ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆಯ

(ಭಾಗ ಆರು)

ನನ್ನ ಹೆಲೆನ್ ಟೀಚರ್ – ಬರೆದರೆ ಒಂದು ಅಧ್ಯಾಯವೇ ಬೇಕಾದೀತೇನೋ! ಕೆಲವೇ ತಿಂಗಳು ನನಗೆ ಶಿಕ್ಷಕಿಯಾಗಿ ವೃತ್ತಿಜೀವನದುದ್ದಕ್ಕೂ ನನ್ನ ಸಹೋದ್ಯೋಗಿಯಾಗಿ ಅವರೊಂದಿಗೆ ಬೆರೆತು ನಾನು ಕಲಿತ ಪಾಠಗಳು ನನ್ನ ಶಿಕ್ಷಕ ವೃತ್ತಿ ಬದುಕಿನ ಯಶಸ್ಸಿಗೆ ಕಾರಣಗಳಾಗಿವೆ. ಬಿಸಿಲ ಬೇಗೆಯಿಂದ ಬಳಲಿದವನಿಗೆ ವಿಶಾಲ ವೃಕ್ಷದ ನೆರಳಿನಂತೆ, ಹಸಿದ ಮಗುವಿಗೆ ತಾಯಿ ಎದೆಹಾಲು ದೊರೆತಂತೆ, ತಪ್ಪು ಮಾಡಿ ತಪ್ಪಿಸಿಕೊಳ್ಳಲು ಮಕ್ಕಳು ತಾಯ ಸೆರಗಿನಾಶ್ರಯ ಪಡೆದಂತೆ, ಕತ್ತಲೆಯಲ್ಲಿ ತಡಕಾಡುತ್ತಿದ್ದವನಿಗೆ ಹಣತೆಯ ದೀಪ ಕೈಗಿತ್ತಂತೆ ಅವರ ಸಹವಾಸ ಮತ್ತು ಪಾಠ ಪ್ರವಚನಗಳು ನನ್ನಲ್ಲಿ ಪ್ರಭಾವ ಬೀರಿದೆ.

ಅವರಿಂದ ಪಾಠ ಹೇಳಿಸಿಕೊಂಡವರಾರೂ ಅವರನ್ನು ಮರೆಯಲು ಸಾಧ್ಯವಿರಲಿಲ್ಲ. ಶಾಲೆ ಬಿಟ್ಟು ಎಷ್ಟೋ ವರ್ಷಗಳ ಬಳಿಕ ಅವರನ್ನು ಕಂಡು ಮಾತಾಡಲಿಕ್ಕಾಗಿಯೇ ಬರುತ್ತಿದ್ದ ಶಿಷ್ಯರಿದ್ದರು. ಅವರ ಅಧ್ಯಾಪನವು ಅಷ್ಟೊಂದು ವೈಶಿಷ್ಟಪೂರ್ಣವಾಗಿತ್ತು. ಅವರ ಶಿಷ್ಯವಾತ್ಸಲ್ಯ ಗಾಢವಾಗಿತ್ತು. ಗಣಿತ ಪಾಠವನ್ನು ಅವರ ಹಾಗೆ ಕಲಿಸುವ ಶಿಕ್ಷಕರನ್ನು ನಾನು ಕಂಡಿಲ್ಲ. ಗಣಿತದಲ್ಲಿ ಮಾರ್ಕ್ಸ್ ಕಡಿಮೆ ತೆಗೆದವರನ್ನು ಅವರು ಹರಸುವ ರೀತಿಯೇ ವಿನೂತನವಾಗಿತ್ತು. ಮಾರ್ಕ್ಸ್ ಕಡಿಮೆ ಆಯ್ತು ಅಂತ ಬೇಸರಿಸಬೇಡಿ. ತುಂಬಾ ಮಾರ್ಕ್ಸ್ ಪಡೆದವರು ಅವರು ಬಯಸಿದಂತೆ ಡಾಕ್ಟರೋ ಇಂಜಿನಿಯರೋ ಏನಾದರೂ ಆಗಲಿ. ನೀವು ನನ್ನ ಹಾಗೆ ಟೀಚರಾಗಿ ಆಯ್ತಾ ಎಂದು ಕೆನ್ನೆ ತಟ್ಟಿ ಸಮಾಧಾನ ಮಾಡಿದಾಗ ಯಾವ ವಿದ್ಯಾರ್ಥಿಯಲ್ಲೂ ಗಣಿತವನ್ನು ದ್ವೇಷಿಸದೆ ಪ್ರೀತಿಸುವ ಹುಮ್ಮಸ್ಸುಂಟಾಗುತ್ತಿತ್ತು. ಕೆಲವು ಪಾಠಗಳು ಮಕ್ಕಳಿಗೆ ಕಷ್ಟ ಎಂದು ಅನಿಸುವುದಕ್ಕೆ ಶಿಕ್ಷಕರ ವ್ಯಕ್ತಿತ್ವವೂ ಕಾರಣವಾಗಿರುತ್ತದೆಂಬುದು ಸಾಬೀತಾದ ಸತ್ಯ. ಟೀಚರನ್ನು ಪ್ರೀತಿಸಿದವರು ಅವರ ಪಾಠವನ್ನೂ ಪ್ರೀತಿಸಲು ತೊಡಗುತ್ತಾರೆ. ನಾನೂ ಅವರೂ ವೃತ್ತಿಯಿಂದ ನಿವೃತ್ತರಾದ ಮೇಲೂ ತಿಂಗಳಿಗೊಮ್ಮೆಯಾದರೂ ಭೇಟಿಯಾಗುತ್ತಿದ್ದೆವು. ಒಳ್ಳೆಯ ಓದುಗಳಾದ ಅವರಿಗೆ ನಾನು ಓದಿದ ಉತ್ತಮ ಪುಸ್ತಕಗಳನ್ನು ಕೊಡುತ್ತಿದ್ದೆ. ಪುಸ್ತಕದ ಧನಾತ್ಮಕ ಅಂಶಗಳನ್ನು ಲೋಪ ದೋಷಗಳನ್ನು ನನ್ನೊಂದಿಗೆ ಚರ್ಚಿಸುತ್ತಿದ್ದರು. ಅದು ಗಂಭೀರ ಸಾಹಿತ್ಯ ಚರ್ಚೆಯೇನೂ ಅಲ್ಲದಿದ್ದರೂ ಅವರ ಸಾದಾ ಸರಳ ಜೀವನದ ಆದರ್ಶಗಳಿಗೆ ಪೂರಕವಾಗಿತ್ತು. ಯಾರಿಗೂ ತೊಂದರೆ ಕೊಡದೆ ಬದುಕಬೇಕೆಂಬ ವ್ರತ ತೊಟ್ಟ ಟೀಚರು ತನ್ನ ಮಗಳು ಎಷ್ಟೇ ಒತ್ತಾಯ ಮಾಡಿದರೂ ಮನೆ ಬಿಟ್ಟು ವಿದೇಶವಾಸಕ್ಕೆ ಒಪ್ಪಲಿಲ್ಲ. ನನಗೆ ಅವರನ್ನು ಕಂಡಾಗ ಗಾಂಧೀಜಿಯ ಸಂತತನದ ಹಠಮಾರಿತನವೂ, ಇಂದಿರಾಗಾಂಧಿಯ ‘ಡಿಕ್ಟೇಟರ್‌ಶಿಪ್’ನ ಮೊಂಡುತನವೂ ಎರಡೂ ಸಮ್ಮಿಲನಗೊಂಡ ಮೂರ್ತಿಯಂತೆ ಭಾಸವಾಗುತ್ತಿತ್ತು. ೮೫ ವರ್ಷದಲ್ಲಿ ನಿಧನರಾಗುವವರೆಗೂ ಸಾಮಾನ್ಯರನ್ನು ಬಾಧಿಸುವ ಯಾವ ಕಾಯಿಲೆಗಳೂ ಅವರ ಹತ್ತಿರ ಸುಳಿಯಲಿಲ್ಲ. ಹೊಟ್ಟೆನೋವು ಎಂದರೇನೆಂದೇ ಗೊತ್ತಿಲ್ಲದ ಅವರು ಜ್ವರ ಬಂದು ಮಲಗಿದವರಲ್ಲ. ಈ ಅನುಭವವಿಲ್ಲದವರೂ ಇದ್ದಾರೆಂದರೆ ಈ ಕಾಲದಲ್ಲಿ ಯಾರೂ ನಂಬಲಾರರು ಅಲ್ಲವೇ? ಕೃಶ ಶರೀರದ ನೇರ ನಿಲುವಿನ ಅವರು ೮೦ ವರ್ಷದ ಬಳಿಕ ಸ್ವಲ್ಪ ಬಾಗಿದಂತೆ ಕಾಣುತ್ತಿದ್ದರು. ಹಗಲಲ್ಲಿ ಕೆಲಸದಾಳಿನ ಸಹಾಯ ಪಡೆದವರೂ ರಾತ್ರಿ ಒಂಟಿಯಾಗಿಯೇ ಬದುಕುತ್ತಿದ್ದ ಅವರ ಧೈರ್ಯವನ್ನು ಕಂಡರೆ ಅವರ ನಿರ್ಧಾರವನ್ನು ಎಲ್ಲರೂ ಆಕ್ಷೇಪಿಸುತ್ತಿದ್ದರು. ಯಾರ ಮಾತಿಗೂ ಸೊಪ್ಪು ಹಾಕದ ಅವರು ಕೊನೆಗಾಲದಲ್ಲಿ ಒಮ್ಮೆ ಮನೆಯೊಳಗೆ ಎಡವಿ ಬಿದ್ದು ಕಾಲಿನ ಮೂಳೆ ಮುರಿತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಯಿತು. ಮಗಳು ವಿದೇಶದಿಂದ ಬಂದು ಆರೈಕೆಯಲ್ಲಿ ನಿರತಳಾದಳು. ಆದರೆ ಹೆಲೆನ್ ಟೀಚರು ಮೊದಲೇ ಮನಸ್ಸಿನಲ್ಲಿ ನಿರ್ಧಾರ ಮಾಡಿದಂತೆ ‘ಸಲ್ಲೇಖನ ವ್ರತ’ ಆಚರಿಸಿ ಆಸ್ಪತ್ರೆಯಿಂದ ಮನೆಗೆ ಮರಳಿದ ನಾಲ್ಕೇ ದಿನದಲ್ಲಿ ಮೃತರಾದರು. ಸಾವನ್ನು ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಸಾವಿನ ಭಯದಿಂದ ತಪ್ಪಿಸಿಕೊಳ್ಳುವವರು ವಿರಳ. ಪ್ರಪಂಚವೆಂಬ ಬಂಧೀಖಾನೆಯಲ್ಲಿ ನಾವೆಲ್ಲಾ ಕೈದಿಗಳಂತೆ ಬದುಕುತ್ತೇವೆ. ಬಾಗಿಲು ತೆರೆದು ಓಡಿ ಹೋಗಲು ಯಾರಿಗೂ ಸಾಧ್ಯವಿಲ್ಲ. ದೇವರು ಕರೆಯುವವರೆಗೂ ಕಾಯಬೇಕು ಎಂದು ನಂಬಿದ ಟೀಚರು ತಾನೇ ಬಾಗಿಲು ತೆರೆದು ಹೋದರೇ? ‘ಸಲ್ಲೇಖನ ವ್ರತ’ವನ್ನು ತಪ್ಪು ಎಂದು ವಾದಿಸುವವರಿದ್ದಾರೆ. ‘ದಯಾಮರಣ’ವನ್ನೂ ಅಪರಾಧವೆಂದು ಕಾನೂನು ಹೇಳುತ್ತದೆ. ಆತ್ಮಹತ್ಯೆಯಂತೂ ಮಹಾಪಾಪವೆಂದು ಎಲ್ಲಾ ಮತಗಳೂ ಸಾರುತ್ತವೆ. ಹಾಗಿದ್ದರೆ ನನಗೆ ಇನ್ನು ಬದುಕುವುದು ಇಷ್ಟವಿಲ್ಲ. ತನ್ನಿಂದ ಇತರರಿಗೆ ತೊಂದರೆಯಾಗುತ್ತದೆ. ನಾನು ಮಾಡಬೇಕಾದ ಕೆಲಸಗಳೆಲ್ಲಾ ಪೂರ್ಣಗೊಂಡಿವೆ. ಆದುದರಿಂದ ನಾನು ಮರಣವನ್ನು ಆಮಂತ್ರಿಸುತ್ತೇನೆ ಎಂದು ದೃಢಚಿತ್ತದಲ್ಲಿ ತನ್ನ ಜೀವನವನ್ನು ಅಂತ್ಯಗೊಳಿಸಿದ ಟೀಚರರ ನಿರ್ಧಾರವನ್ನು ಯಾರು ವಿರೋಧಿಸಿದರೂ ನನಗಂತೂ ಅದು ತಪ್ಪು ಎಂದು ಅನಿಸಲಿಲ್ಲ. ಸತ್ಕಾರ್ಯದಲ್ಲಿ ಮನಸ್ಸನ್ನು ಸ್ಥಿರವಾಗಿ ನಿಲ್ಲಿಸಿದರೆ ಸಾವಿನ ಭಯ, ನೋವು ಕಡಿಮೆಯಾಗುತ್ತದೆ. ಹೆಲೆನ್ ಟೀಚರು ತನ್ನ ಬದುಕಿನುದ್ದಕ್ಕೂ ವಿದ್ಯೆ ಮಾತ್ರ ಕಲಿಸಿದ್ದಲ್ಲ. ಅನೇಕ ಬಡ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನಾನಾ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಸದ್ದಿಲ್ಲದೆ ಮಾಡಿದ ಇಂತಹ ಅನೇಕ ಉದಾಹರಣೆಗಳು ನನ್ನ ಕಣ್ಣ ಮುಂದಿವೆ. ಗಿಡದಲ್ಲಿ ಹೂ ಮೌನವಾಗಿ ಅರಳಿದಂತೆ, ಮರಗಳು ಯಾವುದೇ ಗೌಜಿಗದ್ದಲ ಮಾಡದೆ ಹಣ್ಣುಗಳನ್ನು ನೀಡಿದಂತೆ ಹೆಲೆನ್ ಟೀಚರರ ಜೀವನ ಸಾರ್ಥಕವಾಯಿತು. ಹೇಡಿಗಳು ಅನೇಕ ಸಲ ಸಾಯುತ್ತಾರಂತೆ, ಧೈರ್ಯವಂತರು ಮಾತ್ರ ಒಂದೇ ಸಲ ಸಾಯುತ್ತಾರಂತೆ. ಯಾರೋ ಹೇಳಿದ ಮಾತು ನೆನಪಾಗುತ್ತದೆ. ಹೌದು, ಸಾವು ಬೆಟ್ಟಕ್ಕಿಂತ ದೊಡ್ಡದೂ ಹೌದು, ಕೂದಲಿಗಿಂತ ಸಣ್ಣದೂ ಹೌದು. ಅದರ ಮಹತ್ವವನ್ನು ತಿಳಿಯುವುದು ಕಷ್ಟ. ತಿಳಿದವರೂ ವಿರಳ.

ಬಾಲ್ಯವೆಂಬುದು ಸ್ಪಂಜಿನಂತೆ. ಸಂಪರ್ಕಕ್ಕೆ ಬಂದುದೆಲ್ಲವನ್ನೂ ಹೀರಿಕೊಳ್ಳುತ್ತದೆ. ನೆನಪುಗಳೋ ಕಾಂಕ್ರೀಟಿನಂತೆ ಗಟ್ಟಿಯಾಗಿ ಕೂತಿರುತ್ತವೆ. ಸಾಮಾನ್ಯವಾಗಿ ನಮಗೆ ಒಂದನೆಯ ತರಗತಿಯಲ್ಲಿ ಕಲಿಸಿದವರಾರೆಂದು ಮರೆತಿರುತ್ತದೆ. ನನಗೆ ಒಂದನೆಯ ತರಗತಿಯಲ್ಲಿ ಕೈಹಿಡಿದು ಅಕ್ಷರ ತಿದ್ದಿದ ಜುಟ್ಟಿನ ಭಟ್ಟ ಮಾಸ್ಟ್ರ ನೆನಪಿದೆ. ಅವರ ಹೆಸರು ಗೊತ್ತಿಲ್ಲ. ಅವರ ನೀಳವಾದ ಗೋಧಿ ಮೈಬಣ್ಣದ ದೇಹ, ಎದ್ದು ಕಾಣುವ ಜುಟ್ಟು, ಪಂಚೆ, ಜುಬ್ಬಾ ಹಾಕಿ ಕೈಯಲ್ಲೊಂದು ಬೆತ್ತ ಹಿಡಿದು ನಿಂತಿರುವ ಅವರ ಚಿತ್ರ ಕಣ್ಣ ಮುಂದಿದೆ. ನಕ್ಕಾಗ ಸುಂದರವಾಗಿ, ಸಿಟ್ಟುಕೊಂಡಾಗ ಕ್ರೂರವಾಗಿ ಕಾಣುವ ಅವರು ನನ್ನ ಬಗ್ಗೆ ಒಂದು ವಿಶೇಷ ಪ್ರೀತಿ ತೋರಿಸಿದ್ದು ನೆನಪಿದೆ. ಊರಿನಲ್ಲಿ ಗಣ್ಯರೆಂಬ ನನ್ನ ತಂದೆಯ ಪರಿಚಯವಲ್ಲದೆ, ಶಾಲೆಗೆ ಸೇರುವ ದಿನ ಮಕ್ಕಳಿಗೆಲ್ಲಾ ಸಿಹಿತಿಂಡಿ ಹಂಚಿದ ಕಾರಣವೂ ಇರಬಹುದು. ನನ್ನ ಬಗ್ಗೆ ಒಂದು ‘ಸಾಫ್ಟ್‌ಕಾರ್ನರ್’ ಅವರಲ್ಲಿತ್ತು ಎಂದು ಕಾಣುತ್ತದೆ. ಪಕ್ಕದ ತರಗತಿಯಲ್ಲಿ ಬೆತ್ತಪೂಜೆಯಾಗುತ್ತಿದ್ದುದನ್ನು, ಸಹಸ್ರ ನಾಮಾರ್ಚನೆಯಾಗುತ್ತಿದ್ದುದನ್ನು ಕೇಳಿಯೇ ನಾನು ಹೆದರಿ ಗುಬ್ಬಚ್ಚಿಯಂತೆ ಮುದುಡಿ ಕೂರುತ್ತಿದ್ದೆ. ನನ್ನ ಭಯವನ್ನು ಕಳೆಯಲು ಪ್ರೀತಿಯಿಂದ ಹತ್ತಿರ ಕೂತು ಅಕ್ಷರ ತಿದ್ದಿದ ಆ ಭಟ್ ಮಾಸ್ಟ್ರು ನೆನಪಾಗುತ್ತಾರೆ, ನನ್ನ ಅಕ್ಷರವನ್ನು ಎಷ್ಟು ಚಂದವಿದೆ ಎಂದು ಯಾರಾದರೂ ಈಗ ಹೇಳಿದರೆ ಆ ಕ್ರೆಡಿಟ್ ಎಲ್ಲವನ್ನೂ ಜುಟ್ಟಿನ ಮಾಸ್ಟ್ರಿಗೆ ಅರ್ಪಿಸುತ್ತೇನೆ.

ಜಾನಕಿ ಟೀಚರು ಇಂಗ್ಲಿಷ್ ಕಲಿಸಿದ ರೀತಿ ನಮ್ಮನ್ನು ಮೋಡಿ ಮಾಡಿದ ರೀತಿಯನ್ನು ಹೇಳಿದೆನಲ್ಲಾ. ನಮ್ಮ ಸಿಸ್ಟರ್ ಆಗ್ನೆಲಾ ಅವರು ಎಸ್.ಎಸ್.ಎಲ್.ಸಿ.ಯಲ್ಲಿ ನಮಗೆ ಇಂಗ್ಲಿಷ್ ಕಲಿಸಿದ ರೀತಿ ಇನ್ನೊಂದು ದೊಡ್ಡ ಕತೆ. ೧೯೫೯ನೆಯ ಇಸವಿಯ ಸಪ್ಟೆಂಬರ್ ತಿಂಗಳ ಒಂದು ದಿನ ಸಿಸ್ಟರ್ ಬಹಳ ಸಿಡುಕಿನ ಮೋರೆ ಹೊತ್ತೇ ಕ್ಲಾಸಿಗೆ ಬಂದಿದ್ದರು. ಅವರು ಶಾಲೆಯ ಮುಖ್ಯೋಪಾಧ್ಯಾಯಿನಿಯೂ ಆಗಿದ್ದರು. ಅದಲ್ಲದೆ ಬೆಥನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿಯೂ ಮಹತ್ತರ ಜವಾಬ್ದಾರಿಯನ್ನು ಹೊತ್ತಿದ್ದರು. ಕ್ಲಾಸಿಗೆ ಬಂದು ಎಲ್ಲ ಮಕ್ಕಳ ಕಡೆಗೆ ಒಂದು ತೀವ್ರನೋಟ ಬೀರಿದವರು ಪ್ರಶ್ನೆ ಕೇಳತೊಡಗಿದರು. ನಾಮಪದ ಎಂದರೇನು? ಕ್ರಿಯಾಪದ ಎಂದರೇನು? ಎಂದು ಕೇಳಿದಾಗ ನಮಗೆ ಕನ್ನಡದಲ್ಲಿ ಹೇಳಲಿಕ್ಕೆ ಗೊತ್ತಿತ್ತು. ಅವರು ನಮ್ಮಿಂದ ಇಂಗ್ಲಿಷ್‌ನಲ್ಲಿ ಉತ್ತರವನ್ನು ಬಯಸಿದ್ದರು. ಇಡೀ ಕ್ಲಾಸಲ್ಲಿ ಯಾರಿಗೂ ಸರಿಯಾಗಿ ಉತ್ತರ ಹೇಳಲು ಬರಲಿಲ್ಲ. ಸಿಟ್ಟು ಬಂದು ಪ್ರತಿಯೊಂದನ್ನೂ ೧೦೦ ಸಲ ಬರೆಯಿರಿ ಎಂದು ಹೇಳಿದರು. ಜೊತೆಯಲ್ಲಿ ಕ್ರಿಯಾ ವಿಶೇಷಣ, ನಾಮ ವಿಶೇಷಣಗಳನ್ನೂ ಕೂಡಾ ಸಂಜೆ ಮನೆಗೆ ಹೋಗುವ ಮೊದಲು ತೋರಿಸಬೇಕೆಂದು ಆದೇಶಿಸಿದರು. ಇಡೀ ಕ್ಲಾಸು ಉಸಿರು ಬಿಗಿಹಿಡಿದು ಮಧ್ಯಾಹ್ನದ ಊಟದ ಬಿಡುವಿನಲ್ಲೂ ಬರೆದದ್ದೇ ಬರೆದದ್ದು. ಸಂಜೆ ಶಾಲೆ ಬಿಟ್ಟ ಮೇಲೂ ಕೂತು ಬರೆದೆವು. ಬರೆದೆವು ಎಷ್ಟು ಬರೆದರೂ ೪೦೦ ಸಲ ಬರೆದು ಹೋಗುವುದು ಸಾಧ್ಯವಿರಲಿಲ್ಲ. ಆದರೂ ಸಿಸ್ಟರು ಸಂಜೆ ನಾವು ಬರೆಯುವುದನ್ನು ನೋಡುತ್ತಾ ಕೂತಿದ್ದರು. ನಾವು ಕೆಲವರು ಕಣ್ಣೀರು ಹಾಕುತ್ತಾ, ಕೆಲವರು ಶಪಿಸುತ್ತಾ, ಕೆಲವರು ನಿಟ್ಟುಸಿರು ಬಿಡುತ್ತಾ ಬರೆದೆವು. ಮುಖ ಕೆಂಪು ಮಾಡಿ ಸಿಟ್ಟಿನಿಂದ ಕೂತು ನಾವು ಬರೆಯುವುದನ್ನೇ ನೋಡುತ್ತಾ ಕೂತಿದ್ದ ಸಿಸ್ಟರಿಗೆ ಕಾನ್ವೆಂಟಿನಿಂದ ಫೋನ್ ಬಂದಿದೆಯೆಂಬ ಕರೆ ಬಂತು. ಸಿಸ್ಟರು ಧಡಕ್ಕನೇ ಎದ್ದು ಕಾನ್ವೆಂಟಿಗೆ ಓಡಿದರು. ನಾವು ಸಿಟ್ಟಿನಿಂದ ಕುದಿಯತೊಡಗಿದೆವು. ಸೂರ್ಯನೂ ಸಿಟ್ಟಿನಿಂದ ಕೆಂಪಾದ. ನೀವು ಇನ್ನು ಮನೆಗೆ ಹೋಗಿ ಎಂಬ ಸೂಚನೆ ನೀಡಿ ಮರೆಯಾದ. ಅಷ್ಟು ಹೊತ್ತಿಗೆ ಕಾನ್ವೆಂಟಿನಿಂದ ಮದರ್ ಸುಪೀರಿಯರ್ ಬಂದು ಮಕ್ಕಳೇ, ನೀವು ಮನೆಗೆ ಹೋಗಿ, ಇನ್ನು ನಾಳೆ ನೋಡೋಣ ಎಂದರು. ನಾಲ್ಕೈದು ಮಕ್ಕಳು ಒಟ್ಟಾಗಿ ಇಲ್ಲ, ನಾವು ಸಿಸ್ಟರ್ ಹೇಳದೆ ಹೋಗುವುದಿಲ್ಲ ಎಂದರು. ಸಿಸ್ಟರು ನನ್ನಲ್ಲಿ ಹೇಳಿದ್ದಾರೆ. ಅವರ ಮಾತನ್ನೇ ನಿಮಗೆ ಹೇಳುತ್ತಿದ್ದೇನೆ ಎಂದಾಗ ಮಕ್ಕಳೆಲ್ಲಾ ಒಟ್ಟಾಗಿ, ಇಲ್ಲ, ನಾವು ಅವರು ಬಂದ ಮೇಲೆಯೇ ಹೋಗುತ್ತೇವೆ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಮದರ್ ಪರಿಪರಿಯಾಗಿ ಸಮಾಧಾನದಿಂದ ಹೇಳಿ ನೋಡಿದರು. ಬೆದರಿಸಿ ಹೇಳಿ ನೋಡಿದರು. ಊಹೂಂ, ಯಾರೂ ತಮ್ಮ ನಿಲುವಿನಿಂದ ಕದಲಲಿಲ್ಲ. ಎಲ್ಲರೂ ರೋಷದಿಂದ ಕುದಿಯುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ನಾನು ಮತ್ತು ಫ್ಲೋರಿನ್ ಇಬ್ಬರೂ ಮನೆಗೆ ಹೋಗುವುದೆಂದು ಗೇಟಿನ ಬಳಿ ಬಂದಾಗ ಅಲ್ಲಿ ಕೆಲವು ಹೆತ್ತವರು ಬರುವುದು ಕಂಡಿತು. ವಿಷಯ ತಿಳಿದು ಸಿಟ್ಟುಗೊಂಡ ಅವರು ಅದು ಹೇಗೆ ನೀವು ಹೋಗುತ್ತೀರಿ? ಎಲ್ಲರೂ ಕ್ಲಾಸಿನಲ್ಲಿರುವಾಗ? ಎಂದು ಹಿಂದೆ ಕಳಿಸಿದರು. ನಾವು ಮಣಭಾರದ ಹೆಜ್ಜೆ ಊರುತ್ತಾ ಕ್ಲಾಸಿಗೆ ಮರಳಿ ಬಂದೆವು.

ಒಂದರ್ಧ ಗಂಟೆ ಕಳೆದಿರಬಹುದು. ಶಾಲೆಯ ಕೆಳಗೆ ಅಂಗಳದಲ್ಲಿ ಹೆತ್ತವರ ಗಲಾಟೆ ಕೇಳತೊಡಗಿತು. ಶಾಲೆಯ ಸಿಸ್ಟರುಗಳಿಗೆ ಹೀನಾಯವಾಗಿ ಬೈಯುವುದು ಕೇಳುತ್ತಿತ್ತು. ಅದೇ ಹೊತ್ತಿಗೆ ಸಿಸ್ಟರ್ ಆಗ್ನೆಲಾನ ಕಾರು ಗೇಟಿನ ಹತ್ತಿರ ಬರುವುದು ಕಂಡೊಡನೇ ವಾಚ್‌ಮ್ಯಾನ್ ಅವರನ್ನು ಹಿಂದೆ ಹೋಗಬೇಕೆಂದು ಹೇಳಿದ. ಒಂದು ವೇಳೆ ಸಿಸ್ಟರ್ ಆ ಗಲಾಟೆಯ ಮಧ್ಯದಲ್ಲೇ ಹೆತ್ತವರಿಗೆ ಕಾಣಿಸಿಕೊಳ್ಳುತ್ತಿದ್ದರೆ ರೋಷದ ಕೈಗೆ ಬುದ್ಧಿಯನ್ನು ಕೊಟ್ಟ ಹೆತ್ತವರಿಂದ ಏನೇನು ಅನಾಹುತಗಳಾಗುತ್ತಿತ್ತೋ ಗೊತ್ತಿಲ್ಲ. ಕಾನ್ವೆಂಟಿನ ಮದರ್ ಮತ್ತು ಸಿಸ್ಟರುಗಳೆಲ್ಲಾ ಆದ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸಿ ಎಲ್ಲಾ ಹೆತ್ತವರನ್ನು ಸಮಾಧಾನಪಡಿಸಬೇಕಾದರೆ ಸಾಕಪ್ಪಾ ಸಾಕು ಎನಿಸಿಬಿಟ್ಟಿತು. ಯಾರ್‍ಯಾರ ಹೆತ್ತವರು ಬಂದಿದ್ದಾರೆ, ಅವರೊಂದಿಗೆ ಮಕ್ಕಳು ಮನೆಗೆ ಹೋದರು. ನನ್ನ ಅಪ್ಪ ಬೇಕರಿ ನಾರಾಯಣಣ್ಣನ ಜೊತೆಗೆ ಬಂದಿದ್ದರು. ರಾತ್ರಿ ಸುಮಾರು ಒಂಬತ್ತು ಗಂಟೆಯ ಹೊತ್ತಿಗೆ ನಾವು ಮನೆ ಸೇರಿದೆವು. ಹೆತ್ತವರು ಬಾರದ ಮಕ್ಕಳನ್ನು ಆ ರಾತ್ರಿ ಹಾಸ್ಟೆಲಿನಲ್ಲಿಯೇ ಉಳಿಸಿಕೊಳ್ಳಲಾಯಿತು. ಫೋನ್ ಸಂಪರ್ಕ ಇಲ್ಲದ ಆ ಕಾಲದಲ್ಲಿ ಹದಿಹರೆಯದ ಮಗಳೊಬ್ಬಳು ಮನೆಗೆ ಬಂದಿಲ್ಲ ಎಂದಾಗ ಅವರ ಹೆತ್ತವರ ಮನಸ್ಥಿತಿ ಹೇಗಾಗಿರಬೇಡ. ಊಹಿಸಿ. ಅವರ ಮನೆಗೆ ಸುದ್ದಿ ಮುಟ್ಟಿಸಲು ಸಿಸ್ಟರುಗಳು ಸಾಧ್ಯವಾದಷ್ಟು ಪ್ರಯತ್ನ ಮಾಡಿದರು. ಚರ್ಚಿನ ಫಾದರ್‌ಗಳಿಗೆ ಫೋನ್ ಮಾಡಿ ವಿಷಯ ತಿಳಿಸಲಾಯಿತಂತೆ. ನೀರುಮಾರ್ಗ, ಗುರುಪುರದಿಂದಲೂ ಮಕ್ಕಳು ಬರುತ್ತಿದ್ದರು. ಮಕ್ಕಳ ಮನೆಯವರಿಗೆ ವಿಷಯ ಗೊತ್ತಾಯಿತೋ ಇಲ್ಲವೋ ಮರುದಿನ ಬೆಳಿಗ್ಗೆ ಶಾಲೆಗೆ ಬಂದವರು ಆ ಮಕ್ಕಳನ್ನು ಮನೆಗೆ ಕರೆದೊಯ್ದರು.

ಸಿಟ್ಟಿನ ಭರದಲ್ಲಿ ಏನೋ ಮಾಡಿ ಸಿಸ್ಟರುಗಳಿಗೆ ಪಾಠ ಕಲಿಸಿದೆವೆಂಬ ಅಹಂಕಾರ ಮರುದಿನ ಶಾಲೆಗೆ ಬರುವಾಗ ನಮ್ಮಲ್ಲಿರಲಿಲ್ಲ. ಆ ಕೃತ್ಯದ ಪರಿಣಾಮ ಹೀಗೂ ಆಗಬಹುದು ಎಂಬ ಕಲ್ಪನೆಯೇ ನಮಗಿರಲಿಲ್ಲ. ಶಾಲೆಯೇನೋ ಶುರುವಾಯಿತು. ಪಿರೇಡುಗಳೂ ಒಂದರ ಹಿಂದೆ ಒಂದು ಸಾಗಿದವು. ಯಾವ ಶಿಕ್ಷಕರೂ ನಮ್ಮ ತರಗತಿಯತ್ತ ಇಣುಕಿ ನೋಡಲಿಲ್ಲ. ನಾವು ಬಾಲ ಸುಟ್ಟ ಬೆಕ್ಕಿನಂತೆ ಬೆಂಚಿಗಂಟಿ ಕೂತೆವು. ಸಂಜೆ ಲೀಜಿ ಟೀಚರು ಬಂದವರು ನೀವು ಸಿಸ್ಟರಲ್ಲಿ ಕ್ಷಮೆ ಕೇಳದಿದ್ದರೆ ನಾವು ಯಾರೂ ಪಾಠಕ್ಕೆ ಬರುವುದಿಲ್ಲ ಎಂದೊಡನೆಯೇ ಎಲ್ಲರಿಗೂ ಜ್ಞಾನೋದಯವಾಗಿ ಆಫೀಸ್‌ರೂಮಿನಲ್ಲಿ ಸಿಸ್ಟರ್ ಆಗ್ನೆಲಾ ಕೂತುಕೊಳ್ಳುವ ಕೋಣೆಗೆ ಸಾಲಾಗಿ ಹೋದೆವು. ಎಲ್ಲರೂ ಅವರ ಮುಂದೆ ಮೊಣಕಾಲೂರಿ ತಪ್ಪಾಯ್ತು, ಕ್ಷಮಿಸಿ ಸಿಸ್ಟರ್ ಎಂದು ಬೇಡಿಕೊಂಡೆವು. ಸಿಸ್ಟರ ಮೂಗೂ, ಕಣ್ಣೂ ಕೆಂಪಾದವು. ಸ್ವರ ನಡುಗಿತು. ನಾನು ನನಗಿಂತ ಹಿರಿಯರ ಮಾತಿಗೆ ವಿಧೇಯಳಾಗಿ ವರ್ತಿಸಿದ್ದರಿಂದ ನಿಮ್ಮನ್ನು ಮರೆತು ಹೋಗಿಬಿಟ್ಟೆ. ಆದರೆ ನೀವು ನನಗಿಂತ ಹಿರಿಯರ ಮಾತಿಗೂ ಅವಿಧೇಯರಾಗಿ ವರ್ತಿಸಿದಿರಿ, ನಿಮ್ಮನ್ನು ಕ್ಷಮಿಸಲು ನಾನ್ಯಾರು? ಸಾಧ್ಯವಾದರೆ ನನ್ನ ಮರೆವಿಗಾಗಿ ಕ್ಷಮಿಸಿರಿ. ಆದರೆ ಒಂದು ಮಾತು ಹೇಳುತ್ತೇನೆ. ಮುಂದಿನ ನಿಮ್ಮ ಜೀವನದಲ್ಲಿ ಹಿರಿಯರ ಮಾತಿಗೆ ವಿಧೇಯರಾಗಿ ನಡೆಯುವುದನ್ನು ರೂಢಿ ಮಾಡಿಕೊಳ್ಳಿ. ಇದರಿಂದ ನಿಮ್ಮ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದಾಗ ಅವರ ಕಣ್ಣೂ ನಮ್ಮ ಕಣ್ಣುಗಳೂ ತುಂಬಿ ತುಳುಕಿದವು. ಎದ್ದು ಮೌನವಾಗಿ ತರಗತಿಗೆ ತೆರಳಿದೆವು. ದುರದೃಷ್ಟವೆಂದರೆ ಅದೇ ದಿನ ಸಂಜೆಯ ಸಂಧ್ಯಾದೀಪ ಪತ್ರಿಕೆಯಲ್ಲಿ ಮೊದಲ ಪುಟದಲ್ಲಿ ದಪ್ಪ ಅಕ್ಷರದಲ್ಲಿ ನಮ್ಮ ಸ್ಟ್ರೈಕಿನ ಸುದ್ದಿ ಪ್ರಕಟವಾಗಿತ್ತು. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು. ಸುದ್ದಿ ಓದಿ ಕೆಲವರು ಸಿಸ್ಟರಪರ ವಾದ ಮಾಡಿದರೆ ಕೆಲವರು ಮಕ್ಕಳ ಪರವಾಗಿ ವಾದ ಮಾಡುತ್ತಿದ್ದರು. ಊರಿಡೀ ಈ ಸುದ್ದಿ ‘ಟಾಂ, ಟಾಂ’ ಆಯಿತು.

ಮತ್ತೆ ಯಥಾಪ್ರಕಾರ ತರಗತಿಗಳು ನಡೆದುವು. ಇಂಪೋಸಿಶನ್ ಕೊಡುವ ಶಿಕ್ಷೆಯನ್ನು ಯಾರೂ ಮತ್ತೆ ವಿಧಿಸಲಿಲ್ಲ. ನಮ್ಮನ್ನು ಶಿಕ್ಷಕರು ಅನುಮಾನದಿಂದಲೇ ನೋಡತೊಡಗಿದ್ದು ನಮ್ಮ ಅರಿವಿಗೆ ಬರುತ್ತಿತ್ತು. ಜನವರಿಯಲ್ಲಿ ಪಾಠಗಳೆಲ್ಲಾ ಮುಗಿದು ಫೆಬ್ರವರಿಯಲ್ಲಿ ವಿದಾಯ ಸಮಾರಂಭಕ್ಕೆ ಶಿಕ್ಷಕರು ತಯಾರಿ ಮಾಡತೊಡಗಿದರು. ಪ್ರತಿ ವರುಷದ ಕ್ರಮದಂತೆ ಮಕ್ಕಳೆಲ್ಲರೂ ತಮ್ಮ ಶಿಕ್ಷಕರ ಜೊತೆಗೆ ಫೋಟೋ ತೆಗೆಸಿಕೊಳ್ಳುವ ಕಾರ್ಯಕ್ರಮಕ್ಕೆ ಸಿದ್ಧರಾದೆವು. ಫೋಟೋಗ್ರಾಪರ್ ಬಂದು ಎಲ್ಲಾ ತಯಾರಾದ ಮೇಲೆ ಯಾವ ಶಿಕ್ಷಕರೂ ನಮ್ಮ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಬರಲಿಲ್ಲ. ಈ ರೀತಿಯಲ್ಲಿ ಶಿಕ್ಷಕರು ನಮ್ಮ ಅಹಂಕಾರಕ್ಕೆ ಒಂದು ಏಟು ಕೊಟ್ಟುಬಿಟ್ಟರು. ಪ್ರೇತಕಳೆ ಹೊತ್ತ ನಮ್ಮ ಎಸ್.ಎಸ್.ಎಲ್.ಸಿ. ಬ್ಯಾಚಿನ ಮುಖಗಳು ಶಾಲೆಯ ಚರಿತ್ರೆಯಲ್ಲಿ ದಾಖಲಾಯಿತು. ಶಿಕ್ಷಕರು ಕೂರದ ನಮ್ಮ ಕ್ಲಾಸ್‌ನ ಫೋಟೋವೇ ಎಲ್ಲಾ ಕತೆಯನ್ನು ಹೇಳದೆಯೂ ಸೂಚ್ಯವಾಗಿ ತಿಳಿಸಿತು. ಅವಿಧೇಯ ಮಕ್ಕಳು ಮತ್ತು ಸ್ಟೈಕ್ ಮಾಡಿದ ಮಕ್ಕಳು ಎಂಬ ಹಣೆಪಟ್ಟಿಯನ್ನು ಆ ಫೋಟೋ ಕಾಣದಂತೆಯೇ ಅಂಟಿಸಿಕೊಂಡು ಬಿಟ್ಟಿತು. ನಮ್ಮ ಸಾತ್ವಿಕ ರೋಷವು ಉಂಟುಮಾಡಿದ ಕೋಲಾಹಲದ ನೆನಪುಗಳು ಆ ಫೋಟೋವನ್ನು ನೋಡಿದಾಗ ಸಾಲು ಸಾಲಾಗಿ ಮರುಕಳಿಸುತ್ತವೆ.

ಸುಭಾಷಿತದಲ್ಲಿ ಒಂದು ಮಾತಿದೆ. ‘ಅತಿ ಹೆಚ್ಚಿನ ಸೇಡೆಂದರೆ ಕ್ಷಮೆಯೇ’. ಇದನ್ನು ಅಕ್ಷರಶಃ ನನ್ನ ಜೀವನದಲ್ಲಿ ಕಂಡೆ. ನಾನು ಸರಕಾರಿ ಶಾಲೆಗೆ ರಾಜಿನಾಮೆ ಕೊಟ್ಟಾಗ ನನ್ನನ್ನು ಕರೆದು ಅದೇ ಶಾಲೆಯಲ್ಲಿ ಖಾಯಂ ಕೆಲಸ ಕೊಟ್ಟವರು ಅದೇ ಸಿಸ್ಟರ್ ಆಗ್ನೆಲಾ. ಮುಗ್ಗರಿಸಿ ಬಿದ್ದ ನನ್ನನ್ನು ಕೈ ಹಿಡಿದು ನೆಟ್ಟಗೆ ನಿಲ್ಲಲು ನೆರವಾದರು. ಅವರೂ ದೈವತ್ವಕ್ಕೇರಿ ನಮ್ಮನ್ನು ಎತ್ತರಿಸಿ ನಮ್ಮ ಸುತ್ತ ಕ್ಷಮೆಯ ಕವಚವನ್ನೇ ತೊಡಿಸಿಬಿಟ್ಟರು. ಕ್ಷಮೆ ಮತ್ತು ಸಹನೆಗಳು ಧೀರರ ಲಕ್ಷಣವೂ ಹೌದು ಎಂಬುದನ್ನು ಆಡದೆಯೇ ಮಾಡಿ ತೋರಿಸಿ ನಮಗೆಲ್ಲಾ ಮಾದರಿಯಾದರು. ಇಂತಹ ಮಹಾನ್ ಗುರುಗಳ ಸಂತತಿ ಹೆಚ್ಚಿದಂತೆ ಉತ್ತಮ ಶಿಷ್ಯರ ಬಳಗವೂ ಹೆಚ್ಚುತ್ತದೆಂಬುದರಲ್ಲಿ ಅನುಮಾನವಿಲ್ಲ. ನನ್ನ ಬಾಲ್ಯಕಾಲದಲ್ಲಿ ಇಂತಹ ಹಲವು ಗುರುಗಳ ಸಾನ್ನಿಧ್ಯ ಲಭಿಸಿದ್ದು ನನ್ನ ಪೂರ್ವಪುಣ್ಯವೆನ್ನಬೇಕು.ನನ್ನ ಹಿಂದಿ ಮಾಸ್ಟ್ರು ಸಂಜೀವರಾಯರಂತೂ ನನಗೆ ಪ್ರಾತಃಸ್ಮರಣೀಯರು. ತುಂಡು ತೋಳಿನ ಬಿಳಿ ಶರ್ಟು, ಪಂಚೆ ಉಟ್ಟುಕೊಂಡು ಕೈಕಾಲು ಬೀಸುತ್ತಾ ರಭಸದಿಂದ ಕ್ಲಾಸ್‌ರೂಮಿಗೆ ಬಂದು ಫ್ಲಾಟ್‌ಫಾರ್ಮಿನ ಮೇಲೆ ನಿಂತರೆಂದರೆ ನಾವೆಲ್ಲಾ ಗಪ್‌ಚಿಪ್. ಬಹಳ ಶಿಸ್ತಿನ ಮನುಷ್ಯ. ಮುಖದಲ್ಲಿ ಎದ್ದು ಕಾಣುವ ಚೂಪಾದ ಮೂಗು ಅವರ ದೂರ್ವಾಸ ಕೋಪಕ್ಕೆ ಪ್ರತೀಕ. ನಮ್ಮ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಟಕಗಳಿಗೆ ಒಂದು ಮಹತ್ವದ ಸ್ಥಾನವನ್ನು ಕೊಡಿಸಿದವರು ಈ ಹಿಂದೀ ಮಾಸ್ಟರು. ಅವರ ನಿರ್ದೇಶನದ ಎಲ್ಲಾ ನಾಟಕಗಳಲ್ಲೂ ನನಗೆ ಒಂದು ಪಾತ್ರವಿದ್ದೇ ಇರುತ್ತಿತ್ತು. ತರಗತಿಯಲ್ಲಿ ಪಾಠ ಮಾಡುವಾಗ ನಗುವನ್ನು ಮರೆತೇಬಿಟ್ಟವರಂತೆ ಇರುತ್ತಿದ್ದ ಅವರು ನಾಟಕ ತಾಲೀಮಿನ ಸಮಯದಲ್ಲಿ ನವರಸಭರಿತ ನಾಯಕನಂತೆ ಕಾಣುತ್ತಿದ್ದರು. ಸ್ವರಭಾರ, ಉಚ್ಛಾರಗಳು ಅವರು ಹೇಳಿದಂತೆ ಬರಲಿಲ್ಲವೆಂದ ಕೂಡಲೇ ಸಿಟ್ಟು ಸಿಡಿಲು ಮಿಂಚಿನಂತೆ ಎರಗುತ್ತಿತ್ತು. ಏಕಲವ್ಯನ ನಾಟಕದಲ್ಲಿ ಅವನ ತಂದೆ ಹಿರಣ್ಯಧನುವಿನ ಪಾತ್ರದಲ್ಲಿ ನಾನು ಮಗನ ದುರವಸ್ಥೆಯನ್ನು ಕಂಡು ದುಃಖದಿಂದ ಅಳುವಾಗ ವೇದಿಕೆಯಲ್ಲಿ ಅತ್ತೇ ಬಿಟ್ಟಿದ್ದೆ. ತೆರೆಮರೆಯಲ್ಲಿ ನನ್ನ ನೈಜ ಅಭಿನಯವನ್ನು ಕಂಡು ಮಾಸ್ಟ್ರು ಆನಂದಬಾಷ್ಪ ಸುರಿಸಿದರಂತೆ. ನನಗೆ ಇಂತಹ ಅಳುಬುರುಕಿ ಪಾತ್ರಗಳೇ ಸಿಗುತ್ತಿದ್ದವು. ನನ್ನ ಕೀಳರಿಮೆಯೋ, ಕೌಟುಂಬಿಕ ಕಾರಣವೋ ಗೊತ್ತಿಲ್ಲ ಗಂಗಾ ಕಾವೇರಿಯರು ನಾನು ಕರೆದ ತಕ್ಷಣ ಪ್ರತ್ಯಕ್ಷರಾಗುತ್ತಿದ್ದರು. ಅವರೇ ಬರೆದ ದಿಢೀರ್ ನಾಟಕಗಳಲ್ಲಿ ನಾನು ಖಾಯಂ ಪಾತ್ರಧಾರಿ. ನಾನು ಎಸ್.ಎಸ್.ಎಲ್.ಸಿ. ಮುಗಿದ ಬಳಿಕ ಹಿಂದಿ ಪರೀಕ್ಷೆಗೆ ಕಟ್ಟಲು ಪ್ರೋತ್ಸಾಹ ನೀಡಿದವರು ಅವರೇ. ಹಿಂದಿ ವಿಶಾರದ ಪರೀಕ್ಷೆಗೆ ಪಾಠ ಹೇಳಿಸಿಕೊಳ್ಳಲು ನಾನು ಅವರ ಮನೆಗೆ ಹೋಗುತ್ತಿದ್ದೆ. ಆಗಲೇ ಗೃಹಸ್ಥರಾಗಿ ಸಣ್ಣ ಮಗುವೂ ಇತ್ತು. ನಾನು ಅವರ ಮನೆಗೆ ಹೋದಾಗ ಒಂಟಿಯಾಗಿ ಸಿಕ್ಕಾಗಲೆಲ್ಲಾ ಗುರುಪತ್ನಿ ಕಣ್ಣೀರು ಹಾಕಿ ಮಾಸ್ಟ್ರ ದೂರ್ವಾಸತನದ ಬಗ್ಗೆ ದೂರು ಹೇಳುತ್ತಿದ್ದರು. ಮಾಸ್ಟ್ರು ಸಮಯ ಸಂದರ್ಭ ಸಿಕ್ಕಾಗಲೆಲ್ಲಾ ಪತ್ನಿಯ ಮೂರ್ಖತನದ ಬಗ್ಗೆ ಬೈಯುತ್ತಿದ್ದರು. ಅವರದು ವಿರಸ ದಾಂಪತ್ಯ. ಇವರ ಸಿಟ್ಟಿನ ಭಯದಿಂದ ಪತ್ನಿ ಮಾನಸಿಕವಾಗಿ ಕುಗ್ಗಿಹೋಗಿದ್ದರು. ಎಲ್ಲವೂ ತನ್ನ ನೇರಕ್ಕೆ ತಾನು ಹೇಳಿದಂತೆ ಆಗಬೇಕು ಎಂಬ ಹಠದಿಂದಾಗಿ ಅವರು ಯಾರನ್ನೂ ತನ್ನ ಪ್ರೀತಿ, ವಿಶ್ವಾಸಕ್ಕೆ ತೆಗೆದುಕೊಳ್ಳಲೇ ಇಲ್ಲ. ಶಾಲೆಯಲ್ಲಿ ಶಿಸ್ತಿನ ಸಿಪಾಯಿಯಂತಿದ್ದು, ಪ್ರತಿಭಾವಂತರೂ ಆದುದರಿಂದ ಮಕ್ಕಳು ಗೌರವಿಸುತ್ತಿದ್ದರು. ಗಂಡ ಹೆಂಡಿರ ವಿರಸದಿಂದ ಮಕ್ಕಳಿಬ್ಬರೂ ಅವರು ಬಯಸಿದ ಮಾರ್ಗದಲ್ಲಿ ನಡೆಯಲಿಲ್ಲ. ಎತ್ತು ಏರಿಗೆಳೆದರೆ ಕೋಣ ನೀರಿಗಿಳಿಯಿತು ಅಂತಾರಲ್ಲ ಹಾಗೆ ಅವರ ಮನೆ ನಿತ್ಯ ರಣರಂಗವೇ ಆಗಿಹೋಗಿತ್ತು. ನಾನು ಮತ್ತು ಶ್ಯಾಮಲಾ ಕೂಡಾ ಹಿಂದಿ ಕಲಿಯಲು ಮನೆಗೆ ಹೋಗುತ್ತಿದ್ದಾಗ ಮಾಸ್ಟ್ರು ಪಡುವ ಪಾಡನ್ನು ನೋಡಿ ಕರುಳು ಹಿಂಡಿದಂತಾಗುತ್ತಿತ್ತು. ಅವರು ಹೆಂಡತಿ ಮಕ್ಕಳನ್ನು ತಿದ್ದಲು ಪ್ರಯತ್ನಿಸಿದರೇ ವಿನಃ ತನ್ನನ್ನು ತಿದ್ದಿಕೊಳ್ಳಲೇ ಇಲ್ಲ. ತಾನು ಪರಿಪೂರ್ಣ ಮನುಷ್ಯನೆಂಬ ಗರ್ವವಿತ್ತು ಅವರಿಗೆ. ಇದೇ ಅವರ ಕೌಟುಂಬಿಕ ವಿರಸಕ್ಕೆ ಕಾರಣವಾಗಿತ್ತು.

ಮರುವರ್ಷ ಮಾಸ್ಟ್ರು ಕಂಕನಾಡಿ ಆಸ್ಪತ್ರೆಯಲ್ಲಿದ್ದಾರೆಂಬ ಸುದ್ದಿ ಕೇಳಿ ಆಶ್ಚರ್ಯವೂ ದುಃಖವೂ ಏಕಕಾಲದಲ್ಲಾಯಿತು. ಮತಿಭ್ರಮಣೆಯಾದ ಅವರನ್ನು ನೆರೆಮನೆಯವರು ಎಡ್ಮಿಟ್ ಮಾಡಿದ್ದರಂತೆ. ನಾನು ಹೋದಾಗ ಅವರು ಗುಣಮುಖರಾಗಿದ್ದರು. ನನ್ನನ್ನು ನೋಡಿ ಯಾಕಮ್ಮಾ ಇಲ್ಲಿಗೆ ಬಂದೆ? ಇದು ಯಮನೂ ಕಾಲಿಡಲು ಹೇಸುವ ಸ್ಥಳ ಎಂದರು. ಸ್ವಲ್ಪ ಹೊತ್ತು ಇದ್ದು ಅವರ ಕ್ಷೇಮದ ಬಗ್ಗೆ ವಿಚಾರಿಸಿದಾಗ ನಾನೊಂದು ಹಾಯಿ ಹರಿಗೋಲಿಲ್ಲದ ದೋಣಿಯಲ್ಲಿ ಕೂತು ಭವಸಾಗರದಲ್ಲಿ ಈಜುತ್ತಿದ್ದೇನೆ. ಇತರರ ವಿಕಾರಗಳನ್ನು ತಿದ್ದಲು ಹೋಗಿ ನಾನೇ ವಿಕಾರಕ್ಕೊಳಗಾದೆ. ಈಗ ನನ್ನ ಮುಖವೇ ನನಗೆ ಭಯಂಕರವಾಗಿ ಕಾಣುತ್ತದೆ ಎಂದು ಹೇಳುತ್ತಾ ಅವರ ಕಣ್ಣು ತೇವಗೊಂಡಿತು. ಏನೂ ಹೇಳಲಾಗದೆ ನಾನು ಮನೆಗೆ ಮರಳಿದೆ. ಇದಾಗಿ ಒಂದೆರಡು ವರ್ಷದಲ್ಲೇ ಅಂದರೆ ನಿವೃತ್ತರಾಗುವ ಮೊದಲೇ ನಿಧನರಾದರು. ಆ ಹೊತ್ತಿಗೆ ಅವರು ಮುಲ್ಕಿ ಮೆಡಲಿನ್ ಶಾಲೆಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಮಕ್ಕಳು ಸರಿಯಾದ ಶಿಕ್ಷಣ ಪಡೆದು ಸ್ಥಿರ ಬುದ್ಧಿಯುಳ್ಳವರಾಗಿದ್ದರೆ ಬೆಥನಿ ಸಂಸ್ಥೆಯವರು ಮಕ್ಕಳಿಗೆ ಯಾವ ರೀತಿಯಲ್ಲಾದರೂ ಆಸರೆ ನೀಡುತ್ತಿದ್ದರು. ಆದರೆ ಮಕ್ಕಳು ಯಾವುದಕ್ಕೂ ಪ್ರಯೋಜನವಿಲ್ಲದಂತಾದರೆಂದು ಬೆಥನಿ ಸಂಸ್ಥೆಯ ಹಿರಿಯ ಸಿಸ್ಟರುಗಳು ಹೇಳುವುದನ್ನು ಕೇಳಿದೆ. ವಿದ್ಯೆಯಲ್ಲೂ ಮುಂದುವರಿಯದೆ ಪ್ರತಿಭೆಯನ್ನು ಸರಿಯಾಗಿ ಉಪಯೋಗಿಸಲಾಗದೆ ಏನೇನೋ ಕಷ್ಟಪಟ್ಟರೆಂದೂ ಅವರು ಹೇಳುವುದನ್ನು ಕೇಳಿದೆ. ತಾಳ್ಮೆಯೆಂಬುದು ಸಂಜೀವ ಮಾಸ್ಟ್ರ ನಿಘಂಟಿನಲ್ಲೇ ಇಲ್ಲದ ಪದವಾಗಿತ್ತು. ನಿತ್ಯ ಕದನ ಕುತೂಹಲಿಗಳಾದ ಹೆತ್ತವರು ತಾವೂ ಜೀವನದಲ್ಲಿ ವಿಫಲರಾದುದಲ್ಲದೆ ತಮ್ಮ ಮಕ್ಕಳ ಬದುಕನ್ನೂ ವಿಫಲಗೊಳಿಸುವರೆಂಬುದಕ್ಕೆ ನನ್ನ ಹಿಂದಿ ಮಾಸ್ಟ್ರ ಕುಟುಂಬವೇ ಸಾಕ್ಷಿಯಾಯಿತು. ನಾನು ಕಂಡ ಹಿಂದಿ ಮಾಸ್ಟ್ರ ಮುಖವೇ ಬೇರೆ. ಕುಟುಂಬದೊಳಗೆ ಕಂಡ ಅವರ ಮುಖವೇ ಬೇರೆ. ನಾನು ಹಿಂದಿ ಪರೀಕ್ಷೆಯಲ್ಲಿ ಪಾಸಾದುದರಿಂದಲೇ ನನಗೆ ಸರಕಾರೀ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಕೆಲಸ ಸಿಕ್ಕಿತು. ಗುರುಗಳು ಶಿಷ್ಯರ ಬಾಳಿಗೆ ಬೆಳಕಾಗುವುದೆಂದರೆ ಇದೇ ಅಲ್ಲವೇ?

ನಮ್ಮ ಕನ್ನಡ ಮಾಸ್ಟ್ರು ಸೀತಾರಾಮ ಶೆಟ್ಟರಿಗೆ ಕೊಂಕಣಿ ಮಾತೃಭಾಷೆಯ ಸಮುದಾಯದ ಮಕ್ಕಳ ಉಚ್ಛಾರ ದೋಷಗಳನ್ನು ತಿದ್ದುವುದು ಮತ್ತು ಅಚ್ಚಗನ್ನಡದಲ್ಲಿ ಮಾತನಾಡುವ ದೀಕ್ಷೆ ತೊಡಿಸುವುದು ಈ ಕೆಲಸಕ್ಕಾಗಿಯೇ ತಮ್ಮ ಸೇವೆಯನ್ನು ಮೀಸಲಾಗಿಟ್ಟಿದ್ದರು. ಅವರು ಪ್ರಬಂಧ ಬರೆಸಿದರೆ ಆರು ಮಾರ್ಕ್ಸ್‌ಗಿಂತ ಹೆಚ್ಚು ಕೊಟ್ಟದ್ದೇ ಇಲ್ಲ. ಕನ್ನಡದಲ್ಲಿ ೬೦ ಅಂಕಗಳಿಗಿಂತ ಹೆಚ್ಚು ಅಂಕ ನೀಡಿದವರಲ್ಲ. ಆಕರ್ಷಕವಾಗಿ ಪಾಠ ಮಾಡುತ್ತಿದ್ದರು. ಆದರೆ ಕೈ ಮಾತ್ರ ಯಾವಾಗಲೂ ಗಿಡ್ಡವೆಂದು ಜಾಣ ಮಕ್ಕಳೆಲ್ಲಾ ಹಿಂದಿನಿಂದ ಅವರ ಜಿಪುಣತನವನ್ನು ಟೀಕಿಸುತ್ತಿದ್ದುದುಂಟು. ಈಗಿನ ಮಕ್ಕಳಂತೆ ಪ್ರತೀ ಪಾಠಗಳಲ್ಲಿ ೯೮, ೯೯ ಅಂಕಗಳನ್ನು ಪಡೆಯುವ ಕನಸನ್ನು ಕಾಣಲು ಆಗ ಸಾಧ್ಯವಿರಲಿಲ್ಲ. ವಿಜ್ಞಾನದ ಶಿಕ್ಷಕರಾದ ಪಶುಪತಿ ಮಾಸ್ಟ್ರು, ಡ್ರಾಯಿಂಗ್ ಕಲಿಸುತ್ತಿದ್ದ ಚಂದ್ರಶೇಖರ ಮಾಸ್ಟ್ರು, ಲೆಕ್ಕ ಕಲಿಸುತ್ತಿದ್ದ ಮೀರ ಟೀಚರ್ ಇವರೆಲ್ಲಾ ಆಗ ತಾನೇ ತರಬೇತಿ ಪಡೆದು ನಮ್ಮ ಶಾಲೆಗೆ ಟೀಚರಾಗಿ ಬಂದವರು. ಶಿಕ್ಷಕ ವೃತ್ತಿಯ ಆರಂಭ ಕಾಲದಲ್ಲಿ ಎಲ್ಲರಿಗೂ ಒಂದು ಉತ್ಸಾಹ. ಒಂದು ಸ್ಪಿರಿಟ್, ವಿಶೇಷ ಕಾಳಜಿಗಳಿರುತ್ತಿದ್ದುವು. ಆದರ್ಶ ಶಿಕ್ಷಕರು ಹೇಗಿರಬೇಕು ಎಂಬುದಕ್ಕೆ ಅವರೆಲ್ಲಾ ಮಾದರಿಯಾಗಿದ್ದರು. ಹೊಲಿಗೆ ಕಲಿಸುವುದಕ್ಕೆ ಮತ್ತು ಗೃಹವಿಜ್ಞಾನಕ್ಕೆ ಸಿಸ್ಟರ್‌ನವರು ಬರುತ್ತಿದ್ದರು. ಅವರು ಒಳ ಉಡುಪುಗಳನ್ನು ಹೊಲಿಯಲು ಕಲಿಸಿದ್ದು ನೆನಪಿದೆ. ವಿಧ ವಿಧದ ಕಸೂತಿಯ ಹೆಣಿಗೆಗಳನ್ನೂ ಕಲಿಸಿದ್ದರು. ನಾನು ಮಾತ್ರ ಹೊಲಿಗೆಯಲ್ಲಿ ತುಂಬಾ ದಡ್ಡಿ. ನನ್ನ ಗೆಳತಿಯರು ನನ್ನ ಪಾಲಿನದನ್ನು ಹೊಲಿದು ಕೊಡುತ್ತಿದ್ದರು. ಸಂಗೀತಕ್ಕೆ ವಾಸುದೇವ ರಾವ್ ಮಾಸ್ಟ್ರು ಬರುತ್ತಿದ್ದರು. ಪಿಟೀಲು ವಾಸುದೇವ ರಾವ್ ಎಂದೇ ಪ್ರಸಿದ್ಧರಾದ ಅವರು ಕೆಲವು ದೇಶಭಕ್ತಿ ಗೀತೆಗಳನ್ನು ಕಲಿಸುತ್ತಿದ್ದರು. ವಾರದಲ್ಲಿ ಒಂದು ದಿನ ಬಂದರೆ ಎಲ್ಲಾ ತರಗತಿಗಳಿಗೂ ಅದೇ ಪದ್ಯವನ್ನು ಹಾಡಿದ್ದೇ ಹಾಡು ಕಿಸಬಾಯಿದಾಸ ಎಂಬಂತೆ ಪುನರಾವರ್ತನೆ ಮಾಡುತ್ತಿದ್ದರು. ಕ್ರೈಸ್ತ ಸಂಸ್ಥೆಯಲ್ಲಿ ಕ್ರೈಸ್ತ ವಿದ್ಯಾರ್ಥಿಗಳೇ ಹೆಚ್ಚಿರುವಲ್ಲಿ ಸಂಗೀತವು ಔಷಧಿಗೆ ತಕ್ಕಷ್ಟು ಮಾತ್ರ ಉಪಯೋಗವಾಗುತ್ತಿದ್ದುದರಿಂದ ಆ ಹದವರಿತು ಕಲಿಸುತ್ತಿದ್ದರು. ಮೇಜಿನ ಮೇಲೆ ಚಕ್ಕಳ ಬಕ್ಕಳ (ಪದ್ಮಾಸನ) ಹಾಕಿ ಕೂತು ಕಾಲಿನಿಂದ ತಾಳ ಹಾಕುತ್ತಾ ಹಾಡು ಕಲಿಸುವ ರೀತಿಯೇ ನಮಗೆ ಕುತೂಹಲದಾಯಕವಾಗಿತ್ತು. ಮಕ್ಕಳೊಂದಿಗೆ ಬಹಳ ಪ್ರೀತಿಯಿಂದ ವ್ಯವಹರಿಸುತ್ತಿದ್ದುದರಿಂದ ನಮಗೆ ಅದೊಂದು ವಿರಾಮದ ಆಹ್ಲಾದಕರ ಪಿರೇಡೆಂದೇ ಭಾವಿಸುತ್ತಿದ್ದೆವು.

ಶಾಲೆಯಲ್ಲಿ ಪ್ರತೀವರ್ಷ ಕೈಬರಹದ ಸಂಚಿಕೆಯನ್ನು ಹೊರತರುತ್ತಿದ್ದರು. ಅದರಲ್ಲಿ ಮಕ್ಕಳು ಬರೆದ ಕವನ, ಕತೆಗಳನ್ನು ಸಂಗ್ರಹಿಸಿ ಸಂಕಲನ ಮಾಡಿ, ಚಿತ್ರ ಬಿಡಿಸುವ ಆಸಕ್ತಿಯಿದ್ದ ಮಕ್ಕಳಿಂದ ಚಿತ್ರ ಬಿಡಿಸಿ ಸುಂದರ ಸಂಪುಟವಾದ ಮೇಲೆ ದಪ್ಪ ಬೈಂಡ್ ಮಾಡಿಸಿ ಇಟ್ಟಿರುತ್ತಿದ್ದರು. ಶಾಲಾ ಇನ್ಸ್‌ಪೆಕ್ಷನ್ ಇದ್ದಾಗ, ಶಾಲೆಗೆ ಯಾರಾದರೂ ಗಣ್ಯವ್ಯಕ್ತಿಗಳು ಭೇಟಿ ಕೊಟ್ಟಾಗ ಈ ಪುಸ್ತಕವನ್ನು ಅವರ ಗಮನಕ್ಕೆ ತರುತ್ತಿದ್ದರು. ಈ ಸಂಚಿಕೆಯಲ್ಲಿ ನನ್ನ ಕವನಗಳು, ಸಣ್ಣಕಥೆಗಳು ಸಹಜವಾಗಿ ಸೇರುತ್ತಿದ್ದವು. ಯಾಕೆಂದರೆ ಅಳಿದ ಊರಿಗೆ ಉಳಿದವನೇ ಗೌಡ ಎಂತಾರಲ್ಲಾ ಹಾಗೆ ನನಗೆ ಕನ್ನಡ ಪಂಡಿತೆ ಎಂಬ ಹೆಸರು ಪುಕ್ಕಟೆಯಾಗಿ ಲಭಿಸಿತ್ತು. ಇಂತಹ ಮಿಥ್ಯಾರೋಪಗಳು ಕೂಡಾ ಪುನರಾವರ್ತನೆಯಾದಾಗ ಸತ್ಯವಾಗಿ ಪರಿಣಮಿಸುತ್ತಿದ್ದುವೋ ಏನೋ. ಈ ಹೊಗಳಿಕೆ ನನ್ನನ್ನು ಬರವಣಿಗೆಗೆ ಪ್ರೋತ್ಸಾಹಿಸಿರಬೇಕು.

೧೯೫೮ನೆಯ ವರ್ಷವಿರಬೇಕು. ನನ್ನ ಗೆಳತಿ ಭಾರತಿಯು ಶಾಲೆ ಬಿಟ್ಟು ಜೆಪ್ಪು ಮೋರ್ಗನ್‌ಗೇಟ್‌ಗೆ ಸ್ಥಳಾಂತರಗೊಂಡಳು. ಅವಳು ಅಲ್ಲಿ ಕಾಸಿಯಾ ಹೈಸ್ಕೂಲಿಗೆ ಸೇರಿದಳು. ನ್ಯಾನ್ಸಿ ಎಂಬ ಹುಡುಗಿ ಭಾರತಿಯ ನೆರೆಮನೆಯವಳು, ಕುಲಶೇಖರ ಶಾಲೆಯ ಹಾಸ್ಟೆಲ್‌ನಲ್ಲಿದ್ದು ಕಲಿಯುತ್ತಿದ್ದಳು. ಅವಳ ಮುಖಾಂತರ ನಾನು ಪತ್ರ ಬರೆದು ಭಾರತಿಗೆ ತಲುಪಿಸುತ್ತಿದ್ದೆ. ಅವಳು ಅದನ್ನು ಕಾಸಿಯಾ ಹೈಸ್ಕೂಲಿನ ತನ್ನ ಗೆಳತಿಯರಾದ ಸುಗುಣ, ಸುಮನ ಮುಂತಾದವರಿಗೆ ತೋರಿಸುತ್ತಿದ್ದಳು. ಅದು ಹೇಗೋ ಏನೋ ಅವರ ಮಧ್ಯೆ ನನ್ನ ಪತ್ರ ಮೈತ್ರಿ ಎಸ್.ಎಸ್.ಎಲ್.ಸಿ. ಮುಗಿಯುವವರೆಗೂ ನಡೆಯುತ್ತಿತ್ತು. ನಾನು ಏನು ಬರೆಯುತ್ತಿದ್ದೆನೋ ಅವರು ಏನು ಮೆಚ್ಚಿಕೊಳ್ಳುತ್ತಿದ್ದರೋ ಗೊತ್ತಿಲ್ಲ, ನನ್ನ ಪತ್ರದ ಬಗ್ಗೆ ಪ್ರಶಂಸೆಯ ಮಾತುಗಳೇ ತುಂಬಿರುತ್ತಿದ್ದರಿಂದ ನಾನು ನೆಲದ ಮೇಲಿಲ್ಲ. ಸ್ವಲ್ಪ ಮೇಲಿದ್ದೇನೆಂಬ ಭಾವ ಬಲಿಯತೊಡಗಿತು. ಬರವಣಿಗೆಗೆ ಮೂಲ ಪ್ರೇರಣೆ ಈ ಪತ್ರಗಳು ಎಂಬುದು ನನ್ನ ಅನಿಸಿಕೆ. ಈ ಪತ್ರ ಸಂವಾದದಲ್ಲಿ ನನ್ನ ಹೃದಯಾಂತರಾಳದ ಭಾವನೆಗಳಿಗೆ ಕಲ್ಪನೆಯ ದಾರ ಕಟ್ಟಿ ತೇಲಿ ಬಿಡುತ್ತಿದ್ದೆ. ಎಲ್ಲೋ ಕೆಲವರನ್ನು ಅದು ಮುಟ್ಟಿ ತಟ್ಟಿ ಖುಷಿಯನ್ನು ಕೊಟ್ಟಿರಬಹುದು. ಇವತ್ತಿಗೂ ನನಗೆ ಸಂವಹನಕ್ಕೆ ಪತ್ರಮಾಧ್ಯಮವೇ ಬಹಳ ಇಷ್ಟ.

(ಮುಂದುವರಿಯಲಿದೆ)