[ರಕ್ತ ಸಂಬಂಧ ಅಥವಾ ಇನ್ನೂ ನಿಖರವಾಗಿ ಹೇಳುವುದಾದರೆ ಜೀನುಗಳ ಬಂಧ ಹೇಳುವ ಸತ್ಯ ಏನೇ ಇದ್ದರೂ ಸಾಮಾಜಿಕ ಮನ್ನಣೆ ಇರುವುದು ನಾವು ವಿಭಿನ್ನ ಕಾರಣಗಳಿಗಾಗಿ ಬೆಳೆಸಿಕೊಂಡ ಕೆಲವು ಶಾಸನಾತ್ಮಕ (ತಂದೆ, ತಾಯಿ, ಮಗ ಇತ್ಯಾದಿ) ಮತ್ತು ವಿಸ್ತೃತವಾಗಿ ಭಾವನಾತ್ಮಕ (ಕುಟುಂಬ, ಜಾತಿ, ಧರ್ಮ ಇತ್ಯಾದಿ) ಸಂಬಂಧಗಳಿಗೆ ಮಾತ್ರ. ಇವುಗಳ ಮೂಲ ರಕ್ತ ಸಂಬಂಧದಲ್ಲೇ ಇರಬಹುದಾದರೂ ಬಹುತೇಕ ಬಳಕೆಯಾಗುವುದು ಸಾಮಾಜಿಕ ಅನಿವಾರ್ಯತೆಗಾಗಿ. ಈ ಗೊಂಡಾರಣ್ಯದಲ್ಲಿ ಹೆದ್ದಾರಿ ಕಡಿಯುವವರಿರಬಹುದು. ನನ್ನದೇನಿದ್ದರೂ ಪರಂಪರೆಯ ಬೆಳಕಿನಲ್ಲಿ ಅಂದಂದಿನ ಅನುಸರಣೆಗೆ ಬೇಕಾದಷ್ಟೇ ದಾರಿ ಬಿಡಿಸಿಕೊಂಡ ಅನುಭವ. ಜೀ-ವನದೊಳಗಿನ ಅದ್ಭುತ ಯಾನದಲ್ಲಿ ಹಿಂದೆ ತಿರುಗಿ ನೋಡಬಹುದು, ಮರುಪಯಣ ಅಸಾಧ್ಯ. ಪ್ರಾಯದ ಶಿಖರ ಸಮೀಪಿಸುತ್ತಿದ್ದಂತೆ ದಿಗಂತ ವಿಸ್ತರಿಸಿದೆ. ನಾನು ಉದ್ದೇಶಪಡದೆಯೂ ಜವಾಬ್ದಾರಿಗಳು – ಮಗ, ಗಂಡ, ಅಪ್ಪ, ಮಾವ ಎಂದಿತ್ಯಾದಿ ಪೇರಿಕೊಳ್ಳುತ್ತಿವೆ. ಅದರಲ್ಲಿ ಕಾಲಮಾನಕ್ಕೆ ತಕ್ಕಂತೆ ಕ್ರಿಯಾತ್ಮಕ ಅರ್ಥ ಕಳೆದುಕೊಂಡವು, ಕಳಚಿಯೇ ಹೋದವುಗಳ ಲೆಕ್ಕ ಬಿಡಿಸಿಡುವುದು ಸುಲಭವಲ್ಲ. ಆದರೂ ಈ ಕಗ್ಗಂಟಿನಲ್ಲಿ ನನ್ನ ಜೀವನಾನುಭವಕ್ಕೆ ದಕ್ಕಿದ ಒಂದು ಎಳೆಯನ್ನಷ್ಟೇ ಬಿಡಿಸಿಡಲು ಪ್ರಯತ್ನಿಸಿದ್ದೇನೆ.]

ಸಾಗರದಿಂದ ಕೊಡಗಿನ ಅರಸರಿಗೆ ರಾಜಪುರೋಹಿತರಾಗಿ ನೂರಿನ್ನೂರು ವರ್ಷಗಳ ಹಿಂದೆ ಬಂದದ್ದಂತೆ ನಮ್ಮ ಕುಟುಂಬ – ಗುಡ್ಡೇಹಿತ್ಲು. ಭಾರತದ ಸ್ವಾತಂತ್ರ್ಯ ಸಂಗ್ರಾಮ ಬಲಗೊಳ್ಳುತ್ತಿದ್ದಂತೆ, ಹುಟ್ಟಿನ ಆಕಸ್ಮಿಕಗಳು ಕುಲಕಸುಬಿಗೇ ಜೋತು ಬೀಳಿಸುವ ಅಂಶಗಳು ಆಗಬೇಕಿಲ್ಲದ (ವೃತ್ತಿ ನಿರ್ಧಾರಕವಾಗಬೇಕಿಲ್ಲದ ಅಥವಾ ವರ್ಣ ವಿವರ್ಣವಾಗುವ) ಕಾಲಕ್ಕೆ, ಅವಿಭಕ್ತ ಕುಟುಂಬಗಳು ಅರ್ಥ ಕಳೆದುಕೊಳ್ಳುತ್ತಿದ್ದ ಕಾಲಕ್ಕೆ, ನನ್ನಜ್ಜ (ಪಿತ್ರಾರ್ಜಿತ ಎನ್ನುವ ನೆಲೆಯಲ್ಲಿ ಇಲ್ಲಿ ಅಪ್ಪನಪ್ಪನನ್ನು ಮಾತ್ರ ನಾನುದ್ದೇಶಿಸಿದ್ದೇನೆ) ಕೃಷಿಭೂಮಿಯಲ್ಲಿ ಪಾಲುಪಡೆದು ಸ್ವತಂತ್ರರಾದರು. ತನ್ನ ಸಂಸಾರವನ್ನು ಕಟ್ಟುವ ಕಷ್ಟಕ್ಕೆ ಅವರು ಜೊತೆಗೆ ಅನ್ಯವೃತ್ತಿಯನ್ನೂ (ಸಹಕಾರೀ ಬ್ಯಾಂಕಿನಲ್ಲಿ ತನಿಖಾಧಿಕಾರಿ) ನಡೆಸಬೇಕಾಯ್ತು. ಅದೇ ನಮ್ಮ ತಂದೆ ಹೆಚ್ಚು ವೈಚಾರಿಕರಾಗಿ, ಪಾಲಿನ ಹಂಗೂ ತೊರೆದು, ಕುಟುಂಬದಿಂದ ಒಂದು ತರದಲ್ಲಿ ಸಿಡಿದೇ ಸ್ವತಂತ್ರ ಮನೆ ಮತ್ತು ಇಷ್ಟಪಟ್ಟ ಅಧ್ಯಾಪನದ ವೃತ್ತಿಜೀವನ ಅನುಸರಿಸಿದರು. ಹಾಗೆಂದ ಮಾತ್ರಕ್ಕೆ ಮೂಲ ಕುಟುಂಬದ ಕುರಿತು ಮಗನ ಜವಾಬ್ದಾರಿ, ಒಟ್ಟು ವ್ಯಕ್ತಿಗಳ ಒಡನಾಟಗಳ ಎಳೆಯನ್ನೇನು ಅವರು ಕಡಿದದ್ದಿಲ್ಲ. (ತಂದೆಗೆ ಸ್ವಭಾವದಲ್ಲಿ ಸರ್ವಾಧಿಕಾರಿತನ ಇದ್ದರೂ ಸಮಷ್ಟಿಯ ಎಲ್ಲ ನಿರ್ಧಾರಗಳಲ್ಲಿ ಬುದ್ಧಿಪೂರ್ವಕವಾಗಿ ತಾಯಿಯ ಭಾವ, ಅಭಿಪ್ರಾಯಗಳನ್ನು ಅಳವಡಿಸಿಕೊಂಡೇ ನಡೆದುಕೊಂಡರು) ಸಹಜವಾಗಿ ನಮ್ಮ ಚಿಕ್ಕಪ್ಪ, ಅತ್ತೆಯರಿಗೆ ಅಣ್ಣನ ಮನೆ, ನಮಗೆ ಅಜ್ಜನ ಮನೆ (ಮೋದೂರು) ಸಹಜ ಹೊಕ್ಕು ಬಳಕೆಗೆ ಒಲಿದೇ ಇತ್ತು.

ನನ್ನ ತಿಳುವಳಿಕೆಯಂತೆ ಸಮೂಹವೊಂದನ್ನು ನಡೆಸುವ ತೋರಗಾಣ್ಕೆಯ ಆಚಾರಗಳು ಸಂಪ್ರದಾಯ. ಅದರೊಳಗೆ ವ್ಯಕ್ತಿಗಳು ತರುವ ತಿದ್ದುಪಡಿಗಳು ಪರಂಪರೆ. ಸಾಂಪ್ರದಾಯಿಕವಾಗಿ ನಾನು ಬ್ರಾಹ್ಮಣ, ಇನ್ನೂ ಸಪುರದ ಗೆರೆ ಎಳೆಯುವುದಾದರೆ ಹವ್ಯಕ. ಸಾಮಾನ್ಯವಾಗಿ ಬಳಕೆಯಲ್ಲಿರುವಂತೆ ಅಪ್ಪಮ್ಮ, ಅಜ್ಜಜ್ಜಿ, ಚಿಕ್ಕಪ್ಪಮ್ಮಂದಿರು, (ಸೋದರ) ಅತ್ತೆಮಾವಂದಿರು ಎಳೆ ಹರಯದಲ್ಲಿ ನನಗೆ ಪರಂಪರೆಯ ವಕ್ತಾರರು ಅಥವಾ ಅಭಿವ್ಯಕ್ತಿಗಳು. ನಮ್ಮ ತಂದೆಗೆ ಬಾಲ್ಯದಲ್ಲೇ ಉಪನಯನ ಮಾತ್ರವಲ್ಲ ಸ್ವಲ್ಪ ವೈದಿಕ ಪಾಠಗಳೂ ನಡೆದದ್ದಿದೆ. ಮನೆ ದೇವರೂಂತ ಅಪ್ಪನಪ್ಪನ ಮನೆಯಲ್ಲಿ ಗಣಪತಿ, ಅಮ್ಮನಪ್ಪನ ಮನೆಯಲ್ಲಿ ದುರ್ಗೆ ಇಟ್ಟುಕೊಂಡು ನಿತ್ಯಪೂಜೆ, ನೈವೇದ್ಯಗಳಲ್ಲದೆ ವರ್ಷಾವಧಿ ವ್ರತ ವಿಶೇಷಾದಿಗಳು ನಡೆಯುತ್ತಲೇ ಇವೆ (ಅಲ್ಲೂ ಕಾಲಕ್ಕೆ ತಕ್ಕ ವಿಮರ್ಶೆ ಅಥವಾ ಹೊಸ ಪರಂಪರೆಯ ರೂಪಣೆ ಧಾರಾಳ ಕಾಣಬಹುದು). ಈಗಲೂ ಅವುಗಳಲ್ಲಿ ಅನೌಪಚಾರಿಕವಾಗಿ ಭಾಗಿಯಾಗುವ ಅವಕಾಶ ನನಗಿದ್ದೇ ಇದೆ ಎನ್ನುವವರೆಗೆ ನಾನು ಸಾಂಪ್ರದಾಯಿಕನೇ ಹೌದು. ಆದರೆ…

ತಂದೆ ವಿಚಾರ ಬಲಿತಂತೆ ಜನಿವಾರವನ್ನೇ ಉಳಿಸಿಕೊಳ್ಳಲಿಲ್ಲ. ತಾಯಿಯ ಸಮಾಧಾನಕ್ಕಾಗಿ ಮತ್ತು ಮುಂದುವರಿದ ಕಾಲದಲ್ಲಿ (ನಾವು ಮೂರೂ ಗಂಡು ಮಕ್ಕಳೇ ಆದ್ದರಿಂದ) ಹೆಣ್ಣು ಕೊಡುವವರ ಕಣ್ಕಟ್ಟಿಗಾಗಿ ‘ಬೆಳೆದು ಬಿತ್ತುಗಟ್ಟಿದ ಮೇಲೆ’ ಎನ್ನುತ್ತಾರಲ್ಲ ಆ ಪ್ರಾಯದಲ್ಲಿ (ನನಗೆ ಬೀಯೇ ಎರಡನೇ ವರ್ಷ ಓದುತ್ತಿದ್ದ ಕಾಲಕ್ಕೆ, ನಂಜನಗೂಡಿನ ಒಂದು ಪುರೋಹಿತರ ಮನೆಯಲ್ಲಿ ನಾಲ್ಕೇ ‘ಬ್ರಹ್ಮ ಸಾಕ್ಷಿ’ಗಳೆದುರು) ತೀರಾ ಸರಳವಾಗಿ ನಮಗೆಲ್ಲಾ ಉಪನಯನ ಮಾಡಿದ್ದರು. ನಾವಾದರೋ ಅಮ್ಮನ ತೃಪ್ತಿಗಾಗಿ ಕೆಲವು ದಿನ ಗಾಯತ್ರಿ ಗೊಣಗಿದ್ದು ಬಿಟ್ಟರೆ ಗಂಭೀರವಾಗಿ ಸಂಧ್ಯಾವಂದನೆ, ವ್ರತಪೂಜಾದಿಗಳಿಗೆ ಕುಳಿತದ್ದೇ ಇಲ್ಲ. ತಂದೆ ಕೊನೆಗಾಲದಲ್ಲಿ ಕಾನೂನಿನಂತೆ ನಮ್ಮೆಲ್ಲರ ಒಪ್ಪಿಗೆ ಪಡೆದೇ ದೇಹದಾನ ನಡೆಸಿದ್ದು ಮತ್ತು ಎಲ್ಲಾ ವೈದಿಕ ಉತ್ತರ ಕ್ರಿಯೆಗಳನ್ನು ನಿರಾಕರಿಸಿದ್ದು ನಿಮಗೆಲ್ಲಾ ತಿಳಿದೇ ಇರುವುದರಿಂದ ಇಲ್ಲಿ ವಿಸ್ತರಿಸುವುದಿಲ್ಲ. (ಆಸಕ್ತರು, ‘ದೇಹದಾನ’ – ಇಲ್ಲೇ ಹಳೆಯ ಕಡತ ತೆರೆದು ನೋಡಬಹುದು).

ಮಕ್ಕಳಾದ ನಮಗೆ ಬುದ್ಧಿ ವಿಕಸಿಸುತ್ತಿದ್ದಂತೆ ಅವಕಾಶ ಸಿಕ್ಕಲ್ಲೆಲ್ಲಾ ತಂದೆ, “ಇಪ್ಪತ್ತೊಂದರ ಪ್ರಾಯಕ್ಕೆ ಸ್ವತಂತ್ರರಾಗದಿದ್ದರೆ ಒದ್ದು ಹೊರಗೆ ಹಾಕುತ್ತೇನೆ” ಎಂಬ ಸ್ಪಷ್ಟ ವೈಚಾರಿಕ ಸಂದೇಶವನ್ನು ಕೊಡುತ್ತಲೇ ಇದ್ದರು. ಇಲ್ಲಿ ‘ಇಪ್ಪತ್ತೊಂದು’ ಮತ್ತು ‘ಒದ್ದು ಹೊರಗೆ ಹಾಕುವುದು’ ಕೇವಲ (ಕೊಡಗಿನ ಸ್ಟೈಲ್!) ಮಾತಿನ ಅಲಂಕಾರ ಎನ್ನುವುದನ್ನು ಮರೆಯಬಾರದು. ತಂದೆ ಪರಂಪರೆಯನ್ನು ಪರಿಷ್ಕರಿಸಿದರು. ವಾಸ್ತವದಲ್ಲಿ ನಾವು (ಮೂರೂ ಮಕ್ಕಳು) ಯೋಗ್ಯತೆಯೊಡನೆ ಬಯಸಿದ ಓದು ಮತ್ತು ವೃತ್ತಿರಂಗಕ್ಕೆ ಅನುಕೂಲ ಒದಗಿಸುವಲ್ಲೋ ಪರಿಚಿತ ಶಿಫಾರಸು ಕೊಡುವಲ್ಲೋ ತಂದೆ ಎಂದೂ ಹಿಂದುಳಿಯಲಿಲ್ಲ. ನನ್ನದೇ ಉದಾಹರಣೆ ಕೊಡುವುದಾದರೆ – ನಾನು ಪೀಯೂಸಿಯಲ್ಲಿ ಜೀವವಿಜ್ಞಾನದತ್ತ ಒಲವು ಮೂಡಿಸಿಕೊಂಡರೂ ಅನಿವಾರ್ಯ ರಸಾಯನಶಾಸ್ತ್ರದಲ್ಲಿ (ಸೀಬೀಝೆಡ್ ಐಚ್ಛಿಕ) ಎಡವಿದೆ. ತಂದೆಗೆ ಟ್ಯುಟೋರಿಯಲ್ಸ್ ಒಗ್ಗದಿಕೆ ಇದ್ದರೂ ನಾನು ನ್ಯಾಷನಲ್ ಕಾಲೇಜಿನ ಟ್ಯುಟೋರಿಯಲ್ಸ್ ಸೇರಬೇಕೆಂದಾಗ ಬೇಡ ಎನ್ನಲಿಲ್ಲ. ಮುಂದೆ ಬೀಯೇ ಬಯಸಿ ಹಿಡಿದೆ. ಜೊತೆಗೇ ಮೂರು ವರ್ಷದ ಬೆನ್ನಿಗೇ ಸೈನ್ಯ ಸೇರುವ ವ್ಯವಸ್ಥೆಯೊಂದಕ್ಕೆ (ಓಟೀಯೂ) ಒಡ್ಡಿಕೊಳ್ಳಲು ಹೊರಟೆ. ಮುಂದೆ ಭಾರತೀಯ ಪೋಲಿಸ್ ಸೇವೆಯ ಪ್ರವೇಶಕ್ಕೆ ಪರೀಕ್ಷೆ ಬರಿಯುವುದಕ್ಕೂ ಉತ್ಸಾಹ ತೋರಿದೆ (ಆಯ್ಕೆ ಆಗಲಿಲ್ಲ ಎನ್ನುವುದು ಪ್ರತ್ಯೇಕ). ತಂದೆ ಎನ್.ಸಿ.ಸಿ ಮೂಲಕವೇ ಆದರೂ ಒಮ್ಮೆ ಎರಡು ವರ್ಷ ಪೂರ್ಣಾವಧಿ ಭೂಸೈನ್ಯದ ಭಾಗವಾಗಿ ದುಡಿದ ಅನುಭವ ತುಂಬಾ ಕಹಿಯಾಗಿಯೇ ಇತ್ತು. (ನೋಡಿ: ಎನ್.ಸಿ.ಸಿ ದಿನಗಳು) “ನನ್ನ ಮಕ್ಕಳಿಗೆ ಈ ಕಲೆಯ/ ಕೃಷಿಯ/ ವೃತ್ತಿಯ (ಮುಂತಾದ ತಮ್ಮ ಕಷ್ಟದ ದಾರಿಯ) ಸಂಕಟ ಬೇಡ” ಎನ್ನುವ ಎಷ್ಟೂ ಪೋಷಕರನ್ನು ಕಾಣುತ್ತೇವೆ. ಇಂದು ಕುರಿತು ಯೋಚಿಸುವಾಗ ನನ್ನ ತಂದೆ ಹಾಗಿರಲಿಲ್ಲ ಎಂದು ಕಾಣುತ್ತದೆ. ನನ್ನ (ತಮ್ಮಂದಿರದ್ದೂ) ಭವಿಷ್ಯದ ಶೋಧವನ್ನು ಅವರ (ಕಹಿ) ಅನುಭವದ ಒರೆಗಲ್ಲಿಗೆ ಉಜ್ಜಿ ನಮ್ಮನ್ನು ವಂಚಿಸಲಿಲ್ಲ. ಒಳ್ಳೆಯ ಸೈನಿಕ ಅಥವಾ ಪೋಲಿಸರು ಇದ್ದಾರೆ, ಬೇಕು ಎನ್ನುವ ಔದಾರ್ಯ ತಂದೆಯ ನಡೆಯಲ್ಲಿ ನನಗಿಂದು ಕಾಣುತ್ತದೆ. ನಾನು ಅಂತಿಮವಾಗಿ ಪುಸ್ತಕ ವ್ಯಾಪಾರಿತನಕ್ಕೇ ಗಟ್ಟಿಯಾದಾಗ ತಂದೆಯ ಸಹಕಾರ ಅಲ್ಲೂ ತರತಮವಿಲ್ಲದೆ ಗಟ್ಟಿಯಾಗಿ ಬೆಂಬಲಿಸಿತು.

ತಂದೆ ಒಂದು ತಿಂಗಳು ರಜೆ ಹಾಕಿ, ಮಂಗಳೂರಿನಲ್ಲಿ ನನ್ನ ಜೊತೆಗೇ ನಿಂತು ಬುಡ ಗಟ್ಟಿ ಮಾಡಿಕೊಟ್ಟರು. ಶೂನ್ಯ ಬಂಡವಾಳದ ನನಗೆ ಅವರ ಪರಿಚಯದ ಪುಸ್ತಕೋದ್ಯಮದ ದಿಗ್ಗಜರ ಅಮಿತ ಬಲ ಕೊಟ್ಟು, ಪ್ರೊ| ಬಿವಿ ಕೆದಿಲಾಯಾದಿ ಅಸಂಖ್ಯ ಪೋಷಕ ಶಕ್ತಿಗಳನ್ನು ಧೈರ್ಯಕ್ಕೂ ಇಟ್ಟು ನಡೆಸಿದರು. ಅದರ ಮೇಲೂ ನಾನು ‘ಸೋತೆ’ನೆಂದರೆ ಯಾವುದೇ ಕಿಸರಿಲ್ಲದೆ ಅನ್ಯ ವೃತ್ತಿಮುಖಿಯಾಗಲು ತನ್ನ ನೆರವಿನ ಹಸ್ತ ಚಾಚಿಯೇ ಇಟ್ಟಿದ್ದರು. ನಡಿಗೆ ಮಾತ್ರ ನನ್ನದೇ; “ನಿನಗೆ ನೀನೇ ಗೆಳೆಯಾ ನೀನೇ” ತಂದೆಗೆ ಬಲು ಪ್ರಿಯವಾದ ಮಹಾಕವಿ ವಾಣಿ. ಇದು ಪರಂಪರೆ.

ಆನಂದ ವರ್ಧನ – ನನ್ನ ದೊಡ್ಡ ತಮ್ಮ ಇಂಜಿನಿಯರಿಂಗ್, ಅನಂತ ವರ್ಧನ – ಸಣ್ಣ ತಮ್ಮ ಚಾರ್ಟರ್ಡ್ ಅಕೌಂಟೆನ್ಸಿ ಎಂದಾಗಲೂ ತಂದೆ ಹೀಗೇ ನಡೆಸಿಕೊಟ್ಟರು. ಅವರ ಓದಿನ ಬೇರೆ ಬೇರೆ ಹಂತದಲ್ಲಿ ಗಣಿತ ಕಠಿಣವೆನಿಸಿದಾಗ ಮನೆಯಲ್ಲೇ (ಅವರವರ ಆಸಕ್ತ ಗೆಳೆಯರನ್ನೂ ಸೇರಿಸಿ) ಕರಿಹಲಗೆ ಏರಿಸಿ, ಸ್ವತಃ ಪಾಠ ಮಾಡಿದರು. ಸಣ್ಣವನಿಗೆ ಚೆನ್ನೈ ಕೋಚಿಂಗ್ ಇನ್ಸ್ಟಿಟ್ಯೂಟ್ ವ್ಯವಸ್ಥೆಯನ್ನೂ ಒದಗಿಸಿದರು. ಮುಂದೆ ಅವರ ಆಯ್ಕೆಯ ವೃತ್ತಿಜೀವನಕ್ಕೂ ಪೂರ್ಣ ಬೆಂಬಲ ಕೊಟ್ಟರು. (ಮದುವೆಯ ಹಂತದಲ್ಲಿ ‘ಹುಡುಗಿಯನ್ನು’ ನಾವು ನಾವೇ ಆರಿಸಿಕೊಳ್ಳಲಿಲ್ಲ ಮತ್ತು ತಂದೆತಾಯರ ಸಲಹೆ ಸಹಾಯವನ್ನೂ ಬಯಸಿದೆವು. ಅವರು ಕರ್ತವ್ಯವನ್ನು ಸಮರ್ಥವಾಗಿಯೇ ಪೂರೈಸಿದರು.) ದೊಡ್ಡವರಿಬ್ಬರು – ನಾನು ಮತ್ತು ಆನಂದ, ನಾವೇ ಆಯ್ದುಕೊಂಡ ವೃತ್ತಿಯ ಅನಿವಾರ್ಯತೆಯಲ್ಲಿ ದೂರದೂರುಗಳನ್ನು ಆಶ್ರಯಿಸಿದೆವು. (ಪರೋಕ್ಷವಾಗಿ ತಂದೆಯ ಮಾತಿನಂತೇ ಮನೆಯಿಂದ ಹೊರಗೆ ಬಿದ್ದೆವು!) ಸಣ್ಣವ – ಅನಂತ, ಮೈಸೂರೇ ಸರಿ ಎಂದದ್ದಕ್ಕೆ ತಂದೆ ಜೊತೆಯಲ್ಲೇ ಉಳಿಸಿಕೊಂಡರೂ ಅವನ ಬದಲಾದ ಸ್ಥಾನ, ವೃತ್ತಿ, ಹವ್ಯಾಸಗಳಿಗೆ ಸ್ವಾತಂತ್ರ್ಯ ಕೊಟ್ಟೇ ನಡೆಸಿಕೊಂಡರು. ಅದುವರೆಗೆ ತಾನು ವೃತ್ತಿಯಲ್ಲಿದ್ದು, ಗೃಹಕೃತ್ಯದ ನಿರ್ಧಾರಗಳ ನಾಯಕತ್ವ ತನ್ನದಿದ್ದದ್ದನ್ನು ಯಾವ ಗದ್ದಲವಿಲ್ಲದೆ ತಮ್ಮನ ವಶಕ್ಕೆ ದಾಟಿಸಿದ್ದರು. (ಮೊನ್ನೆ ಮೊನ್ನೆ ಲೋಕಾಭಿರಾಮವಾಗಿ ತಾಯಿ ಮಾತಾಡಿದಾಗ ತಿಳಿಯಿತು. ಅನಂತನ ಕುಟುಂಬ ಕೇಳದಿದ್ದರೂ ತಂದೆ ತನ್ನ ನಿವೃತ್ತಿ ವೇತನದಲ್ಲಿ ಒಂದು ದೊಡ್ಡ ಪಾಲನ್ನು ಗೃಹಕೃತ್ಯದ ವೆಚ್ಚಕ್ಕೆಂದು ಅನಂತನಿಗೆ ವರ್ಗಾಯಿಸುತ್ತಿದ್ದರಂತೆ!) ಅಂತರ ಮತ್ತು ಪ್ರಯಾಣ ವೆಚ್ಚದ ಹೊರೆ ಅನುಲಕ್ಷಿಸಿ, ದೂರದೂರಿನ ಮಕ್ಕಳ (ನಾನು ಮತ್ತು ಆನಂದ) ಬಯಕೆಯಂತೆ ಅವರಲ್ಲಿಗೂ ಭೇಟಿ, ಅವರ ಕಲಾಪಗಳಲ್ಲಿ ಪೂರ್ಣ ಸಂತೋಷದೊಡನೆ, ಹಿರಿಯರಾಗಿ ಅವರಿಬ್ಬರೂ ಭಾಗೀದಾರಿಕೆ ಪಡೆದದ್ದಕ್ಕೆ ಎಷ್ಟೂ ಉದಾಹರಣೆಯನ್ನು ಇಲ್ಲೇ ನನ್ನ ಹಳೆಯ ಕಡತಗಳಲ್ಲಿ ನೀವು ಪರೋಕ್ಷವಾಗಿ ಕಾಣಬಹುದು. ಇದೂ ಸತ್-ಪರಂಪರೆಯ ಭಾಗವೆಂದೇ ನಾನು ಭಾವಿಸುತ್ತೇನೆ.

ಹುಟ್ಟಿನ ಆಕಸ್ಮಿಕಕ್ಕೆ ಒದಗಿದ ಆಚಾರಗಳನ್ನು ಕಷ್ಟದಿಂದ ನಿಭಾಯಿಸಿದ್ದಕ್ಕೋ ಏನೋ ತಂದೆ ಇತರ ವ್ಯಕ್ತಿ ಅಥವಾ ಸಾಮಾಜಿಕ ಕ್ರಿಯೆಗಳ ಬಗ್ಗೆ, “ಪರಿಚಯ, ಒಡನಾಟ, ಸ್ನೇಹ, ಸಂಬಂಧ ಎಲ್ಲವೂ FUNCTIONAL ಆಗಿರಬೇಕು” ಎಂದೇ ಸಾರುತ್ತಿದ್ದದ್ದು ನನಗಿನ್ನೊಂದು ದೊಡ್ಡ ಆದರ್ಶ. ದೇಶ, ಭಾಷೆ, ಜಾತಿ, ಧರ್ಮ, ಕುಟುಂಬ, ಸಾಂಸಾರಿಕ ಸಂಬಂಧಗಳು, ವೃತ್ತಿ ಹವ್ಯಾಸಗಳ ಬಂಧಗಳು ನನ್ನನ್ನು ಬಲಿಗೊಡಲು ಯತ್ನಿಸುವಾಗೆಲ್ಲಾ ಸಮರ್ಥವಾಗಿ ಒದಗಿದ ಗುರಾಣಿ ಈ ನಿಲುವು. ತೀರಾ ಮೊದಲು ಹಿಂದೂ ಸಮಾಜೋತ್ಸವದ ಕಾರ್ಯಕರ್ತರು “ಅತ್ರಿಯಲ್ಲಿ ಭಗವಾಧ್ವಜ ಇಲ್ಲ” ಎಂದು ಆಶ್ಚರ್ಯ ವ್ಯಕ್ತಪಡಿಸಿ ಹೇರಲು ಬಂದಿರು. ತಂಡದ ನಾಯಕಮಣಿ – ಧರಣೇಂದ್ರ ಕುಮಾರ್ ಪಡಿವಾಳ್ ಎಂಬುವವರಲ್ಲಿ ‘ಹಿಂದುತ್ವ’ದ ವ್ಯಾಖ್ಯೆ ಕೇಳಿ, ಧ್ವಜ ಏರಿಸದೇ ಓಡಿಸಿದ್ದೆ. ನನ್ನಂಗಡಿಯ ಭಾರತೀಯ ಧಾರ್ಮಿಕ ಪುಸ್ತಕಗಳ ಸಂಗ್ರಹ ನೋಡಿ ಭ್ರಮಿಸಿದವರಿಗೆ ಅಲ್ಲೇ ಇನ್ನೊಂದು ಶೆಲ್ಫಿನಲ್ಲಿರುವ ಇಸ್ಲಾಂ, ಕ್ರಿಶ್ಚಿಯನ್ ಮುಂತಾದ ಸಾಹಿತ್ಯ ತೋರಿಸಿ ತಣ್ಣಗಾಗಿಸುತ್ತೇನೆ. ಮೀಸೆ ನೋಡಿ “ಆರೆಸ್ಸೆಸ್ಸಾ” ಎನ್ನುವವರೂ ಕಡಿಮೆಯಿಲ್ಲ.

ಕೆಲವು ದಶಕಗಳ ಹಿಂದೆ ನನ್ನನ್ನು ದ್ರಾವಿಡ ಬ್ರಾಹ್ಮಣ ಸಂಘದ ಸದಸ್ಯ ಮಾಡಲು ಹರಿಕೃಷ್ಣ ಪುನರೂರು ಮತ್ತು (ಹೆಸರು ಮರೆತಿದ್ದೇನೆ. ಎಂತದೋ) ಹೊಳ್ಳ ಎನ್ನುವವರು ಅಂಗಡಿಗೆ ಬಂದಿದ್ದರು. ಅವರು ನನ್ನ ಸೋದರ ಮಾವನ ಪರಿಚಯದ ಬಲದಲ್ಲಿ ನನ್ನನ್ನು ಬ್ರಾಹ್ಮಣ ಎಂದು ಗುರುತಿಸಿ, ಸದಸ್ಯತ್ವ ಬಯಸಿದರು. ಹೆಸರಿಸುವುದೇ ಆದರೆ ನಾನು ‘ಕರ್ಮ ಬಲ’ದಲ್ಲಿ ವೈಶ್ಯ, ಬ್ರಾಹ್ಮಣನಲ್ಲ ಎಂದು ಸ್ಪಷ್ಟಪಡಿಸಿದೆ. ಆದರೂ ಬಹು ಔದಾರ್ಯದಿಂದ ನನ್ನನ್ನು ಹುಟ್ಟಿನ ಬಲದಲ್ಲೇ ತಮ್ಮ ಸಂಘಟನೆಗೆ ಸೇರಿಸಿಕೊಳ್ಳಲು ಒತ್ತಾಯಿಸಿದಾಗ ಅವರ ಸಂಘಟನೆಯ ನಾಯಕಮಣಿಯೋರ್ವರು (ಹೆಸರು ಮರೆತಿದ್ದೇನೆ – ಸಣ್ಣ ಮಟ್ಟಿನ ರಾಜಕಾರಣಿ ಶಾರದಾ ಆಚಾರ್ ಅವರ ಮಗ) ಮದ್ಯಮಾರಾಟಗಾರ ಆಗಿರುವುದನ್ನು ಬೊಟ್ಟುಮಾಡಿ ತೋರಿಸಿದ್ದಕ್ಕೆ ಅವರಾಗಿಯೇ ನಿರುತ್ತರರಾಗಿ ಹಿಂಜರಿದರು.

ನನ್ನನ್ನು ಹವ್ಯಕ ಸಂಘಕ್ಕೆ ಸದಸ್ಯನನ್ನಾಗಿಸಲು ಕೆಲವರು ಪ್ರಯತ್ನಿಸಿ ಸೋತ ಕಾಲಕ್ಕೆ ಓರ್ವ ತೀರಾ ಪರಿಚಿತ ಹಿರಿಯರು ನನ್ನಲ್ಲಿಗೆ ಬಂದಿದ್ದರು. ನನ್ನ ನೇರ ನಿರಾಕರಣಕ್ಕೆ ಜಗ್ಗದ ಅವರು ‘ಹೃದಯ ಸಂವಾದ’ಕ್ಕೆ ಇಳಿದರು. ಸದಸ್ಯತ್ವದ ಕಲಮುಗಳಿಗೆ ಬೇಕಾದ ವಾಸ್ತವಿಕ ವಿವರಗಳನ್ನೆಲ್ಲ (ಜನನ, ವಿದ್ಯಾಭ್ಯಾಸ ಇತ್ಯಾದಿ) ಕೇಳಿದ್ದರು – ಯಾರಲ್ಲೂ ತಿಳಿಸಬಹುದಾದಂತೆ ಕೊಟ್ಟಿದ್ದೆ. ನಾನು ಆಸಕ್ತಿವಹಿಸದ ನನ್ನ ಗೋತ್ರ, ಪ್ರವರ ಇತ್ಯಾದಿ ಅವರಾಗಿಯೇ ನನ್ನ ಇತರ ಸಂಬಂಧಿಕರಿಂದ ಸರಿಯಾಗಿಯೇ ತುಂಬಿಕೊಂಡಿದ್ದರು. ಕೊನೆಯಲ್ಲಿ ಅವೆಲ್ಲವನ್ನು ಔಪಚಾರಿಕವಾಗಿ ಅನುಮೋದಿಸುವ ಮಟ್ಟಿಗೆ ನನ್ನ ಒಂದು ರುಜು ಮಾತ್ರ ಬೇಕು ಎಂದರು. “ನೀವು, ಸಮಾಜ ನನ್ನನ್ನು ಹಾಗೆ ಕಂಡುಕೊಂಡದ್ದು ತಪ್ಪಲ್ಲ. ಆದರೆ ಅದನ್ನು ನಿಮ್ಮ ಚೌಕಟ್ಟಿನೊಳಗೆ ಅನುಮೋದಿಸಲು, ಅಂದರೆ ಸೀಮಿತ ಹಿತಾಸಕ್ತಿಯ ಸಂಘಟನೆಯ ಸದಸ್ಯನಾಗಲು ನಾನು ಸಿದ್ಧನಿಲ್ಲ” ಎಂದು ಸ್ಪಷ್ಟಪಡಿಸಿದೆ. ಅವರು ಸುಮಾರು ವಾದಿಸಿ, ಕೊನೆಯ ಅಸ್ತ್ರ ಎನ್ನುವಂತೆ, “ನೀವು ನಿಮ್ಮ ತಂದೆಯ ಮಾತನ್ನು ಪೂರ್ಣ ಗೌರವಿಸುತ್ತೀರಲ್ಲಾ. ನಾನು ಅವರ ಬಾಯಲ್ಲಿ ಹೇಳಿಸಿದರೆ ರುಜು ಮಾಡ್ತೀರಾ?” “ನಾನು ತಂದೆಯನ್ನು ತಿಳಿದಂತೆ ಅವರು ನನ್ನಲ್ಲಿ ಹಾಗೆ ಹೇಳಲಾರರು. ಅಷ್ಟಕ್ಕೂ ನೀವು ಹೇಳಿಸಿದರೆ ನಾನು ‘ಪಿತೃವಾಕ್ಯ’ವನ್ನು ಧಿಕ್ಕರಿಸುತ್ತೇನೆ” ಎಂದದ್ದು ಅವರಿಗೆ ತ್ರೇತಾಯುಗದಿಂದ ಕಲಿಗಾಲಕ್ಕೆ ಬಿದ್ದ ಅನುಭವ ಕೊಟ್ಟಿರಬೇಕು.

ದಾಖಲೆಗಳು: ಮಂಗಳೂರಿನಲ್ಲಿ ರೂಪುಗೊಂಡ ನಮ್ಮ ಕುಟುಂಬದ ಎಲ್ಲಾ (ಸರಕಾರೀ) ದಾಖಲೆಗಳಲ್ಲೂ ನಾವು ಜಾತ್ಯಾತೀತರು. ಹೀಗೇ ಮಗ – ಅಭಯನನ್ನು ಸಂತ ಅಲೋಶಿಯಸ್ ಶಾಲೆಗೆ ಸೇರಿಸಿದ್ದೆವು. ಅವನ ಕಿರಿಯ ಪ್ರಾಥಮಿಕ ಶಾಲೆಯ ಯಾವುದೋ ಹಂತದಲ್ಲಿ (ಎರಡೋ ಮೂರನೆಯದೋ ತರಗತಿ ಇದ್ದಿರಬೇಕು) ಟೀಚರ್ ಆಗಾಗ “ನಿನ್ನ ಜಾತಿ ಯಾವ್ದಾ” ಅಂತ ಕೇಳ್ತಾ ಇದ್ದರು. ನಾವು ಶಾಲೆಗೆ ಸೇರಿಸುವಾಗ ಬರೆದುಕೊಟ್ಟಂತೆ ಅವನು ಹೇಳುತ್ತಿದ್ದ. (ವಾಸ್ತವವಾಗಿ ಅವನಿಗೆ ನಾವೆಂದೂ ‘ಜಾತಿ ಪಾಠ’ ಮಾಡಿಯೇ ಇರಲಿಲ್ಲ. ಆ ಪ್ರಾಯದಲ್ಲಿ ‘ಪರಿಸರ’ ಅವನಿಗೆ ಕಲಿಸಿದ ಪಾಠದಲ್ಲಿ, ಅವನ ಗೆಳೆಯ ಉಮ್ಮರನನ್ನು ಕೋಪದ ಭರದಲ್ಲಿ “ಬ್ಯಾರಿ” ಎಂದು ಬಿಟ್ಟಾಗ ಭಾರೀ ಬಯ್ದೆ ಎಂದು ಆತಂಕವನ್ನೂಯ್ದ ಸಂತೋಷಪಟ್ಟಿದ್ದ!) ಅವರು ಮೇಲಿನವರಿಗೆ ಸಮಜಾಯಿಷಿ ಕೊಟ್ಟು ಕೊಟ್ಟು ಕೆಲವೊಮ್ಮೆ “ಇವ್ನಿಗೊಂದು ಜಾತಿಯಿಲ್ಲ” ಎಂದು ಸಣ್ಣದಾಗಿ ಇವನನ್ನೇ ಹೀಯಾಳಿಸಿದ್ದೂ ಇತ್ತು. ಒಂದು ದಿನ ನಮಗೆ ಸ್ಪಷ್ಟ ದೂರೇ ಬಂತು – ಶಿಕ್ಷಣ ಇಲಾಖೆಗೆ ಅಭಯಸಿಂಹನ ಸ್ಪಷ್ಟ ಜಾತಿಸೂಚನೆಯ ವಿವರ ಸಲ್ಲಿಸಲೇಬೇಕು. ನಾನು ಅಷ್ಟೇ ಸ್ಪಷ್ಟವಾಗಿ ಬರೆದುಕೊಟ್ಟೆ (ಪತ್ರದ ಪ್ರತಿ ನನ್ನಲ್ಲಿಲ್ಲವಾದ್ದರಿಂದ ಸುಮಾರು ಈ ಅರ್ಥ ಅದರಲ್ಲಿತ್ತು) – ‘ನಮಗೆ ಜಾತಿಯಿಲ್ಲ. ಜಾತಿಸೂಚನೆಯಿಂದ ಬರುವ ಲಾಭಗಳು ನಮಗೆ ಬೇಕಿಲ್ಲ, ಒದಗುವ ನಷ್ಟಗಳಿಗೆ ನಾವೇ ಜವಾಬ್ದಾರರು.’

ಗುಡ್ಡೇಹಿತ್ಲು ಕುಟುಂಬದ = ಜಿ, ತಿಮ್ಮಪ್ಪಯ್ಯನ ಮಗ = ಟಿ ಸೇರಿ ತಂದೆಗೆ ಜಿ.ಟಿ ಬಂದರೆ, ಅದೇ ನಾರಾಯಣನ ಮಗನಾಗಿ ನನಗೆ ಜಿ.ಎನ್ ಒದಗಿತ್ತು. ನಾನು ಹೆಚ್ಚು ಯೋಚನೆ ಮಾಡದೆ ‘ಅಶೋಕನ ಮಗ’ ಎಂದು ಅಭಯನ ಜನನ ದಾಖಲೆಯ ಸಮಯದಲ್ಲಿ ಜಿ.ಎ ಹಾಕಿ ಸುಲಭ ಜಾಡು ಅನುಸರಿಸಿಬಿಟ್ಟೆ. ತಂದೆ, “ಅರ್ಥವಿಲ್ಲದ ಜಿ ಬಿಡಬಹುದಿತ್ತು, ಹೆಚ್ಚಿನ ಗುರುತಿನ ಸೌಕರ್ಯಕ್ಕೆ ಬೇಕಾದರೆ ಅತ್ರಿಸೂಚಕ ಎ ಸೇರಿಸಿಕೊಳ್ಳಬಹುದಿತ್ತು” ಎಂದು ಸೂಚಿಸಿದ್ದು ತಡವಾಯ್ತು. (ಎ.ಎ.ಅಭಯಸಿಂಹ, ಅತ್ರಿ ಸಿಂಹ, triple A ಸಿಂಹ ಇತ್ಯಾದಿ ಕರೆಸಿಕೊಳ್ಳುವ ಅವಕಾಶ ಅವನಿಗೆ ತಪ್ಪಿಹೋಯ್ತು!) ಜಾತಿಸೂಚಕ ಉಪಾಧಿಗಳನ್ನು (ರಾಯ/ ರಾವ್, ಭಟ್ಟ, ಶರ್ಮ ಇತ್ಯಾದಿ) ನಮ್ಮ ಮಕ್ಕಳ ನಾಮಕರಣಕ್ಕೆ ನಾವು ಮೂರೂ ಸೋದರರು ಯೋಚಿಸಲೇ ಇಲ್ಲ. ಕೇವಲ ಅರ್ಥ ಸಿರಿವಂತಿಕೆಗೆ ತಂದೆ ಬಳಸಿದ್ದ ‘ವರ್ಧನ’ sur-name ಅಲ್ಲ ಎಂದರೆ ಇಂದೂ ಎಷ್ಟೋ ಜನ ನಂಬುವುದಿಲ್ಲ. (ನಾನು ಜೈನನೆಂದು ತಪ್ಪು ತಿಳಿದವರೂ ಇದ್ದಾರೆ!)

ಅದೊಂದು ಕಾಲದಲ್ಲಿ ನನ್ನ (ಮೂರನೇ) ಚಿಕ್ಕಪ್ಪ – ರಾಘವೇಂದ್ರನಿಗೆ ‘ಗುಡ್ಡೇಹಿತ್ಲು’ ಮೂಲ ಹುಡುಕುವ ಉತ್ಸಾಹ ಬಂತು. ಶಿವಮೊಗ್ಗ ಜಿಲ್ಲೆಯ ನಗರ ಸಮೀಪದಲ್ಲಿ (ಕೊಡಚಾದ್ರಿಯ ಆಚೆ ಮಗ್ಗುಲಿನಲ್ಲಿ) ಕಂಡುಹಿಡಿದದ್ದೂ ಆಯ್ತು. ಮುಂದುವರಿದ ಆತನ ಉತ್ಸಾಹ ಕೊಡಗಿಗೆ ಇತಿಹಾಸ ಕಾಲದಲ್ಲಿ ವಲಸೆ ಬಂದ ಮೇಲೆ ಹರಡಿಕೊಂಡ ಗುಡ್ಡೇಹಿತ್ಲಿನವರನ್ನು ಗುಡ್ಡೇ ಹಾಕುವತ್ತ ಹೊರಳಿತು. ಮತ್ತೂ ಮುಂದುವರಿದು ಇದನ್ನೇ ಒಂದು ಸಾಮಾಜಿಕ ಸಂಘಟನೆಯನ್ನಾಗಿಸುವ ಪ್ರಯತ್ನದಲ್ಲಿ ರಬ್ಬರ್ ಮೊಹರು, ತಿಂಗಳಿಗೊಂದು ಕುಟುಂಬಸ್ತರ ಮನೆಯಲ್ಲಿ ಭೋಜನ ಕೂಟಕ್ಕೆ ಔಪಚಾರಿಕ ಕರೆಯೋಲೆ, ಸದಸ್ಯತ್ವದ ಅನುಮೋದನೆಗೆ ಒತ್ತಾಯ ಸೇರಿಕೊಂಡಿತು. ನಾನು ಸವಿನಯವಾಗಿ ‘ಬಳಕೆ ಬೆಳೆದಂತೆ ಸಂಬಂಧ’ ಎಂದು ಕಂಡುಕೊಂಡದ್ದನ್ನೇ ಬರೆದು ತಿಳಿಸಿ, ದೂರ ಉಳಿದೆ. ಮೂಕಿಯಲ್ಲಿ ಕುಳಿತ ರಾಘವೇಂದ್ರನೇ ಮುಂತಾದವರಿಗೆ ಕುಟುಂಬದ ಹೆಸರಿನ ಬಗ್ಗೆ ವ್ಯಾಮೋಹವೋ ಅನ್ಯ ಲಾಭಗಳ ಯೋಜನೆಯೋ ಇರಲಿಲ್ಲವಾದ್ದರಿಂದ ಪ್ರಕರಣ ಕೇವಲ ನಗೆಯಲ್ಲಿ ಮುಗಿದು ಹೋಯ್ತು.

ಗುಡ್ಡೇಹಿತ್ಲಿನೊಳಗೆ ನೇರ ನನ್ನ ಅಜ್ಜನ ಮನೆ, ಅಂದರೆ ಮೋದೂರಿನಿಂದ ಹೊರಟ ಶಾಖೆಗಳು ಮತ್ತು ಚಿಕ್ಕಜ್ಜನ ಮನೆ, ಅಂದರೆ ಜ್ಯೋತಿಯಿಂದ ಹೊರಟ ಶಾಖೆಗಳಲ್ಲಿ ನಾನು ಬಾಲ್ಯ ಕಳೆದವ. ಅಂದಿನಾ ಒಡನಾಟಗಳ ಮಾಧುರ್ಯ ಇಂದಿಗೆ ನನ್ನನ್ನು ಅವುಗಳೊಡನೆ ಭಾವನಾತ್ಮಕ ಬಂಧಕ್ಕೊಳಪಡಿಸುತ್ತದೆ. ಇದೇ ಸ್ತರ ಅಥವಾ ಒಂದು ಕೈ ಮಿಗಿಲು ಎನ್ನುವಂತೆ ತಾಯಿಯ ತವರ್ಮನೆ, ಅಂದರೆ ಪುತ್ತೂರು-ಮರಿಕೆಯ ಮನೆ, ಜನರನ್ನು ಸಂಪ್ರದಾಯ ‘ಕುಟುಂಬ’ ವರ್ಗಕ್ಕೆ ಸೇರಿಸದಿರಬಹುದು. ಆದರೆ ನನ್ನ ಲೆಕ್ಕಕ್ಕೆ ಅದೂ ಅಂದರೆ ಅಡಮನೆ ಪಡತಡ್ಕದ (ಎ.ಪಿ) ಮರಿಕೆ ಮನೆಯಿಂದ ಹೊರಟ ನೇರ ಕವಲುಗಳೂ ಅಷ್ಟೇ ‘ಕುಟುಂಬಿಕರು.’ ಇನ್ನೂ ಮುಂದುವರಿದ ಕಾಲದಲ್ಲಿ ನನ್ನ ಹೆಂಡತಿ ಮತ್ತು ಸೊಸೆಯ ತವರ್ಮನೆಗಳ ಕಲಾಪಗಳೂ ನಮ್ಮವೇ. ದೇಶ, ಕಾಲಗಳ ಅಂತರ, ಅನುಕೂಲ ಮರೆಯದೆ ಅಲ್ಲೆಲ್ಲಾ ಏನು ಕಾರ್ಯಕ್ರಮವಾದರೂ ನನಗೆ ಭಾಗವಹಿಸಲು ಉತ್ಸಾಹವಿದೆ. ಇವೆಲ್ಲಾ ರಕ್ತ ಸಂಬಂಧದ ಸ್ಪಷ್ಟ ಎಳೆ ಹಿಡಿದೇ ನಡೆಯುವಂಥವು. ಇವುಗಳೆಲ್ಲದರಿಂದಲೂ ಆಪ್ತ. . . . .

ಹುಟ್ಟಿನ ಆಕಸ್ಮಿಕದೊಡನೆ ಬರುವ ಹಿರಿತನ ಇಂದು ಹೆಚ್ಚಿನ ಎಲ್ಲಾ ಕಡೆ ವೃತ್ತಿ ಮತ್ತು ಆರ್ಥಿಕತೆಯ ಆಧಾರದಲ್ಲಿ ಕೇವಲ ಸಾಂಪ್ರದಾಯಿಕ ಔಚಿತ್ಯವನ್ನಷ್ಟೇ ಉಳಿಸಿದೆ. ನೇರ ತಂದೆ ತಾಯಿಯಂಥ ಸ್ಥಾನಗಳನ್ನುಳಿದು ಉಳಿದ ಹಿರಿತನಗಳು ನಮ್ಮ ಕುಟುಂಬದೊಳಗಂತೂ ಯಾರೂ ಅವಮಾನ ಅಥವಾ ಸಮ್ಮಾನಗೊಳ್ಳದ ಸರಸ ಸಂಬೋಧನೆಯದಾಗಿ ಉಳಿದಿವೆ (ಹೆಚ್ಚಿನೆಲ್ಲರೂ ಪರಸ್ಪರ ಹೆಸರು ಹಿಡಿದು, ಏಕವಚನದಲ್ಲೇ ಮಾತಾಡಿಸುತ್ತಾರೆ). ಯಾವುದೇ ಸಾಂಪ್ರದಾಯಿಕ ಆಚರಣೆಯ ಸಂದರ್ಭದಲ್ಲಿ ಪುರೋಹಿತರಿಂದ ‘(ಹಿರಿಯರ) ಕಾಲು ಹಿಡಿಯಬೇಕು’ ಎಂಬ ಸೂಚನೆ ಬಂದಾಗ ನನ್ನ ಚಿಕ್ಕಪ್ಪಂದಿರು ತಂತಮ್ಮ ಕಾಲು ಹಿಡಿದಂತೆ ಮಾಡುತ್ತಿದ್ದದ್ದು, “ಅಕ್ಕನ (ಅಮ್ಮ) ಕಾಲು ಹಿಡಿದರೆ ಬಿದ್ದಾಳು” ಎಂದು ಹಾಸ್ಯ ಮಾಡುತ್ತಿದ್ದದ್ದು ಮರೆಯಲಾರೆ. ನಾವು ಅತ್ರಿ ಸೋದರರು ತಂದೆತಾಯಿಯರ ಅಥವಾ ಯಾವುದೇ ಹಿರಿಯರ ಕಾಲು ಹಿಡಿಯುವ ಔಪಚಾರಿಕತೆಯನ್ನು ಎಂದೂ ಗಂಭೀರವಾಗಿ ನಡೆಸಿದ್ದಿಲ್ಲ. ಹಾಗೇ ನಮ್ಮ ತಂದೆತಾಯಿ ಸೇರಿದಂತೆ ಹತ್ತಿರದ ಯಾವ ಹಿರಿಯರೂ ಅದನ್ನು ಮಾನಾವಮಾನಗಳ ಪಟ್ಟಿಯಲ್ಲಿ ಸೇರಿಸಿದ್ದೂ ಇಲ್ಲ. ನಮ್ಮ ಹೆಂಡಂದಿರು ಅವರ ತವರಿನ ಸಂಸ್ಕಾರದ ಪ್ರಭಾವದಲ್ಲಿ ತಾವು, ಮಕ್ಕಳನ್ನೂ ಆಗೀಗ ‘ಹೊಡೆಯಾಡಿಸಿದರೆ’ (=ಹವಿಗನ್ನಡದಲ್ಲಿ ಕಾಲಿಗೆ ನಮಸ್ಕಾರ) ನಾವು “ಅಕೋ ಹೊಡೆದಾಡಲು ಹೊರಟರು” ಎಂದು ತಮಾಷೆ ಮಾಡುವುದೂ ಇದೆ. ಇದರ ಮುಂದುವರಿಕೆಯಾಗಿ ಪ್ರಾಯದ ಹಿರಿತನ ಹೆಚ್ಚುತ್ತಿದ್ದರೂ ನಾನು ಬುದ್ಧಿಪೂರ್ವಕವಾಗಿ ಯಾರಿಂದಲೂ ಪಾದವಂದನೆ ಸ್ವೀಕರಿಸಿದ್ದಿಲ್ಲ. ಇನ್ನೂ ಸ್ಪಷ್ಟಪಡಿಸುವುದಾದರೆ functionalityಯನ್ನು ಮೀರಿದ ಹಿರಿತನವನ್ನು ಒಪ್ಪಿಕೊಂಡದ್ದಿಲ್ಲ.

ಅನುಭವ ಮತ್ತು ಕೆಲಸದ ಅನುಕೂಲಕ್ಕಾಗಿ ತರತಮವನ್ನು ಗುರುತಿಸಿ ನಡೆಯುವಲ್ಲಿ ನಾನು ಪ್ರಾಯದ ಕಟ್ಟಳೆಯಿಂದ ಎಂದೂ ಸಂಕೋಚಪಟ್ಟದ್ದಿಲ್ಲ. ಇದನ್ನು ಸ್ವಲ್ಪ ವಿಸ್ತರಿಸುವುದಾದರೆ, ನನ್ನ ಅಂಗಡಿಯ ಆಡಿಟ್ ಕೆಲಸ ಸ್ವತಃ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಅನಂತ ಮಾಡುತ್ತಾನೆ. ಅಲ್ಲಿ ಅವನ ಸಲಹೆ ಸೂಚನೆಗಳನ್ನು ನಾನು ಶ್ರದ್ಧೆಯಿಂದ ಅನುಸರಿಸುತ್ತೇನೆ. ನಮ್ಮ ಮೂಲ ಮನೆ ಮತ್ತು ತಂದೆ ತಾಯಿಯರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅನಂತನ ಕುಟುಂಬ ವಹಿಸಿಕೊಂಡಿದೆ. “ತಂದೆಗೆ ಅದು ಮಾಡಿದ್ದು ಸಾಲದು, ತಾಯಿಗೆ ಇದು ಮಾಡಿದ್ದು ಹೆಚ್ಚಾಯ್ತು, ಮನೆಗೆ ಇನ್ನೊಂದು ಮಾಡಬೇಕಿತ್ತು” ಎಂದಿತ್ಯಾದಿ ನಾನು ‘ಹಿರಿಮಗನ’ ನೆಲೆಯಲ್ಲಿ ಒಂದು ಮಾತನ್ನೂ ಯೋಚಿಸಿದ್ದೇ ಇಲ್ಲ. ಅದೇ ನನ್ನ ಆದಾಯವೋ ವೆಚ್ಚವೋ ಬರವಣಿಗೆಯೋ ಚಾರಣವೋ ವನ್ಯ ಸಂರಕ್ಷಣೆಯೋ ಯಕ್ಷ ಪ್ರಯೋಗಗಳೋ ಅನಂತ ಒಂದು ದಿನವೂ ಪ್ರಶ್ನಿಸಿದ್ದಿಲ್ಲ, ಪ್ರಶ್ನಿಸಲಾರ.

ವೃತ್ತಿ ನಿರತನಾದ ಮೇಲೆ ನನ್ನ ಮೊದಲ ತಮ್ಮ ಆನಂದ ಒಂಟಿಯಾಗಿಯೂ ಮತ್ತೆ ಕುಟುಂಬಸ್ಥನಾಗಿಯೂ ಹೆಚ್ಚು ಕಡಿಮೆ ಸದಾ ದೂರ, ಅತಿದೂರದ ಪ್ರದೇಶಗಳಲ್ಲೇ (ಅಸ್ಸಾಂ, ರಾಜಸ್ತಾನ ಮತ್ತೀಗ ಖಾಯಂ ಅಮೆರಿಕಾ) ಇದ್ದುದರಿಂದ ಅನೌಪಚಾರಿಕ ಒಡನಾಟಗಳಿಗೆ ಅವಕಾಶ ಸಿಕ್ಕಿದ್ದು ಕಡಿಮೆ. ಅವೆಲ್ಲ ಸ್ಥಳಗಳಿಗೂ ಪ್ರಯಾಣ, ಖರ್ಚು ಮತ್ತು ಸಮಯಾನುಕೂಲವನ್ನು ಮಧ್ಯಮವರ್ಗದ ಮಿತಿಯಲ್ಲಿ ಹೊಂದಿಸಿಕೊಂಡು ಒಮ್ಮೊಮ್ಮೆಯಾದರೂ ತಂದೆ ತಾಯಿ ಪ್ರೀತಿಯ ಕರ್ತವ್ಯವೆಂಬಂತೆ ನಿಭಾಯಿಸಿದ್ದಾರೆ. ಆದರೆ ಅದೇ ಉಳಿದಿಬ್ಬರು ಸೋದರರಿಗೆ ಮುಖ್ಯವಾಗಿ ವೃತ್ತಿ ಮತ್ತೆ ಆರ್ಥಿಕ ಮಿತಿಗಳಲ್ಲಿ ಆನಂದನ ಊರುಗಳಿಗೆ ಭೇಟಿ ಕೊಡುವುದು ಅಸಾಧ್ಯವಾಗಿದೆ. ಈ ಭಾವನಾತ್ಮಕ ಕೊರತೆಗಳನ್ನು ಪ್ರಾಯೋಗಿಕತೆಯ ಬೆಳಕಿನಲ್ಲಿ ನೋಡುವುದೊಂದೇ ನಮಗುಳಿದಿರುವ ದಾರಿ. ಅವನೇ ರಜಾ ದಿನಗಳನ್ನು ಹೊಂದಿಸಿಕೊಂಡು ಹುಟ್ಟೂರು, ಸಂಬಂಧಿಕರು ಎಂದು ಸುಧಾರಿಸುವುದಾಗಿದೆ.

ಕೊನೆಯದಾಗಿ ನಮ್ಮದೇ ಮಗನ ಕುರಿತೂ ನನ್ನ ಬಂಧ, ಕರ್ತವ್ಯವಾದರೂ ಇದೇ ಪ್ರೀತಿ, ವೈಚಾರಿಕತೆ ಮತ್ತು ಕಾರ್ಯಾನುಕೂಲತೆಯನ್ನೇ ಹೊಂದಿ ನಡೆದಿದೆ. ಅವನ ಹುಟ್ಟಿನ ದಿನವೇ ನಾನು ಹೆಸರು ಅಭಯಸಿಂಹನೆಂದು ಅಂದಾಜಿಸಿದೆ. ದೇವಕಿ ಅನುಮೋದಿಸಿದಳು ಮತ್ತು ಆಸ್ಪತ್ರೆಯ ದಾಖಲೆಯೊಡನೆ ಸರಕಾರೀ ಜನನ ದಾಖಲೆಯಲ್ಲೂ ನಮೂದು ಆಯ್ತು. ಹೆರಿಗೆಯ ಹಿಂದು ಮುಂದೆಲ್ಲಾ ದೇವಕಿಯ ತವರಿನಲ್ಲೇ ಆದ್ದರಿಂದ ಅಲ್ಲಿನ ನಂಬಿಕೆಗೆ ಅನುಗುಣವಾಗಿ, ಸೂಕ್ತ ಸಮಯದಲ್ಲಿ ‘ಶುದ್ಧ’ದಲ್ಲಿ ಸಹಕರಿಸಿದೆ. ಮುಂದೆ ನಮ್ಮದೇ ನಿರ್ಧಾರದ ಉದ್ದಕ್ಕೆ ಅಂದರೆ ಅವನು ವಿವಾಹಯೋಗ್ಯನಾಗುವವರೆಗೂ ಸಾರ್ವಜನಿಕದಲ್ಲಿ ಸಮರ್ಥಿಸಿಕೊಳ್ಳಲಾಗದ ಯಾವುದೇ ಸಂಸ್ಕಾರವನ್ನು (ಜಾತಕ, ನಾಮಕರಣ, ಉಪನಯನ, ಮತ್ತು ನೂರೆಂಟು ಲೌಕಿಕ ಕಾರಣಗಳಿಗೆ ಪಾರಲೌಕಿಕ ಶಾಂತಿಗಳು ಇತ್ಯಾದಿ) ಕೊಡಲಿಲ್ಲ. ಆತನಿಗೆ ಔಪಚಾರಿಕ ವಿದ್ಯಾಭ್ಯಾಸ ನಜರೆತ್ ಕಾನ್ವೆಂಟಿನಲ್ಲಿ ಅರೆ-ಕೇಜಿ (ಕ್ರೇಜಿ?), ಕೇಜಿ ಮತ್ತು ಕೇಜ್ಯೋತ್ತರ ಅನಿವಾರ್ಯವಾಗಿ ಇಂಗ್ಲಿಶ್ ಮಾಧ್ಯಮದಲ್ಲೇ ನಡೆಯಿತು. ಪ್ರಾಥಮಿಕ ಶಾಲೆಗಾಗುವಾಗ ನಮಗೆ ಆಯ್ಕೆಯ ಅವಕಾಶ ಒದಗಿದ್ದರಿಂದ ಕನ್ನಡ ಮಾಧ್ಯಮಕ್ಕೆ ಸೇರಿಸಿದೆವು. ಅದರಲ್ಲೇ ಪ್ರೌಢ ಶಾಲೆ, ಅನಂತರ ಅನಿವಾರ್ಯತೆಯಲ್ಲಿ ಇಂಗ್ಲಿಶ್ ಮಾಧ್ಯಮದ ಸ್ನಾತಕ ಪದವಿ, ಕೊನೆಯಲ್ಲಿ ಅವನದೇ ಆಯ್ಕೆಯಲ್ಲಿ ಫಿಲ್ಮ್ ಇನ್ಸ್‌ಟಿಟ್ಯೂಟ್. ಅವನಿಗೆ ದಿಕ್ಕೇ ತಿಳಿಯದ ಹಂತದಲ್ಲಿ ಹಳಿ ಹತ್ತಿಸುವಲ್ಲಿ ನಾವು ಹಿರಿಯರು. ಬೆಳವಣಿಗೆಯ ಹಂತದಲ್ಲಿ ಆವಶ್ಯಕ ಆರ್ಥಿಕ ಹಾಗೂ ಮಾನಸಿಕ ಬಲ ಕೊಡುವುದಕ್ಕಷ್ಟೇ ನಾವು ಸೀಮಿತರು.

ಅಭಯ ಸ್ನಾತಕ ಪದವಿ ಪಡೆಯುವವರೆಗೂ ನಮ್ಮೊಡನೆಯೇ ಇದ್ದವ ಮತ್ತು ಸ್ವತಂತ್ರವಾಗಿ ಒಬ್ಬನೇ ಹೊರಗಿದ್ದದ್ದು ಓಡಾಡಿದ್ದೂ ಇಲ್ಲ. ಆದರೆ ಪುಣೆಗೆ ಪ್ರವೇಶ ಪರೀಕ್ಷೆ ಬರೆಯುವ ಕಾಲಕ್ಕೆ ಅನಿವಾರ್ಯವಾಗಿ ಒಬ್ಬನೇ ಹೋದ, ಆಯ್ಕೆಯೂ ಆದ ಮತ್ತು ಅಷ್ಟೇ ಸ್ವತಂತ್ರವಾಗಿ ಅಲ್ಲಿಗೆ ಹೊಂದಿಕೊಂಡ. ಮುಂದೆ ಆತ ವೃತ್ತಿಪರವಾಗಿ ಬೆಂಗಳೂರಿನಲ್ಲಿ ನೆಲೆಸಿದಾಗ, ಮನೆ ಬಾಡಿಗೆ ಹಿಡಿದಾಗ ಮತ್ತು ಆತನ ಚಟುವಟಿಕೆಯ ವಿವಿಧ ಘಟ್ಟಗಳಲ್ಲೂ ನಮ್ಮ ಪೂರ್ಣ ಮಾನಸಿಕ ಅನುಸಂಧಾನ ಅವನೊಡನಿದ್ದರೂ ದೈಹಿಕ ಪಾಲುದಾರಿಕೆ ಸೊನ್ನೆ.

ಅಭಯನಿಗೆ ಮದುವೆ ಮಾಡಿಸುವ ಜವಾಬ್ದಾರಿ ನಮಗೆ ಬಂತು. ಇಲ್ಲಿ ಹುಡುಗ ಹುಡುಗಿಯ ಪರಸ್ಪರ ಒಪ್ಪಿಗೆಯೊಂದೇ ಮಾನಕ. ಮುಂದಿನ ವಿಧಿವಿಧಾನಗಳಲ್ಲಿ ಹುಡುಗಿಯ ಕಡೆಯವರ ಪರಂಪರೆಗೆ ನೋವಾಗದಂತೆ ನಾವು ಪ್ರೀತಿಪೂರ್ವಕವಾಗಿಯೇ ಸಹಕರಿಸಿದ್ದೇವೆ. (ಪೂರ್ತಿ ನಮಗೇ ಬಿಟ್ಟಿದ್ದರೆ ಕೂಡಲೇ ನೋಂದಣಿ ಕಛೇರಿಯಲ್ಲಷ್ಟೇ ವಿಧಿ ಪೂರೈಸಿ, ಇಷ್ಟರೊಡನೆ ಸಂತೋಷ ಕೂಟ ನಡೆಸುವುದಷ್ಟೇ ನಮ್ಮ ಪಟ್ಟಿಯಲ್ಲಿತ್ತು!) ಮುಂದವರು ಜೋಡಿಯಾಗಿ ಬೆಂಗಳೂರಿಗೆ ಮೊದಲು ಪಯಣಿಸಿದಾಗ, ಮನೆಯನ್ನು ಸಜ್ಜುಗೊಳಿಸುತ್ತಿದ್ದಾಗ ನಮ್ಮ ಸಹಕಾರವೇನಿದ್ದರೂ ಕೇಳಿದ್ದಕ್ಕೆ ದೂರವಾಣಿಯಲ್ಲಿ ಉಚಿತ ಸಲಹೆ ಮಾತ್ರ. ಈವರೆಗೆ ಅಭಯ ಕಾರಣಾಂತರಗಳಿಂದ ಮೂರು ಮನೆ ಬದಲಿಸಿದ್ದಾನೆ. ಅದರಲ್ಲಿ ನಾನು ಮೊದಲನೆಯದಕ್ಕೆ ಎರಡು ಬಾರಿ, ಎರಡನೇದಕ್ಕೆ ಒಂದೇ ಬಾರಿ, ಅದೂ ಒಂದೊಂದೇ ರಾತ್ರಿಯ ವಾಸಕ್ಕೆ ಭೇಟಿ ಕೊಟ್ಟಿದ್ದೇನೆ. ಅವರು ಮೂರನೆಯದಕ್ಕೆ ಸೇರಿ ಈಗ ತಿಂಗಳು ಆರಾದರೂ ನಮಗೆ ಒಮ್ಮೆ ಹೋಗಲೂ ‘ಮುಹೂರ್ತ’ ಒದಗಿ ಬಂದಿಲ್ಲ! ಮತ್ತವನ ವೃತ್ತಿ ಉತ್ಕರ್ಷಗಳು ಅಸಾಮಾನ್ಯವಾಗಿದ್ದಾಗಲೂ (ಜರ್ಮನಿ, ನ್ಯೂಯಾರ್ಕ್ ಪ್ರವಾಸ, ಪ್ರಥಮ ಚಿತ್ರದ ಬಿಡುಗಡೆ, ಪ್ರಥಮ ಚಿತ್ರಕ್ಕೇ ರಾಷ್ಟ್ರ ಪ್ರಶಸ್ತಿ, ರೋಟರಿ ಪ್ರವಾಸದಲ್ಲಿ ಅಮೆರಿಕಾ ಪ್ರವಾಸ ಇತ್ಯಾದಿ) ನಾವು ಅವನಿಗೆ ಜೊತೆ ಕೊಟ್ಟದ್ದಿಲ್ಲ. ಔಪಚಾರಿಕ ಜಗತ್ತಿನಲ್ಲಿ ಭಾರಿ ಕೊರತೆಗಳೇ ಎನ್ನಿಸಬಹುದಾದ ಈ ಎಲ್ಲ ವಿವರಗಳು ನಮ್ಮೊಳಗೆ ಯಾವುದೇ ಮನಃಕಷಾಯವನ್ನು ತಂದಿಲ್ಲ ಎನ್ನುವುದು ಅವಶ್ಯ ಗಮನಿಸಬೇಕಾದ ಅಂಶ.

ಸಾಂಪ್ರದಾಯಿಕ ವೃತ್ತಿ ಮತ್ತು ನೆಲೆಗಳಿಂದ ಹೊರಗೆ ಹರಡಿಕೊಂಡ ನಮಗಿಂದು ಆಯಾ ಕಾರ್ಯರಂಗದಲ್ಲಿ ಒದಗಿ, ಭಾವಕೋಶಕ್ಕೂ ವ್ಯಾಪಿಸಿದ ವ್ಯಕ್ತಿ ಅಥವಾ ಕುಟುಂಬಗಳೂ ಅಷ್ಟೇ ‘ಸಂಬಂಧಿಕರು.’ ಮಾನವೀಯ ನೆಲೆಯಲ್ಲಿ ಇಂಥವರ ನೋವು ನಲಿವಿಗೆ ಸ್ಪಂದಿಸುವುದು ನನಗೆ ಸಾಂಪ್ರದಾಯಿಕ ಆಚರಣೆಗಳಿಗಿಂತ ಮುಖ್ಯವಾಗುತ್ತದೆ. ಇತಿಹಾಸದ ಮತ್ತು ಹುಟ್ಟಿನ ಆಕಸ್ಮಿಕಗಳಿಗೇ ಮಹತ್ವ ಕೊಟ್ಟು, ನೇರಾನೇರ ವರ್ತಮಾನವನ್ನು ತಿದ್ದಲು ಹೆಣಗುವುದು ನನಗೆ ಒಪ್ಪಿಗೆಯಿಲ್ಲ. ಮಂಗಳೂರಿನಲ್ಲಿ ತಂದೆಗೆ ಕೇವಲ ವೃತ್ತಿಯ ಸಾಹಚರ್ಯದಿಂದ ತೊಡಗಿ, ಆರ್ಥಿಕ ಅನುಕೂಲಕ್ಕೆ ಬಾಡಿಗೆ ಮನೆಯನ್ನು ಹಂಚಿಕೊಂಡು ಬೆಳೆದ ಬಿ.ವಿ ಕೆದಿಲಾಯರ ಮನೆಯವರು ನನ್ನ ಲೆಕ್ಕಕ್ಕೆ ನಮ್ಮ ಕುಟುಂಬವೇ. ಮೈಸೂರಿನಲ್ಲಿ ತಂದೆಗೆ ಕೊನೆಗಾಲದಲ್ಲಿ ಸಾಹಿತ್ಯ, ಸಂಗೀತಾದಿ ಒಲವು ಓಡಾಟಗಳಿಗೆ ಕೇವಲ ಪ್ರೀತಿಯಿಂದ ಒದಗಿದ ರಾಘವೇಂದ್ರ ಭಟ್ಟರು, ಹಾಗೇ ತಾಯಿಗೆ ಈಚೆಗೆ ಊರುಗೋಲಿನಂತೇ ಒದಗುವ ಆದರೆ ಯಾವತ್ತೂ ತನ್ನನ್ನು ಹೇರಿಕೊಳ್ಳದ ಭಟ್ಟರ ಪತ್ನಿ – ಕಮಲಾಕ್ಷಿಯರನ್ನು ನಾನಂತೂ ಕುಟುಂಬದ ಪರಿಧಿಯಿಂದ ಹೊರಗೆ ಕಲ್ಪಿಸಿಕೊಳ್ಳಲಾರೆ. ಪುಸ್ತಕೋದ್ಯಮದ ಮಾತು ಬಂದಲ್ಲೆಲ್ಲಾ ನಾನು ನಿರ್ವಿವಾದವಾಗಿ ನನ್ನ ‘ಗಾಡ್ ಫಾದರ್’ ಎಂದೇ ಹೆಸರಿಸುವ ಡಿವಿಕೆ ಮೂರ್ತಿ ನನಗೆ ಸಾರ್ವಕಾಲಿಕ ಸಂಬಂಧಿ; ವೃತ್ತಿ ಸಂಬಂಧದ ಆರ್ಥಿಕ ವಹಿವಾಟು ಮೀರಿದ ಭಾವಬಂಧಿ.

ಕುಶಿ ಹರಿದಾಸ ಭಟ್ಟರು ನಾನು ಅಂಗಡಿ ತೆರೆದ ಹೊಸತರಲ್ಲಿ ಅವರ ವಿಶಾಲ ನಗುವಿನೊಡನೆ, ಲಘುವಾಗಿ ಹೇಳಿದ ಮಾತು ನನಗೆ ಸದಾ ನೆನಪಾಗುತ್ತಿರುತ್ತದೆ. “ನೀನೊಂದು ದೊಡ್ಡ ಖಾಲೀ ಹಾಳೆ ತೆರೆದಿಟ್ಟು ಕೇಂದ್ರದಲ್ಲಿ ‘ನಾನು’ ಎಂದು ಬರೆದಿಡು. ಮತ್ತೆ ಇಲ್ಲಿ ಬರುವ ಹವ್ಯಕರು ಸಹಜವಾಗಿ ಹೇಳುವ ತಮ್ಮ ನಂಟಿನ ರೇಖೆಗಳನ್ನು ಎಳೆಯುತ್ತ ಹೋದರೆ ಒಂದೇ ವರ್ಷದಲ್ಲಿ ನಿನಗೆ ವಿಶ್ವ ಬಾಂಧವ್ಯದ ನಕ್ಷೆ ಸಿಗುತ್ತದೆ.” ಆದರೆ ನನ್ನ ವೃತ್ತಿ ಮತ್ತು ಹವ್ಯಾಸದಲ್ಲಿ ನಾನಿಟ್ಟ ಮುಕ್ತ ಮನಕ್ಕೆ ಇಂದು ಹುಟ್ಟಿನ ಆಕಸ್ಮಿಕದ ಹವ್ಯಕತನ ಮಾತ್ರವಲ್ಲ, ಅದನ್ನು ಮೀರಿದ ನಿಜದ ವಿಶ್ವ ಬಾಂಧವ್ಯವೇ ಪ್ರಾಪ್ತಿಸಿದೆ ಎಂದರೆ ಅತಿಶಯೋಕ್ತಿಯಾಗದು. (ಇಲ್ಲೆಲ್ಲಾ ಸಹಜತೆಗೆ ಎರವಾಗಿ ಹೇರಿಕೊಂಡವನ್ನು ಸಮಷ್ಟಿಗಾಗಿ ನಾನು ಸಹಿಸಿಕೊಂಡದ್ದಿರಬಹುದು.) ಅವುಗಳ ಸಹಜಾನಂದದ ಎಡೆಯಲ್ಲಿ ಆಗೊಮ್ಮೆ ಈಗೊಮ್ಮೆ ಒದಗುವ ಕೌಟುಂಬಿಕ ಸಂಬಂಧಗಳ ಒಡನಾಟವನ್ನು ನಾನು ಸವಿ ಖಾದ್ಯಕ್ಕೆ ಹೆಚ್ಚಿನ ಪರಿಮಳ ಬಂದಂತೆ ಸಂತೋಷಿಸಿದ್ದೇನೆ, ಆನಂದಿಸುತ್ತಲೂ ಇರುತ್ತೇನೆ.