ಅಸಾಧ್ಯ ಅಮೆದಿಕ್ಕೆಲ್ ಸಾಹಸ ಕಥನಮಾಲಿಕೆಯಲ್ಲಿ ಎರಡನೇ – ಭಾಗ
ಆರೋಹಣದ ಮಿತ್ರ ಬಳಗದಲ್ಲಿ ಆನೆಗಾವಲಿನ ಅಮೆದಿಕ್ಕೆಲ್ ಸವಾಲು ಎಸೆದೆ. ಪತ್ರಿಕೆಯ ಓದುಗರ ಅಂಕಣದಲ್ಲಿ ಎರಡೆರಡು ಕರೆ ಕೊಟ್ಟೆ – “ಚಾರ್ಮಾಡಿ – ಶಿರಾಡಿ ಚಾರಣಕ್ಕೆ ಬನ್ನಿ!” ಪರಿಚಿತ ಪ್ರಾಂಶುಪಾಲ, ಅಧ್ಯಾಪಕರ ಮೂಲಕ ಕೆಲವು ಕಾಲೇಜುಗಳ ವಿದ್ಯಾರ್ಥಿ ವೃಂದಕ್ಕೂ ಸಾಹಸಾವಕಾಶ ಮುಕ್ತಗೊಳಿಸಿದೆ. ನಾಡಿನ ವಿವಿಧ ಮೂಲೆಗಳಿಂದ, ಹಲವು ಜೀವನ ಸ್ತರದವರ ಪ್ರತಿಕ್ರಿಯೆ ಬಂತು. ನನ್ನ ಬಳಗದವರೇ (ಆರೋಹಣ ಪರ್ವತಾರೋಹಿಗಳು, ಸಾಹಸಿಗಳು) ಆದ ಪಾಲಿಟೆಕ್ನಿಕ್ ವಿದ್ಯಾರ್ಥಿ ಸಮೀರ ರಾವ್ ಮತ್ತು ಆತನ ತಮ್ಮ ಇನ್ನೂ ಪ್ರೌಢಶಾಲಾ ವಿದ್ಯಾರ್ಥಿ ಶೌರಿ ರಾವ್ ಮೊದಲು ನಾವಿದ್ದೇವೆ ಎಂದರು. ಮೀನುಗಾರಿಕಾ ಕಾಲೇಜಿನ ಲೋಕೇಶರಿಗೆ ಬಿಡುವಾಗದಿದ್ದರೂ ಅವರ ಅಧ್ಯಾಪಕ, ಹಾಸನ ಮೂಲದ ಶ್ರೀಕಂಠಯ್ಯ, ತಾನು ಕಡಿಮೆಯವನಲ್ಲ ಎಂದು ಸೇರಿಕೊಂಡರು. ಪಶ್ಚಿಮ ಘಟ್ಟಮಾಲೆಯ ತಪ್ಪಲಿನ ಮಾಳದವರೇ ಮುಕುಂದ ಚಿಪ್ಲೂಣಕರ್. ಕಾರ್ಪೊರೇಶನ್ ಬ್ಯಾಂಕಿನ ನೌಕರಿಯ ನೆಪದಲ್ಲಿ ಊರೂರು ತಿರುಗಿದವರು. ಅಲ್ಲೆಲ್ಲ ಮಾತು ಬರುವಾಗ, ಹೇಳಿಕೊಳ್ಳಲು ತಮ್ಮದೇ ಘಟ್ಟಮಾಲೆಯ ದಿಗ್ಗಜಗಳನ್ನು ಏರಿ ಅನುಭವಿಸಿಲ್ಲ ಎಂಬ ಕೊರಗು ಹೆಚ್ಚಿತ್ತಂತೆ. ಅದಕ್ಕೆ ಪರಿಹಾರವೆನ್ನುವಂತೆ ಮುಕುಂದ ಮೊದಲ ಸಮಯಾನುಕೂಲ ನೋಡಿಕೊಂಡು ಮಂಗಳೂರಿಗೇ ಬಂದು ನನ್ನಲ್ಲಿ ಹೆಸರು ದಾಖಲಿಸಿದ್ದರು.
ವಿನೋದ್ ಕಾಮತ್ ಆಗಷ್ಟೇ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರನಾದರೂ ಸ್ವತಂತ್ರ ಪ್ರವೃತ್ತಿಯಿಂದಾಗಿ ಮಂಗಳೂರಿನಲ್ಲೇ ಖಾಸಗಿ ಲೆಕ್ಕ ಪರಿಶೋಧಕನಾಗಿ ಬೇಟೆ ಆರಂಭಿಸಿದ್ದರು. ಬಿಡುವಿನ ದಿನಗಳಲ್ಲಿ ಅವರ ಮನೋಸ್ಥಿತಿಗೆ ಸರಿಯಾಗಿ, ಸ್ನೇಹಿತರ ಅನೌಪಚಾರಿಕ ದಂಡು ಕಟ್ಟಿಕೊಂಡು ಕಾಡುಬೆಟ್ಟಗಳಿಗೆ ಹೋಗಿ ಸಣ್ಣ ಮಟ್ಟಿಗೆ ಮೋಜುನಡೆಸುವುದನ್ನು ರೂಢಿಸಿಕೊಂಡಿದ್ದರು. ತನ್ನ ಕಟ್ಟಿಲ್ಲದ ಚಟುವಟಿಕೆಗಳನ್ನು ಶುದ್ಧ ಚೌಕಟ್ಟಿನ ಪರ್ವತಾರೋಹಣಕ್ಕೆ ಹೊಂದಿಸಿ ನೋಡುವ ಉತ್ಸಾಹದಲ್ಲಿ ಗೆಳೆಯರಿಬ್ಬರೊಡನೆ ನನ್ನ ಕರೆಗೆ ಓಗೊಟ್ಟರು. ಅವರ ತರುಣ ಜತೆಗಾರರೇ ಆದ ಶಂಕರ ಭಟ್ ಮತ್ತು ದೇವದಾಸ ಭಟ್ ಕೂಡಾ ಖಾಸಗಿ ವೃತ್ತಿರಂಗದಲ್ಲಿ ಮುಕ್ತರಾಗಿ ಜಾಡರಸಿದವರೇ ಇರಬೇಕು. ಉಡುಪಿಯಾಚಿನ ಸಾಲಿಗ್ರಾಮದ ಪುಟ್ಟ ಸರ್ವಸರಕಿನ ಮಳಿಗೆಯೊಂದರ ಮಾಲಕ – ಮಂಜುನಾಥ ಉಪಾಧ್ಯ. ಅವರು ಮಂಗಳೂರಿಗೆ ತನ್ನ ಕೆಲವು ಸಗಟು ಸರಕು ಖರೀದಿಗೆ ಬಂದವರು ಪತ್ರಿಕಾ ಪ್ರಕಟಣೆ ಕಂಡು ಮೂಡಿದ ಕುತೂಹಲ ತೀರಿಸಿಕೊಳ್ಳಲೆಂದೇ ನನ್ನಂಗಡಿಗೆ ಬಂದು ಪರಿಚಯಿಸಿಕೊಂಡಿದ್ದರು. ಮತ್ತೆ ಮಾತಿನ ಬಂಧಕ್ಕೆ ಬಿದ್ದು, ತಂಡಕ್ಕೆ ಸೇರಿಹೋದರು. ಎಲ್ಲಕ್ಕೂ ಆಶ್ಚರ್ಯಕರವಾದ ಸಂಬಂಧ ಬೆಂಗಳೂರಿನ ರಿಸರ್ವ್ ಬ್ಯಾಂಕಿನ ನೌಕರ ರಾಮಕೃಷ್ಣರದ್ದು. ಇವರಿಗೆ ಯೂತ್ ಹಾಸ್ಟೆಲ್ಸ್ ಸಂಪರ್ಕದಲ್ಲಿ ಚಾರಣದ ಮೋಹ ಹಿಡಿದಿತ್ತು. ಹಾಗಾಗಿ ತೀರಾ ಆಕಸ್ಮಿಕವಾಗಿ ನನ್ನ ಪತ್ರಿಕಾಪ್ರಕಟಣೆ ಕಂಡರೂ ಎರಡು ಮನಸ್ಸು ಮಾಡದೇ ಪತ್ರಮುಖೇನ ತಮ್ಮನ್ನು ತಂಡಕ್ಕೆ ಒಪ್ಪಿಸಿಕೊಂಡಿದ್ದರು! ನನ್ನ ಆರೋಹಣದ ಕಡತದಲ್ಲಿ ಈ ತಂಡದ ಭಾಗಿಗಳ ಹೆಸರ ಪಟ್ಟಿಯಲ್ಲಿ ಕೃಷ್ಣರಾವ್, ಪುರಂದರ ಶೆಟ್ಟಿ ಹಾಗೂ ಕಮಲಾಕ್ಷ ಎನ್ನುವ ಇನ್ನೂ ಮೂರು ಸೇರಿ ತಂಡದ ಬಲ ಹದಿಮೂರಾಗಿತ್ತು. ಆದರೆ ಇವರ ಕುರಿತು ಹೆಚ್ಚಿನ ವಿವರಗಳನ್ನು ಅಂದು ದಾಖಲಿಸಿಲ್ಲ, ಇಂದು ಮರೆತಿದ್ದೇನೆ – ಕ್ಷಮೆ ಇರಲಿ. (ಬಲ್ಲವರಿದ್ದರೆ ಅವಶ್ಯ ಪ್ರತಿಕ್ರಿಯೆಯಲ್ಲಿ ತಿಳಿಸಬೇಕಾಗಿ ವಿನಂತಿ)
ನನ್ನ ಪ್ರಥಮ ಪ್ರಯತ್ನದಲ್ಲಿ ನೆರಿಯದ ಏಲಕ್ಕಿ ಮಲೆಯಿಂದ ನಾನು ಕಂಡಂತೆ ಅಮೆದಿಕ್ಕೆಲ್ಲಿನಲ್ಲಿ ಬಹುದೊಡ್ಡ ಶಿಲಾರೋಹಣದ ಸವಾಲೂ ಇತ್ತು. ಮತ್ತೆ ಸರ್ವೇಕ್ಷಣ ಇಲಾಖೆಯ ನಕ್ಷೆ ಹೇಳುವಂತೆ, ನಾವು ಶಿಶಿಲದತ್ತ ಇಳಿಯಲಿದ್ದ ಬೆಟ್ಟದ ಮೈಯಾದರೋ ತೀರಾ ಕಡಿದಾದದ್ದು. ಕೇವಲ ಚಾರಣ ಪ್ರಾವೀಣ್ಯ ಸಾಕಾಗಲಾರದು ಎಂದೇ ಕಂಡದ್ದರಿಂದ ನಾನು ಪೂರ್ವಭಾವೀ ತರಬೇತಿನ ವ್ಯವಸ್ಥೆ ಮಾಡಿದೆ. ಅನುಕೂಲವಿರುವ ಎಲ್ಲರನ್ನೂ ಒಂದು ಆದಿತ್ಯವಾರ ಮೂಡಬಿದ್ರೆ ಸಮೀಪದ ಕೊಡಂಜೆ ಕಲ್ಲಿಗೆ ಆಹ್ವಾನಿಸಿದ್ದೆ. (ಕೊಡಂಜೆ ಕಲ್ಲಿನ ವಿವರಗಳಿಗೆ ಅವಶ್ಯ ನೋಡಿ: ಸುಲಭದ ತುತ್ತಲ್ಲ ಕತ್ತೆ ಕಿವಿ) ಮತ್ತದೇ ದಿನಕ್ಕೆ ಕೆನರಾ ಪದವಿಪೂರ್ವ ಕಾಲೇಜಿನ ರಸಾಯನಶಾಸ್ತ್ರ ಅಧ್ಯಾಪಕ, ಗೆಳೆಯ ಜನಾರ್ದನ ಪೈಗಳ ಬಹುದಿನಗಳ ಬೇಡಿಕೆ, ಅಂದರೆ ಅವರ ಆಯ್ದ ಶಿಷ್ಯ ಬಳಗಕ್ಕೆ ವನ್ಯ ಶಿಬಿರವಾಸ ಮತ್ತು ಪ್ರಾಥಮಿಕ ಶಿಲಾರೋಹಣದ ಬಯಕೆಯನ್ನೂ ಹೊಂದಿಸಿಕೊಂಡೆ. ವಿದ್ಯಾರ್ಥಿವೃಂದ ಶನಿವಾರ (೧೬-೧೨-೧೯೭೮) ಸಂಜೆಗೆ ಬಸ್ಸೇರಿ ಮೂಡಬಿದ್ರೆಯನ್ನೂ ಮುಂದೆ ಸುಮಾರು ನಾಲ್ಕು ಕಿಮೀ ನಾರಾವಿ ಮಾರ್ಗದ ನಡಿಗೆಯಲ್ಲಿ ಕೊಡಂಜೆಕಲ್ಲಿನ ಬುಡವನ್ನೂ ಸೇರಿತ್ತು.
ಕತ್ತಲೆಗೆ ಮುನ್ನ ಅವರನ್ನು ಆ ಕಲ್ಲ ಗುಡ್ಡದ ಅಷ್ಟೇನೂ ಜನಪ್ರಿಯವಲ್ಲದ ಮಧ್ಯಂತರದ ಒಂದು ಹಾಸು ಬಂಡೆ ಮುಟ್ಟಿಸಿ ತಂಗಿಸಿದೆ. ಹಗಲು ಬಿಸಿಲಿಗೆ ಕಾದ ಬಂಡೆಯ ಮೇಲೆ ತರಗೆಲೆ ಹರಡಿದ್ದೇ ಎಲ್ಲರಿಗೆ ರಾತ್ರಿಯ ಸುಪ್ಪತ್ತಿಗೆ, ಕೋಟ್ಯಂತರ ಚಿಕ್ಕಿ ಹುಗಿದ ಆಕಾಶವೇ ಸೂರು. ಬೆಳಿಗ್ಗೆ ನಮ್ಮನ್ನು ಸೇರಿಕೊಂಡ ಚಾರ್ಮಾಡಿ-ಶಿರಾಡಿ ತಂಡದ ಮಿತ್ರರೊಡನೆ ಶಿಲಾರೋಹಣದ ಅಭ್ಯಾಸ ನಡೆಸಿದೆವು. ಮಧ್ಯಾಹ್ನದೊಳಗೆ ತುಸು ಕಠಿಣ ಜಾಡಿನಲ್ಲಿ ಎಲ್ಲರೂ ಕೋಡುಗಲ್ಲು (ನಿಮಿರುಗಿವಿ) ಅಥವಾ ಮುಖ್ಯ ಬಂಡೆಶಿಖರ ಏರಿ ಮುಗಿಸಿದ್ದೆವು. ದ್ವಿತೀಯಸ್ಥಾನಿ ಶಿಖರ ಅಥವಾ ಗುಮ್ಮಟಬಂಡೆಯ ನೀರಗುಹಾ ಸಮ್ಮುಖದಲ್ಲಿ ಬುತ್ತಿಯೂಟ ಮುಗಿಸಿದ್ದೆವು.
ಅಪರಾಹ್ನದಲ್ಲಿ ತಂಡ ಶಿಲಾರೋಹಣ ಪಾಠದಲ್ಲಿ ಗಳಿಸಿದ ಪರಿಣತಿಯನ್ನು ಒರೆಗೆ ಹಚ್ಚುವಂತೆ ಗುಮ್ಮಟ ಬಂಡೆಯನ್ನು ಏರಲು ಹೊರಟೆವು. ಗುಮ್ಮಟ ಬಂಡೆ ಸಾರ್ವಜನಿಕದಲ್ಲಿ ಜನಪ್ರಿಯವಲ್ಲ, ವಾಸ್ತವದಲ್ಲಿ ನಾನೂ ಅದನ್ನು ಇಂದಿನವರೆಗೂ ಪೂರ್ಣ ಏರಿಲ್ಲ! ಇದಕ್ಕೆ ನಾನು ಪದವಿಪೂರ್ವ ವಿದ್ಯಾರ್ಥಿಗಳನ್ನು ಎಳೆಯರೆಂಬ ಕಾರಣಕ್ಕೆ ಬಿಟ್ಟು, ಉಳಿದವರಲ್ಲೂ ನಾಲ್ಕೈದು ಮಂದಿಯನ್ನಷ್ಟೇ ಆಯ್ದಿದ್ದೆ. ಬಂಡೆಯ ಬುಡದಲ್ಲೇ ಹಿಮ್ಮೈಗೆ ನಡೆದು, ಓರೆ ಮೈಯಲ್ಲಿ ರಕ್ಷಣಾ ಹಗ್ಗದ ವ್ಯವಸ್ಥೆ ಮಾಡಿಕೊಂಡು, ಪ್ರಯತ್ನಕ್ಕಿಳಿದೆವು. ಈ ವಲಯ ದೂರ ನೋಟಕ್ಕೆ ಸುಮಾರು ಐನೂರು – ಆರ್ನೂರು ಅಡಿಯ ಶುದ್ಧ ಗೂನು ಬೆನ್ನಿನಂತೇ ತೋರುವ ಏಕಶಿಲೆ. ಆದರೆ ನಾವು ನಾಲ್ಗಾಲರಾಗಿಯೇ ಏರುವಾಗಲೂ ಅದರ ಸೌಮ್ಯ ದಿಬ್ಬ ತೆಮರು ನಮ್ಮ ನೇರ ಏರಿಕೆಯನ್ನು ನಿರುತ್ತೇಜನಗೊಳಿಸುತ್ತಿತ್ತು. ಮತ್ತದರ ಮೇಲ್ಮೈ ಯುಗಯುಗಳಿಂದ ಬಿಸಿಲು, ಮಳೆ, ಗಾಳಿಗೆ ಕಾದು ಕರಿಕಾಗಿ, ಚಕ್ಕೆ ಎದ್ದು ನಮ್ಮ ಪ್ರತಿ ಹೆಜ್ಜೆ, ಹಿಡಿತಗಳನ್ನು ಅಧೈರ್ಯಕ್ಕೀಡು ಮಾಡುತ್ತಲೂ ಇತ್ತು. ಮುಂಚೂಣಿಯವರ ಆಕಸ್ಮಿಕಗಳಲ್ಲಿ ಕೆಳಗುರುಳುವ ಚಕ್ಕೆಗಳ ಕುರಿತು ಉಳಿದವರು ಬಹುತೇಕ ಓರೆ ಸಾಲನ್ನು ಕಾಯ್ದುಕೊಳ್ಳುತ್ತ, ಪರಸ್ಪರ ಎಲ್ಲರನ್ನೂ ಗಮನದಲ್ಲಿಟ್ಟುಕೊಳ್ಳುತ್ತ ಸುಮಾರು ಅರೆವಾಸಿ ಬಂಡೆ ಏರಿದ್ದೆವು. ಆಗ ಒಮ್ಮೆಲೇ ಮೇಲಿನ ಹಂತದವರ್ಯಾರೋ ಮೆಟ್ಟಿದ್ದ ಭಾರೀ ಕಲ್ಲ ಚಕ್ಕೆಯೊಂದು ಕಳಚಿ ಕೆಳಗುರುಳಿತು. ಆ ಆರೋಹಿಯ ಇತರ ಹಿಡಿತಗಳು ಬಿಗಿಯಿದ್ದುದರಿಂದ ಆತನಿಗೆ ಅಪಾಯವೇನೂ ಆಗಲಿಲ್ಲ. ಹಿಂಬಾಲಿಸುತ್ತಿದ್ದ ಉಳಿದವರೂ ಕೆಡೆದ ಬಂಡೆಯ ನೇರದಲ್ಲಿರಲಿಲ್ಲ ಮತ್ತು ಇಂಥ ಆಕಸ್ಮಿಕವನ್ನು ನಿರೀಕ್ಷಿಸಿಯೇ ಹತ್ತುತ್ತಿದ್ದುದರಿಂದ ಯೋಚನೆ ಇರಲಿಲ್ಲ. ಆದರೆ ದುರದೃಷ್ಟಕ್ಕೆ ಪೈಗಳ ಶಿಷ್ಯವೃಂದದಿಂದೋರ್ವ ಉತ್ಸಾಹಿ ಬಾಲಕ ಯಾರಿಗೂ ತಿಳಿಸದೆ, ಸ್ವತಂತ್ರವಾಗಿ ಬಂಡೆಯ ತಳಕ್ಕೆ ಬಂದು ತುಸು ಮೇಲೇರುತ್ತಿರುವುದನ್ನು ಕಂಡೆವು. ಸಾಲದ್ದಕ್ಕೆ ಅವನು ಈ ಬಂಡೆಚಕ್ಕೆಯ ನೇರದಲ್ಲೂ ಇದ್ದ. ನಾವೆಲ್ಲಾ ಆತನ ಆಸೆ ಕಳೆದೇ ಬೊಬ್ಬೆ ಹಾಕಿದೆವು. ಕಡೇ ಗಳಿಗೆಯಲ್ಲಿ ಎಂಬಂತೆ ಆತ ಪುಟನೆಗೆದು ಬರುತ್ತಿರುವ ಅಪಾಯ ಕಂಡು ಗಕ್ಕನೆ ಕುಳಿತ. ಚಕ್ಕೆ ಫೂರ್ಣ ನಿರಪಾಯವಾಗಿ ಅವನ ತಲೆಯ ಮೇಲಿನಿಂದ ಹಾರಿ ಕೊಳ್ಳದತ್ತ ಹೋಯ್ತು. ನಾವು ಅದುವರೆಗೆ ಹಗುರಾಗಿ ಗ್ರಹಿಸಿದ್ದ ಏರು, ತಂಪಾಗಿಯೇ ತೆಗೆದುಕೊಂಡಿದ್ದ ಅಪರಾಹ್ನದ ಉರಿಬಿಸಿಲು, ಕಾದಹಂಚಿನಂತಿದ್ದರೂ ತಣ್ಣಗೇ ಹಿಡಿಯುತ್ತಿದ್ದ ಬಂಡೆಗಳೆಲ್ಲ ಒಮ್ಮೆಗೇ ನಮ್ಮೆಲ್ಲರಲ್ಲೂ ಅವ್ಯಕ್ತ ಭೀತಿಯನ್ನು ಹುಟ್ಟಿಸಿತ್ತು. ಆ ಹುಡುಗನಿಗೆ ವಾಗ್ದಂಡನೆ ಕೊಡುವುದನ್ನು ಬಿಟ್ಟು, ಅಂದಿನ ಏರಾಟವನ್ನೇ ರದ್ದುಪಡಿಸಿದ್ದೆವು. ಎಲ್ಲ ಹುಶಾರಾಗಿ ಇಳಿದು, ಒಟ್ಟಾರೆ ತರಬೇತಿ ಶಿಬಿರವನ್ನು ಸುಕ್ಷೇಮವಾಗಿ ಮುಗಿಸಿ ಮರಳಿದ್ದೆವು.
ಚಾರ್ಮಾಡಿ – ಶಿರಾಡಿ ಸಾಹಸಯಾನಕ್ಕೆ ರಾಘವ ಹೆಬ್ಬಾರರ ಪರಿಚಯ ಲಾಭವನ್ನು ಧಾರಾಳ ಬಳಸಿಕೊಂಡೆ. ಸಾಹಸಯಾನದ ಮುನ್ನಾದಿನ, ಅಂದರೆ ೨೩-೧೨-೧೯೭೮ರ ಸಂಜೆಯಿಂದ ರಾತ್ರಿಯೊಳಗೆ, ನಮ್ಮ ತಂಡದ ಸದಸ್ಯರು ಸ್ವತಂತ್ರ ವ್ಯವಸ್ಥೆಗಳಲ್ಲಿ ನೇರ ನೆರಿಯ ಮನೆಗೇ ಬಂದು ಸೇರಿಕೊಂಡರು. ಶಿಬಿರ ಸಾಮಗ್ರಿ ಮತ್ತು ಮುಖ್ಯ ಸದಸ್ಯ ಬಳಗದೊಡನೆ ನಾನೂ ಅಲ್ಲಿಗೆ ತಲಪುವಾಗ ರಾತ್ರಿ ಹನ್ನೊಂದು ಗಂಟೆಯೇ ಕಳೆದಿತ್ತು. ಎಲ್ಲ ಆ ಮನೆಯ ವ್ಯವಸ್ಥೆಯಲ್ಲಿ ರಾತ್ರಿಯ ನಿದ್ರೆ, ಪ್ರಾತರ್ವಿಧಿ ಮತ್ತು ಬೆಳಗ್ಗಿನ ತಿಂಡಿಯನ್ನೂ ಮುಗಿಸಿಕೊಂಡೆವು. ಅನಂತರ ಕೃಷಿಭೂಮಿಯ ವಿವಿಧ ಮೂಲೆಗಳಿಗೆ ಕೂಲಿಯಾಳುಗಳನ್ನು ಒಯ್ಯುವ ಎಸ್ಟೇಟಿನ ಲಾರಿಯಲ್ಲೇ ನಮಗೆ ಬಿದಿರು ಬಂಗ್ಲೆವರೆಗೆ ಉಚಿತ ಸವಾರಿಯೂ ಸಿಕ್ಕಿತು. ಮುಂದೆ ಶಿಖರ ಹಾಗೂ ಶಿಬಿರ ತಾಣಗಳಿಗೆ ನಮ್ಮನ್ನು ಮುಟ್ಟಿಸಲು ಇಬ್ಬರು ಮಲೆಕುಡಿಯ ಮಾರ್ಗದರ್ಶಿಗಳನ್ನೂ ಹೆಬ್ಬಾರರು ಒದಗಿಸಿದ್ದರು. ಹಾಗಾಗಿ ಲಾರಿ ಇಳಿದದ್ದೇ ವೇಳೆಗಳೆಯದೆ, ಸುಲಭಜಾಡು ಹಿಡಿದು ಶಿಖರದತ್ತ ಪಾದ ಬೆಳೆಸಿದೆವು. ಪಶ್ಚಿಮ-ಪೂರ್ವವಾಗಿ ಏರಿ ಸಾಗುವ ಪರ್ವತ ಪಂಕ್ತಿ ಅಂತಿಮ ಹಂತದಲ್ಲಿ ದಕ್ಷಿಣಾಭಿಮುಖವಾಗಿದೆ. ನೆರಿಯದ ಏಲಕ್ಕಿ ಮಲೆಯಿಂದ ಶಿಖರಕ್ಕೆ ಅರ್ಧಚಂದ್ರಾಕೃತಿಯ ಏರುಶ್ರೇಣಿ. ಚಂದ್ರಾಕೃತಿಯ ಈ ಕೊನೆ ನಮ್ಮದಾದರೆ ಸುದೂರದ ಎದುರು ಕೊನೆಯಲ್ಲಿ ದಟ್ಟ ಕಾಡನ್ನು ಹರಿದು ಬೋಳಾಗಿ ನಿಂತ ಬಂಡೆ ಒಟ್ಟಣೆಯೇ ಅಮೆದಿಕ್ಕೆಲ್ ಶಿಖರ. ಅದರಿಂದಲೂ ಆಚೆಗೆ, ಆದರೆ ತುಸು ತಗ್ಗಿನಲ್ಲಿ ಪೂರ್ಣ ಒಂದೇ ಮಹಾಬಂಡೆಯ ಮೂರು ಗುಪ್ಪೆಗಳಾಗಿ ತೋರುವುದೇ ದಿಕ್ಕೆಲ್ ಕಲ್ಲು. ಬಲ ಕೊಳ್ಳ ಹಿಂದೆ ನಾವು ಅನುಭವಿಸಿದಂತೆ ದಟ್ಟ ದುರ್ಗಮ ಕಾಡು. ಒಟ್ಟಾರೆ ಅಮೆದಿಕ್ಕೆಲ್ ಶಿಖರಕ್ಕೆ ನೆರಿಯದಿಂದ ನಾವನುಸರಿಸಲಿದ್ದ ಉತ್ತರ ಮೈಯೊಂದೇ ಸುಲಭ ಗಮ್ಯ ಹಾದಿ.
ಮೊದಮೊದಲು ಕಾಫಿ, ಏಲಕ್ಕಿ ತೋಟಗಳ ನಡುವೆ ಲಾರಿ ಏರುವ ಕಚ್ಚಾದಾರಿಯೇ ಇತ್ತು. ಮಾರ್ಗದಂಚಿನಲ್ಲಿ ಧಾರಾಳ ಹಣ್ಣು ಹೊತ್ತಿದ್ದ ಸೀಬೇ ಮರಗಳು ನಮ್ಮನ್ನೇ ಕಾದಂತಿದ್ದವು! ಮಾರ್ಗದ ಕೊನೆಯಲ್ಲಿ ಎಸ್ಟೇಟಿನ ಸಸ್ಯಮಡಿಯ ತತ್ಕಾಲೀನ ಚಪ್ಪರ ಸಿಕ್ಕಿತು. ಅಲ್ಲಿ ಸನಿಹದ ಯಾವುದೋ ಕಾಡುತೊರೆಯನ್ನು ಸಣ್ಣದಾಗಿ ತಿರುಗಿಸಿ ಸಸ್ಯಮಡಿಗೆ ಮಾಡಿದ್ದ ನೀರಾವರಿ ನಮಗೂ ಧಾರಾಳ ಒದಗಿತ್ತು. ಮತ್ತೆ ಕಾಡು ತೊಡಗಿತ್ತು. ಆಚೆಗೆ ಬಹುಶಃ ಬ್ರಿಟಿಷರ ಕಾಲದಲ್ಲಿ ಕಡಿದಿದ್ದ ಕಚ್ಚಾದಾರಿ ಅನೂರ್ಜಿತ ಸ್ಥಿತಿಯಲ್ಲಿದೆ. ಅದರ ಅವಶೇಷವನ್ನು ಮಲೆಕುಡಿಯರು ಸರಿಯಾಗಿ ಗುರುತಿಸಿ, ಮುಚ್ಚಿಕೊಂಡು ಬಂದಿದ್ದ ಕುರುಚಲನ್ನು ಕತ್ತಿಯಲ್ಲಿ ಸವರುತ್ತ ನಡೆದಿದ್ದರು. ಆ ಉದ್ದಕ್ಕೂ ವರ್ಷದ ಹಿಂದೆ, ನಾನೂ ಲೋಕೇಶನೂ ಆನೆಯ ಭಯದಲ್ಲಿ ಓಡಿದ ನೆನಪುಗಳು ಮರುಕಳಿಸುತ್ತಿತ್ತು. ಸದ್ಯ ವನ್ಯಪ್ರಜ್ಞೆಯ ಪ್ರತಿನಿಧಿಗಳೇ ತಂಡದ ಮುಂದಿದ್ದುದರಿಂದ ಎಲ್ಲ ನಿರ್ಯೋಚನೆಯಿಂದ ಹಿಂಬಾಲಿಸಿದ್ದೆವು. ಸುಮಾರು ಒಂದು ಗಂಟೆಯ ನಡಿಗೆಯ ಕೊನೆಯಲ್ಲಿ ನಾವು ಮತ್ತೆ ಒಂದು ಕೃಷಿತ ಆದರೆ ಸದ್ಯ ಪೂರ್ಣ ಹಾಳುಬಿಟ್ಟ ಭೂಮಿ – ಗೋವಿಂದ ಭಟ್ಟರ ಕಾನ ತಲಪಿದ್ದೆವು.
ರಾಘವ ಹೆಬ್ಬಾರರೇ ನನಗೆ ತಿಳಿಸಿದಂತೆ, ಇವರ ಬಾಲ್ಯ ಕಾಲದಲ್ಲಿ ಆ ವಲಯವನ್ನು ಗೋವಿಂದ ಭಟ್ಟ ಎನ್ನುವ ಸಾಹಸೀ ಹಿರಿಯರೊಬ್ಬರು, ತನ್ನ ಸಣ್ಣ ಕುಟುಂಬದೊಡನೆ ಕೃಷಿಗೆ ರೂಢಿಸಿಕೊಂಡಿದ್ದರಂತೆ. ಕಕ್ಕಿಂಜೆಯಿಂದ ಯಾವುದೇ ಒಳದಾರಿ ಹಿಡಿದರೂ ಕಡಿಮೆ ಎಂದರೆ ಎಂಟು ಹತ್ತು ಮೈಲು ದಟ್ಟ ಹಳು, ದಿಟ್ಟ ಏರು, ಎಲ್ಲಾ ಬಗೆಯ ವನ್ಯಮೃಗ, ಪ್ರಾಕೃತಿಕ ವಿಪರೀತಗಳನ್ನು ಎದುರಿಸಿಯೇ ತಲುಪಬೇಕಾಗಿದ್ದ ಸ್ಥಳ – ಗೋವಿಂದಭಟ್ಟರ ಕಾನ. ಭಟ್ಟರು ಅಲ್ಲಿ ಕಾಫಿ, ಏಲಕ್ಕಿಯೇ ಮೊದಲಾದ ವನ್ಯ ಸಮೀಪದ ಕೃಷಿ ನಡೆಸಿದ್ದರಂತೆ. ಇಂದಿನ ದಿನಮಾನದ ಲೆಕ್ಕದಲ್ಲಿ ಹೇಳುವುದಿದ್ದರೆ ಆಗ ವನ್ಯಮೃಗಗಳು ಧಾರಾಳವೇ ಇದ್ದಿರಬೇಕು. ಅವನ್ನೆಲ್ಲ ಬೇಟೆಯಾಡಿ ನಿಯಂತ್ರಿಸುವಷ್ಟು ಸಣ್ಣ ಸಂಖ್ಯೆಯಲ್ಲೇನೂ ಇರದ ಕಾಲ. ವಿದ್ಯುತ್ ಬೇಲಿಯೇ ಮುಂತಾದ ಭಾರೀ ರಕ್ಷಣಾ ಕ್ರಮಗಳ ಕಾಲವೂ ಅದಲ್ಲ. ಇನ್ನು ಸರಕಾರಗಳಿಂದ ಕೃಷಿಗೆ ಸಹಾಯ, ನಷ್ಟಕ್ಕೆ ಪರಿಹಾರಾದಿಗಳನ್ನು ಕಲ್ಪಿಸಲೂ ತಿಳಿಯದ ಸಮಯ. ಎಲ್ಲ ನಾಗರಿಕ ಸೌಕರ್ಯಗಳನ್ನು ತಲೆಹೊರೆಯಲ್ಲಿ ಹೊತ್ತು ತಂದು ಮತ್ತೆ ಎಲ್ಲ ವಾಣಿಜ್ಯ ಕೃಷ್ಯುತ್ಪನ್ನಗಳನ್ನು ತಲೆಯಲ್ಲೇ ಹೊತ್ತೊಯ್ಯಬೇಕಿತ್ತು. ಆದರೂ ಗೋವಿಂದ ಭಟ್ಟರ ಕೃಷಿ ಸೋಲದಿದ್ದುದಕ್ಕೆ ನನಗೆ ಕಾಣುವ ಒಂದೇ ಮುಖ್ಯ ಕಾರಣ – ಧಾರಾಳವಿದ್ದ ಕಾಡು! ಅಂದರೆ ಹಸಿರು, ನೀರು, ಬೇಟೆ ಕೃಷಿತಭೂಮಿಯ ಹೊರಗೆ ಧಾರಾಳವಿದ್ದ ಕಾಲ. ಭಟ್ಟರದು ಮಣ್ಣಗೋಡೆ, ಮುಳಿಮಾಡಿನ ಮನೆಯಂತೆ. ಅವರ ಏಳ್ಗೆಯನ್ನು ಸಂಕೇತಿಸುವಂತೆ ಒಂದಂಚಿನಲ್ಲಿ ಹೊಸ ಹಂಚಿನ ಒಟ್ಟಣೆಯೊಂದನ್ನು ಈಗಲೂ ಕಾಣಬಹುದು. ಮತ್ತು ವರ್ಷಕ್ಕೆ ಹದಿನಾಲ್ಕು ತಿಂಗಳೂ ನಿರ್ಮಲ ನೀರು ಕೊಡಬಲ್ಲ ಬೆಟ್ಟದ ಝರಿ ತೊರೆಗಳು ಧಾರಾಳವೇ ಇದ್ದರೂ ಮನೆಯಂಗಳದಲ್ಲೇ ತೋಡಿದ್ದ ಬಾವಿ, ಅದೇನು ಕಾಲನ ಸಂಚೋ ಎಲ್ಲ ಹಡಿಲುಬಿಟ್ಟು ಕೆಲವು ದಶಕಗಳೇ ಉರುಳಿದೆ. ಆದರೂ ಸೊಕ್ಕಿ ಉಳಿದಿದ್ದ ಕೈತೋಟದ ಅವಶೇಷಗಳು ನಮ್ಮನ್ನು ಗಾಢವಾಗಿ ತಟ್ಟುತ್ತವೆ. ಆದರೆ ಇಂದು (೨೦೧೬), ಅಪ್ಪಟ ನಾಗರಿಕ ಸೌಕರ್ಯಗಳೆಲ್ಲ ಲಭ್ಯವಿದ್ದೂ ಕೃಷಿ-ವಾಸ ತಿರಸ್ಕೃತವಾಗುತ್ತಿರುವ ಪರಿ ಕಾಣುವಾಗ, ಬಹುಶಃ ಅಂದು ಗೋವಿಂದಭಟ್ಟರ ಕಾನವೂ ಮುಂದುವರಿಸುವವರಿಲ್ಲದ ಕಾರಣಕ್ಕೇ ಮುಗ್ಗರಿಸಿರಬೇಕು ಎಂದನ್ನಿಸಿ ಹೃದಯ ಭಾರವಾಗುತ್ತದೆ.
ಮಲೆಕುಡಿಯರು ಗೋವಿಂದಭಟ್ಟರಕಾನವೇ ನಮ್ಮ ಶಿಬಿರವಾಸಕ್ಕೆ ಪ್ರಶಸ್ತವೆಂದು ಸೂಚಿಸಿದರು. ನಾವೂ ಅದನ್ನೊಪ್ಪಿ, ದೊಡ್ಡ ಹೊರೆಯನ್ನು ಅಲ್ಲೇ ಮರೆಯಲ್ಲಿಟ್ಟೆವು. ಬುತ್ತಿಯೂಟ, ಕುಡಿನೀರು ಮತ್ತು ಶಿಖರದ ಅಗತ್ಯಗಳಿಗೆ ಬೇಕಾಗಬಹುದಾದ ಸಲಕರಣೆಗಳನ್ನಷ್ಟೇ ಹಗುರವಾಗಿ ಹೊತ್ತು ಮುಂದುವರಿದೆವು. ಮುಂದಿನ ಜಾಡಿನಲ್ಲಿ ಮಹಾಮರಗಳಿರಲಿಲ್ಲ. ಆದರೆ ಕುರುಚಲು ಕಾಡು ದಟ್ಟವಿತ್ತು. ಪರಿಣತ ಮಲೆಕುಡಿಯರಲ್ಲದಿದ್ದರೆ ನಮ್ಮ ಪ್ರಗತಿ ತುಂಬ ನಿಧಾನಿಸುತ್ತಿತ್ತು ಖಂಡಿತ. ಹನ್ನೆರಡು ಗಂಟೆಯ ಸುಮಾರಿಗೆ ನಾವು ಘಟ್ಟದ ಶಿಖರ ರೇಖೆ ತಲಪಿದ್ದೆವು. ಗಾದೆ ಹೇಳುವಂತೆ ದೂರಕ್ಕೆ ನುಣ್ಣನೆ ಕಾಣಬಹುದಾದ ತೆರೆ ಮೈಯೇ ನಿಜದಲ್ಲಿ ದೈತ್ಯಾಕಾರದ ಪುಡಿ ಬಂಡೆಗಳ ಮತ್ತು ಮಣ್ಣಿನ ಒಟ್ಟಣೆ. ವಿರಳವಾಗಿ ಬಂಡೆಗಳ ಬುಡದಲ್ಲಿ ಬೇರು ಹುದುಗಿಸಿ ಗಟ್ಟಿಗೊಂಡ ಕುಬ್ಜ ಪೊದರುಗಳು ಸಾಕಷ್ಟಿದ್ದುವು, ಉಳಿದಂತೆ ಎಲ್ಲೆಲ್ಲೂ ಬೇರಗಡ್ಡೆಗಳನ್ನೇ ರೂಪಿಸಿಕೊಂಡು ಋತುಮಾನಗಳ ರೋಷ ಮತ್ತು ವೈಭವವನ್ನು ಏಕಕಾಲಕ್ಕೆ ಸಾರುವ ಹುಲ್ಲಂತೂ ಇದ್ದೇ ಇದೆ. ವನ್ಯ ಜಾನುವಾರುಗಳ ನಿಯತ ಚರಾವಿನ ಜಾಡುಗಳಲ್ಲದಿದ್ದರೆ ಇಂಥಲ್ಲಿ ಮನುಷ್ಯಮಾತ್ರರು ಸುಲಭವಾಗಿ ದಾಟಲಾರರು. ಇವೆಲ್ಲ ಪಶ್ಚಿಮ ಘಟ್ಟದ ಸರ್ವೇ ಸಾಮಾನ್ಯ ಲಕ್ಷಣಗಳೇ. ಆದರೆ ರಚನಾ ವೈವಿಧ್ಯ ಹಾಗೂ ಋತುಮಾನದ ಸ್ಪರ್ಷದ ಮಾಯೆಯಲ್ಲಿ ಪ್ರತಿ ಶಿಖರವೂ ಅನನ್ಯ ಎನ್ನುವ ಭಾವವನ್ನೇ ಮೂಡಿಸುವುದೂ ಅಷ್ಟೇ ನಿಜ. ಅಮೆದಿಕ್ಕೆಲ್ ಶಿಖರ ತನ್ನೆಲ್ಲ ಒರಟುತನ, ಅಪಾಯಗಳ ಸಾಧ್ಯತೆಗಳನ್ನು ಆ ಕ್ಷಣದಲ್ಲಿ ತೀರಾ ನಗಣ್ಯ ಮಾಡಿ ನಮಗೆ ರೋಮಾಂಚನವನ್ನು ಉಂಟು ಮಾಡಿತು. ನಾಗರಿಕತೆಯ ಸೌಖ್ಯದಲ್ಲಿದ್ದುಕೊಂಡು ಕನಸುಗಳನ್ನು ಕಟ್ಟಿ, ಇಂಥಾ ಶಿಖರದೆತ್ತರ ಬಯಸಿ ಬರುವವರೆಲ್ಲ ಭವಿಷ್ಯತ್ತಿಗೂ ಈ ಅನನ್ಯತೆಯನ್ನು ಉಳಿಸಿಕೊಳ್ಳುವ ವಿವೇಚನೆಯನ್ನು ಬೆಳೆಸಿಕೊಳ್ಳಲೇಬೇಕು. ಇಂದು ಪ್ರವಾಸೋದ್ಯಮ ಎನ್ನುವ ಭಾರೀ ಅಪಕಲ್ಪನೆ ಎಲ್ಲವನ್ನೂ ಎಲ್ಲರಿಗೂ ಮುಟ್ಟಿಸುವುದೇ ಧರ್ಮವೆಂದು ಹುಚ್ಚಾಟ ನಡೆಸಿದೆ. ಸಮರ್ಥನಷ್ಟೇ ಬದುಕುಳಿಯುತ್ತಾನೆ ಎನ್ನುವುದನ್ನು ವಿಜ್ಞಾನಿ ಪ್ರಾಣಿಪ್ರಪಂಚವನ್ನಷ್ಟೇ ಉದ್ದೇಶಿಸಿ ಹೇಳಿದ್ದಿರಬಹುದು. ನಿಜದಲ್ಲಿ ಅದು ನಾವು ನಿರ್ಜೀವವೆಂದು ಭಾವಿಸುವ ಇಂಥ ಪ್ರಾಕೃತಿಕ ವೈಶಿಷ್ಟ್ಯಗಳಲ್ಲೂ ಪೂರ್ಣ ಜಾಗೃತವಿರುತ್ತದೆ. ಅಲ್ಲಿಗೆ ಯಾವುದೇ ನಾಗರಿಕ ಕಲ್ಪನೆಗಳನ್ನು ಹೇರುವುದು ತಪ್ಪೇ ತಪ್ಪು.
ಅಮೆದಿಕ್ಕೆಲ್ ಶಿಖರದ ಅನನ್ಯತೆಗೆ ಅಂದು ಇನ್ನೂ ಒಂದು ದೊಡ್ಡ ಕಾರಣ – ನಮಗೆ ಸಿಕ್ಕ ಸ್ವಾಗತಘೋಷಗಳು! ಹೌದು, ನಾವಲ್ಲಿ ತಲಪುವಾಗ ಬೇರೇ ಒಂದಿಷ್ಟು ಹಳ್ಳಿಗರು ಅಡ್ಡಾಡುತ್ತಿದ್ದರು. ಅವರು ನಮ್ಮನ್ನು ಕಾಣುತ್ತಿದ್ದಂತೆ ನಮಗೆ ಸ್ವಾಗತದ ಘೋಷಗಳನ್ನೇ ಹಾಕಿದರು. ಇದೇನು ಚೋದ್ಯ ಎನ್ನುವುದಕ್ಕೆ ಇಲ್ಲೊಂದು ಉಪಕಥೆ ಹೇಳಬೇಕು. ನಾನು ತಿಂಗಳ ಹಿಂದೆ ಈ ಸಾಹಸಯಾನದ ಕುರಿತು ಪತ್ರಿಕೆಗಳಲ್ಲಿ ಪ್ರಕಟಿಸಿದ್ದೆ ಎಂದಿದ್ದೆನಲ್ಲ. ಆಗ ಅದಕ್ಕೆ ಪ್ರತಿಕ್ರಿಯೆಯಾಗಿ ಕಗ್ಗಾಡಮೂಲೆ ಶಿಶಿಲ, ಅಂದರೆ ಅಮೆದಿಕ್ಕೆಲ್ಲಿನ ಪೂರ್ವಕೊಳ್ಳದಿಂದ, ತೀರಾ ಅಪರಿಚಿತ ಕೃಷಿಕರೊಬ್ಬರಿಂದ ನನಗೊಂದು ಪತ್ರ ಬಂದಿತ್ತು. “ಸಾಹಸಯಾನದಲ್ಲಿ ನಿಮ್ಮ ತಂಡ ನಮ್ಮೂರಿಗೆ ಬರುವ ವಿಚಾರ ತಿಳಿದು ಸಂತೋಷವಾಯ್ತು. ನಿತ್ಯ ಅದನ್ನು ನೋಡುವ ಊರಿನ ಬಹುಮಂದಿ ನಾವೇ ಅದನ್ನು ಇದುವರೆಗೆ ಏರಿದವರಲ್ಲ. ದೂರದ ಮಂಗಳೂರಿನಿಂದ ಬಂದು ಅದನ್ನು ಸಾಧಿಸಿ ನಮ್ಮೂರಿಗಿಳಿಯುವ ನೀವು ದಯವಿಟ್ಟು ಮಧ್ಯಾಹ್ನದೂಟಕ್ಕೆ ನಮ್ಮಲ್ಲಿಗೇ ಬರಬೇಕು. ಇಂತು – ವಿಷ್ಣು ಗೋಖಲೆ.” ಸಮಯದ ಅನಿಶ್ಚಿತತೆಯನ್ನೂ ಅವರಿಗೆ ತಿಳಿಸಿ, ಒಪ್ಪಿಗೆಯನ್ನೇ ಬರೆದಿದ್ದೆ. ನಮ್ಮ ಸಾಹಸಯಾನದ ದಿನ ಹತ್ತಿರವಾಗುತ್ತಿದ್ದಂತೆ ಅತ್ತ ಗೋಖಲೆಯವರಿಗೆ ತಲೆಯೊಳಗೆ ಸ್ಫೂರ್ತಿಯ ಸುಳಿ ಎದ್ದಿತಂತೆ. ಹಳ್ಳಿಯ ಒಬ್ಬಿಬ್ಬ ಮಲೆಕುಡಿಯರನ್ನೂ ನಾಲ್ಕೈದು ಸಂಬಂಧಿ, ಮಿತ್ರರನ್ನೂ ಜತೆ ಮಾಡಿಕೊಂಡು ತಂಡ ಕಟ್ಟಿಯೇ ಬಿಟ್ಟರು. ನಮ್ಮ ದಿನಕ್ಕೆ ಹೊಂದಾಣಿಕೆ ಮಾಡಿಕೊಂಡು ಕಾಡುನುಗ್ಗಿ, ಅಮೆದಿಕ್ಕೆಲ್ಲಿನ ಕಡಿದಾದ ಪೂರ್ವ ಮೈ ಏರಿ, ಶಿಖರಕ್ಕೆ ಬಂದೇಬಿಟ್ಟಿದ್ದರು. ಹಾಗೆ ಸಿಕ್ಕ ವಿಷ್ಣು ಗೋಖಲೆಯವರು ತಮ್ಮ ಆಮಂತ್ರಣವನ್ನು ಮೌಖಿಕವಾಗಿಯೂ ಅತಿಶಯವಾಗಿಯೂ ಖಾತ್ರಿಗೊಳಿಸಿದರು! ಅವರ ತಂಡ ಶಿಖರವಲಯದ ಪೂರ್ವ ಮಗ್ಗುಲಿನ ಜಲಾಶ್ರಯದಲ್ಲಿ ಮೊದಲೇ ಶಿಬಿರತಾಣ ನಿರ್ಧರಿಸಿದ್ದುದರಿಂದ ಆ ರಾತ್ರಿಗೆ ಅತ್ತ ಸರಿದರು.
ಪುರಾಣಪ್ರಸಿದ್ಧರಾದ ಪಾಂಡವರ ಹೆತ್ತಬ್ಬೆ – ಕುಂತಿ, ತನ್ನ `ಅಮೆ’, ಅರ್ಥಾತ್ ಹೆರಿಗೆಯ ಮೈಲಿಗೆ, ತೊಳೆಯಲು ಬಿಸಿ ನೀರು ಬಯಸಿದಳಂತೆ. ಆಗ ಆಕೆ ಹೂಡಿದ ಮೂರು ಕಲ್ಲ ಗುಪ್ಪೆಯ `ದಿಕ್ಕೆಲ್’ ಅರ್ಥಾತ್ ಒಲೆಯೇ ಈ ಅಮೆದಿಕ್ಕೆಲ್. ಮಣ್ಣು ಪುಡಿ ಬಂಡೆಗಳ ಒಟ್ಟಣೆಯಂತೇ ರೂಪುಗೊಂಡ ಶಿಖರ ಸಮುದ್ರ ಮಟ್ಟದಿಂದ ೧೨೯೮ ಮೀಟರ್ ಅಥವಾ ೪೨೬೧ ಅಡಿ ಎತ್ತರದಲ್ಲಿದೆ. ಇದರ ಶುದ್ಧ ಶಿಲಾ ಮುಂದುವರಿಕೆಯಾಗಿರುವ, ತುಸು ತಗ್ಗಿನಲ್ಲಿದ್ದರೂ ಸಾಮಾನ್ಯ ಚಾರಣಿಗರಿಗೆ ಅಸಾಧ್ಯ ಸವಾಲಾಗಿಯೇ ಕಾಣುವ, ಮೂರು ಗುಪ್ಪೆಗಳಂಥ ರಚನೆಯೇ ಒಟ್ಟಾರೆ ಶಿಖರಕ್ಕೆ ಹೆಸರು ತಂದ ದಿಕ್ಕೆಲ್. ಶಿಖರದ ಉನ್ನತ ಸ್ಥಾನದಲ್ಲಿ ಸರ್ವೇ ಇಲಾಖೆಯವರು ಮಾಡಿದ್ದ ಕಾಡು ಕಲ್ಲ ಗುಪ್ಪೆಯಿದೆ. ಅದರ ಹಿಂದೆ ಮುಂದೆ ಚಿತ್ರಗ್ರಹಣ, ಸುತ್ತಣ ದೃಶ್ಯ ವೀಕ್ಷಣೆ ಸಾಕಷ್ಟು ಮಾಡಿದೆವು, ಅಲ್ಲೇ ನಮ್ಮ ಮಧ್ಯಾಹ್ನದ ಬುತ್ತಿಯೂಟ – ಅಂದರೆ, ಎಂದಿನಂತೆ ಮಂಗಳೂರಿನಿಂದಲೇ ಕಟ್ಟಿ ಒಯ್ದಿದ್ದ ಚಪಾತಿ ತಿನ್ನುವುದನ್ನೂ ಮುಗಿಸಿಕೊಂಡೆವು.
ಶಿಖರವಲಯದ ವಿವಿಧ ಬಂಡೆಗುಂಡುಗಳನ್ನೇರಿಳಿದು, ಸಂದು ಗುಹೆಗಳನ್ನು ಬಲು ಎಚ್ಚರದಿಂದಲೇ ಪರಿಶೀಲಿಸಿದೆವು. ಅಂಥಾ ಒಂದು ಸಂದಿನ ಕುರಿತು ರಾಘವ ಹೆಬ್ಬಾರರು ಹೇಳಿದ ಕತೆ ನೆನಪಾಗದಿರಲಿಲ್ಲ. ಹಿಂದೊಮ್ಮೆ ಅವರು ಕೆಲವು ಇಷ್ಟರೊಡನೆ ಈ ಶಿಖರದರ್ಶನಕ್ಕೆ ಬಂದಿದ್ದರಂತೆ. ಜೊತೆಗೆ ಆಳುಗಳೊಡನೆ ಗೋಣಿ ತುಂಬಾ ಬೊಂಡ ತುಂಬಿಸಿಕೊಂಡೂ ಹೋಗಿದ್ದರಂತೆ. ಸೂರ್ಯಾಸ್ತ ನೋಡಿ, ನಕ್ಷತ್ರ ಎಣಿಸುತ್ತ ನಿದ್ರಿಸಿ ಬರುವ ಯೋಜನೆಯಿತ್ತಂತೆ. ಅದರೆ ಏರು ನಡೆಯ ಬಿಸಿ, ಹಗಲಿನ ಕಾವೆಲ್ಲ ಇಳಿಯುತ್ತಿದ್ದಂತೆ ಇವರ ತಂಡವನ್ನು ಶೀತ ಮಾರುತ ಕಾಡತೊಡಗಿತ್ತಂತೆ. ಆಗ ಶಿಖರವಲಯದ ಬಂಡೆ ಸಂದುಗಳ ಮರೆಸೇರಿ, ಬೊಂಡ ಒಯ್ದಿದ್ದ ಗೋಣಿಯೊಳಗೇ ತೂರಿಕೊಂಡು ಬಹಳ ಕಷ್ಟದಲ್ಲಿ ರಾತ್ರಿ ಕಳೆದಿದ್ದರಂತೆ! ಅದಕ್ಕೇ ಪರ್ವತಾರೋಹಣದ ಪ್ರಾಥಮಿಕ ಪಾಠ ಹೇಳುತ್ತದೆ – ಶಿಖರದಲ್ಲಿ ಶಿಬಿರ ಮಾಡಬಾರದು! ಒಂದು ಗುಹಾ ಓಣಿಯಂಥದ್ದರಲ್ಲೇ ನಾವು ಶಿಖರದ ದಕ್ಷಿಣ ದಿಕ್ಕಿನ, ಸುಮಾರು ಮೂವತ್ತಡಿ ಕೆಳಗಿನ ಹಾಸುಬಂಡೆಗೂ ಇಳಿದಿದ್ದೆವು. ಅದು ಇಪ್ಪತ್ತು – ಮೂವತ್ತಡಿ ಅಗಲಕ್ಕೆ ಇದ್ದರೂ ಕೊಳ್ಳದತ್ತ ಇಳಿಜಾರಾಗಿತ್ತು. ಅದರಲ್ಲಿ ನಿರಪಾಯವಾಗಿ ನಡೆಯಬಹುದಾದಷ್ಟು ಮುಂದುವರಿದು, ಕಣ್ಣಿಗೆಟುಕದ ದಿಕ್ಕೆಲ್ ಕಲ್ಲಿನ ಬುಡಕ್ಕೆ ಜಾಡರಸಿದೆವು. ಒಂದು ಹಂತದಿಂದ ಮುಂದೆ, ರಕ್ಷಣಾ ಹಗ್ಗ, ವಿಶೇಷ ತಯಾರಿಗಳಿಲ್ಲದೇ ಹೋಗುವುದು ಅಪಾಯ ಎನ್ನುವುದು ಸ್ಪಷ್ಟವಾದಮೇಲೆ ಅಂದಿಗೆ ದಿಕ್ಕೆಲ್ ಕಲ್ಲನ್ನೇರುವ ಕಾರ್ಯಕ್ರಮವನ್ನು ಕೈಬಿಟ್ಟೆವು. ಹೀಗೆ ಎಲ್ಲ ಶಿಖರದಲೆದಾಟಗಳನ್ನು ಮನಸಾ ಮುಗಿಸಿ, ಸೂರ್ಯ ಪಶ್ಚಿಮಾಗಸದಲ್ಲಿ ಜಾರತೊಡಗಿದಂತೆ ನಾವು ಗೋವಿಂದ ಭಟ್ಟರ ಕಾನದ ಶಿಬಿರಸ್ಥಾನಕ್ಕೆ ಮರಳಿದೆವು.
ಗೋವಿಂದಭಟ್ಟರ ಮನೆಯಿದ್ದ ಜಾಗದಲ್ಲಿ ಅವಶೇಷಗಳ ಮೇಲೆ ಹುಲ್ಲು ಹೊದರು ಬೆಳೆದಿತ್ತು. ಅದರ ಅಂಗಳದ ವಿಸ್ತೃತ ಮಟ್ಟಸ ಬಯಲನ್ನೇ ನಾವಾಯ್ದುಕೊಂಡಿದ್ದೆವು. ಅಲ್ಲಿನ ಪ್ರಾಥಮಿಕ ನೆಲ ಹಸನು ಮಾಡುವ, ಉದುರು ಸೌದೆ ಸಂಗ್ರಹಿಸುವ ಕೆಲಸಗಳಿಗೆ ಮಲೆಕುಡಿಯರು ಸಹಕರಿಸಿದರು. ಅಷ್ಟರೊಳಗೆ ನಮ್ಮ ರಕ್ಷಣಾಹಗ್ಗಕ್ಕೇ ಸಣ್ಣ ತಪಲೆಯೊಂದನ್ನು ಬಿಗಿದು, ಬಾವಿಯಿಂದ ನೀರು ಸೇದಿ, ಚಾ ಕಾಯಿಸಿದ್ದೆವು. ನಮ್ಮ ಮರುದಿನದ ಚಾರಣ ಸ್ವತಂತ್ರ ಯೋಜನೆಯಾದ್ದರಿಂದ ಮಲೆಕುಡಿಯರನ್ನು ನಾವು ರಾತ್ರಿಗೆ ಉಳಿಸಿಕೊಳ್ಳಲಿಲ್ಲ. ಸೌದೆ, ಸಮಯ ನಮ್ಮಲ್ಲಿ ಧಾರಾಳವಿತ್ತು. ಹಾಗಾಗಿ ಮಾಸುತ್ತಿದ್ದ ಬೆಳಕಿನೆದುರು ಕೆಲವರು ಶಿಬಿರಾಗ್ನಿ ಎಬ್ಬಿಸಿದೆವು. ಒಂದಿಬ್ಬರು ಮೂರು ಕಲ್ಲಿನ ನಮ್ಮದೇ `ದಿಕ್ಕೆಲ್’ ಮಾಡಿ ಗಂಜಿಪಾತ್ರೆ ಕೂರಿಸಿದರು. ಉಳಿದವರು ಹಸಿ ತರಕಾರಿ ಖಿಚಡಿ ಮಾಡಲು ಒಯ್ದಿದ್ದ ಟೊಮೆಟೋ, ನೀರುಳ್ಳಿ, ಸೌತೆಕಾಯಿ, ಹಸಿಮೆಣಸು, ಕ್ಯಾರಟ್ ಕೊಚ್ಚುವ ಕೆಲಸಕ್ಕೆ ಕೈಹಚ್ಚಿದರು. ಭಟ್ಟರ ಕೈತೋಟದ ನಿಂಬೆಕಾಯಿಗಳು ನಮಗೆ ಅನಿರೀಕ್ಷಿತ ಬೋನಸ್!
ಮಾತು, ಹಾಸ್ಯ ಹುಲುಸಾಗಿ ಸಾಗಿತ್ತು. ಶೀತಗಾಳಿಯ ಬೀಸು ಜೋರಿತ್ತು. ಶಿಬಿರಾಗ್ನಿ ದೊಡ್ಡದಾಗಿಯೇ ಚಟಪಟಿಸುತ್ತ ಆಕಾಶಕ್ಕೆ ಚಿಕ್ಕಿಗಳನ್ನು ಏರಿಸುತ್ತಲೇ ಇತ್ತು. ಏತನ್ಮಧ್ಯೆ ನಮ್ಮೊಳಗಿದ್ದ ಮೂವರ ಬಳಗ, ತಂಡದ ಶಿಸ್ತುಸಂಹಿತೆಯನ್ನು ಮೀರಿ ಗುಟ್ಟಾಗಿ ಅಮಲು ಪದಾರ್ಥ ತಂದದ್ದನ್ನು ಸೇವಿಸಿದ್ದರು. ಅದರ ಸ್ವಲ್ಪ ಪ್ರಭಾವ ಸೇರಿದಂತೆ ಅವರಲ್ಲೊಬ್ಬ `ಕೆಂಡಸೇವೆ’ ನಡೆಸುವ ನಾಟಕಕ್ಕಿಳಿದದ್ದು ಅಪಾಯಕಾರಿಯಾಗುವ ಹಂತಕ್ಕೆ ಬಂದಾಗ, ಒಟ್ಟು ನಡವಳಿಕೆಗೆ ಮಾತಿನೇಟು ಕೊಟ್ಟು ತಗ್ಗಿಸುವುದು ಅನಿವಾರ್ಯವಾಯ್ತು. ಈಗ ಅವರದು ಕ್ಷಮಾಯಾಚನೆಯ ಠಕ್ಕು. ದಟ್ಟಡವಿ. ಗಾಢಾಂಧಕಾರವಾದ್ದರಿಂದ ನಮಗೂ ಒಪ್ಪಿಕೊಳ್ಳದೇ ನಿರ್ವಾಹವಿಲ್ಲದ ಸ್ಥಿತಿ. ಈ ಚೌಕಾಸಿಗಳಲ್ಲಿ ಅಗತ್ಯದ ಊಟ, ಅವಶ್ಯ ನಿದ್ರಾಶಾಂತಿ ತಡವಾಗುವುದನ್ನು ಕಂಡು, ಎಳೆಯ ಶೌರಿ ಹೊಟ್ಟೆನೋವಿನ ನಾಟಕ ಮಾಡಿದ್ದು ತುಂಬ ಪರಿಣಾಮಕಾರಿಯಾಗಿತ್ತು. ಮತ್ತೆ ಊಟ, ಮಲಗುವ ವ್ಯವಸ್ಥೆಗಳು ಚುರುಕಾದವು. ಇಡೀ ರಾತ್ರಿ ಬೆಂಕಿ ಹಾಗೂ ಸುತ್ತು ಮಲಗಿಕೊಳ್ಳುವ ಸದಸ್ಯರ ಸರದಿಯ ಪಹರೆಗೆ ನೇಮಿಸುವಲ್ಲಿ ಕುಡುಕರನ್ನು ನಿವಾರಿಸಿದೆವು. ಬಹುಶಃ ಅವರಿಗೆ ಬೇಕಿದ್ದದ್ದೂ ಅದೇ ಇದ್ದಿರಬಹುದು! ಆದರೆ ಗಾಳಿಯ ವೈಪರೀತ್ಯದಲ್ಲಿ ಹೆಚ್ಚಿನವರು ಒಂದೋ ಹೊಯ್ದಾಡುವ ಜ್ವಾಲೆಯ ಉರಿಗೆ ಅತ್ತ, ಗದಗುಡುವ ಚಳಿಗೆ ಇತ್ತ ಸರಿಯುತ್ತ ಜಾಗರಣೆಯನ್ನೇ ನಡೆಸಿದೆವು.
ಪ್ರಾತರ್ವಿಧಿ ಪೂರೈಕೆ, ಕಾಫಿಪಾನ, ಬ್ರೆಡ್ ಜ್ಯಾಂ ಧ್ವಂಸವನ್ನೆಲ್ಲ ಬೆಳಕು ಹರಿಯುತ್ತಿದ್ದಂತೆ ಮುಗಿಸಿಕೊಂಡಿದ್ದೆವು. ಆ ದಿನದ ಕಲಾಪಕ್ಕೆ ನಮಗೆ ಮಾರ್ಗದರ್ಶಿ ಭೂಪಟ ಮಾತ್ರ. ಆ ಪ್ರಕಾರ ನಾವು ಮೊದಲು ಪೂರ್ವಮುಖಿಗಳಾಗಿ ಕುರುಚಲು ಕಾಡಿನ ನಡುವೆ ವನ್ಯ ಜಾನುವಾರುಗಳ ಸವಕಲು ಜಾಡು ಆಯ್ದುಕೊಳ್ಳುತ್ತ ಶಿಖರಸಾಲಿನ ಅಂಚನ್ನೇರಿದೆವು. ಮತ್ತೆ ಶ್ರೇಣಿಯ ಪೂರ್ವಕೊಳ್ಳದತ್ತ ಆದಷ್ಟು ನೇರವಾಗಿಯೇ ಮುಂದುವರಿದೆವು. ಸಣ್ಣ ಇಳುಕಲಿನಲ್ಲಿ ಭಾರೀ ಮರಗಳ ಎಡೆಯಲ್ಲಿ ದಟ್ಟ ಕುರುಚಲು ಹೆಣೆದಿತ್ತು. ಆಶ್ಚರ್ಯಕರವಾಗಿ ಸವಕಲು ಜಾಡು ವಿರಳವಾಗಿತ್ತು. ಸಣ್ಣ ಗಿಡ, ಕೊಂಬೆಗಳನ್ನು ತೊತ್ತಳ ತುಳಿದು, ಮುಳ್ಳಿಲ್ಲದ ಪೊದರುಗಳಿಗೆ ಮೈಕೊಟ್ಟು ಸಂದುಬಿಡಿಸಿ, ಅನಿವಾರ್ಯವಾದಲ್ಲಿ ಕತ್ತಿ ಹಿಡಿದು ಕೊಚ್ಚಿ ಸಾಗಿದೆವು. ಇದರಲ್ಲಿ ಪ್ರಗತಿ ನಿಧಾನ ಎನ್ನಿಸಿತು. ಅದನ್ನು ನಿವಾರಿಸಲು ಬೆಟ್ಟದ ಒಂದು ನಿರಿಗೆಗೆ ಇಳಿದೆವು. ಅಲ್ಲಿ ಮಳೆಗಾಲದ ನೀರಿನೊತ್ತಡದಿಂದಲೋ ಮರಳು ಕಲ್ಲೇ ಹೆಚ್ಚಾದ್ದರಿಂದಲೋ ಕುರುಚಲು ವಿರಳವಾಗಿತ್ತು. ಆದರೆ ದಟ್ಟ ನೆರಳಲ್ಲಿ ಪಾಚಿಗಂಬಳಿ ಹೊದ್ದು ಕುಳಿತು ಜಾರಿಸುವ ಮುದಿಬಂಡೆಗಳು, ಎಡೆಯಲ್ಲಿ ಜಿನುಗಿ ಹರಿಯುವ ನೀರು, ಅಲ್ಲಿ ಇಲ್ಲಿ ಗೊಸರುನೆಲ. ಪರಿಣಾಮವಾಗಿ ಆ ಬೇಸಗೆಯ ದಿನಗಳಲ್ಲೂ ಗೇಣಿಕ್ಕುವ ಜಿಗಣೆ ಮುತ್ತಿಕೊಳ್ಳುವ ಸೊಳ್ಳೆ ನಮ್ಮನ್ನು ಚುರುಕುಗೊಳಿದುವು. ಆಕಾಶ-ಮಾಡನ್ನು ಹೊತ್ತ ಭಾರೀ ಕುಂದಗಳಂತಿದ್ದ ಹೆಮ್ಮರಗಳು, ಮರದಿಂದ ಮರಕ್ಕೆ ಜೋತುಬಿದ್ದು, ಬಲಿತು ಕಾಡೆಲ್ಲವನ್ನು ಒಂದೇ ಕಟ್ಟಿನಲ್ಲಿಟ್ಟುಕೊಂಡಂಥ ಬಳ್ಳಿಗಳು. ಇವಕ್ಕೆ ಮುಂಜಾವಿನ ಮಂಜು, ಶೀತ, ಅರಣ್ಯರವ ಸೇರಿ ನಮ್ಮಲ್ಲಿ ದಿಗಿಲು ಹುಟ್ಟಿಸಿದವು. ಮತ್ತೆ ಆಗಿಂದಾಗ್ಗೆ ಕಾಣುವ ನಮಗೆ ಸಿಗುತ್ತಿದ್ದ ಆನೆಜಾಡು, ಅವುಗಳ ಲದ್ದಿಗುಡ್ಡೆಗಳಂತೂ ನಮ್ಮಲ್ಲಿ ತೀವ್ರ ಅಭದ್ರತೆಯನ್ನೇ ಮೂಡಿಸಿತ್ತು. ಅವನ್ನೆಲ್ಲ ಮರೆಸುವಂತೆ, ಪರೋಕ್ಷವಾಗಿ ಸಮೀಪದಲ್ಲಲ್ಲೆಲ್ಲಾದರೂ ಇರುವ ಮಹಾಮೃಗಗಳು ಎಚ್ಚರವಡೆದು ದೂರಸರಿಯುವಂತೆ ನಮ್ಮಲ್ಲಿ ಹಾಡು ಹಾಸ್ಯ ತುಸು ಗದ್ದಲದಂತೇ ನಡೆಸಿದ್ದೆವು! ಜೊತೆಗೆ ನಮ್ಮಿಂದಲೂ ತುಸು ದಕ್ಷಿಣಕ್ಕೆ ಸಮಾನಾಂತರದಲ್ಲಿ ಇಳಿಯುತ್ತಿದ್ದಿರಬಹುದಾದ ಶಿಶಿಲದ ಮಿತ್ರರಿಗೆ ಆಗೀಗ ಅಯಾಚಿತ ಕರೆಯೂ ಹೋಗುತ್ತಿತ್ತು “ಓ ಓ ಹೋಯ್!” ಅತ್ತಣಿಂದ ರಸೀದಿ, ಅಂದರೆ ಪ್ರತಿಕೂಗು ಬರುತ್ತಿರಲಿಲ್ಲ. ಇಳಿಜಾರಿನಲ್ಲೂ ಹೀರೇಕಾಯಿಯ ಮೇಲಿನ ಧಾರೆಗಳಂತೆ ಹಲವು ಏಣುಗಳಿದ್ದಂತಿತ್ತು. ಶಿಶಿಲದ ಮಿತ್ರರು ಕೆಲವು ಏಣುಗಳಾಚಿನ ಮರೆಯಲ್ಲಿರಬಹುದು, ಅವರದೇ ಗದ್ದಲಗಳಲ್ಲಿ ಮೈಮರೆತಿರಬಹುದು ಎಂದುಕೊಂಡು, ನಮ್ಮ ನಕ್ಷೆ ನಿಷ್ಠೆಯಲ್ಲಿ ನಾವು ನಿಶ್ಚಿಂತರಾಗಿ ಇಳಿದೇ ಇಳಿದೆವು.
ಇಳುಕಲು ಹೆಚ್ಚುತ್ತಿದ್ದಂತೆ ಗೊಸರುನೆಲ ತೊರೆಯಾಗಿ, ಪುಡಿ ಕಲ್ಲು ಬಂಡೆಗಳ ಝರಿಯಾಗಿತ್ತು. ನಡುವಣ ಒಣಜಾಡರಿಸಿ, ಬಂಡೆಯಿಂದ ಬಂಡೆಗೆ ಹುಶಾರಾಗಿ ದಾಟುತ್ತ, ಕಷ್ಟ ಹೆಚ್ಚಿದಲ್ಲಿ ಪರಸ್ಪರ ಆಸರೆ ಪಡೆಯುತ್ತಿದ್ದೆವು. ನಮ್ಮಲ್ಲಿ ಕೆಲವು ಶಿಬಿರ ಸಾಮಗ್ರಿಗಳನ್ನು ಸದಸ್ಯರ ಬೆನ್ನುಚೀಲದೊಳಗೆ ಸೇರಿಸಲು ಅಸಾಧ್ಯವಾದ್ದಕ್ಕೆ ಕೈಹೊರೆಯಾಗಿಯೇ ಉಳಿಸಿಕೊಂಡಿದ್ದೆವು. ಕಷ್ಟಸಾಧ್ಯವಾದ ಜಾಗಗಳಲ್ಲಿ ಅಂಥವನ್ನು ಹಿಂದೆ ಮುಂದೆ ಕೈದಾಟಿಸುತ್ತ ಸಾಗಿದೆವು. ಎಷ್ಟು ಎಚ್ಚರವಹಿಸಿದರೂ ಸಣ್ಣಪುಟ್ಟ ಜಾರಿಕೆ, ಕುಕ್ಕುರು ಬಡಿದ ಅನುಭವ ತಂಡಕ್ಕಾಗದೇ ಇರಲಿಲ್ಲ. ಬೆಟ್ಟದ ಓರೆ ಹೆಚ್ಚಿದಂತೆ ನೀರಮೊತ್ತ, ಸೆಳೆತ ಹೆಚ್ಚುವುದನ್ನೂ ಗಮನಿಸಿದೆವು. ಸ್ವಲ್ಪದರಲ್ಲೇ ಅವನ್ನೂ ಮೀರಿ ಭಾರೀ ಮೊರೆತದ ಜಲಪಾತವೇ ಪದತಳದಲ್ಲಿದೆ ಎನ್ನುವ ಸ್ಥಿತಿ ಮುಟ್ಟಿದಾಗ ನಾವು ಪರ್ಯಾಯ ಜಾಡು ಅರಸುವ ಅನಿವಾರ್ಯತೆ ಬಂತು.
ಘಟ್ಟಗಳಲ್ಲಿ ಸಾಧಾರಣವಾಗಿ ನೀರದಾರಿ ನೇರ. ಮತ್ತೆ ಬೇಗ ಕೊಳ್ಳ ಸೇರಲು ನಮಗಂಥವು ಅನುಕೂಲವೂ ಹೌದು. ಹಾಗಾಗಿ ಜಲಪಾತದ ಬುಡಕ್ಕಿಳಿಯಲು ಸಾಧ್ಯವೇ ಎಂದು ಮೊದಲ ಪ್ರಯತ್ನಗಳನ್ನು ನಡೆಸಿದ್ದೆವು. ಜಲಧಾರೆಯ ದಕ್ಷಿಣ ಮಗ್ಗುಲಿನ ಬಿಳಲು, ಕುರುಚಲುಗಳನ್ನು ಆಧರಿಸಿ ಒಂದು ಹಂತವೇನೋ ಇಳಿದೆವು. ಆದರೆ ಅಷ್ಟರೊಳಗೇ ತಂಡದ ದೌರ್ಬಲ್ಯ ಮತ್ತು ಮುಂದಿನ ಕೊಳ್ಳದ ಕಾಠಿಣ್ಯ ನೋಡಿ ಮುಂದುವರಿಯಲು ಧೈರ್ಯ ಸಾಲಲಿಲ್ಲ. ದಕ್ಷಿಣ ಮಗ್ಗುಲಿನ ಏಣು ಏರಿ, ಕಾಡಿಗೇ ನುಗ್ಗಬೇಕಾಯ್ತು. ಇಲ್ಲಿ ಮಹಾನ್ ವೃಕ್ಷಗಳಿಲ್ಲ. ವಾಟೆ, ಲಟ್ಟೂಸ್ ಗಿಡ, ಸಣ್ಣಪುಟ್ಟ ಮರ, ಬೆತ್ತದ ಬುಡಗಳು ಧಾರಾಳವಿದ್ದುವು. ತೀವ್ರ ಇಳಿಜಾರಿನಲ್ಲಿ ನುಸುಲು ಮಣ್ಣು, ರಾಶಿಬಿದ್ದಂತಿದ್ದ ತರಗೆಲೆ, ಪುಡಿಗಲ್ಲು, ಅಸ್ಥಿರವಾಗಿ ಕುಳಿತ ಪುಟ್ಟ ಬಂಡೆಗಳು. ಹೆಜ್ಜೆ ಎತ್ತಿ ಇಡುವುದಕ್ಕಿಂಥ ಹೆಚ್ಚು ಜಾರುತ್ತ, ಪೊದರು ಮರಗಳ ಆಧಾರದಿಂದ ಆಧಾರಕ್ಕೆ ಜೋತು, ನೇತು, ಇಳಿಯುತ್ತ ಹೋದೆವು. ಬೆತ್ತದ ಬಳ್ಳಿ ಎಂದರೆ ಮುಳ್ಳ ಸರಿಗೆಯೇ ಸರಿ. ಕೆಲವೆಡೆ ನಾವು ಜಾರುವ ಭರದಲ್ಲಿ ಈ ಬಳ್ಳಿ ಹಾಯ್ದು ಬಟ್ಟೆ ಹರಿದೋ ಗೀರುಗಾಯಪಡೆದೋ ಸುಧಾರಿಸಿಕೊಳ್ಳುವುದೂ ನಡೆದಿತ್ತು. ಆಧರಿಸಿದ ಗಿಡ ಕುಂಬಾಗಿದ್ದಲ್ಲಿ ಮುರಿದು ನಮ್ಮನ್ನು ಹೊರೆ ಸಹಿತ ಭೋರನೆ ಬೀಳಿಸುವುದೂ ಬೇಗದಲ್ಲಿ ಹೆಚ್ಚಿನವರಿಗೆ ಸಹಜ ನಡೆಯಾಗಿಯೇ ರೂಢಿಸಿತ್ತು. ತಂಡದಲ್ಲಿ ಎರಡು ಮೂರು ಜನ ಮಾತ್ರ ಪೂರ್ಣ ಉರುಳಿ ಹೋಗುವ ಭಯಕ್ಕೆ ಬಲಿಯಾಗಿ, ಕಾಲಬಲದಲ್ಲಿ ಇಳಿಯಲು ಒಪ್ಪಲೇ ಇಲ್ಲ, ಕುಳಿತು ಜಾರುವುದನ್ನೇ ನೆಚ್ಚಿದರು. ಇದರಿಂದಾಗಿ ಆಗಾಗ ಸಣ್ಣ ಕಲ್ಲು ತುಂಡುಗಳು ದಂಟೆ ಸಿಕ್ಕ ರಿಲೇ ಓಟಗಾರರಂತೆ ಕೊಳ್ಳದತ್ತ ಚಿಮ್ಮಿ ಉರುಳುತ್ತಿದ್ದುವು. ಅವುಗಳ ಗಾತ್ರವೇನೇ ಇದ್ದರೂ ಅಡ್ಡ ಸಿಕ್ಕವರ ಕನಿಷ್ಠ ಮೂಳೆ ಮುರಿತವಾದರೂ ನಿಶ್ಚಿತವೇ ಇತ್ತು. ಹೀಗಾಗಿ ನಮ್ಮಲ್ಲಿ ಕೆಲವರು ಕುಳಿತು ಜಾರುವವರನ್ನು ಮತ್ತು ಅವರು ಮುಕ್ತಗೊಳಿಸುವ ಉರುಳುಗಲ್ಲುಗಳನ್ನು ನಿಗಾವಹಿಸುವುದು ಅನಿವಾರ್ಯವಾಗಿತ್ತು. ಅಲ್ಲದೇ ಇಳಿಯುವವರ ಸಾಲೂ ಸಾಕಷ್ಟು ಓರೆಯಲ್ಲೇ ಮುಂದುವರಿಯುವಂತೆ ನೋಡಿಕೊಂಡೆವು. ಅಂಥದ್ದರಲ್ಲೂ ಒಂದೆಡೆ ಸುಮಾರು ಎಂಟು ಹತ್ತು ಕೇಜಿ ತೂಕದ ಕಲ್ಲೊಂದು ಮಂಜುನಾಥ ಉಪಾಧ್ಯರೆಡೆಗೆ ಮಾರಕವಾಗಿ ಧಾವಿಸಿತ್ತು. ಅವರ ಕೈಯಲ್ಲಿ ನಾವು ಅನ್ನ ಮಾಡಲೆಂದು ಒಯ್ದಿದ್ದ ದೊಡ್ಡ ತಪಲೆ ಇತ್ತು. ಹಿಂದಿನವರ ಬೊಬ್ಬೆ ಕೇಳಿ ಅವರು ಕಡೇ ಗಳಿಗೆಯ ಜಾಣ್ಮೆಯಲ್ಲಿ ತಪಲೆಯನ್ನು ತಲೆಯ ಮೇಲೆ ಕವುಚಿ ಹಿಡಿದುಕೊಂಡು, ಇದ್ದಲ್ಲೇ ಕುಳಿತುಬಿಟ್ಟರು. ಕಲ್ಲು ತಪಲೆಯ ಮೇಲೆ “ಧೋಂಕ್” ಎಂದು ಬಿದ್ದು, ಆಳ ಗಾಯ ಮಾಡಿ ಪುಟ ನೆಗೆದು ಹೋಗಿತ್ತು! (ಸಾಲಿಗ್ರಾಮದ ಮಂಜುನಾಥ ದೇವಗಂಗೆಯನ್ನು ತಾಳಿದವನಲ್ಲವಲ್ಲ!)
ಹನ್ನೊಂದು ಗಂಟೆಯ ಸುಮಾರಿಗೆ, ಇಳುಕಲಿನ ಒಂದು ಹಂತದಲ್ಲಿ ಶಿಶಿಲದ ಮಿತ್ರರ ಮರುಕೂಗು, ಮರುಭೇಟಿಯಾಯ್ತು. ಅವರು ಆ ಬೆಳಿಗ್ಗೆ ಮತ್ತೆ ಶಿಖರಕ್ಕೇರಿ ಸೂರ್ಯೋದಯ ನೋಡಿದ್ದರು. ಮತ್ತೆ ನಮ್ಮನ್ನೂ ಶಿಖರದಲ್ಲೇ ಸೇರಿಸಿಕೊಂಡು ಇಳಿಯುವ ನಿರೀಕ್ಷೆ ಇಟ್ಟುಕೊಂಡಿದ್ದರು! ಅದರಿಂದ ತುಸು ತಡವಾಗಿಯೇ ಅವರ ಶಿಬಿರ ಖಾಲಿ ಮಾಡಿದ್ದರು. ಆದರೆ ಅವರ ಮಾರ್ಗದರ್ಶಿಗಳು ನಮ್ಮ ನಕ್ಷೆ ಮೀರಿದ ಸುಲಭ ಜಾಡರಿತವರಾಗಿ ನಮ್ಮನ್ನು ಬೇಗನೆ ಸೇರಿಕೊಂಡಿದ್ದರು. ಮತ್ತೆ ನಾವು ಅವರನ್ನೇನೋ ಅನುಸರಿಸುವ ಪ್ರಯತ್ನ ಮಾಡಿದೆವು. ಆದರೆ ಅಲ್ಲೂ ಆ ಹಳ್ಳಿಗಾಡಿನವರ ಚುರುಕನ್ನು ಕಾಯ್ದುಕೊಳ್ಳಲಾಗದೆ ಹಿಂದುಳಿದೆವು. ಬಹುಬೇಗನೆ ಇಳಿಜಾರಿನ ತೀವ್ರತೆ ಕಡಿಮೆಯಾಗುವುದರೊಡನೆ ಜಾಡು, ದಿಕ್ಕುಗಳ ಅಂದಾಜು ಸರಿಯಾಗಿದ್ದುದರಿಂದ ನಮ್ಮದೇ ವೇಗದಲ್ಲಿ ನಡೆದೆವು. ಮೊದಮೊದಲು ನಮ್ಮ ಅಂಡೆಗಳಲ್ಲಿದ್ದ ನೀರನ್ನು ಆಗೀಗ ಕುಡಿಯಲು ವಿರಮಿಸುತ್ತಿದ್ದೆವು. ಮಲೆಯ ಆ ವಲಯ ಝರಿ, ತೊರೆಗಳೇನೂ ಇಲ್ಲದೆ ತುಸು ಶುಷ್ಕವೇ ಇತ್ತು. ರಾತ್ರಿಯ ಅಥವಾ ಶಿಖರವಲಯದ ಗಾಳಿಯಾಟ ಇಲ್ಲೆಲ್ಲ ಇರಲೇ ಇಲ್ಲ. ಸಹಜವಾಗಿ ನಾವು ಹೊತ್ತಿದ್ದ ನೀರೆಲ್ಲ ಬೇಗನೆ ಖಾಲಿಯಾಗಿತ್ತು. ಆದರೂ ಮರಗಳ ನೆರಳಿದ್ದದ್ದು ನಮ್ಮ ಅದೃಷ್ಟ. ಬಾಯಾರಿಕೆ, ಹಸಿವು, ಬಳಲಿಕೆಗಳಲ್ಲಿ ಬೆಂಡಾಗಿ, ಕಾಲೆಳೆಯುತ್ತಾ ಅಪರಾಹ್ನ ಎರಡು ಗಂಟೆಯ ಸುಮಾರಿಗೆ ಕೊಳ್ಳದ ತಳ ಅರ್ಥಾತ್ ಶಿಶಿಲ ಹೊಳೆಯ ಪಾತ್ರೆ ತಲಪಿದೆವು.
ಪಶ್ಚಿಮ ಘಟ್ಟಗಳಲ್ಲಿ ಬ್ರಿಟಿಷರು ವ್ಯವಸ್ಥಿತವಾಗಿ ಪ್ರಾಕೃತಿಕ ಕಾಡು ಕೀಸಿದ್ದರೂ ಬಹುತೇಕ ಸಾಗುವಾನಿ ಮರುನಾಟಿಯನ್ನೋ ವನ್ಯದ ಸಹಜ ಪುನರುತ್ಥಾನಕ್ಕೆ ಅವಕಾಶವನ್ನೋ ಕೊಟ್ಟಿದ್ದರೆಂದೇ ತೋರುತ್ತದೆ. ಆದರೆ ಸ್ವತಂತ್ರ ಭಾರತದಲ್ಲಿ ಕಾಡು ಕಡಿತದ ಮುಂದುವರಿಕೆಯೊಡನೆ, ಅಕ್ರಮ ವಾಸ, ನೆಲಗಳ್ಳತನ ಸೇರಿಕೊಂಡಿತು. ಹಾಗಾದ್ದಕ್ಕೋ ಏನೋ ನಾವು ತಲಪಿದ್ದ ಹೊಳೆದಂಡೆ ಶಿಶಿಲದಿಂದ ಆರೇಳು ಮೈಲು ದೂರದಲ್ಲೇ ಇದ್ದರೂ ಊರ್ಜಿತದಲ್ಲೇ ಇದ್ದ ಕೂಪಿನ ದಾರಿ ಅಥವಾ ಕಾಡುಸಾಗಣೆದಾರರ ಮಾರ್ಗ ಸಿಕ್ಕಿತು. ಆ ಕ್ಷಣಕ್ಕೆ ನಾವು ಅದರ ಔಚಿತ್ಯವನ್ನು ಪ್ರಶ್ನಿಸದೇ, ಸುಲಭ ಮತ್ತು ನಿಶ್ಚಿತ ಚಾರಣಾವಕಾಶ ಒದಗಿದ ನಮ್ಮ ಅದೃಷ್ಟವನ್ನು ಹೊಗಳಿಕೊಂಡೆವು, ನೀರಡಿಕೆ ಧಾರಾಳ ತೀರಿಸಿಕೊಂಡು, ಒಯ್ದಿದ್ದ ಸಣ್ಣಪುಟ್ಟ ತಿನಿಸುಗಳನ್ನು ಹೊಟ್ಟೆಗೆ ಹಾಕಿ ಪುನಶ್ಚೇತನರಾದೆವು. ಮುಂದೆ ದೂಳಿದೂಸರಿತ ದಾರಿಯನ್ನು ವಿರಾಮದಲ್ಲಿ, ಯಾಂತ್ರಿಕವಾಗಿ ನಡೆದು ಶಿಶಿಲ ಸೇರುವಾಗ ಸಂಜೆ ನಾಲ್ಕೂವರೆ ಗಂಟೆ. ಗೋಖಲೆ ಮನೆಯವರು ನಮ್ಮ ಬೆವರು ಬಳಲಿಕೆಗೆ ಹಂಡೆ ನೀರು ಕಾಯಿಸಿ ಇಟ್ಟಿದ್ದರು. ನಾವಾದರೋ ಸಮಯದ ಕೊರತೆಯಿಂದ ನೇರ ಊಟಕ್ಕೇ ಕುಳಿತೆವು. ಅಲ್ಲೂ ಭರ್ಜರಿ ಸಮ್ಮಾನದೂಟವನ್ನೇ ಹಾಕಿದರು. ಅನಂತರ ಬಳಲಿಕೆಗೆ ಚಾಪೆ ಬಿಡಿಸಿ, ದಿಂಬನ್ನು ಕೊಡುವವರಿದ್ದರು. ಅವರದೇ ಸಲಹೆಯನ್ನು ಒಪ್ಪಿಕೊಳ್ಳುವುದಿದ್ದರೆ, ರಾತ್ರಿ ಉಳಿಸಿಕೊಂಡು ಮರುದಿನ ಬೆಳಿಗ್ಗೆಯಷ್ಟೇ ಬಿಡುಗಡೆ ಮಾಡುವವರೂ ಇದ್ದರು. ಆದರೆ ನಮ್ಮಲ್ಲಿ ಮೂಲ ಯೋಜನಾಶಿಸ್ತನ್ನು ಕಾಪಾಡಿಕೊಳ್ಳುವುದರ ಕುರಿತೇ ಬಹುಮತವಿತ್ತು. ಆಗಲೇ ಮುಸ್ಸಂಜೆ ಎರಗಿಬಿಟ್ಟಿತು. ಆ ವಲಯಕ್ಕಿದ್ದ ವಿರಳ ಸಾರ್ವಜನಿಕ ಸಾರಿಗೆ – ದಿನದ ಕೊನೆಯ ಸರಕಾರೀ ಬಸ್ಸು, ಹೋಗಿಯಾಗಿತ್ತು. ಆ ದಿನಗಳಲ್ಲಿ ಬಾಡಿಗೆ ಕಾರು, ರಿಕ್ಷಾ ಶಿಶಿಲದಲ್ಲಿ ಕನಸುವಂತೆಯೂ ಇರಲಿಲ್ಲ. ಒಳದಾರಿ ಹಿಡಿದೇ ನಡೆಯುವುದಾದಲ್ಲೂ ಉಪ್ಪಿನಂಗಡಿಗೆ ಸುಮಾರು ಇಪ್ಪತ್ತೈದು ಕಿಮೀ. ನಮಗೆ ಒಂದೆಡೆ ಅದನ್ನು ನಡೆದಾದರೂ ಪೂರೈಸಿ, ಮರುದಿನದ ಜವಾಬ್ದಾರಿಗಳನ್ನುತ್ತರಿಸುವ ಒತ್ತಡ. ಇತ್ತ ಗೋಖಲೆ ಕುಟುಂಬದವರು ಒತ್ತಾಯಿಸಿದಂತೆ ರಾತ್ರಿ ಅಲ್ಲೇ ಉಳಿದು ಬೆಳಗ್ಗಿನ ಮೊದಲ ಬಸ್ಸೇರಿ ತುಸು ತಡವಾಗಿಯೇ ಆದರೂ ನೇರ ಮಂಗಳೂರು ಸೇರುವ ಆಮಿಷ. ನಮ್ಮಲ್ಲಿ ಮೂವರು ಮೊದಲೇ ಅಲ್ಲುಳಿಯುವ ನಿರ್ಧಾರ ಮಾಡಿಯಾಗಿತ್ತು. ಉಳಿದವರು ಹಠಗಟ್ಟಿ, ಬೆಳಕಿಗೆ ಲಾಂದ್ರ ಹಚ್ಚಿಕೊಂಡು ದಾರಿಗಿಳಿದೇ ಬಿಟ್ಟೆವು. ನಮ್ಮ ಅದೃಷ್ಟಕ್ಕೆ ಒಂದು ಮೈಲು ಕಳೆಯುವುದರೊಳಗೆ ಓರ್ವ ಬೀಡಿ ಕಂತ್ರಾಟುದಾರನ ಮನೆಯಂಗಳದಲ್ಲಿ ಆತನ ಜೀಪು ಕಾಣಿಸಿತು. ವಿಚಾರಿಸಿದಾಗ, ಆತ ನಮ್ಮ ಮೇಲೆ ಕರುಣೆದೋರಿ, ನಮ್ಮನ್ನೆಲ್ಲ ಜೀಪಿಗೆ ತುಂಬಿಕೊಂಡು ರಿಯಾಯ್ತಿ ದರದಲ್ಲಿ ಉಪ್ಪಿನಂಗಡಿಗೇ ಮುಟ್ಟಿಸಿದ್ದರಿಂದ ಕಥೆ ಸುಖಾಂತವೇ ಆಯ್ತೆನ್ನಬೇಕು. ಹಿಂದುಳಿದ ಮೂವರೂ ಗೋಖಲೆ ಕುಂಟುಂಬದ ಉಪಚಾರದಲ್ಲಿ ನವಚೇತನರಾಗಿ ಮರುದಿನ ಸುಮಾರು ಹನ್ನೊಂದು ಗಂಟೆಯ ಸುಮಾರಿಗೆ ಮಂಗಳೂರು ತಲಪುವುದರೊಂದಿಗೆ ಒಟ್ಟಾರೆ ಚಾರ್ಮಾಡಿ-ಶಿರಾಡಿಯ ವ್ರತವೂ ಸಾಂಗ ಸಂಪನ್ನವಾಯ್ತು.
(ಮುಂದುವರಿಯಲಿದೆ)
ಹಳೆಯ ಗೆಳೆಯರು ಹಲವರನ್ನು ಮತ್ತೆ ಭೆಎಟಿಯಾಯಿತು! ನನಗೆ ಈ ನಡಿಗೆ ಯಾಕೊ ತಪ್ಪಿತು.
Just read at a function.Thank u Guru.
Wonderful experience….Nice narration.
ಅಮೆದಿಕ್ಕೆಲ್ ಚಾರಣ ಕಥನವನ್ನು ನಿನ್ನೆ ರಾತ್ರಿ ಓದಿ ಬಹಳಾ ಖುಷಿ ಪಟ್ಟೆ.ನಾನು ಅಲ್ಲಿಗೆ ಅರವತ್ತು ತುಂಬಿದ ಮೇಲೆ , ಮೂರು ವರ್ಷಗಳ ಹಿಂದೆ ಚಾರಣ ಮಾಡುವ ಸಾಹಸ ಕೈಗೊಂಡಿದ್ದು.ಅದೂ, ಎತ್ತಿನ ಭುಜ ಚಾರಣ ಎರಡನ್ನೂ ಪೂರೈಸಲು ಸಾಧ್ಯವಾಗದೆ ಅರ್ಧಕ್ಕೇ ಹಿಂತಿರುಗಿದ್ದು ಬೇಸರಕ್ಕೆ ಕಾರಣವಾಗಿತ್ತು.ಮಂಗಳೂರು ಯೂತ್ ಹಾಸ್ಟೆಲ್ ವತಿಯಿಂದ ಹೋಗಿದ್ದ ನನಗೆ ವಿಫಲ ಪ್ರಯತ್ನದ ಕಾರಣ ಅದೊಂದು ಸಣ್ಣ ಪ್ರವಾಸ(ಔಟಿಂಗ್) ಆಗಿತ್ತು ಎನ್ನಬಹುದು.ನಿಮ್ಮಂತಹ ಘಟಾನುಘಟಿಗಳು ಆ ಚಾರಣವನ್ನು ಎಷ್ಟೆಲ್ಲಾ ಸಾಹಸ ಮಾಡಿ ಪೂರೈಸಿದ್ದು ಓದಿ , ನನ್ನ ಪ್ರಯತ್ನ ನಿರರ್ಥಕ ವೇನಲ್ಲ,ಆ ಹಾದಿಯೇ ಕಷ್ಟದ್ದು ಎಂದು ಸಮಾಧಾನ ಪಟ್ಟುಕೊಂಡೆ.ಹಾಗಾಗಿ ಲೇಖನದ ಓದು ಸಂತಸವನ್ನು ಇಮ್ಮಡಿಸಿತು. ನಿಮ್ಮನ್ನೆಲ್ಲಾ ಎದುರುಗೊಳ್ಳಲು ಬೇರೆಯೇ ದಾರಿ ಹಿಡಿದು ಬಂದ ಗೋಖಲೆ ತಂಡ,ಬೊಂಡ ತೆಗೆದುಕೊಂಡು ಹೋದ ಚೀಲವನ್ನು ಸ್ಲೀಪಿಂಗ್ ಮಾಡಿಕೊಂಡವರ ಕತೆಯೆಲ್ಲಾ ರೋಚಕವಾಗಿತ್ತು.ಧನ್ಯವಾದಗಳು
ಈ ಚಾರಣದ ದಿನಾಂಕ ಎಲ್ಲಿಯೂ ನಮೂದಾದಂತಿಲ್ಲ.ಸಾಹಸಕ್ಕೆ ಕಾಲದ ಮಿತಿಯಿಲ್ಲದಿದ್ದರೂ ಕಲಾಂತರದಲ್ಲಿ ಓದುವಾಗ ಕೊರತೆ ಎನಿಸುತ್ತದೆ ಬಹುಶಃ ಆ ಕಾಲಕ್ಕಾಗಲೇ ನಾನು ಕ್ರಿಸ್ತಪೂರ್ವಕ್ಕೆ ಸಂದಿರಬಹುದು! ಬಹುಶಃ ರೂಪದ ಪ್ರಕಟಣೆಯಲ್ಲಿ ಅದು ಇರಲೂಬಹುದು.