ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೇಳು
ನನ್ನ ಶಿಷ್ಯೆಯರ ಒಂದು ಸಣ್ಣ ಬಳಗ ನನ್ನನ್ನು ಎಷ್ಟು ಹಚ್ಚಿಕೊಂಡಿತೆಂದರೆ ನನ್ನ ಸಹೋದ್ಯೋಗಿಗಳಿಗೆ ಆಶ್ಚರ್ಯ ಮಾತ್ರವಲ್ಲ ಅಸಹನೆ ಮತ್ತು ಸಣ್ಣ ರೀತಿಯ ಮತ್ಸರವೂ ಹೆಡೆಯಾಡಿಸುವಷ್ಟು ಗಟ್ಟಿಗೊಂಡಿತು. ಅದರಲ್ಲೂ ಪೂರ್ಣಿಮಾ ಭಟ್ ಮತ್ತು ನನ್ನ ಮಧ್ಯೆ ಇದ್ದ ಬಾಂಧವ್ಯಕ್ಕೆ ಯಾವ ಹೆಸರಿಡಲಿ? ಸಾಹಿತ್ಯ ಸಂಗೀತ ಕಾರ್ಯಕ್ರಮಗಳಿರಲಿ, ನಾಟಕ ಪ್ರದರ್ಶನಗಳಿರಲಿ, ನಮ್ಮ ಜ್ಞಾನದಾಹವನ್ನು ತಣಿಸುವ ಯಾವುದೇ ಸಾಮಾಜಿಕ ಕಾರ್ಯಕ್ರಮಗಳಿರಲಿ ಅಲ್ಲಿ ನಾನೂ ಅವಳು ಖಾಯಂ ಹಾಜರಾಗುತ್ತಿದ್ದೆವು. ಕತೆ, ಕವನ ಬರೆಯುವ ಪ್ರತಿಭೆಯುಳ್ಳ ಆಕೆ ಹೈಸ್ಕೂಲು ಮತ್ತು ಕಾಲೇಜುಗಳಲ್ಲಿ ಉತ್ತಮ ನಟಿಯಾಗಿಯೂ ಕೀರ್ತಿ ಗಳಿಸಿದ್ದಳು. ಇಂತಹ ಪ್ರತಿಭೆ ಬಹುತೇಕ ಹೆಣ್ಣುಮಕ್ಕಳಲ್ಲಿ ಜಾಗೃತವಾಗಿದೆ ಎಂಬುದು ನನ್ನ ಅನುಭವ. ಆಶಾಲತಾ, ಅನುಪಮಾ, ಗೋಪಿ, ಡೆನ್ನಿ, ಮೆಹರುನ್ನೀಸಾ, ರತ್ನಾವತಿ, ಸಿಂತಿಯಾ, ಜೆಸ್ಸಿ ಮುಂತಾದ ಹುಡುಗಿಯರಿಗೆ ಒಂದು ಕಥಾವಸ್ತುವನ್ನು ನೀಡಿ ಇದರ ಬಗ್ಗೆ ಒಂದು ನಾಟಕ ರಚಿಸಿರಿ ಎಂದು ನಾನು ಹೇಳಿದರೆ ಸಾಕು. ಅವರೇ ಸಂಭಾಷಣೆ ಬರೆದು ನಾಟಕಕ್ಕೆ ಸಿದ್ಧಗೊಳಿಸಿದ ಅವರ ಪ್ರತಿಭೆಯನ್ನು ಕಂಡು ದಂಗಾಗಿದ್ದೇನೆ. ಟಿವಿ ಎಂಬ ಮೂರ್ಖರ ಪೆಟ್ಟಿಗೆ ಇನ್ನೂ ಮನೆಯ ಹಜಾರದಲ್ಲಿ ಪ್ರತಿಷ್ಠಾಪನೆಗೊಳ್ಳದ ಕಾಲವಾಗಿತ್ತದು. ನಾನು ಅವರ ಪ್ರಾಯದಲ್ಲಿ ಅಂದರೆ ಕಳೆದ ಶತಮಾನದ ೪೦-೫೦ರ ದಶಕಗಳಲ್ಲಿ ಇಂತಹ ಕೌಶಲ್ಯ ಮತ್ತು ಪ್ರತಿಭೆ ಕಾಣಲು ಸಾಧ್ಯವಿರಲಿಲ್ಲ. ಅಥವಾ ಅವಕಾಶ ಲಭ್ಯವಿರಲಿಲ್ಲ ಎನ್ನಬಹುದೇನೋ. ಪ್ರತಿಭೆ ಹುಟ್ಟಿನಿಂದ ಬರುತ್ತದೆ. ಅದನ್ನು ಹಣ ಕೊಟ್ಟು ಕೊಳ್ಳಲು ಸಾಧ್ಯವಿಲ್ಲ. ಕಲಿಕೆಯಿಂದ ಗಳಿಸಲು ಸಾಧ್ಯವಿಲ್ಲ ಎಂಬ ಮಾತಿದೆ. ಹಣ ಕೊಟ್ಟು ಪ್ರತಿಭೆಯನ್ನು ಕೊಳ್ಳಲು ಸಾಧ್ಯವಿಲ್ಲ ಎಂಬುದು ಸತ್ಯವಾದರೂ ಕಲಿಕೆಯಿಂದ ಗಳಿಸಲು ಸಾಧ್ಯವಿದೆ. ನಿರಂತರ ಪ್ರಯತ್ನದಿಂದ ಪ್ರತಿಭೆ ವಿಕಾಸಗೊಳ್ಳುವುದನ್ನು ನನ್ನ ಅನೇಕ ಶಿಷ್ಯೆಯರಲ್ಲಿ ಕಂಡಿದ್ದೇನೆ. ನನ್ನ ಅನುಭವದಂತೆ ಪ್ರತಿಭೆಯು ಪ್ರಕಾಶಗೊಳ್ಳುವುದಕ್ಕೆ ಸ್ಫೂರ್ತಿ ಬೇಕು. ಈ ಪ್ರತಿಭೆಯನ್ನು ಗುರುತಿಸುವವರಿದ್ದರೆ, ಸ್ಫೂರ್ತಿಯನ್ನು ತುಂಬಬಲ್ಲವರಿದ್ದರೆ ಎಲ್ಲಾ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರಬರಲು ಅವಕಾಶವಾಗುತ್ತದೆ. ಎಲ್ಲಕ್ಕಿಂತ ಮೊದಲು ಅವರಲ್ಲಿ ಆತ್ಮವಿಶ್ವಾಸವೆಂಬ ಬೀಜವನ್ನು ಬಿತ್ತಿದರೆ ಅದು ನಿಧಾನವಾಗಿ ಬೆಳೆಯುತ್ತದೆ. ಅದಕ್ಕಾಗಿ ನಾವು ಶಿಕ್ಷಕಿಯರು ನಮ್ಮದೇ ಮಿತಿಯಲ್ಲಿ ಪ್ರಯತ್ನಪಟ್ಟಿದ್ದೇವೆ ಎಂಬ ತೃಪ್ತಿ ಇದೆ. ಹೀಗಿದ್ದೂ ಒಂದು ದುಃಖದ ಸಂಗತಿ ಎಂದರೆ ಈ ಹೆಣ್ಣುಮಕ್ಕಳು ಮದುವೆಯಾಗಿ ಸಂಸಾರದ ನೊಗಕ್ಕೆ ಹೆಗಲು ಕೊಟ್ಟ ಮೇಲೆ ಕುಕ್ಕರಿನ ಪ್ರೆಶರ್‌ಗೆ, ಮಿಕ್ಸಿ ಗ್ರೈಂಡರ್‌ಗಳ ತಿರುಗಣೆಗೆ, ವಾಷಿಂಗ್ ಮಿಶನ್ನಿನ ಘರ್ಷಣೆಗೆ ಚಕನಾ ಚೂರ್ ಆಗಿ ಮಾಯವಾಗುತ್ತಿದ್ದರು. ಕೆಲವರದ್ದು ಫ್ರಿಡ್ಜಿನ ಫ್ರೀಜರ್‌ನೊಳಗೆ ಭದ್ರವಾಗಿ ಕೂತು ಹೊರಬರುವ ಭಾಗ್ಯ ಯಾವಾಗ ಸಿಗುತ್ತದೋ ಎಂದು ಕಾಯುತ್ತಿದ್ದುದೂ ಉಂಟು. ಹಾಗೆಂದು ಎಲ್ಲಾ ಹೆಣ್ಣುಮಕ್ಕಳ ಪ್ರತಿಭೆಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದೇವೆಂದು ನಾವು ಬೀಗುವಂತಿಲ್ಲ. ಫಿಲೋಮಿನಾ ಎಂಬ ಶಿಷ್ಯೆಯೊಬ್ಬಳು ೨೫ ವರ್ಷಗಳ ಬಳಿಕ ನನ್ನನ್ನು ಭೇಟಿಯಾದಾಗ ಪ್ರೀತಿಯಿಂದಲೇ ನನ್ನನ್ನು ಗೌರವಿಸುತ್ತಾ, “ಟೀಚರ್, ನನಗೆ ಪ್ರಾಥಮಿಕ ಶಾಲೆಯಲ್ಲಾಗಲೀ ಹೈಸ್ಕೂಲಲ್ಲಾಗಲೀ ನಾಟಕಗಳಲ್ಲಿ ಒಂದೇ ಒಂದು ಅವಕಾಶವನ್ನು ಯಾರೂ ನೀಡಲಿಲ್ಲ. ಅದು ಈಗ ನನ್ನ ನೆಚ್ಚಿನ ಹವ್ಯಾಸವಾಗಿದೆ. ನೀವು ಗುರುತಿಸಲಿಲ್ಲ ಎಂಬ ನೋವಿನಿಂದಲೇ ನಾನು ಈ ಆಸಕ್ತಿಯನ್ನು ಬೆಳೆಸಿಕೊಂಡೆನೇನೋ” ಎಂದು ನಿರ್ಭಾವುಕಳಾಗಿ ತಣ್ಣನೆಯ ಸ್ವರದಲ್ಲಿ ಹೇಳಿದಾಗ ನನ್ನ ಎದೆಯಾಳಕ್ಕೆ ಒಂದು ಸಣ್ಣ ಚಿನ್ನದ ಕತ್ತಿಯಿಂದ ತಿವಿದ ಅನುಭವವಾಯಿತು. ಮನುಷ್ಯ ಪರಿಪೂರ್ಣನಾಗಲು ಸಾಧ್ಯವಿಲ್ಲ. ಅದರೆಡೆಗೆ ಮುಖ ಮಾಡಿ ನಡೆಯಬಹುದು ಅಷ್ಟೇ. ಪೂರ್ಣತೆಯ ಅನ್ವೇಷಣೆಯ ಬೆಳಕಿನಲ್ಲಿ ಸಾಗುವುದಷ್ಟೇ ನನ್ನಿಂದ ಸಾಧ್ಯ. ಬಹುಶಃ ಕಾಳಿದಾಸ ಹೇಳಿದಂತೆ `ಸೃಷ್ಟಿಕರ್ತನು, ಮನುಷ್ಯನನ್ನು ಪರಿಪೂರ್ಣವಾದ ಗುಣಗಳಿಂದ ತುಂಬುವುದರಲ್ಲಿ ವಿಮುಖನಾಗುತ್ತಾನೆ’ ಎಂಬುದು ಸತ್ಯ. ನನ್ನ ದೋಷಕ್ಕೆ ಅಥವಾ ಅಪರಾಧಕ್ಕೆ ಅವನ ಮಾತುಗಳಿಂದ ಪಶ್ಚಾತ್ತಾಪ ಸಾಂತ್ವನ ಪಡೆದುಕೊಂಡೆ. ಪಶ್ಚಾತ್ತಾಪ ಪಟ್ಟ ಪಾಪಿ ಎಂದೂ ತಪ್ಪು ಮಾಡದ ಹತ್ತು ಮಂದಿ ಋಷಿಗಳಿಗಿಂತ ಮೇಲು ಎಂದು ಗಾದೆಮಾತು ಹೇಳುತ್ತದೆ. ನನ್ನ ಸಮರ್ಥನೆಗೆ ಈ ಮಾತುಗಳನ್ನು ಆಶ್ರಯಿಸಿ ಈವರೆಗೆ ನಿದ್ರಿಸುತ್ತಿದ್ದ ಪಶ್ಚಾತ್ತಾಪವನ್ನು ಎಬ್ಬಿಸಿ ಶರಣು ಶರಣು ಎಂದೆ.
ನನ್ನ ಶಿಷ್ಯೆ ಪೂರ್ಣಿಮಾಳ ಬಗ್ಗೆ ಖುಷಿಯಿಂದ ಹೇಳುವ ತವಕ ನನ್ನಲ್ಲಿದೆ. ಕವಯಿತ್ರಿಯಾಗಿ, ಕತೆಗಾರ್ತಿಯಾಗಿ ಹೈಸ್ಕೂಲಲ್ಲಿರುವಾಗಲೇ ಗುರುತಿಸಿಕೊಂಡ ಆಕೆ ವೈದ್ಯಕೀಯ ವೃತ್ತಿಯ ವಿದ್ಯಾರ್ಥಿನಿಯಾಗಿರುವಾಗಲೇ ಕೃತಿ ಪ್ರಕಟಿಸಿದಾಕೆ. ಆಯುರ್ವೇದಕ್ಕೆ ಸಂಬಂಧಿಸಿ ಈಗಾಗಲೇ ಸುಮಾರು ೧೫ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ ಈಕೆಯ ಸಾಧನೆ ಗಮನಾರ್ಹ. ಇಂದಿಗೂ ನನ್ನೊಂದಿಗೆ ಆತ್ಮೀಯ ಸಂಬಂಧವಿರಿಸಿಕೊಂಡ ಅನೇಕ ಶಿಷ್ಯೆಯರಲ್ಲಿ ಇವಳೂ ಒಬ್ಬಳು. ಎಷ್ಟೋ ಸಲ ನನ್ನ ಮತ್ತು ಅವಳ ಮಧ್ಯೆ ತಾತ್ವಿಕ ಭಿನ್ನಾಭಿಪ್ರಾಯಗಳಿಂದಾಗಿ ಮಾತಿನ ಸಮರ ನಡೆದದ್ದುಂಟು. ಆದರೆ ಜೀವನದಲ್ಲಿ ಎದುರಾಗುವ ಯಾವುದೇ ಸಮಸ್ಯೆಗಳ ಬಗ್ಗೆ ನನ್ನಲ್ಲಿ ಹಂಚಿಕೊಂಡರೇನೇ ಅವಳಿಗೆ ಸಮಾಧಾನವಾಗುತ್ತಿತ್ತು ಎಂದು ಕಾಣುತ್ತದೆ. ಹೀಗೆ ತಮ್ಮ ನೋವು ನಲಿವುಗಳಿಗೆ ನಾನು ಕಿವಿಯಾಗಬೇಕೆಂದು ಬಯಸಿದ ಹಲವು ಶಿಷ್ಯೆಯರಲ್ಲಿ ಇವಳೂ ಒಬ್ಬಳು. ನನ್ನಿಂದ ಬೇರಾವ ರೀತಿಯ ನೆರವನ್ನೂ ಆಶಿಸದೆ ಕೇವಲ ಸಹೃದಯೀ ಸ್ಪಂದನಕ್ಕಾಗಿ ಮಾತ್ರ ಬಯಸುವ ಈ ಹೆಣ್ಮಕ್ಕಳಿಗೆ “ತಾಳ್ಮೆಯಿಂದಿರು, ಅವಸರಿಸಬೇಡ. ಒಂದು ಕ್ಷಣ ನಿಧಾನವಾಗಿ ಯೋಚಿಸು. ನಿನ್ನ ದೌರ್ಬಲ್ಯಗಳೇನೆಂದು ಒಮ್ಮೆ ಪರಿಶೀಲಿಸು” ಹೀಗೆ ಒಂದೊಂದು ಮಾತು ಹೇಳುತ್ತಾ ಅವರ ಹೃದಯದ ಒತ್ತಡಗಳನ್ನು ಸಮಸ್ಥಿತಿಗೆ ಮರಳಿಸಲು ಪ್ರಯತ್ನಿಸುತ್ತಿದ್ದೆ. ನನ್ನಿಂದಾಗುವುದು ಅಷ್ಟೇ ತಾನೇ? ಯೌವನದಲ್ಲಿ ನಾನು ಎದುರಿಸಿದ ಸವಾಲುಗಳಿಗಿಂತಲೂ ಭೀಕರವಾದ ಸವಾಲುಗಳು ಅವರಿಗೆ ಎದುರಾದಾಗ ಪರಿಹಾರಕ್ಕಾಗಿ ಭಿನ್ನ ಮಾರ್ಗಗಳನ್ನು ತೋರಿಸಿಕೊಡಬೇಕಾದ ಸಂದರ್ಭಗಳು ಇದ್ದುವು. ಈ ಶಿಷ್ಯೆಯರು ನನ್ನೊಂದಿಗೆ ಇಂತಹ ಒಂದು ಸಂಬಂಧವನ್ನು ಉಳಿಸಿಕೊಂಡುದರಿಂದಲೇ ನನ್ನ ಬದುಕಿಗೆ ಒಂದು ಉದ್ದೇಶವಿದೆ ಎಂಬುದನ್ನು ಮತ್ತು ಅದಕ್ಕಾಗಿ ಬದುಕಬೇಕು ಎಂಬ ಚೈತನ್ಯವೂ ಜೀವನ ಪ್ರೀತಿಯೂ ನನ್ನಲ್ಲಿ ಉಂಟಾಯಿತು. ಹೀಗೆ ನನ್ನ ಶಿಷ್ಯೆಯರಿಗೆ ನಾನು ಚಿರಋಣಿಯಾಗುವಂತಾಯಿತು. ಅವರಿಂದಾಗಿಯೇ ನಾನು ವಿಶಿಷ್ಟವಾದ ರೀತಿಯಲ್ಲಿ ಗುರುತಿಸುವಂತಾದುದನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ.
೧೯೮೭ನೆಯ ಇಸವಿ ಇರಬೇಕು. ಆಗ ಪೂರ್ಣಿಮಾ ಕಮಲಾದಾಸ್ ಅವರ ‘My Story’ಯನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಳು. ಅದರ ಪ್ರಕಟಣೆಗೆ ಮೂಲ ಲೇಖಕಿಯ ಅನುಮತಿ ಬೇಕಿತ್ತು. ಲೇಖಕಿಗೆ ಪತ್ರ ಬರೆದು ತಿಂಗಳುಗಳ ಕಾಲ ಕಾದರೂ ಉತ್ತರವಿಲ್ಲ. ಕೊನೆಗೆ ನನ್ನ ಸಮೀಪ ಬಂಧುವೂ ಲೇಖಕನೂ ಆಗಿರುವ ಕಾಸರಗೋಡಿನ ಕೆ.ಟಿ. ಶ್ರೀಧರ್ ಅವರ ಬಳಿಗೆ ಹೋಗಿ ವಿಷಯವನ್ನು ಅರಿಕೆ ಮಾಡಿಕೊಂಡೆವು. ಅವರಿಗೆ ಕಮಲಾದಾಸ್ ಅವರನ್ನು ಕಂಡು ಮಾತಾಡಿ ಪರಿಚಯವಿದ್ದುದರಿಂದ ಅವರ ಮೂಲಕ ಪ್ರಯತ್ನಿಸಿದರೆ ಅನುಮತಿ ಪತ್ರ ಸಿಗಬಹುದೆಂಬ ನಿರೀಕ್ಷೆ ನಮ್ಮದು. ಅವರು ಪತ್ರ ಬರೆದರೂ ಉತ್ತರವಿಲ್ಲ. ಕೊನೆಗೆ ನಾವು ಮೂವರು ತಿರುವನಂತಪುರಕ್ಕೆ ಹೋಗಿ ಅವರನ್ನು ಕಂಡೇ ಅನುಮತಿ ಪತ್ರ ತರುವುದೆಂದು ನಿಶ್ಚಯಿಸಿದೆವು. ಕಮಲಾದಾಸ್ ಅವರ ಕತೆಗಳನ್ನು ಅಷ್ಟಿಷ್ಟು ಓದಿಕೊಂಡ ನನಗೆ ಅವರನ್ನು ಕಾಣುವಂತಹ ಸುಯೋಗವೊಂದು ಲಭಿಸಬಹುದೆಂದು ಕನಸಿನಲ್ಲೂ ಊಹಿಸುವುದೂ ಸಾಧ್ಯವಿರಲಿಲ್ಲ. ಅಂತೂ ಒಂದು ಶುಭದಿನದಂದು ನಾವು ಮೂವರೂ ತಿರುವನಂತಪುರದ ಆ ದೊಡ್ಡ ಮನೆಯ ಚಾವಡಿಯಲ್ಲಿ ಕಮಲಾದಾಸ್ ಅವರನ್ನು ಮುಖಾಮುಖಿಯಾದ ಆ ಕ್ಷಣವಿದೆಯಲ್ಲಾ ಅದು ನನ್ನ ಜೀವನದಲ್ಲೇ ಅಪೂರ್ವವಾದ ಅವಿಸ್ಮರಣೀಯವಾದ ಕ್ಷಣವಾಗಿತ್ತು.
ಅದು ಸಾಧ್ಯವಾದದ್ದು ಪೂರ್ಣಿಮಾ ಮತ್ತು ಕೆ.ಟಿ. ಶ್ರೀಧರ್ ಅವರ ಮೂಲಕ. ಮಧ್ಯಮ ಗಾತ್ರದ, ದುಂಡು ಮುಖದ ಆಕರ್ಷಣೀಯವಾದ ಕಣ್ಣುಗಳ, ಚೂಪು ಮೂಗಿನ, ಮಧುರವಾದ ಮಾತುಗಳ ಕಮಲಾದಾಸ್ ಅವರೊಂದಿಗಿನ ನಮ್ಮ ಭೇಟಿಯನ್ನು ಹಿಡಿದಿಟ್ಟುಕೊಳ್ಳುವಂತಹ ಯಾವ ಸಿದ್ಧತೆಯನ್ನೂ ಪ್ರಯತ್ನವನ್ನೂ ನಾವು ಮಾಡಲಿಲ್ಲವಲ್ಲಾ ಎಂದು ಈಗ ಪಶ್ಚಾತ್ತಾಪವಾಗುತ್ತದೆ. ಆದರೆ ನಮ್ಮ ಸ್ಮೃತಿಪಟಲದಲ್ಲಿ ಮಾತ್ರ ಚಿತ್ರಗಳು ಭದ್ರವಾಗಿದೆ. ಕಮಲಾದಾಸ್ ಅವರ ತಾಯಿ ಕೂಡಾ ಅಂದು ನಮ್ಮೊಂದಿಗಿದ್ದರು. ಅವರ ಗಂಡ ನಾವಿರುವಾಗಲೇ ಹೊರಗೆ ಹೊರಟಾಗ “ಇವರು ನನ್ನ ಗಂಡ ಗೊತ್ತಲ್ಲ” ಎಂದು ಪಿಸುದನಿಯಲ್ಲಿ ಹೇಳಿದ್ದೂ ಈಗಲೂ ಪ್ರತಿಧ್ವನಿಸುತ್ತಿರುವಂತಿದೆ. ಸಣ್ಣ ವಯಸ್ಸಿನಲ್ಲೇ ಪೂರ್ಣಿಮಾ ಮಾಡಿದ ಸಾಧನೆಯ ಬಗ್ಗೆ ಮೆಚ್ಚಿ ಮಾತಾಡಿದ ಕಮಲಾದಾಸ್ `ಬಾಲ್ಯದಲ್ಲಿ ನೀನು ಪಡೆದಂತಹ ಶಿಕ್ಷಕಿಯರನ್ನು ಪಡೆದ ಭಾಗ್ಯ ನನಗಿರುತ್ತಿದ್ದರೆ ನನ್ನ ಸಾಧನೆಯು ಇನ್ನೂ ವಿಶೇಷ ರೀತಿಯಲ್ಲಿ ವೈಶಿಷ್ಟ್ಯಪೂರ್ಣವಾಗಿರುತ್ತಿತ್ತು. ನೀನು ಆ ದೃಷ್ಟಿಯಲ್ಲಿ ನನಗಿಂತ ಪುಣ್ಯವಂತೆ. ನಿನಗೆ ಒಳ್ಳೆಯದಾಗಲಿ. ಅನುಮತಿ ಪತ್ರವನ್ನು ನಾನು ಅಂಚೆಯಲ್ಲಿ ಕಳಿಸುತ್ತೇನೆ’ ಎಂದರು. ಅವರ ರೂಪ ಎಷ್ಟು ಆಕರ್ಷಣೀಯವೋ ಮಾತೂ ಅಷ್ಟೇ ಆಕರ್ಷಣೀಯ. ಆ ಕ್ಷಣದಲ್ಲಿ ಒಂದು ಸಾಲು ಬರೆದು ಅನುಮತಿ ಪತ್ರ ಕೊಡುವುದು ಅವರಿಗೆ ಸಾಧ್ಯವಿತ್ತು. ಆದರೆ ಅವರು ಕೊಡಲಿಲ್ಲ. ಬೆಣ್ಣೆಯಂತಹ ಮಾತಾಡಿ ಸತ್ಕರಿಸಿ ಮುಂದಿನ ವಾರದಲ್ಲೇ ಕಳಿಸುತ್ತೇನೆ ಎಂದು ನಂಬಿಸಿದರು. ನಾವು ಕೃತಜ್ಞತೆಯ ಭಾರದಿಂದ ಶಿರಬಾಗಿ ವಂದಿಸಿ ಊರಿಗೆ ಮರಳಿದೆವು. ಆಮೇಲೆ ಚಾತಕಪಕ್ಷಿಯಂತೆ ಅವರ ಪತ್ರಕ್ಕಾಗಿ ಕಾಯುವುದೇ ನಮ್ಮ ಕಾಯಕವಾಯಿತು.
ತಿಂಗಳು, ವರ್ಷಗಳು ಉರುಳಿದುವು. ೮೯ರ ಸುಮಾರಿಗೆ ಪೂರ್ಣಿಮಾ ಬೆಂಗಳೂರಿನಲ್ಲಿ ಉದ್ಯೋಗವರಸಿ ಅಲ್ಲೇ ನೆಲೆಯಾದಳು. ಆಗ ಕಮಲಾದಾಸ್ ಅವರ ಮಗ ಸೊಸೆಯ ಪರಿಚಯ ಅವಳಿಗೆ ಲಭಿಸಿದ್ದು ಯೋಗಾಯೋಗವೆನ್ನಬೇಕು. ಆಯುರ್ವೇದಿಕ್ ವೈದ್ಯೆಯಾಗಿ ಅವರ ಆತ್ಮೀಯ ವಲಯದೊಳಗೆ ಪ್ರವೇಶಿಸುವಷ್ಟು ಸಲುಗೆಯುಂಟಾದ ಮೇಲೆ ಮಗನಲ್ಲಿ ಈ ಪ್ರಸ್ತಾಪವೆತ್ತಿದಳು. ಆಗ ಕಮಲಾದಾಸ್ ಗಂಡನ ನಿಧನದ ಬಳಿಕ ಪೂನಾದಲ್ಲಿ ಇನ್ನೊಬ್ಬ ಮಗನ ಬಳಿ ಇದ್ದರು. ಬೆಂಗಳೂರಿನಲ್ಲಿ ಮಗನ ಮಧ್ಯಸ್ಥಿಕೆಯಿಂದ ಸುಮಾರು ಆರು ವರ್ಷಗಳ ದೀರ್ಘ ಕಾಯುವಿಕೆಯ ಬಳಿಕ ಕಮಲಾದಾಸ್ ಅನುಮತಿ ಪತ್ರ ನೀಡಿದರು. ೨೧-೮-೯೩ರಂದು ಬರೆದ ಅನುಮತಿ ಪತ್ರ ಈಗಲೂ ನನ್ನ ಬಳಿ ಇದೆ ಈ ಎಲ್ಲಾ ಘಟನೆಗಳಿಗೆ ಸಾಕ್ಷಿಯಾಗಿ.
ಅನುಮತಿ ಪತ್ರ ನೀಡಲು ಇಷ್ಟು ವರ್ಷ ವಿಳಂಬ ಮಾಡಿದ್ದೇಕೆ ಎಂಬುದು ನಮಗೆ ಇನ್ನೂ ನಿಗೂಢ. ಅವರ ಕೃತಿಗಳನ್ನು ಬೇರೆ ಬೇರೆ ಭಾಷೆಗೆ ಅನುವಾದಿಸುವವರು ಅವರಿಗೆ ಒಂದಿಷ್ಟು ಗೌರವಧನವನ್ನು ನೀಡುವುದು ಕ್ರಮ. ಅದಕ್ಕೆ ನಾವೂ ಬದ್ಧರಾಗಿದ್ದೆವು. ನಮ್ಮಿಂದ ಅದಕ್ಕಿಂತ ದೊಡ್ಡ ಮೊತ್ತವನ್ನು ನಿರೀಕ್ಷೆ ಮಾಡಿದ್ದರೇ? ಅದನ್ನು ನಮ್ಮ ಭೇಟಿಯ ಕಾಲದಲ್ಲಿ ಯಾಕೆ ಹೇಳಲಿಲ್ಲ? ಪೂರ್ಣಿಮಾ ಸಾಹಿತ್ಯ ಕ್ಷೇತ್ರದಲ್ಲಿ ಆಗ ತಾನೇ ಪ್ರವೇಶಿಸಿದವಳು ಅವಳಿಂದ ತನ್ನ ಕೃತಿಗೆ ನ್ಯಾಯ ಸಿಗಲಾರದು ಎಂದು ಭಾವಿಸಿದರೇ? ಅಥವಾ ಕನ್ನಡದಲ್ಲಿ ಪ್ರಕಟಣೆಗೆ ಬೇರಾರಿಗಾದರೂ ಅನುಮತಿ ನೀಡಿದ್ದರೇ? ಇದ್ಯಾವುದೂ ನಮಗೆ ಗೊತ್ತಿಲ್ಲ. ನಮ್ಮ ಊಹೆಗಳಷ್ಟೇ. ಅಂತೂ ಹೆಚ್ಚು ಕಡಿಮೆ ಆರು ವರ್ಷಗಳ ಕಾಯುವಿಕೆಯ ಬಳಿಕ ಅನುಮತಿ ಸಿಕ್ಕಿ ಅವಳ ಕೃತಿ ಪ್ರಕಟವೂ ಆಯಿತು. ೨೧ನೆಯ ಶತಮಾನದ ಹೊಸ್ತಿಲಲ್ಲಿರುವಾಗಲೇ ಕಮಲಾದಾಸ್ ಸಾಹಿತ್ಯ ಲೋಕಕ್ಕೇ ಶಾಕ್ ಟ್ರೀಟ್‌ಮೆಂಟ್ ಕೊಟ್ಟು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡದ್ದಲ್ಲದೆ ಮದುವೆಯೂ ಆದರು ಎಂಬ ವರ್ತಮಾನವು ವರ್ಷವಿಡೀ ಪತ್ರಿಕೆಗಳಲ್ಲಿ ದೃಶ್ಯಮಾಧ್ಯಮಗಳಲ್ಲಿ ಪರ, ವಿರೋಧ ಚರ್ಚೆಗೊಳಗಾಗಿ ಸುಮ್ಮನೆ ಕರಟ ಹೆರೆಯುವ ಸದ್ದು ಕೇಳುತ್ತಲೇ ಇತ್ತು. ತನ್ನ ಬರಹಗಳಿಂದ ಖ್ಯಾತಿಯನ್ನು ಸಂಪ್ರದಾಯವಾದಿಗಳಿಂದ ಅಪಖ್ಯಾತಿಯನ್ನು ಪಡೆದ ಕಮಲಾದಾಸ್ ಕೆಲವೊಮ್ಮೆ ತಮ್ಮ ದ್ವಂದ್ವ ಮನೋವೃತ್ತಿಯಿಂದ ಟೀಕೆಗೊಳಗಾಗಿದ್ದರು. ತನ್ನ ಆತ್ಮಕತೆಯನ್ನೇ ಕಾದಂಬರಿಯೆಂದು ಹೇಳಿಕೆ ನೀಡಿದ್ದೂ ಇದೆ. ಪರಿಸ್ಥಿತಿಯ ಒತ್ತಡಗಳು ಅವರನ್ನು ತನ್ನ ನಿಲುವಿಗೆ ವಿರುದ್ಧವಾಗಿ ಹೇಳಿಕೆ ನೀಡುವಂತೆ ಮಾಡಿರಬಹುದೇ? ಗೊತ್ತಿಲ್ಲ. ಆದರೆ ಭಾರತದ ಹೆಚ್ಚೇಕೆ ಪ್ರಪಂಚದ ಲೇಖಕಿಯರ ವ್ಯಕ್ತಿತ್ವ ಮತ್ತು ಸಾಹಿತ್ಯ ಕೃತಿಗಳನ್ನು ಗಮನಿಸಿದರೂ ಕಮಲಾದಾಸ್ ಅವರೆಲ್ಲರಿಗಿಂತ ಒಂದು ತೂಕ ಹೆಚ್ಚು ಮಾತ್ರವಲ್ಲ ಸ್ವಂತಿಕೆಯುಳ್ಳ ಲೇಖಕಿ ಎಂಬುದರಲ್ಲಿ ಎರಡು ಮಾತಿಲ್ಲ. ಕಮಲಾದಾಸ್ ನನ್ನ ಮೆಚ್ಚಿನ ಲೇಖಕಿ ಎಂದು ಅಭಿಮಾನದಿಂದ ಈ ಮಾತು ಹೇಳುತ್ತಿದ್ದೇನೆ.
ಮುಂದುವರಿಯಲಿದೆ