ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ
ನಾಳೆ ಇನ್ನೂ ಕಾದಿದೆ
ಅಧ್ಯಾಯ – ೩೬

ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್ ಉಪಾಧ್ಯರ ಮೂಲಕ ಡಾ. ಎಂ. ಎಚ್. ಕೃಷ್ಣಯ್ಯ ಅವರು ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು ಸಂಪುಟವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಭಾಗಶಃ ಅನುವಾದಿಸಿ ಕೊಡುವಂತೆ ಕೇಳಿದಾಗ, ನನಗೆ ಅಚ್ಚರಿಯೇ ಆಯ್ತು. ಮರಾಠಿ ಭಾಷೆಯಲ್ಲಿ ಇನಿತೂ ಪ್ರಭುತ್ವವಿರದ ನಾನು ಅದೆಂತು ಮಾಡಲಿ, ಎಂದಾಗ, “ಇಲ್ಲ, ನಿಮ್ಮಿಂದ ಖಂಡಿತ ಸಾಧ್ಯವಿದೆ; ಮಾಡಿಕೊಡಿ”, ಎಂದು ಇಬ್ಬರೂ ಅನುನಯಿಸಿದರು. ಅವರ ಭರವಸೆಯೇ ಇಂಬಾಗಿ, ಆರಂಭಿಸಿದ ನನಗೆ, ಅನುವಾದಿಸುತ್ತಾ ಹೋದಂತೆ ಬರವಣಿಗೆ ಸಲೀಸಾಯ್ತು.

ಅನುವಾದ ಸಾಗಿದಂತೆ ಅಂಬೇಡ್ಕರ್ ವಿಚಾರಗಳು ರುಚಿಸಿದರೂ, ತಾತ್ವಿಕ ಸಂಘರ್ಷ ಬಂತೇ ಬಂತು. ಆದರ್ಶ ಪಾಲನೆಯಲ್ಲಿ, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಬಗೆಗಿನ ಅವರ ಕಟು ವಿಚಾರಗಳನ್ನು, ಮಾತುಗಳನ್ನು ನನ್ನ ನುಡಿಯಲ್ಲಿ ಅನುವಾದಿಸಿ ಬರೆಯುವುದು ಹಿಂಸೆಯೇ ಅನಿಸಿತು. ಆದರೆ, ಅನುವಾದಿಸಲೊಪ್ಪಿಕೊಂಡು ಕಾರ್ಯೋನ್ಮುಖಳಾದ ಮೇಲೆ ಇದ್ದುದನ್ನಿದ್ದಂತೆ ಅನುವಾದಿಸದೆ ಉಪಾಯವಿರಲಿಲ್ಲ. ಮೂಲಕ್ಕೆ ಬದ್ಧವಾಗಿರುವುದೇ ನನ್ನನುವಾದದ ಆಶಯ. ಅಂತೆಯೇ ಮಾಡಿದೆ.

೨೦೧೨ರಲ್ಲಿ ನನ್ನ ಚಿಕ್ಕಪ್ಪ ತೀರ ರುಗ್ಣಾವಸ್ಥೆಗಿಳಿದರು. ಚಿಕ್ಕಮ್ಮನ ಆರೋಗ್ಯವೂ ನಾಜೂಕಾಗಿತ್ತು. ಅವರ ಆರೈಕೆಗಾಗಿ ಮಗಳು ಅನು, ಅವರನ್ನು ಮಂಗಳೂರ ತನ್ನ ಮನೆಗೆ ಕರೆದೊಯ್ದಳು. ಗುಡ್ಡೆಮನೆ ನಿರ್ಜನವಾಗಿ ಬಾಗಿಲಿಕ್ಕಿಕೊಂಡಿತು. ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದ ಚಿಕ್ಕಮ್ಮ, ೨೦೧೨ ಮೇ ೧೦ರಂದು ಕೊನೆಯುಸಿರೆಳೆದರು. ಆಗಲೇ ಅಯೋಮಯರಾಗಿದ್ದ ಚಿಕ್ಕಪ್ಪ, ಸಂಪೂರ್ಣ ಹಾಸಿಗೆ ಹಿಡಿದರು.

ಗುಡ್ಡೆಮನೆಯಲ್ಲಿರುವವರೆಗೂ ಸಂಜೆ ನಡೆದುಕೊಂಡೇ ನಮ್ಮಲ್ಲಿಗೆ ಬಂದು ಹಿಂದಿರುಗುತ್ತಿದ್ದರು, ಚಿಕ್ಕಪ್ಪ. ದೃಷ್ಟಿದೋಷವಿದ್ದರೂ, ಅವರು ಹಾಗೆ ಆ ಹೆದ್ದಾರಿಯಲ್ಲಿ ನಡೆದುಕೊಂಡು ಬರುವಾಗ, ಹಾಗೇ ಹಿಂದಿರುಗುವಾಗ ನಮಗೆಲ್ಲ ಜೀವ ಕೈಯಲ್ಲಿ ಹಿಡಿದಿರುವಂತೆ ಅನಿಸುತ್ತಿತ್ತು. ಹಿಂದೆಲ್ಲ ಚೆನ್ನಾಗಿದ್ದಾಗ, ದಾರಿಯಲ್ಲಿ ತಮ್ಮ ಗೆಳೆಯ ಕುಟ್ಟಂಕ್‌ಲ್ ಅವರನ್ನು ಕೂಡಿಕೊಂಡು ಸಮುದ್ರ ತಡಿಯ ವರೆಗೆ ಹೋಗಿದ್ದು ಕತ್ತಲಾಗುವಾಗ ಮನೆಗೆ ಹಿಂದಿರುಗುತ್ತಿದ್ದರು. ಅಭಿಮಾನಧನರಾದ ಚಿಕ್ಕಪ್ಪ, ಎಂದೂ ಯಾರಿಂದಲೂ ಯಾವ ಸಹಾಯವನ್ನೂ ಬಯಸುತ್ತಿರಲಿಲ್ಲ. ಮುಂಬೈಯಲ್ಲಿದ್ದಾಗ ನಮ್ಮ ಮನೆಗೆ ಬಂದಾಗ ಮಾತ್ರ ಬರಿಯ ಚಹಾ ಕುಡಿಯುತ್ತಿದ್ದರು. ತಮ್ಮ ಮಕ್ಕಳ ಮನೆಗಳಲ್ಲಿ ಅವರು ಚಹಾ ಕೂಡಾ ತೆಗೆದು ಕೊಳ್ಳುತ್ತಿರಲಿಲ್ಲ. ನನ್ನ ತೋಳಿಗೆ ಮ್ಯಾನಿಪ್ಯುಲೇಶನ್ ಸರ್ಜರಿ ಆಗಿ ಚೇತರಿಸುವಾಗ, ಚಿಕ್ಕಪ್ಪ ನನ್ನೊಡನಿದ್ದರು; ನನ್ನ ನೋವು ಕಂಡು ಅವರೂ ನೊಂದಿದ್ದರು.

ಕೊನೆಯ ದಿನಗಳಲ್ಲಿ ಮಗಳ ಮನೆಯಲ್ಲಿದ್ದಾಗ, “ಸಂಜೆಯಾಯ್ತು; ಮನೆಗೆ ಹೋಗ್ಬೇಕು; ದೀಪ ಬೆಳಗುವ ಹೊತ್ತಾಯ್ತು”, ಎಂದು ತನ್ನ ಗುಡ್ಡೆಮನೆಗೆ ಹೋಗಲು ಹವಣಿಸುತ್ತಿದ್ದ ಜೀವ! ೨೦೧೩ ಜನವರಿ ೧೩ರಂದು ಕೊನೆಯುಸಿರೆಳೆದ ನನ್ನ ಚಿಕ್ಕಪ್ಪನ ಅಂತಿಮ ದರ್ಶನ ಪಡೆವ ಭಾಗ್ಯ ನನಗಿರಲಿಲ್ಲ. ಕೆಲದಿನಗಳ ಮೊದಲಷ್ಟೇ ಅವರನ್ನು ಕಂಡು, ಕಾಲಿಗೆರಗಿ ಬಂದಿದ್ದೆ. ಊರಿನಿಂದ ಹಿಂದಿರುಗುವಾಗಲೆಲ್ಲ ಅವರ ಆಶೀರ್ವಾದ ಪಡೆಯಲು ಗುಡ್ಡೆಮನೆಗೆ ಹೋದಾಗ, ಚಿಕ್ಕಮ್ಮ ತೂಗುದೀಪ ಬೆಳಗುತ್ತಿದ್ದರು. ಅವರಿಬ್ಬರನ್ನೂ ಕಳಕೊಂಡ ನಮ್ಮೆಲ್ಲರ ಪ್ರೀತಿಯ ಗುಡ್ಡೆಮನೆ ಬಾಗಿಲಿಕ್ಕಿ ಕೊಂಡಿದೆ. ನೆನೆದಷ್ಟೂ ಹೃದಯವನ್ನು ಕುಗ್ಗಿಸುವ ಖಾಲಿತನ ತುಂಬಿಕೊಂಡಿದೆ……….

ನಮ್ಮಮ್ಮನ ಹೊರತು, ಹಿರಿಯರೆಲ್ಲರನ್ನೂ ಕಳಕೊಂಡ ಬಳಿಕೀಗ, ನಮ್ಮ ಆ ಪ್ರಿಯ ಮನೆಯನ್ನು, ಅಲ್ಲಿ ಜೊತೆಯಾಗಿ ಕಳೆದ ನಲಿವು, ಒಲವಿನ ಸವಿದಿನಗಳನ್ನು ಸತತ ಸ್ಮರಿಸಿ ಆಡಿಕೊಳ್ಳುತ್ತಿರುವುದೂ, ಸಾಧ್ಯವಾದಾಗಲೆಲ್ಲ ಹೋಗಿ ಅಲ್ಲಿ ಅಡ್ಡಾಡಿ ಬರುವುದೂ ಅದಷ್ಟೇ ಈಗ ನಮ್ಮ ಭಾಗ್ಯ. ತಮ್ಮ ಸತೀಶನೊಡನೆ ನಾನು ಮೆಲುಕು ಹಾಕುವ ಆ ಬಾಲ್ಯದ ಸವಿದಿನಗಳ ನೆನಪುಗಳ ಚಿತ್ರಣವನ್ನು ಕಾಣುವಾಗ, ಕೇಳುವಾಗ, ತನಗೆ ಬಾಲ್ಯವೇ ಇರಲಿಲ್ಲವೇನೋ ಎಂದನಿಸುವುದು, ಎಂದನ್ನುವಳು, ದಯಾ.

ಬರೋಡಾದಲ್ಲಿ ಆಲ್ಮೊನಾರ್ಡ್ ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್ ಆಗಿರುವ ತಮ್ಮ ಸತೀಶ ಹಾಗೂ ದಯಾ, ತಮ್ಮಲ್ಲಿಗೆ ಬರುವಂತೆ ಪ್ರೀತಿಯಿಂದ ಕರೆಯುತ್ತಿದ್ದರು. ಮೋದಿಯ ಗುಜರಾತ್ ನೋಡುವ ಇಷ್ಟವೇ ನನಗಿರಲಿಲ್ಲ. ಅದೆಲ್ಲ ಪಕ್ಕಕ್ಕಿಟ್ಟು ನೀನು ನನ್ನಲ್ಲಿಗೆ ಬಾ, ಎಂದು ಗೆಳತಿ ಕಟುವಾಗಿ ಆಣತಿಯಿತ್ತಳು. ಹಾಗೆ ನಮ್ಮಕ್ಕ ರಾಜೀವಿ, ತಂಗಿ ಮಂಜುಳಾ ಹಾಗೂ ನಾನು ಹೊರಟು ನಿಂತೆವು. ಮುಂಬೈ ಸೆಂಟ್ರಲ್‌ನಿಂದ ಒಂದು ನಲ್ವತ್ತರ ಕರ್ಣಾವತಿ ಎಕ್ಸ್‌ಪ್ರೆಸ್ ಹಿಡಿಯಲು ಹನ್ನೆರಡು ಗಂಟೆಗೇ ಮನೆ ಬಿಡಿ, ಎಂದು ಬರೋಡಾದಿಂದ ಕಟ್ಟಪ್ಪಣೆಯಾಗಿತ್ತು. ಹನ್ನೆರಡಕ್ಕೇ ಬರುವಂತೆ ಮೇರು ಟ್ಯಾಕ್ಸಿಗೆ ಹೇಳಲಾಗಿತ್ತು. ಹನ್ನೆರಡರಿಂದ ಗಂಟೆಕಾಲ ಟ್ಯಾಕ್ಸಿ ಚಾಲಕ, ಮನೆಯೆಲ್ಲೆಂದು ಪುನಃ ಪುನಃ ಕೇಳುತ್ತಾ, ಹೈವೇಯಲ್ಲಿದ್ದೇನೆ; ಘಾಟ್‌ಕೋಪರ್ ಹೊಕ್ಕಿದ್ದೇನೆ, ಪಶ್ಚಿಮದಲ್ಲಿದ್ದೇನೆ, ಪೂರ್ವದಲ್ಲಿದ್ದೇನೆ, ಎನ್ನುತ್ತಾ ನಮ್ಮ ಹೃದಯ ಬಡಿತ ಹೆಚ್ಚಿಸಿದರೆ ಇನ್ನು ಕಾಯಲಾಗದೆಂದು ನಾವು ಕೆಳಗಿಳಿದು ಮುಖ್ಯರಸ್ತೆಗೇ ಬಂದು ಅಲ್ಲಿ ಅವನನ್ನು ಎದುರಾದೆವು. ರೈಲು ಸಿಗುವ ಯಾವ ಭರವಸೆಯೂ ಇರಲಿಲ್ಲ. ಹೇಗೋ ಸ್ಟೇಶನ್ ತಲುಪಿದರೆ ರೈಲು ಹೊರಡಲು ಸಿದ್ಧವಾಗಿ ನಿಂತಿತ್ತು. ಅಕ್ಕ ಮತ್ತು ಮಂಜುಳಾ ಇಳಿದೋಡಿ ರೈಲು ಹತ್ತಿದರೆ, ನನಗೋ ಕಾಲೇ ಬರುತ್ತಿರಲಿಲ್ಲ. ಕಾಲು ಕುಸಿವಂತೆ ಅನಿಸುತ್ತಿತ್ತು. ಅದು ಹೇಗೋ ಸಮೀಪಿಸಿ ನಾನು ರೈಲಿನೊಳಕ್ಕೆ ಕಾಲಿಟ್ಟುದೇ, ರೈಲು ಹೊರಟಿತು. ಹರ್ಷ, ನಮ್ಮ ಬ್ಯಾಗುಗಳನ್ನು ರೈಲಿನೊಳಕ್ಕೆ ಎಸೆದಿದ್ದ!

ವಾಪಿ, ವಲ್ಸಾಡ್, ಸೂರತ್‌ಗಳಲ್ಲಿ ನಿಮಿಷಗಳ ಕಾಲ ನಿಂತು ಸಾಗಿದ ರೈಲು; ಸೂರತ್ ಸಮೀಪಿಸುವಾಗ ತಪ್ತಿ ನದಿಯೂ, ಭರೂಚ್ ಸಮೀಪಿಸುವಾಗ ನರ್ಮದಾ ನದಿಯೂ, ವಡೋದರಾ ಸಮೀಪಿಸುವಾಗ ವಿಶ್ವಾಮಿತ್ರಿ ನದಿಯೂ, ದೃಗ್ಗೋಚರವಾದವು. ಗೆಳತಿ ದಯಾ ನಿಲ್ದಾಣದಲ್ಲಿ ಎದುರ್ಗೊಂಡು ಜಗನ್ನಾಥಪುರದ ಮನೆಗೆ ಕರೆದೊಯ್ದ ದಾರಿಯಲ್ಲಿ ಸಾವಿರಾರು ಎಕ್ರೆ ವಿಸ್ತಾರದ ಅರಮನೆ ಭೂಮಿ, ಮಹಾದ್ವಾರ ಹಾಗೂ ದೂರದಲ್ಲಿ ಅರಮನೆ ಕಣ್ಸೆಳೆಯಿತು.

ಮೂರುದಿನಗಳ ನಮ್ಮ ಭೇಟಿಯಲ್ಲಿ ಶಕ್ಯವಿರುವಷ್ಟೂ ತೋರುವಂತೆ ಎಲ್ಲವನ್ನೂ ನಿಯೋಜಿಸಿಕೊಂಡಿದ್ದರು, ಸತೀಶ, ದಯಾ. ಅರಮನೆ ಆವರಣದಲ್ಲಿ ಮರಗಳ ತಂಪಿನಲ್ಲಿ ಜಗನ್ನಾಥಮಂದಿರಕ್ಕೆ ಭೇಟಿಯಿತ್ತು, ಮತ್ತೆ ರಾಜರಸ್ತೆ ಎಕ್ಸ್‌ಪ್ರೆಸ್ ವೇಯಲ್ಲಿ ಅಹಮದಾಬಾದಿನತ್ತ ಪಯಣ. ಏರುತಗ್ಗಿಲ್ಲದ, ಸಮತಟ್ಟಾದ ಭೂಮಿಯಲ್ಲಿ ಹಾದ ಸುವಿಶಾಲ, ಸುಭದ್ರ, ಸುಂದರ ಪಥ! ಇಕ್ಕೆಲಗಳಲ್ಲೂ ಕಣ್ಣು ಹಾಯ್ದಷ್ಟು ದೂರ ಹಸಿರಿನಿಂದ ನಳನಳಿಸುವ ಹೊಲಗದ್ದೆಗಳು; ಹಣ್ಣಿನ ತೋಟಗಳು; ನಡುವೆ ಹರಿವ ಕಾಲುವೆಗಳು; ಹೊಲಗಳಲ್ಲಿ ಕೊಕ್ಕರೆಗಳು; ಹುಲ್ಲುಗಾವಲಲ್ಲಿ ದನ, ಕುರಿ, ಆಡುಗಳ ಹಿಂಡು; ರಸ್ತೆ ವಿಭಜಕದಲ್ಲಿ ಕಂಗೊಳಿಸುವ ಹೂಗಿಡಗಳು! ಈ ರಾಜ್ಯ ಇಷ್ಟು ಹಸಿರಾಗಿದೆಯೇ ಎಂದು ಅಚ್ಚರಿಯಾಯ್ತು. ರಾಜಧಾನಿ ಗಾಂಧಿನಗರವನ್ನು ಪ್ರವೇಶಿಸಿ, ಅಕ್ಷರಧಾಮಕ್ಕೆ ಭೇಟಿಯಿತ್ತೆವು. ಬಿಗು ಪಹರೆಯ ಈ ತಾಣದ ಹೊರಾವರಣದಲ್ಲಿ ಸುಂದರ ಹೂಗಿಡಗಳು, ಬಕುಲ ವೃಕ್ಷಗಳು; ಮೇಲ್ಮಹಡಿಯಲ್ಲಿ ಸ್ವಾಮಿ ನಾರಾಯಣರ ಆಕರ್ಷಕ, ಬೋಧಪ್ರದ ಜೀವನ ಚಿತ್ರಣ!

ಅಲ್ಲಿಂದ ಹೊರಟು, ಮುಂದೆ ಅಡಲಜ್ ಸೋಪಾನ ಬಾವಿಯ ದರ್ಶನ, ಭವ್ಯ ವಿಸ್ಮಯ ಲೋಕವನ್ನೇ ತೆರೆದಿಟ್ಟಿತು. ವೃತ್ತಾಕಾರದ ಈ ಸೋಪಾನ ಬಾವಿಯ ಮೆಟ್ಟಲುಗಳನ್ನಿಳಿದರೆ, ಮೂರು ಮಾಳಿಗೆ ಕೆಳಗೆ ವೃತ್ತಾಕಾರದ ತುಂಬುನೀರಿರುವ ಬಾವಿ! ಕಬ್ಬಿಣದ ಜಾಲರಿ ಹಾಸಿ ಭದ್ರ ಗೊಳಿಸಿದ ಬಾವಿ. ನಾಲ್ಕು ಮಾಳಿಗೆ ಮೇಲಕ್ಕೆ ಅರಮನೆ ಪ್ರಾಕಾರ, ಕೋಣೆಗಳು. ಸೊಗಸಾದ ಚಿತ್ತಾರದ ಗವಾಕ್ಷಗಳು. ಷಟ್ಕೋನದ ವೃತ್ತವಾಗಿರುವ ಈ ಏಳು ಮಹಡಿಗಳ ಪ್ರಾಸಾದವನ್ನು ಆ ಬಾವಿಯ ಸುತ್ತ ಅದು ಹೇಗೆ ನಿರ್ಮಿಸಿದರೋ ಎಂಬ ಅಚ್ಚರಿ!

ಮುಂದೆ ಸಬರ್ಮತಿ ಆಶ್ರಮದತ್ತ. ಸೊಂಪಾದ ಪಾಮ್ ವೃಕ್ಷಗಳ ಪ್ರವೇಶದಲ್ಲಿ ಮೇಲೆ ಕೈ ಜೋಡಿಸಿ ನಗುತ್ತಿರುವ ಬಾಪೂ ಚಿತ್ರ. ಕೆಳಗೆ “ಮರಣದಲ್ಲೂ ಸತ್ಯವನ್ನು ತ್ಯಜಿಸದಿರು” ಎಂಬ ಫಲಕ. ಒಳಗೆ ಮಂಗಳೂರು ಹೆಂಚಿನ ಮಾಡಿನ ಚಿಕ್ಕ ಚೊಕ್ಕ ಕುಟೀರಗಳಲ್ಲಿ ರಾಷ್ಟ್ರಪಿತನ ಜೀವನಚಿತ್ರಗಳ ಅಮೂಲ್ಯ ಸಂಗ್ರಹ. ಮಹಾತ್ಮಾಜೀ ವಾಸವಿದ್ದ ಆ ಹೆಂಚಿನ ಮಾಡಿನ ಕಪ್ಪು ಕೆಂಪು ನೆಲದ ಸರಳ ಮನೆಯಲ್ಲಿ ಅವರ ದಿನಬಳಕೆಯ ಸರಳ ವಸ್ತುಗಳನ್ನು ಕಾಪಿಟ್ಟಿದ್ದರು. ಹೊರಜಗುಲಿಯಲ್ಲಿ ಗಾಂಧೀಮಾರ್ಗದ ಅನುಯಾಯಿಯೊಬ್ಬರು ಚರಕದಲ್ಲಿ ನೂಲುತ್ತಾ ಕುಳಿತಿದ್ದರೆ, ಮತ್ತೋರ್ವರು ಪತ್ರಗಳ ಪರಿಶೀಲನೆಯಲ್ಲಿ ಮಗ್ನರಾಗಿದ್ದರು. ಎದುರಿಗೆ ಸಬರ್ಮತಿ ಸೊರಗಿ ಕೃಶಳಾಗಿ ಹರಿದಿದ್ದಳು.

ಮರುಬೆಳಗು ನರ್ಮದಾ ನದಿಯ ಸರ್ದಾರ್ ಸರೋವರ್ ಹಾಗೂ ಅಣೆಕಟ್ಟು ಕಾಣಲೆಂದು ಪಯಣಿಸಿದ ದಾರಿಯುದ್ದಕ್ಕೂ ಹೊಲಗಳಲ್ಲಿ ಎತ್ತುಗಳನ್ನು ಹೂಡಿ ಉಳುತ್ತಿರುವ ನೇಗಿಲಯೋಗಿಗಳು. ಅಲ್ಲಲ್ಲಿ ಕಿರುತೊರೆಗಳು. ನರ್ಮದಾ ಸಮೀಪಿಸುವಾಗ ಕಂಡ ಸಾತ್ಪುರಾ ಬೆಟ್ಟ ಸಾಲುಗಳು. ಬಿಸಿಲಿರದ ತಂಪು ಹವೆಯಲ್ಲಿ ಸುತ್ತಣ ದೃಶ್ಯ ಕಣ್ಣಿಗೆ ಹಬ್ಬವೇ ಆಗಿತ್ತು. ಒಳ ಬಂದರೆ ಎದುರಿಗೆ ಎತ್ತರದ ಸರ್ದಾರ್ ಸರೋವರ್ ಅಣೆಕಟ್ಟು. ಹಿಂದಣ ವರ್ಷವೂ ಮಳೆ ಕಡಿಮೆಯಾಗಿದ್ದ ಕಾರಣ ಅಣೆಕಟ್ಟು ತುಂಬಿರದೆ ಮೇರೆವರಿವ ಚಂದ ನೋಡುವ ಭಾಗ್ಯ ನಮಗಿರಲಿಲ್ಲ. ಸುತ್ತಲೂ ಗಿರಿಕಂದರಗಳು. ಅಣೆಕಟ್ಟಿನಿಂದ ಹರಿದ ಕಾಲುವೆ ಬೆಟ್ಟವನ್ನು ಸುತ್ತಿ ಹರಿದಿತ್ತು. ಪಕ್ಕದಲ್ಲೇ ಕಡಿದಾದ ಮಹೋನ್ನತ ಶೃಂಗ. ಅಣೆಕಟ್ಟಿನಾಚೆಗಿನ ಸರೋವರ ದರ್ಶನಕ್ಕೆ ಈ ಶೃಂಗವನ್ನು ಏರಬೇಕಿತ್ತು.

ಅಮಿತ ಉತ್ಸಾಹದಿಂದ ಏರಲಾರಂಭಿಸಿದರೆ, ಸೂರ್ಯ ಮೋಡದ ಮರೆಯಿಂದ ಹೊರಬಂದು ನಮ್ಮ ಮೇಲೆ ಅಗ್ನಿವರ್ಷ ಹರಿಸ ತೊಡಗಿದ್ದ. ಕಡಿದಾದ ಮೆಟ್ಟಲುಗಳು ಏದುಸಿರು ತಂದು ನಡುವೆ ಕುಳಿತು ಸುಧಾರಿಸುವಂತಾಯ್ತು. ಮೇಲೇರಿದರೆ ಎದುರಿಗೆ ಭವ್ಯ ಸರೋವರ ಕಣ್ತುಂಬಿತು. ಸರೋವರದಿಂದ ಅಸಂಖ್ಯ ಕಾಲುವೆಗಳಲ್ಲಿ ಹರಿದ ನೀರು ರಾಜ್ಯವನ್ನು ಹಸಿರಾಗಿಸಿ ಭೂಮಿಯನ್ನು ಫಲವತ್ತಾಗಿಸಿದೆ. ಅಣೆಕಟ್ಟಿನೆದುರಲ್ಲಿ ಭವ್ಯವಾಗಿ ನಿಂತಿದೆ, ಸರ್ದಾರ್ ವಲ್ಲಭ್ ಭಾಯಿ ಪಟೇಲರ ಮೂರ್ತಿ.

ಕೆಳಗಿಳಿದು ವಾಹನವೇರಿ ಕಾಲುವೆಗುಂಟ ಸಾಗುವಾಗ, ಸಾಗುವಾನಿ, ಪಾರಿಜಾತ, ದಾಸವಾಳ ಗಿಡಗಳ ಹೊಸ ಕಾಡೇ ಇಕ್ಕೆಲಗಳಲ್ಲೂ ಮೈದಳೆದಿತ್ತು. ಕಾಲುವೆಯ ತಿರುವೊಂದರಲ್ಲಿ ಹುಡುಗರು ತಮ್ಮ ಬೈಕ್ ತೊಳೆಯುವುದನ್ನು ಕಂಡು, ವಾಹನ ನಿಲ್ಲಿಸಿ, ಇಳಿದು ದಡದ ಬಂಡೆಗಲ್ಲಿನಲ್ಲಿ ಕ್ಷಣ ವಿರಮಿಸಿದ ನಾವು ಮತ್ತೆ ಉತ್ಸಾಹದಿಂದ ನೀರಿಗಿಳಿದು ಮುಂದೆ ಹೆಜ್ಜೆಯಿಡಲೆತ್ನಿಸಿದರೆ, ಆ ಹುಡುಗರು ಬೊಬ್ಬಿಟ್ಟು ನಮ್ಮನ್ನು ತಡೆದರು. ದಡದಲ್ಲೇ ಇರುವ ನೀರಿನ ಆಳ ಹಾಗೂ ಅದರೊಳಗಿರುವ ಮೊಸಳೆಗಳ ಬಗ್ಗೆ ಎಚ್ಚರಿಸಿದಾಗ ನೀರಾಟದಾಸೆ ನಿರಾಸೆಯಾಯ್ತು. ಅಲ್ಲೇ ಪಕ್ಕದ ವ್ಯೂ ಪಾಯಿಂಟ್‌ನೊಳ ಹೊಕ್ಕು, ಜೊತೆಗೆ ತಂದಿದ್ದ ಉಪಾಹಾರ ತಿಂದು ಮುಗಿಸಿ ಕಾಲುವೆಗುಂಟ ಸಾಗಿ ಟರ್ಬೈನ್‌ಗಳ ಕಾರ್ಯಕ್ಷೇತ್ರ ವೀಕ್ಷಿಸಿ ಮುನ್ನಡೆದೆವು.

ಎಲ್ಲೆಂದರಲ್ಲಿ ಹುಟ್ಟಿ ಬೆಳೆದು ಹಬ್ಬಿರುವ ವಟವೃಕ್ಷಗಳಿಂದಾಗಿಯೇ ಈ ನಗರಕ್ಕೆ ವಡೋದರಾ ಎಂದು ಹೆಸರಾಗಿದೆ. ಕೃಷ್ಣನಿಗೆ ಪ್ರಿಯವಾದ ಬಕುಲವೃಕ್ಷಗಳೂ ಸಾಕಷ್ಟಿವೆ. ಶಾಪಿಂಗ್ ಪ್ರಿಯರಿಗೆ ಅಹಮದಾಬಾದ್‌ನಲ್ಲಿ ವಿಫುಲ ಅವಕಾಶಗಳಿವೆ. ಅಹಮದಾಬಾದ್‌ನ ಲಾ ಗಾರ್ಡ್‌ನ್‌ನಲ್ಲಿ ಕಣ್ಸೆಳೆವ ಚಿತ್ತಾರದ ಸಿಧ್ಧ ಉಡುಪುಗಳು, ರಗ್, ಬೆಡ್‌ಸ್ಪರೆಡ್‌ಗಳು, ಶೃಂಗಾರ ಸಾಧನಗಳು ಲಭ್ಯ. ವಡೋದರಾದ ಆಕರ್ಷಕ ಬಾಂದನಿ ಸೀರೆಗಳನ್ನು ಕೊಳ್ಳದಿರುವುದೆಂತು? ಹಾಸು, ಹೊದಿಕೆಗಳಂತೂ ಇಲ್ಲಿ ಬಲು ಅಗ್ಗ. ಡೈರಿಯಲ್ಲಿ ಹಾಲು, ಮೊಸರು, ಐಸ್‌ಕ್ರೀಮ್ ಎಲ್ಲವೂ ಅಗ್ಗ. ಮಾರಾಟಗಾರರಲ್ಲಿ ಮಾರುವ ಉತ್ಸಾಹ ಮಾತ್ರ ಶೂನ್ಯ! ಕಾರಣ ಅವರ ಕನಿಷ್ಠ ವೇತನ!

ಸಿಟಿ ಬಸ್‌ಗಳಲ್ಲಿ ಐದು ರೂಪಾಯಿ ಟಿಕೆಟ್ ಪಡೆದು ಎಲ್ಲಿಂದೆಲ್ಲಿಗೂ ಪಯಣಿಸ ಬಹುದು. ಆಟೋರಿಕ್ಷಾಗಳೂ ಐದು ರೂಪಾಯಿಯ ಶೇರಿಂಗ್ ಸವಾರಿಯಲ್ಲಿ ಎಲ್ಲಿಂದೆಲ್ಲಿಗೂ ಒಯ್ಯಲು ರೆಡಿ. ಬಹುಮೋಹಕ ರಂಗು, ಕಂಪಿನ ಪನ್ನೀರು ಗುಲಾಬಿ ಹತ್ತು ರೂಪಾಯಿಗೆ ಒಂದು ಬುಟ್ಟಿಯಷ್ಟು ಲಭ್ಯ! ಮುಂಬೈ, ಮಂಗಳೂರುಗಳಿಗೆ ಹೋಲಿಸಿದರೆ ಜೀವನ ವೆಚ್ಚ ಬಲು ಕಡಿಮೆ.

ನರ್ಮದಾ ಕೊಳ್ಳವನ್ನೂ ಸುತ್ತಣ ಗಿರಿ ಕಂದರಗಳನ್ನೂ ವೀಕ್ಷಿಸುತ್ತಾ ನಗರಕ್ಕೆ ಹಿಂದಿರುಗಿ, ಅಜ್‌ವಾ ಸರೋವರ ಮತ್ತು ನಿಮೆಟಾ ನೀರು ಸಂಸ್ಕರಣಾ ಘಟಕದತ್ತ ಪಯಣಿಸಿದೆವು. ಸಯ್ಯಾಜಿ ಸರೋವರ್ ಎಂದೂ ಕರೆಯಲ್ಪಡುವ ಈ ಮಹಾ ವಿಸ್ತಾರದ ಜಲಾಶಯದ ದರ್ಶನ ಈಗ ಸಾರ್ವಜನಿಕರಿಗೆ ಅಲಭ್ಯ. ಸಂರಕ್ಷಿತ ಸಯ್ಯಾಜಿ ಸರೋವರದ ನೀರು ನಿಮೆಟಾದಲ್ಲಿ ಶುದ್ಧೀಕರಿಸಲ್ಪಟ್ಟು ಬರೋಡಾ ನಗರಕ್ಕೆ ಸರಬರಾಜಾಗುತ್ತದೆ. ಜಲಾಶಯದುದ್ದಕ್ಕೂ ಪಕ್ಕದಲ್ಲಿ ವಿಶಾಲ ಉದ್ಯಾನವಿದ್ದು, ಬೆಳಕಿನ ಕಾರಂಜಿಗಳು, ವಿದ್ಯುತ್‌ದೀಪ ಪ್ರಭೆ ಕಣ್ಮನ ಸೆಳೆಯುತ್ತದೆ. ಕತ್ತಲಾದ ನಂತರ ಪ್ರದರ್ಶಿತವಾಗುವ ಸಂಗೀತ, ನೃತ್ಯ ಕಾರಂಜಿಗಳ ಪ್ರದರ್ಶನಕ್ಕೆ ಜನಸಾಗರ ಹರಿದು ಬರುತ್ತದೆ. ಬಿರುಬಿಸಿಲ ಬೇಗೆಯ ನಗರದಲ್ಲಿ ಮುಸ್ಸಂಜೆಯ ತಂಪನ್ನಾಶ್ರಯಿಸಿ ನಗರವಾಸಿಗಳು ಪರಿವಾರ ಸಮೇತ ವಿಹಾರಾರ್ಥ ಇಲ್ಲಿಗೆ ಬರುತ್ತಾರೆ.

ಮರುದಿನ ವಡೋದರಾ ದರ್ಶನಕ್ಕೇ ಮೀಸಲು. ಸಯ್ಯಾಜಿ ಬಾಗ್‌ನತ್ತ ಹೊರಟು, ಅಲ್ಲಿರುವ ವಲ್ಲಭ್ ಭಾಯಿ ಪಟೇಲ್ ಪ್ಲಾನೆಟೇರಿಯಮ್, ಪ್ರಾಣಿಸಂಗ್ರಹಾಲಯ, ಪಕ್ಷಿಧಾಮಗಳನ್ನ ಸಂದರ್ಶಿಸಿದೆವು. ಕಣ್ಸೆಳೆವ ಜಿಂಕೆಗಳಂತೆಯೇ ವಿವಿಧ ಜಾತಿಯ ವರ್ಣಮಯ ಪಕ್ಷಿಸಂಕುಲ! ಎಲ್ಲೆಲ್ಲೂ ಕೇಳಿಬರುವ ನವಿಲುಗಳ ಕೂಗು.

ಬಳಿಯಲ್ಲೇ ಸಯ್ಯಾಜಿ ಮ್ಯೂಸಿಯಮ್‌ನ ಸುಂದರ ಕಟ್ಟಡ. ಅದರೆದುರಿಗೆ ಅಶ್ವಾರೋಹಿ ಮಹಾರಾಜ ಸಯ್ಯಾಜಿರಾವ್ ಗಾಯಕ್‌ವಾಡ್ ಪ್ರತಿಮೆ. ಸನಿಹದಲ್ಲೇ ವಡೋದರಾ ಯೂನಿವರ್ಸಿಟಿಯ ಭವ್ಯ, ಪುರಾತನ ಕಟ್ಟಡ. ಎಲ್ಲವನ್ನೂ ಸಂದರ್ಶಿಸಿ, ವಡೋದರಾದ ಹೆಮ್ಮೆಯ ಸೂರ್‌ಸಾಗರ್ ಸರೋವರಕ್ಕೆ ಸುತ್ತು ಬಂದು, ಸರೋವರ ಮಧ್ಯೆ ಭವ್ಯವಾಗಿ ಎದ್ದು ನಿಂತ ಮಹಾ ಶಿವನ ಮೂರ್ತಿಯನ್ನು ಕಣ್ಗಳಲ್ಲಿ ತುಂಬಿಕೊಂಡು, ಮುಂದಕ್ಕೆ ಕೆಂಪುಕಲ್ಲಿನ ನ್ಯಾಯಮಂದಿರದತ್ತ ಬಂದೆವು. ಅಲ್ಲಿಂದ ಮಾಂಡ್ವಿ, ಚೌಕಂಡಿ, ಚಂಪಾನೇರ್, ಪಾನಿಗೇಟ್ ಎಂಬ ನಾಲ್ಕು ಮಹಾದ್ವಾರಗಳ ನಡುವೆ ಒತ್ತರಿಸಿಟ್ಟಂತಹ ಹಳೆ ವಡೋದರಾದ ಮಾರ್ಕೆಟ್‌ನ ಗಲ್ಲಿಗಲ್ಲಿಗಳಲ್ಲಿ ಬಿಕರಿಗಿಟ್ಟ ಸರಕುಗಳನ್ನು ನೋಡುತ್ತಾ, ಬೇಕನಿಸಿದ್ದನ್ನು ಕೊಳ್ಳುತ್ತಾ ಸಾಗಿದೆವು. ಗೋಕುಲಾಷ್ಟಮಿಗೆ ಎರಡೇ ದಿನಗಳಿದ್ದುದರಿಂದ ಎಲ್ಲೆಡೆ ಕೃಷ್ಣ ಮೂರುತಿಯನ್ನು ತೂಗುವ ಪುಟ್ಟ ಪುಟ್ಟ ರಂಗುರಂಗಿನ ತೊಟ್ಟಿಲುಗಳಿದ್ದುವು.

ಸಂಜೆಯಾಗುತ್ತಿದ್ದಂತೆ ನಗರದ ಹೊರವಲಯದಲ್ಲಿರುವ ವಿಶಿಷ್ಟ ದಕ್ಷಿಣಾಮೂರ್ತಿ ಮಂದಿರವುಳ್ಳ ಸರ್ವಧರ್ಮ ಪೂಜಾಕೇಂದ್ರಕ್ಕೆ ನಮ್ಮ ಭೇಟಿ. ಭಾರತೀಯ ಸೇನೆಯ ಇಲೆಕ್ಟ್ರಿಕಲ್ ಆಂಡ್ ಮೆಕಾನಿಕಲ್ ಇಂಜಿನಿಯರಿಂಗ್ ಡಿಪಾರ್ಟ್‌ಮೆಂಟ್‌ನ ಇಎಮ್‌ಇ ಟೆಂಪ್‌ಲ್ ಎಂದೂ, ಅಲ್ಯುಮಿನಿಯಮ್ ಟೆಂಪ್‌ಲ್ ಎಂದೂ ಕರೆಯಲ್ಪಡುವ ಪೂಜಾಕೇಂದ್ರದ ಅಲ್ಯುಮೀನಿಯಮ್ ಗುಮ್ಮಟ ಇಸ್ಲಾಮ್ ಧರ್ಮವನ್ನೂ, ಮೂರು ಎಲಿಪ್ಟಿಕಲ್ ಬಾಗಿಲುಗಳು ಜೈನಧರ್ಮವನ್ನೂ, ಗುಮ್ಮಟದ ಮುಕುಟವು ಬೌದ್ಧ ಧರ್ಮವನ್ನೂ, ಊರ್ಧ್ವಮುಖಿ ಶಿಲುಬೆಯು ಕ್ರೈಸ್ತ ಧರ್ಮವನ್ನೂ ಪ್ರತಿಬಿಂಬಿಸುತ್ತದೆ. ಪ್ರವೇಶದಲ್ಲೇ ಪಂಚವಟಿ ಎಂಬ ವೃಕ್ಷೋದ್ಯಾನ. ಅಲ್ಲಿ ಸಪ್ತರ್ಷಿ ಮಂಡಲವೆಂಬ ಏಳು ಬಿಳಲುಗಳನ್ನು ಭುವಿಯಲ್ಲಿ ನೆಟ್ಟ ವಟವೃಕ್ಷದ ಕೇಂದ್ರ, ಧ್ರುವತಾರಾ. ಜೊತೆಗೆ ಋಷಿಪತ್ನಿಯರೆಂದು ಆ ಬಿಳಲುಗಳನ್ನು ತಬ್ಬಿ ಬೆಳೆದ ಉಪಬಿಳಲುಗಳು! ಬಳಿಯಲ್ಲೇ ದೊಡ್ಡದೊಂದು ಶಿವಲಿಂಗ. ಸುತ್ತ ಹೆಜ್ಜೆ ಹೆಜ್ಜೆಗೂ ಪುರಾತತ್ವ ಇಲಾಖೆ ಸಂಗ್ರಹಿಸಿ ಕಾಪಿಟ್ಟ ಶತಮಾನಕ್ಕೂ ಹಿಂದಿನ ವಿವಿಧ ಸಾಮ್ರಾಜ್ಯಗಳ ಕಾಲದ ಶಿಲಾಮೂರ್ತಿಗಳು. ಮಧ್ಯೆ ಹಾದ ಕಂದಕ. ಸೂರ್ಯಾಸ್ತದ ಬಳಿಕ ಇಲ್ಲಿ ಬೆಳಗುವ ವಿದ್ಯುದ್ದೀಪಮಾಲೆ ಈ ಪ್ರದೇಶಕ್ಕೇ ಅಪೂರ್ವ ಶೋಭೆಯನ್ನೀಯುತ್ತದೆ. ಪ್ರವಚನ, ಕೀರ್ತನೆ, ಧ್ಯಾನ, ಪೂಜೆಯ ಕೊನೆಗೆ ಎಲ್ಲರೊಂದಾಗಿ “ಸರ್ವಧರ್ಮ ಏಕ್ ಸಮಾನ್, ಭಾರತ್ ಮಾತಾ ಮೇರೀ ಜಾನ್, ಉಸ್‌ಕೀ ಚರಣೋ ಮೇ ಮೇರಾ ತನ್, ಮನ್, ಧನ್ ಅರ್ಪಣ್” ಎಂದು ಕೊನೆಯಾದ ಪ್ರಾರ್ಥನೆ, ದಿವ್ಯಾನುಭೂತಿಯಿಂದ ಮೈ ನವಿರೇಳಿಸಿತು.

ತಮ್ಮಲ್ಲಿಗೆ ಕರೆಸಿಕೊಂಡು ಶಕ್ಯವಿದ್ದುದನ್ನೆಲ್ಲ ತೋರಿ, ಎಂದಿಗೂ ಮರೆಯದ ಸಿಹಿ ನೆನಪುಗಳೊಂದಿಗೆ, ಪ್ರೀತಿಯ ಕಾಣಿಕೆಯೊಂದಿಗೆ ನಮ್ಮನ್ನು ಬೀಳ್ಕೊಟ್ಟವರು, ಪ್ರಿಯ ಗೆಳತಿ ಹಾಗೂ ತಮ್ಮ ಸತೀಶ.

(ಮುಂದುವರಿಯಲಿದೆ)