ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ
ಅಧ್ಯಾಯ ಹತ್ತೊಂಬತ್ತು

ಸೇಕ್ರೆಡ್ ಹಾರ್ಟ್ಸ್ ಶಾಲೆಯಲ್ಲಿ ಪ್ರತೀ ವರ್ಷ ಮೊದಲ ಪರೀಕ್ಷೆ ಆದ ಕೂಡಲೇ ಎಲ್ಲಾ ಮಕ್ಕಳ ಹೆತ್ತವರನ್ನು ಶಾಲೆಗೆ ಕಡ್ಡಾಯವಾಗಿ ಕರೆಸಿ ಅವರೊಂದಿಗೆ ಮಕ್ಕಳ ಪ್ರಗತಿಯ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುವ ಕ್ರಮವಿತ್ತು. ಆಗ ಹೆಚ್ಚಾಗಿ ಬರುವವರು ಮಕ್ಕಳ ತಾಯಂದಿರೇ ಹೊರತು ತಂದೆಯಂದಿರು ಬರುವುದು ವಿರಳ. ಹಾಗೆ ಅಪರೂಪಕ್ಕೆ ಬಂದ ತಂದೆಯೋರ್ವ ನಮ್ಮನ್ನೇ ದಬಾಯಿಸಿದ್ದು ನೆನಪಿದೆ. “ನಾವು ಮನೆಯಲ್ಲಿ ಮಕ್ಕಳಿಗೆ ಕಲಿಸಬೇಕು ಎಂದಾದರೆ ನೀವು ಶಾಲೆಯಲ್ಲಿ ಕಲಿಸುವುದು ಏನನ್ನು? ನೀವು ಸಂಬಳ ತಿನ್ನುವುದಿಲ್ಲವೇ?” ಎಂದಾಗ ತಕ್ಷಣಕ್ಕೆ ಗಲಿಬಿಲಿಗೊಂಡ ನಾನು “ಹೌದು, ಸಂಬಳ ತಿನ್ನುವುದರಿಂದಲೇ ಹೇಳುತ್ತಿದ್ದೇನೆ. ನಾನೂ, ನೀವೂ ಇಬ್ಬರೂ ಅವಳ ಕಲಿಕೆಗೆ ಉತ್ತೇಜನ ಕೊಟ್ಟರೆ, ನಿಮ್ಮ ಮಗಳು ಇನ್ನಷ್ಟು ಜಾಣೆಯಾಗಬಹುದೆಂಬ ಆಶೆಯಿಂದ ಹೇಳುತ್ತಿದ್ದೇನೆ” ಎಂದಾಗ “ಅವಳು ಜಾಣೆಯಾಗಿ ಏನೂ ಆಗಬೇಕಿಲ್ಲ” ಕಡ್ಡಿ ಮುರಿದಂತೆ ಹೇಳಿಬಿಟ್ಟ. ಪ್ರಗತಿ ಪತ್ರಕ್ಕೆ ಸಹಿ ಹಾಕಿ ನಡೆದೇ ಬಿಟ್ಟ. ಆರನೇ ತರಗತಿಯಲ್ಲಿದ್ದ ಅವನ ಮಗಳು ಭಯದಿಂದ ಮುದುರಿ ಹೋಗಿದ್ದಳು. ನಮ್ಮ ಮುಂದೆಯೇ ಹೀಗೆ `ಕೆಂಗುಡ’ನಂತಿದ್ದ ಆ ಅಪ್ಪ ಮನೆಯಲ್ಲಿ ಮಡದಿ ಮಗಳೊಂದಿಗೆ ಹೇಗಿರಬಹುದು? ಎಂದು ಊಹಿಸುವುದು ಕಷ್ಟವಲ್ಲ. ಅವನಿಗೆ ವಿವಾಹಬಾಹಿರ ಸಂಬಂಧಗಳಿದ್ದುವೆಂದು ತಾಯಿಯಿಂದ ತಿಳಿಯಿತು.

ಇಂತಹುದೇ ವಿಚಾರ ವಿನಿಮಯಕ್ಕಾಗಿ ಹೆತ್ತವರ ಭೇಟಿಗಾಗಿ ನಾನು ಕಾಯುತ್ತಿದ್ದ ಒಂದು ದಿನ ಕೋಣೆಯೊಳಗೆ ಕಾಲಿಟ್ಟ ತಂದೆಯೋರ್ವ ಸರಕ್ಕನೇ ಹಿಂದೆ ಸರಿದ. ಆರನೇ ತರಗತಿಯಲ್ಲಿದ್ದ ಮಗಳು ಬಾಗಿಲಲ್ಲಿ ನಿಂತು ಅಪ್ಪನನ್ನು ಒಳಗೆ ಬರಲು ಕೈಹಿಡಿದು ಎಳೆಯುತ್ತಿದ್ದಳು. ಕೊನೆಗೂ ಕೋಣೆಯೊಳಗೆ ಬಂದ ಆ ತಂದೆಯನ್ನು ನೋಡಿ ನನಗೆ ಧಸಕ್ಕೆಂದಿತು. “ನಿಮ್ಮ ಮಗಳಾ?” ಎಂದೆ. “ಹೌದು” ಎಂದು ಗಂಟಲೊಳಗಿಂದಲೇ ಹೇಳಿ ತಲೆ ಅಲ್ಲಾಡಿಸಿದ. “ಅವಳ ಪರೀಕ್ಷಾ ಫಲಿತಾಂಶ ನೋಡಿ” ಎಂದು ಪ್ರಗತಿಪತ್ರ ಕೈಗಿತ್ತೆ. ಕೂಡಲೇ ದಸ್ಕತ್ತು ಹಾಕಿದ. ಕೈ ನಡುಗುತ್ತಿತ್ತು. ಯಾವಾಗ ಇಲ್ಲಿಂದ ಒಮ್ಮೆ ಹೊರಗೆ ಹೋಗಲಿಲ್ಲವೆಂದು ಚಡಪಡಿಸುತ್ತಿದ್ದ. “ನೀವು ಸಂಜೆ ಬೇಗ ಮನೆಗೆ ಬಂದು ಮಗಳು ಓದುತ್ತಾಳೆಯೇ ಎಂದು ನೋಡಿದರೆ ಸಾಕು. ನಿಮ್ಮ ಮಗಳು ಜಾಣೆಯಾಗುತ್ತಾಳೆ”. ಅಷ್ಟು ಮಾತು ನಾನು ಹೇಳಬೇಕಾದರೆ ಆ ತಂದೆ ನನ್ನ ಮುಖವನ್ನೂ ನೋಡದೆ ಸರಕ್ಕನೆ ತಿರುಗಿ ಕೋಣೆಯಿಂದ ಹೊರಗೆ ಹೋಗಿಬಿಟ್ಟರು. ಯಾಕೆ ಈ ಪಲಾಯನ ಗೊತ್ತೇ? ಈ ಗಂಡಸು ಪ್ರತಿದಿನ ಸಂಜೆ ಜ್ಯೋತಿ ಟಾಕೀಸಿನ ಹತ್ತಿರದ ಬಸ್‌ಸ್ಟ್ಯಾಂಡಿನಲ್ಲಿ ಬಸ್ಸು ಕಾಯಲು ನಿಂತ ಹೆಣ್ಣುಮಕ್ಕಳಿಗೆ ಕಣ್ಣು ಹೊಡೆಯುತ್ತಾ ನಿಲ್ಲುತ್ತಿದ್ದ. ಯಾರನ್ನಾದರೂ ಕಾಯುತ್ತಾ ಹೆಣ್ಣುಮಕ್ಕಳು ಒಂದು ಹತ್ತು ನಿಮಿಷ ಬಸ್‌ಸ್ಟ್ಯಾಂಡಿನಲ್ಲಿ ನಿಂತರೆಂದರೆ ಹತ್ತಿರ ಬಂದು ಕೈಸನ್ನೆ ಮಾಡುತ್ತಾ ಹಿಂದೆ ಮುಂದೆ ಠಳಾಯಿಸುತ್ತಿದ್ದ. ತಲೆಹಿಡುಕನಾಗಿ ಕೆಲಸ ಮಾಡುತ್ತಿರಬಹುದು ಎಂಬ ಗುಮಾನಿಯಿತ್ತು ನನಗೆ. ಬಸ್‌ಸ್ಟ್ಯಾಂಡಿನಲ್ಲಿ ಯಾರಾದರೂ ಹೆಣ್ಣುಮಕ್ಕಳು ನಿಂತಿದ್ದರೆ ಅವರನ್ನು ಮಾತಾಡಿಸಿ ಪುಸಲಾಯಿಸಿ ದಂಧೆಗೆ ಕಳುಹಿಸುತ್ತಿದ್ದವರು ಇದ್ದರು. ತಂದೆಗೆ ಗೂಡಂಗಡಿ ಉಂಟು ಎಂದು ಮಗಳು ನನ್ನಲ್ಲಿ ಹೇಳಿದ್ದಳು. ಆದರೆ ಈ ಗಂಡಸು ಗೂಡಂಗಡಿಯನ್ನು ಬಿಟ್ಟು ಮಾಂಸ ವ್ಯಾಪಾರಕ್ಕೆ ಇಳಿದಿರಬಹುದೇ? ನನಗೆ ಸಂದೇಹ. ಮೊಬೈಲ್‌ಗಳಿಲ್ಲದ ಆ ಕಾಲದಲ್ಲಿ ತಲೆಹಿಡುಕರು ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ತಮ್ಮ ವ್ಯಾಪಾರ ಕುದುರಿಸುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯ.

ಬೀದಿ ಕಾಮಣ್ಣರು ಏನಾದರೂ ಅಶ್ಲೀಲ ಮಾತುಗಳನ್ನು ಬೀಸಿ ಒಗೆದು ತಮ್ಮ ನಾಲಗೆಯ ತೀಟೆ ತೀರಿಸಿಕೊಳ್ಳುತ್ತಿದ್ದರು. ಆದರೆ ಇಂತಹ ಕೈಸನ್ನೆಯ ಮೂಕರದ್ದು ಬಹಳ ಅಪಾಯಕಾರಿಯಾದ ವರ್ತನೆ. ವರ್ಷಗಳ ನಂತರ ಅದೇ ಬಸ್‌ಸ್ಟ್ಯಾಂಡಿನಲ್ಲಿ ಇನ್ನೊಬ್ಬ ತರುಣ ಹೀಗೆಯೇ ಹಿಂದೆ ಮುಂದೆ ಸುತ್ತುತ್ತಾ ಕೆಲವು ಹೆಣ್ಣುಮಕ್ಕಳ ಭಯಗ್ರಸ್ತ ದೃಷ್ಟಿಗೂ, ಕೆಲವು ಹೆಣ್ಣುಮಕ್ಕಳ ಕ್ರೂರ ದೃಷ್ಟಿಗೂ ತುತ್ತಾಗುತ್ತಿದ್ದ. ಕಾರ್ನಾಡು ಸದಾಶಿವ ರಾವ್ ಲೈಬ್ರೆರಿಗೆ ಹೋಗಿ ಹಿಂದೆ ಬರುವಾಗ ಹಲವು ಬಾರಿ ನನ್ನನ್ನು ಹಿಂಬಾಲಿಸಿ ಈ ಬಸ್‌ಸ್ಟ್ಯಾಂಡಿನಲ್ಲಿ ಅವನು ಪ್ರತಿಷ್ಠಾಪನೆಗೊಳ್ಳುತ್ತಿದ್ದ. ತಿಂಗಳುಗಳ ಬಳಿಕ ನಾನೊಮ್ಮೆ ಜಿಲ್ಲಾಧಿಕಾರಿಗಳ ಆಫೀಸಿಗೆ ಹೋದಾಗ ಅಲ್ಲಿ ಈ ಆಸಾಮಿ ನೌಕರನಾಗಿರುವುದನ್ನು ಕಂಡು ದಂಗಾದೆ. ಇವನೂ ತಲೆಹಿಡುಕನಾಗಿರಬಹುದೇ? ಗೊತ್ತಿಲ್ಲ. ಇನ್ನು ಪ್ಯಾಂಟಿನ ಜಿಪ್ಪನ್ನು ಮೇಲೆ ಕೆಳಗೆ ಜಾರಿಸಿ, ಕೈಸನ್ನೆ ಮಾಡುವ ವಿಕಲಚೇತನರು ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದವರಂತೆ ಕಾಣುತ್ತಿದ್ದರು. ತೊಡೆಸಂಧಿಯಲ್ಲೇ ಸ್ವರ್ಗವಿದೆ ಎಂದು ನಂಬಿದ ಇಂತಹವರು ತಾವು ಬತ್ತಲೆಯಾಗಿ ಇತರರನ್ನು ಬತ್ತಲೆಗೊಳಿಸಿ ಮುಜುಗರಕ್ಕೊಳಪಡಿಸುತ್ತಾರೆ. ವಿಚಿತ್ರವೆಂದರೆ ಇವರು ಸಮಾಜದಲ್ಲಿ ಸಭ್ಯರೆಂಬ ಮುಖವಾಡವುಳ್ಳವರು.

ಒಂದು ದಿನ ನಾನು, ಕೆ. ಲೀಲಾವತಿ ಮತ್ತು ಲೀಜಿ ಟೀಚರು ಮೂವರೂ ಮಂಗಳೂರಿನ ಸರಕಾರಿ ಬಿ.ಎಡ್. ಕಾಲೇಜಿನಲ್ಲಿ ಒಂದು ಮೀಟಿಂಗ್ ಮುಗಿಸಿ ಆರ್.ಟಿ.ಓ. ಆಫೀಸಿನ ಬಳಿ ಬಸ್ಸು ಕಾಯುತ್ತಿದ್ದೆವು. ಮಧ್ಯಾಹ್ನ ಸುಮಾರು ಒಂದೂವರೆ ಗಂಟೆಯಾಗಿರಬಹುದು. ನಮಗೆ ಮಧ್ಯಾಹ್ನದ ನಂತರದ ಪಾಠಗಳಿಗೆ ತರಗತಿಯಲ್ಲಿ ಹಾಜರಾಗಬೇಕಾದ ಕರ್ತವ್ಯವಿದ್ದುದರಿಂದ ಕುಲಶೇಖರದ ಆಚೆ ಹೋಗುವ ಬಸ್ಸುಗಳೇ ಬಾರದ ಕಾರಣ ನಿಂತಲ್ಲೇ ಚಡಪಡಿಸುತ್ತಿದ್ದೆವು. ೪೦ ವರ್ಷಗಳ ಹಿಂದೆ ಈಗಿನಂತೆ ಕ್ಷಣಕ್ಕೊಂದು ರಿಕ್ಷಾಗಳು ಓಡಾಡುತ್ತಿರಲಿಲ್ಲ. ನಮ್ಮ ಚಡಪಡಿಕೆಯನ್ನು ದೂರದಿಂದಲೇ ಗಮನಿಸಿದ ಗಂಡಸೊಬ್ಬ ನಮ್ಮ ಬಳಿ ಬಂದು ಕಾರು ನಿಲ್ಲಿಸಿ ನಿಮಗೆ ಎಲ್ಲಿಗೆ ಹೋಗಬೇಕು? ಎಂದು ಕೇಳಿದ. ನಾವು ಉತ್ತರಿಸಿದ ತಕ್ಷಣ ಬನ್ನಿ ನಾನು ಆ ದಾರಿಯಲ್ಲೇ ಹೋಗುವವನು ಎಂದು ಕರೆದ. ಅವನು ಯಾರು ಎತ್ತ ಎಂಬ ಯೋಚನೆಯನ್ನು ಮಾಡದೆ ನಾವು ಮೂವರು ಕಾರು ಹತ್ತಿದೆವು. ನಮಗೆ ಎರಡು ಗಂಟೆಗೆ ಮೊದಲು ಶಾಲೆಗೆ ತಲುಪಿದರೆ ಸಾಕು ಎಂಬ ಅವಸರವಿತ್ತು. ಆದುದರಿಂದ ನಿಶ್ಚಿಂತೆಯಿಂದ ಕೂತು ನಿಟ್ಟುಸಿರುಬಿಟ್ಟೆವು. ಕಾರು ಟರ್ನ್ ಆಗಿ ಕ್ಲಾಕ್ ಟವರ್ ಬಳಿ ಬರುವಾಗಲೇ ಕಾರಿನ ಕನ್ನಡಿಯನ್ನು ನಾವು ಸರಿಯಾಗಿ ಕಾಣುವಂತೆ ತಿರುಗಿಸಿಬಿಟ್ಟ. ಸ್ಟೇರಿಂಗ್ ಕೈಯಲ್ಲಿ ಕಣ್ಣು ಕನ್ನಡಿಯಲ್ಲಿ. ಗವರ್ನ್‌ಮೆಂಟ್ ಕಾಲೇಜಿನ ಬಳಿ ಬರುವಷ್ಟರಲ್ಲಿ ಅವನ ಕಣ್ಣಿನ ದಾಹ ನಮಗೆ ಅರ್ಥವಾಯಿತು. “ನಿಮ್ಮಲ್ಲಿ ಯಾರಿಗೆ ಮದುವೆಯಾಗಿದೆ?” ಎಂದು ಕೇಳಿದ. “ಯಾಕೆ ಆಗ್ತೀಯಾ?” ಎಂದು ಕೇಳಿದರೆ ನಮ್ಮ ಉದ್ಧಟತನಕ್ಕೆ ನಾವೇ ಶಿಕ್ಷೆಗೊಳಗಾಗುವುದು ಗ್ಯಾರಂಟಿ ಎಂದು ನಾನು ಭಾವಿಸಿದೆ. ಅಷ್ಟರಲ್ಲಿ ಲೀಜಿ ಟೀಚರು “ಎಲ್ಲರಿಗೂ ಆಗಿದೆ” ಎಂದುಬಿಟ್ಟರು. ತಕ್ಷಣ ಅವನು “ಅದು ಸುಳ್ಳು ಎಂದು ನನಗೂ ಗೊತ್ತು” ಅಂದುಬಿಟ್ಟ. “ಹಾಗಾದರೆ ಕೇಳಿದ್ಯಾಕೆ?” ಎಂದು ಲೀಲಾವತಿ ಟೀಚರು ಕೇಳಿದರು. “ನಿಮಗೆ ಮದುವೆಯ ಸುಖ ಎಂದರೇನೆಂದು ತಿಳಿಸಲು ಕೇಳಿದೆ” ಎಂದಾಗ ಲೀಜಿ ಟೀಚರು ಲೀಲಾವತಿಯ ಕೈಯನ್ನು ಗಟ್ಟಿಯಾಗಿ ಹಿಡಿದು ಕೂತಲ್ಲೇ ನಡುಗತೊಡಗಿದರು. ಹುಲಿಯ ಪಂಜರದೊಳಗೇ ನುಗ್ಗಿಬಿಟ್ಟೆವೇನೋ ಎಂದು ಕಂಗಾಲಾದೆವು. ಅಷ್ಟರಲ್ಲಿ ಆಗಲೇ ನಾವು ನಂತೂರು ದಾಟಿದ್ದೆವು.

“ಏಯ್ ಮಿಸ್ಟರ್, ನೀವು ನಮ್ಮನ್ನು ಜಯಶ್ರೀ ಗೇಟ್ ಬಳಿ ಇಳಿಸಿಬಿಡಿ. ಅಲ್ಲೇ ಪೊಲೀಸ್ ಸ್ಟೇಶನ್ ಇದೆ. ಸುಖದ ಬಗ್ಗೆ ಅಲ್ಲಿ ಮಾತಾಡೋಣ” ಎಂದರು ಲೀಲಾವತಿ. ತಕ್ಷಣ ಅವನು “ಪೊಲೀಸ್ ಸ್ಟೇಶನ್ ಅಲ್ಲಿದೆ ಎಂಬುದು ನಿಮಗೆ ಮಾತ್ರ ಗೊತ್ತಿದೆ ಎಂದು ಭಾವಿಸಬೇಡಿ. ನನಗೂ ಗೊತ್ತಿದೆ. ಸುಮ್ಮನೆ ಬಾಯಿ ಮುಚ್ಚಿ ಕೂತುಕೊಳ್ಳಿರಿ. ನಿಮ್ಮನ್ನು ಶಾಲೆಯ ಬಳಿ ಇಳಿಸಿದರೆ ಸಾಕಲ್ಲಾ” ಎಂದು ದಬಾಯಿಸುವ ಧ್ವನಿಯಲ್ಲೇ ಅವನು ಹೇಳಿದಾಗ ಇವನು ನಮಗೆ ರೋಪು ಹಾಕುತ್ತಾನೋ ಸಾಂತ್ವನದ ಮಾತಾಡುತ್ತಾನೋ ಎಂದು ತಿಳಿಯದೆ ಗೊಂದಲಕ್ಕೊಳಗಾಗಿ ಜೀವ ಕೈಯಲ್ಲಿ ಹಿಡಿದು ಕೂತಿದ್ದೆವು. ನಮ್ಮ ಎದೆಬಡಿತ ನಮಗೇ ಕೇಳುತ್ತಿತ್ತು. ಜಯಶ್ರೀ ಗೇಟಿನ ಬಳಿಯಿದ್ದ ಪೋಲೀಸ್ ಸ್ಟೇಶನ್ ದಾಟಿತು. ಪೊಲೀಸ್ ಸ್ಟೇಶನ್‌ನಲ್ಲಿ ನಾವು ದೂರು ಕೊಡುವುದಾದರೂ ಹೇಗೆ? ನಾವೇ ಅವನ ಕಾರಿಗೆ ನುಗ್ಗಿದೆವೆಂದು ಅವನು ಹೇಳಿಬಿಟ್ಟರೆ. ಅವನ ಅಶ್ಲೀಲ ನೋಟ ಮತ್ತು ಅಶ್ಲೀಲ ಮಾತುಗಳು ಪೊಲೀಸರಿಗೆ ಸಾಕ್ಷಿಯಾಗಿ ಒದಗಿಸುವುದಾದರೂ ಹೇಗೆ? ಎಂಬ ಪ್ರಶ್ನೆಗಳು ನನ್ನ ತಲೆಯನ್ನು ಕೊರೆಯತೊಡಗಿತು. ಮತ್ತೆ ಎರಡು ನಿಮಿಷದೊಳಗೆ ಶಾಲೆಯ ಗೇಟಿನ ಬಳಿಯಲ್ಲಿ ಕಾರನ್ನು ತಂದು ನಿಲ್ಲಿಸಿದ. ನಾವು ಕಾರಿನಿಂದ ಧುಮುಕಿದ ರೀತಿಯನ್ನು ನೆನೆದರೆ ಈಗಲೂ ನಗು ಬರುತ್ತದೆ. ಬದುಕಿದೆಯಾ ಬಡಜೀವವೇ ಎಂಬಂತೆ ರೊಯ್ಯನೆ ಇಳಿದು ರಪರಪ ಹೆಜ್ಜೆ ಹಾಕಿ ಶಾಲೆಯ ಅಂಗಳಕ್ಕೆ ಕಾಲಿಟ್ಟು ದಿಗ್ವಿಜಯ ಮಾಡಿ ಬಂದಷ್ಟು ಖುಷಿಯಿಂದ ನಿಂತು ಹಿಂದೆ ನೋಡಿದೆವು. ಆ ಕಾರಿನ ನಂಬರನ್ನು ನೋಡುವುದಾಗಲೀ ನಮ್ಮನ್ನು ಕ್ಷೇಮವಾಗಿ ಶಾಲೆಗೆ ತಂದು ಮುಟ್ಟಿಸಿದ ಆ ಮನುಷ್ಯನ ಹೆಸರೇನೆಂದು ಕೇಳುವುದಾಗಲೀ ನಮಗೆ ಮುಖ್ಯವೆನಿಸಲೇ ಇಲ್ಲ. ಅವನ ಕಾರು ಯಾವ ಕಡೆ ಹೋಯಿತು ಎಂಬುದನ್ನೂ ನಾವು ಗಮನಿಸಲಿಲ್ಲ. ನಮಗೆ ವಿಚಿತ್ರ ಅನಿಸಿದ್ದು ಅವನಿಗೆ ನಮ್ಮನ್ನು ಕಾರಿಗೆ ಹತ್ತಿಸಿಕೊಳ್ಳುವ ಉತ್ಸಾಹ ಯಾಕೆ ಮೂಡಿತು? ಲೀಜಿ ಟೀಚರು ಮತ್ತು ನಾನು ನರಪೇತಲರಂತಿದ್ದೆವು. ಗುಂಡು ಗುಂಡಾಗಿ ಆಕರ್ಷಣೀಯವಾಗಿದ್ದ ಲೀಲಾವತಿ ಟೀಚರ ಆಕರ್ಷಣೆಯು ಅವನನ್ನು ಈ ಬಿಟ್ಟಿ ಸೇವೆಗೆ ಪ್ರೇರಣೆ ನೀಡಿತೇ? ನಾವು ಮೂವರಿದ್ದುದರಿಂದ ಬರಿಯ ನೋಟ ಮತ್ತು ಮಾತುಗಳಿಂದ ತೃಪ್ತಿಪಟ್ಟು ನಮ್ಮನ್ನು ಕ್ಷೇಮವಾಗಿ ತಲುಪಿಸಿದನೇ? ಗೊತ್ತಿಲ್ಲ. ಅಂತೂ ಅಂದಿನ ಆ ಸಾಧನೆಯನ್ನು ಹೇಳಲಾರೆ, ಹೇಳದಿರಲಾರೆ ಎಂಬ ಸಂಕಟದಿಂದ ಕುದಿದು ಹೋಗಿದ್ದೆವು. ಅಪರಿಚಿತ ಗಂಡಸೊಬ್ಬ ಕರೆದನೆಂದ ಮಾತ್ರಕ್ಕೆ ವಿವೇಕಹೀನರಾಗಿ ಕಾರನ್ನೇರಿದ ನಮ್ಮ ಮೂರ್ಖತನವನ್ನು ಅಥವಾ ಪೆದ್ದುತನವನ್ನು ತಿದ್ದಿಕೊಳ್ಳದೆ ನಾವು ಪುಕ್ಕಟೆ ಸೇವೆ ನೀಡಿದ ಆ ಮನುಷ್ಯನನ್ನು ನಿಂದಿಸುವುದರಲ್ಲಿ ಅರ್ಥವಿಲ್ಲವೆಂದು ಅನಿಸತೊಡಗಿತು. ಯಾವ ಅಪಾಯಕ್ಕೊಳಗಾಗದೆ ಸೇಫ್ ಆಗಿ ಬಂದು ಮುಟ್ಟಿದೆವಲ್ಲಾ ಎಂಬ ಸಮಾಧಾನದಿಂದ ಅವನಿಗೊಂದು ದೊಡ್ಡ ನಮಸ್ಕಾರ ಹಾಕಿದೆವು.

ಗಂಡು ಹೆಣ್ಣುಗಳ ಹೃದಯದಲ್ಲಿ ಪ್ರಕೃತಿ ಹುದುಗಿಸಿಟ್ಟ ಈ ಕಾಮನೆಗಳು ಕೆಲವೊಮ್ಮೆ ಕೇವಲ ನೋಡುವುದರಿಂದಲೂ ತೃಪ್ತಿಯಾಗುತ್ತದೆ. ಹಿಂದೆ ಸೈಂಟ್ ಆಗ್ನೇಸ್ ಕಾಲೇಜು ಬಿಡುವ ಹೊತ್ತಿನಲ್ಲಿ ಯುವಕರ ಒಂದು ದೊಡ್ಡ ಗುಂಪೇ ಗೇಟಿನ ಬಳಿ ನಿಂತು ಯುವತಿಯನ್ನು ನೋಡುವುದರಲ್ಲೇ ತೃಪ್ತಿ ಪಡೆಯುತ್ತಿತ್ತು. ಯುವಕರಿಗೆ ಆ ನೋಟಗಳ ರವಾನೆಯಲ್ಲಿ ತಮಗೆ ದಕ್ಕಬಹುದಾದವುಗಳು ಯಾವುವು, ದಕ್ಕಲಾರದವುಗಳು ಯಾವುವು ಎಂಬ ಸೂಕ್ಷ್ಮಗಳು ತಿಳಿಯುತ್ತಿದ್ದವು. ಯುವತಿಯರಿಗೂ ತಮಗೆ ಇಷ್ಟವಾದ ನೋಟಗಳಿಗೆ ಹೇಗೆ ಢಿಕ್ಕಿ ಹೊಡೆಯಬೇಕು. ಇಷ್ಟವಾಗದ ನೋಟಗಳನ್ನು ಹೇಗೆ ಕೆಡೆದುರುಳಿಸಬೇಕು ಎಂಬ ಅಂತರ್ದೃಷ್ಟಿ ಇರುತ್ತಿದ್ದುವು. ` ರೂಪ್ ತೇರಾ ಮಸ್ತಾನಾ’ ಎಂದು ಸಿಳ್ಳೆ ಹಾಕಿಯೋ, ಗುನುಗುನಿಸಿಯೋ ಬಲೆಗೆ ಬೀಳಿಸುವ ಎಷ್ಟೇ ತಂತ್ರಗಳನ್ನು ಹೂಡಿದರೂ ಅದಕ್ಕೆ ಸೋಲುವವರು ವಿರಳ. ಬೀದಿ ಕಾಮಣ್ಣರ ಈ ಚೇಷ್ಟೆಗಳಿಗೆಲ್ಲಾ ಕಿವಿ ಕೆಪ್ಪು ಮಾಡಿಕೊಂಡ ಯುವತಿಯರೇ ಹೆಚ್ಚು. ಕೆಲವೊಂದು ಮುಗ್ಧ ಕನ್ಯೆಯರು ಇಂತಹವರ ಬಲೆಗೆ ಬೀಳುತ್ತಿದ್ದ ಅಪರೂಪದ ಘಟನೆಗಳೂ ನಡೆಯುತ್ತಿದ್ದವು.

ಆದರೆ ಬಸ್ಸುಗಳಲ್ಲಿ ಪ್ರಯಾಣ ಮಾಡುವಾಗ ಹೆಣ್ಣುಮಕ್ಕಳು ಅನುಭವಿಸುವ ವಿಕೃತ ಕಾಮದ ಚೇಷ್ಟೆಗಳನ್ನಂತೂ ಸಹಿಸುವುದೇ ಕಡುಕಷ್ಟ. ಕತ್ತಿನಲ್ಲಿ ಕರಿಮಣಿ ಇದ್ದರೆ ಇಂತಹ ಚೇಷ್ಟೆಗಳಿಂದ ವಿನಾಯಿತಿ ಸಿಗುತ್ತದೆಂಬ ಸಾಮಾನ್ಯ ನಂಬಿಕೆಯೂ ಸುಳ್ಳಾದ ಎಷ್ಟೋ ಘಟನೆಗಳನ್ನು ಕಂಡ ಮೇಲೆ ಇದಕ್ಕೊಂದು ಮದ್ದು ಅರೆಯಲೇಬೇಕೆಂಬ ಯೋಚನೆ ನನ್ನಲ್ಲಿ ಮೂಡಿದ್ದುಂಟು. ನಮ್ಮ ಬಳಗದ ಹೆಣ್ಣುಮಕ್ಕಳು, ಪರಿಚಿತರು, ಬಂಧುಗಳು, ಗೆಳತಿಯರು ತಮ್ಮ ಅನುಭವಗಳನ್ನು ಹೇಳಿಕೊಂಡಾಗ ಅವನ ಕೈ ಸೀದು ಹೋಗ ಎಂದು ಶಪಿಸಿ ಸುಮ್ಮನಾಗುವುದರಲ್ಲಿ ಅರ್ಥವಿಲ್ಲ. ನಾವೇ ನಮ್ಮ ರಕ್ಷಣೆ ಮಾಡಬೇಕೆಂದು ನಿರ್ಧರಿಸಿದೆವು. ರಾತ್ರಿ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಹಿಂದಿನಿಂದ ನಿತಂಬಕ್ಕೆ ತುಳಿಯುವ ಕಾಲುಗಳಿಗೆ, ಸೀಟಿನ ಮೇಲಿನಿಂದ ಕುತ್ತಿಗೆಯನ್ನು ಸವರುವ ಕೈಗಳಿಗೆ ಸೇಪ್ಟಿ ಪಿನ್‌ಗಳ ರುಚಿ ತೋರಿಸುವುದು ಅನಿವಾರ್ಯವಾಗುತ್ತಿತ್ತು. ಈ ತಂತ್ರವನ್ನು ಸರಿಯಾಗಿ ಉಪಯೋಗಿಸಿ ಗೆದ್ದ ಅನುಭವಗಳನ್ನು ನಮ್ಮ ಶಾಲೆಯ ಸಿಸ್ಟರುಗಳೂ ಹಂಚಿಕೊಂಡಿದ್ದರು. ಕೆಲವು ಪುರುಷರಿಗೆ ಒಂಟಿ ಹೆಂಗಸರನ್ನು ಕಂಡರೆ ಯಾಕೆ ಇಂತಹ ವಿಕೃತಿ ಮೂಡುತ್ತದೆ? ಸಾರ್ವಜನಿಕವಾಗಿ ತಾನು ಹಾಗೆ ವರ್ತಿಸುತ್ತಿರುವಾಗ ಯಾರಾದರೂ ಕಂಡಾರು ಎಂಬ ಅಪರಾಧೀ ಭಾವವೇ ಮೂಡುತ್ತಿಲ್ಲವಲ್ಲಾ ಯಾಕೆ? ಇವರೆಲ್ಲಾ ಸಮಾಜದಲ್ಲಿ ಸಭ್ಯರು ಎಂಬ ಮುಖವಾಡದಲ್ಲೇ ಬದುಕುತ್ತಾರಲ್ಲಾ. ಹೇಗೆ? ಹೆಣ್ಣು ಪ್ರತಿಭಟಿಸಿದರೆ ಅವಳ ಉಡುಗೆಯೇ ಸರಿಯಿಲ್ಲ. ಅವಳ ವರ್ತನೆಯೇ ಸರಿ ಇಲ್ಲವೆಂದು ಬಾಯಿ ಮುಚ್ಚಿಸುವ ಅಸ್ತ್ರಪ್ರಯೋಗ ಮಾಡುವ ಧೈರ್ಯ ಪುರುಷರಲ್ಲಿದೆಯಲ್ಲಾ. ಅದು ಹೇಗೆ ಸಾಧ್ಯವಾಯಿತು? ನನ್ನ ಗಮನಕ್ಕೆ ಬಂದಂತೆ ಸಾದಾ ಸರಳ ಉಡುಪಿನ ಹುಡುಗಿಯರನ್ನೇ ಈ ಪುರುಷರು ಲೈಂಗಿಕ ಕಿರುಕುಳಕ್ಕೆ ಬಳಸಿಕೊಳ್ಳುತ್ತಾರೆ. ಅತ್ಯಾಧುನಿಕವಾದ ಉಡುಗೆ ಹಾಕಿದವರ ತಂಟೆಗೆ ಹೋಗುವುದು ಕಡಿಮೆ. ಅವರನ್ನು ಅವರದೇ ಅಂತಸ್ತಿನ ಪುರುಷರು ಬಳಸಿಕೊಳ್ಳುತ್ತಾರೆ ಅಷ್ಟೇ. ರೂಪೇನ್ ಬಜಾಜನ್ನು ಗಿಲ್ ಸಾಹೇಬರು ಬಳಸಿಕೊಳ್ಳಲಿಲ್ಲವೇ ಹಾಗೆ. ಸಾಮಾನ್ಯ ವರ್ಗದ ಅಂದರೆ ಮಧ್ಯಮ ಮತ್ತು ಕೆಳ ವರ್ಗದ ಗಂಡುಸರು ಮಾತ್ರ ಈ ರೀತಿಯ ವಿಕೃತ ಕಾಮದ ಚೇಷ್ಟೆಗಳನ್ನು ಮಾಡುತ್ತಾರೆಂದು ನಾನು ಮೊದಲು ಭಾವಿಸಿದ್ದೆ. ಸಮಾಜವನ್ನು ಹೆಚ್ಚು ಸೂಕ್ಷ್ಮ ಮನಸ್ಸಿನಿಂದ ನೋಡತೊಡಗಿದ ಮೇಲೆ ಪುರುಷರ ಈ ಮನೋಭಾವಕ್ಕೆ ವರ್ಣ, ವರ್ಗ, ಜಾತಿ, ಅಂತಸ್ತುಗಳಿಲ್ಲ. ಇನ್ನು ವಿಶೇಷವಾಗಿ ಹೇಳಬೇಕೆಂದರೆ ಆಧ್ಯಾತ್ಮಿಕ ಗುರುಗಳೆಂಬ ವೇಷ ಹಾಕಿದವರು ವರ್ತಿಸಿದ ಕೊಳಕು ಅನುಭವಗಳಾದ ಮೇಲೆ ಬಹುಶಃ ಇದೊಂದು ಮಾನಸಿಕ ರೋಗವಾಗಿರಬಹುದೇ ಎಂಬ ಭಾವನೆ ನನ್ನಲ್ಲಿ ಮೂಡಿತು.

ಬಹುಶಃ ಸೃಷ್ಟಿಯ ಆರಂಭದಿಂದಲೂ ಸ್ತ್ರೀ ಪುರುಷರ ಈ ಆಕರ್ಷಣೆ ಸಹಜವಾಗಿ ಮೂಡಿರಬೇಕು. ಶತಮಾನಗಳುರುಳಿದಂತೆ ನಾಗರಿಕ ಸಮಾಜ ಕೆಲವು ನೀತಿ ನಿಯಮಗಳನ್ನು ರೂಪಿಸಿಕೊಂಡು ತಾನು ಪ್ರಾಣಿಗಳಂತಲ್ಲ, ರಾಕ್ಷಸರಂತಲ್ಲ ಎಂದು ತನ್ನನ್ನು ಮೇಲಕ್ಕೆ ಎತ್ತರಿಸಿಕೊಂಡ ಮೇಲೆಯೇ ಈ ಸಂಕಟಗಳು ಕಾಣಿಸಿಕೊಂಡಿರಬೇಕು. ನಮ್ಮ ಸಂಸ್ಕೃತಿಯ ಒಂದು ತುದಿ ಪಾತಿವೃತ್ಯವಾದರೆ ಇನ್ನೊಂದು ತುದಿ ವೇಶ್ಯಾವಾಟಿಕೆ. ಎರಡಕ್ಕೂ ದಾಳವಾದವಳು ಹೆಣ್ಣು. ಮನುಷ್ಯನ ಮನಸ್ಸನ್ನು ಕಟ್ಟುಪಾಡುಗಳಿಗೆ, ವಿಧಿ ನಿಷೇಧಗಳಿಗೆ ಬಗ್ಗಿಸಿಕೊಳ್ಳುವುದು ಕಷ್ಟವಾದುದರಿಂದಲೇ ಅದನ್ನು ಮುರಿಯುವ ಪ್ರಯತ್ನಗಳೂ ನಡೆದುವು. ಕತೆಗಳು, ಕಾವ್ಯಗಳು, ಪುರಾಣಗಳು, ಶಾಸ್ತ್ರಗಳು ಈ ಮನಸ್ಸುಗಳನ್ನು ಒಂದೇ ಸಂಸ್ಕೃತಿಯ ಎರಕದಲ್ಲಿ ಹೊಯ್ಯಲು ಪ್ರಾರಂಭಿಸಿದುವು. ಭಿನ್ನ ಸಂಸ್ಕೃತಿಯ ಧಾರೆಗಳನ್ನು ಭೂಗತಗೊಳಿಸತೊಡಗಿದವು. ಮಾತೃಪ್ರಧಾನ ವ್ಯವಸ್ಥೆಗಳಿದ್ದ ಸಂಸ್ಕೃತಿಗಳೆಲ್ಲಾ ಮಗ್ಗುಲು ಬದಲಾಯಿಸಿದುವು. ಕೆಲವು ಶಿರ ಬಾಗಿದವು. ಕೆಲವು ಸಾಷ್ಟಾಂಗ ವಂದಿಸಿದವು. ಕೆಲವು ಭಿನ್ನ ಸಂಸ್ಕೃತಿಗಳನ್ನೇ ಆ ಸಂಸ್ಕೃತಿ ಸ್ವಾಹಾ ಮಾಡಿಬಿಟ್ಟಿತು. ಈ ಪ್ರಕ್ರಿಯೆ ನನ್ನ ಮುತ್ತಜ್ಜನ ಅಜ್ಜನ ಕಾಲದಿಂದಲೇ ಪ್ರಾರಂಭಗೊಂಡಿತ್ತು. ಈ ಪಲ್ಲಟ ಕಣ್ಣಿಗೆ ಕಾಣುವಂತಾಗಬೇಕಾದರೆ ಹಲವು ಶತಮಾನಗಳೇ ಬೇಕಾಯಿತು. ಇಂದು ಸಂಸ್ಕೃತಿಯ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳನ್ನು, ಸಂಪ್ರದಾಯಗಳನ್ನು, ನಂಬಿಕೆಗಳನ್ನು ಕಂಡಾಗ ಈ ಪರಿವರ್ತನೆಗಳ ಹಿಂದೆ ಎಷ್ಟೊಂದು ದೀರ್ಘ ಕಾಲದ ಕ್ರಮಿಸುವಿಕೆ ಇತ್ತು ಎಂಬ ಅರಿವಾಗುತ್ತದೆ. ಆ ಹೆಸರಲ್ಲಿ ನಡೆಯುವ ಮೌಲ್ಯಗಳನ್ನು ದೌರ್ಜನ್ಯಗಳನ್ನು ಕಂಡಾಗ ಮನಸ್ಸು ಪ್ರತಿಭಟಿಸುತ್ತದೆ. ಸ್ತ್ರೀಯರ ಪ್ರತಿಭಟನೆಯೇ ಕುಸಂಸ್ಕೃತಿ ಎಂದು ನಂಬಿರುವ ಸಮಾಜದಲ್ಲಿ ಸಂಸ್ಕೃತಿ ಎಂಬ ಹೆಸರೇ ಗೊಂದಲವುಂಟುಮಾಡುತ್ತದೆ. ಭಯ ಹುಟ್ಟಿಸುತ್ತದೆ. ಇದು ಈಗ ನಮ್ಮ ಮುಂದಿರುವ ಸತ್ಯ.

(ಮುಂದುವರಿಯಲಿದೆ)