ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ಮೂರು
ಮಿತ್ರತ್ವದಲ್ಲಿ ಹಣದ ಸಾಲ ವ್ಯವಹಾರಗಳು ಮನಸ್ಸು ಮುರಿಯುವುದಕ್ಕೂ, ಸಂಬಂಧಗಳು ಬಿರುಕು ಬಿಡುವುದಕ್ಕೂ ಕಾರಣವಾಗುತ್ತದೆಂಬುದು ಅನುಭವದ ಸತ್ಯ. ನನ್ನ ಆಪತ್ಕಾಲದಲ್ಲಿ ಸಾಲ ನೀಡಿದ ಲಕ್ಷ್ಮೀ ಟೀಚರೊಂದಿಗಿನ ವ್ಯವಹಾರ ಮಾತ್ರ ಹಾಗಿರಲಿಲ್ಲ. ನನ್ನ ಆಪ್ತ ಬಂಧುವಿನೊಂದಿಗೆ ಸಂಬಂಧವಾದುದರಿಂದ ಯಾವ ಕ್ಷಣದಲ್ಲಿ ನನಗೆ ಹಣದ ಅಗತ್ಯವಿದ್ದರೂ ಎಲ್ಲಿಂದಲಾದರೂ ಸಂಗ್ರಹಿಸಿ ತಂದು ಕೊಡುತ್ತಿದ್ದ ಅವರ ಪ್ರೀತಿಗೆ ಮಣಿಯುತ್ತೇನೆ. ಯಾವುದೇ ಸ್ವಾರ್ಥದ ಲೇಪವಿಲ್ಲದೆ ಮನುಷ್ಯರು ಇಷ್ಟೊಂದು ಪ್ರೀತಿಸಲು ಸಾಧ್ಯವೇ? ಎಂದು ಸೋಜಿಗಪಟ್ಟಿದ್ದೇನೆ. ಯಾವ ಜನ್ಮದ ಋಣಾನುಬಂಧವೋ ಎಂದು ನಾನೇದರೂ ಡೈಲಾಗು ಉದುರಿಸಿದರೆ “ಹೇ, ಸಾಕು. ಸುಮ್ಮನಿರು ಆ ಜನ್ಮ ಈ ಜನ್ಮ, ಮುಂದಿನ ಜನ್ಮವೆಂದು ತೌಡು ಕುಟ್ಟಬೇಡ. ಇರುವ ಇದೊಂದೇ ಜನ್ಮವನ್ನು ನೆಮ್ಮದಿಯಿಂದ ಕಳೆಯದೆ ಸಾಲವನ್ನು ಧಾರಾವಾಹಿಯಂತೆ ಮುಂದಿನ ಜನ್ಮಕ್ಕೆಂದು ಗಂಟು ಕಟ್ಟಿ ಇಡಬೇಡ. ನಾಳೆಯ ಬಗ್ಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಷಯಗಳ ಬಗ್ಗೆ ಕಲ್ಪಿತ ಕತೆ ಕಟ್ಟಿ ಇಂದಿನ ನೆಮ್ಮದಿಯನ್ನು ಕಳಕೊಳ್ಳುವುದು ಬೇಡ ಆಯ್ತಾ” ಎಂದು ಅಪ್ಪಟ ಮಾನವತಾವಾದಿಯಾಗಿ ಮಾತಾಡುತ್ತಿದ್ದರು. ಇಂತಹ ಬಾಂಧವ್ಯ ನನ್ನ ಪಾಲಿಗೆ ದೊಡ್ಡ ಸೌಭಾಗ್ಯವೇ ಸರಿ. ಆದುದರಿಂದ ನನ್ನ ಮನೆಯ ಕನಸು ಬೇಗನೇ ನನಸಾಯಿತು. ನಾನು ಮನೆ ಕಟ್ಟುವ ನಿರ್ಧಾರ ಮಾಡುವಾಗ ಯಾರಲ್ಲೂ ಕೈಚಾಚಬಾರದೆಂದು ನಿರ್ಧರಿಸಿದ್ದೆ. ನನ್ನ ತಮ್ಮನ ಮದುವೆಯ ಮರುದಿನವೇ ನನ್ನ ಬಂಧುಗಳೊಬ್ಬರು ನನ್ನಲ್ಲಿ ಸಾಲ ಕೇಳಲು ಬಂದಿದ್ದರು. ತನ್ನ ಸ್ವಂತ ಸಾಮರ್ಥ್ಯದಲ್ಲೇ ಏನೋ ಒಂದು ಒಳ್ಳೆಯ ಕೆಲಸ ಮಾಡಿದ್ದಾಳೆ ಎಂಬ ಹೊಗಳಿಕೆಯ ಜೊತೆಯಲ್ಲೇ ಇವಳನ್ನು ಎಷ್ಟು ಸುಲಿಗೆ ಮಾಡಬಹುದು ಎಂದು ಕಾಯುತ್ತಿರುವ ಬಂಧುಗಳೂ ನನಗಿದ್ದಾರೆ ಎಂದು ತಿಳಿದ ಮೇಲೆ ನಾನು ನಗಬೇಕೋ ಅಳಬೇಕೋ ಎಂದು ತಿಳಿಯದೆ ಗೊಂದಲಕ್ಕೆ ಒಳಗಾದುದುಂಟು. ಬಂಧುಗಳೊಂದಿಗಿನ ಒಡನಾಟ ನನಗೂ ಇಷ್ಟವೇ. ಆದರೆ ಇಂತಹ ಬಂಧುಗಳು ನನ್ನ ಪಾಲಿಗೆ ಬಿಸಿ ತುಪ್ಪದಂತೆ ನುಂಗಲಾರೆ, ಉಗುಳಲಾರೆ ಎಂಬ ಗೊಂದಲದಲ್ಲಿ ಕೆಡವಿದ್ದೂ ಇದೆ. ನನ್ನ ಸೋದರಮಾವ ಬಾಲಕೃಷ್ಣ ಬೆಂಗಳೂರಿನಲ್ಲಿದ್ದರು. ಮಂಗಳೂರಿಗೆ ವರ್ಗವಾದ ಸಮಯದಲ್ಲಿ ಬಿಕರ್ನಕಟ್ಟೆಯ ನಮ್ಮ ಮನೆಯಲ್ಲಿ ಸ್ವಲ್ಪ ಸಮಯ ನಮ್ಮೊಂದಿಗಿದ್ದರು. ಈ ಮಾವ ನನ್ನ ಎಲ್ಲಾ ಬಂಧುಗಳಿಗಿಂತಲೂ ನನಗೆ ತುಂಬಾ ಆತ್ಮೀಯರಾಗಿದ್ದರು. ನಾನು ಹೈಸ್ಕೂಲಲ್ಲಿ ಕಲಿಯುತ್ತಿರುವಾಗಲೇ ಅವರೊಂದಿಗೆ ಪತ್ರ ವ್ಯವಹಾರ ನಡೆಸುತ್ತಿದ್ದೆ. ಸೋದರ ಸೊಸೆಗೆ ಮನೆ ಕಟ್ಟುವುದಕ್ಕೆ ಸಹಾಯವಾಗಲಿ ಎಂದು ಆ ಮಾವ ನನಗೊಂದು ಚೆಕ್ ಕಳುಹಿಸಿಕೊಟ್ಟರು. ನಾನು ಕೇಳದೇ ನೀಡಿದ ಈ ಮೊತ್ತವು ನನಗೆ ತುಂಬಾ ಸಹಾಯವಾಯಿತು ಮಾತ್ರವಲ್ಲ ತುಂಬಾ ಸಂತೋಷವಾಯಿತು. ಅದರ ಮುಂದಿನ ತಿಂಗಳಲ್ಲಿ ಬೆಂಗಳೂರಿನಿಂದ ಬಂದ ಉಮೇಶಣ್ಣ ನಮ್ಮ ಮನೆಗೂ ಬಂದಿದ್ದರು. ಲೋಕಾಭಿರಾಮವಾಗಿ ಮಾತಾಡುತ್ತಾ “ನಿನಗೆ ಮಾವ ಹಣ ಕೊಟ್ಟಿದ್ದಾರಾ? ಅತ್ತೆ ಮಾವನಿಗೂ ಈ ವಿಷಯದಲ್ಲಿ ಜಗಳವಾದುದು ನಾನು ಹೋದಾಗ ತಿಳಿಯಿತು” ಎಂದರು. ನನಗೆ ಧಸಕ್ಕೆಂದಿತು. ವಾತ್ಸಲ್ಯಮೂರ್ತಿಯೂ, ಬುದ್ಧಿವಂತೆಯೂ ಆದ ಅತ್ತೆ ಈ ರೀತಿ ವರ್ತಿಸಲು ಕಾರಣವೇನು? ಪ್ರಾಯಶಃ ಅತ್ತೆಗೆ ಹೇಳದೇ ಹಣ ಕೊಟ್ಟಿರಬಹುದೇ? ಆದರೂ ನನಗೆ ಕೊಟ್ಟ ಬಗ್ಗೆ ಅವರು ತಕರಾರೆತ್ತಲು ಬೇರೇನು ಕಾರಣವಿದೆ? ನನ್ನ ಮನಸ್ಸು ಕುದಿವ ಕೊಪ್ಪರಿಗೆಯಂತಾಯಿತು. ಈ ಸಹಾಯವು ನನಗೆ ಸೆರಗಿನಲ್ಲಿ ಕಟ್ಟಿಕೊಂಡ ಕೆಂಡದಂತೆ ಕಂಡಿತು. ಕೆಲವು ದಿನ ಯೋಚಿಸಿ ಒಂದು ನಿರ್ಧಾರಕ್ಕೆ ಬಂದೆ. ನನ್ನ ಶಿಷ್ಯೆ ಡಾ. ಪೂರ್ಣಿಮಾ ಭಟ್ ಬೆಂಗಳೂರಿನಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಳು. ಅವಳಿಗೆ ನನ್ನ ಮಾವನ ಮನೆ ಗೊತ್ತಿತ್ತು. ಮುಂದಿನ ತಿಂಗಳಲ್ಲೇ ಆಕೆ ಊರಿಗೆ ಬರುವವಳಿದ್ದಳು. ಅವಳನ್ನು ಭೇಟಿಯಾಗಿ ವಿಷಯ ತಿಳಿಸಿದೆ. ನನ್ನ ಅತ್ತೆಗೆ ಹಣದ ತುರ್ತು ಅಗತ್ಯವಿರಬಹುದು. ಆದುದರಿಂದ ಈ ಹಣವನ್ನು ಅತ್ತೆಗೆ ತಿಳಿಯದಂತೆ ಮಾವನ ಕೈಯಲ್ಲಿ ಕೊಟ್ಟು ಬರಬೇಕೆಂದು ಹೇಳಿದೆ. ಆಕೆ ಅಂತೆಯೇ ಅಲ್ಲಿಗೆ ಹೋದವಳು ಮಾವನನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ಮಾವ ಬೇಡ ಬೇಡವೆಂದು ಎಷ್ಟೇ ತಿರಸ್ಕರಿಸಿದರೂ ಬಲವಂತವಾಗಿ ಹಣವನ್ನು ಅವರ ಕೈಯಲ್ಲಿಟ್ಟು ಬಂದ ದಿನವೇ ನನಗೆ ಪತ್ರ ಬರೆದು ತಿಳಿಸಿದಳು. ಅಬ್ಬಾ ಎಂದು ತಲೆಭಾರ ಇಳಿಸಿದಷ್ಟು ಖುಷಿಯಾಯಿತು. ಬಂಧುತ್ವದಲ್ಲೂ ಎಷ್ಟೊಂದು ವೈವಿಧ್ಯವಿದೆಯಲ್ಲಾ ಎಂದು ಬೆರಗಾಗುವ ಭಾಗ್ಯ ನನ್ನದಾಯಿತು.
ಇನ್ನೊಬ್ಬ ಸೋದರಮಾವ ಶ್ರೀನಿವಾಸ ಎಂಬವರು ಮದ್ರಾಸಿನಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದರು. ಅಲ್ಲಿನ ಬ್ಯಾಂಕೊಂದರಲ್ಲಿ ಕೊಲೆ ಮಾಡಿ ಹಣ ದರೋಡೆ ಮಾಡಿದ ಮಂಗಳೂರಿನ ಯುವಕನ ವಿಚಾರಣೆಗಾಗಿ ವೃತ್ತಿನಿಮಿತ್ತ ಬಂದವರು ಬಿಕರ್ನಕಟ್ಟೆಯ ನಮ್ಮ ಮನೆಗೆ ಬಂದಿದ್ದರು. ನನ್ನ ತಂದೆ ಬದುಕಿರುವವರೆಗೂ ಅವರು ನಮ್ಮನ್ನು ಭೇಟಿ ಮಾಡಿರಲಿಲ್ಲ. ನಾನಂತೂ ಅವರನ್ನು ಕಂಡೇ ಇರಲಿಲ್ಲ. ಚೆನ್ನೈಯ ಪೊಲೀಸ್ ಸಿಬ್ಬಂದಿಯ ಸಮೇತ ಬಂದವರು ಈ ಕೊಲೆಕೇಸಿನ ವಿವರಗಳನ್ನು ಪಡೆಯಲಿಕ್ಕಾಗಿ ಮಂಗಳೂರಿನಲ್ಲಿ ಹೊಟೇಲಿನಲ್ಲಿ ವಾಸ್ತವ್ಯವಿದ್ದರು. ಮಧ್ಯೆ ಬಿಡುವಿನಲ್ಲಿ ಬಿಕರ್ನಕಟ್ಟೆಯ ನಮ್ಮ ಮನೆಗೆ ಬಂದಿದ್ದರು. ಕೊಲೆಗಾರ ಹುಡುಗನ ತಾಯಿ ಶಿಕ್ಷಕಿಯಾಗಿದ್ದು ಮಗಳು ಹಾಸನದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದಳು. ಅವರನ್ನು ವಿಚಾರಣೆಗೊಳಪಡಿಸಲು ಮಾವ ಅವರನ್ನು ಭೇಟಿಯಾಗಿದ್ದರು. ದುರಂತವೆಂದರೆ ಆ ತಾಯಿ ಮತ್ತು ಮಗಳು, ಮಗ ಮಾಡಿದ ಅವಮಾನವನ್ನು ತಾಳಲಾರದೆ ನೇತ್ರಾವತಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ವಾಭಿಮಾನಿಗಳಾದ ಈ ಇಬ್ಬರು ಹೆಂಗಸರ ದಾರುಣ ಅಂತ್ಯವು ಆ ಕಾಲದಲ್ಲಿ ಮಂಗಳೂರಿನ ಜನತೆಯಲ್ಲಿ ಶೋಕದ ಅಲೆಯನ್ನೇ ಹಬ್ಬಿಸಿತ್ತು. ಮಗನ ದುರಾಸೆ, ಅಪ್ಪನ ಒತ್ತಾಸೆ ಎರಡು ಮುಗ್ಧ ಜೀವಗಳನ್ನು ಬಲಿ ತೆಗೆದುಕೊಂಡಿತು. ಈ ಕೊಲೆ ಕೇಸಿನಲ್ಲಿ ಸಹಕರಿಸಿದ ತಂದೆಯನ್ನು ಬಂಧಿಸಿ ಕೊಂಡೊಯ್ದರು. ಕೊನೆಗೆ ಅವರಿಗೆ ಜೀವಾವಧಿ ಶಿಕ್ಷೆಯೂ ಆಯಿತು. ಇದು ಯಾಕೆ ಹೇಳಿದೆನೆಂದರೆ ಹೀಗೆ ನಮ್ಮ ಮನೆಗೆ ಬರಲು ಪ್ರಾರಂಭಿಸಿದ ಶೀನ ಮಾವ ಮತ್ತೆ ಆಗಾಗ ನಮ್ಮಲ್ಲಿಗೆ ಬರುತ್ತಿದ್ದರು. ನಾವು ಮನೆ ಕಟ್ಟುವ ಸಮಯದಲ್ಲಿ ಅವರೂ ಒಂದು ಮೊತ್ತವನ್ನು ನೀಡಿ ಸಹಕರಿಸಿದರು. ಈ ಮಾವನಿಂದಲೂ ನಾನು ಸಹಾಯ ನಿರೀಕ್ಷಿಸಿರಲಿಲ್ಲ. ಬೇಡ ಎನ್ನುವಷ್ಟು ಸ್ವಾಭಿಮಾನ ನನ್ನಲ್ಲಿರಲಿಲ್ಲ. ನನ್ನಮ್ಮನಿಗೆ ಈ ಶೀನ ಮಾವನ ಬಗ್ಗೆ ಯಾವಾಗಲೂ ಒಂದು ಗುಮಾನಿಯಿತ್ತು. ಅವನ ಬುದ್ಧಿ ಸರಿಯಿಲ್ಲವೆಂದು ಬಾಲ್ಯದಲ್ಲಿ ಮನಸ್ಸಲ್ಲಿ ಕೂತದ್ದು ೪೫ – ೫೦ ವರ್ಷ ಕಳೆದ ಮೇಲೂ ಆ ಮಾವನ ಬಗ್ಗೆ ಆತ್ಮೀಯ ಭಾವವಿರಲಿಲ್ಲ. ಶೀನ ಮಾವ ಮನೆ ಕಟ್ಟುವುದಕ್ಕೆ ಹಣ ಕೊಟ್ಟರು ಎಂದಾಗ “ಯಾಕೆ ತೆಗೊಂಡೆ?” ಎಂದು ನನ್ನನ್ನೇ ದುರುಗುಟ್ಟಿ ನೋಡಿ ಪ್ರಶ್ನಿಸಿದ್ದರು. ಮಹಾಪುಂಡನಂತಿದ್ದ ಶೀನ ಮಾವ ಪೊಲೀಸ್ ಇಲಾಖೆಗೆ ಸೇರಿದ್ದು ಮುಂದೆ ದೊಡ್ಡ ಹುದ್ದೆಗೇರಿದ್ದು ಈ ಸಾಧನೆಗಳಾವುವೂ ನನ್ನ ಅಮ್ಮನಿಗೆ ತಿಳಿದಿರಲಿಲ್ಲ. ಯಾಕೆಂದರೆ ಸಂಪರ್ಕವೇ ಇರಲಿಲ್ಲವಲ್ಲ. ಶೀನ ಮಾವನ ಮದುವೆ ಊರಲ್ಲಿ ನಡೆಯಿತು. ಅಲ್ಲಿಗೆ ಹೋದಾಗಲೇ ಗೊತ್ತು ತಮ್ಮನೊಬ್ಬ ಮದ್ರಾಸಿನಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾನೆಂದು. ಎಲ್ಲೋ ಕೆಲಸದಲ್ಲಿದ್ದಾನಂತೆ ಎಂದು ಹೇಳುವುದನ್ನು ಕೇಳಿದ್ದ ಅಮ್ಮ ಮಾವನ ಮುಖ ನೋಡಿದ್ದು ೨೦ ವರ್ಷಗಳ ಬಳಿಕ ಅವರ ಮದುವೆಯಂದೇ. ಅಂತಹ ಮಾವ ಮತ್ತೆ ಈಗ ಅಕ್ಕನ ಬಳಿಗೆ ಬಂದಾಗ ಅಮ್ಮನಿಗೆ ಸಂತೋಷವಾಗಬೇಕಿತ್ತಲ್ಲಾ. ಆಗಲಿಲ್ಲ. ಯಾಕೆಂದರೆ ಅಮ್ಮನ ಮದುವೆಯ ಸಮಯದಲ್ಲಿ ಶೀನ ಮಾವ ೧೭-೧೮ ವರ್ಷದ ಹುಡುಗ. ಅಮ್ಮನಿಗೆ ಮದುವೆಗೆ ಸುಂದರ ಮಾವ ಅರ್ಧ ಪವನಿನ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ನೀಡಿದ್ದರಂತೆ. ಆ ನಾಣ್ಯವು ಇವರು ಗಂಡನ ಮನೆಗೆ ಹೋಗುವಾಗ ಪೆಟ್ಟಿಗೆಯಲ್ಲಿ ಸೀರೆ ತುಂಬಿಸುವಾಗಲೇ ಕಾಣೆಯಾಗಿತ್ತಂತೆ. ಅದನ್ನು ಎಗರಿಸಿದವನು ಶೀನ ಮಾವನೇ ಎಂದು ಅಮ್ಮನ ವಾದ. ಅದು ನಿಜವಿರಲೂಬಹುದು. ಹಾಗೆ ಮನೆಬಿಟ್ಟು ಹೋದ ಶೀನಮಾವ ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆಯೇ ವರ್ಷದ ಬಳಿಕ ಮನೆಗೆ ಬಂದರಂತೆ. ಈ ಪ್ರೀತಿಯ ತಮ್ಮ ತನ್ನ ನಿವೃತ್ತಿಯ ಸಮಯದಲ್ಲಿ ಮತ್ತೆ ಅಕ್ಕನ ಮನೆಗೆ ಬಂದಾಗಲೂ ಅಮ್ಮನ ಮನಸ್ಸಿನ ಕಹಿ ಕಡಿಮೆಯಾಗಿರಲಿಲ್ಲ. ಆದರೂ ಮನೆಗೆ ಬಂದಾಗ ಪ್ರೀತಿಯ ಸತ್ಕಾರಕ್ಕೇನೂ ಅಮ್ಮ ಕೊರತೆ ಮಾಡಲಿಲ್ಲ.
ನಮ್ಮ ಹೊಸ ಮನೆ ಗೃಹಪ್ರವೇಶವಾಗಿ ಎರಡು ತಿಂಗಳು ಕಳೆದಿರಬಹುದು. ಮಾವ ಉದ್ಯೋಗದಿಂದ ನಿವೃತ್ತರಾಗಿದ್ದರು. ಒಂದು ದಿನ ಅವರ ಕುತ್ತಿಗೆಯ ಸರವೊಂದನ್ನು ನನ್ನ ಕೈಗಿತ್ತು “ಇದನ್ನು ಮಾರಿ ನನಗೆ ಹಣ ತಂದುಕೊಡಬಲ್ಲೆಯಾ?” ಎಂದು ಕೇಳಿದಾಗ ನಾನು ಸ್ತಂಭೀಭೂತಳಾದೆ. “ಅಷ್ಟು ಅರ್ಜೆಂಟ್ ಇದೆಯಾ?” ಎಂದಷ್ಟೇ ಕೇಳಿ ಮರುದಿನವೇ ನನ್ನ ಬಳೆಗಳನ್ನು ಮಾರಿ ಮಾವ ನನಗೆ ಮನೆ ಕಟ್ಟುವಾಗ ಕೊಟ್ಟ ಹಣವನ್ನು ಸರದ ಸಮೇತ ಅವರ ಕೈಯಲ್ಲಿಟ್ಟು “ಇದನ್ನು ಮಾರಬೇಡಿ. ನಿಮ್ಮ ಕುತ್ತಿಗೆಯಲ್ಲಿರಲಿ” ಎಂದೆ. ವಿಷಾದದಿಂದ ಒಂದು ಕ್ಷಣ ನನ್ನನ್ನೇ ನೋಡಿದ ಮಾವನ ಅಂತರಂಗವನ್ನು ನನಗೆ ಓದಲಾಗಲಿಲ್ಲ. ದುಗುಡಗಳ ಬೆಟ್ಟವನ್ನೇ ಹೊತ್ತುಕೊಂಡದ್ದು ನಮಗೆ ಗೊತ್ತಿರಲಿಲ್ಲ.
ಚೆನ್ನೈಯ ಕೊಲೆ ಕೇಸಿನ ವಿಚಾರಣೆಯ ಸಮಯದಲ್ಲೇ ಯಾವುದೋ ಕಾರಣಕ್ಕೆ ದುಡುಕಿದ ಮಾವ ಒಬ್ಬ ಪೊಲೀಸ್ ಪೇದೆಗೆ ಗುಂಡು ಹಾಕಿ ಕೊಲೆ ಮಾಡಿದ್ದರಂತೆ. ಆದುದರಿಂದ ಅವರು ನಿವೃತ್ತರಾದರೂ ಅವರಿಗೆ ಪೆನ್ಶನ್ ಆಗಲೀ ಯಾವುದೇ ಸೇವಾ ಸೌಲಭ್ಯವಾಗಲೀ ಸಿಗಲಿಲ್ಲವೆಂದು ನಮಗೆ ಅವರು ತೀರಿಕೊಂಡ ಮೇಲೆಯೇ ಗೊತ್ತಾಯಿತು. ನಿವೃತ್ತರಾಗುವಷ್ಟರಲ್ಲಿ ಹಿರಿಮಗನೂ ತೀರಿಹೋಗಿ, ಪತ್ನಿಯೂ ತೀರಿಹೋಗಿ ಇನ್ನು ಕಲಿಯುತ್ತಿರುವ ಕಿರಿಮಗನೊಂದಿಗೆ ವಾಸವಾಗಿದ್ದ ಮಾವನ ಆರೋಗ್ಯ ದಿನೇ ದಿನೇ ಕ್ಷೀಣಿಸಿ ನಿವೃತ್ತರಾದ ವರ್ಷದೊಳಗೇ ತೀರಿಕೊಂಡು ಬಿಟ್ಟಿದ್ದರು. ಅವರು ಅಷ್ಟು ಬೇಗ ನಿಧನರಾಗುವರೆಂದು ನಾವು ಯಾರೂ ಭಾವಿಸಿರಲಿಲ್ಲ. ಅಕ್ಕನ ಮಗಳಿಗೆ ಸಹಾಯ ಮಾಡಬೇಕೆಂಬ ಇಚ್ಛೆಯೇನೋ ಅವರಲ್ಲಿ ತುಂಬಾ ಇತ್ತು. ಆದರೆ ಸಮಯ ಮತ್ತು ಪರಿಸ್ಥಿತಿಗಳು ಅವರನ್ನು ನಿಸ್ಸಹಾಯಕರನ್ನಾಗಿ ಮಾಡಿಬಿಟ್ಟಿತ್ತು. ಮೃತ್ಯು ಮತ್ತು ಅದೃಷ್ಟ ಇವೆರಡೂ ಕೂಡಾ ಮನುಷ್ಯ ಜೀವನದ ಮಹತ್ವದ ಘಟನೆಗಳು. ಇವುಗಳ ಮುಂದೆ ಯಾರ ಆಟವೂ ಪ್ರಯತ್ನವೂ ನಿಷ್ಪಲ. ಅವರ ಜೀವನದಲ್ಲೆದ್ದ ಸುಂಟರಗಾಳಿ ಅವರನ್ನು ಬೇರು ಸಹಿತ ಕಿತ್ತೆಸೆದಂತಾಯಿತು.
ನನ್ನ ಬದುಕಿನ ಪಥದಲ್ಲಿ ನಾನಿಡುವ ಹೆಜ್ಜೆಗಳಿಗೆಲ್ಲಾ ಬಲ ತುಂಬಿದವರಲ್ಲಿ ನನ್ನ ಹೆಲೆನ್ ಟೀಚರೂ ಮುಖ್ಯರಾಗುತ್ತಾರೆ. ನನ್ನ ಪ್ರಗತಿಗೆ ಏಣಿ ಮೆಟ್ಟಲಾಗಿ ಸಹಕರಿಸಿದವರಲ್ಲಿ ಕುಟುಂಬದ ಬಂಧುಗಳಿಗಿಂತ ಹೊರಗಿನವರೇ ಹೆಚ್ಚು. ಇದು ಯಾಕೆ ಹೀಗೆ ಎಂದು ಯೋಚಿಸಿ ಗೊಂದಲಕ್ಕೊಳಗಾಗಿದ್ದೇನೆ. ನನ್ನ ಪ್ರಗತಿಯನ್ನು ಕಂಡು ಖುಷಿ ಪಟ್ಟವರಲ್ಲಿಯೂ ಕುಟುಂಬದವರಿಗಿಂತ ಹೊರಗಿನವರೇ ಹೆಚ್ಚು. ನನ್ನ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳು ನಿಷ್ಪ್ರಯೋಜಕವಾದ ಕೆಲಸವೆಂದೇ ಭಾವಿಸಿದ್ದರು ನನ್ನ ಬಂಧುಗಳು. ನನ್ನ ಸರಳತೆಯು ಅವರಿಗೆ ಲೇವಡಿಯ ವಿಷಯವಾಗಿತ್ತು. ಥಳಕು ಬಳಕಿನ ಪ್ರಪಂಚದಲ್ಲಿ ನನ್ನಂತಹವರು ನಾಲಾಯಕ್ಕುಗಳು ಎಂದೇ ಬಹುತೇಕ ಮಂದಿಯ ಅಭಿಪ್ರಾಯವಾಗಿತ್ತು. ಅದರಲ್ಲೂ ದೇವರು, ದೈವ, ಗುಡಿ ದೇವಸ್ಥಾನಗಳ ಸಹವಾಸವನ್ನೇ ನಾನು ಕಡಿಮೆ ಮಾಡಿದ ಮೇಲೆ ನಾನು ಅವರಿಗೆ ಒಂದು ವಿಚಿತ್ರ ಪ್ರಾಣಿಯಂತೆ ಕಾಣತೊಡಗಿದೆ. ಕೆಲವರಿಗೆ ಅಹಂಕಾರಿಯೆಂದೂ, ಕೆಲವರಿಗೆ ಪೆದ್ದಿಯೆಂದೂ, ಕೆಲವರಿಗೆ ಮೂರ್ಖಳಂತೆಯೂ ಕಾಣತೊಡಗಿದೆ. ನನ್ನ ಚಟುವಟಿಕೆಗಳೆಲ್ಲಾ ಬುದ್ಧಿ ಕೆಟ್ಟವರು ಮಾಡುವ ಚಟುವಟಿಕೆಗಳೆಂದೇ ಕೆಲವರಿಗೆ ಭಾಸವಾಗತೊಡಗಿತು. ಈಗ ಫೋಟೋದ ಮುಂದೆ ನಿಂತು ಅಳುವುದನ್ನು ನಿಲ್ಲಿಸಿದೆ. ನನ್ನ ಕಷ್ಟ ದುಃಖಗಳಿಗೆ ಯಾರೂ ಕಾರಣರಲ್ಲ. ನನ್ನಿಂದಾದ ವಿವೇಕಹೀನವಾದ ತಪ್ಪುಗಳೇ ನಾನಿಟ್ಟ ಹೆಜ್ಜೆಗಳಿಗೆ ಕಾರಣವೆಂದು ತಿಳಿದ ಮೇಲೆ ಮನಸ್ಸು ಗಟ್ಟಿಗೊಂಡಿತು. ಹೀಗೆ ಗಟ್ಟಿಗೊಳ್ಳುವುದಕ್ಕೂ ನನ್ನ ಬಂಧುಗಳೇ ಪರೋಕ್ಷ ಕಾರಣರೆಂಬುದನ್ನು ಹೇಗೆ ಮರೆಯಲಿ?
(ಮುಂದುವರಿಯಲಿದೆ)
ಅಚ್ಚುಕಟ್ಟಾದ ನಿರೂಪಣೆಯ ಜೊತೆಗೇ ಸ್ವವಿಮರ್ಶೆ ಹಾಗೂ ಜೀವನಾನುಭವದ ವೈಚಾರಿಕ ಹೊಳಹಿನ ದರ್ಶನವೀವ ಲೇಖಕಿಯ ಬರಹ , ಮಹತ್ವಪೂರ್ಣ ಹಾಗೂ ಆಪ್ಯಾಯಮಾನ.
– Shyamala Madhav.
ಲೇಖಕಿಯ ಒಂದೊಂದು ಅನುಭವವೂ ಅನೇಕರ ಕೌಟುಂಬಿಕ ಅನುಭವಗಳನ್ನು ಪ್ರತಿನಿಧಿಸುವಂತಿದೆ. ನಿರೂಪಣೆಯಂತೂ ಅತ್ಯುತ್ತಮ. ಕೊನೆಯ ಪ್ಯಾರಾ ಬಹಳ ಅರ್ಥಗರ್ಭಿತವಾಗಿದೆ, ಏಕೆಂದರೆ ಅದೇ ಪರಿಸ್ಥಿತಿ ನಮ್ಮೊಳಗೂ, ಎಲ್ಲೆಲ್ಲೂ ಇದೆ.
ರೋಹಿಣಿ ಟೀಚರ್ ಅವರನ್ನು ಒಮ್ಮೆ ಬೇಟಿ ಮಾಡಬೇಕು ಅನ್ನಿಸುತ್ತದೆ. ಅವರ ‘ಸ್ವಾಭಿಮಾನಕ್ಕೆ’ ಕೈ ಮುಗಿಯಬೇಕು