[ಗೇರುಹಣ್ಣನ್ನು ಹೆಕ್ಕುವಲ್ಲಿಂದ, ಅದರ ಬೀಜ ಹಲ್ವಾದಲ್ಲಿ ಞ್ಞಕ್ಕುವ ನಡುವೆ ಹಾಯುವ ಅರ್ಥಶಾಸ್ತ್ರ, ಜೀವಶಾಸ್ತ್ರ, ಔದ್ಯಮಿಕ ಸತ್ಯಗಳ ಕುರಿತು ಪ್ರತ್ಯಕ್ಷದರ್ಶಿಯ ಹಕ್ಕಿನೋಟ]
ಹರಿಪ್ರಸಾದ್ ಶೇವಿರೆ ತಾನು “ಪುತ್ತೂರು ಮೂಲದವನು,” ಎಂದಾಗಲೇ ಆಪ್ತವೆನ್ನಿಸಿ, “ನನ್ನಜ್ಜನ ಊರು” ಎಂದಿದ್ದೆ. `ಶೇವಿರೆ’ ಅಂದರೆ ಕೆಸುವಂತೆ. ಸಸ್ಯ ವರ್ಗೀಕರಣ ಏನೇ ಇರಲಿ, ತಾವರೆಯಂತೇ ಕೆಸುವೂ ನೀರು ಬಿದ್ದರೂ ಅಂಟಿಸಿಕೊಳ್ಳದ ಜಾತಿ. ಈ ಹರಿಪ್ರಸಾದ್ ಸ್ವಲ್ಪ ಹಾಗೇ; ಗೇರು ಉದ್ಯಮದಲ್ಲಿ ಮುಳುಗಿದ್ದೂ ಇರದಂತಿರುವವರು. ಪುತ್ತೂರು ಹುಟ್ಟೂರಾದರೂ ತಂದೆಯ ಮರಣದಿಂದ, ಮೂಡಬಿದ್ರೆಯ ದೂರಕ್ಕೆಳೆಯಿತು ಇವರ ಜೀವನಕಾಂಡ. ಅಕ್ಕ ಭಾವರ ಸಾಂಗತ್ಯದಲ್ಲಿ ಹರಿಪ್ರಸಾದರ ವ್ಯವಹಾರ ಕೌಶಲ್ಯದ ಎಲೆಯಗಲಿತು. ಮುಂದುವರಿದು ಸಣ್ಣಣ್ಣನ ಉದ್ದಿಮೆ ಭಾಗೀದಾರಿಕೆಯಲ್ಲಿ ದೃಢ ವೃತ್ತಿ-ಹೂವರಳಿತು, ಮಂಗಳೂರಿನ ಉಡಿಯಲ್ಲಿ ಗೃಹಸ್ಥನಾಗಿ ನೆಲೆಕಂಡು ಧನ್ಯವಾಯ್ತು ಈ ಶೇವಿರೆ.
ಔಪಚಾರಿಕ ಓದು ಕೊಡದ್ದನ್ನು ಲೋಕಮುಖದಲ್ಲಿ ಕಲಿತು, ಸೋದರನೊಡನೆ ಯಶಸ್ವೀ ಗೇರು-ಉದ್ಯಮಿಯೇ ಆಗಿರುವ ಹರಿ, ಆಕಸ್ಮಿಕಗಳಿಗೆ ಬೆನ್ನು ತೋರಿಸುವುದಿಲ್ಲ; ನಗುಮುಖ ಕೊಡುತ್ತಾರೆ. ಬಹುಶಃ ಈ ಸ್ವಭಾವವೇ ಹರಿ ಮತ್ತು ನನ್ನ – ಹೆಚ್ಚೆಂದರೆ ಒಂದೆರಡು ತಿಂಗಳ, ಪರಿಚಯವನ್ನು ಗಾಢವಾಗಿಸಿತು. ಇವರು ವ್ಯಾಯಾಮದ ಸುಳಿಯಲ್ಲಿ ಬೆಳಗ್ಗಿನ ನಡಿಗೆ ರೂಢಿಸಿಕೊಂಡಿದ್ದರಂತೆ. “ನಿತ್ಯ ಒಂದೇ ದಾರಿ ಸವೆಸಿದ್ದು ಹೆಚ್ಚಾಗಿ, ಬೋರಾಗಿ, ಕೆಲವು ಬಾರಿ ಕಣ್ಮುಚ್ಚಿಯೂ ನಡೆದದ್ದಿದೆ” – ಅವರದೇ ಮಾತು! ಒಂದು ಆಕಸ್ಮಿಕದಲ್ಲಿ ಯಾರೋ ಹೊಸ ತಲೆಮಾರಿನ ಸೈಕಲ್ಲಿಗರನ್ನು ನೋಡಿದ ಹರಿಗೆ, ವಿದ್ಯಾರ್ಥಿ ದಿನಗಳಲ್ಲಿ ತಾನು ಬಾಡಿಗೆ ಸೈಕಲ್ ತುಳಿದು ಸುಬ್ರಹ್ಮಣ್ಯ, ಧರ್ಮಸ್ಥಳ, ಬೇಕಲ, ಮೈಸೂರೂ ಸುತ್ತಿದ ನೆನಪಾಯ್ತಂತೆ. ಮಂಗಳೂರಿನಲ್ಲಿ ಸೈಕಲ್ಲಿನ ಹೊಸ ಅನುಭವಕ್ಕೆ ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದರಂತೆ. ಫಲಿತಾಂಶ – ಕಳೆದ ಮಳೆಗಾಲದಲ್ಲಿ (೧೯೧೬ ಜೂನ್) ಕದ್ರಿಯ ಜ್ಯೋತಿ ಸೈಕಲ್ಸಿನಲ್ಲಿ ಹೊಸ ಸೈಕಲ್ ಕೊಳ್ಳುವುದರೊಡನೆ, ಮೊದಲು ಅದರ ಉತ್ಸಾಹೀ ಯಜಮಾನ ಗಣೇಶ್ ನಾಯಕ್ ಮತ್ತೆ ಮಂಗಳೂರಿನ ಎರಡೂ ಸೈಕಲು ಸಂಘಗಳ ಒಡನಾಟ ಶುರುವಾಯ್ತಂತೆ. ಮಳೆ ಧಿಕ್ಕರಿಸಿಯೇ ಇವರು ಸೈಕಲ್ ಮೆಟ್ಟಿಯೇ ಮೆಟ್ಟಿದರು, ಅವಿರತ ಸೈಕಲ್ ಪಟುವಾಗಿ ಅರಳಿದರು. ಹರಿಪ್ರಸಾದ್ ಔಪಚಾರಿಕ ಓದನ್ನು ನಿರುಪಯುಕ್ತವೆಂದು ಎರಡನೇ ಬೀಕಾಮಿಗೇ ಬಿಟ್ಟುಕೊಟ್ಟರೂ ಸಾಹಿತ್ಯಕ ಓದು ಮತ್ತು ರುಚಿಯನ್ನು ಚೆನ್ನಾಗಿಯೇ ಉಳಿಸಿ, ಬೆಳೆಸಿದ್ದರು. ಸಹಜವಾಗಿ ನನ್ನ ಸೈಕಲ್ ಸರ್ಕೀಟ್ ಟಿಪ್ಪಣಿ ಮತ್ತು ಲೇಖನಗಳ ಬಲೆಗೆ ಬಿದ್ದು, ನನಗೆ ನಿಕಟವಾದರು. ಬೇಗನೆ ಸ್ಪರ್ಧೆ, ಪ್ರಮಾಣಪತ್ರ, ಪ್ರಚಾರ, ಪದಕ, ದಾಖಲೆಗಳ ಬೆನ್ನುಬಿಟ್ಟು, ಸೈಕಲ್ಲನ್ನು ವ್ಯಾಯಾಮದ ಜೊತೆಗೆ, ಪ್ರಾಕೃತಿಕ, ಸಾಮಾಜಿಕ ತಿಳಿವಿಗೊಂದು ಸಲಕರಣೆಯಾಗಿ ಬಳಸುವ ನನ್ನಾಸಕ್ತಿಗೂ ಒಲಿದರು. ಈ ಆಪ್ತತೆಯಲ್ಲಿ ಹರಿ ತನ್ನ ಕೆಲವು ಮಿತ್ರರನ್ನು, ತನ್ನ ವ್ಯಾವಹಾರಿಕ ಪ್ರಪಂಚಕ್ಕೊಮ್ಮೆ ಬರುವಂತೆ ಆಹ್ವಾನಿಸಿದರು. ಬೇರೊಂದೆರಡು ಮಂದಿ ಅನಿವಾರ್ಯ ಕಾರಣಗಳಿಗೆ ತಪ್ಪಿಸಿಕೊಂಡರೂ ನಾನು, ದೇವಕಿ ಆಮಂತ್ರಣಕ್ಕೆ ಕಚ್ಚಿಕೊಂಡೆವು. ಅಂದು (೧೭-೩-೨೦೧೭) ತನ್ನ ಕ್ಷೇತ್ರ ಕಾರ್ಯದ ಭಾಗವಾಗಿಯೇ ಪುತ್ತೂರಿನತ್ತ ಸೂರ್ಯೋದಯಕ್ಕೆ ಮುನ್ನ ಹೊರಟಿದ್ದ ಹರಿಪ್ರಸಾದರ ಕಾರೇರಿಕೊಂಡೆವು.
ಹರಿಪ್ರಸಾದರ ದೊಡ್ಡಕ್ಕನ ಗಂಡ ಶ್ರೀಪತಿಭಟ್ಟರು – ಮೂಡಬಿದ್ರೆಯ ಗಣ್ಯ ಗೇರುಬೀಜ (ಧನಲಕ್ಷ್ಮಿ) ಉದ್ಯಮಿ. ಅವರಲ್ಲಿ ಉದ್ಯಮದ ಓನಾಮ ಕಲಿತವರು – ಅನಂತಕೃಷ್ಣರಾವ್ (ಎ.ಕೆ.ರಾವ್), ಹರಿಯ ಸಣ್ಣಣ್ಣ. ಇವರು ಅಲ್ಪಕಾಲದಲ್ಲೇ ಮೂಡಬಿದ್ರೆಯಲ್ಲಿ ಸ್ವತಂತ್ರ (ವಿಜಯಲಕ್ಷ್ಮಿ) ಗೇರು ಉದ್ದಿಮೆಗಿಳಿದರು. ಕುಟುಂಬದ ಕಡೇಕುಟ್ಟಿ ಹರಿ, (ಬಹುಶಃ ಎಳೆಹರಯದ ಕಾರಣ) ತುಸು ಹಿಂದಿನಿಂದ ಸಣ್ಣಣ್ಣನನ್ನು ಉದ್ದಿಮೆಯ ಕಿರಿಯ ಪಾಲುದಾರನಾಗಿಯೇ ಸೇರಿಕೊಂಡರು. ವಿಜಯಲಕ್ಷ್ಮೀ ಗೇರು ಉದ್ಯಮದ ವಹಿವಾಟು ದೊಡ್ಡದು, ಲಕ್ಷ್ಯ ಸಗಟು ಮಾರುಕಟ್ಟೆಯದು. ಹಾಗಾಗಿ ನಮ್ಮ ನಿಮ್ಮ ದೈನಂದಿನ ಖರೀದಿ ಬಿಡಿ, ಮೂಡಬಿದ್ರೆಯ ಪೇಟೆಯಲ್ಲೂ `ವಿಜಯಲಕ್ಷ್ಮೀ’ ಛಾಪದ ಗೇರುಬೀಜ ಕಾಣಸಿಗದು. ಹಾಗೆಂದು ಅಖಿಲ ಭಾರತ ಮಟ್ಟದಲ್ಲಿ ಇವರ ಉತ್ಪನ್ನ ಮುಟ್ಟದ ಮೂಲೆಯೂ ಇಲ್ಲ. ಸಹಜವಾಗಿ ಕಚ್ಚಾಮಾಲು ಮತ್ತು ಸಿದ್ಧ ಮಾಲುಗಳ ಸಂಗ್ರಹ ಮತ್ತು ಓಡಾಟದ ದೊಡ್ಡ ಕೇಂದ್ರವಾದ ಮಂಗಳೂರಲ್ಲಿದ್ದುಕೊಂಡು, ಸ್ವತಂತ್ರವಾಗಿ ನಡೆಸುವ ಜವಾಬ್ದಾರಿ ಹರಿಪ್ರಸಾದರ ಮೇಲಿತ್ತು.
ಕಾರ್ಖಾನೆಗೆ ಊರಿನ ಕಚ್ಚಾಮಾಲು ಸಾಕಾಗದಾಗ, ಎಕೆ ರಾವ್ ಗೇರು ಬೆಳೆಯುವ ದೇಶಗಳಲ್ಲಿ (ಪಶ್ಚಿಮಕ್ಕೆ ಕೆಲವು ಆಫ್ರಿಕನ್ ದೇಶಗಳು ಹಾಗೂ ಇತ್ತ ಇಂಡೋನೇಶ್ಯ ಮುಂತಾದವು) ಓಡಾಡಿ, ಬೆಳೆಗಾರರ ಸಗಟು ಮಾರುಕಟ್ಟೆಗಳಲ್ಲಿ ಸಂಬಂಧ ಕುದುರಿಸಿ ಬರುತ್ತಾರೆ. ಹಡಗುಗಳ ಮೂಲಕ ಬರುವ ಕಚ್ಚಾಮಾಲನ್ನು ಮಂಗಳೂರ ಬಂದರದ ಔಪಚಾರಿಕತೆಗಳನ್ನು ಮುಗಿಸಿ ಮೂಡಬಿದ್ರೆ ಮುಟ್ಟಿಸುವುದು ಹರಿಯ ಜವಾಬ್ದಾರಿ. ಮತ್ತೆ ಮೊದಲೇ ಹೇಳಿದಂತೆ ವಿಜಯಲಕ್ಷ್ಮೀ ಉತ್ಪನ್ನಗಳಿಗೆ ಅಖಿಲ ಭಾರತ ಮಟ್ಟದ ವಿತರಣೆಯಲ್ಲಿ ಮಂಗಳೂರಿನ ಮಟ್ಟಿಗೆ ನಿರ್ವಾಹಕ ಮತ್ತು ವಕ್ತಾರ ಹರಿಯೇ. ಹರಿಪ್ರಸಾದರ `ಪದ್ಮಪತ್ರ’ದ ಗುಣ ನಾನು ಹೆಚ್ಚು ಕಂಡದ್ದು ಇಲ್ಲಿ! ಇವರಿಗೆ ಕಾರ್ಖಾನೆಯ ತಿಳುವಳಿಕೆ ಚೆನ್ನಾಗಿಯೇ ಇದ್ದರೂ ಮೂಡಬಿದ್ರೆಯಲ್ಲಿ ಅಣ್ಣನ ವಹಿವಾಟಿಗೆ ತಲೆ ಹಾಕಿದವರಲ್ಲ. ಮತ್ತೆ ತಿರುಗಾಟದ ಖಯಾಲಿ ಇದ್ದರೂ ವಿದೇಶಗಳಿಗೆ ಹೋಗುವ ಮೋಹ ಅಂಟಿಸಿಕೊಂಡದ್ದೂ ಇಲ್ಲ. ಹರಿಯ ಮಾತಿನಲ್ಲೇ ಕೇಳಿ “ಅಣ್ಣ ಎಲ್ಲಾದರೂ ಒತ್ತಾಯದಲ್ಲಿ ಸಿಕ್ಕಿಸಿಹಾಕಿಯಾನು ಎಂದು ನಾನು ಪಾಸ್ಪೋರ್ಟೇ ಮಾಡಿಸಿಲ್ಲ!”
ಕರಾವಳಿ ವಲಯದಲ್ಲಿ ಆರ್ನೂರಕ್ಕೂ ಮಿಕ್ಕು ಗೇರು ಕಾರ್ಖಾನೆಗಳಿವೆ! ಆದರೆ ಬೆಳೆಗಾರರ ಮಟ್ಟದಲ್ಲಿ ಗೇರಿನ ಗಂಭೀರ ಕೃಷಿಕರು ತುಂಬಾ ಕಡಿಮೆ. ಇದಕ್ಕೆ ಅಪವಾದವಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸ್ವತಂತ್ರವಾಗಿ ಗೇರು ಅಭಿವೃದ್ಧಿ ಕಾರ್ಯವನ್ನು ಸಾಕಷ್ಟು ನಡೆಸಿವೆ. ಅದರಲ್ಲಿ ಪುತ್ತೂರಿನ ಕುಮಾರಧಾರಾ ನದೀತಟದಲ್ಲಿ, ಕೇಂದ್ರ ಸರಕಾರ ಗೇರು ಅಭಿವೃದ್ಧಿಯ ಹೆಸರಿನಲ್ಲಿ ಸುಮಾರು ಇನ್ನೂರು ಎಕ್ರೆಗೂ ಮೀರಿದ ಗುಡ್ಡಗಳ ಹರಹಿನಲ್ಲಿ ಶುದ್ಧ ಗೇರು ಕೃಷಿ ನಡೆಸುತ್ತಿರುವ ಜಾಗ ಒಂದು. ಇಲ್ಲಿ ತೋಟದ ನೆಲ ಹದ ಮಾಡುವಲ್ಲಿಂದ ಗೇರು ಮರ ಹೂ ಬಿಡುವವರೆಗಿನ ಎಲ್ಲ ಕಾರ್ಯಗಳನ್ನೂ ಇಲಾಖೆ ವೈಜ್ಞಾನಿಕವಾಗಿಯೇ ಮಾಡುತ್ತದೆ. ಆದರೆ ವರ್ಷಾವಧಿ ಬೆಳೆ ಸಂಗ್ರಹಣೆಯನ್ನು ಮಾತ್ರ, ನಿಯಮಾನುಸಾರ, ಖಾಸಗಿ ಜನಗಳಿಗೆ ಹರಾಜು ಹಾಕಿಬಿಡುತ್ತದೆ. ಫಸಲು ಹೇಗಿದ್ದರೂ ಗುತ್ತಿಗೆದಾರನ ಒಪ್ಪಂದದಲ್ಲಿ ಬದಲಾವಣೆಗಳನ್ನೇನೂ ತಾರದ ನಿಯತ್ತು ಇಲಾಖೆಯದು.
ವರ್ಷದ ಫಸಲಿನ ನಿಜಲೆಕ್ಕ ಕೊಡುವುದು ಮತ್ತು ಇಲಾಖೆಯ ಸಸಿ ಸಂವರ್ಧನಾ ಕಾರ್ಯಕ್ಕೆ ನಿಯಮಿತ ಸಣ್ಣ ಮೊತ್ತದ ಉಚಿತ ಬೀಜ ಒದಗಿಸುವುದು ಗುತ್ತಿಗೆದಾರನ ಜವಾಬ್ದಾರಿ. ಸಹಜವಾಗಿ ಒಂದು ವರ್ಷದ ಬೀಜಸಂಗ್ರಹದ ಲೆಕ್ಕ, ಮುಂದಿನ ವರ್ಷದ ಹರಾಜಿಗೆ ಅಡಿಪಾಯ. ಆದರೆ ಖಾಸಗಿ ಗುತ್ತಿಗೆದಾರರು ಇಲಾಖೆಯೊಡನೆ `ಕಣ್ಣಾಮುಚ್ಚಾಲೆ’ ಆಡುತ್ತಿದ್ದರಂತೆ. ಅಂತಿಮ ಸಂಗ್ರಹದ ಲೆಕ್ಕವನ್ನು ಕಡಿಮೆ ತೋರಿಸಿ, ಬರುವ ವರ್ಷಗಳ ಅಡಿಪಾಯವನ್ನೇ ಸಡಿಲಿಸಿ, ತಮ್ಮೊಳಗೇ ಅತಿ ಲಾಭಕರವಾಗಿ ಗುತ್ತಿಗೆ ಉಳಿಯುವಂತೆ ನೋಡಿಕೊಳ್ಳುತ್ತಿದ್ದರು. ಇದರ ಅರಿವಿದ್ದೂ ಮುರಿಯುವಲ್ಲಿ ವಿಫಲವಾಗಿದ್ದ ಇಲಾಖೆ, ಈ ಶ್ರಾಯದಲ್ಲಿ ವಿಜಯಲಕ್ಷ್ಮಿಯ ಎ.ಕೆ.ರಾಯರಿಗೇ ಹರಾಜಿಗೆ ನಿಲ್ಲುವಂತೆ ಕುಮ್ಮಕ್ಕು ಕೊಟ್ಟಿತಂತೆ. ಅದುವರೆಗೆ ಅಲ್ಲಿನ ಗುತ್ತಿಗೆದಾರರಿಂದ ಬೀಜ ಖರೀದಿಸುವಷ್ಟರಲ್ಲೇ ತೃಪ್ತವಾಗಿದ್ದ `ವಿಜಯಲಕ್ಷ್ಮೀ’, ಈ ವರ್ಷ ಹರಿಪ್ರಸಾದರನ್ನು ಮುಂದೊಡ್ಡಿ ಹರಾಜಿನಲ್ಲೂ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡಿತು. ಈಗ ಅದನ್ನು ಪ್ರಾಯೋಗಿಕವಾಗಿಯೂ ಗುರಿಮುಟ್ಟಿಸುವ ಛಲದೊಡನೆ, ಸುಮಾರು ನಾಲ್ಕು ತಿಂಗಳ ಕಾಲ ಹರಿ ಮತ್ತವರ ಸಿಬ್ಬಂದಿ ಇಲಾಖೆಯ ಗೇರು ಮರಗಳ ಬುಡ ಸುತ್ತುತ್ತಲಿದೆ. ನಿತ್ಯದ ಕೆಲಸಕ್ಕೆ ಯೋಗ್ಯ ಮೇಸ್ತ್ರಿ, ಕೂಲಿ, ಕೋಠಿ, ಸಾಗಣಾ ವ್ಯವಸ್ಥೆಗಳನ್ನೆಲ್ಲ ಮಾಡಿಬಿಟ್ಟರೂ ಅನಿಯತವಾಗಿ – ಕನಿಷ್ಠ ವಾರಕ್ಕೊಮ್ಮೆಯಾದರೂ ಹರಿ ಭೇಟಿ ಕೊಡುವುದು ಅನಿವಾರ್ಯ. ಅಂಥಾ ಒಂದು ಭೇಟಿಯಲ್ಲಿ ನಾವು ಕೇವಲ ಕುತೂಹಲೀ ವೀಕ್ಷಕರಾಗಿ ಸೇರಿಕೊಂಡಿದ್ದೆವು.
ಪುತ್ತೂರಿನ ಹೋಟೆಲೊಂದರಲ್ಲಿ ತಿಂಡಿ ಮುಗಿಸಿ, ಕಾಣಿಯೂರು ಮಾರ್ಗ ಹಿಡಿದೆವು. ಅದರಲ್ಲಿ ಸುಮಾರು ಒಂಬತ್ತು ಕಿಮೀ ಅಂತರದ ಶಾಂತಿಗೋಡಿನ ಬಳಿಯ ಐ.ಸಿ.ಎ.ಆರ್ (ಭಾರತೀಯ ಕೃಷಿ ಸಂಶೋಧನಾ ವಿಭಾಗ) ಆಶ್ರಯದ ಡಿ.ಸಿ.ಆರ್ (ಗೇರು ಸಂಶೋಧನಾ ನಿರ್ದೇಶನಾಲಯ) ವಠಾರ ತಲಪುವಾಗ ಸುಮಾರು ಎಂಟು ಗಂಟೆ. ಎಲ್ಲಾ ಇಲಾಖೆಗಳಂತೆ ಭರ್ಜರಿ ಬೋರ್ಡು, ಬೇಲಿ, ಗೇಟು, ಅಲಂಕಾರಿಕ ಉದ್ಯಾನಗಳ ಸೆರೆಯಲ್ಲಿ ಅಗತ್ಯ ಒಂದಾದರೆ ವಾಸ್ತವ ಹತ್ತೆಂಬಂತೆ ಸಿದ್ಧವಾಗಿ ಮತ್ತೆ ಸಹಜವಾಗಿ ಬಹುತೇಕ ವ್ಯರ್ಥವಾಗುಳಿದ ಕಟ್ಟಡಗಳು, ಸೌಕರ್ಯಗಳು ಹರಡಿಬಿದ್ದಿದ್ದವು. “ಸಂಶೋಧನಾಂಗದ ಹೊಸ ಶಾಖೆಯೊಂದು ತುಸು ಆಚಿನ ಕೆಮ್ಮಿಂಜೆಯಲ್ಲಿ ಈಚೆಗೆ ತೊಡಗಿದ್ದರಿಂದ ವಸತಿಸಾಲೆಲ್ಲ ಖಾಲಿ ಬಿದ್ದಿದೆ” ಎಂದ ಕಛೇರಿ ಸಿಬ್ಬಂದಿಯ ಸಮಜಾಯಿಷಿ ಎಷ್ಟು ವಿಶ್ವಾಸಾರ್ಹ ಎಂದು ನನಗೆ ತಿಳಿದಿಲ್ಲ! ಕಛೇರಿಯ ಮುಂದಿನಂಗಳದ ಬಿಸಿಲಿನಲ್ಲಿ ಗುತ್ತಿಗೆದಾರರು (ಹರಿ) ಕರಾರಿನಂತೆ ಕೊಟ್ಟ ಬೀಜಗಳು ಒಣಗುತ್ತಿದ್ದವು. ತುಸು ಆಚೆಗೆ ಹಸಿರು ಬಲೆ-ಮನೆಯ ನೆರಳಲ್ಲಿ ಸಸಿಮಡಿಗಳೂ ಕಣ್ತುಂಬುತ್ತಿದ್ದುವು. ಲೆಕ್ಕಾಚಾರದಂತೆ ಮಣ್ಣು ಗೊಬ್ಬರಗಳ ಮಿಶ್ರಣ ತುಂಬಿಕೊಂಡ ತೊಟ್ಟೆಗಳಲ್ಲಿ ಗಟ್ಟಿ ಬೀಜಗಳು ಮೊಳಕೆಯೊಡೆಯುತ್ತವೆ. ಯೋಗ್ಯ ಹಂತದಲ್ಲಿ, ಸಂಶೋಧನಾ ಮಡಿಗಳಲ್ಲಿ ಬೆಳೆದ ಅಗತ್ಯದ ಹಳೆ ಮರಗಳಿಂದ ಚಿಗುರುಗೈಗಳನ್ನು ತಂದು ಇವಕ್ಕೆ ಕಸಿ ಮಾಡುತ್ತಾರೆ. ಹೀಗೆ ನೂರು ಸಾವಿರ ಲೆಕ್ಕದಲ್ಲಿ ತರಹೇವಾರಿ ಗುಣ ನಿಶ್ಚಿತ ಸಸಿಗಳನ್ನು ಬೋರ್ಡು ಸಹಿತ ವಿಭಾಗಿಸಿಟ್ಟು ಸಲಹುತ್ತಿದ್ದರು. ನೀರಿಗೆ ಒತ್ತಿನ ಕುಮಾರಧಾರಾ ಧಾರಾಳವಿತ್ತು.
ಖಾಲಿಹೊಡೆಯುತ್ತಿದ್ದ ವಸತಿ ಸಾಲುಗಳ ನೆರಳಿನಲ್ಲಿ ಕಾರು ಬಿಟ್ಟು, ನಾವು ನಡಿಗೆಯಲ್ಲಿ ಹಾಡಿ ಸುತ್ತಲು ಹೊರಟೆವು. (ಇಲ್ಲಿ ಮತ್ತು ಮುಂದೆಯೂ ನುಸುಳುವ ನನ್ನ ಸಣ್ಣ ಆತ್ಮಕಥಾನಕ ಮಾತುಗಳಿಗೆ ಕ್ಷಮೆಯಿರಲಿ.) ದಕ ವಲಯದ ನನ್ನ ಬಹುತೇಕ ಸಂಬಂಧಿಗಳು ಕೃಷಿಕರೇ. ಅವರಲ್ಲೆಲ್ಲ, ಮತ್ತೆ ನಾವೇ ಹದಿನೆಂಟು ವರ್ಷಗಳ ಹಿಂದೆ ಮೊಂಟೆಪದವಿನಲ್ಲಿ ಸಸ್ಯಪುನರುತ್ಥಾನದ ನೆಪದಲ್ಲಿ ಕೊಂಡ ಒಂದೆಕ್ರೆ ನೆಲದಲ್ಲೂ (ಅಭಯಾರಣ್ಯ) ಸಾಕಷ್ಟು ಗೇರು ಮರಗಳನ್ನು ಕಂಡಿದ್ದೇವೆ. ಆ ಅನುಭವದಲ್ಲಿ ಹೆಚ್ಚೆಂದರೆ, ಮುಳಿಗುಡ್ಡೆಗಳಲ್ಲಿ ಹಳೆ ಗೇರುಮರಗಳು ಸತ್ತು ಖಾಲಿಬಿದ್ದ ಜಾಗಗಳಲ್ಲಿ ಹೊಸ ಸಸಿ ನೆಡುವುದನ್ನು ಕಂಡಿದ್ದೇನೆ. ಅಡಿಕೆ ತೋಟಕ್ಕೋ ಜಾನುವಾರು ದೊಂಪಕ್ಕೋ ಸೊಪ್ಪು ಮಾಡುವ ನೆಪದಲ್ಲಿ, ಗೇರು ಮರಗಳನ್ನಪ್ಪುವ ಬಳ್ಳಿ ಪೊದರುಗಳನ್ನು ತರಿದು ಪರೋಕ್ಷವಾಗಿ ಫಸಲು ಹಸನಾಗುವಂತೆ ನೋಡಿಕೊಂಡದ್ದೂ ಅರಿವಿನಲ್ಲಿದೆ. ವಾಸ್ತವವಾಗಿ ನಮ್ಮ `ಅಭಯಾರಣ್ಯ’ದಲ್ಲಿ ಮೊದಲ ವರ್ಷಗಳಲ್ಲಿದ್ದ ನಲ್ವತ್ತಕ್ಕೂ ಮಿಕ್ಕು ಮರಗಳಲ್ಲಿ ನಾವು ವಾರ್ಷಿಕ ನೂರು ಕೇಜಿಗೂ ಮಿಕ್ಕು ಗೇರುಬೀಜ ಸಂಗ್ರಹಿಸಿ ಮಾರಿದ್ದೂ ಇತ್ತು. ನಿಮಗೆ ತಿಳಿದಂತೆ, ಗೇರು ವಿದೇಶೀ ಮೂಲದ್ದು. ಅವನ್ನು ಸಹಜ ಬೆಳವಣಿಗೆಗೆ ಬಿಟ್ಟರೆ ಮರ ದೀರ್ಘ ಕಾಲ ಬಾಳುವುದಿಲ್ಲ. ಅಭಯಾರಣ್ಯದಲ್ಲಿ ನಾವಾದರೋ ಈ ನೆಲಕ್ಕೆ ಸಹಜವಾದ ಸಸ್ಯವೈವಿಧ್ಯದ ಸಂವರ್ಧನೆಗೆ ಒತ್ತು ಕೊಟ್ಟಾಗ, ಗೇರು ಮರಗಳು ಮಣ್ಣಾಗತೊಡಗಿದವು. ನಾವು ಅದರ ಬಗ್ಗೆ ಯಾವ ಆತಂಕವನ್ನಿಟ್ಟುಕೊಳ್ಳದಿದ್ದರೂ ಕಂಡ ಎಲ್ಲಾ ಸಂಬಂಧಿಗಳು “ಸ್ವಲ್ಪ ಕಾಡು, ಬಲ್ಲೆ ಬಿಡಿಸು ಮಾರಾಯಾ. ಗೇರು ಹಿಡಿದೀತು” ಎಂದದ್ದಿತ್ತು. ನಾವು ಹಾಗೆ ಮಾಡದೇ ಇದ್ದುದಕ್ಕೆ ಇಂದು ಅಭಯಾರಣ್ಯದ ಗೇರು ಮರಗಳಲ್ಲಿ ನೂರಕ್ಕೆ ತೊಂಬತ್ತು ಮಣ್ಣಾಗಿಹೋಗಿವೆ. ಇರುವವಾದರೂ ನಮ್ಮ ಹಣ್ಣು ತಿನ್ನುವ ಚಪಲಕ್ಕೆ, ಮನೆ ಕಜ್ಜಾಯಗಳ ರುಚಿಯ ಅಗತ್ಯಕ್ಕೂ ಒದಗುತ್ತಿಲ್ಲ! ಆ ಸೀಮಿತ ಅನುಭವಗಳನ್ನು ಅಡ್ಡ ಮಲಗಿಸುವಂತೆ, ಇಲ್ಲಿ ನಾನು ಮೊದಲ ಬಾರಿಗೆ ವ್ಯವಸ್ಥಿತ ಗೇರು ತೋಟ ನೋಡುತ್ತಿದ್ದೆ.
ಕುಮಾರಧಾರಾ ನದಿ ಗೇರು ಹಾಡಿಗೆ ಒಂದು ನೈಜ ಗಡಿ. ಪಶ್ಚಿಮಘಟ್ಟದ ಉನ್ನತಿಯಿಂದ ಬಗೆತರದಲ್ಲಿ ಬಿದ್ದು, ಬಂಡೆ ಕಾಡಿನ ಉಜ್ಜು ಸೋಸುಗಳಲ್ಲಿ ಪಾರಾಗಿ, ಇಲ್ಲಿ ಸುಸ್ತು ಪರಿಹಾರಕ್ಕೆಂಬಂತೆ ಪುಟ್ಟ ಗುಡ್ಡಗಳ ಬುಡಗಳಲ್ಲಿ ಹಾಗೊಮ್ಮೆ ಹೀಗೊಮ್ಮೆ ಬಳುಕಾಡುತ್ತಿತ್ತು ನದಿ. ಅದರ ಪಶ್ಚಿಮ-ದಕ್ಷಿಣ ಮಗ್ಗುಲಿನ ಹಲವು ಪುಟ್ಟ ಗುಡ್ಡಗಳ ಹರಹೇ ಇಲ್ಲಿನ ಗೇರು ತೋಟ. ಹಳೆ ಮರಗಳಿಂದ ಹಿಡಿದು ಇನ್ನೂ ನೆಲ ಕಚ್ಚಬೇಕಾದ ಸಸಿಗಳವರೆಗೆ, ವಿಭಿನ್ನ ವರ್ಗಗಳ ಮಡಿ ಮಾಡಿ, ಬೋರ್ಡು ಹಚ್ಚಿ, ನಡುವೆ ಸ್ಪಷ್ಟ ಕಚ್ಚಾ ಮಾರ್ಗವನ್ನೂ ಕಡಿದಿಟ್ಟಿದೆ ಇಲಾಖೆ. ಸಂಶೋಧನಾ ಅಗತ್ಯಗಳಿಗೆ ಒಡ್ಡಿಕೊಳ್ಳುವ ಕಳಗಳು, ಸಸಿಹಂತವನ್ನು ಕಳೆಯದೆ ಹನಿ ನೀರಾವರಿ ವ್ಯವಸ್ಥೆ ಪಡೆದ ತಟ್ಟುಗಳು, ನಿರ್ದಿಷ್ಟ ತಳಿಗಳ ಅಗತ್ಯಾನುಸಾರ ಬುಲ್ಡೋಜರ್ ಚಲಾಯಿಸಿ ಮೆಟ್ಟಿಲು ಮೆಟ್ಟಿಲಾದ ಗುಡ್ಡಗಳು, ಫಲ ಸಮೃದ್ಧಿ, ವರ್ಣ ವೈವಿಧ್ಯ, ಮರಗಳ ರೋಗ ನಿರೋಧಕ ಶಕ್ತಿ ಇತ್ಯಾದಿ ಹಲವು ವಿಂಗಡಣೆಗಳ ವಿಸ್ತಾರಗೇರು ಕೃಷಿ ಇಲ್ಲಿ ನಡೆದಿದೆ. ಇಲಾಖೆ ಮೂಲದಲ್ಲಿ ಇತರ ಸಹಜ ಸಸ್ಯವೈವಿಧ್ಯಗಳನ್ನು ಸವರಿಯೇ ಗೇರು ರೂಢಿಸಿದೆ. ನಿಮಗೆಲ್ಲ ತಿಳಿದಂತೆ ಗೇರು ಮರವೇ ಆದರೂ `ಮಹಾ’ ಎನ್ನುವ ವಿಶೇಷಣಕ್ಕೆ ಸಲ್ಲುವುದು ಕಡಿಮೆ. ಇವು ತಗ್ಗು ಕೊಂಬೆಗಳ, ಅಪಾರ ಬಿಸಿಲಿನ ಪ್ರೀತಿಯಲ್ಲಿ ದಟ್ಟ ಎಲೆಟೊಪ್ಪಿ ಹೊತ್ತ ಪೊದರು, ಹಸಿರು ಗುಡಾರ ಎಂದರೆ ತಪ್ಪಾಗದು. ಇವಕ್ಕೆ ನೆರಳು, ಬಳ್ಳಿಪೊದರುಗಳ ಬಂಧನವಿದ್ದರೆ ಇಳುವರಿ ಕಡಿಮೆ. ಹಾಗಾಗಿಯೇ ಇರಬೇಕು, ಹಾಡಿಯುದ್ದಗಲಕ್ಕೆ ದೃಷ್ಟಿ ಹಾಯಿಸಿದರೆ ಅಪವಾದಕ್ಕೆಂಬಂತೆ ಒಂದೆರಡು ಮಹಾಮರಗಳು ಮಾತ್ರ ಕಾಣಿಸುತ್ತವೆ. ಹಾಗೇ ಈ ವಲಯಕ್ಕೆ ಸಹಜವಾದ ತಳದ ಪೊದರು ಗಿಡಗಳು (ಕೇಪುಳೆ, ಎಂಜಿರ, ಮುಳ್ಳಬಲ್ಲೆ ಇತ್ಯಾದಿ) ಬಹುತೇಕ ಇಲ್ಲವೆಂದರೂ ತಪ್ಪಿಲ್ಲ.
ಇಲಾಖೆ ಗೇರು ಕೊಯ್ಲನ್ನು ಒಪ್ಪುವುದಿಲ್ಲ. ಸಂಗ್ರಾಹಕರು ಸಹಜವಾಗಿ ಕಳಿತು ಉದುರಿದ ಹಣ್ಣುಗಳನ್ನು ಹೆಕ್ಕಲು ಅನುಕೂಲವಾಗುವಂತೆ ಬಹ್ವಂಶ ತರಗೆಲೆ ಉದುರು ಕಡ್ಡಿಗಳನ್ನಷ್ಟೇ ನಿವಾರಿಸಿರುತ್ತಾರೆ. ಇದು ಕೆಲವೊಮ್ಮೆ ಕಿಡಿಗೇಡಿಗಳು ಉಂಟು ಮಾಡುವ ಬೆಂಕಿ ಆಕಸ್ಮಿಕವನ್ನು ನಿವಾರಿಸುವಲ್ಲೂ ಸಹಕಾರಿಯಾಗುತ್ತದೆ. ಮರಗಳಲ್ಲಿ ಹಣ್ಣು ಒಂಟಿಯಾಗಿ, ಜೊಂಪೆಯಲ್ಲೂ ಅಸಂಖ್ಯವಿದ್ದವು. ಹೆಕ್ಕುವ ಕೂಲಿಯಾಳುಗಳು ಒಂದೂ ದಿನ ಬಾಕಿಯಾಗದಂತೆ, ನಿಯತ ಆವರ್ತನೆಯಲ್ಲಿ, ವಿವಿಧ ಕಳಗಳಿಗೆ ಭೇಟಿ ಕೊಡುತ್ತಾರೆ. ಅವರು ಬಿದ್ದ ಹಣ್ಣುಗಳಿಂದ ಬೀಜ ಮಾತ್ರ ತಿರಿಚಿ ಚೀಲಕ್ಕಿಳಿಸುತ್ತ ಹಣ್ಣನ್ನು ಅಲ್ಲಲ್ಲೇ ಬಿಸಾಡಿ ಹೋಗುತ್ತಾರೆ. ಹಾಗೆ ನಿನ್ನೆ ಬಿಸುಡಿದ ಹಣ್ಣು, ಇಂದು ಉದುರಿದ ಸಬೀಜಹಣ್ಣು, ಉದುರುವಾಗಲೇ ಕಳಚಿ ದೂರಾದ ಬೀಜ ಎಂಬ ದೃಶ್ಯಸಮೃದ್ಧಿಯನ್ನು ನಾನು ಹಿಂದೆಲ್ಲೂ ಕಂಡಿಲ್ಲ.
`ಅಭಯಾರಣ್ಯ’ದ ಗೇರು ಸಂಗ್ರಹದ ದಿನಗಳಲ್ಲಿ ಸಾಮಾನ್ಯವಾಗಿ ನಾವು ಪ್ರತಿ ಆದಿತ್ಯವಾರವೂ ಹೋಗುತ್ತಿದ್ದೆವು. ಹಣ್ಣು ಹೆಚ್ಚು ಕಾಣಿಸಿದ ದಿನಗಳಲ್ಲಿ, ಹಲವು ಬಾರಿ ದೇವಕಿ ಒಂಟಿಯಾಗಿ ಬಸ್ಸಿನಲ್ಲಿ ಹೋಗಿ, ಇಡೀ ದಿನ ಬಸವಳಿದು ಬರುತ್ತಿದ್ದದ್ದೂ ಉಂಟು. ಸಂಗ್ರಹಕ್ಕೆ ಹೊರಡುವಾಗ, ನಾವು ಉದ್ದದ ಕೊಕ್ಕೆ ಮತ್ತು ಸಾಕಷ್ಟು ದೊಡ್ಡ ಬಕೆಟ್ ಒಯ್ಯುತ್ತಿದ್ದೆವು. ನಾವು ಉದುರಿದ ಹಣ್ಣು, ಬೀಜಕ್ಕಷ್ಟೇ ತೃಪ್ತರಾಗುತ್ತಿರಲಿಲ್ಲ. ಮರ ಸಣ್ಣದಾದರೆ ಬುಡ ಹಿಡಿದು, ದೊಡ್ಡದಾದರೆ ಕೆಲವೆಡೆಗಳಲ್ಲಿ ಒಬ್ಬರು ಮೇಲೇರಿ ಅಥವಾ ಕೆಳಗಿನಿಂದಲೇ ಕೊಕ್ಕೆಯಲ್ಲಿ ಆಯ್ದ ಕೊಂಬೆಗಳನ್ನು ಹಿಡಿದು ಅಲುಗಿಸಿ ಹಣ್ಣು ಉದುರಿಸಿಕೊಳ್ಳುವುದಿತ್ತು. ಇದರಲ್ಲಿ ಬಲಿತ ಹಣ್ಣುಗಳಿಂದ ಹಿಡಿದು ಮಿಡಿ ಹೂಗಳೂ ಉದುರುವುದು ಇತ್ತು. ಅಷ್ಟಕ್ಕೂ ಬಿಡದೆ, ಕತ್ತುದ್ದ ಮಾಡುತ್ತ ಪ್ರತಿ ಮರದ ಸುತ್ತ ಬಲಿಬಂದು, ಮೇಲೆ ಎಲೆಗಳ ಮರೆಯಲ್ಲಿ ಅವಿತು ಕುಳಿತ ಹಣ್ಣುಗಳಿಗೆ, ಬಲಿತ ಕಾಯಿಗಳಿಗೆ ಕೊಕ್ಕೆಯನ್ನು ಲಂಬಿಸುತ್ತಿದ್ದೆವು. ಅಂದು ಇವೆಲ್ಲ ನಮ್ಮ `ಕೃಷಿ ಪದ್ಧತಿ’ಗೆ (ನೆನಪಿರಲಿ – ಗೇರು ಕೃಷಿಯಲ್ಲ, ವನ್ಯ ಪುನರುತ್ಥಾನ!) ಅನಿವಾರ್ಯವೇ ಇತ್ತು. ಹಾಗಲ್ಲವಾದರೆ ಅಭಯಾರಣ್ಯದಿಂದ ವಾರ ಕಾಲ ನಾವು ದೂರವಿರುವಾಗ, ಆಸುಪಾಸಿನ ಇತರ ಗೇರು ಸಂಗ್ರಾಹಕರಿಗೊಂದು ಆಮಿಷ ಉಳಿಸಿದಂತಾಗುತ್ತಿತ್ತು. ನಾವು ಗಳಿಸಿದ ಗೇರುಬೀಜದ ಮೌಲ್ಯಕ್ಕಿಂತಲೂ ಹೆಚ್ಚು ಮೌಲ್ಯದ ಸಸ್ಯವೈವಿಧ್ಯ ಆ ಜನಗಳ ಅರಿವಿಲ್ಲದ ತುಳಿತಕ್ಕೆ ಹುಡಿಯಾಗಲು ಅವಕಾಶ ಕಲ್ಪಿಸಿದಂತಾಗುತ್ತಿತ್ತು!
`ಅಭಯಾರಣ್ಯ’ದ ನಮ್ಮ ಗೇರು ಸಂಗ್ರಹದ ದಿನಗಳಿಗೆ ಹೋಲಿಸಿದರೆ ಶಾಂತಿಗೋಡಿನಲ್ಲಿ ನಮ್ಮದು ಗೇರು ಉದ್ಯಾನ ವಿಹಾರ! ಕಚ್ಚಾ ದಾರಿಗಳಲ್ಲಿ, ಮರಗಳೆಡೆಯ ಸವಕಲು ಜಾಡುಗಳಲ್ಲಿ, ಗುಡ್ಡ ಕಣಿವೆ ಹತ್ತಿಳಿದು ಸುತ್ತಿದೆವು. ಉರಿಬಿಸಿಲು ನೆತ್ತಿ ಸುಟ್ಟದ್ದಕ್ಕೆ ನೀರ ಬಾಟಲಿ ಖಾಲಿ ಮಾಡುತ್ತ, ಆಗೀಗ ಮರದಿಂದಲೇ ಕೈಗೆಟಕುವ ಕಳಿತ ಹಣ್ಣುಗಳನ್ನು ಕೊಯ್ದು ಚಪ್ಪರಿಸುತ್ತ ನಡೆದೆವು. ಚರಳುಕಲ್ಲುಗಳ ಅಥವಾ ಉದುರೆಲೆಗಳ ಜಾರು ಒಂದೆರಡು ಕಡೆ ನಮ್ಮನ್ನು ಸಣ್ಣದಾಗಿ ಕಾಡಿತ್ತು. ಹಾಡಿಯ ನಡುವಣ ಕಚ್ಚಾ ಮಾರ್ಗಗಳಲ್ಲೂ ಬಹುತೇಕ ಭಾಗ ನಿರ್ವಹಣೆ ಸಾಲದೇ ವಾಹನ ಸಂಚಾರಕ್ಕೆ ಅಗಮ್ಯವೇ ಇತ್ತು. ಉಳಿದವೂ ಜೀಪು, ಲಾರಿಗಳ ಓಡಾಟಕ್ಕಷ್ಟೇ ಹೊಂದುವಂತವು. ಹರಿಪ್ರಸಾದರ ಸ್ಥಳೀಯ ವ್ಯವಸ್ಥಾಪಕ, ಮತ್ತವರ ಸಹಾಯಕ ಮಾತ್ರ ತಮ್ಮ ಬೈಕ್, ಸ್ಕೂಟರನ್ನು ಅಗತ್ಯಕ್ಕೆ ತಕ್ಕಂತೆ ಅಲ್ಲಿ ಓಡ್ಯಾಡಿಸುತ್ತ ಉಸ್ತುವಾರಿಯನ್ನು ಸುಸ್ತುಭಾರಿಯಾಗದಂತೆ ನಡೆಸಿದ್ದರು!
ಹಾಡಿಯ ವಿಭಿನ್ನ ಪ್ರದೇಶಗಳಲ್ಲಿ ಹರಿಪ್ರಸಾದರ ಎರಡು ಬಳಗಗಳು ಬೀಜ ಸಂಗ್ರಹ ನಡೆಸಿದ್ದವು. ಅವುಗಳಲ್ಲಿ ಒಂದು ಸ್ಥಳಿಯರದೇ ಗುಂಪು, ಇನ್ನೊಂದು ಬಯಲು ಸೀಮೆಯ ವಲಸಿಗರದು. ಆ ಎಂಟು – ಹತ್ತು ಮಂದಿ ಕೂಲಿಗಳು ಬಗಲಲ್ಲೊಂದು ಚೀಲ, ಕೈಯಲ್ಲೊಂದು ಪುಟ್ಟ ಕೋಲಷ್ಟೇ ಹಿಡಿದು, ಸೊಂಟ ಬಗ್ಗಿಸಿಕೊಂಡು ಒಂದೊಂದೇ ವಠಾರವನ್ನು ಕ್ರಮವಾಗಿ ಶೋಧಿಸುತ್ತಿದ್ದರು. ಕೋಲಿನಲ್ಲಿ ಹಗುರಕ್ಕೆ ತರಗೆಲೆಗಳನ್ನು ಕೆದರುತ್ತ, ಅದುಮಿಡಲಾಗದಂತೆ ತಲೆ ಎತ್ತುವ ಸಣ್ಣಪುಟ್ಟ ಪೊದರುಗಳನ್ನೂ ಹುಡುಕುತ್ತ, ಮೊದಲೇ ಹೇಳಿದಂತೆ ಉದುರಿದ ಹಣ್ಣುಗಳನ್ನು ಹಿಡಿದು, ತಿರುಚಿ ತೆಗೆದ ಬೀಜವನ್ನು ಚೀಲಕ್ಕೆ ಸೇರಿಸಿಕೊಳ್ಳುತ್ತ, ಹಣ್ಣನ್ನು ಅಲ್ಲೇ ಬಿಸಾಡುತ್ತ ನಡೆದಿದ್ದರು. ಅನಿವಾರ್ಯವಾಗಿ ಹಿಂದೆ ಅಭಯಾರಣ್ಯದಲ್ಲಿ ನಮ್ಮ ಪರದಾಟ ನೆನಪಾಗದಿರಲಿಲ್ಲ……..
ಅಭಯಾರಣ್ಯದ ನೆಲ ಮೇಲ್ಮೈಯಲ್ಲಿ ತೆಳು ಮಣ್ಣು ಹೊತ್ತ ಮುರಕಲ್ಲ ಹಾಸಿನದು. ಆ ಮಣ್ಣಾದರೂ ನಮ್ಮ `ಆಳ್ವಿಕೆ’ಗೂ ಹಿಂದೆ ಅಲ್ಲಿದ್ದ (ಮುರ) ಕಲ್ಪಣೆಯ ಉಪೋತ್ಪತ್ತಿ; ತುಸು ಮಣ್ಣು, ಬಹುತೇಕ ಚರಳು ಕಲ್ಲು. ಹಾಗಾಗಿ ನಾವು ಸಹಜವಾಗಿ ಬಂದ ಎಲ್ಲ ಸಸ್ಯಗಳನ್ನು ಉಳಿಸಿಕೊಳ್ಳುವುದರೊಂದಿಗೆ, ಉದುರಿದ ಎಲ್ಲ ಎಲೆ ಕೋಲುಗಳನ್ನೂ ಹಾಗೇ ಮಣ್ಣಾಗಲು ಬಿಡುತ್ತೇವೆ. ಇದರಿಂದ ಪ್ರತಿ ಗೇರು ಮರದ ಬುಡಕ್ಕೆ ನಾವು ಹೋಗುವುದೆಂದರೆ ಪೊದರು, ಮುಳ್ಳು, ಬಳ್ಳಿ, ದಪ್ಪ ತರಗೆಲೆ ರಾಶಿಯ ಸಂಕೀರ್ಣ ಕೋಟೆಯನ್ನು ಆದಷ್ಟು ಹಾಳುಗೆಡವದೇ ನುಗ್ಗುವುದಾಗುತ್ತಿತ್ತು. ಅಲ್ಲೂ ಹಣ್ಣು, ಬೀಜ ಹುಡುಕುವುದು ಇನ್ನೊಂದು ಸರ್ಕಸ್. ಈ ಗೊಂದಲಗಳಿಗೆ ಬೀಜ ಕಳೆದ ಹಳೆಯ ಹಣ್ಣುಗಳೂ ಸೇರಬಾರದೆಂದು ನಾವು ಎಲ್ಲಾ ಹಣ್ಣುಗಳನ್ನು ಇದ್ದಂತೇ ಬಕೆಟ್ಟಿಗೆ ಹಾಕಿ, ಕಾಡ್ಮನೆಯ ಎದುರಿನ ನೆರಳಿನ ಮೂಲೆಯಲ್ಲಿ ರಾಶಿ ಹಾಕುತ್ತಿದ್ದೆವು. ಪೂರ್ಣ ಸಂಗ್ರಹದ ಕೊನೆಯಲ್ಲಿ ಹಣ್ಣು ತಿರುಚಿ ಬೀಜ, ಎಳೆ ಬೀಜ, ಕಸ ಎಲ್ಲ ಬೇರ್ಪಡಿಸಬೇಕಾಗುತ್ತಿತ್ತು. ಆಗಲೂ ಈಗ ಸಂಶೋಧನಾ ಕೇಂದ್ರದ ಹಾಡಿಯಲ್ಲೂ ನಮಗೆ ಬೇಸರವಾಗುತ್ತಿದ್ದ ಏಕೈಕ ಅಂಶ – ರಾಶಿಗಟ್ಟಳೆ ರಸಯುಕ್ತ ಹಣ್ಣನ್ನು ಸುಮ್ಮನೇ ಗೊಬ್ಬರವಾಗಲು ಬಿಡುವುದಾಗಿತ್ತು. ಅಂದು ನಮ್ಮದಾದರೂ ಒಂದು ದಿನದಲ್ಲಿ ಗರಿಷ್ಠ ಎರಡು ಬಕೆಟ್ ಹಣ್ಣು ಮಾತ್ರ. ಆದರೆ ಇಲ್ಲಿ ಟನ್ನುಗಟ್ಟಳೆ ಹಣ್ಣು ವ್ಯರ್ಥವಾಗುವ ಕುರಿತು ನಮ್ಮಷ್ಟೇ ಹರಿಪ್ರಸಾದರಿಗೂ ವಿಷಾದವಿದೆ; ಬೀಜದ ಇಲಾಖೆಗೆ ಹಣ್ಣಿನ ಚಿಂತೆಯಿಲ್ಲ!
ಹರಿಪ್ರಸಾದರ ಸಣ್ಣ ಲಾರಿ ಸಮೀಪದ ಕಚ್ಚಾದಾರಿಯಲ್ಲಿ ಕೂಲಿಕಾರರ ಗುಂಪನ್ನು ಅನುಸರಿಸುತ್ತಿರುತ್ತದೆ. ಅದು ಕಾಲಕಾಲಕ್ಕೆ ಕೂಲಿಯಾಳುಗಳ ಚೀಲದ ಹೊರೆಯನ್ನು ತಾನಿಳಿಸಿಕೊಂಡು, ಹಾಡಿಯೊಳಗೇ ಇಲಾಖೆ ಕೊಟ್ಟ ಹರಕುಮುರುಕು ದಾಸ್ತಾನು ಕೋಠಿಗೆ ಮುಟ್ಟಿಸುತ್ತಿತ್ತು. ಅನುಕೂಲವಿದ್ದಂತೆ ಕೋಠಿಯ ಕಚ್ಚಾ ಅಂಗಳದಲ್ಲಿ ಗೋಣಿಗಳನ್ನು ಹಾಸಿ, ಸಂಗ್ರಹಕ್ಕೆ ಒಂದೆರಡು ಬಿಸಿಲು ಕೊಡುವುದೂ ಇದೆ. ಒಟ್ಟಾರೆ ಸಂಗ್ರಹ ಅದೇ ಲಾರಿಗೆ `ಭರ್ತಿ ಲೋಡ್’ ಆಗುವ ಸ್ಥಿತಿ ಬಂದಂತೆಲ್ಲ, ಕಾರ್ಖಾನೆಗೆ ರವಾನಿಸುವುದೂ ನಡೆಯುತ್ತಿತ್ತು. ಆ ಸಂದರ್ಭದಲ್ಲಿ, ಇವರು ಕರಾರಿನಂತೆ ಅದುವರೆಗಿನ ಸಂಗ್ರಹದ ಲೆಕ್ಕ ಕೊಟ್ಟು, ಅದರಲ್ಲಿ ಸಸ್ಯೋತ್ಪಾದನೆಗೆ ಸಲ್ಲಬೇಕಾದ ಉಚಿತ ಬೀಜ ಬಿಟ್ಟು, ಸಾಗಣೆ ಪರವಾನಗಿ ಮಾಡಿಸಿಕೊಳ್ಳುತ್ತಾರೆ.
ಹಿಂದೆ ನಾವಾದರೋ ಬಲಿತ ಮತ್ತು ಹಸಿರು ಬೀಜಗಳನ್ನು ಬೇರ್ಪಡಿಸಿ ಮಂಗಳೂರ ಮನೆಗೆ ಒಯ್ಯುತ್ತಿದ್ದೆವು. ಮತ್ತೇನಿದ್ದರೂ ದೇವಕಿಯದು ಏಕಾಂಗಿ ದುಡಿಮೆ. ಹಸಿರು ಬೀಜಗಳನ್ನು ಹಳಸಲು ಪೆಟ್ಟಿಗೆ (ಫ್ರಿಜ್) ಸೇರಿಸಿ, ಸಮಯಾನುಕೂಲದಲ್ಲಿ ಕೈಗೆ ಪ್ಲ್ಯಾಸ್ಟಿಕ್ ಕವರ್ ಹಾಕಿಕೊಂಡು, ಅವನ್ನು ಮೆಟ್ಟುಕತ್ತಿಯಲ್ಲಿ ಹೋಳುಮಾಡಿ, ಎಳೆ ತಿರುಳನ್ನೆಬ್ಬಿಸುತ್ತಿದ್ದಳು; ಪಾಕವಿಶೇಷಗಳಿಗೆ ಬಳಸುತ್ತಿದ್ದಳು. ಮತ್ತೆ ಬಲಿತ ಬೀಜಗಳನ್ನು ಒಮ್ಮೆ ತಣ್ಣೀರಿನಲ್ಲಿ ಚೆನ್ನಾಗಿ ತೊಳೆದು, ನಾಲ್ಕೆಂಟು ಬಿಸಿಲು ಕೊಟ್ಟು ದಾಸ್ತಾನು ಮಾಡುತ್ತಿದ್ದಳು. ಅವುಗಳಲ್ಲಿ ನಮ್ಮ ಅಗತ್ಯಕ್ಕೆ ಧಾರಾಳ ಎನ್ನಿಸುವಷ್ಟನ್ನು ಉಳಿಸಿಕೊಂಡು, ಋತುವಿನ ಮೊದಲ ಮಳೆ ಬರುವ ಮೊದಲು ಬಂದರಿನ ವ್ಯಾಪಾರಿಗಳಿಗೆ, ಸಿಕ್ಕ ದರಕ್ಕೆ ಮಾರುತ್ತಿದ್ದೆವು. ಮನೆಯಲ್ಲುಳಿದವನ್ನು ಅಗತ್ಯಕ್ಕೆ ತಕ್ಕಂತೆ, ಬಚ್ಚಲ ಒಲೆಯಲ್ಲಿ ಸುಟ್ಟು, ಕಲ್ಲುಕುಟ್ಟಿ ಒಡೆದು, ಪೊರೆಯನ್ನು ಚೂರಿಯಲ್ಲಿ ಕೆರೆಸಿ ಬಳಸಿಕೊಳ್ಳುತ್ತಿದ್ದೆವು. ಯಾವುದೋ ಮೇಳದಲ್ಲಿ ಸಿಕ್ಕ ಸರಳ ಸನ್ನೆ ತತ್ತ್ವದ ಬೀಜ ಕತ್ತರಿಯನ್ನು ಒಮ್ಮೆ ಕೊಂಡದ್ದಿತ್ತು. ಆದರೆ ಒಂದೇ ಋತುವಿನಲ್ಲಿ ಅದರ ತಳಕ್ಕೆ ಬಳಸಿದ ಪ್ಲೈವುಡ್ ಕುಟ್ಟೆ ಸುರಿದುಹೋದಮೇಲೆ `ಕಲ್ಕುಟ್ಟಿ’ ಖಾಯಂ ಆಯ್ತು!
ಗೇರು ಹಾಡಿಯ ಉತ್ತರ ಕೊನೆಯಲ್ಲಿ ಇಲಾಖೆ, ಪಕ್ಕಾ ಹನಿನೀರಾವರಿ ವ್ಯವಸ್ಥೆಯೊಡನೆ ಸಣ್ಣ ತೆಂಗಿನ ತೋಪೂ ಮಾಡಿದೆ. ಅಲ್ಲಿ ಒಂದೊಂದು ಎಳನೀರು ಸೇವೆ ಪೂರೈಸಿ, ಪಕ್ಕದ ಕುಮಾರಧಾರಾ ಪಾತ್ರೆಗಿಳಿದೆವು. ಮೊದಲೊಂದಷ್ಟು ನುಣ್ಣನೆ ಮರಳು, ಅನಂತರ ನದಿಪಾತ್ರೆಯೆಲ್ಲ ಕಗ್ಗಲ್ಲ ಹಾಸು, ಚೂರುಪಾರು. ಕಲಕಲಿಸುತ್ತ, ಸುಯ್ಲು, ಪಾತ, ಸುಳಿ, ಮಡು ಎಂದು ಬೀಸು ನೋಟಕ್ಕೆ ವೈವಿಧ್ಯ ತೋರಿದರೂ ಸೌಮ್ಯಸುಂದರವಾಗಿ, ಮುಗ್ದವಾಗಿಯೇ ಹರಿದಂತಿತ್ತು ಕುಮಾರಧಾರೆ. ಈ ಸಣ್ಣ ನೀರಮೊತ್ತಕ್ಕೆ ಇಷ್ಟೊಂದು ದೊಡ್ಡ ಪಾತ್ರೆಯೇ ಎಂದುಕೊಳ್ಳುತ್ತಾ ಬಗೆಗಣ್ಣು ತೆರೆದರೆ, ಅಲ್ಲಿನ ದರ್ಶನವೇ ಬೇರೆ! ಮಳೆಗಾಲದ ರುದ್ರ ನರ್ತನಕ್ಕೆ ಅಷ್ಟೂ ಅಗಲದಲ್ಲಿ ತೇಲಿ ಬಂದ ಮರ, ಕಸ, ಮಗುಚಿಬಿದ್ದ ಬಂಡೆ, ಕೊರೆದುಹೋದ ದಂಡೆ ಎಷ್ಟೂ ಕತೆಗಳು ಸಿಗುತ್ತವೆ. ತೀವ್ರ ವಿಷಾದಪೂರ್ವಕವಾಗಿ ಒಂದು ಮಾತು ಸೇರಿಸಲೇ ಬೇಕು – ಜೊತೆಗೇ ಮೇಲ್ದಂಡೆಯ ಉದ್ದಕ್ಕೂ ನಾಗರಿಕತೆ ಮಾಡಿದ ನದಿ-ಅವಹೇಳನದ ಸಾಕ್ಷಿಗಳೂ (ಮುಖ್ಯವಾಗಿ ವಿವಿಧ ರೂಪದ ಪ್ಲ್ಯಾಸ್ಟಿಕ್ ಕಸ) ಧಾರಾಳ ಕಾಣುತ್ತವೆ. ಪ್ರಕೃತಿಯೇ ನಾಚಿಕೊಂಡು ಎಷ್ಟನ್ನೋ ತತ್ಕಾಲೀನ ಹುಲ್ಲು ಪೊದರು ಬೆಳೆಸಿ, ಕಲ್ಲ ಸಂದುಗಳಲ್ಲಿ ಮರೆಸಿ, ಮರಳಿನಲ್ಲಿ ಹುದುಗಿಸಿ, ನೀರ ತಳದಲ್ಲಿ ಮುಳುಗಿಸಿಟ್ಟಿದೆ! ಅವೆಲ್ಲದರ ಯೋಚನೆ, ಸದ್ಯದ ಬೇಸಗೆಯ ಉರಿ ನಿವಾರಿಸುವಂತೆ, ಸ್ಥಳದ ಪ್ರಶಾಂತ ವಾತಾವರಣ, ನೀರಿನ ತಣ್ಪು ಮತ್ತು ಸ್ಫಟಿಕ ನಿರ್ಮಲತೆಯನ್ನು ಪುರಸ್ಕರಿಸುವಂತೆ ನೀರಾಟಕ್ಕಿಳಿಯುವುದರಿಂದ ನಮ್ಮನ್ನು ದೂರವಿಟ್ಟಿತು! ಮತ್ತು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿತ್ತು – ಹಾಗಾದರೆ ಈ ನೀರಿನಲ್ಲಿ ಕರಗಿದ ಮಾಲಿನ್ಯ ಎಷ್ಟಿರಬಹುದು?!
ಹರಿಪ್ರಸಾದರ `ಉಸ್ತುವಾರಿ ಸಚಿವ’, ನಮಗೆ ಹಲವು `ಪ್ರಾಕೃತಿಕ ಶಿಲ್ಪ’ಗಳನ್ನು ತೋರಿದರು. ಇಲ್ಲಿ ನೀರು ಋತುಮಾನದ ಸೊಕ್ಕಿನಂತೇ ಸಹಸ್ರಾರು ವರ್ಷಗಳ ಹರಿವಿನ ನಿರಂತರತೆಯನ್ನೂ ಉಳಿಸಿಕೊಂಡದ್ದರ ಫಲ – ಹೊಳೆಯ ಪಾತ್ರೆ ಒಂದು ಶಿಲ್ಪ ಪ್ರದರ್ಶನಾಂಗಣ! ಬಂಡೆಗಳಲ್ಲಿನ ವಿವಿಧ ವರ್ಣ ಮತ್ತು ಧಾರೆಗಳನ್ನು ಸ್ಫುಟಗೊಳಿಸಿದೆ, ಅಂಚುಹಾಸುಗಳನ್ನು ನಯಗೊಳಿಸಿದೆ. ಶೃಂಗಶ್ರೇಣಿಗಳಂತೆ ಉಬ್ಬುತಗ್ಗುಗಳು, ಸೀಳು, ಕೊರಕಲು, ಪೊಟರೆಯೆಂದು ಇಲ್ಲಿನ ನೀರ ಮಾಟದ ವೈಭವವನ್ನು ಹೇಳುತ್ತಿದ್ದರೆ ಪ್ರಸ್ತುತ `ಕತೆ’ ಮಹಾಕಾವ್ಯವಾದೀತು! ಇವುಗಳ ಒಟ್ಟಂದ, ನೀರಾಟದ ಮೋಜಿಗಾಗಿ ರಜಾದಿನಗಳಲ್ಲಿ ಆಸುಪಾಸಿನ ಊರುಗಳ ಮಂದಿ ಬರುವುದಿದೆಯಂತೆ. ಇಲಾಖೆಯ ವಠಾರದೊಳಗೆ ಖಾಸಗಿ ವಾಹನಗಳಿಗೆ ಅನುಮತಿ ಕೊಡುವುದಿಲ್ಲ. ಆದರೆ ಜನ, ಶಿಫಾರಸುಗಳ ಬಲ ನೋಡಿ `ಮರ್ಯಾದೆ’ಯಲ್ಲಿ ಹೊಳೆಸ್ನಾನ ಮತ್ತು ವನಭೋಜನ ಮಾಡುವವರನ್ನು ಸಹಿಸಿಕೊಳ್ಳುತ್ತದೆ. ಅವರಲ್ಲೂ ಕೆಲವರು, ಹೊತ್ತ ಅನಾವಶ್ಯಕ ಹೊರೆಗಳನ್ನು ಹೊಳೆಪಾತ್ರೆಯಲ್ಲಿ ಚೆಲ್ಲಿ, ಕೊಳಕು ಮಾಡುವುದು, ಗದ್ದಲ ಎಬ್ಬಿಸುದೂ ಇಲ್ಲದಿಲ್ಲ! ಹಾಗೆಂದು ಇವನ್ನೆಲ್ಲ `ಕ್ರಮಬದ್ಧ’ಗೊಳಿಸಿ, ಸಾರ್ವಜನಿಕರಿಗೆ ಮುಕ್ತಗೊಳಿಸುವ, ಅರ್ಥಾತ್ ಪ್ರವಾಸೋದ್ಯಮದ ಹೊಳಪು ಕೊಡುವ ಉತ್ಸಾಹ ಇಲಾಖೆಗೆ ಬರದಿರಲಿ ಎಂದು ಹಾರೈಸುತ್ತ ನಮ್ಮ ಹಾಡಿ ಸುತ್ತಾಟಕ್ಕೆ ಮಂಗಳ ಹಾಡಿದೆವು.
ಹರಿಗೆ ಮಂಗಳೂರಿಗೆ ಮರಳುವ hurry ಏನೂ ಇದ್ದಂತಿರಲಿಲ್ಲ. ಹಾಡಿ ಸುತ್ತಿದ ನಮ್ಮ ಉತ್ಸಾಹಕ್ಕೆ “ಬೆಳೆದದ್ದು ನೋಡಿದ ಮೇಲೆ ಪರಿಷ್ಕರಣೆ ನೋಡಬೇಡವೇ” ಎಂದು ಸೌಮ್ಯ ಸವಾಲು ಹಾಕಿ, ಅಪರಾಹ್ನಕ್ಕೆ ಅವರ ಮೂಡಬಿದ್ರೆ ಕಾರ್ಖಾನೆಯ ಭೇಟಿ ನಿಶ್ಚಯಮಾಡಿದರು. ಸುರುಚಿಯ ಯಾವುದೇ ದರ್ಶನ ವೈವಿಧ್ಯಕ್ಕೆ ಎಂದೂ ಮುಕ್ತವಾಗಿರುವ ನಾವು ಇಲ್ಲವೆಂದೇವೇ. ಕಾರೇರಿ ಪುತ್ತೂರಿಗಾಗಿ ನೇರಳಕಟ್ಟೆಯ ಖ್ಯಾತ ಹೋಟೆಲ್ ಸದ್ಗುರು ಸೇರಿದೆವು. ಗಂಟೆ ಇನ್ನೂ ಹನ್ನೆರಡೂವರೆ ಆಗಿದ್ದರೂ ಊಟವನ್ನೇ ಬಯಸಿದೆವು. ಆದರೆ ನಾನು ಫೇಸ್ ಬುಕ್ಕಿನಲ್ಲಿ ಇಲ್ಲಿನ `ಶುದ್ಧ ತುಪ್ಪದ ಹಲ್ವಾ’ ಬರೆದ ಮೇಲೆ ಯಜಮಾನರು ತೋರುವ ಹೆಚ್ಚಿನ ಕಾಳಜಿಗೆ ಈ ಸಲವೂ ಸೋತೆವು. ಊಟಕ್ಕೆ ಪಕೋಡ, ಬಾಳ್ಕದ ಮೆಣಸು ವಿಶೇಷವಾಗಿ ನಂಚಿಕೊಂಡೆವು. ತಟ್ಟೆ ತುಂಬ ಬಂದ ಬಿಸಿ ಜಿಲೇಬಿ ನಮ್ಮೊಳಗೇ ಹೇಗೆ ಕರಗಿತು ಎಂದೇ ತಿಳಿಯಲಿಲ್ಲ. ಮತ್ತೆ ಕಟ್ಟಿ ಒಯ್ಯುವ ಸಂತೋಷಕ್ಕೆ, ನಾವು ಬೆಂಗಳೂರ ನೆಪದಲ್ಲಿ (ಎರಡು ದಿನ ಕಳೆದು ಹೋಗಲಿದ್ದೆವು) ಹಲ್ವಾ ಹೇಳಿದರೆ, ಹರಿ ಸ್ವಂತಕ್ಕೊಂದು ಹೆಂಡತಿ-ಮಗಳಂದಿರಿಗೊಂದೊಂದು ಎಂದು ಹೆಸರಿಸಿ, ಮನೆಯಲ್ಲಿರುವ ಮೂರಕ್ಕೆ ಆರು ಹೊತ್ತಿಗಾಗುವಷ್ಟು ಕಟ್ಟಿಸಿಕೊಂಡರು! ಎಲ್ಲ ಮುಗಿದು ಕಾರೇರಿದ ಮೇಲೆ, “ಸಕ್ಕರೆ ಸರಿಯಲ್ಲ, ಹೆಚ್ಚು ತುಪ್ಪಕ್ಕಿಳಿದರೆ ಬೊಜ್ಜು ಖಾತ್ರಿ, ಮೈದಾ ಉತ್ಪನ್ನಗಳನ್ನು ತಿನ್ನಲೇ ಬಾರದು, ಕರಿದ ಪದಾರ್ಥಗಳು ಕ್ಯಾನ್ಸರ್ ಕಾರಕ….” ಎಂದಿತ್ಯಾದಿ ಪರಸ್ಪರ ಪೈಪೋಟಿಯಲ್ಲಿ ವೇದಾಂತ ಮಾತಾಡುತ್ತ ದಾರಿ ಕಳೆದೆವು.
ಬಂಟ್ವಾಳದಲ್ಲಿ ಕವಲೊಡೆದು, ಮೂಡಬಿದ್ರೆ ಹೊರವಲಯದಲ್ಲೇ ಇರುವ ವಿಜಯಲಕ್ಷ್ಮಿ ಗೇರು ಉದ್ದಿಮೆಯ ವಠಾರ ಸೇರಿದೆವು. ವಠಾರದ ದೊಡ್ಡ ಭಾಗ ಕಾರ್ಖಾನೆ ಮತ್ತು ವಿಸ್ತಾರ ಅಂಗಳ, ಉಳಿದಂತೆ ಅಂಚುಗಟ್ಟಿದಂತೆ ಆಡಳಿತ ವಿಭಾಗ. ಅಂಗಳದ ಒಂದು ಭಾಗದಲ್ಲಿ ಕಚ್ಚಾ ಗೇರುಬೀಜಗಳನ್ನು ಒಣ ಹಾಕಿದ್ದರು. ಹರಿಯ ಅಣ್ಣ – ಎ.ಕೆ.ರಾವ್, ನಿಯತ ವ್ಯವಹಾರ ಸಂಬಂಧ ವಿದೇಶ ಯಾತ್ರೆಗೆ ಹೋಗಿದ್ದರು; ನಮಗೆ ಪರಿಚಯ ಲಾಭ ತಪ್ಪಿತು. ಉಳಿದಂತೆ ನಮ್ಮ ಕಾರ್ಖಾನೆ ಕಲಾಪಗಳ ವೀಕ್ಷಣೆಗೆ ಏನೂ ಕೊರೆಯಾಗದಂತೆ, ಕೆಲಸಗಳ ನಿರ್ವಹಣಾಧಿಕಾರಿ ಜಗದೀಶ್ ವಿವರಣೆ ಸಹಿತ ಸುತ್ತಾಡಿಸಿದರು.
ವಿದೇಶೀ (ಕೆಲವು ಆಫ್ರಿಕನ್ ದೇಶಗಳು, ಇಂಡೋನೇಶ್ಯಾ ಇತ್ಯಾದಿ) ಕಚ್ಚಾ ಮಾಲು ಹೊರನೋಟಕ್ಕೆ ಆಕರ್ಷಕವಿಲ್ಲದಿದ್ದರೂ (ತುಸು ಕಪ್ಪು ಮತ್ತು ನೆರಿಗೆ ಬಿದ್ದಂತಿತ್ತು) ಯೋಗ್ಯ ಬಿಸಿಲು ಕಂಡಿರುತ್ತವೆ ಮತ್ತು ತಿರುಳು ಅಥವಾ ಬೊಂಡು ಚೆನ್ನಾಗಿಯೇ ಇರುತ್ತವಂತೆ. ವಾಸ್ತವದಲ್ಲಿ ವಿದೇಶಕ್ಕೆ ಖರೀದಿಗೆಂದು ಹೋದವರಿಗೆ ನೇರ ಬೆಳೆಗಾರರ ಸಂಪರ್ಕವೇ ಆಗುವುದಿಲ್ಲ. ಯಾಕೆಂದರೆ, ಆ ದೇಶಗಳಿಗೆ ಸಹಜ ಬೆಳೆಯಾದ ಗೇರು ಬಹುತೇಕ ವನೋತ್ಪತ್ತಿಯ ಸ್ಥಾನದಲ್ಲಿದೆ. ಅದನ್ನು ಪ್ರಾಥಮಿಕವಾಗಿ ಸಂಗ್ರಹಿಸುವವರು ವಿದೇಶೀ ವ್ಯವಹಾರಗಳಿಗೆ (ಬಳಕೆಯಿಲ್ಲದವರೆಂದಲ್ಲ,)
ವಿಶ್ವಾಸಾರ್ಹರೇ ಅಲ್ಲವಂತೆ! ಪಳಗಿದ ಮಧ್ಯವರ್ತಿಗಳು ಅತ್ತ ಮಾಲಿನ ಗುಣಮಟ್ಟ, ಇತ್ತ ಗಿರಾಕಿಗಳ ವಿಶ್ವಾಸ ಚೆನ್ನಾಗಿಯೇ ಕಾಯ್ದುಕೊಳ್ಳುತ್ತಾರೆ. ಅವರ ಮಾಲಿನ ಗುಣಮಟ್ಟದ ಖಾತ್ರಿ ನಮ್ಮ ಬಂದರಗಟ್ಟೆಯ ಪ್ರಮಾಣಪತ್ರದವರೆಗೂ ವ್ಯಾಪಿಸಿದೆ, ಎನ್ನುವ ಸೂಕ್ಷ್ಮವನ್ನು ಹರಿ ತುಂಬ ಪರಿಣಾಮಕಾರಿಯಾಗಿ ತಿಳಿಸಿದರು.
ವಿದೇಶೀ ಕಚ್ಚಾಮಾಲಿನ ಇನ್ನೊಂದು ಮುಖ್ಯ ಗುಣ, ನಮ್ಮ ಗೇರು ಕಾರ್ಖಾನೆಗಳ ಕಲಾಪವನ್ನು ವರ್ಷಪೂರ್ತಿ ನಡೆಸಿಕೊಡುವಂತದ್ದು. ನಮ್ಮ ಬಹುಪಾಲು ಕೃಷಿಕರು ಮೂರು ತಿಂಗಳ ಗೇರಿಗಿಂತ, ರಬ್ಬರಾದಿ ಪರ್ಯಾಯ ಉತ್ಪನ್ನಗಳ ದೊಡ್ಡ ಆಕರ್ಷಣೆಗೆ ಜಾರುತ್ತಲೇ ಇದ್ದಾರೆ. ಆದರೆ ಖಾದ್ಯ ವಿಶೇಷವಾಗಿ ಪರಿಷ್ಕೃತ ಗೇರಿನ ಬೇಡಿಕೆ ಸದಾ ಮೇಲೆಯೇ ಇರುವುದರಿಂದ ಕಾರ್ಖಾನೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ವಿಪರೀತದಲ್ಲಿ, ಹೆಚ್ಚು ಕಡಿಮೆ ಮೂರೇ ತಿಂಗಳ ಪ್ರಾದೇಶಿಕ ಫಸಲನ್ನು ನೆಚ್ಚಿ ವರ್ಷಪೂರ್ತಿ ಕಾರ್ಖಾನೆ ನಡೆಸಬೇಕಾದ ಸಂಕಷ್ಟದಿಂದ ಉದ್ದಿಮೆದಾರರನ್ನು ಪಾರುಗಾಣಿಸುತ್ತಿರುವುದೂ ಈ ವಿದೇಶೀ ಮಾಲುಗಳೇ. ವಿದೇಶದ ಬೀಜ ಸಂಗ್ರಹದ ದಿನಗಳು, ಮತ್ತವು ಭಾರತಕ್ಕೆ ಆಮದಾಗುವ ದಿನಗಳು ಇಲ್ಲಿನ ಬೆಳೆ-ಶೂನ್ಯ ದಿನಗಳೇ ಆಗಿವೆ.
ಪ್ರಾದೇಶಿಕ ಕಚ್ಚಾಮಾಲು, ಮಾಸಲು ಬಿಳಿ ಮತ್ತು ಪುಷ್ಟಿಯಾಗಿಯೇ ಕಾಣಿಸಿದರೂ ಕಾರ್ಖಾನೆಯಂಗಳದಲ್ಲಿ ಕನಿಷ್ಠ ಮೂರು ಬಿಸಿಲಾದರೂ ಕಾಣಲೇಬೇಕಂತೆ! ಇದು ಇಲ್ಲಿನ ವಾತಾವರಣದ ಪರಿಣಾಮವೂ ಇರಬಹುದು, ಹಸಿ ಮಾರಿದಷ್ಟೂ ಬೆಳೆಗಾರನಿಗೆ ತೂಕದಲ್ಲಿ ಲಾಭ ಎನ್ನುವ ಭ್ರಮಾಧಾರಿತವೂ ಇರಬಹುದು. ಮುಂಗಾರು ಅಪ್ಪಳಿಸುವ ಮೊದಲು, ಸುಮಾರು ಮೂರ್ನಾಲ್ಕು ತಿಂಗಳಷ್ಟೇ ಸಿಗುವ ಕಚ್ಚಾಮಾಲನ್ನು ದೊಡ್ಡ ಮೊತ್ತದಲ್ಲಿ ಸಂಘ್ರಹಿಸಿ, ಚೆನ್ನಾಗಿ ಒಣಗಿಸಿ, ಬೆಚ್ಚಗೆ ದಾಸ್ತಾನಿಟ್ಟುಕೊಳ್ಳುವುದು ಪ್ರತಿ ಕಾರ್ಖಾನೆಯ ಲಕ್ಷ್ಯವೇ ಆಗಿರುತ್ತದೆ. “ಹಾಗೊಮ್ಮೆ ಕಚ್ಚಾಮಾಲು ಮುಗಿದೇ ಹೋದರೆ, ನಿಮ್ಮ ಕಾರ್ಖಾನೆಯೊಳಗೆ ದುಡಿಯುತ್ತಿರುವ ಅಸಂಖ್ಯ ಕೈಗಳನ್ನು ಕಾಯ್ದುಕೊಳ್ಳುವುದು ಹೇಗೆ” ಎಂದು ನಾನು ಆತಂಕದ ಕಂಪಕ್ಕೇ ಕಾಲಿಟ್ಟಿದ್ದೆ. “ಇಲ್ಲ, ಇಲ್ಲ, ಬೆಳೆಶೂನ್ಯ ದಿನಗಳಲ್ಲಿ ಕಾರ್ಖಾನೆಗಳಿಗೆ ಕಚ್ಚಾಮಾಲಿನ ಕೊರತೆ ಕಾಡಿದರೆ, ಕೇವಲ ಹೆಚ್ಚಿನ ಬೆಲೆಗಾಗಿ ಕಚ್ಚಾ ಗೇರುಬೀಜವನ್ನು ದಾಸ್ತಾನು ಮಾಡಿಕೊಂಡ (ಕಾರ್ಖಾನೆಯಿಲ್ಲದ) ಮಧ್ಯವರ್ತಿಗಳು ಇದ್ದಾರೆ” ಎಂದು ಹರಿ ಕಾಯ್ದ!
ಗೇರುಮರಗಳ ತಳಿಬೇಧ, ಕಚ್ಚಾಮಾಲಿನ ದೇಶೀಯತೆ ಕಾರ್ಖಾನೆಗಳ ಕಾರುಭಾರನ್ನು, ಇನ್ನೂ ಮುಖ್ಯವಾಗಿ ಸಿದ್ಧಮಾಲನ್ನು ವಿಶೇಷ ಪ್ರಭಾವಿಸುವುದಿಲ್ಲ. ಕಚ್ಚಾಬೀಜ ಎಲ್ಲಕ್ಕೂ ಮೊದಲು ಉಗಿ ಕುಲುಮೆಗಳಲ್ಲಿ ಒಂದು ಹದಕ್ಕೆ ಬೇಯುತ್ತವೆ. ಅನಂತರ ಒಳಾಂಗಣದಲ್ಲಿ ಸಾಮಾನ್ಯ ಹವೆಯಲ್ಲಿ ಪೂರ್ಣ ತಣಿಯುತ್ತವೆ. ಮತ್ತೆ ಒಂದೊಂದೇ ಬೀಜದ ಸಿಪ್ಪೆ ಕತ್ತರಿಸಿ, ತಿರುಳು ಬೇರ್ಪಡಿಸುವ ಕೆಲಸ. ತೆಂಗು, ಅಡಕೆ, ಕಾಫಿ ಮುಂತಾದ ಕಾರ್ಖಾನೆ ಮಟ್ಟದ ಪರಿಷ್ಕರಣ ಕೇಳುವ ಕೃಷ್ಯುತ್ಪನ್ನಗಳಲ್ಲಿ ಹೊದಿಕೆ ಮೃದು, ಹೂರಣ ಗಟ್ಟಿ. ಗೇರುಬೀಜದಲ್ಲಿ ಸ್ಥಿತಿ ವ್ಯತಿರಿಕ್ತ. ಸ್ವಂತ ಉಪಯೋಗಕ್ಕಾದರೆ ಮನೆಗಳ ಬಚ್ಚಲೊಲೆಗೆ ಬೀಜ ಎಸೆದು, ಅರೆಬರೆ ಸುಟ್ಟು, ಕಲ್ಲುಗಳಲ್ಲಿ ಜಜ್ಜಿ ಹೋಳು ಹುಡಿಯಾದರೂ ಬೀಜದ ಪರಿಮಳದಲ್ಲಿ ಎಲ್ಲ ಮರೆತು ಬಿಡುತ್ತೇವೆ. ಆದರೆ ಕೊಳ್ಳುಗನ ಮಾರುಕಟ್ಟೆಯಲ್ಲಿ ತೋರಿಕೆಗೆ ಪ್ರಥಮ ಪ್ರಾಶಸ್ತ್ಯ. ಬೀಜದ ಒಳ ಹೊರಗಿನ ಗಾತ್ರ, ವ್ಯತ್ಯಾಸ ಏನಿದ್ದರೂ ಮೃದು ತಿರುಳು ಕತ್ತರಿಸುವುದಿರಲಿ, ಗಾಯವೂ ಆಗದಂತೆ ತೆಗೆಯುವುದು ತುಂಬ ಮುಖ್ಯ.
ಹಳೆಗಾಲದ ಕಾರ್ಖಾನೆಗಳಲ್ಲಿ ಶ್ರಮಿಕರು ಒಂದೊಂದೇ ಬೀಜವನ್ನು ವಿಶೇಷ ಕತ್ತರಿಗಳ ನಡುವೆ ಕೈಯಾರೆ ಒಡ್ಡಿ, ಸುಲಿಗೆಯನ್ನು ಕಾಲಿನಲ್ಲಿ ನಡೆಸುತ್ತಿದ್ದರು. ಆದರೆ ಇಂದು ವಿಜಯಲಕ್ಷ್ಮಿಯಲ್ಲಿ, ತಲಾ ಒಂದೂವರೆ ಲಕ್ಷದ ಮೇಲಿನ ಬೆಲೆಯ ಹತ್ತು ವಿದ್ಯುತ್ ಚಾಲಿತ (ಅಡಕತ್ತರಿ ಇದ್ದಂತೆ) ಗೇರ್ಕತ್ರಿ ಯಂತ್ರಗಳು, ದಿನವಿಡೀ ಗದ್ದಲವೆಬ್ಬಿಸುತ್ತ, ಹೋಲಿಕೆಯಲ್ಲಿ ಸಾಕಷ್ಟು ವೇಗವಾಗಿಯೇ ಬೀಜ ಸುಲಿಗೆಯನ್ನು ಹಗುರಗೊಳಿಸಿವೆ. ಅಲ್ಲೇ ಪಕ್ಕದಲ್ಲಿ ಹಳೆಗಾಲದ ಮಾನವ ಚಾಲಿತ ಗೇರ್ಕತ್ರಿಯೊಂದಿತ್ತು. ಮಹಿಳೆಯೊಬ್ಬರು ಅದನ್ನು ಕೇವಲ ನಮ್ಮ ನೋಟಕ್ಕಾಗಿ ಚಲಾಯಿಸಿಯೂ ತೋರಿಸಿದರು. ಇನ್ನೂ ಸುಲಭದ – ತುಸು ಪರಿಷ್ಕೃತ ಅಡಕತ್ತರಿಯಂತೇ ಇರುವ, ಕೇವಲ ಮಾಲುಪರೀಕ್ಷಾ ಹಂತಕ್ಕಷ್ಟೇ ಬಳಸಬಹುದಾದ ಗೇರ್ಕತ್ರಿಯೂ ಇವರಲ್ಲಿತ್ತು. ಔದ್ಯಮಿಕ ಮಟ್ಟದಲ್ಲಿ ಇದನ್ನೇ ಬಳಸುವುದಿದ್ದಲ್ಲಿ ಮುಷ್ಠಿಕಾಳಗ ಪಟುಗಳನ್ನೇ ಕಾರ್ಖಾನೆ ಸಾಕಬೇಕಾದೀತು! (ಸಾಮಾನ್ಯರಿಗೆ ಸಾಕುಬೇಕಾದೀತು!!)
ಯಾಂತ್ರಿಕ ಗೇರ್ಕತ್ರಿಯ ಮಡಿಲಿನ ಬಾಲ್ದಿಗಳಿಂದ ಗೇರೆಣ್ಣೆ ಒಸರುವ ಕಚ್ಚಾಮಾಲನ್ನು ಹೆಂಗಳೆಯರು ತಮ್ಮೆದುರಿನ ಹರಿವಾಣಗಳಿಗೆ ಸುರಿದುಕೊಳ್ಳುತ್ತಾರೆ. ಅದು ಬೊಂಡು, ಸಿಪ್ಪೆ, ಜೊಳ್ಳು, ಕೆಟ್ಟು, ಅಪರೂಪಕ್ಕೆ ಕತ್ತರಿ ತಪ್ಪಿಸಿಬಂದ ಇಡೀ ಮುಂತಾದವುಗಳ ಮಿಶ್ರಣ. ಹೆಂಗಳೆಯರು ಅವನ್ನು ಕೈಯಾರೆ ವಿಂಗಡಿಸಬೇಕು. ಮತ್ತೂ ಮುಖ್ಯ ವಿಷಯ, ಬಹುತೇಕ ಬೊಂಡುಗಳು ಸಿಪ್ಪೆಯ ಒಂದರ್ಧಕ್ಕೆ ಅಂಟಿಕೊಂಡೇ ಇರುತ್ತವೆ. ಅವನ್ನು ಪುಟ್ಟ ದಬ್ಬಣದಂಥ ಹತ್ಯಾರು ಹಿಡಿದು, ತಿವಿದೆಬ್ಬಿಸುವುದೂ ಆಗಬೇಕು. ನಿಮಗೆ ತಿಳಿದೇ ಇದೆ, ಗೇರೆಣ್ಣೆಯ ಹನಿ ಬಿದ್ದರೂ ಮನುಷ್ಯ ಚರ್ಮ ಮುನಿದು ಹುಣ್ಣಾಗುತ್ತದೆ. ಹಾಗಾಗಿ ಈ ಶ್ರಮಿಕರಲ್ಲಿ ಬಹುಮಂದಿ ಕೈಗವುಸು ಬಳಸುತ್ತಾರೆ. ಆದರೆ ದಬ್ಬಣ ಚಲಾಯಿಸುವ ಸೂಕ್ಷ್ಮ ಕೆಲಸಕ್ಕೆ ಕೈಗವುಸು ಸಹಕಾರಿಯಲ್ಲ ಎಂದೇ ರೂಢಿಯಾದವರು, ಒತ್ತಿನಲ್ಲಿ ತಾಳೆ ಎಣ್ಣೆಯ ಗಿಂಡಿ ಇಟ್ಟುಕೊಂಡು, ಆಗಿಂದಾಗ್ಗೆ ತಮ್ಮ ಹಸ್ತಗಳಲ್ಲಿ ಅದರ ಪದರ ಸರಿಯಾಗುಳಿಯುವಂತೆ ಮುಳುಗಿಸಿ ತೆಗೆಯುತ್ತಿರಬೇಕಾಗುತ್ತದೆ. ಅಷ್ಟಾಗಿಯೂ ಯಾವುದೇ `ಗೇರು ಕಾರ್ಖಾನೆ ಹುಡುಗಿ’ಯ ಕೈ ಪೂರ್ಣ ಆರೋಗ್ಯದ್ದೆನ್ನುವಂತಿಲ್ಲ. ಇದು ಮಾಲಿಕರ ಶೋಷಣೆಯಲ್ಲ, ಎಲ್ಲರಿಗೂ ತಿಳಿದಂತೆ ವೃತ್ತಿ-ಸಂಕಷ್ಟ. ಬಹುತಾರಾ ಮಂದಿರಗಳ, ವಾತನಿರ್ಬಂಧಿತ ಮದಿರಾಲಯದಲ್ಲಿ, ನಸು ಹಳದಿಗೆ ಹುರಿದ, ನರುಗಂಪಿನ ಸುಪುಷ್ಟ ಮಸಾಲಾ ಗೇರುಬೀಜವನ್ನು, ಚಿಮ್ಮಟದಲ್ಲಿ ಎತ್ತಿ ಬಾಯ್ಗಿಕ್ಕಿ, ಮೃದುವಾಗಿ ಹಲ್ಲೂರಿ ಚಪ್ಪರಿಸುವವರಿಗೆ ಈ ತಾಳೆ ಎಣ್ಣೆ ಸವರಿದ ಕೈಯ ಸೋಂಕು ಗ್ರಹಿಕೆಗೆ ನಿಲುಕುವುದುಂಟೇ?!
ನಿಮಗೆ ತಿಳಿದಂತೆ, ಗೇರು ಸಿಪ್ಪೆ ತನ್ನ ಮಂದ ತೈಲಗುಣದಲ್ಲಿ ಅಡಿಕೆ, ತೆಂಗು, ಕಾಫಿ ಸಿಪ್ಪೆಗಳಿಗೆ ವ್ಯತಿರಿಕ್ತವಾಗಿ ಧಾರಾಳಿ ಮತ್ತು ಬಲು ಉಗ್ರವಾದಿ! ಸಹಜವಾಗಿ ಅದನ್ನು ಸೌಂದರ್ಯವರ್ಧಕ, ಔಷಧವೇ ಮೊದಲಾದ ಉದ್ಯಮಗಳು ತುಂಬ ಬೆಲೆಯುಳ್ಳ ಮಾಲಾಗಿಯೇ ಪರಿಗಣಿಸುತ್ತವೆ. ಆದರೆ ಆ ಎಣ್ಣೆ ಪ್ರತ್ಯೇಕಿಸುವ ಕೆಲಸವನ್ನು ಬಹುತೇಕ ಬೀಜ ಉದ್ದಿಮೆಗಳು ವಹಿಸಿಕೊಳ್ಳುವುದಿಲ್ಲ. ವಿಜಯಲಕ್ಷ್ಮಿಯ ಗೇರು ಸಿಪ್ಪೆಯೂ ಯೋಗ್ಯ ಮೌಲ್ಯಕ್ಕೆ, ಲಾರಿಲೋಡುಗಳಲ್ಲಿ ಎಣ್ಣೆ ಕಾರ್ಖಾನೆಗಳಿಗೆ ಮಾರಿಹೋಗುತ್ತವೆ. ಎಣ್ಣೆ ಬಸಿದೂ ಉಳಿದ ಚರಟವನ್ನು ಆ ಕಾರ್ಖಾನೆ ಯಾಂತ್ರಿಕವಾಗಿ ಒತ್ತಿ, ದೊಡ್ಡ ಇಟ್ಟಿಗೆಗಳಂತೆ ಪೆಂಡಿ ಮಾಡಿ, ಬೀಜ ಕಾರ್ಖಾನೆಗಳಿಗೇ ಮರು ಮಾರುತ್ತಾರೆ. ಅವು ಇಲ್ಲಿನ ಕುದಿಹಂಡೆಗಳಿಗೆ ಬಹು ಪರಿಣಾಮಕಾರಿ ಉರುವಲು.
ಮುಂದಿನ ಹಂತ ಬೀಜಪೊರೆಯದ್ದು. ಇದು ಬಹುತೇಕ ಯಾಂತ್ರಿಕ ಕಾರ್ಯ. ಸುಲಿದು ಬಂದ ಶುದ್ಧ ಬೊಂಡುಗಳನ್ನು ಉಗ್ರ ಉಷ್ಣ ಸ್ಥಾವರದಲ್ಲಿ ಕೆಲ ಗಂಟೆಗಳ ಕಾಲ ಬಂಧಿಸಿ ಮತ್ತೆ ದಿನಪೂರ್ತಿ ತಣಿಯಲು ಬಿಡುತ್ತಾರೆ. ಅನಂತರ ಅವನ್ನು ಇನ್ನೊಂದೇ ಯಂತ್ರದೊಳಗೆ ರಭಸದ ಗಾಳಿಸುಳಿಗೆ ಒಡ್ಡುತ್ತಾರೆ. ಬಿಸಿಗೆ ಗರಿಗಟ್ಟಿದ ಬೊಂಡಿನ ಪೊರೆ ಕಳಚಿ ಹೋಗುತ್ತದೆ. ಈ ಪೊರೆ-ವಿಮುಕ್ತಿಯೊಡನೆ ಕೆಲವು ಬೊಂಡುಗಳ ದ್ವಿದಳ ಪ್ರತ್ಯೇಕಗೊಳ್ಳುವುದು ಮತ್ತೂ ಕೆಲವು ಚೂರಾಗುವುದೆಲ್ಲ ಇದ್ದದ್ದೇ. ಅವೆಲ್ಲ ಇದೇ ಯಂತ್ರದ ವಿವಿಧ ಕಣ್ಣುಗಳ ವಂದರಿಗಳಲ್ಲಿ ಹಾಯ್ದು, ಬಹುತೇಕ ಗಾತ್ರಗಳ ಆಧಾರದಲ್ಲಿ ವಿಂಗಡಣೆಗೊಂಡೇ ಸಿಗುತ್ತವೆ.
ಅಂತಿಮ ಹಂತ – ತೋರಿಕೆ ಮಾರುಕಟ್ಟೆಯ ಆವಶ್ಯಕತೆಗನುಗುಣವಾಗಿ `ಗುಣ ನಿರ್ಧಾರ’. ಗಮನಿಸಿ, ಇದು ರುಚಿಗೆ ಸಂಬಂಧಿಸಿದ್ದಲ್ಲ, ತೋರಿಕೆಗೆ ಮಾತ್ರ. ಬೊಂಡುಗಳ ವರ್ಣಛಾಯೆ (ಬಿಳಿ ಹಳದಿಗಳ ನಡುವೆ) ಮತ್ತು ಕಳಚಿಕೊಳ್ಳಲಾಗದ ಕಲೆ ಹೊತ್ತ ಕೆಲವು ಬೊಂಡುಗಳನ್ನು ಇಲ್ಲಿ ಪರಿಣಿತರು ಬಹುಚುರುಕಾಗಿ, ಕಣ್ಣಾರೆ ಮತ್ತು ಕೈಯಾರೆ ಪ್ರತ್ಯೇಕಿಸುತ್ತಾರೆ. ಮತ್ತವು ಗಾತ್ರ ರೂಪಕ್ಕನುಗುಣವಾಗಿ ಹಲವು ವೃತ್ತಿನಾಮಗಳನ್ನು ಹೊತ್ತು ರವಾನೆಗೆ ಸಜ್ಜುಗೊಳ್ಳುತ್ತವೆ. ಪೂರ್ಣ ಉಂಡೆ, ಕಲೆಯಿಲ್ಲದ ಕೆನೆ ಬಣ್ಣದ ಬೀಜಗಳಿಗೆ ಎಲ್ಲಕ್ಕೂ ಮಿಗಿಲಾದ ಪ್ರತಿಷ್ಠೆಯ ಬೆಲೆಯೇನೋ ಇದೆ. ಆದರೆ ನಿಜ ಘನ ಬೇಡಿಕೆಯಿರುವುದು ತಿಂಡಿ ತಯಾರಕರಿಂದ – ಅದು ಹೋಳುಗಳಿಗೇ. “ಕಬ್ಬು ಡೊಂಕಾದರೇನು, ಸಿಹಿ ಡೊಂಕೇ ವಿಠಲಾ, ಬೀಜಾ ಚೂರಾದರೇನು, ರುಚಿ ಮಂಕೇ ವಿಠಲಾ!!” ಎಂದು ನಾವು ಮನಸ್ವೀ ಹಾಡಿಕೊಂಡೆವು. ಕಾರ್ಖಾನೆಯ ಪ್ರಧಾನ ಲೆಕ್ಕಪತ್ರಾಧಿಕಾರಿ ಶ್ಯಾಮಲಾ ನಮಗೆ (ಅತ್ರಿಯಿಂದ) ಪೂರ್ವಪರಿಚಿತರೇ ಇದ್ದರು. ನಮ್ಮ ಅನಿರೀಕ್ಷಿತ ಭೇಟಿಯ ಸಂತೋಷಕ್ಕೆ ಅವರು ಸ್ವತಃ ತಯಾರಿಸಿ ಕೊಟ್ಟ ಚಾ ಕುಡಿದು, ವಿದಾಯ ಹೇಳಿದೆವು.
ಗೇರು ಹಾಡಿಗಳ ಚಾರಣಕ್ಕೆಂದು ಹೊರಟ ನಮಗೆ ನಿರಾಯಾಸವಾಗಿ ಗೇರು ಚೂರ್ಣಾನುಭವದವರೆಗೂ ದಕ್ಕಿತ್ತು. ನಾವು ನಮ್ಮದೇ ಅಭಯಾರಣ್ಯದಲ್ಲಿ ಅಯಾಚಿತ ಸಿಕ್ಕ ಗೇರು ಮರ ಮತ್ತೆ ಬೀಜಗಳನ್ನೂ (ತಿನ್ನುವ ರುಚಿ ಧಾರಾಳ ಇದ್ದರೂ) ದುರ್ದಾನ ಪಡೆದವರಂತೆ ಉಪೇಕ್ಷಿಸಿದ್ದಿತ್ತು. ಆದರೆ ಅದಿಲ್ಲಿ ಕೃಷಿ ಮತ್ತು ಪರಿಷ್ಕರಣೆಯ ಉನ್ನತಿಯಲ್ಲಿ ಕೊಟ್ಟ ದರ್ಶನದಿಂದ ಧನ್ಯರಾಗಿ, ಮಂಗಳೂರಿಸಿದೆವು.
ಆಹಾ! ಗೇರುಬೀಜದ ಸಸಿಗಳನ್ನು ಮಾಡುವುದರಿಂದ ಹಿಡಿದು ಕೊಯ್ಲು, ಸಂಸ್ಕರಣೆ, ಮಾರುಕಟ್ಟೆ ಜತೆಗೆ ನಿಮ್ಮ ಅನುಭವವನ್ನು ನವಿರಾಗಿ ಬೆರೆಸಿ, ನಿಮ್ಮದೇ ವಿಶಿಷ್ಟವಾದ (ನನಗೆ ಬಹಳ ಇಷ್ಟವಾದ) ಶೈಲಿಯಲ್ಲಿ ಸೊಗಸಾಗಿ ವಿವರಿಸಿದ್ದೀರಿ. ಧನ್ಯವಾದಗಳು ನಿಮಗೆ.
ಗೇರುಕೃಷಿಯ ಬಗ್ಗೆ ಇಷ್ಟೊಂದು ವಿವರವಾಗಿ ಬರೆವ ತಾಳ್ಮೆ ಅಶೋಕವರ್ಧನರಿಗೇ ಸೈ ! ನಮ್ಮ ಮನೆಯನ್ಗಣದ ಮರದಲ್ಲಿ ಈ ವರ್ಷ ಬಂಪರ್ ಕ್ರಾಪ್ , ಅಶೋಕ. ನೆರೆಮನೆಗಳಿಗೆ ಕೊಡುವುದು ನನ್ನ ಸಂತಸವಾಯ್ತು. ಉದುರಿದ್ದನ್ನು ಹೆಕ್ಕಿ ಒಳಬನ್ದು ಪುನಃ ಹೊರ್ಹೋಗುವಶ್ತರಲ್ಲಿ ಪುನಃ ಹಣ್ಣಿನ ಸುರಿಮಳೆ ! ಎಲ್ಲೆಡೆ ಈ ವರ್ಷ ಹೀಗೇನು? ಆದರೂ ಬೀಜ ಅಷ್ಟು ದುಬಾರಿ ಏಕೆ? ಶ್ರಮಿಕರಿಗೆ ತಕ್ಕ ವರಮಾನ ಸಿಗುವುದೇ ??
Very nicely explained TQVM
ಗೇರು ಕೃಷಿಯ ಬಗ್ಗೆ ನಾವು ಒಂದಷ್ಟು ತಿಳಿದುಕೊಂಡಿದ್ದರೂ ನಿಮ್ಮ ವಿವರಣೆಗಳು ಅದಕ್ಕೂ ಹೆಚ್ಚಿನ ಮಾಹಿತಿಯನ್ನು ನೀಡಿದವು. ಲೇಖನ ಚೆನ್ನಾಗಿದೆ.
ಗೇರು ಬೀಜ ಸುಟ್ಟು ತಿನ್ನುವಾಗ ಸೂಸುವ `ಘಂ’ ಎಂಬ ಪರಿಮಳ ಇಡೀ ಲೇಖನವನ್ನು ಓದುವಾಗ ಆಘ್ರಾಣಿಸಿದಂತಾಯಿತುಗೇರುಬೀಜ ಪೋರ್ಚುಗೀಸರಿಂದಾಗಿ ಸುಮಾರು ಐನೂರು ವರ್ಷಗಳಿಂದೀಚೆಗೆ ನಮಗೆ ಪರಿಚಿತವಾದರೂ ನಾವು ಮಾತ್ರ ಇದು ನಮ್ಮದೇ ಸ್ವಾಭಾವಿಕ ಸಸ್ಯವೆಂದೇ ಪರಿಗಣಿಸಿದ್ದೇವೆ. ವಿಷು ಹಬ್ಬಕ್ಕೆ ಪಾಯಸಕ್ಕೆ ಗೇರುಬೀಜ ಅದರಲ್ಲು ಎಳೆ ಗೇರುಬೀಜ ಹಾಕಬೇಕೆಂಬ ಸಂಪ್ರದಾಯಕ್ಕೆ ಬಹುಶಃ ನೂರು ವರ್ಷದ ಇತಿಹಾಸವಿರಬಹುದೇನೋ? ೬೦-೭೦ ವರ್ಷಗಳ ಹಿಂದೆ ಸಾವಿರಾರು ಹೆಂಗುಸರು ದುಡಿಯುತ್ತಿದ್ದ ಕಾರ್ಖಾನೆಗಳು ಬಂದ್ ಆದ ಮೇಲೆ, ನಮ್ಮ ಜಿಲ್ಲೆಯಲ್ಲಿ ಸುಮಾರು ೬೦೦ಕ್ಕೂ ಹೆಚ್ಚು ಸಣ್ಣ ಕಾರ್ಖಾನೆಗಳು ಇವೆ ಎಂದು ತಿಳಿದು ಆಶ್ಚರ್ಯವಾಯಿತು. ನಮಗೆ ಸಮೀಪದ ಶಕ್ತಿ ನಗರದಲ್ಲೇ ಮೂರು ಗೇರು ಬೀಜ ಕಾರ್ಖಾನೆಗಳಿವೆ. ಈ ಎಲ್ಲ ಕಂಪೆನಿಗಳು ೫೦% ಮಾನವ ಶ್ರಮವನ್ನು ಅವಲಂಬಿಸಿದರೆ, ಉಳಿದ ಭಾಗವನ್ನು ಯಂತ್ರದ ಆಶ್ರಯದಲ್ಲಿ ನಿರ್ವಹಿಸುತ್ತಿದ್ದವು. ಮೂವತ್ತು ವರ್ಷಗಳ ಹಿಂದೆ ನಂತೂರಿನ ಬಸ್ ಸ್ಟ್ಯಾಂಡಿನ ಹಿಂಬದಿಯಲ್ಲಿದ್ದ ಒಂದು ಕ್ರೈಸ್ತ ಕುಟುಂಬ, ತನ್ನ ಮನೆಯಲ್ಲೇ ಯಾವ ಯಂತ್ರದ ಸಹಕಾರವಿಲ್ಲದೆ, ಗೇರು ಬೀಜವನ್ನು ಹುರಿದು, ಕೈಯಲ್ಲೇ ಸಿಪ್ಪೆ ತೆಗೆದು ಮಾರುತ್ತಿದ್ದರು. ಬೇಡಿಕೆ ಬಂದರೆ, ಸಿಪ್ಪೆ ಸಮೇತವೂ ಇವರು ಮಾರುವುದಿತ್ತು. ನಾನು ಪ್ರತಿವರ್ಷ ನನ್ನ ಗೆಳತಿಯರಿಗೆ, ದೂರದ ಬಂಧುಗಳಿಗೆ ಇಲ್ಲಿಂದಲೇ ಗೇರುಬೀಜ ತರುತ್ತಿದ್ದುದು ನೆನಪಾಗುತ್ತದೆ. ಈಗ, ಅಲ್ಲಿನ ಹಿರಿಯರು ಅಸ್ವಸ್ಥರಾದ ಮೇಲೆ, ಈ ಕೈಗಾರಿಕೆಯನ್ನೇ ನಿಲ್ಲಿಸಿದ್ದಾರೆ. ಮನೆಯಲ್ಲೇ ಮಾಡುವ ಈ ಕೆಲಸಕ್ಕೆ ವಿಶೇಷ ಚಾಕಚಕ್ಯತೆ ಬೇಕು. ಒಂದೇ ಒಂದು ಬೀಜ ಸುಟ್ಟು ಕರಕಲಾಗದಂತೆ ಹುರಿಯುವ ಜಾಣ್ಮೆ ಅವರಿಗಿತ್ತು. ಹಾಗೇ ಎಳೆಗೇರುಬೀಜದ ತಿರುಳನ್ನು ಇಡಿಯಾಗಿ ಹೊರತೆಗೆಯುವುದಕ್ಕೂ ಸೂಕ್ಷ್ಮತೆ ಬೇಕು. ಇಂತಹ ಜಾಣ್ಮೆ ನನ್ನ ಅಮ್ಮನಲ್ಲಿತ್ತು ಎಂಬುದು ಈ ಸಂದರ್ಭದಲ್ಲಿ ನೆನಪಾಗುತ್ತದೆ.ಇನ್ನು ಗೇರು ಹಣ್ಣುಗಳು ಕೊಳೆಯುವ ಬಗ್ಗೆ ಹೇಳಿದ್ದೀರಿ. ಹಿಂದೆ ಹಳ್ಳಿಗಳಲ್ಲಿ ಗೇರು ಹಣ್ಣಿನ ಸೀಸನ್ನಿನಲ್ಲಿ ಅದರಿಂದ ಶರಾಬು ಮಾಡುವ ಕಾಯಕವು ನಡೆಯುತ್ತಿತ್ತು. ಕಾಣೆಮಾರಿನಲ್ಲಿ ನನ್ನಪ್ಪನು ಶರಾಬು ಮಾಡಿದ್ದು, ಅದು ಸುದ್ಧಿಯಾಗಿ ಅಲ್ಲಿಗೆ ಪೋಲಿಸ್ ರೈಡ್ ಆದದ್ದು, ರೈಡಿಗೆ ಬಂದ ಪೋಲಿಸರಲ್ಲಿ ಒಬ್ಬರು ನನ್ನ ತಾಯಿಯ ಕಡೆಯಿಂದ ಸಂಬಂಧಿಕರೇ ಆಗಿದ್ದದ್ದು, ಅವರಿಂದ ಪ್ರಭಾವ ಬಳಸಿ ಕೇಸ್ ಹಳ್ಳ ಹಿಡಿಯುವಂತೆ ಮಾಡಿದ್ದು ಇವೆಲ್ಲಾ ನಾನು ಕೇಳಿದ ಕತೆಗಳು. ಪಾನನಿಷೇಧವಿದ್ದ (ಬ್ರಿಟಿಷರ) ಕಾಲದಲ್ಲಿ ಇಂತಹ ಕೇಸುಗಳು ಸಾಮಾನ್ಯವಾಗಿದ್ದವು. ನಾನು ಜೈಲಿನ ಕಡತಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾಗ ಗಮನಿಸಿದ ವಿಷಯವೆಂದರೆ ಕೊಲೆ, ದರೋಡೆಗಳಿಗಿಂತ ಶರಾಬು ಅಂದರೆ ಕಳ್ಳಭಟ್ಟಿ ತಯಾರಿ ಮತ್ತು ಕುಡುಕರನ್ನು ಬಂಧಿಸಿದ ಪ್ರಕರಣಗಳೇ ಜಾಸ್ತಿಯಾಗಿ ದಾಖಲಾಗಿದ್ದವು. ಕುಡಿತವನ್ನು ನಿಯಂತ್ರಿಸಿದಷ್ಟು ಪ್ರಬಲ ವೇಗದಲ್ಲಿ ಅದು ಹೆಚ್ಚಿದ್ದನ್ನು ನಾನು ನನ್ನ ಜೀವನದಲ್ಲಿ ಕಾಣುತ್ತಾ ಬಂದಿದ್ದೇನೆ. ಇನ್ನು ಒಂದು ವಿಶೇಷ ಗೊತ್ತಾ? ಈ ಗೇರು ಹಣ್ಣಿನ ಶರಾಬನ್ನು ಮನೆಯಲ್ಲಿ ಮಾಡಿ ಅದನ್ನು ಔಷಧಿಗೆಂದು ಬಳಸುವವರೂ ಇದ್ದರು. ಹೆರಿಗೆಯ ಸಮಯದಲ್ಲಿ ಹೆಂಗಸರಿಗೆ ಇದನ್ನು ಕೊಡುವ ಕ್ರಮವೂ ಇತ್ತು. ಹೀಗೆ ಹೆರಿಗೆಯ ಸಮಯದಲ್ಲಿ ಗೇರುಹಣ್ಣಿನ ಶರಾಬು ಕುಡಿದು ಅಭ್ಯಾಸ ಆದವರು, ಚಟ ಹತ್ತಿಸಿಕೊಂಡು ಮತ್ತೆ ತೊಟ್ಟೆ ಸರಾಯಿಗೆ ಶರಣಾದದ್ದನ್ನೂ ಕಂಡಿದ್ದೇನೆ. ಗೇರು ಹಣ್ಣಿನಿಂದ ಸರಾಯಿ ಮಾಡುವುದನ್ನು ಪೋರ್ಚುಗೀಸರೇ ಕಲಿಸಿದರೇ ಅಥವಾ ಸ್ಥಳೀಯ ವಿಜ್ಞಾನಿಗಳ ಸಂಶೋಧನೆಯೇ?ಕುಡುಕತನಕ್ಕೆ ಬಹಳ ಪ್ರಾಚೀನ ಇತಿಹಾಸವಿದೆ ನಮ್ಮಲ್ಲಿ. ಯಾದವರು ಕುಡಿದು ಬಡಿದಾಡಿಯೇ ನಾಶವಾದರು ಎಂದು ಕತೆಯಿದೆ. ಆ ಕಾಲದಲ್ಲಿ ಯಾವುದರಿಂದ ಶರಾಬು ಮಾಡುತ್ತಿದ್ದರು? ಗೇರು ಹಣ್ಣಿನಿಂದಂತೂ ಅಲ್ಲ. ಯಾಕೆಂದರೆ ಆಗ ಗೇರು ಭಾರತಕ್ಕೇ ಬಂದಿರಲಿಲ್ಲ. ಗೇರು ಹಣ್ಣನ್ನಷ್ಟೇ ಪಾಶ್ಚಾತ್ಯರು ನಮಗೆ ತಂದುಕೊಟ್ಟರು, ಕುಡುಕತನವನ್ನಲ್ಲ. ನಮ್ಮಲ್ಲಿ ಗೋವಾ ಪ್ರವಾಸದ ಪ್ರಸಿದ್ಧಿಯ ಹಿಂದೆ ಗೇರು ಹಣ್ಣಿನ ಫೆನ್ನಿಯ ಪ್ರಥಮಾಕರ್ಷಣೆಯನ್ನು ಸುಲಭದಲ್ಲಿ ತಳ್ಳಿ ಹಾಕುವಂತಿಲ್ಲ, ಅಲ್ಲವೇ?`ಶೆವಿರೆ’ ಸ್ಥಳನಾಮವೋ ಸರ್ನೇಮೋ? ಶೆವಿರೆ ಸೋದರರು ಗೇರಿನಲ್ಲಿ ಇಷ್ಟೆಲ್ಲ ದೊಡ್ಡ ಸಾಹಸ ಸಾಧನೆ ಮಾಡುತ್ತಿದ್ದಾರೆ. ಅವರು ಕೊಳೆತು ಹಾಳಾಗಿ ಹೋಗುವ ಹಣ್ಣುಗಳ ಬಗ್ಗೆಯೂ ಏನಾದರೂ ಸಂಶೋಧನೆ, ಉತ್ಪನ್ನಗಳನ್ನು ಮಾಡಬಹುದೆಂದು ಕಾಣುತ್ತದೆ. ಕೇರಳದಲ್ಲಿ ಯಾರೋ ಈ ನಿಟ್ಟಿನಲ್ಲಿ ಕೆಲಸ ಮಾಡಿರುವುದನ್ನೂ ಕೇಳಿದ್ದೇನೆ. ಗೇರು ಕೃಷಿಯಲ್ಲ ಎಂದಿದ್ದೀರಿ. ಆಫ್ರಿಕದಲ್ಲಿ ಅದು ಸ್ವಾಭಾವಿಕ ಸಸ್ಯವಾಗಿರಬಹುದು. ನಾವು ಬೀಜ ಬಿತ್ತಿ, ಸಸಿ ಮಾಡಿಯೇ ಗುಡ್ಡೆಗಳಲ್ಲಿಡುವುದು ಕೃಷಿಯಲ್ಲದೆ ಮತ್ತೇನು? ಗೇರು ಕೃಷಿಯ ಬಗ್ಗೆ ಮಾತಾಡುವಾಗ ಕಾಸರಗೋಡು ಪುತ್ತೂರು ಸೀಮೆಯಲ್ಲಿ ಅದರ ನೆಪದಲ್ಲಿ ಎಂಡೋಸಲ್ಫಾನ್ ಪೀಡಿತರಾದವರ ಮುಖಗಳೂ ನೆನಪಾಗುತ್ತವೆ. ಗೇರು ಕೃಷಿಯನ್ನು ಮಾಡುವವರು ಸ್ಥಳೀಯರನ್ನು `ಅಣುಬಾಂಬು’ ಸಂತ್ರಸ್ತರನ್ನಾಗಿಸದಿರಲಿ ಎಂಬುದೇ ನಮ್ಮ ಹಾರೈಕೆ. ಗೇರು ಬೀಜದ ಸಿಪ್ಪೆಯಿಂದ ಎಣ್ಣೆ ತೆಗೆದ ಮೇಲೆ ಉಳಿದ ಹಿಂಡಿ ಉತ್ತಮ ಉರುವಲಾಗಿ ಬಳಕೆಯಾಗುತ್ತದೆ. ನನ್ನ ಬಾಲ್ಯದಲ್ಲಿ ಆಹಾರವನ್ನು ಬೇಯಿಸುವುದಕ್ಕೆ ಗೇರು ಹಿಂಡಿಯೇ ಬಹುತೇಕರ ಮನೆಯಲ್ಲಿ ಬಳಸಲಾಗುತ್ತಿತ್ತು. ಆ ಮರದಿಂದ ಒಂದು ರೀತಿಯ ಗೋಂದನ್ನು (ಅಂಟು) ಮಾಡುತ್ತಿದ್ದುದೂ ನೆನಪಿದೆ. ಅಂತೂ ಗೇರು ಮರವೊಂದು ಹಣ್ಣಾಗಿ, ಕೇವಲ ತಿರುಳಾಗಿ, ಅಲಂಕೃತವಾದ ಪೆಟ್ಟಿಗೆಯೊಳಗೆ ಭದ್ರವಾಗಿ ರವಾನೆಯಾಗಿ, ವಿಲಾಸೀ ಆಹಾರವಾಗಿ ಉಪಯುಕ್ತವಾಗುವಲ್ಲಿವರೆಗಿನ ಪಯಣದ ನಿಮ್ಮ ಸಾಕ್ಷ್ಯಚಿತ್ರದ ಬರೆಹ ನನ್ನ ಕೆಲವು ನೆನಪುಗಳನ್ನು ಇಷ್ಟುದ್ದಕ್ಕೆ ಕೆದಕಿತು, ಕ್ಷಮಿಸಿ.
ದೀರ್ಘ ಪ್ರತಿಕ್ರಿಯೆಗೆ ಧನ್ಯವಾದಗಳು.ಶೆವಿರೆ – ಪುತ್ತೂರಿನ ಒಂದು ಸ್ಥಳನಾಮ. ಅದನ್ನು ಹರಿಪ್ರಸಾದ್ ತನ್ನ ಹೆಸರಿನ ಕೊನೆಯಲ್ಲಿ ಬಳಸುವುದರಿಂದ ಕುಟುಂಬನಾಮದ ಬಲ ಬಂದಿದೆ. ಅವರ ಸಣ್ಣಣ್ಣ – ಅನಂತಕೃಷ್ಣ ರಾವ್ ಬಳಸುತ್ತಿಲ್ಲವೆಂದೇ ಕಾಣುತ್ತದೆ, ಹಾಗಾಗಿ ಎ.ಕೆ.ರಾವ್!ಉದ್ದಿಮೆಯ ಆಯಾಮದಲ್ಲಿ ಗೇರು ಹಣ್ಣಿರಲಿ, ಸ್ವತಃ ತಾವೇ ಸುಲಿದಿಕ್ಕಿದ ಬೀಜದ ಸಿಪ್ಪೆಯನ್ನು ದುಡಿಸಿಕೊಳ್ಳುವುದೂ ಸಣ್ಣ ಕೆಲಸವಲ್ಲವೆಂದೇ ಹರಿಪ್ರಸಾದ ಹೇಳುತ್ತಾರೆ. ಇವರು ಸಿಪ್ಪೆಯನ್ನು ಅನ್ಯರ ಗೇರು ಎಣ್ಣೆ ಕಾರ್ಖಾನೆಗೆ ಮಾರಿ, ಅಲ್ಲಿಂದ ಎಣ್ಣೆ ತೆಗೆದುಳಿದ ಚರಟವನ್ನು ತಮ್ಮ ಕುದಿಹಂಡೆಗೆ ಉರುವಲಾಗಿ ಮತ್ತೆ ಖರೀದಿಸುತ್ತಾರೆ!ನಮ್ಮ ಸಾಮಾನ್ಯ ಕೃಷಿಕರು ಅಡಿಕೆ, ತೆಂಗು, ಭತ್ತ, ಒಳ್ಳೇಮೆಣಸು ಮುಂತಾದವುಗಳಂತೆ ತೀವ್ರ ಗಮನವನ್ನು ಗೇರುಮರಗಳ ಕುರಿತು ಮಾಡುವುದಿಲ್ಲ ಎನ್ನುವುದಷ್ಟೇ ನನ್ನ ಧ್ವನಿ. ಸರಕಾರೀ ಇಲಾಖೆ ಮಾಡಿದಂತೆ ಖಾಸಗಿಯಲ್ಲಿ ಗೇರು ಹಾಡಿಯನ್ನೇ ನೆಚ್ಚಿದವರು ಇರಬಹುದು, ನಾನು ನೋಡಿಲ್ಲ! ಗೇರು ಸಿಪ್ಪೆ ಹಿಂಡಿಯ ಬಗ್ಗೆ ನಾನೂ ಬರೆದಿದ್ದೇನಲ್ಲ, ನಿಮ್ಮ ಕಣ್ತಪ್ಪಿರಬೇಕು. ಗೇರು ಮರದ ಗಾಯದಲ್ಲಿ ಒಸರುವ ಜೀವರಸವೇ (ರಬ್ಬರಿನ ಹಾಗೆ) ಗೋಂದು. ಆಕಸ್ಮಿಕಗಳಲ್ಲಿ ಒದಗಿದವನ್ನು ನೀವೂ ಬಾಲ್ಯದಲ್ಲಿ ನಾನೂ ಕಂಡದ್ದು, ಬಳಸಿದ್ದು ಸರಿ. ಉದ್ದೇಶಪೂರ್ವಕವಾಗಿ ಗೋಂದು ಬಸಿದು, ಮರಳ ಬಳಲಿಸುವುದನ್ನು ಗೇರು ಕೃಷಿಕರು ಒಪ್ಪುವುದಿಲ್ಲ ಅಷ್ಟೆ; ಮರ ಗಾಯ ಮಾಡಿದರೆ ಗೋಂದು ಈಗಲೂ ಬರುತ್ತದೆ 🙂
ಬಿ.ಎಂ. ರೋಹಿಣಿಯವರ ಸುದೀರ್ಘ ಪ್ರತಿಕ್ರಿಯೆ ಒಂದು ಒಳ್ಳೆಯ ಲೇಖನದಂತೆ ಇದೆ. ಲೇಖಕಿ ತಿಳಿಸಿದಂತೆ ಬಹಳಷ್ಟು ಜನರಿಗೆ ಗೇರು ಹಣ್ಣು (ಗೋಂಕು ಅಥವಾ ಗೋಕು) ಎಂದಾಕ್ಷಣ ನೆನಪಾಗುವುದು ಒಂದೋ “ಗೋಂಕುದ ಗಟ್ಟಿ” (ಕಡುಬು) ಅಲ್ಲದೇ ಹೋದರೆ “ಗೋಂಕುದ ಗಂಗಸರ” (ಸಾರಾಯಿ).
ರೋಹಿಣಿಯವರ ಸ್ವಾನುಭವದ ಲೇಖನ ಚೆನ್ನಾಗಿದೆ. ಗೇರುಹಣ್ಣಿನ ಪಾನೀಯಗಳು ಮಂಗಳೂರು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅದರ ತಯಾರಕರು ಗೇರುಹಣ್ಣುಗಳನ್ನು ಎಲ್ಲಿಂದ ತರಿಸಿಕೊಳ್ಳುತ್ತಾರೆಂಬುದು ತಿಳಿಯದು. ಮತ್ತು ಅವರಿಗೆ ಗೇರುಹಣ್ಣುಗಳು ಅಲ್ಪಪ್ರಮಾಣದಲ್ಲಿ ಸಾಕಾಗಬಹುದು. ನಾವು ವಹಿಸಿಕೊಂಡಿರುವ ಹಾಡಿಯಲ್ಲಾದರೋ ಟನ್ನುಗಟ್ಟಲೆ ಗೇರುಹಣ್ಣುಗಳು! ಅದರಿಂದ ಪಾನೀಯದ ಒಂದು ದೊಡ್ಡ ಕಾರ್ಖಾನೆಯನ್ನೇ (ನಾಲ್ಕು ತಿಂಗಳ ಮಟ್ಟಿಗೆ) ಸ್ಥಾಪಿಸಬಹುದು. ಗೇರುಹಣ್ಣಿನಿಂದ ಶರಾಬು ತಯಾರಿಸುವ ಕಳ್ಳಬಟ್ಟಿ ವ್ಯವಹಾರ ಅದಕ್ಕೆ ಸಂಬಂಧಿಸಿದ ಇಲಾಖೆಯವರ ದಾಳಿ, ಕಂಬಿ ಎಣಿಸುವ ಭಯದಿಂದಲೂ ಮತ್ತು ಗೋವಾ ರಾಜ್ಯದಿಂದ ಗುಣಮಟ್ಟದ ಫೆನ್ನಿ ಲಭ್ಯವಿರುವುದಿಂದಲೂ ಕಡಿಮೆಯಾಗಿರಬಹುದು.ನನಗದರ ಮಾಹಿತಿ ಇಲ್ಲ. ಈಗಲೂ ಗೇರು ಸಂಸ್ಕರಣಾ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಹೆಚ್ಚಿನ ಮಹಿಳಾ ಕಾರ್ಮಿಕರ ಮನೆಯವರ ಕುಡಿತದ ಚಟದಿಂದಾಗಿ ಈ ಮಹಿಳೆಯರು ಕಷ್ಟಪಟ್ಟು ದುಡಿದ ಸಂಪಾದನೆ ಅವರ ಮನೆಯವರ ಮೂಲಕ ಶರಾಬು ಅಂಗಡಿಗಳಲ್ಲಿ ಜಮೆಯಾಗುತ್ತಿದೆ. ಆದರೂ ಕೆಲವರು ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ.”ಶೇವಿರೆ” ಒಂದು ಸ್ಥಳನಾಮ; ಪುತ್ತೂರಿನ ಕಬಕ ಗ್ರಾಮದಲ್ಲಿದೆ. ವಾಸ್ತವವಾಗಿ ಅದು “ಸೇವುರೆ”/”ಚೇವುರೆ”. ತುಳುವಿನಲ್ಲಿ ಸೇವು, ಸೇವುರೆ ಎಂದರೆ ಕನ್ನಡದ ಕೆಸು, ಕೆಸುವಿನ ಎಲೆ. ಈಗಲೂ ಆ ಪ್ರದೇಶದಲ್ಲಿ ಸೇವುರೆ ತುಂಬಾ ಬೆಳೆಯುತ್ತದೆ. ಕನ್ನಡೀಕರಣದಿಂದಾಗಿ ಅದು ಈಗ “ಶೇವಿರೆ” ಅಷ್ಟೇ.