ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ – ಅಧ್ಯಾಯ ಮೂವತ್ತೊಂದು

ಬರವಣಿಗೆ ನನ್ನ ಕೈಹಿಡಿದದ್ದು, ನನ್ನನ್ನು ಮೇಲೆತ್ತಿ ನಿಲ್ಲಿಸಿದ್ದು ಇವೆಲ್ಲಾ ತನ್ನಷ್ಟಕ್ಕೆ ಆಗಲಿಲ್ಲ. ಅದಕ್ಕೂ ಪ್ರೇರಣೆ ನೀಡಿದವರ ನೆನಪು ಹಸಿರಾಗಿದೆ. ಮಂಗಳೂರು ಆಕಾಶವಾಣಿ ಪ್ರಾರಂಭವಾದ ಕಾಲದಲ್ಲಿ ಮೆನನ್ ಎಂಬ ಅಧಿಕಾರಿ ಇದ್ದರು. ಅವರ ಪ್ರೇರಣೆಯಿಂದ ನಾನೂ ಕೆ. ಲೀಲಾವತಿಯವರೂ ಸೇರಿ ಒಂದು ಸಣ್ಣ ಕಾರ್ಯಕ್ರಮ ನೀಡಿದ್ದು ಆಕಾಶವಾಣಿಗೆ ನನ್ನ ಮೊದಲ ಪ್ರವೇಶ. ಆ ಬಳಿಕ ಜಯಶ್ರೀ ಶ್ಯಾನುಭೋಗ್ ಅವರು ಕಾರ್ಯಕ್ರಮ ನಿರ್ವಾಹಕರಾಗಿದ್ದಾಗ ನನ್ನಿಂದ ಕತೆ, ಲೇಖನಗಳನ್ನು ಬರೆಸಿದ್ದು, ಪತ್ರಿಕೆಗೆ ಕಳಿಸಲು ಒತ್ತಾಯಿಸಿದ್ದು ನಿನ್ನೆ ಮೊನ್ನೆ ನಡೆದಂತೆ ನೆನಪಿದೆ. ಆಕಾಶವಾಣಿಯಲ್ಲಿ ನಮ್ಮದೇ ಧ್ವನಿಯನ್ನು ಕೇಳುವುದು ಒಂದು ರೀತಿಯ ಪುಲಕವುಂಟುಮಾಡಿದರೆ, ಪತ್ರಿಕೆಯಲ್ಲಿ ಕತೆಯೋ ಲೇಖನವೋ ಪ್ರಕಟವಾದಾಗ ಉಂಟಾಗುವ ರೋಮಾಂಚನ ಹೇಗಿತ್ತೆಂದರೆ ನನ್ನ ಕಾಲು ನೆಲದ ಮೇಲಿಂದ ಆಕಾಶದಲ್ಲಿ ತೇಲಿದಂತಹ ಅನುಭವವಾಗುತ್ತಿತ್ತು. ಎಲ್ಲಾ ಲೇಖಕರಿಗೂ ಈ ಪ್ರಥಮ ಖುಷಿಯನ್ನು ಮರೆಯಲು ಸಾಧ್ಯವಾಗದು. ನಾನು ಸಾಹಿತ್ಯಲೋಕದಲ್ಲಿ ಪರಿಚಿತಳಾದದ್ದು ಕತೆಗಳ ಮೂಲಕ. ತುಷಾರ, ಉದಯವಾಣಿ, ಜನವಾಹಿನಿ, ಮಲ್ಲಿಗೆ, ವನಿತಾ, ಅಕ್ಷಯ ಮುಂತಾದ ಪತ್ರಿಕೆಗಳಲ್ಲಿ ಕತೆಗಳು ಪ್ರಕಟವಾಗುತ್ತಾ ಬಂದುವು. ತುಷಾರದ ಸಂಪಾದಕರಾದ ಈಶ್ವರಯ್ಯನವರು ನಮ್ಮಂತಹ ಉದಯೋನ್ಮುಖ ಬರಹಗಾರರಿಗೆಲ್ಲಾ ಚೈತನ್ಯ ತುಂಬುವ ಶಕ್ತಿಕೇಂದ್ರವಾಗಿದ್ದರು. ಮಲ್ಲಿಗೆಯ ಸಂಪಾದಕರಾಗಿದ್ದ ಗಂಡಸಿ ವಿಶ್ವೇಶ್ವರರು ಪತ್ನೀ ಸಮೇತರಾಗಿ ನನ್ನ ಮನೆ ಹುಡುಕಿಕೊಂಡು ಬಂದದ್ದು ಕತೆಗಾರ್ತಿಯಾಗಿ ನನ್ನ ಅಸ್ತಿತ್ವವನ್ನು ಅಂದು ದೃಢಪಡಿಸಿತು.

೮೦ರ ದಶಕದಲ್ಲೇ ಇರಬೇಕು. ನನ್ನ ಕತೆಗಳನ್ನು ಓದಿ ಮೆಚ್ಚಿಕೊಂಡ ಅಭಿಮಾನಿಗಳಿದ್ದರು. ಆಗ ಈಗಿನಂತೆ ಲೇಖಕಿಯರ ವಿಳಾಸವನ್ನು ಭಾವಚಿತ್ರವನ್ನು ಮುದ್ರಿಸುತ್ತಿರಲಿಲ್ಲ. ನನ್ನ ವಿಳಾಸವನ್ನು ಪತ್ರಿಕಾ ಕಚೇರಿಯಿಂದಲೇ ಪಡೆದು ಪತ್ರ ಬರೆದವರಿದ್ದರು. ಅವರಲ್ಲಿ ವರದರಾಜ ಅಯ್ಯಂಗಾರ್ ಎಂಬವನನ್ನು ಮರೆಯಲು ಸಾಧ್ಯವಿಲ್ಲ. ಬಾಲ್‌ಪಾಯಿಂಟ್ ಪೆನ್ನುಗಳ ಒಂದು ಪೆಟ್ಟಿಗೆಯನ್ನೇ ಉಡುಗೊರೆಯಾಗಿ ಕಳಿಸಿದ ಅವನು ಕ್ರಮೇಣ ನನ್ನೊಂದಿಗೆ ಪತ್ರಸಂಪರ್ಕ ಬೆಳೆಸಿಕೊಂಡ. ಪೆನ್ನುಗಳನ್ನು ಕಳಿಸಿಕೊಟ್ಟ ಹಂಗಿತ್ತಲ್ಲಾ ನನಗೆ. ಹಾಗಾಗಿ ನಾನೂ ಪತ್ರ ಬರೆಯತೊಡಗಿದೆ. ಒಂದೆರಡು ವರ್ಷ ಕಳೆದಿರಬಹುದು. ಒಂದು ದಿನ ಪತ್ರದಲ್ಲಿ ತಾನು ಬಹಳ ಸಂಕಷ್ಟಕ್ಕೀಡಾಗಿದ್ದೇನೆ. ದಯವಿಟ್ಟು ನನಗೆ ಆರ್ಥಿಕ ಸಹಾಯ ಮಾಡಿ ಎಂದು ಪತ್ರ ಬರೆದ. ಅಲ್ಲಿಗೆ ಅವನೊಂದಿಗಿನ ಪತ್ರಸಂಪರ್ಕ ನಿಲ್ಲಿಸಿದೆ. ಮತ್ತೆ ತಿಳಿಯಿತು ಅಭಿಮಾನಿ ಎಂಬ ಸೋಗು ಹಾಕಿ ಲೇಖಕ, ಲೇಖಕಿಯರಿಂದ ಸಾಧ್ಯವಾದಷ್ಟು ಹಣ ಸುಲಿಯುವುದು ಕೆಲವರ ದಂಧೆಯೇ ಆಗಿತ್ತು ಎಂದು. ಅನೇಕ ಲೇಖಕರೂ ಮೋಸ ಹೋದ ಪ್ರಕರಣಗಳು ಆಗ ಪತ್ರಿಕೆಯಲ್ಲಿ ಪ್ರಕಟವಾಗಿದ್ದುವು. ನನಗೆ ವಿಚಿತ್ರ ಅಂತ ಅನಿಸುವುದು ನನ್ನಂತಹ ಒಂಟಿ ಮಹಿಳೆಯನ್ನು ಆರ್ಥಿಕವಾಗಿ ಮಾತ್ರವಲ್ಲ, ಮಾನಸಿಕವಾಗಿ, ದೈಹಿಕವಾಗಿ ದುರುಪಯೋಗಪಡಿಸಿಕೊಳ್ಳುವ ಕೆಲವು ಗಂಡಸರ ಮನೋಭಾವ. ಒಂಟಿ ಹೆಣ್ಣು ಎಂಬುದನ್ನರಿತ ಕೂಡಲೇ ಕೆಲವು ಗಂಡಸರು ಯಾವ ಧೈರ್ಯದಲ್ಲೋ ಹತ್ತಿರ ಬರುತ್ತಿದ್ದರು. ಇವಳು ತನಗೆ ದಕ್ಕಬಲ್ಲಳು. ಇವಳಿಂದ ಎಷ್ಟು ಸುಲಿಗೆ ಮಾಡಬಹುದು ಎಂದು ತಪ್ಪು ಲೆಕ್ಕಾಚಾರದಿಂದ ವರ್ತಿಸುವುದಿದೆಯಲ್ಲಾ, ಇದನ್ನು ಕಂಡು ಸೋಜಿಗಪಟ್ಟಿದ್ದೇನೆ. ಈ ನನ್ನ ಅಭಿಮಾನೀ ಬಳಗವೆಂದು ಮುಖವಾಡ ತೊಟ್ಟವರು ಆಕಾಶದಲ್ಲಿ ತೇಲುತ್ತಿದ್ದ ನನ್ನ ಕಾಲುಗಳನ್ನು ನೆಲಕ್ಕೆ ತಂದು ನಿಲ್ಲಿಸಿ ಸತ್ಯದರ್ಶನ ಮಾಡಿಸಿಬಿಟ್ಟರು. ಆ ಕಾರಣಕ್ಕಾಗಿಯಾದರೂ ನಾನವರಿಗೆ ಚಿರಋಣಿಯಾಗಿದ್ದೇನೆ. ಕಾರಣವಿಲ್ಲದ ಕೋಪ, ಲಾಭವಿಲ್ಲದ ಮಾತು, ಪ್ರಗತಿ ಇಲ್ಲದ ಬದಲಾವಣೆ, ಅಪರಿಚಿತರಲ್ಲಿ ವಿಶ್ವಾಸ, ಶತ್ರುಗಳನ್ನು ಸ್ನೇಹಿತರೆಂದು ಭ್ರಮಿಸುವುದು ಇವೆಲ್ಲಾ ದಡ್ಡರ ಲಕ್ಷಣಗಳಂತೆ. ಇವೆಲ್ಲಾ ಲಕ್ಷಣಗಳು ನನ್ನಲ್ಲಿದ್ದವು. ಈ ದಡ್ಡತನವನ್ನು ಅರಿಯುವಂತೆ ಮಾಡಿದವರು ಈ ಅಭಿಮಾನೀ ಬಳಗದವರು. ಇನ್ನೊಬ್ಬರಿಂದ ನೋವಿಗೆ ಗುರಿಯಾಗದೆ ಈ ಪ್ರಪಂಚದಲ್ಲಿ ಯಾರೂ ಬದುಕಲು ಸಾಧ್ಯವಿಲ್ಲವಲ್ಲಾ.

ಇದೇ ಸಮಯದಲ್ಲಿ ಗುರುವಾಣಿ ಪತ್ರಿಕೆಯ ಸಂಪಾದಕರಾಗಿದ್ದ ಪಾ. ಸಂಜೀವ ಬೋಳಾರರು ನನ್ನಿಂದ ನಿಯತವಾಗಿ ಒಂದಷ್ಟು ಲೇಖನಗಳನ್ನು ಬರೆಸಿದರು. ಕಥಾಪ್ರಕಾರದಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡಬೇಕಾಗಿದ್ದ ನನ್ನನ್ನು ಪತ್ರಿಕಾ ಲೇಖನಗಳು ಕೈಹಿಡಿದವು. ಕತೆಗಳು ಹೆಚ್ಚು ಕಡಿಮೆ ನನ್ನ ಕೈತಪ್ಪಿದವು. ಶ್ರೇಷ್ಠ ಕತೆಗಾರರ ಕತೆಗಾರ್ತಿಯರ ಕತೆಗಳನ್ನು ಹೆಚ್ಚು ಹೆಚ್ಚು ಓದಿದಂತೆಲ್ಲಾ ನನ್ನ ಕತೆಯು ಎಷ್ಟು ಕಳಪೆಯಾಗಿದೆ ಎಂದು ಅರ್ಥವಾಯಿತು. ಉತ್ತಮ ಕೃತಿಗಳನ್ನು ಓದುತ್ತಾ ಹೋದಂತೆಲ್ಲಾ ನಾನು ಲೇಖನಗಳನ್ನು ಬರೆಯಲೇಬಾರದು ಎಂದು ಭಾವಿಸಿಕೊಂಡದ್ದೂ ಇದೆ. ಆದರೆ ನನ್ನ ಸುತ್ತಮುತ್ತ ನಡೆಯುವ ಸಮಸ್ಯೆಗಳನ್ನು ಕಂಡದ್ದು, ಕೇಳಿದ್ದು, ಅನುಭವಿಸಿದ್ದು, ಓದಿದ್ದು ಇವುಗಳ ಬಗ್ಗೆ ಪ್ರತಿಕ್ರಿಯೆ ತೋರಲೇಬೇಕು ಎಂಬ ಒತ್ತಡಗಳು ಹೆಚ್ಚಾದಂತೆಲ್ಲಾ ಲೇಖನಗಳು ರೂಪುಗೊಂಡವು.

೧೯೮೭ರ ಡಿಸೆಂಬರ್ ತಿಂಗಳಲ್ಲಿ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ನಂಟು ಬೆಸೆಯಿತು. ಈ ಸಂಘ ಸ್ಥಾಪನೆಯಾಗುವ ಎರಡು ವರ್ಷಗಳ ಮೊದಲೇ ಬೋಳಂತಕೋಡಿ ಈಶ್ವರ ಭಟ್ಟರು, ವಿ.ಬಿ. ಮೊಳೆಯಾರರು ಇಲ್ಲಿನ ಲೇಖಕಿಯರ ಮನಸ್ಸಿನಲ್ಲಿ ಆ ಆಸೆಯ ಬೀಜ ಬಿತ್ತಿದ್ದರು. ಮಂಗಳೂರಿನ ಕನ್ನಡ ಸಂಘದ ಕಾರ್ಯದರ್ಶಿಯಾಗಿ ಚಂದ್ರಕಲಾ ನಂದಾವರರು ಕಾಸರಗೋಡು ಉಡುಪಿ ಜಿಲ್ಲೆಗಳ ಲೇಖಕಿಯರನ್ನು ಸೇರಿಸಿ ಒಂದು ಸಮ್ಮೇಳನ ಮಾಡಿಸಿ ನಮ್ಮಲ್ಲಿ ಹೊಸ ಚೈತನ್ಯ ತುಂಬಿಸಿದರು. ಲೇಖಕಿಯರದ್ದೇ ಪ್ರತ್ಯೇಕ ಸಂಘ ಬೇಕೇ? ಎಂದು ಆಗ ಕುಹಕವಾಡಿದವರಿದ್ದರು. ಲೇಖಕಿಯರ ಬರಹಗಳಿಗೆ, ಪ್ರತಿಭೆಗಳಿಗೆ ಯಾವ ಗೌರವವೂ ಇಲ್ಲದ ಕಾಲವದು. ಲೇಖಕಿಯರ ಕೃತಿಗಳನ್ನು ಅಂಚಿಗೆ ಸರಿಸಿ ನಿರ್ಲಕ್ಷಿಸುತ್ತಿದ್ದ ವಿಮರ್ಶಕರೇ ಆಗ ಹೆಚ್ಚಿದ್ದರು. ಆದುದರಿಂದ ನಮ್ಮದೇ ಕೃತಿಗಳನ್ನು ನಾವೇ ಮೌಲ್ಯಮಾಪನ ಮಾಡಲಿಕ್ಕೆ, ವಿಮರ್ಶೆಯ ಅಳತೆಗೋಲಿನಿಂದ ಪರೀಕ್ಷಿಸಲಿಕ್ಕೆ ನಮ್ಮದೇ ಒಂದು ಸಂಘದ ಅಗತ್ಯ ಹೆಚ್ಚಿತ್ತು. ಲೇಖಕಿಯರ ಜೊತೆಗೆ ವಾಚಕಿಯರನ್ನೂ ಸೇರಿಸುವ ಅಗತ್ಯವನ್ನು ಮನಗಂಡದ್ದು ಬಹುಶಃ ಕರಾವಳಿಯವರು ಮಾತ್ರ ಎಂದು ನನ್ನ ಭಾವನೆ. ಲೇಖಕಿಯರಿಗೇನೇ ತಾವು ಲೇಖಕಿಯರು ಹೌದೋ ಅಲ್ಲವೋ ಎಂಬ ಅನುಮಾನವಿತ್ತು. ಹಾಗಾಗಿ ಸಂಘಕ್ಕೆ ಸೇರಲು ಹಿಂಜರಿಕೆ ಇತ್ತು. ಆದುದರಿಂದ ವಾಚಕಿಯರನ್ನು ಸೇರಿಸಿಕೊಳ್ಳಬೇಕಾಯಿತು. ಕ್ರಮೇಣ ಸಹವಾಸ ದೋಷದಿಂದ ಅವರೂ ಲೇಖಕಿಯರಾಗಿ ರೂಪುಗೊಂಡದ್ದು ಸಂಘದ ಸಾಧನೆಗಳಲ್ಲಿ ಮುಖ್ಯವಾಗಿದೆ. ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖಕಿಯರ ಕತೆ, ಕವನ, ಲೇಖನಗಳನ್ನು ಓದಿ ನಮ್ಮ ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು, ಅದರ ಧನಾತ್ಮಕ ಅಂಶ ಮತ್ತು ಋಣಾತ್ಮಕ ಅಂಶಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಇದೊಂದು ವೇದಿಕೆಯಾಯಿತು. ಬರೆದುದರಲ್ಲಿ ಕಾಳೆಷ್ಟು, ಜೊಳ್ಳೆಷ್ಟು ಎಂಬ ಅರಿವು ಲೇಖಕಿಯರಲ್ಲಿ ಮೂಡತೊಡಗಿತು. ಕಳೆದ ಮೂವತ್ತು ವರ್ಷಗಳಿಂದೀಚೆಗೆ ಕರಾವಳಿಯ ಈ ಲೇಖಕಿಯರು ಮಾಡಿದ ಸಾಧನೆ ಸಣ್ಣದಲ್ಲ. ಸ್ವಂತ ಕಟ್ಟಡವನ್ನು ಹೊಂದಲು ಪ್ರತಿಯೊಬ್ಬ ಲೇಖಕಿಯರೂ ಇಟ್ಟಿಗೆ ಹೊತ್ತಿದ್ದಾರೆ. ಉಡುಪಿ, ಕಾಸರಗೋಡು, ದಕ್ಷಿಣಕನ್ನಡವನ್ನೊಳಗೊಂಡಂತೆ ಹೆಚ್ಚಿನ ಎಲ್ಲಾ ಲೇಖಕಿಯರು ಈ ಸಂಘದ ಸದಸ್ಯೆಯರಾಗಿದ್ದಾರೆ.

ಪ್ರಾರಂಭವಾದ ನಾಲ್ಕೈದು ವರ್ಷಗಳಲ್ಲೇ ಕಾರ್ಕಳದ ಕೆಲವು ಲೇಖಕಿಯರು ಇದರ ಕವಲಾಗಿ ಹುಟ್ಟಿಕೊಂಡರು. ಕೆಲವು ವರ್ಷಗಳ ಬಳಿಕ ಉಡುಪಿಯ ಕೆಲವು ಲೇಖಕಿಯರೂ ಅಲ್ಲಿ ಒಂದು ಸಂಘ ಕಟ್ಟಿದರು. ಮಂಗಳೂರು ಕೇಂದ್ರಿತವಾದ ಸಂಘದ ಕಾರ್ಯಕ್ರಮಗಳು ಹೀಗೆ ವಿಕೇಂದ್ರೀಕರಣಗೊಂಡವು. ಕಾರ್ಯಕ್ರಮಗಳಿಗೆ ಮಂಗಳೂರಿಗೆ ಬರಲು ಅಸಾಧ್ಯ ಎಂಬ ಕಾರಣದ ಜೊತೆಗೆ ನಮ್ಮ ಸಣ್ಣ ವರ್ತುಲದೊಳಗೇ ಗಟ್ಟಿಗೊಳ್ಳಬೇಕು ಎಂಬ ಹಂಬಲವೂ ಇತ್ತು. ಅದೂ ಅಲ್ಲದೆ ಆಲದ ಮರದಡಿಯಲ್ಲಿ ಹುಲ್ಲು ಹುಟ್ಟುವುದೆಂದು ನಿರೀಕ್ಷಿಸಲಾಗದು ಎಂಬ ಸಣ್ಣ ಅಸಮಾಧಾನವೂ ಹೊಗೆಯಾಡುತ್ತಿತ್ತು. ಇವೆಲ್ಲಾ ಮನುಷ್ಯಸಹಜವಾದ ಭಾವಲಹರಿಗಳು. ಎಲ್ಲಾ ಕವಲುಗಳ ಜೊತೆಗೂ ತಾಯಿಬೇರಿನಂತೆ ಲೇಖಕಿಯರ ಸಂಘವು ಒಮ್ಮನಸ್ಸಿನಿಂದ ಸಾಹಿತ್ಯ ಕೈಂಕರ್ಯವನ್ನು ನೆರವೇರಿಸಿದುದರಿಂದಲೇ ನಮ್ಮ ಸಂಘವು ರಾಜ್ಯಮಟ್ಟದಲ್ಲಿ ಎಲ್ಲರ ಗಮನ ಸೆಳೆಯುವಂತಾಯಿತು. ಇದಕ್ಕೆ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಎಲ್ಲರ ಸೇವೆಯೂ ಸಾರ್ಥಕವಾಗಿದೆ. ಹಾಲುಗಲ್ಲದ ಹಸುಳೆಯಂತಿದ್ದ ನನ್ನ ಸಾಹಿತ್ಯ ಸೇವೆಯನ್ನು ತೊಟ್ಟಿಲಲ್ಲಿಟ್ಟು ತೂಗಿ, ಉಣಿಸಿ, ಉಡಿಸಿ, ಕೊಂಡಾಡಿದ್ದು ಇದೇ ಸಂಘ. ಸಾಹಿತಿಗಳಿಗೆ ನೀಡುವ ದೊಡ್ಡ ಪ್ರಶಸ್ತಿ ಯಾವುದು ಗೊತ್ತೇ? ನಿಮ್ಮ ಬರಹ ಓದಿದೆ, ಅದರಲ್ಲಿ ಇಂತಹ ಓರೆಕೋರೆಗಳಿದ್ದುವು, ಈ ಅಂಶ ಖುಷಿಯಾಯಿತು ಎಂದು ಮುಕ್ತವಾಗಿ ಹೇಳುತ್ತಾರಲ್ಲಾ ಅದು. ಅಂತಹ ಒಂದು ದೊಡ್ಡ ಬಳಗ ಇಲ್ಲಿ ನನಗೆ ಲಭಿಸಿತು. ಸೋದರಿಯರಿಲ್ಲದೆ ಹುಟ್ಟಿದ ನನ್ನ ಕೊರಗನ್ನು ಅಳಿಸಿ ಹಾಕಿದ್ದು ಈ ನನ್ನ ಸಂಘದ ಗೆಳತಿಯರು. ಈ ಮೂವತ್ತು ವರ್ಷಗಳ ಸಾಂಗತ್ಯದಲ್ಲಿ ತಂಗಿಯಾಗಿ, ಅಕ್ಕನಾಗಿ, ಅಮ್ಮನಾಗಿ, ಅಜ್ಜಿಯಾಗಿ ನಾನು ಬದಲಾವಣೆಯಾಗುತ್ತಿದ್ದುದನ್ನು ಖುಶಿಯಿಂದ ಅನುಭವಿಸುತ್ತಿದ್ದೇನೆ.

ಹದಿನೈದು ವರ್ಷಗಳ ಹಿಂದಿನ ಮಾತು, ಹೊಸದಾಗಿ ಸಂಘಕ್ಕೆ ಸೇರಿದ ವಾಚಕಿಯೊಬ್ಬರು, “ಮೇಡಂ, ಲೇಖಕಿಯರು ಹೀಗೆ ಇರುತ್ತಾರೆ ಎಂಬ ದೊಡ್ಡ ಕಲ್ಪನೆಯಿಂದ ನಾನು ಬಂದಿದ್ದೆ. ನಿಮ್ಮನ್ನು ಕಂಡ ಮೇಲೆ ಇಂತಹವರೂ ಲೇಖಕಿಯರಾಗುತ್ತಾರಾ ಎಂದು ಆಶ್ಚರ್ಯಪಟ್ಟೆ. ಹೇಗೆ ನೀವಿಷ್ಟು ಸರಳವಾಗಿರುತ್ತೀರಿ?” ಎಂದು ಹೇಳಿದಾಗ ನನಗೇನೂ ಆಶ್ಚರ್ಯವಾಗಲಿಲ್ಲ. ನಮ್ಮ ನಾಡಿನ ಖ್ಯಾತ ವಿಮರ್ಶಕರಾದ ಮುರಲೀಧರ ಉಪಾಧ್ಯಾಯರು ನನ್ನನ್ನು ಕಂಡಿರಲಿಲ್ಲ. ನನ್ನ ಪುಸ್ತಕಗಳನ್ನು ವಿಮರ್ಶೆ ಮಾಡಿ ಪತ್ರಿಕೆಯಲ್ಲಿ ಬರೆದಿಟ್ಟರು. ಒಂದು ಸಾಹಿತ್ಯ ಸಮಾವೇಶದಲ್ಲಿ ನಾನು ಅವರನ್ನು ಕಂಡು ಪರಿಚಯ ಹೇಳಿದಾಗ ಆಶ್ಚರ್ಯಪಟ್ಟು `ನಿಮ್ಮ ಬಗ್ಗೆ ನಾನು ಊಹಿಸಿದ ಚಿತ್ರ ಬೇರೆಯೇ ಇತ್ತು’ ಎಂದು ತುಂಬು ಹೃದಯದ ನಗು ಚೆಲ್ಲಿದರು. ನನ್ನ ಲೇಖನ ಓದಿದ ಅನೇಕರು ನನ್ನನ್ನು ಕಂಡಾಗ “ರೋಹಿಣಿಯೆಂದರೆ ಯಾರೋ ಬಾಬ್‌ಕಟ್ ಲೇಡಿ ಇರಬಹುದೇನೋ ಎಂದುಕೊಂಡಿದ್ದೆ” ಎಂದು ಅಭಿಮಾನದಿಂದ ಹೇಳಿದಾಗ ನನ್ನ ಸರಳತೆ ನನಗೆ ವರವಾಗಿಯೇ ಕಂಡಿತ್ತು. ಇದು ಶಾಪವಾಗಿ ಕಾಡಿದ ಕತೆಗಳೂ ಬೇಕಾದಷ್ಟಿವೆ. ಅದಿರಲಿ, ಲೇಖಕಿಯರ ಸಂಘದಲ್ಲಿ ಅಧ್ಯಕ್ಷಗಿರಿ ಪಟ್ಟ ಒಂದು ಬಿಟ್ಟು ಬೇರೆಲ್ಲಾ ಪಟ್ಟವೇರಿದ ಅನುಭವ ನನಗಿದೆ. ನಾನು ಸಂಘಕ್ಕೆ ನೀಡಿದ್ದಕ್ಕಿಂತ ಹೆಚ್ಚು ಅಮೂಲ್ಯವಾದುದನ್ನು ಸಂಘ ನನಗೆ ನೀಡಿದೆ. ಅದು ಆತ್ಮಸ್ಥೈರ್ಯ. `ನಾವೆಲ್ಲಾ ನಿನ್ನ ಬೆನ್ನಿಗಿದ್ದೇವೆ. ನಡಿ ಮುಂದೆ’ ಎಂದು ಬೆನ್ನು ತಟ್ಟುವವರಿಲ್ಲದಿದ್ದರೆ ನಾನಿಷ್ಟು ಬರೆಯಲು ಸಾಧ್ಯವಾಗುತ್ತಿತ್ತೇ? ಬಹುಶಃ ಸಾಧ್ಯವಾಗುತ್ತಿರಲಿಲ್ಲವೆಂದೇ ನಾನು ಭಾವಿಸಿದ್ದೇನೆ.

ಕುಡುಪುನಲ್ಲಿ ಮಹಿಳಾ ಮಂಡಲ ಕಟ್ಟಿ ಸೆಸ್ಕಾದ ಸಹಕಾರದಲ್ಲಿ ಹಲವು ಕಾರ್ಯಕ್ರಮಗಳನ್ನು ಮಾಡಿದ್ದನ್ನು ಹಿಂದೆಯೇ ಹೇಳಿದ್ದೇನೆ. ಕುಡುಪು ಶಾಲೆಗೆ ವಿದ್ಯುತ್ ಸೌಲಭ್ಯ ಒದಗಿಸುವುದಕ್ಕೆ ಮಹಿಳಾ ಮಂಡಲದ ಸದಸ್ಯೆಯರು ಪ್ರಯತ್ನಿಸಿದ್ದರು. ಊರಿನವರಿಂದ ದೇಣಿಗೆ ಸಂಗ್ರಹಿಸಿ ಶಾಲೆಗೆ ಬೆಳಕು ನೀಡಲು ಊರವರು ಸಂತೋಷದಿಂದ ಸಹಕರಿಸಿದರು. ಉದ್ಘಾಟನಾ ಕಾರ್ಯಕ್ರಮ ನಡೆಯಿತು. ನಮಗೆ ದೇಣಿಗೆ ನೀಡುತ್ತೇವೆಂದು ಮಾತು ಕೊಟ್ಟವರ ಮನೆಗೆ ನಾವು ಮರುದಿನ ಹೋದೆವು. ಇದು ಆ ಶಾಲೆಯ ಹೆಡ್ಮಾಸ್ಟರ್ ವಾಸುದೇವರಾಯರಿಗೆ ವಂಚನೆಯಾಗಿ ಕಂಡಿತು. ಮಹಿಳಾ ಮಂಡಲದಿಂದ ಆಯವ್ಯಯ ಪಟ್ಟಿಗಾಗಿ ಶಾಲಾಭಿವೃದ್ಧಿ ಸಮಿತಿಯ ಮುಂದೆ ಬೇಡಿಕೆ ಇಟ್ಟರು. ಅದನ್ನು ನೀಡಿದ ಮೇಲೂ ಅವರ ಅಸಮಾಧಾನ ನಿವಾರಣೆಯಾಗಲಿಲ್ಲ. ಮಹಿಳಾ ಮಂಡಲದ ಸದಸ್ಯೆಯರು ಶಾಲೆಯ ಹೆಸರಲ್ಲಿ ಹಣ ಸಂಗ್ರಹ ಮಾಡುತ್ತಾರೆ ಎಂದು ಅವರು ಊರವರಲ್ಲಿ ಹೇಳಿದ್ದನ್ನು ಕೇಳಿ ನಾನು ದಂಗಾದೆ. ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುದು ಮತ್ತು ಅದನ್ನು ಖರ್ಚು ಮಾಡುವುದು ಎಷ್ಟು ಜವಾಬ್ದಾರಿಯ ಕೆಲಸವೆಂದು ಅರ್ಥವಾಯಿತು. ನಾವು ಪ್ರಾಮಾಣಿಕರಾಗಿದ್ದೇವೆ. ಸತ್ಯ ಹೇಳುತ್ತೇವೆ ಎಂದು ಹೇಳಿದರೆ ಸಾಲದು. ಅದಕ್ಕೆ ಸಾಕ್ಷಿಗಳನ್ನೂ ನೀಡಬೇಕಾಗುತ್ತದೆಂಬ ಪಾಠ ಇದರಿಂದ ಕಲಿತೆ. ಸಾಮಾಜಿಕ ಸಂಸ್ಥೆಯಲ್ಲಿ ತೊಡಗಿಸಿಕೊಂಡಾಗ ಪ್ರಾಮಾಣಿಕತೆ ಎಷ್ಟು ಅಮೂಲ್ಯವಾದುದೆಂದು ಅರಿತೆ.

೨೦೦೦ದಲ್ಲಿ ಇರಬೇಕು ಚಂದ್ರಕಲಾ ಜಿ. ಭಟ್ ಅವರು ನಮ್ಮ ಜಿಲ್ಲೆಯಲ್ಲಿ ರಾಜ್ಯ ದಕ್ಷತಾ ಮಹಿಳಾ ಸಮಿತಿಯ ಒಂದು ಶಾಖೆಯನ್ನು ತೆರೆಯುವ ನಿರ್ಧಾರ ಮಾಡಿದರು. ಅವರ ಅಧ್ಯಕ್ಷತೆಯಲ್ಲಿ ಸಮಿತಿ ಸ್ಥಾಪನೆಗೊಂಡಿತು. ಎಲಿಜಬೆತ್ ಪಿರೇರಾ ಕಾನೂನು ಸಲಹೆಗಾರರಾಗಿ ಮನೋರಮಾ ಎಂ. ಭಟ್ ಮತ್ತು ಯಶವಂತಿ ಆಳ್ವ ಕಾರ್ಯದರ್ಶಿಗಳಾಗಿ ವಿಜಯಾ ಶೆಣೈ ಕೋಶಾಧಿಕಾರಿಯಾಗಿ ಸರಳಾ ಕಾಂಚನ್, ಸುಮನಾ ಪಿಂಟೋ ಮತ್ತು ನಾನು ಸದಸ್ಯೆಯರಾಗಿ ಒಂದು ಶುಭದಿನದಂದು ಪ್ರಾರಂಭ ಮಾಡಿದೆವು. ರಾಜ್ಯ ದಕ್ಷತಾ ಸಮಿತಿಯ ಅಧ್ಯಕ್ಷೆ ಶರಣ್ಯ ಹೆಗ್ಡೆಯವರು ಸಮಾರಂಭಕ್ಕೆ ಬಂದು ಹರಸಿ ಉತ್ತೇಜನ ನೀಡಿದರು. ನಾವೇ ಸದಸ್ಯೆಯರು ಒಂದಷ್ಟು ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸಿ ಕಾರ್ಯಕ್ರಮ ಮಾಡಿದೆವು. ಆದರೆ ಸಾರ್ವಜನಿಕರಿಂದ ದೇಣಿಗೆ ಪಡೆಯದೆ ಸಾರ್ವಜನಿಕ ಕಾರ್ಯಕ್ರಮಗಳನ್ನು ನೆರವೇರಿಸಲು ಸಾಧ್ಯವಿಲ್ಲ ಎಂಬ ಸತ್ಯ ಗೊತ್ತಾಯಿತು. ಮಹಿಳಾ ಸಬಲೀಕರಣಕ್ಕಾಗಿ ಕೆಲವು ಕಾರ್ಯಕ್ರಮ ಮಾಡಿದೆವು. ಶೋಷಿತರ, ದೌರ್ಜನ್ಯಕ್ಕೊಳಗಾದ ಮಹಿಳೆಯರ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರಕ್ಕಾಗಿ ಪ್ರಯತ್ನಪಟ್ಟೆವು. ಸರಕಾರೀ ಪ್ರಾಯೋಜಿತ ಕಾರ್ಯಕ್ರಮಗಳನ್ನು ಮಾಡಬಹುದಿತ್ತು. ಅದನ್ನು ಪಡೆಯಲು ಕಚೇರಿ ಸುತ್ತುವಷ್ಟು ಆಸಕ್ತಿ ಈ ಸಮಿತಿಯ ಯಾರಿಗೂ ಇರಲಿಲ್ಲ. ಹಾಗಾಗಿ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಕಾನೂನು ಸಲಹೆ ನೀಡುತ್ತಾ ಅವರಲ್ಲಿ ಭರವಸೆ ತುಂಬುವ ಮತ್ತು ಮಾರ್ಗದರ್ಶನ ನೀಡುವ ಕೆಲಸವನ್ನು ಮಾತ್ರ ಮಾಡಿದ ಸಮಾಧಾನ ದಕ್ಷತಾ ಸಮಿತಿಗಿದೆ.

ಈ ಮಧ್ಯೆ ಮನೋರಮಾ ಎಂ. ಭಟ್ ಅವರು ಸಾಧನಾ ಬಳಗವನ್ನು ಕಟ್ಟಿಕೊಂಡು ಒಂದಿಷ್ಟು ಸಂಗೀತ ನಾಟಕಗಳ ಕಾರ್ಯಕ್ರಮ ನೀಡಿದ್ದು ನೆನಪಾಗುತ್ತದೆ. ಚಂದ್ರಕಲಾ ಜಿ. ಭಟ್, ಶ್ರೀಕಲಾ, ರತ್ನಾವತಿ ಬೈಕಾಡಿ, ಜನಾರ್ದನ ಬೈಕಾಡಿ ಇವರೆಲ್ಲಾ ಸೇರಿ ಸಾಧನಾ ಬಳಗ ಒಂದು ನಾಟಕ ತಂಡ ಕಟ್ಟಿತು. ಮೈಸೂರಿನ ಡಾ. ರಾಮನಾಥ್ ಅವರ ನಿರ್ದೇಶನದಲ್ಲಿ ಡಾ. ಶಿವರಾಮ ಕಾರಂತರ ಕಿಸಾಗೌತಮಿ ನಾಟಕವನ್ನು ಅಭಿನಯಿಸಲಾಯಿತು. ಕಾರಂತರ ಶತಮಾನೋತ್ಸವ ಆಚರಣೆಯ ಸಮಯದಲ್ಲಿ ಅಲ್ಲಲ್ಲಿ ಈ ನಾಟಕ ಪ್ರದರ್ಶನವನ್ನು ಮಾಡಲಾಯಿತು. ಇದು ಸಾಧನಾ ಬಳಗದ ಸಣ್ಣ ಪ್ರಯತ್ನ. ಮಹಾನ್ ಪ್ರಯತ್ನಗಳ ಮೂಲದಲ್ಲಿ ಕೀರ್ತಿಯ ಆಶೆಯಿರುತ್ತದೆ. ಯಶಸ್ಸಿನ ಆಶೆಯಿಲ್ಲದೆ ಮಾಡಿದ ಈ ಪ್ರಯತ್ನವಷ್ಟೇ ಬಳಗದ ಸಾಧನೆ. ಮುಂದೆ ಅವರವರ ಕೆಲಸಗಳ ಒತ್ತಡಗಳಲ್ಲೂ ಸಂಗೀತ, ನಾಟಕಗಳ ಅಭಿರುಚಿಗಳನ್ನು ತಮಗೆ ಅನುಕೂಲವೊದಗಿದಂತೆ ತೊಡಗಿಸಿಕೊಂಡರು ಎಂಬಷ್ಟಕ್ಕೆ ತೃಪ್ತರಾದರು. ಯಾಕೆಂದರೆ ನಮ್ಮ ಶಕ್ತಿಗೆ ಮೀರಿದುದನ್ನು ಮಾಡಹೊರಟರೆ ಯಾವ ಕೆಲಸವೂ ಸುಸೂತ್ರವಾಗಿ ಸಾಗದು. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬ ಗಾದೆಯಿದೆಯಲ್ಲಾ ಹಾಗಾಯಿತು. ಒಂದು ಸಂಘಟನೆ ಮಾಡುವುದು ಸುಲಭ. ಮತ್ತೆ ಅದನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಎದುರಾಗುವ ಅಡ್ಡಿಗಳೇನು ಎಂಬುದು ಚೆನ್ನಾಗಿ ಮನದಟ್ಟಾಯಿತು.

(ಮುಂದುವರಿಯಲಿದೆ)