ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ – ಅಧ್ಯಾಯ ಮೂವತ್ತಮೂರು
ಸುಮಾರು ಮೂರು ವರ್ಷಗಳ ಕಾಲ ಅವಿವಾಹಿತ ಮಹಿಳೆಯರನ್ನು ಹುಡುಕುತ್ತಾ ಜಿಲ್ಲೆಯಾದ್ಯಂತ ಸುತ್ತಿದ ನನ್ನ ಅನುಭವಗಳಿವೆಯಲ್ಲಾ ಅವುಗಳೆಲ್ಲವನ್ನು ಅಕ್ಷರರೂಪದಲ್ಲಿ ದಾಖಲಿಸಲು ಸಾಧ್ಯವಾಗಿಲ್ಲ. ನಾನು ಮುಖಾಮುಖಿಯಾಗಿ ಅವರೊಂದಿಗೆ ಬೆರೆತ ಕ್ಷಣಗಳು ಮಾತಿಗೆ ನಿಲುಕದು. ನೂರಾರು ಮಹಿಳೆಯರನ್ನು ಭೇಟಿಯಾಗಿ ಅವರ ನೋವುಗಳಿಗೆ ಕಿವಿಯಾಗಿ ನನ್ನದೇ ಮಿತಿಯೊಳಗೆ ಅವರನ್ನು ಸಾಂತ್ವನಗೊಳಿಸಿದ್ದೇನೆ. ಎಷ್ಟೋ ಮಹಿಳೆಯರು ನನ್ನ ಮೇಲೆ ರೇಗಾಡಿದ್ದೂ ಇದೆ. ಬೆಲ್ ಮಾಡಿ, ಬಾಗಿಲು ತೆರೆಯುವವರೆಗೆ ಕಾದು, ನಾನು ಬಂದ ಉದ್ದೇಶವನ್ನು ಹೇಳಿದ್ದೇ ತಡ, ರಪ್ಪೆಂದು ಬಾಗಿಲು ಹಾಕಿ ನನ್ನನ್ನು ಹಿಂದಕ್ಕೆ ಕಳಿಸಿದವರಿದ್ದರು. ಹೀಗೆ ಬಾಗಿಲು ಮುಚ್ಚಿ ತಮ್ಮ ಅಸಹಕಾರ ವ್ಯಕ್ತಪಡಿಸಿದ್ದನ್ನು ಕಂಡ ಮೇಲೆ ಒಬ್ಬಳೇ ಹೋಗುವ ಬದಲು ಇಬ್ಬರು ಮೂವರು ಜೊತೆಯಲ್ಲಿ ಹೋಗುವುದನ್ನು ರೂಢಿ ಮಾಡಿಕೊಳ್ಳಬೇಕಾಯಿತು. ಆಗಲೂ ಕೆಲವರು ನಮ್ಮ ವಿವರ ಕೇಳಿ ಏನು ಮಾಡ್ತೀರಾ? ಮದುವೆ ಮಾಡಿಸ್ತೀರಾ? ನಮ್ಮ ಮನಸ್ಸಿನ ಗಾಯಕ್ಕೆ ಉಪ್ಪು ಸವರಿ ನಿಮಗೆ ಸಿಗುವ ಲಾಭವಾದರೂ ಏನು? ತುಳುಕುವ ಕಣ್ಣುಗಳಿಂದ ನಮ್ಮನ್ನು ಕೆಣಕಿದಾಗ ನಮಗೂ ಗಂಟಲು ಕಟ್ಟಿ ಮಾತು ಹೊರಡಲಿಲ್ಲ. ಇಂತಹವರನ್ನು ನಮ್ಮ ಆಪ್ತ ವಲಯಕ್ಕೆ ಸೆಳೆಯಲು ಅವರೊಂದಿಗೆ ಮೂರು ನಾಲ್ಕು ಸಲ ಭೇಟಿಯಾಗಿ ಕೂತು ನಿಧಾನವಾಗಿ ಮಾತಿಗೆಳೆದು ಅವರ ಹೃದಯದ ತುಡಿತಗಳಿಗೆ ನಾವು ಸ್ಪಂದಿಸಬೇಕಾಯಿತು.
ವಿವಾಹವೆಂಬ ವ್ಯವಸ್ಥೆಯನ್ನೇ ತಿರಸ್ಕರಿಸಿ ಒಂಟಿಯಾದ ಮಹಿಳೆಯರ ಮನೋಭಾವಕ್ಕೂ ವಿವಾಹವೆಂಬ ವ್ಯವಸ್ಥೆಯೇ ಮಹಿಳೆಯರನ್ನು ತಿರಸ್ಕರಿಸಿದವರ ಮನೋಭಾವಕ್ಕೂ ಕೆಲವು ಸಾಮ್ಯತೆಗಳಿದ್ದರೂ, ಹಲವು ವ್ಯತ್ಯಾಸಗಳೂ ಇವೆ. ವ್ಯವಸ್ಥೆಯನ್ನೇ ತಿರಸ್ಕರಿಸಿದ ಮಹಿಳೆಯರಿಗೆ ತಮ್ಮ ನಿರ್ಧಾರದ ಬಗ್ಗೆ ಪಶ್ಚಾತ್ತಾಪವಿಲ್ಲ. ಆದರೆ ಸಮಾಜ ತಮ್ಮನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಗಾಢವಾದ ವಿಷಾದವಿದೆ. ಸಮಾಜದ ಬಗ್ಗೆ ತಿರಸ್ಕಾರ ಮತ್ತು ದ್ವೇಷವೂ ಇದೆ. ವಿವಾಹವೆಂಬ ವ್ಯವಸ್ಥೆಯೇ ಹಲವರನ್ನು ವರದಕ್ಷಿಣೆ, ಜಾತಕದೋಷ, ರೂಪ, ವಿದ್ಯೆ, ಬಣ್ಣ ಮುಂತಾದ ಕಾರಣಗಳಿಗಾಗಿ ತಿರಸ್ಕರಿಸಿದೆ. ಇಂತಹ ಮಹಿಳೆಯರು ಭಾವನಾತ್ಮಕವಾಗಿ ಶೋಷಿತರು ಮತ್ತು ಮಾನಸಿಕವಾಗಿ ಏರುಪೇರುಗಳಿಗೊಳಗಾಗಿ ತಮಗೂ ತಮ್ಮ ಸುತ್ತಲಿನವರಿಗೂ ಸಮಸ್ಯೆಗಳನ್ನುಂಟುಮಾಡಿದ ನಿದರ್ಶನಗಳಿವೆ.
ಹಲವು ವಿಚಿತ್ರವಾದ ಮತ್ತು ವಿಶಿಷ್ಟವಾದ ಅನುಭವಗಳನ್ನು ನೀಡಿದ ಒಬ್ಬ ಮಹಿಳೆಯ ಬಗ್ಗೆ ಹೇಳಲೇಬೇಕೆನಿಸುತ್ತದೆ. ಅವರು ಶಿಕ್ಷಕಿ. ಗೋಧಿ ಮೈಬಣ್ಣದ ಸುಂದರವಾದ ಕಣ್ಣುಗಳ ಆಕರ್ಷಕವಾದ ರೂಪವುಳ್ಳ ನೀಲವೇಣಿಯಾದ ಆಕೆಯ ಕೂದಲನ್ನು ಕಂಡವರು ಕಣ್ಣು ಹಾಕುತ್ತಿದ್ದರು. ಅವರಲ್ಲಿ ವಿವಾಹಕ್ಕೆ ಓರ್ವ ಗಂಡು ಬಯಸುವ ಎಲ್ಲ ಅರ್ಹತೆಗಳಿದ್ದುವು. ಬ್ರಹ್ಮ ಅವರನ್ನು ಸೃಷ್ಟಿಸುವಾಗ ತನ್ನ ಸೌಂದರ್ಯಪ್ರಜ್ಞೆಯನ್ನು ಸರಿಯಾಗಿ ಬಳಸಿಕೊಂಡಿರಬೇಕು ಎಂದು ನನಗನಿಸುತ್ತಿತ್ತು. ಆದರೂ ಅವರು ವಿವಾಹವನ್ನು ತಿರಸ್ಕರಿಸಿ ಒಂಟಿಯಾಗಿ ಬದುಕುವುದನ್ನೇ ಆಯ್ಕೆ ಮಾಡಿಕೊಂಡರು. ಮೊದಮೊದಲು ತನ್ನ ಕುಟುಂಬದೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಿದ್ದರು. ಆದರೆ ಕ್ರಮೇಣ ಅವರ ಸಂಪರ್ಕವನ್ನೇ ದೂರ ಮಾಡಿ ತಾನು ಏಕಾಂಗಿಯಾಗಿರುವುದನ್ನೇ ಬಯಸಿ ಬೇರೆ ಮನೆ ಮಾಡಿದರು. ಶಾಲೆಯಲ್ಲಿ ಮಕ್ಕಳಿಗೆ ಅಧ್ಯಾಪನ, ಸಂಜೆ ಮತ್ತು ಬೆಳಿಗ್ಗೆ ಕೆಲವು ಮನೆಗಳಲ್ಲಿ ಟ್ಯೂಶನ್ ನೀಡುವುದು, ಪ್ರತಿದಿನ ಪ್ರಾರ್ಥನೆಯನ್ನು ತಪ್ಪಿಸದೆ ಭಕ್ತಿಮಾರ್ಗದಲ್ಲಿ ನಡೆಯುವುದು, ತಾನಾಯಿತು ತನ್ನ ಕೆಲಸವಾಯಿತು, ಬಿಟ್ಟರೆ ಬೇರೆ ಸಂಗತಿಯೇ ಅವರಿಗೆ ಗೊತ್ತಿಲ್ಲವೆಂಬಂತೆ ಬದುಕುತ್ತಿದ್ದರು. ಶಾಲೆಯಲ್ಲಿ ಸ್ಟಾಫ್‌ರೂಂನಲ್ಲೂ ಎಲ್ಲರೊಂದಿಗೆ ಬೆರೆಯದೆ, ಬೇರೆಯೇ ಪ್ರತ್ಯೇಕ ಸ್ಥಳದಲ್ಲಿ ತನ್ನ ಡೆಸ್ಕುಗಳನ್ನಿರಿಸಿ ನಾನು ಇವರೊಂದಿಗೆ ಬೆರೆಯಲಾರೆ ಎಂಬಂತೆ ಬದುಕಿದವರು. ಜೀವನವನ್ನು ಪೊದೆಯಲ್ಲಿ ಬಚ್ಚಿಟ್ಟುಕೊಂಡು ಸುತ್ತಲೂ ಏನಿದೆ ಎಂಬುದಕ್ಕೆ ಕಣ್ಣು ಮುಚ್ಚಿಕೊಂಡು, ತನ್ನ ಸುತ್ತಮುತ್ತಲಿರುವ ಸೌಂದರ್ಯವನ್ನು ಕಂಡು ಆನಂದಿಸುವ ಶಕ್ತಿಯನ್ನು ಕಳಕೊಂಡ ಇವರಿಂದ ಯಾರಿಗೂ ತೊಂದರೆಯಿರಲಿಲ್ಲ. ನನಗೆ ಯಾರ ಸಹಾಯವೂ ಬೇಡ. ನಾನು ಯಾರಿಗೂ ಸಹಾಯ ನೀಡಲಾರೆ ಎಂಬುದು ಅವರ ಬದುಕಿನ ಸಿದ್ಧಾಂತವಾಗಿತ್ತು. ಶಾಲೆಯಲ್ಲಿ ಅವರ ಎಲ್ಲಾ ಕೆಲಸಕ್ಕೂ ಮಧ್ಯವರ್ತಿಯಾಗಿ ಒದಗುತ್ತಿದ್ದವರು ಲಕ್ಷ್ಮೀ ಟೀಚರು ಮಾತ್ರ.
ಇಂತಹ ಟೀಚರನ್ನು ಸಂದರ್ಶಿಸಲು ನಾನು ಲಕ್ಷ್ಮೀ ಟೀಚರನ್ನು ಕರೆದುಕೊಂಡೇ ಅವರ ಮನೆಗೆ ಹೋಗಿದ್ದೆ. ಆಗ ಅವರು ನಿವೃತ್ತರಾಗಿ ಐದಾರು ವರ್ಷಗಳಾಗಿದ್ದುವು. ಅವರನ್ನು ಮುಖತಃ ಭೇಟಿಯಾದಾಗ ನಾನು ದಿಗ್ಭ್ರಮೆಗೊಳಗಾದೆ. ತೇಪೆ ಹಾಕಿದ ರವಿಕೆ, ಬಣ್ಣ ಮಾಸಿದ ಸೀರೆಯಲ್ಲಿಯೂ ಆರೋಗ್ಯ ತುಂಬಿದ ಅವರ ಮುಖದಲ್ಲಿ ನನಗೆ ಲವಲವಿಕೆ ಕಂಡಿತ್ತು. ನೀವು ನಂಬುತ್ತೀರೋ ಬಿಡುತ್ತೀರೋ ಅವರಿರುವ ಮನೆಯ ಚಾವಡಿಯಲ್ಲಿ ಹಿತ್ತಲಿನ ತರಗೆಲೆಗಳನ್ನು ರಾಶಿ ಹಾಕಿದ್ದರು. ಯಾಕೆಂದು ಕೇಳಿದರೆ ಬಚ್ಚಲೊಲೆಗೆ ಎಂದಿದ್ದರು. ಮನೆಯಲ್ಲಿ ಅಡಿಗೆ ತೀರಾ ಅಪರೂಪವೆಂದೂ ಬೆಳಿಗ್ಗೆ ಮತ್ತು ಸಂಜೆ ಹೋಗುವ ಟ್ಯೂಶನ್ ಮನೆಯಲ್ಲೇ ಅವರು ಕೊಟ್ಟದ್ದನ್ನು ತಿನ್ನುತ್ತೇನೆಂದೂ ಹೇಳಿದರು. “ಮನುಷ್ಯ ಬದುಕುವುದಕ್ಕೆ ಎಷ್ಟು ಬೇಕು ಅಲ್ವಾ ಲಕ್ಷ್ಮೀ” ಎಂದು ಪ್ರೀತಿಯಿಂದ ಮಾತಾಡಿದರು. ನಾನು ಬಂದ ಉದ್ದೇಶ ಹೇಳಿದಾಗ ತಕ್ಷಣ ಗಂಭೀರ ಮುಖಭಾವದಿಂದ ಅದೊಂದು ಬಿಟ್ಟು ಬೇರೇನಾದರೂ ಹೇಳಿ ಎಂದರು. ನಾನು ಏನೂ ಕೇಳುವುದಿಲ್ಲ. ನೀವು ಏನು ಹೇಳುವುದೂ ಬೇಡ. ಈ ಪ್ರಶ್ನಾವಳಿಗೆ ಉತ್ತರಿಸಿ ಪ್ಲೀಸ್ ಎಂದೆ. ಅದನ್ನು ನೋಡುವುದಕ್ಕೂ ಸಿದ್ಧರಿಲ್ಲದ ಅವರು “ಲಕ್ಷ್ಮೀ ನನ್ನ ವಿಷಯ ಗೊತ್ತಿದ್ದೂ ಅವರನ್ನು ಇಲ್ಲಿಗ್ಯಾಕೆ ಕರೆತಂದೆ? ನನಗೆ ಹಿಂಸೆಯಾಗುತ್ತಿದೆ. ದಯವಿಟ್ಟು ಇಲ್ಲಿಂದ ಹೋಗಿ” ಎಂದು ಕೈಮುಗಿದರು. ನಾವು ಮರುಮಾತಿಲ್ಲದೆ ಅಂಗಳಕ್ಕಿಳಿದೆವು. ಗೇಟಿನ ಬಳಿಗೆ ತಲುಪಿದಾಗ “ಲಕ್ಷ್ಮೀ, ನೀನೊಬ್ಬಳೇ ಬಾ, ನಿನ್ನಲ್ಲಿ ತುಂಬಾ ಮಾತಾಡಲಿಕ್ಕಿದೆ” ಎಂದರು. “ನನಗೆ ಹಾಗೆಲ್ಲಾ ಒಬ್ಬಳೇ ಬರಲಿಕ್ಕಾಗುವುದಿಲ್ಲ. ಸಾಧ್ಯವಾದರೆ ನೀನೇ ಬಾ. ಮನೆಯಲ್ಲಿ ಮಾತಾಡೋಣ” ಎಂದು ಲಕ್ಷ್ಮೀ ಟೀಚರು ಹೇಳಿದಾಗ “ಖಂಡಿತ ಬರುತ್ತೇನೆಂದು ಹೇಳಲಾರೆ. ನೋಡೋಣ. ದೇವರು ಇಚ್ಛಿಸಿದರೆ” ಎಂದು ಮುಗುಳು ನಕ್ಕು ಕೈಬೀಸಿ ಕಳಿಸಿದರು.
ಬೆಂದೂರಿನ ಬೆಥನಿ ಶಿಕ್ಷಣ ಸಂಸ್ಥೆಗೆ ಹೋಗುವ ದಾರಿಯಲ್ಲಿದ್ದ ಆ ದೊಡ್ಡ ಬಾಡಿಗೆ ಮನೆಯಲ್ಲಿ ಅವರು ಬದುಕಿದ್ದ ರೀತಿಯೇ ವಿಚಿತ್ರ. ಸ್ಲಂನಲ್ಲಿ ವಾಸಿಸುವವರ ಮನೆಯಲ್ಲಾದರೂ ಬಂದವರು ಕೂರಲು ಒಂದು ಬೆಂಚು ಇರುತ್ತದೆ. ಖಾಸಗಿತನಕ್ಕೆ ಬಳಕೆಯಾಗುವ ಒಂದು ಸಣ್ಣ ಕೋಣೆ ಇರುತ್ತದೆ. ಇಲ್ಲಿ ಅದೂ ಇಲ್ಲ. ಅಂತಹ ಗುಜರಿ ಸಾಮಾನುಗಳ ದಾಸ್ತಾನು ಕೋಣೆಯಂತಿದ್ದ ಆ ಮನೆಯಲ್ಲಿ ಒಬ್ಬಂಟಿಯಾಗಿ ಹೇಗೆ ವಾಸಿಸುತ್ತಿದ್ದರು ಎಂಬುದೇ ವಿಸ್ಮಯ. ಮನೆಯ ಮಾಲೀಕರು ಹಲವು ವರ್ಷಗಳಿಂದ ಮನೆ ಬಿಡಬೇಕೆಂದು ಒತ್ತಾಯಿಸುತ್ತಿದ್ದರೂ ಇವರು ಅಲ್ಲಾಡಲಿಲ್ಲ. ಅಲ್ಲಾಡಿಸುವಂತೆಯೂ ಇರಲಿಲ್ಲ. ಕೊನೆಗೆ ಮಾಲೀಕರೇ ಅವರನ್ನು ಕದ್ರಿಯಲ್ಲಿರುವ ಒಂದು ಸಣ್ಣ ಫ್ಲ್ಯಾಟಿಗೆ ಎತ್ತಿ ಹಾಕಿದರೆಂದೂ ತಿಳಿಯಿತು. ಅಲ್ಲಿಗೆ ಹೋದ ಮೇಲೆ ಕೂಡಾ ಮಕ್ಕಳ ಟ್ಯೂಶನ್ ಕ್ಲಾಸಿಗೆ ಹೋಗುತ್ತಿದ್ದ ಆ ಶಿಕ್ಷಕಿ ಕೆಲವರ್ಷ ಅಲ್ಲಿ ಹಾಯಾಗಿದ್ದರು. ಟ್ಯೂಶನ್ ಮನೆಯವರು ಬಿಟ್ಟರೆ ಅವರಿಗೆ ಬೇರೆ ಮನುಷ್ಯರ ಸಂಪರ್ಕವಿರಲಿಲ್ಲ. ಒಂದಲ್ಲ ಒಂದು ಟ್ಯೂಶನ್ ಮನೆಯನ್ನು ನೆಚ್ಚಿಕೊಂಡಿದ್ದಕ್ಕೆ ಅವರು ನೀಡುವ ಊಟ, ಉಪಾಹಾರಕ್ಕಾಗಿಯೇ ಮುಖ್ಯವಾಗಿತ್ತು. ಹಾಗೆಂದು ಒಪ್ಪಂದ ಮಾಡಿಕೊಂಡಿದ್ದೇನೆಂದು ಒಮ್ಮೆ ಲಕ್ಷ್ಮೀ ಟೀಚರಲ್ಲಿ ಹೇಳಿದ್ದರು. ಮನೆಯಲ್ಲಿ ತಾನು ಅಡುಗೆ ಮಾಡುವುದೇ ಇಲ್ಲವೆಂದೂ, ಆದುದರಿಂದ ತನಗೆ ಪ್ರಾರ್ಥನೆಗೆ ಅಧಿಕ ಸಮಯ ಸಿಗುತ್ತದೆಂದೂ ಹೇಳಿದ್ದರು.
ಸುಮಾರು ೭೮ ವರ್ಷದವರೆಗೂ ಆರೋಗ್ಯ ಅವರಿಗೆ ಒಂದು ವರವಾಗಿ ಒಲಿದಿತ್ತು. ಟ್ಯೂಶನ್ ಮನೆಗಳು ತಪ್ಪಿದ ಮೇಲೆ ತಾನೇ ಅಡುಗೆ ಮಾಡುವುದಕ್ಕೆ ಉತ್ಸಾಹವಿಲ್ಲವಾಗಿ ಕ್ರಮೇಣ ಅವರ ಆರೋಗ್ಯ ಕ್ಷೀಣಿಸತೊಡಗಿತು. ಕೈಕಾಲು ಗಟ್ಟಿ ಇರುವಾಗಲೂ ಯಾವ ಬಂಧುಗಳನ್ನೂ ಹತ್ತಿರ ಸುಳಿಯಲು ಬಿಡದ ಅವರು ಕೊನೆಗಾಲದಲ್ಲೂ ಅವರನ್ನು ಬಳಿಗೆ ಬರಗೊಡಲಿಲ್ಲ. ಹೆಚ್ಚು ನರಳದೇ ಕೆಲವೇ ದಿನದ ಜ್ವರದಲ್ಲಿ ತನ್ನ ಒಂಟಿ ಪಯಣವನ್ನು ಮುಗಿಸಿದರು. ಸತ್ತ ಮೇಲೆ ಅವರ ಬಂಧುಗಳನ್ನು ಹುಡುಕಿ ತರಲಾಯಿತು. ಅವರನ್ನು ಜೀವಂತ ಕಂಡ ಬಂಧುಗಳಿರಲಿಲ್ಲ. ಅವರ ಸೋದರ ಸೋದರಿಯರ ಎರಡನೇ ಮೂರನೇ ಪೀಳಿಗೆಯವರು ಬಂದು ಬೆಂದೂರು ಚರ್ಚಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು.
ಆ ನಂತರ ಇವರ ಬದುಕಿನ ಕಥೆಯ ಕೈಮ್ಯಾಕ್ಸ್ ಇದೆ. ಮನೆಯೊಳಗಿನ ಪಾತ್ರೆ ಪಗಡಗಳ ಬಗ್ಗೆ ಯಾವ ಬಂಧುಗಳಿಗೂ ಆಸಕ್ತಿಯಿರಲಿಲ್ಲ. ಅವರ ಖಜಾನೆಯೊಳಗಿನ ಸಂಗ್ರಹದ ಬಗ್ಗೆ ಎಲ್ಲ ಬಂಧುಗಳಿಗೂ ಕುತೂಹಲವಿತ್ತು. ಅವರು ಸಾಯುವಾಗ ಅವರ ಬ್ಯಾಂಕ್ ಎಕೌಂಟ್‌ನಲ್ಲಿದ್ದ ಹಣವೆಷ್ಟು ಗೊತ್ತೇ? ಹತ್ತಿರ ಹತ್ತಿರ ಒಂದು ಕೋಟಿ. ಬೆಕ್ಕಸ ಬೆರಗಾಗುವಂತಹ ಕತೆ ಇದು. ಉಡದೆ, ಉಣ್ಣದೆ, ನೀಡದೆ ಉಳಿಸಿದ ಹಣವದು. ಅಷ್ಟು ದೊಡ್ಡ ಮೊತ್ತಕ್ಕೆ ವಾರೀಸುದಾರರನ್ನಾಗಿ ಆ ಟೀಚರು ಯಾರನ್ನೂ ನೇಮಕ ಮಾಡದ ಕಾರಣ ಅದು ಬೇನಾಮಿ ಹಣವಾಗಿ ಬ್ಯಾಂಕಿನಲ್ಲಿ ಬಿದ್ದುಕೊಂಡಿದೆ. ಅದನ್ನು ಪಡೆಯಲು ಬಂಧುಗಳೊಳಗೇ ಕಸರತ್ತು ನಡೆಯುತ್ತದೆಂದು ಕೇಳಿದ್ದೇನೆ. ಅವರ ಸರಳ ಜೀವನ, ಪ್ರಾಮಾಣಿಕತೆಗಳೆಲ್ಲಾ ಮೆಚ್ಚುವಂತದ್ದು. ಆದರೆ ಅವರ ಪುಟ್ಟ ಪ್ರಪಂಚದಲ್ಲಿಯೂ ಮನುಷ್ಯ ಪ್ರೀತಿಯನ್ನು ಬಯಸದೆ, ಪ್ರೀತಿಯನ್ನು ನೀಡದೆ ಹೇಗೆ ಬದುಕುತ್ತಿದ್ದರು? ಇದೇ ನನಗೆ ವಿಸ್ಮಯ. ನೆರೆಕರೆಯವರಲ್ಲಿ ಯಾರಲ್ಲೂ ಒಂದು ಶಬ್ದ ಮಾತಾಡದೆ ವರ್ಷಗಟ್ಟಲೆ ಹೇಗೆ ಬದುಕಿದರು? ಹೀಗೂ ಒಂದು ಒಂಟಿ ಬದುಕು ಬಾಳಿದವರಿದ್ದರು ಎಂಬುದಕ್ಕೆ ಇವರ ಕತೆ ಹೇಳಿದೆ. ಇವರೇ ಪದುವಾ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿದ್ದ ಸಲ್ದಾನಾ ಟೀಚರು.
ವಿನೋದಿನಿ ಎಂಬ ವರ್ಣಚಿತ್ರ ಕಲಾವಿದೆಯ ಕತೆ ಇನ್ನೂ ವಿಚಿತ್ರವಾಗಿದೆ. ಖ್ಯಾತ ಕಲಾವಿದ ಶೆವಗೂರ್ ಅವರ ಶಿಷ್ಯೆಯಾಗಿ ಹಲವಾರು ಚಿತ್ರಗಳನ್ನು ಬರೆದ ಹವ್ಯಾಸಿ ಕಲಾವಿದೆಯಾದ ಈಕೆ ಸ್ನಾತಕೋತ್ತರ ಪದವೀಧರೆಯೂ ಹೌದು. ಅವಳನ್ನು ಹುಡುಕುತ್ತಾ ಹೋಗಿ ಕಂಡಾಗ ಕಲಾವಿದೆ ವಿನೋದಿನಿ ತನ್ನ ಮುದಿ ತಾಯಿಯೊಂದಿಗೆ ಜೀವನ ನಿರ್ವಹಣೆಗಾಗಿ ಮಕ್ಕಳಿಗೆ ಟ್ಯೂಶನ್ ಮಾಡುತ್ತಾ ಹೇಗೋ ದಿನ ಕಳೆಯುತ್ತಿದ್ದಳು. ಅಟ್ಟದಲ್ಲಿದ್ದ ಅವಳ ಹಳೆಯ ತೈಲಚಿತ್ರಗಳನ್ನು ಕೆಳಗಿಳಿಸಿ ಅವಳ ಬಗ್ಗೆ ನಾನು ಹಲವು ಪತ್ರಿಕೆಗಳಿಗೆ ಚಿತ್ರ ಸಹಿತ ಲೇಖನ ಬರೆದಿದ್ದೆ. ಅದಾದ ಬಳಿಕ ಇವಳನ್ನು ನಂಬಬಹುದು ಎಂದು ಅನಿಸಿತೋ ಏನೋ ನನಗೆ ಆಗಾಗ ಫೋನ್ ಮಾಡುತ್ತಿದ್ದಳು. ಅದೂ ಮಾಲಿಕರ ಮನೆಯಿಂದ. ಅವಳಿಗೆ ತುಂಬಾ ಏನೋ ನನ್ನಲ್ಲಿ ಹೇಳಲಿಕ್ಕಿದೆ ಎಂದು ಭಾಸವಾಗಿ ನಾನೇ ಅವಳಿಗೊಂದು ಮೊಬೈಲ್ ತೆಗೆಸಿಕೊಟ್ಟಿದ್ದೆ. ತಾಯಿಯ ಬಗ್ಗೆ ಆಗಾಗ ನನ್ನಲ್ಲಿ ದೂರುತ್ತಿದ್ದಳು. ನನಗೆ ತಿಳಿದಂತೆ ಸಾಂತ್ವನ ನೀಡುತ್ತಿದ್ದೆ.
ಸುಮಾರು ೨೨ ವರ್ಷ ಪ್ರಾಯದಲ್ಲೇ ಪುಟ್ಟ ಮಗು ವಿನೋದಿನಿಯನ್ನು ಉಡಿಯಲ್ಲಿ ಕಟ್ಟಿಕೊಂಡು ಗಂಡನನ್ನು ತ್ಯಜಿಸಿ ಪ್ರತ್ಯೇಕವಾಗಿ ಮನೆ ಮಾಡಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಮಗಳನ್ನು ಚೆನ್ನಾಗಿ ಓದಿಸಿ ಬೆಳೆಸಿದ ಆ ತಾಯಿಯ ಧೈರ್ಯಕ್ಕೆ ಮೆಚ್ಚಲೇಬೇಕು. ತನ್ನ ಬಂಧು ಬಳಗ ಯಾರೊಂದಿಗೂ ನಂಟನ್ನು ಬೆಳೆಸಿಕೊಳ್ಳದೆ ದ್ವೀಪವಾಗಿ ಬಾಳಿದ್ದಲ್ಲದೆ ಮಗಳಿಗೆ ನೆಂಟಸ್ತಿಕೆ ತಂದವರನ್ನೂ ಏನಾದರೊಂದು ನೆಪ ಹೇಳಿ ತಿರಸ್ಕರಿಸುತ್ತಿದ್ದ ಕಾರಣ ಕ್ರಮೇಣ ಬಂಧುಗಳು ಅವರ ಅಸ್ತಿತ್ವವನ್ನೇ ಮರೆತುಬಿಟ್ಟಿದ್ದರು. ಹಿರಿಮಗಳು ಆಶಾ ತಂದೆಯ ಜೊತೆಯಲ್ಲಿ ಬೆಳೆದು ತನ್ನನ್ನು ಹೆತ್ತತಾಯಿ ಇದ್ದಾಳೆಂದಾಗಲೀ ಒಬ್ಬ ತಂಗಿ ಇದ್ದಾಳೆಂದಾಗಲೀ ಗೊತ್ತೇ ಇಲ್ಲದಂತೆ ಮಂಗಳೂರಿನಲ್ಲೇ ಇದ್ದರೂ ಎಲ್ಲೋ ವಿದೇಶದಲ್ಲಿ ಬೆಳೆದಂತೆ ಬೆಳೆದಿದ್ದರು ಎಂಬುದೇ ಯಾರೂ ನಂಬಲಾರದ ಸಂಗತಿಯಾಗಿತ್ತು. ನಾನು ಅವರನ್ನು ಭೇಟಿಯಾಗುವ ಸಮಯದಲ್ಲಿ ತಾಯಿಗೆ ೮೦ ವರ್ಷ ದಾಟಿತ್ತು. ಮಗಳಿಗೆ ೬೦ ದಾಟಿತ್ತು. ತಾಯಿ ಉಂಡು ತಿಂದು ಗಟ್ಟಿಮುಟ್ಟಾಗಿದ್ದರೆ ಮಗಳು ಸಂಕಷ್ಟಿ, ಏಕಾದಶಿ ಎಂಬ ವ್ರತಗಳಲ್ಲದೆ ಗುರುವಾರ, ಶುಕ್ರವಾರ, ಸೋಮವಾರ ಆಯಾ ದಿನದ ದೇವರಿಗಾಗಿ ಉಪವಾಸ ಮಾಡುತ್ತಾ ಒಣ ಕಡ್ಡಿಯಂತಿದ್ದಳು.
ಇಂತಹ ಸಮಯದಲ್ಲೇ ನಾನು ಅವರನ್ನು ಹುಡುಕಿ ಹೋಗಿದ್ದೆ. ಬೆಳಿಗ್ಗೆ ಸಾಯಂಕಾಲವೆಂದು ಸುಮಾರು ೩೦ರಷ್ಟು ಮಕ್ಕಳು ಟ್ಯೂಶನ್‌ಗೆ ಬರುತ್ತಿದ್ದರು. ಸಣ್ಣ ಮಕ್ಕಳಿಗೆ ತಾಯಿ, ದೊಡ್ಡ ಮಕ್ಕಳಿಗೆ ಮಗಳು ಕಲಿಸುತ್ತಾ ಆ ಟ್ಯೂಶನ್ ಹಣದಿಂದ ಆರಕ್ಕೇರದೆ ಮೂರಕ್ಕಿಳಿಯದ ರೀತಿಯಲ್ಲಿ ಬದುಕು ಸಾಗುತ್ತಿತ್ತು. ಹೀಗೆ ಸಮತಟ್ಟಾದ ದಾರಿಯಲ್ಲಿ ಸಾಗುತ್ತಿದ್ದ ಅವರ ಬಾಳ ಬಂಡಿಗೆ ಧುತ್ತೆಂದು ಒಂದು ಕಂದಕ ಎದುರಾಯಿತು. ದೇವಿ ಎಂಬ ಹೆಸರಿನ ಈ ತಾಯಿ ಕುಂಞಪ್ಪ ಎಂಬ ಹೆಸರಿನ ತಂದೆಗೇ ಒಬ್ಬಳೇ ಮಗಳು. ಈ ಕುಂಞಪ್ಪ ಅವರಿಗೆ ಮಂಗಳಾದೇವಿ ದೇವಸ್ಥಾನದ ಬಳಿ ಆಸ್ತಿ, ಮನೆ ಇತ್ತು. ಕುಂಞಪ್ಪನವರ ಮರಣದ ಬಳಿಕ ಅವರ ಸೋದರ ಸೊಸೆ ಆ ಮನೆಯಲ್ಲಿ ವಾಸ್ತವ್ಯವಿದ್ದು ಈಗ ೬೦ ವರ್ಷದ ಬಳಿಕ ಆ ಸೊಸೆಯ ಮೂರನೇ ತಲೆಮಾರು ಆ ಮನೆಯನ್ನು ಕೋಟಿಗಟ್ಟಲೆ ಹಣಕ್ಕೆ ಮಾರಾಟ ಮಾಡುವ ಸುದ್ದಿ ತಲುಪಿತು. ದೇವಿಯ ಬಳಿ ಆಸ್ತಿಯ ಕಾಗದ ಪತ್ರಗಳೇನೂ ಇರಲಿಲ್ಲ. ಹಾಗಾಗಿ ಏನು ಮಾಡುವುದು? ತನ್ನ ಅಪ್ಪನ ಆಸ್ತಿಯನ್ನು ತಾನು ಬದುಕಿರುವಾಗಲೇ ತನ್ನ ಬಂಧುಗಳು ಮಾರಾಟ ಮಾಡಿ ಮುಕ್ಕಿ ತಿನ್ನುತ್ತಿದ್ದಾರಲ್ಲಾ ಎಂಬ ರೋಷದಿಂದ ನನ್ನನ್ನು ಕರೆದು ವಿಷಯ ತಿಳಿಸಿದರು. ನಾನು ವಿನೋದಿನಿಯನ್ನು ಕರೆದುಕೊಂಡು ಕೊಡಿಯಾಲಬೈಲಿನ ಶ್ರೀರಾಮ ಕಾಂಪ್ಲೆಕ್ಸ್‌ನಲ್ಲಿರುವ ಎಂ.ವಿ. ಶಂಕರ ಭಟ್ ಎಂಬ ವಕೀಲರನ್ನು ಭೇಟಿಯಾಗಿ ವಿಷಯ ತಿಳಿಸಿದೆ. ಅವರು ಗಾಬರಿಯಾಗುವ ಕಾರಣವಿಲ್ಲ. ಯಾವ ಹಳೇ ದಾಖಲೆಯನ್ನು ಪಡೆಯಬಹುದು ಎಂದು ಸಲಹೆ ನೀಡಿದರು. ನಾನೂ ತಾಯಿ ಮಗಳಿಬ್ಬರಿಗೂ ಧೈರ್ಯ ತುಂಬಿದೆ.
ವಾರದ ಬಳಿಕ ಇವರ ಮನೆಗೆ ಬಂದ ಬಂಧುಗಳು ಇವರಿಗೆ ಒಂದು ಲಕ್ಷ ಹಣ ನೀಡಲು ಬಂದಾಗ ದೇವಿ ಅದನ್ನು ತಿರಸ್ಕರಿಸಿದರೆಂದೂ ನೀವು ಮಾಡಿದ ಪಾಪಕಾರ್ಯಕ್ಕೆ ನಾನು ನಂಬಿದ ಭಗವತಿ ನಿಮಗೆ ಪಾಠ ಕಲಿಸುತ್ತಾರೆಂದೂ ಶಪಿಸಿದರಂತೆ. ಅಲ್ಲಿಗೆ ಬಂಧುಗಳೊಂದಿಗೆ ಇದ್ದ ನಂಟಿನ ತೀರ ತೆಳುವಾದ ಎಳೆಯೂ ಕಡಿಯಿತು. ನನ್ನ ತಂದೆಯ ಜಮೀನನ್ನು ಮಾರಾಟ ಮಾಡುವವರಿಗೆ ಮಗಳಾದ ನಾನು ಬದುಕಿದ್ದೇನೆಂದು ತೋರಿಸಬೇಕೆಂದು ಹೇಳುತ್ತಿದ್ದ ದೇವಿ ಈಗ ಸಂಪೂರ್ಣ ಬದಲಾಗಿ ವಕೀಲರನ್ನು ಕೇಸು ದಾಖಲಿಸುವ ಅಗತ್ಯವೇ ಇಲ್ಲವೆಂದು ಖಡಾಖಂಡಿತ ಹೇಳಿಬಿಟ್ಟರು. ನನ್ನ ಪ್ರಯತ್ನಗಳು ಗೋರ್ಕಲ್ಲ ಮೇಲೆ ನೀರು ಸುರಿದಂತಾಯಿತು. ಅವರ ಆಸ್ತಿಯ ಬಗ್ಗೆ ಅವರಿಗೇ ಇಲ್ಲದ ಕಾಳಜಿ ನನಗೇಕೆ? ದಾಖಲೆಗಳನ್ನು ಪೋರ್ಜರಿ ಮಾಡಿದರೆ ಮಾತ್ರ ಆಸ್ತಿ ಮಾರಾಟವಾಗುತ್ತದೆ. ದೇವಿಯವರು ಒಂದು ಸಣ್ಣ ತಕರಾರು ಅರ್ಜಿ ಹಾಕಿದರೂ ಆಸ್ತಿ ಮಾರಾಟವಾಗದೆ ಇವರು ಹಕ್ಕು ಸ್ಥಾಪನೆ ಮಾಡಬಹುದಿತ್ತು. ತಿಂಗಳುಗಳ ಹಿಂದೆಯೇ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಣೆ ನೀಡಿದ್ದರಂತೆ. ಅದನ್ನು ಇವರಾಗಲೀ, ನಾನಾಗಲೀ ಗಮನಿಸುವುದು ಸಾಧ್ಯವಿರಲಿಲ್ಲ. ನನ್ನ ಅವರ ಸಂಪರ್ಕಕ್ಕಿಂತ ಮೊದಲೇ ಈ ಕೆಲಸ ಆಗಿದೆ. ಆದುದರಿಂದ ಮಗಳು ಬದುಕಿರುವಾಗಲೇ ತನ್ನ ತಂದೆಯ ಆಸ್ತಿಯಲ್ಲಿ ಒಂದು ಚಿಕ್ಕಾಸನ್ನೂ ಪಡೆಯದೆ ಕುಟುಂಬಿಕರ ಪಾಲಾಯಿತು. ಬಂಧುಗಳ ಮೋಸಕ್ಕಿಂತ ಹೆಚ್ಚು ಇವರ ನಿರ್ಲಕ್ಷ್ಯವೂ ಕಾರಣವಲ್ಲವೇ? ಪುರಾಣಕಾಲದ ಕಟ್ಟುಕತೆಗಳು ತಮಗಾದ ಹಿಂಸೆಗೆ ಶಾಪ ಹಾಕುತ್ತವಲ್ಲವೇ? ಹಾಗೆ ನಾನು ನಂಬಿದ ಭಗವತಿ ನಿಮ್ಮನ್ನು ನೋಡುತ್ತಾಳೆಂದು ಶಪಿಸಿದ ದೇವಿಯವರ ಮೌಢ್ಯಕ್ಕೆ ಏನನ್ನಬೇಕು? ಶೋಷಣೆಯನ್ನು ಒಪ್ಪಿಕೊಳ್ಳುವವರಿರುವವರೆಗೂ ಶೋಷಕರು ನಿರ್ಭಯವಾಗಿ ಬದುಕುತ್ತಾರೆ. ಅಲ್ಲವೇ?
ದೇವಿ ವಿನೋದಿನಿಯರ ದುರಂತ ಅಧ್ಯಾಯ
ಜೀವನವು ಕೌತುಕಗಳ ಸರಮಾಲೆ ಎನ್ನುವುದು ಸುಳ್ಳಲ್ಲ. ಒಂದು ದಿನ ಇವರ ಬಂಧುಗಳಲ್ಲೊಬ್ಬಳು – ಹೆಸರು `ಜಿಂಕೆಗಣ್ಣೆ’ ಎಂದಿಟ್ಟುಕೊಳ್ಳಿ, ಬಂದು ಯಾವ ಮಾಯ ಮಂತ್ರ ಮಾಡಿ ಮಾಡಿದರೋ ತಿಳಿಯದು. ತಾನು ತನ್ನ ಮನೆಯ ಮಹಡಿಯ ಮೇಲೆ ಕಟ್ಟಿಸಿದ ಮನೆಯಲ್ಲಿರಬೇಕೆಂದೂ ಟ್ಯೂಶನ್ನಿಗೆ ಅಲ್ಲಿ ಬೇಕಾದಷ್ಟು ಮಕ್ಕಳು ಇದ್ದಾರೆಂದೂ ನಂಬಿಸಿದರು. ಸುಮಾರು ೩೫ ವರ್ಷಗಳಿಂದ ಕಾರ್‌ಸ್ಟ್ರೀಟಿನ ಮನೆಯಲ್ಲಿ ಬೇರುಬಿಟ್ಟಿದ್ದ ಇವರನ್ನು ಕಿತ್ತು ಬಪ್ಪಾಲಿನ ತನ್ನ ಮನೆಗೆ ಸ್ಥಳಾಂತರಿಸಿದರು. ಇಷ್ಟರವರೆಗೆ ಯಾವ ಬಂಧುಗಳನ್ನೂ ಹತ್ತಿರ ಸುಳಿಯಲು ಬಿಡದ ಈ ದೇವಿ ಟೀಚರಿಗೆ ತನ್ನ ಮುದಿಪ್ರಾಯದಲ್ಲಿ ಮಗಳು ಆಧಾರವಾಗಲಾರಳು ಎಂದು ಅನಿಸಿತೇ? ಗೊತ್ತಿಲ್ಲ, ಮಗಳ ವಿರೋಧದ ನಡುವೆಯೂ ಮನೆ ಬದಲಾಯಿಸಿ ದೂರದ ಬಂಧುವಾದ ಬಪ್ಪಾಲಿನ ಜಿಂಕೆಗಣ್ಣೆ ಮಹಡಿ ಮನೆಯಲ್ಲಿ ಪ್ರತಿಷ್ಠಾಪನೆಗೊಂಡರು. ಇಲ್ಲಿಂದ ಪ್ರಾರಂಭವಾಯಿತು ಅವರ ಹೋರಾಟ. ಇದು ಮನೆಯೊಳಗಿನ ಹೋರಾಟವೂ, ಹೊರಗಿನ ಹೋರಾಟವೂ ಆಗಿ ವರ್ಷದೊಳಗೇ ಇಬ್ಬರದೂ ಆರೋಗ್ಯ ಕೆಟ್ಟು ಆಸ್ಪತ್ರೆ ಕಾಣುವಂತಾಯಿತು. ಟ್ಯೂಶನ್ನಿಗೆ ಮಕ್ಕಳಿಲ್ಲದ ಸಮಸ್ಯೆ ಒಂದಾದರೆ ನಿಮ್ಮನ್ನು ನಾನು ರಕ್ಷಿಸುತ್ತೇನೆಂದು ಭರವಸೆ ಕೊಟ್ಟ ಜಿಂಕೆಗಣ್ಣೆ ವಿದೇಶಕ್ಕೆ ಹೋಗಿ ಕೆಲಸಕ್ಕೆ ಸೇರಿಕೊಂಡರು. ಯಾರ ಸಂಪರ್ಕವೂ ಸಹಾಯವೂ ನಿರೀಕ್ಷಿಸದೆ ಬದುಕಿದ್ದ ಈ ತಾಯಿ ಮಗಳು ಇಲ್ಲಿಗೆ ಬಂದದ್ದು ಕಣ್ಣು ಕಟ್ಟಿ ಕಾಡಿಗೆ ಬಿಟ್ಟಂತಾಯಿತು. ಇನ್ನೂ ವಿಶೇಷವೆಂದರೆ ತಮ್ಮಲ್ಲಿದ್ದ ಹಣ ಚಿನ್ನವನ್ನೂ ಕೂಡಾ ಜಿಂಕೆಗಣ್ಣೆಯ ವಶಕ್ಕೆ ಒಪ್ಪಿಸಿ ಮೂರ್ಖರಾಗಿದ್ದರು. ಆ ಮನೆಗೆ ಬಂದು ಐದಾರು ತಿಂಗಳೊಳಗೇ ವಿನೋದಿನಿಯನ್ನು ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸಬೇಕಾಯಿತು. ಈ ಸಮಯದಲ್ಲಿ ಅಲ್ಲಿ ನನಗೆ ಸಹಾಯಕ್ಕೆ ಒದಗಿದವರು ಜಪ್ಪು ಮಲೆಯಾಳಿ ಬಿಲ್ಲವ ಸಂಘದ ರಾಜಗೋಪಾಲ್ ಮತ್ತು ಸುಧೀರ್ ಎಂಬ ಯುವಕರು. ಮಗಳ ಜೊತೆಯಲ್ಲಿ ತಾಯಿಯೂ ಆಸ್ಪತ್ರೆ ಸೇರಿದರು. ವಿನೋದಿನಿಗೆ ಕ್ಷಯರೋಗವೆಂದು ಖಾತ್ರಿಯಾಯಿತು. ಅದಕ್ಕೆ ಔಷಧಿ ಬರೆದುಕೊಟ್ಟದ್ದನ್ನು ಆಕೆ ಸೇವಿಸದೆ ಬಿಸಾಡುವುದನ್ನು ಕಂಡಾಗ ನನ್ನ ಪಿತ್ತ ನೆತ್ತಿಗೇರಿತು. “ನೋಡಿ, ನನಗೇನೂ ಮಾಡಲು ಬೇರೆ ಕೆಲಸವಿಲ್ಲವೆಂದು ನಿಮ್ಮ ಸೇವೆಗೆ ನಿಂತಿಲ್ಲ. ಮದ್ದು ಸ್ವೀಕರಿಸದೆ ಆರಾಮವಾಗಿ ಮಲಗಲು ಆಸ್ಪತ್ರೆಗೆ ಬರಬೇಕಾಗಿಲ್ಲ. ನಿಮ್ಮ ತಾಯಿಯ ಕಷ್ಟ ನೋಡಿಯಾದರೂ ನಿಮಗೆ ಬೇಗ ಕಾಯಿಲೆ ಗುಣವಾಗಬೇಕೆಂದೆನಿಸುವುದಿಲ್ಲವೇ? ನಾನು ನಾಳೆಯಿಂದ ಬರುವುದಿಲ್ಲ. ನಿಮ್ಮಿಷ್ಟದಂತೆ ಮಾಡಿ” ಎಂದು ಸಿಟ್ಟಿನಿಂದಲೇ ಹೇಳಿದೆ. ಆಗ ಸೌಮ್ಯ ಸ್ವಭಾವದ ವಿನೋದಿನಿ ಹೇಳಿದ ಮಾತು ನನ್ನ ಕಿವಿಗಳನ್ನು ನಾನೇ ನಂಬದಂತಾಯಿತು. “ನನ್ನ ಅಮ್ಮನೇ? ಅವಳು ನನ್ನ ಬದುಕನ್ನು ಕೊಂದು ಹಾಕಿದವಳು. ಅವಳು ಗತಿಯಿಲ್ಲದೆ ಬೀದಿಗೆ ಬಿದ್ದು ಸಾಯಬೇಕೆಂದೇ ನನ್ನ ಆಸೆ. ನಾನು ಸತ್ತರೂ ಅವಳು ಗುಂಡುಕಲ್ಲಿನಂತೆ ಗಟ್ಟಿ ಇದ್ದಾಳೆ. ಹೇಗೆ ಬದುಕುತ್ತಾಳೆ ನೋಡಿ. ಅವಳು ಭಿಕ್ಷೆ ಬೇಡಿ ತಿನ್ನಬೇಕು” ಎಂದು ಹಲ್ಲು ಕಡಿದು ಹೇಳಿದಾಗ ಈ ತಾಯಿ ಮಗಳ ಸಂಬಂಧ ತೀರಾ ಹಳಸಿದೆ ಎಂದು ಗೊತ್ತಾಯಿತು. ವಿನೋದಿನಿಗೆ ತನ್ನನ್ನು ಮದುವೆ ಮಾಡಿಕೊಡಲೊಪ್ಪದ ತಾಯಿಯ ಬಗ್ಗೆ ಒಳಗೇ ರೋಷವಿತ್ತು. ಆದರೆ ಅದನ್ನು ಬಾಯಿ ಬಿಟ್ಟು ಹೇಳಲಾಗದೆ ತನ್ನನ್ನೇ ತಾನು ಹಿಂಸೆಗೊಳಪಟ್ಟುಕೊಂಡು ಸೇಡು ತೀರಿಸಿದ್ದಳು.
ಇವರ ಕತೆಯನ್ನು ಯಾಕಿಷ್ಟು ವಿಸ್ತರಿಸಿ ಹೇಳಿದೆನೆಂದರೆ ಗಂಡು ದಿಕ್ಕಿಲ್ಲದ ಹೆಂಗಸರನ್ನು ಬಂಧುಗಳು ಹೇಗೆ ವಂಚಿಸುತ್ತಾರೆ ಎಂಬುದನ್ನು ತಿಳಿಸಲು. ಸೋಶಿಯಾಲಜಿಯಲ್ಲಿ ಎಂ.ಎ. ಮಾಡಿದ ವಿನೋದಿನಿಯೂ ಸ್ವಂತ ಬುದ್ಧಿಯನ್ನು ಅಡವಿಟ್ಟು ಅಮ್ಮನ ಮೇಲೆ ಎಲ್ಲಾ ಭಾರವನ್ನು ಹೊರಿಸಬೇಕಿತ್ತೇ? ಯಾರನ್ನಾದರೂ ಆಕೆ ಪ್ರೀತಿಸಿದ್ದರೇ? ಅದನ್ನು ತಾಯಿ ವಿರೋಧಿಸಿದ್ದರೇ? ಅದ್ಯಾವುದೂ ನನಗೆ ಗೊತ್ತಿಲ್ಲ. ಆದರೆ ಆಕೆಗೆ ಮದುವೆಯಾಗಲು ಇಷ್ಟವಿತ್ತು ಎಂದು ನನಗೆ ಸ್ಪಷ್ಟವಾಯಿತು. ವಿನೋದಿನಿಗೆ ಕಾಯಿಲೆ ಅದಾಗಿ ಬಂದದ್ದಲ್ಲ. ಅವಳೇ ಬರಿಸಿಕೊಂಡದ್ದು. ಅಥೆನಾ, ಕೆ.ಎಂ.ಸಿ. ಹೀಗೆ ಆಸ್ಪತ್ರೆ ಸುತ್ತಾಡಿ ತಿಂಗಳುಗಳೊಳಗೇ ಕಣ್ಣುಮುಚ್ಚಿದ ವಿನೋದಿನಿ ತನ್ನ ಆಸೆಗಳನ್ನು ಸುಟ್ಟುಕೊಂಡು ಬದುಕಿದ್ದಳು. ಅದು ಅವಳ ವರ್ತನೆ ಮತ್ತು ಮಾತುಗಳಲ್ಲಿ ವ್ಯಕ್ತವಾಗುತ್ತಿದ್ದವು. ಮಗಳು ತೀರಿದ ತಿಂಗಳೊಳಗೇ ದೇವಿ ಟೀಚರೂ ನಿಧನರಾದರು. ಮದುವೆಯಿಂದ ತಾನು ನೆಮ್ಮದಿ ಪಡೆಯಲಿಲ್ಲವೆಂದು ಮಗಳ ಮದುವೆಗೆ ತಾಯಿ ಹಿಂಜರಿದರೇ? ಇವರ ಹಿರಿಮಗಳು ಆಶಾ ಬೆಂಗಳೂರಿನಲ್ಲಿದ್ದಾಳೆಂಬ ವಿವರ ತಿಳಿದು ವಿಳಾಸ ಹುಡುಕಿದಾಗ ಆಕೆಯೂ ಹೆಚ್ಚು ಕಡಿಮೆ ಕೆಲವು ತಿಂಗಳುಗಳ ಅಂತರದಲ್ಲಿ ತೀರಿಕೊಂಡ ವಿಷಯ ತಿಳಿಯಿತು.
ಆಶಾಳ ಗಂಡನನ್ನು ಫೋನ್‌ನಲ್ಲಿ ಸಂಪರ್ಕಿಸಿ ವಿಷಯ ತಿಳಿಸಿದಾಗ ಅವರ ಮಾತು ಕೇಳಿ ಮೂಕಳಾದೆ. ವರ್ಷಗಳ ಹಿಂದೆ ಗಂಡ ಹೆಂಡತಿ ಊರಿಗೆ ಬಂದಿದ್ದಾಗ ಮಗಳು ತಾಯಿಯನ್ನು ಕಾಣಬೇಕೆಂದು ಬಯಸಿ ಸಂಬಂಧಿಕರಲ್ಲಿ ಹೇಳಿ ಕಳುಹಿಸಿದಳಂತೆ. ಆಗ ಈ ತಾಯಿ ತನಗೆ ಆಶಾ ಎಂಬ ಮಗಳೇ ಇಲ್ಲವೆಂದೂ ತನ್ನನ್ನು ಕಾಣಲು ಬರಬಾರದೆಂದೂ ಹೇಳಿದರಂತೆ. ಹಾಗೆ ಈ ತಾಯಿ ಈ ಹಿರಿಮಗಳನ್ನು ತನ್ನ ಗಂಡನನ್ನು ಬಿಟ್ಟು ಬರುವಾಗಲೇ ಮರೆತು ಬಂದಿದ್ದರು. ಈ ಕಿರಿಮಗಳು ವಿನೋದಿನಿಯನ್ನು ಆಕೆ ಪ್ರಾಯಕ್ಕೆ ಬಂದ ಮೇಲೆಯೇ ಮರೆತುಬಿಟ್ಟಿದ್ದರು. ತನ್ನ ಸ್ವಾರ್ಥಕ್ಕೋಸ್ಕರ ಮದುವೆಯನ್ನೂ ಮಾಡದೆ ಅವಳ ಇಷ್ಟದಂತೆ ಬದುಕಲೂ ಬಿಡದೆ ಇಬ್ಬರು ಮಕ್ಕಳ ಪ್ರೀತಿಯನ್ನು ದೇವಿ ಕಳಕೊಂಡರು. ಅವಿವಾಹಿತೆಯಾಗಿ ಜೀವಮಾನವಿಡೀ ಸೋಗಿನ ಭಕ್ತಿ ವೈರಾಗ್ಯಗಳಲ್ಲಿ ಬಾಳಿದ ವಿನೋದಿನಿ ಪ್ರತಿಭೆ, ಬುದ್ಧಿವಂತಿಕೆ ಎಲ್ಲಾ ಇದ್ದೂ ತನ್ನ ಜೀವನವನ್ನು ಹೇಗೆ ನರಕ ಮಾಡಿಕೊಂಡಳು ಎಂಬುದನ್ನು ಕಣ್ಣಾರೆ ಕಂಡವಳು ನಾನು. ಸರಿಯಾಗಿ ನೋಡಿದರೆ ಅವರ ಬಾಳು ಬರೆದರೆ ಕತೆ, ಹಾಡಿದರೆ ಕಾವ್ಯ. ಅವಿವಾಹಿತ ಮಹಿಳೆಯರನೇಕರ ಜೀವನ ಕತೆಯೂ ಒಂದೊಂದು ಬೃಹತ್ ಕಾದಂಬರಿಯೋ ಮಹಾಕಾವ್ಯವೋ ಆಗುವಷ್ಟಿದೆ. ಗೌಜಿ, ಗದ್ದಲ, ಗಲಾಟೆಗಳುಳ್ಳ ಘಟನೆಗಳೇ ಮಹತ್ವದ್ದಲ್ಲ. ಮೌನದಿಂದ ಕೂಡಿದವುಗಳೂ ಜೀವನದ ತಿರುವುಗಳಿಗೆ ಕಾರಣಗಳಾಗುತ್ತವೆ ಎಂಬುದಕ್ಕೆ ವಿನೋದಿನಿಯ ಜೀವನವೇ ಸಾಕ್ಷಿ. ವಿನೋದಿನಿಯದು ಸಾವಲ್ಲ, ಆತ್ಮಹತ್ಯೆಯೆಂದೇ ನನ್ನ ಭಾವನೆ. ದೇವಿಯರ ತಂದೆಯ ಆಸ್ತಿಯ ದಾಖಲೆಗಳನ್ನು ಪೋರ್ಜರಿ ಮಾಡಿದ ವಕೀಲರು, ದೇವಿಯವರನ್ನು ವಂಚಿಸಿದ ಬಂಧುಗಳು, ರಕ್ಷಿಸುತ್ತೇನೆಂದು ನಂಬಿಸಿ ಆಳವಾದ ಕಮರಿಗೆ ತಳ್ಳಿದ ಜಿಂಕೆಗಣ್ಣೆ ಮತ್ತು ಅವರ ಮನೆಯವರು ಇವರೆಲ್ಲಾ ಈ ಕೊಲೆಯ ಆರೋಪಿಗಳು. ವಿನೋದಿನಿಯ ಆಕ್ರಂದನವನ್ನು ಕೇಳಿಸಿಕೊಂಡ ನೆರೆಕರೆಯವರೂ, ಕೆ.ಎಂ.ಸಿ.ಯಲ್ಲಿ ಕೆಲಸಕ್ಕಿದ್ದ ಬೆನ್ನಿ ಸಿಸ್ಟರ್, ವಸಂತಿ ಜೆ. ಪೂಜಾರಿ ಇವರೆಲ್ಲಾ ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿದಾರರು. ವಿನೋದಿನಿಯು ದಾರುಣ ಸ್ಥಿತಿಯಲ್ಲಿರುವಾಗ ನೆರವಿತ್ತ ಶಶಿಕಲಾ ಕೂಡ ಸಾಕ್ಷಿದಾರರು. ಹಾಗೆಯೇ ಆರ್ಥಿಕ ಸಹಾಯ ನೀಡಿದ ಬಿಲ್ಲವ ಸಂಘ, ತೀಯಾ ಶಕ್ತಿ ಸಂಘದವರೂ ಕೂಡಾ ಸಾಕ್ಷಿಗಳು. ಬೆಂಕಿ ಬಿದ್ದ ಮನೆಯ ಗಳ ಎಣಿಸುವ ಜಿಂಕೆಗಣ್ಣೆಯಂತಹ ವಿಶ್ವಾಸಘಾತಕರು ಒಂಟಿ ಮಹಿಳೆಯರನ್ನು ಕಂದಕಕ್ಕೆ ದೂಡಿ ಉದ್ಧಾರ ಮಾಡಿದೆವೆಂಬ ಫೋಸು ಕೊಡುತ್ತಾರೆ. ಜೀವನವೆಂಬ ವಾಹನಕ್ಕೆ ಮೊದಲ ನಿಲ್ದಾಣ ಮದುವೆಯಂತೆ, ಕೊನೆಯದು ಮರಣ. ಹುಟ್ಟಿನಿಂದ ನೇರ ಮರಣದ ಕಡೆಗೆ ನಡೆವ ಈ ಅವಿವಾಹಿತೆಯರ ವಾಹನಕ್ಕೆ ಸಾರಥಿಯೂ ಅವರೇ, ಇಂಧನವೂ ಅವರೇ. ಆದುದರಿಂದ ಅವರಲ್ಲಿ ಜೀವನ ಸೌಂದರ್ಯವನ್ನು ಸವಿಯುವ ಮನಸ್ಸೇ ಮುರುಟಿಕೊಂಡಿರುತ್ತದೆ. ಯಾರನ್ನಾದರೂ ನಾಶ ಪಡಿಸಬೇಕೆಂಬ ಇಚ್ಛೆ ಇದ್ದರೆ ಮೊದಲು ವಿವೇಕವನ್ನು ನಾಶಪಡಿಸಿದರೆ ಸಾಕು ಎನ್ನುತ್ತಾರೆ. ವಿವೇಕವನ್ನು ಹಣ ಕೊಟ್ಟು ಪಡೆಯಲು ಸಾಧ್ಯವಿಲ್ಲ. ಅದು ಮನಸ್ಸು ಮಥನ ಮಾಡಿ ಹುಟ್ಟುವ ಜ್ಞಾನ. ನಾನು ಸಂದರ್ಶಿಸಿದ ಉದ್ಯೋಗಸ್ಥ, ವಿದ್ಯಾವಂತ, ಕುಲೀನ ಮನೆತನದ ಸ್ತ್ರೀಯರೂ ಭಾವನೆಗಳ ಏರುಪೇರಿನಿಂದಾಗಿ ಅನೇಕ ವಿವೇಕರಹಿತ ಕೆಲಸಗಳನ್ನು ಮಾಡಿದ ಕತೆಗಳಿವೆ. ವಿವೇಕವಿಲ್ಲದವರಿಗೆ ಕಲಿಸಿದ ವಿದ್ಯೆಯೂ ನೀರಿನಲ್ಲಿ ಮಾಡಿದ ಹೋಮದಂತೆ ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಅವರಲ್ಲಿ ಮರೆಯಲಾಗದ ಒಬ್ಬ ಅವಿವಾಹಿತ ಮಹಿಳೆ ಶಶಿಕಲಾ.
ಪ್ರತಿಯೊಬ್ಬರಿಗೂ ತನ್ನ ಜೀವನದ ಬಗ್ಗೆ ಕನಸುಗಳಿರುತ್ತವೆ. ಹಾಗೆಯೇ ಶಶಿಕಲಾಳಿಗೂ ಕೂಡಾ ತಾನು ಶ್ರೇಷ್ಠ ನಟಿಯಾಗಬೇಕು. ಅದರಲ್ಲೂ ಅಬ್ಬಕ್ಕನ ಪಾತ್ರದಲ್ಲಿ ಚಲನಚಿತ್ರದಲ್ಲಿ ಮಿಂಚಬೇಕು ಎಂಬ ಆಶೆಯನ್ನು ಮೈತುಂಬಾ ಹೇರಿಕೊಂಡು ಬದುಕುತ್ತಿದ್ದಳು. ಅವಳು ನನಗೆ ಬಾಲ್ಯದಿಂದಲೂ ಸುಪರಿಚಿತಳು. ಬಾಲ್ಯದ ಅವಳ ನಾಟಕದ ಹುಚ್ಚಿಗೆ ಸಾಥಿಯಾದವಳು ನಾನು. ನೆರೆಕರೆಯ ಮಕ್ಕಳನ್ನು ಸೇರಿಸಿ ಕುಣಿಸುವುದು, ಹಾಡಿಸುವುದು, ಅವಳೇ ಸಂಭಾಷಣೆ ಬರೆದು ನಿರ್ದೇಶನ ಮಾಡಿದ ನಾಟಕಗಳಲ್ಲಿ ಅವಳ ಸೋದರಮಾವನ ಮಕ್ಕಳ ಜೊತೆಗೆ ನಾನೂ ನನ್ನ ಗೆಳತಿ ತಂಗ ಕೂಡಾ ಜೊತೆಯಾಗುತ್ತಿದ್ದುದು ನಿನ್ನೆ ಮೊನ್ನೆ ನಡೆದಂತಿದೆ. ಅಂತಹ ಶಶಿಕಲಾಗೆ ಎಸ್.ಎಸ್.ಎಲ್.ಸಿ. ಮುಗಿಸಿದ ಮರುವರ್ಷದಲ್ಲೇ ಪಣಂಬೂರು ಬಂದರಿನಲ್ಲಿ ಉದ್ಯೋಗವೂ ಲಭಿಸಿದ ಮೇಲೆ ಸಂಗೀತ ಮತ್ತು ನಾಟಕಾಭಿನಯವನ್ನು ಹವ್ಯಾಸವಾಗಿಸಿಕೊಂಡಿದ್ದಳು. ೭೦ರ ದಶಕದಲ್ಲಿ ನಮ್ಮ ನೆರೆಯವರೇ ಆದ ನಾರಾಯಣ ಶೆಟ್ಟಿ ಎಂಬವರು ಒಂದು ಹವ್ಯಾಸೀ ನಾಟಕ ತಂಡ ಕಟ್ಟಿ ಅಲ್ಲಲ್ಲಿ ನಾಟಕ ಆಡಿಸುತ್ತಿದ್ದರು. ಅವರ ಜೊತೆ ಇವಳು ಬೆಳೆಸಿಕೊಂಡ ನಂಟು ಹಲವು ತುರಿಕೆ ನಾಲಗೆಗಳಿಗೆ ನೆಚ್ಚಿನ ಕವಳವಾಗಿತ್ತು. ಅವಕ್ಕೆಲ್ಲಾ ಕ್ಯಾರೇ ಅನ್ನದ ಆಕೆ ಅಭಿನಯದ ಅವಕಾಶಗಳಿಗಾಗಿ ಪ್ರಯತ್ನಿಸಿದಳು. ಕೆಲವು ಕಡೆ ಸೋತರೂ ಕೆಲವು ಕಡೆ ಗೆದ್ದಳು. ಅವಳಿಗೆ ಒಳ್ಳೆಯ ಕಂಠ ಇತ್ತು. ಶಾಸ್ತ್ರೀಯವಾಗಿ ಸಂಗೀತ ಕಲಿಯದಿದ್ದರೂ ದೈವದತ್ತವಾಗಿ ಸಂಗೀತ ಅವಳಿಗೆ ಒಲಿದಿತ್ತು. ಹಿಂದಿನ ಕಂಪೆನಿ ನಾಟಕಗಳಲ್ಲಾದರೆ ಶಶಿಕಲಾ ಬಹು ಬೇಡಿಕೆಯ ನಟಿಯಾಗುತ್ತಿದ್ದಳೋ ಏನೋ? ಆಧುನಿಕ ನಾಟಕರಂಗದಲ್ಲಿ ಏನೆಲ್ಲಾ ಹೊಸ ಪರಿವರ್ತನೆಗಳಾಗಿವೆ ಎಂಬುದನ್ನು ನೋಡುವ ಆಸಕ್ತಿಯಾಗಲೀ, ಹೊಸತನ್ನು ಕಲಿಯುವ ಆಸಕ್ತಿಯಾಗಲೀ ಅವಳಿಗಿರಲಿಲ್ಲ. ಅದೇ ಹಳೆಯ ಸೀನು, ಸೀನರಿಗಳ ನಾಟಕಗಳೇ ನಾಟಕಗಳೆಂಬ ಭ್ರಮೆಯಿಂದ ಅವಳು ಹೊರಬಂದಿರಲಿಲ್ಲ. ತಾನೊಬ್ಬ ನಟಿಯಾಗಬೇಕೆಂಬ ಆಸೆ ಅತಿಯಾಗಿತ್ತು. ಅತಿ ಆಸೆಯೊಂದಿದ್ದರೆ ಬೇರೆ ದುರ್ಗುಣಗಳು ಬೇಡವಂತೆ. ಅದರಲ್ಲೂ ಅಬ್ಬಕ್ಕನ ಪಾತ್ರದಲ್ಲಿ ಹಲವು ಕಡೆ ಮಿಂಚಿದ ಮೇಲೆ ತನಗಿಂತ ಶ್ರೇಷ್ಠ ನಟಿ ಯಾರೂ ಇಲ್ಲ ಎಂಬ ಅಹಂನಿಂದ ಪೀಡಿತಳಾದುದರಿಂದ ತನಗಿಂತ ನಟನೆಯಲ್ಲಿ ಶ್ರೇಷ್ಠರಾದ ಕಲಾವಿದೆಯರನ್ನು ಪ್ರೀತಿ ಗೌರವದಿಂದ ಕಾಣುವ ಸ್ವಭಾವವೂ ಅವಳಲ್ಲಿರಲಿಲ್ಲವೆಂದು ಅವಳೊಂದಿಗಿನ ಮಾತುಕತೆಯಿಂದ ಅರಿತುಕೊಂಡಿದ್ದೆ. ಅಭಿನಯದಲ್ಲಿ ತನ್ನನ್ನು ಮೀರಿಸುವವರೇ ಇಲ್ಲವೆಂಬ ಜಂಬವೂ ಅವಳನ್ನು ಕಲಾವಿದರ ಗುಂಪಿನಿಂದ ದೂರವಿರಿಸಿತ್ತು. ಅಬ್ಬಕ್ಕನ ಪಾತ್ರದಲ್ಲಿ ನಾಟಕಗಳಲ್ಲಿ ಅಭಿನಯಿಸಿದ ಅನುಭವಗಳು ಅವಳಲ್ಲಿ ಇನ್ನಿಲ್ಲದ ಆಶೆಗಳನ್ನು ತುಂಬಿದ್ದವು. ನಕ್ಷತ್ರಗಳಲ್ಲೇ ಕಣ್ಣಿಟ್ಟು ನಡೆಯುವವನು ರಸ್ತೆಯ ಹೊಂಡಗಳಲ್ಲಿ ಬೀಳುತ್ತಾನೆಂಬ ಮಾತು ಸುಳ್ಳಲ್ಲ. ತನಗೆ ಅದೇ ಪಾತ್ರ ಬೇಕು ಎಂದು ನಿವೃತ್ತಳಾದ ಮೇಲೂ ಹಂಬಲಿಸುವ ಅವಳದ್ದು ಹುಚ್ಚುತನವೋ ಮೂರ್ಖತನವೋ ದುರಾಸೆಯೋ ಎಂದು ತಿಳಿಯದೆ ಗೊಂದಲಕ್ಕೊಳಗಾಗಿದ್ದೇನೆ.
ಜಯಶ್ರೀ ಗೇಟ್ ಬಳಿಯಲ್ಲಿದ್ದ ಅವಳ ಪಿತ್ರಾರ್ಜಿತ ಆಸ್ತಿಯನ್ನು ಎಸ್ಸೆಲ್ ಟವರ್‍ಸ್ ಕಟ್ಟಡಕ್ಕಾಗಿ ಮಾರಾಟವಾದಾಗ ಅಮ್ಮನ ಪಾಲಿನ ಕೆಲವು ಲಕ್ಷಗಳಿಗೆ ಒಬ್ಬಳೇ ಮಗಳಾದ ಅವಳು ಒಡತಿಯಾಗಿದ್ದಳು. ಮುಂದೆ ಒಂದೆರಡು ವರ್ಷಗಳ ಅಂತರದಲ್ಲೇ ವೃತ್ತಿಯಿಂದ ನಿವೃತ್ತಿಯಾದ ಮೇಲೆ ಸಿಗುವ ಆರ್ಥಿಕ ಮೊತ್ತವೂ ಅವಳ ಕೈಸೇರಿತು. ಈ ಮಧ್ಯೆ ಕೆಲವು ವರ್ಷಗಳಿಂದ ಓರ್ವ ನಾಟಕಕಾರ, ಲೇಖಕ, ಪತ್ರಕರ್ತ – ಹೆಸರು `ಸಾಗರ’ ಎಂದಿಟ್ಟುಕೊಳ್ಳಿ, ಅವರ ನಿಕಟ ಸಂಪರ್ಕದಲ್ಲಿದ್ದಳು. ಅವಳು ನಿವೃತ್ತಿಯ ಹಂತಕ್ಕೆ ಬರುವಾಗ ಅವಳ ಆತ್ಮೀಯ ಬಂಧುವರ್ಗದಲ್ಲಿ ಅವಳಿಗೆ ಅಂಟಿಕೊಂಡವರು ಮತ್ತು ಅವಳು ಅಂಟಿಸಿಕೊಂಡವರು ಎಲ್ಲರೂ ದೂರವಾಗಿದ್ದರು. ಯಾರ ಅಂಕೆಯಲ್ಲೂ ತಾನಿಲ್ಲವೆಂದೂ ತನ್ನನ್ನು ಯಾರೂ ಅಂಕೆಯಲ್ಲಿಡಲು ಪ್ರಯತ್ನಿಸಬಾರದೆಂದೂ ಎಲ್ಲರಿಗೂ ತಾಕೀತು ಮಾಡಿಬಿಟ್ಟಿದ್ದಳು. ಇದು ಅವಳನ್ನು ಶೋಷಿಸುವ ಯೋಜನೆ ಯೋಚನೆಯಲ್ಲಿದ್ದ ಹಿತಶತ್ರುಗಳಿಗೆ ಅವಳನ್ನು ಒಲಿಸುವುದು ಚಿಟಿಕೆ ಹೊಡೆದಷ್ಟು ಸುಲಭವಾಯಿತು. ಅವಳನ್ನು ಒಲಿಸಲು ಬಹಳ ಕಷ್ಟಪಡಬೇಕಾಗಿಲ್ಲ. ಅವಳ ಅಭಿನಯಕ್ಕೆ ಸರಿಗಟ್ಟುವವರು ನಾಟಕರಂಗದಲ್ಲೇ ಇಲ್ಲ ಎಂಬ ಒಂದು ವಾಕ್ಯ ಹೇಳಿದರೆ ಸಾಕು ಅವಳು ಅವರ ಪಾದಕ್ಕೆರಗಲೂ ಸಿದ್ಧ ಎಂಬಷ್ಟು ಕೇವಲವಾಗಿ ವರ್ತಿಸುತ್ತಿದ್ದಳು.
ಇಂತಹ ಮನಸ್ಥಿತಿಯನ್ನು ಅರಿತೇ ಅವಳ ಸುತ್ತ ನೆರೆದ ಈ ಹಿತಶತ್ರುಗಳು ಅಬ್ಬಕ್ಕನ ಸಿನಿಮಾ ಮಾಡುತ್ತೇವೆಂದೂ ಅದಕ್ಕೆ ಅವಳೇ ನಾಯಕಿಯೆಂದೂ ಬುರುಡೆ ಬಿಟ್ಟು ಅವಳಿಂದ ಅವಳ ಜೀವಮಾನದ ದುಡಿಮೆಯ ಹಣ ಮತ್ತು ಆಸ್ತಿ, ಮನೆ ಮಾರಾಟ ಮಾಡಿ ಬಂದ ಹಣವನ್ನು ಯಾವುದೇ ಕಾಗದಪತ್ರಗಳ ಹಂಗಿಲ್ಲದೆ ಎಲ್ಲವನ್ನೂ ಕೊಟ್ಟಳು. ಅವರು ಅವಳ ಆಸೆಯನ್ನು ಜೀವಂತವಾಗಿಡಲು ಆಗಾಗ ಹೊಗಳಿ ಅಟ್ಟಕ್ಕೇರಿಸುವ ಕುತಂತ್ರ ಮಾಡುತ್ತಲೇ ಇದ್ದರು. ೨೦೦೯ರ ಜನವರಿ ತಿಂಗಳ ವಜ್ರನೇತ್ರ ಎಂಬ ಪತ್ರಿಕೆಯಲ್ಲಿ ಅವಳಿಗೊಂದು ಪ್ರಶಸ್ತಿಯನ್ನೂ ನೀಡುವುದೆಂದು ಪ್ರಕಟವಾಯಿತು. ಈ ಪತ್ರಿಕೆಯವರಿಗೂ ಇವಳು ಬಹಳ ವಿಶ್ವಾಸವಿರಿಸಿಕೊಂಡಿದ್ದ ಸಾಗರರಿಗೂ ಏನು ಸಂಬಂಧವೆಂದು ನನಗೆ ತಿಳಿಯದು. ಆ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನೀಡಲಾಯಿತೆಂದೂ ಅವಳು ಹೇಳಿದ್ದಳು. ಅವಳ ಹಣವನ್ನು ಗುಳುಂ ಮಾಡಿ ಮುಂಗೈಗೆ ತುಪ್ಪ ಸವರುವ ಪ್ರಯತ್ನವಿದು ಎಂದು ಅವಳಿಗೆ ಯಾಕೆ ಅನಿಸಲಿಲ್ಲ? ಕೀರ್ತಿಶನಿ ಎಂದರೆ ಇದೇ ಇರಬಹುದೇ?
ಕುಡುಪುವಿನಲ್ಲಿ ಅವಳ ಬಂಧುಗಳ ಮನೆಯಲ್ಲಿದ್ದಾಗ ನಾನು ಭೇಟಿಯಾಗಿದ್ದೆ. ನಾನು ಅವಸರದಲ್ಲಿದ್ದೆ. ನಿನ್ನಲ್ಲಿ ತುಂಬಾ ಮಾತಾಡಲಿಕ್ಕಿದೆ. ಪುರುಸೊತ್ತಲ್ಲಿ ಬಾ ಎಂದಿದ್ದಳು. ಅದೇ ಅವಳ ಕೊನೆಯ ಮಾತಾದೀತೆಂದು ನಾನು ಊಹಿಸಿರಲಿಲ್ಲ. ಮುಂದಿನ ತಿಂಗಳಲ್ಲೇ ಹೃದಯಾಘಾತದಿಂದ ತೀರಿದ ಸುದ್ದಿ ಕೇಳಿ ನಾನೇ ಆಘಾತಕ್ಕೊಳಗಾದೆ. ಅವಳಿದ್ದ ಮನೆಯ ಬಂಧುಗಳು ಹೇಳಿದ ಕತೆ ಕೇಳಿ ನಾನು ಮರಗಟ್ಟಿದಂತಾದೆ. ಒಂಟಿ ಹೆಂಗಸೆಂದು ಹೀಗೂ ಶೋಷಣೆ ಮಾಡಬಹುದೇ? ಲಕ್ಷಗಟ್ಟಲೆ ಹಣವನ್ನು ಯಾವುದೇ ಕಾಗದಪತ್ರಗಳಿಲ್ಲದೆ ಸ್ವೀಕರಿಸುವಾಗ ಯಾವ ಪಾಪಪ್ರಜ್ಞೆಯೂ ಆ ಶಕುನಿ ಬಳಗಕ್ಕೆ ಕಾಡಲಿಲ್ಲವೇ? ವಿಚಿತ್ರವೆಂದರೆ ಅವಳ ಚಿನ್ನವನ್ನೂ ಅಡವಿಟ್ಟು ಹಣ ನೀಡಿದ್ದಳಂತೆ. ಅವಳಿಗೆ ಹೃದಯಾಘಾತವಾಗಲೂ ಆ ಶಕುನಿ ಕೂಟದ ಯಾವುದೋ ಕೆಟ್ಟ ಸುದ್ದಿಯೇ ಕಾರಣವಾಗಿರಬಹುದೇ? ಎಂದು ನನಗೆ ಗುಮಾನಿಯಿದೆ. ಹಣವೆಲ್ಲಾ ನೀಡಿದ ಮೇಲೆ ನೀನು ಅಬ್ಬಕ್ಕ ಪಾತ್ರ ಮಾಡಲಾಗದು ಎಂದು ಹೇಳಿರಬಹುದೇ? ಇದನ್ನು ತಡೆದುಕೊಳ್ಳಲು ಸಾಧ್ಯವಾಗದೆ ಪ್ರಾಣಬಿಟ್ಟಳೇ? ಅವಳ ಮಿತ್ರಕೂಟದವರಿಗೆ ನಂತರ ನಾನೂ ಫೋನಿನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದೆ. ಫೋನೇ ಎತ್ತಲಿಲ್ಲ. ಈ ಅನ್ಯಾಯದ ವಿರುದ್ಧ ಕಾನೂನು ರೀತಿಯಲ್ಲಿ ಹೋರಾಡಲೂ ಕೂಡಾ ಏನೊಂದೂ ದಾಖಲೆಗಳನ್ನು ಉಳಿಸದೆಹೋದ ಶಶಿಕಲಾಗೆ ಅಂಗೈಯಲ್ಲಿ ಆಕಾಶ ತೋರಿಸಿದ ದುಷ್ಟಕೂಟದಲ್ಲಿ ಯಾರ್‍ಯಾರು ಇದ್ದಾರೆ ಎಂಬುದೂ ಅವಳ ಬಂಧುಗಳಿಗೆ ಅರಿವಿಲ್ಲ. ವಿವೇಚನೆಯಿಲ್ಲದ ಆಸೆ ಹಡಗಿಲ್ಲದ ಸಮುದ್ರಯಾನದಂತೆ ಎಂದು ಹೇಳುತ್ತಾರೆ. ಎಂತಹ ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡ ಶಶಿಕಲಾಳ ದೌರ್ಬಲ್ಯಗಳನ್ನು ನಗದೀಕರಿಸಿಕೊಂಡ ಮಂದಿ ಸಿನಿಮಾ ಮಾಡುವ ಯೋಚನೆ ಬಿಟ್ಟು ಆರಾಮವಾಗಿ ಬದುಕುತ್ತಿರಬಹುದು. ಆದರೆ ಅವರ ಸಾಕ್ಷೀಪ್ರಜ್ಞೆಯೊಂದು ಅವರಲ್ಲಿ ಜಾಗೃತವಾಗಿದ್ದರೆ ಒಂದಲ್ಲ ಒಂದು ದಿನ ಅವರನ್ನು ಕೊರೆಯುವುದರಲ್ಲಿ ಸಂಶಯವಿಲ್ಲ. ದೇವರು ಶಪಿಸುವುದೂ ಇಲ್ಲ. ವರವನ್ನೂ ನೀಡುವುದಿಲ್ಲ. ಆದರೆ ನಮ್ಮ ದೇಹದೊಳಗಿನ ಅಂತರಂಗದ ಪ್ರಶ್ನೆಗಳಿಗೆ ಉತ್ತರಿಸುವ ಕಾಲ ಬಂದೇ ಬರುತ್ತದೆ ಎಂಬ ನಂಬಿಕೆ ನನ್ನದು. ಆಶೆಗಳ ಗೋರಿಯೊಳಗೆ ಮಲಗಿರುವ ಶಶಿಕಲಾಗೆ ಇದು ನನ್ನ ನುಡಿನಮನ.
(ಮುಂದುವರಿಯಲಿದೆ)
ಸಾಮಾನ್ಯರು ವಿಧಿಯಾಟ ಎನ್ನಬಹುದಾದ ಜೀವನವೈಚಿತ್ರ್ಯಗಳನ್ನು ಲೇಖಕಿ ಇಲ್ಲಿ ವಿವೇಕ, ವಿವೇಚನೆಯ ನಿಕಷಕ್ಕಿಟ್ತು ಎಷ್ಟು ಚೆನ್ನಾಗಿ ಚಿತ್ರಿಸಿದ್ದಾರೆ 1 ಹ್ಱದಯ ಕಲಕುವ, ಮನಕ್ಕೆ ಭಾರವಾಗುವ ಎಂತೆಂತಹ ವೈಚಿತ್ರ್ಯಗಳು 1
ಹಿಂದುಸ್ಥಾನಿ ಸಂಗೀತದ ಮೇರು ಪ್ರತಿಭೆ ಗೋಹರ್ ಜಾನಳ ಕೊನೆಯ ದಿನಗಳ ನೆನಪಾಗುತ್ತದೆ.ರೋಹಿಣಿ ಟೀಚರ್ ಒಡಲೊಳಗೆ ಇನ್ನೆಷ್ಟು ಜನರ ನಿಟ್ಟುಸಿರಿದೆಯೊ.
ಅನುಪಮಾ ಪ್ರಸಾದ್.
ಹಲವರ ಬದುಕು ಹಲವು ರೀತಿ…ನಮ್ಮೊಳಗೆ, ಸುತ್ತ ಮುತ್ತ ನಾವು ಕಂಡು ಕೊಂಡ ವಿಭಿನ್ನ ರೀತಿಯ ವ್ಯಕ್ತಿಗಳು ಹಲವರಿದ್ದಾರೆ…ಅಲ್ಲೂ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ… ಇಲ್ಲಿ ಕಾಣುತ್ತಿರುವ ವ್ಯಕ್ತಿಗಳು ಕೂಡಾ ಅಂತಹವರೇ…. ರೋಹಿಣಿಯವರ ಪ್ರಯತ್ನ ಶ್ಲಾಘನೀಯ… ಬರವಣಿಗೆ ಚೆನ್ನಾಗಿದೆ ಎಂದಿನಂತೆ.
Entavara kannannu,teresuva kathanagalivu. Badukannu kieyare halu madikondavra bagge maruka untaguttade. Self distruction kooda pleasure anniso mattige badukannu baalida vaichitrya kelidaga picchenisuttade!!