(ಬಿ.ಎಂ ರೋಹಿಣಿಯವರ ಧಾರಾವಾಹಿ ಆತ್ಮಕಥಾನಕ – ದೀಪದಡಿಯ ಕತ್ತಲೆ ಭಾಗ ಐದು)

ಈ ಬಿಕರ್ನಕಟ್ಟೆಯಲ್ಲಿ ಹಲವಾರು ಕಟ್ಟೆಗಳಿದ್ದು ವರ್ಷಕ್ಕೊಮ್ಮೆ ಕದ್ರಿ ದೇವಸ್ಥಾನದ ಜಾತ್ರೆಯ ಸಮಯದಲ್ಲಿ ಉತ್ಸವ ಮೂರ್ತಿಯನ್ನು ಈ ಕಟ್ಟೆಗಳಲ್ಲಿರಿಸಿ ಪೂಜೆ ಮಾಡಲಾಗುತ್ತಿದೆ. ರಸ್ತೆ ಅಗಲೀಕರಣದಿಂದಾಗಿ ಆ ದೊಡ್ಡ ಕಟ್ಟೆಗಳು ಈಗ ಕೇವಲ ಪೀಠಗಳಾಗಿ ಉಳಿದುಕೊಂಡಿವೆ.

ನಾವು ಚಿಕ್ಕಂದಿನಲ್ಲಿ ಕೇಳಿದ ಕತೆಯಂತೆ ಬಿಕ್ಕನಾಯ್ಕನೆಂಬವನು ಅಲ್ಲಿನ ಕಟ್ಟೆಯಲ್ಲಿ ದಾರಿಹೋಕರಿಗೆಲ್ಲ ನೀರು ಸರಬರಾಜು ಮಾಡುತ್ತಿದ್ದನಂತೆ. ಬಿಕ್ಕನಾಯ್ಕನ ಕಟ್ಟೆ ಬಿಕ್ಕನ ಕಟ್ಟೆಯಾಯಿತು ಎಂದು ಹೇಳುತ್ತಿದ್ದರು. ಬಿಕ್ಕನ ಕಟ್ಟೆಯಾಗಬೇಕಿದ್ದುದು ಬಿಕರ್ನಕಟ್ಟೆ ಹೇಗಾಯ್ತು ಎಂದು ಗೊತ್ತಿಲ್ಲ. ಇನ್ನೊಂದು ಕತೆಯ ಪ್ರಕಾರ ಇಲ್ಲಿನ ಕಟ್ಟೆಯಲ್ಲಿ ಬಂಗರಸನನ್ನು ತಂದು ನಿಲ್ಲಿಸಿ ನ್ಯಾಯ ತೀರ್ಮಾನ ಮಾಡಿ ಸಮೀಪದ ಬಂಗರ ಪದವಿನಲ್ಲಿ ಗಲ್ಲಿಗೇರಿಸಿದರೆಂದೂ ಹೇಳುತ್ತಾರೆ. ಅಲ್ಲಿ ಇರುವ ಒಂದು ಕಟ್ಟೆಯಲ್ಲಿರುವ ಕಲ್ಲಿನಲ್ಲಿ ಭೀಕರ ನ್ಯಾಯ ಕಟ್ಟೆ ಎಂಬ ಬರಹವಿದೆ. ಭೀಕರ ನ್ಯಾಯ ಕಟ್ಟೆಯೇ ಬಿಕರ್ನಕಟ್ಟೆಯಾಯಿತೆಂದು ಹೇಳುತ್ತಾರೆ. ಆದರೆ ನನ್ನ ಅಪ್ಪನ ತಿಳುವಳಿಕೆಯಂತೆ ಬ್ರಿಟೀಷರು ಬಂಗರಸನನ್ನು ಗಲ್ಲಿಗೇರಿಸುವ ಮೊದಲೇ ಈ ಸ್ಥಳಕ್ಕೆ ಬಿಕರ್ನಕಟ್ಟೆ ಎಂಬ ಹೆಸರಿತ್ತು. ಹಾಗಾದರೆ ಭೀಕರ ನ್ಯಾಯಕಟ್ಟೆ ಎಂದು ಶಿಲೆಯಲ್ಲಿ ಬರೆಸಿದವರಾರು? ಗೊತ್ತಿಲ್ಲ.

ಬಿಕರ್ನಕಟ್ಟೆಯ ಪಕ್ಕದ ಓಣಿಗೆ ನಾಯ್ಗರ ಲೇನ್ ಎಂಬ ಹೆಸರಿದೆ. ಆ ಓಣಿಗೆ ಹೆಸರು ಬಂದದ್ದು ಅಲ್ಲಿನ ಶೆಟ್ಟರ ಸಮುದಾಯದ ಮನೆಯಿಂದ ಎಂದು ಹೇಳುತ್ತಾರೆ. ನಾಯ್ಗ ಎಂಬ ಹೆಸರು ಪ್ರಾಚೀನ ಕಾಲದಿಂದಲೂ ಬಿಲ್ಲವ ಸಮುದಾಯಕ್ಕೆ ಇರುವುದು ಚರಿತ್ರೆಯಲ್ಲಿ ದಾಖಲಾಗಿದೆ. ಇಲ್ಲಿ ಮೊದಲು ಬಿಲ್ಲವರ ಮನೆತನವಿದ್ದು ಮತ್ತೆ ಶೆಟ್ಟರ ಸಮುದಾಯಕ್ಕೆ ಹಸ್ತಾಂತರವಾಗಿರಬಹುದೇ? ಇದು ನನ್ನ ಊಹೆಯಷ್ಟೇ. ಯಾಕೆಂದರೆ ನನ್ನ ಅಧ್ಯಯನದ ಕ್ಷೇತ್ರಕಾರ್ಯದಲ್ಲಿ ಬಿಲ್ಲವ ಮನೆತನಗಳು ಶೆಟ್ಟರಿಗೂ, ಶೆಟ್ಟರ ಮನೆತನಗಳು ಬಿಲ್ಲವರಿಗೂ ಹಸ್ತಾಂತರವಾದ ಸಾಕಷ್ಟು ಉದಾಹರಣೆಗಳಿವೆ. ಈ ಓಣಿಯಲ್ಲಿ ಒಂದು ಕಿ.ಮೀ. ಸಾಗಿದರೆ ಕೆಳಗೆ ಇದ್ದ ಬೈಲುಗದ್ದೆಯು ಸಮೃದ್ಧ ಬೇಸಾಯದ ಭೂಮಿಯಾಗಿತ್ತು. ಈಗ ಅದು ನೆನಪಷ್ಟೇ.

ಬಿರ್ಕನಕಟ್ಟೆಯಲ್ಲಿ ಒಂದು ಮಸೀದಿ ಇದೆ. ಅದರ ಪಕ್ಕದಲ್ಲಿ ಮಾಡಿಲ್ಲದ ಐದಾರು ಸಣ್ಣ ಗೋಪುರವಿರುವ ಕಟ್ಟಡವಿದೆ. ಈ ಸ್ಥಳಕ್ಕೆ ಹಿಂದೆ ಮಕಾನ್ ಎಂದು ಹೆಸರಿತ್ತು. ಈಗ ಜಯಶ್ರೀ ಗೇಟ್ ಎಂದು ಹೆಸರಾದ ಮೇಲೆ ಮಕಾನ್ ಹೆಸರು ಜನಮಾನಸದಿಂದ ಮರೆತೇಹೋಗಿದೆ. ಮಕಾನ್ ಎಂದರೆ ಸೂಫಿ ಸಂತರು ಊರೂರು ಸುತ್ತುವಾಗ ಬಂದು ನಿಲ್ಲುವ ಸ್ಥಳವೆಂದು ರಹಮತ್ ತರೀಕೆರೆಯವರ ಪುಸ್ತಕ ಓದಿದ್ದರಿಂದ ತಿಳಿಯಿತು. ಸೂಫಿ ಸಂತರನ್ನು ಅವರ ಅನುಯಾಯಿಗಳನ್ನು ಇಸ್ಲಾಂ ಮತದಿಂದಲೇ ಬಹಿಷ್ಕರಿಸುವ ಮನೋಭಾವ ಹೆಚ್ಚುತ್ತಿರುವುದರಿಂದ ಈ ಮಕಾನ್ ತನ್ನ ಪ್ರಾಚೀನ ಪ್ರಾಮುಖ್ಯತೆಯನ್ನು ಕಳೆದುಕೊಂಡು ಜೀರ್ಣಾವಸ್ಥೆಯಲ್ಲಿದೆ.

ನಮ್ಮ ಕಾಲದಲ್ಲಿ ಕಪುಚಿನ್ ಚರ್ಚ್ ಎಂದಿದ್ದ ಇಗರ್ಜಿ ಬಾಲಯೇಸು ಮಂದಿರವಾಗಿ ಬಿಕರ್ನಕಟ್ಟೆಯಲ್ಲಿ ಪ್ರಸಿದ್ಧವಾದದ್ದು ಇತ್ತೀಚಿನ ಬೆಳವಣಿಗೆ. ಹೀಗೆ ಬಿಕರ್ನಕಟ್ಟೆಯ ಆ ಮನೆಯ ಪರಿಸರವಿದೆಯಲ್ಲಾ ಅದು ಒಂದು ಪಾಠಶಾಲೆ ಇದ್ದಂತೆ. ಒಂದು ವಿಶ್ವವಿದ್ಯಾಲಯವಿದ್ದಂತೆ. ಹದಿಹರೆಯದ ನನ್ನ ಬದುಕಿಗೆ ಕನಸುಗಳನ್ನು ತುಂಬಿದ್ದು ಅಲ್ಲಿ. ಆ ಕನಸುಗಳ ಬೆನ್ನು ಹತ್ತಿ ನಡೆವ ಚೈತನ್ಯ ತುಂಬಿದ ಸ್ಥಳವದು. ಶೀಲ, ಚಾರಿತ್ರ ಇತ್ಯಾದಿಗಳ ಬಗ್ಗೆ ವಿಪರೀತ ಕಾಳಜಿಯಿರುವ ಒಂದು ಮಧ್ಯಮ ವರ್ಗವನ್ನು ನಾವು ಹೆಚ್ಚಾಗಿ ಸಮಾಜದಲ್ಲಿ ಕಾಣುತ್ತೇವೆ. ಇಲ್ಲಿ ಹಾಗಲ್ಲ. ಬಜ್ಜೋಡಿಯ ಹುಲಿಯನ್ನು ಡಾ. ಉಮನಾಥ ಸುವರ್ಣರು ಕೊಂದ ಮೇಲೆ ಆ ಗುಡ್ಡೆ ಪ್ರೇಮಿಗಳ ವಿಹಾರತಾಣವಾಗಿಬಿಟ್ಟಿತ್ತು.

ಎಲ್ಲವೂ ಖುಲ್ಲಂಖುಲ್ಲಾ. ಬದುಕನ್ನು ಬಂದ ಹಾಗೆ ಸ್ವೀಕರಿಸುವ ಮುಖವಾಡವಿಲ್ಲದೆ ಬಾಳುವ ಮಂದಿ ನಮ್ಮ ನೆರೆಕರೆಯಲ್ಲಿದ್ದರು. ಕುಡಿದು ರಸ್ತೆಯಲ್ಲಿ ಬೀಳುವ ಹೆಂಗಸರೂ ಇದ್ದರು, ಗಂಡಸರೂ ಇದ್ದರು. ಮನುಷ್ಯನ ಅಧಃಪತನಕ್ಕೆ ಏನೇನು ದುರ್ವ್ಯಸನಗಳಿರಬೇಕೋ ಆ ಎಲ್ಲಾ ವ್ಯಸನಗಳಿಂದ ಪೀಡಿತರಾದ ಮಂದಿ ನಮ್ಮ ಸುತ್ತಮುತ್ತ ಇದ್ದರು. ಸಿಟ್ಟು ಬಂದಾಗ ಜಗಳಾಡುವುದು, ಹೊಡೆದಾಡಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿತ್ತು. ಮೇಲ್ನೋಟಕ್ಕೆ ತೀರಾ ಒರಟರೂ, ಕುಡುಕರೂ ಎಂದು ಕಾಣಿಸಿಕೊಂಡವರು ಆಂತರ್ಯದಲ್ಲಿ ತುಂಬಾ ಸಂವೇದನಾಶೀಲರಾಗಿದ್ದರು. ಸುಗುಣ, ಕೂಸಕ್ಕ, ಕಮಲ, ಪುಷ್ಪ, ಯಮುನ ಮುಂತಾದ ಹೆಣ್ಣುಮಕ್ಕಳು ಯಾವ ಗಂಡೂ ಮಾಡದಷ್ಟು ಕಾರ್‌ಬಾರುಗಳನ್ನು ಮಾಡಿ ಸಮಾಜದ ಜನ ಹುಬ್ಬೇರುವಂತೆ ಮಾಡಿದವರು ಅವರು. ನನ್ನ ಬಾಳು ನನ್ನದು. ನನಗಿಷ್ಟ ಬಂದಂತೆ ನಾನು ಬದುಕುತ್ತೇನೆಂದು ಸವಾಲು ಹಾಕಿದ್ದಲ್ಲದೆ ಹಾಗೆ ಬದುಕಿ ಮಾದರಿಯಾದವರೂ ಇದ್ದರು. ಬಾಳು ಚಿಂದಿ ಚಿಂದಿಯಾಗಿ ದುರಂತವನ್ನಪ್ಪಿದವರೂ ಇದ್ದರು. ನನ್ನ ಸುತ್ತಮುತ್ತ ಇದ್ದ ಗಂಡಸರೇ ದುರ್ಬಲರಂತೆ ಕಂಡುಬರುತ್ತಿದ್ದರು ವಿನಃ ಹೆಣ್ಣುಮಕ್ಕಳಲ್ಲ. ಹೆಣ್ಣುಮಕ್ಕಳು ತಮ್ಮ ಜೀವನ ಸಂಗಾತಿಯ ಆಯ್ಕೆಯಲ್ಲಿ ಯಾರ ಅಪ್ಪಣೆಯನ್ನೂ ಕಾಯದೆ ಮುಂದುವರಿದು ಗೆದ್ದವರು ಬಹಳ ಮಂದಿ. ಅವರ ಜೀವನಪ್ರೀತಿ ಮತ್ತು ಜೀವನೋಲ್ಲಾಸಗಳು ಯುವಕರನ್ನು ನಾಚಿಸುವಂತಿದ್ದುವು. ಬದುಕಿನ ಸವಾಲುಗಳನ್ನು ಎದುರಿಸುವ ಧೈರ್ಯ ಕಿಂಚಿತ್ತಾದರೂ ನನ್ನಲ್ಲಿ ಮೂಡಿದ್ದರೆ ಅದು ನನ್ನ ಈ ಪರಿಸರದಿಂದ. ಅವರಂತೆ ಕೈ ಬಾಯಿಗಳಲ್ಲಿ ಸಾಮರ್ಥ್ಯ ತೋರಿಸುವ ಶಕ್ತಿ ನನಗಿರಲಿಲ್ಲವಾದರೂ ಮಾನಸಿಕವಾಗಿ ನಾನು ಗಟ್ಟಿಗೊಳ್ಳಲು ನೆರವಾಯಿತು.

ಆರನೆಯ ತರಗತಿಗೆ ಬಲ್ಮಠದ ಸರಕಾರಿ ಶಾಲೆಗೆ ನನ್ನನ್ನು ಸೇರಿಸಲಾಯಿತು. ನಾನು ಮತ್ತು ವಿದ್ಯುಲ್ಲತಾ ಎಂಬ ಗೆಳತಿ ಇಬ್ಬರೂ ಬಿಕರ್ನಕಟ್ಟೆಯಿಂದ ಪ್ರತಿದಿನ ಬಲ್ಮಠದ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದುದನ್ನು ನೆನೆದಾಗ ಆಶ್ಚರ್ಯವಾಗುತ್ತದೆ.

ಈಗ ಕದ್ರಿ ಮಾರ್ಕೆಟ್ ಇರುವ ಜಾಗದಲ್ಲಿ ನಗರದ ಎಲ್ಲಾ ಮನೆಗಳ ಮಲವನ್ನು ಹೊತ್ತು ತಂದು ಹಾಕುವ ಗುಂಡಿ ಇತ್ತು. ಬೆಳಗ್ಗೆ ನಾವು ಆ ದಾರಿಯಲ್ಲಿ ಹೋಗುವಾಗ ಅವುಗಳನ್ನು ಲಾರಿಗಳಲ್ಲಿ ತುಂಬಿಸಿ ವಾಮಂಜೂರಿನ ಗುಂಡಿಗೆ ಕೊಂಡೊಯ್ಯುತ್ತಿದ್ದರು. ತಲೆ ಮೇಲೆ ಬಾಲ್ದಿಯಲ್ಲಿ ಮಲ ಹೊತ್ತುಕೊಂಡು ಹೋಗುವವರನ್ನು ಕಂಡಾಗ ಆಶ್ಚರ್ಯವಾಗುತ್ತಿತ್ತು. ನಮ್ಮ ಮಲದ ಬಗ್ಗೆ ನಮಗೇಕಿಷ್ಟು ಹೇಸಿಗೆಯ ಭಾವ. ಅವರಿಗೇಕೆ ಹಾಗೆ ಅನಿಸುವುದಿಲ್ಲ? ಕೈಯಲ್ಲಿ ಒಂದು ತಗಡಿನ ತುಂಡಿನಿಂದ ಮಲ ಬಾಚುವ ಅವರ ಕಾಯಕದ ಬಗ್ಗೆ ನೂರಾರು ಪ್ರಶ್ನೆಗಳು ಏಳುತ್ತಿದ್ದವು. ಖ್ಯಾತ ಸಾಹಿತಿ ದೇವನೂರು ಮಹಾದೇವ ಅವರು ಮಲ ಬಾಚುವವರಲ್ಲಿ ಇದೇ ಪ್ರಶ್ನೆ ಕೇಳಿದಾಗ ನಮ್ಮ ಮಕ್ಕಳ ಮಲದ ಬಗ್ಗೆ ನಮಗೇಕೆ ಹೇಸಿಗೆಯಾಗಬೇಕು ಎಂದರಂತೆ. ಹೌದಲ್ಲಾ, ತಾಯಿಗೆ ಮಗುವಿನ ಮಲವೆಂದಾದರೂ ಅಸಹ್ಯವೆನಿಸಿದೆಯೇ? ಇಡೀ ಜನಸಮುದಾಯವನ್ನೇ ಮಾತೃತ್ವದ ಭಾವದಿಂದ ಕಾಣುವ ಅವರ ಹೃದಯ ಶ್ರೀಮಂತಿಕೆಗೆ ಶಿರ ಬಾಗಲೇ ಬೇಕು. ಆದರೆ ಅವರನ್ನು ಯಾವ ಭಾವದಿಂದ ಕಾಣುತ್ತೇವೆ ಎಂಬುದನ್ನು ನಮಗೆ ನಾವೇ ನಮ್ಮ ಅಂತಃಕರಣಕ್ಕೆ ಕೇಳಿಕೊಳ್ಳಬೇಕು.

ಬಲ್ಮಠದ ಸರಕಾರಿ ಶಾಲೆಯಲ್ಲಿ ಆಗ ಸಾವಿರಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದರು. ವೆಂಕಮ್ಮಬಾಯಿ ಟೀಚರು ನನ್ನಂತಹ ಕೀಳರಿಮೆಯಿಂದ ನರಳುತ್ತಿದ್ದ ಮಕ್ಕಳನ್ನು ಪಕ್ಕದಲ್ಲಿ ಕುಳ್ಳಿರಿಸಿ ತಲೆಸವರಿ, ಬೆನ್ನು ತಟ್ಟಿ ಸ್ಪೂರ್ತಿ ತುಂಬುತ್ತಿದ್ದರು. ಆರನೇ ತರಗತಿಯಲ್ಲಿ ಇಂಗ್ಲಿಷ್ ಭಾಷೆ ಕಲಿಕೆ ನಮಗೆ ಪ್ರಾರಂಭವಾಗುತ್ತಿತ್ತು. ಗಡಿಗೆ ಮುಖದ ಒಬ್ಬ ಟೀಚರು ಇಂಗ್ಲಿಷ್ ಕಲಿಸುತ್ತಿದ್ದರು. ಆ ಟೀಚರರ ಹಾವಭಾವದಿಂದಾಗಿಯೋ ಏನೋ ನಾವು ಇಂಗ್ಲೀಷನ್ನು ದ್ವೇಷಿಸುವಂತಾಗಿತ್ತು. ೧೯೫೫-೫೬ರಲ್ಲಿ ಇದ್ದ ಆ ಶಾಲೆಯ ಗತ್ತು ಗಾಂಭೀರ್ಯ ಈಗ ಉಳಿದಿಲ್ಲ. ಶಾಲೆಯ ಅಂಗಳದ ಸುತ್ತ ಕಟ್ಟಡಗಳಾಗಿವೆ. ಆ ಜಾಗದಲ್ಲಿ ನಾವು ಹಿಂದೆ ತೋಟಗಾರಿಕೆ ಮಾಡುತ್ತಿದ್ದುದು ನೆನಪಾಗುತ್ತದೆ. ೧೯೬೨ರಲ್ಲಿ ನಾನು ಶಿಕ್ಷಕಿ ತರಬೇತಿ ಪಡೆಯುವಾಗಲೂ ಆ ಶಾಲೆಯ ಕೀರ್ತಿ ಎತ್ತರದಲ್ಲಿತ್ತು. ಮಕ್ಕಳ ಕೊರತೆ ಎಂಬ ಸಮಸ್ಯೆಯೇ ಇರಲಿಲ್ಲ. ಈಗ ಅಲ್ಲಿನ ಕನ್ನಡ ಪ್ರಾಥಮಿಕ ಶಾಲೆಗಳ ಕೋಣೆಗಳು ಬಿಕೋ ಎನ್ನುತ್ತಿವೆ.

ಏಳನೆಯ ತರಗತಿಗೆ ಅಪ್ಪ ನನ್ನನ್ನು ಕುಲಶೇಖರದ ಶಾಲೆಗೆ ಸೇರಿಸಿದರು. ಇದು ಮನೆಗೆ ಹತ್ತಿರ ಎಂಬ ಒಂದು ಕಾರಣವಾದರೆ ಒಂದಲ್ಲ ಒಂದು ಅನಾರೋಗ್ಯ ಸಮಸ್ಯೆಗಳು ನನ್ನನ್ನು ಕಾಡುತ್ತಿದ್ದುವು ಎಂಬುದು ಇನ್ನೊಂದು ಕಾರಣ. ಬಲ್ಮಠ ಶಾಲೆಯ ಮಕ್ಕಳ ಸಾಗರದಲ್ಲಿ ನಾನು ಕಳೆದು ಹೋಗುತ್ತೇನೇನೋ ಎಂಬ ಭಾವ ನನ್ನನ್ನು ಕಾಡುತ್ತಿತ್ತು. ಕುಲಶೇಖರ ಶಾಲೆ ಪ್ರಾರಂಭವಾಗಿ (೧೯೪೩) ಕೆಲವೇ ವರ್ಷಗಳಾಗಿದ್ದವು.

ಆಗ ಸೈಂಟ್ ಆಗ್ನೆಸ್ ಶಾಲೆಗೆ ಶ್ರೀಮಂತರ ಮಕ್ಕಳು ಮಾತ್ರ ಹೋಗುವ ಶಾಲೆಯೆಂಬ ಭ್ರಮೆ ಸಮಾಜದಲ್ಲಿತ್ತು. ಸೇಕ್ರೆಡ್ ಹಾರ್ಟ್ಸ್ ಶಾಲೆ ಬೆಥನಿ ಸಿಸ್ಟರ್‍ಸ್‌ಗಳಿಂದ ಪ್ರಾರಂಭಿಸಲ್ಪಟ್ಟ ಶಾಲೆ. ಬೆಥನಿ ಭಗಿನಿಯರು ಹಿಂದುಳಿದ ಬಡ ಹೆಣ್ಮಕ್ಕಳಿಗೆ ಮತ್ತು ದಲಿತರಿಗಾಗಿಯೇ ಶಾಲೆಗಳನ್ನು ಸ್ಥಾಪಿಸಬೇಕೆಂಬ ಉದ್ದೇಶವಿಟ್ಟುಕೊಂಡು ಶೈಕ್ಷಣಿಕ ಸೇವೆಯನ್ನು ಪ್ರಾರಂಭಿಸಿದ್ದರು. ಬೆಥನಿ ಸಂಸ್ಥೆಯ ಸ್ಥಾಪಕರಾದ ರೆವರೆಂಡ್ ಫಾದರ್ (ರೆ.ಫಾ|) ಸಿ. ಮಸ್ಕರೇಞಸ್ ಅವರು ನಾನಲ್ಲಿ ಕಲಿಯುತ್ತಿರುವಾಗಲೇ ಶಾಲೆ ಭೇಟಿ ಕೊಟ್ಟು ನಮ್ಮನ್ನೆಲ್ಲ ಹರಸಿ ಮಾತಾಡಿದ್ದು ನೆನಪಿದೆ.

ದೂರದ ಊರಿನ ಹೆಣ್ಣುಮಕ್ಕಳಿಗಾಗಿ ಹಾಸ್ಟೆಲ್ ಇತ್ತು. ನಿರ್ಗತಿಕ ಮಕ್ಕಳಿಗಾಗಿ ಅನಾಥಾಶ್ರಮವೂ ಇತ್ತು. ಶಿಕ್ಷಣವಂಚಿತ ಹೆಣ್ಣುಮಕ್ಕಳು ಯೋಗ್ಯ ಶಿಕ್ಷಣ ಪಡೆಯಬೇಕೆಂಬ ಸದುದ್ದೇಶದಿಂದ ಅಂದು ಈ ಶಾಲೆ ಪ್ರಾರಂಭವಾಯಿತು. ಶಿಕ್ಷಕಿಯರು ಹೆಚ್ಚಿನವರು ಕನ್ಯಾಸ್ತ್ರೀಯರು. ಒಬ್ಬಿಬ್ಬರು ಹಿಂದೂ ಟೀಚರುಗಳಿದ್ದರು. ಕನ್ನಡ, ಹಿಂದಿ, ಡ್ರಾಯಿಂಗ್, ಸಂಗೀತ ಮುಂತಾದ ಪಾಠಗಳಿಗೆ ಶಿಕ್ಷಕರಿದ್ದರು. ಆಗ ತರಗತಿಯಲ್ಲಿ ಕ್ರೈಸ್ತ ಮಕ್ಕಳ ಸಂಖ್ಯೆಯೇ ಹೆಚ್ಚಿದ್ದು ಹಿಂದೂ ಮಕ್ಕಳ ಸಂಖ್ಯೆ ಕಡಿಮೆಯಿತ್ತು. ನಾನು ಅಲ್ಲಿಗೆ ಸೇರಿದ ಪ್ರಾರಂಭದಲ್ಲಿ ಹಿಂದೂ ದೇವರ ಹೆಸರುಳ್ಳ ಹಾಡುಗಳನ್ನು ಹಾಡುವುದಕ್ಕೆ ನಿಷೇಧವಿತ್ತು. ಮುಂದಿನ ವರ್ಷಗಳಲ್ಲಿ ಹಿಂದೂ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗತೊಡಗಿದ ಮೇಲೆ ಈ ನಿಷೇಧ ರದ್ದಾಯಿತು. ಶಾಲೆಯಲ್ಲಿ ಅವರ ಪ್ರಾರ್ಥನೆಯನ್ನು ನಾವು ಹಾಡುತ್ತಿದ್ದೆವು. ಅವರ ಹಾಡುಗಳು, ಸ್ತೋತ್ರಗಳೆಲ್ಲಾ ನಮಗೆ ಬಾಯಿಪಾಠವಿತ್ತು. ನಾವು ಅವರ ಜೊತೆ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಬೇಕೆಂದು ಕಡ್ಡಾಯವೇನೂ ಇರಲಿಲ್ಲವಾದರೂ ನಾವು ಹಿಂದೂ ಮಕ್ಕಳೆಲ್ಲರೂ ಅವರ ಜೊತೆ ಸೇರಿ ಪ್ರಾರ್ಥನೆ ಮಾಡುವುದು ನಮಗೆ ಸಂತೋಷದ ವಿಷಯವಾಗಿತ್ತು. ಚರ್ಚಿಗೆ ಮೋಂಬತ್ತಿ ಹರಕೆ ಹೇಳುವುದು, ಚರ್ಚಿನ ಪೂಜೆಯ ಸಮಯದಲ್ಲಿ ಭಾಗವಹಿಸುವುದು, ಚರ್ಚಿನ ಹಬ್ಬ ಸಾಂತ್‌ಮಾರಿಗೆ, ಕ್ರಿಸ್‌ಮಸ್‌ಗೆ ಗೆಳತಿಯರ ಜೊತೆಗೆ ಚರ್ಚಿನ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ನಮಗೆ ಆನಂದದ ವಿಷಯವಾಗಿತ್ತು. ಅಷ್ಟು ವರ್ಷಗಳ ಅವರೊಂದಿಗಿನ ಒಡನಾಟದಲ್ಲಿ ಅವರು ನಮಗೆ ಅನ್ಯರು ಎಂಬ ಭಾವನೆ ಮೂಡಿರಲಿಲ್ಲ. ಅಂತಹ ವಾತಾವರಣ ಅಂದಿನ ಸಮಾಜದಲ್ಲಿತ್ತು.

ಆಗ ಐದನೇ ತರಗತಿಯ ನಂತರ ೧ನೇ ಫೋರ್ಮ್, ೨ನೇ ಫೋರ್ಮ್…, ಎಂದು ಹೇಳುತ್ತಿದ್ದರು. ಎಸ್.ಎಸ್.ಎಲ್.ಸಿ.ಯೆಂದರೆ ೬ನೇ ಫೋರ್ಮ್. ನಾನು ೨ನೇ ಫೋರ್ಮ್‌ನಲ್ಲಿದ್ದಾಗ ದುಲ್ಸಿನ್ ಎಂಬ ಹುಡುಗಿ ನಮ್ಮ ಜೊತೆ ಕಲಿಯುತ್ತಿದ್ದಳು. ಅವಳದು ವಯಸ್ಸಿಗೆ ಮೀರಿದ ಬೆಳವಣಿಗೆ. ಗಟ್ಟಿಮುಟ್ಟಾದ ಸುದೃಢ ಶರೀರ. ತರಗತಿಯಲ್ಲಿ ಹಿಂದಿನ ಬೆಂಚಿನಲ್ಲೇ ಅವಳ ಖಾಯಂ ವಾಸ್ತವ್ಯ. ಪಾಠಕ್ಕೆ ಸಂಬಂಧಿಸಿದಂತೆ ಅವಳು ಆಸಕ್ತಿ ವಹಿಸುತ್ತಿರಲಿಲ್ಲ. ಆದರೆ ಆಟದಲ್ಲಿ ಮಾತ್ರ ಬಹಳ ಚುರುಕಾಗಿದ್ದಳು. ಆಗಾಗ ಶಾಲೆ ತಪ್ಪಿಸುತ್ತಿದ್ದಳು. ಒಂದು ದಿನ ದುಲ್ಸಿನ್ ಹೆತ್ತಿದ್ದಾಳಂತೆ ಎಂಬ ಸುದ್ದಿ ಕೇಳಿ ನಮಗೆ ಬಿಡಿ, ಶಾಲೆಯ ಶಿಕ್ಷಕ ವರ್ಗಕ್ಕೂ ಸಖೇದಾಶ್ಚರ್ಯ. ಅವಳ ಬಗ್ಗೆ ಶಿಕ್ಷಕವೃಂದದವರಿಗೂ ಸಂಶಯ ಬಾರದ್ದು ವಿಶೇಷ. ಆಕೆ ಸೊಂಟಕ್ಕೆ ಬೆಲ್ಟ್ ಹಾಕದೆ ಒಂದು ಸಡಲ ಸಡಿಲವಾದ ಅಂಗಿ ಹಾಕಿಕೊಂಡು ಬರುತ್ತಿದ್ದು ಹಿಂದಿನ ಬೆಂಚಿನಲ್ಲೇ ಕುಳಿತುಕೊಳ್ಳುತ್ತಿದ್ದುದರಿಂದ ಶಿಕ್ಷಕರಿಗೂ ಗಮನಕ್ಕೆ ಬಂದಿರಲಿಲ್ಲವೆಂದು ಕಾಣುತ್ತದೆ. ಆಟದ ಪಿರೇಡಿಗೆ ಆಗ ಯಾರೂ ಶಿಕ್ಷಕರು ನಮ್ಮ ಜೊತೆ ಬಾರದೆ ನಾವೇ ಆಡುತ್ತಿದ್ದುದರಿಂದ ಗೊತ್ತಾಗದೆ ಇರಬಹುದು. ಈ ಸುದ್ದಿಯಾಗುವ ಸಮಯದಲ್ಲಿ ಅವಳು ಆಟಕ್ಕೂ ಬಾರದೆ ತಪ್ಪಿಸಿಕೊಳ್ಳುತ್ತಿದ್ದಳು. ನಮ್ಮ ಶಿಕ್ಷಕರು ತಮ್ಮ ಮೇಲೆಯೇ ಕೆಟ್ಟ ಆರೋಪ ಬಂತೆಂಬಂತೆ ಕುಗ್ಗಿಹೋಗಿದ್ದರು. ಆದರೂ ಅವಳ ಮನೆಗೆ ಹೋಗಿ ವಿಚಾರಿಸಿದಾಗ ತಿಳಿದ ಸಂಗತಿ ಇಷ್ಟು. ಅವಳಿಗೆ ತಂದೆ ತಾಯಿಗಳಿಲ್ಲ. ಚಿಕ್ಕಮ್ಮ ಅವಳನ್ನು ತಂದು ಮನೆಯಲ್ಲಿರಿಸಿ ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು. ಮನೆಯೊಳಗಿರುವ ಯಾರೋ ಬಂಧುಗಳಿಂದಲೇ ಅವಳಿಗೆ ಈ ಉಡುಗೊರೆ ಲಭಿಸಿತ್ತು! ಆಕೆಗೆ ಮನೆಯ ಹೊರಗೆ ಯಾರೊಂದಿಗೂ ಸಂಕರ್ಪವೇ ಇರಲಿಲ್ಲವೆಂದು ಗೊತ್ತಾಯಿತು. ಮತ್ತೆ ಆಕೆಯನ್ನು ಎಲ್ಲೋ ದೂರದ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಯಿತೆಂದೂ, ಆಮೇಲೆ ಯಾವುದೋ ಆಶ್ರಮದಲ್ಲಿ ಅವಳನ್ನು ಸೇರಿಸಲಾಯಿತೆಂದೂ ಸುದ್ದಿ ಬಂತು. ಇಂತಹ ಘಟನೆಗಳಾದಾಗ ಕ್ರೈಸ್ತ ಸಮಾಜದ ಬಂಧುಗಳು ಸ್ಪಂದಿಸುವ ರೀತಿಗೂ ಹಿಂದೂ ಸಮಾಜದವರು ಸ್ಪಂದಿಸುವ ರೀತಿಗೂ ವ್ಯತ್ಯಾಸವಿದೆ. ಅವರದೇ ಆದ ಆಸ್ಪತ್ರೆಗಳು ಮತ್ತು ಅನಾಥಾಶ್ರಮಗಳು ಇಂತಹ ಶೋಷಿತರಿಗೆ ಬದುಕುವ ದಾರಿಯನ್ನು ತೋರಿಸುತ್ತವೆ. ನಿರಪರಾಧಿಯಾದ ದುಲ್ಸಿನ್‌ನನ್ನು ಎಲ್ಲೋ ಕಳಿಸಿದರು. ಅಪರಾಧಿ ಮನೆಯೊಳಗೆ ಆರಾಮವಾಗಿ ಉಳಿದ. ಜೀವನವನ್ನು ಹಿಂದೆ ನೋಡಿ ತಿಳಿದುಕೊಳ್ಳಬೇಕಂತೆ, ಮುಂದೆ ನೋಡಿ ಬದುಕಬೇಕಂತೆ. ಜೀವನ ದುಲ್ಸಿನ್‌ನ ಬದುಕಿನೊಂದಿಗೆ ಕಣ್ಣುಮುಚ್ಚಾಲೆಯಾಡಿತು. ಪಶ್ಚಾತ್ತಾಪದಿಂದ ಪರಿಶುದ್ಧಳಾದ ಆಕೆ ಹೊಸ ಬದುಕನ್ನು ಕಟ್ಟಿಕೊಂಡಿರಬಹುದು. ಆ ವಿವರಗಳ್ಯಾವುವೂ ನಮಗೆ ತಿಳಿದಿಲ್ಲ. ಈಗ ದಿನನಿತ್ಯವೆಂಬಂತೆ ಪತ್ರಿಕೆಯಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಚಿತ್ರ ವಿಚಿತ್ರವಾದ ಸುದ್ದಿಗಳನ್ನು ಕೇಳುವಾಗಲೆಲ್ಲಾ ನನಗೆ ದುಲ್ಸಿನ್ ನೆನಪಾಗುತ್ತಾಳೆ.

ಈ ಶಾಲೆ ನನ್ನ ಕೀಳರಿಮೆಯನ್ನು ಮೆಲ್ಲ ಮೆಲ್ಲನೆ ತೊಲಗಿಸುವುದಕ್ಕೆ ಸಹಾಯ ಮಾಡಿತು. ಹೇಗೆಂದು ಗೊತ್ತಿಲ್ಲ ನನ್ನನ್ನು ಸಿಸ್ಟರ್ ಎಸ್ಪಿರಿ ತುಂಬಾ ಪ್ರೀತಿಸತೊಡಗಿದರು. ಕನ್ನಡ ಪಾಠ ಮಾಡುತ್ತಿದ್ದ ಅವರಿಗೆ ಕಷ್ಟ ಪದಗಳ ಅರ್ಥ ಮತ್ತು ರಾಮಾಯಣ ಮಹಾಭಾರತಗಳ ಕತೆಗಳೇನಾದರೂ ಗೊತ್ತಿಲ್ಲದಿದ್ದರೆ ನನ್ನನ್ನು ಕರೆದು ನಿನ್ನ ಅಪ್ಪನಲ್ಲಿ ಕೇಳಿ ಬಾ ಎಂದು ಹೇಳುತ್ತಿದ್ದರು. ನನ್ನಪ್ಪ ದೊಡ್ಡ ಪಂಡಿತ ನಾನು ಪಂಡಿತನ ಮಗಳೆಂಬ ಭಾವದಿಂದ ನನಗೆ ವಿಶೇಷ ಪ್ರೀತಿಯ ಆಸರೆ ನೀಡಿದರು. ತಂದೆಯ ಅನಾರೋಗ್ಯದ ಅರಿವಿದ್ದ ಅವರು ಒಂದು ದಿನ ಇಡೀ ಕ್ಲಾಸಿನ ಮಕ್ಕಳೆಲ್ಲರನ್ನೂ ಮೊಣಕಾಲು ಹಾಕಿಸಿ ತಂದೆಯ ಆರೋಗ್ಯಕ್ಕೋಸ್ಕರ ಪ್ರಾರ್ಥನೆ ಮಾಡಿಸಿದರು. ಶಾಲಾ ವರ್ಷದ ಕೊನೆಯಲ್ಲಿ ಮುಂದಿನ ವರ್ಷ ಶಾಲೆಗೆ ಬರಲೇಬೇಕೆಂದೂ ಆರ್ಥಿಕ ತೊಂದರೆಗಳಿದ್ದರೆ ತಮ್ಮಲ್ಲಿ ಹೇಳಬೇಕೆಂದೂ ಹರಸಿ ಬೀಳ್ಕೊಟ್ಟ ಆ ಸಿಸ್ಟರ್ ನನ್ನ ಬಾಳಿಗೆ ಬೆಳಕಾಗಿ ಬಂದರು. ಗಡಗಡ ನಡುಗುವ ಚಳಿಗಾಲವಿದ್ದರೂ ನಸುನಗುವ ವಸಂತ ಬಂದೇ ಬರುತ್ತಾನೆಂಬ ಭರವಸೆಯನ್ನು ನನ್ನಲ್ಲಿ ತುಂಬಿದ ಹಿರಿಯ ಚೈತನ್ಯ ಸಿಸ್ಟರ್ ಎಸ್ಪಿರಿ.

ಹೆಣ್ಣುಮಕ್ಕಳು ಆದರ್ಶ ಗೃಹಿಣಿಯರಾಗಲು ಏನೇನು ತಯಾರಿ ಬೇಕೋ ಅದೆಲ್ಲವನ್ನೂ ನಮ್ಮ ಶಾಲೆ ಕಲಿಸುತ್ತಿತ್ತು. ಗೃಹವಿಜ್ಞಾನವೆಂಬ ಪಾಠದಲ್ಲಿ ಮನೆವಾರ್ತೆಯ ಎಲ್ಲಾ ತರಬೇತಿಗಳನ್ನು ನೀಡಲಾಗುತ್ತಿತ್ತು. ಬಟ್ಟೆಯ ಕಲೆ ತೆಗೆಯುವ ಪ್ರಾತ್ಯಕ್ಷಿಕೆಯನ್ನು ಸಿಸ್ಟರುಗಳು ಮಾಡಿ ತೋರಿಸುತ್ತಿದ್ದುದು ನೆನಪಾಗುತ್ತದೆ. ಕಾನ್ವೆಂಟ್ ಶಾಲೆಗಳಲ್ಲಿ ಕಲಿತ ಹೆಣ್ಮಕ್ಕಳು ಬಹಳ ಫ್ಯಾಶನೇಬಲ್ ಆಗಿರುತ್ತಾರೆ ಮತ್ತು ಪಾಶ್ಚಾತ್ಯರನ್ನು ಅನುಸರಿಸುತ್ತಾರೆ ಎಂಬ ನಂಬಿಕೆ ಸಾಮಾನ್ಯ ಜನರಲ್ಲಿದೆ. ಆದರೆ ನನ್ನ ಬಾಲ್ಯ ಕಾಲದ ಆ ಸಿಸ್ಟರ್‌ಗಳ ಕಾಲದಲ್ಲಿ ನಮ್ಮ ಸ್ಕರ್ಟ್ ಮೊಣಕಾಲಿಗಿಂತ ಸ್ವಲ್ಪ ಮೇಲೇರಿದುದನ್ನು ಕಂಡ ಕೂಡಲೇ ಸಿಸ್ಟರ್‌ನವರು ಕರೆದು ಉದ್ದ ಮಾಡಲು ಆದೇಶಿಸುತ್ತಿದ್ದರು. ಆದೇಶ ಪಾಲಿಸದಿದ್ದರೆ ತಾವೇ ಆ ಮಕ್ಕಳ ಸ್ಕರ್ಟನ್ನು ಉದ್ದ ಮಾಡಿಸಿ ಕೊಡುತ್ತಿದ್ದರು. ಹೊಸ ನಮೂನೆಯ ಬ್ರಾಗಳು ಮಾರ್ಕೆಟಿಗೆ ಆಗ ತಾನೇ ಬಂದಿದ್ದುವು. ಆದರೆ ಅದನ್ನು ಸಭ್ಯರು ತೊಡಬಾರದು ಎಂಬ ಅಲಿಖಿತ ಶಾಸನವಿದ್ದಂತೆ ಇತ್ತು. ಇಡೀ ಹೈಸ್ಕೂಲಲ್ಲಿ ಜುಸ್ತಿನ್ ಎಂಬ ಹುಡುಗಿಯೊಬ್ಬಳನ್ನು ಬಿಟ್ಟು ಬೇರೆ ಯಾರೂ ಅದನ್ನು ಹಾಕುತ್ತಿರಲಿಲ್ಲ. ದಷ್ಟ ಪುಷ್ಟ ದೇಹದ ಹೆಣ್ಣುಮಕ್ಕಳು ಬ್ಲೌಸಿನ ಒಳಗೆ ಏನೂ ಧರಿಸಿಲ್ಲವೆಂದು ಕಂಡುಬಂದರೆ ಸಿಸ್ಟರ್‌ನವರೇ ‘ಬಾಡಿ’ (ಒಳಗೆ ಗಟ್ಟಿಯಾಗಿ ಕಟ್ಟುವ ಸಣ್ಣ ರವಿಕೆ) ಹೊಲಿಸಿ ಕೊಡುತ್ತಿದ್ದರು. ಆಗ ಹಿಂದುಗಳ ಮಕ್ಕಳ ಹೊರತಾಗಿ ಸೀರೆ ಉಡುವವರಿರಲಿಲ್ಲ. ಎಲ್ಲರೂ ಸ್ಕರ್ಟ್ ಬ್ಲೌಸ್ ಹಾಕುವವರೇ. ಬ್ಲೌಸಿನ ಒಳಗೆ ಸ್ತನಗಳು ಎದ್ದು ಕಾಣದಂತೆ ಗಟ್ಟಿಯಾಗಿ ಕಟ್ಟುತ್ತಿದ್ದುದರಿಂದ ಎದೆ ಚಪ್ಪಟೆಯಾಗಿ ಕಾಣುತ್ತಿದ್ದುವು. ೯, ೧೦ನೆಯ ತರಗತಿಯವರೆಗೆ ನಾಲ್ಕೈದು ಹಿಂದೂ ಮಕ್ಕಳು ಇದ್ದರು. ಎಸ್.ಎಸ್.ಎಲ್.ಸಿ.ಗಾಗುವಾಗ ನಾನೊಬ್ಬಳೇ ಹಿಂದು ಹುಡುಗಿ ಉಳಿದಿದ್ದೆ. ಮೈನೆರೆದ ಕೂಡಲೇ ಹಿಂದು ಹೆಣ್ಮಕ್ಕಳ ಶಾಲೆ ಬಂದ್ ಆಗುತ್ತಿತ್ತು. ಆರ್ಥಿಕವಾಗಿ ಸಬಲರಾದ ಹೆತ್ತವರು ಮತ್ತು ಸುಶಿಕ್ಷಿತರಾದ ಹೆತ್ತವರು ಮಾತ್ರ ಹೆಣ್ಣುಮಕ್ಕಳು ಪ್ರಾಯಕ್ಕೆ ಬಂದ ಮೇಲೆಯೂ ಶಾಲೆಗೆ ಕಳಿಸುವುದಕ್ಕೆ ಸಮ್ಮತಿಸುತ್ತಿದ್ದರು. ನಮ್ಮ ಶಾಲೆ ಹಿಂದುಳಿದ ವರ್ಗದ, ದಲಿತ ವರ್ಗದ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಹೆಣ್ಣುಮಕ್ಕಳೇ ಹೆಚ್ಚಾಗಿ ಬರುತ್ತಿದ್ದರು. ಆರ್ಥಿಕವಾಗಿ ಸಬಲರಾದ ಕಾಫಿ ಎಸ್ಟೇಟ್ ಮಾಲಿಕರ ಮಕ್ಕಳೂ ಇದ್ದರು. ಅವರ ಊರಿನಲ್ಲಿ ಶಾಲೆಯ ಅನುಕೂಲತೆ ಇಲ್ಲದ್ದರಿಂದ ನಮ್ಮ ಶಾಲೆಯ ಹಾಸ್ಟೆಲ್‌ನಲ್ಲಿರಿಸಿ ಶಿಕ್ಷಣ ಮುಂದುವರಿಸುವ ವ್ಯವಸ್ಥೆ ಮಾಡಿದ್ದರು. ಶಾಲೆಯ ಸುತ್ತಮುತ್ತಲ ಶ್ರೀಮಂತ ಕ್ರೈಸ್ತರು ಮತ್ತು ಬ್ರಾಹ್ಮಣರು ನಮ್ಮ ಶಾಲೆಯತ್ತ ಸುಳಿಯುತ್ತಿರಲಿಲ್ಲ. ಹೀಗೆ ಅನಾಥರು, ಸಬಲರು, ದುರ್ಬಲರು ಎಲ್ಲರೂ ಒಂದಾಗಿ ಕಲಿಯುವ ವ್ಯವಸ್ಥೆ ನಮ್ಮ ಶಾಲೆಯಲ್ಲಿತ್ತು. ಉಳ್ಳವರು ಮತ್ತು ಇಲ್ಲದವರಿಗೆ ಪ್ರತ್ಯೇಕ ಶಾಲೆಗಳಿರುವ ಈ ಕಾಲದಲ್ಲಿ ಓದುವ ಮಕ್ಕಳಿಗೆ ನಮ್ಮ ಈಗಿನ ಶಿಕ್ಷಣವ್ಯವಸ್ಥೆ ಮಾಡಿದ ವಂಚನೆ ಮತ್ತು ಅನ್ಯಾಯಗಳನ್ನು ಏನೆಂದು ವಿವರಿಸಲಿ? ಅದು ವಿಷಯಾಂತರವಾದೀತು.

ಒಂದು ದಿನ ನಾನು ಶಾಲೆಯ ಮಧ್ಯಾಹ್ನದ ಬಿಡುವಿನಲ್ಲಿ ಬುತ್ತಿ ಊಟ ಮಾಡಿ ತರಗತಿಗೆ ಬಂದು ಬೆಳಿಗ್ಗೆ ಅರ್ಧ ಬಿಡಿಸಿಟ್ಟ ಚಿತ್ರವನ್ನು ಪೂರ್ಣ ಮಾಡುತ್ತಿದ್ದೆ. ಅಷ್ಟರಲ್ಲಿ ಕ್ಲಾಸ್ ಲೀಡರ್ ಲೀಟಾನಿಂದ ನನಗೆ ಬುಲಾವ್ ಬಂತು. ಬುತ್ತಿ ಇಡುವ ಕೋಣೆಗೆ ಬರಬೇಕಂತೆ. ಯಾಕೆ ಎಂದರೆ ಉತ್ತರವಿಲ್ಲ. ನಾನು ಸಿಡಿಮಿಡಿಗೊಳ್ಳುತ್ತಾ ಪುಸ್ತಕ ಮಡಚಿಟ್ಟು ಓಡಿದೆ. ಅಲ್ಲಿನ ದೃಶ್ಯವನ್ನು ನೋಡಿ ನಾನು ಕಕ್ಕಾಬಿಕ್ಕಿ. ಜಯಂತಿ ಬುತ್ತಿಯನ್ನು ಕೈಯಲ್ಲಿ ಹಿಡಿದು ಅಳುವುದರ ಜೊತೆಗೆ ಬೈಯುತ್ತಿದ್ದಳು. ಲೀಟಾ ಅವಳ ಕೈಯಲ್ಲಿದ್ದ ಬುತ್ತಿ ತೋರಿಸಿ ಇದು ನಿನ್ನ ಬುತ್ತಿಯಲ್ಲವಾ? ಎಂದಳು. ನಾನು ಅಲ್ಲ, ನನ್ನ ಊಟ ಆಗಿದೆ ಎಂದು ತೊಳೆದಿಟ್ಟ ಬುತ್ತಿ ತೋರಿಸಿದೆ. ಆಗ ಜಯಂತಿ ಏರುಸ್ವರದಲ್ಲಿ ನಿನ್ನ ಕಣ್ಣು ಒಡೆದು ಹೋಗಿದೆಯಾ? ಸರಿಯಾಗಿ ನೋಡು ಎಂದಳು. ಈಗಲೂ ನನಗೆ ವಿಷಯ ಏನೆಂದು ಅರ್ಥವಾಗದೆ ತಬ್ಬಿಬ್ಬಾಗಿ ಲೀಟನಲ್ಲಿ ವಿಚಾರಿಸಿದೆ. ಅವಳು ಹೇಳಿದ ಮೇಲೆ ನನ್ನ ತಪ್ಪಿನ ಅರಿವಾಗಿ ತಪ್ಪಾಯ್ತು ಜಯಂತಿ, ನಾನು ಗೊತ್ತಿಲ್ಲದೆ ಊಟ ಮಾಡಿದೆ. ನೋಡು ಇಬ್ಬರ ಬುತ್ತಿಯೂ ಒಂದೇ ರೀತಿ ಇದೆ. ಅವಸರದಲ್ಲಿ ನನ್ನಿಂದ ಪ್ರಮಾದವಾಯ್ತು. ಕ್ಷಮಿಸು ಎಂದು ಪರಿಪರಿಯಾಗಿ ಬೇಡಿಕೊಂಡೆ. ಜಯಂತಿಯ ಸಿಟ್ಟು ಏರಿತೇ ವಿನಃ ತಗ್ಗಲಿಲ್ಲ. ಏನೇನೋ ಬೈಯುತ್ತಾ ಬುತ್ತಿಯಲ್ಲಿದ್ದ ಅನ್ನವನ್ನು ಅಂಗಳದ ತೆಂಗಿನ ಮರದ ಬುಡಕ್ಕೆ ಚೆಲ್ಲಿದಳು. ಈಗ ಮಾತ್ರ ನನ್ನ ಹೊಟ್ಟೆಯೊಳಗಿದ್ದ ಅನ್ನ ಗೋಳೋ ಎಂದು ಅಳುತ್ತಾ ಹೊರಗೆ ಜಿಗಿಯುತ್ತೇನೆಂದು ಗಂಟಲಿಗೆ ಗುದ್ದತೊಡಗಿತು. ಜೊತೆಯಲ್ಲಿ ಕಣ್ಣೀರೂ ಹರಿಯಿತು. ಇನ್ನು ಈ ಸುದ್ದಿ ಶಿಕ್ಷಕಿಯರ ಕಿವಿಗೆ ಬಿದ್ದರೆ ಇನ್ನೆಂತಹ ಶಿಕ್ಷೆ ಕಾದಿದೆಯೋ? ಇನ್ನೊಬ್ಬರ ಬುತ್ತಿಯನ್ನು ಕದ್ದು ತಿಂದ ಆರೋಪ ಹೊರಿಸಲಾಗುತ್ತದೇನೋ ಎಂಬ ಭಯದಿಂದ ಲೀಟನ ಕೈ ಹಿಡಿದು ಗೋಳೋ ಎಂದು ಅತ್ತೆ. ಅವಳು ಸಮಾಧಾನ ಮಾಡಿದರೂ ಅಂದು ನನ್ನ ಮನಸ್ಸಿಗಾದ ನೋವನ್ನು ಯಾರಲ್ಲೂ ಹೇಳಲಾಗದೆ ಒದ್ದಾಡಿದ್ದು ಅಷ್ಟಿಷ್ಟಲ್ಲ. ನಡೆದ ವಿಷಯ ಇಷ್ಟು. ಆಗ ನಾವು ಬುತ್ತಿ ತರುವ ಮಕ್ಕಳೆಲ್ಲಾ ಹಾಸ್ಟೆಲಿನ ಒಂದು ಕೋಣೆಯಲ್ಲಿ ತಮ್ಮ ತಮ್ಮ ಬುತ್ತಿಗಳನ್ನು ಇಡಬೇಕಿತ್ತು. ಜಯಂತಿಯ ಬುತ್ತಿಯೂ ನನ್ನ ಬುತ್ತಿಯೂ ಗಾತ್ರದಲ್ಲಿ ಒಂದೇ ಆಗಿತ್ತು. ಅದರ ಹಿಡಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಿತ್ತು. ಅದನ್ನು ಗಮನಿಸದೆ ನಾನು ಅವಸರದಲ್ಲಿ ಬಕಬಕ ತಿಂದು ಬುತ್ತಿ ಖಾಲಿ ಮಾಡಿಬಿಟ್ಟಿದ್ದೆ. ದುರದೃಷ್ಟಕ್ಕೆ ಇಬ್ಬರ ಬುತ್ತಿಯಲ್ಲೂ ಬೆಂಡೆಕಾಯಿಯ ಸಾರು ಆಗಿರಬೇಕೇ? ಅಂತೂ ನನ್ನ ಅವಸರದಿಂದ ಅಂದು ಜಯಂತಿಯನ್ನು ಉಪವಾಸ ಕೂರಿಸಿದ ಪಾಪ ತನ್ನ ತಲೆಗೆ ಮೆತ್ತಿಕೊಂಡು ಬಿಟ್ಟಿತು. ಇಲ್ಲಿ ನನಗೆ ಅವಳ ಸ್ವಾಭಿಮಾನವನ್ನು ಮೆಚ್ಚಬೇಕೋ ದೂರಬೇಕೋ ಎಂದು ತಿಳಿಯದೆ ಬಹಳ ಕಾಲ ಮಾನಸಿಕ ತೊಳಲಾಟದಲ್ಲಿ ನಲುಗಿದ್ದೆ. ಆ ಕಾಲದಲ್ಲಿ ಅವರ ಮನೆಯಲ್ಲಿ ನಾವು ಉಣ್ಣಲಾರದಂತಹ ಜಾತಿ ತಾರತಮ್ಯವಿತ್ತು. ಅವಳು ನನ್ನ ಬಣ್ಣ ನೋಡಿ ಅವಳಿಗಿಂತ ಕೀಳು ಜಾತಿಯವಳೆಂದು ತಿಳಿದಳೇ? ಗೊತ್ತಿಲ್ಲ. ೬೦ ವರ್ಷಗಳ ಹಿಂದೆ ನಡೆದ ಈ ಘಟನೆಯನ್ನು ನೆನಪಿಸಿಕೊಂಡಾಗ ಜಯಂತಿಯನ್ನು ಗೌರವದಿಂದ ನಮಿಸುತ್ತೇನೆ. ಯಾಕೆಂದರೆ ನನ್ನಲ್ಲಿ ಒಂದಷ್ಟು ಪ್ರಶ್ನೆಗಳನ್ನು ಹುಟ್ಟಿಸಿದ್ದ ಆ ಘಟನೆ ಅನ್ನದ ಅಸ್ಪಶ್ಯತೆಯ ನಾನಾ ರೂಪಗಳನ್ನು ಅವುಗಳ ಅಮಾನವೀಯ ರೀತಿ ರಿವಾಜುಗಳನ್ನು ತಿರಸ್ಕರಿಸುವುದಕ್ಕೆ ಪ್ರಚೋದನೆ ನೀಡಿತು. ಶಾಲೆಗೆ ಬುತ್ತಿ ಒಯ್ಯುವುದನ್ನೇ ನಿಲ್ಲಿಸಿದೆ. ಏನಾದರೂ ಮನೆ ಕೆಲಸ ಮಾಡಿ ಉಳಿದ ಹೊತ್ತಲ್ಲಿ ಲೈಬ್ರೆರಿ ರೂಮಲ್ಲಿ ಕುಳಿತೆ. ನನಗೆ ಓದುವ ಹುಚ್ಚನ್ನು ಹಿಡಿಸಿದ್ದು ಅದೇ ಘಟನೆ. ಪ್ರೇರಣೆ ನೀಡಿದವಳು ಜಯಂತಿ. ಹುಟ್ಟಿದ ಶಿಶುವಿಗೆ ಯಾವ ಜಾತಿಯ, ಮತದ ಗುರುತೂ ಇರುವುದಿಲ್ಲ. ಇಂತಹ ಜಾತಿಯಲ್ಲೇ ಹುಟ್ಟಬೇಕು ಎಂಬ ನಿಯಮವೂ ನಮ್ಮ ಹಿಡಿತದಲ್ಲಿಲ್ಲ. ನನ್ನ ಅಪ್ಪ ಅಮ್ಮ ಇಂತಹ ಜಾತಿ ತಾರತಮ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಿದವರಲ್ಲ. ಯಾಕೆಂದರೆ ನಾವೇ ಸಮಾಜದಿಂದ ಬಹಿಷ್ಕೃತರಾದವರಂತೆ, ಅಸ್ಪಶ್ಯರಂತೆ ಬದುಕುತ್ತಿದ್ದೆವು. ನಮಗೇಕೆ ಜಾತಿ ಭೇದ? ಆದರೆ ನನ್ನ ಸುತ್ತಮುತ್ತಲಲ್ಲಿ ತಾರತಮ್ಯದ ಅಮಾನವೀಯ ಸಂಪ್ರದಾಯಗಳನ್ನು ನಾನು ಗಮನಿಸುತ್ತಿದ್ದೆ.

ನನ್ನ ಸೋದರಮಾವನೊಬ್ಬ ಸ್ವಾತಂತ್ರ ಚಳುವಳಿಯ ಕಾಲದಲ್ಲಿ ದಲಿತರೊಂದಿಗೆ ಬೆರೆತು ಅವರ ಮನೆಯಲ್ಲಿ ಅನ್ನ ನೀರು ಸೇವಿಸಿದರೆಂಬ ಕಾರಣಕ್ಕೆ ಮಂಜೇಶ್ವರದಲ್ಲಿ ನಮ್ಮ ಮನೆಗೆ ಜಾತಿ ಬಹಿಷ್ಕಾರ ಹಾಕಿದ್ದರಂತೆ. ಅಜ್ಜಿ ತೀರಿಹೋದಾಗ ಬೊಜ್ಜದ ಕಾರ್ಯಕ್ರಮದಲ್ಲಿ ದಲಿತರೊಂದಿಗೆ ಪಂಕ್ತಿಯಲ್ಲಿ ಊಟ ಮಾಡುವುದಕ್ಕೆ ಕೆಲವರು ಆಕ್ಷೇಪಿಸಿದ್ದರೆಂದು ಅಮ್ಮ ಹೇಳುತ್ತಿದ್ದಳು. ವಿಚಿತ್ರವೆಂದರೆ ಅದೇ ದಲಿತರು ಮುಸಲ್ಮಾನರಾದರೆ ಅವರ ಮನೆಯ ಅನ್ನ ನೀರು ವರ್ಜ್ಯವಲ್ಲ. ಹಾಗೆಯೇ ದಲಿತರು ಕ್ರೈಸ್ತರಾದರೂ ಅವರು ಸ್ಪಶ್ಯರಾಗುವ ಜಾದೂ ನಡೆಯುತ್ತಿತ್ತು. ಆ ಕಾಲದ ಸಂಪ್ರದಾಯವಾದಿಗಳ ಅನುಕೂಲಶಾಸ್ತ್ರವಾಗಿ ಇಂತಹ ಅಪಚಾರಗಳು ನಡೆಯುತ್ತಿದ್ದವು. ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ನನ್ನ ಸೋದರಮಾವ ದಲಿತರಿಗಾಗಿ ಮಾಡಿದ ಕೆಲಸಗಳನ್ನು ಇವತ್ತಿಗೂ ಆ ಸಮುದಾಯದವರು ಕೃತಜ್ಞತೆಯಿಂದ ಸ್ಮರಿಸುವುದನ್ನು ಕೇಳಿದ್ದೇನೆ.

ರಾಮಯ್ಯ ಮಾಸ್ಟರು ಎಂದೇ ಮಂಜೇಶ್ವರದಲ್ಲಿ ಪ್ರಸಿದ್ಧರಾದ ಅವರು ದಲಿತ ಮಕ್ಕಳನ್ನು ಮಂಗಳೂರಿಗೆ ಕರೆತಂದು ಹಾಸ್ಟೆಲಲ್ಲಿರಿಸಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರಿಂದ ಇವತ್ತು ಇವರು ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯುವಂತಾಗಿದೆ. ಈ ಸೋದರಮಾವನ ಸಮಾಜಸೇವೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ನಾನು ಕೆಲವು ವರ್ಷಗಳ ಹಿಂದೆ ಆ ದಲಿತರ ಮನೆಗೆ ಭೇಟಿ ನೀಡಿದ್ದೆ. ಆಗ ಅವರು ಹೇಳಿದ ಮಾತುಗಳನ್ನು ಕೇಳಿ ನನ್ನ ಹೃದಯ ತುಂಬಿ ಬಂತು. ದಲಿತ ಸಮುದಾಯದ ಸಂಘಟನೆಗೆ ಅವರಿಗೆ ಸರಕಾರದಿಂದ ಜಮೀನು ದೊರಕಿಸಿಕೊಡುವುದಕ್ಕೆ, ಮನೆ ನಿರ್ಮಾಣಕ್ಕೆ ಯಾವ್ಯಾವ ರೀತಿಯಲ್ಲಿ ಸಹಕಾರ ನೀಡಿದರೆಂಬುದನ್ನು ಕೃತಜ್ಞತೆಯಿಂದ ಸ್ಮರಿಸಿದರು. ಮಾವನ ಮುಸ್ಲಿಂ ಗೆಳೆಯ ಹಾಜಾರರನ್ನು ಭೇಟಿಯಾದಾಗ ಅವರು ಹೇಳಿದ ಮಾತುಗಳೂ ಸ್ಮರಣೀಯವಾಗಿದೆ. ನಿನ್ನ ಮಾವ ಅಂದು ಹಗಲು ರಾತ್ರಿ ದಲಿತರೊಂದಿಗೆ ಕೆಲಸ ಮಾಡುವುದನ್ನು ಕಂಡು ನಿಮ್ಮ ಸಮಾಜದವರು ನಿಮ್ಮ ಕುಟುಂಬಕ್ಕೆ ಜಾತಿ ಬಹಿಷ್ಕಾರ ಹಾಕಿದ್ದರು. ಅವನಿಗೆ ಹುಚ್ಚು ಹಿಡಿದಿದೆ ಎಂದೇ ಸುದ್ದಿ ಹಬ್ಬಿಸಿದ್ದರು. ಹಾಗಾಗಿ ಅವನಿಗೆ ಮದುವೆಯಾಗುವುದೂ ತಡವಾಯಿತು. ತಲೆ ಕೆಟ್ಟವನಿಗೆ ಹೆಣ್ಣು ಕೊಡುವವರಾರು? ಆದುದರಿಂದ ತಮ್ಮಂದಿರಿಗೆ ಮದುವೆಯಾದರೂ ಇವರಿಗೆ ಮದುವೆಯಾಗಿರಲಿಲ್ಲ. ಕೊನೆಗೆ ೪೦ ವರ್ಷ ಕಳೆದ ಮೇಲೆ ಮದುವೆಯಾಗಬೇಕಾಯಿತು ಎಂದರು. ಹೌದು, ಮಾವನಿಗೆ ಸಮಾಜದಲ್ಲಿ ಯಾವ ಪದವಿಯನ್ನೂ, ಕೀರ್ತಿಯನ್ನೂ, ಸಂಪತ್ತನ್ನೂ ಗಳಿಸಲು ಸಾಧ್ಯವಾಗಿಲ್ಲ. ಆದರೆ ನಾಲ್ಕು ಮಂದಿ ಶೋಷಿತರ ಬಾಳಿನಲ್ಲಿ ನಗುವರಳಿಸಿ ಕೃತಜ್ಞತೆಯ ಭಾವವನ್ನು ಉಂಟುಮಾಡಿದ್ದಕ್ಕಿಂತ ಹೆಚ್ಚಿನ ಪದವಿಯಿಲ್ಲ. ಇದೇ ಸಂಪತ್ತು.

ಕಳೆದ ಶತಮಾನದ ೫೦ರ ದಶಕದ ನನ್ನ ಶಾಲೆಯ ಶಿಕ್ಷಕರ ಬಗ್ಗೆ ಪುಟಗಟ್ಟಲೆ ಬರೆಯಬಹುದು. ಬಿಕರ್ನಕಟ್ಟೆಯ ಶಾಲೆಯಲ್ಲಿ ಕಲಿಸುತ್ತಿದ್ದ ಲೂಸಿ ಟೀಚರರ ವ್ಯಕ್ತಿತ್ವಕ್ಕೆ ಎಂತಹ ಚುಂಬಕ ಶಕ್ತಿಯಿತ್ತೆಂದರೆ ಎಂತಹ ಅಳುವ ಮಕ್ಕಳನ್ನೂ ಕೂಡಾ ರಮಿಸಿ ಸುಮ್ಮನಾಗಿಸುವ ಮಾತಿನ ಮೋಡಿಯಿತ್ತು. ಅವರು ಐದನೆಯ ತರಗತಿಯ ಟೀಚರೂ ಮುಖ್ಯೋಪಾಧ್ಯಾಯಿನಿಯೂ ಆಗಿದ್ದರು. ಆದರೆ ಜೂನ್ ತಿಂಗಳಲ್ಲಿ ಶಾಲೆಗೆ ಸೇರಿಸುವಾಗ ಮಕ್ಕಳ ಅಳು ಬೊಬ್ಬೆ ಸಾಮಾನ್ಯ. ಮೊತ್ತ ಮೊದಲು ಅಮ್ಮನ ಸೆರಗಿನ ಆಶ್ರಯ ತಪ್ಪಿದ ಮಕ್ಕಳ ಚೀರಾಟ, ಆಕ್ರಂದನ ಮುಗಿಲು ಮುಟ್ಟುತ್ತಿತ್ತು. ಅಂತಹ ಅಳು ಕೇಳಿದ ಕೂಡಲೇ ಲೂಸಿ ಟೀಚರ್ ಒಂದನೇ ತರಗತಿಗೆ ಧಾವಿಸಿ ಮಕ್ಕಳನ್ನು ಅಪ್ಪಿಕೊಂಡೋ, ಎತ್ತಿಕೊಂಡೋ ಮುದ್ದು ಮಾಡಿದರೆಂದರೆ ಮಕ್ಕಳ ಪುಂಗಿ ಬಂದಾಗುತ್ತಿತ್ತು. ಬೆತ್ತ ತೋರಿಸುವುದಿಲ್ಲ. ಅವರ ಕೈಗಳಿಗೆ ಎಂತಹ ಮಾಂತ್ರಿಕ ಸ್ಪರ್ಶವಿತ್ತೋ ಗೊತ್ತಿಲ್ಲ. ಅಂತಹ ಒಂದು ಗುರು ಪರಂಪರೆಯನ್ನು ಕಂಡ ಭಾಗ್ಯ ನನ್ನದು. ಇಂಗ್ಲಿಷ್ ಎಂದರೆ ಕಹಿಮದ್ದನ್ನು ಕಂಡಂತೆ ಮುಖ ಸಿಂಡರಿಸುತ್ತಿದ್ದ ನನಗೆ ಅದರ ಬಗ್ಗೆ ಒಲವನ್ನು ಹುಟ್ಟಿಸಿದವರು ಹೈಸ್ಕೂಲಲ್ಲಿ ಜಾನಕಿ ಟೀಚರು. ವಿಚಿತ್ರವೆಂದರೆ ಅವರಿಗೆ ಕನ್ನಡ ಬರುತ್ತಿರಲಿಲ್ಲ. ತಮಿಳ್ನಾಡಿನಿಂದ ಬಂದವರು. ಆದರೆ ಅವರು ಪಾಠ ಮಾಡುವ ರೀತಿಯಲ್ಲಿ ಎಂತಹ ದಡ್ಡರೂ ಚುರುಕಾಗಬೇಕು. ಸರಳವಾದ ವಾಕ್ಯದಲ್ಲಿ ಅಭಿನಯಪೂರ್ವಕವಾಗಿ ನಗು ನಗುತ್ತಾ ಪ್ರಸನ್ನಚಿತ್ತರಾಗಿ ಮಕ್ಕಳೊಂದಿಗೆ ಬೆರೆಯುವ ರೀತಿಯೇ ವಿಶಿಷ್ಟ. ನನ್ನ ವಿದ್ಯಾರ್ಥಿಜೀವನದಲ್ಲಾಗಲೀ ವೃತ್ತಿಜೀವನದಲ್ಲಾಗಲೀ ನಾನು ಅಂತಹ ಶಿಕ್ಷಕಿಯನ್ನು ಕಂಡಿಲ್ಲ. ಕನ್ನಡ ಭಾಷೆ ಬಾರದಿದ್ದರಿಂದಲೇ ಅವರು ನಮ್ಮಲ್ಲಿ ಸಂವಹನಕ್ಕೆ ಇಂಗ್ಲಿಷ್ ಮಾತಾಡುವ ಅನಿವಾರ್ಯತೆಯಿತ್ತು. ನಾವು ನಿರ್ಭಯವಾಗಿ ಅವರೊಂದಿಗೆ ವ್ಯವಹರಿಸಲು ಸಾಧ್ಯವಾಗಿತ್ತು. ನಮಗೆ ಪೌರನೀತಿ ಎಂಬ ಪಿರೇಡಿನಲ್ಲಿ ನಾನಾ ರೀತಿಯ ಚಟುವಟಿಕೆಗಳನ್ನು ಮಾಡಿಸುತ್ತಿದ್ದರು. ಪಾದರಸದಂತಹ ಚಟುವಟಿಕೆಯುಳ್ಳವರೂ, ಪ್ರತಿಭಾವಂತೆಯೂ ಆದ ಜಾನಕಿ ಟೀಚರು ಮರುವರ್ಷ ಕೆಲಸ ಬಿಡಬೇಕಾಯಿತು. ಕನ್ನಡ ಬಾರದಿರುವುದೇ ಸರಕಾರ ಕೆಲಸದಿಂದ ತೆಗೆಯಲು ಕಾರಣವೆಂದು ಅನಂತರ ತಿಳಿಯಿತು. ಕೆಲವು ನಿಯಮಗಳು ಹೇಗೆ ಕುರುಡಾಗಿ ಪಾಲನೆಯಾಗುತ್ತವೆ ಎಂಬುದಕ್ಕೆ ಇದು ನಿದರ್ಶನ.

(ಮುಂದುವರಿಯಲಿದೆ)