ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ

ಅಧ್ಯಾಯ ಹನ್ನೊಂದು

ಈ ಬಿಕರ್ನಕಟ್ಟೆಯ ಬಾಡಿಗೆ ಮನೆಯ ಪರಿಸರವು ನನ್ನ ವ್ಯಕ್ತಿತ್ವಕ್ಕೆ ಹೊಸ ರೂಪವನ್ನು ಕೊಟ್ಟಿದೆ. ಅದು ನನ್ನ ಹದಿಹರೆಯದ ಕನಸು ಕಾಣುವ ಕಾಲವೂ ಹೌದು. ಅಪ್ಪನ ಆರೋಗ್ಯದ ಕಾಳಜಿ ಸದಾ ಇರುತ್ತಿತ್ತು. ಆದರೂ ನಮ್ಮದೇ ಮನೆಯಲ್ಲಿ ನಾನೇ ದುಡಿದು ಉಣ್ಣುವ ಸೌಭಾಗ್ಯಕ್ಕೆ ಎಣೆಯುಂಟೇ? ಪುಟ್ಟ ತಮ್ಮನ ದೇಖರೇಖಿಯ ಹೊಣೆಯೂ ನನ್ನದೇ. ನಾವು ಈ ಮನೆಗೆ ಬಂದಂದಿನಿಂದಲೂ ನನ್ನ ತಮ್ಮ ಬೆಳೆದದ್ದೆಲ್ಲಾ ಕೃಷ್ಣಮ್ಮ ದೊಡ್ಡಮ್ಮನ ಮನೆಯಲ್ಲೇ. ಊಟಕ್ಕೆ ಮಾತ್ರ ನಮ್ಮ ಮನೆಗೆ ಬರುತ್ತಿದ್ದ. ರಾತ್ರಿ ಮಲಗುವುದೆಲ್ಲಾ ಅಲ್ಲಿಯೇ. ಅವರಿಗೂ ಸುತ್ತಮುತ್ತಲ ನೆರೆಹೊರೆಯವರಿಗೂ ಅವನು ಮುದ್ದಿನ ಮಗುವಾಗಿದ್ದ. ಅವನ ಅರಳು ಹುರಿದಂತಹ ಮಾತುಗಾರಿಕೆ ಮತ್ತು ಸದಾ ಒಂದಲ್ಲೊಂದು ಕೆಲಸದಲ್ಲಿ ತೊಡಗಿಕೊಂಡಿರುವ ಸ್ವಭಾವದಿಂದಾಗಿ ಊರಿನವರೆಲ್ಲಾ ಅವನನ್ನು ಕರೆದು ಮಾತಾಡಿಸುವವರೇ ಆಗಿದ್ದರು. ಮರವನ್ನಾದರೂ ಕುಟ್ಟಿ ಮಾತಾಡಿಸುವುದು ಅವನ ಸ್ವಭಾವ. ನಾರಾಯಣಣ್ಣನ ಬೇಕರಿಯಲ್ಲಿ ಅವರ ಮುದ್ದಿನ ಮಗನಂತೆ ಓಡಾಡಿಕೊಂಡಿದ್ದರಿಂದ ತಿಂಡಿ ತಿನಿಸುಗಳಿಗೇನೂ ಅವನಿಗೆ ಬರವಿರಲಿಲ್ಲ. ಕ್ರಮೇಣ ಅವನಿಗೆ ಮನೆಯವರಿಗಿಂತ ಹೆಚ್ಚು ಹೊರಗಿನವರೇ ಆತ್ಮೀಯರಾದರೇನೋ. ನಮ್ಮ ನೆರೆಮನೆಯಲ್ಲಿ ರಾಮಚಂದ್ರ ಎಂಬ ಶರಾಬು ಮಾರುವ ಹುಡುಗನೊಂದಿಗೆ ಎಂತಹ ಆತ್ಮೀಯತೆ ಬೆಳೆಯಿತೆಂದರೆ ಅವನು ಒಡಹುಟ್ಟಿದ ಅಣ್ಣನೇ ಆಗಿಬಿಟ್ಟಿದ್ದ. ಅವನಿಗೆ ಪಾರಿವಾಳ ಸಾಕಿ ಹಾರಿಸುವ ಹವ್ಯಾಸವೂ ಇತ್ತು. ನನ್ನ ತಮ್ಮ ಶಾಲೆಯಿಂದ ಬಂದೊಡನೆ ಮನೆಯ ಜಗಲಿಯಲ್ಲೇ ಚೀಲ ಬಿಸಾಡಿ ಪಾರಿವಾಳಗಳ ಹಿಂದೆ ಓಡುತ್ತಿದ್ದ. ಅಪ್ಪ, ಅಮ್ಮ ಯಾರಿಂದಲೂ ಅವನನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅವನ ಜೊತೆ ಸೇರಿ ನನ್ನ ತಮ್ಮನ ಭವಿಷ್ಯವೇ ಹಾಳಾಗುತ್ತದೇನೋ ಎಂಬ ಆತಂಕ ನನ್ನನ್ನು ಕಾಡಿದ್ದು ಸುಳ್ಳಲ್ಲ. ನವರಾತ್ರಿಯ ಸಮಯದಲ್ಲಿ ವೇಷಗಳ ಹಿಂದೆ ಮೈಲುಗಳಷ್ಟು ದೂರ ಹೋಗಿ ಊಟ ಬಿಟ್ಟು ಕತ್ತಲೆಯಾಗುವವರೆಗೂ ಸುತ್ತುತ್ತಿದ್ದ. ಅಕ್ಕ, ಅಮ್ಮ, ಅಪ್ಪ ಇಷ್ಟೆಲ್ಲಾ ಕಷ್ಟಪಡುತ್ತಾರೆ ಎಂಬ ಸಣ್ಣ ಆತಂಕವಾಗಲೀ, ನನ್ನನ್ನು ಕಾಯುತ್ತಾರೆಂದಾಗಲೀ ನನ್ನಿಂದ ಸಾಧ್ಯವಾಗುವ ಕೆಲಸ ಮಾಡಿ ಅವರಿಗೆ ಸಹಕರಿಸಬೇಕೆಂಬ ಕಳಕಳಿಯಾಗಲಿ ಅವನಲ್ಲಿರಲಿಲ್ಲ. ನಾನು ಶಾಲೆಯಿಂದ ಬಂದ ಕೂಡಲೇ ಬೀಡಿ ಸುತ್ತುತ್ತಿದ್ದೆನಲ್ಲಾ. ಅವನಿಗೆ ಅದಕ್ಕೆ ನೂಲು ಸುತ್ತಲು ಗೊತ್ತಿದೆ. ಆದರೆ ಹಾಗೆ ಕೂತಲ್ಲೇ ಕೂರುವ ಸ್ವಭಾವದವನಲ್ಲ ಅವನು. ಅವನದೇನಿದ್ದರೂ ನಿರಂತರ ಕ್ರಿಯಾಶೀಲ ಮನಸ್ಸು ಮತ್ತು ಚಟುವಟಿಕೆಯಿಂದ ಕೂಡಿದ ಕೆಲಸ. ನನ್ನಪ್ಪ ಎಷ್ಟೇ ಕಾಯಿಲೆ ಇದ್ದರೂ ನನ್ನ ಬೀಡಿ ಕೆಲಸಕ್ಕೆ ನೆರವಾಗುತ್ತಿದ್ದರು. ಎಲೆ ಕತ್ತರಿಸಿಕೊಡುತ್ತಿದ್ದರು. ಅದನ್ನು ೨೫ರ ಕಟ್ಟು ಕಟ್ಟಿ ಚಂದಗೊಳಿಸುತ್ತಿದ್ದರು. ಈ ಕೆಲಸಗಳತ್ತ ನನ್ನ ತಮ್ಮ ಕಣ್ಣೆತ್ತಿಯೂ ನೋಡಲಾರ. ಒತ್ತಾಯ ಮಾಡಿ ಕರೆದು ಕೂರಿಸಿದರೆ ಒಂದು ಹತ್ತು ನಿಮಿಷ ಕೂತು ಕೂಡಲೇ ಏನಾದರೂ ನೆಪ ಹೇಳಿ ಓಡಿಹೋದರೆ ಮತ್ತೆ ಕಣ್ಣಿಗೆ ಕಾಣಿಸದಂತೆ ಮಾಯವಾಗುತ್ತಿದ್ದ. ಅವನ ಗೆಳೆಯರ ಸಿಗ್ನಲ್‌ಗಳು ಅವನಿಗೆ ಮಾತ್ರ ತಿಳಿಯುತ್ತಿತ್ತು. ಅವನ ಗೆಳೆಯರ ಬಳಗವೂ ದೊಡ್ಡದು.

ಬಾಲ್ಯವೆಂಬುದು ಇರಬೇಕಾದುದು ಹೀಗೆಯೇ ತಾನೇ? ಆ ಮಟ್ಟಿಗೆ ಅವನು ಅದೃಷ್ಟವಂತ. ಕಂಡೆಟ್ಟು ಮೈದಾನವೋ, ಪದವು ಶಾಲೆಯ ಆಟದ ಮೈದಾನವೋ, ಬಜ್ಜೋಡಿಯ ಕೆಳಗಿನ ಗುಡ್ಡೆ, ಬೈಲುಗಳೋ ಇಲ್ಲೆಲ್ಲ ಈ ಗೆಳೆಯರ ಗುಂಪು ಮೆರವಣಿಗೆ ಹೋಗುತ್ತಿತ್ತು. ದಿಗ್ವಿಜಯಕ್ಕೆ ಹೊರಡುತ್ತಿತ್ತು. ಗುಡ್ಡೆಯ ಮೇಲೆ ಗಾಳಿಪಟ ಹಾರಿಸುತ್ತಾ ಜಾರಿ ಬಿದ್ದು ಮುಖ ಮೂತಿ ಗಾಯ ಮಾಡಿಕೊಂಡದ್ದು ಎಷ್ಟು ಸಲವೋ. ನಮ್ಮ ಮನೆಯಂಗಳದಲ್ಲಿ ಒಂದು ದೊಡ್ಡ ದಡ್ಡಾಲದ ಮರವಿತ್ತು. ಅದಕ್ಕೆ ತುಪ್ಪೆ ಗೆಣಸಿನ ಬಳ್ಳಿಯು ಹಬ್ಬಿತ್ತು. ಮರ ಹತ್ತುವುದರಲ್ಲಿ ಕೋತಿಯ ಚುರುಕುತನವಿದ್ದರೂ ಆ ದಿನ ಏಕೋ ಏನೋ ಆಯತಪ್ಪಿ ಕೆಳಗೆ ಬಿದ್ದು ಬಿಟ್ಟ. ತಲೆಗೆ ಪೆಟ್ಟಾಯಿತು. ಅಂದು ಆದಿತ್ಯವಾರ. ಅಮ್ಮ ಮನೆಯಲ್ಲಿದ್ದರು. ಸುರಿಯುವ ರಕ್ತ ಕಂಡು ಅಮ್ಮನ ಬೊಬ್ಬೆಗೆ ನೆರೆಕರೆಯವರೆಲ್ಲಾ ಓಡಿಬಂದರು. ಕೆನ್ನೆ ಮೇಲೆ ಹರಿದ ರಕ್ತವನ್ನು ಅಂಗಿಯಲ್ಲಿ ಒರಸಿ ಅದನ್ನು ಜಗಲಿಯಲ್ಲಿ ಬಿಸಾಡಿದ ನಮ್ಮ ತಮ್ಮ ಒಂದೇ ಸವನೆ ಅಲ್ಲಿಂದ ಓಡಲಾರಂಭಿಸಿದ. ಅದಕ್ಕೆ ಮದ್ದು ಹಚ್ಚೋಣ ಬಾ ಎಂದರೂ ಕೆಪ್ಪನಂತೆ ಓಡಿಯೇ ಬಿಟ್ಟ. ಗಾಬರಿಗೊಂಡು ನಿಂತ ನಾವೆಲ್ಲ ಏನೂ ಮಾಡಲಾಗದೆ ಕೈ ಕೈ ಹಿಸುಕಿಕೊಂಡೆವು. ಕೊನಗೆ ಅಮ್ಮ ಪಕ್ಕದ ಮನೆಯ ರಾಮಚಂದ್ರ (ಅವನ ಪ್ರೀತಿಯ ಅಣ್ಣ)ನನ್ನು ಕರೆದು ವಿಷಯ ತಿಳಿಸಿದರು. ಗಾಯಕ್ಕೆ ಮದ್ದು ಹಾಕದಿದ್ದರೆ ತೊಂದರೆಯಾದೀತು ಎಂದು ಕಂಪೌಂಡರ್ ಚಿಕ್ಕಪ್ಪನ ಮನೆಗೆ ಹೋಗಿ ಔಷಧಿ ತಂದು ರಾಮಚಂದ್ರನ ಕೈಯಲ್ಲಿ ಕೊಟ್ಟು `ದಯವಿಟ್ಟು ನೀನು ಗಾಯಕ್ಕೆ ಮದ್ದು ಹಚ್ಚು’ ಎಂದು ಹೇಳಿ ಕಳುಹಿಸಿಕೊಟ್ಟರು. ಅದು ಫಲಕಾರಿಯಾಯಿತು. ಅಪ್ಪ, ಅಮ್ಮ, ಅಕ್ಕನಿಗೆ ಮಣಿಯದ ನನ್ನ ತಮ್ಮ ಆ ಅಣ್ಣನಿಗೆ ಮಣಿದ. ಅಂತಹ ಒಂದು ಗೆಳೆತನ ಅವರೊಳಗಿತ್ತು.

ನನ್ನ ತಮ್ಮ ಮೂರು ವರ್ಷದ ಮಗುವಾಗಿದ್ದ ಸಮಯದ ಒಂದು ಘಟನೆ ನೆನಪಾಗುತ್ತದೆ. ಎಪ್ರಿಲ್ ತಿಂಗಳಲ್ಲಿ ಒಂದು ದಿನ ನನ್ನ ಸೋದರಮಾವನ (ಬಾಲಕೃಷ್ಣ) ಮನೆ – ಹೊಯಿಗೆಬಜಾರ್ ಎಂಬಲ್ಲಿಗೆ ನಾನು, ಅಪ್ಪ ಮತ್ತು ತಮ್ಮ ಹೋದೆವು. ಈ ಮಾವನಿಗೆ ನನ್ನ ಅಪ್ಪನ ಮೇಲೆ ವಿಶೇಷ ಗೌರವಾದರಗಳಿದ್ದವು. ಅವರು ಆರ್ಯ ಸಮಾಜದ ಅನುಯಾಯಿಯಾಗಿ ಅದರ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಬದುಕುವುದಕ್ಕೆ ನನ್ನಪ್ಪನೇ ಪ್ರೇರಣೆಯೆಂದು ನಂಬಿದ್ದರು. ಬೇರೆ ಯಾವ ಸೋದರ ಮಾವಂದಿರಿಗೂ ಆಪ್ಪನೊಂದಿಗೆ ಆತ್ಮೀಯ ಸಂಪರ್ಕವಿರಲಿಲ್ಲ. ಆದುದರಿಂದ ನನಗೂ ಬಾಲಮಾವನ ಮೇಲೆ ವಿಶೇಷ ಗೌರವವಿತ್ತು. ಸಂಜೆಯ ಹೊತ್ತಿಗೆ ಅಲ್ಲಿಗೆ ತಲುಪಿದ ನಾವು ಒಂದರ್ಧ ಗಂಟೆ ಅಲ್ಲಿದ್ದು ಹೊರಡಲು ಸಿದ್ಧರಾದಾಗ ಅತ್ತೆ ಮಾವ ನನ್ನನ್ನು ಅಂದು ಅಲ್ಲಿಯೇ ಉಳಿದು ಮರುದಿನ ಹೋಗಲು ಒತ್ತಾಯ ಮಾಡಿದರು. ತಮ್ಮನು ಅಪ್ಪನನ್ನು `ನೀವು ಹೋಗಿ, ನಾನು ಅಕ್ಕ ಇಲ್ಲೇ ನಿಲ್ಲುತ್ತೇವೆ’ ಎಂದು ಸಂತೋಷದಿಂದ ಹೇಳಿದ್ದನ್ನು ಕೇಳಿ ಎಲ್ಲರಿಗೂ ಸಂತೋಷವಾಯಿತು. ಅಪ್ಪ ಮನೆಗೆ ಮರಳಿದರು.

ಅಂದು ರಾತ್ರಿ ಸುಮಾರು ಹನ್ನೊಂದು ಗಂಟೆಯಾದರೂ ತಮ್ಮನಿಗೆ ನಿದ್ದೆ ಬರಲಿಲ್ಲ. ನಾವಿಬ್ಬರೂ ಅವರ ಮನೆಯ ಮಾಳಿಗೆಯ ದೊಡ್ಡ ಹಾಲಿನಲ್ಲಿ ಮಲಗಿದ್ದೆವು. ಹೊರಳಾಡುತ್ತಾನೆ, ಕೈಕಾಲು ಬಡಿಯುತ್ತಾನೆ. ಎದ್ದು ಕೂರುತ್ತಾನೆ. ಆದರೆ ನಿದ್ರೆ ಅವನ ಹತ್ತಿರ ಸುಳಿಯಲಿಲ್ಲ. ನಾನು ಯಾವ ಯಾವ ವಿಧದಲ್ಲಿ ರಮಿಸಿ ತಟ್ಟಿದರೂ ನನ್ನನ್ನು ಸಿಟ್ಟಿನಿಂದ ತಳ್ಳಿ ದೂರ ಸರಿಯುತ್ತಾನೆ. ನನಗೂ ಆತಂಕ ಶುರುವಾಯಿತು. ಹನ್ನೆರಡು ಗಂಟೆಯ ಹೊತ್ತಿಗೆ ಇವನ ವಾದ್ಯ ಶುರುವಾಯಿತು. ಮೊದಲು ಮಂದ್ರಸ್ವರದಲ್ಲಿದ್ದದ್ದು ಮತ್ತೆ ಮತ್ತೆ ತಾರಕಕ್ಕೇರಿತು. ಗಾಢ ಮೌನದ ಮಧ್ಯರಾತ್ರಿಯಲ್ಲಿ ಇವನದೊಂದೇ ಸ್ವರ ಜೋರಾಗಿ ಇಡೀ ಬಜಾರಿಗೇ ಕೇಳುತ್ತಿತ್ತು. ನಾನು ಎಷ್ಟು ವಿಧದಲ್ಲಿ ಸಂತೈಸಿದರೂ ಒಂದೇ ರಾಗ `ನನಗೆ ಅಮ್ಮ ಬೇಕು’ ಎಂದು. ಏನೂ ಮಾಡಲರಿಯದೆ ಅಸಹಾಯಕಳಾದ ನಾನೂ ಅವನ ಜೊತೆಗೆ ಅಳುವುದಲ್ಲದೆ ಬೇರೆ ದಾರಿಯಿಲ್ಲ. ಅತ್ತೆ ಮಾವ ಇಬ್ಬರೂ ಮೇಲೆ ಬಂದರು. ಅವರನ್ನು ಕಂಡು ಒಮ್ಮೆ ತನ್ನ ಪುಂಗಿ ನಿಲ್ಲಿಸಿದ. ಮತ್ತೆ ಅದೇ ತಾರಕ ಸ್ವರದಲ್ಲಿ ಕಿರುಚಲು ಶುರು ಮಾಡಿದ. ತಮಗೆ ತಿಳಿದ ವಿದ್ಯೆಯನ್ನು ಉಪಯೋಗಿಸಿ ಅವನನ್ನು ಸುಮ್ಮನಿರಿಸಲು ಹೆಣಗಿದರು. ಸಾಧ್ಯವಾಗಲಿಲ್ಲ. ಕೊನೆಗೆ ತಮ್ಮ ಮನೆಯಲ್ಲಿ ಮಕ್ಕಳಿಗಾಗಿ ತಂದಿಟ್ಟ ಆಟದ ಸಾಮಾನುಗಳು ಏನಿದೆಯೋ ಅವೆಲ್ಲವನ್ನೂ ಕಪಾಟಿನಿಂದ ತಂದು ಅವನ ಮುಂದೆ ಸುರುವಿದರು. ಬೊಂಬೆಗಳತ್ತ ಕಣ್ಣೆತ್ತಿಯೂ ನೋಡದವನು ಒಂದು ಆಟದ ಕಾರು ಇತ್ತು. ಅದನ್ನು ಕೈಗೆತ್ತಿಕೊಂಡು ಅಳು ನಿಲ್ಲಿಸಿದ. ಅದನ್ನು ತಿರುಗಿಸಿ ತಿರುಗಿಸಿ ನೋಡತೊಡಗಿದ. ಅಳು ನಿಲ್ಲಿಸಿದರೆ ಅದನ್ನು ನಿನಗೇ ಕೊಡುತ್ತೇನೆ ಎಂದರು ಅತ್ತೆ. ಈ ಪ್ಲ್ಯಾನ್ ವರ್ಕೌಟ್ ಆಯಿತು. ಅದನ್ನು ಎದೆಗೊತ್ತಿಕೊಂಡೇ ಮಲಗಿದ. ಅವನ ಈ ರಂಪಾಟ ಮುಗಿಯುವಾಗ ಸುಮಾರು ಎರಡು ಗಂಟೆಯಾದರೂ ಕಳೆದಿರಬಹುದು. ರಾತ್ರಿ ಮಲಗುವವರೆಗೂ ನಗುತ್ತಾ ಖುಷಿ ಖುಷಿಯಿಂದ ನಿಶ್ಚಿಂತೆಯಿಂದ ಇದ್ದವನಿಗೆ ಅಮ್ಮನ ನೆನಪಾಗಲು ಕಾರಣವೇನೆಂದರೆ, ಮಲಗುವಾಗ ಅಮ್ಮನ ಮೊಲೆಹಾಲು ಕುಡಿವ ಅಭ್ಯಾಸವಿನ್ನೂ ಅವನು ಬಿಟ್ಟಿರಲಿಲ್ಲ. ಹಗಲಲ್ಲಿ ಅಮ್ಮನ ನೆನಪೇ ಆಗದಿದ್ದರೂ ನಿದ್ದೆ ಬರಬೇಕಾದರೆ ಅಮ್ಮನ ದುಗ್ಧರಸ ಬಾಯಿಗೆ ಸುರಿಯಲೇ ಬೇಕು. ಈ ಚಟವು ಅಂದು ಅವನನ್ನು ರೊಚ್ಚಿಗೆಬ್ಬಿಸಿತು. ನನ್ನನ್ನು, ಅತ್ತೆ ಮಾವನನ್ನು ಸಾಕಪ್ಪಾ ಸಾಕು ಈ ಮಕ್ಕಳ ಸಹವಾಸವೆಂದು ಮನಸ್ಸು ನೋಯುವಂತೆ ಮಾಡಿತ್ತು. ಬೆಳಗಾದ ಕೂಡಲೇ ನನಗೆ ಯಾವಾಗ ಒಮ್ಮೆ ಮನೆಗೆ ಮುಟ್ಟಿ ಅಮ್ಮನ ಮಡಿಲಿಗೆ ಇವನನ್ನು ಎಸೆಯಲಿಲ್ಲವೆಂಬ ತವಕ ಹೆಚ್ಚಿತ್ತು.

ಮಾವನವರು ನಮ್ಮನ್ನು ಬಸ್‌ಸ್ಟ್ಯಾಂಡಿಗೆ ತಲುಪಿಸಲು ಜೊತೆಯಲ್ಲಿ ಬಂದರು. ಆಗ ಹಂಪನಕಟ್ಟೆಯಲ್ಲಿ ಮೆಹರು ಲಂಚ್ (ನೆಹರೂ ಲಂಚ್) ಹೋಮ್ ಎಂಬ ಹೋಟೇಲಿತ್ತು. ಅದರ ಮುಂದಿನಿಂದ ಸಾಗಿದರೆ ಸಿಟಿ ಬಸ್‌ಸ್ಟ್ಯಾಂಡ್ ಇತ್ತು. ಆ ಹೋಟೇಲನ್ನು ಕಂಡು ತಮ್ಮ `ನಾವು ಇಲ್ಲೇ ನೆಹರೂ ಲಂಚ್ ಹೋಟೇಲಲ್ಲಿ ಚಾ ಕುಡಿದದ್ದು’ ಎಂದು ಮಾವನನ್ನು ಕರೆದು ಹೇಳಿದ. ನನಗೆ ಆಶ್ಚರ್ಯ. ಹೌದು, ನಿನ್ನೆ ಅಪ್ಪ ನಮ್ಮನ್ನು ಅಲ್ಲಿಗೆ ಕರೆದೊಯ್ದು ತಿಂಡಿ ಕೊಡಿಸಿದ್ದರು. ನನಗೇ ಗೊತ್ತಿಲ್ಲದ್ದು ಇವನಿಗೆ ಹೇಗೆ ಗೊತ್ತಾಯಿತು? ನನಗೆ ಅದರ ಹೆಸರೂ ಗೊತ್ತಿರಲಿಲ್ಲ. ಅವನ ಮುಖ ಅರಳಿದ್ದನ್ನು ಕಂಡು ಮಾವ `ನಿನಗೆ ತಿಂಡಿ ಬೇಕಾ? ಬಾ ಹೋಗೋಣ’ ಎಂದು ಒತ್ತಾಯಿಸಿದರು. ತಮ್ಮನೇನೋ `ನಾನು ರೆಡಿ’ ಎಂದು ನಿಂತಿದ್ದ. ಅಷ್ಟು ಹೊತ್ತಿಗೆ ನಮ್ಮ ಕಡೆಗೆ ಹೋಗುವ ಬಸ್ಸು ಬಂದುದರಿಂದ ನಾನು ಬಸ್ಸು ಹತ್ತಲು ತರಾತುರಿ ಮಾಡಿದೆ. ಮಾವನಿಗೂ ಆಫೀಸಿಗೆ ಹೊತ್ತಾಗಿತ್ತು. `ಇನ್ನೊಮ್ಮೆ ಹೋಗುವಾ’ ಎಂದು ತಮ್ಮನನ್ನು ಸಮಾಧಾನ ಮಾಡಿ ಎರಡು ರೂಪಾಯಿಯನ್ನು ಅವನ ಕೈಯಲ್ಲಿಟ್ಟು ಇದು ನಿನಗೆ ಕಡಲೆ ತಿನ್ನಲಿಕ್ಕೆ ಎಂದು ಪ್ರೀತಿಯಿಂದ ತಲೆ ಸವರಿದರು. ಟಿಕೇಟು ತೆಗೆದು ಬಿಕರ್ನಕಟ್ಟೆಯಲ್ಲಿ ಇಳಿಸಲು ಕಂಡೆಕ್ಟರನಿಗೆ ಹೇಳಿ ನನ್ನ ಕೈಗೂ ಐದು ರೂಪಾಯಿ ತುರುಕಿ ಜಾಗ್ರತೆ ಎಂದು ಹೇಳಿ ಇಳಿದುಹೋದರು. ಅಂದು ಮನೆಗೆ ಬಂದು ಮುಟ್ಟಿದಾಗ ಮಹಾ ದಿಗ್ವಿಜಯ ಮಾಡಿಬಂದಷ್ಟು ಆಯಾಸವೂ, ಸಂತೋಷವೂ ಆಗಿತ್ತು. ಇನ್ನು ಮುಂದೆ ಎಂದಿಗೂ ನನ್ನ ಜೊತೆ ಅವನನ್ನು ಕರೆದೊಯ್ಯಲಾರೆನೆಂದು ಮನಸ್ಸಿನಲ್ಲೇ ಪ್ರತಿಜ್ಞೆ ಮಾಡಿದ್ದೆ. ಬದುಕಿನ ಮೇಲಿನ ಪ್ರೀತಿ ಮತ್ತು ಮೋಹಗಳು ಕೆಲವೊಮ್ಮೆ ಇಂತಹ ಅನಿರೀಕ್ಷಿತ ಪ್ರಸಂಗಗಳನ್ನೊಡ್ಡಿ ನಮ್ಮನ್ನು ಕುಸಿಯುವಂತೆ ಮಾಡುತ್ತವೆ. ಆದರೆ ಅವುಗಳು ಮುಂದೆ ಎಂದಾದರೂ ಸವಾಲುಗಳೆದುರಾದರೂ ನಿಭಾಯಿಸುವ ಗಟ್ಟಿತನವನ್ನೂ ತುಂಬುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.

ನನ್ನ ತಮ್ಮನ ಬಾಲ್ಯ ಅಷ್ಟೊಂದು ಆನಂದದಾಯಕವಾಗಿರಲು ಅವನ ಆರೋಗ್ಯವೂ ಒಂದು ಕಾರಣ. ಅವನಿಗೆ ಕಾಯಿಲೆ ಎಂದು ಆಸ್ಪತ್ರೆಗೆ ಒಯ್ದದ್ದು ನನಗೆ ನೆನಪಿಲ್ಲ. ಸುಮಾರು ೩-೪ ವರ್ಷಗಳವರೆಗೂ ಅಮ್ಮನ ಮೊಲೆಹಾಲು ಕುಡಿದುದರಿಂದಲೋ ಏನೋ ಗುಂಡು ಗುಂಡಾಗಿ ಬೆಳೆದಿದ್ದ. ಒಂದು ದಿನವೂ ಮನೆಯಲ್ಲಿ ಪುಸ್ತಕ ಹಿಡಿದು ಓದಿದ್ದನ್ನು ನಾನು ಕಂಡಿಲ್ಲ. ಅವನ ಪುಸ್ತಕಗಳು ಎಲ್ಲಿ ಇರುತ್ತಿದ್ದವೆಂದು ನಮಗೂ ಗೊತ್ತಿರಲಿಲ್ಲ. ಆದರೆ ಪರೀಕ್ಷೆಯಲ್ಲಿ ಪಾಸಾಗುತ್ತಿದ್ದ. ಗಣಿತದಲ್ಲಂತೂ ಹೆಚ್ಚಾಗಿ ೧೦೦ಕ್ಕೆ ೧೦೦ ಪಡೆಯುತ್ತಿದ್ದ. ಪರೀಕ್ಷೆ ಬಂತು ಓದು ಎಂದು ಅವನಿಗೆ ಹೇಳುವ ಅವಕಾಶವೇ ನನಗೆ ಸಿಕ್ಕಿರಲಿಲ್ಲ. ನನ್ನ ಬಾಲ್ಯದಲ್ಲಿ ಅಪ್ಪ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿಸುವುದಕ್ಕೆ ಪ್ರಯತ್ನಪಟ್ಟಂತೆ ಅವನಲ್ಲೂ ಆ ಆಸಕ್ತಿ ಮೂಡಿಸಬೇಕೆಂಬ ಕನಸು ಕಂಡದ್ದೇ ಬಂತು. ಅವನು ಅಪ್ಪನ ಅಂಕೆಗೆ ಸಿಗಲೇ ಇಲ್ಲ. ೧೯೬೩ನೇ ಇಸವಿ ಇರಬೇಕು. ನನಗೆ ಸಂಗೀತ ಕಲಿಸುವ ವ್ಯವಸ್ಥೆ ಮಾಡಿದರು ಅಪ್ಪ. ಗಣೇಶ್ ಬೀಡಿ ಕಂಪೆನಿಯಲ್ಲಿ ಕ್ಲಾರ್ಕ್ ಆಗಿದ್ದ ಕೇಶವ ಭಟ್ ಎಂಬವರು ತಮ್ಮ ಮನೆಯಲ್ಲಿ ಸಂಗೀತ ಕ್ಲಾಸು ಮಾಡುತ್ತಾರೆಂದು ತಿಳಿಯಿತು ಕುಂಞಿರಾಮಣ್ಣನಿಂದ. ಅದು ಸಂಜೆ ಆರರಿಂದ ಏಳರವರೆಗೆ. ಅವರ ಮನೆ ಬಿಕರ್ನಕಟ್ಟೆ ಕೈಕಂಬದಲ್ಲಿತ್ತು. ನನ್ನಪ್ಪ ನನ್ನ ಜೊತೆಗೆ ತಮ್ಮನನ್ನೂ ಕಳಿಸಲು ಒಪ್ಪಿಸಬೇಕಾದರೆ ತಾನು ಕಲಿತ ವಿದ್ಯೆಯನ್ನೆಲ್ಲಾ ಪ್ರಯೋಗ ಮಾಡಬೇಕಾಯಿತು. ಕೊನೆಗೂ ತಮ್ಮ ನನ್ನ ಜೊತೆ ಬರಲು ಒಪ್ಪಿದ. ಅಲ್ಲಿಗೆ ಹೋಗಿ ಸ.ಪಾ.ಸ. ಆರಂಭ ಮಾಡಬೇಕಾದರೆ ಯಾವ ಮಾಯಕರಿಂದಲೋ ಅವನ ಕಣ್ಣುಗಳು ಬಾಡುತ್ತಿದ್ದುವು. ಕೂತಲ್ಲೇ ಅಡ್ಡ ಮಲಗಿ ನಿದ್ದೆಗೆ ಜಾರುತ್ತಿದ್ದ. ನಮ್ಮ ಕ್ಲಾಸು ಮುಗಿದ ಮೇಲೆ ಅವನನ್ನು ಕೈಹಿಡಿದು ಎಬ್ಬಿಸಿ ಮನೆಗೆ ಜೊತೆಯಲ್ಲಿ ಬರುತ್ತಿದ್ದೆವು. ಹೀಗೆ ಒಂದೆರಡು ತಿಂಗಳು ನಡೆಯಿತು. ಈ ಶಿಕ್ಷೆಯಿಂದ ತನಗೆ ಯಾವಾಗ ಮುಕ್ತಿ ಸಿಗುತ್ತೋ ಎಂದು ಆತ ಚಡಪಡಿಸುತ್ತಿದ್ದ. ಪುಣ್ಯಕ್ಕೆ ಸಂಗೀತ ಮಾಸ್ಟ್ರು ನಮ್ಮ ಮನೆಗೆ ಬಂದು ಸಂಗೀತ ಪಾಠ ಮಾಡಲು ಒಪ್ಪಿದ ಮೇಲೆ ಬದುಕಿದೆಯಾ ಬಡಜೀವವೇ ಎಂದು ಹಾರಿಹೋದವನು ಸಂಗೀತದ ಸ್ವರ ಕೇಳುವಷ್ಟು ಸಮಯ ಹಾವು ಕಂಡರೆ ಭಯಗೊಂಡಂತೆ ಆ ಪರಿಸರದಿಂದಲೇ ಮಾಯವಾಗುತ್ತಿದ್ದ. ಇಂತಹ ಸಂಗೀತ ಪ್ರೀತಿ ಅವನದು. ಕೇಶವ ಭಟ್ಟರು ಕಾಂಚನದ ಸಂಗೀತ ಶಾಲೆಯಲ್ಲೇ ಇದ್ದು ಹಲವಾರು ವರ್ಷ ಕಲಿತವರು. ಅವರ ಪ್ರತಿಭೆ ಮತ್ತು ಪಾಂಡಿತ್ಯಕ್ಕೆ ಸರಿಯಾದ ಪ್ರೋತ್ಸಾಹವಾಗಲೀ, ಪ್ರಚಾರವಾಗಲೀ ಸಿಗದಿದ್ದುದರಿಂದ ತೆರೆಮರೆಯಲ್ಲೇ ಉಳಿದರೆಂದು ನನ್ನ ಭಾವನೆ. ನಾನು, ಕೆ. ಲೀಲಾವತಿ, ಮಹಾದೇವಿ ಮುಂತಾದವರು ಕೆಲಕಾಲ ಅವರಿಂದ ಪಾಠ ಹೇಳಿಸಿಕೊಂಡರೂ ಪಡಪೋಶಿ ಶಿಷ್ಯರಾದೆವೇ ಹೊರತು ಅವರಿಗೆ ಹೆಸರು ತರುವ ಶಿಷ್ಯರಾಗಲಿಲ್ಲ. ಇರಲಿ.

೧೯೬೩ರಲ್ಲಿ ನಾನು ಶಿಕ್ಷಕಿಯಾಗಿ ಮಂಗಳೂರಿನ ಕಾಪಿಕಾಡ್ ಶಾಲೆಗೆ ಕೆಲಸಕ್ಕೆ ಸೇರಿದ ಮೇಲೆ ತಮ್ಮನನ್ನು ಆರನೇ ತರಗತಿಗೆ ಅದೇ ಶಾಲೆಗೆ ನನ್ನ ಜೊತೆಯಲ್ಲಿ ನನ್ನಪ್ಪ ಕಳಿಸುವ ವ್ಯವಸ್ಥೆ ಮಾಡಿದರು. ಇದೂ ಕೂಡಾ ಅವನ ಸ್ವಾತಂತ್ರ್ಯವನ್ನು ಹರಣ ಮಾಡಿದಂತೆ ಆಯಿತು. ಅವನ ಗೆಳೆಯರೆಲ್ಲ ಪದ್ವಾ ಹೈಸ್ಕೂಲಿಗೆ ಹೋದರೆ ತಾನು ಮಾತ್ರ ನಾಲ್ಕೈದು ಮೈಲು ಕಾಲ್ನಡಿಗೆಯಲ್ಲಿ ಕಾಫಿಕಾಡು ಶಾಲೆಗೆ ಹೋಗುವುದು ದೊಡ್ಡ ಶಿಕ್ಷೆಯಾಗಿ ಅವನಿಗೆ ಕಂಡಿತು. ಪುಟು ಪುಟು ಹೆಜ್ಜೆ ಹಾಕುತ್ತಾ ಒಂದೋ ನನಗಿಂತ ನಾಲ್ಕು ಹೆಜ್ಜೆ ಮುಂದೆ ಇಲ್ಲವೇ ನಾಲ್ಕು ಹೆಜ್ಜೆ ಹಿಂದಿನಿಂದ ನಡೆದುಕೊಂಡು ಬರುತ್ತಿದ್ದನೇ ಹೊರತು ನನ್ನ ಪಕ್ಕದಲ್ಲಿ ನನ್ನೊಂದಿಗೆ ಹೆಜ್ಜೆ ಹಾಕುತ್ತಿರಲಿಲ್ಲ. ಯಾಕೆಂದರೆ ನಾನು ಹೆರಳನ್ನು ದೊಡ್ಡ ಸೂಡಿ ಹಾಕಿ ಕಟ್ಟಿಕೊಂಡು ದೊಡ್ಡ ಹೆಂಗಸರಂತೆ ಕಾಣುತ್ತಿದ್ದೆ. ಬೀದಿಯಲ್ಲಿ ನಮ್ಮನ್ನು ನೋಡಿದವರು ಎಷ್ಟೋ ಮಂದಿ ನಿಮ್ಮ ಮಗನೇ ಎಂದು ಕೇಳುತ್ತಿದ್ದರು. ಕುತ್ತಿಗೆಯಲ್ಲಿ ಕರಿಮಣಿ ಇಲ್ಲದಿದ್ದರೂ ಯಾಕೆ ಹಾಗೆ ಕೇಳುತ್ತಾರೆ ಎಂಬ ಸಂಶಯ ನನ್ನನ್ನು ಕಾಡುತ್ತಿತ್ತು. ನನ್ನನ್ನು ವಿಧವೆ ಎಂದು ತಿಳಿದರೇ? ಅಂತಹ ಕಳೆ ನನ್ನ ಮುಖದಲ್ಲಿತ್ತೇ? ಗೊತ್ತಿಲ್ಲ. ಶಾಲೆಯಲ್ಲಿ ತರಗತಿಯೊಳಗೆ ಸಾಧ್ಯವಾದಷ್ಟು ನನಗೆ ವಿಧೇಯನಾಗಿ ವರ್ತಿಸುವ `ಫೋಸು’ ಕೊಡುತ್ತಿದ್ದ. ಗೇಟು ದಾಟಿ ಹೊರಗೆ ಬಂದ ಕೂಡಲೇ ನಾನು ಅವನ ಅಕ್ಕನಾಗಿ ಬಿಡುತ್ತಿದ್ದೆ. ತರಗತಿಯಲ್ಲಿ ನಾನೇನಾದರೂ ಗದರಿಸಿದ್ದೋ, ಅವನನ್ನು ಕಡೆಗಣಿಸಿದ್ದೋ, ಅವಮಾನಿಸಿದ್ದೋ ಪ್ರಸಂಗಗಳಿದ್ದರೆ ಅದರ ಸಿಟ್ಟನ್ನು ಬಡ್ಡಿ ಸಮೇತ ಚುಕ್ತಾ ಮಾಡುತ್ತಿದ್ದ. ಆದರೆ ಮನೆಯಲ್ಲಿ ಅಪ್ಪ ಅಮ್ಮನೆದುರು ಬಿಟ್ಟರೆ ಹೊರಗಿನವರೆದುರು ಅವನ ಈ ವರ್ತನೆ ಬಹಿರಂಗವಾಗದಂತೆ ಎಚ್ಚರ ವಹಿಸುತ್ತಿದ್ದ. ಆದುದರಿಂದ ಜಾಣನೂ, ವಿಧೇಯನೂ ಆದ ತಮ್ಮ ನನಗಿದ್ದುದೇ ಭಾಗ್ಯವೆಂದು ನನ್ನ ಸಹೋದ್ಯೋಗಿಗಳು ಮೆಚ್ಚುಗೆಯ ಮಾತಾಡುತ್ತಿದ್ದರು. ಪದ್ವಾ ಹೈಸ್ಕೂಲಿನ ಶಿಕ್ಷಕರು ನನ್ನಲ್ಲಿ ಅವನ ಬಗ್ಗೆ ಇದೇ ರೀತಿಯ ಮೆಚ್ಚುಗೆಯ ನುಡಿಗಳನ್ನಾಡುವಾಗ ನಾನು ನಿಜವಾಗಿ ನೆಲದಿಂದ ಸ್ವಲ್ಪ ಮೇಲೇರಿದಂತಹ ಅನುಭವವಾಗುತ್ತಿತ್ತು.

ನೇತ್ರಾವತಿಗೆ ಹೊಸ ಸೇತುವೆ ಕಟ್ಟುತ್ತಿದ್ದ ಕಾಲದಲ್ಲಿ ಏನೇನೋ ಗಾಳಿಸುದ್ದಿಗಳು ಪ್ರಚಾರದಲ್ಲಿದ್ದವು. ಮಕ್ಕಳನ್ನು ಬಲಿ ಕೊಡಲಿಕ್ಕಾಗಿ ಕದ್ದೊಯ್ಯುತ್ತಿದ್ದಾರೆಂದೂ ಹಾಗೆ ಕದ್ದೊಯ್ದ ಮಕ್ಕಳು ಹೇಗೋ ಪಾರಾಗಿ ಬಂದರೆಂದೂ ಹಲವಾರು ಅಂತೆ ಕಂತೆಯ ಕತೆಗಳು ಎಲ್ಲರ ಬಾಯಲ್ಲೂ ಭಯಮಿಶ್ರಿತ ಕಥಾನಕವಾಗಿ, ರೆಕ್ಕೆ ಪುಕ್ಕ ಸೇರಿಕೊಂಡು ಊರೆಲ್ಲಾ ಹಾರಾಡುತ್ತಿತ್ತು. ನನ್ನ ತಮ್ಮನ ಗೆಳೆಯರ ಬಳಗದಲ್ಲಿ ಬಲಿ ಕೊಟ್ಟರೆ ದೇವರು ಪ್ರತ್ಯಕ್ಷನಾಗುವನೆಂದೂ ಸಂಕವು ತನ್ನಿಂದ ತಾನಾಗಿಯೇ ಎದ್ದು ನಿಲ್ಲುತ್ತದೆಂದೂ ಒಂದೊಂದು ಕಂಬಕ್ಕೆ ಒಬ್ಬೊಬ್ಬರನ್ನು ಬಲಿ ಕೊಡಬೇಕಾಗುತ್ತದೆಂದೂ ಕಪೋಲ ಕಲ್ಪಿತ ಕಥೆಗಳು ಪರಸ್ಪರರೊಳಗೆ ಸುಳಿದಾಡುತ್ತಿದ್ದುವು. ಇಂತಹ ಸಮಯದಲ್ಲಿ ಬೇಕರಿ ನಾರಾಯಣಣ್ಣ ಮತ್ತು ನನ್ನ ಅಪ್ಪ ಉಳ್ಳಾಲ ಸಂಕ ನೋಡಲು ಹೊರಟು ನಿಂತರು. ಅಷ್ಟರಲ್ಲಿ ತಮ್ಮ ಎಲ್ಲಿಂದ ಬಂದನೋ ಬಿರುಗಾಳಿಯಂತೆ. ನಾನೂ ಬರುತ್ತೇನೆ ಎಂದು ಹೇಳಿದ. ಅಪ್ಪ ಬೇಡವೆಂದಾಗ ಮಂದ್ರಸ್ಥಾಯಿಯಲ್ಲಿ ನಾದಸ್ವರ ಹೊರಟಿತು. ಇವರು ಅಂಗಳಕ್ಕೆ ಕಾಲಿಡಬೇಕಾದರೆ ಸ್ವರ ತಾರಕಕ್ಕೇರಿತು. ಗದರಿಸಿ, ಬೆದರಿಸಿ ನೋಡಿದರು. ಕೈಗೆ ಸಿಕ್ಕಿದ್ದ ಬೆತ್ತದಲ್ಲಿ ಹೊಡೆದು ನೋಡಿದರು. ಸ್ವರ ತಗ್ಗಲಿಲ್ಲ. ಮತ್ತಷ್ಟು ಏರಿತು. ಲಂಚ ಕೊಡುವ (ತಿಂಡಿ ತಿನ್ನಲು ಹಣ) ಆಮಿಷ ತೋರಿಸಿದರು. ಪ್ರಯೋಜನವಾಗಲಿಲ್ಲ. ನಾವು ನೆರೆಮನೆಯವರು ಅಲ್ಲಿ ಮಕ್ಕಳನ್ನು ಬಲಿ ಕೊಡುತ್ತಾರೆ ಎಂದು ಹೆದರಿಸಿದೆವು. ಹೇಗೆ ಬಲಿ ಕೊಡುತ್ತಾರೆ ಎಂದು ನನಗೆ ತೋರಿಸಿ ಎಂದು ರಾಗ ಎಳೆದ. ಅವನ ಆರ್ಭಟಕ್ಕೆ ಬಿಕರ್ನಕಟ್ಟೆಯ ಸುತ್ತಮುತ್ತಲ ಜನ ಎಲ್ಲರೂ ಬೆರಗಾಗಿ ನೋಡುತ್ತಿದ್ದರು. ಅಪ್ಪ ಬಸ್ಸಿಗಾಗಿ ಮುಂದೆ ಹೆಜ್ಜೆ ಇಡಬೇಕಾದರೆ ಹಿಂದಿನಿಂದ ಓಡಿ ಅವರ ಮುಂಡು ಹಿಡಿದು ಕೂಗುವ ದೃಶ್ಯ ನೋಡುವವರಿಗೆ ಕರುಣಾಜನಕವಾಗಿತ್ತು. ಅಪ್ಪನಲ್ಲಿ ರೌದ್ರಾವತಾರದ ಆವೇಶವಾಗಿತ್ತು. ನಾನು ಅವನ ಕೈಹಿಡಿದು ಹಿಂದಕ್ಕೆ ಎಳೆತಂದರೆ ನನ್ನ ಕೈಗೂ ಕಚ್ಚಿದ. ಕೊನೆಗೆ ಅಪ್ಪ ಉಳ್ಳಾಲ ಸಂಕ ನೋಡುವ ಪ್ರೋಗ್ರಾಮ್ ಕ್ಯಾನ್ಸಲ್ ಮಾಡಿದರು. ಹಿಂದೆ ಬಂದು ಮನೆಯಲ್ಲಿ ಕೂತಾಗ ಅವನ ಪುಂಗಿ ಬಂದಾಯಿತು. ಆಗ ಅವನು `ನನಗೂ ಅಲ್ಲಿ ಬಲಿ ಕೊಡಬೇಕಿತ್ತು’ ಎಂದು ನಿರಾಳವಾಗಿ ಹೇಳಿದಾಗ ಅಪ್ಪನಿಗೆ ಕರುಳು ಕಿತ್ತು ಬಂದಂತಾಯಿತು. ಬಲಿ ಕೊಡುವುದೆಂದರೆ ಅವನ ದೃಷ್ಟಿಯಲ್ಲಿ ಅದೂ ಒಂದು ಆಟವೆಂಬ ಭಾವನೆಯಿತ್ತು. ಆ ಆಟವನ್ನೇ ನೋಡುವುದಕ್ಕೆ ಅಪ್ಪ ಆಸ್ಪದ ಕೊಡಲಿಲ್ಲವಲ್ಲಾ ಎಂಬ ಸಿಟ್ಟು ತಮ್ಮನಲ್ಲಿತ್ತು.

ಆಗ ಸುಮಾರು ನಾಲ್ಕು ವರ್ಷದ ಹುಡುಗ. ಹಠ ಮಾಡಿದನೆಂದರೆ ಕತ್ತಿಯಿಂದ ಕಡಿದರೂ ಬಿಡುವವನಲ್ಲ. ಇಂತಹ ಹಲವಾರು ಪ್ರಸಂಗಗಳು ಎದುರಾದಾಗ ಅಪ್ಪ `ವೆಂಕಟ್ರಮಣ ಗಂಡು ಮಗುವನ್ನು ಕೊಡು ಎಂದು ಬೇಡಿಕೊಂಡೆ. ನೀನು ನಿನ್ನ ಗಂಡಗಣಗಳನ್ನೇ ಕಳಿಸಿಕೊಟ್ಟೆಯಲ್ಲೋ’ ಎಂದು ಹತಾಶರಾಗಿ ನಿವೇದಿಸಿಕೊಳ್ಳುತ್ತಿದ್ದುದುಂಟು. ಬೆದರಿಸಿ, ಗದರಿಸಿ ಅವನಿಂದ ಯಾವ ಕೆಲಸವನ್ನೂ ಮಾಡಿಸಲು ಸಾಧ್ಯವಿರಲಿಲ್ಲ. ನೀನೇ ಇಂದ್ರ ಚಂದ್ರ ಎಂದು ಹೊಗಳಿ ಅಟ್ಟಕ್ಕೇರಿಸಿದರೆ ಸ್ವಲ್ಪ ಹೊತ್ತು ಬಗ್ಗುತ್ತಿದ್ದ. ಮತ್ತೆ ಏನಾದರೂ ಉಪಾಯ ಮಾಡಿ ಅಲ್ಲಿಂದ ಯಾರಿಗೂ ಕಾಣದಂತೆ ಮಾಯವಾಗುತ್ತಿದ್ದ. ಆಟ ಕೂಟಗಳಲ್ಲಿ ಯಾವಾಗಲೂ ಮನೆಯಿಂದ ಹೊರಗೆಯೇ ಇರುತ್ತಿದ್ದ ನನ್ನ ತಮ್ಮನ ಬಗ್ಗೆ ಶಾಲೆಯಿಂದಾಗಲೀ ಊರವರಿಂದಾಗಲೀ ಯಾರೂ ದೂರು ತರಲಿಲ್ಲ ಎನ್ನುವುದೇ ಅಮ್ಮನಿಗೆ ಹೆಮ್ಮೆಯ ವಿಷಯ. ನಾನೇನಾದರೂ ಅವನ ಬಗ್ಗೆ ಒಂದೇ ಒಂದು ನಿಂದಿಸುವ ಮಾತನಾಡಿದರೂ ಅಮ್ಮ ಸಹಿಸುತ್ತಿರಲಿಲ್ಲ. ಅಪ್ಪನೂ ಜೊತೆಯಾಗುತ್ತಿದ್ದರು. ಆಗ ನಾನು ಒಂಟಿಯಾಗುತ್ತಿದ್ದೆ. ಲಿಂಗತಾರತಮ್ಯ ಮಕ್ಕಳ ಬೆಳವಣಿಗೆಯಲ್ಲಿ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ನನ್ನ ಹದಿಹರೆಯದಲ್ಲೇ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದರು ನನ್ನ ಅಪ್ಪ ಅಮ್ಮ. ನನ್ನನ್ನು ಇಂಚು ಇಂಚಾಗಿ ಹೆಣ್ಣಾಗಿಸುವ ಪ್ರಕ್ರಿಯೆ ತಮ್ಮ ಹುಟ್ಟಿದಂದಿನಿಂದಲೇ ಪ್ರಾರಂಭವಾಗಿತ್ತು ಎಂದಿದ್ದೆನಲ್ಲಾ.

ನಾನು ಸಂಗೀತ ಕಲಿಯಲು ಮಾಸ್ಟ್ರ ಮನೆಗೆ ಸಾಯಂಕಾಲ ಹೋಗುವಾಗ ನನ್ನ ರಕ್ಷಣೆಗಾಗಿಯೇ ತಮ್ಮನನ್ನು ಕಳಿಸಿರಬೇಕು ಎಂದು ನನಗೆ ಮತ್ತೆ ಅರ್ಥವಾಯಿತು. ನಾನು ಮೊದಲು ಶಿಕ್ಷಕಿಯಾಗಿ ಕಾಫಿಕಾಡು ಶಾಲೆಗೆ ಸೇರಿದಾಗ ನನ್ನ ಬಾಡಿಗಾರ್ಡ್ ಆಗಿಯೇ ಅವನನ್ನು ಅಪ್ಪ ಕಳಿಸಿರಬೇಕು. ಈ ದೂರಾಲೋಚನೆಯಲ್ಲಿ ನನ್ನ ಹಿತವೂ ಇತ್ತು. ಅವರ ಸ್ವಾರ್ಥವೂ ಇತ್ತು. ಹದಿಹರೆಯದ ಚಂಚಲ ಮನಸ್ಸನ್ನು ನಿಯಂತ್ರಿಸುವುದು ಕಷ್ಟವೆಂದು ಅಪ್ಪನಿಗೆ ಗೊತ್ತಿದ್ದ ಸಂಗತಿಯಲ್ಲವೇ? ಅವರ ಯೌವನ ಕಾಲದಲ್ಲಿ ಹೆಣ್ಮಕ್ಕಳನ್ನು ಹೇಗೆ ಮರುಳು ಮಾಡಬಹುದು ಎಂಬುದನ್ನು ಸ್ವತಃ ಮಾಡಿಯೂ ನೋಡಿಯೂ ಅನುಭವವಿದ್ದವರಲ್ಲವೇ? ಆದುದರಿಂದ ಅಪ್ಪ ಈ ಮುಂಜಾಗ್ರತೆ ವಹಿಸಿದರು.

ನಾನು ಐದಾರು ವರ್ಷ ಸಂಗೀತ ಕಲಿಯಲು ಪ್ರೋತ್ಸಾಹಿಸಿದ ಅಪ್ಪ ಹೊರಗೆಲ್ಲೂ ಹಾಡಲು ಬಿಡಲಿಲ್ಲ. ನಮ್ಮ ಸಂಗೀತ ಮಾಸ್ಟ್ರು ಕೆ. ಲೀಲಾವತಿ ಮತ್ತು ನನ್ನನ್ನು ಕಟೀಲು ದೇವಸ್ಥಾನದಲ್ಲಿ ಹಾಡುವ ಅವಕಾಶವನ್ನು ನಮ್ಮ ಮುಂದಿಟ್ಟಾಗ ಅಪ್ಪ ಒಪ್ಪಲಿಲ್ಲ. ಲೀಲಾವತಿ ಒಬ್ಬರೇ ಹಾಡಬೇಕಾಯಿತು. ಹಾಗೆ ಹಾಡುವ ಕಾರ್ಯಕ್ರಮಗಳು ರಾತ್ರಿಯಲ್ಲಿ ನಡೆಯುವಂತಹವುಗಳಲ್ಲವೇ? ಅದು ಅವರಿಗೆ ಏನೋ ಭಯ ಹುಟ್ಟಿಸಿರಬಹುದೇ? ಡ್ಯಾನ್ಸರ್ ಸೀತಾ ಅವರ ನೃತ್ಯ ಕಾರ್ಯಕ್ರಮಗಳಲ್ಲಿ ಹಾಡುವುದಕ್ಕೂ ಆಹ್ವಾನವಿತ್ತಿದ್ದರು. ಅದಕ್ಕೂ ಅಪ್ಪ ಬಿಡಲಿಲ್ಲ. ಕಲಾವಿದರ ಬಗ್ಗೆ ಏನೋ ಒಂದು ರೀತಿಯ ಗುಮಾನಿ ಅಪ್ಪನಿಗೆ ಇತ್ತು ಎಂದು ಕಾಣುತ್ತದೆ. ಇಂತಹ ಒಡನಾಟಗಳು ನನ್ನನ್ನು ಕುಟುಂಬದಿಂದ ದೂರ ಒಯ್ದು ಬಿಡಬಹುದು ಎಂಬ ಸಂದೇಹವಿತ್ತೇ? ನಾನು ಯಾರನ್ನಾದರೂ ಪ್ರೀತಿಸಿ ಓಡಿಹೋಗುತ್ತೇನೆಂಬ ಭಯವಿತ್ತೇ? ಒಂದು ವೇಳೆ ನನ್ನ ತಮ್ಮನೂ ಅದೇ ಆಸಕ್ತಿಯನ್ನು ಬೆಳೆಸಿಕೊಂಡವನಾಗಿರುತ್ತಿದ್ದರೆ ಅವನ ರಕ್ಷಣೆಯಲ್ಲಿ ಎಲ್ಲಿಗಾದರೂ ಹಾಡಲು ಕಳಿಸುತ್ತಿದ್ದರೇ? ಗೊತ್ತಿಲ್ಲ. ಇಂತಹ ಸಂದೇಹವಿದ್ದವರು ಉದ್ಯೋಗಕ್ಕೆ ಹೇಗೆ ಕಳಿಸಿದರು ಎಂಬ ಪ್ರಶ್ನೆ ಹುಟ್ಟುತ್ತದಲ್ಲವೇ? ಹೌದು. ಅದೇನಿದ್ದರೂ ಹಗಲು ಹೊತ್ತಿನ ಕೆಲಸ. ಅದಿಲ್ಲದೆ ನಮ್ಮ ತುತ್ತಿನ ಚೀಲ ತುಂಬದು. ನೋಡು, ನೀನು ತಮ್ಮನ ರಕ್ಷಕನಲ್ಲ. ತಮ್ಮನೇ ನಿನ್ನ ರಕ್ಷಕ ಎಂಬ ಭಾವವನ್ನು ನನ್ನಲ್ಲಿ ಮೂಡಿಸಲು ಪ್ರಯತ್ನಿಸಿದರು.

ಗಂಡು ಮಗುವಿಗೆ ನಮ್ಮ ಸಮಾಜದಲ್ಲಿ ಎಷ್ಟೊಂದು ಪ್ರಾಧಾನ್ಯತೆ ಇದೆಯೆಂದು ಎಲ್ಲರಿಗೂ ತಿಳಿದಿದೆ. ಅದರಲ್ಲೂ ನನ್ನ ಅಪ್ಪ ಅಮ್ಮ ಹಲವಾರು ವರ್ಷಗಳಿಂದ ಬಯಸಿ ಬಯಸಿ ಹರಕೆ ಹೇಳಿ ಹುಟ್ಟಿದ ಮಗುವಿನ ಬಗ್ಗೆ ವಿಶೇಷ ವ್ಯಾಮೋಹವಿರುವುದು ಸಹಜವಲ್ಲವೇ? ಗಂಡುಮಗುವನ್ನು ಎಲ್ಲಾ ಹೆತ್ತವರು ಹೇಗೆ ಪೋಷಿಸುತ್ತಾರೋ ಅದೇ ರೀತಿ ನನ್ನ ಅಪ್ಪ ಅಮ್ಮನೂ ಪೋಷಿಸಿದರು. ಪುಂಡ ಪೋಕರಿಗಳೊಂದಿಗಿನ ಸಹವಾಸ ಅವನಿಗಿದ್ದರೂ ಅವರ ದುರ್ಗುಣಗಳನ್ನು ಎಂದೂ ಕಲಿತುಕೊಳ್ಳದ, ಯಾರಿಂದಲೂ ಕೆಟ್ಟವನೆಂದು ಕರೆಸಿಕೊಳ್ಳದ ತಮ್ಮನ ಗುಣನಡತೆಗಳ ಬಗ್ಗೆ ಅಪ್ಪನಿಗೆ ಒಳಗೊಳಗೇ ಹೆಮ್ಮೆಯಿತ್ತು. ಮನೆಯಲ್ಲಿ ನಾವು ಹೇಳಿದಂತೆ ಕೇಳದಿದ್ದರೇನು, ಊರಿನಲ್ಲಿ ಎಲ್ಲರಿಗೂ ಬೇಕಾದವನಾಗಿದ್ದಾನಲ್ಲಾ ಯಾಕಾಗಿ ಅವನನ್ನು ದೂಷಿಸಬೇಕು. ಇಂತಹ ಮನೋಭಾವ ಅವರಲ್ಲಿ ಗಟ್ಟಿಯಾಗಿತ್ತು. ಒಮ್ಮೆ ಸುಮಾರು ಹನ್ನೊಂದು ಗಂಟೆಯಾದರೂ ತಮ್ಮ ಮನೆಗೆ ಬಂದಿರಲಿಲ್ಲ. ಹಲವು ದಿನಗಳಿಂದ ಹೀಗೆ ತಡವಾಗಿ ಬರುತ್ತಿದ್ದ. ಯಾಕೆ ತಡವೆಂದರೆ ಆ ಗೆಳೆಯನ ಮನೆಯಲ್ಲಿ ಕೆಲಸವಿತ್ತು, ಈ ಗೆಳೆಯನ ಮನೆಯಲ್ಲಿ ಕೆಲಸವಿತ್ತು ಎಂದು ವಿವರಣೆ ನೀಡುತ್ತಿದ್ದ. ಪ್ರತಿದಿನ ಅವನನ್ನು ಕಾಯುತ್ತಾ ಕೂರುವುದು ಅಮ್ಮನ ಕರ್ತವ್ಯವಾಯಿತು. ಒಂದು ದಿನ ಅಪ್ಪ ಅಮ್ಮನಿಗೆ ತಾಕೀತು ಮಾಡಿದರು. ದೀಪ ಆರಿಸಿ ಬಾಗಿಲು ಹಾಕಿ ಒಳಗೆ ಬೋಲ್ಟ್ ಸಿಕ್ಕಿಸು.

ಅವನು ಬಂದರೆ ಅಂಗಳದಲ್ಲೇ ಮಲಗಲಿ ಎಂದರು. ಮಗನ ವಿರುದ್ಧ ಅಪ್ಪನ ಮೊದಲ ಪ್ರತಿಭಟನೆಯಿದು. ತಮ್ಮ ಬಂದ. ಬಾಗಿಲು ಬಡಿದ. ಯಾರೂ ಬಾಗಿಲು ತೆಗೆಯುವ ಲಕ್ಷಣ ಕಾಣಲಿಲ್ಲ. ನನ್ನನ್ನು ಕರೆದ. “ಬಾಗಿಲು ತೆಗೆಯುವುದಿಲ್ಲ. ಎಲ್ಲಿಂದ ಬಂದೆಯೋ ಅಲ್ಲಿಗೇ ಹೋಗು” ಎಂದೆ. ಅಮ್ಮನನ್ನು ಕರೆದ. ಅಮ್ಮ ಓಗೊಡಲಿಲ್ಲ. ಅಪ್ಪನನ್ನು ಕರೆದ. ಅವರೂ ಮಾತಾಡಲಿಲ್ಲ. ಒಂದು ಐದು ನಿಮಿಷ ಯಾರದೂ ಸದ್ದಿಲ್ಲ. ಅಮ್ಮ ಅಪ್ಪ ಗುಸುಗುಸು ಮಾತಾಡುವುದು ಕೇಳಿತು. “ಏನು ಮಾಡುವುದು? ಎಲ್ಲಾದರೂ ಸಿಟ್ಟಿನಿಂದ ಹಾರಿಬಿಟ್ಟರೆ” ಎಂಬ ಭಯದಿಂದ ನಡುಗಿದ ಅಪ್ಪ ಅಮ್ಮ “ಹೋಗು ಬಾಗಿಲು ತೆಗಿ” ಎಂದು ನನಗೆ ಆದೇಶಿಸಿದರು. ಅವನ ಅವಿಧೇಯತೆಯನ್ನು ತಿದ್ದುವ ಅವಕಾಶ ಸಿಕ್ಕಿತೆಂದು ಹಿಗ್ಗಿದ್ದ ಬೆಲೂನು ಠುಸ್ಸೆಂದಿತು. ಹೇಗೆ ಗೊತ್ತೇ? ನಮ್ಮ ಮನೆಯ ಅಂಗಳದಲ್ಲೇ ತೆರೆದ ಬಾವಿಯಿತ್ತು. ಎಲ್ಲಾದರೂ ಸಿಟ್ಟು ಬಂದು ಕುಮಾರ ಕಂಠೀರವನು ಬಾವಿಗೆ ಧುಮುಕಿದರೆ ಎಂಬ ಊಹೆಯಿಂದಲೇ ಅಪ್ಪ ಅಮ್ಮ ತತ್ತರಿಸಿದರು. ನಾನಂತೂ ಹಾಗೆ ಊಹಿಸಿರಲಿಲ್ಲ. ಸ್ವಲ್ಪ ಸತಾಯಿಸಿ ಮತ್ತೆ ಒಳಗೆ ಕರೆಯೋಣವೆಂದಿದ್ದೆ. ಅಪ್ಪ ಅಮ್ಮ ಎಷ್ಟು ರೋಷದಿಂದ ಬಾಗಿಲು ತೆಗೆಯಬೇಡ ಎಂದಿದ್ದರೋ ಅಷ್ಟೇ ಶಾಂತವಾಗಿ ಬಾಗಿಲು ತೆಗೆದು ಮಗನನ್ನು ಒಳಗೆ ಸ್ವಾಗತಿಸಿದರು. ಮಗನ ಮೇಲಿನ ಮಮತೆ ಎಂದರೆ ಹೀಗೆಯೇ ತಾನೇ? ಅವನ ಅಶಿಸ್ತನ್ನು, ಬೇಜವಾಬ್ದಾರಿತನವನ್ನು ಕಂಡು ಸಿಟ್ಟಿಗೆದ್ದು ಬೈದರೆ ಅಮ್ಮನಿಗೆ ನೋವಾಗುತ್ತಿತ್ತು. ಒಂದು ಸಲ ನಾನು ಹಾಗೆ ಬೈದಾಗ ಅಲ್ಲಾ ಮಾರಾಯ್ತಿ, ನಾನು ಹೆತ್ತ ಎಲ್ಲಾ ಮಕ್ಕಳು ಬದುಕಿರುತ್ತಿದ್ದರೆ ನೀನು ಏನು ಮಾಡುತ್ತಿದ್ದಿ? ಇರುವ ಒಬ್ಬ ತಮ್ಮನನ್ನೇ ಸಹಿಸಲು ಸಾಧ್ಯವಾಗುತ್ತಿಲ್ಲವಲ್ಲಾ ನಿನಗೆ? ಎಂದಾಗ ನನ್ನ ನಾಲಿಗೆ ಸತ್ತಂತಾಗಿತ್ತು. ಏಳು ಮಕ್ಕಳನ್ನು, ಅದರಲ್ಲೂ ಆರು ಗಂಡು ಮಕ್ಕಳನ್ನು ಗೋರಿಯೊಳಗಿಟ್ಟ ದುಃಖ ಅವರಿಂದ ಈ ಮಾತಾಡಿಸುತ್ತದೆ ಎಂದು ನನಗೆ ಅರ್ಥವಾಯಿತು. ಹೆತ್ತ ತಾಯಿಯ ಪ್ರೀತಿಗೂ, ಹಿರಿಯ ಅಕ್ಕನ ಪ್ರೀತಿಗೂ ವ್ಯತ್ಯಾಸವಿದೆಯಲ್ಲಾ. ಅದನ್ನು ನಾನು ಅರ್ಥ ಮಾಡಿಕೊಂಡೆ. ಅತಿ ಮುದ್ದು ಮತ್ತು ಅತಿ ದ್ವೇಷವು ಮಕ್ಕಳನ್ನು ಅತ್ಯಂತ ಸುಸಂಸ್ಕೃತನನ್ನಾಗಿ ರೂಪಿಸುವುದೂ ಇದೆ. ಬದುಕನ್ನು ಗೊಂದಲಮಯವನ್ನಾಗಿ ಮಾಡಿಕೊಳ್ಳುವುದೂ ಇದೆ. ನನ್ನ ತಮ್ಮ ಈ ಎರಡರ ಹದವಾದ ಮಿಶ್ರಣದಿಂದ ಎರಕ ಹೊಯ್ಯಲ್ಪಟ್ಟವನು ಎಂಬುದು ಅವನನ್ನು ಬಲ್ಲವರೆಲ್ಲರ ಅಭಿಪ್ರಾಯಗಳಾಗಿವೆ.

(ಮುಂದುವರಿಯಲಿದೆ)