ಹವ್ಯಾಸೀ ಮರ ಕೆತ್ತುವ ಕಲೆ – ಭಾಗ ೧

ಬನ್ನಿ, ನನ್ನ ಹೊಸ ಪರಿವಾರದ ಪರಿಚಯ ಮಾಡಿಕೊಳ್ಳಿ. ಚಿತ್ರದಲ್ಲಿ ಎಡದಿಂದ ಮೊದಲನೆಯವ ದೊಡ್ಡ – ತೆಂಗಿನ ನಾಲ್ಕು ಮರದ ತುಂಡುಗಳಲ್ಲಿ ದೊಡ್ಡವ, ದೊಡ್ಡ ತೆಂಗಿನ ಮರದ ಬುಡದ ತುಂಡು. ಸಹಜ ಉರುಟು ಮೈಯನ್ನು ಆರು ಕೋನಯುಕ್ತಗೊಳಿಸುವ ಅಂದಾಜಿನಲ್ಲೇ ಆಯ್ಕೆಯಾಗಿ ಬಂದವ – ಎರಡನೆಯವ, ಆರ್ಮುಗಂ ಉರುಫ್ ಎಣ್ಮುಗಂ! ಕಾಯಿಲಸ್ಥ ಬಡಕಲು ಮರದ, ತುಸು ಸೊಟ್ಟವ ಮತ್ತಿನವ, ಅನ್ವರ್ಥ ನಾಮ – ಡೊಂಕ. ಕೊನೆಯವ ಹಾಗೂ ಇದ್ದವುಗಳಲ್ಲಿ ಸಣ್ಣವ – ಪುಟ್ಟ. ಏನೀ ಚತುರ್ಮುಖರ ವಿಶೇಷ ಎನ್ನುವುದಕ್ಕೆ ಪೂರ್ವಭಾವಿಯಾಗಿ ಸುಮಾರು ಮೂರು ವರ್ಷಗಳ ಹಿಂದಕ್ಕೆ, ನಮ್ಮನೆ ಅಭಯಾದ್ರಿಗೇ ನಿಮ್ಮನ್ನು ಒಯ್ಯುತ್ತೇನೆ.

`ಅಭಯನ ಬೆಟ್ಟ’ ಎಂಬರ್ಥದ ಮನೆ ಹೆಸರೇ ಸೂಚಿಸುವಂತೆ ನಮ್ಮನೆ ಸಣ್ಣ ದಿಬ್ಬವೊಂದರ ಎತ್ತರದಲ್ಲಿದೆ. ಅದಕ್ಕೆ ದಕ್ಷಿಣದಲ್ಲಿ ಸಮಾನ ಎತ್ತರದಲ್ಲಿರುವ ಮತ್ತು ಒಂದೇ ಅಂಗಳದಂತಿರುವ ಮನೆ – ಶ್ರೀಶೈಲ, ಸೋದರಮಾವ ಎ.ಪಿ.ಗೌರೀಶಂಕರರದ್ದು. ಉಳಿದ ಮೂರೂ ದಿಕ್ಕಿನ ವಠಾರಗಳು ವಿವಿಧ ಆಳಗಳಲ್ಲೇ ಇವೆ. ಅಂದು ಅಂದರೆ, ಮೂರು ವರ್ಷಗಳ ಹಿಂದೆಯೂ ಹೀಗೇ ಮಳೆಗಾಲ ತೊಡಗಿತ್ತು. ಅದೊಂದು ಬೆಳಿಗ್ಗೆ ಒಮ್ಮೆಲೆ ಉತ್ತರ ದಿಕ್ಕಿನ ಪಾಗಾರದ ಒಂದಂಶ ಕುಸಿದು ಬಿತ್ತು. ಅಲ್ಲಿರುವ ಪೀಸ್ ಲ್ಯಾಂಡ್ ವಸತಿ ಸಮುಚ್ಛಯದ ನೆಲ ಸುಮಾರು ಒಂದೂವರೆ ಮಹಡಿಯ ತಗ್ಗಿನಲ್ಲಿದೆ! ಕುಸಿತದ ಮುಖ್ಯ ಅಪರಾಧಿ ಆ ಗೋಡೆಯಂಚಿನಲ್ಲಿ ಭಾರಿಯಾಗಿ ಬೆಳೆದಿದ್ದ ಬಾಳೆ ಬುಡ. ಅಯಾಚಿತ ಸಾರ್ವಜನಿಕರ ಪಂಚನಾಮೆಯಲ್ಲಿ, ಇನ್ನೂ ದೃಢವಾಗಿಯೇ ಉಳಿದಿದ್ದ ಪಾಗಾರದ ಇನ್ನೊಂದಂಶದಲ್ಲಿದ್ದ ಎರಡು ನಿಷ್ಪಾಪೀ ತೆಂಗಿನ ಮರಗಳನ್ನು ಶಾಮೀಲು ಮಾಡಿದರು ಮತ್ತು ತಲೆದಂಡದ ತೀರ್ಮಾನವನ್ನೇ ಕೊಟ್ಟರು! ನಾನು ತುರ್ತು ಪಾಗಾರ ಕಟ್ಟಲು ಪೂರ್ವಪರಿಚಯ ಇಲ್ಲದ ಕಂತ್ರಾಟುದಾರನೊಬ್ಬನನ್ನು ಹಿಡಿದೆ. ಆತ, ಪಾಗಾರದ ಕೆಲಸಕ್ಕಿಳಿಯುವುದು ಬಿಟ್ಟು, ನನ್ನ `ಸಾಮಾನ್ಯಜ್ಞಾನ’ದ ಅಭಿವೃದ್ಧಿಗೆಳೆಸಿದ, “ಕೆಲಸ ಶುರು ಮಾಡಲು ತೆಂಗಿನ ಮರ ಹೋಗಲೇಬೇಕು” ಎಂದು ಪಟ್ಟು ಹಿಡಿದ. ನನಗೆ ಸಹಿಸಲಿಲ್ಲ. ಸುಮಾರು ಮೂರು ದಶಕಗಳ ಹಿಂದೆ ಇದೇ ಪಾಗಾರ ಪಶ್ಚಿಮ ಮೂಲೆ ಸೇರಿದಂತೆ ಭಾರೀ ಕುಸಿತ ಕಂಡಿತ್ತು. ಅಂದೂ ಈ ಎರಡು ತೆಂಗಿನ ಮರಗಳು ಮತ್ತು ಆ ಭಾಗದ ಪಾಗಾರ ಹೀಗೆಯೇ ಉಳಿದಿತ್ತು. ಹಳೆಗಾಲದ ಕುಸಿತವನ್ನು ಸಮರ್ಥವಾಗಿ ಸರಿಪಡಿಸಿಕೊಂಡ ಮತ್ತು ಈಚಿನ ದಿನಗಳಲ್ಲಿ ಹೊಸದಾಗಿ ಕೆಲವು ಮನೆ, ಕಟ್ಟಡಗಳನ್ನೂ ಕಟ್ಟಿಸಿದ ನನ್ನ ಅನುಭವಕ್ಕೆ ಕಂತ್ರಾಟುದಾರ ಸಹ್ಯವಾಗಲಿಲ್ಲ. ನಾನು ತೆಂಗಿನ ಮರಗಳ ವಕಾಲತ್ತು ವಹಿಸಿ ಆತನನ್ನೇ ಓಡಿಸಿಬಿಟ್ಟೆ. ಆದರೂ…..

ಮುಂಜಾಗ್ರತೆಯ ಕ್ರಮವಾಗಿ ಮುಂದೊಂದು ದಿನ ಮರಕಡಿಯುವವರನ್ನು ಕರೆಸಿಕೊಂಡೆ. ಅವರು ಎಂಥಾ ಇರುಕಿನಲ್ಲೂ ಇತರ ರಚನೆಗಳಿಗೆ ಹಾನಿಯಾಗದಂತೆ ಮರ ಕಡಿಯುವ ಪರಿಣತರು. ಪಾಗಾರದ ಮಧ್ಯಂತರದಲ್ಲಿದ್ದ ಮರ ದೊಡ್ಡದು ಮತ್ತು ಉತ್ತಮಫಲದಾಯಿ. ಮೂಲೆಯದ್ದು ಸ್ವಲ್ಪ ಸಣ್ಣದು ಮತ್ತು ಕಾಯಿಲಸ್ಥ. ಕಟುಕರು ಅವೆರಡನ್ನೂ ಕಲಾತ್ಮಕವಾಗಿ ನೆಲಸಮವಾಗಿಸಿದ್ದನ್ನು ಪ್ರಾತಿನಿಧಿಕ ತುಣುಕು ಚಲಚಿತ್ರಗಳೇ ಸಾರುತ್ತವೆ, ಬಿಡಿ. ಅವರು ಕೊನೆಯಲ್ಲಿ ನಮ್ಮ ಮನೆ ಜಗುಲಿಯಲ್ಲಿ ರೋಗಮುಕ್ತ ಮರದ ತಿರಿಯ ತಿರುಳು, ಬೊಂಡ, ಕಾಯಿಗಳ ರಾಶಿ ಹಾಕಿದರು. ದೇವಕಿಯ ಹಸಿಕಡ್ಡಿ ಕೀಸುವ ಅಗತ್ಯಕ್ಕೆ ಅಂಗಳದಲ್ಲಿ ನಾಲ್ಕೆಂಟು ಮಡಲುಗಳನ್ನು ಉಳಿಸಿದರು. ಉಳಿದ ಮಡಲು, ಕಸ ಮತ್ತು ಎತ್ತಲು ಹಗುರವಾಗುವಷ್ಟು ಸಣ್ಣದಾಗಿ ಕತ್ತರಿಸಿದ್ದ ತೆಂಗಿನ ಬೊಡ್ಡೆಗಳೆಲ್ಲವನ್ನು, ನಮ್ಮ ಸೂಚನೆಯಂತೇ ಪೂರ್ವ ದಿಕ್ಕಿನ `ಅನಾಥ’ ವಠಾರಕ್ಕೆ ಎಸೆದು ಹೋದರು. “ಪಕ್ಕದ ವಠಾರಕ್ಕೆ ಕಸ ಎಸೆಯುವುದಾ? ಇದಿ ನ್ಯಾಯಮಾ?” ಎಂದು ನೀವು ಅಪಸ್ವರ ತೆಗೆಯುವ ಮೊದಲೊಂದು ಭಿನ್ನ ಕಥಾ ಎಳೆಯನ್ನು ಇಲ್ಲಿ ಸೇರಿಸಬೇಕಿದೆ.

ಪಕ್ಕದ `ಅನಾಥ ವಠಾರ’ ಅಂದರೆ, ಸುಮಾರು ಒಂದೂಮುಕ್ಕಾಲು ಎಕ್ರೆಯಷ್ಟು ವಿಸ್ತಾರವಾದ, ದೊಡ್ಡ ಕುಟುಂಬವೊಂದರ ಪಾಲುಪಟ್ಟಿಯೊಳಗೆ ಜಿಡುಕಾಗಿ ಸಿಕ್ಕಿಬಿದ್ದ ನೆಲ. ಅದರೊಳಗೆ ಚದುರಿದಂತೆ ಮೂರ್ನಾಲ್ಕು ವಾಸಯೋಗ್ಯ ಮನೆಗಳೂ ಬಾಡಿಗೆದಾರರೂ ಒಳ್ಳೆಯ ನೀರಿನ ಎರಡು ಬಾವಿಗಳೂ ಹಲವು ಶಿಥಿಲ ರಚನೆಗಳೂ ಇದ್ದವು. ಅವೆಲ್ಲಕ್ಕಿಂತಲೂ ಹೆಚ್ಚಿಗೆ, ಸಂದ ತಲೆಮಾರುಗಳಲ್ಲಿ ಚೆನ್ನಾಗಿಯೇ ಕೃಷಿತ, ಈಚೆಗೆ ಪೂರ್ಣ ನಿರ್ಲಕ್ಷಿತ ಹಲಸು, ಮಾವು, ತೆಂಗುಗಳಲ್ಲದೆ ಸಾಗುವಾನಿ, ದಡ್ಡಾಲ, ಮುಳ್ಳುಪೊಂಗಾರೆಯೇ ಮೊದಲಾದ ಮರ, ಬಳ್ಳಿ, ಪೊದರುಗಳ ಪುಟ್ಟ ಕಾಡೇ ಅಲ್ಲಿತ್ತು. ನಮ್ಮನೆಗೆ ಬರುತ್ತಿದ್ದ `ಶುದ್ಧ ನಾಗರಿಕರು’ ಅದನ್ನು ಕಂಡು “ಅಯ್ಯೋ ಕಾಡು, ಸೊಳ್ಳೆ, ಹಾವು….” ಎಂದು ಅನುಕಂಪಿಸುವುದೂ ನಮ್ಮ ವನ್ಯದೊಲವಿನ ನಾಡಿತಜ್ಞರು “ಆಹ್! ತಪೋವನ” ಎನ್ನುವುದೂ ಇತ್ತು. ಆ ವಠಾರದ ಮೊದಲ ಎರಡು ಅಂಗಳಗಳಿಗೆ ಕಾರು, ರಿಕ್ಷಾಗಳು ಬರುವುದಿತ್ತು. ಉಳಿದವುಗಳಿಗೇನಿದ್ದರೂ ದ್ವಿಚಕ್ರಿಗಳು ಅಥವಾ ನಡಿಗೆ. ಆದರೆ ನಾಲ್ಕು ವರ್ಷಗಳ ಹಿಂದೊಬ್ಬೊ `ಮಾಯಾವೀ ಬಿಲ್ಡರ್’ ಆ ನೆಲದ ಯಜಮಾನಿಕೆಯ ಅಂತಾರಾಷ್ಟ್ರೀಯ ಮಟ್ಟದ ಗೊಂದಲವನ್ನು ಬಗೆಹರಿಸಿದ, ಮುಖ್ಯದಾರಿಗೆ ಸಂಪರ್ಕವನ್ನೂ ಸಾಧಿಸಿದ! ಮತ್ತೆ ವದಂತಿಗಳಂತೆ, ಆ ನೆಲ ಕೆಲವು ಬಿಲ್ಡರುಗಳ ಕೈ ಬದಲಿತು, ಅನಾಥನ ವರಣಕ್ಕೆ ದಕ್ಷಿಣೆ ಸೆಂಟ್ಸಿಗೆ ಹದಿಮೂರು ಲಕ್ಷದವರೆಗೂ ಏರಿತ್ತು! ಜತೆಗೇ ಹಂತಹಂತದಲ್ಲಿ ವಠಾರದ ಮನೆಗಳು ನಿರ್ವಸಿತಗೊಂಡು, ನೆಲಸಮವಾದವು. ಮರಗಿಡ ಹಸಿರು ಕಸದಂತೆ ಬೋಳಿಸಿ ಹೋಯ್ತು. ದಿಣ್ಣೆ ಸವರಿದರು. ಆ ಮಹಾ ಭೂ ಮತ್ತು ವನಮೇಧದೊಳಗೆ ನಮ್ಮ ಎರಡು ತೆಂಗಿನ ಮರದುಳಿಕೆಗಳು ಯಃಕಶ್ಚಿತ್ ತೃಣಗಳಾಗಿ ಸೇರಿದ್ದವು. ಇಂದು ಆ ವಠಾರ ಒಂದೇ ಸಮತಳದ ಬೋಳು ಬಯಲು; `ಭಂಡಾರಿ ವರ್ಟಿಗೋ’ ಎಂಬ ೫೬ ಮಾಳಿಗೆಯ, ದಕ್ಷಿಣ ಭಾರತದ ಅತ್ಯುನ್ನತ ವಸತಿಸಮೂಹದ ಕನಸಿನ ನೆಲೆ. ತಮಾಷೆ ಎಂದರೆ ಅದರೊಡನೇ ನಮ್ಮ ಈ ಮರ ಕುಟ್ಟುವ ಹುಚ್ಚೂ ಹುಟ್ಟಿಕೊಂಡಿತು!

ದೇವಕಿಯ ಅಣ್ಣ – ಕೊಂದಲಕಾನ ಶಂಕರನಾರಾಯಣ ಭಟ್, ಪಾಣಾಜೆ ಬಳಿಯ ಕೃಷಿಕ. ಆತ ಹವ್ಯಾಸದಲ್ಲಿ ಕೆಲವು ಹಾಳು ಬೀಳುವ ಬೇರು, ಬೊಡ್ಡೆಗಳನ್ನು ಶುದ್ಧ ಮಾಡಿ ಅಸಂಗತ ಶಿಲ್ಪ ಮಾಡುವುದಿತ್ತು. ಹಾಗೇ ದೇವಕಿಯ ತಮ್ಮನ ಮಾವ ಬಂಗಾರಡ್ಕ ರಾಮಚಂದ್ರ ಭಟ್ ಇನ್ನೂ ಮುಂದುವರಿದವರು. ಇವರು ಬೇರು ಬೊಡ್ಡೆಗಳಲ್ಲಿ ಪ್ರಾಣಿ, ಪಕ್ಷಿಗಳ ಸುಂದರ ರೂಪಗಳನ್ನೇ ಅರಳಿಸುತ್ತಿದ್ದರು. ಮತ್ತು ಹಲವು ಕಲಾಸಕ್ತರ ಮನೆಗಳಲ್ಲಿ ಅವು ಬಿಡಾರವನ್ನೂ ಕಂಡುಕೊಂಡಿದ್ದವು. ಇಲ್ಲಿ ನಮ್ಮ ಹಿತ್ತಿಲಲ್ಲಿ, ದುರುದುಂಡಿ (ಜೆಸಿಬಿ) ಸ್ವಲ್ಸ್ವಲ್ಪ ನೆಲ ಬಗಿದು ಮರದ ಗುತ್ತಿ-ಬೇರಗಡ್ಡೆಗಳನ್ನು ನಿಷ್ಕರುಣೆಯಿಂದ ಕಿತ್ತು, ಕಸದಂತೇ ಟಿಪ್ಪರ್ ತುಂಬುತ್ತಿದ್ದಾಗ ದೇವಕಿಗೆ ಒಮ್ಮೆಲೆ ಅಣ್ಣ, ಮಾವರ ಹವ್ಯಾಸ ನೆನಪಾಗಿರಬೇಕು. ಒಂದು ಸಾಗುವಾನಿ ಬೇರಜಾಲಕ್ಕೂ ಮತ್ತೊಂದು ಟೊಳ್ಳುಬಿದ್ದ ಹಲಸಿನ ಗುತ್ತಿಗೂ ಬೇಡಿಕೆ ಇಟ್ಟಳು. ಚಾಲಕ ಬಹಳ ಸಂತೋಷದಿಂದಲೇ ಸರದಿಗೊಂದರಂತೆ ಅವನ್ನು ತನ್ನ ಯಂತ್ರದ ನಿಡುದೋಳಿನಲ್ಲಿಟ್ಟು, ಬಲು ಎಚ್ಚರದಿಂದ ನಮ್ಮಂಗಳಕ್ಕೇ ಇಳಿಸಿಕೊಟ್ಟ. ನಾನೇನು ಕಡಿಮೆಯಲ್ಲವೆಂಬ (ಪುರುಷಾಹಂಕಾರ?) ಉಮೇದು, ಆದರೆ ಕೆಲಸ ಹೆಚ್ಚಾಗಬಾರದೆಂಬ (ಬುದ್ಧಿಜೀವಿ?) ಎಚ್ಚರ ನನ್ನದು. ಅಲ್ಲೇ ಬಿದ್ದಿದ್ದ ನಮ್ಮದೇ ತೆಂಗಿನ ಮರದ ತುಂಡುಗಳಲ್ಲಿ ಒಳ್ಳೆಯ ಮೂರು ನಾಲ್ಕನ್ನೇ ಕೇಳಿ, ಇತ್ತ ಹಾಕಿಸಿಕೊಂಡೆ. ತೀರಾ ಸಾಮಾನ್ಯವಿದ್ದ ಹಲಸಿನ ಬೊಡ್ಡೆ ಮತ್ತು ಇನ್ನೂ ಹಸಿಯೇ ಇದ್ದ ತೆಂಗಿನ ತುಂಡುಗಳನ್ನು ನಾವಿಬ್ಬರು ಕೈ ಸೇರಿಸಿ ಎತ್ತಿ ಹಿತ್ತಿಲ ಮಾಳಿಗೆಗೇರುವ ಮೆಟ್ಟಿಲ ಮರೆಯಲ್ಲಿ, ಗೋಡೆಯ ಕರೆಯಲ್ಲಿ ಇಟ್ಟೆವು. ಸಾಗುವಾನಿ ಬುಡ ರಕ್ಕಸನಂತೆ, ನಮ್ಮೆರಡು ಮನೆ ನಡುವಣ ಕಾಲುದಾರಿಯನ್ನೇ ಬಂದ್ ಮಾಡಿ ಬಿದ್ದಿತ್ತು. ಅದನ್ನು ನಾವಿಬ್ಬರು ಸೇರಿ ಬಹಳ ಕಷ್ಟದಲ್ಲೇ ಸಮೀಪದ ತೆಂಗಿನ ಹೊಂಡಕ್ಕೆ ತುಸು ನೂಕಿ, ಮಳೆಯಲ್ಲಿ ಹಗುರಾಗಲೆಂದು ಬಿಟ್ಟೆವು.

ಖಾಡಾಖಾಡಿಗೆ ಮೊದಲು ನಾನು ನಮ್ಮ ಮನೆಯ ಶಸ್ತ್ರಾಗಾರದ ಮೇಲೊಂದು ಕಣ್ಣಾಡಿಸಿದೆ. ಹೆಚ್ಚಿನ ಮನೆಗಳಂತೆ ಕೈತೋಟದ ಮುರುಕು ಚೂರಿ, ತೆಂಗಿನಕಾಯಿ ಒಡೆಯುವ ಬಡ್ಡುಕತ್ತಿ, ತುಕ್ಕು ಹಿಡಿದ ಪುಟ್ಟ ಗರಗಸ ಮತ್ತೊಂದೆರಡು ಯಾಕ್ಸಾ ಬ್ಲೇಡುಗಳು, ಯಾವುದೋ ಸಂದರ್ಭದಲ್ಲಿ ಸೇರಿಕೊಂಡಿದ್ದ ಫೈಬರ್ ಹಿಡಿಕೆಯ ಒಂದಿಂಚು ಉಳಿ, ಹಲಸಿನ ಹಣ್ಣು ಕೊಚ್ಚಲು ತಂದಿದ್ದ ಮೂರಿಂಚು ಉಳಿ, ಹಿಂತಲೆಯಲ್ಲಿ ಆಣಿಕೀಳುವ ಸೌಕರ್ಯವಿದ್ದ ಸುತ್ತಿಗೆಗಳನ್ನೆಲ್ಲ ಆಯ್ದುಕೊಂಡೆ. ಹಿಂದೊಮ್ಮೆ ನಾನು ಕತ್ತಿಯನ್ನು ಬಟ್ಟೆ ಒಗೆಯುವ ಕಲ್ಲಿನಂಚಿಗೆ ಉಜ್ಜಿ ಹರಿತಗೊಳಿಸಲು ಕಷ್ಟಪಡುತ್ತಿದ್ದದ್ದನ್ನು ಕಂಡ ಗೆಳೆಯ ಪಿವಿ ಉಪಾಧ್ಯರು, ಎರಡು ತರಿಯ ಮರಳು ಕಾಗದ ಅಳವಡಿಸಿದ ಪೀವೀಸಿ ತುಂಡೊಂದನ್ನು ಕೊಟ್ಟದ್ದಿತ್ತು. ಅದರ ಸಹಾಯದಲ್ಲಿ ಎಲ್ಲಕ್ಕೂ ತುಸು ಹೊಳಪು ಕೊಟ್ಟ ಮೇಲೆ ತೆಂಗಿನ ಕಾಂಡದ ತುಂಡುಗಳತ್ತ ಗಮನ ಹರಿಸಿದೆ.

ತೆಂಗಿನ ತುಂಡುಗಳ ಹೊರಮೈಯಲ್ಲಿ ರೋಮದಂತಿದ್ದ ನಾರು ಮತ್ತು ಬೆಳವಣಿಗೆಯ ಬಳೆಗಳನ್ನು ಕಳೆಯಲು ತೊಡಗಿದೆ. ಜಾಗ ಇಂಥದೇ ಎಂದಿಲ್ಲ – ಮೆಟ್ಟಿಲಡಿಯ ಓಣಿ, ಮಳೆ ಕಾಟ ತಪ್ಪಿಸಲು ಒಳ ಜಗುಲಿ ಮತ್ತು ಈಚಿನ ದಿನಗಳಲ್ಲಿ ಮಹಡಿ ಜಗುಲಿಯ ವಿಸ್ತಾರವೆಲ್ಲ ನನ್ನ ಕಾರ್ಯಾಗಾರ! ವೇಳಾಪಟ್ಟಿಯೂ ಹಾಗೇ – ಮೊದಮೊದಲು ಸಂಜೆ ಮಾತ್ರ ಕುಟ್ಟುತ್ತಿದ್ದೆ. ಮತ್ತೆ ಮರಗೆಲಸದ ಕುಶಿ ಎಳೆದಾಗೆಲ್ಲ, ಗಣಕದ ಕೆಲಸದಲ್ಲಿ ತೂಕಡಿಕೆ ಬಂದಾಗೆಲ್ಲ ನನ್ನ ಲಟಪಟತನ – ಸರಿಯಾಗಿ ಓದಿಕೊಳ್ಳಿ/ಕೇಳಿಸಿಕೊಳ್ಳಿ, ಲಂಪಟತನವಲ್ಲ – ಲಟಪಟತನ ಹೆಚ್ಚುತ್ತಲೇ ಹೋಯ್ತು!

ಉದ್ದಕ್ಕೆ ಒಂದನ್ನೇ ಹಿಡಿಯದೆ, ಕುಶಿ ಬಂದಂತೆ ಎಲ್ಲವನ್ನು ಚೂರುಪಾರು ಕೆರೆಸುತ್ತ, ಕುಟ್ಟುತ್ತ ಸಾಗಿದ್ದೆ. ಚೂರಿ ಸಣ್ಣದಾಯ್ತು, ಕತ್ತಿಯ ಓರೆ ರಗಳೆ ಮಾಡಿತು, ಉಳಿ ಸುತ್ತಿಗೆ ನಿಧಾನ, ಉಳಿದವು ನಿರುಪಯುಕ್ತ ಎಂದೆಲ್ಲ ಕಂಡ ಮೇಲೆ ಹೊಸದಾಗಿ ಲೋಹದ ಪುಟ್ಟ ಕೀಸುಳಿಯನ್ನೇ ಕೊಂಡು ತಂದೆ. ತೆಂಗಿನ ಕಾಂಡದ ತಿರುಳು ದೀರ್ಘ ಕಾಲ ಬಾಳಿಕೆ ಬರದು, ಉಳಿಸಿಕೊಂಡರೆ ಅನಾವಶ್ಯಕ ಭಾರ ಮತ್ತು ಕಾಲಕ್ರಮೇಣ ಕುಂಬು ಸುರಿಯುತ್ತದೆ. ಅವುಗಳನ್ನು ಕಳೆಯಲು ತುಂಡುಗಳ ಕೊಡಿ ಮತ್ತು ಕೊನೆಯಲ್ಲಿ ನಿರ್ದಿಷ್ಟ ಆಯವೇನೂ ಇಲ್ಲದೇ ಕನ್ನ ಹೊಡೆದೆ. ಅದು ವೃತ್ತಾಕಾರಕ್ಕೆ ಬರುವಲ್ಲಿ ಒಂದಿಂಚು ಉಳಿ ತುಂಬ ದೊಡ್ಡದಾಯಿತ್ತೆನ್ನಿಸಿದಂದು ಅರ್ಧ ಇಂಚಿನ ಉಳಿಯನ್ನು ಕೊಂಡು ತಂದೆ. ತಿರುಳಿನ ಆಳಕ್ಕಿಳಿಯುತ್ತಿದ್ದಂತೆ ಉಳಿಗಳ ಉದ್ದ ಸಾಲದಾಯ್ತು. ಇಷ್ಟರಲ್ಲೊಮ್ಮೆ ಮುರಿದ ಉಳಿ ರಿಪೇರಿಗೆಂದು ಹುಡುಕಿ ಹೊರಟವನಿಗೆ ಬಲ್ಲಾಳ್ ಭಾಗಿನ ಕಮ್ಮಾರ – ಗಂಗಾಧರರ ಪರಿಚಯ ಬೆಳೆದಿತ್ತು. ಅವರು ನನ್ನ ತೆಂಗಿನ ಕಾಂಡದ ಅಗತ್ಯಕ್ಕೆ ತಕ್ಕಂತೆ ಒಂದು ಅರೆಸಬ್ಬಲ್ ಮಾಡಿಕೊಟ್ಟರು. ಗುಜರಿ ಸಂಗ್ರಹದ ಎರಡೂವರೆ ಅಡಿ ಉದ್ದದ ಕಾರ್-ಯಾಕ್ಸೆಲ್ಲಿಗೆ ಬಾಚಿಬಾಯಿ ಕೊಟ್ಟು ಮಾಡಿದ ಅರೆಸಬ್ಬಲ್ ಬಹಳ ಉಪಯೋಗಕ್ಕೆ ಬಂತು.

ಸೂಕ್ಷ್ಮದ ಕೆತ್ತನೆಗಳಿಗಾಗುವಾಗ ಗಂಗಾಧರರ ಕಮ್ಮಾರ ಸಾಲೆಯಿಂದಲೇ ಸಪುರದ ಉಳಿ ಮಾಡಿಸಿಕೊಂಡೆ. ನಯಗಾರಿಕೆಗೆ ತೊಡಗುವ ಕಾಲದಲ್ಲಿ ಅಂಗಡಿಯಿಂದ ಅರ ಕೊಂಡು ತಂದೆ. ಮುಂದೊಂದು ಕಾಲದಲ್ಲಿ, ಆ ಅರ ಲೋಹಗಳನ್ನು ಉಜ್ಜುವ ಸಣ್ಣ ಕಚ್ಚುಗಳದ್ದೆಂದು ಅರಿವಾಯ್ತು. ಆಗ ಮರ ಉಜ್ಜುವ ದೊಡ್ಡ ಅರವನ್ನೂ ಕೊಂಡೆ. ತೀರಾ ದಪ್ಪದ ಮತ್ತು ತೆಳುವಿನ ಮರಳು ಕಾಗದಗಳನ್ನು ಕೆಲವು ಬಾರಿ ಕೊಂಡು ಬಳಸಿದ್ದೆ. ಅವು ಬಲುಬೇಗನೆ ಮರಳುದುರಿಸಿ, ಹರಿದೂ ಹೋಗಿಬಿಡುತ್ತಿದ್ದುವು. ಆದರೆ ನನ್ನ ಖಾಯಂ ಪೈಂಟರ್ ಏಕ(ನಾಥ) ಮನೆಗೆ ಸುಣ್ಣಬಣ್ಣ ಕಾಣಿಸಲು ಬಂದಾಗ, ಮೀಟರ್ ಲೆಕ್ಕದಲ್ಲಿ ಸಿಗುವ, ಕ್ಯಾನ್ವಾಸ್ ಮರಳು ಪಟ್ಟಿಯ ಪರಿಚಯವಾಯ್ತು. ಇವು ಬಲು ಬಾಳ್ತನದ್ದು. ಮತ್ತೆಂದೂ ನಾನು ಮರಳು ಕಾಗದಗಳನ್ನು ಕೊಳ್ಳಲೇ ಇಲ್ಲ.

ನಯಗಾರಿಕೆಯ ಕೆಲಸ ವಿಪರೀತವೆನ್ನಿಸಿದ ಒಂದು ಹಂತದಲ್ಲಿ ನಾನು ಬಾಷ್ ಕಂಪೆನಿಯ ವಿದ್ಯುತ್ ಚಾಲಿತ ಪುಟ್ಟ ಯಂತ್ರ ಕೊಂಡದ್ದೂ ಆಯ್ತು. ಅದರಲ್ಲಿ ವಿವಿಧ ಹಲ್ಲುಗಳ ಚಕ್ರ ಅಳವಡಿಸಿ ಸಣ್ಣಪುಟ್ಟ ಕತ್ತರಿಕೆ, ವಿವಿಧ ನಮೂನೆಯ ಉಜ್ಜಾಟ ನಡೆಸಬಹುದೆಂದು ಆತುರಪಟ್ಟೆ. ಆದರೆ ಬಹುಬೇಗನೆ ಅದು ಸಪಾಟು ಲೆಕ್ಕಾಚಾರದ ಮರದ ರಚನೆಗಳು, ಅಂದರೆ ಮೇಜು, ಕುರ್ಚಿ, ಮಂಚ, ಕಪಾಟು ಇತ್ಯಾದಿಗಳಿಗೆ ಹೆಚ್ಚು ಸಹಕಾರಿ. ನನ್ನ ಆಯ್ಕೆಯ ಅಂಕುಡೊಂಕಿನ ಮರ, ಟೊಳ್ಳಿನೊಳಗಿನ ಕೆಲಸ, ದುರ್ಬಲ ಹಾಗೂ ಸೂಕ್ಷ್ಮ ಕೆತ್ತನೆಗಳಿಗೆಲ್ಲ ಹೇಳಿದ್ದಲ್ಲವೆಂದೇ ಕಾಣಿಸಿತು. ಸಾಲದ್ದಕ್ಕೆ ಅದರ ವೇಗ ಮತ್ತು ಬಲಕ್ಕೆ ನನ್ನ ಹವ್ಯಾಸೀ ಪರಿಣತಿ ಹೊಂದಿಕೊಳ್ಳಲೂ ಇಲ್ಲ. ಇನ್ನು ಅಪಘಾತವಾಗುವುದು ಬೇಡವೆಂದು ಅದನ್ನು ಮೂಲೆಗೆ ತಳ್ಳಿ, ಆಸಕ್ತರಿಗೆ ಮರುಮಾರುವ ಅಂದಾಜಿನಲ್ಲಿದ್ದೇನೆ. (ವಿಸೂ: ಆಸಕ್ತಿಯಿದೆಯೇ? ಬೆಲೆ ರೂ ೧೮೦೦-೦೦ ಮಾತ್ರ) ಅದಿರಲಿ…..

ನಾಲ್ಕೂ ತೆಂಗಿನ ಬೊಡ್ಡೆಗಳ ಮೈ ಕೀಸಿ, ಕೊಡಿ ಮಟ್ಟ ಮಾಡಿ, ಬುಡಕ್ಕೆ ಮುಗ್ಗಾಲು ರೂಪಿಸಿ ನಿಲ್ಲಿಸಿದೆ. ಸುಮಾರು ಒಂದೂವರೆ ಇಂಚು ದಪ್ಪಕ್ಕೆ ಹೊರಾವರಣ ಉಳಿಯುವಂತೆ ತಿರುಳು ಚೊಕ್ಕ ಮಾಡಿದ್ದಾಗಿತ್ತು. ನಾನು ಆರ್ಮುಗಂ ಎಂದೇ ಹೆಸರಿಸಿದ್ದ ಬೊಡ್ಡೆಗೆ ನನ್ನರಿವಿಲ್ಲದೇ ಎಂಟು ಮುಖ ಬಂದಿತ್ತು. ನನ್ನಲ್ಲಿ ಮರುನಾಮಕರಣ ಆರ್ಥಿಕ ವಹಿವಾಟೇ ಅಲ್ಲ, ಸುಲಭವಾಗಿ ಎಣ್ಮುಗಂ ಅಂದುಬಿಟ್ಟೆ. ಆದರೆ ಕರ್ನಾಟಕ ರಾಜ್ಯ ಸರಕಾರ, ಮಹಿಳಾ ವಿಶ್ವವಿದ್ಯಾನಿಲಯದ ಮರುನಾಮಕರಣಕ್ಕೆ ಕೋಟಿ ಮೀರಿದ ಖರ್ಚು ಮಾಡಿದ್ದು ಮರೆಯಲಾದೀತೇ!

ನಮ್ಮ ಮರಗೆಲಸದ ಆಂತರ್ಯದಲ್ಲಿ ಎಲ್ಲವನ್ನು ತುಸು ಕಲಾತ್ಮಕವಾಗಿ ರೂಪಿಸಿದರೂ ಮನೆಯ ದೈನಂದಿನ ಬಳಕೆಗೆ ತರಬೇಕೆಂಬ ಬಯಕೆಯಿತ್ತು. ಅಂದರೆ ತೆಂಗಿನ ತುಂಡುಗಳ ಭಾರ ಕಡಿಮೆಯಾಗಬೇಕು ಮತ್ತು ಅದು ಯಾರ ಕೈಯಲ್ಲೂ ನಿರಪಾಯಕರವಾಗಬೇಕಿತ್ತು. ಅದಕ್ಕೆ ಸರಿಯಾಗಿ ತುಂಡುಗಳ ಬಲ ಕುಂದದ ಎಚ್ಚರದಲ್ಲಿ ಸಾಕಷ್ಟು ಕಂಡಿಗಳನ್ನೂ ಬೋಳುಮೈ ಆಕರ್ಷಣೀಯವಾಗುವಂತೆ ಹಲವು ಕೆತ್ತನೆಯ ವಿನ್ಯಾಸಗಳನ್ನೂ ಹಾಕಿಕೊಂಡೆ. ಬಿದಿರು, ಅಡಿಕೆಗಳಂತೇ ತೆಂಗಿನಮರಗಳ ಕಾಂಡವೂ ಉದ್ದ ನಾರಿನ ಬೆಸುಗೆ. ಹಾಗಾಗಿ ಉಳಿ ಆಳವಾಗಿ ಲಂಬ ಕಚ್ಚುಗಳನ್ನು ಮಾಡದ ಎಚ್ಚರವಹಿಸಿದೆ. ಅಂಥದ್ದರಲ್ಲಿ ಒಂದೆಡೆ ನಕ್ಷತ್ರಾಕಾರದ ತೂತ ಕೆತ್ತುವಾಗ ಪಾರ್ಶ್ವದ ಒಂದು ತ್ರಿಕೋನದ ತುಂಡು ಬಲಸಾಲದೆ ಉದುರಿಹೋಯ್ತು. ಮತ್ತೆ ಸಾಮ್ಯ ಉಳಿಸಿಕೊಳ್ಳಲು ನಾನೇ ಇನ್ನೊಂದು ಮಗ್ಗುಲಿನ ತುಂಡನ್ನು ತೆಗೆದು ಹಾಕಿದೆ. ಮತ್ತೆ ಪೂರ್ಣಪ್ರಮಾಣದ ಕಿಂಡಿಗಳು ಲಂಬ ಸಾಲಿನಲ್ಲಿ ಬಾರದಂತೆ, ಕೊಡಿಬುಡಗಳ ಅಂಚಿನಲ್ಲೂ ಇರದಂತೆ ನೋಡಿಕೊಂಡೆ. ಅಲ್ಲವಾದರೆ ಬೊಡ್ಡೆಗಳು ಪೂರ್ಣ ಸೀಳುವ ಅಪಾಯವಿತ್ತು. ಗಮನಿಸಿ, ಹಾಗಾಗಿ ಎಲ್ಲ ವಿನ್ಯಾಸಗಳೂ ಕಂಡಿಗಳೂ ಅಡ್ಡಾದಿಡ್ಡಿ, ವಾರೆಕೋರೆ ಮತ್ತು ಅಸಾಮ್ಯರೂಪಿಗಳು. ಎಲ್ಲರ ಮುಗ್ಗಾಲುಗಳು ಮೂಡಿದ್ದೂ ಓರೆ ಕಡಿತದಲ್ಲೇ.

ಪುಟ್ಟನಿಗೆ ವೃತ್ತಾಕಾರದಲ್ಲೇ ಮೂರು ಮುಖಗಳು. ಒಂದೊಂದು ಮುಖಕ್ಕು ಪೂರ್ಣ ವ್ಯಾಪಿಸುವಂತೆ ವೃತ್ತ, ಚೌಕ ಮತ್ತು ನಕ್ಷತ್ರಾಕಾರದ ತೆಳು ಕೆತ್ತನೆಯ ವಿನ್ಯಾಸಗಳು. ಇವನ ನಕ್ಷತ್ರ ಕಂಡಿಯಲ್ಲೇ ಪಾರ್ಶ್ವ ಉದುರಿಹೋದದ್ದನ್ನು ಗಮನಿಸಿ. ಅದನ್ನು ಅಂಟಿಸುವುದು ಅಥವಾ ಇನ್ಯಾವುದೇ ಇತರ ಅಲಂಕಾರಗಳನ್ನು ಹೇರುವುದು ನನ್ನ ಸದ್ಯದ ಕಲಾಪ ಪಟ್ಟಿಯಲ್ಲಿರಲಿಲ್ಲ.

ಡೊಂಕನ ಸಹಜ ಡೊಂಕಿಗೆ ಕೀಸುಳಿ ಮುಟ್ಟುತ್ತಿರಲಿಲ್ಲ. ಅದರ ತಗ್ಗಿಗೆ ಉಳಿದ ಮೈಯನ್ನು ಇಳಿಸಲು ಕೆತ್ತಿದರೆ ಮರದ ಬಲವೇ ಕಳೆದು ಹೋಗಬಹುದಿತ್ತು ಎನ್ನುವುದರಿಂದ ಡೊಂಕನ್ನೇ ಸುಧಾರಿಸಿಕೊಂಡೆ. ಆ ಓರೆಯ ಒಳಮೈ ಗಂಟಿನಂತೆ ಕೆತ್ತುವುದು ಕಠಿಣ, ಹೊರಮೈ ಪೊಳ್ಳುಪೊಳ್ಳಾಗಿದ್ದು ಕೆತ್ತಲು ಹಗುರ. ಇದು ಬಹುಕಾಲ ಬಾಳಿಕೆ ಬರದೇ ಕುಂಬು ಸುರಿಯುವ ಸಾಧ್ಯತೆಯೂ ಇದೆ. ಇರುವ ಅಂಕುಡೊಂಕಿಗೆ ಹೊಂದುವಂತೆ ಅವಾಸ್ತವ ಮತ್ತು ವಿಕಟ ಮುಖಭಾವಗಳನ್ನು ರೂಪಿಸಿದೆ. ತುಂಡಿನಲ್ಲಿ ಹೆಚ್ಚು ಬಲ ಉಳಿಯಲು ಒಂದು ಮುಖಕ್ಕೆ ಒಂದೇ (ಅಥವಾ ಒಂದು ಜೋಡಿ) ಪೂರ್ಣ ಕಂಡಿ, ಅಂದರೆ ಕಣ್ಣು ಅಥವಾ ಮೂಗು ಅಥವಾ ಬಾಯಿ ಮಾತ್ರ. ಉಳಿದಂತೆ ತೆಳು ಮೇಲ್ಮೈಯ ಕೆತ್ತನೆ ಮಾತ್ರ.

ತೆಂಗಿನ ತುಂಡಿನ ಸಹಜ ಉರುಳೆಯಾಕಾರವನ್ನು ಕಳೆದು, ಸಪಾಟು ಎಂಟು ಮುಖ ಹೊತ್ತವನೇ – ಎಣ್ಮುಗಂ! ವಾಸ್ತವದಲ್ಲಿ ನಾನು ನಿರ್ದಿಷ್ಟ ರೇಖೆ, ಅಳತೆಗಳೇನೂ ಇಟ್ಟುಕೊಳ್ಳದೆ, ಕೀಸುಳಿಯಲ್ಲೇ ಆರು ಮೂಲೆಗಳನ್ನು ಸ್ಫುಟಗೊಳಿಸಲು ಹೊರಟಿದ್ದೆ. ಆದರೆ ಕೊನೆಯಲ್ಲಿ ಅರಿವಿಲ್ಲದೇ ಎಂಟನ್ನು ಸಾಧಿಸಿದ್ದೆ! ಈ ಅಷ್ಟ ಮೂಲೆಗಳನ್ನು ಉಜ್ಜಿಯೋ ಕೆತ್ತಿಯೋ ನಿಖರಗೊಳಿಸಲು ಪಟ್ಟ ಕಷ್ಟ ಹೇಳಿ ಮುಗಿಯುವಂತದ್ದಲ್ಲ. ಆದರೆ ಅದು ಕಲಿಕೆಯ ದಾರಿಯಲ್ಲಿ ನಿಸ್ಸಂದೇಹವಾಗಿ ಒಳ್ಳೆಯ ಪಾಠವಂತೂ ಹೌದು. ಅಂಥ ಸಂದರ್ಭಗಳಲ್ಲಿ ನನ್ನ ತಂದೆಯ ಪುಸ್ತಕ – ಎನ್ಸಿಸಿ ದಿನಗಳಲ್ಲಿ, ತಪ್ಪು ಮಾಡಿದ ಉತ್ಸಾಹೀ ವಿದ್ಯಾರ್ಥಿಯೊಬ್ಬ, ಶಿಕ್ಷೆಯ ಕೊನೆಯಲ್ಲಿ ಉದ್ಗರಿಸಿದ್ದು ನೆನಪಾಗುತ್ತಿರುತ್ತದೆ – ಜನರಲ್ ನಾಲೆಜ್ ಇಂಪ್ರೂವ್ ಆಯ್ತು.

ದೊಡ್ಡನ ತಲೆಯೇನೋ ಮಟ್ಟವಿತ್ತು, ಕಡೆ ಮಾತ್ರ ಓರೆ. ಅದರ ನಿವಾರಣೆಗೆಂದು ಅದನ್ನು ತಲೆಕೆಳಗೆ ಮಾಡಿ ಜಗುಲಿ ಗ್ರಿಲ್ಲಿನ ಗೋಡೆಗೆ ತಾಗಿಸಿ ನಿಲ್ಲಿಸಿದೆ. ಮರದ ಅತ್ಯಂತ ತಗ್ಗು ತೆಂಗಿನ ಬೊಡ್ಡೆಗಳ ಹೊರಮೈಗೆ ಕೀಸುಳಿ ಚೆನ್ನಾಗಿ ಹಿಡಿಸುತ್ತದೆ, ನಯವಾಗುತ್ತದೆ. ಆದರೆ ಒಳಮೈಯಲ್ಲಿ ಕೀಸುಳಿ ನಡೆಯುವುದಿಲ್ಲ. ಉಳಿಯಲ್ಲಿ ಕೆತ್ತಿ ನಯ ಮಾಡುವುದು ಬಹಳ ಕಷ್ಟ. ಹಲವು ಬಾರಿ ನನ್ನ ಉಳಿಯ ಕಡಿಯನ್ನು ಮೀರಿ ಮರದ ರಚನೆ ಸೀಳಿಕೊಳ್ಳುತ್ತದೆ. ಎಷ್ಟಿದ್ದರೂ ಅದು ಪ್ರದರ್ಶನದ ಭಾಗವಲ್ಲವೆಂದು ಬದಿ ಅಲ್ಲಿನ ಸಿಮೆಂಟ್ ಚಿಟ್ಟೆಗೆ ಸಮನಿತ್ತು. ಅಲ್ಲೊಂದು ಪೆನ್ಸಿಲ್ ಒಡ್ಡಿ, ಬೊಡ್ಡೆಯನ್ನು ಒಂದು ಸುತ್ತು ಉರುಳಿಸಿದೆ. ಮತ್ತೆ ಗೀಟಿನುದ್ದಕ್ಕೆ ಉಳಿ ಸುತ್ತಿಗೆ ಕೆಲಸ ನಡೆಸುವುದರೊಂದಿಗೆ ಮುಗ್ಗಾಲನ್ನೂ ಕಡಿದಿಟ್ಟೆ. ಇವನ ಮೈಯಲ್ಲೆಲ್ಲ ಕಂಡಿ, ಬಳ್ಳಿ, ಹೂ, ಹಣ್ಣು ಕೆತ್ತನೆ ಮುಗಿಸಿದ ಮೇಲೂ ದೊಡ್ಡಸ್ತಿಕೆ (ಭಾರ) ಹೆಚ್ಚೇ ಕಾಣಿಸಿದ. ಬಿಟ್ಟೇನೇ, ಪರಿವಾರದ ಇತರರಿಗಿಂತ ಇವನ ಆಂತರ್ಯವನ್ನು ನಾನು ಹೆಚ್ಚೇ ಕೀಸಿದ್ದೇನೆ!

ಉಪೇಕ್ಷಿಸುವುದೂ ತಪ್ಪಾಗುತ್ತದೆ. ಕೆತ್ತುವಲ್ಲೇ ನಾನೆಷ್ಟು ಎಚ್ಚರವಹಿಸಿದರೂ ಸೀಂಕು ಕಂತಿಸಿಕೊಂಡದ್ದಕ್ಕೆ ಲೆಕ್ಕವಿಲ್ಲ. ಇನ್ನು ಮನೆಯ ನಿತ್ಯ ಬಳಕೆಯಲ್ಲಿ ಅದನ್ನು ಆಚೀಚೆ ಎತ್ತಿಡುವವರಿಗೆ ನಯವಿಲ್ಲದಿದ್ದರೆ ಗಾಯವಾಗದೇ. ಮತ್ತೂ ಮುಖ್ಯವಾಗಿ ಇವನ್ನೆಲ್ಲ ಮಾಡುವ ಕಾಲಕ್ಕೆ ನಮ್ಮಲ್ಲಿ ಮೊಮ್ಮಗುವಿನ ಅವತರಣದ ನಿರೀಕ್ಷೆ ಬೆಳೆದಿತ್ತು! ನಾಳೆ ಅದು (ಇಂದು ಸ್ಪಷ್ಟವಾಗಿ ಹೇಳಬಹುದಾದರೆ ಆಭಾ) ಇದರೊಡನೆ ಆಡಲೆಳೆಸುವಾಗ ಘಾಸಿ ಮಾಡದೇ. ಈ ಸಮಸ್ಯೆಯ ನಿವಾರಣೆಗೆ ನನಗೆ ಯೋಗ್ಯ ಹತ್ಯಾರು ಸಿಗಲಿಲ್ಲ. ತೆಂಗಿನ ಬೊಡ್ಡೆ ಶುದ್ಧವೃತ್ತವಲ್ಲ, ಆಗಬೇಕಿಲ್ಲ. ಅದನ್ನು ಇರುವಂತೇ ಒಳಗೂ ಕೈಯಾರೆ ನಯ ಮಾಡಲು ಮೊಸರು ಕಡೆಯುವ ರಾಟೆಯಂತೇ ಸಣ್ಣ ಪ್ರಯೋಗವನ್ನೇನೋ ಮಾಡಿದೆ. ಹಿತ್ತಿಲ ಗ್ರಿಲ್ಲಿಗೆ ದಪ್ಪ ಹಗ್ಗದ ಬಳೆ ಎರಡು ಹಾಕಿ, ಮಂತಿನ ತಲೆಯ ಜಾಗದಲ್ಲಿ ಗುಜರಿಬಿದ್ದಿದ್ದ ಸೈಕಲ್ ಫ್ರೀವೀಲನ್ನು ಅಳವಡಿಸಿದ್ದೆಲ್ಲ ಆಯ್ತು.

ಮುಂದೆ ಮಾತ್ರ ಕಡೆಯಬೇಕಾದ್ದು ಸುಲಭದ ಮೊಸರಲ್ಲ, ತೆಂಗಿನ ನಾರುಮರ ಎನ್ನುವಲ್ಲಿ ಹಗ್ಗ ಎಷ್ಟು ಸುತ್ತು ಹಾಕಿದರೂ ಜಾರುತ್ತಿತ್ತು. ಅಲ್ಲದೆ, ಇಲ್ಲಿನ ಕ್ರಿಯೆ ಖಾಲಿ ಕಲಕುವುದಲ್ಲ. ಮೊಸರು ಕಡೆಯುವ ಕಲ್ಪನೆಯನ್ನೇ ಮುಂದುವರಿಸಿ ಹೇಳುವುದಿದ್ದರೆ ಭರಣಿಯನ್ನೇ ಹೆರೆಯಬೇಕಿತ್ತು. ತೆಂಗಿನ ಬೊಡ್ಡೆಯನ್ನು ಬಿಗಿಯಾಗಿ ಹಿಡಿದು ಗಿರಗಿರ ತಿರುಗುವ ಹಲ್ಲಿಗೆ ಒಡ್ಡುವುದೂ ಅಸಾಧ್ಯದ ಮಾತೇ ಆಯ್ತು. ನಾನು ಕೆಲವು ಯಾಂತ್ರಿಕ ಮರಗೆಲಸದ ಕಾರ್ಯಾಲಯಗಳನ್ನು ಸಂಪರ್ಕಿಸಿ ನೋಡಿದೆ. ಕಾಂಡದ ಒಳ ತಿರುಳನ್ನೇ ಬಗಿಯುವ ಲೇತ್ ಎಲ್ಲೂ ಇರಲಿಲ್ಲ. ಚಂಡೆ ಮಾಡುವವರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನಗಳೂ ಫಲ ನೀಡಲಿಲ್ಲ. ಉಳಿ ಹಾಗೂ ಅರೆಸಬ್ಬಲ್ ಮಿತಿಯಲ್ಲಿ ಸಾಧ್ಯವಾದಷ್ಟೇ ನಯಗಾರಿಕೆಗೆ ತೃಪ್ತನಾದೆ.

ದೊಡ್ಡ, ಪುಟ್ಟ, ಡೊಂಕ ಮತ್ತು ಎಣ್ಮೊಗರು ಗಾತ್ರ ವಿನ್ಯಾಸಗಳಲ್ಲಿ ಎಷ್ಟೇ ಭಿನ್ನವಾಗಿದ್ದರೂ ಒಂದೇ ಬಣ್ಣ – ಮಾಸಲು ಕಂದು, ಕಾಣಿಸಿದಾಗ ನನಗೆ ಬಣ್ಣ ತುಂಬುವ ಉತ್ಸಾಹ ಬಂತು. ಪೈಂಟ್ ಅಂಗಡಿಯಿಂದ ನೂರು ಎಮ್ಮೆಲ್ ಅಳತೆಯಲ್ಲಿದ್ದಷ್ಟೂ ವರ್ಣವೈವಿಧ್ಯವನ್ನು ಕೊಂಡು ತಂದೆ, ಖುಷಿವಾಸಿ ತುಂಬಿದೆ. ಬಣ್ಣ ಇಲ್ಲದಲ್ಲಿಗೆಲ್ಲ ಮೂಲ ಮರದ ಬಣ್ಣವೇ ಕಾಣುವಂತೆ ಕೊನೆಯಲ್ಲಿ ಪಾರದರ್ಶಕವಾದ ಟಚ್‍ವುಡ್ಡನ್ನೂ ಎಳೆದುಬಿಟ್ಟೆ. ಒಮ್ಮೆಗೆ ಎಲ್ಲ ಝಿಗ್ಗ ಕಾಣಿಸಿದ್ದೇನೋ ನಿಜ. ಆದರೆ ನನ್ನ ಬಣ್ಣಗಳ ಸಂಯೋಜನೆಯಲ್ಲಿ ಯಾವ ತರ್ಕವೂ ಇರಲಿಲ್ಲವಾದ್ದರಿಂದ ಕೆತ್ತನೆಯ ಅಲ್ಪ ಸ್ವಲ್ಪ ಕಲಾವಂತಿಕೆಯನ್ನೂ ಇದು ನುಂಗಿಹಾಕಿದ್ದು ನಿಧಾನಕ್ಕೆ ಹೊಳೆಯಿತು (ಟ್ಯೂಬ್ ಲೈಟ್!). ನನ್ನ ಮರುಳು ಇನ್ನೊಮ್ಮೆ ಅತ್ತ ತುಯ್ದಾಗ, ಚತುರ್ಮುಖರಿಗೂ ಮರಳು ಕಾಗದ ಉಜ್ಜಿ, ಬಣ್ಣ ಕಳೆದು, ವಿನ್ಯಾಸಗಳ ಒರಟನ್ನು ಇನ್ನಷ್ಟು ನಯಗೊಳಿಸುವ ಯೋಚನೆ ಇಲ್ಲದಿಲ್ಲ! ಹೀಗೇ ಇವುಗಳಲ್ಲಿ ಕಲೆ, ಪ್ರತಿಭೆ, ಅರ್ಥ ಏನಾದರೂ ಕಂಡರೆ ಅದು ವೀಕ್ಷಕರ ಔದಾರ್ಯ.

ಹಿಂದೆಲ್ಲ ತೆಂಗಿನ ಮರಗಳನ್ನು ಕ್ರಯ ಕೊಟ್ಟು ಕೊಳ್ಳುವವರಿದ್ದರು. ಪಡೀಲ್ ಮತ್ತು ಕೊಟ್ಟಾರ ಕ್ರಾಸ್ ಬಳಿ ಉದ್ದುದ್ದ ತೆಂಗಿನ ಮರಗಳನ್ನು ಸೀಳಿ, ಮಿದು ಭಾಗಗಳನ್ನು ತೆಗೆದು, ಇದ್ದದ್ದರಲ್ಲಿ ನಯಗೊಳಿಸಿ ಮಾರುತ್ತಿದ್ದರು. ಮನೆ, ಕೊಟ್ಟಿಗೆ ಕಟ್ಟುವವರು ಕಂಬ, ಪಕಾಸುಗಳಿಗೆ ಇವನ್ನು ಖಾಯಸ್ಸೂ ಮಾಡುತ್ತಿದ್ದರು. ಆದರೆ ನಾಲ್ಕಾರು ವರ್ಷಗಳ ಹಿಂದೆ ಗೆಳೆಯ ಕೆ.ಎಲ್ ರೆಡ್ಡಿ ಅವರ ಪುಟ್ಟ ಅಂಗಳದಲ್ಲಿ ಭಯಾನಕ ಬುಡ ಊರಿದ ತೆಂಗನ್ನು ತೆಗೆಸಿದಾಗ ಪರಿಸ್ಥಿತಿ ತಿರುಗಾಮುರುಗಾ ಆದದ್ದು ತಿಳಿಯಿತು. ರಸ್ತೆಗಳ ಅಗಲೀಕರಣ, ಯೋಜಿತ ವಸತಿ ನಿವೇಶನಗಳು ಮತ್ತು ಗೃಹಸಮುಚ್ಛಯಗಳ ಹುಚ್ಚು ಅಲೆಯಲ್ಲಿ ಕಡಿದು ಬೀಳುತ್ತಿದ್ದ ನೂರಾರು ತೆಂಗಿನ ಮರಗಳಿಗೆ ಗಿರಾಕಿ ಬಿಡಿ, ಬರಿದೇ ಎಸೆಯಲೂ ಜಾಗವಿಲ್ಲದಂತಾಗಿತ್ತು. ಇಂದು ಹೆದ್ದಾರಿ ಅಂಚು, ಕಡಲ ಕಿನಾರೆ, ಹಾಳುಬಿದ್ದ ಸಾರ್ವಜನಿಕ ಸ್ಥಳಗಳಲ್ಲೆಲ್ಲ ಕಡಿದ ಒಳ್ಳೊಳ್ಳೆ ತೆಂಗಿನ ಮರಗಳು ಕುಂಬಾಗುತ್ತಿರುವುದನ್ನು ಕಾಣುವಂತಾಗಿದೆ. ಎಲ್ಲೋ ಕೋಟೆಕಾರಿನ ಕಲಾಗಂಗೋತ್ರಿ ನಾಲ್ಕಾರು ತೆಂಗಿನ ಮೋಟುಗಳಿಗೆ ಫೋಮಿನ ಟೊಪ್ಪಿ ಹಾಕಿ ಚಂಡೆ ಕಲಿಕೆಯವರಿಗೆ ಅನುವು ಮಾಡಿಕೊಟ್ಟಿರುವುದನ್ನು ಕಾಣಬಹುದು. (ನಿಜ ಚಂಡೆಯೊಡನೆ, ಸಣ್ಣ ಕೋಣೆಯೊಳಗೆ, ಏಕಕಾಲದಲ್ಲಿ ನಾಲ್ಕೈದು ಮಂದಿ ಕಲಿಕೆಯ ಪೆಟ್ಟುಗಳನ್ನು ಹೊಡೆಯುವುದಾಗಿದ್ದರೆ ಯಾರಿಗೂ ಕಿವಿ ಉಳಿಯುತ್ತಿರಲಿಲ್ಲ!) ಅಲ್ಲಿ ಇಲ್ಲಿ ವಿಸ್ತರಣೆಗೊಳ್ಳುತ್ತಿರುವ ದಾರಿಗಳ ತತ್ಕಾಲೀನ ಅಂಚು ಗುರುತಿಸಲು ತುಸು ಎತ್ತರದ ತೆಂಗಿನ ಕಂಬಗಳನ್ನು ಊರಿ ಬಿಳಿ ಬಣ್ಣ ಬಡಿದಿರುವುದು, ವರ್ಷ ಕಳೆಯುವುದರೊಳಗೆ ಅವು ಗೆದ್ದಲು ಹತ್ತಿ ನಶಿಸಿಹೋಗುವುದನ್ನೂ ಕಾಣಬಹುದು. ಹಾಗೇ ಬಡಕಲು ಪ್ಲ್ಯಾಸ್ಟಿಕ್ ಸ್ಟೂಲಿಗೂ ಗತಿಯಿಲ್ಲದ ಗೂಡಂಗಡಿ, ಹೋಟೆಲುಗಳು ತೆಂಗಿನ ಬಿಡಿ ಮೋಟುಗಳನ್ನೇ ಹುಗಿದು ನಿಲ್ಲಿಸಿ ಸ್ಟೂಲೋ ಸಾಲಾಗಿ ಎರಡೋ ಮೂರೋ ತುಂಡುಗಳನ್ನು ಹುಗಿದು, ಮೇಲೆ ಅಡ್ಡ ಹಲಿಗೆ ಹೊಡೆದು ಬೆಂಚೋ ಮಾಡಿದ್ದನ್ನೂ ಕಂಡಿದ್ದೇನೆ.

ಮಲೆನಾಡಿನ ದಾರಿ ಬದಿಗಳಲ್ಲಿ ಸತ್ತ ಕಾಫಿ ಗಿಡಗಳು ನೂರು ಸಾವಿರದ ಲೆಕ್ಕದಲ್ಲಿ ಗೃಹಾಲಂಕಾರದ ಹವ್ಯಾಸಿಗಳಿಗೆ ಮಾರಿ ಹೋಗುವಂತೆ, ಈ ವಲಯದಲ್ಲಿ ಕಲ್ಪವೃಕ್ಷಕ್ಕೆ (ಆ ವರ್ಗದ ಅಡಿಕೆ, ತಾಳೆಗಳೂ) ದೊಡ್ಡ ಮಟ್ಟದಲ್ಲಿ ಕಲ್ಪಕತೆಯನ್ನು ಹಚ್ಚಿದ್ದು ನಾನು ಕಂಡಿಲ್ಲ. ಇಲ್ಲಿ ನಾನು ತೀರಾ ಸಾಮಾನ್ಯವಾದ ನಾಲ್ಕೇ ತುಣುಕುಗಳನ್ನು ಏನೋ ಒಂದು ಮಾಡಿದಾಗ, ಕಂಡವರು ನನ್ನ ಹುಸಿ ಸಾಮಾಜಿಕ ಅಂತಸ್ತಿನ ಪರಿಣಾಮವಾಗಿ ಹೊಗಳುವುದಿರಬಹುದು. ಡ್ರಾಯಿಂಗ್ ರೂಂ ಡೆಕರೇಶನ್, ಗಾರ್ಡನ್ ಸ್ಟೂಲ್, ಟೀಪಾಯ್ ಎಂದಿತ್ಯಾದಿ ಬಿಟ್ಟಿ ತುಟಿಸೇವೆಯನ್ನೂ ಕೊಡುವುದಿದೆ. ನಾನು ಯಾವುದೇ ಉಪಯುಕ್ತತೆಯ ತರಲೆ ಕಟ್ಟಿಕೊಳ್ಳದೆ, ಅಗೋಚರ ಶಿಖರಕ್ಕೆ ದಾರಿಯ ಸುಖವಷ್ಟೇ ಅರಸಿದವನಂತೆ, ಕೆಲಸದ ಬದಲಾವಣೆಯಂತೆ, ಹೊಸತೇ ಸೃಜನಾಭಿವ್ಯಕ್ತಿ ದಕ್ಕಿದಂತೆ ಸಂತೋಷಿಸಿದ್ದೇನೆ. ಮುಂದೆಯೂ ಅವಶ್ಯವೆಂದು ಕಂಡಾಗ ಕುಟ್ಟಲು ಇನ್ನೂ ನಾಲ್ಕು ತೆಂಗಿನ ತುಂಡುಗಳನ್ನು ಸಂಗ್ರಹಿಸಿ ಬೆಚ್ಚಗಿರಿಸಿಕೊಂಡಿದ್ದೇನೆ. ಎಲ್ಲಕ್ಕೂ ಮುಖ್ಯವಾಗಿ ಸರಳ ರಚನೆಯ ತೆಂಗನ್ನು ಮೀರಿದ ವೈವಿಧ್ಯಮಯ ಮರ ಕೆತ್ತನೆ ನಡೆಸಲು ಕಾತರನಾಗಿದ್ದೇನೆ. ಬರಿಯ ಕಾತರತೆಯಲ್ಲ, ಕೆಲಸವನ್ನೂ ನಡೆಸಿದ್ದೇನೆ ಎನ್ನುವುದಕ್ಕೆ ಸದ್ಯ ಈ ಮಾಲೆಯ ಕೊನೆಯ ಕಂತು, ಅಂದರೆ ಎರಡನೇ ಭಾಗವನ್ನು ಮುಂದಿನವಾರ ಕಾದು ನೋಡಿ, ಬರಲಿದ್ದಾನೆ ಲಲಿತ ನಟನಾ ಚತುರ – ಅಷ್ಟಪದಿ!

(ಮುಂದುವರಿಯಲಿದೆ)