(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ)
ಅಧ್ಯಾಯ ಹದಿನೈದು

ಅನಿರೀಕ್ಷಿತ ಘಟನೆಗಳನ್ನು ಎದುರಿಸುವುದು ಒಂದು ಸವಾಲು. ಆ ಸವಾಲುಗಳಲ್ಲಿ ಸೋತರೂ ಗೆದ್ದರೂ ಪಡೆವ ಜೀವನಾನುಭವಕ್ಕೆ ಬೆಲೆ ಕಟ್ಟಲಾಗದು. ಸುಮಾರು ೧೨ ವರ್ಷ ಕೃಷ್ಣಮ್ಮ ದೊಡ್ಡಮ್ಮನ ಬಾಡಿಗೆ ಮನೆಯಲ್ಲಿಯೇ ನಾವು ವಾಸವಾಗಿದ್ದೆವು. ನನ್ನ ಎಸ್.ಎಸ್.ಎಲ್.ಸಿ. ಪರೀಕ್ಷೆ, ಹಿಂದಿ ಪರೀಕ್ಷೆ, ಸಂಗೀತ ಕಲಿಕೆ, ಶಿಕ್ಷಕ ತರಬೇತಿ ಪರೀಕ್ಷೆ ಮುಗಿಸಿ ಶಿಕ್ಷಕಿಯಾಗಿ ಉದ್ಯೋಗವನ್ನೂ ಗಳಿಸಿದ್ದು ಇದೇ ಮನೆಯಲ್ಲಿ.

ನನ್ನ ಬದುಕಿನ ಅಪೂರ್ವ ಕ್ಷಣಗಳು ದಾಖಲಾದುದು ಈ ಮನೆಯಲ್ಲಿ. ಒಂದು ದಿನ ದೊಡ್ಡಮ್ಮ ಮನೆಗೆ ಬಂದು ನೀವು ಬಾಡಿಗೆ ಹೆಚ್ಚು ಕೊಡಬೇಕು ಎಂದು ಅಪ್ಪನಲ್ಲಿ ಹೇಳಿದರು. ಆಗ ೧೨ ರೂ. ಬಾಡಿಗೆಯಿತ್ತು ನಮಗೆ. ಎಷ್ಟು ಹೆಚ್ಚು ಕೊಡಬೇಕೆಂದು ಅವರು ಹೇಳಲಿಲ್ಲ. ಅಪ್ಪ ಕೇಳಲಿಲ್ಲ. “ಸರಿ ಕೊಡೋಣ. ನಿನ್ನ ಇತರ ಬಾಡಿಗೆದಾರರೆಲ್ಲಾ ಹೆಚ್ಚು ಕೊಡುತ್ತಾರಾದರೆ ನಾನೂ ಕೊಡುತ್ತೇನೆ” ಎಂದುಬಿಟ್ಟರು. ಇದು ದೊಡ್ಡಮ್ಮನಿಗೆ ಇರಿಸುಮುರಿಸಿಗೆ ಕಾರಣವಾಯಿತು. ಉಳಿದ ನಾಲ್ಕು ಬಿಡಾರಗಳಲ್ಲಿ ಈ ಪ್ರಸ್ತಾಪ ಎತ್ತದ ದೊಡ್ಡಮ್ಮ ನಮ್ಮಲ್ಲಿ ಮಾತ್ರ ಕೇಳಲು ಕಾರಣ ನನಗೆ ಕೆಲಸ ಸಿಕ್ಕಿದುದರಿಂದಲೂ ಇರಬಹುದು. ಅಷ್ಟರವರೆಗೆ ತನ್ನ ಅತ್ತಿಗೆ (ಅಣ್ಣನ ಹೆಂಡತಿ)ಯೆಂಬ ಪ್ರೀತಿ, ಗೌರವವನ್ನಿರಿಸಿಕೊಂಡ ಅಪ್ಪನಿಗೆ ಅವರ ಈ ಬೇಡಿಕೆ ಹಿತವೆನಿಸಲಿಲ್ಲ. ದೊಡ್ಡಮ್ಮನಿಗೂ ಅಪ್ಪನ ಮಾತು ತನ್ನನ್ನು ವಿರೋಧಿಸುವ ಧ್ವನಿಯಂತೆ ಕಂಡಿತೋ ಏನೋ? “ಹೌದಾ, ಹಾಗಾ ನಿಮ್ಮ ಅಭಿಪ್ರಾಯ?” ಎಂದವರೇ ಸಿಟ್ಟಿನಿಂದ ಮೆಟ್ಟಿಲಿಳಿದು ಹೋದರು. ಹೋದವರು ತನ್ನ ತಂಗಿಯ ಗಂಡನಲ್ಲಿ ಈ ವಿಷಯ ಹೇಳಿದರೆಂದು ಕಾಣುತ್ತದೆ. ತಂಗಿ ಮತ್ತು ತಂಗಿಯ ಗಂಡ ಮರುದಿನ ನಮ್ಮ ಅಂಗಳದಲ್ಲಿ ನಿಂತು “ಬಿಡಾರದವರನ್ನು ಎತ್ತಿ ಕಟ್ಟುವುದಕ್ಕೆ ನೀವು ಪ್ಲಾನ್ ಮಾಡುತ್ತೀರಿ ಎಂದಾದರೆ ನಿಮಗೆ ಎಚ್ಚರಿಕೆ ಕೊಡುತ್ತೇನೆ. ನೀವು ಮನೆ ಖಾಲಿ ಮಾಡಬೇಕು. ನಿಮ್ಮ ನರಿಬುದ್ಧಿಯನ್ನು ತೋರಿಸಬೇಡಿ” ಎಂದು ಕಟುವಾಗಿ ಹೇಳಿದಾಗ ಅಪ್ಪನಿಗೆ ದಿಗ್ಭ್ರಮೆ. ನನಗೆ ಆಕಾಶವೇ ತಲೆ ಮೇಲೆ ಬಿದ್ದ ಅನುಭವ. “ನೋಡಿ, ನನಗೆ ಮನೆ ಬಾಡಿಗೆಗೆ ಕೊಟ್ಟದ್ದು ಕೃಷ್ಣಮ್ಮ. ನನ್ನ ವ್ಯವಹಾರವೇನಿದ್ದರೂ ಅವಳೊಂದಿಗೆ. ನಿಮ್ಮೊಂದಿಗಲ್ಲ. ಅವಳನ್ನು ಕಳಿಸಿ. ನರಿಬುದ್ಧಿ ಯಾರದ್ದೂಂತ ನಾನು ಹೇಳುತ್ತೇನೆ” ಎಂದಾಗ ತಂಗಿಯ ಗಂಡ ಸಿಪಾಯಿಗಿರಿಗೆ ಬರುವವರಂತೆ ಏರುಸ್ವರದಲ್ಲಿ ಬಯ್ಯತೊಡಗಿದಾಗ ಅಪ್ಪನನ್ನು ನಾನೇ ಸಮಾಧಾನಪಡಿಸಿ ಸುಮ್ಮನಾಗಿಸಿದೆ. ಅಪ್ಪನಿಗೆ ಅವರ ಮಟ್ಟದ ಸ್ವರದಲ್ಲಿ ಮಾತಾಡುವುದು ಸಾಧ್ಯವಿರಲಿಲ್ಲ. ಹೀಗೊಂದು ಆಘಾತ ಸಂಭವಿಸಬಹುದೆಂದು ಊಹಿಸುವುದೂ ನಮಗೆ ಸಾಧ್ಯವಿರಲಿಲ್ಲ. ಯಾಕೆಂದರೆ ನಮ್ಮೊಂದಿಗೆ ದೊಡ್ಡಮ್ಮನವರು ಹಾಲು-ಜೇನಿನಂತಹ ಬಾಂಧವ್ಯವಿರಿಸಿಕೊ೦ಡಿದ್ದರು. ನನ್ನ ತಮ್ಮ ದೊಡ್ಡಮ್ಮನ ಮನೆಯಲ್ಲೇ ಬೆಳೆದದ್ದು. ಮಾತ್ರವಲ್ಲ ರಾತ್ರಿ ಮಲಗುವುದು ಅಲ್ಲಿಯೇ. ಈ ಬಾಂಧವ್ಯಕ್ಕೆ ಹುಳಿ ಹಿಂಡಿದವರಾರು? ಯಾಕೆ? ಗೊತ್ತಿಲ್ಲ. ನಾನು ಜಪ್ಪು ಮೋರ್ಗನ್ಸ್‌ಗೇಟ್‌ನಲ್ಲಿದ್ದ ನನ್ನ ಸೋದರಮಾವನ ಬಳಿಗೆ ಹೋಗಿ ವಿಷಯ ತಿಳಿಸಿದೆ. ಅವರಾದರೂ ಇದಕ್ಕೆ ಏನು ಪರಿಹಾರ ನೀಡಿಯಾರು? “ಒಂದೋ ನೀವು ಅವರು ಕೇಳಿದಷ್ಟು ಬಾಡಿಗೆ ನೀಡಲು ಒಪ್ಪಿಕೊಳ್ಳಿ. ಇಲ್ಲವೇ ಬೇರೆ ಮನೆ ಹುಡುಕಿ” ಎಂದು ಸಲಹೆ ನೀಡಿದರು. ಈ ಸಲಹೆಯನ್ನು ಒಪ್ಪಿದೆ. ತಕ್ಷಣಕ್ಕೆ ಬೇರೆ ಮನೆ ಸಿಗುವುದಾದರೂ ಎಲ್ಲಿ? ಎಂದು ಯೋಚಿಸುತ್ತಾ ಬಸ್ಸು ಇಳಿಯುವಾಗ ಲೀಲಾವತಿ ಟೀಚರು ಎದುರಿಗೆ ಸಿಕ್ಕಿದವರಲ್ಲಿ ಈ ವಿಷಯ ತಿಳಿಸಿದೆ. “ಒಳ್ಳೆಯದಾಯ್ತು ಬಿಡು. ಕಲ್ಯಾಣಿಯಕ್ಕನ ಕಂಪೌಂಡಿನಲ್ಲಿ ಬಾಡಿಗೆಗೆ ಇದ್ದವರು ಮನೆ ಬಿಟ್ಟಿದ್ದಾರೆ. ನಾನು ಅವರಲ್ಲಿ ವಿಚಾರಿಸುತ್ತೇನೆ” ಎಂದರು. ಬಡವನಿಗೆ ನಿಧಿ ಸಿಕ್ಕಿದಷ್ಟು ಸಂತೋಷವಾಯಿತು. ಮರುದಿನ ಒಪ್ಪಿಸಿ ಎಡ್ವಾನ್ಸ್ ನೀಡಲು ಸಲಹೆಯನ್ನೂ ನೀಡಿದರು. ಇದೂ ನನ್ನ ಜೀವನದಲ್ಲಿ ನಡೆದ ಪವಾಡವೆಂದೇ ನಂಬಿದ್ದೇನೆ. ಆಗ ಎಪ್ರಿಲ್ ಮೊದಲ ವಾರ. ರಜೆ ಸಿಕ್ಕಿದ ಕೂಡಲೇ ನಮ್ಮ ಬಿಡಾರ ಕಲ್ಯಾಣಿಯಕ್ಕನ ಮಾಲಕತ್ವದಲ್ಲಿರುವ ಕೋಟೇಜ್ ವ್ಯೂ ಕಂಪೌಂಡಿನ ಮನೆಗೆ ಸ್ಥಳಾಂತರವಾಯಿತು. ವಿದ್ಯುತ್ ಸಂಪರ್ಕವಿರುವ, ಆಧುನಿಕ ಕಕ್ಕಸು ಇರುವ ಮನೆಯಲ್ಲಿ ನನ್ನ ೨೪ನೇ ವಯಸ್ಸಿನಲ್ಲಿ ನಾನು ಪ್ರವೇಶ ಮಾಡಿದೆ. ಬಹುಶಃ ದೊಡ್ಡಮ್ಮ ನಮ್ಮ ಒಳ್ಳೆಯದಕ್ಕೇ ಹೀಗೊಂದು ಪ್ಲಾನ್ ಮಾಡಿರಬಹುದೇ? ಆಗುವುದೆಲ್ಲಾ ಒಳ್ಳೆಯದಕ್ಕೆ ಎಂಬ ಮಾತು ಸುಳ್ಳಲ್ಲವೆಂದು ನಂಬಿದೆ. ನಾವು ಈ ಹೊಸ ಮನೆಗೆ ಶಿಫ್ಟ್ ಆದರೂ ನನ್ನ ತಮ್ಮ ಮಾತ್ರ ದೊಡ್ಡಮ್ಮನ ಮನೆಯಲ್ಲಿ ರಾತ್ರಿ ಮಲಗುವುದನ್ನು ತಪ್ಪಿಸಲಿಲ್ಲ. ನಾವ್ಯಾರೂ ತಡೆಯಲಿಲ್ಲ. ಆದರೆ ಒಂದು ಬೇಸರದ ಸಂಗತಿಯೆಂದರೆ ಅದೇ ವರ್ಷದ ಮೇ ತಿಂಗಳಲ್ಲಿ ದೊಡ್ಡಮ್ಮನ ಮಗಳು ಇಂದಿರೆಯ ಮದುವೆ ಇತ್ತು. ದೊಡ್ಡಮ್ಮ ನಮಗೆ ಆಮಂತ್ರಣ ಪತ್ರಿಕೆಯನ್ನೇ ನೀಡಲಿಲ್ಲ. ಅವರ ಆಪ್ತ ಬಳಗದವರು ವಿರೋಧಿಸಿದರೋ ಏನೋ ಗೊತ್ತಿಲ್ಲ. ಹಾಗೆ ದೂರ ಮಾಡಿಯಾರೆಂದು ಅಪ್ಪನೂ ನಿರೀಕ್ಷಿಸಿರಲಿಲ್ಲ. “ಪರವಾಗಿಲ್ಲ ಬಿಡಿ. ಹಣ ಉಳಿಯಿತು” ಎಂದು ಅಮ್ಮ ಪರಿಸ್ಥಿತಿಯನ್ನು ಹಗುರಗೊಳಿಸಲು ಪ್ರಯತ್ನಿಸಿದರು. ಅಪ್ಪನಿಗೆ ಅದು ಕೇವಲ ಹಣದ ಪ್ರಶ್ನೆಯಾಗಿ ಕಾಣಲಿಲ್ಲ. ಅತ್ತಿಗೆಯೊಂದಿಗಿನ ಇಷ್ಟು ವರ್ಷಗಳ ಆತ್ಮೀಯ ಸಂಬಂಧದ ಪ್ರಶ್ನೆಯಾಗಿತ್ತು. ಬದುಕು ಎಂತಹ ವಿಚಿತ್ರವಲ್ಲವೇ? ನೋಡಿದರೆ ಇದೊಂದು ಕ್ಷುಲ್ಲಕ ವಿಷಯ. ಬೈದಿಲ್ಲ, ಹೊಡೆದಾಡಿಲ್ಲ. ಆದರೂ ಮನಸ್ಸು ಮುರಿಯುವಂತಹ ಸನ್ನಿವೇಶ ಸೃಷ್ಟಿಯಾಯಿತು. ಆಮೇಲೆ ನಾಲ್ಕೈದು ವರ್ಷಗಳವರೆಗೆ ನಮ್ಮೊಳಗೆ ಸಂಪರ್ಕವಿರಲಿಲ್ಲ. ಮುಖಾಮುಖಿಯಾದಾಗ ಒಡಲೊಳಗೆ ಬೆಂಕಿ ಇದ್ದರೂ ನಾನು ಮುಖದಲ್ಲಿ ಮುಗುಳುನಗುವನ್ನು ಚೆಲ್ಲುತ್ತಿದ್ದೆ. ನಗುವುದಕ್ಕೆ ದುಡ್ಡು ಕೊಡುವ ಅಗತ್ಯವಿಲ್ಲ ತಾನೇ?

ದೊಡ್ಡಮ್ಮನ ಮಗ ಉಮೇಶಣ್ಣನಿಗೆ ನನ್ನ ಸೋದರಮಾವನ ಮಗಳನ್ನು ಮದುವೆಯಾಗುವುದೆಂದು ನಿಶ್ಚಯವಾದಾಗ ದೊಡ್ಡಮ್ಮ, ಅಣ್ಣ, ನನ್ನ ಅತ್ತೆಯವರೆಲ್ಲಾ ಬಂದು ಆಗಿಹೋದ ತಪ್ಪಿಗೆ ಕ್ಷಮೆ ಕೇಳಿ ಮದುವೆ ಸಮಾರಂಭಕ್ಕೆ ಬರಬೇಕೆಂದು ಆಮಂತ್ರಿಸಿದರು. “ಕ್ಷಮಿಸುವುದಕ್ಕೆ ತಪ್ಪೇ ಮಾಡಿಲ್ಲ. ಇನ್ನು ಕ್ಷಮಿಸುವ ಮಾತೆಲ್ಲಿ. ನಾನು ಅದನ್ನು ಅಂದೇ ಮರೆತಿದ್ದೇನೆ” ಎಂದು ಹೇಳಿ ಅಪ್ಪ ಎಲ್ಲರ ಮನಸ್ಸನ್ನೂ ಸಂತೋಷದಿಂದ ಅರಳುವಂತೆ ಮಾಡಿದರು.

ಹೀಗೆ ಈ ನನ್ನ ಸ್ಥಳಾಂತರವು ಬಿಕರ್ನಕಟ್ಟೆಯ ಒಂದು ಪಾರ್ಶ್ವದಿಂದ ಇನ್ನೊಂದು ಪಾರ್ಶ್ವಕ್ಕೆ ಶಿಫ್ಟ್ ಆಯಿತು. ಬಿಕರ್ನಕಟ್ಟೆಯ ಭಾವನಾತ್ಮಕ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳಲು ಈ ಸ್ಥಳಾಂತರವೂ ಕಾರಣವಾಯಿತು. ಸುವರ್ಣ ಕಂಪೌಂಡಿನಲ್ಲಿ ಪದ್ವಾ ಹೈಸ್ಕೂಲಿನ ಟೀಚರಾಗಿದ್ದ ಲಕ್ಷ್ಮೀ ಟೀಚರು ಅಲ್ಲಿ ವಾಸವಾಗಿದ್ದರು. ನನ್ನ ಜೀವನಶೈಲಿಯನ್ನು ಬದಲಾಯಿಸಿದ, ನನ್ನ ನಂಬಿಕೆಗಳನ್ನು ಪರಿಷ್ಕರಿಸಿದ ಮಹಾಗುರು ಇವರು.

ಹಾಗೆಂದು ಅವರ ಮುಂದೆ ಹೇಳಿದರೆ ನಕ್ಕುಬಿಟ್ಟು, “ಹೇ, ಯಾರಿಗೆ ಯಾರೂ ಗುರುಗಳಾಗಲು ಸಾಧ್ಯವಿಲ್ಲ. ತಿಳಿದುಕೋ. ನಮ್ಮೊಳಗಿನ ಅಂತರಾತ್ಮಕ್ಕಿಂತ ಮಿಗಿಲಾದ ಗುರುಗಳಿಲ್ಲ. ನಮ್ಮ ಮನಸ್ಸು ಒಪ್ಪಿದರೆ ಮಾತ್ರ ಏನನ್ನಾದರೂ ಸ್ವೀಕರಿಸಲು, ಕಲಿಯಲು ಸಾಧ್ಯ ಅಲ್ಲವೇ? ಇನ್ನು ಮುಂದೆ ಇಂತಹ ನಾಟಕದ ಡೈಲಾಗುಗಳನ್ನು ಹೇಳಬೇಡ” ಎಂದು ನನ್ನ ಬಾಯಿ ಮುಚ್ಚಿಸಿಬಿಟ್ಟರು. ಇವರಿಂದ ನಾನು ತುಂಬಾ ಕಲಿಯಲಿಕ್ಕಿದೆ ಎಂಬ ಭಾವ ಮೂಡಿತು. ನಾನೂ ಲೀಲಾವತಿಯೂ ಸಂಗೀತ ಕಲಿಯುತ್ತಿದ್ದ ಸಮಯದಲ್ಲಿ ರೇಡಿಯೋದಲ್ಲಿ ಬರುವ ಸಂಗೀತ ಕಾರ್ಯಕ್ರಮಗಳನ್ನು ಕೇಳಲು ಅವರ ಮನೆಗೆ ಹೋಗುತ್ತಿದ್ದುದುಂಟು. ಯಾಕೆಂದರೆ ಆಗ ನಮ್ಮಿಬ್ಬರ ಮನೆಯಲ್ಲಿ ರೇಡಿಯೋ ಇರಲಿಲ್ಲ. ಹೀಗೆ ಮೊದಲ ಪರಿಚಯವಾದ ಲಕ್ಷ್ಮೀ ಟೀಚರರ ಮನೆ ಕ್ರಮೇಣ ಬಾಂಧವ್ಯ ಗಟ್ಟಿಗೊಳ್ಳುತ್ತಾ ಅವರೇ ನನ್ನ ಸಾಕುತಾಯಿ ಎಂಬಂತಹ ಮಮತೆ ಬೆಸೆಯಿತು. “ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡು, ತೇಲಲೀಯದು ಗುಂಡು ಮುಳುಗಲೀಯದು ಬೆಂಡು” ಎಂದು ಶರಣರು ಸಂಸಾರ ಶರಧಿಯನ್ನು ವರ್ಣಿಸಿದ್ದಾರೆ. ಅಂತಹ ಸಂಸಾರ ಶರಧಿಯಲ್ಲಿ ಯಾವುದೇ ಸುಂಟರಗಾಳಿ, ಭೋರ್ಗರೆವ ತೆರೆಗಳಿಂದ ನನ್ನನ್ನು ರಕ್ಷಿಸಿ ಸುಗಮವಾಗಿ ಜೀವನನೌಕೆಯನ್ನು ಮುನ್ನಡೆಸಲು ನೆರವಾದವರು ಅವರು. ಇಂತಿಪ್ಪ ಲಕ್ಷ್ಮೀ ಟೀಚರರ ಹಿನ್ನೆಲೆಯ ಬಗ್ಗೆ ನನಗೆ ತಿಳಿದಿರುವ ವಿಷಯಗಳನ್ನು ಹೇಳುತ್ತಿದ್ದೇನೆ.

ಕೇರಳದ ಪಾಲ್ಘಾಟಿನ ತಿರುನಿಲ್ಲಾಯ ಎಂಬ ಗ್ರಾಮದ ನಾರಾಯಣ ಅಯ್ಯರ್, ವಿಶಾಲಾಕ್ಷಿ ಅಮ್ಮಾಳ್ ಎಂಬ ದಂಪತಿಯ ಹಿರಿಮಗಳು ಈ ಲಕ್ಷ್ಮೀ ಅಯ್ಯರ್. ಇವರ ತಮ್ಮ ಸೀತಾರಾಮ. ಲಕ್ಷ್ಮೀ ಅಯ್ಯರ್ ಚಲ್ಲಮ್ಮನೆಂದೂ, ಸೀತಾರಾಮ ಅಂಬಿಯೆಂದೂ ಬಂಧುಗಳಿಂದ ಪ್ರೀತಿಯ ಹೆಸರಿನಲ್ಲಿ ಸುಪರಿಚಿತರು. ಲಕ್ಷ್ಮೀ ಟೀಚರು ೮ನೇ ತರಗತಿವರೆಗೆ ಅಲ್ಲೇ ಶಿಕ್ಷಣ ಪಡೆದರು. ನಾರಾಯಣ ಅಯ್ಯರ್ ಪದ್ವಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಉದ್ಯೋಗವನ್ನು ಪಡೆದ ಕಾರಣ ಅವರು ಮಂಗಳೂರಿಗೆ ಬರುವಂತಾಯಿತು. ಪದ್ವಾ ಹೈಸ್ಕೂಲಿನ ಬಳಿಯ ಮಲ್ಲಿ ಕಂಪೌಂಡಿನಲ್ಲಿ ಕೆಲವು ವರ್ಷ ಬಾಡಿಗೆ ಮನೆಯಲ್ಲಿದ್ದ ಈ ಕುಟುಂಬ ೧೯೬೩ರ ಸುಮಾರಿಗೆ ಬಿಕರ್ನಕಟ್ಟೆಯ ಸುವರ್ಣ ಕಂಪೌಂಡಿನಲ್ಲಿ ವಾಸಿಸತೊಡಗಿತು. ಲಕ್ಷ್ಮೀ ಟೀಚರು ಮತ್ತು ತಮ್ಮ ಸೀತಾರಾಮ ಇಲ್ಲಿ ಬಂದ ಬಳಿಕ ಕನ್ನಡ ಕಲಿತು ಎಸ್.ಎಸ್.ಎಲ್.ಸಿ. ಪಾಸು ಮಾಡಿದರು. ಲಕ್ಷ್ಮೀ ಟೀಚರು ಶಿಕ್ಷಕ ತರಬೇತಿ ಪಡೆದು ಕೊಕ್ಕಡದಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದರು. ಇದೇ ಸಮಯದಲ್ಲಿ ನಾರಾಯಣ ಅಯ್ಯರ್ ಕಾಯಿಲೆಗೊಳಗಾಗಿ ನಿಧನರಾದರು. ಸಂಸಾರನೌಕೆಯ ಕಪ್ತಾನರಾಗಿಯೂ ಶಿಕ್ಷಕ ವೃತ್ತಿಯೆಂಬ ನೌಕೆಯ ಕಪ್ತಾನರಾಗಿಯೂ ಸರಿಯಾದ ದಾರಿಯಲ್ಲಿ ಸಾಗಿದರು ಈ ಲಕ್ಷ್ಮೀ ಟೀಚರು. ಕೊಕ್ಕಡದಲ್ಲಿ ಅನಾಥ ಮಕ್ಕಳ ಆಶ್ರಮದ ಮಕ್ಕಳಿಗೆ ಸಮವಸ್ತ್ರವಾಗಿ ನೀಲಿ, ಬಿಳಿ ಬಟ್ಟೆಯನ್ನು ಶಾಲೆಯ ಆಡಳಿತ ಮಂಡಳಿ (ಕೆಥೋಲಿಕ್ ಬೋರ್ಡ್) ಸರಬರಾಜು ಮಾಡುತ್ತಿತ್ತು. ಈ ಮಕ್ಕಳ ಮಧ್ಯೆ ತಾನು ಬಣ್ಣದ ಸೀರೆಯಲ್ಲಿ ಕಾಣಿಸಿಕೊಳ್ಳಬಾರದೆಂದು ನಿರ್ಧರಿಸಿದ ಲಕ್ಷ್ಮೀ ಟೀಚರು ಜೀವನಪರ್ಯಂತ ನೀಲಿ ಸೀರೆ, ಬಿಳಿ ರವಕೆ ಬಿಟ್ಟರೆ ಬೇರೆ ಬಣ್ಣವನ್ನು ಮೈಗೆ ಮುಟ್ಟಿಸಿಕೊಂಡಿಲ್ಲ. ಇಂತಹ ದೀಕ್ಷೆ ತೊಟ್ಟದ್ದು ಅವರ ೧೯-೨೦ರ ವಯಸ್ಸಿನಲ್ಲಿ. ಬೇರೆ ಬಣ್ಣದ ಅಥವಾ ಬಣ್ಣ ಬಣ್ಣದ ಹೂವಿರುವ ಚಿತ್ರಗಳುಳ್ಳ ಸೀರೆ ಉಡಬೇಕೆಂಬ ಆಸೆಯೇ ಇರಲಿಲ್ಲವಾ ಎಂದದ್ದಕ್ಕೆ “ನಿನಗೆ ನರಿಯ ಕತೆ ಗೊತ್ತಿಲ್ವಾ, ದ್ರಾಕ್ಷೆ ಹುಳಿ ಅಂದದ್ದು. ಕೈಗೆ ಎಟುಕದ ವಿಷಯಗಳ ಬಗ್ಗೆ ಆಸೆ ಪಡಬಾರದು ಎಂದು ಆಗಲೇ ನಿರ್ಧಾರ ಮಾಡಿದ್ದೆ” ಎಂದು ಉತ್ತರಿಸಿದ್ದರು. ಅವರ ಕೊಕ್ಕಡ ಶಾಲೆಯ ಅನುಭವಗಳು ಅವರನ್ನು ಕರ್ಮಯೋಗಿಯಾಗಿ ರೂಪಿಸಿದವು. ಅಲ್ಲಿ ಬ್ರಾಹ್ಮಣ ಕುಟುಂಬವೊಂದರಲ್ಲಿ ವಾಸ್ತವ್ಯವಿದ್ದು ಶಾಲೆಗೆ ಬರುತ್ತಿದ್ದ ಅವರಿಗೆ ಬದುಕೊಂದು ಹೋರಾಟಗಳ ಸಾಲು ಸರಣಿಯಾಗಿ ಅನುಭವಕ್ಕೆ ಬಂದವು. ಬದುಕಿನಲ್ಲಿ ಕೊಲ್ಲುವ ವಿಷವೂ ಇದೆ, ಬದುಕಿಸುವ ಅಮೃತವೂ ಇದೆ ಎಂಬ ಅರಿವಾಯಿತು. ವಿಷವನ್ನು ಅಮೃತವಾಗಿ ಪರಿವರ್ತಿಸುವ ಕಾಯಕದಲ್ಲಿ ಅವರು ಕೆಲವೊಮ್ಮೆ ಸೋತದ್ದೂ ಇದೆ. ಕೆಲವೊಮ್ಮೆ ಗೆದ್ದದ್ದೂ ಇದೆ. ನಮ್ಮ ಶತ್ರುಗಳೊಂದಿಗೆ ಮಾತ್ರ ಹೋರಾಡುವ ಪ್ರಸಂಗಗಳು ಬರುವುದು ಸಾಮಾನ್ಯ ಸಂಗತಿ. ಆದರೆ ಲಕ್ಷ್ಮೀ ಟೀಚರಿಗೆ ಮಿತ್ರರೊಂದಿಗೆ ಕೆಲವೊಮ್ಮೆ ತಮ್ಮೊಂದಿಗೆ ತಾವೇ ಹೋರಾಡಬೇಕಾದ ಪ್ರಸಂಗಗಳು ಎದುರಾದುದನ್ನು ನನ್ನಲ್ಲಿ ಹೇಳಿಕೊಂಡದ್ದುಂಟು. ಆಗೆಲ್ಲಾ ಅವರು “ಬರವೇ ಬರಲಿ, ಸಮೃದ್ಧಿ ಇರಲಿ. ತಾಳುವ ಬಾಳಿನ ಬಾವುಟವಿರಲಿ” ಎಂಬ ಕವಿವಾಣಿಯಂತೆ ಬಾಳಿ ತೋರಿಸಿದರು. ಸಹಶಿಕ್ಷಕರಾಗಿದ್ದ ಪಾದ್ರಿಯೊಬ್ಬರು ಆಡಳಿತ ಮಂಡಳಿಯ ವಿರುದ್ಧ ಬಂಡಾಯವೆದ್ದು ಕುಡುಕನಾದದ್ದು, ಶಿಕ್ಷಕಿಯೊಬ್ಬರ ಪ್ರೇಮಪಾಶದಲ್ಲಿ ಸಿಲುಕಿದ್ದು, ಈ ಸಮಯದಲ್ಲಿ ಶಾಲೆಯ ಮಕ್ಕಳನ್ನು, ಹೆತ್ತವರನ್ನು, ಆಡಳಿತ ಮಂಡಳಿಯನ್ನು ಸಹನೆ ಮೀರದಂತೆ ಕಾಪಾಡುವುದೇ ಅವರಿಗೆ ದೊಡ್ಡ ಸವಾಲಾಗಿತ್ತು. ಆ ಫಾದರ್ ಬಗ್ಗೆ ಟೀಚರಿಗೆ ಒಂದು `ಸಾಫ್ಟ್ ಕಾರ್ನರ್’ ಇತ್ತು. ತುಂಬಾ ಓದಿಕೊಂಡ ಸಹೃದಯಿ ಆ ಪಾದ್ರಿ. ಉತ್ತಮ ಶಿಕ್ಷಕ, ಮಕ್ಕಳ ಪ್ರೀತಿಪಾತ್ರ. ಆ ಸದ್ಗುಣಗಳೆಲ್ಲವೂ ಮಸಿ ನುಂಗಿದಂತೆ ಮಾಡಿದ ಪಾದ್ರಿಯನ್ನು ಕೊನೆಗೂ ತನಗೆ ಅರ್ಥ ಮಾಡಿಕೊಳ್ಳಲಿಕ್ಕೆ ಆಗಲಿಲ್ಲವಲ್ಲಾ ಎಂಬ ಖೇದವೊಂದು ಹಾಗೆಯೇ ಉಳಿದುಬಿಟ್ಟಿತ್ತು ಅವರಲ್ಲಿ. ಉಪದೇಶ ಮಾಡಿ ಯಾರೂ ಯಾರನ್ನು ಸರಿ ಮಾಡಲು ಸಾಧ್ಯವಿಲ್ಲವೆಂಬ ಸತ್ಯ ತನಗೆ ಅಲ್ಲಿ ಗೊತ್ತಾಯಿತು ಎಂದು ಹೇಳುತ್ತಾ ನಾವು ಸಂಬಳದ ಕೂಲಿಗಳೇ ಹೊರತು ಶಿಕ್ಷಕರು, ಗುರುಗಳು ಎಂಬ ಬಿರುದು ಹೊರಿಸುವುದು ವ್ಯರ್ಥವೆಂದೇ ಅವರ ನಂಬಿಕೆ. ಮಗುವಿಗೆ ತಾನು ಕಲಿಯಬೇಕು ಎಂಬ ಇಚ್ಚೆ ಮೂಡಿದರೆ ಅದು ತಾನಾಗಿಯೇ ಕಲಿಯುತ್ತದೆ. ನಾನು ಕಲಿಸಿದೆ ಎಂಬ ಭ್ರಮೆ ಅಗತ್ಯವಿಲ್ಲ. ಕುಟುಂಬದ ತುತ್ತಿನ ಚೀಲ ತುಂಬಿಸುವವರಾರಾದರೂ ಇರುತ್ತಿದ್ದರೆ ತಾನು ಈ ಕೂಲಿ ಕೆಲಸಕ್ಕೆ ಬರುತ್ತಿರಲಿಲ್ಲವೆಂದೂ ಹೇಳುತ್ತಿದ್ದರು.

ಕೊಕ್ಕಡದಲ್ಲಿ ೭-೮ ವರ್ಷಗಳ ಸೇವೆಯ ಬಳಿಕ ಅವರು ಪದ್ವಾ ಹೈಸ್ಕೂಲಿನ ಹಿಂದಿ ಶಿಕ್ಷಕಿಯಾಗಿ ಬಂದರು. ಆಗ ಅಲ್ಲಿ ಕನ್ನಡ ಮಾಧ್ಯಮದಲ್ಲಿ ೬ನೇ ಮತ್ತು ೭ನೇ ತರಗತಿಗಳಿದ್ದುವು. ಅದರಲ್ಲಿ ಗಂಡುಮಕ್ಕಳು ಮಾತ್ರ ಇದ್ದರು. ಈ ಎರಡು ತರಗತಿಗಳಿಗೆ ಮಾತ್ರ ಶಿಕ್ಷಕಿಯರಿದ್ದು ಹೈಸ್ಕೂಲಿನಲ್ಲಿ ಶಿಕ್ಷಕರೇ ಇದ್ದರು. ೬ನೇ, ೭ನೇ ತರಗತಿಗೆ ಕಲಿಸುವ ಈ ನಾಲ್ಕು ಶಿಕ್ಷಕಿಯರೂ ಅವಿವಾಹಿತೆಯಾಗಿದ್ದುದು ವಿಶೇಷ. ಪಿರೇರಾ, ನೊರೊನ್ನಾ, ಸಲ್ದಾನ ಮತ್ತು ಲಕ್ಷ್ಮೀ ಟೀಚರು. ಎಲ್ಲಾ ವಿಷಯಗಳಲ್ಲಿ ತಜ್ಞರು ಈ ನಾಲ್ವರು. ಕನ್ನಡ ಮಾಧ್ಯಮದ ಆರನೇ, ಏಳನೇ ಕ್ಲಾಸುಗಳಲ್ಲಿ ಮಕ್ಕಳು ಕಡಿಮೆಯಾಗಿ ಕ್ಲಾಸುಗಳು ತೆಗೆದು ಹಾಕಲ್ಪಟ್ಟಾಗ ಹೈಸ್ಕೂಲಿನ ಶಿಕ್ಷಕಿಯರಾಗಿ ಭಡ್ತಿ ಹೊಂದಿದರು. ಈ ನಾಲ್ವರನ್ನು ಪದ್ವಾ ಹೈಸ್ಕೂಲಿನ ನಾಲ್ಕು ಆಧಾರಸ್ತಂಭಗಳೆಂದೇ ಎಲ್ಲರೂ ಮನಗಂಡಿದ್ದರು. ಲಕ್ಷ್ಮೀ ಟೀಚರ ಒಂದು ವಿಶೇಷ ಗುಣವೆಂದರೆ ಎಂತಹ ವಿರೋಧಿಗಳನ್ನೂ ತನ್ನ ಸೌಮ್ಯವಾದ, ಹಿತವಾದ ನುಡಿಗಳಿಂದ ಮಣಿಸಬಲ್ಲರು. ಶತ್ರುವಾಗಲೀ, ಮಿತ್ರನಾಗಲೀ ಎಲ್ಲರೂ ಅವರ ಮಾತೃಹೃದಯಕ್ಕೆ ಮಣಿಯುತ್ತಿದ್ದರು. ಮಕ್ಕಳಂತೂ ಅವರ ಈ ಆದರ್ಶ ವ್ಯಕ್ತಿತ್ವದ ಆಕರ್ಷಣೆಗೊಳಗಾಗಿ ಅವರ ಪಾಠಗಳನ್ನೂ ಪ್ರೀತಿಸುತ್ತಿದ್ದರು.

ಒಂದು ಸಲ ಅವರ ಶಿಷ್ಯನೊಬ್ಬ ಟೀಚರ ಮನೆಗೆ ಬಂದಿದ್ದ. ವಿದೇಶದಲ್ಲಿ ದೊಡ್ಡ ಹುದ್ದೆಯಲ್ಲಿದ್ದ ಅವನು ಟೀಚರನ್ನು ಕಾಣಲಿಕ್ಕಾಗಿಯೇ ಬಂದಿದ್ದ. ಮಾತನಾಡುತ್ತಾ “ನಾನು ಟೀಚರ ಡಬ್ಬದಿಂದ (ಆಗ ಪೆನ್ನು ಪೆನ್ಸಿಲು ಇಟ್ಟುಕೊಳ್ಳುವುದಕ್ಕೆ ಪರ್ಸ್‌ಗಳಿರಲಿಲ್ಲ, ತೆಳು ತಗಡಿನ ಡಬ್ಬಗಳನ್ನೇ ಹೆಚ್ಚಾಗಿ ಶಿಕ್ಷಕಿಯರು ಉಪಯೋಗಿಸುತ್ತಿದ್ದರು) ಹಣ ಕದ್ದಿದ್ದೆ. ಟೀಚರಿಗೆ ಗೊತ್ತೇ ಆಗುತ್ತಿರಲಿಲ್ಲ. ಅಲ್ವಾ ಟೀಚರ್” ಎಂದ. “ಹೌದಾ ಮಾರಾಯ? ನನ್ನ ಡಬ್ಬದಲ್ಲಿ ಗೊತ್ತಾಗುವಷ್ಟು ದೊಡ್ಡ ಮೊತ್ತ ಯಾವಾಗಲೂ ಇರುತ್ತಿರಲಿಲ್ಲ ಬಿಡು. ಯಾವಾಗಲೂ ಪುಡಿಗಾಸುಗಳಿರುತ್ತಿದ್ದವು. ಅಷ್ಟೇ” ಎಂದು ಟೀಚರ್ ನಗೆಯಾಡಿದರು. “ಆದರೆ ನಾವು ಸಮಯ ಸಂದರ್ಭ ಸಿಕ್ಕಾಗಲೆಲ್ಲಾ ಕದಿಯುತ್ತಿದ್ದೆವು. ಅದೂ ನಿಮ್ಮ ಡಬ್ಬಿಯಿಂದ ಮಾತ್ರ” ಎಂದನಾತ. “ಅದ್ಯಾಕೆ ನನ್ನ ಡಬ್ಬಿಯಿಂದ ಮಾತ್ರ ಕದಿಯುತ್ತಿದ್ದೆ?” ಎಂದು ಕೇಳಿದಾಗ ಬೇರೆಯವರ ಡಬ್ಬಿಯಿಂದ ಕದ್ದರೆ ಸಿಕ್ಕಿ ಬೀಳುತ್ತಿದ್ದೆವು. ನಿಮ್ಮ ಡಬ್ಬಿ ಮಾತ್ರ ನಮ್ಮ ಮನೆಯದ್ದೇ, ನಮ್ಮ ಅಮ್ಮನದೇ ಡಬ್ಬಿ ಎಂದು ಭಾಸವಾಗುತ್ತಿತ್ತು” ಎಂದು ಮುಖದ ತುಂಬ ಪಕಪಕನೆ ನಗುವರಳಿಸಿ ಹೇಳಿದ. ಆಗ ವಿಷಯಾಂತರ ಮಾಡಿದ ಟೀಚರು ಬೇರೆ ಶಿಕ್ಷಕ ಶಿಕ್ಷಕಿಯರ ಕೌಟುಂಬಿಕ ಸ್ಥಿತಿಗತಿಗಳ ಬಗ್ಗೆ ಮಾತಾಡಿದರು. ಹೀಗೆ ಲೋಕಾಭಿರಾಮವಾಗಿ ಮಾತಾಡಿದ ಬಳಿಕ ಅವನು ಟೀಚರಿಗೆ ನಮಸ್ಕರಿಸಿ ತಾನು ಟೀಚರಿಗಾಗಿ ತಂದಿದ್ದ ನೀಲಿ ಸೀರೆಯನ್ನು ಕೈಯಲ್ಲಿರಿಸಿ ಹೋದ. ಅವನು ಹೋದ ಮೇಲೆ ನಾನು ಅವರಲ್ಲಿ ಕೇಳಿದೆ. “ನಿಮಗೆ ನಿಜವಾಗಿ ಮಕ್ಕಳು ಹಣ ಕದಿಯುತ್ತಿದ್ದದ್ದು ಗೊತ್ತಿರಲಿಲ್ಲವೇ?”. “ಗೊತ್ತಿತ್ತು. ಗೊತ್ತಿಲ್ಲದೇನು? ಯಾರು ತೆಗೆಯುತ್ತಾರೆ ಅಂತಲೂ ನನಗೆ ಗೊತ್ತಿತ್ತು. ಮಕ್ಕಳಲ್ಲೇ ಕೆಲವರು ಈ ರಹಸ್ಯವನ್ನು ಕಂಡುಹಿಡಿದು ನನ್ನಲ್ಲಿ ದೂರು ಹೇಳಿದ್ದರು”. “ಮತ್ಯಾಕೆ ನೀವು ಈ ಹುಡುಗನಿಗೆ ಕರೆದು ಬುದ್ಧಿ ಹೇಳಲಿಲ್ಲ?” “ಅವನು ತೀರಾ ಬಡತನದಿಂದ ನಲುಗಿದ್ದ. ಶಾಲೆಯಲ್ಲಿ ೧೦ ಪೈಸೆಗೆ ಬ್ರೆಡ್ ಕೊಳ್ಳುವ ವ್ಯವಸ್ಥೆಯಿತ್ತು. ಅದನ್ನು ಕೊಳ್ಳಲೂ ಅವನಲ್ಲಿ ಹಣವಿರುತ್ತಿರಲಿಲ್ಲ. ಆಗ ಹಸಿವು ನೀಗಿಸಲು ಬೇರೆ ದಾರಿ ಕಾಣದೆ ನನ್ನ ಡಬ್ಬಿಯಿಂದ ಹಣ ತೆಗೆಯುತ್ತಿದ್ದನೆಂದು ನನಗೆ ಬೇರೆ ಮಕ್ಕಳಿಂದ ತಿಳಿಯಿತು. ಹಸಿವಿಗಾಗಿ ಹಣ ಕದ್ದರೆ ಅದು ಅಪರಾಧ ಹೇಗಾಗುತ್ತದೆ? ಹಾಗಾಗಿ ನಾನು ಯಾರಲ್ಲೂ ಈ ವಿಷಯವನ್ನು ತಿಳಿಸಲಿಲ್ಲ” ಎಂದರು. ಇದು ನಮ್ಮ ಲಕ್ಷ್ಮೀ ಟೀಚರ ಸ್ವಭಾವ. ಮಕ್ಕಳು ಐಸ್‌ಕ್ಯಾಂಡಿ ತಿನ್ನಲು ಆಸೆಯಾದರೆ ಲಕ್ಷ್ಮೀ ಟೀಚರರ ಡಬ್ಬಿಯಲ್ಲಿ ಹಣವಿದೆಯೇ ಎಂದು ಹುಡುಕುವಷ್ಟು ಸಲಿಗೆ ಮಕ್ಕಳಿಗಿತ್ತು. ಇಂತಹ ಮಾತೃಹೃದಯದ ಸ್ನೇಹ ಸಂಪರ್ಕ ಉಂಟಾದುದು ನನ್ನ ಸೌಭಾಗ್ಯವೇ ಸರಿ.

(ಮುಂದುವರಿಯಲಿದೆ)