ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ
ಅಧ್ಯಾಯ ಹದಿನೇಳು

ಮೊದಲು ಕನಸು ಕಾಣದೆ ನಾವು ಯಾವುದನ್ನೂ ಗಳಿಸಲು ಸಾಧ್ಯವಿಲ್ಲ. ಎಂತಹ ಒದ್ದಾಟದ ಪರಿಸ್ಥಿತಿಗಳಿದ್ದರೂ ಮನುಷ್ಯನಲ್ಲಿ ಕನಸು ಕಾಣುವ ಶಕ್ತಿಯೊಂದಿದ್ದರೆ ಅವುಗಳನ್ನು ಒದ್ದೋಡಿಸುವ ತಾಕತ್ತು ತಾನಾಗಿಯೇ ಬರುತ್ತದೆ. ಕಳೆದ ಶತಮಾನದ ೫೦ರ ದಶಕದಲ್ಲಿ ನಾವು ಡಾಕ್ಟರು ಇಂಜಿನಿಯರರ ಕನಸು ಕಾಣಲು ಸಾಧ್ಯವಿರಲಿಲ್ಲ. ನಮಗಿದ್ದ ಕನಸುಗಳೆಂದರೆ ಪದವಿ ಗಳಿಸುವುದು. ಮುಂದೆ ಎಂ.ಎ. ಮಾಡುವುದು. ಆಗ ನಮ್ಮ ಸಮುದಾಯದಲ್ಲಿ ಕಾಲೇಜಿಗೆ ಹೋಗುವ ಕನಸು ಕಾಣುವವರ ಸಂಖ್ಯೆಯೂ ತೀರಾ ಕಡಿಮೆಯಿತ್ತು. ನನಗಂತೂ ಆ ಯೋಗವಿಲ್ಲ. ಆದರೆ ನನ್ನ ತಮ್ಮನನ್ನು ಸ್ನಾತಕೋತ್ತರ ಪದವಿಯವರೆಗೆ ಓದಿಸಬೇಕೆಂಬ ಕನಸು ಕುಡಿಯೊಡೆದಿತ್ತು. ಮೇಜರ್ ಗಣಿತ ಆಯ್ಕೆ ಮಾಡಿಕೊಂಡ ಅವನು ಕಾಲೇಜು ಪ್ರವೇಶ ಮಾಡಿದ್ದು ನಮ್ಮ ಕುಟುಂಬದಲ್ಲೇ ಒಂದು ದೊಡ್ಡ ಸುದ್ದಿಯಾಗಿತ್ತು ಆ ಕಾಲದಲ್ಲಿ. ನಾನು ಎಸ್.ಎಸ್.ಎಲ್.ಸಿ. ಮಾಡಿದ್ದೇ ಒಂದು ಪವಾಡವಾಗಿ ಕಂಡರೆ ಈಗ ತಮ್ಮ ಕಾಲೇಜು ಪ್ರವೇಶಿಸಿದ್ದೇ ಒಂದು ಪವಾಡವಾಗಿ ನನ್ನ ಅಪ್ಪ ಅಮ್ಮನಿಗೆ ಕಂಡಿತು.

[ಚಿತ್ರದ ನವದಾಂಪತ್ಯ ರೋಹೀಣಿಯವರ ತಮ್ಮನದು. ಎದುರು ಕುಳಿತ ಹಿರಿಯ ಮಹಿಳೆಯರಲ್ಲಿ ಎಡ:ದೇವಕಿ – ವಧುವಿನ ತಾಯಿ, ಬಲ: ದೇವಕಿ – ವರನ ತಾಯಿ]
ಯಾವ ನಾಳೆಗಳೂ ನಾವು ಬಯಸಿದಂತೆ ಇರುವುದಿಲ್ಲ. ಕನಸು ಕಾಣುವುದಷ್ಟೇ ನಮಗೆ ಇರುವ ಹಕ್ಕು. ಅದನ್ನು ಯಾರೂ ಕಿತ್ತುಕೊಳ್ಳಲಾರರು. ಅದು ನನಸಾಗಲೇ ಬೇಕೆಂಬ ನಿಯಮವೇನೂ ಇಲ್ಲವಲ್ಲಾ. ಪದವಿಯ ಕೊನೆಯ ವರ್ಷದಲ್ಲಿ ಅನಾರೋಗ್ಯಕ್ಕೀಡಾದುದರಿಂದ ತಮ್ಮನು ಗಳಿಸುವ ಪದವಿಗಿಂತ ಆರೋಗ್ಯದ ಕಾಳಜಿಯೇ ನಮಗೆ ಹಿರಿದಾಯಿತು. ಕುಟುಂಬಕ್ಕೆ ತಾನು ಆಸರೆಯಾಗಬೇಕಾದರೆ ತಾನು ದುಡಿಮೆಗೆ ಸಿದ್ಧವಾಗಬೇಕೆಂಬ ಅವನ ಹಂಬಲವೇನೋ ಹಿರಿದಾಗಿತ್ತು. ಆರಂಭದಲ್ಲೇ ಉಂಟಾದ ಈ ಸೋಲು ಅವನನ್ನು ಮಾತ್ರವಲ್ಲ ನಮ್ಮನ್ನೂ ಕಂಗೆಡಿಸಿತು. ದೊಡ್ಡ ಗುರಿ ಇರಿಸಿಕೊಂಡು ಸೋಲುವುದು ಸಣ್ಣ ಗುರಿ ಇಟ್ಟುಕೊಂಡು ಗೆಲ್ಲುವುದಕ್ಕಿಂತ ಉತ್ತಮವಲ್ಲವೇ? ಅನೇಕರು ಗೆದ್ದಾಗ ಸೋಲುತ್ತಾರಂತೆ. ಕೆಲವರು ಸೋತಾಗ ಗೆಲ್ಲುತ್ತಾರಂತೆ. ಈ ಸೋಲನ್ನೇ ಮೆಟ್ಟಿಲಾಗಿಸಿಕೊಂಡು ದುಡಿಮೆಯ ದಾರಿ ಹುಡುಕಿದನು. ಹಾಗಾಗಿ ತಮ್ಮನು ಮುಂಬಯಿಯ ಇಂಟಕ್ ಆಫೀಸಿನ ಕೆಲಸಕ್ಕೆ ಸೇರಿಕೊಂಡ. ಮೊತ್ತಮೊದಲ ಬಾರಿಗೆ ಮನೆ ಬಿಟ್ಟು ತನ್ನ ಕೆಲಸ ತಾನೇ ಮಾಡಿಕೊಳ್ಳುವ ವ್ಯವಸ್ಥೆಗೆ ಹೊಂದಿಕೊಳ್ಳುವುದು ಅವನಿಗೆ ಕಷ್ಟವೆನಿಸಿದರೂ ತಾನು ಸೋಲಬಾರದು ಎಂಬ ಛಲವೊಂದಿದ್ದುದರಿಂದ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡ.

ಅವನು ಎಂಟನೇ ತರಗತಿಯ ಎಪ್ರಿಲ್, ಮೇಯ ರಜೆಯಲ್ಲಿ ಒಮ್ಮೆ ತಾನು ದುಡಿದು ಗಳಿಸುತ್ತೇನೆಂದು ಮಾಡಿದ ಪ್ರಯತ್ನ ಈ ಸಂದರ್ಭದಲ್ಲಿ ನೆನಪಾಗುತ್ತದೆ. ಹಂಪನಕಟ್ಟೆಯ ಲಕ್ಷ್ಮೀ ಕ್ಲೋತ್ ಸ್ಟೋರ್ ಆಗ ತಾನೇ ಪ್ರಾರಂಭವಾಗಿತ್ತು. ನನ್ನ ಸಹೋದ್ಯೋಗಿ ಕುಸುಮ ಟೀಚರಿಗೆ ಲಕ್ಷ್ಮೀ ಕ್ಲೋತ್ ಸ್ಟೋರಿನ ಮಾಲಕರೊಂದಿಗೆ ತುಂಬಾ ಪರಿಚಯವಿದ್ದುದರಿಂದ ಅವರ ವಶೀಲಿಯಿಂದಾಗಿ ಆ ಅಂಗಡಿಯಲ್ಲಿ ಈ ಹುಡುಗನನ್ನು ಕೆಲಸಕ್ಕೆ ನೇಮಿಸಿದರು. ಬಹಳ ಹುರುಪಿನಿಂದಲೇ ಕೆಲಸಕ್ಕೆ ಸೇರಿದ. ಬೆಳಗ್ಗೆ ಎಂಟರಿಂದ ಸಂಜೆ ಐದರವರೆಗೆ ಎಂದು ಹೇಳಲಾಗಿತ್ತು. ಅಂಗಡಿಯಲ್ಲಿ ಸೇಲ್ಸ್ ವಿಭಾಗದಲ್ಲಿ ಕೆಲಸವೆಂದೂ ತಿಳಿಸಿದ್ದರು. ಆದರೆ ಸಂಜೆಗೆ ಏಳು ಗಂಟೆಯವರೆಗೂ ಅಲ್ಲಿರಬೇಕಿತ್ತು. ಇವನು ಚಿಕ್ಕ ಹುಡುಗನಂತೆ ಕಂಡುದರಿಂದ ಅಂಗಡಿ ಗುಡಿಸುವ, ಚಾ ಕಾಫಿ ಕುಡಿದರೆ ಪಾತ್ರೆ ತೊಳೆದಿಡುವ ಮುಂತಾದ ಕೆಲಸಗಳನ್ನೆಲ್ಲಾ ಮಾಡಿಸಿದಾಗ ತಮ್ಮನಿಗೆ ಸ್ವಾಭಿಮಾನಕ್ಕೆ ಪೆಟ್ಟಾಯಿತು. ತಿಂಗಳಿಗೆ ಅವರು ಕೊಡುವ ನೂರು ರೂಪಾಯಿಗಾಗಿ ಅಷ್ಟು ಮಾಡಬೇಕಾದುದು ಅನಿವಾರ್ಯವಾಗಿತ್ತು. ವಾರ ಕಳೆಯಿತು. ಎರಡನೇ ವಾರದಲ್ಲಿ ಅವನ ಉತ್ಸಾಹವೆಲ್ಲಾ ಕರಗಿತು. ಸಂಜೆ ಮನೆಗೆ ಬರುವಾಗ ಮಣ್ಣು ಅಗೆಯುವ ಶ್ರಮದ ಕೆಲಸ ಮಾಡಿ ಬಂದವರಂತೆ ಸೋತು ಕಂಗಾಲಾಗಿದ್ದ. ಮಗನ ನಾಡಿಮಿಡಿತ ಅಮ್ಮನಿಗೆ ಕೇಳಿತು. ವಿಚಾರಿಸಿದಾಗ ಕಣ್ಣು ತುಂಬಿಕೊಂಡು ವಿಷಯ ತಿಳಿಸಿದ. ಹೆತ್ತ ಕರುಳಿಗೆ ಬೇನೆ ನಾಟಿತು. ನಾಳೆಯಿಂದ ಹೋಗಬೇಡ ಎಂದು ಆಜ್ಞೆ ಮಾಡಿದರು. ಶಾಲೆಗೆ ಹೋಗುವಾಗಲೇ ಹೊರಗೆ ಹೋಗಿ ದುಡಿದು ಗಳಿಸುತ್ತೇನೆ ಎಂಬ ಹಟವನ್ನು ಸ್ವಲ್ಪ ಸಡಿಲಗೊಳಿಸಿದ. ಬೀಡಿ ಕಟ್ಟುವುದೂ ಅವನಿಂದ ಸಾಧ್ಯವಾಗಲಿಲ್ಲ. ಆದುದರಿಂದ ಪದವಿ ಪಡೆದ ಮೇಲೆಯೇ ತಾನು ದುಡಿದು ಗಳಿಸಿ ಕುಟುಂಬಕ್ಕೆ ಆಧಾರವಾಗಬೇಕೆಂಬ ನಿರ್ಧಾರ ಮಾಡಿದ.

ಹಾಗಾಗಿ ಮುಂಬಯಿಯ ಕಡೆಗೆ ಅವನ ಮನ ಸೆಳೆಯಿತು. ಯಾವುದಾದರೂ ಸಣ್ಣ ಕೆಲಸವನ್ನಾದರೂ ದೂರದೂರಲ್ಲಿ ಮಾಡುತ್ತಾ ಕುಟುಂಬಕ್ಕೆ ನೆರವಾಗುತ್ತಾ ಖಾಸಗಿಯಾಗಿ ಪರೀಕ್ಷೆಗಳನ್ನು ಕಟ್ಟಿ ಶಿಕ್ಷಣ ಮುಂದುವರಿಸಬೇಕೆಂದು ಮನಸ್ಸಿನಲ್ಲಿ ಯೋಚಿಸಿ ಮುಂಬಯಿ ಬಸ್ಸು ಹತ್ತಿದ. ನಮ್ಮ ಬದುಕಿನ ರಹಸ್ಯವಿರುವುದು ಇಲ್ಲೇ. ಮುಂದೆ ಎಂದಾದರೂ ಸುಖ ನೆಮ್ಮದಿ ಸಿಗಬಹುದು ಎಂಬ ನಂಬಿಕೆಯಿಂದಲೇ ನಮ್ಮ ನೋವು, ಕಷ್ಟಗಳೆಲ್ಲಾ ಸ್ವಲ್ಪ ಶಮನವಾಗುತ್ತವೆ. ನಾಳೆಯ ಬಗ್ಗೆ ನಮಗಿರುವ ನಿರೀಕ್ಷೆಯೇ ಇಂದಿನ ಕೆಲವು ಕೊರತೆಗಳಿಗೆ ಪರಿಹಾರ ನೀಡುತ್ತದೆ. ಹೀಗೆ ಮುಂಬೈ ಸೇರಿ ಒಂದೆರಡು ತಿಂಗಳು ಕಳೆದಿರಬಹುದು. ಇಲ್ಲಿ ಅಪ್ಪನ ಅಸ್ತಮಾ ರೋಗ ದಿನೇ ದಿನೇ ಉಲ್ಭಣಗೊಳ್ಳುತ್ತಾ ಹೋಯಿತು. ೧೫-೮-೧೯೭೭ರ ಸ್ವಾತಂತ್ರ್ಯ ದಿನದಂದು ಬೆಳಿಗ್ಗೆ ಅವರನ್ನು ನಾನೂ ಅಮ್ಮ ಇಬ್ಬರೂ ಸೇರಿ ಸ್ನಾನ ಮಾಡಿಸಿ ಮಲಗಿಸಿದ್ದೆವು. ನಾನು ಶಾಲೆಗೆ ಸ್ವಾತಂತ್ರ್ಯ ದಿನಾಚರಣೆಗೆ ಹೋಗಿದ್ದೆ. ೧೧ ಗಂಟೆಯ ಹೊತ್ತಿಗೆ ಮನೆಗೆ ಬಂದಾಗ ಅಮ್ಮ ಅಪ್ಪನ ಬಳಿ ಗಾಬರಿಗೊಂಡು ಕೂತು ನನ್ನನ್ನೇ ಕಾಯುತ್ತಿದ್ದರು. ಸ್ನಾನ ಮಾಡಿದ ಬಳಿಕ ಸ್ವಲ್ಪ ಗಂಜಿ ತಿಳಿ ಕುಡಿದು ಮಲಗಿದವರು ಕಣ್ಣೇ ತೆರೆಯುತ್ತಿಲ್ಲವೆಂದೂ, ಮಾತೂ ಆಡುವುದಿಲ್ಲವೆಂದೂ ಕೈಕಾಲು ತಣ್ಣಗಾಗಿದೆ. “ನೀನು ಹೋಗಿ ಡಾಕ್ಟರನ್ನು ಒಮ್ಮೆ ಕರೆದು ತಾ” ಎಂದರು. ನಾನು ಕೂಡಲೇ ಓಡಿಹೋಗಿ ಡಾ| ಬಾಳ್ತಿಲ್ಲಾಯರನ್ನು ಕರೆತಂದೆ. ಅವರು ಪರೀಕ್ಷೆ ಮಾಡಿ ತೀರಿಹೋಗಿದ್ದಾರೆಂದು ತಿಳಿಸಿದಾಗ ನಮಗೆ ನಂಬುವುದೇ ಕಷ್ಟವಾಯಿತು. ೩೦ – ೪೦ ವರ್ಷಗಳಿಂದ ಅಪ್ಪನ ಪ್ರಾಣ ಹಿಂಡಿದ ಅಸ್ತಮಾ ಕಾಯಿಲೆ ಹೀಗೆ ಕೊನೆಗೂ ಅವರಿಗೆ ಮುಕ್ತಿ ನೀಡಿತು. ಸರಿ, ಇನ್ನು ಮುಂದಿನ ಕೆಲಸಗಳು ಆಗಬೇಕಲ್ಲಾ. ನಾನು ಕೂಡಲೇ ಗೋಪಾಲಣ್ಣನ ಮನೆಗೆ ಓಡಿದೆ. ಮದುವೆಯಾಗಿ ಬೇರೆ ಹೋದ ಮೇಲೆ ಗೋಪಾಲಣ್ಣ ಅಪ್ಪನನ್ನು ಮರೆತರೂ ಅಪ್ಪ ಮರೆತಿರಲಿಲ್ಲ. ಗಂಡು ಮಗ ಊರಲ್ಲಿಲ್ಲ. ಹಿರಿಮಗನಂತೆ ಈಗ ಎಲ್ಲಾ ಕೆಲಸ ಮಾಡಬೇಕಾದವರು ಗೋಪಾಲಣ್ಣನೇ. ಗೋಪಾಲಣ್ಣನಿಗೆ ತಾನು ಇಷ್ಟು ವರ್ಷ ಅಪ್ಪನನ್ನು ನಿರ್ಲಕ್ಷಿಸಿದೆ ಎಂಬ ಪಾಪಪ್ರಜ್ಞೆ ಕಾಡಿ ಗೋಳೋ ಎಂದು ಅತ್ತಾಗ ಅಪ್ಪನೂ ಕ್ಷಮಿಸಿರಬಹುದು ಎಂದು ನಾನು ಭಾವಿಸಿದೆ. ಅಪ್ಪ ತಾನು ಸತ್ತರೆ ಯಾವುದೇ ರೀತಿಯಲ್ಲಿ ಹಣ ಖರ್ಚು ಮಾಡಿ ಅಂತ್ಯ ಸಂಸ್ಕಾರ ಮಾಡುವ ಅಗತ್ಯವಿಲ್ಲ. ಸತ್ತ ಮೇಲೆ ಮಾಡಿದ ಯಾವ ಸಂಸ್ಕಾರವೂ ಅದು ನನಗೆ ಪ್ರಯೋಜನವಿಲ್ಲ. ಬದುಕಿರುವಾಗ ತೋರಿದ ಪ್ರೀತಿಯಷ್ಟೇ ಮುಖ್ಯ ಎಂದು ಹೇಳುತ್ತಿದ್ದರು. ಆದರೆ ಅಪ್ಪನ ಸೋದರಳಿಯನೊಬ್ಬ ಮಾವನ ಎಲ್ಲಾ ಕ್ರಿಯಾಕರ್ಮಗಳನ್ನು ಮಾಡುವ ಹಕ್ಕು ನಮಗೆ ಮಾತ್ರ. ನೀನು ಈ ಬಗ್ಗೆ ಯಾವ ಚಿಂತೆಯನ್ನು ಮಾಡುವ ಅಗತ್ಯವಿಲ್ಲ. ಬೊಜ್ಜ ಮಾಡುವುದು ನಿನ್ನ ಅಪ್ಪನಿಗಾಗಿಯಲ್ಲ. ನಮ್ಮ ಕುಟುಂಬದ ಶಾಂತಿಗಾಗಿ ಎಂದೆಲ್ಲಾ ಮಾತಾಡಿ ನನ್ನ ಬಾಯಿ ಮುಚ್ಚಿಸಿದರು.

ನಮ್ಮ ಮಾತೃಪ್ರಧಾನ ಸಂಸ್ಕೃತಿಯಲ್ಲಿ ಸಾವಿನ ಸೂತಕ ಕ್ರಿಯಾಕರ್ಮಗಳನ್ನೆಲ್ಲಾ ಮಾಡುವ ಅಧಿಕಾರ ಸೋದರಮಾವಂದಿರಿಗೆ ಮಾತ್ರ. ಹೆಂಡತಿ ಮಕ್ಕಳು ಆ ಕ್ರಿಯೆಗಳಿಗೆಲ್ಲಾ ಸಾಕ್ಷಿಯಾಗಿರುವುದಷ್ಟೇ ಕೆಲಸ. ಕುಟುಂಬದ ತರವಾಡು ಮನೆಯಲ್ಲಿ ವರ್ಷದ ಪರ್ವದ ಸಮಯದಲ್ಲಿ ಆ ವರ್ಷ ಆ ಕುಟುಂಬದಲ್ಲಿ ಯಾರೆಲ್ಲಾ ನಿಧನ ಹೊಂದಿದ್ದಾರೋ ಅವರನ್ನು ಒಳಗೆ ಕರೆಯುವ ಒಂದು ಕಾರ್ಯಕ್ರಮವಿರುತ್ತದೆ. ೧೬ ಎಲೆಗಳಲ್ಲಿ ಸತ್ತವರಿಗೆ ಎಡೆ ಬಡಿಸಿಡುತ್ತಾರೆ. ಒಂದು ಎಲೆಯನ್ನು ತೆಗೆದು ಅಪ್ಪನ ಹೆಸರಿನಲ್ಲಿ ಎಡೆ ಇಟ್ಟು ಮಣೆಯ ಮೇಲೆ ಹೊಸ ಬಟ್ಟೆ ಇರಿಸಿ ಕುಟುಂಬ ಹಿರಿಯರೆಲ್ಲಾ ಒಟ್ಟು ಸೇರಿ ಪ್ರಾರ್ಥಿಸಿ ಅಪ್ಪನ ಆತ್ಮವನ್ನು ಒಳಗೆ ಸೇರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತಾರೆ. ನಮ್ಮ ಸಮುದಾಯದ ಸಂಸ್ಕೃತಿಯಲ್ಲಿ ಮನುಷ್ಯ ಮತ್ತೆ ಹುಟ್ಟಿ ಬರುತ್ತಾನೆಂಬ ನಂಬಿಕೆಯೂ ಇಲ್ಲ. ಸ್ವರ್ಗ ನರಕಗಳ ಕಲ್ಪನೆಯೂ ಇಲ್ಲ. ಸತ್ತವರನ್ನು ಹಿಂದಿನ ಹಿರಿಯರ ಆತ್ಮದೊಂದಿಗೆ ವಿಲೀನಗೊಳಿಸಿದರೆ ಮನುಷ್ಯ ಜೀವನದ ಸಕಲ ಸಂಕಷ್ಟಗಳಿಗೂ ಮುಕ್ತಿ ಸಿಕ್ಕಿದಂತೆ ಎಂಬ ಭಾವನೆ ಇದೆ. ಇತ್ತೀಚಿನ ಹೊಸ ಪೀಳಿಗೆಯವರು ದೇವಸ್ಥಾನಗಳಲ್ಲಿ ಪಿಂಡ ಬಿಡುವ ಕಾರ್ಯಕ್ರಮವನ್ನು ಅನುಸರಿಸುತ್ತಾರೆ. ವೈದಿಕ ಬ್ರಾಹ್ಮಣರನ್ನು ಆಶ್ರಯಿಸದ ಹಿಂದಿನ ಕಾಲದಲ್ಲಿ ಯಾವುದೇ ಶುಭ ಅಶುಭ ಸಮಾರಂಭಗಳೂ ಹೆಚ್ಚು ಆರ್ಥಿಕ ಹೊರೆ ಹೊರಿಸದೆ ಬಹಳ ಸರಳವಾಗಿರುತ್ತಿತ್ತು.

ಏನೆಲ್ಲಾ ಕನಸುಗಳನ್ನು ಕಟ್ಟಿಕೊಂಡು ಅಪ್ಪ ತುಂಬೆಯ ಕಾಣೆಮಾರಿನಿಂದ ಬಿಕರ್ನಕಟ್ಟೆಗೆ ಬಂದಿದ್ದರು. ನನ್ನನ್ನು ಆರ್ಥಿಕ ಸ್ವಾವಲಂಬಿಯಾಗಿಸುವುದರ ಜೊತೆಯಲ್ಲಿ ಸಾಹಿತ್ಯ, ಸಂಗೀತಗಳಲ್ಲಿ ಆಸಕ್ತಿ ಬೆಳೆಸುವುದಕ್ಕೂ ಪ್ರೋತ್ಸಾಹ ನೀಡಿದ್ದರು. ಅಪ್ಪನ ಬದುಕೆಂಬ ರಂಗೋಲಿಯಲ್ಲಿ ಚುಕ್ಕೆಗಳು ತಪ್ಪಿದರೂ ನನ್ನ ಬದುಕಿನ ರಂಗೋಲಿಯಲ್ಲಿ ಸುಂದರವಾದ ರಂಗು ತುಂಬಲು ಪ್ರಯತ್ನಿಸಿದರು. ನನ್ನ ಮಗಳಿಗೆ ಯಾವಾಗ ಮದುವೆ ಮಾಡುವುದು ಎಂದು ಯೋಚಿಸುವ ಬದಲು ಅವಳು ಯಾವ್ಯಾವ ಪರೀಕ್ಷೆಗಳನ್ನು ಕಟ್ಟಿ ಅವಳ ಜ್ಞಾನವನ್ನು ವರ್ಧಿಸುವಂತಾಗುತ್ತದೆ ಎಂದೇ ಯೋಚಿಸುತ್ತಿದ್ದರು. ಅಪ್ಪನಿಗೆ ನನ್ನ ಭವಿಷ್ಯ ಸುಭದ್ರವಾಗಲಿ ಎಂಬ ಆಶೆಯವಿತ್ತೇ ವಿನಃ ಯಾರಾದರೊಬ್ಬನ ಪತ್ನಿಯಾಗಿ ಅಭದ್ರತೆಯನ್ನು ಅನುಭವಿಸುವಂತೆ ಆಗದಿರಲಿ ಎಂದು ಬಯಸಿದ್ದರು. ಹಾಗೆಂದು ನನ್ನನ್ನು ಮದುವೆಯಾಗಲು ಸಾಲಾಗಿ ನಿಂತ ವರಗಳೇನೂ ಇರಲಿಲ್ಲ. ಹಣ, ರೂಪ, ಅಂತಸ್ತುಗಳಿಲ್ಲದ ಹುಡುಗಿ ಉದ್ಯೋಗಸ್ಥೆಯಾದರೂ ಅವಳಿಗೆ ಡಿಮ್ಯಾಂಡ್ ಇರಲಿಲ್ಲ. ಮದುವೆಯಾದರೆ ನನ್ನ ಸಂಸಾರವನ್ನು ಜೊತೆಯಲ್ಲಿ ಸಾಕುವ ಹೊಣೆ ಹೊರಲು ಯಾರೂ ಸಿದ್ಧರಿರಲಿಲ್ಲ. ಯಾರೋ ಒಂದಿಬ್ಬರು ಈ ಪ್ರಸ್ತಾಪವನ್ನು ಇಟ್ಟಾಗ ಅಪ್ಪ ಅದೇ ಮಾತನ್ನು ಹೇಳಿದರಂತೆ.

ಅಪ್ಪ ತೀರಿದ ಮೇಲೆ ವಾರದೊಳಗೆ ತಮ್ಮ ಮುಂಬೈಯಿಂದ ಮರಳಿದ. ಅಜ್ಜನ ಕೊನೆಗಾಲದಲ್ಲಿ ಅಪ್ಪ ಹತ್ತಿರವಿರಲಿಲ್ಲ. ಹಾಗಾಗಿ ನನ್ನ ಕೊನೆಗಾಲದಲ್ಲೂ ಮಗನಿರಲಾರ ಎಂದು ಅವರು ಬದುಕಿರುವಾಗ ಹೇಳುತ್ತಿದ್ದರು. ಅದು ಸತ್ಯವಾಯಿತು. ಮುಂಬೈಯಿಂದ ಮರಳಿದ ಮೇಲೆ ಕೆಲವು ವಾರಗಳವರೆಗೆ ತನ್ನ ಕನಸುಗಳು ಉರುಳಿ ಬಿದ್ದ ದುಃಖದಲ್ಲಿ ತಮ್ಮ ಖಿನ್ನತೆಗೊಳಗಾಗಿದ್ದ. ಕ್ರಮೇಣ ಅದರಿಂದ ಹೊರಬಂದ. ಮಂಗಳೂರಿನ ಇಂಟೆಕ್ ಕಚೇರಿಯಲ್ಲಿ ಗುಮಾಸ್ತನಾಗಿ ತಮ್ಮ ಕೆಲಸಕ್ಕೆ ಸೇರಿಕೊಂಡ. ಅಪ್ಪನ ಸಾವು ಅವನ ಬದುಕಿನಲ್ಲಿ ಹೊಸ ಅನ್ವೇಷಣೆಯ, ಹೊಸ ಹೊಣೆಗಾರಿಕೆಯ ಕರ್ತವ್ಯವನ್ನು ಹೊರಿಸಿತು. ನಮ್ಮಿಬ್ಬರ ಚಲನ ವಲನಗಳನ್ನು ಸೂಕ್ಷ್ಮವಾಗಿ ಗಮನಿಸುವ ಅಪ್ಪನ ಕಣ್ಣುಗಳು ಸದಾ ನಮ್ಮ ಹಿತವನ್ನೇ ಬಯಸುತ್ತಿತ್ತು. ಸದಾ ಬಿಡಿಸಿಟ್ಟ ಹಾಸಿಗೆ, ಪಕ್ಕದಲ್ಲಿ ಪೀಕದಾನಿ, ಅವರ ಔಷಧಿಗಳಾದ ಉನ್ಮತ್ತದ ಹೂವಿನ ಸಿಗರೇಟುಗಳನ್ನಿರಿಸಿದ ಸಣ್ಣ ಸ್ಟೂಲು, ತಲೆಗೆ ಸುತ್ತುತ್ತಿದ್ದ ಮಫ್ಲರ್, ಅಂಗಿ ಮತ್ತು ಬೈರಾಸು, ಮುಂಡುಗಳು ವರ್ಷಗಳ ಕಾಲ ಅಪ್ಪನ ಇರವನ್ನು ನೆನಪಿಸುತ್ತಿದ್ದವು. ಸಾವು ಬೇಕೆಂದು ತೀವ್ರವಾಗಿ ಆಶಿಸಿದವರು ಅಪ್ಪ. ಅದು ಸಿಗದಾಗ ಪಟ್ಟ ದುಃಖವನ್ನು ಕಣ್ಣಾರೆ ಕಂಡವರು ನಾವು. ಹಾಗಾಗಿ ಅವರಿಗೆ ನಿಶ್ಚಿಂತೆಯ ಸುಖ ಮರಣ ಲಭಿಸಿದ್ದು ಒಂದು ದೀರ್ಘ ಹೋರಾಟದ ಬಿಡುಗಡೆಯಂತೆಯೇ ಕಂಡಿತು. `ಮೃತ್ಯುವೆನ್ನುವುದೊಂದು ತೆರೆಯಿಳಿತ, ತೆರೆಯೇರು, ಮತ್ತೆ ತೋರ್‍ಪದು ನಾಳೆ’ ಎಂಬ ಕವಿ ಮಾತಿನಂತೆ ಸಾವಿನ ಮೆರವಣಿಗೆ ಪ್ರಪಂಚದಲ್ಲಿ ನಡೆಯುತ್ತಲೇ ಇರುತ್ತದೆ. ಎಲ್ಲಾ ಪ್ರಾಪಂಚಿಕ ಕಷ್ಟಗಳಿಗೂ ಸಾವು ಕೊನೆಯಾಗುತ್ತದೆ.

ಅಪ್ಪನ ನಿಧನದ ಬಳಿಕ ಅಮ್ಮ ಗೇರುಬೀಜ ಕಾರ್ಖಾನೆಯ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಸುಮಾರು ೪೫ ವರ್ಷಗಳ ಅವರ ದಾಂಪತ್ಯದಲ್ಲಿ ಸುಖದ ಮಂದಮಾರುತಗಳು ಆಗೊಮ್ಮೆ ಈಗೊಮ್ಮೆ ಬೀಸಿ ಹೋಗಿರಬಹುದು. ಉಳಿದ ಆಯಸ್ಸೆಲ್ಲವನ್ನೂ ಅಪ್ಪನೊಂದಿಗೆ ದಾರಿದ್ರ್ಯದ, ಅವಮಾನದ ದಗೆಯೊಳಗೇ ಬೆಂದು ಬದುಕಿದವಳು ಆಕೆ. ಒಂದು ದಿನ ಅಮ್ಮ ಅಡಿಗೆಮನೆಯಲ್ಲಿ ಹಾಡು ಗುಣುಗುಣಿಸುವುದನ್ನು ಕೇಳಿ ನನ್ನ ಕಿವಿಗಳನ್ನೇ ನಾನು ನಂಬದಾದೆ. ಇಷ್ಟು ವರ್ಷ ಅಮ್ಮನ ಎದೆಗೂಡಿನಲ್ಲಿ ಅವಿತಿದ್ದ ಹಾಡು ಅಪ್ಪನ ನಿಧನದ ಬಳಿಕ ಹೊರಬಂದುದು ಹೇಗೆ? ಅವರು ಬಂಧಮುಕ್ತರಾದುದರ ಸೂಚನೆಯಾಗಿತ್ತೇ? ವೃತ್ತಪತ್ರಿಕೆ, ಪುಸ್ತಕಗಳತ್ತ ಕಣ್ಣೆತ್ತಿಯೂ ನೋಡದ ನನ್ನಮ್ಮ ಈಗ ಅವುಗಳತ್ತ ಪ್ರೀತಿ ಬೆಳೆಸಿಕೊಂಡಳು. ಗೇರುಬೀಜ ಕಂಪೆನಿಯ ಕೆಲಸಕ್ಕೆ ರಾಜೀನಾಮೆ ಕೊಟ್ಟ ಮೇಲೆ ಕಂಪೆನಿ ನೌಕರರಿಗೆ ನೀಡುವ ಹಣದ ಸಿಕ್ಕನ್ನು ಸ್ವೀಕರಿಸುವಾಗ ಅಮ್ಮ ಹೆಬ್ಬೆಟ್ಟು ಒತ್ತಿದದನ್ನು ಕಂಡು ನನಗೆ ಆಶ್ಚರ್ಯವಾಯಿತು. ಐದನೆಯ ತರಗತಿಯವರೆಗೆ ಓದಿದ ಅಮ್ಮ ಕಾರ್ಖಾನೆಯಲ್ಲಿ ಅನಕ್ಷರಸ್ಥೆಯಾಗಿ ಗುರುತಿಸಿಕೊಂಡಿದ್ದಳು. ಯಾಕೆ ಹೀಗೆ ಮಾಡಿದಿರಿ? ಎಂಬ ನನ್ನ ಜಬರ್ದಸ್ತಿನ ಪ್ರಶ್ನೆಗೆ ಅಮ್ಮ ಅಷ್ಟೇ ಶಾಂತವಾಗಿ, “ಕಂಪೆನಿ ಕೆಲಸಕ್ಕೆ ಬರುವವರೆಲ್ಲರೂ ವಿದ್ಯೆ ಇಲ್ಲದವರು. ಅಲ್ಲಿ ಸಂಬಳ ಕೊಡುವಾಗ ಹೆಬ್ಬೆಟ್ಟೊತ್ತಿಯೇ ಎಲ್ಲರೂ ಸಂಬಳ ತೆಗೆದುಕೊಳ್ಳುತ್ತಿದ್ದರು. ನಾನೊಬ್ಬಳು ಅಕ್ಷರಸ್ಥೆ ಎಂದು ಜಂಭ ತೋರಿಸಲು ಸಾಧ್ಯವೇ? ಇಷ್ಟಾಗಿಯೂ ಅಲ್ಲಿ ಪೆನ್ನು, ಪೆನ್ಸಿಲುಗಳು ಇರಲೇ ಇಲ್ಲ. ಹಾಗಿರುವಾಗ ನಾನೂ ಹೆಬ್ಬೆಟ್ಟು ಒತ್ತುವುದನ್ನೇ ರೂಢಿ ಮಾಡಿಕೊಂಡೆ. ನಾನು ಅನ್ನ ಗಳಿಸಿದ್ದು ಕಲಿತ ವಿದ್ಯೆಯಿಂದಲ್ಲ. ಶ್ರಮ ಶಕ್ತಿಯನ್ನು ಗೌರವಿಸಿದ್ದರಿಂದ” ಎಂದರು. ಹೌದು, ಅವರು ಗೇರುಬೀಜ ಕಾರ್ಖಾನೆಯ ಮಹಿಳಾ ಕಾರ್ಮಿಕರ ಹೋರಾಟ ಮತ್ತು ಚಳುವಳಿಗಳಲ್ಲಿ ಸೇರಿಕೊಂಡು ಮುಷ್ಕರ ನಡೆಸಿದ್ದರು. ಮೆರವಣಿಗೆಗಳಲ್ಲಿ ಹೆಚ್ಚು ಭಾಗವಹಿಸದಿದ್ದರೂ ಹಲವು ಮುಷ್ಕರಗಳಲ್ಲಿ ಭಾಗವಹಿಸಿದ್ದರು. ಹಾಗೆ ಮುಷ್ಕರ ಮಾಡಿದ್ದರಿಂದಲೇ ನಾವೀಗ ಶ್ರಮಕ್ಕೆ ತಕ್ಕ ಸಂಬಳ ಪಡೆಯುತ್ತೇವೆ ಎಂಬ ನಂಬಿಕೆ ಅವರಿಗಿತ್ತು. ಅಮ್ಮನ ಬದುಕಿನ ಹೋರಾಟದ ಒಂದು ಅಧ್ಯಾಯ ಮುಕ್ತಾಯವಾಯಿತು. ಹೊಸ ಅಧ್ಯಾಯವನ್ನು ಪ್ರಾರಂಭ ಮಾಡುವುದೇನಿದ್ದರೂ ನನ್ನ ಮಕ್ಕಳು ಬಯಸಿದಂತೆ ಎಂದು ನಿರಾಳವಾದಳು. “ಯಾವ ಮನುಷ್ಯನೂ ಪೂರ್ಣವಾಗಿ ಸಾಯುವುದಿಲ್ಲ. ಅವನು ಮಾಡಿದ ಒಳ್ಳೆಯ ಕಾರ್ಯಗಳು ಗೋರಿಯೊಳಗಿನಿಂದ ತಪ್ಪಿಸಿಕೊಂಡು ಬರುತ್ತವೆಯಂತೆ. ಹಾಗೆ ನಿನ್ನ ಅಪ್ಪನ ಕೆಟ್ಟ ಹವ್ಯಾಸಗಳು ಮಾತ್ರ ಸುಟ್ಟು ಭಸ್ಮವಾಗಿವೆಯೇ ಹೊರತು ಅವರು ಮಾಡಿದ ಸತ್ಕಾರ್ಯಗಳು ನಮ್ಮ ಹಿಂದೆ ಮುಂದೆ ಸುತ್ತುತ್ತಾ ನಮ್ಮನ್ನು ಪ್ರಚೋದಿಸುತ್ತವೆ. ಆಜೀವ ಪರ್ಯಂತ ಅವರ ನೆನಪುಗಳನ್ನು ಉಳಿಸಿಕೊಳ್ಳುತ್ತೇವಲ್ಲ.

ಅದೇ ನಮ್ಮ ಆಸ್ತಿ. ಬೇರಾವುದರಲ್ಲಿ ನಾವು ಶ್ರೀಮಂತರಾಗದಿದ್ದರೂ ತೊಂದರೆಯಿಲ್ಲ. ಆದರೆ ನೆನಪಿನ ಶಕ್ತಿ ಕುಂಠಿತವಾಗಿ ಬಡವರಾಗಬಾರದು. ಆ ನೆನಪುಗಳು ದುಃಖವನ್ನು ಕೊಡುತ್ತವೆಂದು ತಿಳಿಯಬಾರದು. ಆ ನೆನಪುಗಳು ನಮ್ಮನ್ನು ಕಾಯುವ ಕಣ್ಣಾಗಿ, ಕೇಳುವ ಕಿವಿಯಾಗಿ, ಹರಸುವ ಮಾತಾಗಿ ಅಗೋಚರ ಶಕ್ತಿಯಾಗಿ ನಮ್ಮ ಬಾಳನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುತ್ತದೆ. ಈ ಮಾತನ್ನು ಎಂದೂ ಮರೆಯಬೇಡ” ಎಂದು ಹೇಳಿದ ಅಮ್ಮನ ಮಾತುಗಳು ಯಾವ ಅಧ್ಯಾತ್ಮ ಗ್ರಂಥಗಳಲ್ಲಿದೆಯೋ ಗೊತ್ತಿಲ್ಲ. ಈ ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ತನ್ನದೇ ಆದ ಧಾರ್ಮಿಕ ನಂಬಿಕೆಗಳಿಗೆ ಬದ್ಧರಾಗಿ ನಡೆಯುತ್ತಾರೆ. ಪೂಜೆ, ಹರಕೆ, ಉತ್ಸವಗಳಲ್ಲಿ ಮೈಮರೆಯುತ್ತಾರೆ. ಆದರೆ ನನ್ನಮ್ಮನಂತಹ ಸಾಮಾನ್ಯ ಕೆಳವರ್ಗದ ಹೆಂಗಸಿಗೆ ತನ್ನ ಪತಿ, ಮನೆ, ಮಕ್ಕಳು ಇದೇ ದೇವರು. ಅದೇ ಪೂಜೆ, ಅದೇ ಉತ್ಸವ. ಅದರಾಚೆ ಇರುವ ದೇವರನ್ನು ಕಾಣಲು ಬಯಸಿದವಳಲ್ಲ ನನ್ನಮ್ಮ. ಮನೆಯೇ ಅವಳಿಗೆ ದೇವಾಲಯ. ಮನೆಯನ್ನೇ ದೇವಾಲಯ ಮಾಡಿಕೊಂಡ ಅಸಂಖ್ಯಾತ ಹೆಂಗಸರಲ್ಲಿ ನನ್ನಮ್ಮ ಒಬ್ಬಳು. ಆ ದೇವಾಲಯದ ಗರ್ಭಗುಡಿಯಲ್ಲಿ ಗಂಡನ ಬಳಿಕ ಮಕ್ಕಳನ್ನು ಪ್ರತಿಷ್ಠಾಪನೆ ಮಾಡಿ ಪ್ರತಿದಿನವೂ ತನ್ನ ಮನದ ನೋವುಗಳನ್ನು ಮೌನವಾಗಿ ನಿವೇದಿಸುವುದು ಅವಳ ಸಹಜ ಧರ್ಮವೇ ಆಗಿತ್ತು.

(ಮುಂದುವರಿಯಲಿದೆ)