ಶ್ಯಾಮಲಾ ಮಾಧವ ಅವರ ನಾಳೆ ಇನ್ನೂ ಕಾದಿದೆ
ಅಧ್ಯಾಯ – ೧೧

ಬೆಂದೂರ್ ಇಗರ್ಜಿ ಮತ್ತು ಸೇಂಟ್ ಆಗ್ನಿಸ್ ಕಾಲೇಜ್‌ನ ಎದುರಿಗೆ, ರಸ್ತೆಯಾಚೆ, ಇಳಿಜಾರಾಗಿ ಸಾಗಿ, ಮತ್ತೆ ಏರುವ ದಾರಿಯ ನಡುಮಧ್ಯೆ ಬಲಕ್ಕೆ, ವಿಶಾಲ ಹಿತ್ತಿಲು, ಬಂಗಲೆ, ಚಂಪಕ ವಿಲಾಸ. ಬಂಗ್ಲೆ ಹಿತ್ತಿಲು ಎಂದೇ ಪ್ರಚಲಿತವಿದ್ದ ಮನೆ. ನನ್ನ ಅಜ್ಜಿಯ ಸೋದರಿ – ನಮ್ಮ ತಂದೆಯ ದೊಡ್ಡಮ್ಮ ಚೆರಿಯಮ್ಮ ಮತ್ತವರ ಮಕ್ಕಳ ಸಂಸಾರ ವಾಸವಿದ್ದ ವಿಶಾಲ ಮನೆ. ಮನೆಮಕ್ಕಳಂತೇ, ನನ್ನ ತಂದೆ ಮತ್ತು ಸೋದರತ್ತೆ ಶಾರದತ್ತೆಯಂತೇ ಉಚ್ಚಿಲದ ಇತರ ವಿದ್ಯಾಕಾಂಕ್ಷಿ ಬಂಧುಗಳಿಗೂ ಆಶ್ರಯ ತಾಣವಾಗಿದ್ದ ಮನೆ. ಗೇಟಿನಿಂದ ಕೆಳಕ್ಕೆ ಮೆಟ್ಟಲುಗಳನ್ನಿಳಿದು, ಕಾಲುದಾರಿಯಲ್ಲಿ ಸಾಗಿ ಅಂಗಳಕ್ಕೆ ಬಂದರೆ, ಎತ್ತರದ ವಿಶಾಲ ಪೋರ್ಟಿಕೋ ಇರುವ ಮನೆ. ಅಜ್ಜಿ ಯಾವಾಗಲೂ ಪೋರ್ಟಿಕೋದ ಕಟ್ಟೆಯಲ್ಲಿ ಕಂಭಕ್ಕೊರಗಿ ಕುಳಿತು ರಾಮಾಯಣ, ಮಹಾಭಾರತ ಓದುತ್ತಿದ್ದರು. ನನ್ನಜ್ಜಿಯರೆಲ್ಲ ನೀಳಕಾಯರು. ಪೋರ್ಟಿಕೋದ ಪಕ್ಕದಲ್ಲಿ ಆಫೀಸ್ ಕೋಣೆ; ಪೋರ್ಟಿಕೋದಿಂದ ಒಳಕ್ಕೆ ವಿಶಾಲವಾದ ಹಾಲ್; ಎಡಕ್ಕೂ, ಇದಿರಿಗೂ ಮಲಗುವ ಕೋಣೆಗಳು; ಬಲಕ್ಕೆ ಊಟದ ಕೋಣೆ; ಅಲ್ಲಿ ದೊಡ್ಡ ಡೈನಿಂಗ್ ಟೇಬ್‌ಲ್; ಅದಕ್ಕೆದುರಾಗಿ, ನೆಲದಲ್ಲಿ ಉದ್ದಕ್ಕಿದ್ದ ಹಾಸುಮಣೆ. ಬಲಕ್ಕೆ ಸ್ಟೋರ್ ರೂಮ್; ಎಡಕ್ಕೆ ವಿಶಾಲ ಅಡಿಗೆಕೋಣೆ. ಅಡಿಗೆಕೋಣೆಯಿಂದ ಹೊರಹೋಗುವ ಮೆಟ್ಟಲುಗಳನ್ನಿಳಿದರೆ ಉದ್ದದ ಜಗಲಿಯ ತುದಿಗೆ ಬಚ್ಚಲು ಮನೆ. ಅಲ್ಲೇ ಪಕ್ಕದಲ್ಲಿ ಸೆಪ್ಟಿಕ್ ಟ್ಯಾಂಕ್ ಶೌಚಾಲಯ ಇದ್ದರೂ, ಹಿತ್ತಿಲ ಮೂಲೆಯಲ್ಲಿ ಅಂದಿನ ದಿನಗಳ ತೆರೆದ ಗುಂಡಿಯ ಪಾಯಿಖಾನೆಯೂ ಇತ್ತು. ಪಕ್ಕದ ಮೇರಿಬಾಯಿಯ ಮನೆಯ ಮೂಕಿ ಮಕ್ಕಳು ಅಲ್ಲಿಗೆ ಬಂದುಹೋದ ಬೆನ್ನಲ್ಲೇ ಅವರ ಹಂದಿಗಳೂ ಅಲ್ಲಿಗೆ ಬರುತ್ತಿದ್ದುವು. ರಜಾದಿನ, ಹಬ್ಬದ ದಿನಗಳಲ್ಲಿ ಹಂದಿಗಳ ಕಿರುಚಾಟವೂ ಮೇರಿ ಬಾಯಿಮನೆಯಿಂದ ಕೇಳಿ ಬರುತ್ತಿದ್ದುವು. ಹಿತ್ತಿಲ ತುಂಬಾ ವೃಕ್ಷ ಸಂಪತ್ತಿತ್ತು. ಗೇಟಿನ ಪಕ್ಕ, ಅಂಗಳದೆದುರಿಗೆ ವಿಶಾಲ ಮುಂಡಪ್ಪ ಮಾವಿನ ಮರವಿತ್ತು. ಶಾಟ್‌ಪುಟ್ ಗಾತ್ರ, ಆಕಾರದ ಅದರ ರುಚಿಗೆ ಸರಿಗಟ್ಟುವ ಹಣ್ಣುಗಳನ್ನು ಮತ್ತೆಲ್ಲೂ ನಾವು ಕಂಡಿಲ್ಲ. ಹಲಸು, ಪುನರ್ಪುಳಿ, ಪೇರಳೆ, ಸೀತಾಫಲ, ಪಾಲ ಹೀಗೆ ಹಲವು ಮರಗಳು ಹಿತ್ತಿಲ ತುಂಬಾ ಹರಡಿದ್ದುವು.

ಅಜ್ಜಿಯ ಹಿರಿಮಗ ಶ್ರೀನಿವಾಸ ದೊಡ್ಡಪ್ಪ ಮತ್ತವರ ಸಂಸಾರ ಕೊಯಮತ್ತೂರಿನಲ್ಲಿತ್ತು. ವಕೀಲರು – ವಿಶ್ವನಾಥ ದೊಡ್ಡಪ್ಪ – ಅವಿವಾಹಿತರಾಗಿದ್ದರು. ಕೋರ್ಟಿನಿಂದ ಹಿಂದಿರುಗುವಾಗ ಮನೆಯ ಮಕ್ಕಳಿಗಾಗಿ ತಿಂಡಿ ಕಟ್ಟಿಸಿ ತರುತ್ತಿದ್ದರು. ಮನೆ ಹೊಗುತ್ತಾ, “ಚಂಪಾ” ಎಂದು ಕರೆದು ಚಂಪಳ ಕೈಗೀವ ಈ ತಿಂಡಿ ಎಲ್ಲರಿಗೂ ಹಂಚಲ್ಪಡುತ್ತಿತ್ತು. ಅಜ್ಜಿಯ ಕಿರಿಮಗಳು ಕಲ್ಯಾಣಿ ಅತ್ತೆ ಜ್ಯೋತಿ ಟಾಕೀಸ್ ಬಳಿಯ ಟ್ರೈನಿಂಗ್ ಶಾಲೆಯಲ್ಲಿ ಟೀಚರಾಗಿದ್ದರು. ಅವರ ಹಿರಿಮಗಳು ಜಾನಕಿ ಮದುವೆಯಾಗಿ ಮುಂಬಯಿ ಸೇರಿದ್ದರೆ, ಮಗಳು ಪಾವನಾ ಮನೆಯಲ್ಲಿದ್ದರು. ತಮ್ಮಂದಿರು ಪದ್ಮನಾಭ, ವಾಸುದೇವ. ಮಗು ಕಸ್ತೂರಿಯ ಅಂತ್ಯಸಂಸ್ಕಾರದ ಫೋಟೋ ಗೋಡೆಯ ಮೇಲಿತ್ತು. ನಿಗೂಢ ಭಾವವನ್ನು ಮೂಡಿಸುತ್ತಿದ್ದ ಈ ಫೋಟೋ ಬಗ್ಗೆ ನನಗೆ ತಿಳಿದುದು, ಸ್ವಲ್ಪ ಬೆಳೆದ ಮೇಲೆಯೇ. ಅಮ್ಮನ ಜೊತೆಗೇ ಟ್ರೈನಿಂಗ್ ಶಾಲೆಗೆ ಹೋಗುತ್ತಿದ್ದ ಮಕ್ಕಳು – ಕಸ್ತೂರಿ, ಪದ್ಮ, ವಾಸು.

ಒಂದಿನ ಮಗು ಕಸ್ತೂರಿ, ಅಣ್ಣ ಪದ್ಮನಾಭನ ಜೊತೆ ಮಧ್ಯಾಹ್ನದ ಶಾಲೆಯ ಬಿಡುವಿನಲ್ಲಿ, ಎದುರಿನ ಅಂಗಡಿಯಲ್ಲಿ ಪೆಪ್ಪರ್‌ಮಿಂಟ್ ಕೊಳ್ಳಲೆಂದು ರಸ್ತೆ ದಾಟುತ್ತಿದ್ದಾಗ ಲಾರಿಯೊಂದು ಅಡ್ಡ ಹಾಯ್ದು ಅಪಘಾತ ಸಂಭವಿಸಿತ್ತು. ಗಣಪತಿ ಶಾಲೆಯಲ್ಲಿ ಕಲಿಯುತ್ತಿದ್ದ ನಮ್ಮ ತಂದೆ, ಮಧ್ಯಾಹ್ನದ ಬಿಡುವಿನಲ್ಲಿ ಮನೆ ಚಂಪಕ ವಿಲಾಸಕ್ಕೆ ಬಂದು, ಉಂಡು ಶಾಲೆಗೆ ಮರಳುತ್ತಿದ್ದವರು, ಅಲ್ಲಿ ದಾರಿ ನಡೆದಿದ್ದಾಗ, ಕಣ್ಣೆದುರೇ ಸಂಭವಿಸಿದ ಈ ಅಪಘಾತವನ್ನು ಕಂಡು ಓಡಿ ಬಂದು, ಮಗುವನ್ನು ಎತ್ತಿಕೊಂಡು ಡಾಕ್ಟರ ಬಳಿಗೋಡಿದ್ದರು. ಮಗು ಉಳಿಯಲಿಲ್ಲ; ಆದರೆ ಈ ಆಘಾತದಿಂದ ತಂದೆಯವರಿಗೆ ಉಬ್ಬಸ ಬಾಧೆ ತೊಡಗಿತು; ಮತ್ತು ಜೀವಮಾನಪರ್ಯಂತ ಅದು ಅವರ ಸಂಗಾತಿಯಾಗಿ ಉಳಿಯಿತು. ಚಂಪಕ ವಿಲಾಸದಲ್ಲಿ ವರ್ಷಕ್ಕೊಮ್ಮೆ ಸತ್ಯನಾರಾಯಣ ಪೂಜೆ ಬಹಳ ಗೌಜಿಯಿಂದ ನಡೆಯುತ್ತಿತ್ತು. ಅಲ್ಲಿ ಸಿಗುತ್ತಿದ್ದಂತಹ ಸಪಾದ ಭಕ್ಷದ ಪ್ರಸಾದದ ರುಚಿ ಮತ್ತೆಂದೂ ಯಾವ ಪೂಜೆಯಲ್ಲೂ ಸಿಕ್ಕಿದ್ದಿಲ್ಲ. ಸವಿಸ್ತಾರವಾಗಿ ಭಟ್ಟರು ಹೇಳುತ್ತಿದ್ದ ಪೂಜಾಮಂತ್ರ, ಕಲಾವತಿ ಪರಿಣಯದ ಕಥೆಯನ್ನು ವರ್ಷವರ್ಷವೂ ನಾವು ಅದೇ ಆಸಕ್ತಿಯಿಂದ ಕಿವಿಗೊಟ್ಟು ಕೇಳುತ್ತಿದ್ದೆವು. ಅಂಗಳದ ತುಳಸೀ ಕಟ್ಟೆಯಲ್ಲಿ ತುಳಸೀ ಪೂಜೆಯೂ ಬಹಳ ಗೌಜಿಯಿಂದ ನಡೆಯುತ್ತಿತ್ತು. ಸಂಜೆ ನಾವು ಮಕ್ಕಳೆಲ್ಲ ಗುಡ್ಡವೇರಿ ಕಲೆಕ್ಟರ‍್ಸ್ ಬಂಗ್ಲೆಯೆದುರಿಗೆ ಗುಡ್ಡದಲ್ಲಿ ಆಸೀನರಾಗಿ ಕತೆಪುಸ್ತಕ ಓದುವುದರಲ್ಲಿ, ಆಟದಲ್ಲಿ ಮಗ್ನರಾಗುತ್ತಿದ್ದೆವು. ಕಮಲ ಚಿಕ್ಕಮ್ಮ, ಸಂಜೆಯ ಬಿಡುವಿನಲ್ಲಿ ಮಗುವನ್ನು ಸೊಂಟದಲ್ಲೆತ್ತಿಕೊಂಡು ನೆರೆಮನೆಯ ಅನುಸೂಯಕ್ಕನೊಂದಿಗೆ ಅಡ್ಡಾಡುತ್ತಾ ದಾರಿಮಧ್ಯೆ, ಕಲ್ಲುತಿಟ್ಟೆಯ ಮೇಲೆ ಕುಳಿತಿದ್ದು ಮತ್ತೆ ಮನೆಗೆ ಹಿಂದಿರುಗುತ್ತಿದ್ದರು. ಅವರ ಮಗಳು ರೂಪಾ ನಮಗೆ ಜೊತೆಯಾಗುತ್ತಿದ್ದಳು. ಚಂಪಕ ವಿಲಾಸದಲ್ಲಿ ಪ್ರತಿ ಮಗುವಿಗೆ ತೊಟ್ಟಿಲು ಹಾಕುವ ಸಂಭ್ರಮಕ್ಕೂ ನಾವು ಹಾಜರಾಗುತ್ತಿದ್ದೆವು. ಆಗ ಹಿರಿಯ ಹೆಂಗಸರ ಮಾತುಕತೆ ಕಿವಿಗೆ ಬೀಳುತ್ತಿತ್ತು ; ” ಕಮಲನಿಗೆ ಹೆರಿಗೆ ತುಂಬ ಸುಲಭ. ಒಳಗೆ ಹೋಗುವುದೂ ಕಾಣ್ತದೆ; ಅರ್ಧಗಂಟೆಯಲ್ಲಿ ಹೆರಿಗೆ ಮುಗಿದೂ ಹೋಗ್ತದೆ ! “

ಹೀಗೆ ಭುವಿಗಿಳಿದು ಬಂದ ಲತಾ, ಚಂಪಾ, ಪದ್ಮರಾಜ, ಸುಜಯ, ಮಾಲತಿ ಮತ್ತು ಜಯರಾಜ. ವಿಶ್ವ ದೊಡ್ಡಪ್ಪ, ಮಕ್ಕಳೆಲ್ಲರಿಗೆ ’ಬಪ್ಪ’. ಚಂಪಾ, ಪದ್ಮರಾಜ ಕಲಿಕೆಯಲ್ಲಿ ತುಂಬ ಚುರುಕಾದ ಮಕ್ಕಳೆಂದು ಈ ಬಪ್ಪನಿಗೆ ಅಪಾರ ಅಭಿಮಾನ. ನಮ್ಮಣ್ಣ, ನಾನು, ಜ್ಯಾಮೆಟ್ರಿ ಥಿಯೊರಮ್ಸ್ ಕಲಿಯಲು ಈ ದೊಡ್ಡಪ್ಪನ ಬಳಿಗೆ ಹೋಗುತ್ತಿದ್ದೆವು. ಮೂವತ್ತೂ ಥಿಯೊರಮ್ ಬಾಯಿಪಾಠವಿದ್ದ ದೊಡ್ಡಪ್ಪ, ಪುಸ್ತಕ ನೋಡದೆಯೇ ನಮಗೆ ಕಲಿಸುತ್ತಿದ್ದರು. ರವಿವಾರ ಸಂಜೆ ಹೆಚ್ಚಾಗಿ ಮನೆಯಲ್ಲಿ ಪಾಯಸವಿರುತ್ತಿತ್ತು. ಒಮ್ಮೆ ಸತ್ಯನಾರಾಯಣ ಪೂಜೆಗೆ ಹೋದಾಗ, ಅದೇ ಆಗ ಸೇಂಟ್ ಆಗ್ನಿಸ್ ಕಾಲೇಜ್ ಹಾಸ್ಟಲ್ ಸೇರಿದ್ದ ರಾಜೀವಿ ಅಕ್ಕನನ್ನು ಅಲ್ಲಿ ಕಂಡೆ. ದಾವಣಿಯಲಿದ್ದು, ಕುಳಿತು ನೋಟ್ಸ್ ಏನೋ ಓದುತ್ತಿದ್ದ ರಾಜೀವಿ ಅಕ್ಕ, ಮೂಲ್ಕಿ ಮಾವನ ಮಗಳೆಂದು ಪರಿಚಯವಾಯ್ತು. ಮುಂದೆ ನಾವಿಬ್ಬರೂ ಒಂದೇ ಮನೆ ಸೇರಿದ್ದು, ಇತಿಹಾಸ! ಕಾಲೇಜ್ ಸೇರಿಕೊಂಡಾಗ, ಕಲ್ಯಾಣಿ ಅತ್ತೆಯಿಂದ ನಮ್ಮ ಕಾಲೇಜ್‌ಗೆ ಸೇರಿಸಲ್ಪಟ್ಟು ನನಗೆ ಪರಿಚಯಿಸಲ್ಪಟ್ಟು ನನ್ನ ಜೊತೆ ಸೇರಿಸಿಕೊಳ್ಳುವಂತೆ ಆದೇಶಿಸಲ್ಪಟ್ಟ ದಯಾ ಕೂಡಾ ಮುಂದಿನ ನಾಲ್ಕು ವರ್ಷ ಚಂಪಕವಿಲಾಸವಾಸಿಯಾಗಿದ್ದಳು. ನಮ್ಮ ವಾಸ್ತವ್ಯ ನಮ್ಮೂರು ಸೋಮೇಶ್ವರ ಉಚ್ಚಿಲದ ಅಜ್ಜಿಮನೆಗೆ ಬದಲಾದ ಬಳಿಕ, ನನ್ನ ತಂಗಿ ಮಂಜುಳನೂ ಕೆಲಕಾಲ ಚಂಪಕವಿಲಾಸವಾಸಿನಿಯಾಗಿದ್ದಳು . ಕೊಯಮತ್ತೂರಿನ ದೊಡ್ಡ ದೊಡ್ಡಪ್ಪನ ಕುಟುಂಬವೂ ನಿವೃತ್ತಿಯ ಬಳಿಕ ಚಂಪಕ ವಿಲಾಸ ಸೇರಿತ್ತು. ಅವರ ಅಸೌಖ್ಯದ ದಿನಗಳು, ಮುಂದೆ ಬಪ್ಪನ ಅಸೌಖ್ಯದ ದಿನಗಳು ಎಲ್ಲ ನೆನಪಾಗುತ್ತಿದೆ. ಆಗೆಲ್ಲ ಮನವನ್ನು ಕಾಡದ ವಿಚಾರವೊಂದು ಬಹು ಸಮಯದ ಬಳಿಕ ಈಗ ನಮ್ಮ ಮನದಲ್ಲಿ ಸುತ್ತಿ ಸುಳಿಯುತ್ತದೆ. ಅಷ್ಟು ದೊಡ್ಡ ಸಂಸಾರಕ್ಕೆ, ಉಣ್ಣುವ ಬಾಯಿಗಳಿಗೆ ಕಮಲ ಚಿಕ್ಕಮ್ಮ ಅದು ಹೇಗೆ ಅಟ್ಟು ಬಡಿಸುತ್ತಿದ್ದರು? ಅವರು ಯಾವಾಗ ಉಣ್ಣುತ್ತಿದ್ದರು? ತಿನ್ನುತ್ತಿದ್ದರು? ಎಂದೂ ದನಿಯೇರಿಸದೆ ಸದಾ ಮೌನರಾಗಿ, ಶಾಂತರಾಗಿ ಹೇಗಿರುತ್ತಿದ್ದರು ಎಂಬ ಪ್ರಶ್ನೆ ಮನದಲ್ಲಿ ಬಿಡದೆ ಸುಳಿಯುತ್ತದೆ. ಕೊಯಮತ್ತೂರಿನ ದೊಡ್ಡ ದೊಡ್ಡಪ್ಪನ ಮಗಳು ಜಯಕ್ಕನನ್ನು ಕಲ್ಯಾಣಿ ಅತ್ತೆಯ ಮಗ ಪದ್ಮಣ್ಣನಿಗೆ ತಂದುಕೊಂಡು ಮನೆಯಲ್ಲಿ ನಡೆದ ವೈಭವದ ಮದುವೆ, ಆ ಸಂಭ್ರಮ ಎಲ್ಲ ನೆನಪಾಗುತ್ತಿದೆ. ಕೊಯಮತ್ತೂರಿನಿಂದ ಜೊತೆಗೆ ಬಂದಿದ್ದ ಅವರ ಮನೆಕೆಲಸದ ಹುಡುಗ ಅಂಬಾಡಿಯ ನೆನಪೂ ಇದೆ. ಪಾವನಕ್ಕನ ಮದುವೆಗೆ ಉಡಲೆಂದು ಅಮ್ಮ ಮೊದಲ ಬಾರಿಗೆ ಕೊಂಡ ಚೆಲುವಾದ ರೇಶ್ಮೆ ಸೀರೆ ಈಗಲೂ ಲಾಮಂಚದ ಪರಿಮಳದಿಂದ ಕೂಡಿ ಅಮ್ಮನ ಕಪಾಟಿನಲ್ಲಿ ಕುಳಿತಿದೆ. ವಾಸಣ್ಣನಿಗೆ ನಮ್ಮ ಗೋಪಿ ದೊಡ್ಡಮ್ಮನ ತಂಗಿ ಪಾಪಕ್ಕನನ್ನು ಕೊಟ್ಟು ಮದುವೆಯಾಗಿತ್ತು. ಚಂಪಕ ವಿಲಾಸದಲ್ಲಿ ಮಕ್ಕಳನ್ನು ಎತ್ತಿಕೊಂಡು ತಿರುಗುತ್ತಿದ್ದ ನನ್ನನ್ನು ವಾಸಣ್ಣ,”ಈ ಶ್ಯಾಮಲನಿಗೆ ಇದೇ ಕೆಲಸ “, ಎಂದು ಗೇಲಿ ಮಾಡುತ್ತಿದ್ದರು. ಮುಂದೆ ಅವರಿಗೆ ಮೇಲೆ ಮೇಲೆ ಐದು ಮಕ್ಕಳಾದಾಗ, ಹಾಗೇ ಆಗಬೇಕು, ಎಂದು ನಾನು ಮನದಲ್ಲೇ ಅಂದುಕೊಂಡು ಮುಯ್ಯಿ ತೀರಿಸಿದ್ದೆ.

ಒಂದು ಕಾಲದಲ್ಲಿ ವಿದ್ಯಾರ್ಜನೆಗಾಗಿ ಊರಿನಿಂದ ಹಲವರು ಬಂದು ವಾಸವಾಗಿದ್ದ ಮನೆ, ಚಂಪಕ ವಿಲಾಸ. ಆಗ ಅಲ್ಲಿ ಹುಡುಗರ ಫುಟ್‌ಬಾಲ್ ಟೀಮ್ ಇತ್ತು. ಮಹಾಯುಧ್ಧದ ಬರದ ದಿನಗಳಲ್ಲಿ ಒಮ್ಮೆ ಬಿದಿರಿನ ಅಕ್ಕಿಯನ್ನು ಅಟ್ಟು ಉಣ್ಣುವ ದಿನಗಳೂ ಬಂದಿದ್ದುವೆಂದು ನಮ್ಮ ಸೋದರತ್ತೆ ಶಾರದತ್ತೆ ಹೇಳುತ್ತಿದ್ದರು. ದೊಡ್ಡ ದೊಡ್ಡಪ್ಪ ತೀರಿಕೊಂಡರು. ಅವರ ಮಕ್ಕಳು, ಸುನಂದಾ, ರಮಾನಾಥ, ಜಯಾ ಮತ್ತು ಸುಧಾ. ಮಗ ಯು. ರಮಾನಾಥ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದು ಪ್ರಾಮಾಣಿಕ ಅಧಿಕಾರಿ ಆಗಿದ್ದರು. ನನ್ನ ’ಪೊಲೀಸ್ ಡೈರಿ’ ಅನುವಾದಿತ ಕೃತಿಯಲ್ಲಿ ಅವರ ಉಲ್ಲೇಖವಿದೆ. ಕಲ್ಯಾಣಿ ಅತ್ತೆಯ ಪತಿ ಕುಟ್ಟ ಮಾವನ ತಮ್ಮ ವಾಸುದೇವ ಮಾವ ಕೆಲಕಾಲ ಅಸೌಖ್ಯದಿಂದ ಚಂಪಕ ವಿಲಾಸದ ಆಫೀಸ್ ಕೋಣೆಯಲ್ಲಿ ಮಲಗಿದ್ದರು. ಮತ್ತೆ ಅವರನ್ನು ಕರಕೊಂಡು ಅತ್ತೆ, ಮಾವ ಮಂಗಲ್ಪಾಡಿಯ ಮನೆಗೆ ವಾಸ ಹೋದರು. ಬಪ್ಪ ವಕೀಲ ದೊಡ್ಡಪ್ಪನೂ ತೀರಿಕೊಂಡರು.

ವಿವಾಹವಾಗಿ ಮುಂಬೈ ಸೇರಿದ ಬಳಿಕ, ಊರಿಗೆ ಹೋದಾಗಲೆಲ್ಲ ಊರು ಸೇರಿದಾಗೊಮ್ಮೆ ಮತ್ತೆ ಮುಂಬೈಗೆ ಹಿಂದಿರುಗುವ ಮುನ್ನ ಒಮ್ಮೆ ಚಂಪಕ ವಿಲಾಸಕ್ಕೆ ಹೋಗಿ ಚಿಕ್ಕಮ್ಮನನ್ನು ಕಂಡು ಬರುತ್ತಿದ್ದೆವು. ನಾವು ಹಿಂದಿರುಗುವಾಗ ಚಿಕ್ಕಮ್ಮ, ಮೇಲೆ ಮಾರ್ಗದವರೆಗೆ ಬಂದು ನಮ್ಮನ್ನು ಬೀಳ್ಕೊಡುತ್ತಿದ್ದರು. ಕಾಲಾಂತರದಲ್ಲಿ ಚಂಪಕ ವಿಲಾಸವೂ ಅಳಿದು ಹೋಗಿ ಆ ಭವ್ಯ ಮನೆಯ ಜಾಗದಲ್ಲಿ ಈಗ ಬಹುಮಹಡಿ ಕಟ್ಟಡವೆದ್ದಿದೆ. ಚಂಪಕ ವಿಲಾಸದ ಎದುರಿಗಿದ್ದ ಡಾ. ರಾಮಯ್ಯ ರೈ ಅವರ ಮನೆಯೂ ಇಲ್ಲವಾಗಿದೆ. ಇಷ್ಟು ವರ್ಷಗಳಾದರೂ ಅದೇಕೋ ಆ ಪ್ರದೇಶದ ಕನಸೊಂದು ಈಗಲೂ ಅಡಿಗಡಿಗೆ ಕಾಣುವುದಿದೆ. ಚಂಪಕ ವಿಲಾಸದೆದುರು ನಾನು ಕಲ್ಲಿನಲ್ಲಿ ಬಟ್ಟೆ ಒಗೆಯುತ್ತಿರುವಂತೆ, ಆಗ ಎದುರಿನಲ್ಲಿದ್ದ ಮನೆಯ ಗಿಡದ ಮೇಲೆ ಹಾರ್ನ್‌ಬಿಲ್ ಹಕ್ಕಿಯೊಂದು ಕುಳಿತು ನನ್ನನ್ನು ಕರೆಯುತ್ತಿರುವಂತೆ ಕನಸು! ಹಾರ್ನ್‌ಬಿಲ್‌ಗಳ ಬಗ್ಗೆ ನಾನಾಗ ಏನೂ ಅರಿತಿರಲಿಲ್ಲ; ಕಂಡಿರಲಿಲ್ಲ. ಆದರೂ ಏಕೆ ಈ ಕನಸು, ತಿಳಿದಿಲ್ಲ. ಪ್ರಿಯವಾಗಿದ್ದ ಆ ಬಂಗ್ಲೆ ಹಿತ್ತಿಲ ಮನೆ, ಆ ಪೋರ್ಟಿಕೋ, ಒಳಗೆ ಹಾಲ್‌ನಲ್ಲಿ ಅಂದದ ಮರದ ಕಪಾಟಿನ ಮೇಲಿದ್ದ ಶ್ರೀಕ್ರಿಷ್ಣನ ನವಿಲುಗರಿ ಹೊತ್ತ ಚಂದದ ವಿಗ್ರಹ ನನ್ನ ಮನದಲ್ಲಿ ಸ್ಥಿರವಾಗಿ ಉಳಿದಿದೆ.

(ಮುಂದುವರಿಯಲಿದೆ)