ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ
ಅಧ್ಯಾಯ – ೩೫
ಪ್ರವಾಸ ಹಾಗೂ ಪ್ರೇಕ್ಷಣೀಯ ಸ್ಥಳಗಳ ದರ್ಶನ ನನಗೆ ಬಹು ಪ್ರಿಯವಾದರೂ ನಾನು ಕಂಡುದು ಅತ್ಯಲ್ಪ. ಊರಿಗೆ ವರ್ಷಕ್ಕೆ ನಾಲ್ಕೈದು ಬಾರಿ ಪಯಣಿಸುವದಾದರೂ ವಿಹಾರಕ್ಕೋ, ಸ್ಥಳ ದರ್ಶನಕ್ಕೋ ಅನ್ಯತ್ರ ಹೋದುದು ಬೆರಳೆಣಿಕೆಯಷ್ಟೇ ಸಲ. ಅಂತಹ ಪ್ರವಾಸಗಳಲ್ಲಿ ಅತ್ಯಂತ ಪ್ರಿಯವಾದ ದೆಹಲಿ-ಆಗ್ರಾ ಪ್ರವಾಸದ ನೆನಪಿನೊಂದಿಗೆ ನನ್ನ ಹೃದಯದಲ್ಲಿ ಅಚ್ಚೊತ್ತಿ ಉಳಿದವರು – ಗೆಳತಿ ಕ್ರಿಸ್ತೀನಾ ಹಾಗೂ ಅವಳ ಪತಿ, ಮಣಿ. ಕ್ರಿಸ್ತೀನಾ ಪರಿವಾರ ಅಮೆರಿಕಾ ಸೇರಿಕೊಂಡ ಬಗ್ಗೆ ಹಿಂದೆಯೇ ಬರೆದಿದ್ದೇನೆ. ತಾಯ್ತಂದೆ, ಅಣ್ಣ ತಮ್ಮಂದಿರೆಲ್ಲ ಅಲ್ಲೇ ನೆಲಸಿದ್ದರಿಂದ ಹಾಗೂ ಬಿಡುವಿರದ ವೃತ್ತಿಜೀವನದಿಂದಾಗಿ ಕ್ರಿಸ್ತಿನ್‌ಗೆ ಊರಿಗೆ ಬರುವ ಪ್ರಮೇಯವೇ ಇರಲಿಲ್ಲ. ತಂಗಿ ಆಗ್ನಿಸ್ ಬೊಂದೇಲ್ ಕಾನ್ವೆಂಟ್ ಸೇರಿದ್ದಳು. ಡಾಕ್ಟರಾಗಿದ್ದ ಅಕ್ಕ, ಕಣ್ಣಿನ ಕ್ಯಾನ್ಸರ್‌ನಿಂದ ತೀರಿಕೊಂಡಿದ್ದರು. “ತಾಯ್ನಾಡನ್ನೊಮ್ಮೆ ನೋಡುವ ಆಶೆಯಾಗುವುದಿಲ್ವೇ, ಕ್ರಿಸ್ತಿನ್?” ಎಂದು ನಾನು ಪತ್ರದಲ್ಲಿ ಕೇಳಿದಾಗ, ತುಂಬ ಆಶೆಯಾಗುತ್ತಿದೆ, ಆದರೆ ಎಲ್ಲರಿಗೂ ಹೊಂದುವ ಸಮಯದ ಅಭಾವ, ಎಂದುತ್ತರಿಸಿದ ಕ್ರಿಸ್ತಿನ್, ಇಪ್ಪತ್ತೇಳು ವರ್ಷಗಳ ಸರ್ವಿಸ್‌ನ ಬಳಿಕ ವಾಲಂಟರಿ ರಿಟಾಯರ್‌ಮೆಂಟ್ ತೆಗೆದುಕೊಂಡು ಪತಿಯೊಡನೆ ಊರನ್ನೊಮ್ಮೆ ಸಂದರ್ಶಿಸುವ ಯೋಜನೆ ಹಾಕಿಕೊಂಡಳು. ಹಿಂದಿನ ವರ್ಷವೇ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಲು ದೆಹಲಿಗೆ ಹೋಗಿ ಬಂದಿದ್ದ ನನ್ನನ್ನು ತಮ್ಮೊಡನೆ ದೆಹಲಿಗೂ ಬರುವಂತೆ ಆಹ್ವಾನಿಸಿದಳು. ನಮ್ಮೆಲ್ಲ ಪಯಣ, ಹೊಟೇಲ್ ವಾಸ್ತವ್ಯ ಎಲ್ಲವನ್ನೂ ಅಲ್ಲಿಂದಲೇ ನಿಯೋಜಿಸಿಕೊಂಡ ಗೆಳತಿಗೆ ಜೊತೆ ನೀಡುವುದಷ್ಟೇ ನನ್ನ ಕೆಲಸವಾಗಿತ್ತು.
ಏರ್‌ಪೋರ್ಟ್‌ನಲ್ಲಿ ಪರಸ್ಪರ ಕಂಡಾಗ, “ಶ್ಯಾಮಲಾ, ಹಾಗೇ ಇದ್ದೀ; ಚೂರೂ ಬದಲಾಗಿಲ್ಲ”, ಎಂದಪ್ಪಿಕೊಂಡು ಸಂಭ್ರಮಿಸಿದ ಗೆಳತಿಗೆ, “ನೀನೂ ಹಾಗೇ ಇರುವಿ, ಕ್ರಿಸ್ತಿನ್! ಬಾಬ್ ಒಂದು ಬಿಟ್ಟರೆ ಮತ್ತೇನೂ ಬದಲಾಗಿಲ್ಲ”, ಎಂದು ನಾನು ಸಂತೋಷಿಸಿದೆ. ಮಣಿ ಅವರೂ ಚೆನ್ನಾಗಿದ್ದರು. ಎರಡು ದಿನಗಳ ಬಳಿಕ ಪೂನಾ, ರಾಜ್‌ಕೋಟ್‌ಗಳಲ್ಲಿನ ಮಣಿ ಅವರ ಸೋದರರ ಮನೆಗಳಿಂದ ಅವರು ಹಿಂದಿರುಗಿದ ಬಳಿಕ ಊರಿಗೆ ಹೊರಟು ನಾವು ಮಂಗಳೂರಿನಲ್ಲಿಳಿಯುತ್ತಿದ್ದಂತೆ ಅವರಿಬ್ಬರ ಉತ್ಸಾಹವೂ ಮೇರೆ ಮೀರಿತ್ತು. “ಶ್ಯಾಮಲಾ, ನಾನು ಯಾವಾಗ್ಲೂ ನನ್ಗೆ ಊರಿಗೊಮ್ಮೆ ಹೋಗ್ಬೇಕೂಂತ ಹೇಳೋದು; ಇವ್ರು, ಯಾಕೆ? ಅಲ್ಲೇನಿದೆ? ವೈ ಆರ್ ಯು ನಾಟ್ ಹ್ಯಾಪಿ ಹಿಯರ್?” ಅಂತನ್ನೋದು; ಈಗ ಇವ್ರ ಖುಶಿ ನೋಡು!” ಎಂದು ಗೆಳತಿ ಛೇಡಿಸುತ್ತಿದ್ದಳು. ನಗರದ ದಾರಿಯಲ್ಲಿ ಹೊಸತೆಲ್ಲವನ್ನೂ ಕಂಡು, “ಓಹ್! ಲುಕ್ ಆಟ್ ದಾಟ್!” ಎಂದು ಮಕ್ಕಳಂತೆ ಸಂಭ್ರಮಿಸುತ್ತಿದ್ದ ಮಣಿ!
ಹೊಸದಾಗಿ ಎದ್ದು ನಿಂತಿದ್ದ ವಿದ್ಯಾಸಂಸ್ಥೆಗಳನ್ನು ಕಂಡು, ತಮ್ಮ ಹಿಂದಿನ ಸಂಸ್ಥೆಯನ್ನೂ ಮೇಲಧಿಕಾರಿ ಡಾ. ಸೂರ್ಯನಾರಾಯಣ ಅಡಿಗರನ್ನೂ ಮಣಿ ಅವರು ನೆನಸಿಕೊಂಡಾಗ, ಡ್ರೈವರ್ ಬಾಯಲ್ಲಿ ಅರವಿಂದ ಅಡಿಗ ಹಾಗೂ ಅವರ “ವೈಟ್ ಟೈಗರ್” ಸುಳಿದಾಗ ಅಚ್ಚರಿಯೂ, ಸಂತಸವೂ ಆಯ್ತು. ನನ್ನ ಮಗನ ಮನೆಯಲ್ಲಿ ಅವರಿಗಾಗಿ ಕಾದಿದ್ದ ತಿನಿಸುಗಳಲ್ಲಿ ಕೊಟ್ಟಿಗೆಯನ್ನು ಕಂಡು ಅವರ ಸಂಭ್ರಮವೋ ಸಂಭ್ರಮ!
ಮಣಿ ಅವರ ಸಸ್ಯಶಾಸ್ತ್ರದ ಪ್ರೊಫೆಸರ್ ವಸುಂಧರಾ ಅವರ ಸಸ್ಯಕಾಶಿಯಂತಿದ್ದ ಮನೆಗೆ ಭೇಟಿಯಂತೂ ಅವರನ್ನು ಪುನಃ ಅವರ ಶಿಷ್ಯನಾಗಿಸಿತು. ಮನೆಯಂಗಣದ ತೋಟವಲ್ಲದೆ, ವರ್ಜ್ಯವೆಂಬುದೇ ಇರದೆ, ಚಿಕ್ಕ ಪುಟ್ಟ ಐಸ್‌ಕ್ರೀಮ್ ಕಪ್‌ಗಳು, ಹಳೆಯ ಲೈಟ್ ಶೇಡ್‌ಗಳು, ಶೂಗಳು ಎಲ್ಲವೂ ಕುಂಡಗಳಾಗಿ ಹೂಗಿಡಗಳನ್ನು ಹೊತ್ತು ನಿಂತಿದ್ದುವು. ಆ ಸಸ್ಯಕಾಶಿಯ ತಪೋವನದಲ್ಲೇ ಹಣ್ಣಾದ ಯೋಗಿನಿಯಂತಿದ್ದರು, ಮಿಸ್ ವಸುಂಧರಾ. ಆ ತೋಟದ ಗಿಡ ಬಳ್ಳಿಗಳ ಸಸ್ಯಶಾಸ್ತ್ರೀಯ ಹೆಸರುಗಳೆಲ್ಲ ಆ ಬಾಯ್ಗಳಲ್ಲಿ ನಲಿದಾಡಿದುವು. ಮಿಸ್ ವಸುಂಧರಾ ಇರದಿದ್ದರೆ ತಮಗಂದು ಸಸ್ಯಶಾಸ್ತ್ರದ ಪಾಠಗಳು ಕಬ್ಬಿಣದ ಕಡಲೆಯಾಗಬಹುದಿತ್ತು, ಎಂದು ಬಾರಿಬಾರಿಗೂ ನುಡಿದು, ಸದ್ದಿಲ್ಲದೆ ಪ್ರೀತಿಯ ಗುರುದಕ್ಷಿಣೆ ಸಲಿಸಿ ಹೊರಟರು, ಮಣಿ.
ಮರುಬೆಳಗು ನಮ್ಮ ಕಾಲೇಜ್‌ಗೊಮ್ಮೆ ಹೋಗಬೇಕೆಂಬ ನನ್ನ ವರ್ಷಗಳ ಹಂಬಲ ಸಫಲವಾದ ದಿನ. ವರ್ಷಕ್ಕೆ ಮೂರ್‍ನಾಲ್ಕು ಬಾರಿ ಊರಿಗೆ ಹೋಗುತ್ತಿದ್ದರೂ, ಕಾಲೇಜ್‌ಗೆ ಭೇಟಿ ನೀಡ ಬೇಕಾದ್ರೆ ನನ್ನ ಗೆಳತಿ ಅಮೆರಿಕಾದಿಂದ ಬರಬೇಕಾಯ್ತು! ಕಾಲೇಜ್ ದಾರಿಯಲ್ಲಿ ನಮ್ಮ ಬಾಟನಿ ಲೆಕ್ಚರರ್ ಆಗಿದ್ದ ಮಿಸ್ ಉಷಾನಳಿನಿ ಮನೆಗೆ ಭೇಟಿ. ಮಿಸ್ ಜೊತೆ ಕಾಲೇಜ್ ಪ್ರವೇಶಿಸುವಾಗ ಮೈಯೆಲ್ಲ ಪುಳಕ! ವಿದೇಶದಲ್ಲಿದ್ದೇ ತಾಯ್ನಾಡಿನಲ್ಲಿ, ತಾನು ಕಲಿತ ಕಾಲೇಜ್‌ನಲ್ಲಿ, ಸ್ಕಾಲರ್‌ಶಿಪ್ ಬಹುಮಾನಧನವನ್ನು ವರ್ಷಗಳ ಹಿಂದೆಯೇ ಆಯೋಜಿಸಿದ್ದು, ಈಗ ಬಡ್ಡಿದರ ಇಳಿಮುಖವಾಗುತ್ತಾ ಬಂದುದರಿಂದ ವಿದ್ಯಾರ್ಥಿಗಳಿಗೆ ಸರಿಯಾದ ಪ್ರಯೋಜನ ಸಿಗುವಂತಾಗಲು ಬ್ಯಾಂಕ್ ಖಾತೆಯಿಂದ ಪ್ರಾಂಶುಪಾಲರ ಖಾತೆಗೆ ವರ್ಗಾಯಿಸುವ ಬಹುಮುಖ್ಯ ಕೆಲಸ ಸಂಪನ್ನವಾಯ್ತು. ಅಲೋಶಿಯಸ್ ಕಾಲೇಜ್‌ನಲ್ಲಿ ಅವರ ತಂದೆ ಪ್ರೊ| ಎಮ್.ಡಿ.ಜೋಸೆಫ್ ಅವರ ಹೆಸರಲ್ಲೂ ಸ್ಕಾಲರ್‌ಶಿಪ್ ಸ್ಥಾಪಿಸಲ್ಪಟ್ಟಿತ್ತು.
ನಮ್ಮ ಕಾಲೇಜ್‌ನ ಕಾನ್ವೆಂಟ್‌ನಲ್ಲೇ ನಮ್ಮ ಹೆಡ್‌ಮಿಸ್ಟ್ರೆಸ್ ಆಗಿದ್ದ ಸಿಸ್ಟರ್ ವರ್ಜೀಲಿಯಾ ನಿವೃತ್ತ ಜೀವನ ನಡೆಸುತ್ತಿರುವುದನ್ನರಿತು ಅವರನ್ನು ಕಾಣ ಹೋದೆವು. ಕಂಡೊಡನೇ ನಮ್ಮನ್ನು ಗುರುತಿಸಿ ಪ್ರೀತಿಯಿಂದ ಹೆಸರು ಹಿಡಿದು ಕರೆದು ಇಷ್ಟಗಲ ನಗುಮುಖವಾದ ಸಿಸ್ಟರನ್ನು ಕಂಡು ನಮ್ಮ ಸಂತಸಕ್ಕೆ ಪಾರವಿರಲಿಲ್ಲ. ನಲ್ವತ್ತು ವರ್ಷಗಳ ನಂತರವೂ ನೆನಪಿಟ್ಟು ಗುರುತಿಸುವ ಇಂತಹ ಗುರು-ಶಿಷ್ಯ ಸಂಬಂಧ ಇಂದಿನ ತರುಣ ಜನಾಂಗದಲ್ಲಿ ಇರಬಹುದೇ?
ಮರಳಿ ಮಿಸ್ ಉಷಾ ನಳಿನಿಯಲ್ಲಿಗೆ ಬಂದು ಅವರಮ್ಮನನ್ನು ಕಂಡು, ಪ್ರೀತಿ ಭೋಜನವಾಯ್ತು. ಶ್ಯಾವಿಗೆ ಹಾಲು, ಚಿತ್ರಾನ್ನ, ಸೌತೆ ಮಜ್ಜಿಗೆ ಹುಳಿ ಹಾಗೂ ಅಕಾಲವಾದರೂ ಪ್ರತ್ಯಕ್ಷವಾದ ಕಾಪಿಟ್ಟ ಹಲಸಿನ ಗಟ್ಟಿ! ಮಣಿ ಅವರ ಸಂತೋಷವೋ ಸಂತೋಷ! ಮತ್ತಲ್ಲಿಂದ ಬೀಳ್ಕೊಂಡು ಕಾದಿದ್ದ ಡಾ. ಚೌಟ ಅವರೊಡನೆ ಮಂಗಳ ಗಂಗೋತ್ರಿಯತ್ತ. ಅಲ್ಲಿ ಅಪ್ಲೈಡ್ ಬಾಟನಿ ವಿಭಾಗದಲ್ಲಿ ಸಾಗಿದ ಮಹತ್ತರ ಸಂಭಾಷಣೆ, ನನ್ನೀ ಮಿತ್ರ ದಂಪತಿಯ ಧ್ಯೇಯೋದ್ದೇಶಗಳ ಹೊಸನೋಟವನ್ನೇ ನನ್ನೆದುರು ತೆರೆದಿಟ್ಟಿತು. ಸ್ಕಾಲರ್‌ಶಿಪ್ ಮೊತ್ತ ಎಷ್ಟೆಂದರಿತಾಗ, ಅಲ್ಲಿನ ರೀಡರ್, ಅದು ಗೋಲ್ಡ್‌ಮೆಡ್‌ಲ್ ಆಗಿ ಸ್ಥಾಪಿತವಾಗುವುದು, ಎಂದರೆ, ಈ ಗೆಳೆಯ, ಗೋಲ್ಡ್ ಮೆಡ್‌ಲ್‌ನಿಂದ ವಿದ್ಯಾಭ್ಯಾಸ ಕಾಲದಲ್ಲಿ ವಿದ್ಯಾರ್ಥಿಗಳಿಗೇನೂ ಪ್ರಯೋಜನವಾಗುವಂತಿಲ್ಲ; ಆ ಮೊತ್ತದಿಂದ ತಿಂಗಳು, ತಿಂಗಳೂ ವಿದ್ಯಾರ್ಥಿಗೆ ಸಹಾಯಧನ ಸಿಗುವಂತಾಗಬೇಕು ಎಂದು ತಮ್ಮಾಶಯದಂತೆ ವ್ಯವಸ್ಥೆಗೊಳಿಸಿದರು. ತಮ್ಮ ವಿದ್ಯಾಭ್ಯಾಸದ ದಿನಗಳಲ್ಲಿ ಕಷ್ಟ ಕಾರ್ಪಣ್ಯದಿಂದಲೇ ಕಲಿತು ಮೇಲೆ ಬಂದು ಅಭ್ಯುದಯದ ಮೆಟ್ಟಲುಗಳನ್ನೇರಿದವರು, ಕೆರೆಯ ನೀರನು ಕೆರೆಗೆ ಚೆಲ್ಲಿ, ಎಂಬಂತೆ ಋಣ ಸಂದಾಯದ ಕೆಲಸಕ್ಕಿಳಿದಿದ್ದರು.
ಅಲ್ಲಿಂದ ಸೋಮೇಶ್ವರ ಉಚ್ಚಿಲದ ನಮ್ಮಮ್ಮನ ಬಳಿಗೆ ಹೋಗುವ ದಾರಿಯಲ್ಲಿ ತಮ್ಮ ಗೆಳೆಯ ನಿವೃತ್ತ ಪ್ರಾಧ್ಯಾಪಕ ಶೆಣೈ ಅವರನ್ನು ಕಂಡು, ಸೋಮೇಶ್ವರದ ಕಡಲ ಕಿನಾರೆ ಮತ್ತಲ್ಲಿನ ರುದ್ರಶಿಲೆಯನ್ನೂ ತೋರಿಸಿ, ನನ್ನೂರ ಇನ್ನೊಂದು ತುದಿ – ನನ್ನ ಪ್ರಿಯ ಕೋಟೆ ವಿಷ್ಣುಮೂರ್ತಿ ದೇವಳವದ ದರ್ಶನ ಮಾಡಿಸಿಯೇ ಅಮ್ಮನಲ್ಲಿಗೆ ಕರೆತಂದೆ. ತೊಂಬತ್ತು ಸಮೀಪಿಸುತ್ತಿರುವ ನಮ್ಮಮ್ಮ ಅರ್‍ವತ್ತಕ್ಕಿಂತ ಹೆಚ್ಚು ವಯಸ್ಸಾದಂತೆ ಖಂಡಿತ ಕಾಣುತ್ತಿಲ್ಲ ಎಂಬ ಉದ್ಗಾರ ಅವರದಾಯ್ತು! ಅಕ್ಕಿವಡೆ, ಪಾಯಸ ಸವಿದು, ಕತ್ತಲಲ್ಲೇ ನಮ್ಮಮ್ಮನ ಹೂದೋಟ, ಅಣ್ಣನ ಬಾಳೆಗಿಡ, ಗೊನೆಗಳನ್ನು ತೋರಿ ಬೀಳ್ಕೊಂಡು ಹೊರಟೆವು.
ಮರುಬೆಳಗು ಕಾಲೇಜ್‌ನಲ್ಲಿ ಕ್ರಿಸ್ತಿನ್‌ನ ಸಹೋದ್ಯೋಗಿಗಳಾಗಿದ್ದ ನಮ್ಮ ಲೆಕ್ಚರರ್‍ಸ್ – ಪ್ರೊ. ಮೋಹನ್ ಶೆಟ್ಟಿ ಹಾಗೂ ಪ್ರೊ. ಭಾಸ್ಕರ್ ಶೆಟ್ಟಿ ಅವರನ್ನು ಕಂಡಾಗ, ಅವರು ನನ್ನನ್ನೂ ಮರೆಯದಿರುವುದನ್ನು ಕಂಡು ಹೃದಯ ತುಂಬಿಬಂತು. ಮತ್ತಲ್ಲಿಂದ ನನ್ನ ಪ್ರೀತಿಯ ಮಿಸ್ ಲೀಲಾ ರಾವ್ ಬಳಿಗೆ. ಅಮೆರಿಕಾಗೆ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಲು ಹೋದಾಗ, ನನ್ನ ‘ಗಾನ್ ವಿದ್ ದ ವಿಂಡ್’ ಓದುತ್ತಿದ್ದು, ಕೇಳಿದವರಿಗೆ, “ನನ್ನ ಸ್ಟ್ಯೂಡೆಂಟ್ ಶ್ಯಾಮಲಾ ಅನುವಾದಿಸಿದ್ದು” ಎಂದು ಹೆಮ್ಮೆಯಿಂದ ಹೇಳಿದೆನೆಂದಿದ್ದ ಮಿಸ್! ಈಗವರಿಗೆ ಕೊಡಲು ನನ್ನಲ್ಲಿ ‘ಫ್ರಾಂಕಿನ್‌ಸ್ಟೈನ್’ ಇತ್ತು. ಪ್ರೀತಿಯಿಂದ ಹರಸಿ ಅವರಿತ್ತ ಕೊಡುಗೆಯೊಡನೆ ಬೀಳ್ಕೊಂಡು ಹೊರಟೆವು. ಮತ್ತೆ ತಮ್ಮೂರು ಕೇರಳದ ಭೇಟಿಗಳನ್ನು ಮುಗಿಸಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸ್ನೇಹಮಿಲನವಾಗಿ, ಮುಂಬೈಗೆ ಬಂದು ದೆಹಲಿಯತ್ತ ಹಾರುವಾಗ ಕ್ರಿಸ್ತಿನ್, ತನ್ನೆಲ್ಲ ಕಥೆಯನ್ನು ಬಿಚ್ಚಿಡ ತೊಡಗಿದಳು. ಉತ್ತಮ ಅವಕಾಶವನ್ನರಸಿ ಅಮೆರಿಕಾಗೆ ಹೊರಟು ನಿಂತ ಪತಿಯನ್ನು ಹಿಂಬಾಲಿಸಬೇಕಾಗಿ ಬಂದಾಗ, ತಾಯ್ನಾಡನ್ನು, ಕಾಲೇಜು, ವಿದ್ಯಾರ್ಥಿಗಳನ್ನು ದುಃಖದಿಂದಲೇ ತೊರೆದು ಹೋದ ಗೆಳತಿಗೆ, ಅಲ್ಲಿ ಪತ್ರಿಕಾ ಪ್ರಕಟಣೆಯೊಂದು ಹೊಸಲೋಕದ ಬಾಗಿಲನ್ನೇ ತೆರೆದಿತ್ತು.
ಅದೇ ಆಗ ಆರಂಭವಾಗಲಿದ್ದ ಸೈಟೋಟೆಕ್ನಾಲಜಿ ಕೋರ್ಸ್‌ಗೆ ಶಿಕ್ಷಾರ್ಥಿಗಳಿಂದ ಪ್ರವೇಶದ ಅರ್ಜಿಗಾಗಿ ಇತ್ತ ಕರೆಯ ಕೊನೆಯ ದಿನದ ಅವಕಾಶವನ್ನು ಕ್ರಿಸ್ತಿನ್ ತನ್ನದಾಗಿಸಿಕೊಂಡಳು. ತನ್ನಿಂದ ದೂರಾಗಲಾಗದೆ ಅಳುವ ಮಗುವನ್ನು ದೂರ ಅಣ್ಣನಲ್ಲಿ ಬಿಡಲಾರದೆ ಬಿಟ್ಟು, ಕ್ಯಾನ್ಸರ್ ಸೆಲ್ ಡಿಟೆಕ್ಷನ್‌ನ ಸೈಟೋಟೆಕ್ನಾಲಜಿ ಕೋರ್ಸ್ ಮುಗಿಸಿ ಹ್ಯೂಸ್ಟನ್‌ನ ಕ್ಯಾನ್ಸರ್ ರಿಸರ್ಚ್ ಸಂಸ್ಥೆಯಲ್ಲಿ ರಿಸರ್ಚ್ ಗೈಡ್ ಆಗಿ ದುಡಿದಳು. ಬಹಳಷ್ಟು ಆತ್ಮ ವಿಶ್ವಾಸವನ್ನೂ, ತೃಪ್ತಿಯನ್ನೂ, ಸಾರ್ಥಕತೆಯನ್ನೂ ತಂದಿತ್ತ ವೃತ್ತಿ ಜೀವನದ ಕೊನೆಗೆ ಇದೀಗ ತನ್ನ ಹಂಬಲದಂತೆ ತಾಯ್ನಾಡ ಭೇಟಿಗೆ ಬಂದಿದ್ದಳು.
ಹೊರನಾಡಿಗೆ ಕಾಲಿರಿಸಿದ ಆರಂಭದಲ್ಲಿ ಮೆಡಿಸಿನ್ ಟೆಕ್ನಾಲಜಿ ಅಭ್ಯಸಿಸಿದ ಮಣಿ, ಮತ್ತೆ ಸಿ.ಸಿ.ಎ. ಕೋರ್ಸ್ ಸೇರಿ, ಬಿಡುವಿರದ ಸಿ.ಎ. ಆಗಿ, ಕೌನ್ಸೆಲಿಂಗ್‌ನಲ್ಲೂ ವ್ಯಸ್ತರಾದಾಗ ಸಸ್ಯಶಾಸ್ತ್ರದ ಟಚ್ ಬಿಟ್ಟುಹೋಗದಿರಲಿ ಎಂದು ಮನೆಯಲ್ಲೇ ಹೂ, ಹಣ್ಣು, ತರಕಾರಿಗಳ ವಿಶಾಲ ತೋಟವನ್ನೇ ಬೆಳೆಸಿದರು. ತಂದೆತಾಯಿಯರನ್ನು ಮಾತ್ರವಲ್ಲ, ಉಳಿದೆಲ್ಲ ಏಳು ಮಂದಿ ತಮ್ಮಂದಿರನ್ನೂ ಅಲ್ಲಿಗೇ ಕರೆಸಿಕೊಂಡರು. ಎಂಜಿನಿಯರ್‌ಗಳೂ, ವೈದ್ಯರೂ ಆಗಿ ಅಲ್ಲಿ ನೆಲೆನಿಂತ ಈ ಸಂಸಾರದಲ್ಲಿ ಪ್ರತಿ ಕುಟುಂಬದಲ್ಲೂ ಹೀಗೆ ವೃತ್ತಿ ನಿರತರಾದ ನಾಲ್ಕೈದು ಮಕ್ಕಳು.
ಅಭ್ಯಾಸವಿರದಿದ್ದರೂ ಸವಿಯಾದ ಕನ್ನಡದಲ್ಲಿ ಗೆಳತಿ ಹೇಳುತ್ತಿದ್ದರೆ ಮತ್ತೂ ಮತ್ತೂ ಕೇಳಬೇಕನಿಸುತ್ತಿತ್ತು. ದೆಹಲಿಯಲ್ಲಿಳಿದು ಟೂರ್ ಮ್ಯಾನೇಜರ್ ಶರ್ಮಾರೊಡನೆ ಮಾಲ್ವೆ ಪರಿಸರದ ಸ್ವಾಗತ್ ಹೊಟೇಲ್ ಸೇರಿಕೊಂಡೆವು. ಆಗಿನ್ನೂ ಸಂಜೆಯ ನಾಲ್ಕೂವರೆ ಆದ್ದರಿಂದ ಲೋಟಸ್ ಟೆಂಪ್‌ಲ್ ಆದ್ರೂ ನೋಡಿ ಬರುವಾ ಎಂದು ಅವರನ್ನು ಹೊರಡಿಸಿದೆ. ದೆಹಲಿಯನ್ನು ಸಂಪೂರ್ಣ ಸರಿಯಾಗಿ ನೋಡಲು ನಾಲ್ಕು ದಿನಗಳಾದರೂ ಬೇಕೆಂದು ಅನುಭವ ತಿಳಿಸಿ ಕೊಟ್ಟಿತ್ತು. ನಮ್ಮ ಬಳಿ ಇದ್ದುದು ಎರಡೂವರೆ ದಿನಗಳಷ್ಟೇ. ಬಹಾಯಿ ಶ್ರಧ್ಧೆಯ ಮಹೋನ್ನತ ನಿಲುವಿನ , ಸುಂದರ ಹಸಿರು ಹೊರಾವರಣದ ವಿನ್ಯಾಸದ ಟೆಂಪ್‌ಲ್ ಅವರಿಗೆ ಮೆಚ್ಚಿಕೆಯಾಯ್ತು. ಹಿಂದಿರುಗುವ ದಾರಿಯಲ್ಲಿ ಮಾಲ್ವೆ ಮಾರ್ಕೆಟ್ ಹೊಕ್ಕೆವು. ಕಳೆದ ಬಾರಿ ನನಗೆ ರೂಢಿಯಾಗಿದ್ದ ಲಜಪತ್ ಮಾರ್ಕೆಟ್‌ನಷ್ಟು ಇದು ಹಿಡಿಸಲಿಲ್ಲ.
ಮರು ಬೆಳಗು ಡ್ರೈವರ್ ದೀಪಕ್, ನಮ್ಮನ್ನು ಕುತುಬ್ ಮಿನಾರ್‌ಗೆ ಒಯ್ದ. ಅಶೋಕ ಸ್ತಂಭಕ್ಕೆ ದಿಗ್ಬಂಧನವಿದ್ದುದರಿಂದ ಕೈಯಿಂದ ಮುಟ್ಟುವಂತಿರಲಿಲ್ಲ. ವರ್ಷಗಳ ಹಿಂದಿನ ಶಾಲಾ ಮಕ್ಕಳ ಅಪಘಾತದ ಬಳಿಕ ಕುತುಬ್ ಮಿನಾರ್‌ಗೂ ಬೀಗ ಬಿದ್ದು, ಒಳ ಹೋಗುವಂತಿರಲಿಲ್ಲ. ಹಿಂಭಾಗದ ಪ್ರಾಸಾದ ಗೋಡೆಯ ಸುರಮ್ಯ ಚಿತ್ತಾರ ನಮ್ಮನ್ನು ಹಿಡಿದಿಟ್ಟಿತು. ಕುತುಬ್‌ನಿಂದ ಹೊರಟು, ಪುರಾನಾ ಕಿಲಾ ನೋಡುತ್ತಾ ಹೊಸದಿಲ್ಲಿಯ ಸುವಿಶಾಲ ಸ್ವಚ್ಛ ರಸ್ತೆಗಳಲ್ಲಿ ಹಾದು ಇಂಡಿಯಾ ಗೇಟ್ ಬಳಿ ಬಂದೆವು. ಆ ಭವ್ಯ ಸ್ಮಾರಕದ ನಡುವೆ ಉರಿವ ಅಮರ್ ಜವಾನ್ ಜ್ಯೋತಿ ಕಾಣದಂತೆ ಹಸಿರು ಬಟ್ಟೆಯೊಂದನ್ನು ಅಡ್ಡ ಕಟ್ಟಲಾಗಿತ್ತು. ಕೇಳಿದರೆ ಸುರಕ್ಷೆಯ ದೃಷ್ಟಿಯಿಂದ ಎಂದುತ್ತರ ಬಂತು. ರಾಷ್ಟ್ರಪತಿ ಭವನದತ್ತ ತೆರಳಿ, ಕ್ಷಣ ಮಾತ್ರವೂ ನಿಲ್ಲುವಂತಿರದಿದ್ದುದರಿಂದ, ಗೆಳತಿ ಮತ್ತು ನಾನು ಮಾತ್ರ ಹೊರಜಾರಿಕೊಂಡು, ಕೇವಲ ಗೇಟ್‌ನ ಫೋಟೋ ತೆಗೆದುಕೊಂಡು ಸುತ್ತು ತೆಗೆದು ಬಂದ ವಾಹನವೇರಿ ಕುಳಿತು ಮುಂದೆ ಸಾಗಿದೆವು. ರಾಷ್ಟ್ರಪತಿ ಭವನ ಹಾಗೂ ಮೊಘಲ್ ಗಾರ್ಡ್‌ನ್ಸ್ ನೋಡಬೇಕಿದ್ದರೆ ಮೂರು ದಿನಗಳ ಮುನ್ನವೇ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಿತ್ತು. ಪಾರ್ಲಿಮೆಂಟ್ ಭವನವಂತೂ ನಿಷಿದ್ಧವೇ ಇತ್ತು.
ಅಲ್ಲಿಂದ ಮಹಾತ್ಮಾ ಗಾಂಧಿ ಮೆಮೊರಿಯಲ್. ಗಾಂಧೀಜಿ ಪ್ರಾರ್ಥನಾ ಸಭೆಯಲ್ಲಿ ಹುತಾತ್ಮರಾದ ಸ್ಥಳವಿದು. ಒಳಹೊಗುವಲ್ಲಿ ಗಾಂಧೀಜಿಯ ಎರಡಾಳೆತ್ತರದ ಕರಿಗಲ್ಲ ಮೂರ್ತಿ. ಒಳಗೆ ಗಾಂಧೀಜಿ ಪ್ರಾರ್ಥನಾ ಸಭೆಗೆ ನಡೆದು ಹೋದ ಪಾದುಕೆಯ ಹೆಜ್ಜೆಗುರುತುಗಳು. ಬಲಕ್ಕೆ ಅಮೂಲ್ಯ, ಅಪರೂಪದ ಸಚಿತ್ರ ವಿವರಗಳು. ಗಾಂಧೀಜಿ ” ಹೇ ರಾಮ್!” ಎನ್ನುತ್ತಾ ಅಮರರಾದೆಡೆಯ ಸರಳ ಸ್ಮಾರಕದಲ್ಲಿ ಸರಳವಾಗಿ ಉರಿವ ಜ್ಯೋತಿ. ತನ್ನಿಂದ ತಾನೇ ದಿವ್ಯಾನುಭೂತಿಯನ್ನು ಕೊಡುವ ಸ್ಮಾರಕವಿದು.
ಮುಂದಕ್ಕೆ ಇಂದಿರಾ ಮೆಮೊರಿಯಲ್‌ನತ್ತ ಪಯಣ. ರಜಾದಿನವಾದ್ದರಿಂದ ಸರತಿ ಸಾಲಿನ ಕಲರವ ಹೆಚ್ಚಿ, ಕಳೆದ ಬಾರಿ ಏಕಾಂತದಲ್ಲಿ ಕಂಡ ತನ್ಮಯತೆಗೆ ತೊಡಕಾಯ್ತು ಇಂದಿರಾಜೀ ಹಂತಕರ ಗುಂಡಿಗೆ ಬಲಿಯಾದ, ಈಗ ಕ್ರಿಸ್ಟಲ್ ಪಥವಾಗಿ ಕಾಪಿಟ್ಟಿರುವ ಸ್ಮಾರಕ! ಒಳಗೆ ಅಷ್ಟೊಂದು ವ್ಯವಸ್ಥಿತವಾಗಿ ಪ್ರದರ್ಶಿತವಾಗಿರುವ ಇಂದಿರಾ, ರಾಜೀವ್ ಅವರ ಬದುಕು, ಸಾಧನೆಯ ನೂರಾರು ಚಿತ್ರಗಳು, ವೃತ್ತಪತ್ರ ವರದಿಗಳು, ಕಾಪಿಟ್ಟ ಸ್ಮರಣಿಕೆ, ಛಾಯಾಚಿತ್ರಗಳು; ಇಂದಿರಾ ಇನ್ನೂ ಅಲ್ಲಿ ತಮ್ಮ ಮೇಜಿನೆದುರು ಕುಳಿತಿರುವರೇನೋ ಎಂದನಿಸುವ ಸರಳ, ಸುಂದರ, ಸುವ್ಯವಸ್ಥಿತ ಆಫೀಸ್ ಕೋಣೆ. ಅಂಗಣದ ನೈದಿಲೆಯ ಕೊಳ!
ಮತ್ತೆ ಅತ್ಯಂತ ಸುವ್ಯವಸ್ಥಿತವಾಗಿ ರಕ್ಷಿಸಲ್ಪಟ್ಟಿರುವ ಸ್ಮಾರಕ, ಹುಮಾಯೂನ್ಸ್ ಟೂಂಬ್ (ಮೇಲೆ, ಮೊದಲ ಚಿತ್ರ) . ಎಡಗಡೆಗೆ ಅತ್ಯಂತ ಸುಂದರ, ಕಲಾತ್ಮಕ ಷಟ್ಕೋನಾಕೃತಿಯ ಸ್ಮಾರಕ, ನಿಯಾಜ಼್‌ಖಾನ್ ಮಂಜಿಲ್. ಬಾದಶಹ ಶೇರ್‌ಖಾನ್ ಸೂರಿಯು ತನ್ನ ಅತ್ಯಂತ ನಂಬಿಗಸ್ಥ ಖಾಜಿ, ಇಸಾಖಾನ್ ನಿಯಾಜಿಯ ನೆನಪಲ್ಲಿ ಕಟ್ಟಿಸಿದ ಸ್ಮಾರಕವಿದು. ಹುಮಾಯೂನ್‌ನ ಮರಣದ ಬಳಿಕ ದುಃಖತಪ್ತಳಾದ ಬೇಗಂ ಹಮೀದಾ ಬಾನು ಪತಿಯ ನೆನಪಲ್ಲಿ ಕಟ್ಟಿದ ಹುಮಾಯೂನ್ಸ್ ಟೂಂಬ್‌ನಲ್ಲಿ ಬಾದಶಹ ಕುಟುಂಬದ ನೂರು ಗೋರಿಗಳಿವೆ.
ಡ್ರೈವರ್ ದಿಲೀಪ್, ನಮಗೆ ರೆಡ್‌ಫೋರ್ಟ್ ತೋರಲು ಆಸಕ್ತನಿರಲಿಲ್ಲ. ಅಲ್ಲೀಗ ಬಿಡುತ್ತಿಲ್ಲ, ಎಂದಂದ ಅವನ ಮಾತನ್ನೊಪ್ಪಲು ನಾನು ಸಿದ್ಧಳಿರಲಿಲ್ಲ. ಹೊಸದಿಲ್ಲಿಯ ಸುವ್ಯವಸ್ಥಿತ ರಸ್ತೆಗಳನ್ನು ಮೆಚ್ಚಿಕೊಂಡಿದ್ದ ಮಣಿ, ಇಲ್ಲಿನ ಜನಜಂಗುಳಿಗೆ ಬೇಸತ್ತು, ಮಧುಮೇಹದ ಬಳಲಿಕೆಯ ಕಾರಣ ಹಿಂದಿರುಗುವ ಎಂದರೂ, ಹೇಗೋ ಗೇಟ್ ಬಳಿ ಬಂದಾಗ ಒಳಗೆ ಜನಪ್ರವಾಹವೇ ಸಾಗುತ್ತಿತ್ತು. ದಣಿದ ಮಣಿ ಅವರನ್ನು ಕಾರಿನಲ್ಲೇ ಬಿಟ್ಟು, ಬೇಗ ಬರುವೆವೆಂದು ನಾವಿಬ್ಬರೂ ಇಳಿದೋಡಿದೆವು. ಕೋಟೆ ಬಾಜಾರ್ನ ಮಾರಾಟ ವಸ್ತುಗಳನ್ನು ಆಶೆಯಿಂದ ದಿಟ್ಟಿಸುತ್ತಾ, ಸಮಯವಿಲ್ಲದ್ದರಿಂದ ಶಾಲು ಮಾತ್ರ ಕೊಂಡು, ಓಡುತ್ತಲೇ ಸಾಗಿ ದೀವಾನ್-ಎ-ಆಮ್ ಮತ್ತು ದೀವಾನ್-ಎ-ಖಾಸ್‌ಗಳನ್ನು ನೋಡುತ್ತಾ, ಗೆಳತಿಯನ್ನು ಪ್ರಾಚ್ಯವಸ್ತು ಸ್ಮಾರಕ ಮ್ಯೂಸಿಯಮ್‌ನೆಡೆಗೆ ಎಳೆದೊಯ್ದರೆ, ಅಲ್ಲಿ ತಪಾಸಣೆ ನಿಮಿತ್ತ ಪ್ರವೇಶವಿರದೆ ಬಾಗಿಲು ಮುಚ್ಚಲ್ಪಟ್ಟಿತ್ತು. ಅಮೆರಿಕಾದಿಂದ ನೋಡಲೆಂದೇ ಬಂದಿದ್ದಾರೆ ಎಂದು ಗೋಗರೆದರೂ ಪ್ರಯೋಜನವಾಗಲಿಲ್ಲ. ಹೌದು, ಅವರಾದರೂ ಕರ್ತವ್ಯಚ್ಯುತರಾಗುವುದೆಂತು? ಬೆಳಿಗ್ಗೆ ಕೋಣೆಯಲ್ಲಿ ವೃತ್ತಪತ್ರಿಕೆ ನೋಡಿದ ಗೆಳೆಯ, “ಹಿಂದೂ ಬಾಂಬ್ಸ್ ಆಫ್ ಟೆರರ್, ಇಸ್ಲಾಮಿಕ್ ಬಾಂಬ್ಸ್ ಆಫ್ ಟೆರರ್” ಎಂದಿದ್ದುದನ್ನೋದಿ, ಜಿಗುಪ್ಸೆಯಿಂದ “ವೈ ಕಾಂಟ್ ದೇ ಕಂಬೈನ್ ಆಂಡ್ ಮೇಕ್ ಬಿಗ್ ಬಾಂಬ್ಸ್ ಐ ಸೇ?!” ಎಂದುದ್ಗರಿಸಿದ್ದು ನೆನಪಾಯ್ತು.
ಮೊಗಲ್ ಸಾಮ್ರಾಜ್ಯದ ಅಮೂಲ್ಯ ಚರಿತ್ರೆ, ಬಾಬರ್‌ನಾಮಾದಂಥ ಅಮೂಲ್ಯ ಗ್ರಂಥಗಳು, ಯುದ್ಧ ವಿವರಗಳು, ಅಂದಿನ ಉಡುಗೆ ತೊಡುಗೆಗಳು, ಯುದ್ಧೋಪಕರಣಗಳು, ಅಮೂಲ್ಯ ರತ್ನಗಂಬಳಿಗಳು, ಇನ್ನಿತರ ಎಷ್ಟೋ ಅಮೂಲ್ಯ ಸಂಗ್ರಹದ ಈ ಮ್ಯೂಸಿಯಮ್ ಕಾಣುವುದು ಗೆಳತಿಗೆ ಒದಗಿ ಬರಲಿಲ್ಲವಲ್ಲಾ, ಎಂದುಬೇಸರವಾಯ್ತು. ಜುಮ್ಮಾ ಮಸೀದಿ, ಅಕ್ಷರಧಾಮ, ಜಂತರ್ ಮಂತರ್‌ಗಳೂ ನಮಗೆಟುಕಲಿಲ್ಲ.
ಮರುಮುಂಜಾವದ ಚುಮು ಚುಮು ಬೆಳಕಲ್ಲಿ ಆಗ್ರಾದತ್ತ ಪಯಣಿಸಿ, ದಾರಿ ಮಧ್ಯೆ ವಿದೇಶೀಯರೇ ಭೇಟಿ ಕೊಡುವ ಹವೇಲಿಯೊಂದರಲ್ಲಿ ಉಪಾಹಾರ ಮುಗಿಸಿ ಹೊರಟು ಆಗ್ರಾ ತಲುಪುವಾಗ ಹತ್ತೂವರೆ ಕಳೆದಿತ್ತು. ತಾಜ್‌ಗೆ ಮುನ್ನ ಅಕ್ಬರ್‌ನ ಸಿಕಂದರಾಬಾದ್ ಫೋರ್ಟ್ ತೋರಿದ, ಡ್ರೈವರ್ ದಿಲೀಪ್. ಉನ್ನತಾಕಾರದ ಫೋರ್ಟ್‌ನಲ್ಲಿ ಎತ್ತರದ ಗುಂಬಜ಼್ ಕೆಳಗೆ ಇರುವ ಅಕ್ಬರನ ಸಮಾಧಿ! ಪ್ರತಿಧ್ವನಿಸುವ ಅದ್ಭುತ ನಿರ್ಮಾಣ! ಹೊರಗೆ ಜಿಂಕೆಗಳೂ, ಬಿಳಿ ಕೊಕ್ಕರೆಗಳೂ ವಿಹರಿಸುವ ಚೆಲುವಾದ ಹುಲ್ಲುಹಾಸು!
ಮುಂದೆ ತಾಜ್‌ನ ವಾಹನಮಿತಿಯಲ್ಲಿ ಕಾರ್ ನಿಲ್ಲಿಸಿ, ಒಂಟೆ ಸವಾರಿ ಬುಕ್ ಮಾಡಿಕೊಂಡು ಮುಂದೆ ಸಾಗಿದೆವು. ವಾಯುಮಾಲಿನ್ಯದಿಂದ ತಾಜ್ ಮೇಲ್ಮೈ ಸೌಂದರ್ಯ ಕೆಡತೊಡಗಿದಾಗ, ಲೆದರ್ ಫೌಂಡ್ರಿಗಳನ್ನು ಮುಚ್ಚಿಸಿ ಕಾರ್ಮಿಕರಿಗೆ ಒಂಟೆ, ಕುದುರೆ ಗಾಡಿಗಳನ್ನಿತ್ತು ಟೂರಿಸಮ್‌ನಲ್ಲಿ ತೊಡಗಿಸಿಕೊಂಡಿತು, ಸರಕಾರ. ಉತ್ತರ ಪ್ರದೇಶ ಗುಡಿ ಕೈಗಾರಿಕಾ ಯೋಜನೆಯಡಿ ಕಾರ್ಮಿಕರನ್ನೂ, ಆಗ್ರಾ ಜೈಲಿನ ಕೈದಿಗಳನ್ನೂ ಬಾಳೆದಿಂಡು ಹಾಗೂ ಬಿದಿರಿನ ನಾರಿನಿಂದ ಸೀರೆ, ಹಾಸು, ಹೊದಿಕೆ ತಯಾರಿಯ ಕೈಗಾರಿಕೆಯಲ್ಲಿ ತೊಡಗಿಸಿಕೊಂಡಿತು.
ಒಂಟೆಯಿಂದಿಳಿವಾಗ ಕೈನೀಡಿ ಜೊತೆಯಾದವನು, ನಮಗೆ ಗೈಡ್ ಆಗಿ ಬಂದ ದೀಪಕ್ ಪರಾಶರ್ – ನಿಜಕ್ಕೂ ಒಬ್ಬ ಅತ್ಯುತ್ತಮ, ನಿಷ್ಠಾವಂತ ಗೈಡ್. ಪ್ರವೇಶದ್ವಾರದ ಕಮಾನಿನ ಬುರುಜುಗಳ ಸಂಖ್ಯೆಯು, ಕುರಾನಿನ ಅಧ್ಯಾಯಗಳ ಸಂಖ್ಯಾಸೂಚಕವೆಂದ ಆತ ಇಂತಹ ಎಷ್ಟೂ ಮಾಹಿತಿಗಳನ್ನು ನಮಗಿತ್ತ. ನೋಡುವ ತವಕದಲ್ಲಿ ಮುಂದೆ ಓಡಲೆತ್ನಿಸುತ್ತಿದ್ದ ನನ್ನ ಕಾಲ್ಗಳನ್ನು ತಡೆವಂತೆ, “ಮ್ಯಾಡಮ್‌ಜೀ, ಸಾಥ್ ಮೇ ಚಲಿಯೇ”, ಎಂದು ಎಚ್ಚರಿಸುತ್ತಿದ್ದ.
ಅಲ್ಲಿ ತಾಜ್ ಮಹಲ್‌ನ ಅಗಾಧತೆಯನ್ನು ಕಣ್ಣಾರೆ ಕಂಡಲ್ಲದೆ ಅರಿಯುವುದು ಅಸಾಧ್ಯ. ಹಾಲು ಬೆಳದಿಂಗಳೇ ಮೂರ್ತೀಭವಿಸಿದಂತಿದ್ದ ತಾಜ್‌ನ ನಿರ್ಮಾಣ, ಅಮೂಲ್ಯ ಹರಳುಗಳ ಚಿತ್ತಾರದ ಹೂಬಳ್ಳಿಗಳ ವಿನ್ಯಾಸದೊಡನೆ ಬ್ಲಾಕ್ ಓನಿಕ್ಸ್ ಎಂಬ ಕರಿ ಹರಳಿನಿಂದ ಕೆತ್ತಲ್ಪಟ್ಟ ಕುರಾನ್‌ನ ಅಧ್ಯಾಯಗಳ ಕಾಲಮ್‌ಗಳು! ಷಾಹಜಹಾನ್ ಹಾಗೂ ಮುಮ್ತಾಜ್ ಮಹಲ್ ಚಿರನಿದ್ರೆಯಲ್ಲಿ ಪವಡಿಸಿದ ಉತ್ಕೃಷ್ಟ ಅಮೃತಶಿಲಾ ಸಮಾಧಿ. ನಂಬಲಾಗದಂತಹ ಎತ್ತರ ಹಾಗೂ ವೈಶಾಲ್ಯದ ಆ ಬುರುಜು! ಪ್ರಾಕಾರದ ಹೊರಗೆ ಕೆಳಗೆ ತಣ್ಣನೆ ಹರಿದಿರುವ ಯಮುನೆ!
ಅಲ್ಲೇ ಹೊರಗೆ ಪಕ್ಕದಲ್ಲಿರುವ ಆಗ್ರಾ ಮಾರ್ಬ್‌ಲ್ ವರ್ಕ್‌ಶಾಪ್‌ಗೆ ದೀಪಕ್ ಪರಾಶರ್ ನಮ್ಮನ್ನೊಯ್ದ. ತಾಜ್‌ನ ಹೊರಮೈ ಚಿತ್ತಾರದ ಸುಂದರ ಕಲಾಕೃತಿಗಳು ಅಲ್ಲಿದ್ದುವು. ಅಲ್ಲಿ ಗೆಳತಿ ನನಗಿತ್ತ ಚೆಲುವಾದ ಅಮೂಲ್ಯ ಸಂದೂಕವೊಂದು ಇಲ್ಲಿ ನನ್ನೆದುರು ಕುಳಿತು, ತಾಜ್, ಆಗ್ರಾ ಹಾಗೂ ನನ್ನ ಪ್ರಿಯ ಗೆಳತಿಯನ್ನು ಸದಾ ನೆನಪಿಸುತ್ತಿದೆ. ಆಗ್ರಾದ ಕೆಥೆಡ್ರಲ್ ಚರ್ಚ್‌ನಲ್ಲಿ ಕ್ರಿಸ್ತಿನ್ ಬಂಧು – ಫಾ. ಗ್ರೆಗರಿ, ಕಾಯುತ್ತಿದ್ದುದರಿಂದ ಆಗ್ರಾ ಫೋರ್ಟ್ ಸಂದರ್ಶನ ಮಾತ್ರ ಉಳಿದೇಹೋಯ್ತು. ಕೆಥೆಡ್ರಲ್ ಚರ್ಚ್ ಪಕ್ಕವೇ ಅಕ್ಬರ್ ಬಾದಶಹ ೧೫೬೪ರಲ್ಲಿ ನಿರ್ಮಿಸಿದ ಚೆಲುವಾದ ಅಕ್ಬರ್‍ಸ್ ಚರ್ಚ್ ಕಂಡು ಅಚ್ಚರಿ ಬೆರೆತ ಆನಂದವಾಯ್ತು.
ರಾತ್ರಿ ದೆಹಲಿಗೆ ಮರಳುವ ದಾರಿಯಲ್ಲಿ ಕ್ರಿಸ್ತಿನ್ ಪುನಃ ಅಲ್ಲಿನ ತಮ್ಮ ಜೀವನದ ಬಗ್ಗೆ, ಆರೋಗ್ಯವಾಗೇ ಇರುವ ಅಮ್ಮನ ಬಗ್ಗೆ, ಮೊಮ್ಮಗ ನೋವಾ ಬಗ್ಗೆ, ಅವನಿಗಾಗಿ ಕನ್ನಡ ಹಾಡುಗಳನ್ನು ಸ್ಮರಿಸಿಕೊಂಡು ಹಾಡುವ ಬಗ್ಗೆ ಎಲ್ಲವನ್ನೂ ಹೇಳಿದಳು. ತಂದೆಯ ಮರಣ ಹಾಗೂ ಚಾರ್ಟರ್ಡ್ ಫ್ಲೈಟ್ ಹಾರಿಸಿದ ದುರಂತದಲ್ಲಿ ಇಲ್ಲವಾದ ಭಾವನ ಬಗ್ಗೆ ಎಲ್ಲವನ್ನೂ ಹೇಳಿ, “ಮತ್ತೆಲ್ಲ ಚೆನ್ನಾಗೇ ಇದೆ; ವೀ ಹ್ಯಾವ್ ಟು ಕೌಂಟ್ ಅವರ್ ಬ್ಲೆಸ್ಸಿಂಗ್ಸ್”, ಎಂದಾಗ ನನ್ನ ಹೃದಯವೂ ತುಂಬಿ ಬಂತು.
ಮರುದಿನ ದೆಹಲಿಗೆ ವಿದಾಯ ಹೇಳಿ ಮುಂಬೈ ತಲುಪಿ, ಏರ್‌ಪೋರ್ಟ್‌ನಿಂದಲೇ ಕ್ಯಾನ್ಸರ್‌ನ ಅಂತಿಮ ಹಂತದ ರೋಗಿಗಳಿಗೆ ನೋವರಿಯದ ಅಂತ್ಯ ಕಾಣಿಸುವ ಬಾಂದ್ರಾದ ಶಾಂತಿ ಅವೇದನಾ ಆಶ್ರಮಕ್ಕೆ ಕರೆದೊಯ್ದೆ. ಆಶ್ರಮದ ಹುಂಡಿಗೆ ಗೆಳತಿಯ ದೊಡ್ಡ ಕೊಡುಗೆಯೂ ಸೇರಿತು. ಬಳಿಕ ಮೌಂಟ್ ಮೇರಿಗೆ ಭೇಟಿಯಿತ್ತು, ಮನೆ ತಲುಪಿದೆವು.
ಮರುಬೆಳಗು ಶೋಕತಪ್ತ ಬೆಳಗಾಯ್ತು. ರಿಂಗುಣಿಸಿದ ಕರೆಯು ಅಮೆರಿಕಾದಿಂದ ಶೋಕವಾರ್ತೆಯನ್ನೇ ಹೊತ್ತು ತಂದಿತು. ಕ್ರಿಸ್ತಿನ್‌ನ ಅಣ್ಣನ ಮಗ, ಯೇಲ್ ಯೂನಿವರ್ಸಿಟಿಯ ಅತ್ಯುತ್ತಮ ಮೆಡಿಕಲ್ ವಿದ್ಯಾರ್ಥಿ, ಹದಿಹರೆಯದ ಚಿನ್ನದಂತಹ ಗುಣದ ಹುಡುಗ, ಆತ್ಮಹತ್ಯೆಗೈದು ಇಲ್ಲವಾಗಿದ್ದ. ಸ್ಕಾಲರ್‌ಶಿಪ್‌ನಲ್ಲೇ ಕಲಿತು ಸದಾ ಮೊದಲಿಗನಾಗಿದ್ದವ. ಕಳೆದೊಂದು ತಿಂಗಳು ಅಮೆರಿಕಾಧ್ಯಕ್ಷ ಸ್ಥಾನಕ್ಕಾಗಿ ಒಬಾಮಾ ಪರ ಇಲೆಕ್ಷನ್ ಕ್ಯಾಂಪೇನ್‌ಗಾಗಿ ದೂರ ಫ್ಲೋರಿಡಾದಲ್ಲಿ ಸುತ್ತುತ್ತಾ ವ್ಯಸ್ತನಿದ್ದ ತಂದೆ, ಈಗ ತಾನು ತನ್ನ ಮಗನಿಗೊದಗದೆ ಹೋದೆನೇ, ಎಂದು ದುಃಖಿಸುತ್ತಿದ್ದ.
ಬರೋಡಾದಿಂದ ಕ್ರಿಸ್ತೀನಾಳನ್ನು ಸಿಗಲೆಂದೇ ಬಂದ ಗೆಳತಿ ದಯಾ, ನೋವನ್ನು ಕಳೆವಂತೆ ಮಾನಸ ಗಂಗೋತ್ರಿಯ ಹಳೆ ನೆನಪುಗಳ ನಗುವಿನ ಭಂಡಾರ ತೆರೆದು, ಅವರಿಬ್ಬರನ್ನೂ ಹಗುರಾಗಿಸಿದಳು. ಆಕಸ್ಮಿಕ ದುರಂತದ ನೋವನ್ನು ಹೃದಯದಲ್ಲಡಗಿಸಿಕೊಂಡು, ನಗು ನಗುತ್ತಾ, “ಎಲ್ಲವೂ ಚೆನ್ನಾಗಿ ಆಯ್ತು; ಬಯಸಿದ್ದಕ್ಕಿಂತ ಹೆಚ್ಚಿನ ಸಂತಸ ನಮ್ಮದಾಯ್ತು. ಎಲ್ಲ ಸಿಹಿ ನೆನಪುಗಳೊಂದಿಗೆ ಹಿಂದಿರುಗುತ್ತಿದ್ದೇವೆ. ಮಕ್ಕಳೊಡನೆ ಪುನಃ ಬೇಗನೇ ಹಿಂದಿರುಗುವೆವೆಂದು ಅನಿಸ್ತಿದೆ, ಶ್ಯಾಮಲಾ; ಆ ದಿನ ಬೇಗನೇ ಬಂದೀತು”, ಎಂದು ಬೀಳ್ಕೊಂಡ ಗೆಳತಿ ಹಾಗೂ ಅವಳ ಬಾಳ ಸಂಗಾತಿ ಮಣಿ, ನನ್ನ ಹೃದಯದಲ್ಲಿ ಬೆಚ್ಚಗೆ ಕುಳಿತಿದ್ದಾರೆ.
(ಮುಂದುವರಿಯಲಿದೆ)
ಶ್ಯಾಮಲಾ ಅವರೂ ಗೆಳತಿಯ ಜೊತೆ ಪ್ರವಾಸ ಹೊರಟಿದ್ದಾರೆ.ಗೆಳೆತನಕ್ಕಿರುವ ಶಕ್ತಿ ಎಂಥದ್ದೆಂದು ಶ್ಯಾಮಲಾ ಅವರ ಈ ಅಧ್ಯಾಯ ಸಾಬೀತು ಮಾಡಿದೆ. ನಮ್ಮ ಆತ್ಮೀಯರೊಂದಿಗೆ ಪ್ರವಾಸ ಹೊರಟಾಗ ಎಂತಹ ಹಾಳುಗಲ್ಲಿಯಲ್ಲಿ ಸುತ್ತಿದರೂ ನಂದನವನದಲ್ಲಿ ತಿರುಗಿದ ಖುಷಿ ಕೊಡುತ್ತದೆ. ಕಚ್ಚಾ ರಸ್ತೆಯಲ್ಲಿ ಹೆಜ್ಜೆ ಹಾಕಿದರೂ ಸ್ವರ್ಗದ ಅಮರಾವತಿಯ ವರ್ಣನೆಗಳುಕಣ್ಣಿಗೆ ರಾಚಿದಂತಾಗುತ್ತದೆ. ಶ್ಯಾಮಲಾ ತನ್ನ ಗೆಳತಿಯೊಂದಿಗೆ ಕಳೆದ ಆ ದಿನ್ಗಳು ಎಷ್ಟು ಅಮೂಲ್ಯವೆಂಬುದನ್ನು ಹೃದಯ ತುಂಬಿ ಹೇಳುತ್ತಾ ಸಾಗಿದ್ದಾರೆ. ನಮಗೂ ಈ ದೃಶ್ಯಗಳನ್ನು ಕಂಡು ಮನಸ್ಸು ಪ್ರಸನ್ನಗೊಳ್ಳುವಂತಾಗಿದೆ. ಈ ತಿರುಗಾಟದಲ್ಲಿ ಗೆಳತಿಯೊಂದಿಗೆ ಸಾಥ್ ನೀಡಿದ್ದು, ಬಾಲ್ಯವನ್ನು ಮತ್ತೊಮ್ಮೆ ಅನುಭವಿಸಿದ ಸುಖದಲ್ಲಿ ಇಬ್ಬರೂ ತೇಲಾಡಿದ್ದು ನಮಗೆ ಕಂಡಿದೆ. ಆದುದರಿಂಡ ಈ ಸುಖದಲ್ಲಿ ಎಷ್ಟೋ ಸ್ಥಳಗಳ ವರ್ಣನೆಗಳು ಮರೆತುಹೋಗಿರುವ ಸಂಭವವೂ ಇರಬಹುದು ಎಂದು ನನಗನಿಸುತ್ತದೆ. ನೆನಪುಗಳ ಅಕ್ಷಯ ಪಾತ್ರೆ ನಮ್ಮೊಂದಿಗೆ ಇದೆಯಲ್ಲಾ ಎಂಬ ದೃಢತೆ ಶ್ಯಾಮಲಾಗಿದೆ, ಮತ್ತೇಕೆ ಚಿಂತೆ. ಮುಂದೆ ಎಂದಾದರೂ ಅದನ್ನು ಬರೆದಾರು ಎಂದು ನಾವು ಆಶಿಸಬಹುದಲವೇ?
ರೋಹಿಣಿ, ನಿಮ್ಮ ಪ್ರೀತಿ ತುಂಬಿದ ಮೆಚ್ಚುನುದಿಗಳಿಗೆ ಹೃದಯ ತುಂಬಿ ಬಂದಿದೆ. ನಿಮ್ಮ ನಿರೀಕ್ಷೆಯಂತೆ ನಡೆವೆ .
ತೊಳೆದಿಟ್ಟ ಒಡವೆಗಳ ಹಾಗೆ ನಿಮ್ಮ ನೆನಪುಗಳು ಲಕಲಕ ಹೊಳೆಯುತ್ತವೆ ನೆನಪಿನ ಓಣಿಯೊಳಗೆ ಮಿನುಗುವ ಈಎಣ್ಣೆದೀಪಗಳು ಚೇತೋಹಾರಿಯಾಗಿವೆ.ಒಳ್ಳೊಳ್ಳೆಯ ಹೂ ಹಣ್ಣುಗಳನ್ನಷ್ಟೆ ಬದುಕಿನ ಬುಟ್ಟಿಯಲ್ಲಿತುಂಬಿ ಕೊಳ್ಳುವ ನಿಮ್ಮಜೀವನಧರ್ಮ ಕೂಡ ಅನುಕರಣೀಯವಾಗಿದೆ. ಇನ್ನೂ ಬರೆಯಿರಿ