ಶ್ಯಾಮಲಾ ಮಾಧವ ಇವರ ನಾಳೆ ಇನ್ನೂ ಕಾದಿದೆ ಆತ್ಮಕಥಾನಕ ಧಾರಾವಾಹಿಯ
ಅಧ್ಯಾಯ – ೨೨

೧೯೭೫ರ ಬೇಸಿಗೆಯಲ್ಲಿ ಅಣ್ಣ ಮೋಹನ ಮತ್ತು ತಂಗಿ ಮಂಜುಳಾ ಮದುವೆ ನಡೆದು ನಾವು ಮಕ್ಕಳೊಡನೆ ಮುಂಬೈಗೆ ಹಿಂದಿರುಗಿದ ಬಳಿಕ, ದೊಡ್ಡ ಸಂಸಾರದಲ್ಲಿ ಹಿಂದಿನಂತೆ ನಗರದ ಬಂಧುಗಳಲ್ಲಿಗೆ ಹೋಗುವುದು ಬರುವುದು ಕಡಿಮೆಯಾಯ್ತು. ಎಳೆಯ ಮಕ್ಕಳೊಡನೆ ಹಾಗೆ ಹೋಗುವುದೂ ಕಷ್ಟವಿತ್ತು. ದೀಪಾವಳಿ ಹಾಗೂ ಬೇಸಗೆ ರಜೆಯಲ್ಲಿ ಮಕ್ಕಳೊಡನೆ ಊರಿಗೆ ಹೋಗುವುದು ಮಾತ್ರ ತಪ್ಪುತ್ತಿರಲಿಲ್ಲ.

ನಮ್ಮ ಸೋದರತ್ತೆ ಮನೆ, ‘ಸನ್ ವ್ಯೂ’ ಎದುರಿಗಿದ್ದ ಭೂಮಿಯನ್ನು, ತನ್ನ ಮಾವನ ಒತ್ತಾಯದ ಮೇರೆಗೆ ಕೊಂಡಿದ್ದ ನಮ್ಮ ತಂದೆ, ಅಲ್ಲಿ ಮನೆ ಕಟ್ಟಿಸಲಾರಂಭಿಸಿದ್ದರು. ಸನ್ ವ್ಯೂನ ವಿಶಾಲ ಹಿತ್ತಿಲಲ್ಲಿ ತಂದೆಯವರು ನೆಡಿಸಿದ್ದ ಕಾಲಪ್ಪಾಡಿ, ಆಪೂಸ್, ನೀಲಂ, ಪೈರಿ ಮಾವಿನ ಮರಗಳು ಫಲ ಕೊಡಲಾರಂಭಿಸಿದ್ದುವು. ಚಿಕ್ಕು, ಸೀತಾಫಲ, ರಾಮಫಲ, ಪೇರಳೆ, ನೆಲ್ಲಿಕಾಯಿ, ಹಲಸು, ಗೇರು ಮರಗಳೂ, ಸಾಕಷ್ಟು ತೆಂಗುಗಳೂ ಇಲ್ಲಿದ್ದುವು. ಒಳ್ಳೆಯ ಮೆತ್ತನೆ ಮಣ್ಣಿನ ಈ ಭೂಮಿಯಲ್ಲಿ ಹೂಗಿಡಗಳೂ ಸೊಂಪಾಗಿದ್ದುವು. ವಿಶಾಲ ಹಿತ್ತಿಲ ಹಿಂದೆ ಹೊಸಮನೆಯ ಅಜ್ಜಿಗೆ ಸೇರಿದ ಇನ್ನೊಂದು ಹಿತ್ತಿಲೂ ಇದ್ದು, ಔಷಧೀಯ ಹಾಗೂ ಮಾವು, ಹಲಸು, ಪುನಾರ್ಪುಳಿ, ತೇಗಗಳಂತಹ ಇತರ ದೊಡ್ಡ ಮರಗಳಿಂದ ತುಂಬಿದ ಆ ಹಿತ್ತಿಲಲ್ಲಿ ಮನೆ ಮಾತ್ರ ಇರಲಿಲ್ಲ. ಹುತ್ತಗಳೂ, ವಿಷಸರ್ಪಗಳೂ ಅಲ್ಲಿದ್ದುವು. ಅದರ ಹಿಂದಿದ್ದ ವಿಶಾಲ ಮೈದಾನದಲ್ಲಿ ಫಿಶರೀಸ್ ಹೈಸ್ಕೂಲ್ ತೆರೆಯಲ್ಪಟ್ಟಿತ್ತು.

ನಮ್ಮ ತಾಯ್ತಂದೆಯ ಸಾಧನೆಯಾದ ಮನೆ ‘ಚೇತನಾ’ ಸಿದ್ಧವಾಗಿ, ೧೯೭೬ರಲ್ಲಿ ಗೃಹಪ್ರವೇಶವಾಯ್ತು. ಗೃಹ ಪ್ರವೇಶದ ದಿನ, ಕೋಣೆಗಳನ್ನು ಪರಿಚಯಿಸುವಾಗ, ಮಗು ಪ್ರಜ್ವಲ್, ನಮ್ಮಮ್ಮನೊಡನೆ ಆಂಟ್ಯಮ್ಮನ ಕೋಣೆ ಯಾವುದೆಂದು ಕೇಳಿದ್ದ. ನಮ್ಮ ಪ್ರಿಯ ಭಾಮಾಂಟಿ, ನಮ್ಮ ಮಕ್ಕಳಿಗೆ ಆಂಟ್ಯಮ್ಮನಾಗಿದ್ದರು. ಮಗುವಿನ ಪ್ರಶ್ನೆ ಕೇಳಿ ಆಂಟ್ಯಮ್ಮನಿಗೆ ಹೃದಯ ತುಂಬಿ ಬಂದಿತ್ತು. ಅಮ್ಮ ನಿವೃತ್ತರಾಗಿದ್ದರು. ಚೇತನಾದ ಅಂಗಣ ಹಾಗೂ ಹಿತ್ತಿಲಲ್ಲಿ ಅಮ್ಮನ ಹೂದೋಟ ರೂಪುಗೊಂಡಿತು. ತಂದೆಯ ತೆಂಗು ಮಾವು ಹಾಗೂ ಇತರ ಹಣ್ಣಿನ ಮರಗಳೂ ಎದ್ದು ನಿಂತುವು.

ವಾತ್ಸಲ್ಯಮಯಿಯಾಗಿದ್ದ ನಮ್ಮಜ್ಜಿಯನ್ನು ಕಳಕೊಂಡ ಹೊಸತರಲ್ಲಿ ನಾನು ನನ್ನಾ ಪ್ರೀತಿಯ ಆಸರೆಯ ಬಗ್ಗೆ, ” ಅಮೃತವರ್ಷಿಣಿ” ಎಂಬ ಲೇಖನವನ್ನು ಬರೆದಿದ್ದೆ. ಅದು ನಮ್ಮ ‘ಬೆಳ್ಳಿ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಬಳಿಕ `ಅಶೋಕ’ ಎಂಬ ಶೀರ್ಷಿಕೆಯಿತ್ತು ಬರೆದ ಕಥೆಯೂ ‘ಬೆಳ್ಳಿ’ಯಲ್ಲಿ ಪ್ರಕಟವಾಯ್ತು. ಭೈರಪ್ಪನವರ ಕಾದಂಬರಿಗಳು ನನ್ನನ್ನು ಹಿಡಿದಿಟ್ಟಿದ್ದುವು. ಕಥೆ, ಕಾದಂಬರಿಕಾರ ಕೆ.ಟಿ.ಗಟ್ಟಿ ಅವರು ಅದೇ ಆಗ ಭಾರತಕ್ಕೆ ಮರಳಿ ಬಂದಿದ್ದು, ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯೊಡನೆ ಮೊದಲ ಬಾರಿಗೆ ಅವರ ಉಡುಪಿಯ ವಿಳಾಸ ಪ್ರಕಟವಾಗಿತ್ತು. ‘ಶಬ್ದಗಳು’ ಕಾದಂಬರಿಯಿಂದ ತೊಡಗಿ ಅವರಿಗೆ ಬರಕೊಳ್ಳುವುದು ತುಂಬಾ ಇತ್ತು.

ಅತ್ತಿಗೆಗೆ ಸುಖ ಪ್ರಸವವಾಯ್ತು. ಅವಿನಾಶನಷ್ಟು ಹುಟ್ಟಿನಲ್ಲೇ ಚೆಲುವಾಗಿದ್ದ ಮಗುವನ್ನು ನಾನು ಬೇರೆಲ್ಲೂ ನೋಡಿರಲಿಲ್ಲ. ಆ ಬೇಸಿಗೆಯಲ್ಲಿ ಎಂದಿನಂತೆ ಊರಿಗೆ ಹೋದ ಕೆಲದಿನಗಳಲ್ಲೇ ಅಸೌಖ್ಯ ಕಾಡಿತು. ಎಡ ತೋಳಲ್ಲೂ, ಎದೆಯಲ್ಲೂ ಉರಿಯೆದ್ದು, ಕೆಲ ದಿನಗಳ ಬಳಿಕ ಕೇವಲ ಒಂದು ನಾಣ್ಯದಷ್ಟಗಲಕ್ಕೆ ಸೂಕ್ಷ್ಮ ಗುಳ್ಳೆಗಳು ಮೂಡಿದುವು. ನೆರೆಯ ಪಾತುಮ್ಮ ಬೀಬಿ ಬಂದು ಊದಿ, ನಿವಾಳಿಸಿ, ಪಥ್ಯ ಹೇಳಿ ಹೋದರು. ಅಮ್ಮ, ಮಂಗಳೂರಿಗೆ ಡಾ. ಶಾಸ್ತ್ರಿಯ ಬಳಿಗೆ ನನ್ನನ್ನು ಕರೆದೊಯ್ದರು. ದಾರಿಯುದ್ದಕ್ಕೂ ನಿಶ್ಶಕ್ತಿ, ಎದೆನೋವು ಕಾಡಿತು. ಸರ್ಪಸುತ್ತು ಎಂದು ಹೇಳಿದ ಡಾಕ್ಟರ್, ಮಾತ್ರೆಗಳನ್ನಿತ್ತು, ಅದು ಚಿಕ್‌ನ್ ಪಾಕ್ಸ್‌ನ ಮುಂದಿನ ರೂಪವಾದ ನರಸಂಬಂಧಿ ವೈರಲ್ ಬಾಧೆ ಎಂದು ಹೇಳಿ, ಗುಳ್ಳೆಗಳು ವಿಸ್ತರಿಸಿ, ನರಗಳ ತುದಿಗಳ ವರೆಗೂ ಹೋಗಿ, ದೊಡ್ಡದಾಗಿ ನೀರು ತುಂಬಿಕೊಂಡು ಮತ್ತೆ ಹಾಗೇ ತಗ್ಗಿ, ಒಣಗಿ ಹೋಗುತ್ತವೆಂದೂ, ನನ್ನ ಮಟ್ಟಿಗೆ ಇದು ಸ್ವಲ್ಪ ತೀವ್ರ ಸ್ವರೂಪದಲ್ಲಿ ಬಾಧಿಸುವಂತೆ ಕಾಣುವುದರಿಂದ ಆರು ತಿಂಗಳವರೆಗೆ ನಿಶ್ಶಕ್ತಿ, ನರದೌರ್ಬಲ್ಯ ಕಾಡಬಹುದು, ವಿಶ್ರಾಂತಿ ಅಗತ್ಯ ಎಂದಂದರು.

ಮನೆಗೆ ಮರಳಿದ ನಾನು ಹಾಸಿಗೆ ಹಿಡಿದೆ. ದಿನದಿಂದ ದಿನಕ್ಕೆ ಗುಳ್ಳೆಗಳು ವಿಸ್ತರಿಸಿ ಅಂಗೈ ಬೆರಳ ತುದಿಯ ವರೆಗೂ ವ್ಯಾಪಿಸಿದುವು. ಉಸಿರಾಡುವುದು ಬಲು ಕಷ್ಟವಾಗಿತ್ತು. ಜನರು ಸಾಲುಗಟ್ಟಿ ನನ್ನನ್ನು ನೋಡಲು ಬರುತ್ತಿದ್ದರು. ಬೈಚರೊಬ್ಬರನ್ನು (ನಾಟಿ ವೈದ್ಯ) ಯಾರೋ ಕರೆತಂದರು. ಅವರು ಮಂತ್ರ ಪಠಿಸಿ ಪಥ್ಯ ಹೇಳಿದರು. ಚೆಂದೆಂಗಿನ ಎಳ ನೀರನ್ನೇ ಸಾಕಷ್ಟು ಕುಡಿಸುವಂತೆಯೂ, ಅದರ ಸಿಪ್ಪೆಯನ್ನು ಆ ಎಳ ನೀರಲ್ಲಿ ಮುಳುಗಿಸಿ ಬಾಧಿತ ಅಂಗಾಂಗವನ್ನು ತೊಳೆಯುವಂತೆಯೂ ಸಲಹೆ ನೀಡಿದರು. ಅಚ್ಚ, ಶಾರದತ್ತೆ, ನನ್ನ ಆ ಈ ಬೆಲ್ಯಮ್ಮ ನನ್ನ ಬಳಿ ಕುಳಿತು ಬೀಸಣಿಗೆಯಿಂದ ಆ ಉರಿಗೆ ಗಾಳಿ ಬೀಸುತ್ತಿದ್ದರು. ಆ ದಿನಗಳ ನನ್ನಚ್ಚನ ಕಣ್ಗಳ ಅನುಕಂಪ ಭರಿತ ನೋಟವನ್ನು ನಾನೆಂದೂ ಮರೆಯಲಾರೆ. ಅಸೌಖ್ಯ ಗುಣವಾಗುತ್ತಾ ಬಂದೊಂದು ದಿನ, ನಾನು ಮಲಗಿದಲ್ಲೇ `ಬೈಜೂ ಬಾವರಾ’ ಫಿಲ್ಮಿನ “ಓ ದುನಿಯಾ ಕೇ ರಖ್ವಾಲೇ, ಸುನ್ ದರ್ದ್ ಭರೇ ಮೇರೇ ನಾಲೇ” ಹಾಡನ್ನು ಮೆಲುದನಿಯಲ್ಲಿ ಗುನುಗುನಿಸುತ್ತಿದ್ದೆ. ಹೊರಗೆ ಅದನ್ನು ಆಲಿಸಿದ ಅಚ್ಚ, ಅಮ್ಮನೊಡನೆ, ” ಯಾರದು, ಬೇಬಿಯಾ? ಪಾಪ! ನೋವು ಮರೆಯಲು ಹಾಡುತ್ತಿದ್ದಾಳೆ”, ಅಂದುದು ಕೇಳಿಸಿ ದುಃಖ ಉಮ್ಮಳಿಸಿತು. ಸರ್ಪಸುತ್ತು ಇಷ್ಟೊಂದು ತೀವ್ರವಾಗಿ ಯಾರನ್ನೂ ಕಾಡಿರಲಿಕ್ಕಿಲ್ಲ, ಎಂದು ಜನರಾಡಿಕೊಳ್ಳುತ್ತಿದ್ದರು. ಮೇ ತಿಂಗಳ ಆ ಉರಿಸೆಖೆಯಲ್ಲಿ ಸಮಾರಂಭವೊಂದರಲ್ಲಿ, ದೊಡ್ಡಮ್ಮನೊಂದಿಗೆ ಅರೆವ ಕಲ್ಲಿನಲ್ಲಿ ಸಾರಿಗಾಗಿ ಕಾಯಿಮೆಣಸು, ಶುಂಠಿ ಕಡೆದುದೂ ಇದು ಇಷ್ಟು ತೀವ್ರವಾಗಲು ಕಾರಣ, ಎಂಬ ಊಹಾಪೋಹಗಳೂ ಎದ್ದುವು.

ತುಷಾರ್ ಮುಂಬೈಗೆ ಶಾಲೆಗೆ ಹಿಂದಿರುಗ ಬೇಕಿತ್ತು. ನಾನಂತೂ ಸದ್ಯ ಮುಂಬೈಗೆ ಹಿಂದಿರುಗುವುದು ಅಸಾಧ್ಯವಿತ್ತು. ಆದರೆ, ನಮ್ಮಕ್ಕ ಇಂಗ್ಲಿಷ್ ಎಮ್.ಎ. ತರಗತಿಗೆ ಸೇರಿಕೊಳ್ಳುವ ತಯಾರಿ ನಡೆದುದರಿಂದ ತುಷಾರ್‌ನ ಜವಾಬ್ದಾರಿ ಹೊರುವುದು ಅವರಿಂದ ಸಾಧ್ಯವಾಯ್ತು. ಹೀಗಾಗಿ ತುಷಾರ್, ಮಂಗಳೂರಿನ ಸೇಂಟ್ ಆನ್ಸ್‌ನ ಕಾರ್ಮೆಲ್ ಸ್ಕೂಲ್‌ಗೆ ಹೋಗಲಾರಂಭಿಸಿದ.

ಚೇತರಿಸಿಕೊಂಡ ನಾನು, ನನ್ನ ಮೆಚ್ಚಿನ ಲೇಖಕ, ಕಾದಂಬರಿಕಾರ ಕೆ.ಟಿ.ಗಟ್ಟಿ ಅವರಿಗೆ ಅವರ ಕೃತಿಗಳ ಬಗ್ಗೆ ನನ್ನ ಮೆಚ್ಚುಗೆಯನ್ನು, ನನ್ನ ಪರಿಚಯವನ್ನು, ಊರಲ್ಲೇ ಉಳಿಯಬೇಕಾಗಿ ಬಂದ ವಿವರವನ್ನು, ಹಾಗೂ ನನ್ನೂರನ್ನು ಹೊಗಳಿ ಪತ್ರವೊಂದನ್ನು ಬರೆದೆ. ಅದು ನಮ್ಮ ನಡುವಿನ ಮುಂದಿನ ನೂರಾರು ಪತ್ರಗಳಿಗೆ ನಾಂದಿಯಾಯ್ತು; ಹಾಗೂ ಪತ್ರ ಸಿಕ್ಕಿದ ಮರುದಿನವೇ ಕೆ.ಟಿ.ಗಟ್ಟಿ ಅವರು ನನ್ನ ಮುಂದೆ ಹಾಜರಾದರು. ತಂದೆಯವರೊಡನೆ ಮಾತನಾಡುತ್ತಾ, ನಾನೂ ಈ ಊರಿನವನೇ ಎಂದು ಅವರಿಗೆ ಗೊತ್ತಿಲ್ಲ; ತಮ್ಮೂರನ್ನು ಹೊಗಳಿ ತುಂಬಾ ಬರೆದಿದ್ದಾರೆ, ಎಂದು ನಕ್ಕರು. ಅವರ ಸರಳ ವ್ಯಕ್ತಿತ್ವದ ಪರಿಚಯ ಅಂದೇ ಆಯ್ತು. ಹೌದು; ನಮ್ಮೂರ ಶಾಲೆಯ ಸುವರ್ಣ ಮಹೋತ್ಸವ ಸಂಚಿಕೆಯಲ್ಲಿ ಕೆ.ಟಿ.ಗಟ್ಟಿ ಅವರು ಊರ ಬಗ್ಗೆ ಬರೆದ ಲೇಖನವೂ ಇತ್ತು.

ಮರುವರ್ಷ ಮಕ್ಕಳೊಡನೆ ಮುಂಬೈಗೆ ಹಿಂದಿರುಗಿದ ನಮ್ಮ ವಾಸ್ತವ್ಯ, ಪುನಃ ಭಾಂಡೂಪ್‌ನ ನಮ್ಮ ಮೊದಲ ಮನೆಗೆ ಬದಲಾಯ್ತು. ನನ್ನ ತಂಗಿ ಮತ್ತು ರಾಜನ ಸಂಸಾರವೂ ಇಲ್ಲಿ ನಮಗೆ ಜೊತೆಯಾಯ್ತು. ಬಿ.ಎಡ್. ಮುಗಿಸಿದ್ದ ತಂಗಿ ಮಂಜುಳಾ, ಶಾಲೆಯಲ್ಲಿ ಟೀಚರ್ ಆಗಿ ಸೇರಿದಳು. ೧೯೭೮ ಅಕ್ಟೋಬರ್‌ನಲ್ಲಿ ಊರಲ್ಲಿ ತಂಗಿಗೆ ಹೆರಿಗೆಯಾಗಿ, ಮಗು ರೋಹನ್ ಜೊತೆ ನಾವು ಹಿಂದಿರುಗಿದ ಮೇಲೆ, ನಾನೇ ಅವನಿಗೆ ಅಮ್ಮನಾದೆ. ತನ್ನ ತಾಯಿಯನ್ನು ನಾವು ಕರೆವಂತೆ ಕುಂಞಿ ಎಂದೇ ಅವನು ಕರೆಯುತ್ತಿದ್ದ.

೧೯೭೭ರಲ್ಲಿ ನಮ್ಮಮ್ಮ ನಿವೃತ್ತರಾದರು.ಪೇಜಾವರ ಶ್ರೀಗಳ ಕೈಗಳಿಂದ ಅಮ್ಮ ಸನ್ಮಾನಿತರಾದ ಆ ಸ್ಮರಣೀಯ ವಿದಾಯ ಕೂಟದ ಬಳಿಕ, ಮತ್ತೆ ಆ ನಮ್ಮ ಭವ್ಯ ಶಾಲಾ ಕಟ್ಟಡವನ್ನು ಕಾಣುವ ಭಾಗ್ಯ ನನಗೊದಗಲಿಲ್ಲ. ನಂತರದ ವರ್ಷಗಳಲ್ಲಿ ಅದು ಕಟ್ಟಡದ ಕಾಡೇ ಆಯ್ತು.

ಅದೇ ವರ್ಷದ ಮಳೆಗಾಲದಲ್ಲಿ ನಮ್ಮೂರ ಹೊಳೆ ಹುಚ್ಚೆದ್ದು ಹರಿದು, ಅಜ್ಜಿಮನೆಯ ಸುತ್ತಮುತ್ತೆಲ್ಲ್ರ ಪ್ರಬಲ ಪ್ರವಾಹ ತುಂಬಿ ನಮ್ಮ ಪರಮಪ್ರಿಯ ಗುಡ್ಡೆಮನೆ ನೆಲಸಮವಾಯ್ತು. ಪ್ರವಾಹ ಹಿತ್ತಿಲೊಳಗೆ ತುಂಬಿ ಬಂದು ಹೊಳೆ, ಗದ್ದೆ, ಹಿತ್ತಿಲು, ಅಂಗಳ, ಬಾವಿ ಎಲ್ಲವೂ ಒಂದೇ ಆಗಿ ಮನೆಯ ಜಗಲಿಯೇರ ತೊಡಗಿದಾಗ ಚಿಕ್ಕಮ್ಮ ಮಕ್ಕಳೊಡನೆ ಹೇಗಾದರೂ ಎದುರಿನ ಗದ್ದೆ ದಾಟಿ ರಸ್ತೆಗೆ ಬಂದರೆ, ಅಲ್ಲೂ ಪ್ರಬಲ ಪ್ರವಾಹ! ಹೆದ್ದಾರಿಯಲ್ಲಿ ವಾಹನಗಳೆಲ್ಲ ನಿಂತಿರುವುದನ್ನು ಕಂಡು ನಮ್ಮ ತಂದೆ ಹಾಗೂ ಶಾರದತ್ತೆ ಪ್ರವಾಹ ಏರಿರಬೇಕೆಂದು ಊಹಿಸಿ ಗಾಬರಿಯಾಗಿ ಅಜ್ಜಿ ಮನೆಯತ್ತ ಹೊರಟರೆ, ದಾರಿಯಲ್ಲಿ ಪ್ರವಾಹದ ಮಧ್ಯೆ ಒಬ್ಬರನ್ನೊಬ್ಬರು ಆಂತು ನಿಂತ ಮಕ್ಕಳನ್ನು ಕಂಡು ಹೇಗಾಗಿರಬೇಡ! ತಂದೆಯವರು, ಅಲ್ಲೇ ನಿಲ್ಲಿ, ಮುಂದೆ ಬರಬೇಡಿ ಎಂದು ಬೊಬ್ಬಿಡುತ್ತಿದ್ದರೂ, ಮಕ್ಕಳು ನಿಲ್ಲಲಾರದೆ, ಆ ಪ್ರವಾಹದಲ್ಲೇ ತೇಲಿದಂತೆ ನಡೆದು ಬಂದು ಶಾರದತ್ತೆಯನ್ನಾಂತು ಅತ್ತ ವಿವರವೆಲ್ಲ ದೂರ ಮುಂಬೈಯಲ್ಲಿದ್ದ ನನ್ನ ಪಾಲಿಗೆ ಕೇಳಿ ಅರಿತುದಷ್ಟೇ. ವಿಪರೀತ ಜ್ವರದಿಂದಿದ್ದ ಚಿಕ್ಕಪ್ಪನನ್ನು, ಮನೆಯ ನಾಯಿಯನ್ನು ಹಾಗೂ ಅಲ್ಪ ಸ್ವಲ್ಪ ಸಾಮಾನುಗಳನ್ನು ರಕ್ಷಿಸಲು, ಪಶ್ಚಿಮದಲ್ಲಿ ಜಲಸಾಗರವಾದ ಗದ್ದೆಗಳಾಚೆ ಅಷ್ಟೆತ್ತರದ ದಿಬ್ಬದ ಮೇಲಿನ ರೈಲು ಹಳಿಯನ್ನೂ ತುಂಬಿದ ಪ್ರವಾಹದಲ್ಲಿ ಕಡಲ ಕರೆಯಿಂದ ನಮ್ಮ ತಲೆಬಾಡಿ ಅಜ್ಜ ದೋಣಿಯಲ್ಲಿ ಬರಬೇಕಾಯ್ತು. ಆ ದೋಣಿಯಲ್ಲಿ ಚಿಕ್ಕಪ್ಪನನ್ನೂ, ನಾಯಿಯನ್ನೂ, ಸಾಮಾನನ್ನೂ ಮನೆಯ ದಕ್ಷಿಣಕ್ಕಿದ್ದ ಕುದುರಿಗೆ ತಂದು ಮುಟ್ಟಿಸಿದರು, ಅಜ್ಜ ಹಾಗೂ ಜೊತೆಯಲ್ಲಿದ್ದವರು.

ಮನೆ ಕುಸಿದು ಬಿದ್ದು ಹೋದರೂ, ಗೋಡೆಯಲ್ಲಿದ್ದ ನಮ್ಮ ಬೆಲ್ಯಮ್ಮನ ಪಠ, ದೇವರ ಪಠ, ತೂಗುದೀಪ, ಅಟ್ಟದಲ್ಲಿರಿಸಿದ್ದ ಮುಡಿಪುಗಳು ಏನೇನೂ ಹಾಳಾಗದೆ ಸುರಕ್ಷಿತವಿದ್ದುವು.ಯಾವ ಜೀವಹಾನಿಯೂ ಆಗಿರಲಿಲ್ಲ. ಆದರೆ ನಮ್ಮ ಆ ಜೀವಕ್ಕೂ ಮಿಗಿಲಾದ ಪ್ರಿಯ ಮನೆ ಮಾತ್ರ ಅಳಿದು ಹೋಯ್ತು. ಪುನಃ ಕಟ್ಟಿದ ಸಿಮೆಂಟ್ ಮನೆ ಆ ಪ್ರಿಯಮನೆಯಂತನಿಸಲು ಸಾಧ್ಯವೇ? ಹಿತ್ತಿಲನ್ನೂ ಹೊಯ್ಗೆ, ಮಣ್ಣು ತಂದು ತುಂಬಿ ಸಾಕಷ್ಟು ಎತ್ತರಿಸಲಾಯ್ತು. ತೆಂಗಿನ ಬದುಗಳ ನಡುವೆ ಬೆಳ್ದಾವರೆಗಳು ತುಂಬಿದ್ದ ಆ ರಮ್ಯ ಹಿತ್ತಿಲು, ಮಣ್ಣು ತುಂಬಿಸಿಕೊಂಡು ಬದಲಾಯ್ತು. ಪುನಃ ಆ ಹಿಂದಣ ವಿನ್ಯಾಸದ ಪ್ರಿಯ ಮನೆಯನ್ನೇ ಕಾಣಲು ನನ್ನ ಕಣ್ಣು ಕಾತರಿಸುತ್ತಿದೆ.

೧೯೮೦ರಲ್ಲಿ ನನ್ನ ಕೈ ಸೇರಿದ ಪಟ್ಟಮಹಾದೇವಿ ಶಾಂತಲಾ ದೇವಿ ನನ್ನನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ಬಿಟ್ಟಿತು. ಶಾಲಾದಿನಗಳಲ್ಲೋದಿದ ಕೆ.ವಿ.ಅಯ್ಯರ್‌ರ ಕಾಲ್ಪನಿಕ ಶಾಂತಲೆಗಿಂತ ಭಿನ್ನವಾದ ಈ ಶಾಂತಲೆಗೆ ನಾನು ಪೂರ್ಣ ಮಾರುಹೋದೆ. ಮೊದಲ ಮಗುವಿನ ಬಸಿರಲ್ಲೇ ಹೆಣ್ಣು ಮಗುವನ್ನು ಬಯಸಿ, ಎರಡು ಬಾರಿಯೂ ನಿರಾಶಳಾಗಿದ್ದ ನನ್ನನ್ನು, ಶಾಂತಲೆ ಮೂರನೆ ಯತ್ನಕ್ಕೆ ಪ್ರೇರೇಪಿಸಿದಳು. ಆದರೆ ಈ ಬಾರಿಯೂ ಶಾಂತಲೆಯ ಬದಲಿಗೆ ಮಡಿಲು ತುಂಬಿದವನು, ಹರ್ಷವರ್ಧನ.

ಹರ್ಷನ ಬಸುರಿನಲ್ಲಿ, ಏಳು ತಿಂಗಳಾಗುವಾಗ ಒಂದಿನ, ನಮ್ಮ ಸೋದರಮಾವ, ಹೆಂಡತಿ ಸುಧಕ್ಕ ಹಾಗೂ ಮಕ್ಕಳೊಡನೆ, ತುಷಾರ್ ಹಾಗೂ ನನ್ನನ್ನು ಬೈಕುಲಾದ ರಾಣಿಬಾಗ್‌ಗೆ ವಿಹಾರಕ್ಕೆ ಕರೆದೊಯ್ದರು. ಹಿಂದಿರುಗುವಾಗ ಬೈಕುಲಾದಲ್ಲಿ ರೈಲು ಏರುವಾಗ ಮಾವ, ತುಷಾರ್ ಹಾಗೂ ಮಗ ರೋಹಿತ್‌ನನ್ನು ತಮ್ಮ ಜೊತೆಗೆ ಗಂಡಸರ ಬೋಗಿಗೆ ಒಯ್ದರು. ಚಿಕ್ಕವ ರಾಹುಲ್, ಪ್ರಜ್ವಲ್‌ರ ಜೊತೆ ನಾವು ಲೇಡೀಸ್ ಬೋಗಿ ಹತ್ತಿದೆವು. ಅಷ್ಟೇನೂ ರಶ್ ಇರಲಿಲ್ಲವಾದರೂ, ಕುಳ್ಳಿರಲು ಸ್ಥಳವಿರದೆ ನಾವು ಆರಾಮವಾಗಿ ನಿಂತು ಮಾತಿನಲ್ಲಿ ಮುಳುಗಿದ್ದೆವು. ರಾಹುಲ್, ಪ್ರಜ್ವಲ್ ಸುಧಕ್ಕನ ಬಳಿ ನಿಂತು ಮಾತಲ್ಲಿ ತೊಡಗಿದ್ದರು. ದಾದರ್ ಸ್ಟೇಶನ್ ಬಂದಾಗ ಅದು ಹೇಗೆ ಅಂತಹ ನೂಕುನುಗ್ಗಲಾಯ್ತೋ ಅರಿಯೆ! ಹೆಂಗಸರ ದಂಡೇ ಬೋಗಿಯೊಳ ಬಂದು ಗಲಭೆ, ಜಗಳ, ಕೋಳಿ ಹೆಂಗಸರಿಬ್ಬರ ಹೊಯ್ದಾಟ, ತಾರಕಕ್ಕೇರಿದ ಇತರ ಸ್ವರಗಳಲ್ಲಿ ನಾನು ವಿಹ್ವಲಳಾದೆ. ನಾನು, ಸುಧಕ್ಕ ಇಬ್ಬರೂ ಗಿಡ್ಡ ಆಕೃತಿಯವರು. ಆ ರಶ್‌ನಲ್ಲಿ ನನಗೆ ಅವರನ್ನಾಗಲೀ, ಅವರಿಗೆ ನನ್ನನ್ನಾಗಲೀ ಕಾಣುತ್ತಿಲ್ಲ. ಮಗು ಪ್ರಜ್ವಲ್ ಎಲ್ಲಿರುವನೋ ತಿಳಿಯುತ್ತಿಲ್ಲ. ಘಾಟ್‌ಕೋಪರ್ ಬಂದರೆ ಸುಧಕ್ಕ, ಮಾವ ಇಳಿದು ತಮ್ಮ ಮನೆಗೆ ಹೋಗುವವರು. ಪ್ರಜ್ವಲ್ ಎಲ್ಲಿ? ಸುಧಕ್ಕಾ, ಸುಧಕ್ಕಾ ಎಂದು ಬೊಬ್ಬಿಡುವ ನನ್ನ ಸ್ವರ ನನಗೇ ಕೇಳಿಸುತ್ತಿಲ್ಲ. ಘಾಟ್‌ಕೋಪರ್ ಸ್ಟೇಶನ್ ಕೂಡಾ ಬಂತು; ರಶ್ ಸ್ವಲ್ಪ ಕರಗಿತು; ಆದರೆ ಸುಧಕ್ಕ, ಮಕ್ಕಳು ಕಾಣುತ್ತಿಲ್ಲ! ನನ್ನ ಪ್ರಜ್ವಲ್ ಇಲ್ಲ! ನನ್ನ ಅವಸ್ಥೆ ಕಂಡು, ನನಗೆ ಒತ್ತಿ ನಿಂತಿದ್ದ ಇಬ್ಬರು ಹೆಂಗಸರು ನನ್ನನ್ನು ಸಮಾಧಾನಿಸಲೆತ್ನಿಸಿದರು. ವಿಕ್ರೋಲಿ ಸ್ಟೇಶನ್‌ನಲ್ಲಿ ನನ್ನನ್ನು ರೈಲಿನಿಂದ ಇಳಿಸಿ, ಸ್ಟೇಶನ್‌ನಲ್ಲಿ ಕಂಪ್ಲೇಂಟ್ ಕೊಡಲು ಕರೆದೊಯ್ದರು. ಸ್ಟೇಶನ್ ಮಾಸ್ಟರ್ ಹಾಗೂ ಪೊಲೀಸ್, ತಕ್ಷಣ ಅಹವಾಲು ಬರೆದುಕೊಂಡು, ಸಮಾಧಾನಿಸಲೆತ್ನಿಸಿದರು. ಜೊತೆಯಲ್ಲಿದ್ದವರು ಖಂಡಿತ ಮಗು ಪ್ರಜ್ವಲ್‌ನನ್ನು ಇಳಿಸಿ ಕೊಂಡಿರಬೇಕು, ನೀವು ಮನೆಗೆ ಹೋಗಿ, ಅವರು ಅಲ್ಲಿಗೇ ಕರೆತರಬಹುದು, ಎಂದರು. ಅದು ಫೋನ್ ಆಗಲೀ, ಮೊಬೈಲ್ ಆಗಲೀ ಇಲ್ಲದ ಕಾಲ. ಆ ಆಪದ್ಬಾಂಧವ ಹೆಂಗಸರು ನನ್ನೊಡನೆ ಪುನಃ ರೈಲು ಹತ್ತಿ, ಭಾಂಡೂಪ್‌ನಲ್ಲಿ ಇಳಿಯುವಾಗ ಧ್ವನಿವರ್ಧಕ ಬಿತ್ತರಿಸುತ್ತಿತ್ತು – “ಬಿಳಿವರ್ಣದ, ಕಪ್ಪುಕಣ್ಗಳು ಹಾಗೂ ಕಪ್ಪುಕೂದಲ, ಸ್ವಲ್ಪ ಚೈನೀಸ್ ಚಹರೆಯ ಆರು ವರ್ಷದ ಬಾಲಕ ದಾದರ್, ವಿಕ್ರೋಳಿ ಮಧ್ಯೆ ರೈಲಿನಿಂದ ಕಾಣೆಯಾಗಿದ್ದಾನೆ…..” ನೋಡಲೂ ಹಾಗಿದ್ದು, ತುದಿಗಾಲಲ್ಲಿ ನಡೆಯುತ್ತಿದ್ದ ಮಗು ಪ್ರಜ್ವಲ್‌ನನ್ನು ನಮ್ಮ ಯೇಸಣ್ಣ ಮಾವೋ ಎಂದು ಕರೆಯುತ್ತಿದ್ದರು!

ಆ ಹೆಂಗಸರು, ಹಾಗೂ ಹಿಂದೆ ಪೊಲೀಸ್‌ನೊಡನೆ ಅಳುತ್ತಾ ಮನೆಯತ್ತ ಸಾಗುವಾಗ, ಎದುರಿನಲ್ಲಿ ಮಾವ, ಸುಧಕ್ಕ ಪ್ರಜ್ವಲ್‌ನ ಕೈಹಿಡಿದು ಬರುತ್ತಿರುವುದು ಕಂಡಿತು. ಹೋದ ಜೀವ ಮರಳಿತ್ತು. ಆದರೆ ಎರಡು ದಿನಗಳವರೆಗೆ ಹೊಟ್ಟೆಯಲ್ಲಿ ಮಗುವಿನ ಚಲನೆ ಇರದೆ, ಪರೀಕ್ಷೆ ನಡೆಸಬೇಕಾಯ್ತು. ತುಂಬ ಬೆಳ್ಳಗೆ ಚೆಲುವಾಗಿದ್ದ ಹರ್ಷನಿಗೆ ಎರಡು ವರ್ಷಗಳ ವರೆಗೆ ನಾನು ಹೆಚ್ಚಾಗಿ ಹೆಣ್ಣುಮಗುವಿನ ಫ್ರಾಕನ್ನೇ ತೊಡಿಸುತ್ತಿದ್ದೆ. ಶಾಂತಲೆಯ ಬದಲಿಗೆ ಅಳುವೆಂಬುದೇ ಇರದ ಶಾಂತಸ್ವಭಾವದ ಮಗುವಿನೊಡನೆ ಮೂರನೇ ತಿಂಗಳಲ್ಲೇ ಮುಂಬೈಗೆ ಹಿಂದಿರುಗಿದಾಗ ಒಂದು ಬೆಳಿಗ್ಗೆ ಕರೆಘಂಟೆ ಧ್ವನಿಸಿತು. ಬಾಗಿಲು ತೆರೆದರೆ, ಹೊಸ ಮಗುವಿನ ಆಗಮನವನ್ನು ಅರಿತು ಇಬ್ಬರು ಮಂಗಳಮುಖಿಯರು ಹಾಜರಾಗಿದ್ದರು. “ಲಡಕಾ ಹುವಾ ಹೆ, ಖುಶೀ, ಖುಶೀ ದೇ ದೋ ಬಹನ್”, ಎಂದ ಅವರಿಗೆ ನಾನು, “ಮುಝೇ ಕೋಯೀ ಖುಶೀ ನಹೀ, ಮುಝೇ ತೋ ಲಡಕೀ ಚಾಹಿಯೇ ಥಾ”, ಎಂದೆ. ಒಡನೆ ಅವರು ಕನ್ನಡದಲ್ಲಿ, “ಏನು ಮಾತೂಂತ ಆಡ್ತೀಯಾ, ತಾಯಿ? ಮುತ್ತಿನಂಥಾ ಮೂರು ಗಂಡು ಮಕ್ಕಳಿದ್ದಾರೆ; ಚಿನ್ನದಂಥಾ ಮೂರು ಸೊಸೆಯಂದಿರನ್ನು ತರ್‍ತೀಯಾ!” ಅಂದಾಗ ನನಗೆ ನನ್ನ ದುಡುಕಿನ ಬಗ್ಗೆ ನಾಚಿಕೆ ಅನಿಸಿತು. ಮುಂಬೈಯ ಮಂಗಳಮುಖಿಯರಲ್ಲಿ ಹೆಚ್ಚಿನವರು ಕನ್ನಡದವರೇ. ಅವಿವೇಕದ ದುಡುಕಿನಲ್ಲಿ ಇಂತಹ ಅನಿರೀಕ್ಷಿತ ಪಾಠಗಳೂ ನಮಗಾಗಿ ಕಾದಿರುತ್ತವೆ; ನಮ್ಮನ್ನು ತಿದ್ದುತ್ತವೆ.

(ಮುಂದುವರಿಯಲಿದೆ)