ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೆರಡು

ದೊಡ್ಡ ಆಪತ್ತುಗಳು ತನ್ನ ಮೇಲೆ ಎರಗುತ್ತವೆ ಎಂಬ ಭಯವಿದ್ದವರು ಸಣ್ಣ ಸಣ್ಣ ಆಪತ್ತುಗಳು ಎದುರಾದಾಗಲೂ ಅದು ದೇವರು ತಮ್ಮ ಮೇಲೆ ತೋರಿದ ಕರುಣೆ ಕೃಪೆಯೆಂದೇ ಭಾವಿಸುತ್ತಾರೆ. ನಾನು ಬಾಲ್ಯದಿಂದ ನಂಬಿಕೊಂಡು ಬಂದ ಸಿದ್ಧಾಂತವೇನೆಂದರೆ ಮನುಷ್ಯರಿಗೆ ದೇವರು ಕಷ್ಟಗಳನ್ನು ಕೊಡುವುದು ಅವರನ್ನು ಪರೀಕ್ಷಿಸಲಿಕ್ಕಾಗಿ. ಕಷ್ಟಗಳನ್ನು ಸಹಿಸಿದರೆ ಕೊನೆಗೆ ಸುಖ ಸಿಗುತ್ತದೆ. ಭಕ್ತಿಯಿಂದ ಮೊರೆಯಿಟ್ಟರೆ ದೇವರು ಕಿವಿಗೊಡುತ್ತಾನೆ. ಕಂಡ ಕಂಡ ದೇವಸ್ಥಾನಗಳನ್ನು ಸುತ್ತುವಷ್ಟು ಆರ್ಥಿಕ ಸ್ಥಿತಿ ಇರದುದರಿಂದಲೇ ಇರಬೇಕು ಮನೆಯಲ್ಲೇ ಎಲ್ಲಾ ದೇವರುಗಳನ್ನು ಆವಾಹನೆ ಮಾಡಿಕೊಂಡು ಪ್ರಾರ್ಥಿಸುತ್ತಿದ್ದೆ. ಪ್ರಾರ್ಥಿಸುತ್ತಿದ್ದೆ ಅನ್ನುವುದಕ್ಕಿಂತ ನಿತ್ಯವೂ ಕಣ್ಣೀರು ಸುರಿಸುತ್ತಿದ್ದೆ ಎಂಬುದೇ ಸತ್ಯ. ಹಿಂದೆ ತಂದೆಯ ಕಾಯಿಲೆಯನ್ನು ನೆನೆದು ಕಣ್ಣೀರು ಹಾಕುತ್ತಿದ್ದೆ. ಈಗ ತಮ್ಮನ ಕಾಯಿಲೆಯನ್ನು ನೆನೆದು ಕಣ್ಣೀರು ಹಾಕಲಾರಂಭಿಸಿದೆ. ಯಾವನೋ ಕಲಾವಿದ ಚಿತ್ರಿಸಿದ ದೇವಿಯ ಚಿತ್ರಕ್ಕೆ ಫ್ರೇಮ್ ಹಾಕಿ ಗೋಡೆಯ ಮೇಲೆ ನೇತು ಹಾಕಿದ್ದೆವು. ನನ್ನಪ್ಪ ಹಿಂದೆ ತಿರುಪತಿಗೆ ಹೋಗಿದ್ದಾಗ ತಂದಿದ್ದ ವೆಂಕಟ್ರಮಣನ ಮೂರ್ತಿ ಮತ್ತು ಮತ್ತೊಂದು ತಮಿಳ್ನಾಡಿನ ಯಾವುದೋ ದೇವಿಯ ಫೋಟೋ ಒಂದಿತ್ತು. ಇದಕ್ಕೆ ದಿನಾ ಬೆಳಿಗ್ಗೆ ಮತ್ತು ಸಂಜೆ ಕೈ ಮುಗಿದು ನನ್ನ ಸುಖ ದುಃಖ ಹೇಳಿಕೊಂಡು ತೃಪ್ತಿ ಪಡುತ್ತಿದ್ದೆ. ಸಂಗೀತ ಕಲಿತ ಮೇಲೆ ಕೀರ್ತನೆಗಳನ್ನು ಹಾಡಿ ಸ್ತುತಿಸುತ್ತಿದ್ದೆ. ನಾಳೆ ಹೇಗೋ ಏನೋ ನಾಡದು ಹೇಗೋ ಏನೋ ಎಂಬ ಭಯವೇ ನನ್ನಲ್ಲಿ ಮಡುಗಟ್ಟಿರುತ್ತಿತ್ತು. ಈ ಭಯದಿಂದ ಹೊರ ಬರದೆ ನಮ್ಮಲ್ಲಿ ವಾಸ್ತವವನ್ನು ಎದುರಿಸುವ ಶಕ್ತಿ ಸಂಚಯವಾಗುವುದಿಲ್ಲ. ಈ ಭಯವನ್ನು ಗೆಲ್ಲದೆ ಜೀವನದ ಪಾಠವನ್ನು ಕಲಿಯುವುದಾದರೂ ಹೇಗೆ? ಆ ಭಕ್ತಿಯ ಆವೇಶ ನನ್ನಲ್ಲಿದ್ದ ಕಾಲದಲ್ಲಿ ಒಮ್ಮೆಯೂ ಈ ದೇವರು ನಮ್ಮನ್ನು ಪರೀಕ್ಷೆ ಮಾಡಲು ಕಷ್ಟಗಳನ್ನೇ ಯಾಕೆ ಕೊಡುತ್ತಾನೆ? ಸುಖವನ್ನು ಕೊಟ್ಟು ಪರೀಕ್ಷಿಸಬಾರದೇ? ಎಂದು ಒಮ್ಮೆಯೂ ನನ್ನ ಮನಸ್ಸಿನಲ್ಲಿ ಮೂಡಿರಲೇ ಇಲ್ಲ.

ನಾನು, ನನ್ನ ಮನೆ, ಸಂಸಾರ ಈ ಕೂಪದಿಂದಾಚೆ ಯೋಚಿಸಲಾರದಷ್ಟು ಕುಬ್ಜಳಾಗಿದ್ದೆ. ಒಂದು ರೀತಿಯ ಆತ್ಮರತಿಯಲ್ಲಿ ಮುಳುಗಿದ್ದ ನನ್ನನ್ನು ಅದರಿಂದ ಹೊರಬರುವಂತೆ ಮಾಡಿದ್ದು ನನ್ನ ತಮ್ಮನ ಹೆಂಡತಿ ಲಲಿತಾ. ಎಷ್ಟೋ ವೇಳೆ ನಾವು ತೋರುವ ಅತಿ ಪ್ರೀತಿಯೇ ಅವರಿಗೆ ಬಂಧನವಾಗುತ್ತದೆ. ಮನೆಗೆ ಬಂದ ಸೊಸೆ ಮಗಳಾಗುತ್ತಾಳೆ ಎಂದು ಅತ್ತೆಯೂ ಗಂಡನ ತಾಯಿ ತನಗೆ ಹೆತ್ತ ತಾಯಿಯ ಸಮಾನಳು ಎಂದು ಸೊಸೆಯೂ ವ್ಯವಹರಿಸುವುದು ಅಷ್ಟು ಸುಲಭವಲ್ಲ. ಅತ್ತೆ ಸೊಸೆಯರ ಸಂಬಂಧವಿದೆಯಲ್ಲಾ ಇದು ಯಾವ ರಾಜಕೀಯ ಶಕ್ತಿಗೂ ಕಡಿಮೆಯದ್ದಲ್ಲ. ಸೊಸೆಯಾಗಿ ಬಂದ ಅವಳ ಅಂತರಂಗದ ಅನಿಸಿಕೆಗಳಿಗೆ ನಾವು ಅವಕಾಶ ಕೊಡಲೇ ಇಲ್ಲ. ಅವಳು ತನ್ನ ಭಾವನೆಗಳನ್ನು ಹತ್ತಿಕ್ಕಿಕೊಳ್ಳುವಂತಹ ವಾತಾವರಣ ಈ ಮನೆಯಲ್ಲಿತ್ತು. ನಿಜವಾಗಿ ಅತ್ತೆ ಸೊಸೆಯ ಮೈಮನಸ್ಸುಗಳು ಅಧಿಕಾರದ ಹಸ್ತಾಂತರದ ಎಡವಟ್ಟುಗಳೇ ಆಗಿವೆ. ನನಗೆ ವಿಚಿತ್ರ ಅಂತ ಕಂಡದ್ದು ಏನೆಂದರೆ ಜಗತ್ತಿನ ಯಾವ ಕಾವ್ಯ, ಪುರಾಣ ಕತೆಗಳೂ ಅತ್ತೆ ಸೊಸೆಯರ ಸಂಬಂಧವನ್ನು ಮಧುರವಾಗಿ ಮಮತಾಪೂರ್ಣವಾಗಿ ಚಿತ್ರಿಸಲೇ ಇಲ್ಲ. ಗಂಡನ ಸೋದರಿಯರನ್ನು ಕೂಡಾ ಸಹೃದಯವಂತರೆಂದು ಎಲ್ಲೂ ಚಿತ್ರಣಗೊಂಡದ್ದಿಲ್ಲ. ಅದ್ಯಾಕೆ ಹೀಗೆ? ಆರ್ಥಿಕ ಸ್ವಾತಂತ್ರ್ಯವಿಲ್ಲದ ಕಾಲದಲ್ಲಿ ಸ್ವಾರ್ಥ ಮೂಲವಾದ ಮನಸ್ಸುಗಳು ಈ ಅತ್ತೆ ಸೊಸೆ ನಾದಿನಿಯರೊಂದಿಗಿನ ಸಂಬಂಧಗಳನ್ನು ಬಹಳ ಕೆಟ್ಟದ್ದಾಗಿಯೇ ಚಿತ್ರಿಸಿದ ಎಷ್ಟೋ ಕತೆಗಳು, ಗಾದೆಗಳು ಪ್ರಚಲಿತದಲ್ಲಿವೆ. ಜನಪದ ಸ್ತ್ರೀಯರಂತೂ ಅತ್ತೆ ನಾದಿನಿಯರ ಬಗ್ಗೆ ಹೃದಯಹೀನ ನಡವಳಿಕೆಯುಳ್ಳ ಚಿತ್ರಣಗಳಿವೆ. ಇಂದಿನ ಸುಶಿಕ್ಷಿತ ಆರ್ಥಿಕ ಸಂಪನ್ನ ಕುಟುಂಬಗಳಲ್ಲೂ ಇದೇ ಭಾವನೆ ಪರಸ್ಪರರೊಳಗೆ ಗಟ್ಟಿಗೊಳ್ಳಲು ಕಾರಣವೇನೆಂದು ತಿಳಿಯದೆ ಹತಾಶೆಗೊಳಗಾಗಿದ್ದೇನೆ. ಅವಿವಾಹಿತ ಹೆಣ್ಣೊಂದು ಮನೆಯಲ್ಲಿದ್ದರೆ ಅದು ಹಲವಾರು ಅನಪೇಕ್ಷಿತ ಸಮಸ್ಯೆಗಳಿಗೆ ಕಾರಣವಾದುದನ್ನು ಸಮಾಜದಲ್ಲಿ ಕಂಡಿದ್ದೇನೆ. ಸುಶಿಕ್ಷಿತರಾಗುವುದು ಮತ್ತು ಹೃದಯವಂತರಾಗುವುದು ಬೇರೆ ಬೇರೆ ಎಂದು ನನಗೆ ಅರ್ಥವಾಗತೊಡಗಿತು.

ನಾನು ಅವಿವಾಹಿತ ಮಹಿಳೆಯರ ಬಗ್ಗೆ ಅಧ್ಯಯನ ಕೈಗೊಂಡಾಗ ಕಂಡುಕೊಂಡ ಸತ್ಯಗಳು ನನ್ನನ್ನು ಬೆಚ್ಚಿ ಬೀಳಿಸುವಂತಿತ್ತು. ಅವಿವಾಹಿತ ಹೆಣ್ಣು ಬಹುತೇಕ ಕುಟುಂಬದಲ್ಲಿರುವುದು ಮಗ್ಗುಲ ಮುಳ್ಳಾಗಿ ಕಂಡದ್ದು ಆಶ್ಚರ್ಯವೆನಿಸಿತ್ತು. ಅವಿವಾಹಿತೆಗೆ ಹೊಂದಾಣಿಕೆ ಸಾಧ್ಯವಿಲ್ಲವೆಂದು ಸೊಸೆಯರೂ ಸೊಸೆಯರು ತಮ್ಮನ್ನು ನಿಕೃಷ್ಟವಾಗಿ ಕಾಣುತ್ತಾರೆಂದು ಅವಿವಾಹಿತೆಯರೂ ತಮ್ಮ ಸಂಕಷ್ಟಗಳನ್ನು ತೋಡಿಕೊಂಡಿದ್ದರು. ಆದುದರಿಂದಲೇ ಮದುವೆಯಾದ ದಂಪತಿಗಳು ಕುಟುಂಬದ ಸದಸ್ಯರೊಂದಿಗೆ ಹೊಂದಾಣಿಕೆ ಮಾಡಲಾಗದೆ ಬೇರೆ ಮನೆ ಮಾಡುತ್ತಿದ್ದರು. ಅದು ನೆಮ್ಮದಿಯ ಪರಿಹಾರವೂ ಹೌದು. ಒಟ್ಟಿಗಿದ್ದು ಮನ ಮುರಿದುಕೊಳ್ಳುವುದಕ್ಕಿಂತ ಬೇರೆಯಾಗಿ ಸಂಬಂಧ ಉಳಿಸಿಕೊಳ್ಳುವುದು ಹೆಚ್ಚು ಕ್ಷೇಮಕರವಲ್ಲವೇ? ಮನುಷ್ಯ ಸಂಬಂಧಗಳ ಬಗ್ಗೆ ವಿಮರ್ಶಾತ್ಮಕವಾದ ದೃಷ್ಟಿಕೋನ ನನ್ನಲ್ಲಿರಲಿಲ್ಲ. ಎಲ್ಲವೂ ತನ್ನಂತೆ ಪರರು ಎಂಬ ಸೂತ್ರದಲ್ಲಿ ಮುದುಡಿ ಕುಳಿತಿತ್ತು. ಇಲ್ಲ, ಹಾಗಿಲ್ಲ. ನನಗೆ ಸರಿ ಕಂಡದ್ದು ನಿನಗೆ ಸರಿ ಕಾಣಲೇಬೇಕೆಂಬ ಮಿಲಿಟರಿ ಶಿಸ್ತಿನ ಧೋರಣೆಯನ್ನು ಪ್ರಶ್ನಿಸುವಂತೆ ಮಾಡಿದವಳು ಲಲಿತಾ. ನನ್ನ ಆಸಕ್ತಿ, ಅಭಿರುಚಿಗಳೂ ಅವಳ ಆಸಕ್ತಿ ಅಭಿರುಚಿಗಳೂ ಭಿನ್ನವಾಗಿದ್ದುವು. ನನ್ನ ಡಿಕ್ಟೇಟರ್‌ಶಿಪ್‌ನ ಮಾಸ್ತರಿಕೆಯ ಗತ್ತಿನಲ್ಲಿ ನನ್ನ ದಾರಿಗೆ ನೀನು ಬಾ ಎಂದು ಎಳೆಯುವುದನ್ನು ಮೌನವಾಗಿ ವಿರೋಧಿಸಿದ ಅವಳು ನನ್ನ ಕಣ್ಣು ತೆರೆಯುವಂತೆ ಮಾಡಿದಳು. ಮಕ್ಕಳಾದ ಮೇಲೂ ಅವರ ಮೇಲೆ ಏನಿದ್ದರೂ ಹೆತ್ತವರ ಅಧಿಕಾರವೇ ಹೊರತು ಉಳಿದವರಿಗಲ್ಲ ಎಂಬುದನ್ನು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ತನ್ನ ನಡವಳಿಕೆಯಿಂದ ತೋರಿಸಿಕೊಟ್ಟಳು. ಹೌದಲ್ಲ, ಮಕ್ಕಳನ್ನು ಹೆತ್ತವರಲ್ಲದೆ ಉಳಿದವರು ಮಕ್ಕಳಿಗೆ ಬುದ್ಧಿ ಕಲಿಸುವ ಅಧಿಕಾರವನ್ನು ತೋರಿಸಬಾರದು. ಹೆತ್ತವಳಿಗೆ ಮಾತ್ರ ಗೊತ್ತು ಮಗುವಿನ ಅಂತಃಕರಣ ಮತ್ತು ನೋವು ನಲಿವು. ಅದಕ್ಕೆ ಬುದ್ಧಿ ಕಲಿಸುವುದು, ಹೊಡೆಯುವುದು, ತಿದ್ದುವುದು, ಬೈಯುವುದು ಏನಿದ್ದರೂ ತಾಯಿತಂದೆಗೆ ಮಾತ್ರ ಅಧಿಕಾರವೇ ಹೊರತು ಉಳಿದವರಿಗಲ್ಲವೆಂಬ ಸತ್ಯದರ್ಶನ ಮಾಡಿಸಿದ ಗುರು ಲಲಿತಾ. ನನ್ನ ಅಹಂಕಾರದ ಕೋಟೆಯಲ್ಲಿ ನಾನು ಉನ್ಮತ್ತಳಾಗಿ ವರ್ತಿಸುತ್ತಿದ್ದೆ. ತಲೆಗೇರಿದ ಈ ಮದವನ್ನು ಇಳಿಸಿ ನನ್ನ ದೃಷ್ಟಿಯನ್ನು ಶುಭ್ರಗೊಳಿಸಿದವಳು ಈ ಲಲಿತಾ. ಸಾಮಾನ್ಯ ಮನುಷ್ಯರಲ್ಲಿರುವ ಸಹಜ ಗುಣವೆಂದರೆ ನಮಗೆ ನಮ್ಮಲ್ಲಿರುವ ಕೊರತೆಗಳು ಕಾಣುವುದೇ ಇಲ್ಲ. ಬೇರೆಯವರ ಕೊರತೆಗಳು ಢಾಳಾಗಿ ಕಾಣುತ್ತವೆ. ಅದಕ್ಕೇ ಹೇಳುವುದು `ನನ್ನ ಬಟ್ಟಲಿನಲ್ಲಿ ಆನೆ ಬಿದ್ದರೂ ಕಾಣದು, ಇನ್ನೊಬ್ಬರ ಬಟ್ಟಲಿನ ಇರುವೆ ಬಿದ್ದರೂ ಕಾಣುತ್ತದೆ.’ ಪರರಿಗೆ ತೋರಿಸುವ ತರ್ಜನಿ ತನ್ನ ಕೆಲಸ ಮಾಡುತ್ತದೆ. ಉಳಿದ ಮೂರು ಬೆರಳುಗಳು ತನ್ನತ್ತಲೇ ಬೆರಳು ತೋರುತ್ತದೆಂಬುದನ್ನು ಮರೆಯುತ್ತೇವೆ. ಇದೇ ಕತೆ ನನ್ನದೂ ಕೂಡಾ. ನನ್ನ ದೋಷಗಳೇನೆಂದು ನಾನೇ ಆತ್ಮ ವಿಮರ್ಶೆ ಮಾಡತೊಡಗಿದೆ. ತಮ್ಮನ ಸಂಸಾರ ಸುಖವಾಗಿರಬೇಕಾದರೆ ಎಲ್ಲರೊಂದಿಗೆ ಹೊಂದಾಣಿಕೆ ಮಾಡಲೇಬೇಕು. ಬಾಗುವುದರಿಂದ ಎಲ್ಲರಿಗೂ ನೆಮ್ಮದಿಯುಂಟಾಗುವುದಾದರೆ ಪಾತಾಳಕ್ಕೂ ಬಾಗಿಯೇನು ಎಂಬ ತಾಳ್ಮೆಯನ್ನು ರೂಢಿಸಿಕೊಂಡೆ. ಏನನ್ನಾದರೂ ಕಳಕೊಳ್ಳದೆ ಹೊಸತನ್ನು ಪಡೆಯಲು ಸಾಧ್ಯವೇ? ಹಳೆಯ ಕೊಳೆಯನ್ನು ಕಳೆಯನ್ನು ತಳ್ಳದೆ ಹೊಸತು ಚಿಗುರುವುದಾದರೂ ಹೇಗೆ?

ಇಂತಹ ನಿರ್ಧಾರ ಮಾಡಿದ ಮೇಲೆ ಹೊಸ ಮನೆ ಕಟ್ಟುವ ನಿರ್ಧಾರ ಮಾಡಿದೆ. ಹೌಸಿಂಗ್ ಬೋರ್ಡಿನಲ್ಲಿ ಜಾಗ ಕೊಂಡು ಮನೆ ಕಟ್ಟುವುದಕ್ಕಾಗಿ ಅರ್ಜಿ ತಂದಿಟ್ಟ ಸಮಯದಲ್ಲೇ ನನ್ನ ಸೋದರಮಾವ ಪದ್ಮನಾಭನವರು ಮನೆಗೆ ಬಂದು ಕುಡುಪುನಲ್ಲಿ ತನ್ನ ಜಾಗದಲ್ಲಿ ಮನೆ ಕಟ್ಟಬಹುದೆಂದು ತಿಳಿಸಿದರು. ಅವರಿಗೆ ನನ್ನ ಬಗ್ಗೆ ಒಂದು `ಸಾಫ್ಟ್ ಕಾರ್ನರ್’ ಇತ್ತು. ಹಿಂದೆ ತಮ್ಮನ ಕಾಲೇಜು ಶಿಕ್ಷಣಕ್ಕೆ ಸ್ವಲ್ಪ ಆರ್ಥಿಕ ಸಹಾಯ ನೀಡಿದ್ದರು. ನಾಳೆ ಮಾವನ ಮಕ್ಕಳ ಹಂಗಿಗೊಳಗಾಗಬಾರದೆಂದು ಹಣ ಕೊಟ್ಟು ಅವರಿಂದ ಸ್ಥಳ ಖರೀದಿಸಿ ತಮ್ಮನ ಹೆಸರಲ್ಲಿ ನೋಂದಣಿ ಮಾಡಿದ ಮೇಲೆ ಶುರುವಾಯಿತು ಇನ್ನೊಂದು ಹೋರಾಟದ ಕತೆ.

ಮದುವೆ ಮಾಡಿ ನೋಡಿ ಆಯಿತು ಈಗ ಮನೆ ಕಟ್ಟಿ ನೋಡಿ ಎಂಬ ಕಥಾನಕದಲ್ಲಿ ಏನೆಲ್ಲಾ ತಿರುವುಗಳು, ಏನೆಲ್ಲಾ ಏರಿಳಿತಗಳು, ಎಷ್ಟೆಲ್ಲಾ ನಿಟ್ಟುಸಿರುಗಳು ನನ್ನನ್ನು ಪರಿಪಕ್ವಗೊಳಿಸಿದವು ಅಂದರೆ ಇದೆಲ್ಲಾ ಬೇಕಿತ್ತಾ, ಆರಾಮವಾಗಿ ಬಾಡಿಗೆ ಮನೆಯಲ್ಲಿರಬಹುದಿತ್ತಲ್ಲಾ ಎಂದು ಅನಿಸಿದ್ದೂ ಉಂಟು. ಬಾಡಿಗೆ ಮನೆಯಲ್ಲಿ ಮಾಲೀಕರು ಹತ್ತಿರವಿದ್ದರೆ ಕೆಲವು ಕಿರಿಕಿರಿಗಳು ಸಾಮಾನ್ಯ. ನಾವು ಬಾಡಿಗೆಗಿದ್ದ ಮನೆ ಕಲ್ಯಾಣಿಯಕ್ಕನ ತಂಗಿ ಲೀಲಕ್ಕನ ಮನೆಯಾದರೂ ಅವರೇ ಒಡತಿಯಾಗಿ ಅದು ಮುಟ್ಟಬಾರದು, ಇದು ಕೀಳಬಾರದು. ಇಲ್ಲಿ ಚೆಲ್ಲಬಾರದು ಮುಂತಾದ ನಿಷೇಧಗಳು ನಮ್ಮನ್ನು ಕಂಗೆಡಿಸಿದ್ದುಂಟು.

ನಮ್ಮ ಮನೆಯ ಮುಂದೆ ಅವರೇ ನೆಟ್ಟ ದಾಸವಾಳದ ಹೂವನ್ನು ಕೂಡಾ ಕೊಯ್ಯುವ ಸ್ವಾತಂತ್ರ್ಯವಿರಲಿಲ್ಲ. ಇದು ಅಮ್ಮನನ್ನು ತುಂಬಾ ನೊಂದುಕೊಳ್ಳುವಂತೆ ಮಾಡಿತು. ಆದರೆ ಆ ಕಲ್ಯಾಣಿಯಕ್ಕ ತೋರಿದ ನಿಷ್ಕಲಂಕ ಪ್ರೀತಿಗೆ ಈ ಸಣ್ಣ ತಕರಾರುಗಳು ನಗಣ್ಯವೆನಿಸಿಬಿಟ್ಟಿದ್ದುವು. ಈ ಪ್ರಪಂಚದಲ್ಲಿ ಹುಟ್ಟಿದ ಪ್ರಾಣಿ ಪಕ್ಷಿಗಳಿಗೂ ತಮ್ಮದೇ ಆದ ಒಂದು ವಾಸಸ್ಥಾನವೆಂಬುದಿದೆ. ಮನುಷ್ಯನಿಗೆ ತಲೆ ಮೇಲೆ ತನ್ನದೇ ಆದ ಒಂದು ಸೂರು ಬೇಡವೇ? ಮನುಷ್ಯ ತನಗೆ ಬೇಕಾದುದನ್ನು ಹುಡುಕಿಕೊಂಡು ಪ್ರಪಂಚವನ್ನೆಲ್ಲಾ ಸುತ್ತಿ ಮನೆಗೆ ಹಿಂದಿರುಗುತ್ತಾನೆ. ಅಲ್ಲಿ ಅವನಿಗೆ ಅದು ಸಿಗುತ್ತದೆ ಎಂಬ ಮಾತಿದೆ. ಅದಕ್ಕಾಗಿ ಮನೆ ಕಟ್ಟುವ ನಿರ್ಧಾರ ಮಾಡಿಯಾದ ಮೇಲೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪಂಚಾಂಗ ಹಾಕಿದ ಮೇಲೆ ಶೂನ್ಯ ಉಳಿತಾಯದ ನಾವು ಬ್ಯಾಂಕಿನಿಂದ ಸಾಲ ತೆಗೆಯುವುದು ಅನಿವಾರ್ಯವಾಯಿತು. ಆಗ ಮನೆ ಕಟ್ಟಲು ಸಾಲ ಪಡೆಯುವುದಕ್ಕೆ ಬ್ಯಾಂಕಿನವರು ಸಾಲ ನೀಡುವುದಕ್ಕೆ ಈಗಿನಷ್ಟು ಸುಲಭ ಮಾರ್ಗವಿರಲಿಲ್ಲ. ಪಂಚಾಂಗಕ್ಕೆ ಅಕ್ಕ ನೀಡಿದ ಹಣ ಖರ್ಚು ಮಾಡಿದ್ದೇನೆ ಎಂದು ಹೇಳಿದ ತಮ್ಮನ ಮಾತು ಕೇಳಿದ ಬ್ಯಾಂಕಿನವರು ಮುಂದೆ ಭವಿಷ್ಯದಲ್ಲಿ ಅಕ್ಕನಿಗೆ ಆ ಮನೆಯ ಬಗ್ಗೆ ಯಾವ ಹಕ್ಕು ಇರುವುದಿಲ್ಲವೆಂದ ಬರೆಸಿ ನನ್ನ ದಸ್ಕತು ಹಾಕಿಸಿದರು. ನನ್ನ ಬೋಳೇತನ ಅರ್ಥವಾದದ್ದು ಆಗ. ಯಾಕೆಂದರೆ ಜಾಗ ಇರುವುದು ತಮ್ಮನ ಹೆಸರಿನಲ್ಲಿ ತಾನೇ? ಉಸಿರೆತ್ತದೆ ದಸ್ಕತ್ತು ಹಾಕಿದೆ. ಸಾಲ ಸಿಕ್ಕಿತು. ಮನೆ ಪೂರ್ಣವಾಯಿತು. ಬಿಕರ್ನಕಟ್ಟೆಯ ಬಾಡಿಗೆ ಮನೆಯಿಂದ ಕುಡುಪು ಮನೆಗೆ ಸ್ಥಳಾಂತರಗೊಂಡೆವು. ತಮಾಷೆಯೇನು ಗೊತ್ತಾ? ಮನೆಯ ಸಾಲದ ಕಂತು ಪ್ರತಿ ತಿಂಗಳು ಕೊನೆಯವರೆಗೂ ಕಟ್ಟುತ್ತಿದ್ದವಳು ನಾನು. ಅಕ್ಕನಿಂದ ಯಾವ ತಕರಾರು ಬಂದಿಲ್ಲವೆಂದು ಖಾತ್ರಿಯಾದ ಮೇಲೆ ಅಂದರೆ ಸುಮಾರು ಹತ್ತು ವರ್ಷ ಕಾಲ ಕಂತು ಕಟ್ಟಿದ ಮೇಲೆಯೇ ಜಾಗದ ದಾಖಲೆಗಳು ತಮ್ಮನ ವಶಕ್ಕೆ ಬಂದುವು. ಸಂಬಂಧ ಉಳಿಯಬೇಕಾದರೆ ಕೆಲವು ಅಪಸ್ವರಗಳಿಗೆ ಕೆಪ್ಪಾಗಿರುವುದೇ ಕ್ಷೇಮವಲ್ಲವೇ? ಜೀವನಾನುಭವ ಎಂದರೆ ಬೇರೇನಲ್ಲ. ಹಲವು ತಪ್ಪುಗಳಿಂದ ಕಲಿಯುವ ಪಾಠಗಳೇ ಆಗಿವೆ ಅಲ್ಲವೇ?

(ಮುಂದುವರಿಯಲಿದೆ)