ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ
ಅಧ್ಯಾಯ – ೩೧
ಸಂತೋಷ, ಸಡಗರಗಳ ಬೆನ್ನಿಗೇ ದುಃಖ, ದುರಿತಗಳೂ ಕಾದಿರುತ್ತವೆಂಬ ಅನುಭವ ಹೊಸದೇನಲ್ಲ. ೨೦೦೫ ತಂದ ಸಂತಸ, ಸುಮ್ಮಾನದ ಬೆನ್ನಿಗೇ ೨೦೦೬ರಲ್ಲಿ ಕಾದಿತ್ತು, ದುಃಖ, ದುಮ್ಮಾನ. ನಮ್ಮ ತಂದೆಯ ಅನಾರೋಗ್ಯದ ದಿನಗಳಲ್ಲಿ ಆಗಾಗ ಬಂದು, ತಮ್ಮ ಮೈದುನನನ್ನು ನೋಡಿಕೊಂಡು ಹೋಗುತ್ತಿದ್ದ ನಮ್ಮ ದೊಡ್ಡಮ್ಮ, ಮನೆಯ ಎಲ್ಲ ಸಮಾರಂಭಗಳಲ್ಲೂ ನಮಗೆ ನೆರವಾಗುತ್ತಿದ್ದವರು. ವರ್ಷಗಳ ಹಿಂದೆ ಗುಡ್ಡೆಮನೆಯಲ್ಲಿ ಅತ್ತೆ, ನಾದಿನಿ, ಓರಗಿತ್ತಿಯರು, ಮಕ್ಕಳೊಂದಿಗೆ ಹೊಂದಿಕೊಂಡು ಪ್ರೀತಿಯಿಂದ ಇದ್ದಂತೆಯೇ, ಗಂಡನನ್ನು ಕಳಕೊಂಡು ಮಕ್ಕಳೊಡನೆ ದೂರ ಹೋದ ಬಳಿಕವೂ ನಮ್ಮಿಂದ ದೂರವಾಗದವರು. ತಮ್ಮ ಹಿರಿಮಗ, ನಮ್ಮೆಲ್ಲರ ದೊಡ್ಡಣ್ಣ ಸುರೇಶಣ್ಣನಿಗೆ ಐವತ್ತು ತುಂಬಿದಾಗ, ನಾವು ಬಂಧುಗಳೆಲ್ಲ ಒಟ್ಟಾಗಿದ್ದ ಸಂದರ್ಭ, “ನಿಮ್ಮ ದೊಡ್ಡಣ್ಣನಿಗಿಂದು ಐವತ್ತನೇ ಹುಟ್ಟುಹಬ್ಬ, ಗೊತ್ತಿದೆಯೇ?” ಎಂದು ಪ್ರೀತಿ ತುಂಬಿ ನುಡಿದ ಅವರ ದನಿ ಇನ್ನೂ ಕೇಳಿಸುವಂತಿದೆ. ದೊಡ್ಡಪ್ಪ, ದೊಡ್ಡಮ್ಮಂದಿರನ್ನು ನಾವು ಮೂತಪ್ಪ, ಮೂತಮ್ಮ ಎಂದು ಕರೆಯುತ್ತಿದ್ದೆವು.
೨೦೦೬ ಸಪ್ಟೆಂಬರ್ ತಿಂಗಳಲ್ಲಿ ಮಿದುಳಿನ ರಕ್ತಸ್ರಾವಕ್ಕೀಡಾಗಿ ಆಸ್ಪತ್ರೆ ಸೇರಿದ ನಮ್ಮ ಮೂತಮ್ಮ ಮತ್ತೆ ಚೇತರಿಸಿ ಕೊಳ್ಳದೆ ಮೂರು ವಾರಗಳ ಬಳಿಕ ಸಪ್ಟೆಂಬರ್ ೨೮ರಂದು ಕೊನೆಯುಸಿರೆಳೆದರು. ಅಂಗಳದ ತೆಂಗಿನ ಬುಡದ ಹುಲ್ಲು ಕೀಳುತ್ತಾ, ಹಾಗೇ ಪಕ್ಕಕ್ಕೆ ವಾಲಿ ಒರಗಿ, ನಿಶ್ಚೇತನರಾದ ಅವರ ಜೀವನ ಯಾತ್ರೆ ಅಲ್ಲಿಗೇ ಮುಗಿದಿತ್ತು. ಆಸ್ಪತ್ರೆಯ ಎಮ್.ಐ.ಸಿ.ಯು. ಘಟಕದ ಯಾವುದೇ ಸಲಕರಣೆ ಮತ್ತೆ ಅವರನ್ನು ಚೇತರಿಸುವಲ್ಲಿ ಸಫಲವಾಗಲಿಲ್ಲ. ನಮ್ಮ ಚಿಕ್ಕಪ್ಪ, ಮತ್ತು ತಂದೆಯವರ ಉತ್ತರಕ್ರಿಯೆಯ ದಿನಗಳಲ್ಲಿ ನಮ್ಮ ಮನೆಯಲ್ಲಿ ಬಂಧುಗಳು ನೆರೆದಿದ್ದಾಗ ತಮ್ಮ ಮನೆಯಿಂದ ದೊಡ್ಡ ದೊಡ್ಡ ತಾಮ್ರದ, ಹಿತ್ತಾಳೆಯ ಪಾತ್ರೆ, ಪಡಗಗಳನ್ನು ಹೊತ್ತು ತಂದು, ನಮ್ಮ ಅಡಿಗೆ ಮನೆಯನ್ನು ಸುಧಾರಿಸುತ್ತಿದ್ದ, ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದ ನಮ್ಮ ಮೂತಮ್ಮ ಇಲ್ಲವಾಗಿದ್ದರು. ನಾವು ಚಿಕ್ಕವರಿದ್ದಾಗ, ಅವರ ತಾಯಿ, ತಂದೆ ನಮ್ಮ ಗುಡ್ಡೆಮನೆಗೆ ಬರುವುದಿತ್ತು. ವಯಸ್ಸಾದ ಆ ದಂಪತಿಯರ ಕಾಲಲ್ಲಿ ಅಂದುಗೆ, ಕೈಯಲ್ಲಿ ಕಡಗವಿದ್ದು, ಇಬ್ಬರೂ ಜೊತೆಜೊತೆಯಾಗಿ ಗದ್ದೆಹುಣಿಯಲ್ಲಿ ನಡೆದು ಬರುವುದನ್ನು ನೋಡುವುದೇ ಸುಖವೆನಿಸುತ್ತಿತ್ತು. ಹಿತವಾದ ಗಂಭೀರ ದನಿಯ ತೂಕದ ಮಾತುಗಳು, ಅವರವು. ಈ ಅಜ್ಜಿ, ನಾಟಿಮದ್ದು ನೀಡಿ ಗಾಯ, ಹುಣ್ಣುಗಳನ್ನು ಗುಣಪಡಿಸುವಲ್ಲಿ ನಿಷ್ಣಾತರು. ನಮ್ಮ ಚಿಕ್ಕಪ್ಪ ಫೂಟ್‌ಬಾಲ್ ಆಡುವಾಗ ತಾಗಿ, ಮೊಣಕಾಲ ಕೆಳಗೆ ಕೋಲುಕಾಲಿಡೀ ಸೀಳಿ ಗಾಯವಾದಾಗ, ಆ ಗಾಯಕ್ಕೆ ಸೊಪ್ಪಿನ ರಸ ಅರೆದು ಕಟ್ಟಿ ಚಿಕಿತ್ಸೆ ನೀಡಿ ಗುಣ ಪಡಿಸಿದ್ದರಂತೆ, ಈ ಅಜ್ಜಿ. ನಮ್ಮ ಮೂತಮ್ಮನ ನೆನಪಿನ ಭಂಡಾರವೂ ಅಮೂಲ್ಯವಾಗಿತ್ತು. ಅವರಿಂದಲೂ ಎಷ್ಟೋ ವಿಷಯಗಳನ್ನು ಕೇಳಿ ಅರಿಯಬಹುದಿತ್ತೆಂದು ನಮಗೆ ಅನಿಸುವಾಗ ಸಮಯ ಮೀರಿತ್ತು.
ಹದಿಮೂರನೇ ದಿನ ಅವರ ಉತ್ತರಕ್ರಿಯೆ ಮುಗಿಸಿಕೊಂಡು ನಾವೆಲ್ಲ ಮುಂಬೈಗೆ ಮರಳಿದ್ದೆವು. ಅಲ್ಲಿ ಅಮ್ಮನಿಲ್ಲದೆ ಖಾಲಿಯಾದ ಮನೆಯಲ್ಲಿ ಮಗ ಗಿರಿ, ಸೊಸೆ ಮನು ಹಾಗೂ ಕಿರಿಯ ಮಗ ಸದಾ ಮಾತ್ರ ಇದ್ದರು. ಇತರ ಮಕ್ಕಳೆಲ್ಲ ತಮ್ಮ ತಮ್ಮ ಮನೆಗೆ ಹಿಂದಿರುಗಿದ್ದರು. ಮತ್ತೆ ಒಂದು ವಾರದಲ್ಲೇ ಬೆಳ್ಳಂಬೆಳಗ್ಗೆ ಊರಿನಿಂದ ಬಂದ ಫೋನ್‌ಕರೆ, ದುರಂತವಾರ್ತೆಯನ್ನೇ ಹೊತ್ತು ತಂದಿತ್ತು. ನಸುಕಿಗೂ ಮುನ್ನ ಕಡಲಿಗೆ ಹೋಗಿ ಟ್ಯೂಬ್‌ನಲ್ಲಿ ನೀರಿಗಿಳಿದಿದ್ದ ತಮ್ಮ ಗಿರಿ, ಅಲ್ಲೇ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದ. ಕವಿದ ಕತ್ತಲೆಯಲ್ಲಿ ಅವನು ಸಂಕಟಕ್ಕೆ ಸಿಲುಕಿದ್ದನ್ನರಿತು, ಅಲ್ಲೇ ಬಳಿಯಿದ್ದವರು ಅವನನ್ನು ಉಳಿಸಲೆತ್ನಿಸಿದರೂ ಸಾಧ್ಯವಾಗದೆ, ಗಿರಿ ನಮ್ಮೆಲ್ಲರನ್ನು ಬಿಟ್ಟಗಲಿದ್ದ. ಆರಡಿಗಿಂತಲೂ ಎತ್ತರಕಾಯದ ಗಿರಿ, ಪಂಚಾಯತ್ ಸದಸ್ಯನಾಗಿದ್ದು ಕಾರ್ಯಶೀಲನಾಗಿ ಜನಪ್ರಿಯನೇ ಆಗಿದ್ದ. ಆರಂಭದಲ್ಲಿ ಮಸ್ಕತ್‌ನಲ್ಲಿ ನೌಕರಿಯಲ್ಲಿದ್ದ ತಮ್ಮ ಗಿರಿ ನನಗೆ ಬರೆಯುತ್ತಿದ್ದ ಪತ್ರಗಳೆಲ್ಲ ನನ್ನ ಪತ್ರ ಸಂಚಯದಲ್ಲಿವೆ. ಮೊದಲ ಬಾರಿಗೆ ರಜೆಯಲ್ಲಿ ಮಸ್ಕತ್‌ನಿಂದ ಬರುವಾಗ, ನಮ್ಮ ಕೂಡುಕುಟುಂಬದ ಹೆಣ್ಮಕ್ಕಳೆಲ್ಲರಿಗೆ ಕಾಣಿಕೆಯಾಗಿ ಸೀರೆಗಳನ್ನು ತಂದಿತ್ತಿದ್ದ ಪ್ರೀತಿಯ ಜೀವ ಗಿರಿ! ನನ್ನ ಮಗನ ಮದುವೆಯಲ್ಲಿ ಫೋಟೋಗ್ರಾಫರ್ ಆಗಿದ್ದ ಗಿರಿ! ನಮ್ಮ ತಂದೆಯವರ ಕೊನೆಯ ದಿನಗಳಲ್ಲಿ ಉಸಿರಿನ ಸಂಕಟಕ್ಕೆ ಅವರಿಗೆ ತುಂಬ ಸೆಖೆಯೆನಿಸುತ್ತಿದ್ದಾಗ ನಮ್ಮ ಸೀಲಿಂಗ್ ಫ್ಯಾನ್ ಸ್ವಲ್ಪವಾದರೂ ವೇಗವಾಗಿ ತಿರುಗುವಂತೆ ರಿಪೇರಿ ಮಾಡಿ ಕೊಟ್ಟ ಇಲೆಕ್ಟ್ರಿಕ್ ತಂತ್ರಜ್ಞ, ಗಿರಿ! ನಮ್ಮಲ್ಲಿ ಸಾವು ಸಂಭವಿಸಿದ ಮನೆಗಳಲ್ಲಿ ಉತ್ತರಕ್ರಿಯೆಯವರೆಗೆ ಪ್ರತಿದಿನ ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತದ ಬಳಿಕ ಮನೆಯ ಹಾಗೂ ಮನೆಗೆ ಆಗಮಿಸುವ ಬಂಧುವರ್ಗದ ಗಂಡಸರೆಲ್ಲ ಸದಾ ಉರಿವ ನೀಲಾಂಜನದಿಂದ ಉರಿಸಿ ಕೊಟ್ಟ ದೀಪದ ಬತ್ತಿಯನ್ನಿಟ್ಟು ನಮಿಸುವುದು ಸಂಪ್ರದಾಯ. ಆಗ ಹೆಂಗಸರೆಲ್ಲ ಮೌನ ಪ್ರಾರ್ಥನೆಯಲ್ಲಿ ಜತೆಗೂಡಿ ಸುತ್ತ ಕುಳಿತಿರುವವರು. ನಮ್ಮ ಚಿಕ್ಕಪ್ಪ ಮತ್ತು ತಂದೆ ತೀರಿಕೊಂಡ ದಿನಗಳಲ್ಲಿ ಪ್ರತಿ ಬೆಳಗೂ ಐದೂವರೆಗೆ ಮುನ್ನವೇ ಬಂದು, “ಎದ್ದಿಲ್ಲವೇ, ಇನ್ನೂ?” ಎಂದು ನಮ್ಮನ್ನು ಎಬ್ಬಿಸುತ್ತಿದ್ದ ಗಿರಿ! ಈಗ ಅವನೇ ಶಾಶ್ವತವಾಗಿ ಮಲಗಿಬಿಟ್ಟಿದ್ದ. ಇದ್ದಕ್ಕಿದ್ದಂತೆ ಗಿರಿ ನಮ್ಮೆಲ್ಲರನ್ನು ಬಿಟ್ಟು ಹೋದುದು ನನ್ನ ಮನಕ್ಕೆ ತೀವ್ರ ನೋವುಂಟು ಮಾಡಿತ್ತು.
ಮುಂಬೈಗೆ ಹಿಂದಿರುಗಿದಾಗ ನನ್ನ ಸಾಹಿತ್ಯ ಕ್ಷೇತ್ರ ನನಗಾಗಿ ಕಾದಿತ್ತು. ಕೆ.ಟಿ.ಗಟ್ಟಿ ಅವರು, ಆಂಗ್ಲ ಲೇಖಕಿ ಮೇರಿ ಶೆಲ್ಲಿಯ “ಫ್ರಾಂಕಿನ್‌ಸ್ಟೈನ್” ಕಾದಂಬರಿಯನ್ನು ಕೈಗಿತ್ತು, ನಾನದನ್ನು ಅನುವಾದಿಸಲೆಂದು ಆಶಿಸಿದರು. ನಾನು ಓದಿರದ ಆ ಕೃತಿಯನ್ನು ಮೇಲಿಂದ ಮೇಲೆ ಓದುವಾಗ, ಆ ದೈತ್ಯನ ಹುಟ್ಟಿನ ವಿವರಗಳು ಮತ್ತವನು ನಡೆಸುವ ಪಾತಕ ಮೊದಲಿಗೆ ಕಂಗೆಡಿಸಿದರೂ, ಕೃತಿಯ ಭಾಷಾ ಸಂಪತ್ತು, ಪ್ರಕೃತಿ ವರ್ಣನೆ, ಸಾಹಿತ್ಯಿಕ ಮೌಲ್ಯ, ಕೃತಿಕರ್ತೆ ಮೇರಿ ಶೆಲ್ಲಿಯ ಪರಿಚಯಾತ್ಮಕ ವಿವರಗಳು, ಕಥೆ ಫ್ರಾಂಕಿನ್‌ಸ್ಟೈನ್ ಹುಟ್ಟಿ ಕೊಂಡ ರೀತಿ ಎಲ್ಲವೂ ನನ್ನನ್ನು ಹಿಡಿದಿಟ್ಟು ಅನುವಾದಕ್ಕೆ ತೊಡಗುವಂತೆ ಪ್ರೇರೇಪಿಸಿದುವು. ಆದರೆ ಅಷ್ಟರಲ್ಲೇ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ವಿಲ್ ಡ್ಯುರಾಂಟ್‌ನ “ದ ಸ್ಟೋರಿ ಆಫ್ ಸಿವಿಲಿಸೇಶನ್” ಗ್ರಂಥವನ್ನು ಭಾಗಶಃ ಅನುವಾದಿಸಿ ಕೊಡುವಂತೆ ಕೋರಿ ಪತ್ರ ಬಂದುದರಿಂದ ಹಾಗೂ ಈ ಕಾರ್ಯಕ್ಕೆ ಸಮಯದ ಗಡುವೂ ಇದ್ದುದರಿಂದ ಫ್ರಾಂಕಿನ್‌ಸ್ಟೈನ್ ಬದಿಗಿಟ್ಟು ಈ ಉದ್ಗ್ರಂಥ ಅನುವಾದದಲ್ಲಿ ವ್ಯಸ್ತಳಾದೆ.
`ದ ಸ್ಟೋರಿ ಆಫ್ ಸಿವಿಲಿಸೇಶನ್’ ಗ್ರಂಥದಿಂದ ಅನುವಾದಿಸಲೆಂದು ನನಗೆ ಬಂದ ಭಾಗವು, “ಯೆಹೂದಿ ನಾಗರಿಕತೆ” ಆಗಿತ್ತು. ಅನುವಾದ ಸಂಪೂರ್ಣಗೊಂಡ ಬಳಿಕ, ಅಕಾಡಮಿಗೆ ಕಳುಹಿ ಕೊಟ್ಟು ನಿರಾಳಳಾದೆ. ಸರಕಾರೀ ಕೆಲಸಕ್ಕೆ ಗಡು ಎಂಬುದಿಲ್ಲ; ಬೆಳಕು ಕಾಣಲು ಎಷ್ಟು ದಿನಗಳೂ ತಗುಲಬಹುದು, ಎಂದು ಪ್ರಾಜ್ಞರು ಹೇಳಿದ್ದರು. ಹಾಗೇ ೧೬೪೮ ಪುಟಗಳ ಈ ಬೃಹತ್ ಸಂಪುಟ – `ನಾಗರಿಕತೆಯ ಕಥೆ – ಧರ್ಮಶ್ರದ್ಧೆಯ ಯುಗ’, ಕೆಲವು ವರ್ಷಗಳೇ ಸಂದು, ೨೦೧೨ರಲ್ಲಿ ಬೆಳಕು ಕಂಡಿತು. ಸಾಹಿತ್ಯ ಅಕಾಡೆಮಿಯಲ್ಲಿ ಮೊಳೆತ ಯೋಜನೆ ಅನುವಾದ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಎಂಬ ಹೊಸದೇ ಶಾಖೆಯಲ್ಲಿ ಅರಳಿತ್ತು! ಈ ಬೃಹತ್ ಸಂಕಲನ ಕನಿಷ್ಠ ಎರಡು ಭಿನ್ನ ಭಾಗಗಳಾಗಿ ಪ್ರಕಟವಾಗಿದ್ದರೆ, ಓದುವವರಿಗೆ ಅನುಕೂಲವಾಗುತ್ತಿತ್ತೇನೋ. ಪಾಣಿಪೀಠದ ಮೇಲಿರಿಸಿ ಓದುವುದೂ ಕಷ್ಟವಾಗುವಷ್ಟು ಬೃಹತ್ ಗಾತ್ರವದು.
ಅಕಾಡೆಮಿ ಕೆಲಸ ಮುಗಿಸಿ, ಪುನಃ ಫ್ರಾಂಕಿನ್‌ಸ್ಟೈನ್‌ಗೆ ಮರಳಿ, ಅನುವಾದ ಪೂರ್ಣಗೊಂಡಾಗ, ಹಸ್ತಪ್ರತಿಯನ್ನು ಅಂಕಿತ ಪ್ರಕಾಶನದ ಪ್ರಕಾಶ ಕಂಬತ್ತಳ್ಳಿಯವರಿಗೆ ಕಳುಹುವಂತೆ ತಿಳಿಸಿದರು, ಪ್ರಿಯ ಕೆ.ಟಿ.ಗಟ್ಟಿಯವರು. `ಗಾನ್ ವಿದ್ ದ ವಿಂಡ್’ನ ಯಶಸ್ಸು, ತಾನಾಗೇ ಫ್ರಾಂಕಿನ್‌ಸ್ಟೈನ್‌ಗೆ ದಾರಿ ತೆರೆದಿತ್ತು.
ಎರಡೂ ಕೃತಿಗಳಿಗೆ ಕೆ.ಟಿ.ಗಟ್ಟಿಯವರ ಬೆನ್ನುಡಿಯಿತ್ತು. ಉತ್ತರ ಧ್ರುವದ ಅನ್ವೇಷಕನಾಗಿ ಸಾಗಿದ ವಾಲ್ಟನ್, ತನ್ನ ಸೋದರಿಗೆ ಬರೆವ ಪತ್ರದೊಂದಿಗೆ ಆರಂಭವಾಗಿ, ಆ ಹಿಮಸಾಗರದಲ್ಲಿ ರಕ್ಷಿಸಲ್ಪಟ್ಟ ಫ್ರಾಂಕಿನ್‌ಸ್ಟೈನ್‌ನ ಕಥನವಾಗಿ, ಜೊತೆಗೆ ಆ ದೈತ್ಯ ಸೃಷ್ಟಿಯ ಅಂತರಂಗ ನಿವೇದನೆಯಾಗಿ ಸಾಗುವ ಈ ರಮ್ಯ ಕಥೆಯುದ್ದಕ್ಕೂ ಅದ್ಭುತ ವರ್ಣನಾ ವೈಖರಿ, ಭಾವ ಸಂಘರ್ಷ ಚಿತ್ರ, ಸುರಮ್ಯ ಪ್ರವಾಸ ಕಥನ, ಹೃದ್ರಾವಕ ಸನ್ನಿವೇಶಗಳು ತೆರೆದು ಕೊಳ್ಳುತ್ತವೆ. ದೈತ್ಯಸೃಷ್ಟಿಯ ಭೀಭತ್ಸತೆಯೊಂದಿಗೆ ಆ ದೇಹದಲ್ಲಿ ಮಿಡಿವ ಮಾನವೀಯ ಸಂವೇದನೆಗಳ, ಅರ್ತಿ, ಆಕಾಂಕ್ಷೆಯ, ಅವು ತಿರಸ್ಕೃತವಾದಾಗ ದಾನವಾಂಶವೇ ಮೇಲ್ಗೈ ಆಗಿ ಲೋಕಕಂಟಕನಾಗುವ ಈ ಕಥಾನಕದಂತೆಯೇ, ಅದನ್ನು ಹೆಣೆದ ಎಳೆಹರೆಯದ ಕಥೆಗಾತಿ ಮೇರಿ ಶೆಲ್ಲಿ, ನನ್ನನ್ನು ಬಹುವಾಗಿ ತಟ್ಟಿ ಕಾಡಿದ್ದಾರೆ. ಫ್ರಾಂಕಿನ್‌ಸ್ಟೈನ್ ಕೃತಿಯನ್ನು ನನ್ನ ಕೈಯಲ್ಲಿರಿಸಿ ಅನುವಾದಕ್ಕೆ ಹಚ್ಚಿದ ಆತ್ಮೀಯ ಕೆ.ಟಿ.ಗಟ್ಟಿ ಅವರಿಗೆ ನಾನು ಚಿರಋಣಿಯಾಗಿದ್ದೇನೆ.
ಬೆಂಗಳೂರಿನಲ್ಲಿ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಸಾಹಿತ್ಯ ಪರಿಷತ್ತಿನ ಕಟ್ಟಡದಲ್ಲಿ ಕೃತಿ ಬಿಡುಗಡೆ ನಡೆದಾಗ, ಮುಖ್ಯ ಅತಿಥಿಯಾಗಿ ಬಂದಿದ್ದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಪ್ರಧಾನ ಗುರುದತ್ತರು, ಅನುವಾದವನ್ನು ಮನದುಂಬಿ ಹೊಗಳಿದರು. ಹಿಂದಿನ ಸಂಜೆಯಷ್ಟೇ ತಮ್ಮ ಕೈ ಸೇರಿದ್ದ ಪ್ರತಿಯಿಂದ ತಮಗಿಷ್ಟವಾದ ಪುಟಗಳನ್ನು, ಭಾಗಗಳನ್ನು ಓದಿದಷ್ಟೂ ಅವರಿಗೆ ಸಾಕೆನಿಸುತ್ತಿರಲಿಲ್ಲ. ಸಮಯದ ಅಭಾವವಲ್ಲದಿದ್ದರೆ, ತಾನಿಲ್ಲಿ ಓದಿ ಕೇಳಿಸ ಬಯಸುವುದು ಇನ್ನಷ್ಟು ಇದೆಯೆಂದು ಅವರಂದಾಗ ನನ್ನ ಹೃದಯ ತುಂಬಿ ಬಂತು. ವರ್ಷದ ಪರಿಶ್ರಮವೆಲ್ಲ ಸಾರ್ಥಕವಾದಂತನಿಸಿತು.
ಕೃತಿ ಬಿಡುಗಡೆಯಾದ ಮರುದಿನ ಪ್ರಿಯರಾದ ಪೂಜ್ಯ ವ್ಯಾಸರಾಯ ಬಲ್ಲಾಳರ ಕೈಗಳಲ್ಲಿ ನನ್ನ ಫ್ರಾಂಕಿನ್‌ಸ್ಟೈನ್ ಸಮರ್ಪಿಸಲೆಂದು ಅವರ ಮನೆಗೆ ನಾನು ಹೋಗುವವಳಿದ್ದೆ. ಬರುವೆನೆಂದು ಹಿಂದಿನ ದಿನವೇ ರಾಜೀವಿಯಮ್ಮನಿಗೆ ಫೋನ್ ಕರೆ ಮಾಡಿ ತಿಳಿಸಿದ್ದೆ. ಕೃತಿ ಬಿಡುಗಡೆಯ ಸಂತಸದೊಂದಿಗೆ ರಾತ್ರಿ ಗೆಳತಿ ಸ್ವರ್ಣಲತಾಳ ಮನೆಗೆ ಹಿಂದಿರುಗಿ ಬಂದು ಮನೆ ಹೊಗುವಾಗ ಫೋನ್ ರಿಂಗುಣಿಸುತ್ತಿತ್ತು. ಎತ್ತಿಕೊಂಡರೆ ಅವರ ಡ್ರೈವರ್ ರಾಜು ಕರೆ ಮಾಡಿದ್ದ, “ಅಮ್ಮ, ನಾಳೆ ಬೆಳಿಗ್ಗೆ ಬಲ್ಲಾಳರಲ್ಲಿಗೆ ಹೋಗಬೇಕಂದಿರಲ್ಲಾ? ಟಿ.ವಿ.ನೋಡಿ, ನ್ಯೂಸ್ ಬರುತ್ತಿದೆ”, ಎಂದು ಫೋನ್ ಇಟ್ಟುಬಿಟ್ಟ. ನೋಡಿದರೆ, ಪ್ರಿಯ ಬಲ್ಲಾಳರ ಮರಣವಾರ್ತೆ ಬಿತ್ತರವಾಗುತ್ತಿತ್ತು. ಶೋಕ ಕವಿಯಿತು. ಮರು ಬೆಳಗು ಪ್ರಿಯ ಬಲ್ಲಾಳರ ಅಂತಿಮ ದರ್ಶನಕ್ಕಾಗಿ ಹೋದೆ. `ವಾತ್ಸಲ್ಯ ಪಥ’ದ ಪಥಿಕ, ಎಲ್ಲವನ್ನೂ ಬಿಟ್ಟು, ತಮ್ಮ `ಉತ್ತರಾಯಣ’ದಲ್ಲಿ ಚಿರನಿದ್ರೆಯಲ್ಲಿ ಪವಡಿಸಿದ್ದರು. ಹಿಂದಣ ಭೇಟಿಯಲ್ಲಿ ನಾನವರನ್ನು ಅಲ್ಲಿ ಕಾಣಹೋದಾಗ, ಬಲ್ಲಾಳರೂ, ಪತ್ನಿ ರಾಜೀವಿ ಅಮ್ಮನೂ ತುಂಬ ಸಂತಸದಿಂದಿದ್ದರು. ಉಡುಪಿಯಲ್ಲಿ ನಡೆವ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಪೀಠಕ್ಕೆ ಅವರನ್ನು ಆರಿಸಲಾಗಿದೆ ಎಂಬ ಸೂಚನೆ ದೊರಕಿ, ಸ್ವಲ್ಪ ಹೊತ್ತಿನಲ್ಲೇ ಸಂದರ್ಶನಕ್ಕಾಗಿ ಪತ್ರಕರ್ತರು ಬರುವವರಿದ್ದು, ಬಲ್ಲಾಳರು ಕುರ್ಚಿಯ ಮೇಲೇರಿ ತಮ್ಮ ಪ್ರಶಸ್ತಿ ಸ್ಮರಣಿಕೆ, ಸಮ್ಮಾನ ಪತ್ರಗಳು, ಪ್ರಕಟಿತ ಪುಸ್ತಕಗಳ್ನು ಓರಣವಾಗಿ ಇರಿಸುತ್ತಿದ್ದರು. ಅಧ್ಯಕ್ಷರ ಆಯ್ಕೆಯ ಅಂಕಪಟ್ಟಿಯೂ ಅವರ ಕೈಗೆ ಬಂದಿತ್ತು. ಆದರೆ ಮತ್ತೆ ಬಿತ್ತರಿಸಲ್ಪಟ್ಟ ವಾರ್ತೆಯಲ್ಲಿ ಅಧ್ಯಕ್ಷರೆಂದು ಘೋಷಿಸಲ್ಪಟ್ಟ ಹೆಸರು ಬೇರೆಯೇ ಆಗಿತ್ತು. ನಮಗೆಲ್ಲ ದಿಕ್ಕೆಟ್ಟಂತಾಗಿದ್ದರೆ, ಸೌಮ್ಯ ಸಜ್ಜನ, ವಾತ್ಸಲ್ಯರೂಪಿ ಬಲ್ಲಾಳರ ಮನಸ್ಸು ಬಹಳ ನೊಂದಿತ್ತು. ಆ ನೋವನ್ನು ಅವರು ಬಹಳ ಕಷ್ಟದಿಂದಲೇ ಭರಿಸಿದ್ದರು. ಇದೀಗ ಅವರ ಅಂತಿಮಯಾತ್ರೆಯಲ್ಲಿ ಪತ್ರಕರ್ತರು ಮಾತನಾಡಿಸಿದಾಗ, ಬಲ್ಲಾಳರ ಮುಂಬೈ ಸಾಹಿತ್ಯಲೋಕದ ಲೇಖಕಿಯೋರ್ವಳಾಗಿ ನಾನೀ ನೋವನ್ನು ಹಂಚಿಕೊಳ್ಳದಿರಲಿಲ್ಲ.
ಫ್ರಾಂಕಿನ್‌ಸ್ಟೈನ್ ಮುಂಬೈ ಬಿಡುಗಡೆಯೂ ೨೦೦೮ ಫೆಬ್ರವರಿ ತಿಂಗಳಲ್ಲೇ ಸೃಜನಾ ಬಳಗ ಹಾಗೂ ಮುಂಬೈ ಯೂನಿವರ್ಸಿಟಿ ಕನ್ನಡ ವಿಭಾಗದ ವತಿಯಿಂದ ಯೂನಿವರ್ಸಿಟಿ ಕನ್ನಡ ವಿಭಾಗದಲ್ಲಿ ಡಾ. ಹನೂರು ಕೃಷ್ಣಮೂರ್ತಿ ಅವರ ಉಪಸ್ಥಿತಿಯಲ್ಲಿ, ಡಾ. ತಾಳ್ತಜೆ ವಸಂತಕುಮಾರರ ಕೈಗಳಿಂದ ನಡೆಯಿತು. ಮೊದಮೊದಲ ಹೆರಿಗೆಯ ಸಂಭ್ರಮದಂತೆ ನನ್ನ `ಆಲಂಪನಾ’, `ಗಾನ್ ವಿದ್ ದ ವಿಂಡ್’ ಪುಸ್ತಕಗಳನ್ನು ನೂರಾರು ಸಾಹಿತಿಗಳು, ಪ್ರಿಯ ಜನರು, ಪರಿಚಿತರು, ಇತರ ಓದುಗರೆಂದು ಕೊರಿಯರ್‌ನಲ್ಲಿ ಕಳುಹಿ ಸಾಕಷ್ಟು ಖರ್ಚಿಗೆ ದಾರಿ ಮಾಡಿದ್ದ ನಾನು, ಸ್ವಲ್ಪ ತಿಳುವಳಿಕೆ ಬಂದಂತೆ ನನ್ನನ್ನೇ ನಾನು ನಿಯಂತ್ರಿಸಿ ಕೊಂಡೆ. ಪ್ರಕಾಶಕರು ಕಳಿಸಬಹುದೆಂದುಕೊಂಡು ಪತ್ರಿಕೆಗಳಿಗೂ ಕಳುಹದೇ ಉಳಿದೆ. ಫ್ರಾಂಕಿನ್‌ಸ್ಟೈನ್ ಕಾಲೇಜುಗಳಲ್ಲಿ ಪಠ್ಯವಾಗಬೇಕಿತ್ತೆಂಬ ಮಾತನ್ನೂ ಸಾಹಿತಿಶ್ರೇಷ್ಠರು ಆಡಿದ್ದಾರೆ. ಆದರೂ ಆಂಗ್ಲ ಸಾಹಿತ್ಯದ ಈ ಅಸಾಧಾರಣ ಕೃತಿಯ ಕನ್ನಡಾನುವಾದ ಸಾಕಷ್ಟು ಜನರನ್ನು ತಲುಪಿಲ್ಲದಿರುವುದು ನಿಜ. ಮತ್ತೆ ಹಿರಿಯ ಸಾಹಿತಿಶ್ರೇಷ್ಠ ಬಲ್ಲಾಳರಂಥವರಿಗೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಮೋಸವಾದಾಗ, ನನ್ನ ಫ್ರಾಂಕಿನ್‌ಸ್ಟೈನ್ ಅಕಾಡೆಮಿ ಪುಸ್ತಕ, ಬಹುಮಾನಕ್ಕೆ ಆಯ್ಕೆಯಾಗಿಯೂ ವಂಚಿತವಾದುದರಲ್ಲಿ ಆಶ್ಚರ್ಯವೂ ಇಲ್ಲ!
೨೦೦೭ ಫೆಬ್ರವರಿ ಹದಿನಾಲ್ಕರ ಬೆಳ್ಳಂಬೆಳಿಗ್ಗೆ ಊರಿನಿಂದ ಬಂದ ಕರೆ ನನ್ನನ್ನು ಕಂಗೆಡಿಸಿತು. ಪ್ರೀತಿಯ ಶಾರದತ್ತೆ ಮಿದುಳಿನ ರಕ್ತಸ್ರಾವದಿಂದ ಅಪ್ರಜ್ಞಾವಸ್ಥೆಯಲ್ಲಿ ಆಸ್ಪತ್ರೆ ಸೇರಿದ್ದರು. ತಕ್ಷಣ ಫ್ಲೈಟ್ ಹಿಡಿದು ನಾನು ಅವರ ಬಳಿಸಾರಿದೆ. ಕೋಮಾಕ್ಕೆ ಜಾರಿದ ನನ್ನಾ ಪ್ರಿಯ ಜೀವ ನಾಲ್ಕು ದಿನಗಳು ಫಾ.ಮುಲ್ಲರ್‍ಸ್‌ನ ಎಮ್.ಐ.ಸಿ.ಯೂ.ನಲ್ಲಿ, ಮತ್ತೆ ಹತ್ತು ದಿನಗಳು ಆಶಾಕಿರಣ ವಾರ್ಡ್‌ನ ಕೋಣೆಯಲ್ಲಿ ಹಾಗೂ ಉಳಿದ ಹದಿನೈದು ದಿನಗಳು ಜನರಲ್ ವಾರ್ಡ್‌ನ ಐ.ಸಿ.ಯೂ.ನಲ್ಲಿ ಅದೇ ಸ್ಥಿತಿಯಲ್ಲಿತ್ತು. ಹಗಲು, ರಾತ್ರಿ ಜೊತೆಗಿದ್ದು ನನ್ನಾ ಪ್ರೀತಿಯ ಅಮ್ಮಾಯಿಯ ಚೇತರಿಕೆಗಾಗಿ ಕಾದೆ. ಒಂದು ತಿಂಗಳ ಆ ಆಸ್ಪತ್ರೆವಾಸದ ಕಾಲದಲ್ಲಿ ನನ್ನ ಶಾರದತ್ತೆಯ ಬಗ್ಗೆ ಹೇಳಲಿದ್ದುದರ ಜೊತೆಗೇ ಅಲ್ಲಿ ಸುತ್ತಲೂ ಕಂಡ ನೋವಿನ ವಿವಿಧ ಮುಖಗಳನ್ನೂ `ವಾತ್ಸಲ್ಯಬಂಧ’ವೆಂಬ ಶೀರ್ಷಿಕೆಯ ಲೇಖನವೊಂದರಲ್ಲಿ ಚಿತ್ರಿಸಿದೆ. ಸುಧಾ ಪತ್ರಿಕೆಯಲ್ಲಿ ಈ ಲೇಖನ ಪ್ರಕಟವಾಯ್ತು. ಬಾಲ್ಯದ ನಮ್ಮ ದಿನಗಳಿಂದಲೂ “ಬೇಬೀ” ಎಂದು ಲಾಲಿಸುತ್ತಿದ್ದ, ನನ್ನೆಲ್ಲ ಅಸೌಖ್ಯ, ಬಾಣಂತನಗಳಲ್ಲೂ ಜೊತೆಗಿದ್ದ, ನಮ್ಮ ಗುಡ್ಡೆಮನೆಯ ಮಕ್ಕಳೆಲ್ಲರಿಗೆ ಪ್ರೀತಿಯ ಅಮ್ಮಾಯಿಯಾಗಿದ್ದ, ದಿನದ ಬಿಡುವಿರದ ದುಡಿಮೆಯ ಕೊನೆಗೆ ಪುಸ್ತಕ ಕೈಗೆತ್ತಿಕೊಂಡು ಓದಿನಲ್ಲಿ ಮಗ್ನರಾಗುತ್ತಿದ್ದ ಆ ಪ್ರಿಯಜೀವ ಈಗ ಕೋಮಾದಲ್ಲಿ ಒರಗಿತ್ತು. ಎಡಭಾಗ ಸಂಪೂರ್ಣ ನಿಷ್ಕ್ರಿಯವಾಗಿದ್ದರೂ, ಬಲಗೈ ಬಲಗಾಲನ್ನು ಅನಿಯಂತ್ರಿತವಾಗಿ ತಿಕ್ಕುತ್ತಿತ್ತು. ಸ್ಪಂದಿಸಲಾಗದಿದ್ದರೂ ನಮ್ಮ ಮಾತೆಲ್ಲ ಅವರಿಗೆ ಕೇಳಿಸುತ್ತಿತ್ತೆಂದೇ ನನಗನಿಸುತ್ತಿತ್ತು. ಹಲವಾರು ನಳಿಕೆಗಳೊಡನೆ, ದ್ರವಾಹಾರಕ್ಕಾಗಿ ಮೂಗಿನಲ್ಲಿ ಆಹಾರದ ನಳಿಕೆಯನ್ನೂ ಹೊತ್ತು ಮಲಗಿದ ನನ್ನಮ್ಮಾಯಿಗೆ ನಾನೇ ದ್ರವಾಹಾರ ನೀಡುತ್ತಾ, ಆ ತಲೆಗೂದಲನ್ನು ಬಾಚಿ ಜಡೆಹೆಣೆದು ಒಪ್ಪವಾಗಿಸುವಾಗ, ಅಮ್ಮಾಯಿ ನನ್ನನ್ನು ಲಾಲಿಸಿದ ದಿನಗಳ ನೆನಪಿನಿಂದ ಕಣ್ಣು ತುಂಬಿಕೊಳ್ಳುತ್ತಿತ್ತು. “ಈ ಪ್ರಾಯದಲ್ಲೂ ಎಷ್ಟು ಚೆನ್ನಾಗಿವೆ, ಇವರ ಹಲ್ಲುಗಳು! ” ಎಂದು ದಾದಿಯರು ಅಚ್ಚರಿ ಪಡುವಾಗ, “ಹೌದು, ಸದಾ ಹಿತ್ತಿಲ ಮಾವಿನೆಲೆಯಿಂದಲೇ ತಿಕ್ಕಿದ ಹಲ್ಲುಗಳವು”, ಎಂದು ನಾನು ಉತ್ತರಿಸುತ್ತಿದ್ದೆ. ನಿಧಾನವೇ ಆದರೂ ತಾದಾತ್ಮ್ಯತೆಯಿಂದ ಮನೆಯ ಕೆಲಸಗಳೆಲ್ಲವನ್ನೂ ಮಾಡುತ್ತಾ, ಬೆನ್ನು ಬಾಗುತ್ತಾ ಬಂದಿದ್ದ ನನ್ನಮ್ಮಾಯಿಯನ್ನು, ರಕ್ತದೊತ್ತಡವೆಂಬ ಸೈಲೆಂಟ್ ಕಿಲ್ಲರ್ ಈ ಪರಿಯಲ್ಲಿ ಘಾತಿಸಲು ಕಾದಿತ್ತೆಂದು ಯಾರು ತಾನೇ ಅರಿತಿದ್ದರು? ಎಂದೂ ಯಾರನ್ನೂ ನೋಯಿಸದ, ಎಲ್ಲರಿಗೂ ಪ್ರಿಯರಾದ ನಮ್ಮಮ್ಮಾಯಿ! ಮನೆಯೊಳಗಿನ ಕೆಲಸದ ಬಳಿಕ ಹಿತ್ತಿಲಲ್ಲಿ ಸೋಗೆ ಕಡಿದು ಒಪ್ಪವಾಗಿಸುತ್ತಾ, ಮಡಲು ಹೆಣೆಯುತ್ತಾ, ಸೋಗೆಗರಿಗಳಿಂದ ಕಡ್ಡಿ ಹೆರೆಯುತ್ತಾ ಸದಾ ಹಾಡು ಗುನುಗುತ್ತಿದ್ದ, ಮತ್ತೂ ಸಮಯ ಉಳಿದರೆ ಪುಸ್ತಕ ಓದುತ್ತಾ ಕುಳಿತಿರುತ್ತಿದ್ದ ನನ್ನಮ್ಮಾಯಿ! ಯಾವ ನೋವು ಅವರನ್ನು ಕಾಡಿರಬಹುದು? ಎಳವೆಯಲ್ಲಿ ಗಂಟಲ ಗರಳಕ್ಕೆ ದೀರ್ಘಕಾಲ ಚಿಕಿತ್ಸೆ ಪಡೆದ ನನ್ನಮ್ಮಾಯಿಗೆ ಅವರು ಲಾಲಿಸಿ ಪಾಲಿಸಿದ ನಾವು ಗುಡ್ಡೆಮನೆ ಮಕ್ಕಳೇ ಮಕ್ಕಳು. “ಮಾಯ ಪ್ರಪಂಚವಿದೂ …..” ಎಂದು ಸದಾ ಮೆಲುದನಿಯಲ್ಲಿ ಹಾಡಿಕೊಳ್ಳುತ್ತಿದ್ದ ಆ ಜೀವ ಈಗ ಮನದಲ್ಲೇ ಹಾಗೆ ಹಾಡುತ್ತಿರಬಹುದೇ? ನನ್ನೆಲ್ಲ ಅನುವು ಆಪತ್ತಿನಲ್ಲೂ ಕಾತರದಿಂದ ಕಣ್ಣಾದ, ನನ್ನ ಕಥೆ, ಲೇಖನ, ಪುಸ್ತಕಗಳನ್ನೋದಿ ಪ್ರೀತಿ, ವಾತ್ಸಲ್ಯದ ಮೆಚ್ಚುನೋಟ ಹರಿಸುತ್ತಿದ್ದ ನನ್ನೀ ಪ್ರಿಯಜೀವ ಚೇತರಿಸಿ ಕೊಳ್ಳಲೆಂಬ ನನ್ನ ಹಂಬಲ, ಹಾರೈಕೆ ಕೊನೆಗೂ ಈಡೇರದೆ, ಮಾರ್ಚ್ ಹದಿಮೂರರಂದು ಎಲ್ಲ ಸಂಕಷ್ಟಗಳಿಂದಲೂ ಮುಕ್ತಿ ಪಡೆಯಿತು.
ಪ್ರಿಯಜೀವಗಳ ಅಗಲಿಕೆಯ ನೋವು ಮಾಯುವುದೆಂದಿದೆಯೇ? ಸ್ಮರಿಸಿದಷ್ಟೂ ಹೃದಯ ಹಿಂಡುವ ಜೀವ-ಭಾವಗಳ ಅನುಬಂಧವದು!
(ಮುಂದುವರಿಯಲಿದೆ)