(ಧಾರಾವಾಹಿಯ ಮೊದಲ ಭಾಗ)

ಮೂವತ್ತಾರು ವರ್ಷಗಳ ಹಿಂದೆ, ದಕ ಜಿಲ್ಲೆ ಮಿತಿಯೊಳಗೆ ಹೀಗೊಂದು ಕಲಾಪ ನಡೆಸಿದ್ದೆವು ಗೊತ್ತೇ? ಹೌದು, ಪಶ್ಚಿಮ ಘಟ್ಟದ ಕೂಸಾದ ನಾಡಿನಲ್ಲೇ ಘಟ್ಟಗಳನ್ನು ವ್ಯವಸ್ಥಿತವಾಗಿ ಅನುಭವಿಸುವ ಚಟುವಟಿಕೆಗೆ ಪ್ರಚಾರ ಕೊಡುವಂತೆ ನಾವು ಕೆಲವು ಮಿತ್ರರು ಸಂಯೋಜಿಸಿದ ಕಲಾಪ ಈ ಪರ್ವತಾರೋಹಣ ಸಪ್ತಾಹ. ಬಾಲ್ಯದ ಊರು – ಮಡಿಕೇರಿ, ನನ್ನೊಳಗೆ ಬೆಟ್ಟಗುಡ್ಡಗಳ ಮೋಹವನ್ನೇನೋ ಬೆಳೆಸಿತ್ತು. ತಂದೆ – ಜಿಟಿ ನಾರಾಯಣ ರಾವ್, ನಡೆಸುತ್ತಿದ್ದ ಎನ್ಸಿಸಿ ಚಟುವಟಿಕೆಗಳ ಪ್ರಭಾವದಲ್ಲಿ ಬೆಟ್ಟ ಏರುವ, ದೀರ್ಘ ನಡಿಗೆಯ ಹವ್ಯಾಸ ನನ್ನಲ್ಲಿ ದೃಢವಾಗಿತ್ತು. ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯ ವಿ. ಗೋವಿಂದರಾಜರ ಶಿಷ್ಯತ್ವದಲ್ಲಿ ನಾನು ಪಳಗಿದ ಪರ್ವತಾರೋಹಿಯೇ ಆದೆ. ಮುಂದೊಂದು ದಿನ, ಸಾಹಸಯಾನದಿಂದ ಮರಳುವಲ್ಲಿ ವಿಳಂಬಿಸಿದ ತಂಡವೊಂದರಲ್ಲಿ ಭಾಗಿಯಾದವನ ಹಿರಿಯರೊಬ್ಬರು ಉದ್ಗರಿಸಿದ್ದರು “ಎಂಥದದು ಪರ್ವತಾರೋಹಣ. ಇಲ್ಲೇ ನಮ್ಮ ಹಿತ್ತಿಲಿನ ಗುಡ್ಡೆ ಏರಿದರ ಸಾಲದೇ?” ಅಷ್ಟೇ ಅಲ್ಲ, ಗುಡ್ಡೆಗಳ ಸರಣಿಯನ್ನೇರುವುದು, ಬಂಡೆ ಮೆಟ್ಟುವುದು, ಪ್ರಾಕೃತಿಕ ಋತುಮಾನಗಳ ವಿಪರೀತ – ಅಂದರೆ ಬಿಸಿಲು, ಮಳೆ, ಚಳಿ, ಹಿಮ ಇತ್ಯಾದಿಗಳಿಗೆ ಹೊಂದಿಕೊಳ್ಳುವುದು, ಕಾಡು ತಿಳಿಯುವುದು, ವನ್ಯಜೀವಿಗಳನ್ನು ಅರಿಯುವುದು, ಶಿಬಿರ ವಾಸ ಹೀಗೆ ಪಟ್ಟಿ ಮಾಡಿದಷ್ಟೂ ಮುಗಿಯದ ಪ್ರಾಕೃತಿಕ ಸೋಜಿಗಗಳ ಅನಾವರಣ ಪರ್ವತಾರೋಹಣ. ಮಂಗಳೂರಿನಲ್ಲಿ ನಾನು ೧೯೭೫ರಲ್ಲಿ ಅತ್ರಿ ಬುಕ್ ಸೆಂಟರ್ ಮಳಿಗೆ ತೆರೆದು ವೃತ್ತಿಪರವಾಗಿ ನೆಲೆಸುವುದರೊಂದಿಗೆ ನನ್ನ ಪರ್ವತಾರೋಹಣ ಹವ್ಯಾಸವೂ ಭದ್ರ ನೆಲೆಗಂಡಿತ್ತು. ೧೯೭೫ರಲ್ಲಿ ಮಂಗಳೂರು ನನ್ನೂರಲ್ಲ. ಹುಟ್ಟೂರು ಮಡಿಕೇರಿ, ಬೆಳೆದೂರು ಬಳ್ಳಾರಿ, ಬೆಂಗಳೂರು ಮತ್ತು ಮೈಸೂರು. ಇಲ್ಲಿ ನನಗೆ ಗೆಳೆಯರಿರಲೇ ಇಲ್ಲ.

ಮೈಸೂರಿನ ಪರಿಚಯದ ಪಂಡಿತಾರಾಧ್ಯ ಇಲ್ಲಿ ಅಧ್ಯಾಪಕರಾಗಿದ್ದ ನೆಪದಿಂದ ಗೆಳೆಯರಾದರು. ಪುಸ್ತಕದಂಗಡಿಯೊಡನೆ ನನ್ನ ಸ್ನಾತಕೋತ್ತರ ಪದವಿಯ ನೆಪದಲ್ಲಿ ಕೆ.ಎಲ್ ರೆಡ್ಡಿ, ಪಾ.ನ.ಮಯ್ಯ, ಎಚ್. ಜಯಂತ ಮೊದಲಾದ ವಿವಿಧ ಕಾಲೇಜಿನ ಅಧ್ಯಾಪಕರುಗಳು ಆತ್ಮೀಯರಾದರು. ಆಗಿನ್ನೂ ಏಕಾಂಗಿಯಾಗಿದ್ದ ನನಗೆ ಕುಟುಂಬ ಮಿತ್ರ ಬಿ.ವಿ ಕೆದಿಲಾಯರು ತಮ್ಮ ವಾರ್ಡನ್‍ಶಿಪ್ಪಿನ ಅಲೋಶಿಯಸ್ ಕಾಲೇಜು ಸಸ್ಯಾಹಾರಿ ಹಾಸ್ಟೆಲ್ಲಿನಲ್ಲಿ ಕೋಣೆ ಒದಗಿಸಿದ್ದರಿಂದ ಅಲ್ಲೇ ಇದ್ದ ಇನ್ನೂ ಕೆಲವು ವೃತ್ತಿ ನಿರತ ಸ್ನೇಹಜೀವಿಗಳು – ರಾಘವೇಂದ್ರ ಉರಾಳ, ಜನಾರ್ದನ ಪೈ, ನರಸಿಂಹ ಸ್ವಾಮಿ ಮುಂತಾದವರೂ ಆತ್ಮೀಯವಾಗಿ ಒದಗಿ ಬಂದರು. ಕೊನೆಯದಾಗಿ ಅಂಗಡಿಯಲ್ಲಿ ನಾನು ಪುಸ್ತಕ ಮಾರುವುದರೊಡನೆ ಔಚಿತ್ಯ ಮೀರದಂತೆ ಬೆಳೆಸುತ್ತಿದ್ದ ಇತರ ಮಾತುಗಳಿಂದಲೂ ಗೆಳೆತನದ ಕೂಟ ಬಲಗೊಂಡಿತು. ಇವರೊಳಗೆ ಕೇವಲ ಬಾಯಿಮಾತಿನ ಪ್ರಚಾರ ಕೊಟ್ಟು, ಈಗಾಗಲೇ ಹಲವು ಮಾತುಗಳಲ್ಲಿ ಮತ್ತು ಲೇಖನಗಳಲ್ಲಿ ನಾನು ಹೇಳಿಕೊಂಡಂತೆ, ವಾರದ ರಜಾ ದಿನಗಳಲ್ಲಿ, ಹಬ್ಬ ಮುಂತಾದ ವಿಶೇಷ ಬಿಡುವುಗಳಲ್ಲಿ ಜಿಲ್ಲೆಯೊಳಗೆ ಧಾರಾಳ ಅಲೆದಾಡಿದೆ.

ಕುಮಾರಪರ್ವತ ಕುದುರೆಮುಖಗಳಂಥ ಶಿಖರಗಳು, ಜಾಂಬ್ರಿ ನೆಲ್ಲಿತೀರ್ಥದಂಥ ಗುಹೆಗಳು, ಜಮಾಲಾಬಾದ್ ಕೊಡಂಜೆಯಂಥ ಮಹಾಬಂಡೆಗಳು, ಜೋಗ ಬಂಡಾಜೆಯಂಥ ಜಲಪಾತಗಳು, ಅಸಂಖ್ಯ ಕಾಡುಗಳು, ಕಚ್ಚಾ ದಾರಿಗಳು ಹೀಗೇ ಮಿತಿಯಿಲ್ಲದ ವೈವಿಧ್ಯಗಳನ್ನು ಅನುಭವಿಸುತ್ತಲೇ ಇದ್ದೆ. ಮಂಗಳೂರು ಆತ್ಮೀಯವಾಗುತ್ತ ಬಂತು. ವಾಸ್ತವದಲ್ಲಿ ವೃತ್ತಿಯ ಅಗತ್ಯಕ್ಕೆ ಆರಿಸಿಕೊಂಡ ಊರು ಇಂದು ನನ್ನದೇ ಆಗಿರುವುದು ಪರ್ವತಾರೋಹಣದಿಂದ!

ಮಿತ್ರವಲಯದಲ್ಲಿ ನಮ್ಮ ಪರ್ವತಾರೋಹಿ ಕೂಟಕ್ಕೊಂದು ಹೆಸರು ಬೇಕು ಎನ್ನುವ ಒತ್ತಡ ಬಂದಾಗ ಸಹಜವಾಗಿ ತೇಲಿ ಬಂತು – ಆರೋಹಣ ಪರ್ವತಾರೋಹಿಗಳು ಸಾಹಸಿಗಳು. ಇದನ್ನು ಔಪಚಾರಿಕ ಕೂಟ ಮಾಡಿ, ಒದಗುವ ಹಣದಲ್ಲಿ ಪರ್ವತಾರೋಹಣದ ಕನಿಷ್ಠ ಸಲಕರಣೆಗಳನ್ನಾದರೂ ಒಟ್ಟು ಮಾಡಬೇಕೆಂದು ಒಮ್ಮೆ ಪ್ರಯತ್ನ ಶುರು ಮಾಡಿದ್ದೆ. ಆರಂಭಿಕ ಶುಲ್ಕ ರೂ ಹದಿನೈದು, ವಾರ್ಷಿಕ ನವೀಕರಣಕ್ಕೆ ರೂ ಹತ್ತು. ಹತ್ತು-ಹನ್ನೆರಡು ಮಿತ್ರರು ನೋಂದಾಯಿಸಿಕೊಂಡರು. ಆದರೆ ಆ ಹಣ – ಸುಮಾರು ಇನ್ನೂರು ರೂಪಾಯಿ, ಕನಿಷ್ಠ ಒಂದು ರಕ್ಷಣಾ ಹಗ್ಗಕ್ಕೂ ಸಾಲುತ್ತಿರಲಿಲ್ಲವಾದ್ದರಿಂದ ನಾನು ಶಿಲಾರೋಹಣದ ಯೋಚನೆ ಬಿಟ್ಟು, ಸಾಧ್ಯ ಚಟುವಟಿಕೆಗಳನ್ನಷ್ಟೇ ಮುಂದುವರಿಸಿಕೊಂಡಿದ್ದೆ.

ನಮ್ಮ ವ್ಯವಸ್ಥೆ ಹೇಗಿತ್ತೆಂದರೆ, ಯಾವುದೇ ಕಲಾಪದಲ್ಲಿ ಯಾರೂ ಭಾಗಿಯಾಗಬಹುದಿತ್ತು – ಸದಸ್ಯತ್ವದ ನೋಂದಣಿ ಕಡ್ಡಾಯವಿರಲಿಲ್ಲ. ಪ್ರತಿ ಕಾರ್ಯಕ್ರಮದಲ್ಲೂ ಅಂದಂದಿನ ವಾಸ್ತವಿಕ ಖರ್ಚನ್ನು, ಅಂದರೆ ಪ್ರಯಾಣ, ತಿಂಡಿತೀರ್ಥ ಹಾಗೂ ಕೆಲವೇ ಪ್ರಸಂಗಗಳಲ್ಲಿ ಹೊರಗಿನ ಮಾರ್ಗದರ್ಶಿ ಅನಿವಾರ್ಯವಾದರೆ ಆತನ ಸಂಬಳದ ವೆಚ್ಚಗಳನ್ನು ನಾನೂ ಸೇರಿದಂತೆ ಭಾಗಿಗಳಲ್ಲಿ ಸಮನಾಗಿ ಹಂಚಿ ಮುಗಿಸಿಬಿಡುತ್ತಿದ್ದೆ. ಹೀಗೆ ಒಂದು ವರ್ಷ ಕಳೆದಂದು, ನೋಂದಣಿ ಶುಲ್ಕ ಕೊಟ್ಟೂ ಅದುವರೆಗೆ ಯಾವುದೇ ಕಲಾಪದಲ್ಲಿ ಭಾಗಿಯಾಗದ ಓರ್ವ ವಿದ್ಯಾರ್ಥಿ ಸದಸ್ಯ ಅಂಗಡಿಗೆ ಬಂದಿದ್ದ. ಆತ ಪರೋಕ್ಷವಾಗಿ ಸಾರ್ವಜನಿಕ ಹಣದ ಕುರಿತು ಸಂಗ್ರಾಹಕನಿಗಿರಬೇಕಾದ ಬಾಧ್ಯತೆಯ ವಿಚಾರದಲ್ಲಿ ನನ್ನ ಕಣ್ಣು ತೆರೆಸಿದ. ಆತನೊಡನೆ ನಡೆದ ಸಂಭಾಷಣೆಯ ಸೂಕ್ಷ್ಮ ಹೀಗಿತ್ತು.

ಆತ: ಆರೋಹಣ ಏನು ಮಾಡುತ್ತಿದೆ?

ನಾನು ಆ ವರ್ಷದಲ್ಲಿ ನಡೆದ ಕೆಲವು ಕಲಾಪಗಳ ಪಟ್ಟಿ ಮಾಡಿದೆ.

ಆತ: ನನಗೆ ಒಂದರಲ್ಲೂ ಅವಕಾಶವಾಗಲೇ ಇಲ್ಲ.

ನಾನು ಮೌನಿ.

ಆತ: ಆರೋಹಣದ ಸದಸ್ಯರ ಒಂದು ಮಹಾಸಭೆಯಾಗಬೇಕು.

ನಾನು: ಯಾಕೆ?

ಆತ: ಪರಸ್ಪರ ಪರಿಚಯಕ್ಕೆ ಮತ್ತು ಪರ್ವತಾರೋಹಣದ ಕುರಿತು ವಿಚಾರವಿನಿಮಯಕ್ಕೆ.

ನಾನು: ನಮ್ಮ ಬೆಟ್ಟ ಹತ್ತುವ ಕಲಾಪಗಳಲ್ಲಿ ಅದು ಸಹಜವಾಗಿಯೇ ಆಗುತ್ತಾ ಇದೆ.

ಆತ: ಅದಲ್ಲ, ಆರೋಹಣದ ಸ್ವರೂಪದ ಕುರಿತು ಚರ್ಚೆ ಆಗಬೇಕು. ಇದೇನು ಡೆಮೋಕ್ರಾಟಿಕ್ಕೋ…

ನನಗೆ ರೇಗಿತು. ಆತನ ಮಾತು ಕತ್ತರಿಸಿ ನಾನು “ಇಲ್ಲ, ಡಿಕ್ಟೆಟೋರಿಯಲ್. ಇಲ್ಲಿ ಪರ್ವತಾರೋಹಣದ ಕುರಿತು ನಾನೊಬ್ಬನೇ ತಿಳಿದವ. ಅದರ ಹೊರತು ಬೇರೆ ಮಾತುಗಳಿಗೆ ಸಭೆ ಸೇರಿಸುವುದರಲ್ಲಿ ಅರ್ಥ ಇಲ್ಲ” ಎಂದೆ. ಆತ ಅಷ್ಟೇ ಖಡಕ್ಕಾಗಿ “ಮತ್ತೆ ನನ್ನ ಮೆಂಬರ್ ಶಿಪ್ಪಿನ ವರ್ತ್?” ಎಂದೇ ಕೇಳಿದ. ನನಗೆ ಜ್ಞಾನೋದವಾಯ್ತು. ನಾನು ಕೂಡಲೇ ಆತನಿಗೆ ಹದಿನೈದು ರೂಪಾಯಿ ಮರುಪಾವತಿಸಿದೆ. ಮುಂದೆ ಸದಸ್ಯತ್ವ ಮತ್ತು ಹಣ ಸಂಗ್ರಹಿಸುವ ಚಟುವಟಿಕೆಗಳೆಲ್ಲವನ್ನೂ ಇಲ್ಲವಾಗಿಸಿದೆ.

ಇಲ್ಲೇ ಆರೋಹಣ ಸಾಂಸ್ಥಿಕ ರೂಪ ಪಡೆಯದೇ ಉಳಿದ ಕುರಿತು ಇನ್ನೊಂದು ಘಟನೆಯನ್ನೂ ಹೇಳಿಬಿಡುತ್ತೇನೆ. ನಾವು ಜಮಾಲಾಬಾದಿನ ನೇರ ಮುಖ ಹತ್ತಿದ್ದಾಗಿತ್ತು. ಅದನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನೋಂದಾಯಿಸಬೇಕೆಂದು ಮಿತ್ರ ವರ್ಗದಿಂದ ಒತ್ತಾಯ ಬಂತು. ನಾನು ಅದನ್ನು ಒಪ್ಪಿ, ಜಿಲ್ಲಾಧಿಕಾರಿ ಕಛೇರಿಗೆ ಹೋಗಿದ್ದೆ. ವರದಿರೂಪದ ಒಂದು ಪತ್ರವನ್ನು ಕೊಟ್ಟು, ಸ್ವೀಕೃತಿಯನ್ನೂ ಪಡೆದು ಬಂದಿದ್ದೆ. ಇದನ್ನು ಹಿಂಬಾಲಿಸಿ ಬಂದ ಮಳೆಗಾಲದಲ್ಲೊಂದು ರಾತ್ರಿ ಶಿರಾಡಿ ಘಾಟಿಯಲ್ಲಿ ಭಾರೀ ಭೂಕುಸಿತವಾಗಿತ್ತು. ಕೆಲವು ನಿಶಾಚರಿ ಬಸ್ಸುಗಳು ನಡುವೆ ಸಿಲುಕಿಕೊಂಡ ವರದಿಗಳು ಬರುತ್ತಿದ್ದಂತೆ ಜಿಲ್ಲಾಧಿಕಾರಿ ಕಛೇರಿ ಜಾಗೃತವಾಯ್ತು. ದಟ್ಟ ಕಾಡು, ಜಡಿಮಳೆಯಲ್ಲಿ ಜನರನ್ನು ಪಾರುಗಾಣಿಸಲು ಪರ್ವತಾರೋಹಿಗಳು ಸಹಾಯ ಮಾಡಿಯಾರೆಂದು ಜಿಲ್ಲಾಧಿಕಾರಿಗೆ (ಎಸ್.ಕೆ. ದಾಸ್) ಅನ್ನಿಸಿತು. ನಾವಿಬ್ಬರು (ಬಹುಶಃ ಕಿರಣ್ ಕುಲಕರ್ಣಿ ನನ್ನ ಜತೆಗಿದ್ದರು) ಉಟ್ಟ ಬಟ್ಟೆಯಲ್ಲಿ ಎನ್ನುವಂತೆ ಹೋಗಿದ್ದೆವು. ಅಲ್ಲಿ ನಮ್ಮ ಯಾವ ಸಹಾಯವೂ ಇಲ್ಲದೆ ಪರಿಸ್ಥಿತಿ ತಿಳಿಯಾಗಿತ್ತು. ಆದರೆ ಜಿಲ್ಲಾಧಿಕಾರಿ ನಮ್ಮ ಉತ್ಸಾಹಕ್ಕೆ ಮಾರುಹೋಗಿ, ನಮ್ಮ ಪರ್ವತಾರೋಹಣ ಸಪ್ತಾಹಕ್ಕೆ ಯುವಜನ ಸೇವಾ ಇಲಾಖೆಗೆ ಬಲವತ್ತರವಾದ ಶಿಫಾರಸು ಬರೆದರು. ಆದರೆ ಸರಕಾರೀ ಯಂತ್ರ ಸಪ್ತಾಹದ ಕಾಲಕ್ಕೇನೂ ಕೊಡಲಿಲ್ಲ. ಅದು ಕಳೆದು ಒಂದು ದಿನ ಮಂಗಳೂರಿನ ಯುವಜನ ಇಲಾಖಾ ಅಧಿಕಾರಿಯಿಂದ ದೂರವಾಣಿ ಕರೆ ಬಂತು. ಆ ಪ್ರಕಾರ ಈತ ಬೆಂಗಳೂರಿನ ಮಾತೃಸಂಸ್ಥೆಗೆ ಸಹಾಯ ಕೋರಿ ಕಳಿಸಿದ್ದ ಹತ್ತೆಂಟು ಅರ್ಜಿಗಳಲ್ಲಿ ನಮ್ಮದೂ ಸೇರಿ ಕೇವಲ ಎರಡಕ್ಕೆ ಮಾತ್ರ ಅನುದಾನ ಬಂದಿತ್ತು. ಹಾಗೆ ನಮಗೆ ಮಂಜೂರಾದ ರೂ ಏಳ್ನೂರೈವತ್ತನ್ನು ಪಡೆದುಕೊಳ್ಳಲು ನಾವು ಏನೇನೋ ಔಪಚಾರಿಕ ಪತ್ರ ನಮೂನೆಗಳನ್ನು ಭರ್ತಿ ಮಾಡಬೇಕು, ಕಟ್ಟುಪಾಡುಗಳನ್ನು ಅನುಸರಿಸಬೇಕೆಂದೆಲ್ಲಾ ಆತ ತಿಳಿಸಿದ. ನಾನು ಬರವಣಿಗೆಯಲ್ಲೇ ಉತ್ತರಿಸಿದೆ. “ನಾವು ಸಹಾಯ ಕೋರಿದ್ದು ಸಪ್ತಾಹಕ್ಕೆ. ಸದ್ಯ ಅದು ಮುಗಿದು ತಿಂಗಳು ಕೆಲವಾದವು. ಈಗ ಕೊಡುವುದಿದ್ದರೆ ಅದಕ್ಕೆ ಕೈಯಾರೆ ಮಾಡಿದ ಖರ್ಚುಗಳ ಬಾಬ್ತು ಸುಮಾರು ನಾನೂರು ರೂಪಾಯಿ ತುಂಬಿಕೊಡಿ. ಅದಕ್ಕೆ ಪೂರಕವಾಗಿ ವಾಸ್ತವದ ರಸೀದಿಗಳು ಲಗತ್ತು.” ಅಧಿಕಾರಿ ನನ್ನಂಗಡಿಗೇ ಬಂದು ಗೋಳಾಡಿದ, ತಾನು ಮಂಜೂರಾತಿ ಪಡೆದೂ ನಗದೀಕರಿಸಿಕೊಳ್ಳದಿದ್ದರೆ ಅದಕ್ಷತೆಗೆ ಗುರುತಿಸಲ್ಪಡುತ್ತೇನೆ. ದಯವಿಟ್ಟು ದಾಖಲೆಗಳನ್ನು ಕಛೇರಿಗೆ ಬೇಕಾದಂತೆ ಮಾಡಿ, ಹಣ ಒಪ್ಪಿಸಿಕೊಳ್ಳಿ. ನಾನು ಮಣಿಯಲಿಲ್ಲ ಮತ್ತು ಮುಂದೆ ನನ್ನ ಯಾವ ಚಟುವಟಿಕೆಗಳಿಗೂ ಸರಕಾರೀ ಸಹಾಯವನ್ನು ಯಾಚಿಸಲೇ ಇಲ್ಲ.

ಈಗ ಮೂಲ ಕಥನಕ್ಕೆ ಹೊರಳೋಣ. ನಮ್ಮ ಪರ್ವತಾರೋಹಣ ಚಟುವಟಿಕೆಗಳು ಏರುತ್ತಿದ್ದಂತೆ ಜಿಲ್ಲೆಯಾದ್ಯಂತ ನನಗೆ ಭಾಷಣ ಮುಖ್ಯವಾದ ಕಲಾಪಗಳಿಗೆ ಆಹ್ವಾನಗಳು ಬರುತ್ತಿದ್ದವು. ನಾನವುಗಳನ್ನು ತಿರಸ್ಕರಿಸಿ, ನಮ್ಮೊಡನೆ ಹೊರಾಂಗಣದ ಚಟುವಟಿಕೆಗಳಲ್ಲಿ ಸೇರಿಕೊಳ್ಳುವವರನ್ನು ಮಾತ್ರ ಪುರಸ್ಕರಿಸುತ್ತ ಹೋದೆ. ಇದರ ಉಮೇದ್ವಾರಿಗಳು ಹೆಚ್ಚುತ್ತಾ ಹೋದಾಗ ಮೂಡಿದ ಪರಿಕಲ್ಪನೆ – ಪರ್ವತಾರೋಹಣ ಸಪ್ತಾಹ. ಕಾಲೇಜು ಮಿತಿಯಲ್ಲಿ ಈ ಕಲಾಪಕ್ಕೆ ಹೊಳಪು ಬರಬೇಕಿದ್ದರೆ ಶಿಲಾವರೋಹಣದ ಪ್ರದರ್ಶನಗಳು ತೀರಾ ಅವಶ್ಯ ಎನ್ನುವುದು ನನ್ನ ಮೈಸೂರು ಅನುಭವ ಹೇಳಿತು. ಆದರೆ ಅದಕ್ಕವಶ್ಯವಾದ ಕನಿಷ್ಠ ಸಲಕರಣೆಗಳನ್ನು ಖರೀದಿಸುವುದಿದ್ದರೂ ಸುಮಾರು ಒಂದೂವರೆ ಸಾವಿರ ರೂಪಾಯಿ ಬೇಕಿತ್ತು. ವೃತ್ತಿ ಸಂಬಂಧದಲ್ಲಿ ಬ್ಯಾಂಕ್ ಸಾಲಗಾರನಾದ ನನಗೆ ಅದು ದೊಡ್ಡ ಮೊತ್ತ. ಹಾಗೆಂದು ಹಣ ಸಂಗ್ರಹ ನಮ್ಮ ತತ್ತ್ವಕ್ಕೆ ಒಗ್ಗದು. ಈ ಒಗಟು ಬಿಡಿಸಿದ್ದೊಂದು ಆದಿತ್ಯವಾರ.

ನಾವು ಆರೇಳು ಮಂದಿ ಜಮಾಲಬಾದಿನ ಮೆಟ್ಟಿಲ ಸಾಲು ಬಿಟ್ಟು, ಪೂರ್ವದ ಕಠಿಣ ಮೈ ಏರುವ ಪ್ರಯತ್ನದ ಪ್ರಾಥಮಿಕ ಪರಿಶೀಲನೆ ನಡೆಸಿದ್ದೆವು. (ವಿವರಗಳಿಗೆ ನೋಡಿ: ಗಡಾನ್ ಹತ್ರೀ ಗಡಾಯಿಕಲ್ಲು!) ಕೇವಲ ಐವತ್ತಡಿ ಉದ್ದದ ಒಂದು ದಪ್ಪದ ಹತ್ತಿ ಹಗ್ಗದ ತುಣುಕು ನಮ್ಮ ಸಲಕರಣೆ – ಸಾವಿರದೈನೂರು ಅಡಿಗಳಿಗೂ ಮಿಕ್ಕ ಏರಿಕೆಗೆ ಏನೇನೂ ಸರಿಯಲ್ಲ. ಆಗ ಅಲ್ಲೇ ಸಮೀಪದಲ್ಲಿದ್ದ ಧರ್ಮಸ್ಥಳದ ನೆನಪಾಯ್ತು. ತಂಡದಲ್ಲಿದ್ದ ಪರಿಚಿತರೊಬ್ಬರು ಹೆಗ್ಗಡೆಯವರು ಊರಲ್ಲಿದ್ದಾರೆ ಎಂದೂ ತಿಳಿಸಿದರು. ಸರಿ, ಬಂಡೆ ಅಲ್ಲೇ ಬಿಟ್ಟು ನಮ್ಮ ಸವಾರಿ ಧರ್ಮಸ್ಥಳಕ್ಕೇ ಹೋಯ್ತು. ಹಿಂದೆ ನಾನು ಮಂಗಳೂರಿನಲ್ಲಿ ಪುಸ್ತಕದಂಗಡಿ ತೆರೆಯುತ್ತೇನೆಂದಿದ್ದಾಗ, ತಂದೆ ಜಿಲ್ಲೆಯ ಹಲವು ಪೂರ್ವ ಪರಿಚಿತರಿಗೆ `ಸುದ್ದಿ ಪತ್ರ’ಗಳನ್ನು ಬರೆದದ್ದಿತ್ತು. ಹಾಗೆ ಪತ್ರ ಪಡೆದವರಲ್ಲಿ ೧೯೬೭ರ ಸುಮಾರಿಗೆ ಬೆಂಗಳೂರಿನ ಸರಕಾರೀ ಕಾಲೇಜಿನಲ್ಲಿ ತಂದೆಯ ವಿದ್ಯಾರ್ಥಿಯಾಗಿದ್ದ, ಸದ್ಯ ಧರ್ಮಸ್ಥಳದ ವರಿಷ್ಠರಾಗಿರುವ ವೀರೇಂದ್ರ ಹೆಗ್ಗಡೆಯವರೂ ಒಬ್ಬರು. ಆ ಪತ್ರಕ್ಕೆ ಅವರ ವಿಶಿಷ್ಟ ಉತ್ತರ, ಕೂಡಲೇ ಬಂತು. “ನಮಗೆ ಗ್ರಂಥದಾನ ನೀಡಲು ಯೋಗ್ಯವಾದ ಸುಮಾರು ಎರಡು ಸಾವಿರ ರೂಪಾಯಿ ಮೌಲ್ಯದ ಕನ್ನಡ ಪುಸ್ತಕಗಳನ್ನು ಬಿಲ್ ಸಹಿತ ಕಳಿಸಿಕೊಡಿ.” ಇದು ಆ ದಿನಗಳಲ್ಲಿ ನಾಲ್ಕೈದು ರಟ್ಟಿನ ಪೆಟ್ಟಿಗೆ ತುಂಬುವಷ್ಟು ದೊಡ್ಡದೇ ಬೇಡಿಕೆಯಾಗಿತ್ತು. ಸಂಭ್ರಮದಲ್ಲಿ ನಾನವನ್ನು ಮೈಸೂರಿನಿಂದ ಬಸ್ಸಿನಲ್ಲೇ ಧರ್ಮಸ್ಥಳಕ್ಕೊಯ್ದು, ಹೆಗ್ಗಡೆಯವರಿಗೇ ತಲಪಿಸಿ, ನಗದು ಪಡೆದು ಬಂದದ್ದು ನನ್ನ ಸ್ಮರಣೆಯಲ್ಲಿ ಜಾಗೃತವಿತ್ತು.

ಧರ್ಮಸ್ಥಳದಲ್ಲಿ ಹೆಗ್ಗಡೆಯವರು ಭೇಟಿಗೆ ಸಿಕ್ಕರು. ನಾನು ಸಪ್ತಾಹದ ಯೋಜನೆ ತಿಳಿಸಿದೆ. ಹಣ ಕೇಳಲಿಲ್ಲ, ಕನಿಷ್ಠ ಸಲಕರಣೆಗಳ ಸಹಾಯ ಯಾಚಿಸಿದೆ. ವಸ್ತುಗಳ ವಿವರ, ಅವು ಲಭ್ಯವಿರುವ ದಿಲ್ಲಿಯ ವಿಳಾಸ ಹೆಗ್ಗಡೆಯವರಿಗೆ ಕೊಟ್ಟು `ಸಲಕರಣೆ ದಾನ’ವನ್ನೇ ನಿರೀಕ್ಷಿಸಿದೆ. `ಹಣ ಬೇಡ’ ಎನ್ನುವ ನನ್ನ ನಿಲುವು ಹೆಗ್ಗಡೆಯವರಿಗೆ ಇಷ್ಟವಾಯ್ತು. ಆದರೆ ಅದನ್ನು ತರಿಸುವ ಮತ್ತೆ ಕೊಡುವ ವ್ಯವಸ್ಥೆ ತಮ್ಮಲ್ಲಿಲ್ಲ. ಹಾಗಾಗಿ ನನ್ನ ಅಂದಾಜು ಪಟ್ಟಿಯಂತೇ ನಗದು ಹಣವನ್ನು ಆಗಲೇ ಕೊಟ್ಟರು. ನಾವೇ ಅದನ್ನು ತರಿಸಿ, ಮುಂದೆ ಬಿಲ್ಲನ್ನು ಮಾತ್ರ ತಮಗೆ ಕೊಟ್ಟರೆ ಸಾಕು ಎಂದು ಕಳಿಸಿಕೊಟ್ಟರು. ನಾನು ಹಾಗೇ ಮಾಡಿದೆ.

ಪರ್ವತಾರೋಹಣ ಸಪ್ತಾಹದ ಲಕ್ಷ್ಯ ಇಟ್ಟುಕೊಂಡು ೧೩-೧೧-೮೦ರಂದು ಕದ್ರಿ ಜಿಂಕೆ ಉದ್ಯಾನದ ಅಂಚಿನ, ಅಷ್ಟೇನೂ ಎತ್ತರವಿಲ್ಲದ ಮುರಕಲ್ಲ ದರೆಗಳಲ್ಲಿ ಇದ್ದ ಒಂದು ತುಂಡು ಹತ್ತಿ ಹಗ್ಗ ಮತ್ತು ಎರವಲು ತಂದ ಒಂದೆರಡು ಬಾವಿ ಹಗ್ಗಗಳೊಡನೆ ಶಿಲಾರೋಹಣದ ಅಭ್ಯಾಸಗಳಲ್ಲಿ ತೊಡಗಿಕೊಂಡೆವು. ದಿಲ್ಲಿಯಿಂದ ಸರಿಯಾದ ಸಲಕರಣೆಗಳು ಬಂದ ಕಾಲಕ್ಕೆ ಏಗ್ನೆಸ್ ಕಾಲೇಜಿನ ಅಧ್ಯಾಪಕ ಮಿತ್ರ ಡೊನಾಲ್ಡ್ ಬೊಂದೇಲಿನ ಕಗ್ಗಲ್ಲ ಕೋರೆ ಗುರುತಿಸಿದ್ದರು. ನಾವದನ್ನು ತಮಾಷೆಗೆ `ಡೊನಾಲ್ಡ್ ರಾಕ್ಸ್’ ಎಂದೇ ನಾಮಕರಣ ಮಾಡಿ ಅಭ್ಯಸಿಸಿದೆವು. ಅಲೋಶಿಯಸ್ ಕಾಲೇಜಿನ ಎತ್ತರದ ಮಣ್ಣದರೆ, ಕಲ್ಲಡ್ಕದ ನರಸಿಂಹಪರ್ವತಗಳಲ್ಲೆಲ್ಲ ನಮ್ಮ ಕೂಟ ಹೊಸ ಹೊಸ ಸವಾಲುಗಳನ್ನು ಆರಿಸಿಕೊಂಡು ತರಬೇತಿ ಪಡೆದು, ಸಪ್ತಾಹಕ್ಕೆ ಅಪೂರ್ವ ಕಸುವು ಕೂಡಿಸಿಕೊಂಡಿತು!

೧೯೮೦ರ ಸೆಪ್ಟೆಂಬರ್ ಸುಮಾರಿಗೆ ಸಪ್ತಾಹ ದಿನಾಂಕಗಳನ್ನು ಡಿಸೆಂಬರ್ ೭ ರಿಂದ ೧೩ ಎಂದೇ ನಿಗದಿಸಿ, ವಿವಿಧ ಕಾಲೇಜುಗಳೊಡನೆ ಪತ್ರ ವ್ಯವಹಾರ ನಡೆಸಿದೆ. ನೆನಪಿರಲಿ, ಆ ದಿನಗಳಲ್ಲಿ ದೂರವಾಣಿ ಸಂಪರ್ಕ ಅಸ್ಥಿರವೂ ನನಗೆ ದುಬಾರಿಯೂ ಆಗುತ್ತಿತ್ತು. ಎಲ್ಲ ಅಂಚೆಯ ಮೂಲಕವೇ ಆದರೂ ನಿರಾತಂಕವಾಗಿ ನಡೆಯಿತು. ಅವುಗಳಲ್ಲಿ ಮೊದಲು ಒಪ್ಪಿಕೊಂಡ ಮತ್ತು ಜಿಲ್ಲೆಯ ವಿವಿಧ ಮೂಲೆಗಳನ್ನು ಪ್ರತಿನಿಧಿಸುವ ಏಳು ಕಾಲೇಜುಗಳನ್ನು ಮಾತ್ರ ಆಯ್ದುಕೊಂಡು ಕಲಾಪಗಳನ್ನು ಅಂತಿಮಗೊಳಿಸಿದೆವು. ಕಲಾಪ ನಡೆಯುವಲ್ಲಿನ ಪ್ರದರ್ಶನಕ್ಕೊದಗುವಂತೆ ಬಟ್ಟೆಯ ಬ್ಯಾನರ್, ಕೈ ಖರ್ಚಿಗೆ ಮತ್ತು ಹೆಚ್ಚಿನ ಪ್ರಚಾರಕ್ಕಾಗಿ ರೂಪಾಯಿಗೆ ಒಂದರಂತೆ ಮಾರಲು ನಾಲ್ಕೈದು ಬಗೆಯ ಅಂಟುಚೀಟಿಗಳನ್ನೂ ಹೊರಡಿಸಿದೆವು. ಆರೋಹಣದ ಚಿಹ್ನೆ ಹಾಗೂ ಇತರ ಒಂದೆರಡು ಅಂಟುಚೀಟಿಗಳ ಮೂಲ ಚಿತ್ರವನ್ನು ಎಂದಿನ ಸ್ನೇಹಾಚಾರದಲ್ಲಿ ಯಜ್ಞರು ಮಾಡಿ ಕೊಟ್ಟರು.

ಇಂದಿನ ಖ್ಯಾತ ವ್ಯಂಗ್ಯಚಿತ್ರಕಾರ ಪ್ರಕಾಶ ಶೆಟ್ಟಿ ಇಂಗ್ಲಿಷಿನದ್ದನ್ನೂ ನೀರ್ಚಾಲು ಶಾಲೆಯ ಅಧ್ಯಾಪಕ ಮಿತ್ರ ಬಾಲಮಧುರಕಾನನರೂ ಗುಹಾಚಿತ್ರವನ್ನೂ ತಮ್ಮದೇ ಕಲ್ಪನಾಲಹರಿಯಲ್ಲಿ ಬರೆದು ಕೊಟ್ಟವನ್ನೂ ಪ್ರಸಾರ ಮಾಡಿದ್ದೆವು. ಮಿತ್ರ ಬಳಗ ಅವನ್ನೆಲ್ಲ ಬಹಳ ಉತ್ಸಾಹದಿಂದಲೇ ಮಾರಿದ್ದರು. ಅವರಲ್ಲೂ ಕೆ.ಎಂ.ಸಿ ವಿದ್ಯಾರ್ಥಿ ಗಾಂಧೀದಾಸ್ ಎನ್ನುವ ಮಿತ್ರ ನೂರಕ್ಕೂ ಮಿಕ್ಕು ಮಾರಿದ್ದು, ನಾನು ಮರೆಯುವಂತಿಲ್ಲ. ಆ ದಿನಗಳಲ್ಲಿ ಗೆಳೆಯ ಪಿ.ಕೆ. ನಾಗರಾಜ್ ಸ್ವೋದ್ಯಮದ ಆರಂಭಿಕ ಸಂಕಟಗಳಲ್ಲಿದ್ದರು. ಆದರೆ ಕೂಟದ ಅಭಿಮಾನದಿಂದ ಸಪ್ತಾಹದ ಸಮಗ್ರ ವಿವರಗಳ ಕರಪತ್ರವನ್ನು ಸ್ವಂತ ಖರ್ಚಿನಲ್ಲಿ, ಬೇಕಾದಷ್ಟು ಮುದ್ರಿಸಿ ಕೊಟ್ಟು ಕಳೆಗಟ್ಟಿಸಿದರು. ಸಪ್ತಾಹದಲ್ಲಿ ಭಾಗಿಯಾಗುತ್ತಿದ್ದ ಕೆಲವು ಕಾಲೇಜುಗಳು ಪ್ರತ್ಯೇಕ ಆಮಂತ್ರಣಗಳನ್ನು ಮುದ್ರಿಸಿಕೊಂಡದ್ದೂ ಇತ್ತು.

ಆ ದಿನಗಳಲ್ಲಿ ಪತ್ರಿಕೆಗಳಿಗೆ ಜಾಹೀರಾತಿನ ಮೋಹ ಮೀರಿ ಸುದ್ದಿ-ಪ್ರೀತಿಯೂ ಇದ್ದದ್ದು ನಮ್ಮನುಕೂಲಕ್ಕೆ ಒದಗಿತು. ಅದರಲ್ಲೂ ಮುಖ್ಯವಾಗಿ ಎಚ್. ಮಂಜುನಾಥ ಭಟ್ಟರು, ಇದ್ದದ್ದು ಕೊನೆಯುಸಿರು ಎಳೆಯುತ್ತಿದ್ದ ನವಭಾರತ ಪತ್ರಿಕೆಯೇ ಆದರೂ ಕೊಟ್ಟ ಮೌಲ್ಯಯುತ ಮುನ್ನೋಟ, ವರದಿಗಳು ಇಂದಿಗೂ ಸ್ಮರಣೀಯ. ಆಕಾಶವಾಣಿಯಲ್ಲಿ ಭಾಷಣ ಪ್ರಸಾರವೂ ಆಗಿತ್ತು.

ಸಪ್ತಾಹದ ಉದ್ಘಾಟನಾ ದಿನ ಆದಿತ್ಯವಾರವಾದ್ದರಿಂದ ದಿನ ಪೂರ್ತಿ ಚಟುವಟಿಕೆಗಳನ್ನು ವಿಸ್ತರಿಸಿದ್ದೆವು. ಉಳಿದಂತೆ ಎಲ್ಲ ಕಾಲೇಜುಗಳಲ್ಲಿ ಅಪರಾಹ್ನ ಸುಮಾರು ಮೂರಕ್ಕೆ ಶುರು ಮಾಡುತ್ತಿದ್ದೆವು. ನಮ್ಮದು ಮೂರು ವಿಧದ ಕಲಾಪಗಳು. ಸ್ಥಿರ ಪ್ರದರ್ಶನದಲ್ಲಿ ಮುಖ್ಯವಾಗಿ ಯಜ್ಞರು ವಿಶೇಷ ಮುತುವರ್ಜಿ ವಹಿಸಿ, ಸ್ವಂತ ಖರ್ಚಿನಲ್ಲಿ ದೊಡ್ಡದು ಮಾಡಿಸಿದ್ದ ಹಲವು ಪ್ರಾಕೃತಿಕ ಹಾಗೂ ಆರೋಹಣದ ಚಟುವಟಿಕೆಗಳ ಛಾಯಾಚಿತ್ರಗಳಿದ್ದವು.

ಜತೆಗೆ ನನ್ನ ಮಿತಿಯಲ್ಲಿ ಲಭ್ಯ ಪರ್ವತಾರೋಹಣ ಪುಸ್ತಕಗಳು ಮತ್ತು ಸಲಕರಣೆಗಳನ್ನು ಎಲ್ಲರ ನೋಟಕ್ಕೆ ತೆರೆದಿಡುತ್ತಿದ್ದೆವು. ಸ್ಲೈಡ್ ಪ್ರಾಜೆಕ್ಟರ್ ವ್ಯವಸ್ಥೆಯಿದ್ದ ಕಾಲೇಜುಗಳಲ್ಲಿ, ಅಲ್ಲೇ ಯಜ್ಞರ ಹೆಚ್ಚಿನ ಚಿತ್ರಗಳನ್ನು ಇನ್ನೂ ದೊಡ್ಡ ಆಯಾಮದಲ್ಲಿ ಕಾಣಿಸಿ, ಇಂದಿನ ಭಾಷೆಯಲ್ಲಿ ಹೇಳುವುದಿದ್ದರೆ `ವಾವ್, ಆಸಮ್ಮು, ಸೂಪರ್ರ್‍ಗಳನ್ನು ಸಖತ್ತಾಗಿ ಕಲೆಕ್ಟ್’ ಮಾಡಿದ್ದೆವು! ಎರಡನೇದು ಹೊರಾಂಗಣದಲ್ಲಿ ಪ್ರಾತ್ಯಕ್ಷಿಕೆಗಳು. ಕಾಲೇಜಿನ ಅತ್ಯಂತ ಎತ್ತರದ ತಾಣದ ಕಡಿದಾದ ಮುಖದಲ್ಲಿ ಮುಖ್ಯವಾಗಿ ಶಿಲಾವರೋಹಣದ ವಿವಿಧ ರೂಪಗಳು. ಅನುಕೂಲವಿದ್ದಲ್ಲಿ ಕೃತಕ ಶಿಲಾರೋಹಣ, ನದೀಪಾರುಗಳನ್ನೂ ತೋರಿಸಿದ್ದಿತ್ತು. ಕೊನೆಯದು ಸಭಾ ಕಲಾಪ. ಇಲ್ಲಿ ನಮ್ಮೊಳಗೊಬ್ಬ ಆರೋಹಣದ ಪರಿಚಯವನ್ನು ಆತನದೇ ಮಿತಿಯಲ್ಲಿ ಸಭೆಗೆ ಮಾಡಿಕೊಡುತ್ತಿದ್ದ. ಉಳಿದಂತೆ ಬಹುತೇಕ ನಾನು, ಆಯಾ ಊರಿಗೆ ಸಂಬಂಧಿಸಿದಂತೆ ನಮ್ಮ ಬಳಗ ಸಾಧಿಸಿದ್ದ ಮುಖ್ಯ ಕಲಾಪವೊಂದರ ರೋಚಕ ನಿರೂಪಣೆ ಕೊಡುತ್ತಿದ್ದೆ. ಸ್ವಾಗತ, ಹಾರ, ಸ್ಮರಣಿಕೆ, ಅಧ್ಯಕ್ಷತೆ, ಮುಖ್ಯ ಅತಿಥಿ, ವಂದನೆ ಮುಂತಾದ ಔಪಚಾರಿಕತೆಗಳನ್ನು ಮೊದಲೇ ಸೂಚನೆ ಕೊಟ್ಟು ಬಹುತೇಕ ನಿವಾರಿಸಿದ್ದೆವು ಅಥವಾ ತೀವ್ರ ಕಡಿತಗೊಳಿಸಿದ್ದೆವು!

ಮೊದಲ ದಿನ – ಆದಿತ್ಯವಾರ, ಸಂತ ಅಲೋಶಿಯಸ್ ಕಾಲೇಜಿನಲ್ಲಿನ ಉದ್ಘಾಟನಾ ಕಲಾಪ ತುಸು ಸಪ್ಪೆಯೇ ಆಯ್ತು. ರಜಾದಿನವಾದ್ದರಿಂದ ದೊಡ್ಡ ವಿದ್ಯಾರ್ಥಿ ಗಡಣ ಇರಲೇ ಇಲ್ಲ. ಶರತ್, ಸೂರ್ಯ, ಸುಬ್ರಾಯ ಕಾರಂತ, ಜಯಂತ ಮೊದಲಾಗಿ ಹಲವು ಆರೋಹಣದ ಸದಸ್ಯರು ಅದೇ ಕಾಲೇಜಿನವರಾಗಿಯೂ ಕನಿಷ್ಠ ಹಾಸ್ಟೆಲಿಗರೆಲ್ಲ ಬಂದಿದ್ದರೂ ಸಭೆ ಸಾಕಷ್ಟು ದೊಡ್ಡದೇ ಆಗುತ್ತಿತ್ತು. ಆದರೆ ಕಾಲೇಜಿನ ನಿರುತ್ಸಾಹಕ್ಕೆ ನಮ್ಮಲ್ಲಿರಲಿಲ್ಲ ಮದ್ದು.

ಪ್ರಾಂಶುಪಾಲ ಪಾ| ಲಿಯೋ ಡಿಸೋಜಾ ಉದ್ಘಾಟಿಸಿದರು. ಶರತ್ ಆರೋಹಣದ ಪರಿಚಯಕಾರ. ನಾಟಕ, ಅಣಕಗಳಲ್ಲೆಲ್ಲ ಶರತ್ ಪ್ರವೀಣನೇ ಆದರೂ ವ್ಯವಸ್ಥಿತ ಭಾಷಣ, ಅದರಲ್ಲೂ ಕನ್ನಡದಲ್ಲಿ – ಹೇಳಿ ಪ್ರಯೋಜನವಿಲ್ಲ! ಆತ ಪಟ್ಟ ಕಷ್ಟದ ನೆನಪು ಅಥವಾ ದಾಖಲೆಗಳೇನೂ ಇಂದು ನನ್ನಲ್ಲಿಲ್ಲ. ಆದರೆ ನಾನೇ ಬರೆದು, ೫-೧೨-೮೦ರ ಉದಯವಾಣಿ ಪ್ರಕಟಿಸಿದ ಲೇಖನದ ಪ್ರತಿ ಮಾತ್ರ ಅಂದಿನ ನಮ್ಮ ಆಶಯವನ್ನು ಸ್ಪಷ್ಟಪಡಿಸುತ್ತದೆ ಎಂದು ಭಾವಿಸುತ್ತ ಯಥಾಪ್ರತಿ ಕೊಟ್ಟು ಸದ್ಯ ವಿರಮಿಸುತ್ತೇನೆ. ನೆನಪಿರಲಿ, ಇದು ಮೂವತ್ತಾರು ವರ್ಷಗಳ ಹಿಂದಿನ ಲೇಖನ. ಇದರ ಕೆಲವು ಅಭಿಪ್ರಾಯಗಳಿಂದ ಇಂದು ನಾನು ತೀರಾ ದೂರ ಬೆಳೆದಿದ್ದೇನೆ!

ಆರೋಹಣ ಪರ್ವತಾರೋಹಣ:

ಪ್ರಾಕೃತಿಕ ಸೌಂದರ್ಯದ ಬೀಡು ಈ ಜಿಲ್ಲೆ. ಒಂದೆಡೆ ಭೋರ್ಗರೆಯುವ ನೀಲಿಮೆ, ಇನ್ನೊಂದೆಡೆ ಕಣ್ಣು ತುಂಬುವ ಹಸಿರು. ಹಿಡಿದರೆ ಆರು ತಿಂಗಳು ಸುರಿಯುವ ಮಳೆ, ಬಿಟ್ಟರೆ ಮತ್ತಾರು ತಿಂಗಳು ಬಿರುಬಿಸಿಲು. ಈ ವಿಪರೀತಗಳ ನಡುವಣ ಜನ, ಅಂದರೆ ನಾವು, ಇವುಗಳನ್ನು ಅರ್ಥಮಾಡಿಕೊಳ್ಳದೆ ಕೇವಲ ಉಪಯೋಗ ಮಾತ್ರ ಪಡೆದು ಬದುಕುತ್ತಿರುವುದು ಬೇಸರದ ಸಂಗತಿ. ಉದ್ಯಮೇತರ ಸಾಹಸ ದೃಷ್ಟಿಯಿಂದ ಪ್ರಕೃತಿ, ಮನುಷ್ಯ ನಿರ್ಮಿತ ಪರಿಸರವನ್ನು ಮೀರಿದ ಆನಂದಕ್ಕಾಗಿ ಪ್ರಕೃತಿ, ನಮ್ಮ ಪ್ರವೃತ್ತಿಗಳ ನಿಜ ದರ್ಶನಕ್ಕಾಗಿ ಪ್ರಕೃತಿಯನ್ನು ನೋಡಲು ಗಟ್ಟಿ ನೆಲದ ಮೇಲೆ ಏನೆಲ್ಲಾ ಮಾಡಬಹುದೋ ಅದನ್ನು ತನ್ನದೇ ಮಿತಿಯಲ್ಲಿ ಮಾಡಲು ಹೊರಟ ಸಂಸ್ಥೆ – ಆರೋಹಣ ಪರ್ವತಾರೋಹಿಗಳು ಸಾಹಸಿಗಳು.

ಕುದುರೆಮುಖ ಶಿಖರ, ಸಂತ ಮೇರಿ ದ್ವೀಪ, ಬೇಕಲದ ಕೋಟೆ, ನೆಲ್ಲಿತೀರ್ಥದ ಗುಹೆ, ಜಮಾಲಾಬಾದಿನ ಬಂಡೆ, ಜೋಗದ ಗುಂಡಿ ಆರೋಹಣಕ್ಕೆ ಹಳತು. ಮುಂದೇನು, ನೋಡಿದ್ದರಲ್ಲೇ ಹೊಸತೇನು – ಇದು ಆರೋಹಣದ ಗೀಳು. ಗೀಳಿಗೊಂದು ನಿಶ್ಚಿತ ರೂಪ, ವ್ಯವಸ್ಥಿತ ನಿರ್ವಹಣೆಯೇ ಆರೋಹಣದ ನಾಲ್ಕು ವರ್ಷಗಳ ಸಾಧನೆ. ಸ್ವಾಮೀ ಬಂಡೆ ನೋಡಿದ್ದೀರಾ? ಓಹೋ ಎಂದೀರಾ ತಪ್ಪಾಗಿ! ನೀವು ನೋಡಿದ್ದು ನೋಡಿದ್ದಲ್ಲ. ಬಂಡೆ ಹಲವು ಸಾವಿರ ವರ್ಷಗಳ ತೆರೆದು ಬಿದ್ದ ದಾಖಲೆ. ಇದು ಬಿಸಿಲಿಗೆ ಒಡೆದಿದೆ, ಚಳಿಗೆ ಬಿರಿದಿದೆ, ಗಾಳಿಗೆ ದೂಳೆದ್ದಿದೆ, ಮಳೆಗೆ ಕೊರೆದಿದೆ, ಸಿಡಿಲಿಗೆ ಬಾಯಿಬಿಟ್ಟಿದೆ, ಭೂಕಂಪದಿ ಅದುರಿದೆ – ಸ್ಥಾನಪಲ್ಲಟವನ್ನೂ ಕಂಡದ್ದಿದೆ.

ಕಲ್ಲುಹೂ ಇದರ ಜೀವವಾಗಿ ಅರಳಿದ್ದುಂಟು, ಗಾರಾಗಿ ಸುಟ್ಟದ್ದುಂಟು. ಅದರ ಅವಶೇಷಕ್ಕೆ ಹಾರಿಬಂದು ನೆಲೆಸಿದ ಬೀಜ ಜೊಂಡುಹುಲ್ಲಾಗಿ ಬೆಳೆದದ್ದು, ತೇಲಿ ಬಂದ ವಟವೃಕ್ಷದ ಬೀಜ ಮೊಳೆತು ಬೇರುಬಿಟ್ಟು ಬಂಡೆಯನ್ನೇ ಅಪ್ಪಿ, ನುಂಗಿದ್ದುಂಟು. ಸೆರೆಯಲ್ಲಿ ಸೆಲೆ ಮೂಡಿ ಜೀವ ಜಾಗೃತಿಯಾದಾಗ ಇದು ಜನಕ. ತನ್ನ ಪೊಳ್ಳು, ಗುಹೆಗಳಲ್ಲಿ ಪಕ್ಷಿ, ಪ್ರಾಣಿಗಳನ್ನು ಪೋಷಿಸಿದಾಗ ರಕ್ಷಕ. ಬಂಡೆಯ ಈ ಹತ್ತು ಹಲವನ್ನು ನೋಡುವುದು, ಅದರ ವಿವಿಧ ಮುಖ ನೇವರಿಸಿ ನೆತ್ತಿಯನ್ನಡರುವುದು ಸದಾ ವಿಶಿಷ್ಟ ಅನುಭವ. ಬಂಡೆ ಸಾವಿರದಲ್ಲಿ ಆರೋಹಣಕ್ಕೆ ಸಿಕ್ಕಿದ ಕೆಲವು ಜಮಾಲಾಬಾದ್, ಕೊಡಂಜೆಕಲ್ಲು, ಯಾಣದ ಭೈರವ ಮೋಹಿನಿ ಶಿಖರಗಳು, ಏರಿಕಲ್ಲಿನ ಶಿಖರ, ಅಮೆದಿಕ್ಕೆಲಿನ ದಿಕ್ಕೆಲ್, ನರಹರಿ ಬೆಟ್ಟ, ಕಾರಿಂಜ ಇತ್ಯಾದಿ ಸ್ಮರಣೀಯ.ಇವನ್ನು ವಿಶೇಷವಾಗಿ ಏರುವಲ್ಲಿ ಶಿಲಾರೋಹಣದ ಪಾಠ, ಸಲಕರಣೆಗಳು ಅಗತ್ಯ. ಅವನ್ನು ಸಮರ್ಥವಾಗಿ ಪೂರೈಸಿಕೊಂಡದ್ದಕ್ಕೇ ಜಮಾಲಾಬಾದಿನ ಪೂರ್ವ ಮೈ, ಕೊಡಂಜೆ ಕಲ್ಲಿನ ನೇರ ಮೈ ವಿಜಯಗಳು ಆರೋಹಣಕ್ಕೆ ಮಾತ್ರ ನನಸಾಗಿವೆ.

ಅವು ಒಲಿಯುವಲ್ಲಿ ಬಂಡೆ ಕಡಿದುರುಳಿದರೂ ಕೂದಲು ಕೊಂಕದೆ, ಹೆಜ್ಜೇನು ಸಹಸ್ರ ಸಂಖ್ಯೆಯಲ್ಲಿ ಕುಟುಕಿದರೂ ಧೃತಿಗೆಡದೆ, ಪ್ರಪಾತದಂಚಿನಲ್ಲಿ ನೇತಾಡಿದರೂ ಜೀವಕ್ಕೆರವಾಗದೆ, ಮಳೆಗಾಲದ ಪಾಚಿಗಟ್ಟಿದಲ್ಲೂ ಉಳುಕಿಲ್ಲದೆ ಬಂಡೆಗಳನ್ನು ಜಯಿಸಿದ್ದು ಆರೋಹಣದ ವೈಶಿಷ್ಟ್ಯ ಮತ್ತು ಸಾಹಸಕ್ಕೆ ಋತುಮಾನಗಳಿಲ್ಲ ಎನ್ನುವುದಕ್ಕೆ ಸಾಕ್ಷಿಯೂ ಹೌದು.

ಕಾಡು ಕರೆಯುತ್ತದೆ – ಬಳ್ಳಿಯ ತೋರಣ ಕಟ್ಟಿ, ಚಿಗುರ ಚಪ್ಪರ ಹಾಕಿ, ತರಗೆಲೆಯ ನಡೆಮಡಿ ಹಾಸಿ, ತಳಿರು ತಂಗಾಳಿ ಬೀಸಿ, ಸುಮದ ಕಂಪ ಸೂಸಿ ಕರೆಯುತ್ತಿದೆ! ಇಲ್ಲಿ ಕಿರುತೊರೆಯ ಶೀತಲ ನೀರೇ ಪಾನಕ, ಎಲೆಗಳ ಮರ್ಮರವೇ ವಾದ್ಯ, ಮಿಡಿತೆ ಹಕ್ಕಿಗಳ ಉಲಿಯೇ ಸ್ತುತಿ – ಕಾಡೊಂದು ನಂದನ. ಅಡ್ಡಗಟ್ಟುವ ಬಲ್ಲೆ ಬೇಕೇ, ಬೀಳಹೊಯ್ಯುವಂತೆ ಕಾಲ ತೊಡರುವ ಬಳ್ಳಿ ಬೇಕೇ, ಆಗಸವನೆತ್ತಿ ಹಿಡಿದ ಬೋದಿಗೆಗಳಂಥ ಮರ ನೋಡಬೇಕೇ, ಮುಟ್ಟಿದರೂ ನಲುಗುವ ಕೋಮಲ ಪಲ್ಲವ ಕಾಣಬೇಕೇ ಬನ್ನಿ ಕಾಡಿಗೆ. ಮದೋನ್ಮತ್ತ ಸಲಗ ಬೆನ್ನಿಗೆ ಬೀಳಲು, ಬೆದರಿದ ಹುಲ್ಲೆಯ ಹಿಂಡನ್ನಟ್ಟಲು, ಧುತ್ತೆಂದು ಕೆಂಗಣ್ಣ ಕಾಟಿ ಎದುರಾದಾಗ ಪರಸ್ಪರ ದಿಕ್ಕಾಪಾಲಾಗಲು ಬೇಡವೇ ಕಾಡುವ ಕಾಡು? ಬಿಳಿಯುಕ್ಕುವ ಜಲಪಾತವ ಸುತ್ತಿ, ಹಸುರಿಡಿದ ಎಲೆಗಳ ತೊಟ್ಟು, ಹುಲ್ಲಿನಲ್ಲಿ ಚಿನ್ನವಿಟ್ಟು, ಜೇಡನ ಬಲೆಯ ಮಂಜಿನ ಮಣಿಗಳ ವರಣಮಾಲೆ ಹಿಡಿದು ವನರಮಣಿ ಕರೆಯುತ್ತಿದ್ದಾಳೆ “ಏಳಿ, ಓ ಹೇಳಿ, ಹೊರಡಿ, ಹಾಂ, ನಿಲ್ಲಿ ನಿಲ್ಲಿ!”

ಜಾಡಿಲ್ಲದ ಕಾಡಿಗೆ ನುಗ್ಗಲು ತಂತ್ರ ಬೇಕು, ಮರಳಿ ಬರಲು ದಾರಿ ಗುರುತಿರಬೇಕು, ಬಾಯಾರಿಕೆಗೆ ನೀರು ಹುಡುಕಲು ಬೇಕು, ಉಳಿಯುವುದೇ ಆದರೆ ಹಸನಾದ ಜಾಗ ಆರಿಸಬೇಕು, ಎಲ್ಲಕ್ಕು ಬೇಕು ಆರೋಹಣ ಪ್ರಜ್ಞೆ. ಮೋಹಿನಿ ಭಯದಿಂದ ಜನನುಗ್ಗದ ಆದರೆ ನಮಗೆ ಸೋತ ಪೂಮಲೆ ಕಾಡು, ಹಿರಿಮರುದುಪ್ಪೆಯಿಂದ ನೇರ ಐದು ಸಾವಿರ ಅಡಿ ಕಿಲ್ಲೂರಿಗಿಳಿಯುವಲ್ಲಿ ಅಡ್ಡಗಟ್ಟುವಲ್ಲಿ ವಿಫಲವಾದ ಕಾಡು, ಏರು ಕಲ್ಲಿನಿಂದ ಮರಳುವಲ್ಲಿ ಜಾಡುಮಾಸಿದರೂ ತಡೆಹಿಡಿಯಲಾರದ ಕಾಡುಗಳೆಲ್ಲ ಇದಕ್ಕೆ ಸಾಕ್ಷಿ. ಹೆಚ್ಚೇಕೆ, ಉದ್ದೇಶಪಟ್ಟೇ ಕತ್ತಲಿನಲ್ಲೂ ಕುದುರೆಮುಖ, ವಾಲಿಕುಂಜ, ಜಮಾಲಾಬಾದ್ ಏರುವಲ್ಲಿ, ನಾವೂರು, ಕಿಲ್ಲೂರು, ಶಿಶಿಲ, ಶಿರ್ಲಾಲ್ ಮುಂತಾದ ಹಳ್ಳಿ ಮೂಲೆಗೆ ನಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಮತ್ತು ಸಾಹಸಕ್ಕೆ ಹೊತ್ತು ಗೊತ್ತುಗಳೂ ಇಲ್ಲವೆಂದು ಸಾರಿದ್ದೇವೆ.

ಒಂದು ಶಿಸ್ತಾಗಿ ಪರ್ವತಾರೋಹಣವನ್ನು ಕಾಣದವರು ಮಾರ್ಗದರ್ಶಿ ಹಿಡಿದು ಸವಕಲು ಜಾಡಿನಲ್ಲಿ ಬೆಳ್ತಂಗಡಿಯಿಂದ ಕಷ್ಟದ ಏರಿನಲ್ಲೇ ನಾವೂರು ಹೇವಳವಾಗಿ ಕುದುರೆಮುಖ ಶಿಖರ ತಲಪುವುದಿರಬಹುದು. ವಾಪಾಸಾಗುವಲ್ಲಿ ಸುಲಭ ಮಾರ್ಗವಾಗಿ ಹೇವಳ, ಸಂಸೆಗಾಗಿ ಹೊರಡುವುದೂ ಇರಬಹುದು. ಇಲ್ಲಾ ಹೀಗೇ ಕುಮಾರ ಪರ್ವತವನ್ನೋ ಕೊಡಚಾದ್ರಿಯನ್ನೋ ಮತ್ತೊಂದನ್ನೋ ಮಾಡಿ ಮುಗಿಯಿತೆನ್ನಿಸಬಹುದು.

ಆದರೆ ಚಾರ್ಮಾಡಿಯಿಂದ ಅಪ್ಪಟ ಕಾಡಿನಲ್ಲಿ ಘಟ್ಟವನ್ನುತ್ತರಿಸಿ ಶಿರಾಡಿಗೆ ನಡೆದವರುಂಟೇ? ಸುಬ್ರಹ್ಮಣ್ಯದಿಂದ ಕುಮಾರ ಪರ್ವತ ಏರಿ, ನೇರ ಬಿಸಿಲೆ ದಾರಿಗೆ ಇಳಿದವರುಂಟೇ? ನಾವೂರು ಹೇವಳವಾಗಿ ಹಿರಿಮರುದುಪ್ಪೆ ಏರಿ ಕಿಲ್ಲೂರಿಗೆ ಜಾಡು ಮೂಡಿಸಿದವರುಂಟೇ? ಉಂಟು ಉಂಟು. ತುಳಿದ ದಾರಿ ತಿರುಗಿ ತುಳಿಯದ, ಭೂಪಟ ಹಿಡಿದು ಒಂದೆಡೆ ಹೊಕ್ಕು ಇನ್ನೊಂದೆಡೆ ಹೊರಡುವ ಈ ಕಾರ್ಯಕ್ರಮಗಳು ಆರೋಹಣದ ವಿಜಯಮಾಲೆಯ ಮುತ್ತುಗಳು. ಇವುಗಳ ಉಪೋತ್ಪತ್ತಿ – ಅಮೆದಿಕ್ಕೆಲ್ ಶಿಖರ ಸಾಧನೆ, ಎಂಟ್ನೂರು ಅಡಿಗೂ ಮಿಕ್ಕ ಜಲಪಾತದ ಸಾಂಗತ್ಯ, ಉಪ್ಪಿನಗುಡ್ಡದ ತೀವ್ರ ಕೊರಕಲುಗಳ ಸಾಮೀಪ್ಯ, ಅಸಾಧ್ಯಗಳಲ್ಲಿ ಸಾಯುಜ್ಯ!

ಕಾಡಿನಲ್ಲಿ ರಾತ್ರಿ ಕಳೆಯುವ ಚಂದ ಕೇಳಿ. ವಿಶಾಲ ಬಂಡೆಯ ಮೇಲೆ ಒಣಹುಲ್ಲಿನ ಮೆತ್ತೆ, ಮೇಲಂಚು ಕಟ್ಟಿದೆ ಪುಟ್ಟ ಕಾಡು, ಕೆಳ ಅಂಚಿನಲ್ಲಿ ಮಡುಗಟ್ಟಿದೆ ತೊರೆ. ಶಿಖರ ಪ್ರದೇಶದ ಎರಡು ಎತ್ತರಗಳ ನಡುವಣ ಈ ಪಾತ್ರೆ ಬೀಸುಗಾಳಿಗೆ ಸಿಕ್ಕುವುದಿಲ್ಲ. ಎಲೆಗಳ ನಡುವೆ ತೂರಿ ಬರುವ ಬಿಸಿಲು ಇಲ್ಲಿ ಸೌಮ್ಯ. ರಾತ್ರಿ ಸುರಿದ ಮಂಜೂ ಸಹ್ಯ. ನೂರಡಿ ಮುಂದಿಡೆ ಸ್ವರ್ಗ – ವಲಯದ ಅತ್ಯುನ್ನತ ಕೇಂದ್ರ. ಇನ್ನೂರಡಿ ಈಚೆ ಜಲಪಾತ. ಹಿಂದಡಿಯಿಟ್ಟರೆ ಕಡವೆ ಕಾಟಿಗಳ ಸಹಜ ವಿಹಾರದ ನೋಟ. ಸುತ್ತ ಮುತ್ತ ಇತಿಹಾಸ ಕಾಲದಲ್ಲಿ ಜನ ನೆಲೆಸಿದ್ದ ತಾಣ, ಇಂದು ಮಾತ್ರ ನಿರ್ಜನ, ನಿರ್ಮಲ. ಇದೆಲ್ಲ ಎಲ್ಲಿ? ಮತ್ತೆಲ್ಲಿ, ಕುದುರೆಮುಖ ಶಿಖರದಲ್ಲಲ್ಲದೆ! ಅಲ್ಲದಿದ್ದರೂ ಉಳಿದೆಡೆಗಳಲ್ಲೂ ಶಿಬಿರ ಹೂಡುವ ಕಾರ್ಯ ಯಾವತ್ತೂ ಮೋಜಿನದೇ. ಯೋಗ್ಯ ಸ್ಥಾನದ ಆಯ್ಕೆ, ನೀರು ನಿಡಿ, ನಿದ್ರೆ ನಿಶ್ಚಿಂತೆಗಳ ವ್ಯವಸ್ಥೆಯ ನಿರ್ವಹಣೆ ಆರೋಹಣದಲ್ಲಿ ಸದಾ ಚೊಕ್ಕ.

ನಿಶ್ಚಿಂತೆ ಎಲ್ಲಿಂದ? ಕಾಡಿನಲ್ಲಿ ದುಷ್ಟಮೃಗಗಳು ಇರುವುದಿಲ್ಲವೆ? ಎಂದೂ ಕೇಳುವವರು ಧಾರಾಳ ಇದ್ದಾರೆ. ಮೃಗಗಳೇನೋ ಇವೆ, ಆದರೆ ನೆನಪಿಡಿ ಎಂದೂ ದುಷ್ಟವಲ್ಲ. ಆಕಸ್ಮಿಕವಾಗಿ ಸಮೀಪಿಸುವ ಅವುಗಳನ್ನು ಎಚ್ಚರಿಸಿ ದೂರವಿಡಲು ಶಿಬಿರಾಗ್ನಿ ಸಾಕು. ಸರದಿಯ ಮೇಲಣ ಪಹರೆಯಂತೂ ಇದ್ದೇ ಇರುತ್ತದೆ. ಅಮೆದಿಕ್ಕೆಲ್ಲಿನಲ್ಲಿ ವಿಪರೀತ ಗಾಳಿ, ಧಾರಾಳ ಸೌದೆ ಸಂಗ್ರಹವಿದ್ದು ಕಾಡಿಗೇ ಬೆಂಕಿ ಹತ್ತಿದಂತಿತ್ತು ನಮ್ಮ ಶಿಬಿರಾಗ್ನಿ. ಜಮಾಲಾಬಾದಿನ ಹಿಮ್ಮೈಯ ತಪ್ಪಲಿನಲ್ಲಿ ನಮಗೂ ಜಿಗಣೆಗಳಿಗೂ ಗಡಿರೇಖೆ ಶಿಬಿರಾಗ್ನಿ. ಅಪವಾದ ಇಲ್ಲದಿಲ್ಲ – ಅಪರಾತ್ರಿ ವಾಲಿಕುಂಜ ಏರಿದವರ ಶಿಬಿರಾಗ್ನಿ ಕೇಳುವವರಿಲ್ಲದೆ ನಂದಿತ್ತು. ಹಿರಿಮರುದುಪ್ಪೆಯ `ನೀರ ಮೇಲಣ ಬೆಂಕಿ’ ಹೊಗೆ ಕಾರುವುದರಲ್ಲೇ ತೃಪ್ತವಾಗಿತ್ತು!

ರಾತ್ರಿಯೇನೋ ಶಿಬಿರಾಗ್ನಿ ಇದೆ, ಮತ್ತದರಿಂದ ವನ್ಯ ಮೃಗಗಳು ಮಾರುದೂರ ಸರಿ. ಹಗಲು ಚಾರಣದಲ್ಲಿ ಭದ್ರತೆ ಹೇಗೆ? ನಮ್ಮ ಚಾರಣದ ವೇಳೆಯಲ್ಲೂ ಪ್ರಾಣಿಗಳಿಗೆ ನಮ್ಮೊಡನೆ ಮುಖಾಮುಖಿ ಏರ್ಪಡದಂತೆ ನೋಡಿಕೊಳ್ಳಲು ನಾವು ಸಾಮಾನ್ಯವಾಗಿ ಆಗೀಗ ಹುಯ್ಯಲಿಡುತ್ತ, ಗಟ್ಟಿಯಾಗಿ ಮಾತಾಡುತ್ತಾ ಸಾಗುತ್ತೇವೆ. ಆನೆಗಳ ಭಯ ಜಾಸ್ತಿ ಇದ್ದ ಜಾಡುಗಳಲ್ಲಿ ನಾವು ಪಟಾಕಿ ಸಿಡಿಸುವುದೂ ನಡೆಸಿದ್ದೇವೆ. ಇದಕ್ಕೆ ಸ್ಪಷ್ಟ ಎರಡು ಉದಾಹರಣೆ ಹೇಳುವುದಿದ್ದರೆ – ಕೊಡಚಾದ್ರಿಯಲ್ಲಿ ನಮ್ಮ ಬೊಬ್ಬೆ ಕಾಟಿ ಹಿಂಡನ್ನೇ ಓಡಿಸಿತ್ತು.

ಅದೇ ವಾಲಿಕುಂಜದಲ್ಲಿ ನಮ್ಮ ಮೌನ ಕಡವೆ ಜೋಡಿಯ ದರ್ಶನಕ್ಕೆ ಕಾರಣವೂ ಆಗಿತ್ತು. ಯಾವುದಕ್ಕೂ ಜಗ್ಗದ ನೆರಿಯ ಮಲೆಯ ಆನೆಗೆ ನಾವು ಬೆನ್ನು ತೋರಿಸಿದ್ದು, ಕೊಡಂಜೆ ಕಲ್ಲಿನಲ್ಲಿ ಹೆಜ್ಜೇನು ಪೆಟ್ಟಿಗೆ ನಾವು ಶರಣಾದದ್ದು ಮರೆಯುವಂಥದ್ದಲ್ಲ. ಹರಿದಾಡುವ ಹಾವುಗಳು ಹೆಚ್ಚಾಗಿ ನಮ್ಮ ಬೂಟುಗಾಲಿನ ನೆಲ ಬಡಿತವನ್ನು ಮುಂದಾಗಿಯೇ ಗ್ರಹಿಸಿ ಜಾರಿಕೊಳ್ಳುತ್ತವೆ. ಹಾಗಾಗಿ ಅವೇಳೆಗಳಲ್ಲೂ ದುರ್ಗಮ ಸ್ಥಳಗಳಲ್ಲೂ ಬೇಕಾದಷ್ಟು ಸಂಚರಿಸಿದ ನಮಗೆಂದೂ ಹಾವಿನ ಸಂಪರ್ಕ ಆಗಿಯೇ ಇಲ್ಲ! ಕೊನೆಯದಾಗಿ, ಯಾವುದೇ ಕಾಯಿಲೆಗಳಿಗೆ ಕಾರಣವಾಗದ ಜಿಗಣೆ, ಚಿಗಟ, ಸೊಳ್ಳೆ, ತುರಿಕೆ ಸೊಪ್ಪು, ಉರಿ ಸೊಪ್ಪು, ಮುಳ್ಳು ಮುಂತಾದವುಗಳೂ ಇಲ್ಲದಿದ್ದರೆ ಚಾರಣ ಸ್ವಾರಸ್ಯಕರವಾಗುವುದಾದರೂ ಹೇಗೆ?!

ಹೊಟ್ಟೆ ಗಟ್ಟಿಯಿರಬೇಕು, ಘಟ್ಟ ಎದುರಾಗಬೇಕು. ಅದಕ್ಕೆ ಕಟ್ಟಿ ಒಯ್ದ ಬುತ್ತಿ, ಅಲ್ಲದಿದ್ದರೆ ಮಿತ ಪರಿಕರಗಳೊಡನೆ ಗುದ್ದಾಡಿ ನಾವೇ ತಯಾರಿಸುವ ತಿನಿಸು, ಪಾನೀಯಕ್ಕೆ ಹೊಂದಿಕೊಳ್ಳುವುದು ತೀರಾ ಅವಶ್ಯ. ತೊರೆ ಇದ್ದಲ್ಲಿ ಗಂಜಿ, ಕಾಫಿ ಕಾಯಿಸಿದ್ದೇವೆ, ನೀರಿಲ್ಲದಲ್ಲಿ ಸೌತೆ ಮುಸುಂಬಿ ತಿಂದೇ ಸುಧಾರಿಸಿದ್ದೇವೆ, ಯಾಣಕ್ಕೋಡಿ ಬರುವಾಗ ಯಾವ ಅಲಂಕಾರವಿಲ್ಲದ ಹುಡಿ ಅವಲಕ್ಕಿಯೇ ಮೃಷ್ಟಾನ್ನ. ಸಮಯ, ಸಾಧನಗಳು ಕೂಡಿಬಂದಾಗ ಕುದುರೆಮುಖದ ನೆರಳಲ್ಲಿ ಪಾಯಸವನ್ನೂ ಮಾಡಿ ತಿಂದದ್ದುಂಟು!

ಆಕಸ್ಮಿಕಗಳಿಂದ ಸಮಾಜದ ನಡುವೆ ನಮ್ಮ ಸ್ಥಾನಮಾನಗಳು ನಿಶ್ಚೈಸಲ್ಪಡುತ್ತವೆ. ಮಲೆಯಲ್ಲಿ ನಮ್ಮ ಮೂಲಪ್ರವೃತ್ತಿ, ಸ್ಥಾನ ಮಾನ, ಶಕ್ತಿ ಕೊರತೆಗಳೆಲ್ಲ ಸ್ಪಷ್ಟವಾಗುತ್ತವೆ. ಊರಿನ ಹೀರೋ ಇಲ್ಲಿ ಜೀರೋವಾಗಬಹುದು, ಅಲ್ಲಿನ ಹೆಡ್ಡ ಇಲ್ಲಿ ದಡ್ಡರನ್ನು ಪಾರುಗಾಣಿಸಬಹುದು.

ನಿರೀಕ್ಷೆಯಿಲ್ಲದಂದು ಕುಮಾರಪರ್ವತದಲ್ಲಿ ಮಳೆ ಬಂತು. ಇದ್ದ ಹತ್ತಿ ಹೊದಿಕೆಯನ್ನೇ ಕಾಡುಬಳ್ಳಿಗಳಲ್ಲಿ ಓರೆ ಬಿಗಿದು ಕಟ್ಟಿ ಮರೆಯಲ್ಲಿ ಬೆಚ್ಚನೆ ರಾತ್ರಿ ಕಳೆದದ್ದು ಸಣ್ಣ ಸಾಧನೆಯಲ್ಲ. (ಇದಕ್ಕೆ ಪ್ರೇರಣೆಯನ್ನು ತಾತಾರ್ ಶಿಖರಾರೋಹಣದಲ್ಲಿ ಕಾಣಬಹುದು) ಅಮವಾಸ್ಯೆಯ ಕತ್ತಲಲ್ಲಿ, ದಟ್ಟ ಕಾಡಿನಲ್ಲಿ, ಜಾಡು ತಪ್ಪಿದರೂ ಬೆಳಕಿನ ಸಾಧನವಿಲ್ಲದೆ ಪಾರಾದ ಏರಿಕಲ್ಲಿನ ಪ್ರಸಂಗ (ಈ ಮಾಲಿಕೆಯಲ್ಲೇ ಮುಂದೆ ಸವಿವರ ಪ್ರಕಟಿಸಲಿದ್ದೇನೆ), ಕಠಿಣ ಇಳುಕಲಿನಲ್ಲೇ ಕಾಲಬಲ ಕಳೆದುಕೊಂಡಾತನನ್ನು ಸುಧಾರಿಸಿಕೊಂಡ ಪರಿ, ಹೆಜ್ಜೇನು ಹೊಡೆತದಲ್ಲಿ ಸಹಾಯಕ್ಕೊದಗಿದ ಸ್ವಾಮಿ, ಕಾಡುನುಗ್ಗಿ ನಮ್ಮೂರಿಗೆ ಬರುತ್ತಾರೆಂದಾಗ ಶಿಶಿಲದ ಮಿತ್ರರು ಕೊಟ್ಟ ಸಮ್ಮಾನ, ರಾತ್ರಿ ಹಗಲೆಂದು ನಮ್ಮೊಡನೆ ಮಾರ್ಗದರ್ಶಿಯಾಗಿ ನಡೆದೂ ಪೈಸೆ ಪಡೆಯದ ಶಿರ್ಲಾಲಿನ ಉಗ್ರಾಣಿ – ಹೀಗೆ ಹಲವು ಮಾನವ ಮೌಲ್ಯಗಳ ಹೊಸ ಸೀಮೆಗೆ ನಿತ್ಯ ಲಗ್ಗೆ ಹಾಕುವ ಹಂಬಲ ಆರೋಹಣಕ್ಕೆ ಅದಮ್ಯ. (೧೯೮೦ರ ಲೇಖನ ಮುಗಿಯಿತು.)

ಅಲೋಶಿಯಸ್ ಕಾಲೇಜಿನ ಎದುರಿನ ಕಗ್ಗಲ್ಲ ಗೋಡೆಯ ಮೇಲೆ, ಎರಡನೇ ಮಾಳಿಗೆಯ ತಾರಸಿಯಿಂದ ಹಗ್ಗ ಇಳಿಬಿಟ್ಟು ಶಿಲಾವರೋಹಣದ ಪ್ರದರ್ಶನಗಳನ್ನು ಕೊಟ್ಟೆವು. ಅಂಗಳದ ಎರಡು ಮರಗಳ ನಡುವೆ ಎತ್ತರದಲ್ಲಿ ಹಗ್ಗ ಕಟ್ಟಿ ನದಿ ಅಥವಾ ಕೊರಕಲನ್ನು ದಾಟುವ ಕ್ರಮದ ಪ್ರಾತ್ಯಕ್ಷಿಕೆಯನ್ನೂ ಪ್ರಸ್ತುತಪಡಿಸಿದ್ದೆವು. ಯುವಜನ ಸಂಖ್ಯೆ ಕಡಿಮೆ ಹಾಜರಾತಿ ಹಾಕಿದರೂ ನಗರದ ನಮ್ಮ ಅನೇಕ ಪರಿಚಿತರು ದಿನವಿಡೀ ಬಂದು ಪ್ರೋತ್ಸಾಹಿಸಿದರು. ಭವನ ತುಂಬುವಂತೆ ಮಾಡಿದ್ದರು. ಹೆಚ್ಚಿನ ವಿವರಗಳೊಡನೆ ಸಪ್ತಾಹದ ಮುಂದುವರಿದ ಕಥನ ಮುಂದಿನ ವಾರ.

(ಮುಂದುವರಿಯಲಿದೆ)