ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ
ನಾಳೆ ಇನ್ನೂ ಕಾದಿದೆ
ಅಧ್ಯಾಯ – ೪೧

೨೦೧೬ ಆಗಸ್ಟ್ ೨೮, ನನ್ನ ಜೇನ್ ಏರ್ ಕೊನೆಗೂ ಬಂಧಮುಕ್ತಳಾಗಿ ಬೆಳಕು ಕಂಡ ದಿನ. ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ನಡೆದ ಕೃತಿ ಲೋಕಾರ್ಪಣಾ ಸಮಾರಂಭದಲ್ಲಿ ಅನುವಾದ ಕ್ಷೇತ್ರದ ದಿಗ್ಗಜ ಎಸ್. ದಿವಾಕರ್ ಹಾಗೂ ಪ್ರಿಯ ಜಯಂತ್ ಕಾಯ್ಕಿಣಿ ಅವರು ಕೃತಿ ಅನಾವರಣ ಗೈದರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ವಿ.ನಾರಾಯಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕೃತಿ ಪರಿಚಯ ಮಾಡುತ್ತಾ ದಿವಾಕರ ಅವರಾಡಿದ ವಿಶ್ವಸಾಹಿತ್ಯದ ಕುರಿತಾದ ಮೌಲಿಕ ಮಾತುಗಳು, ಮೆಚ್ಚುನುಡಿಗಳು ಸಮಾರಂಭದ ಘನತೆಯನ್ನು ಹೆಚ್ಚಿಸಿದುವು. ಹೃದಯ ತುಂಬಿ ಮೆಚ್ಚುನುಡಿಗಳನ್ನಾಡಿದ, ಪುಸ್ತಕದ ಕೆಲವು ಭಾಗಗಳನ್ನು ವಾಚಿಸಿ ಕೃತಿಯ ರುಚಿ ಅನಾವರಣಗೊಳಿಸಿದ ಪ್ರಿಯ ಜಯಂತ್ ಅವರು, ತಮ್ಮ ಬೆನ್ನುಡಿ ಪುಸ್ತಕದ ಬೆನ್ನಿನ ಒಳ ಭಾಗದಲ್ಲಿ ಅಚ್ಚಾದ ಬಗ್ಗೆ ನುಡಿಯುತ್ತಾ, ಸರಿಯೇ, ಬೆನ್ನಿನ ಮೇಲೆ ಶರ್ಟ್‌ನ ಹೊದಿಕೆಯಿದೆ, ಎಂದು ತಮ್ಮ ವಿಶಾಲ ಮನದಿಂದ ನಕ್ಕು ಹಗುರಾದರು. ಪಾದ ಅಡಿ ಮಗುಚಿ ಉಳುಕಿದ್ದು, ಅದಕ್ಕೆ ವಿಶ್ರಾಂತಿ ಅಗತ್ಯವಿದ್ದರೂ ಪ್ರೀತಿಯಿಟ್ಟು ಬಂದ ಜಯಂತ್! ವಿಶ್ವಸಾಹಿತ್ಯವನ್ನು ಕನ್ನಡಿಸುವ ನನ್ನ ಪ್ರೀತಿಯ ಅನುವಾದ ಕಾಯಕವನ್ನು `ವ್ರತದಂತೆ’ ಎಂದೂ, ನನ್ನ ಜೇನ್ ಏರ್ ಕೃತಿಯನ್ನು ಒಂದು `ನುಡಿ ವಿಶೇಷ’ವೆಂದೂ, “ಮೂಲಕೃತಿಯ ಕುರಿತಾದ ಅವರ ತೀವ್ರ ಪ್ರೀತಿ ಮತ್ತು ಅದರೊಂದಿಗಿನ ಕ್ರಿಯಾಶೀಲ ತಾದಾತ್ಮ್ಯವೇ ಈ ಅನುವಾದದ ಜೀವಾಳವಾಗಿದೆ” ಎಂದೂ ಬರೆದು ಬೆನ್ತಟ್ಟಿದ ಜಯಂತ್!

ಅಧ್ಯಕ್ಷ ಸ್ಥಾನದಿಂದ ಡಾ| ಕೆ.ವಿ.ನಾರಾಯಣ ಅವರಾಡಿದ ವಿದ್ವತ್ಪೂರ್ಣ ನುಡಿಗಳೂ ಕಾರ್ಯಕ್ರಮಕ್ಕೆ ಕಳೆಯಿತ್ತುವು.. ಗೆಳತಿ, ಸಾಹಿತಿ ನೇಮಿಚಂದ್ರರ ಆಗಮನ ನನ್ನ ಮನಕ್ಕೆ ತಂಪೆರೆಯಿತು. ಪ್ರೀತಿಯ ಉಷಾ ರೈ ಅವರು, ಕಣ್ಣಿನ ಶಸ್ತ್ರ ಕ್ರಿಯೆಯಾಗಿದ್ದೂ, ನನ್ನ ಪ್ರೀತ್ಯರ್ಥ ಬಂದು ಹೋದುದು ತುಂಬ ಸಂತೋಷವಿತ್ತಿತು. ಲೇಖಕಿಯರ ಸಂಘದ ಹಿರಿಯರಾದ ಕಮಲಾ ಬಾಲು ಅವರಿದ್ದುದು ಮನವನ್ನರಳಿಸಿತು. ಅವಧಿಯ ಗೆಳತಿ ಸಂಧ್ಯಾರಾಣಿ, ಭಾರತಿಯೂ ಬಂದು ಅನ್ಯ ಕಾರ್ಯನಿಮಿತ್ತ ಹೊರಟು ಹೋದರು. ಗೆಳತಿ, ಸಾಹಿತಿ, ಕಲಾವಿದೆ ಜಯಲಕ್ಷ್ಮೀ ಪಾಟೀಲ್, ಕಾರ್ಯಕ್ರಮಕ್ಕೆ ಆರಂಭದಿಂದಲೂ ನೀಡಿದ ಎಲ್ಲ ಸಹಕಾರ, ಮಾರ್ಗದರ್ಶನ, ತೋರಿದ ಪ್ರೀತಿಯನ್ನು ಮರೆಯಲಾಗದು.

ನುಡಿದಂತೆ ಕೃತಿಯ ೧೫೦ ಪ್ರತಿಗಳನ್ನು ಪ್ರಕಾಶಕರು ನನ್ನ ಕೈಗಿತ್ತಾಗ ಧನ್ಯತೆಯ ಭಾವ ತುಂಬಿಕೊಂಡಿತು. ಕಾರ್ಯಕ್ರಮಕ್ಕೆ ಬಂದ ಬೆರಳೆಣಿಕೆಯ ಜನರನ್ನು ಕಂಡು ಹೃದಯ ಮುದುಡಿತ್ತು. ಸಾಹಿತ್ಯಕ್ಷೇತ್ರದ ಇಂತಹ ಶ್ರೇಷ್ಠರು ಮಾತನಾಡುವಾಗ ಆಲಿಸಲು ಸಾಕಷ್ಟು ಜನರಿರಬೇಕಿತ್ತು, ಎಂದು ನೊಂದುಕೊಂಡ ನನ್ನನ್ನು, ಚಿಂತೆಯಿಲ್ಲ; ಆಸಕ್ತಿಯಿಂದ ಆಲಿಸುವ ಇಂತಹ ಕೆಲವರೇ ಇದ್ದರೂ ಸಾಕು. ಸಾಹಿತ್ಯಿಕ ಕಾರ್ಯಕ್ರಮಗಳಿಗೆ ನಿಮ್ಮ ಮುಂಬೈಯಲ್ಲಿ ಬರುವಂತೆ ಇಲ್ಲಿ ಜನ ಬರುವುದಿಲ್ಲವೆಂಬ ಸಾಂತ್ವನವೂ ಸಿಕ್ಕಿತು. ಅಂದು ಭಾನುವಾರ ದಿನವಿಡೀ ಕಾರ್ಯಕ್ರಮಗಳಿದ್ದು, ಇದು ಸಂಜೆಯ ಸಮಾರಂಭವಾದುದೂ ಒಂದು ಕಾರಣವಿರಬಹುದು.

ಎರಡು ವಾರಗಳ ಹಿಂದೆ ಅವಧಿಯಲ್ಲಿ ನನ್ನ ಜೇನ್ ಏರ್ ಕೃತಿ ಬಿಡುಗಡೆ ಬಗ್ಗೆ ಮಾಹಿತಿ ಪ್ರಕಟವಾಗಿತ್ತು. ಜಯಲಕ್ಷ್ಮಿ ಅವರು ತಮ್ಮ ಅಂತಃಪುರದಲ್ಲೂ ಪ್ರಕಟಿಸಿ, ಸಖಿಯರಿಗೆ ಪ್ರೀತಿಯ ಕರೆಯೋಲೆ ನೀಡಿದ್ದರು. ದೂರದರ್ಶನ ಚಂದನ ವಾಹಿನಿಯಿಂದ ಎಚ್.ಎನ್. ಆರತಿ ಅವರು, ಹೇಗೂ ಬೆಂಗಳೂರಿಗೆ ಬರುತ್ತಿದ್ದೀರಿ, ನಮ್ಮ ಚಂದನ ಕಛೇರಿಗೆ ಬಂದು ಸಂದರ್ಶನ ನೀಡಿ, ಎಂದಿದ್ದರು. ದಿನ ಬಿಟ್ಟು ಸಂದರ್ಶನ ನಿಗದಿಯಾಗಿತ್ತು.

ಮರುದಿನ ಬಿಡುವಿದ್ದುದರಿಂದ ಪ್ರಿಯರಾದ ಸುನಂದಾ ಬೆಳಗಾಂವಕರ್ ಅವರನ್ನು ಭೇಟಿಯಾಗಿ ಅವರ ಕೈಯಲ್ಲಿ ನನ್ನ ಜೇನ್ ಏರ್ ಇಟ್ಟು ಧನ್ಯಳಾದೆ. ಸುನಂದಕ್ಕ, ಎಂದಿನಂತೆ ಅಪರಿಮಿತ ಆತಿಥ್ಯದಿಂದಲೂ, ಪ್ರೀತಿಯಿಂದಲೂ ನನ್ನನ್ನು ತಣಿಸಿದರು. ಹೊಟ್ಟೆ ಬಿರಿವಂತೆ ತಿನಿಸಿದರು. ಎಂದಿನಂತೆ ಪುನಃ ಅಚ್ಚಾದ ತಮ್ಮ ಕೃತಿಗಳು, ರವಿಕೆ ಕಣ, ಮಿಠಾಯಿ, ಮೇಲೆ ಕಂಚಿನ ದೊಡ್ಡದೊಂದು ವೀಣಾಪಾಣಿ ಶಾರದೆಯ ವಿಗ್ರಹವಿತ್ತು ಹರಸಿದರು. ಅವರ ನಿರ್ಮಲ ಪ್ರೀತಿಗೆ ಏನು ತಾನೇ ಹೇಳಲಿ?

ಎಂದಿನಂತೆ ಬೆಂಗಳೂರ ಭೇಟಿಯಲ್ಲಿ ನಾನು ಕಾಣಬೇಕಾಗಿದ್ದ ಇನ್ನೊಂದು ಪ್ರಿಯ ಜೀವವನ್ನು ಕಾಣುವಂತಿರಲಿಲ್ಲ. ನನ್ನ ಜೇನ್‌ಳನ್ನು ಅವರ ಕೈಯಲ್ಲಿ ಇಡುವಂತಿರಲಿಲ್ಲ. ಪ್ರಿಯ ಪೆಜತ್ತಾಯರು ನಮ್ಮನ್ನಗಲಿ ವರ್ಷ ಕಳೆದಿತ್ತು. ಅಕಾಡೆಮಿ ಪ್ರಶಸ್ತಿ ಸ್ವೀಕರಿಸಿ, ಮೈಸೂರು ಸುತ್ತಿ ಬೆಂಗಳೂರಿಗೆ ಹಿಂದಿರುಗಿದಾಗ ಎಂದಿನಂತೆ ಅವರನ್ನು ಕಾಣಹೋಗಿದ್ದೆ. ಮಗಳು ರಚನಾಳ ಕೈ ಹಿಡಿದು ಬಂದು ಕುಳಿತು ನಗು ನಗುತ್ತಾ ಮಾತನಾಡಿದ ಪೆಜತ್ತಾಯರ ಆರೋಗ್ಯ ಏನೇನೂ ಚೆನ್ನಿಲ್ಲವೆಂದು ತಿಳಿದಿತ್ತು. ಹಾಗಾಗಿ ಅವರು ಹೆಚ್ಚು ಆಯಾಸಗೊಳ್ಳುವುದು ಬೇಡವೆಂದು ಹೆಚ್ಚು ಸಮಯ ಕುಳ್ಳಿರದೆ ನಮಿಸಿ, ಬೀಳ್ಕೊಂಡು ಹೊರಟು ಬಂದಿದ್ದೆ. ನನ್ನ ಕೈ ಹಿಡಿದುಕೊಂಡು ಕಷ್ಟದಿಂದಲೇ ಬಾಗಿಲ ವರೆಗೆ ನಡೆದು ಬಂದು ಬೀಳ್ಕೊಟ್ಟಿದ್ದರು. ಮಾರ್ಚ್ ೨೦ ತನ್ನ ಹುಟ್ಟುಹಬ್ಬದಂದು ಬೆಳಿಗ್ಗೆ ಹಾಸಿಗೆಯಿಂದೆಬ್ಬಿಸಿ ರಾತ್ರಿ ಮಲಗುವವರೆಗೆ ಮಕ್ಕಳು ಈ ಬರ್ತ್‌ಡೇ ಬಾಯ್‌ಗೆ ಕೊಟ್ಟ ಟ್ರೀಟ್ ಬಗ್ಗೆ ಬಹಳ ಸೊಗಸಾದ ಪತ್ರ ಬರೆದಿದ್ದರು. ಪೆಜತ್ತಾಯರಂತಹ ಸ್ವಚ್ಛ ಮನದ, ಜೀವನೋತ್ಸಾಹದ ವ್ಯಕ್ತಿ ಬೇರೆ ಇರಲಿಕ್ಕಿಲ್ಲ.

ಬಾಳೆಹೊಳೆಯ ಸುಳಿಮನೆ ಎಸ್ಟೇಟ್‌ನ ಕೃಷಿಕ! ಇವರು ಬರಿಗೈಯ ಯುವ ಸ್ನಾತಕ ಪದವೀಧರನಾಗಿದ್ದಾಗ, ಉಡುಪಿಯ ಸುವರ್ಣಹೊಳೆ ದಡದ ತನ್ನಕ್ಕನ ಭೂಮಿಯನ್ನು ಸಫಲ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದ್ದರು. ಮತ್ತದನ್ನು ಬಿಟ್ಟು ನೇವಿ ಸೇರುವ ಯೋಚನೆ ಬೆಳೆಸಿಕೊಂಡಿದ್ದರು. ಆಗ ಕೆ.ಕೆ.ಪೈ ಅವರ ಕರೆಯಂತೆ ಅಮೆರಿಕನ್ ಪೀಸ್ ಕೀಪಿಂಗ್ ಫೋರ್ಸ್ ಜೊತೆ ಸೇರಿ, ಜವಳಗೆರೆಯ ಬರದ ಭೂಮಿಯ ಉಸ್ತುವಾರಿಗಿಳಿದರು, ಯಶಸ್ಸೂ ಕಂಡರು. ಅಂತಿಮವಾಗಿ, ಬಾಳೆಹೊಳೆಯ ಸುಳಿಮನೆ ಎಸ್ಟೇಟ್‌ ಸೇರುವುದರೊಡನೆ, ಸಂಸಾರದ ಸುಳಿಯಲ್ಲೂ ದೃಢವಾದರು. ಅಲ್ಲಿ ಕಾಫಿ, ಕರಿಮೆಣಸು, ಏಲಕ್ಕಿ ಬೆಳೆವ ಯಶಸ್ವೀ ಕೃಷಿಕನೂ ಸಾಂಸಾರಿಕ ಅಗತ್ಯಗಳಿಗಾಗಿ ಬೆಂಗಳೂರ ನಿವಾಸಿಯೂ ಆಗಿದ್ದರು. ಪತ್ನಿ – ಸರೋಜಮ್ಮ, ಮಕ್ಕಳು – ರಾಧಿಕಾ ಮತ್ತು ರಚನಾ ಜೊತೆ ಪ್ರಪಂಚ ಪರ್ಯಟನೆ ಮಾಡಿದ್ದರು. ನಾನೊಬ್ಬ ರೈತ ಎನ್ನುತ್ತಲೇ ಸಾಹಿತ್ಯಕೃಷಿಯಲ್ಲೂ ಸಫಲರಾದವರು.

ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಪೆಜತ್ತಾಯರ ಲೇಖನಗಳಿಂದ ಆಕರ್ಷಿತಳಾಗಿ, ಅವರಿಗೆ ಬರೆಯಲಾರಂಭಿಸಿದವಳು, ನಾನು. ನಿರಂತರ ನಮ್ಮ ನಡುವೆ ಮಿಂಚಂಚೆಗಳು ಓಡಾಡತೊಡಗಿದವು. ನನಗೆ ಖುಶಿ ಕೊಡುವ ತಮ್ಮ ಎಸ್ಟೇಟ್ ಫೋಟೋಗಳನ್ನು ಕಳುಹುತ್ತಿದ್ದ ಪೆಜತ್ತಾಯರಿಗೆ, ನಾನು ನನ್ನ ಮುದ್ದು ಕಂದಮ್ಮಗಳು – ನನ್ನ ತಂಗಿಯ ಮೊಮ್ಮಕ್ಕಳು – ಆರಿಯಾ, ಆರವ್‌ರ ಫೋಟೋಗಳನ್ನು ಕಳುಹುತ್ತಿದ್ದೆ. ಹೌ ಆರ್ ಅವರ್ ಲಿಟ್‌ಲ್ ಏಂಜ್‌ಲ್ಸ್, ಎಂದು ಅವರು ಆಗಾಗ ವಿಚಾರಿಸುತ್ತಲೇ ಇದ್ದರು. ತಮ್ಮ ಮನವರಳಿಸಿದ ಮರಿಮಗಳು ಮುದ್ದು ಮಾಹಿಯ ಫೋಟೋಗಳನ್ನು ಅವರು ನನಗೆ ಕಳುಹುತ್ತಿದ್ದರು. ಅವರ ಪುಸ್ತಕಗಳೆಲ್ಲವನ್ನೂ ಪಡೆವ ಭಾಗ್ಯ ನನ್ನದಾದಂತೇ, ಇತ್ತೀಚೆಗಷ್ಟೇ ಅವರು ಆರಂಭಿಸಿದ ಅನುವಾದಗಳೂ ಮಿಂಚಂಚೆಯಲ್ಲಿ ನನ್ನನ್ನು ತಲುಪುತ್ತಿದ್ದುವು. ಅವರ, `ನಮ್ಮ ರಕ್ಷಕ ರಕ್ಷಾ’, `ರೈತನಾಗುವ ಹಾದಿಯಲ್ಲಿ’ ಮತ್ತು `ಕಾಗದದ ದೋಣಿ’ ನನಗೆ ಅಚ್ಚುಮೆಚ್ಚಾಗಿದ್ದುವು. ತಮ್ಮ ಅಮೆರಿಕನ್ ಗೆಳೆಯ ಕೆನ್ ಜೊತೆ ಸೇರಿ ಇಂಗ್ಲಿಷ್‌ನಲ್ಲಿ ರಚಿಸಿದ ತಮ್ಮ `ವಾಯೇಜ್ ಆಫ್ ಅ ಪೇಪರ್ ಬೋಟ್’ ಕೃತಿಯನ್ನೂ ಮಿಂಚಂಚೆಯಲ್ಲಿ ನನಗೆ ಕಳುಹಿದ್ದರು. ಪೆಜತ್ತಾಯರು ತೀವ್ರ ದೈಹಿಕ ಅಸೌಖ್ಯದಲ್ಲೂ ನಾ. ಮೊಗಸಾಲೆ ಅವರ `ಉಲ್ಲಂಘನೆ’, ಹಾಗೂ ನಾ. ಡಿಸೋಜಾ ಅವರ `ಬೊಮ್ಮಣ್’ಗಳ ಇಂಗ್ಲಿಷ್ ಅನುವಾದವನ್ನೂ ಮಾಡಿ ಮುಗಿಸಿದ್ದರು. ಕೆ.ಟಿ.ಗಟ್ಟಿ ಅವರ `ಅರಗಿನ ಮನೆ’ಯ ಅನುವಾದ ಮಾತ್ರ ಅರ್ಧದಲ್ಲಿ ಉಳಿದು ಹೋಯ್ತು.

ಪತ್ನಿ ಸರೋಜಮ್ಮನ ಅಸೌಖ್ಯದ ದಿನಗಳಲ್ಲೂ ಎಲ್ಲ ವಿವರ ನೀಡುತ್ತಾ ಅವರು ಬರೆದು ತಿಳಿಸುತ್ತಿದ್ದರು. ಅಸೌಖ್ಯ, ಅಗಲಿಕೆ ಎಲ್ಲ ಸಹಜವೆಂಬಂತೆ ಅವರು ಬರೆಯುತ್ತಿದ್ದರೂ ಆಡುತ್ತಿದ್ದರೂ ಸರೋಜಮ್ಮನ ಅಗಲಿಕೆ ನಿಜಕ್ಕೂ ಅವರನ್ನು ಘಾತಿಸಿತ್ತು. ಕೊನೆಯ ದಿನಗಳಲ್ಲಿ ಆಗಾಗ ಕರೆ ಮಾಡುತ್ತಿದ್ದ ಪೆಜತ್ತಾಯರ ಮಾತಿನಲ್ಲಿ ನೋವು, ನಿರಾಸೆ, ಕೊರಗು ಎಂಬುದಿರಲಿಲ್ಲ. ಎಪ್ರಿಲ್ ೨೨ರಂದು ಅವರ ಕೊನೆಯ ಮಿಂಚಂಚೆ ಬಂತು. ಫೋನ್ ಕರೆಯೂ ಬಂತು. ಪರೀಕ್ಷೆಗಾಗಿ ಆಸ್ಪತ್ರೆಗೆ ಹೋಗುತ್ತಿರುವ ಬಗ್ಗೆ ತಿಳಿಸಿ, ಸಾಧ್ಯವಾದೊಡನೆ ಪುನಃ ಬರೆಯುವೆನೆಂದು ಬರೆದಿದ್ದರು. ಊರಿಗೆ ತೆರಳಿ ಅಲ್ಲಿ ವ್ಯಸ್ತಳಾಗಿದ್ದ ನಾನು, ಅವರ ವಿಷಮ ಸ್ಥಿತಿಯ ಬಗ್ಗೆ ಅರಿತಿದ್ದು, ಕರೆ ಮಾಡಿ ಹೇಗಿರುವರೋ ತಿಳಿದುಕೊಳ್ಳಬೇಕು ಎಂದು ಕೊಳ್ಳುತ್ತಿರುವಂತೆಯೇ ಮೇ ಒಂದರಂದು ಅತ್ಯಂತ ದುಃಖಕರವಾದ ಅವರ ಮರಣವಾರ್ತೆ ಬಂದೆರಗಿತು. ಸಜ್ಜನಿಕೆ, ಆತ್ಮೀಯತೆಗೆ ಭಾಷ್ಯವಾಗಿದ್ದ ಪ್ರಿಯ ಪೆಜತ್ತಾಯರು ಇಹದ ವ್ಯಾಪಾರ ಮುಗಿಸಿ ಹೊರಟು ಹೋಗಿದ್ದರು. ಆದರೆ ಅವರನ್ನರಿತ ಯಾವ ಹೃದಯ ತಾನೇ ಅವರನ್ನು ಮರೆತೀತು? ಸುನಂದಕ್ಕನ ರಾಜವಿಲಾಸ್ ಎಕ್ಸ್‌ಟೆನ್ಶನ್‌ನ ಮನೆಯಿಂದ ಹೊರಟು, ಪೆಜತ್ತಾಯರ ಡಾಲರ್‍ಸ್ ಕೊಲನಿಯತ್ತಣಿಂದ ಬರುವಾಗ, ಸಹಜವಾಗಿಯೇ ಹೃದಯ ಭಾರವಾಗಿತ್ತು; ಅವರು ಇನ್ನೂ ಇರಬೇಕಿತ್ತು, ಎಂದು ಹೃದಯ ಬಯಸುತ್ತಿತ್ತು.

ಮರುದಿನ ಆಗಸ್ಟ್ ಮೂವತ್ತು ಮಂಗಳವಾರ ಬೆಳಿಗ್ಗೆ ಹತ್ತು ಗಂಟೆಗೆ ಚಂದನದಲ್ಲಿ ನನ್ನ ಸಂದರ್ಶನ ಏರ್ಪಾಡಾಗಿತ್ತು. ಬೆಂಗಳೂರಲ್ಲಿರುವ ತಂಗಿ ಮೀನಾ ಜೊತೆ ದೂರದರ್ಶನ ಕೇಂದ್ರಕ್ಕೆ ಹೋಗಿ ಸಂದರ್ಶನ ನೀಡಿ ಬಂದುದು ಒಂದು ಸುಮಧುರ ಅನುಭವ. ಎಚ್.ಎನ್.ಆರತಿ ಅವರ ಭೇಟಿ ಮನವನ್ನರಳಿಸಿತು. ಸಂದರ್ಶಕ ಶಿವರಾಮ್ ಅವರು ಎರಡು ದಿನಗಳ ಮೊದಲೇ ಬಂದು ಭೇಟಿಯಾಗಿದ್ದರು. ದಿನ ಬಿಟ್ಟು, ಸಪ್ಟೆಂಬರ್ ಒಂದರಂದು ಬೆಳಿಗ್ಗೆ ಬೆಳಗು ಕಾರ್ಯಕ್ರಮದಲ್ಲಿ ಸಂದರ್ಶನ ಪ್ರಕಟವಾದಾಗ, ನೋಡಿದ ಹಲವರಿಂದ ಮೆಚ್ಚುಗೆ ತಿಳಿಸಿ ಕರೆಗಳು ಬಂದುವು. ದೂರದರ್ಶನದ ಶಿವರಾಮ್ ಅವರು ತುಂಬ ಚೆನ್ನಾಗಿ ಮಾತನಾಡಿಸುತ್ತಾ ಕಾರ್ಯಕ್ರಮ ನಿರ್ವಹಿಸಿದರು. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರವಾಗಿ ನನ್ನ ಮನದ ಮಾತುಗಳೆಲ್ಲವನ್ನೂ ಬಿಚ್ಚಿಡುವುದು ಸಾಧ್ಯವಾದ ಸಂತಸ ನನ್ನದು.

ಸಪ್ಟೆಂಬರ್ ಹದಿನೆಂಟರಂದು ಮಂಗಳೂರಿನ ಸಾಹಿತ್ಯ ಸದನದಲ್ಲಿ ಕರಾವಳಿ ಲೇಖಕಿಯರ ಸಂಘದ ವತಿಯಿಂದ ನನ್ನ ಜೇನ್ ಏರ್ ಕೃತಿ ಬಿಡುಗಡೆ ನಿಶ್ಚಿತವಾಗಿತ್ತು. ಮುನ್ನಾದಿನ ನನ್ನ ಪ್ರೀತಿಯ ಭಾಮಾಂಟಿಯ ತೊಂಬತ್ತನೇ ಹುಟ್ಟುಹಬ್ಬ. ಮದುವೆಯಾಗದೇ ಉಳಿದ, ತಂಗಿಯ ಮಕ್ಕಳೇ ಮಕ್ಕಳಾದ ನಮ್ಮ ಭಾಮಾಂಟಿಗೆ ನಾವು ಮೊದಲ ಮಕ್ಕಳು. ನನ್ನನ್ನಂತೂ ಹುಟ್ಟಿನಲ್ಲೇ ಹೃದಯಕ್ಕೆ ಅಪ್ಪಿಕೊಂಡವರು! ಮಂಗಳೂರ ಪತ್ತ್ ಮುಡಿ ಸೌಧ ಹಾಲ್‌ನಲ್ಲಿ ಆಂಟಿಯ ಹುಟ್ಟುಹಬ್ಬ ಸಮಾರಂಭ. ಮದುವೆಯ ಹಾಲ್‌ನಂತೆ ಹಾಲ್ ತುಂಬಿ ತುಳುಕಿತ್ತು. ಬೆಸೆಂಟ್ ಶಾಲೆಯ ಹಳೆ ವಿದ್ಯಾರ್ಥಿನಿಯರು, ಸಹೋದ್ಯೋಗಿಗಳು, ಪರಿಚಿತರು, ಸ್ನೇಹಿತರು ಎಂದು ಜನ ಸಾಲುಗಟ್ಟಿ ಬಂದು ಪ್ರೀತಿ, ವಾತ್ಸಲ್ಯವೇ ಮೂರ್ತಿಮತ್ತಾದ, ಮುಗ್ಧ ಮಗುವಿನಂತೆ ಕುಳಿತಿದ್ದ ಆಂಟಿಯನ್ನು ಅಭಿನಂದಿಸಿ, ಪ್ರೀತಿ ಸುರಿಸಿ ಹೋದರು. ಭೂರಿಭೋಜನವಿತ್ತು. ಮಗ ಧನಂಜಯ ಎಲ್ಲವನ್ನೂ ಅಚ್ಚುಕಟ್ಟಾಗಿ ಏರ್ಪಾಡು ಮಾಡಿದ್ದ. ತಾಯ ಋಣವನ್ನು ಸಲಿಸಿ ಧನ್ಯನಾಗಿದ್ದ.

ಮರುದಿನ ನನ್ನ ಜೇನ್ ಏರ್ ಕೃತಿ ಅನಾವರಣ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದವರು, ಆತ್ಮೀಯ ಶ್ರೇಷ್ಠ ಸಾಹಿತಿ, ಕೆ.ಟಿ.ಗಟ್ಟಿ ಅವರು. ನನ್ನ ಜೇನ್ ಏರ್ ಬಗ್ಗೆ, ಇದು ಬರಿಯ ಅನುವಾದವಲ್ಲ, ಇದೊಂದು ತಪಸ್ಸು, ಎಂದ ಅವರ ಮೆಚ್ಚುನುಡಿಯಿಂದ ನನ್ನ ಹೃದಯ ತುಂಬಿ ಬಂತು. ನನ್ನ ಮಟ್ಟಿಗೆ ಯಾವುದೇ ಪ್ರಶಸ್ತಿಗೂ ಮಿಗಿಲಾದ ಈ ಮಾತಿನಿಂದ ನಾನು ಧನ್ಯಳಾದೆ. ಮುಂದಿನ ಅನುವಾದವಾಗಿ ಎಮಿಲಿ ಬ್ರಾಂಟಿಯ ಉನ್ನತ ಸಾಹಿತ್ಯಿಕ ಮೌಲ್ಯದ “ವುದರಿಂಗ್ ಹೈಟ್ಸ್” ಕೃತಿಯನ್ನು ನಾನು ಆರಿಸಿ ಕೊಳ್ಳ ಬೇಕೆಂಬ ಸಲಹೆಯನ್ನೂ ಅವರಿತ್ತರು. ಭಾರತಿ ಶೇವಗೂರ್ ಅವರು ಸೊಗಸಾಗಿ ಕೃತಿ ಪರಿಚಯ ಮಾಡಿದರು.

ಡಿಸೆಂಬರ್ ಹದಿನಾರರಂದು ಜೇನ್ ಏರ್ ಕೃತಿಯ ಮುಂಬೈ ಅನಾವರಣ, ಜಸ್ಟಿಸ್ ಶ್ರೀಕೃಷ್ಣ ಅವರ ಕೈಗಳಿಂದ ಮೈಸೂರ್ ಅಸೋಸಿಯೇಶನ್ ಸಭಾಂಗಣದಲ್ಲಾಯ್ತು. ಕೇಳಿದೊಡನೆ ಒಪ್ಪಿಕೊಂಡು, ಪುಸ್ತಕ ಪಡೆದು ಓದಿ, ಕೃತಿ ಅನಾವರಣ ಗೈದು ಮೆಚ್ಚುನುಡಿಗಳನ್ನಾಡಿದ ಜಸ್ಟಿಸ್ ಶ್ರೀಕೃಷ್ಣ ಅವರು, ಕನ್ನಡದಿಂದ ಈ ಕೃತಿ ಬೇರೆ ಭಾರತೀಯ ಭಾಷೆಗಳಿಗೂ ಅನುವಾದವಾಗುವಂತೆ ಆಗಲೆಂದು ಹಾರೈಸಿದರು. ಮುಖ್ಯ ಅತಿಥಿಯಾಗಿ ಸ್ಪಾರೋ ಸಂಸ್ಥೆಯ ಡಾ. ಸಿ.ಎಸ್. ಲಕ್ಷ್ಮಿ ಅವರು ಜೊತೆಗಿದ್ದರು. ಪತ್ರಕರ್ತ, ಸಾಹಿತಿ ದಯಾಸಾಗರ ಚೌಟ ಹಾಗೂ ಡಾ.ಗಿರಿಜಾ ಶಾಸ್ತ್ರಿ ಕೃತಿ ಸಮೀಕ್ಷೆಗೈದರು.

ನನ್ನ ಗಾನ್ ವಿದ್ ದ ವಿಂಡ್, ಫ್ರಾಂಕಿನ್‌ಸ್ಟೈನ್, ಜೇನ್ ಏರ್ ಕೃತಿಗಳು ನನಗಿತ್ತ ಸಂತಸ, ಸಂತೃಪ್ತಿ ಅಪಾರ. ಆ ತೃಪ್ತಿಯೇ ಅಂತಹ ಇನ್ನಷ್ಟು ಮೌಲಿಕ ಕೃತಿಗಳನ್ನು ನನ್ನ ಚೆಲುಕನ್ನಡ ನುಡಿಗಿಳಿಸಿ ನನ್ನ ಓದುಗರ ಕೈಗಿಡಬೇಕೆಂಬ ಹಂಬಲವನ್ನು ನಿರಂತರವಾಗಿಸಿದೆ. ನನ್ನ ಅನುವಾದ ಪ್ರಕ್ರಿಯೆಯ ಆರಂಭವಾದ ಆಲಂಪನಾ ಕೃತಿಯ ಸೊಗಸನ್ನು, ಅದರ ಮೂಲ ಕೃತಿಕರ್ತೃಗಳಾದ ರಫಿಯಾಜೀ ಹಾಗೂ ಮಂಜೂರುಲ್ ಅಮೀನ್‌ರನ್ನು ಮರೆವಂತೆಯೇ ಇಲ್ಲ. ರಫಿಯಾ ಅವರನ್ನಗಲಿ ಹೈದರಾಬಾದ್‌ನಲ್ಲಿ ಏಕಾಂಗಿಯಾಗುಳಿದ ಮಂಜೂರುಲ್ ಅಮೀನ್‌ರನ್ನು ಹೋಗಿ ಕಾಣುವ ಅವಕಾಶ, ಅಲ್ಲಿ ನಡೆದ ಬಂಧುವರ್ಗದ ವಿವಾಹ ಸಮಾರಂಭವೊಂದರಿಂದ ಪ್ರಾಪ್ತವಾಯ್ತು. ರಫಿಯಾ ದಂಪತಿಗಳ ಸಂಪರ್ಕವನ್ನೊದಗಿಸಿದ ನಮ್ಮ ಆನಂದಂಕ್‌ಲ್ ಮೊಮ್ಮಗನ ಮದುವೆಯದು!

`ಗೋಲ್ಕೊಂಡ ವಿಜಯ ಅಥವಾ ರಾಯ್ಚೂರು ಪತನ’ ಕೃತಿಯನ್ನು ಬಾಲ್ಯದಲ್ಲೋದಿದ ದಿನದಿಂದ ಗೋಲ್ಕೊಂಡ ಕಾಣಬೇಕೆಂಬ ಆಸೆ ನನ್ನದಾಗಿತ್ತು. ನನ್ನ ಆಲಂಪನಾ ಕಾದಂಬರಿಯಲ್ಲಿ ಪುನಃ ಕಂಡ ಗೋಲ್ಕೊಂಡಾ ಆ ಆಸೆಯನ್ನು ಬಡಿದೆಬ್ಬಿಸಿತ್ತು. ಈಗ ಈ ಮದುವೆಯ ಸಂದರ್ಭ ಈ ಆಶೆ ಪೂರೈಸುವಂತಿತ್ತು. ಗೆಳತಿ ದಯಾ ಹಾಗೂ ಬಂಧು ಶೋಭಾಳೊಡನೆ ಹೈದರಾಬಾದ್ ತಲುಪಿದಾಗ ತಡರಾತ್ರಿ ಹೊತ್ತು. ಮರುಬೆಳಿಗ್ಗೆ ಬಂಜಾರಾ ಹಿಲ್ಸ್‌ನ ಮಂಜೂರುಲ್ ಅಮೀನ್ ಅವರನ್ನು ಮನೆಯಲ್ಲೇ ಕಾಣ ಹೋದೆವು. ಹಿಂದೆ ನಾನು ರಫಿಯಾರೊಂದಿಗೆ ಮುಂಬೈಯಲ್ಲಿ ಕಂಡಾಗ ಮಧ್ಯವಯಸ್ಸಿನ ಧೃಢಕಾಯರಾಗಿದ್ದ ಅಮೀನ್‌ಜೀ ಈಗ ಕ್ಷೀಣಿಸಿದ್ದರು. ಅವರನ್ನು ನೋಡಿಕೊಳ್ಳಲು ಆಳೊಬ್ಬನಿದ್ದ. ಅದೇ ವಾರ ಮೀಡಿಯಾ ಟೈಮ್ಸ್ ಪತ್ರಿಕೆಯಲ್ಲಿ ಮುಖಪುಟ ಲೇಖನವಾಗಿ ಅವರ ಸಂದರ್ಶನ ಪ್ರಕಟವಾಗಿತ್ತು. `ಕಾಶ್ಮೀರ್ ಈಸ್ ಇನ್ ಮೈ ಐಸ್ ಆಂಡ್ ಇನ್ ಮೈ ಹಾರ್ಟ್’ ಎಂಬ ಉವಾಚದೊಂದಿಗೆ ಮುಖಪುಟದಲ್ಲಿ ಅಮೀನ್‌ಜೀ ಇದ್ದರು. ನಮ್ಮನ್ನು ಕಂಡು ತುಂಬ ಸಂತೋಷಿತರಾದ ಅವರು, ಪತ್ರಿಕೆಯ ಪ್ರತಿಯೊಂದನ್ನು ನನಗಿತ್ತರು. ಅವರ ಬರಹದ ಕೋಣೆಯಲ್ಲಿ ಬುಕ್‌ ಶೆಲ್ಫ್ ಮೇಲೆ ರಫಿಯಾ ನಸುನಗುತ್ತಿದ್ದರು. ನನ್ನ ಕನ್ನಡಾನುವಾದಕ್ಕಾಗಿ ಹಿಂದಿಗೆ ಅನುವಾದಿಸಿ ಕೊಡುವುದಾಗಿ ರಫಿಯಾ ಹೇಳಿದ್ದ, ಅವರ `ದೋ ರಾಸ್ತೇ’ ಉರ್ದು ಕೃತಿಯನ್ನೂ ಅಮೀನ್‌ಜೀ ನನಗಿತ್ತು, ಯಾರಿಂದಲಾದರೂ ಹಿಂದಿಗೆ ಅನುವಾದಿಸಿಕೊಂಡು, ಮತ್ತೆ ನನ್ನ ಕನ್ನಡದಲ್ಲಿ ತರುವಂತೆ ತಿಳಿಸಿದರು. ಅವರಿಗೆ ನಮಿಸಿ ಬೀಳ್ಕೊಂಡು ಹೊರಡುವಾಗ ಮನಸು ಭಾರವಾಗಿತ್ತು.

ಮರು ಬೆಳಗು ಗೋಲ್ಕೊಂಡಾದತ್ತ ಪಯಣಿಸಿ, ಹೆಬ್ಬಾಗಿಲು ಕಣ್ಣಿಗೆ ಬಿದ್ದಾಗಲೇ ರೋಮಾಂಚನವಾಯ್ತು. ಕೋಟೆಯ ಕಲ್ಲು ಕಲ್ಲುಗಳನ್ನೂ ವಿವರಿಸಿ ಹೇಳಲು ತಕ್ಕ ಗೈಡ್ ಕೂಡ ಜೊತೆಯಾದ. ಕೋಟೆ ಕಟ್ಟಲು ನೀರ ಕಾಲುವೆಯ ವ್ಯವಸ್ಥೆ, ಕಟ್ಟುವ ಕಟ್ಟಾಳುಗಳ ದೈಹಿಕ ಸಾಮರ್ಥ್ಯ ಪರೀಕ್ಷೆಗಾಗಿ ಎತ್ತಿ ತೋರಲೆಂದು ಇದ್ದ ಹತ್ತು ಮಣ ಭಾರದ ಕಲ್ಲು, ಕೋಟೆಯೊಳಗೆ ನೀರು, ಬೆಳಕು, ಧ್ವನಿ ವ್ಯವಸ್ಥೆ, ಮದ್ದುಗುಂಡುಗಳನ್ನು ಪೇರಿಸಿಟ್ಟ ಶಸ್ತ್ರಾಗಾರ, ಜನಾನಾದ ಸುಂದರ ಮಸೀದಿ, ಎಲ್ಲವನ್ನೂ ನೋಡುತ್ತಾ ಸಾಗಿದೆವು.

ಮೇಲೆ ಎತ್ತರದಲ್ಲಿ ಬಾಲಾ ಹಿಸಾರ್ ಕೈಬೀಸಿ ಕರೆಯುತ್ತಿತ್ತು. ಆದರೆ ನಮ್ಮ ಜೊತೆ ಮದುವೆಗೆ ಬಂದಿದ್ದ ಇತರರೂ ಗೋಲ್ಕೊಂಡ ನೋಡಲೆಂದು ಜೊತೆಯಾದವರು, ಅಷ್ಟೆತ್ತರದಲ್ಲಿನ ಬಾಲಾ ಹಿಸಾರ್‌ಗೆ ಹತ್ತುವ, ನೋಡುವ ಯಾವ ಆಸಕ್ತಿಯನ್ನೂ ತೋರದೆ, ಹಸಿದ ಹೊಟ್ಟೆಗಳಿಗೆ ದಾರಿ ಕಾಣಿಸುವ ಯೋಚನೆಯಲ್ಲಿದ್ದುದರಿಂದ, ಒಂದೇ ದೊಡ್ಡ ವಾಹನದಲ್ಲಿ ಬಂದಿದ್ದ ನಾವೂ ನಮ್ಮ ಆಶೆಯನ್ನು ಬದಿಗಿಟ್ಟು ಅವರನ್ನು ಹಿಂಬಾಲಿಸ ಬೇಕಾಯ್ತು. ನನ್ನ ಗೋಲ್ಕೊಂಡಾ ದರ್ಶನ ಅರ್ಧದಲ್ಲುಳಿದಂತಾಯ್ತು.

ಮರುದಿನ ಸಾಲಾರ್‌ಜಂಗ್ ಮ್ಯೂಸಿಯಮ್ ಕಾಣಹೋದಾಗ ಮಾತ್ರ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೆ, ಸಂಪೂರ್ಣ ಕಂಡು ಆನಂದಿಸಿದೆವು. “ಹೀಗೆ ನೋಡಿದರಾಗದು. ಕಾಲಂಶವೂ ನೋಡಿ ಮುಗಿಯದು ಹೀಗಾದ್ರೆ” ಎಂದು ಗೆಳತಿಯರು ಅಲ್ಲಲ್ಲಿ ನಿಲ್ಲುತ್ತಿದ್ದ ನನ್ನನ್ನು ಎಳೆದೊಯ್ಯಬೇಕಾಯ್ತು. ಆದರೂ, ಸರಿಯಾಗಿ ನೋಡಲು ನಾಲ್ಕು ದಿನಗಳಾದರೂ ಬೇಕೆಂದು ಅನಿಸದಿರಲಿಲ್ಲ. ಮೂರನೇ ಸಾಲಾರ್ ಜಂಗ್ ಎಂದು ಹೆಸರಾದ ನವಾಬ್ ಮೀರ್ ಯೂಸುಫ್ ಅಲಿ ಖಾನ್, ಪ್ರ್ರಪಂಚಾದ್ಯಂತದಿಂದ ಸಂಗ್ರಹಿಸಿದ ಅಪೂರ್ವ, ಅಮೂಲ್ಯ ವಸ್ತುಗಳನ್ನು, ಅವಿವಾಹಿತನಾಗಿದ್ದ ಆತನ ಮರಣಾನಂತರ ನವಾಬ ಕುಟುಂಬದವರು, ದೇಶಕ್ಕಾಗಿ ಸಮರ್ಪಿಸಿ, ವಸ್ತುಸಂಗ್ರಹಾಲಯವಾಗಿ ಕಾಪಿಟ್ಟ ಅನರ್ಘ್ಯ ನಿಧಿಯದು!

ಅಲ್ಲಿರುವ ಮನಸೂರೆಗೊಳ್ಳುವ ಅಸಂಖ್ಯ ದಂತದ, ಅಮೃತಶಿಲೆಯ ಕಲಾಕೃತಿಗಳು, ವಿವಿಧ ವಿನ್ಯಾಸದ ಅದ್ಭುತ ಗಡಿಯಾರಗಳು, ವರ್ಣಚಿತ್ರಗಳು, ತುಲಸೀ ರಾಮಾಯಣದಂತಹ ಅಪರೂಪದ ಹಸ್ತಪ್ರತಿಗಳು, ಪೀಠೋಪಕರಣಗಳು, ಇತಿಹಾಸದ ಚಿತ್ರಗಳು, ಅಮೂಲ್ಯ ಛಾಯಾಚಿತ್ರಗಳು, ಮಹತ್ತಾದ ಗರುಡ ಶಿಲ್ಪವೊಂದು, ಅಮೃತಶಿಲೆಯ ಅವಗುಂಠನಧಾರಿ ರೆಬೆಕ್ಕಾ ಮತ್ತು ವಿವಿಧ ಋತುಕನ್ಯೆಯರಂತಹ ಪರಮ ಸುಂದರ ಸಾವಿರಾರು ಅದ್ಭುತಗಳಲ್ಲಿ ಯಾವುದನ್ನು ಹೆಸರಿಸಲಿ, ಯಾವುದನ್ನು ಬಿಡಲಿ? ಕಣ್ಣಾರೆ ಕಂಡೇ ಅರಿಯಬೇಕಾದ ಮಹತ್ತದು!

(ಮುಂದುವರಿಯಲಿದೆ)