ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ನಾಲ್ಕು
ಕುಡುಪು ಎಂಬ ಊರಿಗೆ ದೊಡ್ಡ ಹೆಸರು ಬಂದದ್ದು ಕುಡುಪಿ ವಾಸುದೇವ ಶೆಣೈ ಮತ್ತು ಕುಡುಪು ಮಂದಾರದ ಕೇಶವ ಭಟ್ಟರಿಂದ. ವಾಸುದೇವ ಶೆಣೈಯವರು ಕುಡ್ಪಿಯಲ್ಲಿ ಎಲ್ಲಿದ್ದರು ಹೇಗಿದ್ದರು ಎಂದು ನಾನರಿಯೆ. ಮಂದಾರ ಕೇಶವ ಭಟ್ಟರನ್ನು ಮಾತ್ರ ನಾನು ಬಾಲ್ಯದಿಂದಲೂ ಬಲ್ಲೆ. ಅವರ ಮಗಳು ಶ್ಯಾಮಲಾ ಮತ್ತು ನಾನು ಒಟ್ಟಿಗೆ ಹಿಂದಿ ಕಲಿತು ಪರೀಕ್ಷೆ ಕಟ್ಟಿದ್ದೆವು. ಈಗ ನಾನು ಕುಡುಪಿನಲ್ಲಿ ಹೊಸ ಮನೆಯಲ್ಲಿ ಒಕ್ಕಲಾದ ಮೇಲೆ ಮಂದಾರ ನನಗೆ ನೆರೆಮನೆಯೇ ಆಯಿತು.
ಮರಾಠಿ ಮಾತೃಭಾಷೆಯ ಈ ಕರ್ಹಾಡ ಬ್ರಾಹ್ಮಣ ಕುಟುಂಬವು ಕೇಶವ ಭಟ್ಟರ ಎರಡು ತಲೆಮಾರುಗಳ ಹಿಂದೆ ಇಲ್ಲಿಗೆ ವಲಸೆ ಬಂದು ಕೃಷಿಭೂಮಿಯನ್ನು ಕೊಂಡು ವೃತ್ತಿನಿರತರಾಗಿದ್ದರು. ೧೯೧೯ರಲ್ಲಿ ಹುಟ್ಟಿದ ಕೇಶವ ಭಟ್ಟರು ಸ್ಥಳೀಯ ಬೋರ್ಡು ಶಾಲೆ ಮತ್ತು ಕೊಂಚಾಡಿಯ ಶಾಲೆಯಲ್ಲಿ ಏಳನೆಯ ತರಗತಿಯವರೆಗೆ ಮಾತ್ರ ಸಾಂಪ್ರದಾಯಿಕ ಶಿಕ್ಷಣ ಪಡೆದಿದ್ದರಷ್ಟೇ. ಅನಂತರ ಅವರು ಗಳಿಸಿದ ಜ್ಞಾನವೆಲ್ಲಾ ಸ್ವಯಾರ್ಜಿತ. ಸಾಹಿತ್ಯ, ಸಂಗೀತ, ಯಕ್ಷಗಾನಗಳಲ್ಲಿ ಗಂಭೀರವಾದ ಅಧ್ಯಯನ ನಡೆಸಿದರು. ೧೯೫೨ರಲ್ಲಿ ಕನ್ನಡ ವಿದ್ವಾನ್ ಪರೀಕ್ಷೆಯಲ್ಲಿ ಪಾಸಾಗಿ ಕೂಳೂರಿನ ಸೈಂಟ್ ಆಂಟನಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಯಕ್ಷಗಾನದ ಅರ್ಥದಾರಿಯಾಗಿಯೂ, ಭಾಗವತಿಕೆಯಲ್ಲಿಯೂ ಪಳಗಿದ ಅವರು ಕುಡುಪು, ವಾಮಂಜೂರುಗಳಲ್ಲಿ ಯಕ್ಷಗಾನಕೂಟಗಳ ರಚನೆಗೆ ಕಾರಣರಾದರು. ಫರಂಗಿಪೇಟೆಯ ಡಾ. ಹಸನಬ್ಬ ಒಡೆಯರ್ ಸ್ಥಾಪನೆ ಮಾಡಿದ ಯಕ್ಷಗಾನ ಬಳಗದ ಖಾಯಂ ಸದಸ್ಯರಾಗಿ ಹಲವಾರು ಮಂದಿ ಅರ್ಥದಾರಿಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಿದರು. ಒಡೆಯರ್ ಮತ್ತು ಮಂದಾರರ ಅನ್ಯೋನ್ಯತೆಯ ಕುರುಹಾಗಿ ಹಸನಬ್ಬರು ನೀಡಿದ ಕೈಗಡಿಯಾರವನ್ನು ತಾನು ಬದುಕಿರುವವರೆಗೂ ಕಟ್ಟಿಕೊಂಡು ಆ ಹಿರಿಯಣ್ಣನ ಪ್ರೀತಿಯನ್ನು ಕೊಂಡಾಡುತ್ತಿದ್ದರು. ೧೯೭೫ರಲ್ಲಿ ನಿವೃತ್ತಿಯಾಗುವವರೆಗೂ ಭಾಗವತಿಕೆ ಮತ್ತು ಅರ್ಥದಾರಿಯಾಗಿ ಬಹಳಷ್ಟು ಪ್ರಸಿದ್ಧಿ ಪಡೆದ ಮಂದಾರರು ಆ ಬಳಿಕ ತುಳು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಭೂತಪೂರ್ವವಾದದ್ದು. ತುಳುನಾಡಿನ ಸಂಸ್ಕೃತಿಯ ಸೊಗಡಿನೊಂದಿಗೆ ತುಳು ಭಾಷೆಯ ಸತ್ವ ಸ್ವತ್ವಗಳೆಲ್ಲವನ್ನೂ ರಸಪಾಕ ಮಾಡಿ ಸೃಷ್ಟಿಸಿದ ಮಹಾಕಾವ್ಯವೇ ಮಂದಾರ ರಾಮಾಯಣ. ಮೊದಲು ಒಂದೊಂದು ಅಧ್ಯಾಯಗಳು ಬೇರೆ ಬೇರೆ ಪ್ರಕಾಶನದಿಂದ ಬಿಡುಗಡೆಗೊಂಡಿತು. ೧೯೮೮ರಲ್ಲಿ ಪೂರ್ಣ ಮಹಾಕಾವ್ಯ ವಜ್ರದೀಪ ಪ್ರಕಾಶನದಿಂದ ಹೊರಬಂತು. ಋಷಿ ಸದೃಶನಾದವನು ಮಾತ್ರ ಮಹಾಕಾವ್ಯ ಸೃಷ್ಟಿಸುತ್ತಾನೆ ಎಂಬ ಮಾತಿದೆ. ಮಂದಾರರ ಹಲವು ವರ್ಷಗಳ ತಪಸ್ಸಿನ ಫಲವಾಗಿ ಈ ಮಹಾಕಾವ್ಯ ಮೂಡಿಬಂತು. ವಿಧಿಯ ವಕ್ರದೃಷ್ಟಿ ಬಿತ್ತೋ ಏನೋ ೧೯೯೦ರಲ್ಲಿ ಅವರ ಗಂಟಲು ಕಾಯಿಲೆಗೊಳಗಾಯಿತು. ಶಸ್ತ್ರಚಿಕಿತ್ಸೆಯಿಂದಾಗಿ ಮಾತು ಮೂಕವಾಯಿತು. ಕೃಶಕಾಯದ, ಗೌರವರ್ಣದ ಮಂದಾರರು ವಿಧಿಯ ಈ ಹೊಡೆತಕ್ಕೆ ಸಡ್ಡು ಹೊಡೆದು ಎದ್ದು ನಿಂತುದು ಒಂದು ಪವಾಡವೇ ಸರಿ. ಗಂಟಲನ್ನು ಒಂದು ಕೈಯಿಂದ ಒತ್ತಿ ಹಿಡಿದರೆ ಗೊರ ಗೊರ ಸದ್ದಿನಿಂದ ಮಾತಾಡಲು ಸಾಧ್ಯವಾಗುತ್ತಿತ್ತು. ದುರದೃಷ್ಟಗಳು ಕುದುರೆಯಂತೆ ಬಂದು ಇರುವೆಯಂತೆ ಹೋಗುತ್ತದಂತೆ. ಮಂದಾರರು ಈ ದುರದೃಷ್ಟವನ್ನು ಕೂಡಾ ಎಷ್ಟು ಪ್ರೀತಿಸಿದರೆಂದರೆ ಅವರೇ ಓಡಿಹೋಗಿ ಅದನ್ನು ಸ್ವಾಗತಿಸುತ್ತಾರೇನೋ ಎಂಬಷ್ಟು ನಿರ್ಭಯವಾಗಿ ನಿಶ್ಚಿಂತೆಯಿಂದ, ಸ್ಥಿತಪ್ರಜ್ಞನಂತೆ ಬಾಳಿದ ರೀತಿಗೆ ನಾನು ಬೆರಗಾಗಿ ಹೋಗಿದ್ದೆ.
ಅವರ ಪ್ರತಿಭೆ ವ್ಯಕ್ತವಾಗುತ್ತಿದ್ದುದೇ ಗಂಟಲಿನಲ್ಲಿ. ಅಂತಹ ಮಂದಾರರಿಗೆ ಮೌನವೇನೋ ಕಡ್ಡಾಯವಾಯಿತು. ದೊಡ್ಡವರು ಸೋಲಿನಲ್ಲೂ ಗೆಲುವಿನಲ್ಲೂ ದೊಡ್ಡವರೇ ಆಗುತ್ತಾರಲ್ಲವೇ? ಆ ನಂತರವೂ ಅವರ ಲೇಖನಿಯಿಂದ ಯಕ್ಷಗಾನ ಪ್ರಸಂಗಗಳು, ಖಂಡಕಾವ್ಯಗಳು, ತುಳು ಕನ್ನಡ ಕವಿತೆಗಳು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾದುವು. ಅವುಗಳಲ್ಲಿ ಪುಸ್ತಕರೂಪದಲ್ಲಿ ಪ್ರಕಟವಾದವುಗಳು ಕೆಲವು. ಪ್ರಕಟವಾಗದವುಗಳು ಹಲವು ಈಗಲೂ ಇವೆ.
ಮಂದಾರರು ಸಾರ್ವಜನಿಕ ರಂಗದಿಂದ ಮರೆಯಾದರೂ ಸಾಹಿತ್ಯರಂಗದಲ್ಲಿ ನಿರಂತರ ಕೃಷಿ ಮಾಡುತ್ತಿದ್ದರು. ಅವರ ಶಿಷ್ಯ ಬಳಗ ಮಿತ್ರ ಬಳಗ ಬಹಳ ದೊಡ್ಡದು. ಪ್ರಭಾಕರ ಜೋಷಿಯವರು ಮತ್ತು ಮಂದಾರರು ಮಳೆಗಾಲದ ಜಡಿಮಳೆಯ ದಿನಗಳ ಹೊರತಾಗಿ ಪ್ರತಿದಿನ ಸಂಜೆ ವೆಂಕಪ್ಪಣ್ಣನ ಅಂಗಡಿಯಲ್ಲಿ ಭೇಟಿಯಾಗಿ ಗಂಟೆಗಟ್ಟಲೆ ಮಾತಾಡುತ್ತಿದ್ದ ದೃಶ್ಯವನ್ನು ಸುತ್ತಮುತ್ತಲಿನವರು ನಿಂತು ಕುತೂಹಲದಿಂದ ನೋಡುತ್ತಿದ್ದರು. ಆ ಸಂವಾದ, ಚರ್ಚೆಯಲ್ಲಿ ಅವರ ಆಸಕ್ತಿಯ ವಿಷಯಗಳೇ ಇದ್ದವು. ಜೋಶಿಯವರ ಸ್ವರಕ್ಕೆ ಮಂದಾರರ ಕೈಸನ್ನೆ, ಕಣ್ಣುಸನ್ನೆಗಳು ತಾಳ ಹಾಕುತ್ತಿದ್ದುವು. ಜೋಷಿಯವರೇನಾದರೂ ತುರ್ತು ಕಾರಣಗಳಿಗಾಗಿ ಬಾರದೇ ಹೋದರೆ ಮಂದಾರರು ನನ್ನನ್ನು ಹುಡುಕಿಕೊಂಡು ಮನೆಗೆ ಬರುತ್ತಿದ್ದರು. ನನ್ನ ಲೇಖನಗಳಲ್ಲಿ ಇದ್ದ ಅರೆಕೊರೆಗಳನ್ನು ಹೇಳುತ್ತಿದ್ದರು. ನನ್ನ ಸಾಹಿತ್ಯಕೃಷಿಯಲ್ಲಿ ಉತ್ತಮ ಮಾರ್ಗದರ್ಶನ ನೀಡಿ ರಕ್ಷಿಸಿದ ಪರೋಕ್ಷ ಗುರು ಮಂದಾರರು. ಅವರು ಗಂಟಲೊತ್ತಿ ಮಾತಾಡುತ್ತಿದ್ದ ರೀತಿಯನ್ನು ಕಂಡು ನೊಂದ ನನ್ನ ಅಮ್ಮ “ಅವರಿಗೆ ಯಾಕೆ ಕಷ್ಟಕೊಡುತ್ತಿ?” ಎಂದು ನನ್ನನ್ನು ಗದರಿಸಿದ್ದೂ ಇದೆ. ಈ ಸಂಜೆಯ ಸಾಹಿತ್ಯಕೂಟದ ಸಲ್ಲಾಪವೇ ಮಂದಾರರಿಗೆ ತುಂಬಾ ಖುಷಿ ಕೊಡುತ್ತಿತ್ತು. ಅದೇ ನನ್ನ ಜೀವಸತ್ವ ಅದೇ ನನಗೆ ಟಾನಿಕ್ಕು ಎನ್ನುತ್ತಿದ್ದರು. ಮಂದಾರ ರಾಮಾಯಣ ಪ್ರಕಟವಾದ ಮೇಲೆ ಊರು ಪರವೂರುಗಳಲ್ಲಿ ಅವರನ್ನು ಕರೆಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನ ಮಾಡಿದುವು. ಆದರೆ ನಮ್ಮೂರಿನವರು ಅವರಿಗೆ ಸನ್ಮಾನ ಮಾಡುವ ಕುರಿತಾಗಲೀ ಅವರು ಬರೆದ ಕಾವ್ಯದಲ್ಲಿ ಏನಿದೆ ಎಂಬ ಬಗ್ಗೆಯಾಗಲೀ ಯಾರೂ ಕಾಳಜಿ ವಹಿಸಲಿಲ್ಲ. ಕವಿಗಳು ಹುಟ್ಟುವುದು ಭುವನ ಭಾಗ್ಯದಿಂದ ಎನ್ನುತ್ತಾರೆ. ಆ ಭಾಗ್ಯವನ್ನು ನನ್ನೂರಿನಲ್ಲಿ ಕಡೆಗಣಿಸಿದವರೇ ಹೆಚ್ಚು.
೧೯೯೨ರಲ್ಲಿ ಕುಡುಪು ಪರಿಸರದ ಮಹಿಳೆಯರೆಲ್ಲ ಸೇರಿ ಒಂದು ಸಂಘ ಮಾಡಿದೆವು. ೧೯೯೩ರಲ್ಲಿ ಈ ಸಂಘದ ವಾರ್ಷಿಕೋತ್ಸವದಲ್ಲಿ ನಮ್ಮ ಸಂಘದ ಸದಸ್ಯೆಯರು ಅವರನ್ನು ಸನ್ಮಾನಿಸಿ ಕೃತಾರ್ಥರಾದೆವು. ಅದೇ ವರ್ಷ ಡಿಸೆಂಬರ್ ೨೫ರಂದು ಮಂದಾರ ರಾಮಾಯಣದ ಬಗ್ಗೆ ಒಂದು ವಿಚಾರಸಂಕಿರಣವನ್ನು ನಮ್ಮ ಸಂಘದವರು ಹಮ್ಮಿಕೊಂಡೆವು. ಆ ವರ್ಷದ ಕುಡುಪು ಷಷ್ಠಿ ಜಾತ್ರೆಯ ಸಮಯದಲ್ಲಿ ಹಣ್ಣುಕಾಯಿ ಅಂಗಡಿ ಇಟ್ಟು ಸಮಾರಂಭದ ಖರ್ಚಿಗಾಗಿ ಸ್ವಲ್ಪ ಹಣ ಸಂಗ್ರಹಿಸಿದೆವು. ಆಮಂತ್ರಣ ಪತ್ರಿಕೆ ಮುದ್ರಣವಾಗಿ ಎಲ್ಲರಿಗೂ ಬಟವಾಡೆಯಾಗಿತ್ತು. ಒಂದು ವಾರ ಇರುವಾಗ ಮುಖ್ಯ ಭಾಷಣಗಾರರಾದ ಡಾ. ಚಿನ್ನಪ್ಪ ಗೌಡರು ಮತ್ತು ಅಧ್ಯಕ್ಷರಾದ ಡಾ. ಬಿ.ಎ. ವಿವೇಕ ರೈಗಳು ಅನಿರೀಕ್ಷಿತವಾಗಿ ಜರ್ಮನಿಗೆ ಹಾರಲು ಸಿದ್ಧರಾದ ವಿಷಯ ತಿಳಿಯಿತು. ಡಾ. ಚಿನ್ನಪ್ಪ ಗೌಡರು ಪರಿಸ್ಥಿತಿಯನ್ನು ವಿವರಿಸಿ “ನೀವು ನನ್ನನ್ನು ಹಾಲಲ್ಲಾದರೂ ಹಾಕಿ ನೀರಲ್ಲಾದರೂ ಹಾಕಿ. ಕ್ಷಮೆ ಇರಲಿ” ಎಂದು ಬರೆದ ಪತ್ರ ಬಂತು. ಎಲ್ಲಾ ವ್ಯವಸ್ಥೆಯ ಮುತುವರ್ಜಿ ನನ್ನದೇ. ಮಹಿಳಾ ಮಂಡಲದ ಸದಸ್ಯೆಯರು ಇದಕ್ಕೆ ಪರಿಹಾರ ಹುಡುಕುವಂತಿಲ್ಲ. ಏನು ಮಾಡುವುದು? ನನ್ನ ಕೈಕಾಲೇ ಆಡಲಿಲ್ಲ. ಏನಾದರಾಗಲಿ ಎಂದು ಮಂದಾರರ ಬಳಿಗೆ ಪತ್ರ ಹಿಡಿದುಕೊಂಡು ಓಡಿದೆ. ನನ್ನ ಕಣ್ಣುಗಳಲ್ಲಿ ಗಂಗಾ ಕಾವೇರಿಯರು ಇಣುಕಲು ಸಿದ್ಧರಾಗಿದ್ದರು. ಮಂದಾರರು ಶಾಂತವಾಗಿ “ಗಾಬರಿಯಾಗಬೇಡ. ನಾವು ಪರಿಹಾರ ಹುಡುಕೋಣ. ನಾಳೆ ೧೦ ಗಂಟೆಗೆ ಹೊರಟು ನಿಂತಿರು. ವೆಂಕಟರಾಜ ಪುಣಿಂಚಿತ್ತಾಯರಲ್ಲಿಗೆ ಹೋಗೋಣ” ಎಂದರು. ಜಗತ್ತಿನ ಎಲ್ಲಾ ಸಂಪತ್ತಿಗಿಂತ, ಒಂದು ಒಳ್ಳೆಯ ಹೃದಯಕ್ಕೆ ಮಿಗಿಲಾದುದು ಯಾವುದೂ ಇಲ್ಲ ಎನ್ನುವುದು ಇಂತಹವರನ್ನು ಕಂಡೇ ಇರಬೇಕು. ದೂರವಾಣಿ ಸಂಪರ್ಕ ಇಲ್ಲದ ಆ ಕಾಲದಲ್ಲಿ ನಾವು ಹೋಗುವಾಗ ಅವರಿಲ್ಲದಿದ್ದರೆ ಎಂಬ ಅನುಮಾನ ನನಗೆ ಇತ್ತು. ಪುಣ್ಯಕ್ಕೆ ಅವರು ಸಿಕ್ಕಿದರು. ವಿಚಾರ ಸಂಕಿರಣಕ್ಕೆ ಬರಲು ಒಪ್ಪಿದರು. ಅದರ ಮರುದಿನ ಕೆದಂಬಾಡಿ ಜತ್ತಪ್ಪ ರೈಗಳ ಮನೆಗೆ ಹೋದೆವು. ಅವರನ್ನು ಮೊದಲೇ ಆಮಂತ್ರಿಸಿದ್ದೆವು. ಪತ್ರಿಕೆಯಲ್ಲಿ ಅವರ ಹೆಸರಿತ್ತು. ಹಿರಿಯರು ದೂರವೆಂದು ಬಾರದಿರುವ ಸಂಭವವಿದ್ದುದರಿಂದ ಮಂದಾರರು ನನ್ನನ್ನು ಕರೆದುಕೊಂಡು ಹೋದರು. ಸುಮಾರು ಮೂರು ಗಂಟೆಯಷ್ಟು ಕಾಲ ಜತ್ತಪ್ಪ ರೈಗಳ ಅಚ್ಚ ತುಳುವಿನ ಸಂಭಾಷಣೆ ಕೇಳಿ ಬೆರಗಾದೆ. ಚಂದ್ರಕಲಾ ನಂದಾವರ ಮಂದಾರ ರಾಮಾಯಣ ವಾಚನ ಮಾಡಲು ಒಪ್ಪಿದರು. ಡಾ. ಎನ್. ಇಸ್ಮಾಯಿಲ್ ಇವರು ಮುಖ್ಯ ಅತಿಥಿಗಳಾಗಿ ಅಂದಿನ ಸಮಾರಂಭವನ್ನು ಸುಸೂತ್ರವಾಗಿ ನಡೆಸಿಕೊಟ್ಟರು. ಕುಡುಪು ಮಿತ್ರ ಮಂಡಳಿಯವರು ಸಹಕರಿಸಿದ್ದರಿಂದ ಕಾರ್ಯಕ್ರಮ ಸಾಂಗವಾಗಿ ನಡೆಯಿತು. ಕವಿಗೆ ಸನ್ಮಾನ ಮಾಡುವುದಕ್ಕಿಂತ ಅವರ ಕಾವ್ಯದ ಬಗ್ಗೆ ಮಾತಾಡುವುದು ಹೆಚ್ಚಿನ ಸನ್ಮಾನವೆಂಬ ತಿಳುವಳಿಕೆ ನನ್ನದು.
೧೯೯೭ ಮಾರ್ಚ್ ೧೬ರಂದು ಕುಡುಪು ದೇವಸ್ಥಾನದಲ್ಲಿ ಊರ ನಾಗರಿಕರ ಸನ್ಮಾನ ಮತ್ತು ಪುಸ್ತಕ ಬಿಡುಗಡೆ ಸಮಾರಂಭವೆಂದು ಡಾ. ವಿವೇಕ ರೈಗಳು ಮತ್ತು ದೇವರಾಜ ಇವರು ಸಂಯೋಜನೆ ಮಾಡಿ ಆಮಂತ್ರಣವೂ ಸಿದ್ಧವಾಗಿ ಬಿಡುಗಡೆಯಾಗಿತ್ತು. ಗಂಟಲು ರಿಪೇರಿಯ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಹೋಗಿ ಸಮಾರಂಭದಂದು ಎರಡು ಮಾತಾಡುತ್ತೇನೆ ಎಂದು ಹೇಳಿಹೋದವರು ಮಾರ್ಚ್ ೧೨ರಂದೇ ಮಂದಾರರು ನಿಧನರಾದರು. ಊರಿಗೆ ಅವರನ್ನು ಗೌರವಿಸುವ ಋಣವಿಲ್ಲವೋ ಅಥವಾ ಮಂದಾರರಿಗೆ ಆ ಗೌರವದ ಮೇಲೆ ಮನಸ್ಸಿರಲಿಲ್ಲವೋ ತಿಳಿಯದು. ಅವರಿಗೆ ಊರಿನ ಋಣ ತೀರಿತು. ಆದರೆ ನಮ್ಮಲ್ಲಿ ಅವರು ಋಣ ಹೊರಿಸಿ ಹೊರಟುಹೋದರು. ಮಂದಾರರಿಗೆ ಆರು ಮಂದಿ ಹೆಣ್ಣುಮಕ್ಕಳು. ನಾನು ಏಳನೆಯವಳಾಗಿ ಅವರ ಮಮತೆಗೆ ಪಾತ್ರಳಾದೆ. ಎಷ್ಟೋ ಸಮಾರಂಭಗಳಿಗೆ, ಸಂಗೀತ ಕಛೇರಿಗಳಿಗೆ ಅವರು ಜೊತೆಯಲ್ಲಿ ನನ್ನನ್ನು ಕರೆದೊಯ್ಯುತ್ತಿದ್ದರು. ಇಲ್ಲಿ ಮಹಿಳಾ ಮಂಡಲ ಸ್ಥಾಪನೆಯಾದ ಮೇಲೆ ಏನೇನು ಕೆಲಸ ಮಾಡಬೇಕೆಂದು ಅವರು ಸಲಹೆ ನೀಡುತ್ತಿದ್ದರು. ಉಳ್ಳಾಲದ ಸೆಸ್ಕಾ ಸಂಸ್ಥೆಯವರ ಸಹಯೋಗದಲ್ಲಿ ಗೋಕುಲ್ದಾಸ್ ಶೆಟ್ಟಿಯವರ ಬಳಗದಿಂದ ಸುತ್ತಮುತ್ತಲ ಶಾಲೆಗಳ ಮಕ್ಕಳಿಗೆ ೧೯೯೪ರಲ್ಲೇ ಒಂದು ಬೇಸಿಗೆಯ ಶಿಬಿರ ಏರ್ಪಡಿಸುವುದಕ್ಕೆ ಅವರೇ ಸ್ಫೂರ್ತಿಯಾಗಿದ್ದರು. ಹಾಗೆಯೇ ಪ್ರೊ. ನರೇಂದ್ರ ನಾಯಕ್ ಅವರಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಮಾಡಿದ್ದು, ಮಹಿಳೆಯರ ಸಬಲೀಕರಣಕ್ಕಾಗಿ ಡಾ. ಶಶಿಕಲಾ ಗುರುಪುರ ಅವರೊಂದಿಗಿನ ಸಂವಾದ ಕಾರ್ಯಕ್ರಮ, ಉಪನ್ಯಾಸ, ಹೊಲಿಗೆ, ಕಸೂತಿ ತರಬೇತಿ, ಸಂಗೀತ ತರಗತಿಗಳು ಇವೆಲ್ಲಾ ಆಗ ಬಹಳ ಹುಮ್ಮಸ್ಸಿನಿಂದ ನಡೆಸುವುದಕ್ಕೆ ಅವರ ಪ್ರೋತ್ಸಾಹ ನಮಗೆ ಬೆಂಗಾವಲಾಗಿತ್ತು.
ಮರುವರ್ಷವೇ ಕುಡುಪು ಶಾಲೆಗೆ ಊರವರಿಂದ ದೇಣಿಗೆ ಸಂಗ್ರಹಿಸಿ ವಿದ್ಯುತ್ ಸಂಪರ್ಕ ಕೊಡಿಸುವ ಕೆಲಸವನ್ನು ಮಹಿಳಾ ಮಂಡಲದ ಸದಸ್ಯೆಯರು ಮಾಡಿದರು. ಪ್ರೆಸಿಲ್ಲಾ ಡಿ. ಸಿಲ್ವ ಅಧ್ಯಕ್ಷೆಯಾಗಿ, ಲಲಿತಾ ಮತ್ತು ವಿನೋದ ಕಾರ್ಯದರ್ಶಿಯರಾಗಿ, ಲೀನಾ ಪೆರಿಸ್ ಉಪಾಧ್ಯಕ್ಷೆಯಾಗಿ, ಇಂದಿರಾ ಖಜಾಂಚಿಯಾಗಿ ಕೆಲಸ ಮಾಡಿದ ೨೫ ವರ್ಷಗಳ ಹಿಂದಿನ ದಿನಗಳನ್ನು ನೆನೆಸಿಕೊಂಡರೆ ಸಂತೋಷವಾಗುತ್ತದೆ. ನಮಗೆ ಇಷ್ಟೆಲ್ಲಾ ಕೆಲಸ ಮಾಡಲು ಹೇಗೆ ಸಾಧ್ಯವಾಯಿತು ಎಂದು ಆಶ್ಚರ್ಯವೂ ಆಗುತ್ತದೆ. ಸಾಂಸ್ಕೃತಿಕವಾಗಿ ಕುಡುಪು ಬರಡಾಗಿದೆ ಎಂದು ಭಾವಿಸಿದ್ದ ಕಾಲದಲ್ಲಿ ಒಂದೆರಡು ಹನಿ ಮಳೆ ಸುರಿಸಿ ತಂಪಾಗಿಸುವ, ಚಿಗುರಿಸುವ ಕೆಲಸ ಮಹಿಳಾ ಮಂಡಲದ ಸದಸ್ಯೆಯರಿಂದ ಆಗಿದೆ ಎನ್ನುವುದೇ ಸಾಧನೆ. ಹೊಸ್ತಿಲಿಂದೀಚೆಗೆ ಬರದ ಮಹಿಳೆಯರು ನೃತ್ಯ, ನಾಟಕ, ಭಾಷಣ, ಆಟೋಟ ಮುಂತಾದ ಎಲ್ಲಾ ವಿಭಾಗಗಳಲ್ಲೂ ತಮ್ಮ ಪ್ರತಿಭೆಯನ್ನು ಮೆರೆದರು. ಈ ಸದಸ್ಯೆಯರು ಕುಡುಪಿನ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ದಾಖಲಾದರು. ಇವತ್ತು ಅವರಲ್ಲಿ ಕೆಲವರು ೭೦ರ ಅಂಚನ್ನು ದಾಟಿದ್ದಾರೆ. ಹಲವರು ಮಧ್ಯವಯಸ್ಸಿಗೆ ಮುಟ್ಟಿದ್ದಾರೆ. ಆ ಮಧುರ ಕ್ಷಣಗಳನ್ನು ಈಗಲೂ ಸ್ಮರಿಸಿ ಪುಳಕಗೊಳ್ಳುತ್ತಾರೆ.
(ಮುಂದುವರಿಯಲಿದೆ)
ಮಂದಾರ ಕೇಶವ ಭಟ್ಟರ ಗೌರವಾನ್ವಿತ ಆತ್ಮೀಯ ಚಿತ್ರಣ ಮನ ತುಂಬಿತು. ನನ್ನ ಗೆಳತಿ ಶಾರದಾ ಶೆಟ್ಟಿಗೂ ಮಂದಾರ ಕೇಶವ ಭಟ್ಟರೆಂದರೆ ಅಪಾರ ಪ್ರೀತಿ, ಗೌರವ ..
ಚೆನ್ನಾಗಿದೆ ರೋಹಿಣಿಯವರೆ.ವೆಂಕಟರಾಜ ಪುಣಿಂಚಿತ್ತಾಯ ಮತ್ತು ಕೆದಂಬಾಡಿ ಜತ್ತಪ್ಪ ರೈ ಗಳು ವಿ ವಿ ವಿದ್ವಾಂಸರಿಗೂ ಮಿಗಿಲು..ಒಮ್ಮೆ ಪುತ್ತೂರಿನ ಕರ್ನಾಟಕ ಸಂಘ ಕಾರ್ಯಕ್ರಮ ವೊಂದರಲ್ಲಿ ಪುಣಿಂಚಿತ್ತಾಯರ ಜತೆ ವೇದಿಕೆ ಹಂಚಿಕೊಂಡ ನೆನಪಿಗೆ ಫೋಟೊ ವೊಂದಿದೆ. ವೈಕಮ್ ಮಹಮ್ಮದ್ ರ ಕಾದಂಬರಿ ನನ್ನಜ್ಜನಿಗೊಂದಾನೆಯಿತ್ತು ಅವರ ಅನುವಾದ ಸೊಗಸಾಗಿದೆ..