸಹಸ್ರ ನಾಮಾರ್ಚನೆ ಮಾಡತೊಡಗಿದಳು. ಆಗ ಕಂಡಿತು ನೋಡಿ, ಭಾವನ ಹೊಸ ಅವತಾರ. ಕೈಗೆ ಸಿಕ್ಕಿದ್ದರಲ್ಲಿ ಹೊಡೆಯುವುದು, ನಡಿ ಹೊರಗೆ ಎಂದು ದಬ್ಬುವುದು ಮಾಮೂಲು ಘಟನೆಗಳಾದವು. ಸಮಾಧಾನ ಮಾಡಿ ಅವರಿಬ್ಬರನ್ನು ಬೇರೆ ಬೇರೆ ಕೋಣೆಗೆ ತಳ್ಳುವುದು ಅಪ್ಪನ ಕರ್ತವ್ಯಗಳಲ್ಲೊಂದಾಯಿತು. ನಾನು ಕೋಣೆಯ ಮೂಲೆಯಲ್ಲಿ ಮುದುಡಿ ಕೂರುತ್ತಿದ್ದೆ. ಆಮೇಲೆ ಭಾವನ ಸಿಟ್ಟು ತಣಿದ ಮೇಲೆ ರಾತ್ರಿ ಇಡೀ ಯಾವುದೋ ಕಾವ್ಯದ ಸಾಲುಗಳೋ, ಭಜನೆ ಹಾಡುಗಳೋ, ನಾಟಕದ ಡೈಲಾಗುಗಳೋ ಅವರ ಬಾಯಿಯಿಂದ ಪುಂಖಾನುಪುಂಖವಾಗಿ ಬರುತ್ತಿತ್ತು. ಹಗಲು ಹೊತ್ತಿನಲ್ಲಿ ಯಾವತ್ತೂ ಅವರ ಬಾಯಿಯಿಂದ ಇಂತಹ ಮಾತುಗಳು ಬರುತ್ತಿರಲಿಲ್ಲ. ಹದ ತಪ್ಪಿ ಕುಡಿದ ದಿನ ಮಾತ್ರ ಎಂತೆಂತಹ ಹಾಡುಗಳು, ಡೈಲಾಗ್‌ಗಳು ಹೇಗೆ ಸ್ಪುರಿಸುತ್ತಿದ್ದವು ಎಂಬುದೇ ಆಶ್ಚರ್ಯ ನನಗೆ.

ಚಂದು ಭಾವನದು `ಧರ್ಮರಾಯ’ನಂತಹ ಮನಸ್ಸು ಎನ್ನುತ್ತಿದ್ದರು ಅಪ್ಪ. ಆದರೆ ನಾನು ಕಂಡಂತೆ ದಾನಶೂರ ಕರ್ಣನೂ ಆಗಿದ್ದರು. ನವರಾತ್ರಿಯ ಹುಲಿವೇಷಗಳು ಬಂದಾಗ ಆ ಹುಲಿವೇಷಗಳಿಗೆ ನೋಟಿನ ಮಳೆ ಸುರಿಸುವುದೇನು, ಯಕ್ಷಗಾನದ ಸ್ತ್ರಿ ವೇಷಗಳು ಬಂದರೆ ಅವರನ್ನು ದಪ್ಪ ಕವರು ನೀಡಿ ಸತ್ಕರಿಸುವುದೇನು, ಬಿಕರ್ನಕಟ್ಟೆ, ಕೈಕಂಬದಲ್ಲಿ ಬಯಲಾಟಗಳಾಗುವುದಿದ್ದರೆ ಅದರ ಮುಕ್ಕಾಲಂಶ ಖರ್ಚು ಚಂದು ಭಾವನೇ ವಹಿಸುವುದೇನು. ಹೀಗೆ ಸಾಂಸ್ಕೃತಿಕ ಕಾರ್ಯಗಳೇನಿದ್ದರೂ ಭಾವನ ಕೈ ಸಡಿಲವಾಗಿಯೇ ಇರುತ್ತಿದ್ದವು. ಅಷ್ಟು ಮಾತ್ರವಲ್ಲ ಯಾರಾದರೂ ಆರ್ಥಿಕ ಸಹಾಯ ಕೇಳಿ ಬಂದರೆ ಅವರನ್ನು ತೃಪ್ತಿ ಪಡಿಸದೆ ಕಳುಹಿಸುವವರಲ್ಲ. ಅಂತಹ ಗುಣವುಳ್ಳ ಭಾವನ ಮನೆಯಲ್ಲಿ ಸಹಜವಾಗಿ ನಮಗೆ ಆಶ್ರಯ ಸಿಕ್ಕಿತ್ತು. ಆದರೆ ಸುಶೀಲಕ್ಕನ ಮನಸ್ಸು ಹಾಗಿರಲಿಲ್ಲ. ದಾರಿ ತಪ್ಪಿದ ಮಗನಿಗೆ ಸೊಸೆಯಾಗಿ ಬಂದದ್ದರ ಬಗ್ಗೆ ಅವಳಿಗೆ ರೋಷವಿತ್ತು. ಗಂಡನನ್ನು ಸರಿದಾರಿಗೆ ತರಬೇಕು ಎಂಬ ಇಚ್ಛೆ ಆಕೆಗಿತ್ತು. ಭಾವ ಮತ್ತು ಜಾನಮ್ಮನ ಸಂಬಂಧ ಕಡಿಯಲಾಗದಷ್ಟು ಘನಿಷ್ಠವಾಗಿತ್ತೆಂದು ತಿಳಿದ ಮೇಲೆ ಅವಳು ಕಂಡವರ ಮೇಲೆಲ್ಲಾ ಹರಿಹಾಯತೊಡಗಿದಳು. ನಾವು ಮೂವರಲ್ಲದೆ ಭಾವನ ತಂದೆಯ ಸಂಬಂಧಿಯಾದ ಕುಂಞಮ್ಮ ಎಂಬ ವಿಧವೆ ಮತ್ತು ಆಕೆಯ ಮಗನೂ ಆ ಮನೆಯಲ್ಲಿದ್ದರು. ಇವರೆಲ್ಲಾ ತನ್ನ ಗಂಡನ ದುಡಿಮೆಯಿಂದ ಬಿಟ್ಟಿ ಕೂಳು ತಿನ್ನುವವರು ಎಂಬ ಭಾವ ಅವಳಲ್ಲಿ ಮೂಡುತ್ತಿತ್ತು. ಸವತಿಯ ಸಂಸಾರ, ಈ ಅನಾಥರ ಸಂಸಾರಗಳನ್ನು ಸಾಕಿಯೇ ಒಂದು ದಿನ ಗಂಡ ನನ್ನ ಕೈಗೆ ಗೆರಟೆಯನ್ನು ಕೊಡುತ್ತಾನೆ ಎಂದು ಭಾವಿಸಿದ್ದಳು ಆಕೆ. ಪ್ರತ್ಯಕ್ಷವಾಗಿ ನೇರ ನೇರ ಈ ಮಾತನ್ನು ಆಡದಿದ್ದರೂ ಅವಳ ಹಾವಭಾವಗಳಿಂದ ಈ ಮಾತು ವ್ಯಕ್ತವಾಗುತ್ತಿತ್ತು. ಅಜ್ಜಿ ಮನೆಯಲ್ಲಿ ನನಗೆ ಅನ್ನಕ್ಕೆ ಕೊರತೆಯಿರಲಿಲ್ಲ. ಇಲ್ಲಿ ಅಕ್ಕ ಎಲ್ಲರಿಗೂ ಅವಳ ಕೈಯಳತೆಯಲ್ಲಿ ಹಾಕಿಕೊಟ್ಟರೆ ಮತ್ತೆ ಕೇಳುವಂತಿಲ್ಲ. ಭಿಕ್ಷುಕರು ಬೀದಿಯಲ್ಲಿ ತಟ್ಟೆ ಹಿಡಿಯುತ್ತಿದ್ದರು. ನಾವು ಮನೆಯಲ್ಲೇ ತಟ್ಟೆ ಹಿಡಿಯುತ್ತಿದ್ದೆವು. ಅಷ್ಟೇ ವ್ಯತ್ಯಾಸ. ಮಂಜೇಶ್ವರದಿಂದ ಮರಳಿದ ಕೆಲವೇ ದಿನಗಳಲ್ಲಿ ಅಮ್ಮನಿಗೆ ಈ ಬದುಕು ಅಸಹನೀಯವೆನಿಸಿತು. ಗೋಪಾಲಣ್ಣ ಸಿ.ಪಿ.ಸಿ.ಗೆ ಸೇರಿ ಮಾದರಿಯಾಗಿದ್ದರು. ಅಮ್ಮನೂ ದುಡಿಮೆಯ ದಾರಿ ಹುಡುಕಿದಳು.

ಪಿಯರ್‌ಲೆಸ್ಲಿಯ ಗೇರುಬೀಜ ಕಾರ್ಖಾನೆ ಮನೆಯ ಸಮೀಪವೇ ಇತ್ತು. ಕುಂಞಮ್ಮನವರೂ ಅಮ್ಮನೂ ಕಾರ್ಖಾನೆಯ ಕೆಲಸಕ್ಕೆ ಸೇರಿದರು. ಇಲ್ಲಿಂದ ಅಮ್ಮನ ಬದುಕಿನ ಹೊಸ ಅಧ್ಯಾಯ ಪ್ರಾರಂಭವಾಯಿತು. ಇಷ್ಟರವರೆಗೆ ಸಹೋದರರೋ ಬಂಧುಗಳೋ ದಾನರೂಪದಲ್ಲಿ ಮಾತ್ರ ನೀಡಿದ ಹಣವನ್ನು ಸ್ವೀಕರಿಸಿ ಗೊತ್ತಿದ್ದ ಅಮ್ಮ ತನ್ನದೇ ದುಡಿಮೆಯ ಹಣವನ್ನು ಪಡೆದ ಆ ದಿನವನ್ನು ತನ್ನ ಸೌಭಾಗ್ಯದ ಬಾಗಿಲು ತೆರೆದ ದಿನವೆಂದು ಭಾವಿಸಿದ್ದಳು. ಮನೆಯ ಖರ್ಚು ವೆಚ್ಚಗಳಿಗೆ ಸ್ವಲ್ಪ ಮಟ್ಟಿನ ದೇಣಿಗೆಯನ್ನು ಅಕ್ಕನ ಕೈಗೆ ನೀಡುವುದನ್ನೂ ರೂಢಿ ಮಾಡಿಕೊಂಡಳು. ಕುಂಞಮ್ಮನವರ ಮಗ ದಾಮೋದರನೂ ಶಾಲೆಗೆ ಹೋಗುತ್ತಿದ್ದ. ಅವನು ಹೈಸ್ಕೂಲು ಕಲಿಯುತ್ತಿದ್ದಾಗ ಆರ್ಥಿಕವಾಗಿ ನೆರವಾದವರು ಚಂದು ಭಾವನೇ. ಬೆಲ್ಲಕ್ಕೆ ಇರುವೆ ಮುತ್ತುವಂತೆ ಚಂದು ಭಾವನ ಆಪ್ತೇಷ್ಟರ ಬಳಗ ಬೆಳೆಯುತ್ತಾ ಹೋಯಿತು. ಊರಿನಲ್ಲಿ ಗಣ್ಯನೆಂಬ ಮರ್ಯಾದೆ ಸಿಗತೊಡಗಿತು. ಭವಿಷ್ಯದ ಬಗ್ಗೆ ಯೋಚಿಸುವುದನ್ನೇ ಬಿಟ್ಟ ಭಾವ ತನಗೊಂದು ಸಂಸಾರವಿದೆಯೆಂಬುದನ್ನೇ ಬಿಟ್ಟು ಊರ ಉಪಕಾರಕ್ಕಾಗಿ ಧಾರಾಳಿಯಾದರು. ಅಪಾತ್ರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡರು.

ಊರಿನ ಸಕಲ ರಟಾವಳಿಗಳಲ್ಲಿ ಸೇರಿಕೊಂಡು ಕೆಲವು ಕಡೆ ಗೌರವ ಕಳಕೊಂಡದ್ದೂ ಇತ್ತು. ಆ ಸಮಯದಲ್ಲಿ ಅವರಿಗೆ ಬುದ್ಧಿಮಾತು ಹೇಳುವ, ನೈತಿಕ ಬೆಂಬಲ ನೀಡುವ ಧೈರ್ಯ ಸೋದರಮಾವನಾದ ನನ್ನಪ್ಪನಿಗಿರಲಿಲ್ಲ. ಯಾಕೆಂದರೆ ಅವರೂ ಮಾಡಿದ್ದು ಇದನ್ನೇ ತಾನೇ? `ಅಡಿ ಜಾರಿ ಬೀಳುವುದು, ತಡವಿಕೊಂಡೇಳುವುದು’ ಇವರಿಗೆ ಅಭ್ಯಾಸವಾಗಿತ್ತು. ಡಿವಿಜಿಯವರು ಹೇಳಿದಂತೆ `ಕಡುಬು ನುಂಗುವುದು, ಕಹಿ ಮದ್ದು ಕುಡಿಯುವುದು, ದುಡುಕಿ ಮತಿ ತಪ್ಪುವುದು, ತಪ್ಪನೊಪ್ಪೆನ್ನುವುದು’ ಇವರ ಬದುಕಿನ ಶೈಲಿಯೇ ಆಗಿಬಿಟ್ಟಿತ್ತು. ಧೂಳು ಮೆತ್ತಿದ ಇವರ ಬದುಕಿನ ಕನ್ನಡಿಯನ್ನು ಶುಚಿಗೊಳಿಸಿ ಕನಿಷ್ಠ ಇವರ ಮುಖವನ್ನಾದರೂ ನೋಡಿಕೊಳ್ಳುವಂತೆ ಮಾಡಿದವರು ಅವರನ್ನು ಕೈಹಿಡಿದ ಪತ್ನಿಯರು. ನನ್ನಮ್ಮ ಮೌನವಾಗಿ ಮಾಡಿದ ಕೆಲಸವನ್ನು ಸುಶೀಲಕ್ಕ ಊರಿಗೆಲ್ಲಾ ಕೇಳುವಂತೆ ಟಾಂ ಟಾಂ ಮಾಡಿದಳು. ಆ ಕಾಲದ ನನ್ನ ಸಮುದಾಯದಲ್ಲಿ ಪತಿ ಕೈಹಿಡಿದು ನಡೆಸಿದ್ದಕ್ಕಿಂತ, ಪತ್ನಿಯೇ ಕೈಹಿಡಿದು ಬಾಳಪಥದಲ್ಲಿ ಮುನ್ನಡೆಸಿದ ಉದಾಹರಣೆಗಳೇ ಹೆಚ್ಚಿದ್ದವು. ಆದರೆ ತಮ್ಮ ತಮ್ಮ ಪತ್ನಿಯರನ್ನು ಅಂಕೆಯಲ್ಲಿಟ್ಟುಕೊಳ್ಳಲಾರದವ ನಾಲಾಯಕ್ಕು. ಹೆಂಗಸರು ಗಂಡಸರು ಹೇಳಿದಂತೆ ಕೇಳಿ ಮನೆಯೊಳಗೆ ಬಿದ್ದಿರಬೇಕು. ಬಹುತೇಕ ಮಂದಿಯಲ್ಲಿ ಇಂತಹ ಭಾವನೆ ರೂಢಿಯಲ್ಲಿತ್ತು. ನಮ್ಮದು ಮಾತೃಪ್ರಧಾನ ವ್ಯವಸ್ಥೆಯುಳ್ಳ ಸಮಾಜ. ಕಳೆದ ಶತಮಾನದಲ್ಲಿ ಕೂಡು ಕುಟುಂಬದ ಆಸ್ತಿಯೆಲ್ಲಾ ಹೆಂಗಸರ ಹೆಸರಲ್ಲಿತ್ತು ಎಂಬುದನ್ನು ಬಿಟ್ಟರೆ ಅದರ ಎಲ್ಲಾ ವ್ಯವಹಾರಗಳು, ನಿರ್ದೇಶನಗಳು ಸೋದರ ಮಾವಂದಿರಿಂದಲೇ ನಡೆಯುತ್ತಿತ್ತು. ಇಲ್ಲಿ ಚಂದು ಭಾವನ ಮನೆಯಲ್ಲಿ ಈ ಸೋದರಮಾವ ಕಿರೀಟ ಕಳಚಿದ ಕುಬೇರನಾಗಿ, ನೆಲೆ ಇಲ್ಲದ ಕುಚೇಲನಂತಾಗಿದ್ದ. ಆದುದರಿಂದ ಭಾವನ ಯಾವ ಭಾನಗಡಿಯಲ್ಲೂ ಹಿತವಚನ ನೀಡಲಾರದಂತೆ ಅಪ್ಪನ ನಾಲಗೆ ಸತ್ತಂತಿತ್ತು.

ಸುಶೀಲಕ್ಕನಂತೆ ಪ್ರತಿಭಟಿಸುವ ಶಕ್ತಿಯನ್ನು ಅಮ್ಮ ತುಂಬೆಯ ಕಾಣೆಮಾರಿನಲ್ಲಿರುವಾಗಲೇ ಕಳಕೊಂಡಿದ್ದಳು. ಅಮ್ಮನಿಗೆ ಮದುವೆಯಾದ ಹೊಸತರಲ್ಲಿ ನಡೆದ ಘಟನೆ ಆಕೆಯ ಸಹನೆಗೆ ಸಾಕ್ಷಿಯಾಗಿದೆ. ಜ್ವರ ಬಂದು ಮಲಗಿದ ಅಪ್ಪ ಕೆಲವು ದಿನಗಳಿಂದ ಎಲ್ಲೂ ಹೊರಗೆ ಹೋಗಿರಲಿಲ್ಲ. ಅಂಗಳದಲ್ಲಿ ಹೆಂಗಸೊಬ್ಬಳು ಬಂದು “ಅವರು ಹೇಗಿದ್ದಾರೆ? ಜ್ವರ ಬಿಟ್ಟಿದೆಯೇ?” ಎಂದು ಗೋಪಾಲಣ್ಣನಲ್ಲಿ ವಿಚಾರಿಸುತ್ತಿರುವ ಸ್ವರ ಕೇಳಿ ಅಮ್ಮ ಹೊರಗೆ ಬಂದಳಂತೆ. ಅವಳನ್ನು ಕಂಡೊಡನೇ ಸಿಟ್ಟು ನೆತ್ತಿಗೇರಿ “ಅಲ್ಲೇ ನಿಲ್ಲು, ಒಳಗೆ ಬರಬೇಡ” ಎಂದು ಗದರಿಸಿದಾಗ ಆಕೆಯೂ ಅಷ್ಟೇ ಸಿಟ್ಟಿನಿಂದ ಕಣ್ಣು ಕೆಂಪಗೆ ಮಾಡಿಕೊಂಡು “ಸಾಕು ಸುಮ್ಮನಿರೇ, ನೀನು ನಿನ್ನ ಗಂಡನನ್ನು ಮೊನ್ನೆ ಮೊನ್ನೆ ಕಂಡವಳು. ನಾನು ನಿನಗಿಂತ ಮೊದಲೇ ಅವರ ಮಿಂಡಿ (ಇಟ್ಟುಕೊಂಡವಳು)” ಎಂದಾಗ ತಾನು ಕೆಸರಿಗೆ ಕಲ್ಲು ಬೀಸಿದೆನೇ ಎಂದು ಅಮ್ಮನಿಗೆ ಅನಿಸಿತು. ಅಷ್ಟರಲ್ಲಿ ಒಳಗಿನಿಂದ ಅಪ್ಪನ “ದೇವಕೀ, ನೀನು ಅಧಿಕಪ್ರಸಂಗ ಮಾತಾಡಬೇಡ. ನಿನ್ನ ಕೆಲಸ ಎಷ್ಟು ಉಂಟು ಅಷ್ಟು ಮಾಡಿದರೆ ಸಾಕು” ಎಂಬ ಆದೇಶ ಕೇಳಿ ಕಣ್ಣಲ್ಲಿ ನೀರು ತುಂಬಿತು. ಅಮ್ಮ ಸದ್ದಿಲ್ಲದೆ ಒಳನಡೆದಳು. ಅಪ್ಪನ ಈ ಸಂಬಂಧದ ಕತೆಯನ್ನು ಅಮ್ಮನಿಂದ ಮಾತ್ರವಲ್ಲ ನಮ್ಮ ಬಂಧುಗಳಿಂದಲೂ ಕೇಳಿ ನಾನು ಬೆರಗಾಗಿದ್ದೆ. ಆ ಹೆಣ್ಣಿಗೆ ಅಪ್ಪನೇ ಮದುವೆ ಮಾಡಿಸಿದ್ದರಂತೆ. ಮದುವೆ ಮಾಡಿಸಿದ ಮೇಲೂ ರಾತ್ರಿ ಅವಳ ಮನೆಯಲ್ಲೇ ಕಳೆಯುತ್ತಿದ್ದರಂತೆ. ಅವಳಿಗೆ ಅಪ್ಪನಿಂದ ಹುಟ್ಟಿದ ಮಕ್ಕಳೂ ಇದ್ದುವಂತೆ. ಅದು ಎಂತಹ ಮೋಹದ ಬಂಧನವಾಗಿರಬಹುದು? ಇಂತಹ `ಸಕಲ ಕಲಾ ವಲ್ಲಭ’ನಾದ ಅಪ್ಪನನ್ನು ಬಿಟ್ಟು ಬಿಡು ಎರಡನೇ ಮದುವೆ ಮಾಡಿಸುತ್ತೇನೆಂದು ಅಜ್ಜ ಹೇಳಿದಾಗ ಅವರನ್ನು ಧಿಕ್ಕರಿಸಿ ಅಪ್ಪನ ಬೆನ್ನ ಹಿಂದೆ ಓಡಿ ಬಂದಿರಲ್ಲಾ ಯಾಕೆ? ಎಂದು ನಾನು ಅಮ್ಮನಲ್ಲಿ ಕೇಳಿದ್ದೆ. “ಆ ಕಾಲದ ಗಂಡಸರು ಹೆಚ್ಚಿನವರು ಇದೇ ರೀತಿಯ ಶೀಲವುಳ್ಳವರು. ಆದರೆ ನಿನ್ನಪ್ಪ ಎಂದೂ ಹೆಂಡತಿಯನ್ನು ಹೊಡೆದವರಲ್ಲ. ಮಾತಿನ ಪೆಟ್ಟು ತೀವ್ರವಾಗಿತ್ತು. ಅದು ಬೇರೆ ಪ್ರಶ್ನೆ. ಅವರ ವಿದ್ವತ್ತಿನ ಬಗ್ಗೆ ಊರವರಿಗೆ, ಬಂಧುಗಳಿಗೆ ಗೌರವವಿತ್ತು. ಆದುದರಿಂದ ಅವರ ದೌರ್ಬಲ್ಯಗಳು, ದೋಷಗಳ ಜೊತೆಗೇ ಬಾಳುವುದನ್ನು ರೂಢಿ ಮಾಡಿಕೊಂಡೆ. ನನ್ನ ಪಾಲಿಗೆ ಬಂದದ್ದು ಇಷ್ಟೇ ಎಂದು ಮನಸ್ಸು ಗಟ್ಟಿ ಮಾಡಿಕೊಂಡು ಬಾಳ ಬಂಡಿಯನ್ನು ಏರಿದೆ. ಅದಿಲ್ಲ ಇದಿಲ್ಲ ಎಂದು ಕೊರಗುವುದಕ್ಕಿಂತ ಕೈಯ ಮುಷ್ಟಿಯೊಳಗಿರುವುದನ್ನು ಜಾರಿ ಹೋಗದಂತೆ ಎಚ್ಚರದಿಂದ, ತಾಳ್ಮೆಯಿಂದ ಸಂಸಾರ ನಡೆಸಿದೆ” ಎಂದು ಹೇಳಿದ್ದರು.

ಬಹುಪತ್ನಿತ್ವವನ್ನು ಗಂಡಸರು ತನ್ನ ಹಕ್ಕೆಂದೇ ಭಾವಿಸಿದ್ದ ಕಾಲವದು. ಪಿತೃಪ್ರಧಾನ ವ್ಯವಸ್ಥೆಯ ಚಿಂತನೆಗಳು ಗಂಡಸರಲ್ಲಿ ಕಾಣಿಸಿಕೊಂಡರೂ ವಿಧವಾ ವಿವಾಹ, ಕೂಡಿಕೆಯ ಸಂಬಂಧಗಳನ್ನು ತಡೆಯುವವರಿರಲಿಲ್ಲ. ಹೀಗಿದ್ದರೂ ವಿಷಮ ದಾಂಪತ್ಯದ ಕಷ್ಟ ಕಾರ್ಪಣ್ಯಗಳಿಂದ ಬೆಂದ ಮಹಿಳೆಯರ ಸಂಖ್ಯೆಯೂ ಕಡಿಮೆಯೇನೂ ಇರಲಿಲ್ಲ. ಸುಶೀಲಕ್ಕನ ಆಗಿನ ಮನಸ್ಥಿತಿಯನ್ನು ಯೋಚಿಸಿದರೆ ಆಕೆ ವ್ಯವಸ್ಥೆಯ ದಾಳವಾಗಿ ಉಪಯೋಗಿಸಲ್ಪಟ್ಟು ಹೆತ್ತವರಿಂದಲೇ ಶೋಷಿಸಲ್ಪಟ್ಟಂತೆ ಕಾಣುತ್ತಾಳೆ. ಚಂದು ಭಾವನಿಗೆ ಬೇರೊಂದು ಹೆಣ್ಣಿನ ಸಂಬಂಧವಿದೆ ಎಂದು ತಿಳಿದೂ ಅವಳನ್ನು ಸಂಸಾರವೆಂಬ ಬಾವಿಗೆ ದೂಡಿ ಆಳ ನೋಡಿದ ಹಿರಿಯರು ಅಪರಾಧಿಗಳಲ್ಲವೇ? ಅವಳ ಮನಸ್ಥಿತಿ ಕೆಡಲು ಹದಗೆಟ್ಟ ಕೌಟುಂಬಿಕ ಪರಿಸರವೇ ಕಾರಣವಾಯಿತು. ಯಾವಾಗಲೂ ಸುಡುಮೋರೆ ಹೊತ್ತ ಅವಳೊಂದಿಗೆ ಮನೆಯವರು ಮುಖಾಮುಖಿಯಾಗಿ ಮಾತಾಡಲು ಹೆದರುತ್ತಿದ್ದರು. ಆದರೆ ಚಂದು ಭಾವ ಎಂತಹ ಗಂಭೀರ ಪ್ರಸಂಗವನ್ನೂ ತನ್ನ ಒಂದು ಮುಗುಳುನಗುವಿನಿಂದ ತಿಳಿಗೊಳಿಸಬಲ್ಲ ಹೃದಯವಂತರು. ಒಂದು ಘಟನೆ ನೆನಪಾಗುತ್ತದೆ. ಒಂದು ಹುಣ್ಣಿಮೆಯ ದಿನ ರಾತ್ರಿ ಎಂಟು ಗಂಟೆಯ ಸುಮಾರಿಗೆ ನನ್ನನ್ನು ಸೀಮೆಎಣ್ಣೆ ತರಲು ಕಿಣಿಯವರ ಅಂಗಡಿಗೆ ಕಳಿಸಿದಳು ಸುಶೀಲಕ್ಕ. ಎಣ್ಣೆ ಬಾಟ್ಲಿ ಹಿಡಿದುಕೊಂಡು ಬರುತ್ತಿದ್ದೆ. ಆಕಾಶದಲ್ಲಿ ಪೂರ್ಣಚಂದ್ರ ಹೊಳೆಯುತ್ತಿದ್ದ. ನಾನು ಹೆಜ್ಜೆ ಹಾಕುತ್ತಿದ್ದಂತೆಯೇ ಆಕಾಶದಲ್ಲಿ ಅವನೂ ನನ್ನೊಂದಿಗೆ ಹೆಜ್ಜೆ ಹಾಕುತ್ತಿದ್ದಾನಲ್ಲ ಎಂಬ ಖುಷಿಯಲ್ಲಿ ರಸ್ತೆಯಲ್ಲಿದ್ದ ಕಲ್ಲು ಎಡವಿ ಬಿದ್ದುಬಿಟ್ಟೆ. ಬಿದ್ದ ಪೆಟ್ಟಿಗಿಂತ ಹೆಚ್ಚು ದುಃಖವಾದದ್ದು ಬಾಟ್ಲಿ ಒಡೆಯಿತಲ್ಲಾ ಎಂದು. ಅಕ್ಕನಿಗೆ ಏನು ಹೇಳಲಿ? ಹೇಗೆ ಮುಖ ತೋರಿಸಲಿ? ಎಂಬ ಭಯದಿಂದ ಕಂಗಾಲಾದೆ. ಮನೆಗೆ ಬರುವಾಗಲೇ ನನ್ನ ಅಳುವನ್ನು ಕಂಡು ಅಕ್ಕನಿಗೆ ವಿಷಯ ಗೊತ್ತಾಯ್ತು. “ಹೊಟ್ಟೆಗೇನು ತಿನ್ನುತ್ತಿ ಅನ್ನವೋ ಮಣ್ಣೋ? ಒಂದು ಸೀಮೆ ಎಣ್ಣೆ ಬಾಟ್ಲಿಯನ್ನು ಹಿಡಿದುಕೊಳ್ಳಲಾಗಲಿಲ್ಲವೇ? ಈಗಲೇ ನೆಲ ಕಾಣುವುದಿಲ್ಲವೇನೋ?” ಮುಂತಾದ ಮಾತುಗಳಿಂದ ಮಂಗಳಾರತಿ ಮಾಡಿದಳು. ಪುಣ್ಯಕ್ಕೆ ಭಾವ ಮನೆಯಲ್ಲಿದ್ದರು. “ಅಳಬೇಡ ಪುತ್ತೋ (ಮಗ) ತಾಗಿತಾ? ಗಾಯವೇನೂ ಆಗಿಲ್ಲ ತಾನೇ? ಲೇ, ನಿನಗೆ ಸ್ವಯ ಉಂಟೋ ಇಲ್ಲವೋ? ಕತ್ತಲಾದ ಮೇಲೆ ಮಗುವನ್ನು ಅಂಗಡಿಗೆ ಕಳಿಸಿದ್ದಿಯಲ್ವಾ, ಹಗಲಲ್ಲಿ ನೀನು ಜೀವದಲ್ಲಿ ಇರಲಿಲ್ಲವಾ?” ಎಂದು ಅಕ್ಕನನ್ನು ಕೆಕ್ಕರಿಸಿ ನೋಡಿದಾಗ ಅಕ್ಕನ ಬಾಯಿಯಿಂದ ಇನ್ನೆಂತಹ ಬಾಂಬು ಸಿಡಿಯುತ್ತದೋ ಎಂದು ಗಾಬರಿಯಾದೆ. ಪುಣ್ಯಕ್ಕೆ ಅಕ್ಕ ತೆಪ್ಪಗೆ ಒಳನಡೆದಳು. ಇದು ಭಾವನ ಹೃದಯವಂತಿಕೆ. ಇಂತಹ ಭಾವನ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವ ಶಕುನಿಗಳ ಗುಂಪು ಅವರ ಹಿಂದೆ ಮುಂದೆ ಸದಾ ಇರುತ್ತಿತ್ತು. ನಾವು ಭಾವನ ಮನೆಯಲ್ಲಿ ನಾಲ್ಕು ವರ್ಷಗಳ ಕಾಲ ಇದ್ದೆವು. ಒಂದು ದಿನವೂ ಭಾವ ಅಪ್ಪನನ್ನಾಗಲೀ, ಅಮ್ಮನನ್ನಾಗಲೀ ಅಗೌರವದಿಂದ ಕಂಡದ್ದು, ಏರುದನಿಯಲ್ಲಿ ಮಾತಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ.

ನನ್ನನ್ನು ಬಿಕರ್ನಕಟ್ಟೆಯ ಶಾಲೆಗೆ ಮೂರನೇ ತರಗತಿಗೆ ಸೇರಿಸಿದರು. ನನ್ನ ಮಾನಸಿಕ ನೋವುಗಳ ಜೊತೆಗೆ ದೈಹಿಕವಾಗಿಯೂ ಸದಾ ಅನಾರೋಗ್ಯಕ್ಕೊಳಗಾದ ನಾನು ವರ್ಷಪೂರ್ತಿ ಶಾಲೆಗೆ ಹೋದುದೇ ಇಲ್ಲ. ಅಪ್ಪನ ಗೆಳೆಯ ಜಾರಪ್ಪ ಮಾಸ್ಟರು ಅಲ್ಲಿ ಕಲಿಸುತ್ತಿದ್ದರು. ಆಗ ನಮಗೆ ತಕಲಿಯಲ್ಲಿ ನೂಲು ತೆಗೆಯುವ ಒಂದು ಪಿರೇಡಿತ್ತು. ಅದರಲ್ಲಿ ನಾನು ಉಳಿದವರಿಗಿಂತ ಜಾಣೆಯಾಗಿದ್ದೆ. ಜಾರಪ್ಪ ಮಾಸ್ಟರು ಎಲ್ಲರ ಮುಂದೆ ಹೊಗಳಿದಾಗ ಆದ ಸಂತೋಷಕ್ಕೆ ಪಾರವೇ ಇಲ್ಲ. ನಾನು ಶಾಲೆಗೆ ಬಂದದ್ದು ಸಾರ್ಥಕವಾಯಿತೆಂಬ ಭಾವ ಮೂಡುತ್ತಿತ್ತು. ಕುಮ್ಮಿ, ಕೋಲಾಟ ಇತ್ಯಾದಿಗಳಿಗೆಲ್ಲಾ ಸೇರಬೇಕೆಂಬ ಆಶೆ ನನಗಿದ್ದರೂ ನನ್ನನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ಬಹುಶಃ ಜೀವನೋತ್ಸಾಹವಿಲ್ಲದ ದುರ್ಬಲ ದೇಹದ ನಾನು ಅದಕ್ಕೆ ಅನ್‌ಫಿಟ್ ಆಗಿದ್ದೆ. ವಿಚಿತ್ರವೆಂದರೆ ನಾನು ಮಕ್ಕಳೊಂದಿಗೆ ಆಡುತ್ತಿರಲಿಲ್ಲ. ಅವರು ಆಡುವುದನ್ನು ನೋಡಿ ದೂರ ನಿಲ್ಲುತ್ತಿದ್ದೆ. ನನಗೆ ಬಾಲ್ಯವೇ ಇರಲಿಲ್ಲವೇನೋ ಎಂದು ನನಗನಿಸುತ್ತಿದೆ.

ನನ್ನ ಭಾವುಕತೆಯ ದುಷ್ಪರಿಣಾಮದ ಒಂದು ಘಟನೆ ನೆನಪಾಗುತ್ತದೆ. ಒಮ್ಮೆ ನಮ್ಮ ಮನೆಗೆ ಗೋಪಾಲಣ್ಣನ ಕೊನೆಯ ತಮ್ಮ ಆನಂದ ಬಂದಿದ್ದ. ಅವನು ನನಗಿಂತ ಐದಾರು ವರ್ಷ ದೊಡ್ಡವನಿರಬಹುದು. ನನ್ನನ್ನು “ಲೇ ಕರ್‍ಗಿ, ಇಲ್ಲಿ ಬಾರೇ” ಎಂದು ಕರೆದುದನ್ನು ಕೇಳಿ ರೋಷದಿಂದ “ನೀನು ಕರ್‍ಗಿ, ನಿನ್ನಪ್ಪ ಕರ್‍ಗಿ” ಎಂದು ನನಗೆ ಗೊತ್ತಿದ್ದ ಬೈಗುಳಗಳನ್ನೆಲ್ಲಾ ಅವನ ಮೇಲೆ ಸುರಿಸಿದೆ. ರಾತ್ರಿ ಅಪ್ಪ ಮನೆಗೆ ಬಂದಾಗ ಅದಕ್ಕೆ ಒಂದಿಷ್ಟು ಉಪ್ಪು ಖಾರ ಸೇರಿಸಿ ಚಾಡಿ ಹೇಳಿದ. “ಓಹೋ! ಶಾಲೆಯಲ್ಲಿ ಬೈಯಲೂ ಕಲಿಸುತ್ತಾರೇನು ನಿನಗೆ? ಇನ್ನೊಮ್ಮೆ ಹೇಳು ನೋಡೋಣ” ಎಂದು ಹುಣಸೆ ಬರಲಿನಿಂದ ಎರಡು ಬಾರಿಸಿದರು. ಅದು ನನ್ನ ಮನಸ್ಸಿಗೆ ಎಂತಹ ಆಘಾತವಾಯಿತೆಂದರೆ ಬೆಳಗ್ಗೆ ಚಾಪೆಯಿಂದ ಏಳಲಾರದಷ್ಟು ನಿಶ್ಶಕ್ತಿ. ಮೈ ಸುಡುತ್ತಿತ್ತು. ಮನೆ ಮದ್ದಿನ ಆರೈಕೆ ನಡೆಯಿತು. ಆದರೆ ಜ್ವರ ಕೆಳಗಿಳಿಯುವ ಬದಲು ತಲೆಗೇರಿ ಕಣ್ಣು ಅಡಿಮೇಲಾಯಿತಂತೆ. ಇದನ್ನು ಕಂಡು ಗಾಬರಿಗೊಂಡ ಅಪ್ಪ ಅವರ ಬಾಲ್ಯದ ಗೆಳೆಯ ಡಾ. ನಾಗಪ್ಪ ಆಳ್ವರ ಕ್ಲಿನಿಕ್ಕಿಗೆ ಹೋಗಿ ಈಗಲೇ ಬಂದು ನನ್ನ ಮಗಳನ್ನೊಮ್ಮೆ ಪರೀಕ್ಷಿಸಬೇಕೆಂದು ಬೇಡಿಕೊಂಡರಂತೆ. ಅವರು ಬಂದು ಪರೀಕ್ಷೆ ಮಾಡಿ ಗಾಬರಿಯಾಗುವ ಕಾರಣವಿಲ್ಲವೆಂದು ಅಪ್ಪನನ್ನು ಸಮಾಧಾನ ಮಾಡಿದರಂತೆ. ಅಪ್ಪ ನನ್ನ ಜ್ವರ ಇಳಿಯುವವರೆಗೂ ನನ್ನ ಪಕ್ಕದಿಂದ ಕದಲಲಿಲ್ಲ. ತಮ್ಮ ಮಕ್ಕಳು ರೋಗದಿಂದ ನರಳುತ್ತಿದ್ದಾಗ ಎಲ್ಲಾ ಅಪ್ಪಂದಿರು ಇದನ್ನೇ ಮಾಡುತ್ತಾರೆ. ಅದೇನೂ ವಿಶೇಷವಲ್ಲ. ಆದರೆ ಅಂದಿನಿಂದ ನನ್ನಪ್ಪ ನನ್ನನ್ನು ರಕ್ಷಿಸಿದ ರೀತಿಯೇ ವಿಶಿಷ್ಟ. ಪೆಟ್ಟು ಕೊಡುವುದು ಬಿಡಿ, ಗಟ್ಟಿಯಾಗಿ ಗದರಿಸಿದ್ದೂ ಇಲ್ಲ. ಪ್ರಾಚೀನ ಕಾವ್ಯಗಳನ್ನು ಓದುವಾಗ ನನ್ನನ್ನು ಪಕ್ಕದಲ್ಲಿ ಕೂರಿಸಿಕೊಂಡು ಕತೆ ಹೇಳಿದರು. ಭಜನಾ ಮಂಡಳಿಗಳಿಗೆ ಕರೆದೊಯ್ದು ಹಾಡಿಸಿದರು. ಕಂಪೆನಿ ನಾಟಕಗಳು ಮಂಗಳೂರಿಗೆ ಬಂದಾಗ ನನ್ನನ್ನು ಕರೆದೊಯ್ದರು. ಬಯಲಾಟಗಳಿಗೆ ಮರೆಯದೆ ನನ್ನನ್ನು ಕರೆದೊಯ್ದರು. ಸಮೀಪದ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ದು ಅಲ್ಲಿನ ಚರಿತ್ರೆಯನ್ನು ಅವರಿಗೆ ತಿಳಿದುದನ್ನು ನನಗೆ ಕೇಳಿಸುತ್ತಿದ್ದರು. ತಮಗಿರುವ ಆಸಕ್ತಿಗಳು ಮಕ್ಕಳಲ್ಲೂ ಉಂಟಾಗಲಿ ಎಂಬ ಆಶಯವುಳ್ಳ ಹೆತ್ತವರು ಅಂದೂ ಇದ್ದರು, ಇಂದೂ ಇದ್ದಾರೆ. ಆದರೆ ೧೯೫೨ನೇ ಇಸವಿಯಲ್ಲಿ ಒಬ್ಬ ಹೆಣ್ಣುಮಗಳು ಗಂಡು ಮಕ್ಕಳು ಮಾತ್ರ ಕಲಿಯುತ್ತಿದ್ದ ವ್ಯಾಯಾಮ ಶಾಲೆಯಲ್ಲಿ ಪ್ರವೇಶ ಪಡೆದದ್ದು ವಿಶೇಷ. ಆ ಪ್ರವೇಶ ನನಗೆ ಲಭಿಸಿದ್ದು ಅಪ್ಪನಿಂದ. ನನ್ನ ಅಮ್ಮ ತಕರಾರೆತ್ತಿದರೂ ನಿರ್ಲಕ್ಷ್ಯ ಮಾಡಿ ನನ್ನನ್ನು ಅಲ್ಲಿ ದಂಡ್, ಬಸ್ಕಿ, ಬಾಟಲ್ ಬ್ಯಾಲೆನ್ಸ್ ಮುಂತಾದ ಕಸರತ್ತುಗಳಲ್ಲಿ ತರಬೇತಿ ಕೊಡಿಸಿದರು. ನನ್ನ ನಂತರ ಅಮ್ಮ ಹೆತ್ತ ಮಕ್ಕಳೂ ಸತ್ತು ಹುಟ್ಟಿದ ಕಾರಣ ಅಪ್ಪನಿಗೆ ನಾನು ಅವರ ಇಷ್ಟಾರ್ಥಗಳನ್ನು ಪೂರೈಸುವ ಏಕೈಕ ಆಧಾರವೆಂದು ಭಾವಿಸಿರಬೇಕು. ಗಂಡು ಮಗುವಿನಂತೆ ಬೆಳೆಸುವ ನಿರ್ಧಾರ ಮಾಡಿರಬೇಕು. ಇದು ನನ್ನ ಕಾಲದ ಯಾವ ಹೆಣ್ಣುಮಕ್ಕಳಿಗೂ ಸಿಗದ ಭಾಗ್ಯ. ಆ ವ್ಯಾಯಾಮ ಶಾಲೆಯಲ್ಲಿ ಏನು ಕಲಿತೆ, ಎಷ್ಟು ಕಲಿತೆ ಎಂಬುದು ಮುಖ್ಯವಲ್ಲ. ಪುಕ್ಕಲು ಸ್ವಭಾವದ, ಪೀಚಲು ಶರೀರದ ನನ್ನನ್ನು ಆ ತರಬೇತಿ ಮಾನಸಿಕವಾಗಿ ಗಟ್ಟಿಗೊಳಿಸಿದ್ದು ಸುಳ್ಳಲ್ಲ.

ನನ್ನ ದುರಾದೃಷ್ಟಕ್ಕೆ ಪ್ರತೀ ವರ್ಷ ಚಳಿಗಾಲದಲ್ಲಿ ಒಂದು ರೀತಿಯ ಚರ್ಮರೋಗ ನನ್ನನ್ನು ಬಾಧಿಸುತ್ತಿತ್ತು. ಮುಖದ ಮೇಲೆ ಬೆವರುಸಾಲೆಯಂತಹ ನೀರ್‍ಗುಳ್ಳೆಗಳು ಮೂಡಿ ಅದು ಒಡೆದು ಕೀವಾಗಿ ಹುಣ್ಣಾಗಿ ಮುಖವನ್ನು ವಿಕಾರಗೊಳಿಸಿಬಿಡುತ್ತಿತ್ತು. ಆಯುರ್ವೇದಿಕ್ ವೈದ್ಯರ ಮದ್ದು ತಂದು ಪ್ರತಿವರ್ಷ ಆರೈಕೆ ಮಾಡುವುದು ರೂಢಿಯಾಗಿಬಿಟ್ಟಿತ್ತು. ಹುಣ್ಣು ತೊಳೆಯುವ, ಮದ್ದು ತಯಾರಿಸುವ, ಹಚ್ಚುವ ಎಲ್ಲಾ ಕೆಲಸ ನನ್ನಪ್ಪನದೇ, ತಲೆ ಬಾಚಿ ಜಡೆ ಹೆಣೆಯುವವರೂ ಅವರೇ. ಒಂದು ದಿನ ಅಪ್ಪನ ಗೆಳೆಯ ಸುಬ್ರಾಯ ಭಟ್ಟರು ಒಂದು ಸಲಹೆ ನೀಡಿದರು. ಈ ಕಾಯಿಲೆ ನಾಗದೋಷದಿಂದ ಉಂಟಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಕುಡುಪು ದೇವಸ್ಥಾನದಲ್ಲಿ ನಾಗನ ಕಲ್ಲು ಹಾಕಿದರೆ ಪರಿಹಾರ ಸಿಗಬಹುದು. ದೇವಸ್ಥಾನದ ಕೆರೆಯಲ್ಲಿ ಮುಳುಗಿ ಪ್ರತಿ ತಿಂಗಳು ಷಷ್ಠಿಯಂದು ಮಡಸ್ತನ ಹಾಕಿಸಿ. ಖಂಡಿತಾ ಪರಿಹಾರ ಸಿಗುತ್ತದೆ ಎಂದರು. ಇಂತಹ ಪರಿಹಾರದ ಬಗ್ಗೆ ಅಪ್ಪನಿಗೆ ಪೂರ್ಣ ನಂಬಿಕೆಯೂ ಇಲ್ಲ. ಪೂರ್ಣ ತಿರಸ್ಕಾರವೂ ಇಲ್ಲ. ಇಬ್ಬಂದಿ ಮನೋಭಾವವಿತ್ತೆಂದು ಕಾಣುತ್ತದೆ. ಮಗಳಿಗೆ ನೆಮ್ಮದಿ ಸಿಗುವುದಾದರೆ ಪ್ರಯತ್ನಿಸಿ ನೋಡೋಣವೆಂದು ಒಂದು ದಿನ ಬೆಳಗ್ಗೆ ನನ್ನನ್ನು ಕರೆದುಕೊಂಡು ಕುಡುಪು ದೇವಸ್ಥಾನಕ್ಕೆ ಹೋದರು.

ಅರ್ಚಕರಲ್ಲಿ ವಿಚಾರಿಸಿದಾಗ ನಾಗನಕಲ್ಲು ಹಾಕುವುದಕ್ಕೆ ೬೦ ರೂಪಾಯಿ ಖರ್ಚು ಆಗುತ್ತದೆಂದು (೧೯೫೨ನೇ ಇಸವಿಯಲ್ಲಿ) ಹೇಳಿದರು. ಅದು ನಮ್ಮ ಆರ್ಥಿಕ ಶಕ್ತಿಗೆ ಎಟುಕದ ಕಾರಣ ಅದರ ತಂಟೆಯೇ ಬೇಡವೆಂದು ನನ್ನನ್ನು ಕೆರೆಯ ಬಳಿಗೆ ಕರೆದೊಯ್ದು ಮುಳುಗು ಹಾಕಿಸಿ ದೇವಸ್ಥಾನದ ಅಂಗಳದಲ್ಲಿ ಹೊರಳಾಡಲು ಹೇಳಿದರು. ಒಂದೆರಡು ಸುತ್ತು ಹಾಕಿದ್ದೆನಷ್ಟೆ. “ಸಾಕು, ಏಳು ಮೇಲೆ” ಎಂದು ಕೈಹಿಡಿದು ಎಬ್ಬಿಸಿ ಕೆರೆಯಲ್ಲಿ ಮತ್ತೊಮ್ಮೆ ಮುಳುಗು ಹಾಕಿಸಿ ದೇವಸ್ಥಾನಕ್ಕೆ ಬೆನ್ನು ಹಾಕಿ ಬಂದವರು ಮತ್ತೆ ಅದರ ಸುದ್ದಿಯೇ ಎತ್ತಲಿಲ್ಲ. ನಾನು ಮಡಸ್ತನ ಹಾಕುವುದನ್ನು ಅಪ್ಪನಿಗೆ ನೋಡಲಿಕ್ಕಾಗಲಿಲ್ಲವೆಂದೂ, ಇನ್ನು ನಾಗದೋಷದ ಸುದ್ದಿಯನ್ನು ಮರೆತುಬಿಡಬೇಕೆಂದೂ ಅಮ್ಮನಲ್ಲಿ ಹೇಳಿದರಂತೆ. ನಾಗದೋಷ ಹೇಗೆ, ಯಾಕೆ ಬರುತ್ತದೆ ಎಂಬುದರ ಬಗ್ಗೆ ನಮಗೇನೂ ಗೊತ್ತಿಲ್ಲ. ಹೀಗೆ ಕಾಯಿಲೆಗಳನ್ನು ತಂದೊಡ್ದಿದುದರಿಂದ ನಾಗನಿಗಾದ ಲಾಭವೇನು? ಇದ್ಯಾವುದಕ್ಕೂ ಉತ್ತರ ಗೊತ್ತಿಲ್ಲ. ಅತ್ಯಂತ ಕಡಿಮೆ ಗೊತ್ತಿರುವ ವಿಷಯಗಳನ್ನು ನಾವು ಹೆಚ್ಚು ನಂಬುತ್ತೇವೆ ಎಂಬುದಕ್ಕೆ ಇದು ಸಾಕ್ಷಿ. ಪದೇ ಪದೇ ಹೇಳುವ ಸುಳ್ಳುಗಳನ್ನು ಸತ್ಯವೆಂದೇ ನಂಬುವವರು ನಾವು ಎಂದು ಗೊತ್ತಿದ್ದು ಕೂಡಾ ಕದ್ರಿಯಲ್ಲಿ ಪಾಂಡವರ ಗುಹೆಯಲ್ಲಿ ಒಬ್ಬ ಸನ್ಯಾಸಿ ಇದ್ದಾನಂತೆ. ಅವನು ಕೊಟ್ಟ ಮದ್ದಿನಿಂದ ಹಲವರಿಗೆ ರೋಗ ವಾಸಿಯಾಗಿದೆಯಂತೆ ಎಂಬ ಸುದ್ದಿ ಕೇಳಿ ಅಲ್ಲಿಗೂ ಅಪ್ಪ ನನ್ನನ್ನು ಕರೆದುಕೊಂಡು ಹೋದರು. ಆ ಸನ್ಯಾಸಿ ನನ್ನ ತಲೆಗೆ ಕೈಯಿಟ್ಟು ಅಲ್‌ವೆರಾದ ರಸವನ್ನು ಹಚ್ಚಬೇಕೆಂದೂ ಅದನ್ನೇ ರಸ ಹಿಂಡಿ ಅರ್ಥ ಚಮಚ ಬೆಳಿಗ್ಗೆ ಕುಡಿಯಬೇಕೆಂದೂ ಸಲಹೆ ನೀಡಿದರು. ಅಲ್‌ವೆರಾವನ್ನು ಹುಡುಕಿ ಹೋಗುವ ವ್ಯವಧಾನವಿಲ್ಲದ್ದರಿಂದ ಆ ಸಲಹೆಯೂ ಬಿದ್ದುಹೋಯಿತು. ಮರುವರ್ಷ ಅಪ್ಪುರಾವ್ ಎಂಬ ಪಂಡಿತರ ಔಷಧಿಯನ್ನು ಸ್ವೀಕರಿಸಿದ ಮೇಲೆ ಕಾಯಿಲೆ ವಾಸಿಯಾಯಿತು. ನಮ್ಮ ಜೀರ್ಣಶಕ್ತಿಗಿಂತ ಹೆಚ್ಚಿನ ನಂಬಿಕೆ ಇಟ್ಟುಕೊಳ್ಳಬಾರದು ಎಂಬುದು ನಮಗೆ ಮನದಟ್ಟಾಯಿತು.

ಬಿಕರ್ನಕಟ್ಟೆ ಶಾಲೆಯಿದ್ದ ಕಟ್ಟಡ ಹಳೆಕಾಲದ ಒಂದು ದೊಡ್ಡ ಮನೆಯಾಗಿತ್ತು. ಅದರ ಚಾವಡಿಯಲ್ಲಿ ಒಂದನೇ ತರಗತಿ ನಡೆದರೆ ಉಳಿದ ಕೋಣೆಗಳಲ್ಲಿ ಬೇರೆ ಬೇರೆ ತರಗತಿ ನಡೆಯುತ್ತಿತ್ತು. ಅಂಗಳದಲ್ಲಿ ಮಕ್ಕಳು ಆಟವಾಡುತ್ತಿದ್ದರು. ಈಗ ಆ ಮನೆಯ ಮುಂದೆ ಪ್ಲಾಟ್ ಆಗಿದೆ. ಮನೆ ಹಾಗೆಯೇ ಇದೆ. ಯಾರೋ ಮುಸ್ಲಿಂ ಬಂಧುಗಳು ವಾಸವಾಗಿದ್ದಾರೆ. ಆ ಮನೆಯ ಮುಂದಿನಿಂದ ನಡೆದಾಡುವಾಗಲೆಲ್ಲಾ ಅಲ್ಲಿ ನನ್ನ ಹೆಜ್ಜೆಗುರುತುಗಳನ್ನು ಹುಡುಕಿ ನೋಡಬೇಕೆಂಬ ಆಸೆಯಾಗುತ್ತಿತ್ತು. ರಸ್ತೆ ಅಗಲೀಕರಣವು ಮನೆಯ ಅಂಗಳವನ್ನೂ ನುಂಗಿದೆ.

ಬಡವರಿಗೆ ಮಕ್ಕಳು ಹೆಚ್ಚು ಅನ್ನುತ್ತಾರಲ್ಲಾ. ಹಾಗೆ ಎರಡು ವರ್ಷಕ್ಕೊಮ್ಮೆ ಅಮ್ಮ ಗರ್ಭಿಣಿಯಾಗಿ ಹೆತ್ತು ಸತ್ತು ಹುಟ್ಟುತ್ತಿದ್ದಳು. ಮಗು ಮಣ್ಣು ಸೇರುತ್ತಿತ್ತು. ಕುಟುಂಬಯೋಜನೆಯಿಲ್ಲದ ಆ ಕಾಲದಲ್ಲಿ ಇದು ಸಾಮಾನ್ಯ. ನನ್ನ ನಂತರ ನಾಲ್ಕು ಗಂಡುಕೂಸುಗಳು ಹುಟ್ಟಿ ಸತ್ತಿದ್ದವು. ಒಂದಾದರೂ ಗಂಡು ಮಗುವನ್ನು ಉಳಿಸಬೇಕೆಂಬ ಹಂಬಲ ಮೂಡುವುದು ಹೆತ್ತವರಿಗೆ ಸಹಜವಲ್ಲವೇ? ಪ್ರಶ್ನೆ, ಜಾತಕ, ಹರಕೆ ಇಂತಹ ಯಾವ ಶಾರ್ಟ್‌ಕಟ್ ದಾರಿಯನ್ನೂ ಆಶ್ರಯಿಸದ ನನ್ನಪ್ಪ ಅವರ ಗೆಳೆಯರ ಒತ್ತಾಯದಿಂದ ಗುರುಪುರ ವೆಂಕಟ್ರಮಣ ದೇವಸ್ಥಾನದ ದರ್ಶನಪಾತ್ರಿಯನ್ನು ಕಾಣುವಂತಾಯಿತು. ನನ್ನನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು. ದರ್ಶನಪಾತ್ರಿಗಳು ನಾಗರಬೆತ್ತದಿಂದ ತಮ್ಮ ಬೆನ್ನಿಗೆ ಬಡಿಯುತ್ತಾ ಆವೇಶದಿಂದ ಮುಂದೆ ಹಿಂದೆ ನಡೆಯುತ್ತಿದ್ದ ದೃಶ್ಯ ನೋಡಿ ನಾನು ಬೆರಗಾದೆ. ಅಪ್ಪ ತನ್ನ ನೋವನ್ನು ಹೇಳಿಕೊಂಡರು. ದರ್ಶನಪಾತ್ರಿಗಳು ನನ್ನ ತಲೆಯ ಮೇಲೆ ನಾಗರಬೆತ್ತವನ್ನು ತಾಗಿಸಿ ಮುಂದಿನ ಸಲ ಮಗು ಉಳಿಯುತ್ತದೆ. ರಥೋತ್ಸವದ ಸಮಯದಲ್ಲಿ ಮಗುವಿನ ತಲೆಯನ್ನು ತಂದು ಚಕ್ರಕ್ಕೆ ತಾಗಿಸಿ ಎಂದು ಅಪ್ಪಣೆ ಕೊಟ್ಟರು.

ಕಾಕತಾಳೀಯವೆಂಬಂತೆ ಆ ಸಲದ ಗಂಡು ಮಗು ಬದುಕಿತು. ಅದು ೧೯೫೨ನೇ ಇಸವಿ. ಆಗ ವೈದ್ಯಕೀಯದಲ್ಲಿ ಪ್ರಸವ ವಿಜ್ಞಾನದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆಗಳಾಗಿದ್ದವು. ಶ್ರೀಕಾಂತ ಎಂಬ ಹೆಸರಿನ ಆ ಮಗು ಆರು ತಿಂಗಳವರೆಗೂ ನಮ್ಮೆಲ್ಲರ ಕಣ್ಮಣಿಯಾಗಿ ಬೆಳೆದ. ಒಂದು ದಿನ ಜ್ವರ ಬಂದು ಮರುದಿನ ಅದು ತಲೆಗೇರಿ ಪಿಟ್ಸ್ ಬಂದು ತೀರಿಹೋದ. ಜ್ವರ ತಲೆಗೇರದಂತೆ ಮುಂಜಾಗ್ರತೆ ವಹಿಸಿದ್ದರೆ ಹೀಗಾಗುತ್ತಿರಲಿಲ್ಲವೇನೋ. ಆದರೆ ಅಪ್ಪ ಅಮ್ಮ ಊಹಿಸಿದ ಕಾರಣವೇ ಬೇರೆ. ರಥೋತ್ಸವದ ಸಮಯದಲ್ಲಿ ಮಗುವನ್ನು ತೋರಿಸಬೇಕು ಎಂದು ವೆಂಕಟ್ರಮಣನ ಆದೇಶವಿತ್ತಲ್ಲಾ. ಮಗು ಸಣ್ಣದು ಮುಂದಿನ ವರ್ಷ ತೋರಿಸೋಣ ಎಂದು ಹರಕೆಯನ್ನು ಮುಂದೆ ಹಾಕಿದ್ದೇ ಮಹಾಪರಾಧವಾಗಿ ದೇವರು ಮಗುವನ್ನು ಕಿತ್ತುಕೊಂಡ ಎಂಬ ಭಾವನೆ ಗಟ್ಟಿಯಾಯಿತು. ಇಷ್ಟು ಸಣ್ಣ ವಿಷಯಕ್ಕೆಲ್ಲಾ ದೇವರು ಸೇಡು ತೀರಿಸಿಕೊಳ್ಳುತ್ತಾನೆಯೇ ಎಂದು ಪ್ರಶ್ನಿಸುವ ಶಕ್ತಿ ಆಗ ನನಗೂ ಇರಲಿಲ್ಲ. ಅಪ್ಪ ಅಮ್ಮನಿಗೂ ಇರಲಿಲ್ಲ. ತಿಂಗಳುಗಳಾದ ಮೇಲೆ ಪಾತ್ರಿಯೆದುರು ನಿಂತು ತಪ್ಪಾಯಿತು. ಕ್ಷಮಿಸು ಎಂದು ನಿವೇದಿಸಿದ್ದಾಯಿತು. ಮತ್ತೊಮ್ಮೆ ಪಾತ್ರಿ ನನ್ನ ತಲೆಯ ಮೇಲೆ, ಅಪ್ಪನ ತಲೆಯ ಮೇಲೆ ಬೆತ್ತದಿಂದ ಹರಸಿದರು. ಮುಂದಿನ ವರ್ಷದಲ್ಲಿ ನನ್ನ ತಮ್ಮ ರೋಹಿತಾಶ್ವ ಹುಟ್ಟಿದ. ಅವನು ಹುಟ್ಟಿದ್ದು ವೆಂಕಟ್ರಮಣನ ವರಪ್ರಸಾದದಿಂದ ಎಂದೇ ನಂಬಿದ್ದರು ಅಮ್ಮ ಅಪ್ಪ. ತನ್ನ ಮಗಳಿಗೆ ನಮ್ಮ ಕಾಲಾನಂತರ ಕರೆದುಕೇಳುವ ಬಂಧುವಾಗಿ ಸೋದರನಿರಬೇಕು ಎಂಬ ಆಶಯ ಅವರದು. `ಮೂಗುತಿ ಮುರಿದರೆ ಮರಳಿ ಮಾಡಿಸಬಹುದು. ಮಡದಿ ಸತ್ತರೆ ಮತ್ತೆ ತರಬೋದು. ಅಣ್ಣಯ್ಯ ಒಡಹುಟ್ಟಿದೋರಾ ಪಡೆದೀರಾ’ ಎಂಬ ಗರತಿ ಹಾಡಿನ ಆಶಯವೂ ಇದೇ ತಾನೇ? ಒಂಬತ್ತು ಹೆತ್ತ ನನ್ನಮ್ಮ ಒಂದು ಹೆಣ್ಣು ಆರು ಗಂಡು ಕೂಸುಗಳಿಗೆ ಗೋರಿ ಕಟ್ಟಿದವಳು. ಒಂದು ಗಂಡು ಮಗು ಉಳಿಯಲಿ ಎಂದು ಅಮ್ಮ ಆಶಿಸಿದರೂ ಹರಕೆ ಹೇಳಿದವಳಲ್ಲ. ಯಾಕೆಂದರೆ ಅವಳಿಗೆ ಬಸಿರು ಬಾಣಂತನಗಳು ಯಮಯಾತನೆ ನೀಡುತ್ತಿದ್ದವು. ಆದರೂ ಅಪ್ಪನ ಭಾವನೆಗಳಿಗೆ ಬರೆ ಎಳೆವ ಧೈರ್ಯವಿರಲಿಲ್ಲ. ಕೆಲವೊಮ್ಮೆ ಗರ್ಭಿಣಿ ಎಂದು ಗೊತ್ತಾದಾಗ ಏನಾದರೂ ಮದ್ದು ತಿಂದು ಗರ್ಭ ಇಳಿಸಿಬಿಡಲೇ ಎಂದು ಅನಿಸಿದ್ದೂ ಉಂಟು ಎಂದು ಎಷ್ಟೋ ವರ್ಷಗಳ ಬಳಿಕ ನನ್ನಲ್ಲಿ ಹೇಳಿಕೊಂಡಿದ್ದಳು. ತನ್ನ ಗರ್ಭಕೋಶದ ಮೇಲೆ ಅವಳಿಗೇ ಸ್ವಾತಂತ್ರ್ಯವಿರಲಿಲ್ಲ. ಇಷ್ಟವಿರಲಿ, ಇಲ್ಲದಿರಲಿ ಬೀಜಗಳಿಗೆ ಕ್ಷೇತ್ರವಾಗುವುದು ಧರ್ಮವೂ ಕರ್ತವ್ಯವೂ ಆಗಿದೆ ಎಂಬ ನಂಬಿಕೆ ಬಲವಾಗಿದ್ದ ಕಾಲವದು.

ತಮ್ಮ ಹುಟ್ಟಿದ ಮೇಲೆ ಅವನ ಆರೈಕೆಯಲ್ಲಿ ಎಷ್ಟು ಎಚ್ಚರ ವಹಿಸಿದರೆಂದರೆ ಕಣ್ಣೆವೆಯಂತೆ ಕಾಯುವುದು ಎಲ್ಲರ ಕಾಯಕವಾಯಿತು. ಅಮ್ಮ ಗೇರುಬೀಜ ಕಾರ್ಖಾನೆಗೆ ಹೋಗುವಾಗ ಅಪ್ಪನ ಗೂಡಂಗಡಿಯಲ್ಲಿ ಮಲಗಿಸಿ ಹೋದರೆ ಮಧ್ಯಾಹ್ನ ಬಂದು ಮೊಲೆಯೂಡಿಸುತ್ತಿದ್ದರು. ಸಾಯಂಕಾಲ ಅವನ ಪಕ್ಕದಲ್ಲಿ ಕೂತು ಆರೈಕೆ ಮಾಡುವ ಡ್ಯೂಟಿ ನನ್ನದಾಯಿತು. ನಾನಾಗ ಐದನೇ ತರಗತಿಯಲ್ಲಿದ್ದೆ. ಇಷ್ಟರವರೆಗೆ ನಾನು ಗಂಡುಮಗುವೇ ಆಗಿದ್ದೆ. ಈಗ ಅಪ್ಪ ಅಮ್ಮನ ಗಮನದ ಕೇಂದ್ರಬಿಂದುವಾಗಿ ತಮ್ಮ ಹುಟ್ಟಿದ್ದರಿಂದ ನಾನು ಅವರ ದೃಷ್ಟಿಯಲ್ಲಿ ಹೆಣ್ಣಾಗಿ ಪರಿವರ್ತನೆಗೊಂಡಿದ್ದೆ. ನನ್ನ ಮೇಲೆ ಒಂದೊಂದೇ ಜವಾಬ್ದಾರಿಗಳು ಹೇರಲ್ಪಟ್ಟವು. ಕೆಲವು ವಿಧಿ, ನಿಷೇಧಗಳ ಬಗ್ಗೆ ನನಗೆ ಕ್ಲಾಸ್ ತೆಗೆದುಕೊಂಡರು. ಈ ಅನಿರೀಕ್ಷಿತ ಬದಲಾವಣೆಗೆ ಹೊಂದಿಕೊಳ್ಳುವುದು ಮೊದಲಿಗೆ ತುಸು ಕಷ್ಟವೆನಿಸಿದರೂ, ವಿಧೇಯಳಾದ ನಾನು ಹೊಂದಿಕೊಂಡೆ. ಮಾಡುವ ಪ್ರತಿ ಕೆಲಸವನ್ನೂ ಖುಷಿಯಿಂದ, ತನ್ಮಯತೆಯಿಂದ ಮಾಡಿದೆ. ಗತದ ಸ್ಮೃತಿಗಿಂತ, ಮುಂದಿನ ಭವಿಷ್ಯದ ಕಲ್ಪನೆಗಿಂತ ಆ ಕ್ಷಣದ ಭಾವನಾತ್ಮಕ ಸಂಬಂಧ, ಪ್ರೀತಿ, ಕರುಣೆಗಳೇ ಜೀವನದ ಜೀವಾಳವೆಂಬ ಸತ್ಯವನ್ನು ಬದುಕು ನನಗೆ ಕಲಿಸಿತು.

ಭಾವನ ಮನೆಯ ಪಕ್ಕದಲ್ಲಿ ನಾಗಮ್ಮ ಎಂಬವರ ಮನೆ. ಅವರ ಮನೆಯ ಬಿಡಾರದಲ್ಲಿ ತಮಿಳು ಮಾತಾಡುವ ಒಂದು ಕುಟುಂಬವಿತ್ತು. ಇವರು ತಮ್ಮ ಮನೆಯ ಸದಸ್ಯರಿಗೆ ಯಾವುದೇ ಕಾಯಿಲೆ ಬಂದರೂ ಆಸ್ಪತ್ರೆಗೆ ಹೋಗುವುದಿಲ್ಲ. ಯೌವ ಔಷಧಿಯನ್ನೂ ಸ್ವೀಕರಿಸುವುದಿಲ್ಲವಂತೆ. ಕಾಯಿಲೆ ಬಂದ ಕೂಡಲೇ ಮನೆಯ ಸದಸ್ಯರೆಲ್ಲರೂ ಸೇರಿ ಪ್ರಾರ್ಥನೆ ಮಾಡುತ್ತಿದ್ದರಂತೆ. ಅದು ಎಷ್ಟೇ ಕಠಿಣ ಕಾಯಿಲೆಯಾದರೂ ಅದರಲ್ಲೇ ಕಾಯಿಲೆ ಗುಣವಾಗುತ್ತಿತ್ತಂತೆ. ಇದು ಅವರ ನಂಬಿಕೆ. ಅವರ ಮನೆಯಿಂದ ಕೆಲವೊಮ್ಮೆ ಹಗಲಿಡೀ ಪ್ರಾರ್ಥನೆ ಮಾಡುವ ಸ್ವರ ಕೇಳುತ್ತಿತ್ತು. ಕೆಲವೊಮ್ಮೆ ತೀವ್ರ ನರಳಾಟದ ಸ್ವರವೂ ಕೇಳುತ್ತಿತ್ತು. ಊರವರ ಯಾವ ಒತ್ತಾಯಕ್ಕೂ ಅವರು ವಿಚಲಿತರಾಗುತ್ತಿರಲಿಲ್ಲ. ಕ್ರೈಸ್ತರಲ್ಲಿ ಒಂದು ಪಂಗಡವಾಗಿರುವ ಇವರ ನಂಬಿಕೆಯನ್ನು ಕಂಡು ಎಲ್ಲರೂ ಸೋಜಿಗಪಡುತ್ತಿದ್ದರು. ಈಗಲೂ ಈ ಪಂಗಡದವರು ಇರಬಹುದು. ಅದೇ ಕರ್ಮಠ ಸಂಪ್ರದಾಯವನ್ನು ಪಾಲಿಸುವವರಾಗಿದ್ದರೆ ಅವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ನನಗನ್ನಿಸುತ್ತಿದೆ. ಧರ್ಮದ ಹೆಸರಿನಲ್ಲಿ ತಮ್ಮನ್ನು ತಾವೇ ಹಿಂಸೆಗೊಳಪಡಿಸುವುದು ಖಂಡನೀಯವಲ್ಲವೇ? ನಾನು ಆ ಮನೆಗೆ ಆಗಾಗ ಹೋಗುತ್ತಿದ್ದೆ. ಯಾಕೆಂದರೆ ನಾಗಮ್ಮಕ್ಕನ ಮಗಳು ರಾಜೀವಿ ಇದ್ದಾರಲ್ಲಾ ಅವರು ನನ್ನನ್ನು ಮೊತ್ತಮೊದಲು ಪ್ರೀತಿಯಿಂದ ಪ್ರಶಂಸಿಸಿದ ಸಹೃದಯಿ. ಮನೆಯವರಲ್ಲದೆ ಹೊರಗಿನವರು ಯಾರೂ ಈ ಕರಿಮುಸುಡಿಯನ್ನು ಕಣ್ಣೆತ್ತಿ ನೋಡುವುದಾಗಲೀ, ಪ್ರೀತಿಯಿಂದ ಮಾತನಾಡಿಸುವುದಾಗಲೀ ಮಾಡಿರಲಿಲ್ಲ. ರಾಜೀವಿಯಕ್ಕ “ಎಷ್ಟು ಚಂದ ಇದ್ದೀಯೇ ನೀನು, ನಿನ್ನ ಕೂದಲೆಷ್ಟು ಚಂದ” ಎಂದು ಹೇಳಿದ್ದು ದೇವಲೋಕದಿಂದ ಕೇಳಿದ ಅಶರೀರವಾಣಿಯಂತೆ ಮತ್ತೆ ಮತ್ತೆ ಕೇಳಿಸುತ್ತಿತ್ತು ನನಗೆ. ತಾಯಿ ಮಗಳಿಗೆ ಯಾವ ಕಾರಣಕ್ಕೋ ಮುನಿಸಿತ್ತು. ಅವರಿಗೆ ಒಂಟಿತನ ಕಾಡುತ್ತಿತ್ತು. ಹಾಗಾಗಿ ನನ್ನನ್ನು ಹೊಗಳಿ ಅಟ್ಟಕ್ಕೇರಿಸಿಬಿಡುತ್ತಿದ್ದರು. ಈ ಆಕರ್ಷಣೆಯೇ ನನ್ನನ್ನು ಅವರ ಬಳಿಗೆ ಎಳೆಯುತ್ತಿತ್ತು. ನಾನಿರುವಷ್ಟು ಹೊತ್ತು ಅವರ ಮುಖದಲ್ಲಿ ನಗುವಿನ ಕಳೆಯಿರುತ್ತಿತ್ತು. ಉಳಿದ ಹೊತ್ತಿನಲ್ಲಿ ಲೋಕದ ದುಃಖವನ್ನೆಲ್ಲಾ ತಾನೇ ಹೊತ್ತುಕೊಂಡಂತೆ ಕಾಣುತ್ತಿದ್ದರು. ಅಂತಹ ರಾಜೀವಕ್ಕ ಒಂದು ದಿನ ಬಾವಿಯಲ್ಲಿ ಹೆಣವಾಗಿದ್ದರು ಎಂಬುದನ್ನು ಕೇಳಿದಾಗ ನನ್ನ ದುಃಖಕ್ಕೆ ಪಾರವಿರಲಿಲ್ಲ. ಊರಿನ ಬಿಲ್ಲವ ಹುಡುಗನೊಂದಿಗೆ ಶೆಟ್ಟರ ಸಮುದಾಯದ ಅವರ ಪ್ರಣಯವನ್ನು ತಿರಸ್ಕರಿಸಿದ ಹಿರಿಯರಿಗೆ ಇವರ ಸಾವಿನಿಂದ ಏನು ಲಾಭವಾಯಿತೋ ತಿಳಿಯದು. ಮದುವೆಯಾಗದೆ ಆತ್ಮಹತ್ಯೆ ಮಾಡಿಕೊಂಡರೆ ಕತೆ ಕಟ್ಟುವ ನಾಲಗೆಗೆ ಕಡಿಯಲು ಹುಲುಸಾದ ವಿಷಯಗಳಿರುತ್ತವೆ. ನನಗೆ ಅದೊಂದೂ ಅರ್ಥವಾಗದ ಪ್ರಾಯ. ನನ್ನನ್ನು ಹೆಣ ನೋಡಲೂ ಬಿಡದೆ ಪ್ರತಿಬಂಧಿಸಿದ್ದಳು ಸುಶೀಲಕ್ಕ. ಮನುಷ್ಯನ ಎಲ್ಲ ಸಂಬಂಧಗಳಲ್ಲಿ ಅತ್ಯಂತ ಪವಿತ್ರವಾದ ಸಂಬಂಧ ಪ್ರೇಮದ್ದು. ಗಂಡಸಿಗೆ ಪ್ರೇಮ ಜೀವನದ ಒಂದು ಭಾಗ ಮಾತ್ರ. ಆದರೆ ಹೆಂಗಸಿಗೆ ಜೀವನವೇ ಪ್ರೇಮವಾಗಿರುವುದರಿಂದ ಪ್ರೇಮದಿಂದ ತಿರಸ್ಕೃತಳಾದರೆ ಆಕೆಗೆ ಬದುಕೇ ಶೂನ್ಯವೆನಿಸುತ್ತದೆ. ಹೀಗೆ ಪ್ರೇಮಕ್ಕಾಗಿ ಪ್ರಾಣ ತೆತ್ತ ಗಂಡು ಹೆಣ್ಣುಗಳು ಆಗಲೂ ಇದ್ದರು. ಈಗಲೂ ಇದ್ದಾರೆ. ಅನಾದಿ ಕಾಲದಿಂದಲೂ ಪ್ರೇಮಿಸುವವರಿರುವುದರಿಂದಲೇ ಜಗತ್ತು ಚೈತನ್ಯಶೀಲವೂ ವರ್ಣರಂಜಿತವೂ ಆಗಿದೆ.

(ಮುಂದುವರಿಯಲಿದೆ)