ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತು

ಮದುವೆಯ ವಯಸ್ಸಿನ ಹುಡುಗ ಹುಡುಗಿಯರನ್ನು ಯಾವಾಗ ಮದುವೆ? ಪಾಯಸದೂಟ ಹಾಕಿಸುವುದಿಲ್ಲವಾ? ಎಷ್ಟು ಸಮಯ ಒಂಟಿಯಾಗಿರುತ್ತೀ? ಹೀಗೆ ತರತರದ ಪ್ರಶ್ನೆ ಕೇಳಿ ಕೆಣಕುವುದು ಸಾಮಾನ್ಯ ಸಂಗತಿ. ಈ ಪ್ರಶ್ನೆಗಳು ಎದುರಾಗುವ ಸಂದರ್ಭಗಳನ್ನು ಸಾಧ್ಯವಾದಷ್ಟು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ. ಆದರೆ ಕಾನ್ವೆಂಟ್ ಶಾಲೆಯ ಸಹೋದ್ಯೋಗಿಗಳಿಂದ ಈ ರೀತಿಯ ಕೆಣಕಾಟದ ಕಾಟ ಇರಲಿಲ್ಲ. ಆದರೆ ಒಂದು ದಿನ ಮುಖ್ಯೋಪಾಧ್ಯಾಯಿನಿ ನನ್ನನ್ನು ಕರೆದು “ತಗೋ, ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಿಂದ ನಿನಗೆ ಫೋನ್ ಬಂದಿದೆ ಮಾತಾಡು” ಎಂದರು. ಆಫೀಸು ರೂಮಿನ ಪಕ್ಕದಲ್ಲೇ ಸ್ಟಾಫ್‌ರೂಂ ಇದ್ದುದರಿಂದ ಓಡಿ ಬಂದು ಯಾರಪ್ಪಾ ನನಗೆ ಫೋನು ಮಾಡುವವರು ಎಂದು ಗಾಬರಿಯಿಂದಲೇ ಫೋನೆತ್ತಿಕೊಂಡೆ. ಆ ಕಡೆಯಿಂದ ಗಂಡುಧ್ವನಿ ಕೇಳಿತು.

“ನಿನಗೆ ಮದುವೆ ಆಗಿಲ್ಲ ಅಲ್ಲವಾ? ನಿನ್ನ ಸೊಂಟದ ಅಳತೆ ಎಷ್ಟು?” ಎಂದು ಇನ್ನೂ ಏನೇನೋ ಕೇಳತೊಡಗಿದ. ನನ್ನ ರಕ್ತ ಕುದಿಯಿತು. “ಯಾರು ನೀನು? ಮನೆಗೆ ಬಾ. ನಾನು ಬೀದಿಯಲ್ಲಿ ಬಿದ್ದವಳಲ್ಲ. ಎಲ್ಲಿಂದ ಮಾತಾಡುತ್ತೀ? ನಿನ್ನ ಹೆಸರೇನು?” ಎಂದು ಕೇಳಿದೆ. ನಾನು ಕಾಲೇಜಿನಿಂದ ಮಾತಾಡುತ್ತೇನೆ. ನೀನು ಒಪ್ಪಿದರೆ ಮನೆಗೆ ಬರುತ್ತೇನೆ” ಅಂದ. ನಾನು ಫೋನಿಟ್ಟೆ. ಪಕ್ಕದಲ್ಲೇ ಮುಖ್ಯೋಪಾಧ್ಯಾಯಿನಿ ಇದ್ದಾರೆ. ಗಟ್ಟಿಯಾಗಿ ಧ್ವನಿ ಎತ್ತಲೂ ಮುಜುಗರ. ಪುಣ್ಯಕ್ಕೆ ನನ್ನ ಸುತ್ತಮುತ್ತ ಇದ್ದವರಾರೂ ನನ್ನ ಮುಖದಲ್ಲಾದ ಬದಲಾವಣೆಯತ್ತ ಗಮನವೀಯದೆ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದರು. ನಾನು ಮಾತಾಡಿದ್ದುದನ್ನು ಅವರು ಕೇಳಿಸಿಕೊಂಡರೆ ನನ್ನನ್ನು ಪ್ರಶ್ನಿಸುತ್ತಿದ್ದರೇನೋ. ಅಥವಾ ಕೇಳಿಸಿಕೊಂಡರೂ ಕೇಳದಂತೆ ನಟಿಸಿದ್ದರೇನೋ? ನನ್ನ ಜಾಗದಲ್ಲಿ ಹೋಗಿ ಕೂತ ಮೇಲೆ ಅವನು ಕೇಳಿದ ಪ್ರಶ್ನೆಗಳು ನನ್ನನ್ನು ಕಂಗೆಡಿಸಿಬಿಟ್ಟವು. ಅವನು ಸೊಂಟದ ಅಳತೆ ಮಾತ್ರವಲ್ಲ ಸಭ್ಯರು ಹೇಳಲು ಕೇಳಲು ನಾಚಿಕೆ ಪಡುವ ಪ್ರಶ್ನೆಗಳನ್ನು ಕೇಳಿದ್ದ. ನನಗದು ಅಪರಿಚಿತ ಧ್ವನಿ ಎಂದು ಅಂದಾಜಾದ ಕೂಡಲೇ ನಾನು ಫೋನ್ ಕೆಳಗಿಡಬೇಕಿತ್ತು ಎಂದು ಮತ್ತೆ ಪರಿತಪಿಸಿದೆ. ಆದರೆ ಕಾಲೇಜಿನಿಂದ ಫೋನ್ ಎಂದು ಹೇಳಿದ್ದರಿಂದ ರಿಸೀವರನ್ನು ಕೈ ಒತ್ತಿ ಹಿಡಿಯಿತು. ಮನೆಗೆ ಬಂದ ಬಳಿಕ ನನಗಾದ ಅವಮಾನಕ್ಕೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿ ಅಂದು ರಾತ್ರಿಯೇ ಒಂದು ಪತ್ರ ಬರೆದೆ. ನನ್ನ ಸಿಟ್ಟನ್ನು ಪತ್ರದಲ್ಲಿ ಕಾರಿಕೊಂಡ ಮೇಲೆ ಮನಸ್ಸು ಶಾಂತವಾಯಿತು. ಇದನ್ನು ಯಾರಿಗೆ ಕಳಿಸಲಿ ಎಂದು ಗೊಂದಲಕ್ಕೊಳಗಾದೆ. ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಿಗೆ ಬರೆದು ತಿಳಿಸಲೇ? ಸಾವಿರಾರು ವಿದ್ಯಾರ್ಥಿಗಳು ಇರುವಾಗ ಯಾರು ಫೋನ್ ಮಾಡಿದ್ದೆಂದು ಅವರಿಗೆ ತಿಳಿಯುವುದಾದರೂ ಹೇಗೆ? ಫೋನ್ ಮಾಡಿದಾತ ಅಲೋಶಿಯಸ್ ಕಾಲೇಜು ಎಂದು ಸುಳ್ಳು ಹೇಳಿದ್ದರೆ ನನ್ನ ಪತ್ರ ನಗೆಪಾಟಲಾಗಿ ನನ್ನ ಮಾನ ಹರಾಜಾಗದೆ? ವಿಳಾಸ ಬರೆಯುವಾಗ ನನ್ನ ಕೈ ನಡುಗಿತು. ಇದು ಯಾರ ಕೆಲಸವಾಗಿರಬಹುದು? ನನ್ನನ್ನು ಗೊತ್ತಿರುವ ಯಾರೋ ಈ ಷಡ್ಯಂತ್ರ ಮಾಡಿರಬೇಕು ಎಂದು ಅರ್ಥ ಮಾಡಿಕೊಂಡೆ. ಪತ್ರದಲ್ಲಿ ಅವನನ್ನು ಚೆನ್ನಾಗಿ ಬೈದುದರಿಂದ ನನ್ನ ಮನಸ್ಸು ಹಗುರವಾದಂತೆನಿಸಿ ನಿರಾಳವಾದೆ. ಅಲೋಶಿಯಲ್ ಕಾಲೇಜಿನಲ್ಲಿ ಸಂಧ್ಯಾ ಕಾಲೇಜು ಸೇರಿ ಪದವಿ ಪರೀಕ್ಷೆ ಕಟ್ಟಬೇಕೆಂದು ಅರ್ಜಿಗಳನ್ನು ತಂದಿದ್ದೆ. ಈ ಪ್ರಕರಣ ಆದ ಮೇಲೆ ಆ ಕಾಲೇಜಿನಾಸೆಗೆ ಎಳ್ಳುನೀರು ಬಿಟ್ಟೆ. ಇನ್ನು ಮುಂದೆ ಎಂದಾದರೂ ಈ ಕೃತ್ಯ ಪುನರಾವರ್ತನೆಯಾದರೆ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಗೆ ತಿಳಿಸುವುದು ಮತ್ತು ಪೊಲೀಸರಿಗೆ ದೂರು ಕೊಡುವುದು ಎಂದು ನಿರ್ಧರಿಸಿ ನಿಶ್ಚಿಂತಳಾಗಿ ಮಲಗಿದೆ.

ಖ್ಯಾತ ಲೇಖಕಿ ಕಮಲಾದಾಸ್ ಅವರು ತಮ್ಮ ಒಂದು ಕತೆಯಲ್ಲಿ ಅವಿವಾಹಿತ ಮಹಿಳೆಯರನ್ನು `ಅನ್‌ಕ್ಲೈಮ್ಡ್ ಪಾರ್ಸೆಲ್ಸ್’ (unclaimed parcels) ಎಂದು ಹೇಳಿದ್ದರು. ಯಾರೂ ಕ್ಲೈಮ್ ಮಾಡುವವರಿಲ್ಲವೆಂದಾದರೆ ಎಲ್ಲರಿಗೂ ನಾನೊಮ್ಮೆ ಯಾಕೆ ಕ್ಲೈಮ್ ಮಾಡಬಾರದು ಎಂದು ಅನಿಸುತ್ತದೆ. ಈ ಮನೋಸ್ಥಿತಿಯೇ ಅವನನ್ನು ನನಗೆ ಪೋನ್ ಮಾಡಲು ಉತ್ತೇಜನ ನೀಡಿರಬೇಕು. ವಾರೀಸುದಾರರಿಲ್ಲದ ಗದ್ದೆಗಳನ್ನು ನಾವು ಹೇಗೆ ಉಪಯೋಗಿಸುವುದಕ್ಕೆ ತೊಡಗಿಕೊಳ್ಳುತ್ತೇವೋ ಹಾಗೆಯೇ ಈ ಒಂಟಿ ಮಹಿಳೆಯರನ್ನು ಸಮಾಜ ವಕ್ರದೃಷ್ಟಿಯಿಂದಲೇ ನೋಡುತ್ತದೆ. ಇದು ಅವಿವಾಹಿತೆಯರನ್ನು ಮಾತ್ರವಲ್ಲ ಗಂಡ ಸತ್ತ ವಿಧವೆಯರನ್ನು ಕೂಡಾ ಆಕೆ ಸಣ್ಣ ಪ್ರಾಯದವಳಾದರೆ ಇದೇ ಭಾವದಿಂದ ನೋಡುತ್ತದೆ. ಇಂತಹ ಘಟನೆಗಳು ನಡೆದಾಗ ನನ್ನ ಮನೆಯವರಲ್ಲೂ ಹೇಳಿಕೊಳ್ಳಲಾಗದೆ ನನ್ನ ಆತ್ಮೀಯರಲ್ಲೂ ಹೇಳಿಕೊಳ್ಳಲಾಗದೆ ನಾನು ಒದ್ದಾಡಿದ್ದುಂಟು.

ನಮ್ಮ ಮನೆಯ ಓಣಿಯಲ್ಲಿ ನವೀನ ಎಂಬ ಯುವಕನಿದ್ದ. ಸಂಜೆ ಆರು ಗಂಟೆಯಾಗುತ್ತಲೇ ಕುಡಿದು ಟೈಟ್ ಆಗಿ ಲೇಲೇ ಹಾಕುತ್ತಿದ್ದ. ನಮ್ಮ ನೆರೆಕರೆಯ ಹುಡುಗನೆಂದು ಮುಖತಃ ಕಂಡಾಗ ಮುಗುಳು ನಗುತ್ತಿದ್ದೆ. ಆದರೆ ಅವನು ಅಮಲು ತಲೆಗೇರಿ ಬೊಬ್ಬೆ ಹಾಕುವಾಗ ಅವನನ್ನು ನೋಡಲೂ ಭಯವಾಗುತ್ತಿತ್ತು. ಅವನಿಗೆ ಬುದ್ಧಿ ಹೇಳಿದವರನ್ನೆಲ್ಲಾ ಅವಾಚ್ಯ ಶಬ್ದಗಳಿಂದ ಬೈದು ಉಗಿದು ಉಪ್ಪಿನಕಾಯಿಯಂತೆ ಜಡಿದುಬಿಡುತ್ತಿದ್ದ. ಒಂದು ದಿನ ನಾನು ಮನೆಗೆ ಬರಬೇಕಾದರೆ ನನ್ನ ಬೆನ್ನ ಹಿಂದೆಯೇ ಅವನು ಬಂದುದನ್ನು ನೋಡಿ ನಾನು ದಿಗಿಲುಗೊಂಡೆ. ನನ್ನಲ್ಲಿ ಹಣ ಕೇಳಲು ಬಂದನೇ ಅಥವಾ ಬೇರೇನಾದರೂ ಹೇಳಲು ಬಂದನೇ? ನಾನು ಒಂಟಿ ಹೆಣ್ಣು. ಹೇಳುವವರು ಕೇಳುವವರು ಯಾರೂ ಇಲ್ಲ ಎಂದು ತಿಳಿದು ನನ್ನನ್ನು ಕೆಣಕಲು ಬಂದನೇ? ನಮ್ಮ ಮನೆಯ ಗೇಟಿನವರೆಗೆ ಬಂದಾಗ ನಾನು ನಮ್ಮ ಮನೆಯ ಮಾಲೀಕರಾದ ಕಲ್ಯಾಣಿಯಕ್ಕನನ್ನು ಕರೆದೆ. ಅವರನ್ನು ಕಂಡ ಕೂಡಲೇ ಎಬೌಟ್ ಟರ್ನ್ (about turn) ಆದ ಅವನು ಕಾಲೆಳೆಯುತ್ತಾ ಹೋದ. ನನಗೆ ಹೋದ ಜೀವ ಮರಳಿದಂತಾಯಿತು. “ಅವನು ನಿಮ್ಮನ್ನು ಕೇಳಿಕೊಂಡು ಬಂದನೆಂದು ಭಾವಿಸಿ ನಿಮ್ಮನ್ನು ಕರೆದೆ” ಎಂದೆ. ಅದಕ್ಕೆ ಅವರು “ಅವನು ಒಳಗೆ ಬಂದರೆ ನಾಯಿ ಬಿಡುತ್ತೇನೆ. ಒಳಗೆ ಬರುವ ಧೈರ್ಯವಿದೆಯೇ ಅವನಿಗೆ?” ಎಂದು ಮುಲಾಜಿಲ್ಲದೆ ಅವನಿಗೆ ಕೇಳುವಂತೆ ಹೇಳಿದರು.

ನನಗೆ ಆ ಕ್ಷಣಕ್ಕೆ ಅನಿಸಿದ್ದಿಷ್ಟು. ಆ ಕುಡುಕ ನವೀನ ನನ್ನನ್ನು ಹಿಂಬಾಲಿಸಿಕೊಂಡು ಬಂದದ್ದು ಯಾವ ದುರುದ್ದೇಶದಿಂದ ಇರಲಾರದು. ಏನಾದರೂ ಸ್ವಲ್ಪ ಹಣ ಕೇಳಲು ಬಂದಿರಬೇಕು ಎಂದು ಅನಿಸಿತು. ಯಾಕೆಂದರೆ ಆ ಬಳಿಕ ಅವನು ಮತ್ತೆ ಎಂದೂ ನನ್ನನ್ನು ಹಿಂಬಾಲಿಸಿಕೊಂಡು ಬಂದಿಲ್ಲ. ಆದರೂ ಈ ಕುಡುಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಾದರೂ ಹೇಗೆ? ಅವರ ತಲೆಯಲ್ಲಿ ಯಾವಾಗ ಎಂತಹ ಭಾವನೆಗಳು ಉತ್ಪತ್ತಿಯಾಗುತ್ತವೆಂದು ನಮಗೆ ಊಹಿಸಲೂ ಸಾಧ್ಯವೇ? ನನಗೆ ಬುದ್ಧಿ ತಿಳಿಯುವಷ್ಟು ಹೊತ್ತಿಗೆ ನನ್ನ ಅಪ್ಪ ಕುಡಿತವನ್ನು ತ್ಯಜಿಸಿದ್ದರು. ತ್ಯಜಿಸುವುದು ಅನಿವಾರ್ಯವಾಯಿತು ಎಂಬುದೇ ಸತ್ಯ. ಅವರ ಕಾಯಿಲೆ ಕುಡಿತದ ನಂಟನ್ನು ಕಡಿಯಿತು. ಆದರೆ ನನ್ನ ಸುತ್ತಮುತ್ತ ಇದ್ದವರಲ್ಲಿ ನನ್ನ ಬಂಧುಗಳಲ್ಲಿ ಎಂತೆಂತಹ ಮಹಾನ್ ಕುಡುಕರಿದ್ದರೆಂದರೆ ಅವರ ಬಗ್ಗೆ ಒಂದು ಮಹಾಕಾವ್ಯವನ್ನೇ ಬರೆದು ಬಿಡಬಹುದೇನೋ ಎಂಬಷ್ಟು. ಕುಡಿದು ಬಂದರೆ ಒಂದೇ ಒಂದು ಶಬ್ದ ಮಾತಾಡದ ಮೌನಯೋಗಿಗಳನ್ನು ಕಂಡಿದ್ದೇನೆ. ಇಡೀ ವಂಶ ಪಾರಂಪರ್ಯವನ್ನೇ ಎಂತೆಂತಹ ಅವಾಚ್ಯ ಶಬ್ದಗಳಿಂದ ಬೈಯವವರನ್ನು ಕಂಡಿದ್ದೇನೆ. ಕೆಟ್ಟ ಬೈಗಳ ಬಗ್ಗೆ ಅಧ್ಯಯನ ಮಾಡುವವರು ಒಂದು ತಿಂಗಳು ಅವರ ನೆರೆಯಲ್ಲಿದ್ದು ಕೇಳಿಸಿಕೊಂಡರೆ ಒಂದು ದೊಡ್ಡ ಗ್ರಂಥ ಬರೆಯುವಷ್ಟು ಮಾಹಿತಿ ಸಿಗಬಹುದು. ಅಷ್ಟು ವೈವಿಧ್ಯಪೂರ್ಣವಾಗಿತ್ತು ಅವರ ಅವಾಚ್ಯ ಬೈಗಳು. ಕುಡಿದ ಕೂಡಲೇ ಯಾವ ಹೆಣ್ಣೂ ೧೬ರ ತರುಣಿಯಂತೆ ಕಾಣುತ್ತಾಳೆಂದು ಹೇಳಿದವರನ್ನು ಕಂಡಿದ್ದೇನೆ. ಇಂತಹವರಿಗೆ ಪತ್ನಿ, ತಾಯಿ, ಮಗಳು ಎಂಬ ವ್ಯತ್ಯಾಸವೇ ಗೊತ್ತಾಗದೆ ಏನೇನು ಅನಾಹುತಗಳು, ಅನಾಚಾರ, ಅತ್ಯಾಚಾರಗಳು ಸಂಭವಿಸಬಹುದು ಎಂದು ಊಹಿಸಿಯೇ ನನ್ನ ಮನಸ್ಸು ಭಯದಿಂದ ಕಂಪಿಸತೊಡಗಿತು. ಇಂತಹವರಿಗೆ ತನ್ನ ಹೆಂಡತಿ, ಪರರ ಹೆಂಡತಿ ಎಂಬ ವ್ಯತ್ಯಾಸವೇ ತಿಳಿಯದು. ಅವಿವಾಹಿತೆ ಮಾತ್ರವಲ್ಲ ವಿವಾಹಿತೆಯಾದ ಹೆಣ್ಣನ್ನು ಗೌರವದಿಂದ ಕಾಣದ ಕುಡುಕರೂ ನನ್ನ ಪರಿಚಯದಲ್ಲಿದ್ದರು. ಆದರೂ ಆ ಕೆಟ್ಟ ಫೋನ್‌ಕರೆ ಮತ್ತು ನವೀನನ ಹಿಂಬಾಲಿಸುವಿಕೆಯ ನಂತರ ಮದುವೆಗಾಗಿ ನಾನೇ ಯಾಕೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಾರದು ಎಂಬ ನಿರ್ಧಾರಕ್ಕೆ ಬಂದೆ.

ಈಗಿನ ಶ್ರದ್ಧಾನಂದ ಸೇವಾಶ್ರಮ (ಆರ್ಯ ಸಮಾಜ)ದಲ್ಲಿ ವಿವಾಹ ಅಪೇಕ್ಷಿತರಿಗೆ ನೆರವಾಗುವ ಒಂದು ಸಂಸ್ಥೆ ಇತ್ತು. ೧೯೮೨ನೇ ಇಸವಿ ಇರಬೇಕು. ಅಲ್ಲಿ ೩೫ ರೂ. ಕಟ್ಟಿ ನನ್ನ ಆಯ್ಕೆ ವರನು ನನ್ನ ಮನೆಯನ್ನೂ ನನ್ನನ್ನೂ ನೋಡಿಕೊಳ್ಳುವವನಾಗಿರಬೇಕು ಎಂಬ ಬೇಡಿಕೆಯೊಂದಿಗೆ. ಸಾಹಿತ್ಯ, ಸಂಗೀತ, ನಾಟಕಗಳಲ್ಲಿ ಆಸಕ್ತಿ ಇರುವವನಾಗಿರಬೇಕೆಂದೂ ಜಾತಿ ವರ್ಣಗಳ ಪ್ರಶ್ನೆಯೇ ಇಲ್ಲವೆಂದೂ ಬರೆದು ತಿಳಿಸಿದೆ. ಪುಣ್ಯಕ್ಕೆ ಅಲ್ಲಿಂದ ತಿಂಗಳುಗಳಲ್ಲ, ವರ್ಷಗಳುರುಳಿದರೂ ಯಾವ ಉತ್ತರವೂ ಬರಲಿಲ್ಲ. ಒಂದು ದಿನ ಉದಯವಾಣಿ ಪತ್ರಿಕೆಯಲ್ಲಿ ಬಂದ ಪ್ರಕಟಣೆಯೊಂದನ್ನು ಕಂಡು ಯಾಕೆ ಪ್ರಯತ್ನಿಸಬಾರದು ಎಂದು ಅನಿಸಿತು. ವಿಧುರನೊಬ್ಬ ಗಣಿತ ಪ್ರೊಫೆಸರ್. ಸಾಹಿತ್ಯ, ಸಂಗೀತಾಸಕ್ತ ಸಂಗಾತಿಗಾಗಿ ಬೇಡಿಕೆ ಇಟ್ಟಿದ್ದ. ನಾನು ಪತ್ರ ಬರೆದೆ. ಕೂಡಲೇ ಉತ್ತರ ಬಂತು. ಉಡುಪಿಯ ಒಂದು ವಿಳಾಸ ಕೊಟ್ಟು ಬರಲು ಹೇಳಿದ್ದ. ನಾನು ನನ್ನ ತಮ್ಮನಲ್ಲಿ ವಿಷಯ ತಿಳಿಸಿ ನೀನು ಮೊದಲು ಹೋಗಿ ಮಾತಾಡು. ಆಮೇಲೆ ನಾನು ಮಾತಾಡುತ್ತೇನೆ ಎಂದೆ. ಅವನು ವಾರ ಕಳೆದರೂ ಆ ಕಡೆ ಹೋಗಲೇ ಇಲ್ಲ. ಹೀಗೊಂದು ಮದುವೆ ಆಗುವುದಕ್ಕೆ ನಾನು ಸಿದ್ಧಳಾದುದೇ ಅವನಿಗೆ ವಿಚಿತ್ರವಾಗಿ ಕಂಡಿರಬೇಕು. ಮತ್ತೂ ಒಂದು ವಾರ ಕಳೆದ ಮೇಲೆ ನನಗೆ ಒಂದು ಪತ್ರ ಬಂತು. “ಇನ್ನೊಬ್ಬರನ್ನು ಹಿಂಸಿಸಿ ಆನಂದಿಸುವ ಈ ನಿಮ್ಮ ಗುಣದಿಂದ ನನಗೆ ದುಃಖವಾಗಿದೆ. ಆದರೂ ನಿಮ್ಮ ಒತ್ತಡಗಳೇನಿದೆಯೋ ಗೊತ್ತಿಲ್ಲ. ನಾನು ನಿಮ್ಮನ್ನು ಕಾಣಲು ಬರುತ್ತೇನೆ” ಎಂದು ಬರೆದಿದ್ದರು. ಎರಡು ದಿನಗಳ ಬಳಿಕ ಸುಮಾರು ಹನ್ನೊಂದೂವರೆ ಗಂಟೆಯ ಹೊತ್ತಿಗೆ ಒಬ್ಬ ಗಂಡಸು ನನ್ನನ್ನು ಕೇಳಿಕೊಂಡು ಬಂದಿದೆಯೆಂದು ಕ್ಲರ್ಕ್ ಹೇಳಿದಾಗ, ಅವರೇ ಇರಬಹುದೇನೋ ಎಂದು ಊಹಿಸಿಕೊಂಡು ನನ್ನ ಗಂಟಲ ಪಸೆಯೇ ಆರಿದಂತಾಯಿತು.  ಅವರು ಪರಿಚಯ ಮಾಡಿಕೊಂಡ ಬಳಿಕ ಸ್ಟಾಫ್‌ರೂಮಿನ ಪಕ್ಕದ ಖಾಲಿ ಕೋಣೆಗೆ ಕರೆದೊಯ್ದೆ. ಮದುವೆಯಬಗ್ಗೆ ನಿಮ್ಮ ನಿರೀಕ್ಷೆಗಳೇನು ಎಂದು ಕೇಳಿದೆ. “ಕೆಲಸ ಬಿಡಬೇಕು. ಯಾಕೆಂದರೆ ನನಗೆ ಒಂಟಿ ಬದುಕು ಹಿಂಸೆಯಾಗುತ್ತಿದೆ. ಮಕ್ಕಳು ವಿದೇಶದಲ್ಲಿದ್ದಾರೆ. ಅವರ ಒಪ್ಪಿಗೆ ಪಡೆದೇ ನಾನು ಈ ಹೆಜ್ಜೆಇಟ್ಟಿದ್ದೇನೆ”ಎಂದರು.

“ನೀವು ಇಲ್ಲಿವರೆಗೆ ಬರುವ ಕಷ್ಟ ತೆಗೆದುಕೊಂಡಿರಿ. ಸಾರಿ ಸರ್, ನನಗೆ ಕೆಲಸ ಬಿಡುವ ಇಚ್ಛೆ ಇಲ್ಲ. ನನ್ನ ತಾಯಿ ತಮ್ಮನನ್ನು ಬಿಟ್ಟು ನಾನು ಮದುವೆಯಾಗುವ ಯೋಚನೆಯನ್ನೇ ಮಾಡಿಲ್ಲ. ಅವರನ್ನು ಜೊತೆಯಲ್ಲಿರಿಸಿಕೊಂಡೇ ನನ್ನೊಂದಿಗೆ ಬಾಳುವ ಸಂಗಾತಿಯನ್ನು ನಾನು ಹುಡುಕುತ್ತಿದ್ದೆ. ನನ್ನಿಂದ ತಪ್ಪಾದುದಕ್ಕೆ ಕ್ಷಮೆ ಇರಲಿ” ಎಂದೆ. ಅವರು ಸ್ವಲ್ಪ ಹೊತ್ತು ಮಾತೇ ಆಡಲಿಲ್ಲ. ಆಮೇಲೆ ಎದ್ದು ನಿಂತು, “ನಿನ್ನ ತಮ್ಮನಿಗೆ ಮದುವೆ ಮಾಡಿದ ಮೇಲೆ ಆ ಮನೆಯಲ್ಲೇ ಇರುತ್ತೀಯಾ?” ಎಂದರು. “ಅದು, ಅವನ ಮದುವೆಯ ನಂತರದ ಪ್ರಶ್ನೆ. ಆದರೆ ತಾಯಿಯನ್ನು ಮಾತ್ರ ಬಿಟ್ಟಿರಲು ಸಾಧ್ಯವಿಲ್ಲ” ಎಂದೆ. “ಸರಿ, ನಿನ್ನಿಷ್ಟ. ನಿನಗೆ ಒಳ್ಳೆಯದಾಗಲಿ” ಎಂದು ಚಂದದ ಮುಗುಳುನಗು ಬೀರಿ ಹೊರಟುಹೋದರು. ನಾನು ಅವರು ಮೆಟ್ಟಲಿಳಿದು ಕಣ್ಣು ಮರೆಯಾಗುವವರೆಗೂ ನೋಡಿದೆ. ನಿಮಗೂ ಮೆಚ್ಚಿಕೆಯಾಗುವ ಬಾಳಸಂಗಾತಿ ಸಿಗಲಿ ಎಂದು ಹಾರೈಸಿದೆ.

ಈ ಘಟನೆಯ ನಂತರ ನಾನು ಮನಸ್ಸಿನಲ್ಲಿ ಖಡಾಖಂಡಿತ ನಿರ್ಧಾರ ಮಾಡಿದೆ. ನಾನು ಇನ್ನು ಆಜೀವ ಪರ್ಯಂತ ಹೀಗೆಯೇ ಇರುತ್ತೇನೆ. ಇನ್ನು ಏನಿದ್ದರೂ ತಮ್ಮನ ಭವಿಷ್ಯಕ್ಕಾಗಿ, ಅಮ್ಮನ ನೆಮ್ಮದಿಗಾಗಿಯೇ ನಾನು ಬದುಕಿರಬೇಕು. ನನ್ನ ವೃತ್ತಿಜೀವನದಲ್ಲಿ ಅನೇಕ ಅವಿವಾಹಿತೆಯರಾದ ಸಹೋದ್ಯೋಗಿಗಳು ನನ್ನ ಸಂಪರ್ಕಕ್ಕೆ ಬಂದಿದ್ದರು. ಅವರಲ್ಲಿ ಹೆಚ್ಚಿನವರು ಸಮಾಜದ ನಿಂದೆಗೆ, ಹಾಸ್ಯಕ್ಕೆ ಗುರಿಯಾದವರನ್ನು ಕಂಡು ಬೆರಗಾಗಿದ್ದೆ. ಅವರನ್ನು ಸಮಾಜ ಅನುಕಂಪದಿಂದ ನೋಡುವ ಬದಲು ಹಾಸ್ಯ ಮಾಡಿ ಕ್ರೂರ ರೀತಿಯ ಖುಷಿಪಡುತ್ತಿತ್ತು. ಒಬ್ಬರು ಟೀಚರಿದ್ದರು. ಅವರು ತಮ್ಮ ವೇಷಭೂಷಣದಿಂದಲೂ ನೋಡುವವರಿಗೆ ದಸರಾದ ನಾರದನ ವೇಷದಂತೆ ಕಾಣುತ್ತಿದ್ದರು. ಮೊಣಕಾಲುವರೆಗಿನ ಸೀರೆ ತಲೆಯನ್ನು ಮೇಲಕ್ಕೆ ಕಟ್ಟಿ ಅದಕ್ಕೆ ಮಣಿಗಳ ಮಾಲೆ ಮುಡಿದುಕೊಳ್ಳುತ್ತಿದ್ದರು. ಅವರನ್ನು ಕಂಡವರೆಲ್ಲಾ `ಆಂಟಿ’ ಎಂದು ಕರೆದ ಕೂಡಲೇ ಇವರು ಕ್ಯಾಕರಿಸಿ ಉಗುಳುತ್ತಿದ್ದರು. ಅವರನ್ನು ಸಿಟ್ಟಿಗೆಬ್ಬಿಸಿ ಚಂದ ನೋಡುವ ಗಂಡಸರನ್ನು ಕಂಡು ನಾನು ಅಸಹಾಯಕಳಾಗಿ ದಿಟ್ಟಿಸುತ್ತಿದ್ದೆ. ಅದೇ ಟೀಚರು ನನ್ನ ದೊಡ್ಡಮ್ಮನ ಮೊಮ್ಮಗ ಸುದರ್ಶನನಿಗೆ ಗಂಜಿಮಠದ ಶಾಲೆಯಲ್ಲಿ ಇಂಗ್ಲಿಷ್ ಕಲಿಸುತ್ತಿದ್ದರು. ಪಾಠ ಕಲಿಸುವಾಗ ಕ್ಲಾಸಿನಲ್ಲಿ ಉತ್ತಮ ಶಿಕ್ಷಕಿಯಾಗಿದ್ದರು ಎಂದು ಅವನಿಂದ ಕೇಳಿ ತಿಳಿಯುತ್ತಿತ್ತು. ಆದರೆ ಆ ಟೀಚರು ಹೊರಗೆ ರಸ್ತೆಯಲ್ಲಿ ಕಂಡಾಗ ಮಾತ್ರ ಜನರು ಅವರನ್ನು ಮನುಷ್ಯರಂತೆ ಕಾಣುತ್ತಿರಲಿಲ್ಲ. ಅವರ ಸೋದರಿಯೊಬ್ಬರು ಕೆಲವೊಮ್ಮೆ ಜೊತೆಯಲ್ಲಿರುತ್ತಿದ್ದರು. ಅವರೂ ಅವಿವಾಹಿತೆ. ಜನರ ಗಮನ ಸೆಳೆಯಲು ಆ ಟೀಚರೇ ಹೀಗೆ ವಿಚಿತ್ರ ವೇಷ ತೊಡುತ್ತಿದ್ದರೋ? ಅಂತೂ ಅವರು ಮಾನಸಿಕವಾಗಿ ಸ್ವಲ್ಪ ಅಸ್ತವ್ಯಸ್ತ ರೀತಿಯಲ್ಲಿ ವರ್ತಿಸಲು ಸಮಾಜವೂ ಕಾರಣವೆಂದು ಅವರನ್ನು ಬಲ್ಲವರಲ್ಲಿ ಮಾತಾಡಿದ ಮೇಲೆ ತಿಳಿಯಿತು. ಮದುವೆಯಾಗದ ಕೆಲವು ವಿಕ್ಷಿಪ್ತ ಮನಸ್ಥಿತಿಯ ಹೆಣ್ಣುಮಕ್ಕಳನ್ನು ಅದರಲ್ಲೂ ಉದ್ಯೋಗಸ್ಥೆಯರನ್ನು ಕಂಡಾಗ ನನಗೆ ಒಳಗೊಳಗೇ ಭಯವಾಗುತ್ತಿತ್ತು. ಒಬ್ಬ ಶಿಕ್ಷಕಿಯಂತೂ ತನ್ನ ತಮ್ಮನು ತನಗಿಂತ ಮೊದಲೇ ಮದುವೆಯಾದನೆಂಬ ಒಂದೇ ಕಾರಣದಿಂದ ಮದುವೆಯ ಮೊದಲ ದಿನ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡು ಬಿಟ್ಟಿದ್ದರು. ಮದುವೆಯೆಂಬುದು ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಪೂರಕವೆಂಬ ಸತ್ಯ ಎಲ್ಲರಿಗೂ ಗೊತ್ತಿದೆ. ಆದರೂ ಕಣ್ಣ ಮುಂದಿನ ಕರಾಳ ದೃಶ್ಯಗಳು ಹೃದಯವನ್ನು ಕಂಪಿಸುವಂತೆ ಮಾಡುತ್ತಿದ್ದವು. ಅದೇನೇ ಇದ್ದರೂ ಲಕ್ಷ್ಮೀ ಟೀಚರರಂತಹವರ ಸಹವಾಸದಿಂದಾಗಿ ಆ ಭಯವನ್ನು ಮೀರಿ ನಿಲ್ಲಲು ಸಾಧ್ಯವಾಯಿತು. ಮುಂದೆ ಏನಿದ್ದರೂ ತಮ್ಮನ ಮದುವೆಯ ಬಗ್ಗೆ ಯೋಚಿಸುವುದೆಂದು ನಿರ್ಧರಿಸಿದೆ.

(ಮುಂದುವರಿಯಲಿದೆ)