ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ
ಅಧ್ಯಾಯ – ೩೭

`ಗಾನ್ ವಿದ್ ದ ವಿಂಡ್’ನಂತೆಯೇ ನನ್ನನ್ನು ಬಹುವಾಗಿ ತಟ್ಟಿ ಕಾಡಿದ ಆಂಗ್ಲಭಾಷೆಯ ಅಭಿಜಾತ ಕೃತಿ, ಶಾಲಟ್ ಬ್ರಾಂಟಿಯ `ಜೇನ್ ಏರ್.’ ಮೂಲಕೃತಿಯ ಮೇಲಿನ ಪ್ರೀತಿಯಿಂದ ನಾನಾಗೇ ಅದನ್ನು `ಕನ್ನಡನುಡಿ’ಗಿಳಿಸಲು ತೊಡಗಿದ್ದು, ಮಧ್ಯೆ ನನ್ನ ಕೈ ತಪ್ಪಿ ಹೋದದ್ದು ಈಗಾಗಲೇ ಹೇಳಿಕೊಂಡಿರುವೆ. ಅದನ್ನು ಪುನರಾರಂಭಿಸಿ, ಪ್ರತಿ ಅಧ್ಯಾಯವನ್ನೂ ಬರೆದಂತೆ ನನ್ನ ಇನ್‌ಬಾಕ್ಸ್‌ನಲ್ಲಿ ಕಾಪಿಡುತ್ತಾ ಬಂದೆ. ಅಧ್ಯಾಯದಿಂದ ಅಧ್ಯಾಯಕ್ಕೆ ಜೇನ್ ನನಗೆ ಹೆಚ್ಚು ಹೆಚ್ಚು ಪ್ರಿಯಳಾಗುತ್ತಾ ಬಂದಳು. ನನ್ನ ಒಳಗನ್ನೆಲ್ಲ ಸಂಪೂರ್ಣ ಆಕ್ರಮಿಸಿಕೊಂಡಳು. ಸರಳ ರೂಪದ, ಬುದ್ಧಿ-ಭಾವಗಳ ಸಂಘರ್ಷದಲ್ಲಿ ಬುದ್ಧಿಯೇ ಮೇಲ್ಗೈ ಆಗುವ, ತೀವ್ರತಮ ಭಾವನೆಗಳ, ಅಪಾರ ಕಲ್ಪನಾಭಿವ್ಯಕ್ತಿಯ, ಸದಾ ಆಂತರ್ಯವನ್ನಳೆವ ಹುಡುಕು ನೋಟದ, ಪ್ರೀತಿ, ಬಾಂಧವ್ಯಕ್ಕಾಗಿ ತುಡಿವ ಜೇನ್ ನನ್ನ ಮೇಲೆ ಬೀರಿದ ಪರಿಣಾಮ ಅಪಾರ.

ಅನುವಾದ ಮುಗಿದರೂ ಜೇನ್ ನನ್ನನ್ನು ಬಿಟ್ಟಗಲಲಿಲ್ಲ. ರಾತ್ರಿ ನಿದ್ರಿಸಲು ಹೋದರೂ ಜೇನ್ ನನ್ನ ಪ್ರಜ್ಞೆಯಲ್ಲಿ ಸ್ಥಿರವಾಗಿದ್ದಳು. ಮೂರ್‌ಲ್ಯಾಂಡ್‌ನ ಹುಲ್ಲುಗಾವಲಲ್ಲಿ, ಬೆಟ್ಟದ ಕೊರಕಲಲ್ಲಿ ನಾನು ಅವಳ ಜೊತೆ ಹೆಜ್ಜೆ ಹಾಕುತ್ತಿದ್ದೆ. ಮಾಸ್ಟರ್ ಜಾನ್‌ನ ಕ್ರೌರ್ಯದಿಂದ ಸಿಡಿದೆದ್ದ, ಮಿಸ್ಟರ್ ಬ್ರಾಕ್‌ಲ್‌ಹರ್ಸ್ಟ್‌ರ ಭರ್ತ್ಸನೆಗೆ ಈಡಾದ, ಮಿಸ್ ಟೆಂಪ್‌ಲ್ ಅವರ ಕಾರುಣ್ಯದಲ್ಲಿ ಮಿಂದ, ಗೆಳತಿ ಹೆಲೆನ್‌ಳ ಮೃತ್ಯುಶಯ್ಯೆಯಲ್ಲಿ ಅವಳ ಕೊರಳನ್ನಪ್ಪಿ ಮಲಗಿದ ಪುಟ್ಟ ಜೇನ್ ಜೊತೆಗೇ ಇದ್ದಳು. ನರಕದ ಬೆಂಕಿಯಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕೆಂಬ ಪಾದ್ರಿಯ ಪ್ರಶ್ನೆಗೆ, ಸಾಯದಂತೆ ಆರೋಗ್ಯದಿಂದಿರಬೇಕೆಂದು ಉತ್ತರಿಸಿದ ಜೇನ್! ಆದ ಅನ್ಯಾಯವನ್ನೇ ನೆನಪಿಸುತ್ತಾ ದ್ವೇಷ ಬೆಳೆಸುತ್ತಿರಲು ಈ ಜನ್ಮ ಎಲ್ಲಿಗೂ ಸಾಲದೆಂದು ಗೆಳತಿ ಹೆಲೆನ್‌ಳಿಂದ ಹೇಳಿಸಿಕೊಂಡ ಜೇನ್! ಅನಾಥಳಾಗಿದ್ದೂ, ಅಂತಸ್ತು, ಐಶ್ವರ್ಯಗಳಲ್ಲಿ ತನಗಿಂತ ಮೇಲ್ಮಟ್ಟದಲ್ಲಿದ್ದ ಒಡೆಯ ಮಿಸ್ಟರ್ ರಾಚೆಸ್ಟರ್‌ಗೆ ತಾನು ಸಮಳೆಂದೇ ಸಾರಿದ ಜೇನ್! ನ್ಯಾಯಾನ್ಯಾಯ ವಿಚಕ್ಷಣೆಯಲ್ಲಿ ಹೃದಯದ ಕರೆಗೆ ಓಗೊಡದೇ ಕಾದಿದ್ದ ಪ್ರೇಮಲೋಕವನ್ನು ತೊರೆದು, ಗೊತ್ತು ಗುರಿಯಿರದೆ ಕಾಡುಮೇಡುಗಳಲ್ಲಿ ಅಲೆದ ಜೇನ್! ಎಂದೂ ಯಾವುದೂ ಒಂದೇ ಕಾಲಕ್ಕೆ ಹೀಗೆ ದುರ್ಬಲವೂ, ಅಷ್ಟೇ ಅದಮ್ಯವೂ ಆದುದಿರಲಿಲ್ಲ, ಎಂದು ಮಿಸ್ಟರ್ ರಾಚೆಸ್ಟರ್‌ಗೆ ಅನಿಸಿದಂಥಾ ಜೇನ್! ನಾವು ಸಂಪೂರ್ಣವಾಗಿ ಪ್ರೀತಿಸುವ ವ್ಯಕ್ತಿಗೆ ಕೆಡುಕಿನ ಸಾಧನವಾಗುವ ಭಯ, ನನ್ನಂತೆ ನಿಮ್ಮನ್ನು ಎಂದೂ ಕಾಡದಿರಲಿ, ಎಂದು ಪರಿತಪಿಸಿದ ಜೇನ್…. ನನ್ನ ಕಣಕಣದಲ್ಲೂ ಒಂದಾಗಿದ್ದಳು.

ಅನುವಾದ ಮುಗಿದು ತಿಂಗಳ ಕಾಲದ ಈ ಅನುರಕ್ತಿ, ಆತ್ಮಾನುಸಂಧಾನ ನನ್ನ ನರಮಂಡಲದ ಮೇಲೆ ಪ್ರಭಾವ ಬೀರಿತು. ಸೊಂಟ ನೋವು ಹೆಚ್ಚಿಕೊಂಡಿತು. ಒಂದು ದಿನ ಹಾಸಿಗೆಯಿಂದೇಳುವುದೂ ಕಷ್ಟವಾದಾಗ, ಡಾಕ್ಟರನ್ನು ಕಾಣಲೇ ಬೇಕಾಯ್ತು. ಆರ್ಥೊಪೆಡಿಕ್ ಡಾಕ್ಟರ್ ನೀಡಿದ ಔಷಧಿ ಶರೀರಕ್ಕೆ ಹಿಡಿಸದೆ, ಮಕ್ಕಳು ಬಾಂಬೆ ಹಾಸ್ಪಿಟಲ್‌ಗೆ ಡಾ.ಭರೂಚಾ ಬಳಿಗೊಯ್ದರು. ಸಂಪೂರ್ಣ ತಪಾಸಣೆಯಾಯ್ತು. ಆ ನಿಟ್ಟಿನಲ್ಲಿ ಪರೀಕ್ಷಿಸಿದ ಫಿಸಿಶಿಯನ್ ಡಾ| ಶೇಖರ್, ಜೀವನ ವಿಧಾನವನ್ನು ಬದಲಿಸಿಕೊಂಡು ಸ್ಟ್ರೆಸ್‌ನಿಂದ ದೂರಾಗುವಂತೆ ಸಲಹೆಯಿತ್ತರು. ಡಾ.ಭರೂಚಾ, ತಪಾಸಣೆಯೆಲ್ಲವೂ ಮುಗಿದು, ಕೊನೆಯಲ್ಲಿ ಬ್ಲಡ್‌ಪ್ರೆಶ್ಶರ್ ಬಗ್ಗೆ ಕೇಳಿದಾಗ, ನನಗೆಂದೂ ಪ್ರೆಶ್ಶರ್ ಇಲ್ಲ, ಎಂದೇ ಹೆಮ್ಮೆಯಿಂದ ಹೇಳಿದೆ. ಇರಲಿ, ನೋಡೋಣ, ಎಂದು ಪರೀಕ್ಷಿಸಿದ ಡಾಕ್ಟರ್, “ವಾಟ್ ಹ್ಯಾವ್ ಯು ಡನ್ ವಿದ್ ಯುವರ್ ಬಿ.ಪಿ.?” ಎಂದು ಆತಂಕಿತರಾಗಿ ಉದ್ಗರಿಸಿದರು. ತಿಂಗಳ ಕಾಲ ನಿದ್ರೆಯಿರದೆ ಬಿ.ಪಿ. ಬಂತೋ, ಬಿ.ಪಿ.ಯ ಕಾರಣ ನಿದ್ದೆಯಿರಲಿಲ್ಲವೋ, ಯಾರರರಿಯ ಬಲ್ಲರು? ಅಂತೂ ಹೊಸದಾಗಿ ಮಾತ್ರೆಗಳು ಬಂದುವು. ವಿಟಮಿನ್ ಡಿ೩.ಯ ಅಗತ್ಯಕ್ಕಾಗಿ ಆರ್ಥೊಪೆಡಿಕ್ ಕೊಟ್ಟಿದ್ದ ಮಾತ್ರೆ ಶರೀರಕ್ಕೆ ಹೊಂದಿರದಿದ್ದುದರಿಂದ, ಬಹಳಷ್ಟು ಧ್ಯಾನಿಸಿ, ವಿದೇಶೀ ಸರಬರಾಜಿನ ಬಹುವೆಚ್ಚದ, ಫೋಸೋಮ್ಯಾಕ್ಸ್ ಮಾತ್ರೆಯನ್ನು ಬರೆದಿತ್ತರು. ವಾರಕ್ಕೊಮ್ಮೆ ಬರಿ ಹೊಟ್ಟೆಗೆ ಒಂದು ಲೋಟ ನೀರಿನೊಡನೆ ಸೇವಿಸಿ, ಗಂಟೆ ಬಿಟ್ಟು ಪೂರ್ಣಾಹಾರ ತೆಗೆದುಕೊಳ್ಳುವಂತೆ ಡಾಕ್ಟರ್ ಸಲಹೆಯಿತ್ತರು. ಎಲ್ಲೂ ಸಿಗದ, ವಿದೇಶದಿಂದ ತರಿಸಬೇಕಾದ ಈ ಮಾತ್ರೆಯನ್ನು ಬಹಳ ಪ್ರಯತ್ನದಿಂದ ಪಡಕೊಳ್ಳುವಂತಾಯ್ತು. ಜೊತೆಗೆ ಮೆಟಿಲ್ಡಾ ಇ.ಆರ್. ಎಂಬ ಉತ್ತಮ ಕ್ಯಾಲ್ಸಿಯಮ್, ವಿಟಮಿನ್ ಮಾತ್ರೆಯೊಂದು, ಕ್ಯಾಲ್ಸಿಮಾಕ್ಸ್ ಒಂದು, ಕೋಲೆಸ್ಟರಾಲ್ ನಿಯಂತ್ರಣಕ್ಕೆ ರೋಸೊವಾಸ್ ಒಂದು, ಹಾಗೂ ಬ್ಲಡ್ ತಿನ್ನರ್ ಎಕೋಸ್ಪೊರಿನ್ ಒಂದು – ಹೀಗೆ ಮಾತ್ರೆಗಳ ಭಂಡಾರವೇ ಬಂತು.

ಹದಿಮೂರು ವರ್ಷಗಳ ಹಿಂದೆ, ೨೦೦೦ದ ನವೆಂಬರ್ ೧೪ರಂದು ನನಗಾದ ಆಘಾತ, ಒಂದು ಸ್ಟ್ರೋಕ್ ಆಗಿರಬಹುದು, ಎಂದು ಇದೀಗ ಡಾಕ್ಟರಿಗೆ ಅನಿಸಿತ್ತು. ಆದರೆ, “ವೀ ಆರ್ ನಾಟ್ ಶುವರ್”, ಎಂದು ಪ್ರಾಮಾಣಿಕವಾಗಿ ನುಡಿದರು. ಹಾಗೂ ಕೊನೆಯಲ್ಲಿ ನನ್ನ ಬರಹದ ಬಗ್ಗೆ ಪ್ರಶ್ನಿಸಿದರು. ಜೇನ್ ಏರ್ ಬಗ್ಗೆ ಹೇಳಿದೆ. ಮಕ್ಕಳು ತಕ್ಷಣ, ಹೆಚ್ಚಿನ ಹೊತ್ತು ಹಾಗೂ ತಡರಾತ್ರಿ ವರೆಗೆ ಲ್ಯಾಪ್‌ಟಾಪ್‌ಗೆ ಅಮ್ಮ ಅಂಟಿಕೊಂಡಿರುವ ಬಗ್ಗೆ, ಅದರಿಂದ ಸೊಂಟ ನೋವು ಹೆಚ್ಚುತ್ತಿರುವ ಬಗ್ಗೆ ಅಹವಾಲು ಮುಂದಿಟ್ಟರು. ಸಮಾಧಾನದಿಂದ ಎಲ್ಲವನ್ನೂ ಕೇಳಿಕೊಂಡ ಡಾಕ್ಟರ್, ರಾತ್ರಿ ಎಂಟುಗಂಟೆಯ ಬಳಿಕ ಎಲ್ಲ ಇಲೆಕ್ಟ್ರಾನಿಕ್ ಮಾಧ್ಯಮದಿಂದ ದೂರವಿರುವಂತೆ ಸಲಹೆಯಿತ್ತರು. ಬೀಳ್ಕೊಂಡು ಬರುವಾಗ, ಪುನಃ ಕರೆದು, “ಡೋಂಟ್ ಗಿವ್ ಅಪ್ ಯುವರ್ ರೈಟಿಂಗ್; ಸ್ಟಿಕ್ ಟು ಯುವರ್ ಬುಕ್ಸ್”, ಎಂದು ಅವರಿತ್ತ ಆ ಅಮೂಲ್ಯ ಸಲಹೆ, ನನ್ನ ಅನಾರೋಗ್ಯವೆಲ್ಲವನ್ನೂ ಮಂತ್ರದಂಡದಿಂದ ಹೊಡೆದೋಡಿಸಿತು. `ವೈದ್ಯೋ ನಾರಾಯಣೋ ಹರಿಃ’ ಎಂಬುದನ್ನು ನನ್ನ ವೈದ್ಯರಲ್ಲಿ ನಾನು ಕಂಡೆ.

ಬೆಂಗಳೂರಲ್ಲಿ ನೆಲಸಿದ್ದರೂ, ನಮಗೆ ಮುಂಬೈಯವರೇ ಆದ ಪ್ರಿಯ ಸಾಹಿತಿ ಜಯಂತ್ ಕಾಯ್ಕಿಣಿ ಅವರನ್ನು ನನ್ನ ಜೇನ್ ಏರ್‌ಗೆ ಬೆನ್ನುಡಿ ಬರೆಯುವಂತೆ ಕೇಳಲು ಕರೆ ಮಾಡಿದಾಗ, ಜಯಂತ್ ಮುಂಬೈಯಲ್ಲಿದ್ದರು. ಮುಂಬೈಯ ತಮ್ಮ ಮನೆಯ ಪುನರ್ನವೀಕರಣಕ್ಕಾಗಿ ಬಂದಿದ್ದ ಜಯಂತ್, ತಕ್ಷಣ ಮಿಂಚಂಚೆಯಲ್ಲಿ ಹಸ್ತಪ್ರತಿ ಕಳುಹುವಂತೆ ತಿಳಿಸಿದರು. ಇಲೆಕ್ಟ್ರಿಕ್ ವಯರಿಂಗ್ ಕೂಡಾ ಕಿತ್ತು ಹಾಕಲ್ಪಟ್ಟು ಯಾವ ಸೌಲಭ್ಯವೂ ಇರದಿದ್ದ ಮನೆಯ ಕೆಲಸದಲ್ಲಿ ವ್ಯಸ್ತರಾಗಿದ್ದ ಜಯಂತ್, ಕೂಡಲೇ ನನ್ನನುವಾದವನ್ನೋದಿ ಬರೆದಿತ್ತ ಬಲು ಸುಂದರವೂ, ಮೌಲಿಕವೂ ಆದ ಬೆನ್ನುಡಿ, ನನ್ನನುವಾದಗಳಿಗೆ ಬರೆದ ಭಾಷ್ಯವೇ ಆಗಿದೆ.

ಮುದ್ರಣದಲ್ಲಿ ಐನೂರು ಪುಟಗಳಾಗುವ ನನ್ನ ಜೇನ್ ಏರ್‌ನ ಪ್ರಕಟಣೆ, ಪ್ರಕಾಶನ ಕ್ಷೇತ್ರದ ತೊಂದರೆಗಳಿಂದಾಗಿ ತಮ್ಮ ಪಾಲಿಗೆ ಅಸಾಧ್ಯ, ಎಂದು ನನ್ನ ಪ್ರಕಾಶಕ – ಅಂಕಿತದ ಪ್ರಕಾಶ ಕಂಬತ್ತಳ್ಳಿ ಉತ್ತರಿಸಿದಾಗ ನನಗೆ ತುಂಬ ನಿರಾಸೆಯಾಯ್ತು. ಮನೋಹರ ಪ್ರಕಾಶನ, ಎರಡು ವರ್ಷಗಳ ಪ್ರಕಟಣೆ ಬಾಕಿ ಇರುವುದರಿಂದ ಸದ್ಯಕ್ಕೆ ಅಸಾಧ್ಯವೆಂದು ಉತ್ತರಿಸಿತು. ಅನುವಾದ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಆಫೀಸ್ ಬದಲಾದುದರಿಂದ ಒಂದು ವರ್ಷದ ಕೆಲಸವೆಲ್ಲ ಬಾಕಿ ಉಳಿದಿದ್ದು, ಈಗ ಈ ಕೃತಿಯನ್ನು ಕೈಗೆತ್ತಿಕೊಳ್ಳುವುದು ಕಷ್ಟಸಾಧ್ಯವೆಂದಿತು. ದಾರಿಗಾಣದಾದಾಗ, ಮಂಗಳೂರ ಗೆಳತಿ, ಹಾಸ್ಯಸಾಹಿತಿ ಭುವನೇಶ್ವರಿ ಹೆಗ್ದೆ ಅವರು, ಬೆಂಗಳೂರಿನ ತೇಜು ಪ್ರಕಾಶನದ ಅಣಕು ರಾಮನಾಥ್ ಅವರನ್ನು ತೋರಿದರು. ಕೂಡಲೇ ಒಪ್ಪಿಕೊಂಡ ರಾಮನಾಥ್ ಅವರಿಗೆ ನನ್ನ ಅನುವಾದವನ್ನು, ಜಯಂತ್ ಅವರ ಬೆನ್ನುಡಿಯನ್ನು, ಕವರ್ ಪೇಜ್‌ಗೆ ಶಾಲಟ್ ಬ್ರಾಂಟಿಯ ಫೋಟೋವನ್ನು ಮಿಂಚಂಚೆಯಲ್ಲಿ ಕಳುಹಿದೆ.

ಹ್ಯೂಮರಿಸ್ಟ್ ರಾಮನಾಥ್ ಅವರ ಪರಿಚಯ ನನಗಿರಲಿಲ್ಲ. ವಾರವೊಂದರಲ್ಲೇ ಅವರು ಕರೆ ಮಾಡಿ ನನ್ನ ವಿಳಾಸ ಕೇಳಿದರು. “ಮುಂಬೈಗೆ ಬರಲಿದೆ. ಆಗ ನಿಮ್ಮಲ್ಲಿಗೆ ಬರುವೆ”, ಅಂದರು. ಬದಲಿಗೆ, ಎರಡೇ ದಿನಗಳಲ್ಲಿ ಜೇನ್ ಏರ್‌ನ ಕರಡು ಪ್ರತಿಗಳೆರಡು ನನ್ನ ಕೈ ಸೇರಿದವು. ನನ್ನ ಆಶ್ಚರ್ಯಕ್ಕೆ ಮಿತಿಯಿರಲಿಲ್ಲ.

ಮಂಗಳೂರಲ್ಲಿರುವ ನನ್ನ ಆಂಟ್ ಲೀನಾ ಅಲೋಶಿಯಸ್ ಅವರ ಕೈಯಲ್ಲಿ ಪುಸ್ತಕವನ್ನು ಸಮರ್ಪಿಸುವುದು ನನ್ನಿಚ್ಛೆ; ವೃದ್ಧಾಪ್ಯದಲ್ಲಿ ಬಿದ್ದು ಹಾಸಿಗೆ ಹಿಡಿದಿರುವ ಅವರ ಕೈಯಲ್ಲಿ ನನ್ನ ಪುಸ್ತಕವನ್ನು ಸಮರ್ಪಿಸುವುದು ಸಾಧ್ಯವಾಗುವಂತೆ ಆದಷ್ಟು ಶೀಘ್ರ ಕೃತಿ ಪ್ರಕಾಶನ ಕೈಗೊಳ್ಳುವಂತೆ ನಾನವರನ್ನು ಕೋರಿದ್ದೆ. ಅಂತೆಯೇ ಎರಡು ಪ್ರತಿಗಳನ್ನು ಮುದ್ರಿಸಿ, ಒಂದನ್ನು ಪ್ರೂಫ್ ಕರೆಕ್ಷನ್‌ಗಾಗಿ, ಹಾಗೂ ಮತ್ತೊಂದನ್ನು ಆಂಟಿಯ ಕೈಯಲ್ಲಿಡಲೆಂದು ಅವರು ಕಳುಹಿ ಕೊಟ್ಟಿದ್ದರು. ಕೃತಜ್ಞತೆಯಿಂದ ನನ್ನ ಹೃದಯ ತುಂಬಿ ಬಂತು. ಆದರೆ, ಪುಸ್ತಕ ನೋಡಿದಾಗ, ಹೃದಯ ಕುಸಿಯಿತು. ನನ್ನ ದೌರ್ಭಾಗ್ಯ! ಹಿಂಭಾಗದಲ್ಲಿರಬೇಕಾದ ಜಯಂತ್ ಅವರ ಬೆನ್ನುಡಿಯ ಬದಲಿಗೆ ಪ್ರಕಾಶಕರ ನುಡಿಗಳೇ ಅಚ್ಚಾಗಿದ್ದುವು!

ಕರಡು ಪ್ರತಿಯನ್ನು ತಿದ್ದಿ, ನನ್ನ ನಿವೇದನೆಯೊಡನೆ, ಕೃತಿಕರ್ತೆ ಹಾಗೂ ಕೃತಿಯ ಕುರಿತಾದ ಪ್ರಸ್ತಾವನೆಯೊಡನೆ ಹಾಗೂ ನನ್ನ ಪರಿಚಯದೊಡನೆ ಮರಳಿ ಪ್ರಕಾಶಕರಿಗೆ ಕಳುಹಿ ಕೊಟ್ಟೆ. ಕೃತಿ ಬೆಳಕು ಕಾಣಲು ಮತ್ತೂ ಅನಿರ್ದಿಷ್ಟಕಾಲ ಕಾಯಬೇಕಿತ್ತು.

ಮುಂಬೈ ಯೂನಿವರ್ಸಿಟಿ ಕನ್ನಡ ವಿಭಾಗದ ಮುಖ್ಯಸ್ಥ, ಡಾ| ಜಿ.ಎನ್.ಉಪಾಧ್ಯರು, ಮಹಾರಾಷ್ಟ್ರ ಕನ್ನಡ ಸಾಹಿತ್ಯ ಪರಿಷತ್ತಿನ ವಿಂಶತಿ ಸಂಭ್ರಮಕ್ಕಾಗಿ ಹೊರ ತರಲಿರುವ ಸ್ಮರಣ ಸಂಚಿಕೆಗಾಗಿ, ನೂರೈವತ್ತು ವರ್ಷಗಳಲ್ಲಿ ಮುಂಬೈಯಲ್ಲಿ ನಡೆದ ಕನ್ನಡ ಅನುವಾದ ಸಾಹಿತ್ಯದ ಬಗ್ಗೆ ಸಂಶೋಧನ ಲೇಖನವೊಂದನ್ನು ಸಿದ್ಧ ಪಡಿಸುವಂತೆ ಕೋರಿದರು. ಯೂನಿವರ್ಸಿಟಿಯಿಂದಲೇ ಚುರುಮುರಿ ಶೇಷಗಿರಿರಾಯರ ಶಾಕುಂತಲ ನಾಟಕ ನನ್ನ ಕೈ ಸೇರಿತ್ತು. ಚುರುಮುರಿ ಅವರಿಂದ ಅನುವಾದಿತವಾಗಿ ೧೮೭೦ರಲ್ಲಿ ಪ್ರಕಟವಾದ ಶಾಕುಂತಲ ನಾಟಕವು ಕನ್ನಡದ ಪ್ರಪ್ರಥಮ ಅನುವಾದ ಕೃತಿಯೆಂದು ಸಿದ್ಧವಾಗಿದೆ. ಮುಂಬೈಯ ಎಜುಕೇಶನಲ್ ಸೊಸೈಟಿಯಿಂದ ಮುದ್ರಿತವಾಗಿ ಪ್ರಕಟವಾದ ಈ ಕೃತಿ, ಅವರ ಜೀವಿತ ಕಾಲದಲ್ಲೇ ಧಾರವಾಡದ ಜ್ಞಾನವರ್ಧಕ ಮುದ್ರಣಾಲಯದಿಂದ ಮರು ಮುದ್ರಣಗೊಂಡಿತ್ತು. ಆ ದಿನಗಳಲ್ಲಿ ಸುಸಂಸ್ಕೃತರ ಮನೆ ಮನೆಗಳಲ್ಲಿ ಶಾಕುಂತಲ ನಾಟಕ ಪುಸ್ತಕ ನೋಡಲು ಸಿಗುತ್ತಿತ್ತೆಂದೂ, ವಿವಾಹ ಸಮಾರಂಭ, ಸಂತೋಷ ಕೂಟ, ವಸಂತೋತ್ಸವಗಳಲ್ಲಿ ಶಾಕುಂತಲದ ಹಾಡುಗಳನ್ನು ಹಾಡಲಾಗುತ್ತಿತ್ತೆಂದೂ ಮುಂದಿನ ಮುದ್ರಣಗಳ ಪ್ರಸ್ತಾವನೆಯಲ್ಲಿ ಸೂಚಿತವಾಗಿದೆ. ಬೆಳಗಾಂವ ಸಮಾಚಾರ ಛಾಪಖಾನೆಯಲ್ಲಿ ಮುದ್ರಿತವಾದ ಚುರುಮುರಿ ಅವರು ಅನುವಾದಿಸಿದ ಮೃಚ್ಛಕಟಿಕದ ಪ್ರತಿ ಮಾತ್ರ ಈಗ ಅಲಭ್ಯವಾಗಿದೆ. ಸಂಸ್ಕೃತ, ಕನ್ನಡ, ಹಿಂದೀ, ಮರಾಠಿ, ಉರ್ದೂ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಪಾಂಡಿತ್ಯವಿದ್ದ ಚುರುಮುರಿ ಶೇಷಗಿರಿರಾಯರನ್ನು ಮುಂಬೈಯ ಕನ್ನಡದ ಆದ್ಯ ಸಾಹಿತಿ ಎಂದು ಪರಿಗಣಿಸಲಾಗಿದೆ.

ಬಂಗಾಲಿ ಸಾಹಿತ್ಯಸಿರಿಯನ್ನು ಕನ್ನಡಕ್ಕೆ ತಂದ ಪ್ರಮುಖ ಅನುವಾದ ಕೃಷಿಕರ್ತ ಅಹೋಬಲ ಶಂಕರರ ಮಹತ್ವದ ಅನುವಾದ ಕೃತಿಗಳ ಬಗ್ಗೆ ಬರೆಯುವುದೇ ಸಂತಸದ ಅನುಭವ! ರವೀಂದ್ರನಾಥ ಟಾಗೋರ್, ಬಂಕಿಂ ಚಂದ್ರ ಚಟರ್ಜಿ, ವಿಭೂತಿ ಭೂಷಣ ಬಂದೋಪಾಧ್ಯಾಯ, ಬಿಮಲ್ ಮಿಶ್ರಾ, ಶರಶ್ಚಂದ್ರ ಮುಂತಾದ ಬಂಗಾಲಿ ಸಾಹಿತಿಗಳ ಸಾಹಿತ್ಯಸಿರಿಯನ್ನು ಕನ್ನಡಿಗರೆದುರು ತೆರೆದಿಟ್ಟ ಅಹೋಬಲ ಶಂಕರರು, ಮೈಸೂರು ಸಂಸ್ಥಾನದ ಸಂಸ್ಕೃತ ಪಂಡಿತ ಕಾಶೀಪತಿ ಶಾಸ್ತ್ರಿಗಳ ಮೊಮ್ಮಗನಾಗಿ ಶಂಕರ ಜಯಂತಿಯಂದು ಬೆಂಗಳೂರಲ್ಲಿ ಜನಿಸಿದವರು. ಮುಂಬೈಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಉಪಸಂಪಾದಕರಾಗಿ ದುಡಿದ ಶಂಕರರು, ಮೂರು ತಿಂಗಳು ಕಲ್ಕತ್ತಾದಲ್ಲಿರಬೇಕಾಗಿ ಬಂದಾಗ, ಬಂಗಾಲಿಯನ್ನು ಕಲಿತು, ಅನುವಾದಕ್ಕೆ ತೊಡಗಿದವರು. ಜಾತೀಯತೆ, ವರ್ಗಭೇದ, ಅಸ್ಪೃಶ್ಯತೆಯ ವಿರುದ್ಧ ದನಿಯೆತ್ತಿ, ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸಿದವರು. ಠಾಗೋರರ ಛೋಕರ್‌ಬಾಲಿಯನ್ನು ವಿನೋದಿನಿ ಎಂಬ ಶೀರ್ಷಿಕೆಯಲ್ಲಿ ಮೊದಲಿಗೆ ಅನುವಾದಿಸಿದರು. ಅದನ್ನು ಬೆಳಕಿಗೆ ತಂದ ಮೈಸೂರಿನ ಕಾವ್ಯಾಲಯದ ಕೂಡಲಿ ಚಿದಂಬರಂ ಅವರೇ ಮುಂದಿನ ಮೂರು ದಶಕಗಳ ಕಾಲ ಅವರನ್ನು ಪ್ರೋತ್ಸಾಹಿಸಿ ಅವರಿಂದ ಅನುವಾದಗಳನ್ನು ಹೊರತಂದರು. ಮುಂದೆ ಫ್ರೀ ಪ್ರೆಸ್ ಜರ್ನಲ್ ಪತ್ರಿಕೆಯಲ್ಲಿ ಉನ್ನತ ಹುದ್ದೆಗೇರಿ ದುಡಿದ ಅಹೋಬಲ ಶಂಕರರು, ಬಿಮಲ್ ಮಿಶ್ರಾರ ,`ಸಾಹಿಬ್ ಬೀಬಿ ಔರ್ ಗುಲಾಮ್’ ಬೃಹತ್ಕೃತಿಯನ್ನೂ ಕನ್ನಡಕ್ಕೆ ತಂದರು.

ಅನುವಾದಗಳ ಬಗೆಗಿನ ಸಂಶೋಧನಾತ್ಮಕ ಪ್ರಬಂಧಕ್ಕಾಗಿ ನಡೆಸಿದ ಅಧ್ಯಯನದಲ್ಲಿ ನನ್ನ ಮನವನ್ನು ಬಹುವಾಗಿ ತಟ್ಟಿದ್ದು, ಬಿ. ಗಣಪತಿ ಪೈ ಅವರು ಅನುವಾದಿಸಿದ ದುರ್ಗಾ ಭಾಗವತ್ ಅವರ ಮರಾಠಿ ಕೃತಿ, `ಋತು ಚಕ್ರ’. ಪ್ರಕೃತಿ ವರ್ಣನೆ ಹಾಗೂ ಭಾಷಾ ಸಂಪತ್ತಿನ ಭಂಡಾರವೇ ಆದ ದುರ್ಗಾ ಭಾಗವತ್‌ರ ಋತುಚಕ್ರದ ಪುಟ ಪುಟಗಳನ್ನೂ ನಾನು ಸವಿ ಸವಿದು ಮೆದ್ದೆ. ಪ್ರಕೃತಿಯಲ್ಲಿ ಋತುಗಳ ಪರ್ಯಟನೆಯ ಮೋಹಕ ಚಿತ್ರವನ್ನು ನಮ್ಮ ಮುಂದಿಡುವ ಋತುಚಕ್ರ, ದುರ್ಗಾ ಭಾಗವತ್ ಅವರ ಭಾಷಾ ಪಾಂಡಿತ್ಯ, ಪದಲಾಲಿತ್ಯ, ಸೂಕ್ಷ್ಮಾತಿಸೂಕ್ಷ್ಮ ಅವಲೋಕನಾ ಶಕ್ತಿ ಹಾಗೂ ಕಲ್ಪನಾ ವಿಲಾಸಕ್ಕೆ ಸಾಕ್ಷಿಯಾಗಿದೆ. ಗಣಪತಿ ಪೈ ಅವರ ರಸಗ್ರಹಣ ಹಾಗೂ ಭಾವಾಭಿವ್ಯಕ್ತಿಯ ಸಾಮರ್ಥ್ಯದಿಂದ ಅತ್ಯಂತ ಚೆಲುವಾಗಿ ಕನ್ನಡದಲ್ಲಿ ಪಡಿಮೂಡಿದ ಋತುಚಕ್ರದ ಅಧ್ಯಾಯಗಳ ಶೀರ್ಷಿಕೆಗಳೇ ಚೇತೋಹಾರಿಯಾಗಿವೆ. ವಸಂತ ಹೃದಯ ಚೈತ್ರ, ಚೈತ್ರಮಿತ್ರ ವೈಶಾಖ, ಜ್ಯೇಷ್ಠದ ಪ್ರಥಮ ಮೇಘಮಂಡಲ, ಮೇಘಶ್ಯಾಮ ಆಷಾಢ, ಶ್ರಾವಣ ಶೃಂಖಲೆ, ಪುಷ್ಪಮಂಡಿತ ಭಾದ್ರಪದ, ಹೊಂಬಣ್ಣದ ಆಶ್ವೀಜ, ಸಂಧ್ಯಾರಂಜಿತ ಕಾರ್ತಿಕ, ಪ್ರಶಾಂತ ಮತ್ತು ಪ್ರಕ್ಷುಬ್ಧ ಮಾರ್ಗಶಿರ, ತಾಲಬದ್ಧ ಪುಷ್ಯ, ಮಾಯಾವಿ ಮಾಘ ಹಾಗೂ ರೂಪಧಾರಿ ಫಾಲ್ಗುಣ ಎಂಬ ಶೀರ್ಷಿಕೆಗಳೇ ಕೃತಿಯ ಹೂರಣದ ಪದಗುಂಫನದ ಮಾಧುರ್ಯವನ್ನು ಸೂಚಿಸುತ್ತವೆ. ತಮ್ಮ ವಾಸದ ಮಲಬಾರ್ ಹಿಲ್ ಪರಿಸರದಲ್ಲೇ ತಾನು ಕಂಡ ಹೂ, ಹಣ್ಣು, ತರು, ಲತೆ, ಹಕ್ಕಿ, ಪಕ್ಕಿ, ಕ್ರಿಮಿ, ಕೀಟಗಳ ಸೂಕ್ಷ್ಮಾತಿಸೂಕ್ಷ್ಮ ವರ್ಣನೆಯಿಂದ ಅಪೂರ್ವ ಕಲಾಕೃತಿಯನ್ನೇ ಅವರು ಕಡೆದಿದ್ದಾರೆ. ಋತುಚಕ್ರ, ಆಸ್ವಾದಿಸುವ ಹೃದಯಗಳಿಗೆ ಸಾಹಿತ್ಯರಸದೌತಣವೇ ಆಗಿದೆ. ವಿಚಾರ ಸ್ವಾತಂತ್ರ್ಯದ ತಾತ್ವಿಕ ನಿಲುವಿನಿಂದಾಗಿ ಒಂದು ಲಕ್ಷ ರೂಪಾಯಿಗಳ ಮಹಾರಾಷ್ಟ್ರ ಗೌರವ ಪುರಸ್ಕಾರವನ್ನು ತಿರಸ್ಕರಿಸಿದ ಸಾಹಿತಿ ಶ್ರೇಷ್ಠೆ, ದುರ್ಗಾ ಭಾಗವತ್ ಅವರು ತಾವು ಸಂಗ್ರಹಿಸಿ ಅನುವಾದಿಸಿದ ಲೋಕೋತ್ತರ ಕೃತಿಗಳಿಂದ ವಿಶ್ವ ಸಾಹಿತ್ಯಸಿರಿಯನ್ನು ಹೆಚ್ಚಿಸಿದವರು. ಅವರ ಜೀವಿತಕಾಲದಲ್ಲಿ ಮುಂಬೈಯಲ್ಲಿದ್ದೂ ಅವರನ್ನು ಕಾಣದೆ ಹೋದ ನಷ್ಟ ನನ್ನದು.

ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ, ಡಾ| ಜಿ.ಎನ್.ಉಪಾಧ್ಯರ ಪ್ರೋತ್ಸಾಹದಿಂದ ಇಂತಹ ಸಾಹಿತ್ಯಾಧ್ಯಯನ ಸಾಧ್ಯವಾದ ಸಂತಸ, ಕೃತಾರ್ಥತೆ, ನನ್ನದು. ೨೦೧೫ರಲ್ಲಿ ಯೂನಿವರ್ಸಿಟಿ ಕನ್ನಡ ವಿಭಾಗಕ್ಕೆ ಕರೆಸಿಕೊಂಡು, ಅನುವಾದಕೃಷಿಯ ಬಗ್ಗೆ ನನ್ನ ವಿಚಾರಗಳನ್ನು ಪ್ರಸ್ತುತಪಡಿಸುವಂತೆ ಡಾ| ಉಪಾಧ್ಯರು ಕರೆಯಿತ್ತು, ಸನ್ಮಾನಿಸಿದರು. ಹಿಂದೆ ೨೦೧೦ರಲ್ಲಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ವತಿಯಿಂದ ಗೌರವ ಪುರಸ್ಕಾರವನ್ನೂ ನೀಡಿ ಸನ್ಮಾನಿಸಿದ್ದರು. ೨೦೧೫ರಲ್ಲಿ ಮಹಾರಾಷ್ಟ್ರ ಕನ್ನಡ ಸಾಹಿತ್ಯ ಪರಿಷತ್ತು, ತನ್ನ ವಿಂಶತಿ ಸಮಾರಂಭದಲ್ಲಿ ಗೌರವ ಪುರಸ್ಕಾರದಿಂದ ಸಮ್ಮಾನಿಸಿತು. ೨೦೧೫ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಅನುವಾದ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಅನುವಾದ ಕ್ಷೇತ್ರದಲ್ಲಿನ ನನ್ನ ಅದುವರೆಗಿನ ಒಟ್ಟು ಸಾಧನೆಗಾಗಿ ೨೦೧೪ನೇ ಸಾಲಿನ ಗೌರವ ಪ್ರಶಸ್ತಿಯಿಂದ ಸಮ್ಮಾನಿಸಿತು. ಧನ್ಯತೆಯ ಅನುಭವ ನೀಡಿದ, ಸಾಧಿಸಬೇಕಾದುದು ಇನ್ನೂ ಬಹಳ ಇದೆಯೆಂದು ಎಚ್ಚರಿಸಿದ ಅಮೂಲ್ಯ ಕ್ಷಣವದು!

(ಮುಂದುವರಿಯಲಿದೆ)