ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ
ನಾಳೆ ಇನ್ನೂ ಕಾದಿದೆ
ಅಧ್ಯಾಯ – ೨೮
ಎಕೋ ಹೆರನ್ ಎಂಬ ಅಮೆರಿಕನ್ ಲೇಖಕಿಯ `ದ ಸ್ಟೋರಿ ಆಫ್ ಅ ನರ್ಸ್’ ಎಂಬ ಕಥಾನಕದ ಪುಸ್ತಕವನ್ನು ನಮ್ಮಕ್ಕ, ಗಾಡ್ರೆಜ್ ಸ್ಕೂಲ್ ಲೈಬ್ರೆರಿಯಿಂದ ತಂದಿದ್ದರು. ಲಾಸ್ ಏಂಜಲಿಸ್ನ ಆಸ್ಪತ್ರೆಯ ಟ್ರೋಮಾ ಸೆಂಟರ್ನ ತುರ್ತು ನಿಗಾ ಘಟಕದಲ್ಲಿನ ದಾದಿಯೊಬ್ಬಳ ವ್ಯಸ್ತ ದಿನಚರಿಯ ಮಾರ್ಮಿಕ ಚಿತ್ರಣವಿರುವ ಕಥೆಯದು. ಓದಿ ಮುಗಿಸಿದ ಬಳಿಕ ಪುಸ್ತಕವನ್ನು ಲೈಬ್ರೆರಿಗೆ ಹಿಂದಿರುಗಿಸಲೇ ಬೇಕಾಯ್ತು. ನನಗೆ ತುಂಬ ಮೆಚ್ಚಿಕೆಯಾದ ಈ ಕೃತಿಯನ್ನು ಕನ್ನಡಕ್ಕಿಳಿಸುವ ಆಶೆಯಿಂದ ಮತ್ತೆ ಜಗತ್ತಿನಲ್ಲೆಲ್ಲ ಹುಡುಕಿಸಿದರೂ, ಎಲ್ಲೂ ಆ ಪುಸ್ತಕ ಸಿಗದಾಯ್ತು.
ಮತ್ತೊಮ್ಮೆ ಶಾಲಾ ಲೈಬ್ರೆರಿಯಿಂದ ಅಕ್ಕ ತಂದಿದ್ದ, ಆಂಗ್ಲ ಲೇಖಕಿ ಎಮ್.ಎಮ್.ಕೇ. ವಿರಚಿತ `ಫಾರ್ ಪೆವಿಲಿಯನ್ಸ್’ ಕೂಡಾ ನನಗೆ ತುಂಬ ಇಷ್ಟವಾಯಿತು. `ಗಾನ್ ವಿದ್ ದ ವಿಂಡ್’ಗಿಂತಲೂ ಗಾತ್ರದಲ್ಲಿ ಹಿರಿದಾಗಿದ್ದ ಈ ಪುಸ್ತಕವನ್ನು ಓದಿ ಮುಗಿಸಿದುದೇ ಕನ್ನಡಕ್ಕೆ ಅನುವಾದಿಸತೊಡಗಿದೆ. ಅಧ್ಯಾಯಗಳನ್ನು ಅನುವಾದಿಸಿದಂತೆಯೇ ಊರಿಗೆ ತಂದೆಯವರಿಗೆ ಕಳುಹಿಕೊಡುತ್ತಿದ್ದೆ. ನಮ್ಮಮ್ಮನೂ ಈ ಅಧ್ಯಾಯಗಳನ್ನೋದಿ ಮೆಚ್ಚಿ ತಮ್ಮ ಪತ್ರದಲ್ಲಿ ಮೆಚ್ಚಿಗೆ ಸೂಚಿಸಿ ಬರೆದಿದ್ದರು. ಕಾಲಂಶದಷ್ಟು ಅನುವಾದ ಮುಗಿದಾಗ, ಪುಸ್ತಕವನ್ನು ಲೈಬ್ರೆರಿಗೆ ಮರಳಿಸ ಬೇಕಾಯ್ತು. ಸುದೀರ್ಘ ಕೃತಿಗಳ ಪ್ರಕಾಶನದ ಬವಣೆಯ ಅನುಭವ ಹಾಗೂ ಹಿತಚಿಂತಕರ ಮಾತಿಗೆ ಎಚ್ಚತ್ತು, ಇರಲಿ, ಮುಂದೆ ಎಂದಾದರೂ, ಎಂದು ಕೊಂಡು ಅದನ್ನಲ್ಲೇ ಮರೆಗೆ ಸರಿಸಿದೆ. ತಂದೆಯವರ ಅಪಘಾತ, ಅನಾರೋಗ್ಯಗಳ ತೀವ್ರತೆಯಲ್ಲಿ ಮತ್ತೆ ಅದಕ್ಕೆ ಮರಳುವುದು ಸಾಧ್ಯವಾಗಲಿಲ್ಲ. ಮುಂದೆ ಅದರ ಸ್ಥಾನದಲ್ಲಿ ಅನಿವಾರ್ಯವಾಗಿ ಇತರ ಕೃತಿಗಳು ಬಂದವು. ಹೌದು; ಮುಂದೆ ಎಂದಾದರೂ ………
ಫಾ. ಮುಲ್ಲರ್ಸ್ ಆಸ್ಪತ್ರೆಯಲ್ಲಿ ತಂದೆಯವರ ರಕ್ತ ಪರೀಕ್ಷೆ ಹಾಗೂ ಚಿಕಿತ್ಸೆ ನಿಯಮಿತವಾಗಿ ನಡೆಯುತ್ತಿತ್ತು. ಹೆಚ್ಚಾಗಿ ಜೊತೆಗಿರುತ್ತಿದ್ದ ನನ್ನನ್ನು, ಮುಂಬೈಗೆ ಮರಳುವಂತೆ ನನ್ನಚ್ಚ ಅನುನಯಿಸುತ್ತಿದ್ದರು. “ನನ್ನನ್ನೇ ನೋಡಿಕೊಂಡಿದ್ದರಾಯ್ತೇ, ಬೇಬೀ? ನಿನ್ನ ಮನೆ, ಗಂಡ, ಮಕ್ಕಳ ಯೋಗಕ್ಷೇಮ ನೋಡಬೇಡವೇ? ನಮ್ಮದೇನಿದೆ? ನೀನು ಹೀಗೆ ಮನೆಯಿಂದ ದೂರ ಇರುವುದು ಸರಿಯಲ್ಲ; ನಾವು – ನಿನ್ನಮ್ಮ ಮತ್ತು ನಾನು – ನಾವೆಂದೂ ಹೀಗೆ ದೂರ ಇದ್ದದ್ದೇ ಇಲ್ಲ; ಅಬ್ಬನ ಡೆಲಿವರಿಯಲ್ಲಿ ಹೊರತು- ಅದೂ ಒಂದೇ ತಿಂಗಳು. ನೀನಿನ್ನು ಹಿಂದಿರುಗು; ಇಲ್ಲಿಯ ಚಿಂತೆ ಬೇಡ”, ಎಂದು ಅನುನಯಿಸುತ್ತಿದ್ದರು. ನಾನು ಮುಂಬೈಗೆ ಮರಳಿದಾಗ ತಪ್ಪದೆ ಪತ್ರ ಬರೆಯುತ್ತಿದ್ದು, ತಮ್ಮ ಯೋಗಕ್ಷೇಮ, ರಕ್ತ ಪರೀಕ್ಷೆಯ ವಿವರ, ಬ್ಲಡ್ ಕೌಂಟ್ ಎಲ್ಲ ತಿಳಿಸಿ, ತಾನು ಚೆನ್ನಿರುವೆನೆಂದೇ ಹೇಳುತ್ತಿದ್ದರು. ಆ ಪತ್ರಗಳೆಲ್ಲ ನನ್ನ ಕಣ್ಣು ಮಂಜಾಗಿಸುವ ಅಪೂರ್ವ ನಿಧಿಯಾಗಿ ನನ್ನಲ್ಲಿದೆ.
ತಾನು ಜೀವಮಾನವಿಡೀ ದುಡಿದ ನಮ್ಮೂರ ಶಾಲೆಯಲ್ಲಿ, ೧೯೯೭ರ ಸ್ವಾತಂತ್ರ್ಯ ಸ್ವರ್ಣಮಹೋತ್ಸವದ ಆಚರಣೆಯಂದು, ಧ್ವಜಾರೋಹಣಕ್ಕೆ ಅವರನ್ನೇ ಮುಖ್ಯ ಅತಿಥಿಯಾಗಿ ಆಮಂತ್ರಿಸಲಾದಾಗ, ಅದನ್ನು ನಡೆಸಿ ಕೊಡುವುದು ಅವರಿಂದ ಸಾಧ್ಯವಾದುದು ನಮಗೆಲ್ಲ ಭಾವೋತ್ಕರ್ಷವನ್ನು ಉಂಟು ಮಾಡಿತ್ತು. ಮರುವರ್ಷ ೧೯೯೮ರ ಅವರ ಕೊನೆಯ ಸ್ವಾತಂತ್ರ್ಯೋತ್ಸವದ ದಿನ, ಟಿ.ವಿ. ಎದುರು ಕುಳಿತು ದೆಹಲಿಯ ಸಮಾರಂಭವನ್ನು ವೀಕ್ಷಿಸುತ್ತಾ, ಧ್ವಜಾರೋಹಣದ ವೇಳೆ ಏಳಲಾಗದಿದ್ದರೂ, ಕಷ್ಟದಿಂದ ಎದ್ದುನಿಂತು ಗೌರವ ಸಲಿಸಿದ ನನ್ನಚ್ಚನ ಚಿತ್ರ ಮನದಿಂದ ಮಾಸುವುದೇ?
ಶಾಲೆಗಾಗಿ ತನುಮನದಿಂದ ದುಡಿದ ಮೂವತ್ತು ವರ್ಷಗಳಲ್ಲಿ, ಶಾಲಾ ಶಿಕ್ಷಕವರ್ಗ ಹಾಗೂ ವಿದ್ಯಾರ್ಥಿವೃಂದ ಅವರ ಮೇಲಿರಿಸಿದ್ದ ಗೌರವ ಅಪಾರ. ಜಗಲಿಯ ತುದಿಯಲ್ಲಿ ಅವರು ನಡೆದು ಬರುತ್ತಿರುವುದನ್ನು ಕಂಡರೇ, ಶಾಲೆಯೆಲ್ಲ ಗೌರವದಿಂದ ಮೌನವಾಗುತ್ತಿತ್ತು, ಎಂದು ನೆನಸಿ ಕೊಳ್ಳುವವರು ಇಂದೂ ಇದ್ದಾರೆ.
ಮನೆಯ ಹಾಗೂ ಅಣ್ಣ, ತಮ್ಮ, ತಂಗಿಯ ಮಕ್ಕಳಂತೇ, ಮುಂಬೈ, ಮದರಾಸ್, ಬೆಂಗಳೂರು, ಮಂಗಳೂರ ಸನಿಹ ಬಂಧುಗಳೂ ಅವರಿಗೆ ಪ್ರಿಯರಾಗಿದ್ದರು. ಹಿರಿಯರಲ್ಲಿ ಗೌರವ, ಕಿರಿಯರಲ್ಲಿ ಪ್ರೀತಿಯ ಸಂಭ್ರಮ ತೋರುತ್ತಿದ್ದ ಬಂಧುಜನಪ್ರಿಯರವರು. ಮಳೆ ಭೋರೆಂದು ಸುರಿದು ಪ್ರವಾಹ ಉಕ್ಕೇರುವಂತಿದ್ದರೆ, ತಮ್ಮ ಗುಡ್ಟೆಮನೆಯ ಚಿಂತೆ ಅವರನ್ನು ಕಾಡುತ್ತಿತ್ತು. ಹಿತ್ತಿಲಲ್ಲಿ ನೀರು ತುಂಬುತ್ತಾ ಬಂದಿರಬಹುದೇ, ಅದಿ ಬಿದ್ದಿದೆಯೋ, ಇಲ್ಲವೋ ಹೇಗೆ ಎಂದು ನೋಡಿ ಬರಲು ಹೋಗುತ್ತಿದ್ದರು. ಗುಡ್ಡೆಮನೆಯಂತೆಯೇ, ತಂಗಿಯ ಮನೆ “ಸನ್ ವ್ಯೂ”ನ ವ್ಯವಹಾರಗಳನ್ನೂ ನೋಡಿಕೊಳ್ಳುತ್ತಿದ್ದ ನನ್ನಚ್ಚ, ಕೀಳಿಸಿದ ಕಾಯಿಗಳ ಲೆಕ್ಕವಷ್ಟೇ ಅಲ್ಲ, ಉದುರಿ ಬಿದ್ದ ಕಾಯ್ಗಳ ಲೆಕ್ಕವನ್ನೂ ಬರೆದಿಡುತ್ತಿದ್ದರು. ಹಿತ್ತಿಲ ಕಾಯಿಗಳ ಆದಾಯವನ್ನು ಹಿತ್ತಿಲಿಗೇ ವ್ಯಯಿಸುತ್ತಿದ್ದ ಕರ್ಮರತರು. ಗಾಂಧೀಮಾರ್ಗದಲ್ಲಿ ನಡೆದು, ಅಸತ್ಯ, ಅವಿಚಾರ, ಕಂದಾಚಾರ, ಮೂಢನಂಬಿಕೆಗಳನ್ನು ಬಲವಾಗಿ ತಿರಸ್ಕರಿಸಿದವರು. [ಚಿತ್ರ: ತಂದೆಯವರು ೭ ವರ್ಷದ ಬಾಲಕನಾಗಿದ್ದಾಗ ಉಚ್ಚಿಲ ಶಾಲೆಯಲ್ಲಿ ಕಾರಂತರ ಮಿಸ್ಟರ್ ಡುಮಿಂಗೋ ನಾಟಕದಲ್ಲಿ ಮಿಸ್ಟರ್ ಡುಮಿಂಗೋ ಆಗಿ. ರಾಮಚಂದ್ರ ಉಚ್ಚಿಲರು ಬ್ರಾಹ್ಮಣ ಹುಡುಗ ರಾಮಣ್ಣನಾಗಿ ಜೊತೆಗಿದ್ದಾರೆ]
ತಾರುಣ್ಯದಲ್ಲಿ ತಮ್ಮ ಗುಡ್ಡೆಮನೆಯಲ್ಲಿ ನಡೆಯುತ್ತಿದ್ದ ದೈವಕಾರ್ಯದಲ್ಲಿ ಪಾನಮತ್ತನಾದ ನಲಿಕೆಯಾತನ ಹೀನಭಾಷೆಗೆ ಹೇಸಿ, ಮತ್ತೆ ಮೂವತ್ತು ವರ್ಷಗಳವರೆಗೆ ಅಲ್ಲಿ ಆ ದೈವಕಾರ್ಯ ನಡೆಯದಂತೆ ನಿಷೇಧಿಸಿದವರು, ನನ್ನ ತಂದೆ. ಮೂವತ್ತು ವರ್ಷಗಳ ಬಳಿಕ, ತಮ್ಮ ಚಿಕ್ಕಪ್ಪ ಪತ್ರ ಬರೆದು, “ಕುಟುಂಬಿಕರೆಲ್ಲ ಏನೋ ಸಂಕಷ್ಟವೆಂದು ಒಮ್ಮೆ ಆ ದೈವಕಾರ್ಯ ನಡೆಯಲೆಂದು ಕೋರಿದ್ದಾರೆ. ನೀನು ದೊಡ್ಡ ಮನಸ್ಸು ಮಾಡಿ ಇದೊಂದು ಬಾರಿ ನಡೆಸಲು ಅನುಮತಿ ಕೊಡು” ಎಂದು ಕೇಳಿಕೊಂಡಾಗ ಆ ಹಿರಿಯರ ಮಾತಿಗೆ ಗೌರವವಿತ್ತು ಒಪ್ಪಿಕೊಂಡವರು. ಹಾಗೆ ಆ ದೈವಕಾರ್ಯ ನಡೆದ ವರ್ಷವೇ ನನ್ನ ಚಿಕ್ಕಪ್ಪನ ಮಕ್ಕಳು ಅನುಪಮಾ, ನಿರುಪಮಾರ ಮದುವೆ ನಡೆಯಿತು. ಅನುವಿನ ಕೈ ಹಿಡಿದವನು, ನಮ್ಮವರ ಮಾವನ ಮಗ ವಾಸುದೇವ, ಇಂದು ಸಮುದಾಯದ ದೊಡ್ಡ ಕಾರ್ಯಕರ್ತ. ಅಂದಿನ ದೈವಕಾರ್ಯದಲ್ಲಿ ನಡೆಯಲಿದ್ದ ಕೆಂಡಸೇವೆಯಲ್ಲಿ ಪವಾಡವೇನೂ ಇಲ್ಲವೆಂಬುದನ್ನು ಮನವರಿಕೆ ಮಾಡಿಕೊಡಲು, ಅವನು ತನ್ನ ಬಳಗದವರನ್ನು ಜೊತೆಗೆ ಕರೆತಂದಿದ್ದ. ಅವರೆಲ್ಲ ತಾವೂ ಕೆಂಡ ತುಳಿದು ತೋರಿದಾಗ ನಾವೆಲ್ಲ ಸಂಭ್ರಮಿಸಿದ್ದೆವು. ಪವಾಡಗಳ ವಿರುದ್ಧ ಡಾ| ಕೊವೂರರು ವೈಜ್ಞಾನಿಕ ಜಾಗೃತಿ ಮೂಡಿಸುತ್ತಿದ್ದ ದಿನಗಳವು.
ನಮ್ಮ ಎಳವೆಯಲ್ಲಿ ನಮ್ಮನ್ನು ತಿಕ್ಕಿ, ತಿಕ್ಕಿ ಸ್ನಾನ ಮಾಡಿಸುತ್ತಿದ್ದದ್ದು ನಮ್ಮ ತಂದೆ! ಎಂದಾದರೂ ನಮ್ಮಮ್ಮ ಚಪಾತಿ ಮಾಡುವುದಿದ್ದರೆ ಹಿಟ್ಟು ಕೈಯಿಂದ ನುಲಿನುಲಿದು ಬರುವಂತೆ ಸೊಗಸಾಗಿ ಅಂಟು ಮಾಡಿಕೊಡುತ್ತಿದ್ದ ಆ ಪರಿ! ಅಲಸಂಡೆಯಂತಹ ತರಕಾರಿಯನ್ನು ಅಳತೆಯಿಟ್ಟಂತೆ ಒಂದೇ ಸಮನಾದ ತುಂಡುಗಳಾಗಿ ಕೈಯಿಂದಲೇ ಕತ್ತರಿಸಿ ಕೊಡುತ್ತಿದ್ದ ಆ ಚಂದ! ಅಮ್ಮ ಒಗೆದು ಒಣಗಿಸಿದ ರಾಶಿ ಬಟ್ಟೆಗಳನ್ನು , ಸೀರೆ, ಪಂಚೆ, ಹಾಸು, ಹೊದಿಕೆಗಳನ್ನು ಅಮ್ಮನೊಡನೆ ತುದಿಗಳನ್ನು ಎಳೆದೆಳೆದು ಇಸ್ತ್ರಿ ಮಾಡಿದಂತೆ ಚೊಕ್ಕವಾಗಿ ಮಡಿಸಿಡುತ್ತಿದ್ದ ರೀತಿ! ಅಚ್ಚಬಿಳಿಯ ವೇಷ್ಟಿಯ ಚುಂಗನ್ನು ಎತ್ತಿ ಹಿಡಿದು, ಬೀಸುಗಾಲಿನಿಂದ ನಡೆವ ಆ ಎತ್ತರ ಕಾಯದ ಧೀರೋದಾತ್ತ ನಡೆ! ಮೇಜಿನ ಬಳಿ ಸದಾ ತಮ್ಮ ಕುರ್ಚಿಯಲ್ಲಿ ನೆಟ್ಟನೆ ಕುಳಿತು ಲೆಕ್ಕಪತ್ರ ನೋಡುತ್ತಾ ಬರೆಯುತ್ತಾ ಇರುತ್ತಿದ್ದ ಪರಿ!
ಉಚ್ಚಿಲ ಶಾಲೆಯಲ್ಲಿ ದಕ್ಷ ಆಡಳಿತಗಾರರಾಗಿದ್ದಂತೇ, ರಾಜ್ಯ ಫಿಶರೀಸ್ ಡಿವೆಲಪ್ಮೆಂಟ್ ಕಾರ್ಪೊರೇಶನ್ ಮತ್ತು ಜಿಲ್ಲಾ ಸಹಕಾರಿ ಬ್ಯಾಂಕ್ನ ಪದಾಧಿಕಾರಿಗಳಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ನ ಅಧ್ಯಕ್ಷರೂ, ನಿರ್ದೇಶಕರೂ ಆಗಿ ಆ ಸಂಸ್ಥೆಯನ್ನು ದಕ್ಷತೆಯಿಂದ ಲಾಭದತ್ತ ನಡೆಸಿದವರು, ನಮ್ಮ ತಂದೆ.
ಕೊಂಕಣ ರೈಲುದಾರಿ ತೆರೆಯುವುದನ್ನೇ ತುಂಬ ಉತ್ಸಾಹದಿಂದ ನಿರೀಕ್ಷಿಸುತ್ತಿದ್ದ ನಮ್ಮ ತಂದೆಯವರಿಗೆ ಈ ಪಯಣವನ್ನೊದಗಿಸುವ ನನ್ನ ಆಶೆ ಕೊನೆಗೂ ಈಡೇರಲಿಲ್ಲ. ದೆಹಲಿ ನೋಡುವ ಆಶೆಯೂ ಅವರಿಗಿತ್ತು. ಆದರೆ ಯಾವುದನ್ನೂ ಎಂದೂ ಬೇಕೇ ಎಂದವರಲ್ಲ. ಊಟ, ತಿಂಡಿಯಲ್ಲೂ ಎಂದೂ ಇಂತಹುದು ಬೇಕೆಂದು ಕೇಳಿದವರಲ್ಲ; ಯಾವುದಕ್ಕೂ ಆಶೆ ಪಟ್ಟವರಲ್ಲ.
ಅಸೌಖ್ಯ ಉಲ್ಬಣಿಸುತ್ತಾ ಬಂದಂತೆ ಜ್ವರ, ಶೀತ, ನಿತ್ರಾಣ ಬಾಧಿಸತೊಡಗಿತು. ತುಂಬ ಕ್ಷೀಣರಾಗುತ್ತಾ ನಡೆದ ನನ್ನಚ್ಚನಿಗೆ ಮೂರು ಬಾರಿ ಬ್ಲಡ್ ಟ್ರಾನ್ಸ್ಫ್ಯೂಶನ್ ಮಾಡಬೇಕಾಯ್ತು. ಪರಕೀಯ ರಕ್ತದಿಂದ ಅವರ ಮುತ್ತಿನಂತಹ ಮೈಬಣ್ಣ ಕಪ್ಪು ತಿರುಗಿತು. ಕಾಯ ಸೋಲುತ್ತಾ ಬಂದಿತ್ತು. ಫಾ. ಮುಲ್ಲರ್ಸ್ನ ಡಾ. ಕೆ. ಸುಂದರ ಭಟ್ ಅವರ ವೈದ್ಯರು. ಒಮ್ಮೆ ನಾವು ಕೃತಜ್ಞತೆ ಸಲಿಸಿದಾಗ, “ನಾನು ಮಾಡಿದ್ದಾಗಲೀ, ಮಾಡುವುದಾಗಲೀ ಏನೂ ಇಲ್ಲ; ಅವರು ಇಚ್ಛಾ ಮರಣಿ! ತಮಗೆ ಬೇಕೆಂದಷ್ಟು ದಿನ ಬದುಕಿರುತ್ತಾರೆ. ಅಷ್ಟೇ!” ಎಂದಿದ್ದರು.
೧೯೯೯ ಫೆಬ್ರವರಿ ಹದಿನೆಂಟರಂದು ನನ್ನಚ್ಚನನ್ನು ಕೊನೆಯ ಬಾರಿಗೆ ಆಸ್ಪತ್ರೆಗೆ ಕರೆದೊಯ್ದೆವು. ನೀಡಲಾದ ರಕ್ತವನ್ನು ಅವರ ದೇಹ ತಿರಸ್ಕರಿಸಿತು. ಪರೀಕ್ಷೆಯಲ್ಲಿ ನ್ಯುಮೋನಿಯಾ ಪತ್ತೆಯಾದಾಗ ಹೆಚ್ಚಿನ ಭರವಸೆಯೇನೂ ಉಳಿಯಲಿಲ್ಲ. ಆ ರಾತ್ರಿ, “ಇನ್ನು ಗುಣವಾಗುವಂತೇನೂ ಕಾಣುವುದಿಲ್ಲ; ಒಮ್ಮೆ ಊರಿಗೆ ಕೊಂಡುಹೋಗಿ ಮುಟ್ಟಿಸುವಂತೆ ಹೇಳು”, ಎಂದು ನಿರ್ವಿಣ್ಣರಾಗಿ ಅವರಂದಾಗ ನನ್ನ ಹೃದಯವೇ ಕುಸಿಯಿತು. ಮರುದಿನವಿಡೀ ನನ್ನಚ್ಚ, ತನ್ನ ಪ್ರೀತಿಯ ಹಾಡುಗಳನ್ನು ಹಾಡಿಕೊಳ್ಳುತ್ತಾ ಉಳಿದರು. ಎಲ್ಲವೂ ನೆನಪಿಗೆ ಬರುತ್ತಿದೆಯೆಂದು ಸಂತೋಷಿಸಿದರು. ನೋಡ ಬಂದವರಿಗೆಲ್ಲ ತಾನು ಚೆನ್ನಿರುವೆನೆಂದೇ ಉತ್ತರಿಸಿದರು. ಅದರ ಮರುದಿನ ಫೆ. ೨೦, ನಮ್ಮ ಚಿಕ್ಕಪ್ಪ ದೈವಾಧೀನರಾಗಿ ಒಂದು ವರ್ಷ. ಅಂದು ಬೆಳಗಿನಿಂದಲೇ ತಂದೆಯವರು ನಿರಾಹಾರರಾಗಿ ಉಳಿದರು. ಅಣ್ಣನ ಗೆಳೆಯ ಡಾಲ್ಫಿ ಪ್ರೀತಿಯಿಂದ ತಂದಿತ್ತ ಇಡ್ಲಿ, ಶೀರಾ ಏನನ್ನೂ ಮುಟ್ಟಲಿಲ್ಲ. ದಿನವಿಡೀ ಮಾತೂ ಆಡಲಿಲ್ಲ. ಆಕ್ಸಿಜನ್ ಸರಬರಾಜು ನಡೆದಿತ್ತು. ರಾತ್ರಿ ಕಫ ಹೊರಬರಲು ಪ್ರಾರಂಭವಾಯ್ತು. ಎದ್ದುಕುಳಿತು, ಸ್ಪಿಟೂನ್ ತಾವೇ ಕೈಯಲ್ಲಿ ಹಿಡಿದು ಕಫ ಖಾಲಿಯಾಗುವವರೆಗೆ ಹಾಗೇ ಕುಳಿತಿದ್ದ ನನ್ನಚ್ಚ, ರಾತ್ರಿ ಮೂರು ಗಂಟೆಗೆ ನನ್ನ ಕೈಯ ಕೊನೆಯ ಕಾಫಿಯನ್ನೊಂದಿಷ್ಟು ಕುಡಿದು, ಒರಗಿ ಕಣ್ಮುಚ್ಚಿದರು. ಅಸ್ಪಷ್ಟ ಮಾತುಗಳು ಅವರಿಂದ ಹೊರ ಬರುತ್ತಿದ್ದುವು. ಬೆಳಿಗ್ಗೆ ಆರಕ್ಕೆ ಬಂದು ನೋಡಿದ ನಮ್ಮ ಪ್ರಿಯ ಸಿಸ್ಟರ್ ಲೂಸಿ, ಬಳಿ ನಿಂತು ಪ್ರಾರ್ಥನೆ ಹೇಳಿದರು. ಮತ್ತೆ ನನ್ನಚ್ಚನ ಇಚ್ಛೆಯಂತೇ ಅವರನ್ನು ಶೀಘ್ರ ಮನೆ ತಲುಪಿಸುವ ವ್ಯವಸ್ಥೆ ಮಾಡಿದರು. ಆಕ್ಸಿಜನ್ ಸಹಿತ ಆಂಬ್ಯುಲೆನ್ಸ್ನಲ್ಲಿ ಬಂದು ಮನೆ ತಲುಪಿ, ಅವರ ಮಂಚದಲ್ಲಿ ಮಲಗಿಸಿದಾಗ, “ಮನೆಗೆ ಬಂದು ಮುಟ್ಟಿದೆವೆಂದು ಹೇಳು, ಬೇಬೀ”, ಎಂದು ಅಮ್ಮ ಅಂದರು. ನಾನು ಹಾಗಂದೊಡನೆ, “ಆ….” ಎಂಬ ದೀರ್ಘ ಉದ್ಗಾರ ನನ್ನಚ್ಚನಿಂದ ಹೊರಟಿತು. ಮತ್ತೆ ಹತ್ತು ನಿಮಿಷದಲ್ಲಿ ಬಾಯಿಂದ ಒಂದು ಚೂರು ರಕ್ತ ಹೊರ ಬಂತು. ಮತ್ತೈದು ನಿಮಿಷದ ಬಳಿಕ ತುಂಬ ಶಾಂತವಾಗಿ ಉಸಿರು ನಿಂತು, ಅವರಾತ್ಮ ಪರಮಾತ್ಮನಲ್ಲಿ ಲೀನವಾಯ್ತು………..
ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಯೇ ವ್ರತವಾದ, ಸ್ವಚ್ಛ, ಸರಳ, ಸಾದಾ ಬದುಕನ್ನು ಬಾಳಿದ ನನ್ನಚ್ಚ! ರಘುವಂಶಜರ ಬಗ್ಗೆ, “ಯಾರು ಸತ್ಯವನ್ನು ನುಡಿಯುವುದಕ್ಕಾಗಿ ಮಿತಭಾಷಿಗಳಾಗಿದ್ದರೋ……” ಎಂದು ಕವಿ ಕಾಳಿದಾಸ ವರ್ಣಿಸಿರುವುದನ್ನು ನೆನೆದಾಗಲೆಲ್ಲ ನನ್ನ ಮನದಲ್ಲಿ ಮೂಡುವುದು ನನ್ನಚ್ಚನ ಚಿತ್ರ! “ಬ್ರೀದ್ಸ್ ದೇರ್ ದ ಮ್ಯಾನ್, ವಿದ್ ಸೋಲ್ ಸೋ ಡೆಡ್, ಹೂ ನೆವರ್ ಟು ಹಿಮ್ಸೆಲ್ಫ್ ಹ್ಯಾತ್ ಸೆಡ್, ದಿಸ್ ಈಸ್ ಮೈ ಓನ್ ಮೈ ನೇಟಿವ್ ಲ್ಯಾಂಡ್!”, ಅವರ ಮೆಚ್ಚಿನ ಕವನವಾಗಿತ್ತು. ಅವರ ಕಣಕಣವೂ ಇದನ್ನೇ ನುಡಿವಂತಿತ್ತು. ಗೌರವ ಹುಟ್ಟಿಸುವಂತಹ ಗಾಂಭೀರ್ಯದಿಂದ ಸದಾ ಕಾರ್ಯಮಗ್ನರಾಗಿರುತ್ತಾ ಮಿತಭಾಷಿಗಳಾಗಿದ್ದ ಅವರಿಂದ ಎಷ್ಟೋ ವಿಷಯಗಳನ್ನು ಕೇಳಿ ಅರಿಯಬಹುದಿತ್ತು; ಆ ಸುವರ್ಣಾವಕಾಶವನ್ನು ಉಪಯೋಗಿಸದೆ ಕಳೆದುಕೊಂಡೆವೆಂಬ ವ್ಯಥೆ, ನನ್ನದು. ವೈಚಾರಿಕ ಪ್ರವೃತ್ತಿಯ ಸುಧಾರಣಾಶೀಲರಾಗಿದ್ದ ಅವರು ದೈವಭಕ್ತಿಯಿಲ್ಲದವರು ಎಂದುಕೊಂಡವರು ಹಲವರಿದ್ದರು. ಆದರೆ ದೈವಭಕ್ತಿಯ ಪ್ರದರ್ಶನ ಮಾತ್ರ ನಮ್ಮಲ್ಲಿರಲಿಲ್ಲ. ಊರ ದೈವಸ್ಥಾನದ ಹಾಗೂ ಕೌಟುಂಬಿಕ ಆಚರಣೆಯ ವಿಧಿ, ನಿಯಮಗಳನ್ನೆಲ್ಲ ಚೆನ್ನಾಗಿ ಅರಿತಿದ್ದ ಅವರ ಜ್ಞಾಪಕ ಶಕ್ತಿಯೂ ಅಪಾರವಾಗಿತ್ತು. ತಮ್ಮ ಕುಟುಂಬದ ಐದು ತಲೆಮಾರುಗಳ ವಂಶವೃಕ್ಷವನ್ನು ಅವರು ರಚಿಸಿದ್ದು, ಎಲ್ಲರ ಅಚ್ಚರಿ, ಪ್ರಶಂಸೆಗೆ ಪಾತ್ರವಾಗಿತ್ತು. ಧೈರ್ಯ,ಸ್ಥೈರ್ಯಗಳ ಉತ್ತುಂಗ ವ್ಯಕ್ತಿತ್ವ, ಸ್ಥಿರತೆಯ ಪ್ರತಿರೂಪ, ಜ್ಞಾನ, ವಿವೇಕಗಳ ಆಗರ, ಸಚ್ಚಾರಿತ್ರ್ಯ ಸ್ವರೂಪ ನನ್ನ ತಂದೆಯೇ ನನ್ನ ಆದರ್ಶ.