ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ – ಅಧ್ಯಾಯ ಮೂವತ್ತೆರಡು
೨೦೦೨ರಲ್ಲಿ ಇರಬೇಕು. ಅಲೋಶಿಯಸ್ ಕಾಲೇಜಿನಲ್ಲಿ ಒಂದು ಕಾರ್ಯಕ್ರಮವಿತ್ತು. ಅಲ್ಲಿಗೆ ಡಾ. ಶ್ರೀನಿವಾಸ ಹಾವನೂರರು ಬಂದಿದ್ದರು. ಡಾ. ಕೆ.ವಿ. ಜಲಜಾಕ್ಷಿಯವರು ನನ್ನನ್ನು ಅವರಿಗೆ ಪರಿಚಯ ಮಾಡಿಸಿದರು. ಹಾವನೂರರ ಸಂಶೋಧನೆಯ ಕೆಲಸದಲ್ಲಿ ಸಹಾಯ ಮಾಡಬಹುದೇ ಎಂದು ಕೇಳಿದಾಗ, “ಸಂಶೋಧನೆ ಏನೆಂದು ಗೊತ್ತಿಲ್ಲ. ಆದರೆ ಕಲಿಯುವ ಉತ್ಸಾಹವಿದೆ” ಎಂದೆ. ಮರುದಿನದಿಂದ ಬಲ್ಮಠದ ಕರ್ನಾಟಕ ಥಿಯೋಲೋಜಿಕಲ್ ಕಾಲೇಜಿನ ಆವರಣದೊಳಗೆ, ಅವರಿರುವ ಮನೆಯಲ್ಲಿ ನಾವು ಕೆಲವು ಗೆಳತಿಯರು ಸಂಜೆ ಪ್ರತಿದಿನ ನಾಲ್ಕರಿಂದ ಆರು ಗಂಟೆಯವರೆಗೆ ಸೇರಿ, ಹಾವನೂರರು ನಮಗೆ ಒಪ್ಪಿಸಿದ ಕೆಲಸಗಳನ್ನು ಮಾಡತೊಡಗಿದೆವು. ಡಾ. ಕೆ.ವಿ. ಜಲಜಾಕ್ಷಿ, ದೇವಿಕಾ ನಾಗೇಶ್, ಮೀನಾಕ್ಷಿ ರಾಮಚಂದ್ರ, ರಂಜಿನಿ ಶೆಟ್ಟಿ ಮತ್ತು ನಾನು ಸಂಶೋಧನಾ ಸಹಾಯಕಿಯರಾದರೆ, ನನ್ನ ಶಿಷ್ಯೆ ಶೋಭಾ ಕಂಪ್ಯೂಟರಿನ ಕೆಲಸದಲ್ಲಿ ಸಹಾಯ ಮಾಡತೊಡಗಿದಳು.
೭೫ರ ಇಳಿವಯಸ್ಸಿನಲ್ಲೂ ಹಾವನೂರರ ಕಾರ್ಯಕ್ಷಮತೆಯನ್ನು ಕಂಡು ನಾವು ಬೆರಗಾದೆವು. ಕೆಲಸಗಳನ್ನು ಆದಷ್ಟು ಬೇಗ ಮಾಡಿ ಮುಗಿಸಬೇಕೆಂಬ ಅವಸರವಿದ್ದವರಂತೆ ಸಾಹಿತ್ಯಕ್ಕೆ ಸಂಬಂಧಿಸಿದ ಹಲವು ಕೆಲಸಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಪೂರ್ಣಗೊಳಿಸುವ ತರಾತುರಿಯಲ್ಲಿದ್ದರು. ಕನ್ನಡ ಸಾಹಿತ್ಯ ಚರಿತ್ರೆಯನ್ನು ತಮ್ಮದೇ ದೃಷ್ಟಿಯಲ್ಲಿ ವರ್ಗೀಕರಣ ಮಾಡಿ ಕೃತಿಗಳನ್ನು ಅವುಗಳ ವಸ್ತುವಿಗನುಗುಣವಾಗಿ ವಿಂಗಡಿಸಿದ್ದರು. ಉದಾಹರಣೆಗೆ ಮಂತ್ರ ತಂತ್ರಕ್ಕೆ ಸಂಬಂಧಿಸಿದ ಕೃತಿ, ಜ್ಯೋತಿಷ್ಯಕ್ಕೆ ಸಂಬಂಧಿಸಿದ್ದು, ವಾಸ್ತುವಿಗೆ, ಶಿಲ್ಪಕ್ಕೆ, ಗಣಿತಕ್ಕೆ ಹೀಗೆ ವಿಂಗಡಿಸಿ ಪ್ರತೀ ಕೃತಿಗಳಲ್ಲಿರುವ ವಸ್ತುವಿನ ಸಂಕ್ಷಿಪ್ತ ವಿವರಣೆಯನ್ನು ನೀಡುವ ಬರೆಹಗಳನ್ನು ನಮ್ಮಿಂದ ಬರೆಸಿದರು. ಹಸ್ತಪ್ರತಿಗಳ ಸಂಗ್ರಹವಿರುವ ಸುಮಾರು ೧೦-೧೨ ಸಂಪುಟಗಳಿಂದ ವಿಷಯವನ್ನು ಸಂಗ್ರಹಿಸುತ್ತಿದ್ದೆವು. ಪ್ರಾಚೀನ ಕಾವ್ಯಗಳಲ್ಲಿ ಬರುವ ಸೂರ್ಯೋದಯ, ಚಂದ್ರೋದಯ ಮುಂತಾದ ಪ್ರಕೃತಿ ವರ್ಣನೆಗೆ ಸಂಬಂಧಿಸಿದ ಶ್ಲೋಕಗಳನ್ನು ಒಂದೇ ಕಡೆ ಸಂಗ್ರಹಿಸುವ ಕೆಲಸ ಮಾಡಿಸಿದರು. ರಾಜ್ಯದ ಕನ್ನಡ ಪತ್ರಿಕೆಗಳ ಚರಿತ್ರೆಯನ್ನು ಸಂಗ್ರಹಿಸಿದರು. ದಾಸರ ಕೀರ್ತನೆಗಳಲ್ಲಿ ಬರುವ ಪದ ವೈಶಿಷ್ಟ್ಟಗಳನ್ನು ಸಂಗ್ರಹಿಸಿದರು. ಹೀಗೆ ಇಂತಹ ಹಲವು ಕೆಲಸಗಳನ್ನು ಒಬ್ಬೊಬ್ಬರಿಗೆ ಒಪ್ಪಿಸಿ ಅವರು ಮೇಲ್ವಿಚಾರಣೆ ಮಾಡಿದರು. ತಾನೂ ಕೆಲಸ ಮಾಡಿ ನಮ್ಮನ್ನೂ ಕೆಲಸಕ್ಕೆ ಹಚ್ಚುವ ಅವರ ಕಾರ್ಯತಂತ್ರವೇ ವಿಶಿಷ್ಟವಾಗಿತ್ತು.
ನಾಲ್ಕು ಗಂಟೆಗೆ ಕೆಲಸ ಪ್ರಾರಂಭವಾದರೆ ಐದು ಗಂಟೆಗೆ ಸಣ್ಣ ಬ್ರೇಕ್ ಇರುತ್ತಿತ್ತು. ಆಗ ಅವರದೇ ನಳಪಾಕದ ಅಡುಗೆಯ ವೈಶಿಷ್ಟ್ಯತೆಯುಳ್ಳ ತಿಂಡಿ ಮತ್ತು ಚಾ ನಮಗೆಲ್ಲಾ ನೀಡಿ ತಾನೂ ಸೇವಿಸಿ ತೃಪ್ತರಾಗುತ್ತಿದ್ದ ಅವರ ಸತ್ಕಾರಕ್ಕೆ ನಾವು ಮೂಕರಾಗುತ್ತಿದ್ದೆವು. ಕೆ.ಟಿ.ಸಿ.ಯಲ್ಲಿ ಲೈಬ್ರೆರಿಯ ಮೇಲ್ವಿಚಾರಣೆ, ಮನೆಗೆ ಬಂದರೆ ಈ ಕೆಲಸ. ಹಾಗೆಯೇ ಅಡುಗೆಕೋಣೆಯಲ್ಲಿ ಪಳಗಿದ ಪಾಕ ನೈಪುಣ್ಯ ಇವೆಲ್ಲಾ ಒತ್ತಡಗಳು ಇದ್ದೂ ತಣ್ಣಗೆ ಶಾಂತವಾಗಿ ವರ್ತಿಸುವ ಅವರ ಸ್ವಭಾವ ಕಂಡು ಸೋಜಿಗಪಟ್ಟಿದ್ದೇವೆ. ಕೆ.ಟಿ.ಸಿ.ಯ ಗ್ರಂಥಪಾಲಕರಾದ ಬೆನೆಟ್ ಅಮ್ಮನ್ನರೊಂದಿಗೆ ಸದಾ ನಡೆಯುವ ಹುಸಿ ಮುನಿಸುಗಳು ಜಗಳಗಳು, ಮಾತುಕತೆಗಳು, ಸಲ್ಲಾಪಗಳು ನಮಗೆ ರಂಜನೆಯನ್ನೀಯುತ್ತಿದ್ದುವು. ಮಧ್ಯೆ ಯಾರಾದರೂ ಅವರನ್ನು ಭೇಟಿ ಮಾಡಲು ಬರುತ್ತಿದ್ದರು. ಎಲ್ಲವನ್ನೂ ಏಕಕಾಲದಲ್ಲಿ ಅಷ್ಟಭುಜಗಳಿಂದ ನಿಭಾಯಿಸುವಂತೆ ಅವರು ಕಾಣುತ್ತಿದ್ದರು. ಡಾ. ಪ್ರಭಾಕರ ಜೋಶಿಯವರು ಇವರ ಕಾರ್ಯವೈಖರಿಯನ್ನು ಕಂಡೇ ಅವರಿಗೆ `ಕಾರ್ಯಾನಂದ’ ಎಂಬ ಬಿರುದನ್ನು ನೀಡಿದ್ದರು. ತಾನು ಯುವಕನಾಗಿರುವಾಗಲೇ ಹೊಸಗನ್ನಡದ ಅರುಣೋದಯವೆಂಬ ಅತ್ಯಮೂಲ್ಯ ಗ್ರಂಥವನ್ನು ನೀಡಿ ಶ್ರೇಷ್ಠ ಸಂಶೋಧಕನೆಂಬ ಕೀರ್ತಿಗೆ ಪಾತ್ರರಾದ ಅವರು ಈ ಇಳಿವಯಸ್ಸಿನಲ್ಲೂ ಕನ್ನಡದ ಕೆಲಸಕ್ಕಾಗಿ ಶ್ರಮಿಸುತ್ತಿದ್ದುದು ಎಳೆಯರಲ್ಲಿ ಸ್ಫೂರ್ತಿ ಚೈತನ್ಯವನ್ನು ತುಂಬಿಸುತ್ತಿತ್ತು. ಒಂದು ಸಣ್ಣ ಲೇಖನ ಬರೆಯಲಿಕ್ಕೂ ಸಾಕಷ್ಟು ಅಧ್ಯಯನ ಮಾಡಿಯೇ ಬರೆಯುವ ಅವರ ಸ್ವಭಾವ ಎಳೆಯರಿಗೆ ಮಾದರಿಯಾಗಿತ್ತು. ವರ್ಷಕ್ಕೊಮ್ಮೆ ಅವರ ಮೊಮ್ಮಕ್ಕಳು ಬಂದರೆ ತಾನೂ ಮಗುವಿನಂತಾಗುತ್ತಿದ್ದರು. ವೃದ್ದಾಪ್ಯದಲ್ಲಿ ಜೀವನಪ್ರೀತಿಯನ್ನು ತುಂಬುವವರೇ ಮೊಮ್ಮಕ್ಕಳು ಎಂದು ಹೇಳುತ್ತಾ ಅವರಿಗೆ ಬಗೆ ಬಗೆಯ ತಿನಿಸುಗಳನ್ನು ನೀಡಿ ಏನೇನೋ ಕತೆಗಳನ್ನು ಹೇಳಿ ಮಂಗಳೂರಿನ ಅಜ್ಜನ ಮನೆಯಲ್ಲಿ ಕಳೆದ ದಿನಗಳನ್ನು ಅಮೂಲ್ಯ ಕ್ಷಣಗಳನ್ನಾಗಿ ಮಾಡಿದ ಅವರ ವಾತ್ಸಲ್ಯಕ್ಕೆ ಸಾಟಿಯಿಲ್ಲ.
ನಾವು ಮಾಡುವ ಕೆಲಸದಲ್ಲಿ ಸಮಯಪಾಲನೆಯ ಜೊತೆಗೆ ಶಿಸ್ತು ಮತ್ತು ಅಚ್ಚುಕಟ್ಟುತನವನ್ನು ರೂಢಿಸಿಕೊಳ್ಳಲು ಹಾವನೂರರು ನೆರವಾದರು. ನಾವು ಗೆಳತಿಯರಿಗೆ ಒಂದಷ್ಟು ಸಾಹಿತ್ಯ ಸಂವಾದ ಮಾಡುವ ಅವಕಾಶವಿರಲೆಂದು ಒಂದು ಬಳಗ ಕಟ್ಟಿ ಪ್ರತೀ ತಿಂಗಳು ತಮ್ಮ ಲೇಖನ, ಕತೆ, ಕವನಗಳ ಬಗ್ಗೆ ಪರಸ್ಪರ ವಿಮರ್ಶೆ, ಸಂವಾದ ಏರ್ಪಡಿಸಿದರು. ಮೊದಮೊದಲು ಒಬ್ಬೊಬ್ಬರ ಮನೆಯಲ್ಲಿ ಸೇರುವ ಕಾರ್ಯಕ್ರಮವಿತ್ತು. ಕೆಲವು ತಿಂಗಳ ಬಳಿಕ ಹಾವನೂರರ ಮನೆಯಲ್ಲೇ ಸೇರಿ ಸಾಹಿತ್ಯ ಸಂವಾದ ಪ್ರಾರಂಭಿಸಿದೆವು. ಈ ಬಳಗದಲ್ಲಿ ನಾವು ಗೆಳತಿಯರ ಜೊತೆಗೆ ಸದಾನಂದ ಸುವರ್ಣರು, ಬೆನೆಟ್, ಮನೋರಮಾ ಭಟ್ ಕೂಡಾ ಸೇರುತ್ತಿದ್ದರು. ಒಟ್ಟು ಸೇರಿದ ತಿಂಗಳಲ್ಲಿ ಯಾರದಾದರೂ ಹುಟ್ಟುಹಬ್ಬವಿದ್ದರೆ ಅವರನ್ನು ಅಭಿನಂದಿಸುವ ಪದ್ಧತಿಯನ್ನು ಪ್ರಾರಂಭಿಸಿದೆವು. ಹೀಗೆ ಸಾಹಿತ್ಯ ಸಂಬಂಧಿ ಬರವಣಿಗೆಯ ಕೆಲಸಗಳ ಜೊತೆಗೆ ಸಾಹಿತ್ಯ ವಿಮರ್ಶೆ ಸಂವಾದದ ಕೆಲಸವು ಪ್ರಾರಂಭವಾಗಿ ನಮ್ಮೊಳಗಿನ ಬರಹಗಾರ್ತಿಯರನ್ನು ತಟ್ಟಿ ಎಬ್ಬಿಸಿ ನಿಲ್ಲಿಸಿದರು.
ಸುಮಾರು ಎರಡು ಮೂರು ವರ್ಷಗಳ ಕಾಲ ಈ ಕೆಲಸ ನಾವು ಮಾಡಿದೆವು. ಅವುಗಳನ್ನು ಏಳೆಂಟು ದೊಡ್ಡ ಫೈಲುಗಳಲ್ಲಿ ಸಂಗ್ರಹಿಸಿ ಓರಣವಾಗಿ ಇಟ್ಟಿದ್ದೆವು. ಅವರು ಆರೋಗ್ಯ ಬಿಗಡಾಯಿಸಿ ಆಸ್ಪತ್ರೆಯಲ್ಲಿದ್ದಾಗಲೂ ಅವರಿಗೆ ಈ ಕೆಲಸಗಳದ್ದೇ ಕನವರಿಕೆ ಇತ್ತು. ಅವರು ನಿಧನರಾದ ಮೇಲೆ ನಾವು ಮಾಡಿದ ಕೆಲಸಗಳನ್ನೆಲ್ಲಾ ಬೆಂಗಳೂರಿಗೆ ಒಯ್ಯಲಾಯಿತು. ಮತ್ತೆ ಅದನ್ನು ಏನು ಮಾಡಿದರೆಂದು ತಿಳಿಯದು. ದಾಸ ಸಾಹಿತ್ಯದ ಬಗ್ಗೆ ಅವರು ಮಾಡಿದ ಸಂಶೋಧನೆಯ ಕೃತಿ ಮಾತ್ರ ಪ್ರಕಟವಾಗಿದೆ. ಉಳಿದವುಗಳೆಲ್ಲಾ ಧೂಳು ತಿನ್ನುತ್ತ ಮತ್ತೊಬ್ಬ ಸಂಶೋಧಕನ ಸ್ಪರ್ಶಕ್ಕಾಗಿ ಕಾದು ಕೂತಿರಬಹುದು ಅಂದು ಭಾವಿಸಿದ್ದೇನೆ.
ಅವರ ಬಳಿ ನಾನು ಕೆಲಸ ಮಾಡುತ್ತಿರುವಾಗಲೇ ಅವರು ಬರೆದ ಅವಿವಾಹಿತೆ ಎಂಬ ಕೃತಿಯನ್ನು ಓದಿದೆ. ಅವರಿವರಿಂದ ಕೇಳಿ, ತಾನು ಕಂಡ ಅನುಭವಗಳಿಂದ ಹಾವನೂರರು ಈ ಕೃತಿಯನ್ನು ೫೦ ವರ್ಷಗಳ ಹಿಂದೆ ಬರೆದಿದ್ದರು. ಈಗ ಬದಲಾದ ಪರಿಸರದಲ್ಲಿ ಅವಿವಾಹಿತೆಯರ ಸ್ಥಿತಿಯಲ್ಲಿ ಏನಾದರೂ ಪ್ರಗತಿಯಾಗಿದೆಯೇ ಎಂದು ತಿಳಿಯುವ ಹಂಬಲ ನನ್ನಲ್ಲಿ ಮೂಡಿತು. ನಾನು ಮಂಗಳೂರು ಪರಿಸರದ ಅವಿವಾಹಿತ ಮಹಿಳೆಯರನ್ನು ಸಂದರ್ಶಿಸಿ ಒಂದು ಕೃತಿ ಬರೆಯಬೇಕೆಂಬ ನಿರ್ಧಾರ ಮಾಡಿದೆ. ಹಾವನೂರರು ಕೆಲವು ಸಲಹೆಗಳನ್ನು ನೀಡಿ ಪ್ರಶ್ನಾವಳಿಯನ್ನು ಸಿದ್ಧಪಡಿಸಲು ಹೇಳಿದರು. ಹೀಗೆ ನನ್ನ ಸಂಶೋಧನೆಗೆ ಪ್ರೇರಕರಾದರು. ದೊಡ್ಡವರು ಈ ಲೋಕದಿಂದ ನಿರ್ಗಮಿಸಿದರೂ ಕಾಲದ ಮರುಭೂಮಿಯಲ್ಲಿ ಅವರ ಹೆಜ್ಜೆಗುರುತುಗಳಿರುತ್ತವೆ ಅಲ್ಲವೇ? ಹಾವನೂರರ ಈ ಪ್ರಚೋದನೆಯೇ ನನ್ನನ್ನು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು. ಹೀಗೆ ಕೆಲಸ ಪ್ರಾರಂಭಿಸಿದ ಮೇಲೆ ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದವರು ಈ ಕೆಲಸವನ್ನು ಜಿಲ್ಲೆಯಾದ್ಯಂತ ವಿಸ್ತರಿಸಲು ಸಹಾಯ ಮಾಡಿದರು. ಡಾ| ಸಬೀಹಾ ಮತ್ತು ಡಾ| ಕಿಶೋರಿ ನಾಯಕ್ ಅವರ ಹಿರಿತನದಲ್ಲಿ ಈ ಕೆಲಸ ಮುಂದುವರಿಸಿದೆ. ಪ್ರತೀ ಗ್ರಾಮಗಳ ಅಂಗನವಾಡಿ ಕಾರ್ಯಕರ್ತೆಯರಿಂದ ತಮ್ಮ ಗ್ರಾಮದಲ್ಲಿರುವ ೪೦ ವರ್ಷ ದಾಟಿದ ಅವಿವಾಹಿತ ಮಹಿಳೆಯರ ಪಟ್ಟಿಯನ್ನು ಪಡೆದೆವು. ಇದಕ್ಕೆ ನಮ್ಮ ಜಿಲ್ಲೆಯ ಸಿಡಿಪಿಒ ಆಫೀಸಿನ ಅಧಿಕಾರಿಗಳು ಸಹಕರಿಸಿದ್ದರಿಂದ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚಿನ ಅವಿವಾಹಿತ ಮಹಿಳೆಯರ ವಿಳಾಸ ನಮಗೆ ಲಭಿಸಿತು. ಅವರಲ್ಲಿ ಪ್ರತೀ ತಾಲೂಕಿನ ೧೦೦ ಮಂದಿ ಮಹಿಳೆಯರನ್ನು ಆಯ್ಕೆ ಮಾಡಿ ಸಂದರ್ಶಿಸಿ ಮಾಹಿತಿ ಪಡೆದೆವು. ಈ ಸಂದರ್ಶನಗಳ ಫಲಿತಾಂಶಗಳು ಕೃತಿಯಾಗಿಯೂ ಹೊರಬಂತು. ಅವಿವಾಹಿತರ ಸಮಸ್ಯೆ ಸಮಾಜದಲ್ಲಿ ಉಂಟುಮಾಡಿದ ತಲ್ಲಣಗಳು ಮತ್ತು ಶೋಷಣೆಯ ಬಗ್ಗೆ ಬೇರೆಯೇ ಅಧ್ಯಾಯದಲ್ಲಿ ತಿಳಿಸುತ್ತೇನೆ. ನನ್ನ ಬರವಣಿಗೆಗೆ ಬಲ ತುಂಬಿದ್ದು ಈ ಸಂಶೋಧನೆಯೆಂಬುದರಲ್ಲಿ ಎರಡು ಮಾತಿಲ್ಲ.
ನನ್ನ ಚಿಂತನೆಗಳನ್ನು ಬದಲಾಯಿಸಿಕೊಳ್ಳುವ ಅಥವಾ ಇನ್ನಷ್ಟು ಚೂಪುಗೊಳಿಸುವ ಅವಕಾಶ ಲಭಿಸಿದ್ದು ಡೀಡ್ಸ್ ಸಂಸ್ಥೆಯೊಂದಿಗಿನ ನನ್ನ ಒಡನಾಟದಿಂದ. ಪಡಿ ಸಂಸ್ಥೆಯು ಮಕ್ಕಳ ಶಿಕ್ಷಣದ ಅಭಿವೃದ್ಧಿಗಾಗಿ ಶ್ರಮಿಸಿದರೆ ಡೀಡ್ಸ್ ಸಂಸ್ಥೆಯು ಮಹಿಳೆಯರನ್ನು ಗಟ್ಟಿಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಕಳೆದ ಮೂವತ್ತು ವರ್ಷಗಳಿಂದಲೂ ಡೀಡ್ಸ್ ಮಹಿಳೆಯರನ್ನು ಶೈಕ್ಷಣಿಕವಾಗಿ, ಮಾನಸಿಕವಾಗಿ ಬಲಗೊಳಿಸುವ ಕೆಲಸವನ್ನು ಮಾಡುತ್ತಾ ಬಂದಿದೆ. ಇಲ್ಲಿ ಪ್ರತೀ ತಿಂಗಳ ಎರಡನೇ ಮಂಗಳವಾರದಂದು ಮಹಿಳಾಪರ ಚಿಂತನಾ ವೇದಿಕೆಯು ಒಟ್ಟು ಸೇರುತ್ತದೆ. ಇದೊಂದು ಮುಕ್ತ ವೇದಿಕೆ. ಬೇರೆ ಬೇರೆ ಸ್ವಯಂಸೇವಾ ಸಂಸ್ಥೆಯ ಮಹಿಳೆಯರು, ಸಾಹಿತಿಗಳು, ಕಲಾವಿದರು ಹೀಗೆ ಭಿನ್ನ ಭಿನ್ನ ಆಸಕ್ತಿಯುಳ್ಳವರು ಇಲ್ಲಿ ಸೇರಬಹುದು. ಪ್ರಚಲಿತ ವಿಷಯವನ್ನು ಮುಂದಿಟ್ಟುಕೊಂಡು ಮಹಿಳೆಯರು ಚರ್ಚೆ ಮಾಡುತ್ತಾರೆ. ತನಗನಿಸಿದ್ದನ್ನು ಯಾವುದೇ ಮುಜುಗರವಿಲ್ಲದೆ ಇಲ್ಲಿ ಹೇಳಬಹುದು. ಎಲ್ಲರ ಅಭಿಪ್ರಾಯಗಳಿಗೂ ಇಲ್ಲಿ ಗೌರವವಿದೆ. ಅವರ ಅಭಿಪ್ರಾಯಗಳು ಒಕ್ಕಣ್ಣಿನ ನೋಟದಿಂದ ಲಭಿಸಿದ್ದು ಎಂದಾದರೆ ಅದನ್ನು ಸೌಮ್ಯವಾಗಿ ತಿಳಿಯಪಡಿಸುವ ಕೆಲಸವೂ ನಡೆಯುತ್ತದೆ. ಎಲ್ಲಾ ಮತಧರ್ಮ ಪಂಗಡಗಳ ಮಹಿಳೆಯರೂ ಇಲ್ಲಿ ಒಟ್ಟು ಸೇರುತ್ತಾರೆ. ಪ್ರಪಂಚದಲ್ಲಿ ನಡೆಯುವ ಎಲ್ಲಾ ಜೀವವಿರೋಧಿ ಕೃತ್ಯಗಳ ಬಗ್ಗೆ ಇಲ್ಲಿ ಚರ್ಚೆ ಮಾಡುತ್ತಾರೆ. ಕೆಲವೊಂದು ಮಹತ್ವದ ವಿಷಯಗಳ ಬಗ್ಗೆ ವಿಷಯ ಮಂಡನೆ ಮಾಡಲು ತಜ್ಞರನ್ನು ಕರೆಸುತ್ತಾರೆ. ಅವರೊಂದಿಗೆ ಮಹಿಳೆಯರು ತಮ್ಮ ಸಂದೇಹಗಳ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಪೊಲೀಸ್ ಅಧಿಕಾರಿಗಳು, ವೈದ್ಯರು ಬೇರೆ ಬೇರೆ ಇಲಾಖೆಯ ಅಧಿಕಾರಿಗಳೊಂದಿಗೆ ಹೀಗೆ ಸಂವಾದ ಮಾಡಲಾಗುತ್ತದೆ. ಮಂಗಳಮುಖಿಯರು, ಲೈಂಗಿಕ ಕಾರ್ಯಕರ್ತೆಯರು ಇವರೊಂದಿಗೂ ಸಂವಾದವೇರ್ಪಡಿಸಿ ಅವರ ಅಂತರಂಗದ ತುಡಿತಗಳಿಗೆ ಕಿವಿಯಾಗುವ ಅವಕಾಶಗಳನ್ನೂ ಕಲ್ಪಿಸಲಾಗುತ್ತದೆ. ನಾನು ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಅಧ್ಯಯನ ಮಾಡಲು ಪ್ರೇರಣೆ ಮತ್ತು ಪ್ರೋತ್ಸಾಹ ನೀಡಿದ್ದು ಈ ಡೀಡ್ಸ್ ಸಂಸ್ಥೆ. ಇದರ ಬಗ್ಗೆಯೂ ಬೇರೆ ಅಧ್ಯಾಯದಲ್ಲಿ ತಿಳಿಸುತ್ತೇನೆ.
ಮರ್ಲಿನ್ ಮಾರ್ಟಿಸ್ ಅವರ ನಿರ್ದೇಶನದಲ್ಲಿ ನಡೆಯುವ ಈ ಸಂಸ್ಥೆಯು ನೊಂದ ಮಹಿಳೆಯರಿಗೆ ದಾರಿ ತೋರುವ, ಕೌಟುಂಬಿಕ ಸಮಸ್ಯೆಗಳಿಂದ ಪೀಡಿತರಾದವರಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತದೆ. ಹೀಗೆ ಬಂದ ಮಹಿಳೆಯರಿಗೆ ಇದು ತವರುಮನೆಯ ಭದ್ರತೆ ಮತ್ತು ಮಮತೆಯನ್ನು ನೀಡುತ್ತದೆ. ಮಹಿಳಾಪರ ಚಿಂತನಾ ಸಭೆಯು ಕಳೆದ ೨೨ ವರ್ಷಗಳಿಂದ ಪ್ರತೀ ತಿಂಗಳು ನಡೆಯುತ್ತದೆ. ಈ ಸಭೆಗೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಮಹಿಳೆಯರು ತಾವು ಅನುಭವಿಸಿದ ನೋವು ಹಿಂಸೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಾರೆ. ಇಲ್ಲವೇ ತನ್ನ ಪರಿಸರದಲ್ಲಿ ನಡೆದ ಘಟನೆಗಳ ಪ್ರತ್ಯಕ್ಷ ದರ್ಶನ ಮಾಡಿಸುತ್ತಾರೆ. ೧೧ ಗಂಟೆಗೆ ಮಾತುಕತೆ ಪ್ರಾರಂಭವಾದರೆ ಮಧ್ಯಾಹ್ನ ಒಂದೂವರೆ ಗಂಟೆಯವರೆಗೂ ಮುಂದುವರಿಯುತ್ತದೆ. ಆಮೇಲೆ ಅಲ್ಲಿ ಬಡಿಸುವ ಗಂಜಿ ಊಟ ಮತ್ತು ಪಲ್ಯಕ್ಕೆ ಒಂದು ವಿಶೇಷ ಸ್ವಾದವಿರುತ್ತದೆ. ಮಧ್ಯಾಹ್ನದ ಬಳಿಕ ನಡೆಯುವ ‘ಸಂಚಿ’ ಎಂಬ ಸಭೆಯಲ್ಲಿ ಕೆಲವರು ಭಾಗವಹಿಸುತ್ತಾರೆ. ಇಲ್ಲಿ ಒಂದು ವಿಶೇಷವೇನೆಂದರೆ ಸಭೆಗೆ ತಡವಾಗಿ ಬಂದರೂ ಅಥವಾ ಮಧ್ಯದಲ್ಲಿ ಎದ್ದು ಹೋಗಬೇಕೆನಿಸಿದರೂ ಯಾವುದೇ ಮುಜುಗರವಿಲ್ಲದೇ ಹೋಗಬಹುದು. ಯಾವುದೇ ಒತ್ತಡಕ್ಕೊಳಗಾಗಿ ಸಭೆಯಲ್ಲಿ ಕೂರುವ ಅಗತ್ಯವಿಲ್ಲ. ಈ ಸಭೆ ಅತಿಯಾದ ಶಿಸ್ತುಗಳ ಕಟ್ಟುಪಾಡುಗಳನ್ನು ಪಾಲಿಸದಿದ್ದರೂ ಪ್ರತೀ ತಿಂಗಳು ನಿಯಮಿತವಾಗಿ ನಡೆಯುವುದಿದೆಯಲ್ಲಾ ಅದು ವಿಶೇಷ. ಮಹಿಳೆಯರು ಬದ್ಧತೆಯಿಂದ ತಾವೇ ಒಂದು ಆಂತರಿಕ ಶಿಸ್ತನ್ನು ಪಾಲಿಸಿಕೊಂಡು ಬಂದಿರುವುದರಿಂದ ಈ ಕಾರ್ಯಕ್ರಮ ಸಾಂಗವಾಗಿ ನಡೆಯುತ್ತಿದೆ. ಇಲ್ಲಿ ನಾನು ಕಲಿತದ್ದು ತುಂಬಾ. ಕಲ್ಪನೆಯ ದಂತಗೋಪುರದೊಳಗೆ ಕೂತು ಬರೆಯುವುದಕ್ಕೂ ಪ್ರತ್ಯಕ್ಷ ಘಟನೆಗಳನ್ನು ಅನುಭವಿಸಿದವರಿಂದ ಪಡೆದ ಮಾಹಿತಿಗಳನ್ನು ಪಡೆದು ಅವರನ್ನು ಕಂಡು ಮಾತಾಡಿ ಪಡೆದ ಅನುಭವಗಳಿಂದ ಬರೆಯುವುದಕ್ಕೂ ವ್ಯತ್ಯಾಸವಿರುತ್ತದೆ. ಎಷ್ಟೋ ಸಲ ಪತ್ರಿಕೆಯಲ್ಲಿ ಬಂದ ಸುದ್ದಿಗಳ ಹಿಂದೆ ಅಡಗಿರುವ ಸತ್ಯಗಳು ಇಲ್ಲಿ ಬಹಿರಂಗವಾಗುತ್ತದೆ. ಇಂತಹ ಸುದ್ದಿಗಳ ಬೆನ್ನಟ್ಟಿ ಸತ್ಯಶೋಧನಾ ವರದಿಯನ್ನು ತಯಾರಿಸುವ ಕೆಲಸವೂ ಇಲ್ಲಿನ ಸದಸ್ಯೆಯರಿಂದ ನಡೆಯುತ್ತದೆ. ಹೀಗೆ ಈ ಸಂಸ್ಥೆಯೊಂದಿಗೆ ನನ್ನ ಸಂಬಂಧ ಗಾಢವಾದಂತೆಲ್ಲಾ ನನ್ನ ಅನುಭವಗಳು ಪರಿಪಕ್ವಗೊಂಡವು.
ಮಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿಯ ಘಟನೆಗಳು ಹೆಚ್ಚುತ್ತಿರುವುದನ್ನು ಕಂಡು ಮೂರು ವರ್ಷಗಳ ಹಿಂದೆ ಒಂದು ದೊಡ್ಡ ಸಮ್ಮೇಳನ ಮಾಡಿದ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯೂ ಇಲ್ಲೇ ಹುಟ್ಟಿದ್ದು. ಈ ವೇದಿಕೆ ಸ್ಥಾಪನೆಯಾದ ಮೇಲೆ ಕೆಲವು ದೂರುಗಳು ಪರಿಹಾರ ಬಯಸಿ ಮಹಿಳೆಯರಿಂದ ಬಂದಿವೆ. ಹಾಗೆಯೇ ಕೆಲವು ಬೆದರಿಕೆಯ ಕರೆ ಮತ್ತು ದೂರುಗಳೂ ಬಂದಿವೆ. ಮನುಷ್ಯನ ಅಸಹನೆ ಮತ್ತು ಅಸೂಯೆಗಳು ಈ ಕೆಲಸ ಮಾಡುತ್ತವೆ. ಅವುಗಳನ್ನು ಎಷ್ಟು ಸ್ವೀಕರಿಸಬೇಕು ಎಷ್ಟು ತಿರಸ್ಕರಿಸಬೇಕು ಎಂಬ ಜಾಣ್ಮೆ ಇಲ್ಲಿನ ಮಹಿಳೆಯರಿಗಿದೆ. ಡೀಡ್ಸ್ ಸಂಸ್ಥೆಯು ಸಂವೇದಿ ಎಂಬ ದ್ವೈಮಾಸಿಕ ಪತ್ರಿಕೆಯನ್ನು ಹೊರತರುತ್ತಿದೆ. ಗುಲಾಬಿ ಬಿಳಿಮಲೆಯವರ ಸಂಪಾದಕತ್ವದಲ್ಲಿ ಹೊರಬರುವ ಈ ಪತ್ರಿಕೆಯಲ್ಲಿ ಖ್ಯಾತ ಲೇಖಕ ಲೇಖಕಿಯರು ಬರೆದ ಲೇಖನಗಳಿರುತ್ತವೆ. ಡೀಡ್ಸ್ ಸಂಸ್ಥೆಯ ಕೆಲಸ ಕಾರ್ಯಗಳ ಸಂಕ್ಷಿಪ್ತ ವಿವರಗಳು ಮತ್ತು ಪ್ರತಿ ತಿಂಗಳು ಒಂದು ಸಮಸ್ಯೆಯನ್ನು ನೀಡಿ ಅದನ್ನು ಓದುಗರು ಹೇಗೆ ಪರಿಹರಿಸಬಹುದು ಎಂಬ ಸವಾಲುಗಳು ಇರುತ್ತವೆ. ಮಹಿಳೆಯರನ್ನು ಆಂತರಿಕವಾಗಿ ಮತ್ತು ಮಾನಸಿಕವಾಗಿ, ವೈಚಾರಿಕವಾಗಿ, ಬೌದ್ಧಿಕವಾಗಿ ಗಟ್ಟಿಗೊಳಿಸಲು ಬೇಕಾದ ಎಲ್ಲಾ ಸಲಹೆಗಳು ಮತ್ತು ಜ್ಞಾನಕೋಶಗಳು ಈ ಪತ್ರಿಕೆಯಲ್ಲಿರುತ್ತದೆ. ಈ ಪತ್ರಿಕೆ ಮಾರ್ಕೆಟ್‌ನಲ್ಲಿ ಸಿಗುವುದಿಲ್ಲ. ಖಾಸಗಿ ಪ್ರಚಾರಕ್ಕಾಗಿ ಮಾತ್ರ ಲಭ್ಯ. ಆದರೆ ಜ್ಞಾನದ ಹಂಬಲವುಳ್ಳವರಿಗೆ ಇದು ಅಚ್ಚುಮೆಚ್ಚಿನ ಪತ್ರಿಕೆಯಾಗಿ ಮೂಡಿಬರುತ್ತಿದೆ. ಈ ಬೆಳಕು ಹೊರಗಡೆಯಿಂದ ಬೆಳಗುವ ದೀಪದ ಬೆಳಕಲ್ಲ. ಮಿಂಚುಹುಳದಂತೆ ಜೀವದ್ರವ್ಯವಾದ ಬೆಳಕು. ಆದುದರಿಂದ ಈ ಪತ್ರಿಕೆ ಮಹಿಳೆಯರಿಗೆ ಇಷ್ಟವಾಗುತ್ತದೆ.
(ಮುಂದುವರಿಯಲಿದೆ)