ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ
ಅಧ್ಯಾಯ ೩೯

\ನಡೆದು ಬಂದ ದಾರಿಯ ಕಡೆಗೊಮ್ಮೆ ದೃಷ್ಟಿ ಹಾಯಿಸಿದಾಗ ಈ ದಾರಿ ಮೊದಲೇ ಇತ್ತೇ? ಅಥವಾ ನಾನೇ ಮಾಡಿಕೊಂಡೆನೇ ಎಂದು ನನಗೆ ಸಂದೇಹವೂ ಆಶ್ಚರ್ಯವೂ ಉಂಟಾಗುತ್ತದೆ. ಈ ದಾರಿಯ ನಿರ್ಮಾಣದಲ್ಲಿ ಕೆಲವರು ಹೊಂಡ ತೋಡಿದವರಿದ್ದರು. ಹಲವರು ಹಾರೆ ಗುದ್ದಲಿ ಹಿಡಿದು ನನಗೆ ಸಹಕರಿಸಿದವರೂ ಇದ್ದರು. ಹೊಂಡಕ್ಕೆ ದೂಡಿದವರಿರುವಂತೆ ಕೈ ಹಿಡಿದೆತ್ತಿ ಆಸರೆ ನೀಡಿ ಮುನ್ನಡೆಸಿದವರೂ ಇದ್ದರು. ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರೀತಿಯನ್ನು ಧಾರೆಯೆರೆದವರ ಪಾತ್ರ ಎಷ್ಟು ಮಹತ್ವವೋ ಅದಕ್ಕಿಂತಲೂ ಹೆಚ್ಚು ಮಹತ್ವದ ಪಾತ್ರ ವಹಿಸಿದವರಾರು ಗೊತ್ತೇ? ನಿಂದಕರು ಮತ್ತು ಶತ್ರುಗಳು. ಕೆಟ್ಟ ಮಾತು ಆಡಲಾರೆವು ಎಂಬಷ್ಟು ಸುಲಭದಲ್ಲಿ ಕೆಟ್ಟ ಮಾತು ಕೇಳಲಾರೆವು ಎಂದು ಹೇಳಲು ಸಾಧ್ಯವಿಲ್ಲವಷ್ಟೆ.

ಒಂಟಿಯಾಗಿ ಈ ಜಗತ್ತಿಗೆ ಬಂದು ಒಂಟಿಯಾಗಿಯೇ ನಿರ್ಗಮಿಸುವ ಈ ಬದುಕಿನಲ್ಲಿ ಇರುವಷ್ಟು ಕಾಲ ಒಂಟಿಯಾಗಿ ಬದುಕುವುದನ್ನು ಯಾರೂ ಇಷ್ಟಪಡುವುದಿಲ್ಲ. ಯಾಕೆಂದರೆ ಮನುಷ್ಯ ಸಮಾಜಜೀವಿ. ಸಮಾಜ ಮತ್ತು ಪ್ರಕೃತಿಯೊಂದಿಗಿನ ಮನುಷ್ಯನ ನಂಟು ಅನಾದಿಕಾಲದ್ದು. ಆದುದರಿಂದ ಸಮಾಜದೊಂದಿಗೆ ಮತ್ತು ಪ್ರಕೃತಿಯೊಂದಿಗೆ ನಮ್ಮಲ್ಲಿ ಧನಾತ್ಮಕ ಚಿಂತನೆಗಳಿದ್ದರೆ ಬದುಕು ಸಹನೀಯ. ಇಂತಹವರಿಗೆ ಒಂಟಿತನ ಎಂದೂ ಶಾಪವಾಗಿ ಕಾಡದು. ಇದು ಮಹಿಳೆಯರಿಗೆ ಮಾತ್ರ ಅನ್ವಯಿಸಿ ಹೇಳುತ್ತಿಲ್ಲ, ಪುರುಷರಿಗೂ ಕೂಡಾ ವೃದ್ಧಾಪ್ಯದಲ್ಲಿ ಒಂಟಿತನ ಕಾಡುತ್ತದೆ. ನಾನು ಗಮನಿಸಿದಂತೆ ಕೆಲವು ಮಧ್ಯಮ ವರ್ಗದ ಕುಟುಂಬಗಳಲ್ಲಿ ಮಕ್ಕಳು ಬೆಳೆದು ಒಂದು ನೆಲೆಗೆ ಬಂದು ನಿಂತ ಮೇಲೆ ಹೆಂಡತಿ ಗಂಡನನ್ನು ಕಡೆಗಣಿಸಿದ ನಿದರ್ಶನಗಳಿವೆ. ಇದರಿಂದ ರೋಸಿಹೋದ ಗಂಡ ಹೆಂಡತಿ ಮಕ್ಕಳನ್ನು ಬಿಟ್ಟು ಬೇರೆ ಮದುವೆಯಾದುದನ್ನೂ ಕಂಡಿದ್ದೇನೆ. ನಮ್ಮ ಸಂಬಂಧಿಯಾದ ದಂಪತಿ ಒಂದೇ ಮನೆಯೊಳಗಿದ್ದರೂ ಗಂಡ ಹೆಂಡತಿಯರಲ್ಲಿ ಅನೇಕ ವರ್ಷಗಳ ಕಾಲ ಮಾತುಕತೆಯಿರಲಿಲ್ಲ. ಮಗ ಇಲ್ಲವೇ ಮಗಳ ಮೂಲಕ ಇಬ್ಬರೂ ವಿಷಯ ರವಾನಿಸುತ್ತಿದ್ದರು. ಸಂಸಾರಿಗಳ ಮಾತು ಹೀಗಾದರೆ ಅವಿವಾಹಿತ ಪುರುಷರ ಒಂಟಿತನದ ಪಾಡೂ ಸಹಿಸಿಕೊಳ್ಳಲಾರದಷ್ಟು ಇದೆ.

ನನ್ನ ಸಹೋದ್ಯೋಗಿಯಾಗಿದ್ದ ಅವಿವಾಹಿತ ಶಿಕ್ಷಕರೊಬ್ಬರು ವೃದ್ಧಾಪ್ಯದಲ್ಲಿ ಆಸರೆಗಾಗಿ ಅಲ್ಲಲ್ಲಿ ಅಲೆದಾಡಿದ್ದು, ಆಧ್ಯಾತ್ಮ ಸಾಧನೆ ಮಾಡಿದವರಾದರೂ, ಯಾಕೋ ಆಶ್ರಮದಲ್ಲೂ ಅವರ ಒಂಟಿತನಕ್ಕೆ ಪ್ರೀತಿಯ ಆಶ್ರಯ ಸಿಗದೆ ಮರೀಚಿಕೆಯ ಬೆನ್ನಟ್ಟಿ ಹೋದಂತೆ ಅಲೆದಾಡಿದ್ದು ನನ್ನ ಕಣ್ಣ ಮುಂದಿದೆ. ಇಂತಹ ಇನ್ನೂ ಹಲವರು ಅವಿವಾಹಿತ ಪುರುಷರು ಕುಟುಂಬಸ್ಥರಿಂದ ಕಾಲ್ಚೆಂಡಿನಂತೆ ಒದೆಸಿಕೊಂಡು, ಅಲೆಮಾರಿಗಳಾಗಿ ಸುತ್ತಾಡುತ್ತಿರುವುದನ್ನು ಕಂಡಿದ್ದೇನೆ. ಒಂಟಿ ಮಹಿಳೆಯರು ಒದೆತ ಸಹಿಸಿಕೊಂಡು ಗೂಟಕ್ಕೆ ಕಟ್ಟಿದ ಹಸುಗಳಂತೆ ಒಂದೇ ಕಡೆ ತಳ ಊರಿರುತ್ತಾರೆ. ಒಂಟಿ ಬದುಕಿನ ಪುರುಷ ಮಹಿಳೆಗಿರುವ ವ್ಯತ್ಯಾಸ ಇಷ್ಟೇ. ದೇವರನ್ನು ಎಲ್ಲೆಲ್ಲೋ ಹುಡುಕಲು ಹೋಗಿ ತಮ್ಮೊಳಗಿನ ದೇವರನ್ನು ಇವರು ಕಡೆಗಣಿಸಿದರೇ? ಗೊತ್ತಿಲ್ಲ. ಮನುಷ್ಯ ಅತಿ ಹೆಚ್ಚು ಪ್ರೀತಿಸುವುದು ಯಾರನ್ನು? ಇದೊಂದು ಸರಳಪ್ರಶ್ನೆ. ಉತ್ತರ ಅಷ್ಟು ಸುಲಭವಲ್ಲ ನೂರಾರು ಉತ್ತರಗಳು ಇರಬಹುದು. ಮೂಲತಃ ಅವನು ತನ್ನನ್ನು ತಾನು ಪ್ರೀತಿಸುವಷ್ಟು ಬೇರೆ ಯಾರನ್ನೂ ಪ್ರೀತಿಸಲಾರ. ಇದು ಸತ್ಯ. ಪ್ರವಾಹಕ್ಕೆ ಸಿಕ್ಕಿ ನೆರೆಯಲ್ಲಿ ಸಾಗಿದ ಮಂಗ ಮತ್ತು ಮರಿಯ ಕತೆ ಗೊತ್ತಲ್ಲ, ಹಾಗೆ. ಈ ತ್ಯಾಗ, ನಿಸ್ವಾರ್ಥ ಎಂಬ ಪದಗಳೆಲ್ಲಾ ಸಮಯ, ಸಂದರ್ಭ ಪರಿಸರಕ್ಕೆ ಅನುಸಾರವಾಗಿ ಬಣ್ಣ ಬದಲಾಗುವುದೂ, ಬಣ್ಣ ಕೆಡುವುದೂ ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ. ಇಷ್ಟಕ್ಕೂ ನಿಸ್ವಾರ್ಥ ಎಂಬ ಭಾವವನ್ನು ಹೇಳಬೇಕಾದರೂ ಸ್ವಾರ್ಥವನ್ನು ಜೊತೆಗಿರಿಸಿಕೊಂಡೇ ಅಭಿವ್ಯಕ್ತಿಗೊಳಿಸಬೇಕಾದುದು ಅನಿವಾರ್ಯವಾಗಿದೆಯಲ್ಲವೇ?

ಒಂದಾನೊಂದು ಕಾಲದಲ್ಲಿ ಭಕ್ತಿ, ವೈರಾಗ್ಯಗಳನ್ನು ಹಾಸಿ ಹೊದ್ದು ಮಲಗಿದ್ದವಳು ನಾನು. ಅಭಾವವೇ ವೈರಾಗ್ಯವಾಗಿ, ತಲ್ಲಣಗಳಿಗೆ ತತ್ಕಾಲದ ಉಪಶಮನವಾಗಿ ಭಕ್ತಿಯ ಮುಸುಕು ಹೊದ್ದುಕೊಂಡಿದ್ದೆ. ಭಕ್ತರೆಂಬ ಹಣೆಪಟ್ಟಿ ಹಚ್ಚಿಕೊಂಡ ಮನುಷ್ಯರ ನಿಕಟ ಸಂಪರ್ಕ ನನಗೆ ಸಿಗಲಾರಂಭಿಸಿದ ಮೇಲೆ ಎಲ್ಲರೂ ಕೇವಲ ಮನುಷ್ಯರು ಎಂಬ ಸತ್ಯದ ಅರಿವಾಯಿತು. ಅದಲ್ಲದೆ ನಾನು ಕಲಿತದ್ದು, ದೀರ್ಘ ಕಾಲ ಶಿಕ್ಷಕ ವೃತ್ತಿಯನ್ನು ನಡೆಸಿದ್ದು ಸಂನ್ಯಾಸಿನಿಯರ ಜೊತೆಗೆ. ಭಕ್ತಿಯ ಬಗ್ಗೆ ನನ್ನ ಕಣ್ಣಿನಲ್ಲಿದ್ದ ಪೊರೆಯನ್ನು ಕಳಚಿ ಸತ್ಯದರ್ಶನ ಮಾಡಿದವರು ಈ ಸಂನ್ಯಾಸಿನಿಯರು. ನಮ್ಮ ಸಹೋದ್ಯೋಗಿಗಳಾಗಿದ್ದ ಸಂನ್ಯಾಸಿನಿಯರು ಅವರ ವೇಷ ಕಳಚಿ ಮದುವೆಯಾದಾಗ ಅಂದು ನಾನು ಬೆಕ್ಕಸ ಬೆರಗಾಗಿದ್ದೆ. ಛೇ ಹೀಗೆ ಮಾಡಬಾರದಿತ್ತು ಎಂದೇ ಭಾವಿಸಿದ್ದೆ. ಆದರೆ ಕ್ರಮೇಣ ವರ್ಷಗಳ ಬಳಿಕ ನನಗೆ ಅವರು ಹಾಗೆ ಮಾಡಿದ್ದು ಪ್ರಶಂಸನೀಯವಾದ ಕೆಲಸವಾಗಿ ಕಂಡಿದೆ. ಆಸೆಗಳೆಂಬ ಕುದಿವ ಕೊಪ್ಪರಿಗೆಯೊಳಗಿನ ಮನಸ್ಸುಗಳು ಮಾಡುವ ಆವಾಂತರಗಳು ಬೆಟ್ಟದಷ್ಟಿವೆ. ಮದುವೆಯಾದ ಸಂನ್ಯಾಸಿನಿಯರು ಕೆಲವು ವರ್ಷಗಳ ಬಳಿಕ ಕುಟುಂಬ ಸಮೇತರಾಗಿ ಮರಳಿ ನಮ್ಮನ್ನೆಲ್ಲಾ ಕಂಡು ಮಾತಾಡಿಸಿದಾಗ ನಿಜವಾಗಿಯೂ ನಾನು ತುಂಬಾ ಖುಷಿಪಟ್ಟಿದ್ದೆ. ಕ್ರೈಸ್ತರಲ್ಲಿ ಸಂನ್ಯಾಸಿನಿಯರಾದರೆ ಆ ಇಡೀ ಕುಟುಂಬಕ್ಕೇ ಸಮಾಜದಲ್ಲಿ ವಿಶೇಷ ಗೌರವವಿರುತ್ತಿತ್ತು. ನನ್ನ ಬಾಲ್ಯದಲ್ಲಿ ಒಂದು ಕ್ರೈಸ್ತ ಕುಟುಂಬ ತನ್ನ ಆರು ಮಂದಿ ಹೆಣ್ಣುಮಕ್ಕಳನ್ನು ಕಾನ್ವೆಂಟಿಗೆ ನೀಡಿ ದೊಡ್ಡ ಗೌರವವನ್ನು ಗಳಿಸಿಕೊಂಡಿತ್ತು.

ಆ ಆರು ಮಂದಿಯೂ ಸಂನ್ಯಾಸಿನಿಯರಾಗಿ ಬೆಳೆದುದನ್ನು ಕಂಡಿದ್ದೇನೆ. ಕೆಲವರು ಈ ಪಥದಲ್ಲಿ ಯಶಸ್ವಿಯಾದರೆ ಕೆಲವರು ಪಶ್ಚಾತ್ತಾಪಪಟ್ಟದ್ದು ಇದೆ. ಅಂತೂ ಬಾಲ ಸಂನ್ಯಾಸವು ಮನುಷ್ಯನ ಮೇಲೆ ಧರ್ಮವು ಹೇರಿದ ಕ್ರೌರ್ಯವೆಂದೇ ನನ್ನ ಭಾವನೆ. ೮೦ರ ದಶಕದಲ್ಲೇ ಇರಬೇಕು, ಹಾಡುವ ಸಂನ್ಯಾಸಿಯೆಂದೇ ಪ್ರಸಿದ್ಧರಾದ ಮಠಾಧೀಶರು ವಿವಾಹವಾದ ಸುದ್ದಿ ಪತ್ರಿಕೆಯಲ್ಲಿ ಬಂದಾಗ ನಾನು ಅಜಂತಾದ ಪ್ರವಾಸದಲ್ಲಿದ್ದೆ. ನಾನು ಸಂತೋಷದಿಂದ ಹಿಗ್ಗಿ ಮಾತಾಡಿದಾಗ ನನ್ನ ಜೊತೆಯಲ್ಲಿದ್ದ ಪ್ರವಾಸಿಗರು ಕೆಲವರು ಸ್ವಾಮಿಗಳ ಗೌರವವನ್ನೇ ಮಣ್ಣುಗೂಡಿಸಿದರೆಂದು ಶಪಿಸುವ ಮಾತಾಡಿದ್ದರು. ನನ್ನೊಂದಿಗೆ ವಾದಕ್ಕೆ ಇಳಿದಿದ್ದರು. ಬಹುತೇಕ ಮಂದಿಗೆ ಈಗ ಸುದ್ದಿಯಲ್ಲಿರುವ ಸ್ವಾಮೀಜಿಗಳಂತೆ ಇರುವವರ ಮೇಲೆಯೇ ಭಕ್ತಿ ಗೌರವವೇ ಹೊರತು ಇಂತಹ ನೇರ ಮಾರ್ಗದಲ್ಲಿ ನಡೆವವರ ಮೇಲೆ ಇರುವುದಿಲ್ಲ. ಗಂಡಾಗಲೀ ಹೆಣ್ಣಾಗಲೀ ಒತ್ತಾಯದ ವೈರಾಗ್ಯ ಭಕ್ತಿಗಳಿಂದಾಗಿ ತಮ್ಮ ಸುತ್ತಲ ಸಮಾಜದಲ್ಲಿ ಪರಿಸರದಲ್ಲಿ ಏನೇನೆಲ್ಲಾ ಒಳ ಸುಳಿಗಳು ಕೆಡವಲು ಕಾಯುತ್ತಿವೆ ಎಂಬುದು ತಿಳಿಯಿತು. ವೈರಾಗ್ಯವೆಂಬ ಸೋಗಿನ ನಾಟಕ ಬಹಳ ದಿನ ನಡೆಯಲಾರದು ಎಂಬ ಸತ್ಯವೂ ಅರಿವಾಯಿತು. ಸಂನ್ಯಾಸಿನಿಯರ ಸಂಘ ಜೀವನವೂ ಕೂಡಾ ಏನೇನು ಉತ್ಪಾತಗಳನ್ನು, ಉದ್ರೇಕಗಳನ್ನುಂಟುಮಾಡುತ್ತವೆ ಎಂಬುದಕ್ಕೆ ನಾನು ಪ್ರತ್ಯಕ್ಷ ಸಾಕ್ಷಿಯಾದದ್ದೂ ಇದೆ. ಇದನ್ನೆಲ್ಲಾ ಕಂಡೇ ಇರಬೇಕು ಈಗ ಸಂನ್ಯಾಸಿನಿಯರಾಗಲು ಬಯಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸಂನ್ಯಾಸಿನಿಯರಾಗುವುದಕ್ಕಿಂತ ಅವಿವಾಹಿತೆಯಾಗಿ ಒಂಟಿಯಾಗಿ ಬದುಕುವುದನ್ನೇ ಇಷ್ಟಪಡುವವರ ಸಂಖ್ಯೆ ಹೆಚ್ಚುತ್ತಿದೆ. ಸಂಸಾರಿಗಳಿಗೆ ಒಂಟಿತನ ಶಾಪವಾಗಿ ಕಾಡುವುದು ಇದೆ. ಆದರೆ ಅವಿವಾಹಿತರಿಗೆ ಕ್ರೌರ್ಯವಾಗಿ ಎರಗುತ್ತದೆ.

ಇದನ್ನೆಲ್ಲಾ ಮನಗಂಡು ಲೀಜಿ ಪಿರೇರಾ ಎಂಬ ಸಮಾಜಸೇವಕಿಯೊಬ್ಬರು ಮಂಗಳೂರಿನ ಇಂತಹ ಒಂಟಿ ಜೀವಿಗಳನ್ನು ಸಂಘಟಿಸಿ ಅವರ ಮಾನಸಿಕ ದುಗುಡಗಳನ್ನು ನಿವಾರಿಸುವ ಮತ್ತು ಅವರ ಮುಖಗಳಲ್ಲಿ ನಗುವರಳಿಸುವ, ಬದುಕಿನಲ್ಲಿ ಚೈತನ್ಯ ತುಂಬಿಸುವ ಕೆಲಸವನ್ನು ವರ್ಷಗಳ ಕಾಲ ನಡೆಸುತ್ತಿದ್ದದ್ದು ನೆನಪಾಗುತ್ತದೆ. ಈ ಸಂಘಟನೆಯಲ್ಲಿ ಒಂಟಿಯಾದ ಗಂಡಸರೂ ಬಹಳ ಖುಷಿಯಿಂದ ಭಾಗವಹಿಸುತ್ತಿದ್ದರು. ಒಟ್ಟಾರೆ ಒಂಟಿ ಮನುಷ್ಯರು ತಾನು ಪ್ರೀತಿಸುವ ಒಂದು ವಲಯವನ್ನು ಕಟ್ಟಿಕೊಳ್ಳದಿದ್ದರೆ ಮಾನಸಿಕವಾಗಿ ಕಳೆದುಹೋಗುವ ಸಂಭವವೇ ಹೆಚ್ಚು.

ನಾನು ಬಾಲ್ಯದಿಂದಲೂ ಪುಸ್ತಕದ ಹುಳುವೇ. ಆದುದರಿಂದ ನನಗೆ ಒಂಟಿತನ ಹೊರೆಯಾಗಲೇ ಇಲ್ಲ. ಶಿಕ್ಷಕಿಯಾದ ಮೇಲೆ ನಗರ ಕೇಂದ್ರ ಗ್ರಂಥಾಲಯದ ಖಾಯಂ ಸದಸ್ಯೆಯಾಗಿ ನಾನು ಓದಿದ ಪುಸ್ತಕಗಳಿಗೆ ಲೆಕ್ಕವಿಲ್ಲ. ಅವುಗಳು ನನಗೆ ನೀಡಿದ ಆನಂದವನ್ನು ಬ್ರಹ್ಮಾನಂದವೆನ್ನಬಹುದೇ? ಬ್ರಹ್ಮನ ಹೆಸರು ಯಾಕಿಟ್ಟರೋ ಗೊತ್ತಿಲ್ಲ. ವಿಶೇಷ ಆನಂದ ಅಂತ ಹೇಳುವುದಕ್ಕೇ ಬ್ರಹ್ಮಾನಂದ ಎಂದು ಹೆಸರಿಟ್ಟಿರಬಹುದೇ? ಒಂದು ಸಾಹಿತ್ಯ ಸಮಾರಂಭವೊಂದರಲ್ಲಿ ಫಾದರ್ ಒಬ್ಬರು ಪುಸ್ತಕಗಳ ಓದು ನೀಡುವ ಆನಂದ ರತಿಕ್ರೀಡೆಗೆ ಸಮಾನ ಎಂದು ಹೇಳಿದಾಗ ನಾನು ಬೆಚ್ಚಿಬಿದ್ದಂತಾಗಿದ್ದೆ. ಅದನ್ನು ಪತ್ರಿಕೆಗಳಲ್ಲಿ ಬರೆಯಬೇಡಿ ಎಂದು ಅವರು ವಿನಂತಿ ಮಾಡಿದ್ದು ನೆನಪಿದೆ. ಅಂತೂ ಓದು ಕೊಡುವ ಆನಂದಕ್ಕೆ ಸರಿಮಿಗಿಲಿಲ್ಲ. ಅದು ರತಿಕ್ರೀಡೆಯೋ, ಬ್ರಹ್ಮಾನಂದವೋ ಏನಾದರೂ ಆಗಿರಲಿ, ಅದು ನನ್ನ ಖಾಯಂಸಂಗಾತಿಯಾಗಿದ್ದುದು ಸತ್ಯ. ಪುಸ್ತಕಗಳ ಸಂಗಾತಿಯಾದವರಿಗೆ ಎಂದೂ ಒಂಟಿತನ ಶಾಪವಾಗದು ಇದು ನನ್ನ ಅನುಭವ. ಪುಸ್ತಕ ಕೊಂಡು ಓದಲು ಸಾಧ್ಯವಿಲ್ಲದ ಕಾಲದಲ್ಲಿ ಲೈಬ್ರೆರಿಗಳೇ ನನಗೆ ಸಂಜೀವಿನಿ. ಈ ಸಂಜೀವಿನಿಯನ್ನು ಶಾಶ್ವತವಾಗಿ ಪಡೆಯುವಂತೆ ಮಾಡಿದ ಘಟನೆ ತಮಾಷೆಯಾಗಿದೆ. ಹೊಸ ಹ್ಯಾಂಡ್‌ಬ್ಯಾಂಗ್ ಖರೀದಿಸಿದ ಸಮಯವದು. ಲೈಬ್ರೆರಿಗೆ ಒಳಗೆ ಹೋಗುವ ಮೊದಲು ಬ್ಯಾಗನ್ನು ಹೊರಗೆ ಸ್ಟ್ಯಾಂಡಿನಲ್ಲಿ ಇಟ್ಟುಹೋಗುವುದು ಕಡ್ಡಾಯ. ನಾನು ಪುಸ್ತಕ ಹುಡುಕಿ ಹೊರಗೆ ಬಂದು ನೋಡಿದರೆ ಬ್ಯಾಗ್ ಮಾಯ. ಹೊಸ ಬ್ಯಾಗ್ ಆದ ಕಾರಣ ಅದರಲ್ಲಿ ವಿಶೇಷ ಕಸವೇನೂ ತುಂಬಿರಲಿಲ್ಲ. ಮಹತ್ವದ ರಸೀದಿಗಳೂ, ಬೀಗದ ಕೈಗಳು ಪೆನ್ನುಗಳು ಇದ್ದುವು. ಚಿಲ್ಲರೆ ಹಣದ ಚಿಕ್ಕ ಪರ್ಸ್ ನನ್ನ ಕೈಯಲ್ಲೇ ಇದ್ದುದರಿಂದ ಮನೆಗೆ ತಲಪುವುದಕ್ಕೆ ಸಾಲ ಮಾಡುವ ಪ್ರಮೇಯ ಬರಲಿಲ್ಲ. ಈ ಘಟನೆ ನಡೆದು ವಾರದೊಳಗೆ ನನಗೊಂದು ಪತ್ರ. ತೆರೆದು ನೋಡಿದರೆ ಲೈಬ್ರೆರಿಯ ಕಾರ್ಡ್‌ಗಳು ಮಾತ್ರ ತಲಪಿದೆ. ಯಾರು? ಎನು? ಎತ್ತ ಯಾವ ವಿಷಯವೂ ಇಲ್ಲ. ಕಳ್ಳನಿಗೂ ನನ್ನ ಮೇಲೆ ಸಹಾನುಭೂತಿ ಉಕ್ಕಿತೇ? ಕಳ್ಳಿಯೂ ಇರಬಹುದು. ಈ ಕಾರ್ಡ್‌ಗಳನ್ನು ಮರಳಿ ಪಡೆದ ಸಂತೋಷದಲ್ಲಿ ಬ್ಯಾಗ್ ಕಳವಾದ ದುಃಖ ಮರೆಯಿತು. ಸುರತ್ಕಲ್ ಕಡೆಯ ಅಂಚೆಯ ಸೀಲ್ ಕವರಿನಲ್ಲಿದ್ದುದರಿಂದ ಆಚೆಯವರೇ ಬ್ಯಾಗ್ ಎಗರಿಸಿರಬಹುದೇ? ಗೊತ್ತಿಲ್ಲ. ಈ ಘಟನೆ ಯಾಕೆ ನೆನಪಾಯಿತೆಂದರೆ ನನ್ನ ಓದುವ ಹುಚ್ಚಿಗೆ ಚ್ಯುತಿಯುಂಟಾಗದಂತೆ ನೋಡಿಕೊಂಡ ಆ ಮಹಾನುಭಾವ/ಭಾವೆಗೆ ನಾನು ಶಿರಸಾ ಮನಸ್ಸಿನಲ್ಲೇ ವಂದಿಸಿದೆ. ಮತ್ತೆ ಪುನಃ ಲೈಬ್ರೆರಿಯ ಕಾರ್ಡ್‌ಗಳನ್ನು ಮಾಡಿಸುವ ಪ್ರಮೇಯವುಂಟಾಗದಂತೆ ನನ್ನ ಸಮಯ ಮತ್ತು ಹಣವನ್ನು ಉಳಿಸಿದ ಆ ಕಳ್ಳನ ಕೃಪೆಯಿಂದ ನಾನು ನಿರಾಳವಾದೆ.

ಜೀವನದಲ್ಲಿ ಏನನ್ನಾದರೂ ಉತ್ತಮವಾದುದನ್ನು ಪಡೆಯಬೇಕು ಎಂದು ಮನಸ್ಸಿದ್ದವರು ಏನನ್ನಾದರೂ ಕಳಕೊಳ್ಳಲು ಸಿದ್ಧರಾಗಬೇಕು. ಓದಿ ಏನು ಕಡಿದು ಕಟ್ಟೆ ಹಾಕಿದ್ದೀಯಾ ಎಂದೋ, ಓದಿ ಓದಿ ಮರುಳಾದ ಕೂಚು ಭಟ್ಟನೆಂದೋ ನನ್ನನ್ನು ಗೇಲಿ ಮಾಡುವವರ ಬಾಯಿಗೆ ನಾನು ಕವಳವಾದುದರಲ್ಲಿ ನನಗೇನೂ ಬೇಸರವಿಲ್ಲ. ಇನ್ನೂ ಏನೂ ಬರೆಯಲೇ ಬಾರದು ಎಂದು ಎಷ್ಟೋ ಸಲ ನಿರ್ಧಾರ ಮಾಡಿ ಸೋತದ್ದುಂಟು. ಆದರೆ ಇನ್ನು ಓದಲೇ ಬಾರದು ಎಂಬ ಯೋಚನೆ ನನ್ನ ಮನಸ್ಸಿನಲ್ಲಿ ಎಂದೂ ಮೂಡಿದ್ದಿಲ್ಲ. ಈಗ ನನ್ನ ಮನಸ್ಸು ದೇಹಗಳನ್ನು ಸ್ವಸ್ಥವಾಗಿರಿಸಿದ್ದು ಈ ಓದು ಮಾತ್ರ ಎಂದು ದೃಢವಾಗಿ ನಂಬಿದ್ದೇನೆ. ನಮ್ಮ ಕೊರತೆಗಳನ್ನು ಕೊರಗುಗಳನ್ನು ಪರಿಹರಿಸಬಲ್ಲ ಏಕೈಕ ಸಂಗಾತಿ ಈ ಪುಸ್ತಕಗಳು. ಒಂಟಿ ಜೀವಗಳಿಗೆ ಸಾಂತ್ವನ ನೀಡುವ ಶಕ್ತಿ ಪುಸ್ತಕಗಳಿಗಿವೆ. ಆದರೆ ನಮ್ಮ ನಮ್ಮ ಬೌದ್ಧಿಕ, ಭಾವನಾತ್ಮಕ, ಸಾಂಸ್ಕೃತಿಕ ಅರಿವುಗಳಿಗೆ ಹೊಂದಿಕೊಂಡು ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಬೇಕಷ್ಟೆ. ಬುದ್ಧಿ ಮತ್ತು ಭಾವಗಳನ್ನು ಸಮತೋಲನ ಮಾಡಿಕೊಳ್ಳಲು ಅರಿಯದವರು ಪುಸ್ತಕಗಳನ್ನು ಸಂಗಾತಿಗಳಾಗಿ ಸ್ವೀಕರಿಸಲಾರರು. ಸ್ವನಿಯಂತ್ರಣ ಮತ್ತು ಸ್ವಂತಿಕೆಯುಳ್ಳವರಿಗೆ ಪುಸ್ತಕ ಜೀವದಾಯಿನಿಯಾದ ಸಂಜೀವಿನಿ. ಪುಸ್ತಕಗಳಿಗೆ ಭವಿಷ್ಯವಿದೆಯೇ? ಅದೂ ಕನ್ನಡ ಪುಸ್ತಕಗಳಿಗೆ? ಈ ಪ್ರಶ್ನೆ ಎಲ್ಲರನ್ನು ಕಾಡುತ್ತದೆ. ಈಗಿನ ಹೊಸ ತಂತ್ರಜ್ಞಾನದ ಮೂಲಕ ಮಾಧ್ಯಮ ಭಾಷೆ ಹೊಸರೂಪ ಮತ್ತು ಅಲಂಕಾರಗಳೊಂದಿಗೆ ಬ್ಲಾಗ್‌ಗಳಲ್ಲಿ, ಟ್ವಿಟ್ಟರ್‌ಗಳಲ್ಲಿ, ಮೆಸೇಜ್‌ಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಬರವಣಿಗೆಯಲ್ಲಿ ತೊಡಗಿಸಿಕೊಂಡ ಯುವಪೀಳಿಗೆಯ ಬರಹಗಳನ್ನು ಕಂಡಾಗ ಕನ್ನಡದ ಭವಿಷ್ಯದ ಬಗ್ಗೆ ಆತಂಕಪಡಬೇಕಾಗಿಲ್ಲವೆಂದು ಭಾವಿಸಿದ್ದೇನೆ.

ನನ್ನಂತಹ ಒಂಟಿ ಮಹಿಳೆಯರು ಹೊಸತನಕ್ಕೆ ತೆರೆದುಕೊಂಡಂತೆಲ್ಲಾ ಚೈತನ್ಯ ತುಂಬುತ್ತದೆ. ನನ್ನನ್ನು ಯಾರೂ ಗಮನಿಸುವವರಿಲ್ಲವೆಂದು ಕೊರಗುವುದಕ್ಕಿಂತ ನಾನೇ ಎಲ್ಲವನ್ನು ಗಮನಿಸುತ್ತೇನೆಂಬ ಧೈರ್ಯ ಮತ್ತು ಸ್ಫೂರ್ತಿ ತುಂಬಿಸಿಕೊಂಡರೆ ನಾವು ಬದುಕಿದ್ದು ಸಾರ್ಥಕ ಎಂಬ ಭಾವ ಮೂಡುತ್ತದೆ. ನಾವು ಅತ್ತರೆ ಯಾರೂ ನಮ್ಮನ್ನು ಗಮನಿಸಲಾರರು. ನಾವು ನಕ್ಕರೆ ಜಗತ್ತೇ ನಮ್ಮೊಂದಿಗೆ ನಗುತ್ತದೆ ಎಂಬ ಮಾತಿದೆಯಲ್ಲಾ. ದುಃಖವನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಹೇಳಿಕೊಂಡು ಮನಸ್ಸು ಹಗುರಾಗಬಹುದು ಅಷ್ಟೆ. ಆದರೆ ಸುಖ ಸಂತೋಷಗಳು ಹಂಚಿದಷ್ಟು ಹೆಚ್ಚುತ್ತವೆ. ಈ ಪ್ರಜ್ಞೆ ನಮ್ಮ ಆಳದಲ್ಲಿ ಗಟ್ಟಿಯಾದರೆ ನಾವು ಬಿಂದಾಸ್ ಆಗಿ ಬಾಳಬಹುದು. ಅರಸನ ಅಂಕೆಯಿಲ್ಲ, ಆಳಿನ ಕಾಟವಿಲ್ಲ. ನಮ್ಮಷ್ಟು ಸುಖಿಯಾದವರೇ ಇಲ್ಲವೆಂದು ನಂಬಿದವರು ಈ ಅವಿವಾಹಿತೆಯರು. ಸಂಸಾರಿಗಳು ಮತ್ಸರಪಟ್ಟುಕೊಳ್ಳುವಷ್ಟು ನಾವು ಪುಣ್ಯವಂತರು.

ನಮ್ಮ ಚಿಂತನೆಗಳಿಗೆ ಜ್ಞಾನದ, ವಿವೇಕದ, ಬುದ್ಧಿಯ ಚೌಕಟ್ಟು ಇರಬೇಕು. ಜ್ಞಾನ, ವಿವೇಕ, ಬುದ್ಧಿಗಳಿಗೆ ಚಿಂತನೆಯ ತಳಪಾಯ ಗಟ್ಟಿಯಾಗಿರಬೇಕು. ಇದಿಲ್ಲದಿದ್ದರೆ ನಾವು ಅಪಾಯಗಳನ್ನು ಆಹ್ವಾನಿಸಿದಂತೆಯೇ ಸರಿ. ಹೆಚ್ಚಿನ ಒಂಟಿ ಮಹಿಳೆಯರು ಸೋಲುವುದು ಇಲ್ಲೇ. ಇಲ್ಲಿ ಒಂಟಿ ಮಹಿಳೆಯರು ಎಂದರೆ ಬರೀ ಅವಿವಾಹಿತೆಯರು ಮಾತ್ರವಲ್ಲ, ವಿಧವೆಯರು, ಮಕ್ಕಳಿಲ್ಲದ ವೃದ್ಧೆಯರು. ಮೋಸದ ಬಲೆಯೊಳಗೆ ಬಿದ್ದು ಆಪತ್ತುಗಳಿಗೆ ಎದುರಾದ ನೂರಾರು ಘಟನೆಗಳು ನಡೆಯುತ್ತಲೇ ಇರುತ್ತವೆ. ಅದಕ್ಕೇ ನಾನು ಹೇಳುವುದು ಮೂಲಭೂತವಾಗಿ ಮನುಷ್ಯನ ಸ್ವಭಾವವನ್ನು ಬದಲಾಯಿಸಲು ಸಾಧ್ಯವಿಲ್ಲ. ಇದು ಈ ಪ್ರಪಂಚದಲ್ಲಿ ಮನುಷ್ಯ ಹುಟ್ಟಿದಂದಿನಿಂದಲೇ ಅದರಲ್ಲೂ ನಾಗರಿಕನೆನಿಸಿಕೊಂಡಂದಿನಿಂದಲೂ ಈ ಮೂಲ ಸ್ವಭಾವಗಳನ್ನು ಬದಲಾಯಿಸಲು ಸಾಧ್ಯವಾಗಿಲ್ಲ. ಆದುದರಿಂದಲೇ ನಾವೆಲ್ಲಾ ಕೇವಲ ಮನುಷ್ಯರು. ಈ ಮನುಷ್ಯ ಸೃಷ್ಟಿಯಾದದ್ದೇ ಪ್ರಾಣಿ, ರಾಕ್ಷಸ, ಮಾನವ ಮತ್ತು ದೇವತೆಗಳೆಂಬ ನಾಲ್ಕು ಅಂಶಗಳ ಮಿಶ್ರಣದಿಂದ. ಎಲ್ಲರಲ್ಲೂ ದೇವತೆಯ ಅಂಶವೂ ಇದೆ. ರಾಕ್ಷಸನ ಅಂಶವೂ ಇದೆ. ಅವರವರ ಸಂಸ್ಕಾರ ಪರಿಸರ ಮತ್ತು ಕೌಟುಂಬಿಕ ಸ್ಥಿತಿಗೆ ಅನುಸಾರವಾಗಿ ಕೆಲವೊಂದು ಅಂಶಗಳು ಪ್ರಧಾನವಾಗಿಯೇ ಗೌಣವಾಗಿಯೋ ಅಭಿವ್ಯಕ್ತಗೊಳ್ಳುವುದಿದೆ. ಮನುಷ್ಯನ ಜೀನಿನಲ್ಲೇ ಇರುವ ಕೆಟ್ಟ ಗುಣಗಳನ್ನು ಪರಿಷ್ಕರಿಸುವ ಶಕ್ತಿ ಇರುವುದು ಜ್ಞಾನಕ್ಕೆ ಮತ್ತು ಸಂಗೀತ ಮುಂತಾದ ಕಲೆಗಳಿಗೆ. ಒಂಟಿಯಾಗಿ ಬದುಕುವವರು ಲಲಿತ ಕಲೆಗಳತ್ತ ಆಕರ್ಷಿತರಾಗಿ ಸಾಧನೆ ಮಾಡಿದರೆ ಆರೋಗ್ಯಪೂರ್ಣ ಮನಸ್ಥಿತಿಯನ್ನು ಹೊಂದಿ ನೆಮ್ಮದಿಯಿಂದ ಬಾಳಬಹುದು ಎಂಬುದಕ್ಕೂ ನಮ್ಮ ಕಣ್ಣ ಮುಂದೆ ಹಲವಾರು ಮಂದಿ ಮಾದರಿ ಪುರುಷರು ಮತ್ತು ಮಹಿಳೆಯರಿದ್ದಾರೆ.

ನೆಮ್ಮದಿಯೆಂಬ ಅರಮನೆಯನ್ನು ಕಟ್ಟಬೇಕೆಂದು ಆಶಿಸುವವರು ಸರಳವಾದ ಜೀವನಶೈಲಿಯನ್ನು ಮತ್ತು ಮಾನವೀಯತೆಯುಳ್ಳ ಹೃದಯವಿದ್ದರೆ ಗಟ್ಟಿಯಾದ ತಳಹದಿಯನ್ನು ಹಾಕಿದಂತಾಗುತ್ತದೆ. ಅದಿಲ್ಲದೆ ಹೋದರೆ ನೆಮ್ಮದಿ ಮರೀಚಿಕೆಯಾಗುತ್ತದೆ. ನಮ್ಮ ಏಳಿಗೆಗೆ ನಮ್ಮ ಕೀರ್ತಿಗೆ ನೂರಾರು ಮಂದಿ ಸಹಕರಿಸಿರಬಹುದು. ಆದರೆ ನಮ್ಮ ಅಧಃಪತನಕ್ಕೆ ನಾವೇ ಕಾರಣರು ಎಂಬುದನ್ನು ಒಪ್ಪಿಕೊಳ್ಳುವ ಮನಸ್ಥಿತಿ ನಮ್ಮಲ್ಲಿ ಉಂಟಾದರೆ ಬದುಕು ಸಹನೀಯವಾಗುತ್ತದೆ. ಎಲ್ಲ ವಿಷಯದಲ್ಲೂ ಧನಾತ್ಮಕವಾಗಿ ಚಿಂತಿಸಿದರೆ ಬದುಕಿನಲ್ಲಿ ಎದುರಾಗುವ ಯಾವುದೇ ಆಪತ್ತುಗಳನ್ನು ಮುಖಾಮುಖಿಯಾಗಿ ಗೆದ್ದು ಬರುವ ಛಾತಿಯುಂಟಾಗುತ್ತದೆ. ಛಾತಿಯೇನೋ ಇರುತ್ತದೆ, ಆದರೆ ಎಲ್ಲಾ ಸಮಯದಲ್ಲಿ ಗೆದ್ದೇ ಬರುತ್ತೇವೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಸೋಲನ್ನು ಕಾಲಡಿಗೆ ಹಾಕಿ ಅದರ ಮೇಲೆ ನಿಂತರೆ ಮಾತ್ರ ಮುಂದಿನ ದಾರಿಯತ್ತ ನೋಟ ಬೀರಬಹುದು. ಇವೆಲ್ಲಾ ಉಚಿತವಾಗಿ ನೀಡುವ ನನ್ನ ಉಪದೇಶದ ಮಾತುಗಳೆಂದು ತಿಳಿಯಬೇಡಿ. ಈ ಜಗತ್ತಿನಲ್ಲಿ ಪುಕ್ಕಟೆಯಾಗಿ ಸಿಗುವುದು ಉಪದೇಶ ಮಾತ್ರ ವಲ್ಲವೇ? ನಾನು ಈ ಬದುಕಿನಲ್ಲಿ ಮುಖವಾಡವಿಲ್ಲದೆ ಬಾಳುವ ಪ್ರಯತ್ನ ಮಾಡಿದ್ದೇನೆ ಎಂದು ಮಾತ್ರ ಹೇಳಬಲ್ಲೆ. ನನ್ನ ಒಂದೊಂದೇ ಮುಖವಾಡಗಳನ್ನು ಯಾರ್‍ಯಾರು ಕಿತ್ತು ಹಾಕಿದರೆಂಬ ಸತ್ಯವೂ ಗೊತ್ತಿದೆ. ಮುಖವಾಡವಿಲ್ಲದ ಈ ಮುಖದಿಂದ ಹೊರಟ ನನ್ನ ಆತ್ಮ ನಿವೇದನೆಯಿಂದ ತಿಂಗಳುಗಳ ಕಾಲ ನಿಮ್ಮೊಂದಿಗೆ ಸಂವಾದ ಮಾಡಿದ್ದೇನೆ. ಈ ಸಂವಾದ ನಡೆಸಲು ಅವಕಾಶ ಮಾಡಿಕೊಟ್ಟ ಅತ್ರಿ ಬುಕ್ ಸೆಂಟರಿನ ಜಿ.ಎನ್. ಅಶೋಕವರ್ಧನ ಮತ್ತು ದೇವಕಿಯವರ ಸಹಕಾರಕ್ಕೆ ಚಿರಋಣಿ. ನಾನು ಇಲ್ಲಿ ಒಂದಷ್ಟು ಮನಸ್ಸು ತೆರೆದು ಮಾತಾಡಲು ಸಾಧ್ಯವಾಗಿದೆ. ನನ್ನ ಮಾತುಗಳನ್ನು ಕೇಳಿ ಸ್ಪಂದಿಸಿದ ಹಲವು ಮಂದಿ ನನ್ನ ಆಪ್ತವಲಯಕ್ಕೆ ಸೇರಿದ್ದಾರೆ. ನನ್ನ ದೀಪದಡಿಯ ಕತ್ತಲೆ ಎಂಬ ಆತ್ಮ ಕಥಾನಕವು ನನ್ನ ಆಪ್ತವಲಯವನ್ನು ವಿಸ್ತರಿಸಲು ಸಹಾಯ ಮಾಡಿದೆ. ಅವರಿಗೆಲ್ಲಾ ಮತ್ತೊಮ್ಮೆ ಎಂದಾದರೂ ಇನ್ನೊಂದು ಹೊಸ ದೀಪದೊಂದಿಗೆ ನಿಮ್ಮ ಮುಂದೆ ಬಂದು ನಿಲ್ಲುತ್ತೇನೆಂಬ ಭರವಸೆಯೊಂದಿಗೆ ಈ ಅನುಭವ ಕಥನಕ್ಕೆ ವಿರಾಮ ನೀಡುತ್ತಿದ್ದೇನೆ.

ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ ಮುಗಿಯಿತು.

ವಿಸೂ: ಇದು ಮುಂದೆ ಹೀಗೇ ಕಾಲಿಕ ಓದುಗ ಪ್ರತಿಕ್ರಿಯೆಗಳೊಡನೆ ಕಂತುಗಳಲ್ಲಿ ಇಲ್ಲಿ ಸದಾ ಲಭ್ಯ. ಜಾಲತಾಣದ ಎಡ ಮಗ್ಗುಲಿನಲ್ಲಿ ಕಾಣುವ ವಿಷಯ ಪಟ್ಟಿಯಲ್ಲಿ `ದೀಪದಡಿಯ ಕತ್ತಲೆ’ಯನ್ನು ಆಯ್ದುಕೊಂಡರೆ ಎಲ್ಲ ಅಧ್ಯಾಯಗಳನ್ನೂ ಒಂದೇ ಸಾಲಿನಲ್ಲಿ ಅವರೋಹಣ ಕ್ರಮದಲ್ಲಿಯೂ ಕಾಣಬಹುದು. ಹಾಗೇ ಇದನ್ನು ಒಂದು ಪುಸ್ತಕ ರೂಪದಲ್ಲಿ ಇದೇ ಜಾಲತಾಣದ ಪುಸ್ತಕ ವಿಭಾಗದಲ್ಲಿ ವಿ-ಪುಸ್ತಕವಾಗಿಯೂ ನೋಡಬಹುದು. ವಿ-ಪುಸ್ತಕವನ್ನು ನಿಮ್ಮ ಯಾವುದೇ ವಿದ್ಯುನ್ಮಾನ ಸಲಕರಣೆಗೆ ಉಚಿತವಾಗಿ ಇಳಿಸಿಕೊಂಡೂ ಓದಿ ಸಂತೋಷಿಸಬಹುದು.