ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಇದರ ಅಧ್ಯಾಯ – ೧೭

ಕರಂಗಲ್ಪಾಡಿಯಲ್ಲಿ ನಮ್ಮ ಮನೆಯಿಂದ ಅನತಿ ದೂರದಲ್ಲೇ ನಮ್ಮ ಸುಧಾ ಟೀಚರ ಮನೆ. ನಮ್ಮಮ್ಮನ ಹಳೆ ವಿದ್ಯಾರ್ಥಿ ಸುಧಾ ಟೀಚರ್ ಮಾರ್ಜಿಲ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ನಮ್ಮಣ್ಣನಿಗೆ, ಮುಂದೆ ಅಣ್ಣನ ಮಗನಿಗೆ ಮತ್ತೀಗಲೂ ಹಲವು ಮಕ್ಕಳಿಗೆ ಗಣಿತ ಹೇಳಿ ಕೊಡುವವರು. ನಮ್ಮ ರಸ್ತೆಯ ಕೊನೆಗೆ ಮೂಲೆಯಲ್ಲಿ ಗೆಳತಿ ಚಿತ್ರಾಳ ಮನೆಯಿತ್ತು. ನಗರದ ಖ್ಯಾತ ವಕೀಲ ಶ್ರೀಧರ ರಾಯರ ಮಗಳು ಚಿತ್ರಾ, ಭರತನಾಟ್ಯ ಕಲಾವಿದೆ. ರಜಾದಿನಗಳಲ್ಲಿ ಮಧ್ಯಾಹ್ನ ಮೇಲೆ ನಾನು ಚಿತ್ರಾಳ ಮನೆಗೆ ಹೋದರೆ, ಅವಳ ರೇಡಿಯೋದಲ್ಲಿ ವಿವಿಧ ಭಾರತಿಯ ಅಂದಿನ ಮೋಹಕ ಚಿತ್ರಗೀತೆಗಳ ಪ್ರಸಾರ ಕೇಳುವುದು ನನಗೆ ತುಂಬ ಇಷ್ಟವಾಗುತ್ತಿತ್ತು. ನಮ್ಮ ಬಾಲ್ಯದಲ್ಲಿ ಕಾರುಗಳು ಅಪರೂಪವಾಗಿದ್ದ ಮಂಗಳೂರಿನಲ್ಲಿ ಅವರ ಕಪ್ಪು ಕಾರ್, ನಮಗೆಲ್ಲ ಅಮೋಘ ವಸ್ತುವಾಗಿತ್ತು. ಬಾಲ್ಯದಲ್ಲಿ ನಾನೂ ಒಂದಿನ ಈ ಕಾರಿನಲ್ಲಿ ರೈಡ್ ಹೋಗಿದ್ದೆ. ಚಿತ್ರಾಳ ತಂದೆ ಸ್ವತಂತ್ರ ಪಕ್ಷ ಸೇರಿದ್ದರು. ಅವರ ರಾಜಕೀಯದ ಮಾತುಗಳು ನನಗೆ ವಿಚಿತ್ರವೆನಿಸುತ್ತಿದ್ದುವು. ನಮ್ಮ ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿದ ದಿನ ನಾವು ಗೆಳತಿಯರೆಲ್ಲ ದಿಲೀಪ್ ಕುಮಾರ್‌ನ ‘ಲೀಡರ್’ ಚಿತ್ರ ನೋಡಲು ಹೋದೆವು. ಪಿ.ಯೂ.ಸಿ. ಪರೀಕ್ಷೆ ಮುಗಿದಂದು ರಾಜ್ ಕಪೂರ್‌ನ ‘ಸಂಗಂ’ ಚಿತ್ರ ನೋಡಲು ಹೋದೆವು. ಹೊಸ ಸೀರೆ ಎಂಬ ಸಡಗರದಿಂದ ನಾನೊಂದು ಕಾಟನ್ ಸೀರೆ ಉಟ್ಟುಕೊಂಡು ಹೋಗಿದ್ದೆ. ಚಿತ್ರನ ಅಮ್ಮ, ಮೆಲುವಾಗಿ ಚಿತ್ರನೊಡನೆ, ನಾನು ಸೀರೆ ಬದಲಿಸಿ ಯಾವುದಾದರೂ ಒಳ್ಳೆಯ ಸೀರೆ ಉಟ್ಟು ಬರುವಂತೆ ಸೂಚಿಸಿದರು. ನಾನು ಮನೆಗೆ ಮರಳಿ, ಅಮ್ಮನ ನೀಲಿ ಜಾರ್ಜೆಟ್ ಸೀರೆ ಉಟ್ಟುಕೊಂಡು ಹೋದೆ.

ಚಿತ್ರನೊಡನೆ ನಾನು ನೋಡಿದ ಇನ್ನೊಂದು ಮರೆಯಲಾಗದ ಚಿತ್ರ, ‘ ದ ಬ್ರಿಜ್ ಓವರ್ ದ ರಿವರ್ ಕ್ವಾಯ್’. ಅದು ಪ್ರಥಮ ಬಾರಿಗೆ ಬಾಲ್ಕನಿಯಲ್ಲಿ ಕುಳಿತು ನೋಡಿದ ಚಿತ್ರ. ನಾವು ಹೈಸ್ಕೂಲ್‌ನಲ್ಲಿದ್ದಾಗ ಚಿತ್ರಾ ತಾನು ಆಸಕ್ತಿಯಿಂದ ಓದುತ್ತಿದ್ದ ಮಾರಿ ಕೊರೆಲ್ಲಿಯ ‘ಥೆಲ್ಮಾ’ ಕಾದಂಬರಿಯನ್ನು ಕೇಳಿದ ನನಗೂ ಓದಲು ನೀಡಿದ್ದಳು. ಅದನ್ನೋದಿ, ನಾರ್ವೆಯ ಮಿಡ್‌ನೈಟ್ ಸನ್ ನೋಡಬೇಕೆಂದು ಮನದಲ್ಲಿ ಮೂಡಿದ ಆಶೆ ಇಂದಿಗೂ ಹಾಗೇ ಉಳಿದಿದೆ. ಗೆಳತಿ ಚಿತ್ರಾ ಮದುವೆಯಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ ಮೇಲೆ ನಾನವಳನ್ನು ಕಂಡಿಲ್ಲ. ಎಂದಾದರೂ ಕಾಣುವ ಆಶೆಯಂತೂ ಇದೆ.

‘ದೋಸ್ತಿ’ ಚಿತ್ರ ನೋಡಲು ನಾವು ಕಾಲೇಜಿನಿಂದಲೇ ಹೋಗಿದ್ದೆವು. ‘ದೋಸ್ತಿ’ ಹಾಗೂ ನಮ್ಮ ಭಾಮಾಂಟಿಯೊಡನೆ ನೋಡಿದ ‘ಮೇರಾ ಸಾಯಾ’ ಎರಡೂ ಚಿತ್ರಗಳೂ ನನಗೆ ತುಂಬ ಪ್ರಿಯವಾಗಿದ್ದುವು. ಕಾಲೇಜ್ ಬಂಕ್ ಮಾಡಿ ನಾವು ನೋಡಿದ ಚಿತ್ರ, ‘ನೀಲ್ ಕಮಲ್.” ಮಧ್ಯಾಹ್ನಾನಂತರ ಮೊದಲ ಪೀರಿಯಡ್‌ಗೆ ಮಿಸ್ ಬರಲಿಲ್ಲವೆಂದು ಗೆಳತಿಯರೆಲ್ಲ ನೀಲ್‌ಕಮಲ್‌ಗೆ ಹೋಗುವ ಯೋಜನೆ ಹಾಕಿದರು. ಅಳುಕಿನಿಂದಲೇ ನಾನು ಜೊತೆಗೂಡಿದ್ದೆ.

ಗೆಳತಿ ಜಯಶ್ರೀಯ ಚಿತ್ರಕಲಾ ಸಾಮರ್ಥ್ಯದ ಬಗ್ಗೆ ನಮಗಾರಿಗೂ ತಿಳಿದಿರಲಿಲ್ಲ. ಮಿಸ್ ಸುಧಾ, ಡಯಾಗ್ರಾಮ್ ಬಿಡಿಸಲು ಬೋರ್ಡ್‌ನತ್ತ ತಿರುಗಿದರೆ, ಅವಳು ತನ್ನ ಪೇಪರ್‌ನಲ್ಲಿ ಮಿಸ್‌ನ ಚಿತ್ರ ಬಿಡಿಸುತ್ತಿದ್ದಳು. ಪಕ್ಕದಲ್ಲಿ ಕುಳಿತಿರುತ್ತಿದ್ದ ನಮಗೆ ನಗು ತಡೆಯಲಾಗುತ್ತಿರಲಿಲ್ಲ. ಮತ್ತೆ ಬಿ.ಜಿ.ಎಮ್. ಚಿತ್ರಕಲಾಶಾಲೆ ಸೇರಿದ ಜಯಶ್ರೀ ಇಂದು ಅಂತರ್ರಾಷ್ಟ್ರೀಯ ಮಟ್ಟದ ಪರಿಣತಿಯ ಚಿತ್ರಕಲಾವಿದೆ.

ಅಂತರ್ಕಾಲೇಜ್ ಸಂಗೀತ ಸ್ಪರ್ಧೆಗಳಲ್ಲಿ ಮಂಜೇಶ್ವರದ ನಿರ್ಮಲಾ ಭಕ್ತ, ಯಾವಾಗಲೂ ಬಹುಮಾನ ಗೆಲ್ಲುತ್ತಿದ್ದಳು. ಟೌನ್‌ಹಾಲ್‌ನಲ್ಲಿ ನಡೆಯುತ್ತಿದ್ದ ಈ ಸ್ಪರ್ಧೆಯಲ್ಲಿ ಅವಳ ಕಂಠದಿಂದ ಹೊರಡುತ್ತಿದ್ದ ‘ಕಹೀಂ ದೀಪ್ ಜಲೇ ಕಹೀಂ ದಿಲ್’ ಹಾಗೂ ಚರಣ್ ಕುಮಾರ್‌ನ ‘ಹರಿ ಓಂ’ ಈಗಲೂ ನನ್ನ ಕಿವಿಯಲ್ಲಿದೆ.

ಸುಧಾ ಟೀಚರ ಮನೆ ಪಕ್ಕದಲ್ಲೇ ಹರಿನಿವಾಸವಿತ್ತು. ಸಂಜೆ ಹೊತ್ತು ಅಲ್ಲಿಂದ ಸಾಯಿಬಾಬಾ ಭಜನೆ ಕೇಳಿಸುತ್ತಿತ್ತು. ಒಂದಿನ ಎದುರು ಮನೆ ಶಾರದಮ್ಮನೊಡನೆ ನಾನೂ ಅಲ್ಲಿಗೆ ಹೋಗಿದ್ದೆ. ತಂದೆಯವರಿಗೆ ಅದು ಇಷ್ಟವಾಗಲಿಲ್ಲವೆಂದು ಅರಿತೆ. ಸ್ವತಃ ನನಗೂ ಮತ್ತೆ ಅಲ್ಲಿಗೆ ಹೋಗ ಬೇಕನಿಸಲಿಲ್ಲ. ಬಾಬಾ ಬಗ್ಗೆ ನಾ.ಕಸ್ತೂರಿ ಅವರ ಪುಸ್ತಕವನ್ನು ಓದಿದರೂ, ಸಾಯಿಬಾಬಾ ದೇವರೆಂಬ ಭಾವವಾಗಲೀ, ಅವರನ್ನು ಪೂಜಿಸಬೇಕೆಂಬ ಅನಿಸಿಕೆಯಾಗಲಿ ಎಂದೂ ನನ್ನಲ್ಲಿ ಹುಟ್ಟಲಿಲ್ಲ. ಸೆಕುಂದರಾಬಾದ್‌ನ ಆನಂದಂಕ್‌ಲ್ ಹಾಗೂ ಅವರ ಅಣ್ಣ ಎಮ್.ಕೆ.ಅಂಕ್‌ಲ್, ಮಹಾ ಸಾಯಿಭಕ್ತರಾಗಿದ್ದು, ಅವರ ಮೂಲಕ ಸಾಯಿ ಆರಾಧನೆ ನಮ್ಮ ಬಂಧುವರ್ಗದಲ್ಲಿ ಹಲವು ಮನೆಗಳನ್ನು ಹೊಕ್ಕಿತ್ತು. ನಮ್ಮ ತಂದೆಯವರು ಇವರೀರ್ವರಿಗೂ ಪರಮಾಪ್ತರಾಗಿದ್ದರೂ ಸಾಯಿಬಾಬಾ ನಮ್ಮ ತಂದೆಯವರ ಬಳಿಗಾಗಲೀ ನಮ್ಮ ಬಳಿಗಾಗಲೀ ಸುಳಿಯಲೇ ಇಲ್ಲ. ಆದರೆ ಮುಂಬಯಿಯಲ್ಲಿ ನನ್ನ ಭಾವ ಪರಮ ಸಾಯಿಭಕ್ತರಾಗಿದ್ದು, ಆ ದಿನಗಳ ಅನುಭವ ಮುಂದೆ ತೆರೆದು ಕೊಳ್ಳಲಿದೆ. ಪಿ.ಯೂ.ಸಿ.ಯಲ್ಲಿ ನಮ್ಮ ಜೊತೆಗಿದ್ದ ಲವ್‌ಜಾಯ್, ತುಂಬ ಚೆಲುವೆ; ಅಷ್ಟೇ ಸೌಮ್ಯೆ. ತನ್ನ ತಂದೆಯ ವ್ಯವಹಾರದಲ್ಲಾದ ನಷ್ಟದ ಕಾರಣ, ತಂದೆಯ ಪ್ರಾಯದ ಮಧ್ಯವಯಸ್ಕ ಸಿರಿವಂತರೊಬ್ಬರನ್ನು ಲವ್‌ಜಾಯ್ ಮದುವೆಯಾಗಬೇಕಾಗಿ ಬಂದುದು ನಮಗೆಲ್ಲ ಅನಿರೀಕ್ಷಿತ ಆಘಾತವಾಗಿತ್ತು. ಹಾಗೆಯೇ ಎಸ್.ಎಸ್.ಎಲ್.ಸಿ.ಯಲ್ಲಿ ಜೊತೆಗಿದ್ದ ಫ್ಲೇವಿ, ನಮ್ಮೆಲ್ಲರಂತೆ ಕಾಲೇಜ್ ಸೇರದೆ ಮದುವೆಯಾಗಿ ಮುಂಬೈಗೆ ಹೋದುದನ್ನರಿತಾಗಲೂ ನಮಗಾದ ಅಚ್ಚರಿ ಅಪಾರ. ಗೆಳತಿ ಫ್ಲೇವಿ ರೆಬೆಲ್ಲೋಳ ಬಾಳಲ್ಲಾದ ಉತ್ಪಾತ ಮತ್ತೆ ನಮ್ಮರಿವಿಗೆ ಬಂದುದು, ವರ್ಷಗಳ ಬಳಿಕ ಸಾಹಿತಿ ನೇಮಿಚಂದ್ರರ ಲೇಖನಿಯಲ್ಲಿ ಮೂಡಿದ ಅವಳ `ನನ್ನ ಕಥೆ , ನಮ್ಮ ಕಥೆ’ ತರಂಗದಲ್ಲಿ ಬೆಳಕು ಕಂಡಾಗ. ‘ಮೈ ಸ್ಟೋರಿ, ಅವರ್ ಸ್ಟೋರಿ’ ಬರೆದು ಪ್ರಕಟಿಸಿ, ಸ್ತ್ರೀ ಸಂವೇದನೆ ಹಾಗೂ ಮಹಿಳಾ ಸಬಲೀಕರಣದ ಅಧ್ವರ್ಯುವಾಗಿರುವ ಫ್ಲೇವಿ, ಖ್ಯಾತ ವಕೀಲೆಯಾಗಿದ್ದು, ಮಜ್ಲಿಸ್ ಸಂಸ್ಥೆಯಲ್ಲಿ ದುಡಿಯುತ್ತಾ ಸತತ ಅಂತರ್ರಾಷ್ಟ್ರೀಯ ಮಹಿಳಾ ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ ಮಾಡುತ್ತಿರುತ್ತಾಳೆ. ಲಂಡನ್‌ನಿಂದ ಗೆಳತಿ ಪ್ರಭಾ ಬಂದಾಗಲೆಲ್ಲ ನಾವು ಒಂದಾಗಿ ಹಳೆಯ ದಿನಗಳನ್ನು ಸ್ಮರಿಸಿ ಕೊಳ್ಳುತ್ತೇವೆ.

ಕಾಲೇಜ್‌ನಲ್ಲಿದ್ದಾಗ, ಮುಕ್ಕಾ ಬೀಚ್‌ಗೆ ನಾವು ಗೆಳತಿಯರು ಒಟ್ಟಾಗಿ ಹೋದ ಸವಿನೆನಪು ಈಗಲೂ ಹಸಿಯಾಗಿದೆ. ಎಷ್ಟೊಂದು ಒಳ್ಳೆಯ, ಅಪಾಯಕರವಲ್ಲದ ತೀರವದು! ಕರೆಯಲ್ಲಿ ಸಾಲಾಗಿ ಕುಳಿತು ನಾವೆಲ್ಲ ಮನಸೋಕ್ತ ಸಮುದ್ರ ಸ್ನಾನಮಾಡಿದ್ದೆವು. ಮೀನುಗಾರನೊಬ್ಬ ಪುಟ್ಟದೊಂದು ಬಲೆಯ ತುಂಡಿನಲ್ಲಿ ಸುತ್ತಿ ತಂದ ಏಡಿಗಳನ್ನು ಗೆಳತಿ ಪ್ರಭಾ, ಯಾರಿಗೂ ಕೊಡದೆ, ತನಗೇ ಬೇಕೆಂದು ಜೊತೆಗೆ ಒಯ್ದಿದ್ದಳು. ಮದುವೆಯಲ್ಲಿ ಮದರಾಸ್‌ನ ಅಜ್ಜನ ಮನೆ ಕಾಸ್ಮಸ್‌ನಿಂದ ಬಳುವಳಿಯಾಗಿ ಬಂದಿದ್ದ ಸೊಗಸಾದ ಕಾಶ್ಮೀರಿ ಸಿಲ್ಕ್ ಸೀರೆ ಉಟ್ಟು ಹೋದ ನಾನು, ಮುಕ್ಕಾ ಬೀಚ್‌ನ ಸಮುದ್ರದಲೆಗಳಲ್ಲಿ, ಹೊಯ್ಗೆರಾಶಿಯಲ್ಲಿ ಮುಳುಗಿ ಒದ್ದೆಮುದ್ದೆಯಾಗಿ ಹೊಯ್ಗೆ ಅಂಟಿಸಿ ಕೊಂಡು ದುರ್ಗತಿಯಾದ ಆ ಬೆಲೆಬಾಳುವ ಸೀರೆಯೊಡನೆ ಹಿಂದಿರುಗಿದಾಗ ಅಮ್ಮ ಹೌಹಾರಿದ್ದರು! ನನಗೋ, ಸೀರೆಗಾದ ದುರ್ಗತಿಗಿಂತ ಹೆಚ್ಚಾಗಿ ಪ್ರಭನ ಜೊತೆಗೆ ಹೋದ ಏಡಿಗಳೇ ಕಣ್ಣಲ್ಲಿ ಕುಣಿಯುತ್ತಿದ್ದುವು!

ನಮ್ಮ ಸ್ಪೋರ್ಟ್ಸ್ ಟೀಚರ್ ಮಿಸ್ ಝೀಟಾ ಅರಾನ್ಹಾ ಕೋಲಿನಂತಹ ನೆಟ್ಟನೆ ದೇಹದ ಕ್ಷೀಣಕಾಯೆ. ಗಂಟಲಾಳದಿಂದ ಎದ್ದು ಬರುವ ಅವರ ಗೊಗ್ಗರು ದನಿ, ಅವರು ಸ್ವಲ್ಪ ಸಿಟ್ಟಾದಾಗ ಗಂಟಲೊಳಗೇ ಹೂತಂತೆ ಅನಿಸುತ್ತಿತ್ತು. ಮಕ್ಕಳ್ಯಾರೂ ಅವರಿಗೆ ಹೆದರುತ್ತಿರಲಿಲ್ಲ. ಸ್ವತಃ ಪಿ.ಟಿ.ಟೀಚರ ಮಗಳಾದರೂ, ಪೋಲಿಯೋ ಆದ ಬಳಿಕ ನಾನು ಸ್ಪೋರ್ಟ್ಸ್‌ನಲ್ಲಿ ಆಸಕ್ತಿ ಕಳಕೊಂಡಿದ್ದೆ. ಬೇಸ್‌ಬಾಲ್ ಅಂತೂ ನನಗೆ ಏನೇನೂ ಇಷ್ಟವಿರಲಿಲ್ಲ. ಸದಾ ಸಪ್ಪಗಿರುತ್ತಿದ್ದ ಮಿಸ್, ಬೇಸ್‌ಬಾಲ್ ಆಡಿಸುವಾಗ ಉತ್ಸಾಹದ ಬುಗ್ಗೆಯಾಗುತ್ತಿದ್ದರು. ಒಮ್ಮೆ ಸ್ಪೋರ್ಟ್ಸ್ ಪ್ರಾಕ್ಟೀಸ್ ನಡೆಯುತ್ತಿದ್ದಾಗ, ಡಿಸ್ಕಸ್ ಥ್ರೋ ಅಭ್ಯಾಸ ಮಾಡುತ್ತಿದ್ದ ಪುಷ್ಪನ ಕಾಲಿಗೆ ದೂರದಿಂದ ಎಸೆದ ಜಾವೆಲಿನ್ ಬಿದ್ದು, ನೋವಿಗೆ ಮೂರ್ಛೆ ಹೋದ ಅವಳ ಕಾಲು ಕ್ಷಣ ಮಾತ್ರದಲ್ಲಿ ಬಾತುಕೊಂಡು ಆಸ್ಪತ್ರೆಗೆ ಒಯ್ಯಲ್ಪಟ್ಟುದನ್ನೂ ಮರೆವಂತಿಲ್ಲ.

ಪಾಲೆತ್ತಾಡಿ ಸರ್, ಕ್ಲಾಸಿನಲ್ಲಿ ಪಾಠ ಮಾಡುವಾಗ ಯಾರಾದರೂ ಮಾತನಾಡುತ್ತಿರುವುದು ಕಂಡರೆ ಮತ್ತೂ ದನಿ ತಗ್ಗಿಸಿ ಪಾಠ ಮಾಡುತ್ತಿದ್ದರು. ಏಕಾಗ್ರತೆಯಿಂದ ಕೇಳಿದರೆ, ಎಷ್ಟೇ ದನಿ ತಗ್ಗಿಸಿ ಮಾತನಾಡಿದರೂ ಕೇಳಲೇ ಬೇಕು, ಎನ್ನುತ್ತಿದ್ದರು ಸರ್. ಶಬ್ದಕ್ಕೆ ಸಾವಿಲ್ಲದ ಬಗ್ಗೆ, ಎಂದಾದರೂ ಅಂತಹುದೊಂದು ಯಂತ್ರ ಸೃಷ್ಟಿಯಾದರೆ, ಜಗತ್ತಿನಲ್ಲಿ ಈ ವರೆಗೆ ಆದ ಎಲ್ಲ ಶಬ್ದಗಳನ್ನೂ, ಮಾತುಗಳನ್ನೂ ಪುನಃ ಕೇಳಬಹುದು ಎಂಬ ವೈಜ್ಞಾನಿಕ ಸತ್ಯವನ್ನೂ ನಮಗೆ ತಿಳಿಸಿದ್ದರು. ನಮ್ಮ ಕೊನೆಯ ವರ್ಷ ಬಾಟನಿ ಲೆಕ್ಚರರ್ ಆಗಿ ಕಾಲೇಜ್ ಸೇರಿದ ಮಿಸ್ ಉಷಾ ನಳಿನಿಯದು ಮೆಲುವಾದ ಒಡಕು ದನಿ; ಸೌಮ್ಯ ನಡೆನುಡಿ. ಮಕ್ಕಳು ಪಾಠದ ನಡುವೆ ಮಾತಿಗೆ ತೊಡಗಿದರೆ ಅವರಿಗೆ ಕಷ್ಟವಾಗುತ್ತಿತ್ತು. ಅವರಿಗೆ ತೊಂದರೆ ಕೊಟ್ಟ ಬಗ್ಗೆ ಮತ್ತೆ ನಮಗೆ ಬೇಸರವಾಗುತ್ತಿತ್ತು.

ಕಾಲೇಜ್‌ನಲ್ಲಿದ್ದಾಗ ವ್ಯಾಸರಾಯ ಬಲ್ಲಾಳರ ‘ಉತ್ತರಾಯಣ’ ಓದಿದ ನಾನು, ಬಲ್ಲಾಳರಿಗೆ ಪತ್ರ ಬರೆದು, ನನ್ನ ಮೆಚ್ಚಿಗೆಯನ್ನು ಸೂಚಿಸಿ, ಸಂದೇಹಗಳ ಬಗ್ಗೆ ಪ್ರಶ್ನೆ ಕೇಳಿದ್ದೆ. ಹಿಂದೆ ಓದಿ ಮೆಚ್ಚಿದ ಅವರ ‘ಹೇಮಂತಗಾನ’, ‘ವಾತ್ಸಲ್ಯ ಪಥ’ಗಳ ಬಗ್ಗೆ ನನ್ನ ಅಪಾರ ಮೆಚ್ಚಿಗೆಯನ್ನೂ ತಿಳಿಸಿದ್ದೆ. ಕೂಡಲೇ ಬಲ್ಲಾಳರಿಂದ ಉತ್ತರ ಬಂದಿತ್ತು. ಅವರೊಡನೆ ಮುಂದೆ ನಡೆದ ಪತ್ರವ್ಯವಹಾರದ ಎಲ್ಲ ಪತ್ರಗಳೂ ನನ್ನಲ್ಲಿ ಅಮೂಲ್ಯ ಸೊತ್ತಾಗಿ ಉಳಿದಿವೆ. ಹಾಗೆಯೇ ‘ಮದರ್’ ಓದಿ ಮೆಚ್ಚಿ, ವಿಶು ಕುಮಾರ್ ಅವರಿಗೆ ಬರೆದ ಪತ್ರಕ್ಕೂ ಕೂಡಲೇ ಉತ್ತರ ಬಂದಿತ್ತು. ಸುಧಾದಲ್ಲಿ ಧಾರಾವಾಹಿಯಾಗಿ ಬರಲಾರಂಭಿಸಿದ ಕೆ.ಟಿ.ಗಟ್ಟಿ ಅವರ ‘ಶಬ್ದಗಳು’, ‘ಸಾಫಲ್ಯ’, ‘ಅಬ್ರಾಹ್ಮಣ’, ‘ಕರ್ಮಣ್ಯೇವಾಧಿಕಾರಸ್ತೇ’ ಕೃತಿಗಳಿಂದಾಗಿ ಮನದಲ್ಲಿ ಮೂಡಿದ ಅಪಾರ ಮೆಚ್ಚುಗೆ ಹಾಗೂ ಪ್ರಶ್ನೆಗಳನ್ನು ಬರೆದು ಕೊಳ್ಳೋಣವೆಂದರೆ, ಕೃತಿಕಾರನ ವಿಳಾಸವಿರಲಿಲ್ಲ; ಓದಿದ ನನ್ನ ಮೆಚ್ಚುಗೆ, ಅಭಿಪ್ರಾಯ, ವಿಚಾರಗಳೆಲ್ಲ ನನ್ನ ಡೈರಿಯಲ್ಲೇ ಮೂಡುತ್ತಿದ್ದುವು. ದೂರದ ಇಥಿಯೋಪಿಯಾದಲ್ಲಿದ್ದ ಈ ಅದ್ಭುತ ಬರಹಗಾರನಿಗೆ ಬರೆಯಲು ನಾನು ಅವರ ‘ಯುಧ್ಧ’ ಕಾದಂಬರಿ ಪ್ರಕಟವಾಗುವವರೆಗೆ ಕಾಯಬೇಕಾಯ್ತು. ಅದಾಗಲೇ ಪ್ರಕಟವಾಗಿದ್ದ ಭೈರಪ್ಪನವರ ‘ಧರ್ಮಶ್ರೀ’, ‘ದೂರ ಸರಿದರು’ ಹಾಗೂ ‘ವಂಶವೃಕ್ಷ’ ಕೃತಿಗಳೂ ನನ್ನನ್ನು ಗಾಢವಾಗಿ ಪ್ರಭಾವಿಸಿದ್ದುವು. ನೀರಸವಾದ ಟ್ಯಾಕ್ಸಾನಮಿ, ಕ್ಲಾಸಿಫಿಕೇಶನ್‌ಗಳಿಗಿಂತ ಪಠ್ಯೇತರ ಓದಿನಲ್ಲೇ ನಾನು ಮುಳುಗಿ ಹೋದೆ.

ವಿದಾಯದ ದಿನ ಸಮೀಪಿಸುವಾಗ ಗೆಳತಿಯರಿಂದಲೂ, ಪ್ರಿಯ ಶಿಕ್ಷಕರಿಂದಲೂ ಸಂಗ್ರಹಿಸಿದ ಆಟೊಗ್ರಾಫ್‌ನ ನುಡಿಮುತ್ತುಗಳು ಇಂದಿಗೂ ಆ ಮರೆಯಲಾಗದ ದಿನಗಳಿಗೆ ಸಾಕ್ಷಿಯಾಗಿ ಉಳಿದಿವೆ.
ಎದೆಯೊಲುಮೆ ಬಂಧಿಸಿದೆ ಸ್ನೇಹಸರಪಳಿಯಿಂದೆ
ಹೃದಯಗೀತೆಯು ಮಧುರಜಾಲ ವಿರಚಿಸಿದೆ,
ಕಳೆದ ದಿನಗಳ ಕೆಳೆಯು ಬಾಗಿಲಿಕ್ಕಿದೆ ಬಂದು
ಹೃದಯ ಮಂದಿರದಲ್ಲಿ ನೀ ಕೈದಿ ಗೆಳತಿ
– ಎಂದು ಬರೆದವಳು, ನನ್ನ ಪ್ರಿಯ ಶಾರದಾ.