ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೊಂಬತ್ತು
ಸುಮಾರು ೩೦ – ೪೦ ವರ್ಷಗಳಿಂದೀಚೆಗೆ ನಮ್ಮ ನಿತ್ಯೋಪಯೋಗಿ ವಸ್ತುಗಳೆಲ್ಲವೂ ಪ್ಲಾಸ್ಟಿಕ್‌ನೊಂದಿಗೆ ಬೆಳೆಸಿಕೊಂಡ ನಂಟು ಆಘಾತಕಾರಿಯಾಗಿದೆ. ಅದರ ದುಷ್ಪರಿಣಾಮಗಳನ್ನು ಕಣ್ಣಾರೆ ಕಂಡರೂ ನಾಗರಿಕ ಸಮಾಜವಿನ್ನೂ ಅದರಿಂದ ಮುಕ್ತಿ ಪಡೆದಿಲ್ಲ. ಮುಕ್ತಿ ಪಡೆಯಲು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ನಾವು ಪ್ಲಾಸ್ಟಿಕ್ಕಿನೊಂದಿಗೆ ನಂಟು ಬೆಳೆಸಿಕೊಂಡಿದ್ದೇವೆ. ಬಾಟಲಿ ಹಾಲುಗಳ ಬದಲು ಪ್ಲಾಸ್ಟಿಕ್ ತೊಟ್ಟೆಗಳು ಬಂದು ಎಷ್ಟೋ ವರ್ಷಗಳಾಗಿವೆ. ಪಾದರಕ್ಷೆಗಳಲ್ಲಿ ಅದರದೇ ಸಾಮ್ರಾಜ್ಯ. ಸಮಾರಂಭಗಳಲ್ಲಿ ಸ್ಟೀಲ್ ಲೋಟಗಳು ಎಂದೋ ಕಾಣೆಯಾಗಿವೆ. ಮರದ ಕುರ್ಚಿ ಮೇಜುಗಳು ಪ್ರಾಚೀನ ವಸ್ತುಗಳಾಗಿಬಿಟ್ಟಿವೆ. ಅಡುಗೆ ಕೋಣೆಯಿಂದ ಚಾವಡಿಗೆ, ಬಚ್ಚಲು ಕೋಣೆಗೆ, ದಾಸ್ತಾನು ಕೋಣೆಗೆ ಹೆಚ್ಚೇಕೆ ದೇವರ ಕೋಣೆಗೆ ಬಂದರೂ ಪ್ಲಾಸ್ಟಿಕ್ ಪರಿಕರಗಳು ವಿಜೃಂಭಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಪ್ಲಾಸ್ಟಿಕನ್ನು ಮೊತ್ತಮೊದಲು ಸಂಶೋಧನೆ ಮಾಡಿದ ವಿಜ್ಞಾನಿಗಳಿಗೆ ಅದರ ಈಗಿನ ವಿಶ್ವರೂಪ ದರ್ಶನ ಬಹುಶಃ ಗೊತ್ತಿರಲಿಕ್ಕಿಲ್ಲ. ಕಾನೂನಿನ ಮೂಲಕ ಸರಕಾರ ಪ್ಲಾಸ್ಟಿಕ್ ನಿಷೇಧ ಜಾರಿಗೊಳಿಸಿದರೂ ಅದು ಒಂದು ಹಂತದವರೆಗೆ ಮಾತ್ರವೇ ಹೊರತು, ಪೂರ್ಣ ನಿಷೇಧ ಸಾಧ್ಯವಿಲ್ಲವೆಂಬ ಸತ್ಯ ಗೊತ್ತಾಗಿದೆ.
ಆದರೆ ಮೂವತ್ತೈದು ವರ್ಷಗಳ ಹಿಂದೆ ಸೇಕ್ರೆಡ್ ಹಾರ್ಟ್ಸ್ ಶಾಲೆಯ ವಿಜ್ಞಾನ ಸಂಘದ ವಿದ್ಯಾರ್ಥಿನಿಯರಿಂದ ನಾವು ಪ್ಲಾಸ್ಟಿಕ್ ನಿಷೇದದ ಬಗ್ಗೆ ಅರಿವು ಮೂಡಿಸಿದ ಒಂದು ಕಾರ್ಯಕ್ರಮ ನೆನಪಾಗುತ್ತದೆ. ವಿಜ್ಞಾನ ಶಿಕ್ಷಕಿ ಸೆಲಿನ್ ಡಿಸೋಜ ಅವರ ಯೋಜನೆ ಮತ್ತು ಯೋಚನೆಯಂತೆ ಶಾಲೆಯ ವಿಜ್ಞಾನ ಸಂಘದ ವಿದ್ಯಾರ್ಥಿನಿಯರೊಂದಿಗೆ ನಾವು ಕಾರ್ಯಪ್ರವೃತ್ತರಾದೆವು. ಶಕ್ತಿನಗರದ ಪೊಲೀಸ್ ಕ್ವಾರ್ಟರ್‍ಸ್ ಏರಿಯಾದ ಮನೆಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ಕಿನ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಿ ಪ್ರತೀ ಮನೆಯವರಿಗೂ ನಾವೇ ಒಂದು ಚೀಲ ನೀಡಿ, ಅದರಲ್ಲೇ ಪ್ಲಾಸ್ಟಿಕ್ ಹಾಕಬೇಕೆಂದೂ ಹೊರಗೆ ಬಿಸಾಡುವುದಾಗಲೀ ಸುಡುವುದಾಗಲೀ ಮಾಡಬಾರದೆಂದು ತಿಳುವಳಿಕೆ ನೀಡಿದೆವು. ನಾಲ್ಕು ವಾರಗಳ ಕಾಲ ಪ್ರತೀ ಮನೆಯಿಂದ ಪ್ಲಾಸ್ಟಿಕ್ ಚೀಲಗಳನ್ನು ಒಂದೇ ಕಡೆ ಸಂಗ್ರಹಿಸುವ ಕೆಲಸವನ್ನು ವಿಜ್ಞಾನ ಸಂಘದ ವಿದ್ಯಾರ್ಥಿನಿಯರು ಬಹಳ ಹುಮ್ಮಸ್ಸಿನಿಂದ ಮಾಡಿದ್ದರು. ಪ್ಲಾಸ್ಟಿಕ್ಕಿನ ರಾಶಿಯನ್ನು ಸಾಗಿಸಲು ಮಾಜಿ ಕಾರ್ಪೊರೇಟರ್ ಆಗಿದ್ದ ಬೇಬಿ ಕ್ಯಾಸ್ತಲಿನೋ ಅವರು ತಮ್ಮ ಲಾರಿಯನ್ನು ನೀಡಿ ಸಹಕರಿಸಿದರು. ಲಾರಿಗೆ ಮಕ್ಕಳು ಕಸ ತುಂಬಿಸುವಾಗ ಅಲ್ಲಿಗೆ ಬಂದ ಗಂಡಸೊಬ್ಬ ನಮ್ಮನ್ನು ತರಾಟೆಗೆ ತೆಗೆದುಕೊಂಡ. ಮಕ್ಕಳಿಂದ ಇಂತಹ ಕೆಲಸ ಯಾಕೆ ಮಾಡಿಸುತ್ತೀರಿ? ಇಂತಹ ಕೊಳಕು ಕೆಲಸ ಮಾಡಿ ಅವರ ಆರೋಗ್ಯ ಹಾಳಾದರೆ ಯಾರು ಹೊಣೆ? ಎಂದೆಲ್ಲಾ ನಮಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡ. ನಮ್ಮ ಸಮಜಾಯಿಷಿಯನ್ನು ಕೇಳುವ ಸ್ಥಿತಿಯಲ್ಲಿ ಅವನಿರಲಿಲ್ಲ. ಕುಡಿದ ಅಮಲಿನಲ್ಲಿ ಮಾತಾಡುತ್ತಿದ್ದ ಅವನಿಗೆ ಮಕ್ಕಳ ಆರೋಗ್ಯದ ಕಾಳಜಿಯಾದರೂ ಇದೆಯಲ್ಲಾ ಎಂದು ಸುಮ್ಮನಾದೆವು. ಆದರೆ ನಮಗೆ ಅತ್ಯಂತ ಖೇದದ ಸಂಗತಿಯಾಗಿ ಕಂಡದ್ದು ಏನೆಂದರೆ ಊರ ನಾಗರಿಕರು ನಮ್ಮ ಕೆಲಸವನ್ನು ಪರಿಸರ ಜಾಗೃತಿಯ ಕಾಳಜಿ ಎಂಬುದನ್ನು ಅರಿಯಲೇ ಇಲ್ಲ. ದೂರದಿಂದ ನೋಡಿ ನಕ್ಕವರು, ಸುಮ್ಮನೇ ಕೈಕಟ್ಟಿ ನಿಂತು ನೋಡಿದವರು ನಾವು ಮಾಡುತ್ತಿರುವುದು ತಮಾಷೆಯ ವ್ಯರ್ಥ ಕಾಲಹರಣದ ಆಟವೆಂದು ಮೋಜು ಅನುಭವಿಸಿದವರೇ ಸುತ್ತ ಮುತ್ತ ಇದ್ದರು. ನಾವು ಈ ಅರಿವು ಮೂಡಿಸುವಲ್ಲಿ ವಿಫಲರಾದದ್ದು ಸ್ಪಷ್ಟವಾಯಿತು. ಕನಿಷ್ಟ ನಾವು ನಮ್ಮ ವಿದ್ಯಾರ್ಥಿಗಳ ಪರಿಸರದ ಮನೆಯಲ್ಲಿ ಈ ಪ್ಲಾಸ್ಟಿಕ್ ಕಳೆಯನ್ನು ಕೀಳಲು ಪ್ರಯತ್ನಿಸೋಣವೆಂದು ಈ ಯೋಜನೆಯಲ್ಲಿ ತೊಡಗಿಕೊಂಡಿದ್ದೆವು. ಇದು ಹೊಳೆಯಲ್ಲಿ ಹುಣಸೆ ತೊಳೆದಂತೆ ಆಯಿತೇ? ಮುಂದೆ ಪ್ಲಾಸ್ಟಿಕ್ ಬಳಕೆಯ ವೇಗ ಎಷ್ಟು ಹೆಚ್ಚಾಯಿತೆಂದರೆ ಅದನ್ನು ತಡೆಯುವುದಕ್ಕೆ ನಮ್ಮ ಬಲಹೀನ ಕೈಗಳು ಸಾಲದೆಂದು ತಿಳಿಯಿತು.
ಇಂತಹ ಸಮಯದಲ್ಲೇ ಅಂದರೆ ಸುಮಾರು ೧೯೯೨ರಲ್ಲಿ ನಾವು ಕೆಲವು ಮಂದಿ ಗೆಳೆಯ ಗೆಳತಿಯರು ಸೇರಿ `ವೇದ’ ಎಂಬ ಸಂಸ್ಥೆಯನ್ನು ಕಟ್ಟಿದೆವು. ವಾಲಂಟರಿ ಎನ್‌ವಾಯರ್‍ನ್‌ಮೆಂಟ್ ಡೆವಲಪ್‌ಮೆಂಟ್ ಆಕ್ಷನ್ ಎಂಬ ಧ್ಯೇಯವುಳ್ಳ ಸಂಸ್ಥೆ ವೇದ ಆಯಿತು. ಗೋಕುಲ್‌ದಾಸ್ ಶೆಟ್ಟಿ, ಕೆರೆಮನೆ ನರಸಿಂಹ ಹೆಗ್ಡೆ, ಶಿವಾನಂದ ಹೆಗ್ಡೆ, ತೋನ್ಸೆ ಪುಷ್ಕಳಕುಮಾರ್, ಪುಷ್ಪ, ಲಕ್ಷ್ಮಣ ಮುಂತಾದ ಪರಿಸರಪ್ರೇಮಿಗಳ ಒಂದು ಒಕ್ಕೂಟವು ತನ್ನದೇ ಮಿತಿಯೊಳಗೆ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಈ ಸಂಸ್ಥೆಯ ಮೆದುಳು ಗೋಕುಲ್‌ದಾಸ್ ಶೆಟ್ಟಿಯವರು. ಬುದ್ಧಿ, ಭಾವ, ಪ್ರತಿಭೆಗಳ ಮಿಶ್ರಣವಾದ ಅವರಲ್ಲಿ ಪರಿಸರದ ರಕ್ಷಣೆಗಾಗಿ ತ್ರಿಕರಣಪೂರ್ವಕವಾಗಿ ದುಡಿಯುವ ಛಲವಿತ್ತು. ನಾವೆಲ್ಲರೂ ಅವರ ಕೈಗೆ ಕೈ ಜೋಡಿಸಿದೆವು.
ಪ್ಲಾಸ್ಟಿಕ್ ಕಳೆಯನ್ನು ಕೀಳಲು ಮಹಿಳೆಯರ ಸಹಕಾರ ಮುಖ್ಯವೆಂಬುದನ್ನು ಮನಗಂಡು ಅಲ್ಲಲ್ಲಿ ಮಹಿಳಾ ಸಂಘಟನೆಗಳನ್ನು ಮಾಡಿಸಿ ಅವರಿಗೆ ತಿಳಿವು ಮೂಡಿಸಿದೆವು. ಹೆಂಗುಸರು ಪ್ಲಾಸ್ಟಿಕ್‌ನಿಂದ ಮುಕ್ತಿ ಪಡೆಯಲು ಸುಡುವುದೇ ಪರಿಹಾರವೆಂದು ನಂಬಿ ನಿರಾಳವಾಗಿದ್ದರು. ಆದರೆ ಸುಡುವುದೂ ಪರಿಸರವನ್ನು ಕೆಡಿಸುತ್ತದೆಂದು ತಿಳಿಸಿಕೊಟ್ಟೆವು. ನಾನು ಕೆಲವು ಕಡೆಗಳಲ್ಲಿ ಹೀಗೆ ಭಾಷಣ ಕುಟ್ಟಿ ಬಂದಿದ್ದೆ. ಈ ಎಲ್ಲಾ ಮಾತುಗಳು ಅರಣ್ಯರೋದನವಾಯಿತೇ? ಯಾಕೆಂದರೆ ಪ್ಲಾಸ್ಟಿಕನ್ನು ಬಳಸಬೇಡಿ ಎಂದು ಹೇಳಿದರೆ ನಮ್ಮದು ತಪ್ಪಾಗುತ್ತದೆ. ನಮ್ಮನ್ನೇ ಗುರಾಯಿಸಿ ಪ್ರಶ್ನಿಸಿದವರಿದ್ದರು. ಹಾಗಾದರೆ ಇದಕ್ಕೆ ಪರ್ಯಾಯ ಏನು ಕಂಡುಕೊಂಡಿದ್ದೀರಿ, ಪ್ಲಾಸ್ಟಿಕ್ ಬಳಸದೆ ನೀವು ಎಷ್ಟು ದಿನ ಬದುಕಬಲ್ಲಿರಿ ಎಂದು ಸವಾಲು ಹಾಕಿದವರಿದ್ದರು. ಹೌದು, ಪ್ಲಾಸ್ಟಿಕ್ ಸರ್ವಾಂತರ್ಯಾಮಿಯಾಗಿ ವ್ಯಾಪಿಸಿತ್ತು. ಕೆಲವೊಮ್ಮೆ ನಮಗೆ ಅರಿವಿಲ್ಲದೆಯೇ ನಾವು ಪ್ಲಾಸ್ಟಿಕ್‌ನ ವಿವಿಧ ರೂಪಗಳಾದ ವಸ್ತುಗಳನ್ನು ಬಳಸುತ್ತಿದ್ದೆವು. ಬಳಸಿ ಬಿಸಾಡಿ ಎಂಬ ಸಂಸ್ಕೃತಿಯೇ ನಾಗರಿಕತೆಯ ಹೆಗ್ಗುರುತಾಗಿಬಿಟ್ಟಿತ್ತು. ಬಳಸಿದ್ದನ್ನು ಎಸೆಯಬೇಡಿ, ಸುಡಬೇಡಿ ಎಂದು ವಿನಂತಿ ಮಾಡುವುದು ಮಾತ್ರ ನಮ್ಮಿಂದ ಸಾಧ್ಯವಿತ್ತು. ಪ್ಲಾಸ್ಟಿಕ್ ಎಂಬ ಪುಟ್ಟ ವಸ್ತು ವಾಮನ ತ್ರಿವಿಕ್ರಮನಾದಂತೆ ಭೂಮಂಡಲವನ್ನೆಲ್ಲಾ ಆವರಿಸಿ ಅಟ್ಟಹಾಸ ಮಾಡುತ್ತಿತ್ತು. ಮಾನವನಿಗೆ ಸಕಲ ಕ್ಲೇಶ ನಿವಾರಕವಾಗಿಯೂ, ಸಕಲ ಶ್ರಮ ಪರಿಹಾರಕವಾಗಿಯೂ ವರ್ಣರಂಜಿತವಾಗಿಯೂ ಪ್ಲಾಸ್ಟಿಕ್ ಕಾಣತೊಡಗಿತ್ತು. ಮಾತ್ರವಲ್ಲ ಸುಲಭವಾಗಿ ಅಗ್ಗ ಬೆಲೆಯಲ್ಲಿ ಮಾನವನ ಉಪಯೋಗಕ್ಕೆ ದಕ್ಕತೊಡಗಿದ ಮೇಲೆ ಅದು ನಿಯಂತ್ರಣ ತಪ್ಪಿ ಬೆಳೆದ ರೀತಿ ಇದೆಯಲ್ಲಾ ಅದು ಉಂಟುಮಾಡಿದ ಅನಾಹುತಗಳಿಗೆ ಪ್ರಜ್ಞಾವಂತರು ತತ್ತರಿಸುವಂತಾಯಿತು. ಜಾನುವಾರುಗಳು ಸಾಯುವುದು, ಕೆರೆ, ಚರಂಡಿ, ತೋಡುಗಳು ಗಬ್ಬೆದ್ದು ನಾರುವುದು ಸಾಮಾನ್ಯ ಸಂಗತಿಗಳಾಗಿದ್ದವು.
ಆದುದರಿಂದ `ವೇದ’ವು ತನ್ನ ಪರಿಸರ ಕಾಳಜಿಯನ್ನು ವಿಸ್ತರಿಸಿತು. ಕುತ್ತಾರಿನಿಂದ ತೊಕ್ಕೊಟ್ಟಿನವರೆಗೆ ರಸ್ತೆಯ ಬದಿಯಲ್ಲಿ ಗಿಡ ನೆಟ್ಟು ಪರಿಸರ ರಕ್ಷಣೆಗೆ ಮುಂದಾಯಿತು. ಆ ಮರಗಳು ಇತ್ತೀಚೆಗೆ ರಸ್ತೆ ಅಗಲೀಕರಣದ ನೆಪದಲ್ಲಿ ಧರಾಶಾಯಿಯಾಗಿವೆ. ಅಭಿವೃದ್ಧಿಯ ಹೆಸರಿನಲ್ಲಿ ಲಕ್ಷಾಂತರ ಮರಗಳನ್ನು ಕಿತ್ತೆಸೆಯಲಾಗಿದೆ. ನಮ್ಮ ಜಿಲ್ಲೆಯಲ್ಲೇ ಚತುಷ್ಪಥ ರಸ್ತೆಯಾಗಿ ಸುಮಾರು ಐನೂರಕ್ಕೂ ಹೆಚ್ಚು ಮರಗಳು ಉರುಳಿವೆ. ಅದನ್ನು ವಿರೋಧಿಸುವವರನ್ನು ಸಮಾಜ ಮೂರ್ಖರೆಂದೇ ಭಾವಿಸಿದೆ. ಹಾಗಾಗಿ ಜನಗಳ ಮುಂದೆ ಈ ಗಂಭೀರ ವಿಷಯಗಳನ್ನು ಚರ್ಚಿಸುವಾಗ ತುಂಬಾ ಎಚ್ಚರ ವಹಿಸಬೇಕಾಗುತ್ತಿತ್ತು. ಗೋಕುಲ್‌ದಾಸ್ ಶೆಟ್ಟಿಯವರು ಪರಿಣತ ನಟನೂ ಲೇಖಕನೂ ಆದುದರಿಂದ ಸಣ್ಣ ಬೀದಿನಾಟಕ ತಂಡ ಕಟ್ಟಿದರು. ಸಣ್ಣ ನಾಟಕಗಳನ್ನು ಬರೆದು ವೇದದ ಗೆಳೆಯರು ಮತ್ತು ಪರಿಸರಾಸಕ್ತ ಮಿತ್ರರು ಸೇರಿ ಅಲ್ಲಲ್ಲಿ ಆಡಿ ತೋರಿಸಿದರು. ಕೆರೆಮನೆಯವರ ಪ್ರಯತ್ನದಿಂದ ಅಂಬ್ಲಮೊಗರಿನಲ್ಲಿ ರೈತ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ರೈತರು ಪ್ರಕೃತಿಯ ಕೂಸುಗಳು. ಪ್ರಕೃತಿ ನಾಶವೆಂಬ ಬ್ರಹ್ಮರಾಕ್ಷಸನೇ ದಂಡೆತ್ತಿ ಬಂದಾಗ ಅವನನ್ನೆದುರಿಸಲು ಒಂದು ಸಣ್ಣ ಗುರಾಣಿಯನ್ನಾದರೂ ರೈತನ ಕೈಗೆ ಕೊಡಲು ಸಾಧ್ಯವೇ ಎಂಬ ಯೋಚನೆ ನಮ್ಮದು. ಇದು ಸುನಾಮಿಯನ್ನು ಅಂಗೈಯಲ್ಲಿ ತಡೆದಂತೆ ವಿಫಲ ಪ್ರಯತ್ನವಾಯಿತೇ? ಪರಿಣಾಮವೆಂದರೆ ಕ್ರಮೇಣ ಗದ್ದೆಯಿಂದ ತೋಟಕ್ಕೆ ತೋಟದಿಂದ ಫ್ಲ್ಯಾಟ್‌ಗೆ ರೈತರು ಹಾರಿ ಬೇಸಾಯದ ಪರಿಕರಗಳನ್ನು ಮ್ಯೂಸಿಯಂನಲ್ಲಿಟ್ಟು ಒಬ್ಬೊಬ್ಬರೇ ಜಾಗ ಖಾಲಿ ಮಾಡಿದ್ದರು. ನಗರಗಳಿಗೆ ವಲಸೆ ಹೋಗಿದ್ದರು. ಇದನ್ನೇ ಅಭಿವೃದ್ಧಿ ಎಂದು ಬಹುತೇಕ ಮಂದಿ ನಂಬಿದಾಗ ನಮ್ಮ ಮಾತು ಗಂಟಲೊಳಗೇ ಹೂತುಹೋದವು. ತೊಕ್ಕೊಟ್ಟಿನಲ್ಲಿ ಉರಗತಜ್ಞರಾದ ಐತಾಳರಿಂದ ಹಾವು ಮತ್ತು ಪರಿಸರದ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು. ೯೫ರಲ್ಲಿ ಇರಬೇಕು. ಮಂಗಳೂರಿನ ಹಲವು ಪರಿಸರಾಸಕ್ತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಸಿ.ವಿ. ನಾಯಕ್ ಸಭಾಂಗಣದಲ್ಲಿ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಂದಿನ ಸಭೆಗೆ ಡಾ| ಶಿವರಾಮ ಕಾರಂತರು ಮುಖ್ಯ ಅತಿಥಿಯಾಗಿ ಬಂದಿದ್ದರು. ಅಂದು ಅವರು ಹೇಳಿದ ಮಾತು ಈಗಲೂ ನೆನಪಿದೆ. “ಆಧುನಿಕ ಸುಖ ಸಾಧನಗಳು ಮನುಷ್ಯನನ್ನು ಸೋಮಾರಿಯನ್ನಾಗಿ ಮಾಡುತ್ತಿವೆ. ವಿಜ್ಞಾನವು ಒದಗಿಸಿದ ಸೌಲಭ್ಯಗಳಿಗೆ ಗುಲಾಮರಾದಂತೆಲ್ಲಾ ನಿಸರ್ಗದತ್ತವಾದ ನಮ್ಮ ಶಕ್ತಿ ಕಡಿಮೆಯಾಗುತ್ತದೆ. ನಾವು ಆದಿಮಾನವರಾಗಿ ಮರಳಲಾರೆವು ನಿಜ. ಆದರೆ ಪ್ರಕೃತಿಯನ್ನು ಉಳಿಸುವ ಕಾಳಜಿ ಬೆಳೆಸಿಕೊಳ್ಳದಿದ್ದರೆ ನಮ್ಮ ಮುಂದಿನ ತಲೆಮಾರು ನಮ್ಮನ್ನು ಶಪಿಸುವುದು ಖಂಡಿತ” ಎಂಬ ಅರ್ಥದ ಮಾತುಗಳನ್ನಾಡಿದ್ದರು. ನಾವು ಮಾಡಿದ ಕೆಲಸಗಳಿಗೆ ಕಾರಂತಜ್ಜನಿಂದ ಸೈ ಎನಿಸಿಕೊಳ್ಳಬೇಕೆಂಬ ಆಸೆಯಿತ್ತು. ಅದು ಪೂರೈಸಿತು ಎಂಬ ಸಣ್ಣ ಸಮಾಧಾನವಷ್ಟೇ ಉಳಿಯಿತು. ಮುಂದಿನ ವರ್ಷಗಳಲ್ಲಿ ನಮ್ಮ ಬಳಗದ ಗೆಳತಿಯರು ತಮ್ಮ ಉದ್ಯೋಗ ನಿಮಿತ್ತ ದೂರ ಸರಿದರು. ಕಾರ್ಯಕ್ರಮ ರೂಪಿಸುವುದು ಕಷ್ಟವಾಯಿತು. ಅದೆಲ್ಲಕ್ಕಿಂತ ಮಿಗಿಲಾಗಿ ಯಾವ ಉದ್ದೇಶಕ್ಕಾಗಿ ನಾವು `ವೇದ’ವನ್ನು ಕಟ್ಟಿದ್ದೆವೋ ಅದನ್ನು ಉಳಿಸಿಕೊಳ್ಳಲು ತುಂಬಾ ಹೆಣಗಬೇಕಾಯಿತು. ಅಭಿವೃದ್ಧಿ ಎಂಬ ಕನಸು ಕಾಣುವ ಮಂದಿಯೇ ಹೆಚ್ಚಿರುವಾಗ ನಮ್ಮ ಮಾತುಗಳು ಕ್ಷೀಣವಾದುವು. ಒಕ್ಕಣ್ಣಿನವರೇ ಹೆಚ್ಚಿರುವ ರಾಜ್ಯದಲ್ಲಿ ಎರಡು ಕಣ್ಣಿರುವವರಿಂದಲೇ ಅಪಾಯವೆಂಬಂತಹ ಪರಿಸ್ಥಿತಿ ನಿರ್ಮಾಣವಾಯಿತು. ಸಮಾಜದ ವಕ್ರದೃಷ್ಟಿ ನಮ್ಮನ್ನು ಈಟಿಯಂತೆ ಇರಿಯುತ್ತಿತ್ತು. ಎಲ್ಲಾ ಗೆಳೆಯರು ನಮ್ಮೆದೆಯಲ್ಲಿ ಒಂದಷ್ಟು ಸ್ವಚ್ಛ ಪರಿಸರದ ಆಸೆಗಳನ್ನು ತುಂಬಿಸಿಕೊಂಡು ಪ್ಲಾಸ್ಟಿಕ್ ಕಳೆಗಳನ್ನು ನಿರ್ಮೂಲನ ಮಾಡುವ ಕನಸುಗಳನ್ನು ಕಣ್ಣಲ್ಲಿ ತುಂಬಿಕೊಂಡು ನಮ್ಮ ಕಾರ್ಯಕ್ಷೇತ್ರವನ್ನು ಸಮಾಜದಿಂದ ಕುಟುಂಬಕ್ಕೆ ಸೀಮಿತಗೊಳಿಸಿ ಸುಮ್ಮನಾದುದು ವೇದದ ಸೋಲಲ್ಲ, ಸಮಾಜದ ಸೋಲು ಎನ್ನದೆ ನಿರ್ವಾಹವಿಲ್ಲ.
ಸೆಸ್ಕಾ ಎಂಬ ಸ್ವಯಂಸೇವಾ ಸಂಸ್ಥೆಯೊಂದಿಗೆ ಸಂಬಂಧ ಬೆಳೆದದ್ದು ಗೋಕುಲ್‌ದಾಸ್ ಶೆಟ್ಟಿಯವರಿಂದ. ೮೦ರ ದಶಕದಲ್ಲಿ ಅಭಿವ್ಯಕ್ತ ಎಂಬ ನಾಟಕ ತಂಡದ ಮೂಲಕ ಸೆಸ್ಕಾದ ನಿರ್ದೇಶಕರಾದ ಎಸ್ಕೆ (ಶ್ರೀಧರ್ ಕೆ.) ಮಾಡಿದ ಕೆಲಸ ಅವಿಸ್ಮರಣೀಯ. ಆ ಹತ್ತು ಹದಿನೈದು ವರ್ಷಗಳ ಕಾಲ ಕನ್ನಡ ನಾಟಕಗಳ ಸುವರ್ಣಯುಗವೆಂದೇ ಹೇಳಬಹುದು. ಭೂಮಿಕಾ ತಂಡ, ಸಂಕೇತ್ ಕಲಾವಿದರು ಮುಂತಾದವರು ಒಬ್ಬರಿಗಿಂತ ಒಬ್ಬರು ಹುಮ್ಮನಸ್ಸಿನಿಂದ ನಾಟಕಗಳನ್ನು ಆಡಿ ತೋರಿಸುತ್ತಿದ್ದರು. ಈ ನಾಟಕಗಳು ಬಹುಜನ ಸಮುದಾಯವನ್ನು ಆಕರ್ಷಿಸಲು ವಿಫಲವಾದುದರಿಂದಲೋ ಏನೋ ನಂತರದ ವರ್ಷಗಳಲ್ಲಿ ತುಳು ನಾಟಕಗಳು ಜನರ ಮನಸ್ಸನ್ನು ಗೆದ್ದುಬಿಟ್ಟವು. ೯೦ರ ದಶಕದ ಬಳಿಕ ತುಳು ನಾಟಕಗಳ ಸುವರ್ಣಯುಗವನ್ನೇ ಕಾಣುವಂತಾಯಿತು. ಅದರ ಮುಂದುವರಿಕೆಯಾಗಿ ಈಗ ತುಳು ಸಿನೆಮಾಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ. ೧೯೮೧ರಲ್ಲಿ ಸೆಸ್ಕಾ ಸಂಸ್ಥೆಯು ಶ್ರೀಧರ್ ಕೆ.ಯವರಿಂದ ಸ್ಥಾಪನೆಯಾಯಿತು. ಸೆಂಟರ್ ಫಾರ್ ಸೋಶಲ್ ಎಂಡ್ ಕಲ್ಚರಲ್ ಆಕ್ಷನ್ ಎಂಬ ಧ್ಯೇಯದೊಂದಿಗೆ ಇದು ಹುಟ್ಟಿತು. ಆ ಕಾಲದ ನಾಟಕ, ಸಿನೆಮಾ ಕ್ಷೇತ್ರದಲ್ಲಿ ನುರಿತವರಾದ ಶಶಿಧರ ಅಡಪ, ಬಿ.ಎಸ್. ರಂಗಾ ಮುಂತಾದವರು ಈ ಸಂಸ್ಥೆಯ ಆಡಳಿತ ಮಂಡಳಿಯಲ್ಲಿದ್ದು ಕಲೆ, ಸಾಹಿತ್ಯ, ಸಮಾಜಸೇವೆ ಮುಂತಾದ ಹಲವು ಆಯಾಮಗಳಿಂದ ಕಾರ್ಯನಿರ್ವಹಿಸುವಂತಾಯಿತು. ಸೆಸ್ಕಾದೊಂದಿಗೆ ಕರಾವಳಿ ಲೇಖಕಿಯರ ವಾಚಕಿಯರ ಸಂಘವು ಸ್ತ್ರೀವಾದಿ ಸಿದ್ಧಾಂತಗಳ ಬಗ್ಗೆ ಎರಡು ದಿನಗಳ ವಿಚಾರಸಂಕಿರಣವನ್ನು ಉಳ್ಳಾಲದಲ್ಲಿ ಹಮ್ಮಿಕೊಂಡಿತು. ನಮ್ಮ ಚಿಂತನೆಗಳಿಗೆ ಹೊಸ ದಿಕ್ಕನ್ನು ತೋರಿಸಿತು. ಕಾಲೇಜಿನ ಮಕ್ಕಳಿಗೆ ಎರಡು ದಿನಗಳ ಕಾವ್ಯ ಕಮ್ಮಟವನ್ನು ಲೇಖಕಿಯರ ಸಂಘದೊಂದಿಗೆ ಸಂಯೋಜನೆ ಮಾಡಿದ್ದು ಹಲವು ಉದಯೋನ್ಮುಖ ಕವಿಗಳ ಹುಟ್ಟಿಗೆ ಕಾರಣವಾಯಿತು. ಕಲೆ, ನಾಟಕ, ಸಾಹಿತ್ಯದ ಜೊತೆಯಲ್ಲಿ ಸಮಾಜದಲ್ಲಿ ತೀರಾ ಕೆಳವರ್ಗದ ಜನರಲ್ಲಿ ಸಂಘಟನೆ ಮತ್ತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿತು. ದೂರ ದೂರದ ಹಲವಾರು ಹಳ್ಳಿಗಳಲ್ಲಿ ಮಹಿಳೆ ಮತ್ತು ಮಕ್ಕಳ ಪ್ರತಿಭೆಗಳಿಗೆ ಅವಕಾಶ ಒದಗಿಸಲು ಕೆಲವು ತರಬೇತಿ ಕಮ್ಮಟಗಳನ್ನು ನಡೆಸಲಾಯಿತು. ಕುಡುಪು ಮಹಿಳಾ ಮಂಡಲದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸೆಸ್ಕಾ ಸಂಸ್ಥೆಯ ವತಿಯಿಂದ ನಡೆದದ್ದನ್ನು ಹಿಂದೆಯೇ ಸ್ಮರಿಸಿದ್ದೇನೆ.
ಈಗ ೩೫ ವರ್ಷಗಳ ಬಳಿಕ ಅದೇ ಹಿಂದಿನ ಬದ್ಧತೆ ಮತ್ತು ಕಾಳಜಿಯನ್ನು ಈಗ ಸೆಸ್ಕಾದಿಂದ ನಿರೀಕ್ಷೆ ಮಾಡಲಾಗದು. ಶ್ರೀಧರ್ ಅವರ ಅಕಾಲ ನಿಧನದ ಬಳಿಕ ಅವರ ಪತ್ನಿ ಲೂಸಿ ಪಿರೇರಾ ಅಧ್ಯಕ್ಷೆಯಾಗಿ ತನ್ನೆಲ್ಲಾ ಶಕ್ತಿ ಸಾಮರ್ಥ್ಯವನ್ನು ಧಾರೆಯೆರೆದು ಮುನ್ನಡೆಸಿದರು. ರಾಜಶೇಖರ್ ಎಂಬ ಪ್ರತಿಭಾವಂತ ಕಾರ್ಯದರ್ಶಿಯಾಗಿ ಈ ಸಂಸ್ಥೆಯ ತೇರನ್ನು ತನಗೆ ಸಾಧ್ಯವಾದಷ್ಟು ದೂರ ಎಳೆದರು. ಕೊನೆಗೂ ಕಾರ್ಯಕ್ರಮಕ್ಕಾಗಿ ಸಂಪನ್ಮೂಲಗಳನ್ನು ಗಳಿಸುವುದು ತ್ರಾಸದಾಯಕವಾಯಿತು ಮತ್ತು ಲೂಸಿ ಪಿರೇರಾ ನಿವೃತ್ತರಾದ ಮೇಲೆ ರಾಜಶೇಖರ್ ಸಿನಿಮಾ ನಿರ್ಮಾಣದಲ್ಲಿ ವ್ಯಸ್ತರಾದ ಮೇಲೆ ಸೆಸ್ಕಾದ ಸ್ಥಾಪನೆಯ ಉದ್ದೇಶಗಳು ಪಲ್ಲಟಗೊಂಡವು. ಅವರು ಬೆಂಗಳೂರಿನಲ್ಲಿ ನೆಲೆಗೊಂಡರು. ಕೊನೆಗೆ ಇಲ್ಲಿಯ ಕಟ್ಟಡವನ್ನು ಮಾರಿ ಲೂಸಿ ಪಿರೇರಾ ಕೂಡಾ ಬೆಂಗಳೂರಿಗೆ ಸ್ಥಳಾಂತರಗೊಂಡರು. ಅಲ್ಲಿ ಮಕ್ಕಳಲ್ಲಿ ನಾಟಕಾಸಕ್ತಿ ಮತ್ತು ಇತರ ಕೌಶಲ್ಯಗಳನ್ನು ಬೆಳೆಸುವ ಕಾರ್ಯಕ್ರಮಗಳನ್ನು ತನ್ನದೇ ಮಿತಿಯೊಳಗೆ ಮಾಡುತ್ತಿದ್ದಾರೆ. ಸೆಸ್ಕಾದ ಜಮೀನನ್ನು ಮಾರುವ ನಿರ್ಧಾರದ ಬಗ್ಗೆ ಪರ ವಿರೋಧ ಅಭಿಪ್ರಾಯಗಳಿದ್ದುವು. ಧಾರಾಳ ಸಲಹೆಗಳನ್ನು ಕೊಡುವ ಮಂದಿ ಇದ್ದರು. ಆದರೆ ಉಳ್ಳಾಲದ ಆ ಹಳೇ ಮನೆಯಲ್ಲಿ ಒಬ್ಬಂಟಿಯಾಗಿ ಬದುಕುತ್ತಾ ಸೆಸ್ಕಾದ ಕಾರ್ಯಕ್ರಮಗಳಿಗೆ ಆರ್ಥಿಕ ಸಂಪನ್ಮೂಲಕ್ಕಾಗಿ ಪರದಾಡುವುದು ಲೂಸಿಯ ಸಾಮರ್ಥ್ಯಕ್ಕೆ ಮೀರಿದ ವಿಷಯವಾಗಿತ್ತು. ಅಲ್ಲಿ ಅವರೊಂದಿಗೆ ಕೈಜೋಡಿಸುವವರಿಲ್ಲದೆ ಸೆಸ್ಕಾವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿದರು. ಒಂದು ಸಂಸ್ಥೆಯು ಎಷ್ಟು ಉಚ್ಛ್ರಾಯ ಸ್ಥಿತಿಯನ್ನು ಕಂಡಿತೋ ಅಷ್ಟೇ ವೇಗದಲ್ಲಿ ಅದು ನಿರ್ಬಲಗೊಂಡದ್ದನ್ನು ಕಂಡು ನಾನು ನೊಂದಿದ್ದೇನೆ. ಸಮಾಜಸೇವಾ ಕಾರ್ಯಕರ್ತರಲ್ಲಿ ಒಳ್ಳೆಯ ಹೃದಯ, ಹುಮ್ಮಸ್ಸು, ಸಾಮಾಜಿಕ ಕಳಕಳಿ, ಪ್ರತಿಭೆ ಎಲ್ಲಾ ಇದ್ದೂ ಸರಿಯಾದ ಮುಂದಾಲೋಚನೆಯಿಲ್ಲದ ಕಾರ್ಯಕರ್ತರಿಂದ ಮತ್ತು ಮಾರ್ಗದರ್ಶನ ಮಾಡಬಲ್ಲ ಮುಖಂಡರಿಲ್ಲದ್ದರಿಂದ ಸೆಸ್ಕಾ ಬಡವಾದುದನ್ನು ಕಂಡು ವ್ಯಥೆಪಟ್ಟಿದ್ದೇನೆ. ಸೆಸ್ಕಾದಿಂದ ನನಗೇನು ಸಿಕ್ಕಿತು? ಎಂದು ಕೇಳುವ ಬದಲು ನಾನು ಅದಕ್ಕೇನು ಕೊಟ್ಟಿದ್ದೇನೆ ಎಂದು ಕೇಳುವವರಿರಬೇಕಿತ್ತು. ಆದರೆ ಅದು ನಿತ್ರಾಣಗೊಂಡ ಸ್ಥಿತಿಯಲ್ಲಿದ್ದಾಗ ಬಲ ತುಂಬಲು ನಾವೇನು ನೀಡಿದ್ದೇವೆ ಎಂದು ಪ್ರಶ್ನಿಸುವವರಿರಲಿಲ್ಲ. ಸಮಾಜಸೇವೆಯ ಕೆಟ್ಟ ಮಾದರಿಗಳನ್ನು ಮತ್ತು ಆದರ್ಶದ ಮಾದರಿ ಎರಡನ್ನೂ ನಾನು ಸೆಸ್ಕಾದಲ್ಲಿ ಕಂಡಿದ್ದೇನೆ. ಮಹಾಬಲೇಶ್ವರ ಹೆಬ್ಬಾರ್, ವಿಷ್ಣು ನಾಯಕ್, ಮೋಹನಚಂದ್ರ ಮುಂತಾದವರು ಸದಸ್ಯರಾಗಿರುವ ಸೆಸ್ಕಾದೊಂದಿಗೆ ಸುಮಾರು ೨೫ ವರ್ಷಕ್ಕೂ ಹೆಚ್ಚಿನ ಬಾಂಧವ್ಯ ನನ್ನದು. ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಒಂದು ಕಾಲದಲ್ಲಿ ವಿಶಿಷ್ಟವಾದ ಸಂಚಲನವನ್ನುಂಟುಮಾಡಿದ ಸೆಸ್ಕಾವನ್ನು ಮಂಗಳೂರಿನಿಂದ ಬೆಂಗಳೂರಿಗೆ ಸಾಗಹಾಕುವುದನ್ನು ತಡೆಯಲು ನಾವು ಸದಸ್ಯರೆಲ್ಲರೂ ಅಸಮರ್ಥರಾದೆವೆಂಬ ಕೊರಗು ಈಗಲೂ ನನ್ನನ್ನು ಬಾಧಿಸುತ್ತಿದೆ. ಆದರ್ಶದ ಕನಸು ಸಾಕಾರಗೊಂಡದ್ದು, ಮತ್ತೆ ಅದು ನನ್ನೆದುರೇ ಚೂರು ಚೂರಾಗಿ ಮುರಿದುಬಿದ್ದದ್ದು ನಮ್ಮ ದೌರ್ಭಾಗ್ಯವೆನ್ನದೆ ಬೇರೆ ವಿಧಿಯಿಲ್ಲ.
(ಮುಂದುವರಿಯಲಿದೆ)
ನನಗೂ ಪ್ರತಿ ಸಲ ಪ್ಲಾಸ್ಟಿಕ್ ಮುಟ್ಟಿದಾಗ ವೇದನೆಯಾಗುತದಎ. ಇಂದಿನ ದಿನಗಳಲ್ಲಿ ಇದನ್ನು ಕೇಳುವವರು ಯಾರು?. ಒಳ್ಳೆಯ ಬರಹ. ಓದಿಸುತಾ ಹೋಗುತ್ತದೆ. ಮುಂದಿನದಕ ಕಾಯುತ್ತ ಇದೇನು.