[ಮಣಿಪಾಲದ ಡಾ|ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠದ ಗೌರವಾಧ್ಯಕ್ಷೆ ವೈದೇಹಿಯವರು, ತಮ್ಮ ಎರಡು ವರ್ಷಗಳುದ್ದದ ಸೇವಾವಧಿಯ ಕೊನೆಯ ಕಲಾಪ ಎಂಬಂತೆ ರೂಪಿಸಿದ್ದ ಎರಡು ದಿನಗಳುದ್ದದ (೨೫,೨೬-೨-೨೦೧೭) ವಿಚಾರ ಸಂಕಿರಣ `ಅಡುಗೆಮನೆ ಜಗತ್ತು’. ಇದರಲ್ಲಿ ಮೊದಲ ದಿನ ಅಭಯಸಿಂಹ ಪ್ರಸ್ತುತಪಡಿಸಿದ ಪ್ರಬಂಧ]
[ಸಂಪಾದಕೀಯ ಟಿಪ್ಪಣಿ: ನನ್ನ ಸೊಸೆ (ಅಭಯನ ಹೆಂಡತಿ), ಕೆಲವು ಸರಳ ಪಾಕಗಳ ವಿಶೇಷ ವಿಡಿಯೋ ಸರಣಿಯನ್ನು ತನ್ನದೇ ಜಾಲತಾಣದಲ್ಲಿ ಹರಿಬಿಟ್ಟಳು. ಅವು ಜನಪ್ರಿಯವಾಗಿವೆ. ನಾನು ಕಳೆದ ಒಂಬತ್ತು ವರ್ಷಗಳಿಂದ ಈ ಜಾಲತಾಣ ಹಾಗೂ ಫೇಸ್ ಬುಕ್ಕಿನಲ್ಲಿ ಕೆಲವೊಮ್ಮೆ ಪಾಕವಿಶೇಷಗಳ ಕುರಿತು ಪ್ರಕಟಿಸಿದ ಚಿತ್ರ/ ಬರೆಹಗಳು ನನ್ನದೇ ಇತರ ನಮೂದುಗಳಿಗಿಂತ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದ್ದಾವೆ. ಅಭಯ, ರಶ್ಮಿಯ ಪ್ರೇರಕ. ಮತ್ತೆ ನನ್ನ ಅಂತರ್ಜಾಲದ ಚಟುವಟಿಕೆಗಳೆಲ್ಲದರ ನಿರ್ವಾಹಕ. ಕೊನೆಯದಾಗಿ ತನ್ನದೇ ಸಿನಿ-ಮಾಧ್ಯಮದ ಅಧ್ಯಯನಾತ್ಮಕ ಮತ್ತು ಪ್ರಾಯೋಗಿಕ ತಿಳುವಳಿಕೆಯುಳ್ಳವ. ಆತ ಈ ಎಲ್ಲ ಅಂಶಗಳನ್ನು ಮುಪ್ಪುರಿಗೊಳಿಸಿ ಈ ಪ್ರಬಂಧವನ್ನು ರೂಪಿಸಿದ್ದಾನೆ.]
ಭೋಗಕ್ಕಾಗಿ ಆಹಾರ, ಟೆಲಿವಿಷನ್ ಮತ್ತು ಚಲನಚಿತ್ರಗಳಲ್ಲಿ ಆಹಾರವೆಂಬ ಉಪಭೋಗ ಸಂಸ್ಕೃತಿ ಎನ್ನುವ ವಿಚಾರದಲ್ಲಿ ಎಂದೂ ಅಡಿಗೆ ಮಾಡದ, ತಿಂಡಿಪೋತನ ಕೆಲವು ವಿಚಾರಗಳನ್ನು ನಿವೇದಿಸಲು ಇಲ್ಲಿ ನಿಂತಿದ್ದೇನೆ. ಭವಿಷ್ಯ ಏನಾಗಿರಬಹುದು ಎಂದು ಆಲೋಚಿಸುವ ಪ್ರಕ್ರಿಯೆಯೇ ಬಹಳ ಸಂಕೀರ್ಣ ಮತ್ತು ಕ್ಲಿಷ್ಟಕರ. ಹೆಚ್ಚಿನ ಸಂದರ್ಭಗಳಲ್ಲಿ ಇವು, ನಾವು ಸತ್ಯ ಎಂದು ನಂಬಿರುವ, ಸದ್ಯದ ಅಥವಾ ವರ್ತಮಾನದ ಭಯಗಳು, ಫ್ಯಾಂಟಸಿಗಳು ಮತ್ತು ಜಗಳಗಳನ್ನು ಮೀರಿ ಆಲೋಚಿಸಿದರಷ್ಟೇ ಈಗಿರುವ ಯಾವುದು ಮುಂದೆ ಮತ್ತೊಂದು ರೂಪ ಪಡೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಈ ಗೊಂದಲವನ್ನು ವಿವರಿಸುವ ಸುಂದರವಾದ ಒಂದು ಉದಾಹರಣೆ ವಿಕ್ಟರ್ ಹ್ಯೂಗೋನ Hunchback of notre dameನಲ್ಲಿದೆ. 15ನೇ ಶತಮಾನದಲ್ಲಿ ನಡೆಯುವ ಕಥೆಯಿದು. ಒಂದೆರಡು ದಶಕಗಳ ಹಿಂದಷ್ಟೇ ಮುದ್ರಣ ತಂತ್ರಜ್ಞಾನದ ಆವಿಷ್ಕಾರವಾಗಿತ್ತು. ಕಾದಂಬರಿಯ antogonist Claude Frollo ಹೇಳುವ ಮಾತೊಂದಿದೆ ‘Ceci tuera cela’ ಅಂದರೆ This will kill that. ಅರ್ಥಾತ್ ಇದು ಅದನ್ನು ಕೊಲ್ಲುತ್ತದೆ. ಇಲ್ಲಿರುವ This ಎಂಬುದು ಮುದ್ರಿತ ಪುಸ್ತಕ (ಬೈಬಲ್), That ಮಧ್ಯಯುಗದ ಕೆಥಡ್ರಿಲ್ (ಚರ್ಚ್ನ ಕಟ್ಟಡ). ಅಂದರೆ ಯಾವುದೇ ಕಾಲದಲ್ಲಿ ಬರುವ ಹೊಸ ತಂತ್ರಜ್ಞಾನಗಳಿರಬಹುದು, ಸೌಂದರ್ಯದ ವ್ಯಾಖ್ಯಾನ ಪಲ್ಲಟಗಳಿರಬಹುದು, ಇವೆಲ್ಲವನ್ನೂ ನಾವು ಒಂದು ಸಣ್ಣ ದೂರದಿಂದ ನೋಡಿದಾಗಲಷ್ಟೇ ಅದರಲ್ಲಿ ಭವಿಷ್ಯದ ಸಾಧ್ಯತೆಗಳನ್ನು, ಟ್ರೆಂಡ್ ಗಳನ್ನು ಕಾಣಲು ಸಾಧ್ಯ. ಇಲ್ಲವಾದರೆ, ಅವುಗಳನ್ನು ವಿಕಾರಗಳು ಎಂದಷ್ಟೇ ಗುರುತಿಸಲು ಸಾಧ್ಯ. ಈ ದೃಷ್ಟಿಯಲ್ಲಿ, ಇಂದಿನ ಆಹಾರ ಹಾಗೂ ಟೆಲಿವಿಷನ್ ಮತ್ತು ಚಲನಚಿತ್ರಗಳಲ್ಲಿ ಆಹಾರ-ಅಡುಗೆಯ ಬಳಕೆಯನ್ನು ನಾನು ನೋಡುತ್ತೇನೆ. ದೃಶ್ಯ ಮಾಧ್ಯಮದಲ್ಲಿ ಆಹಾರ-ಅಡುಗೆಯ ವಸ್ತು ಬಹಳ ಹೊಸತೇನಲ್ಲ. ಇದಕ್ಕೆ ಒಂದಷ್ಟು ಉದಾಹರಣೆಗಳನ್ನು ಕೊಡಬಹುದು.
೧೯೩೦ರ ದಶಕದಲ್ಲಿ ಜಪಾನಿನಲ್ಲಿ ಸಿನೆಮಾ ನಿರ್ದೇಶಿಸುತ್ತಿದ್ದ ಯಶುಜಿರೋ ಓಝೂವಿನ ಚಿತ್ರಗಳಲ್ಲಿ ಒಂದು ಪ್ರಮುಖ ವಸ್ತು – ಒಂದು ಕುಟುಂಬ ಜೊತೆಗೆ ಕುಳಿತು ಊಟ ಮಾಡುವುದು. ಓಝೂವಿಗೆ ಊಟದ ಸಮಯ, ಕುಟುಂಬದ ಸಮಯ ಎನ್ನುವ ನಂಬಿಕೆ ಬಲವಾಗಿತ್ತು. ಹೀಗಾಗಿ ಅವನ ಸಿನೆಮಾಗಳಲ್ಲಿ ಹೆಚ್ಚಿನ ಕೌಟುಂಬಿಕ ನಿರ್ಧಾರಗಳು ಊಟದ ಸಮಯದಲ್ಲಿ ನಡೆಯುತ್ತಿದ್ದವು. ಅವನ ಚಿತ್ರಗಳಲ್ಲಿ ಅಂದಿನ ಜಪಾನಿನ, ಮಧ್ಯಮ ವರ್ಗದ ಕುಟುಂಬಗಳಲ್ಲಿನ ಆಹಾರ ವಸ್ತುಗಳೇ ಇರುತ್ತಿದ್ದವು ಎಂದು ಸಿನೆಮಾ ಶಾಸ್ತ್ರಜ್ಞರು ಗಮನಿಸುತ್ತಾರೆ. ಇದರಲ್ಲಿ, ಓಝೂವಿನ ಸಿನೆಮಾ ಜಗತ್ತು, ಕಾಳಜಿ ಏನು ಎನ್ನುವುದು ಅರಿವಾಗುತ್ತದೆ.
ರ್ಯಾಟಟೋಲಿ ಎನ್ನುವ ಚಿತ್ರ, ಒಂದು ಇಲಿಯೂ ಅಡುಗೆ ಮಾಡಬಹುದು ಎನ್ನುವುದನ್ನು ಅಡುಗೆಯ ವಿಜೃಂಭಣೆಯೊಂದಿಗೇ ಮಾಡುತ್ತದೆ. ಇದರಲ್ಲಿ ಅವರು ವಿಶಿಷ್ಟ ಅಡುಗೆಗಳ ನಾಡು ಎಂದೇ ಪ್ಯಾರಿಸನ್ನು ಆಯ್ಕೆ ಮಾಡಿಕೊಂಡದ್ದರ ಹಿಂದಿನ ವಿಷಯವನ್ನು ವಿವರಿಸುತ್ತಾ ಸಿನೆಮಾದ ನಿರ್ಮಾಣ ಮಾಡಿದವರು ಆಹಾರ ಅಡುಗೆಯ, ಅದಕ್ಕೆ ಸಂಬಂಧಿಸಿದ ಏಸ್ಥೆಟಿಕ್ಸ್ ಹಾಗೂ ಮಾರುಕಟ್ಟೆ ಎಳೆತಗಳನ್ನು ವಿವರಿಸುತ್ತಾರೆ. ಅಡುಗೆ ವಿಮರ್ಶೆಯ ವಿಧಾನಗಳನ್ನು ತೋರಿಸುತ್ತಾ ಸಾಗುತ್ತಾರೆ. ಇದರ ಮೂಲಕ ವಿಮರ್ಶೆ ಎನ್ನುವುದು ಹೇಗೆ ಮಾರುಕಟ್ಟೆಗೆ ಪೂರಕ ಅಥವಾ ಮಾರಕ ಎನ್ನುವ ವಿಚಾರವನ್ನೂ ಚೆನ್ನಾಗಿ ತೋರಿಸುತ್ತಾರೆ.
ಹಾಂಗ್ ಕಾಂಗ್ ನಿರ್ದೇಶಕ ವಾಂಕರ್ ವಾಯ್ ಮಾಡಿರುವ ಇನ್ ದ ಮೂಡ್ ಫಾರ್ ಲವ್ (೨೦೦೦) ಆಹಾರವನ್ನು ಒಂದು ಸಂಬಂಧದ ಚಿತ್ರಣಕ್ಕೆ ಬಳಸಿದ್ದು ವಿಶಿಷ್ಟವಾಗಿತ್ತು. ಇದರಲ್ಲಿ ನೂಡಲ್ಸ್ ತರುವ, ತಿನ್ನುವ ಪ್ರಕ್ರಿಯೆಯಲ್ಲಿ, ಸಾಧಾರಣವಾಗಿ ಸಮಾಜ ಅನೈತಿಕ ಎನ್ನುವಂಥಾ ಒಬ್ಬನ ಹೆಂಡತಿಯನ್ನು ಇನ್ನೊಬ್ಬ ಪ್ರೀತಿಸುವ ಸಂದರ್ಭವನ್ನು ನಿರ್ದೇಶಕ ಮಧುರವಾಗಿ ಕಟ್ಟುತ್ತಾ ಹೋಗುತ್ತಾರೆ. ಈ ಚಿತ್ರದಲ್ಲಿ ನೂಡಲ್ಸ್ ತಿನ್ನುವ ಉದ್ದನೆಯ ಶಾಟ್ಸ್ ಬಳಕೆಯಾಗಿವೆ. ನೂಡಲ್ಸ್ ಜೊತೆಗೆ ನೆನಪಾಗುವ ಇನ್ನೊಂದು ಚಿತ್ರಣ ಚಾರ್ಲಿ ಚಾಪ್ಲಿನ್ ಸಿಟಿ ಲೈಟ್ಸ್ ಚಿತ್ರದಲ್ಲಿ (೧೯೩೧) ನೂಡಲ್ಸ್ ತಿನ್ನುವುದನ್ನು ಹಾಸ್ಯಕ್ಕೆ ಬಳಸಿಕೊಳ್ಳುವುದು.
ದ ಲಂಚ್ ಡೇಟ್ (೧೯೯೦)
೧೯೯೦ರಲ್ಲಿ ಮಾಡಿದ ದ ಲಂಚ್ ಡೇಟ್. ಇದೊಂದು ಕಿರುಚಿತ್ರ, ಇಲ್ಲಿ ಕರಿಯರನ್ನು ಸಂಶಯದಲ್ಲೇ ನೋಡುವ ಮಹಿಳೆಯೊಬ್ಬಳು ತಪ್ಪುಗ್ರಹಿಕೆಯಿಂದ ಕರಿಯನೊಬ್ಬನೊಂದಿಗೆ ಊಟ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಆಕೆಯ ಮೌನ ಪರಿವರ್ತನೆ ಬಹಳ ಅದ್ಭುತವಾಗಿ ಕಾಣಿಸಲಾಗುತ್ತದೆ. ಊಟದ ಸಮಯದಲ್ಲಿ, ಮನುಷ್ಯ ತನ್ನೆಲ್ಲಾ ಬಣ್ಣಗಳನ್ನು ಕಳಚಿಕೊಂಡು, ಧಾತು ಸ್ಥಿತಿಗೆ ಬರುವುದನ್ನು ಇಲ್ಲಿ ಚಿತ್ರದಲ್ಲಿನ ಹೆಂಗಸು, ತನ್ನೆಲ್ಲಾ ಮಾನಸಿಕ ಕಟ್ಟುಪಾಡುಗಳನ್ನು ಕಳಚಿಕೊಳ್ಳಲು ಬಳಸುವುದು ವಿಶಿಷ್ಟವಾಗಿದೆ.
ಸ್ಟಾನ್ಲೀಕಾ ಡಬ್ಬಾ (೨೦೧೧)
ಸ್ಟಾನ್ಲೀ ಕಾ ಡಬ್ಬಾ ಚಿತ್ರದಲ್ಲಿ, ಹುಡುಗನೊಬ್ಬನ ಕಠಿಣ ಹಿನ್ನೆಲೆಯನ್ನು ಅವನು ಶಾಲೆಗೆ ತರದ ಟಿಫಿನ್ ಬಾಕ್ಸ್ ಮೂಲಕ ಹೃದಯ ಸ್ಪರ್ಶಿಯಾಗಿ ತೋರಿಸುತ್ತಾರೆ. ಬಡತನದ ಇನ್ನೊಂದು ಮುಖವನ್ನು ಈ ಚಿತ್ರ ಸಾಕಷ್ಟು ಜೀವನೋಲ್ಲಾಸದೊಂದಿಗೆ ಬೆರೆಸಿ ಬಡಿಸುತ್ತದೆ. ಇಲ್ಲಿ ಭೂತಯ್ಯನ ಮಗ ಅಯ್ಯು ಸಿನೆಮಾದ ಫುಲ್ ಮೀಲ್ಸ್ ಹಾಸ್ಯ ಪ್ರಸಂಗವೂ ನೆನಪಿಸಿಕೊಳ್ಳಬಹುದು.
ದ ಲನ್ಚ್ ಬಾಕ್ಸ್ (೨೦೧೩)
ದ ಲನ್ಚ್ ಬಾಕ್ಸ್ ಚಿತ್ರ ಮುಂಬೈನಲ್ಲಿನ ಬುತ್ತಿಯೂಟದ ವಿಶಿಷ್ಟ ಪರಂಪರೆಯನ್ನು ತನ್ನ ಸಾದಾ ಪ್ರೇಮ ಕಥನಕ್ಕೆ ಬಳಸಿಕೊಳ್ಳುತ್ತದೆ. ಯಾವುದೋ ಮಿಸ್ಟೇಕನ್ ಐಡೆನ್ಟಿಟಿ ಚಿತ್ರವನ್ನು ಮುಂಬೈನ ಬುತ್ತಿಯೂಟದ ಪರಂಪರೆಯಲ್ಲಿ ಇಟ್ಟಕೂಡಲೇ, ಈ ಚಿತ್ರ ವಿಶಿಷ್ಟವೆನ್ನಿಸಿದ್ದು ಆಹಾರದೊಂದಿಗಿನ ನಮ್ಮ ಕನೆಕ್ಷನ್ ತೋರಿಸುತ್ತದೆ. ಈ ಚಿತ್ರದಲ್ಲಿ ಆಹಾರವನ್ನು ಅದಕ್ಕಿಂತ ಹೆಚ್ಚೇನೂ ಬಳಕೆ ಮಾಡಿಕೊಂಡಿಲ್ಲ ಎನ್ನುವುದನ್ನು ಗಮನಿಸಬಹುದು. ಉಳಿದಂತೆ ಚಿತ್ರದುದ್ದಕ್ಕೂ ಹಬ್ಬುವುದು ಮನುಷ್ಯ ಸಂಬಂಧಗಳ ಘಮವಷ್ಟೆ.
ಸಾಲ್ಟ್ ಆಂಡ್ ಪೆಪ್ಪರ್ (೨೦೧೧)
ಇದೇ ರೀತಿಯಲ್ಲಿ ಇನ್ನೊಂದು ಮಿಸ್ಟೇಕನ್ ಐಡೆನ್ಟಿಟಿ ಸಿನೆಮಾ ಮಲಯಾಳದಲ್ಲಿ ರೂಪಗೊಂಡು, ಕನ್ನಡದಲ್ಲೂ ರೂಪಿತವಾದ ಸಾಲ್ಟ್ ಆಂಡ್ ಪೆಪ್ಪರ್ ಚಿತ್ರ. (ಕನ್ನಡದಲ್ಲಿ ಒಗ್ಗರಣೆ) ಇಲ್ಲಿಯೂ ಅಡುಗೆ ಕೇವಲ ನಿಮಿತ್ತ ಮಾತ್ರ. ಪ್ರಾಯದ ಸಾಲ್ಟ್ ಆಂಡ್ ಪೆಪ್ಪರ್ ಸಮಯವನ್ನು, ಅವರ ವಿಚಿತ್ರ ಅಭಿರುಚಿಗಳನ್ನು ಮೂಲ ಚಿತ್ರ ಧ್ವನ್ಯಾತ್ಮಕವಾಗಿ ಬಳಸಿಕೊಂಡಿದೆ. ಕನ್ನಡದಲ್ಲಿ ಬಂದ ಐದೊಂದ್ಲಾ ಐದು ಎನ್ನುವ ಐದು ಕಥೆಗಳ ಗುಚ್ಚರೂಪದ ಚಿತ್ರದಲ್ಲಿ ಪಾಯಸ ಎನ್ನುವ ಒಂದು ಕಥೆಯೂ ಸೇರಿದೆ. ಇದರಲ್ಲಿ ಪಾಯಸವನ್ನೇ ಇಟ್ಟುಕೊಂಡು, ಗಂಡ ಹೆಂಡಿರ ಸಂಬಂಧವನ್ನು ನವಿರಾದ ಹಾಸ್ಯದೊಂದಿಗೆ ವಿವರಿಸುತ್ತಾರೆ.
ಹೀಗೆ ಸಿನೆಮಾದ ಕೇವಲ ನೂರು ವರ್ಷದ ಇತಿಹಾಸವನ್ನು ತೆರೆದು ನೋಡಿದರೆ, ಉದ್ದಕ್ಕೂ ಆಹಾರದ ಬಳಕೆ ವಿಭಿನ್ನ ಉದ್ದೇಶಗಳಿಂದ, ವಿಭಿನ್ನ ರೀತಿಯಲ್ಲಿ ನಡೆಯುತ್ತಲೇ ಇದೆ. ಸಾಮಾಜಿಕ ತಲ್ಲಣಗಳಿಂದ ಆರಂಭಿಸಿ, ಹಾಸ್ಯ, ಶೃಂಗಾರ ಹೀಗೆ ಎಲ್ಲಾ ರಸೋತ್ಪಾದನೆಗೂ, ಆಹಾರದ ಬಳಕೆಯಾಗಿದೆ. ಹೀಗಾಗಿ ಇದು ತೀರಾ ಇತ್ತೀಚಿನ ವಿಚಾರವಲ್ಲ, ಬಹಳ ಹಿಂದಿನಿಂದ ನಡೆದುಕೊಂಡು ಬಂದು, ಇಂದು, ಇಂದಿನ ಅಗತ್ಯಗಳಿಗೆ ತಕ್ಕಂತೆ ಮಾರ್ಪಾಡಾದ ಒಂದು ಸಂಸ್ಕೃತಿ ಅಷ್ಟೇ. ಮಾಹಿತಿ, ದೃಶ್ಯ, ಶ್ರಾವ್ಯಗಳ ಮಹಾಪೂರದ ಈ ಕಾಲದಲ್ಲಿ, ಜೋರು ಧ್ವನಿಯಲ್ಲಿ ಕೂಗುವವನಿಗೇ ಮಾರುವ ಶಕ್ತಿ ಎನ್ನುವಂತಾಗಿರುವಾಗ ಸಿನೆಮಾ ಟೆಲಿವಿಷನ್ನಿನಲ್ಲಿ ಆಹಾರದ ಬಳಕೆಯೂ ಈ ಆರ್ಭಟದ ಭಾಗವಾಗಿಯಷ್ಟೇ ಧ್ವನಿ ಏರಿಸಿಕೊಂಡಿದೆ. ಇದಕ್ಕೂ ಇತರ ವಿಷಯಗಳಂತೆ ಮಾರುಕಟ್ಟೆಯ ಒತ್ತಡಗಳೂ ಏರ್ಪಟ್ಟಿವೆ.
ಮನುಷ್ಯನ ತೀರಾ ಮೂಲಭೂತ ಅಗತ್ಯಗಳಲ್ಲಿ ಆಹಾರವೂ ಒಂದಾಗಿರುವುದರಿಂದ, ಅದನ್ನು ಸಿನೆಮಾದಲ್ಲಿ ಬಳಸಿರುವುದು ಸಹಜವಾಗಿಯೇ ಇದೆ. ಮನುಷ್ಯನ ಜೀವನವನ್ನು ದಾಖಲಾತಿಸುವ ಸೋಗಿನಲ್ಲಿಯೇ ಕಥೆಗಳನ್ನು ಹೇಳುವ ಈ ಮಾಧ್ಯಮ ಆಹಾರದಂಥಾ ಮೂಲಭೂತ ಅಗತ್ಯವನ್ನು ತೋರಿಸಿರುವುದರಲ್ಲಿ ಆಶ್ಚರ್ಯವಿಲ್ಲ. ಹೀಗಾಗಿ ಆಹಾರ, ಅಡುಗೆ ಇತ್ಯಾದಿಗಳನ್ನು ಇಂದು ಮಾಧ್ಯಮ ನೋಡುತ್ತಿರುವ ಕ್ರಮವನ್ನು `ಭೋಗ ಸಂಸ್ಕೃತಿಯ ಭಾಗ’ ಎಂದು ನೋಡುವುದು ಬಹುಶಃ ತಪ್ಪಾಗುತ್ತದೆ.
ಹಿಂದಿನಿಂದಲೂ ಮನುಷ್ಯ ಚಟುವಟಿಕೆಗಳ ಅನೇಕ ರೀತಿಯ ದಾಖಲೀಕರಣಗಳಲ್ಲಿ ಅಡುಗೆಯೂ ಒಂದು. ದೃಶ್ಯ ಪರಂಪರೆಯಲ್ಲಿ ನೋಡಿದರೆ, ಕೇವ್ ಪೈಂಟಿಂಗ್ ಗಳಲ್ಲಿ, ಬೇಟೆಯ ಚಿತ್ರಣದಿಂದ ಹಿಡಿದು, ಇಂದಿನ ಅಡುಗೆ ಕಾರ್ಯಕ್ರಮಗಳವರೆಗೂ ವಿಧವಿಧವಾಗಿ ಅಡುಗೆ ದಾಖಲೀಕರಣ ನಡೆದಿದೆ. ದಿನಪತ್ರಿಕೆ, ವಾರಪತ್ರಿಗೆಗಳು ಈ ದಾಖಲೀಕರಣ, ಪ್ರಸರಣದ ಸಾಧ್ಯತೆಗಳನ್ನು ಕಂಡುಕೊಂಡಿದ್ದವು. ಅಲ್ಲಿ ಪ್ರಕಟಗೊಳ್ಳುತ್ತಿದ್ದ ಅಡುಗೆ ಸಾಹಿತ್ಯವನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದವರು ಬಹಳ ಇದ್ದರು. ಅಡುಗೆ ಪುಸ್ತಕಗಳಿಗೆ ಸದಾ ಭರ್ಜರಿ ಬೇಡಿಕೆ ಇದ್ದದ್ದು, ಸ್ವತಃ ಪುಸ್ತಕ ವ್ಯಾಪಾರಿಯ ಮಗನಾದ ನಾನು ಕಣ್ಣಾರೆ ಕಂಡ ವಿಷಯ. ವಿಚಿತ್ರವೆಂದರೆ, ಇದರ ಜೊತೆಗೆ ಮನೆ ಔಷಧಿಯೂ ಸಾಕಷ್ಟು ಬೇಡಿಕೆ ಪಡೆಯುತ್ತಿತ್ತು, ನಮ್ಮಂಗಡಿಯಲ್ಲಂತೂ ಅವೆರಡೂ ಅಕ್ಕ-ಪಕ್ಕದ ಶೆಲ್ಫುಗಳಲ್ಲೇ ಇದ್ದುವು! ಈ ರೀತಿಯಾಗಿ ದಾಖಲೀಕರಣ, ಪ್ರಸರಣ ನಡೆಯುತ್ತಿದ್ದದ್ದು, ಸಹಜವಾಗಿಯೇ ದೃಶ್ಯ-ಶ್ರಾವ್ಯ ಮಾಧ್ಯಮಕ್ಕೂ ಬಂತು. ಇದರಿಂದ ಅಡುಗೆ ಕಾರ್ಯಕ್ರಮಗಳು ಆರಂಭವಾದವು.
ಎಲ್ಲಾ ದಾರವಾಹಿಗಳಂತೆಯೇ ಅಡುಗೆ ಕಾರ್ಯಕ್ರಮಗಳು ರುಚಿ ಕಳೆದುಕೊಳ್ಳುತ್ತಿದ್ದಂತೆಯೇ, ಅವುಗಳು ಹೊಸ ಅವತಾರವನ್ನೆತ್ತಲಾರಂಭಿಸಿದವು. ಕಸ್ತೂರಿಯಲ್ಲಿ ಬಂದ ಭಾನುವಾರದ ಬಾಡೂಟ ಕಾರ್ಯಕ್ರಮದಲ್ಲಿ ನೆಲದಲ್ಲಿ ಒಲೆಹೂಡಿದಂತೆ ನಾಟಕ ಮಾಡಿದ್ದರಿಂದ ಹಿಡಿದು, ಮಾಂಸಾಹಾರ ಅಡುಗೆ ಟಿ.ವಿ ಪರದೆಯ ಮೇಲೆ ಬರುವವರೆಗೆ, ಕನ್ನಡದಲ್ಲಿ ಈ ಕಾರ್ಯಕ್ರಮಗಳು ವಿಭಿನ್ನ ಪ್ರಯೋಗಗಳನ್ನು ಮಾಡಿವೆ. ಅದೂ ಸಾಕಾಗಲಿಲ್ಲ ಎನ್ನುವಾಗ ಊರೂರು ತಿರುಗಾಡಿ ಪ್ರೇಕ್ಷಕರ ಮನೆಗೇ ಹೋಗಿ ಅಲ್ಲಿ ಅಡುಗೆ ಕಾರ್ಯಕ್ರಮಗಳನ್ನು ಮಾಡಲಾರಂಭಿಸಿದರು. ಇದರಿಂದ ಟಿ.ವಿ ಪ್ರೇಕ್ಷಕರ ಅಭಿರುಚಿಯನ್ನು ಅರಿತು, ಅವರ ಮುಖವನ್ನೂ ತೋರಿಸುತ್ತಾ, ಒಟ್ಟಾರೆಯಾಗಿ ಅಡುಗೆ ಕಾರ್ಯಕ್ರಮಗಳನ್ನು ಹೆಚ್ಚು ಜನರ ಹತ್ತಿರಕ್ಕೆ ತರುವ ಪ್ರಯತ್ನಗಳು ಜೋರಾದವು. ಇನ್ನು ಟ್ರಾವೆಲ್ ಆಂಡ್ ಲಿವಿಂಗ್ರೀತಿಯ ವಿಭಿನ್ನ ದೇಶಗಳ ಆಹಾರ ಸಂಬಂಧೀ ಅನೇಕ ಕಾರ್ಯಕ್ರಮಗಳು, ಆಹಾರ ಸಂಬಂಧೀ ಸ್ವತಂತ್ರ ಚ್ಯಾನಲ್ಲುಗಳು ಎಲ್ಲವೂ ಬಂದು, ಇಂದು ಆಹಾರ ಸಂಬಂಧೀ ಮಾರುಕಟ್ಟೆಗೆ ಯಥೇಚ್ಛ ಆಹಾರವನ್ನು ಸಿದ್ಧಪಡಿಸಲಾಗುತ್ತಿದೆ. ಜೊತೆಗೇ ಇಲ್ಲೆಲ್ಲಾ, ಸಾಮಾಜಿಕ ಸ್ತರ, ಜಾತಿ, ವರ್ಣ ಇತ್ಯಾದಿ ಎಲ್ಲಾ ಸಾಮಾಜಿಕ ವಿಕಾರಗಳು, ಅಡುಗೆಯ ದಾಖಲೀಕರಣ, ಪ್ರಸರಣದಲ್ಲಿ ಸೇರುತ್ತಾ ಹೋದವು.
ಇನ್ನು ಮಾಸ್ಟರ್ ಚೆಫ್ ರೀತಿಯ ರಿಯಾಲಿಟಿ ಶೋಗಳು ಅಡುಗೆಯಲ್ಲಿನ ಸೃಜನಾತ್ಮಕತೆಯನ್ನು ಶೋಧಿಸುವೆಡೆಗೂ ಒಂದಿಷ್ಟು ಹೆಜ್ಜೆ ನಡೆದಿದ್ದಾವೆ. ಇಂಥ ಶೋ ನೋಡಿ, ನನ್ನ ಹೆಂಡತಿ ಮಾಡಿದ ಮೆಣಸಿನ ಐಸ್ಕ್ರೀಮ್ ಗೆ ನಾನು ಬಲಿಯಾದದ್ದು ಇನ್ನೂ ಖಾರವಾಗಿ ನೆನಪಿದೆ 🙂
ಇಂದಿನ ಆರ್ಭಟದ ದಾಖಲೀಕರಣ ಮತ್ತು ಪ್ರಸರಣದಲ್ಲಿ ಒಂದು ಸಾಮಾನ್ಯೀಕರಣವೂ ನಡೆಯುತ್ತಿದೆ. ಕನ್ನಡ ಟಿ.ವಿ ಲೋಕದಲ್ಲಿ, ಅಡುಗೆ ಕಾರ್ಯಕ್ರಮಗಳನ್ನು ನಡೆಸುತ್ತಿರುವವರಲ್ಲಿ, ಮಾಂಸಾಹಾರವನ್ನು ಚೆನ್ನಾಗಿ ನಿರ್ವಹಿಸುವವರು ಕೇವಲ ಒಂದಿಬ್ಬರು. ಇಂದು, ಟಿ.ವಿ ಸಿನೆಮಾ ಲೋಕದಲ್ಲಿ ಕನ್ನಡ ಹೇಗೆ ವಿಚಿತ್ರವಾಗಿ ಮುಖ ಕಿವುಚಿಕೊಂಡಿದೆಯೋ, ಹಾಗೇ ಅಡುಗೆ ಕಾರ್ಯಕ್ರಮಗಳೂ, ಕೇವಲ ಕೆಲವು ಭೌಗೋಳಿಕ ಪ್ರಯೋಗಗಳಿಗೆ ಮಾತ್ರ ಸೀಮಿತವಾಗುತ್ತಿವೆ. ಇದರಿಂದಾಗಿ ಕಾಲಕ್ರಮೇಣ, ಸಿನೆಮಾ, ದಾರವಾಹಿಗಳಿಂದಾಗಿ ನಡೆಯುತ್ತಿರುವ ಸಾಂಸ್ಕೃತಿಕ ಸಾಮಾನ್ಯೀಕರಣದಂತೆ, ಆಹಾರ ಪದ್ಧತಿಯ ಸಾಮಾನ್ಯೀಕರಣವೂ ನಡೆಯುತ್ತದೆ. ಮಂಗಳೂರಿನವರು ಮಾಡುವ ನೀರು ದೋಸೆ ನಿಧಾನಕ್ಕೆ ಮಾಯವಾಗಿ, ಟಿ.ವಿಯಲ್ಲಿ ಕಾಣಿಸುವ, ಬೆಂಗಳೂರಿನ ಹೋಟೇಲುಗಳಲ್ಲಿ ಸಿಗುವ ದೋಸೆಯೇ ಸಾಧು ಎನಿಸಿಕೊಳ್ಳುವುದು ಇದಕ್ಕೆ ಒಂದು ಉದಾಹರಣೆ.
ಮನೆಯಲ್ಲಿ ಮಾಡುವ ಅಡುಗೆ, ಮನೆ ಮಂದಿಗೆ ಮಾಡುವ ಅಡುಗೆಯಲ್ಲಿ ಹಿಂದಿನಿಂದಲೂ ಸ್ತ್ರೀಯರ ಕೈ ಬಲವಾಗಿದ್ದರೆ, ವಾಣಿಜ್ಯಾತ್ಮಕ ಅಡುಗೆ, ದೊಡ್ಡ ಪ್ರಮಾಣದ ಅಡುಗೆಯಲ್ಲಿ ಸಾಮಾನ್ಯವಾಗಿ ಗಂಡಸರದ್ದೇ ಕಾರುಬಾರಾಗಿತ್ತು. ಸಹಜವಾಗಿ, ಪುರುಷರೇ ತುಂಬಿದ್ದ ಟಿ.ವಿ, ಸಿನೆಮಾ ಮಾಧ್ಯಮಕ್ಕೂ ಗಂಡಸರ ಅಡುಗೆಯೇ ನುಗ್ಗಿತ್ತು. ಆದರೆ, ಹೆಂಗಸರೇ ಇದರ ಟಾರ್ಗೆಟ್ ಪ್ರೇಕ್ಷಕರಾಗಿದ್ದರಿಂದ ಸಾಕಷ್ಟು ವ್ಯತ್ಯಾಸಗಳನ್ನು ಮಾಡಿಕೊಳ್ಳಲಾಯಿತು. ಮಿಕ್ಸರ್, ಗ್ರೈಂಡರ್, ಅಕ್ಕಿಪುಡಿ, ಗೋಧಿಪುಡಿ ಇತ್ಯಾದಿಗಳನ್ನು ಮಾರುವ ಎಲ್ಲಾ ಕಂಪನಿಗಳು ಯಾವುದೋ ದಾರವಾಹಿಯೊಂದಿಗೆ ತಮ್ಮ ಸರಕನ್ನು ಮಾರಬಹುದಾಗಿದ್ದರೂ, ಅಡುಗೆ ಕಾರ್ಯಕ್ರಮಗಳು ಅವರಿಗೆ ಹೇಳಿ ಮಾಡಿಸಿದಂತಿದ್ದದ್ದರಿಂದ, ಜಾಹಿರಾತು ಸೆಳೆತಗಳು, ದೊಡ್ಡ ದುಡ್ಡಿನ ಮಾತುಗಳು ಈ ಕಾರ್ಯಕ್ರಮದಲ್ಲಿ ಜೋರಾಗಿಯೇ ಇದೆ.
ಅಡುಗೆಯ ದೃಶ್ಯ ಸಾಧ್ಯತೆಯ ಶೋಧ
ಇಲ್ಲಿ ಗಮನಿಸಬೇಕಾದ ಇನ್ನೊಂದು ಮಹತ್ವದ ವಿಚಾರವೆಂದರೆ, ದೃಶ್ಯ ಮಾಧ್ಯಮಕ್ಕೆ ಅಡುಗೆ ಬಂದಂತೆ, ಜೊತೆಯಲ್ಲೇ ಅಡುಗೆಗೆ ದೃಶ್ಯದ ಏಸ್ಥೆಟಿಕ್ಸ್ ಬಂದಿರುವುದು. ಇಲ್ಲಿ ಅಡುಗೆ ರುಚಿಯಾಗಿರುವುದರ ಜೊತೆಗೆ ನೋಡಲೂ ಚೆನ್ನಾಗಿರಬೇಕು ಎನ್ನುವ ಅನಿವಾರ್ಯತೆ ಬಂತು. ಪ್ರೇಕ್ಷಕರಿಗೆ ಅಡುಗೆಯನ್ನು ಸವಿದು ನೋಡಲು ಸಾಧ್ಯವಿಲ್ಲದಿರುವುದರಿಂದ, ನೋಟದಲ್ಲೇ ಅದು ರುಚಿಯನ್ನು ಬಿತ್ತರಿಸುವಂತಿರಬೇಕಾಗಿತ್ತು. ಇದಕ್ಕೆ ಪಂಚತಾರಾ ಹೋಟೇಲಿನ ಚೆಫ್ ಗಳಿಂದ ಆರಂಭಿಸಿ, ಅಡುಗೆ ಸಂಬಂಧೀ ಜಾಹೀರಾತುಗಳು ಸಾಕಷ್ಟು ಕೊಡುಗೆ ನೀಡಿವೆ. ಹೀಗಾಗಿ ಯಾವುದೇ ಅಡುಗೆಗೆ ಕೊನೆಯಲ್ಲಿ ನಾಲ್ಕು ಎಸಳು ಕೊತ್ತಂಬರಿ ಉದುರಿಸುವುದು, ಪಕ್ಕದಲ್ಲಿ ಬಣ್ಣದ ದೊಡ್ಡಮೆಣಸು ಹೆಚ್ಚಿಡುವುದು, ಇನ್ಯಾವುದಕ್ಕೋ ಕೆಂಪುಮೆಣಸನ್ನು ಚುಚ್ಚಿಡುವುದು ಇತ್ಯಾದಿ ನೋಡಬಹುದು. ಚಟ್ನಿಯ ಹದ, ಮಾವಿನ ಬಣ್ಣ ಹೀಗೆ ಎಲ್ಲವನ್ನೂ Quantify ಮಾಡುವ ಅಗತ್ಯ ದೃಶ್ಯ ಮಾಧ್ಯಮಕ್ಕೆ ಇತ್ತು. ಇದರಿಂದಾಗಿ ಅದರೊಂದಿಗೆ ಒಂದು ಹೊಸ ಏಸ್ಥೆಟಿಕ್ ಕೂಡಾ ಬೆಳೆದು ಬಂದಿದೆ. (ಈ ಚಹಾಕ್ಕೆ ಬಣ್ಣ, ರುಚಿ, ಶಕ್ತಿ ಇದೆ! ರುಚಿ ಸರಿ, ಶಕ್ತಿ ಸಂಶಯ, ಬಣ್ಣ ಯಾಕೆ?)
ಆದರೆ, ಜೊತೆಗೆ ಮುದ್ರಣದಲ್ಲಿ ಇಲ್ಲದ ಒಂದು ಹೊಸ ಸಾಧ್ಯತೆಯೂ ಇಲ್ಲಿ ತೆರೆದುಕೊಂಡಿದೆ. ’ಕೆಂಪು’ ಬಣ್ಣ ಬರುವವರೆಗೆ ಹುರಿಯಿರಿ ಎಂದಷ್ಟೇ ಬರವಣಿಗೆಯಲ್ಲಿ ಬರೆಯುವುದು ಸಾಧ್ಯವಿತ್ತು. ಆದರೆ ಆ ’ಕೆಂಪು’ ಸಾಂದರ್ಭಿಕವಾಗಿ ಭಿನ್ನವಾಗಿತ್ತು. ಬಜ್ಜಿಯ ಕೆಂಪು ಪೂರಿಯಲ್ಲಿ ಬಂದರೆ, ಪೂರಿ ಹಾಳಾಗಿಯೇ ಹೋಗಿರುತ್ತದೆಯಲ್ಲವೇ? ಮುದ್ರಣದ ಈ ತೊಡಕನ್ನು ದೃಶ್ಯ ಮಾಧ್ಯಮ ತೆಗೆದು ಹಾಕಿದೆ. ಇಲ್ಲಿ ನೋಡುವ ಮೂಲಕ ಹದವನ್ನು ಅರಿಯುವ ಸಾಧ್ಯತೆ ಏರ್ಪಟ್ಟಿದೆ.
ಡಿಜಿಟಲ್ ಯುಗದಲ್ಲಿ ಹೊಸ ಅಭಿವ್ಯಕ್ತಿ
ಇನ್ನು ಕಳೆದ ಕೆಲವು ವರ್ಷಗಳಲ್ಲಿ ನಡೆದ ಯೂಟ್ಯೂಬ್ ಹಾಗೂ ಕ್ಯಾಮರಾ ಇರುವ ಮೊಬೈಲ್ ಫೋನುಗಳ ಪ್ರಸರಣ ಸ್ಪೋಟದಿಂದ, ಅಡುಗೆ ಕಾರ್ಯಕ್ರಮಗಳು ಇನ್ನೊಂದೇ ಮಜಲನ್ನು ತಲುಪಿದ್ದಾವೆ. ಕ್ಯಾಮರಾ ತಂತ್ರಜ್ಞಾನ ಅದರಲ್ಲೂ ವೀಡಿಯೋ ಸಾಧ್ಯತೆಯ ಸುಲಭ ಸೌಲಭ್ಯ, ಈ ತಂತ್ರಜ್ಞಾನವನ್ನು ಡೆಮೊಕ್ರಟೈಸ್ಮಾಡಿಬಿಟ್ಟಿದೆ. ಮೊದಲು ಕ್ಯಾಮರಾದ ಬಗ್ಗೆ ಇದ್ದ ಭಯ ಇಂದು ಹೋಗಿಬಿಟ್ಟಿದೆ. ಸೆಲ್ಫೀ ಯುಗದಲ್ಲಿ, ತಮ್ಮ ಅಭಿವ್ಯಕ್ತಿಗೆ ಎಲ್ಲರೂ ಹೊಸ ಸಾಧನವಾಗಿ ಇದನ್ನು ಕಂಡುಕೊಂಡಿದ್ದಾರೆ. ಹೊರದೇಶದಲ್ಲಿರುವ ಆಪ್ತರಿಗೆ, ಬಂಧುಗಳಿಗೆ ಅಡುಗೆ ವಿಧಾನಗಳನ್ನು ಕಳುಹಿಸುವ ಪ್ರಯತ್ನಗಳು ಆರಂಭವಾದವು. ಇದರಿಂದಾಗಿ ಸ್ಥಳೀಯ ದಾಖಲೀಕರಣ, ಪ್ರಸರಣ ಆರಂಭವಾದವು. ಇದರಲ್ಲಿ ಒಂದು ಸ್ಥಳೀಯ ಅಭಿವ್ಯಕ್ತಿ ಸಾಧ್ಯವಾಯಿತು. ವ್ಯವಸ್ಥಿತ ಮಾರುಕಟ್ಟೆ ಹಿಂದಿರಲಿಲ್ಲ, ಅಲ್ಲಿಗೂ ಲಗ್ಗೆಯಿಟ್ಟಿತು. ಅಂತರ್ಜಾಲದಲ್ಲಿ ಓದುಗರಿಗಿಂತ, ನೋಡುಗರು ಹೆಚ್ಚು. ಇಲ್ಲಿ ಕೇಳುವ, ನೋಡುವ ವಿಷಯಕ್ಕೆ ಇರುವ ಪ್ರೇಕ್ಷಕವರ್ಗ ಬಹಳ ದೊಡ್ಡದು. ಇಲ್ಲಿನವರಿಗೆ ತಾಳ್ಮೆ ಬಹಳ ಕಡಿಮೆ. ಹೀಗಾಗಿ ಇಲ್ಲಿಗೆ ದೃಶ್ಯ-ಶ್ರಾವ್ಯ ಮಾಧ್ಯಮ ಹೊಸ ವ್ಯಾಕರಣವನ್ನು ತುರ್ತಾಗಿ ಕಂಡುಕೊಂಡಿತು. ಇಂದು ಅಲ್ಲಿಯೂ ಅಡುಗೆ ಸಾಕಷ್ಟು ವ್ಯವಸ್ಥಿತ ಮಾರುಕಟ್ಟೆಯನ್ನು ಕಂಡುಕೊಂಡಿದೆ.
ಸಿನೆಮಾ ತನ್ನ ನಿಜ ಎನಿಸುವಂತೆ ಕಥೆ ಹೇಳುವ ತಂತ್ರವನ್ನು ಅಡುಗೆ ಕಾರ್ಯಕ್ರಮಗಳಿಗೂ ವಿಸ್ತರಿಸಿಕೊಂಡಿದೆ. ಹೀಗಾಗಿ ಯಾರೋ ಒಬ್ಬಾತ, ತಿನ್ನುತ್ತಾ ಬೇರೆ ಬೇರೆ ಸ್ಥಳಗಳಿಗೆ ಹೋಗುವಂಥಾ ಶೋಗಳನ್ನು ನಾವಿಂದು ಟಿ.ವಿ. ಅಥವಾ ಅಂತರ್ಜಾಲಗಳಲ್ಲಿ ನೋಡುತ್ತಿದ್ದೇವೆ. ಆದರೆ, ಇವೆಲ್ಲವುಗಳಲ್ಲಿ ಅನಿಶ್ಚಿತ ಯಾವುದೂ ಇರುವುದಿಲ್ಲ. ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಿ, ಆಕಸ್ಮಿಕ ಎನ್ನುವಂತೆ ತೋರಿಸಲಾಗುತ್ತದೆ. ಇದೊಂದು ಅಡುಗೆ ರಿಯಾಲಿಟಿ ಶೋ ಆಗಿದೆ.
ಯೂ ಟ್ಯೂಬಿನಲ್ಲಿ ಕನ್ನಡದ ವಸ್ತುಗಳು ನಿಧಾನಕ್ಕೆ ಹೆಚ್ಚುತ್ತಿದ್ದ ಕಾಲದಲ್ಲಿಯೇ, ನಮ್ಮ ಮನೆಯಲ್ಲಿ ಇದ್ದ ಕ್ಯಾಮರಾ ಬಳಸಿ ನನ್ನ ಹೆಂಡತಿ ರಶ್ಮಿ, ಅವಳ ಅನೇಕ ಅಡುಗೆ ಪ್ರಕ್ರಿಯೆಯನ್ನು ದಾಖಲೀಕರಿಸಿ ಯೂಟ್ಯೂಬಿಗೆ ಹಾಕಿದ್ದಳು. ಮಾಡಿದ ಅಡುಗೆ ತಿನ್ನುವ, ಯೂಟ್ಯೂಬಿಗೆ ವೀಡಿಯೋ ಏರಿಸುವ ಕೈಂಕರ್ಯ ಮಾತ್ರ ನನ್ನದಾಗಿತ್ತು. ಟಿವಿಯಲ್ಲಿ ಅಂದು ಬರುತ್ತಿದ್ದ ಕಾರ್ಯಕ್ರಮಗಳ ಸಣ್ಣಮಟ್ಟಿನ ಅನುಕರಣೆಯಲ್ಲೇ ಆರಂಭವಾದ ನಮ್ಮ ಆ ಪ್ರಯೋಗ ಒಂದಷ್ಟು ಕಾಲದ ನಂತರ ನಿಂತಿತಾದರೂ, ನಮ್ಮ ಪರಿಚಿತರ ವಲಯದಲ್ಲಿ ಹೆಚ್ಚಿನವರು ಅದನ್ನು ನೋಡಿದ್ದು, ಅದರ ಬಗ್ಗೆ ಮಾತನಾಡಿದ್ದು, ಈ ಮಾಧ್ಯಮದ ಶಕ್ತಿಯ ಬಗ್ಗೆ ನಮಗೆ ಹೊಸ ನೋಟಕೊಟ್ಟದ್ದಂತೂ ನಿಜವೇ. ಇಂದು ಕನ್ನಡದಲ್ಲೇ, ವೃತ್ತಿಪರ ವೀಡಿಯೋಗಳ ಮಹಾಪೂರವೇ ಇದೆ. ಹೆಬ್ಬಾರ್ಸ್ ಕಿಚನ್, ಉಪಾಧ್ಯರ ಅಡುಗೆ ಮನೆ, ಕನ್ನಡ ರೆಸಿಪೀಸ್, ಸ್ವಯಮ್ ಪಾಕ, ಉತ್ತರ ಕನ್ನಡ ರೆಸಿಪೀಸ್ ಹೀಗೆ ಅನೇಕ ಯೂಟ್ಯೂಬ್ ಚ್ಯಾನಲ್ ಗಳು, ಫುಡ್ಡೀಸ್, ಬೇಕರ್ಸ್ ಇತ್ಯಾದಿ ವಾಟ್ಸ್ ಆಪ್ ಗ್ರೂಪ್ ಗಳು ನಿರಂತರವಾಗಿ ಅಡುಗೆ ಚರ್ಚೆ, ವೀಡಿಯೋ, ಬರವಣಿಗೆ ಇತ್ಯಾದಿಗಳಲ್ಲಿ ತೊಡಗಿಕೊಂಡಿವೆ.
ಇದಕ್ಕೆ ಹೊಂದಿಕೊಂಡು, ಪ್ರಜಾವಾಣಿ ಪತ್ರಿಕೆಯವರು ಇತ್ತೀಚೆಗೆ ತಮ್ಮ ಫೇಸ್ ಬುಕ್ ಹಾಗೂ ಯೂಟ್ಯೂಬ್ ಚ್ಯಾನಲ್ ಮೂಲಕ ರೆಸಿಪಿಗಳನ್ನು ಕೊಡಲು ಆರಂಭಿಸಿದರು. ಅದರ ವೀಡಿಯೋಗಳನ್ನು ನನ್ನ ತಂಡ ಮಾಡುತ್ತಿದೆ. (ಈ ವೀಡಿಯೋಗಳನ್ನು ನೋಡಿ. ಇಲ್ಲಿ ನನ್ನದೊಂದು ಸಣ್ಣ ಜಾಹಿರಾತು!) ಇದರ ಮೂಲಕ ಈ ಮಾಧ್ಯಮದ ಇನ್ನೊಂದಷ್ಟು ಸತ್ಯಗಳನ್ನು ತಿಳಿದುಕೊಳ್ಳಲು ನಮಗೆ ಸಾಧ್ಯವಾಯಿತು. ಟ್ರೈಕಲರ್ ಸ್ಯಾಂಡ್ವಿಚ್ ಮಾಡಿದಾಗ ಕೇವಲ ನಾಲ್ಕು ಸಾವಿರ ಜನ ನೋಡಿದರು. ಅದೇ ಕ್ಯಾರೆಟ್ ಹಲ್ವಾ ನಲವತ್ತು ಸಾವಿರ ಜನ ನೋಡಿ, ಎರಡು ಸಾವಿರ ಜನ ಶೇರ್ ಮಾಡಿ ಪ್ರಚಂಡ ಸಾಧನೆ ಮಾಡಿತು. ಅಂತರ್ಜಾಲದಲ್ಲಿ ಈ ವೀಡಿಯೋಗಳನ್ನು ನೋಡುವವರ ಬಗ್ಗೆಯೂ ನಮಗಿವು ಹೊಸ ಹೊಳಹನ್ನು ಕೊಡುತ್ತವೆ. ಮನೆಯಿಂದ ದೂರ ಇದ್ದು,ಮನೆಯೂಟಕ್ಕೆ ಆಶಿಸುವ, ಅಂತರ್ಜಾಲದಲ್ಲಿ ಸಲೀಸಾಗಿರುವ, ಒಂದು ಪ್ರೇಕ್ಷಕ ವರ್ಗ ಇದನ್ನು ನಿಷ್ಟೆಯಿಟ್ಟು ನೋಡುತ್ತಿದೆ. ಅವರಿಗೆ ಸ್ಯಾಂಡ್ವಿಚ್ ನಂಥಾ ವಿಷಯ ಬೇಕಾಗಿಲ್ಲ. ಕೋಳಿರೊಟ್ಟಿಯೋ, ಕಾಶಿಹಲ್ವವೋ ಬೇಕಾಗಿದೆ.
ಈ ಹೊಸತಲೆಮಾರಿನ ವೀಡಿಯೋಗಳಲ್ಲಿ ಇನ್ನೂ ಒಂದು ಗಮನಾರ್ಹ ಬದಲಾವಣೆ ಕಾಣಬಹುದು. ಒಂದೆಡೆಯಿಂದ ಓದುವವರು ಕಡಿಮೆಯಾಗುತ್ತಿದ್ದಾರೆ ಎನ್ನುವ ಕೂಗು ಕೇಳಿಬರುತ್ತಿದ್ದಂತೆಯೇ, ವೀಡಿಯೋಗಳು ಜನಪದ ರೂಪದಲ್ಲಿ ಮೂಡಿಬರುತ್ತಿವೆ. ಇಲ್ಲಿ ಅಕ್ಷರಗಳು ಚಿತ್ರರೂಪದಲ್ಲಿ ಮತ್ತೆ ಸ್ಥಾಪಿತವಾಗುತ್ತಿವೆ. ಇಲ್ಲಿನ ಭಾಷೆ ಬದಲಾಗುತ್ತಿದೆ. ಇದರ ಅರ್ಥ ಕನ್ನಡ ಬದಲಾಗುತ್ತಿದೆಯೆಂದಲ್ಲ, ಆದರೆ ಬಳಕೆ ಚಿತ್ರದ ಸಮಾನಾಂತರವಾಗಿ ಆಗುತ್ತಿದೆ. ಮೊದಲೆಲ್ಲಾ ಅಕ್ಷರಗಳಲ್ಲೇ ಇದ್ದ ಗಣಕಪ್ರಯೋಗಗಳು, ಗಣಕ ಸಣ್ಣದಾಗುತ್ತಾ ಬಂದಂತೆ ಐಕಾನ್ ರೂಪಕ್ಕೆ ಬಂದಂತೆಯೇ, ಇಂದು ಈ ಅಂತರ್ಜಾಲ ವೀಡಿಯೋಗಳಲ್ಲಿ, ಭಾಷೆ ಪದಗಳಿಗಷ್ಟೇ ಸೀಮಿತವಾಗಿವೆ. ಇಲ್ಲಿ ಇಡೀ ವಾಕ್ಯದ ವಿವರಣೆ ಬೇಕಿಲ್ಲ. ’ಕಾಲು ಚಮಚ ಸಕ್ಕರೆ’ ಎಂದಷ್ಟೇ ಬರೆದರೆ ಸಾಕಾಗುತ್ತದೆ. ’ಕಾಲು ಚಮಚ ಸಕ್ಕರೆ ಹಾಕಿರಿ’ ಎನ್ನುವ ವಿವರಣಾತ್ಮಕ ವಾಕ್ಯ ಬೇಕಾಗಿಲ್ಲ. ಹೀಗೆ ಹೊಸ ಮಾಧ್ಯಮವನ್ನು, ಹೊಸ ಸಾಧ್ಯತೆ ಎಂದು ಕಾಣುವಲ್ಲಿ, ನಮಗೆ ಹೊಸ ಏಸ್ಥೆಟಿಕ್ಸ್ ಕಾಣಲು ಸಾಧ್ಯವಾಗುತ್ತಿದೆ. ಒಟ್ಟಿನಲ್ಲಿ, ಮಾನವನ ಸಹಜವಾದ ಅಗತ್ಯವೊಂದನ್ನು ಸಿನೆಮಾ, ಟಿ.ವಿ ಅಂತರ್ಜಾಲ ಪೂರೈಸುತ್ತಿರುವುದಲ್ಲದೇ, ಅದರ ಹಿಂದಿರುವ ಒಂದು ಮಾರುಕಟ್ಟೆಯನ್ನೂ ಸಲಹುತ್ತಿದೆ. ಈ ಹಿಂದೆ ಸಿನೆಮಾಗಳಲ್ಲಿ ಹೊರದೇಶಗಳನ್ನು ತೋರಿಸಿ ಮನರಂಜನೆ ನೀಡುತ್ತಿದ್ದ ಇ-ಮಾಧ್ಯಮಗಳು (ವಿದ್ಯುನ್ಮಾನ ಮಾಧ್ಯಮಗಳು), ಇಂದು ತನ್ನ ಎಕ್ಸಾಟಿಸಿಸಮ್ಮನ್ನು, ಪರಂಪರೆಯಲ್ಲಿ ಹುಡುಕುತ್ತಿವೆ. ಹಳೆಯದೆಲ್ಲವೂ ಹಿರಿಯದು ಎನ್ನುವ ಚಾಳಿಯಿಂದಾಗಿ ಸಾಂಪ್ರದಾಯಿಕ ಅಡುಗೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿವೆ. ಮಾನವನ ಮೂಲಭೂತ ಅಗತ್ಯವಾದ ಆಹಾರದ ಜ್ಞಾನವನ್ನು, ಡಿಜಿಟಲ್ ಯುಗ ಡೆಮೊಕ್ರಟೈಸ್ ಮಾಡಿ, ಹೊಸ ಸಾಧ್ಯತೆಗಳನ್ನು ತೆರೆದುತೋರಿಸುತ್ತಿದೆ. ಇದು ಭವಿಷ್ಯದಲ್ಲಿ ಈ ಮಾಧ್ಯಮದ ಹೊಸ ಸಾಧ್ಯತೆಗಳ ಶೋಧನೆಗೆ ಸಹಕಾರಿಯಾಗಲಿದೆ ಎಂದೇ ನನ್ನ ಭಾವನೆ.
ಅಭಯಸಿಂಹನ ವಿವರಣೆ ವೈವಿಧ್ಯಪೂರ್ಣವಾಗಿದೆ..ನಾನು ಇತ್ತೀಚೆಗೆ ನೋಡಿದ ಮಲಯಾಳಂನ 'ಉಸ್ತಾದ್ ಹೊಟೇಲ್' ಸಿನಿಮಾ ಆಹಾರದ ಅದರಲ್ಲೂ ಮಲಬಾರ್ ಬಿರಿಯಾನಿ ಸುತ್ತಲೇ ಹೆಣೆದ ಕಥೆ, ಮನೋಜ್ಞ. ಪಾಕಶಾಸ್ತ್ರದತ್ತ ಆಕರ್ಷಿತನಾಗುವ ಯುವಕನೊಬ್ಬನನ್ನು ಸಮಾಜ ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದನ್ನು ಸೊಗಸಾಗಿ ಕಟ್ಟಿಕೊಟ್ಟಿದೆ.