ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ
ಅಧ್ಯಾಯ – ೩೦

ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘ, ೨೦೦೪ರಲ್ಲಿ ಸಂಡೂರಿನಲ್ಲಿ ಏರ್ಪಡಿಸಿದ ಲೇಖ-ಲೋಕ ಸಮ್ಮೇಳನಕ್ಕೆ ನಾವು ಮುಂಬೈ ಲೇಖಕಿಯರು ನಾಲ್ವರು – ಡಾ| ಸುನೀತಾ ಶೆಟ್ಟಿ, ಮಿತ್ರಾ ವೆಂಕಟ್ರಾಜ್, ತುಳಸೀ ವೇಣುಗೋಪಾಲ್ ಹಾಗೂ ನಾನು ಆಮಂತ್ರಿತರಾಗಿ ಹೋಗಿದ್ದೆವು. ೨೦೦೩ರಲ್ಲಿ ಡಾ| ಸುನೀತಾ ಶೆಟ್ಟಿ ಅವರು, ಮುಂಬೈ ಕನ್ನಡ ಲೇಖಕಿಯರ ಬಳಗವನ್ನು ಹುಟ್ಟು ಹಾಕಿದರು. ಸೃಜನಾ ಎಂದು ನಾವದನ್ನು ಹೆಸರಿಸಿ ಕೊಂಡಿದ್ದೆವು. ಲೇಖ – ಲೋಕದಲ್ಲಿ ತುಳಸಿ ವೇಣುಗೋಪಾಲ್ ಪ್ರಸ್ತುತ ಪಡಿಸಿದ ಆತ್ಮಕಥೆ, ಚೇತೋಹಾರಿಯಾಗಿತ್ತು. ಗೀತಾ ನಾಗಭೂಷಣ, ಗಂಗಾ ಪಾದೇಕಲ್, ವಸುಮತಿ ಉಡುಪ ಮುಂತಾದ ಹಿರಿಯ ಲೇಖಕಿಯರನ್ನು ಸಿಗುವಂತಾಯ್ತು.

ಸಂಡೂರಿನ ಖನಿಜ ಬೆಟ್ಟಗಳ, ಸರೋವರದ ಸುರಮ್ಯ ನೋಟ ರಂಜಿಸಿದಂತೆಯೇ, ಹಂಪಿಯ ದರ್ಶನ ನನ್ನ ವರ್ಷಗಳ ಕನಸನ್ನು ನನಸಾಗಿಸಿತು. ಆ ಅಮೂಲ್ಯ ಐತಿಹಾಸಿಕ ಸಿರಿಯನ್ನು ನನ್ನ ಕ್ಯಾಮೆರಾದಲ್ಲಿ ಬಂಧಿಸಿ, ಇಡಿಯ ರೋಲನ್ನೇ ಮುಗಿಸಿ ಬಿಟ್ಟೆ. ಮರುದಿನ ತುಳಸಿಯ ಕಥನದ ಸಂದರ್ಭ ಫೋಟೋ ತೆಗೆಯಲೆಂದು ಹೊಸ ರೋಲ್ ಹಾಕಿ ಕೊಡಲು ಮುಂದಾದ ವಿದ್ಯಾರ್ಥಿನಿ ಒಬ್ಬಳು, ನನ್ನಾ ಹಳೆಯ ಅಮೂಲ್ಯ ರೋಲನ್ನು ಎಕ್ಸ್‌ಪೋಸ್ ಮಾಡಿ ಬಿಟ್ಟಳು. ನನ್ನ ಜೀವವನ್ನೇ ಕಳಕೊಂಡಂತೆ ನಾನು ಕುಸಿದು ಹೋದೆ! ಪುಣ್ಯವಶಾತ್, ಹಿಂದಿನ ರೋಲ್‌ನಲ್ಲಿ ಕೆಲವು ಫೋಟೋಗಳಿದ್ದುವು.

ಮರುವರ್ಷ, ೨೦೦೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಮಾರಂಭ ಹಂಪಿಯಲ್ಲೇ ನಡೆದಾಗ ಈ ನಷ್ಟವನ್ನು ತುಂಬಿಕೊಂಡರೂ, ಗೆಳತಿಯರೊಡನೆ ಲೇಖ-ಲೋಕ ಸಂದರ್ಭದ ಚಿತ್ರಗಳು ಮಾತ್ರ ಸಿಗುವಂತಿರಲಿಲ್ಲ. ಜೊತೆಗೆ ತುಷಾರ್ ಕೂಡಾ ಇದ್ದುದರಿಂದ ಅಪ್ರತಿಮ ಫೋಟೋಗಳಿಗೆ ಬರವಿರಲಿಲ್ಲ. ಅದೇ ವರ್ಷ ಪ್ರಜ್ವಲ್‌ನ ಮದುವೆಯಾಗಿದ್ದು, ದಿವ್ಯಾ, ಪ್ರಜ್ವಲ್ ಮತ್ತು ಹರ್ಷ ಕೂಡಾ ಜತೆಗಿದ್ದರು. ಸೊಸೆ ದಿವ್ಯಾ ನನ್ನ ಎಂಜಿನಿಯರ್ ಅಂಕ್‌ಲ್ ಮೊಮ್ಮಗಳು; ಡಾ ದೀಪಾಳ ತಂಗಿ. ಮಂಗಳೂರಿನ ಎಸ್.ಡಿ.ಎಮ್.ಕಾಲೇಜಿನಲ್ಲಿ ಶಿಕ್ಷಕಿ. ಏಳರಿಂದ ನಾಲ್ಕರ ವರೆಗೆ ಸುತ್ತಾಡಿ ಮಧ್ಯಾಹ್ನ ಊಟಕ್ಕೆ ಪುಟ್ಟ ಹೊಟೇಲ್ ಹೊಕ್ಕಾಗ, ಹಂಪಿಯ ಬಿಸಿಲಿಗೆ ಸುತ್ತಿ, ಕೆಂಪು ಮಂಗನಂತಾದ ಪ್ರಜ್ವಲ್‌ನ ಮುಖ ನೋಡಿ ನಾನು ಬಿದ್ದು ಬಿದ್ದು ನಕ್ಕರೆ, ಮಕ್ಕಳೆಲ್ಲ ನೀವೂ ಏನೂ ಕಡಿಮೆಯಿಲ್ಲ; ಅವನಿಗಿಂತ ಹೆಚ್ಚು ಕೆಂಪಾಗಿದ್ದೀರಿ, ಎಂದರು!

[ಮಾರ್ಗರೆಟ್ ನಿಚೆಲ್] : `ಗಾನ್ ವಿದ್ ದ ವಿಂಡ್’ ಅನುವಾದಕ್ಕೆ ೨೦೦೪ರ ಅತ್ಯುತ್ತಮ ಅನುವಾದವೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ನನ್ನ ಪ್ರೀತಿ, ಗೌರವದ ಡಾ| ಸರೋಜಿನಿ ಮಹಿಷಿ ಹಾಗೂ ಡಾ| ಹಂ.ಪ.ನಾ ಅವರ ಕೈಗಳಿಂದ ಬಹುಮಾನ ಸ್ವೀಕರಿಸಿದ ಆ ಕ್ಷಣ, ನಾನು ನಿಜಕ್ಕೂ ಧನ್ಯಳಾದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೊತೆಗೆ ನನ್ನ ನೆಚ್ಚಿನ ಗೆಳತಿ ನೇಮಿಚಂದ್ರ ಇದ್ದರು. ವರ್ಷದ ಹಿಂದೆ ಮುಂಬೈಗೆ ಅನುಜಾ ಮಹಿಳಾ ಸಂಘದ ಕಾರ್ಯಕ್ರಮಕ್ಕೆ ಬಂದಿದ್ದ ನೇಮಿಚಂದ್ರ ಹಾಗೂ ಮಗಳು ಮೇಘಾಳನ್ನು ನಾನು ಏರ್‌ಪೋರ್ಟ್‌ನಿಂದಲೇ ಮನೆಗೆ ಕರೆದುಕೊಂಡು ಬಂದಿದ್ದೆ. ನಾಲ್ಕೈದು ದಿನ ಜೊತೆಗಿದ್ದ ನೇಮಿ, ಮನೆಯವರಂತೆಯೇ ಆಗಿದ್ದರಿಂದ ಮಕ್ಕಳಿಗೂ ಆತ್ಮೀಯರಾಗಿದ್ದರು. ಎಲಿಫೆಂಟಾ, ಜೋಗೇಶ್ವರಿ ಗುಹೆಗಳನ್ನು ಅವರ ಜೊತೆ ಸುತ್ತಿದ ನಾನು, ಮೌಂಟ್ ಮೇರಿಯ ಶಾಂತಿ ಅವೇದನಾ ಆಶ್ರಮವನ್ನೂ ಅವರಿಗೆ ತೋರಿದ್ದೆ.

ಅಸೌಖ್ಯದ ಬಳಿಕ ನಾನು ಹೊರಹೋಗುವುದೆಂದರೆ ಆತಂಕಿತರಾಗುತ್ತಿದ್ದ ಮಕ್ಕಳಿಗೆ, ಹಂಪಿಯಲ್ಲಿ ಸುತ್ತಾಡಿ, “ನೋಡಿ, ನಾನು ಸಂಪೂರ್ಣ ಶಕ್ತಳಿದ್ದೇನೆ, ಚೂರೂ ಆಯಾಸವಾಗಿಲ್ಲ,” ಎಂದರೆ, ತುಷಾರ್, ಅಮ್ಮ, ಅದು ಆಡ್ರಿನಾಲಿನ್, ಅಷ್ಟೇ, ಎಂದು ನಕ್ಕ!

೨೦೦೫ ಎಲ್ಲ ವಿಧದಲ್ಲೂ ನನ್ನನ್ನು ಚೇತರಿಸಿತ್ತು. “ಪೊಲೀಸ್ ಡೈರಿ” ಧಾರಾವಾಹಿಯಾಗಿ ಪ್ರಕಟವಾದ ಸಂತಸದೊಡನೆ, ಸುಧಾ ಯುಗಾದಿ ಸಂಚಿಕೆಯಲ್ಲಿ ನನ್ನ, `ಪುನರ್ನವೀಕರಣದ ನೋವು ನಲಿವು’ ಲಲಿತ ಪ್ರಬಂಧ ಬಹುಮಾನಕ್ಕೆ ಪಾತ್ರವಾಗಿ ಎಲ್ಲರೂ ಗಮನಿಸುವಂತಾಗಿತ್ತು. ಆ ಪುನರ್ನವೀಕರಣದ ಸಮಯವೇ ಮುಂಬೈಯಲ್ಲಿ ಜಲಪ್ರಳಯವಾಗಿ, ಪ್ರತ್ಯಕ್ಷದರ್ಶಿಯಾದ ನನ್ನ ಲೇಖನ, `ಮುಂಬೈ ಜಲಪ್ರಳಯದ ಕರಾಳ ನೆನಪುಗಳು’ ಸುಧಾ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮಧ್ಯಾಹ್ನದವರೆಗೆ ಯಾವುದೇ ಸೂಚನೆಯಿಲ್ಲದೆ, ಅಪರಾಹ್ನ ಆಕಾಶವೇ ಹರಿದಂತಹ ಮಳೆಯಲ್ಲಿ ಆಡಲೆಂದು ನೆರೆಮನೆ ಮಕ್ಕಳೊಡನೆ ಟೆರೆಸ್‌ಗೆ ಹೋಗಿದ್ದ ನಾನು, ಹತ್ತು ನಿಮಿಷಗಳಲ್ಲಿ ಹಿಂದೆ ಬರುವುದರೊಳಗೆ ನನ್ನ ತೆರೆದ ಅಡಿಗೆ ಮನೆ ನೀರು ತುಂಬಿದ ಕೊಳವಾಗಿತ್ತು! ವರ್ಲಿಯ ತನ್ನ ಆಫೀಸ್‌ನಿಂದ ಮನೆಗೆ ಒಂದು ಘಂಟೆಯ ಪಯಣವನ್ನು, ರಸ್ತೆಗಳನ್ನು ತುಂಬಿ ಹರಿದ ಆ ಸೊಂಟಮಟ್ಟದ ನೀರಿನ ಪ್ರವಾಹದಲ್ಲಿ ಏಳು ಗಂಟೆಗಳ ಕಾಲ ನಡೆದು ಬಂದು ರಾತ್ರಿ ಹತ್ತಕ್ಕೆ ಮನೆ ಸೇರಿದ ಹರ್ಷನಿಗಾಗಿ ಆ ದಿನ ನಾನು ಕಾದ ಪರಿಯನ್ನು, ಮನೆ ಸೇರಿಕೊಳ್ಳುವೆವೆಂದು ನನ್ನ ಮನೆಯಿಂದ ಹೊರಟು ಹೋದ ಕೆಲಸಗಾರರು ಜಹಾಂಗೀರ್ ಶೇಖ್ ಮತ್ತವನ ಪರಿವಾರ ಏನಾದರೋ ಎಂದರಿಯದ ಆತಂಕವನ್ನು, ಸಿಡಿಲು ಮಿಂಚುಗಳ ಆರ್ಭಟವನ್ನು, ಮತ್ತೆ ಮೂರು ದಿನಗಳ ಬಳಿಕ ಓದಿದ, ಕೇಳಿದ ಕಥೆಗಳನ್ನು ಎಂದಾದರೂ ಮರೆಯುವುದು ಸಾಧ್ಯವೇ?

೨೦೦೨ರಲ್ಲಿ ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ನಡೆದ ಮಹಿಳಾ ಭಾರತಿಯಲ್ಲಿ ಆಮಂತ್ರಿತಳಾಗಿ ನಾನು ಪ್ರಸ್ತುತ ಪಡಿಸಿದ ಭಾಷಣ, `ಮುಂಬೈ ನನ್ನ ಮನೆ’ ಮತ್ತೆ ಸುಧಾದಲ್ಲಿ ಪ್ರಕಟವಾಗಿತ್ತು. ನಾನು ತುಂಬ ಮೆಚ್ಚಿದ ಹಿಂದೀ ಲೇಖಕಿ, ಶಿವಾನೀ ಅವರ ಮತೀಯ ಸಾಮರಸ್ಯದ ಕಥೆ, `ಮೇರಾ ಭಾಯಿ’ಯ ನನ್ನನುವಾದ `ನನ್ನಣ್ಣ’ ಕೂಡಾ ಸುಧಾದಲ್ಲಿ ಬೆಳಕು ಕಂಡಿತು. ಶಿವಾನಿ ಅವರ ಇನ್ನೊಂದು ಕಥೆ `ಆಘಾತ’ದ ಅನುವಾದ ಮಯೂರದಲ್ಲಿ ಪ್ರಕಟವಾಯ್ತು. ಆಂಟನಿ ಚೆಕಾವ್ ಕತೆ `ಭೀತಿ’ಯ ಅನುವಾದ ತರಂಗದಲ್ಲಿ ಬೆಳಕು ಕಂಡಿತು. ಹೀಗೆ ನಾನು ಸಾಹಿತ್ಯಿಕವಾಗಿ ತೊಡಗಿಕೊಂಡಿದ್ದ ಈ ಕಾಲದಲ್ಲಿ ನನ್ನ ಅಸೌಖ್ಯ ಮಾಯವಾಗಿ ನಾನು ಸಂಪೂರ್ಣ ಸ್ವಸ್ಥಳಾಗಿದ್ದರೂ, ಬೆನ್ನು ನೋವು ಮಾತ್ರ ಜೊತೆಗಿತ್ತು. ಮೆಡಿಸಿನ್ ಇಂಟರ್‍ಯಾಕ್ಷನ್‌ನ ಅನುಭವವಾದ ಮೇಲೆ, ಯಾವುದೇ ಔಷಧಿ ಸೇವನೆ ನನಗೆ ನಿಷಿದ್ಧವಾಗಿತ್ತು. ಕ್ರೋಸಿನ್ ಕೊಡುವ ಧೈರ್ಯವೂ ನನ್ನ ಫ್ಯಾಮಿಲಿ ಡಾಕ್ಟರ್ ಹೆಗ್ಡೆ ಅವರಿಗಿರಲಿಲ್ಲ. ಬೆನ್ನು ನೋವು ಬಿಟ್ಟರೆ ನಾನು ಆರೋಗ್ಯವಾಗೇ ಇದ್ದೆ.

೨೦೦೫ರಲ್ಲಿ ಪುತ್ತೂರು ಕನ್ನಡ ಸಂಘ, ಪಂಡಿತ ಪಿ.ಕೆ.ನಾರಾಯಣ ಸಂಸ್ಮರಣಾ ಭಾಷಣಕ್ಕೆ ನನ್ನನ್ನು ಆಮಂತ್ರಿಸಿತ್ತು. ಪಂಡಿತರನ್ನೂ, ಅವರ ಸಾಹಿತ್ಯಿಕ ಕೈಂಕರ್ಯವನ್ನೂ, ನನ್ನ ಶಾಲೆಯನ್ನೂ ಸ್ಮರಿಸಿ ಮಾತನಾಡುವ ಈ ಸಂದರ್ಭ ನನಗೆ ಖುಶಿ ನೀಡಿತು. ಊರಲ್ಲಿದ್ದ ಕೆಲ ದಿನಗಳಲ್ಲೇ ಒಂದಿನ, ಮುಂಬೈಯಿಂದ ರಾಜನ ಕರೆ ಬಂತು. “ಅಣ್ಣನಿಗೆ ಡೀಪ್ ಜ್ಯಾಂಡಿಸ್ ಆಗಿದೆ; ಕಣ್ಣು ಹಳದಿ ಮೆತ್ತಿಕೊಂಡಂತಿದೆ. ಬಟ್ಟೆ, ಹಾಸು, ಹೊದಿಕೆ ಎಲ್ಲ ಹಳದಿಯಾಗಿದೆ; ತಕ್ಷಣ ಹೊರಟು ಬನ್ನಿ.” ಫ್ಲೈಟ್ ಹಿಡಿದು ಬಂದು ನೋಡಿದರೆ ಇವರ ಕಣ್ಣನ್ನು ನೋಡಲಾಗುತ್ತಿರಲಿಲ್ಲ. ನಮ್ಮ ಕುಟುಂಬ ವೈದ್ಯ ಡಾ| ಹೆಗ್ಡೆ ಬಳಿಗೆ ಹೋದರೆ, “ಡೀಪ್ ಜ್ಯಾಂಡಿಸ್, ಕೋಮಾಕ್ಕೆ ಹೋಗಬಹುದು; ತಕ್ಷಣ ಬಾಂಬೆ ಹಾಸ್ಪಿಟಲ್‌ಗೆ ಹೋಗಿ,” ಎಂದರು. ಹಿಂದಿನಂತೆ ನನ್ನ ನೀಸ್ ಡಾ| ದೀಪಾ ನನ್ನ ಸಹಾಯಕ್ಕಿದ್ದಳು. ಪೆಥಾಲಜಿಸ್ಟ್ ಡಾ| ಬಂಕಾ, ಸಿ.ಟಿ. ಸ್ಕಾನಿಂಗ್, ಎಂಡೋಸ್ಕೋಪಿ, ಎಲ್ಲ ಮಾಡಿ, ನಾಲ್ಕು ದಿನಗಳ ಬಳಿಕ, “ಪಾಂಕ್ರಿಯಾಟಿಕ್ ಕ್ಯಾನ್ಸರ್, ಆಪರೇಶನ್ ಮಾಡಬೇಕು. ಹೆದರುವ ಅಗತ್ಯವಿಲ್ಲ; ಸರ್ಜರಿ ಆಗಿ ಹತ್ತು, ಹದಿನೈದು ವರ್ಷ ಬದುಕಿದವರೂ ಇದ್ದಾರೆ, ಆಪರೇಶನ್‌ಗೆ ಒಪ್ಪಿಗೆಯೇ” ಎಂದಾಗ ಇವರು ಒಪ್ಪಿ ತಲೆಯಾಡಿಸಿದರು. “ಗುಡ್!” ಎಂದ ಡಾಕ್ಟರ್, ಕುಸಿದು ಅಳತೊಡಗಿದ ನನ್ನ ಬೆನ್ನು ತಟ್ಟಿ, “ದಾಟ್ಸ್ ವೆರಿ ಬ್ಯಾಡ್, ಮಿಸ್‌ಸ್ ಮಾಧವ್!” ಎಂದು ಹೊರಟು ಹೋದರು. ನನ್ನ ಜಗತ್ತೇ ಅಯೋಮಯವಾಗಿತ್ತು. ನಾನು ಸಂದರ್ಶಿಸಿದ ಕ್ಯಾನ್ಸರ್ ಪೀಡಿತ ಬಂಧುಗಳ ಮುಖಗಳು, ಶಾಂತಿ ಅವೇದನಾ ಆಶ್ರಮದ ಬಗ್ಗೆ ನಾನು ಬರೆದು ಪ್ರಕಟಿಸಿದ ವಿಸ್ತೃತ ಲೇಖನ, ಎಲ್ಲವೂ ಮನದಲ್ಲಿ ಸುಳಿದುವು. ಇನ್ನು ಸಾಲುಗಟ್ಟಿ ನೋಡಬರುವವರನ್ನು ಎದುರಿಸುವುದೆಂತು? ಹಾಗೆಂದು ಯಾರೂ ಬರದಿದ್ದರೆ ಆ ಶೂನ್ಯವನ್ನು ತಡಕೊಳ್ಳುವುದೆಂತು, ಎಂದೆಲ್ಲಾ ಚಿಂತೆ ಕಾಡಿತು. ಇವರ ಸ್ಥಿತಿ ಡೆಲಿರಿಯಸ್ ಆಗಿತ್ತು. ಸಾಮಾನ್ಯವಾಗಿ ಕುಡಿತ, ಸಿಗರೇಟು ಸೇವನೆಯಂತಹ ದುರಭ್ಯಾಸ ಇರುವವರಿಗೆ ಬರುವ ಈ ಕಾಯಿಲೆ ಅದಾವುದೂ ಇಲ್ಲದ ಇವರಿಗೆ ಹೇಗೆ ಬಂತೆಂಬುದು ಡಾಕ್ಟರಿಗೂ ಸಮಸ್ಯೆಯಾಗಿತ್ತು.

ಸರ್ಜರಿಗೆ ಮುನ್ನ ಪಕ್ಕದ ಚಿಕಿತ್ಸಾ ಕೇಂದ್ರವೊಂದರಲ್ಲಿ ಸ್ಟೆಂಟ್ ಹಾಕಿಸುವಾಗ, ಪರಮಾಶ್ಚರ್ಯ ಕಾದಿತ್ತು. ಗಾಲ್ ಬ್ಲಾಡರ್‌ನಲ್ಲಿ ಕಲ್ಲುಗಳು ಪತ್ತೆಯಾಗಿ, ಅವು ಪಾಂಕ್ರಿಯಾಸ್ ಮೇಲೆ ಒತ್ತಡ ಹೇರಿದ್ದರಿಂದ ಪಾಂಕ್ರಿಯಾಸ್ ಕೆಲಸ ಮಾಡದೆ ಡೀಪ್ ಜ್ಯಾಂಡಿಸ್ ಆಗಿತ್ತೆಂದು ತಿಳಿಯಿತು. ಆ ಡಾಕ್ಟರ್, ಅಲ್ಲೇ ಎರಡು ಕಲ್ಲುಗಳನ್ನು ಕತ್ತರಿಸಿ ತೆಗೆದು, ಉಳಿದೆರಡನ್ನು ಕ್ರಶ್ ಮಾಡಿ, ಯೂರಿನರಿ ಟ್ರಾಕ್‌ನೊಳಕ್ಕೆ ಬಿಟ್ಟರು. ಕಲ್ಲುಗಳೊಡನೆ ಮರಳಿ ಹಾಸ್ಪಿಟಲ್ ಕೋಣೆ ಸೇರಿದ ನಮ್ಮನ್ನು ಕಾಣ ಬಂದ ಡಾ| ಬಂಕಾ, ನಮ್ಮನ್ನು ಮಿಸ್‌ಗೈಡ್ ಮಾಡಿದ್ದಕ್ಕೆ ಕ್ಷಮೆ ಯಾಚಿಸಿದರು. ಮತ್ತೆ ಹದಿನೈದು ದಿನಗಳ ಬಳಿಕ ನಾವು ಮನೆಗೆ ಮರಳಿದೆವು. ಡಾಕ್ಟರ ಆದೇಶದಂತೆ ಬ್ಲಡ್ ಟೆಸ್ಟ್ ಮಾಡುತ್ತಿದ್ದು, ಎರಡು ತಿಂಗಳಲ್ಲಿ ಜ್ಯಾಂಡಿಸ್ ಸಂಪೂರ್ಣ ಗುಣವಾದ ಬಳಿಕ, ಪುನಃ ಆಸ್ಪತ್ರೆಗೆ ಮರಳಿ, ಸರ್ಜರಿ ಮೂಲಕ ಗಾಲ್ ಬ್ಲಾಡರನ್ನು ಕತ್ತರಿಸಿ ತೆಗೆಯಲಾಯ್ತು. ತುಂಬ ಕೆಟ್ಟುಹೋಗಿದ್ದ ಕಾರಣ, ಲೆಪ್ರೋಸ್ಕೋಪಿಯಲ್ಲಿ ತೆಗೆಯಲಾಗದೆ, ಓಪನ್ ಸರ್ಜರಿಯೇ ಮಾಡಬೇಕಾಯ್ತು. ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ಹಿಡಿಯಿತು. ಆಸ್ಪತ್ರೆ, ತಪ್ಪು ಡಯಾಗ್ನೋಸಿಸ್‌ಗಳಿಂದ ಬೇಸತ್ತ ಇವರು, ರಾಮ್‌ದೇವ್‌ನನ್ನು ಅಪ್ಪಿಕೊಂಡರು. ಅವರ ಸ್ವಭಾವದಲ್ಲೂ ತುಂಬ ಬದಲಾವಣೆಯಾಯ್ತು. ಇಷ್ಟೆಲ್ಲ ಕಿತಾಪತಿ ನಡೆಸಿದ ಗಾಲ್ ಬ್ಲಾಡರ್‌ನ ಕಲ್ಲುಗಳು, ಮಿಠಿಭಾಯಿ ಕಾಲೇಜ್‌ನಲ್ಲಿ ಜುವಾಲಜಿ ಶಿಕ್ಷಕಿಯಾಗಿದ್ದ ಗೆಳತಿ ಹಾಗೂ ತಮ್ಮ ಸತೀಶನ ಪತ್ನಿ ದಯಾಳಿಂದ, ಕಾಲೇಜ್ ಲ್ಯಾಬ್‌ಗೆ ಸೇರಿಸಲ್ಪಟ್ಟವು.

ಬಾಂಬೆ ಹಾಸ್ಪಿಟಲ್ ಪರಿಸರ ನನಗೆ ತುಂಬಾ ಪ್ರಿಯವಾಗಿತ್ತು . ಹಾಸ್ಪಿಟಲ್ ಕೋಣೆಯ ಕಿಟಿಕಿಯಿಂದ , ಕಾರಿಡಾರಿಂದ ಕಾಣುವ ಅಜಾದ್ ಮೈದಾನ , ಓವಲ್ , ವಾಂಖೇಡಿಯಾ ಸ್ಟೇಡಿಯಂಗಳು, ದೂರದಲ್ಲಿ ವಿ.ಟಿ. ಹಾಗೂ ಮುನಿಸಿಪಲ್ ಕಛೇರಿ ಶಿಖರಗಳು , ಮೆರೀನ್ ಡ್ರೈವ್ , ಎಲ್ಲವು ನನ್ನ ಅನಾರೋಗ್ಯದ ದಿನಗಳಿಂದಲೂ ನನಗೆ ಆಪ್ತವೆನಿಸಿದ್ದುವು. ಆಸ್ಪತ್ರೆಯೊಳಗಿನ ಲೋಕವಂತೂ ಜೀವನ ದರ್ಶನವನ್ನೇ ತೋರಿದ್ದುವು . ಮನೆಗೆ ಮರಳಿ ಆಸ್ಪತ್ರೆಯ ಈ ಅನುಭವ, `ಆತಂಕ – ಒಂದು ಅನುಭವ’ ಎಂಬ ಶೀರ್ಷಿಕೆಯಲ್ಲಿ ಲೇಖನವಾಗಿ ಸುಧಾದಲ್ಲಿ ಪ್ರಕಟವಾಯ್ತು. ನನ್ನ ಆತಂಕ ಮಾತ್ರವಲ್ಲ, ಆ ದಿನಗಳಲ್ಲಿ ಆಸ್ಪತ್ರೆಯಲ್ಲಿ ನನ್ನ ಸುತ್ತಲೂ ನಾನು ಕಂಡ ಆತಂಕದ ಹಲವು ಮುಖಗಳನ್ನು ನಾನೀ ಲೇಖನದಲ್ಲಿ ಚಿತ್ರಿಸಿದ್ದು, ಅತ್ಯಂತ ಸಹಜ, ಸುಂದರ ಲೇಖನವೆಂದು ಪ್ರತಿಕ್ರಿಯೆಗಳು ಬಂದುವು.

ಸರ್ಜರಿಗೆ ಮುನ್ನ ಎರಡು ತಿಂಗಳ ಶುಶ್ರೂಷೆ, ನನ್ನ ಪಾಲಿಗೆ ಕ್ಷಣ ಬಿಡುವೂ ಇರದ ದಿನಗಳಾಗಿದ್ದುವು. ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ ಹನ್ನೆರಡರವರೆಗೆ ಎರಡು ಗಂಟೆಗೊಮ್ಮೆ ಸೂಪ್, ಹಣ್ಣಿನ ರಸ, ಮಜ್ಜಿಗೆ, ಕಿಚಡಿ ಹೀಗೆ ಅನವರತ ಪೂರೈಕೆಯಲ್ಲಿ ನನ್ನ ಸಮಯ ಸರಿದು ಹೋಗುತ್ತಿತ್ತು. ರೋಗಿ ಡೆಲಿರಿಯಸ್ ಆಗಿ, ಸ್ವಭಾವದಲ್ಲಿ ನುಸುಳಿದ ವಿಕ್ಷಿಪ್ತತೆ ಇನ್ನೂ ಕಷ್ಟಕರವಾಗಿತ್ತು.

ತಮ್ಮ ಕಾರ್ಯಕ್ಷೇತ್ರವಾದ ತಾರ್‌ದೇವ್‌ನ ಅತುಲ್ ಸ್ಪಿನ್ನರ್‍ಸ್‌ನಲ್ಲಿ ವರ್ಷದ ಮುನ್ನೂರೈವತ್ತು ದಿನಗಳೂ ದಿನದ ಹದಿನಾರು ತಾಸುಗಳೂ ವ್ಯಸ್ತರಾಗಿರುತ್ತಿದ್ದವರು, ನಮ್ಮವರು. ಅವರ ಅಣ್ಣ ತೀರಿಕೊಳ್ಳುವವರೆಗೆ ಬಂಧುವರ್ಗದಲ್ಲಿ ಹೆಚ್ಚಿನವರು ಅವರನ್ನು ಕಂಡದ್ದಿರಲಿಲ್ಲ. ತಾರ್‌ದೇವ್ ಮಿಲ್ ಕಟ್ಟಡದ ಮೇಲ್ಗಡೆ ಕೆಮಿಕಲ್ ಫ್ಯಾಕ್ಟರಿಯೊಂದಿದ್ದು, ಆಗಾಗ ಅಗ್ನಿ ಆಕಸ್ಮಿಕಗಳಾಗಿ ಕೋರ್ಟಿಗೂ ಅಲೆಯಬೇಕಾಗಿ ಬರುತ್ತಿತ್ತು. ೧೯೯೧ರ ಗಲ್ಫ್ ವಾರ್ ಬಳಿಕ ಎಕ್ಸ್‌ಪೋರ್ಟ್ ಕೂಡಾ ನಿಂತು ಹೋಗಿ ವ್ಯವಹಾರ ಬಾಧಿತವಾಯ್ತು. ಖೈತನ್ ಸಾಹೇಬರು ಕೈಲಾಗದಂತಾದಾಗ, ಮಿಸ್‌ಸ್ ಖೈತನ್, ತನ್ನ ಸೋದರ ಗೌತಮ್ ಹಾಗೂ ವಿಜಯಪತ್ ಸಿಂಘಾನಿಯಾ ಜತೆ ಸೇರಿ ಮಿಲ್ ಮುಚ್ಚಿಸಿ, ಅಲ್ಲಿ ಇಂಡಿಯನ್ ಪೋಸ್ಟ್ ಪತ್ರಿಕೆ ಆರಂಭಿಸುವ ಯೋಜನೆ ಕೈಗೊಂಡರು. ಮ್ಯಾನೇಜರ್ ಆಗಿ ನಮ್ಮವರೇ ಮುಂದುವರಿದರೂ ಬಾಸ್ ಖೈತನ್‌ರ ಹೊರತಾಗಿ ಇತರರ ಅಡಿಯಾಳಾಗಿರುವುದು ಸರಿ ಹೊಂದದೆ ಸಮಸ್ಯೆಗಳುದ್ಭವಿಸಿದುವು. ಕೊನೆಗೊಂದು ದಿನ ಇಂಡಿಯನ್ ಪೋಸ್ಟ್ ಕೂಡಾ ನಿಂತು ಹೋಯ್ತು.

ಖೈತನ್ ದಂಪತಿಗಳಿಗೆ ಅಸೌಖ್ಯವಾದಾಗಲೆಲ್ಲ ನಮ್ಮವರಿಗೆ ಕರೆ ಬಂದು ಇವರು ಹೋಗಿ ಬರುತ್ತಿದ್ದರು. ನಮ್ಮವರು ಅತುಲ್ ಸ್ಪಿನ್ನರ್‍ಸ್‌ನಲ್ಲಿ ಇಪ್ಪತ್ತೈದು ವರ್ಷಗಳ ಸೇವೆ ಪೂರೈಸಿದಾಗ, ಬಾಸ್ ಖೈತನ್, ಬೆಳ್ಳಿಯ ರಾಧಾಕೃಷ್ಣ ಮೂರ್ತಿಯನ್ನು ಕೆತ್ತಿರುವ ಬಲು ಸುಂದರ, ದೊಡ್ಡಗಾತ್ರದ ಜಗ್ ಹಾಗೂ ಅದೇ ರಾಧಾಕೃಷ್ಣ ಮೂರ್ತಿ ಕೆತ್ತಿರುವ, ದೊಡ್ಡ ಗಾತ್ರದ ಆರು ಬೆಳ್ಳಿ ಲೋಟಾಗಳನ್ನು ನಮ್ಮವರಿಗೆ ಕಾಣಿಕೆಯಾಗಿ ಕೊಟ್ಟಿದ್ದರು. ವೃತ್ತಿಯಲ್ಲಿದ್ದು ಸಂಪಾದನೆಯಿದ್ದಾಗ ಇವರ ಸಹಾಯ ಹಸ್ತ ಹಲವರನ್ನು ತಲುಪಿತ್ತು. ಮಿಲ್, ಪತ್ರಿಕೆ ಎರಡೂ ನಿಂತು ಹೋದಾಗ, ನಿವೃತ್ತಿ ವೇತನವಾಗಲೀ, ಇತರ ಯಾವುದೇ ಇಡುಗಂಟಾಗಲೀ ಸಿಗದೆ ಹೋದ ಬಗ್ಗೆ ಅವರೆಂದೂ ಹೇಳಿ ಕೊಳ್ಳದಿದ್ದರೂ ಆ ಕೊರಗಂತೂ ಇರಬಹುದು. ಅತುಲ್ ಸ್ಪಿನ್ನರ್‍ಸ್‌ನ ಕಸ್ಟಮರ್ ಆಗಿದ್ದ ಗುಜರಾಥಿ ಗೆಳೆಯ ಮಧು ಭಾಯಿ ಅವರೊಡನೆ ಕೊಲ್ಲಾಪುರದಲ್ಲಿ ಕೆಲ ಕಾಲ ವ್ಯವಹಾರ ನಡೆಸಿದರೂ. ಅದೂ ಊರ್ಜಿತಕ್ಕೆ ಬರದೆ ನಿಂತು ಹೋಯ್ತು. ಆಗ ಮುಂಬಯಿಯಲ್ಲಿ ಅವರ ಕಾರ್ಯಕ್ಷೇತ್ರವಾಗಿದ್ದುದು, ಕಾಟನ್ ಗ್ರೀನ್. ಮುಂದೆ ಅಲ್ಲಿ ಅದೂ ನಿಂತು ಹೋಗಿ, ಷೇರ್ ಮಾರ್ಕೆಟ್ ವ್ಯವಹಾರ ನಡೆಯ ತೊಡಗಿತು.

ಅಲೋಪತಿಕ್ ಔಷಧಿ ಹಾಗೂ ಡಾಕ್ಟರ್‍ಸ್‌ಗಳಿಂದ ದೂರವಾಗಿ ಟಿ.ವಿ.ಯಲ್ಲಿ ಬಾಬಾ ರಾಮದೇವ್‌ನ ಯೋಗಪ್ರಯೋಗಗಳನ್ನು ನೋಡಿ ತಾನೂ ಅನುಸರಿಸುವವರು, ನಮ್ಮವರು. ಅದೇನೂ ಇಷ್ಟವಲ್ಲದ ನನಗೆ, ಸರಿಯಾದ ಯೋಗಜ್ಞಾನವಿಲ್ಲದೆ ಮಾಡುವ ಪ್ರಯೋಗಗಳ ಬಗ್ಗೆ ಆತಂಕವಿದ್ದೇ ಇದೆ. ತಪ್ಪಾದ ಪ್ರಯೋಗಗಳು ಕೆಡುಕನ್ನೇ ಉಂಟು ಮಾಡುವುವೆಂಬ ಭಯವೂ ಇದೆ. ಆದರೆ, ಯೋಗಿಗಳು, ಸಾಧು, ಸಂತರು, ದೇವ ಮಾನವರನ್ನು ಅನುಕರಿಸುವವರು ದೂರ್ವಾಸನಂತೆ ಮೂಗಿನ ತುದಿಯಲ್ಲೇ ಸಿಟ್ಟಿಟ್ಟುಕೊಂಡಿರುವುದನ್ನೂ ಕಂಡಿದ್ದೇನೆ. ಮತ್ತೆ ಈ ಯೋಗ, ವ್ರತಗಳಿಂದ ಏನು ಪ್ರಯೋಜನ, ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ.

ಜೀವಮಾನವಿಡೀ ಕಾಯಕವೇ ಕೈಲಾಸವೆಂದು ದುಡಿದ ಕಾರ್ಯಕ್ಷೇತ್ರ ದೂರವಾದಾಗ, ವೃತ್ತಿ, ವ್ಯವಹಾರ ಸಂಬಂಧವಾದ ತೊಡಕು, ನಿರಾಸೆಯೊಂದಿಗೆ ತೀವ್ರ ಅನಾರೋಗ್ಯ ಕಾಡಿದಾಗ ಸ್ವಭಾವದಲ್ಲಿ ಬದಲಾವಣೆ ಸಹಜವಿರಬಹುದು. ಕಂಪಲ್ಸಿವ್ ಒಬ್ಸೆಸ್ಸಿವ್ ಸಿಂಡ್ರೋಮ್‌ನಂಥ ಸಮಸ್ಯೆಗಳನ್ನು ಪ್ರೀತಿಯ ಸಾಹಚರ್‍ಯ ದೂರ ಮಾಡಬಹುದೇ? ಆದರೆ…?

(ಮುಂದುವರಿಯಲಿದೆ)