(ಹವ್ಯಾಸೀ ಮರ ಕೆತ್ತುವ ಕಲೆ – ಭಾಗ ೨)
ನನ್ನ ತೆಂಗಿನತುಂಡುಗಳ ಗುದ್ದಾಟಕ್ಕೂ ಎಷ್ಟೋ ಮೊದಲು, ಅಂದರೆ ಮಳೆ ಕಡಿಮೆಯಾಗುತ್ತಿದ್ದಂತೇ `ರಕ್ಕಸ’ ಸಾಗುವಾನಿ ಬೊಡ್ಡೆಯೊಂದಿಗೆ ದೇವಕಿ ಹೋರಾಟ ಸುರುಮಾಡಿದ್ದಳು. ರಕ್ಕಸ ಸುಮಾರು ಹತ್ತಿಂಚು ವ್ಯಾಸದ ಇನ್ಯಾವುದೋ ಮರದ ಗುತ್ತಿ ಬೇರುಗಳನ್ನು ತನ್ನ ಬೇರಜಾಲದ ಮರಣಾಂತಿಕ ಅಪ್ಪುಗೆಗೊಳಪಡಿಸಿತ್ತು. ಅದನ್ನು ಸಮೂಲ ಕಿತ್ತೆಸೆಯಬೇಕು. ಮರ ಬೆಳೆದ ವಠಾರದ ಜನ ಕಾಲಕಾಲಕ್ಕೆ ನಿರ್ಲಕ್ಷ್ಯದಲ್ಲಿ ಕಲ್ಲಚೂರುಗಳು, ಬೂದಿ, ಸಿಮೆಂಟು ತುಂಡುಗಳಾದಿ ವಿವರಿಸಲಾಗದ ಹಾಳಮೂಳಗಳೆಲ್ಲವನ್ನೂ ಆ ಸಾಗುವಾನಿ ಬುಡಕ್ಕೆ ಹಾಕಿದ್ದಿರಬೇಕು. ಆ ಬರಗೇಡಿ ಮರ ಸಹಜ ಮಣ್ಣಿನೊಡನೆ ಅವನ್ನೆಲ್ಲ ತನ್ನ ಉಡಿಯೊಳಗೆ ಗಂಟು ಕಟ್ಟಿಕೊಂಡಿತ್ತು. ಸತ್ತುಹೋದ ನಿಗೂಢ ಲಕ್ಷಾಧಿಪತಿ ಬಿಕ್ಷುಕನ ಕತೆ ಕೇಳಿದ್ದೀರಲ್ಲಾ? ದೇವಕಿಗೆ ಆ ಬಿಕ್ಷುಕನ ಜೋಳಿಗೆಯೊಳಗೆ ಕೈ ಹಾಕುವ ಕೆಲಸ. ಕೊಳಕನ್ನು ಕಳೆದು, ಸಿರಿಯನ್ನು ಸಂಗ್ರಹಿಸುವ ಉಮೇದು. ರಕ್ಕಸನ ಭೂಮಿಯೊಳಗಿನ ಸಹಜ ರಕ್ಷಣಾ ಕೋಟೆಯನ್ನು ಜೆಸಿಬಿ ಒಡೆದು ಹಾಕಿತ್ತು. ಮತ್ತೆ ಜಡಿಮಳೆಗಾಲದ ಸವಕಳಿಗೂ ಅದನ್ನು ಒಡ್ಡಿದ್ದಾಗಿತ್ತು. ಅಲ್ಲೆಲ್ಲ ಒಂದು ಪುಟ್ಟ ಕಲ್ಲನ್ನೂ ಬಿಟ್ಟುಕೊಡದ ಜಿಪುಣನಲ್ಲಿ ದೇವಕಿ ಕಲಾ-ವಂತಿಗೆ ದಕ್ಕಿಸಿಕೊಳ್ಳಲು ಹೆಣಗಿದಳು. ಸರಪಳಿ ಗರಗಸದ ಅವಸರದ ಕತ್ತರಿಕೆ ಮತ್ತು ಜೆಸಿಬಿಯ ಒರಟು ಉತ್ಖನನದ ಫಲವಾಗಿ ವಿಕಾರವಾಗಿ ಹರಿದ ಮತ್ತು ಕುಂಬು ಕವಲುಗಳು ಅದರಲ್ಲಿ ಸಾಕಷ್ಟಿದ್ದುವು. ಅವನ್ನೆಲ್ಲ ನಿವಾರಿಸುವಲ್ಲಿ, ಉಳಿಯುವುದೇನು ಎಂಬುದರ ಎಚ್ಚರ ತುಂಬ ಅವಶ್ಯ. ಮಹಾಶಿಲ್ಪಿಯೋರ್ವನ ಮಾತು, “ಅನಾವಶ್ಯಕವನ್ನು ಕಳಚುವ ಕ್ರಿಯೆಯಷ್ಟೇ ನನ್ನದು, ಮೂರ್ತಿ ಅಲ್ಲಿತ್ತು!” ಕಲೆ – ಮೌಲ್ಯಗಳ ಸಂಕಲನವಲ್ಲ, ಅಪಮೌಲ್ಯಗಳ ವ್ಯವಕಲನ! ಇದು ನಮಗೆ ದಾರಿದೀಪ.
ಕಾವು ಕಳಚಿದ ಪಿಕ್ಕಾಸಿಯಲ್ಲಿ ಅಗಿದು, ಅರೆ ಸಬ್ಬಲ್ಲಿನಲ್ಲಿ ತಿವಿದು, ಕೈಮಡುವಿನಲ್ಲಿ ಕೊಚ್ಚಿ, ಉಳಿ ಸುತ್ತಿಗೆಗಳಲ್ಲಿ ಕಡಿದು ನೋಡಿದಳು. ಹೊತ್ತಿಗೊಂದು ಹತ್ಯಾರು ಹಿಡಿದು ಪ್ರಯೋಗಿಸಿದರೂ ಅತೃಪ್ತಿಯೇ ಜಾಸ್ತಿ! ಆಗೀಗ ಆ ಮಹಾಗಡ್ಡೆಯ ಮಗ್ಗುಲು ಬದಲಿಸಿದರಾದೀತೆಂಬ ಭಾವನೆ. ಇದಕ್ಕೆ ನಾನೂ ಕೈ ಸೇರಿಸುತ್ತಿದ್ದೆ. ಆ ಆದಿಸ್ವರೂಪವನ್ನು ಅತ್ತಿತ್ತ ಎತ್ತಿ ಇಡುವ ಮಾತೇ ಇಲ್ಲ, ಉರುಳಿಸಿಬಿಡುತ್ತಿದ್ದೆವು – ನಮ್ಮ ಕಾಲ ಮೇಲೇ ಎರಗದ ಎಚ್ಚರದಲ್ಲಿ!
ಹೊಡೆತ ಹೆಚ್ಚಾಯ್ತೋ ತಪ್ಪಾಯ್ತೋ ಎನ್ನುವ ಭಯ. ಹಾಗಾಗಿ ಬಹಳ ಶ್ರಮದ ಕೊನೆಯಲ್ಲಿ ಏನು ಪ್ರತ್ಯೇಕವಾದಾರೂ ಮಾನಸಿಕ ಗೊಂದಲ. ಕೆಲಸದ ಮಿತಿಗೆ ಮೀರಿದ್ದೆಂದು ಕಂಡ ಕೆಲವನ್ನು ಉದ್ದೇಶಪೂರ್ವಕವಾಗಿಯೂ ನಿವಾರಿಸುತ್ತ ದೇವಕಿ ನಡೆದಳು. ಸೊಳ್ಳೆ ಕಾಟ, ಮನೆಗೆಲಸದೊಂದಿಗೆ ಹೊಂದಾಣಿಕೆ, ಹತ್ಯಾರುಗಳ ಕೊರತೆಯೂ ಕಾಡುತ್ತಿತ್ತು. ಆದರೂ ದೇವಕಿ ಏಕಾಂಗಿಯಾಗಿ ಕೆಲವು ದಿನ ಕುಟ್ಟಿ, ಕೆರೆಸಿ, ಸಾಕಷ್ಟು ಕಲ್ಲುಮಣ್ಣು ಕಸವನ್ನೂ ಬಡಕಲು ಮರದ ಬಂಧಮುಕ್ತಿಯನ್ನೂ ಮಾಡಿದಳು. ಹೀಗೆ ತುಸು ಹಗುರಾದ ಬೊಡ್ಡೆಗೆ ಇಬ್ಬರೂ ಹೆಣಗಾಡಿ ಮೆಟ್ಟಿಲಡಿಗೆ ಬಡ್ತಿ ಕೊಟ್ಟೆವು.
ಸಣ್ಣ ಯಾಂತ್ರಿಕ ಸರಪಳಿ ಗರಗಸ ಸುಮಾರು ಒಂದೂವರೆ ಅಡಿ ಉದ್ದಕ್ಕೆ ಕೊಯ್ಯುತ್ತ ಮರಗಳ ಕಾಂಡದ ಒಳನುಗ್ಗಬಲ್ಲುದು. ನಮ್ಮ ಸಾಗುವಾನಿ ಮರ ಎರಡಡಿಗೂ ಹೆಚ್ಚಿನ ವ್ಯಾಸದ್ದು. ಅದನ್ನು ಬೀಳಿಸುವ ಕಾಲಕ್ಕೆ ಪಕ್ಕದ ವಠಾರದ ನಾವು ಸಖೇದ ಸಾಕ್ಷಿಯಾಗಿದ್ದೆವು. ಬುದ್ಧಿವಂತ ಕಟುಕ, ಮೊದಲು ಅದರ ಒಂದು ಬದಿಯಲ್ಲಿ ಗರಗಸವನ್ನು ಓರೆಯಲ್ಲಿ ಆರೆಂಟು ಇಂಚು ಇಳಿಸಿದ್ದ. ಅನಂತರ ಅದರ ತಳದಲ್ಲೇ ಅಡ್ಡ ಕೊಯ್ತ ಕೊಟ್ಟ. ಹೊರಬಂತು ನೋಡಿ, ಅರ್ಧಚಂದ್ರಾಕೃತಿಯ ಹೊಂಬಣ್ಣದ ತೆಳು ಕರ್ಕ್ (ತೊಗಟೆ), ನಸು ಹಳದಿ ಬಣ್ಣದ ಮಿದು ಸ್ವಾದಿಷ್ಟ ತಿರುಳು – ಥೇಟ್, ಹುಟ್ಟುಹಬ್ಬದ ಕೇಕಿನ ತುಣುಕು! ಕಟುಕ, ಇದನ್ನೇ ಮರದ ಇನ್ನೊಂದು ಬದಿಯಲ್ಲೂ ಮಾಡಿದ. ಸಾಮಾನ್ಯ ಮರಗಳಲ್ಲಾಗಿದ್ದರೆ ಇಷ್ಟರಲ್ಲಿ ಎರಡೂ ಬದಿಯ ಗಡಿಗಳು ಪರಸ್ಪರ ಸಂಪರ್ಕಿಸಿ, ಮರ ಬಿದ್ದಾಗುತ್ತಿತ್ತು. ಆದರೆ ಇದು ಅದನ್ನೂ ಮೀರಿ ದಪ್ಪವಿತ್ತು. ಆಗ ಮೊದಲೇ ಮರದ ಕೊಡಿಗೆ ಕಟ್ಟಿದ್ದ ಹಗ್ಗವನ್ನು ಸಹಾಯಕರಿಂದ, ಜಗ್ಗಿಸಿ, ದುರ್ಬಲಗೊಂಡ ನಡುವನ್ನು ಮುರಿದು ಕಳೆದಿದ್ದ.
ಒಟ್ಟಾರೆ ಮರ ಕಳೆಯುವಲ್ಲಿ ಕಟುಕನದ್ದು ನ್ಯಾಯವೇ, ಆದರೆ ಈಗ ಗುತ್ತಿ, ಬೇರಜಾಲವನ್ನು ಚಂದಕ್ಕೆ ಉಳಿಸ ಹೊರಟ ನಮಗೆ ತೊಂದರೆಯಾಗಿತ್ತು. ಒಂದು ಬದಿಯ ಕಡಿತ ಮೇಲೆ, ಇನ್ನೊಂದು ತುಸು ಕೆಳಗೆ. ಮತ್ತೆ ಮುರಿದು ಕಳೆದ ನಡುವಿನಲ್ಲಿ ಒಂದಷ್ಟು ನಾರು ಚಕ್ಕೆಗಳು ಎಳೆದೂ ಹೋಗಿದ್ದವು. ಪ್ರಕೃತಿಯಲ್ಲಿ ಕಾಂಡ ಮೇಲೆ, ಬೇರು ಕೆಳಗೆ. ಆದರೆ ನಮ್ಮ (ಸಂಸ್ಕೃತಿ?) ಕಲಾಕಲ್ಪನೆ ಅದನ್ನು ತಲೆಕೆಳಗು ಮಾಡುವುದರಲ್ಲಿತ್ತು. ಅಂದರೆ ಕಾಂಡ ಸಪಾಟು ಪೀಠವಾಗಬೇಕಿತ್ತು. ಈ ಜವಾಬ್ದಾರಿಯನ್ನು – ಪೀಸ್ ಕಂತ್ರಾಟು ಅನ್ನಿ, ನಾನು ವಹಿಸಿಕೊಂಡೆ.
ಅಕರಾಳ ವಿಕರಾಳ ಬೇರ ಗೊಂದಲದ ಮೇಲೆ, ಓರೆಯಲ್ಲಿ ನಿಂತಿತ್ತು ಸಾಗುವಾನಿ ಗುತ್ತಿ. ಎಲ್ಲೂ ಪೂರ್ಣ ಸಾಮೀಪ್ಯ ಕೊಡದಂತೆ ಹೊರಚಾಚಿಕೊಂಡ ಬೇರುಗಳು ತಿವಿಯುತ್ತಿದ್ದವು. ಕಾಂಡದ ಮೇಲೆ ಕಟುಕ ಮಾಡಿದ ಅತ್ಯಂತ ಕೆಳ ಗಡಿಯನ್ನು ಆಧಾರವಾಗಿಟ್ಟುಕೊಂಡು ಸುತ್ತು ಅಂದಾಜಿನ ಗೀಟೆಳೆದೆ. ಮತ್ತೆ ನಮ್ಮ ಮೋಟು ಗರಗಸ ಹಚ್ಚಿ ನೋಡಿದೆ. ಹರಿತ ಸಾಲದು ಅನ್ನಿಸಿತು. ಕಮ್ಮಾರನಲ್ಲಿಗೊಯ್ದು ವಿದ್ಯುತ್ ಸಾಣೆಯಲ್ಲಿ ಗರಗಸದ ಹಲ್ಲಿಗೆ ಒಪ್ಪ ಕೊಡುವ ಮಾತಾಡಿದೆ. ಆತ ನಕ್ಕು “ಅದ್ಕೆ ಮೆಶೀನ್ ಆಗುದಿಲ್ಲ. ರಿಂಚಿನಲ್ಲಿ ಗರ್ಗಸ್ ಸಿಕ್ಸಿ, ಸಣ್ಣ ಅರದಲ್ಲಿ ಪ್ರತಿ ಹಲ್ಲನ್ನು ಕೈಯಾರೆ ಉಜ್ಜಬೇಕು” ಎಂದರು. ನಮ್ಮಲ್ಲಿ ಅರವಿತ್ತು, ಉಜ್ಜುವ ಪರಿಣತಿ ಮಾತ್ರ ಇರಲಿಲ್ಲ. ಉಳಿ ಸುತ್ತಿಗೆಯಲ್ಲಿ ಚಕ್ಕೆ ಚೂರು ತೆಗೆಯಲು ತೊಡಗಿದೆ. ಅದರಲ್ಲೂ ಬೇಗ ಮುಗಿಸುವ ಅಂದಾಜಿನಲ್ಲಿ ಮೂರಿಂಚು ಉಳಿ ಹಿಡಿದೆ, ಪೆಟ್ಟಿನ ಬಲ ಸಾಲಲಿಲ್ಲ. ಒಂದಿಂಚು ಉಳಿಯಲ್ಲಿ ದೊಡ್ಡಪೆಟ್ಟಿನ ಲಾಭ ಪಡೆಯುವ ಚಪಲ ತೋರಿದೆ. ಗುರಿ ತಪ್ಪಿದ ಪೆಟ್ಟಿನಿಂದ ಕೈಗಂಟು ಮುರಿಯದಿದ್ದದ್ದು ಅಜ್ಜಿಪುಣ್ಯ! ನಿರಂತರ ಉಳಿ ಬಿಗಿ ಹಿಡಿಯುವುದರೊಡನೆ, ಸುತ್ತಿಗೆ ಪೆಟ್ಟಿನ ಕಂಪನವೂ ಸೇರಿ ಕೆಲವೊಮ್ಮೆ ಎಡ ಹೆಬ್ಬೆರಳಿನ ಬಲವೇ ಬಿದ್ದು ಹೋದಂತಾಗುತ್ತಿತ್ತು. ಹಾಗೆಂದು ಹೆಬ್ಬೆರಳು ಬಿಟ್ಟು ಅಂಗೈ ಹಾಗೂ ನಾಲ್ಕು ಬೆರಳುಗಳ ಆಧಾರದಲ್ಲೇ ಒಂದೆರಡು ಪೆಟ್ಟಿಗೆ ಹಿಡಿದರೂ ಹೆಚ್ಚು ಮುಂದುವರಿಯಲು ಧೈರ್ಯ ಸಾಲುತ್ತಿರಲಿಲ್ಲ. ನೋವು ವಿಪರೀತವಾದಾಗೆಲ್ಲ ಅಂದಿಗೆ ಕೆಲಸವನ್ನೇ ಕೈ ಬಿಟ್ಟು ಮರುದಿನ ಮುಂದುವರಿಸಿದ್ದೂ ಇತ್ತು. ಎಷ್ಟೋ ಸಲ ಉಳಿಯ ಎದೆಯಂಚು ಇಳಿದ ಆಳಕ್ಕೆ ಕಡಿಯಂಚು ಮುಟ್ಟುತ್ತಿರಲಿಲ್ಲ. ಇದು ಅನುಭವದ ಕೊರತೆ ಎಂದು ಒಪ್ಪಿಕೊಳ್ಳದೆ, ಶಕ್ತಿಯಲ್ಲಿ ಸುಧಾರಿಸುವ ಚಪಲ ಬರುವುದಿತ್ತು. ಹಾಗೆ ಒಮ್ಮೆ ಉಳಿಯ ಲೋಹವೇ ಅರ್ಧಕ್ಕೆ ತುಂಡಾಗಿತ್ತು, ಇನ್ನೊಮ್ಮೆ ಸುತ್ತಿಗೆಯ ಹಿಂತಲೆಯೇ ತುಂಡಾಗಿ ರಟ್ಟಿ ಹೋಗಿತ್ತು. ಅಂತೂ ಅಂಕಾಡೊಂಕಿ ಗುತ್ತಿ ಕೊನೆಯನ್ನು ಸಾಕಷ್ಟು ಸಪಾಟು ಮಾಡಿ, ಹರಡಿ ಇಳಿದ ಬೇರ ಜಾಲವನ್ನು ಮೇಲ್ಮುಖಿಯಾಗಿಸಿ ಕುಳ್ಳಿರಿಸಿದ್ದೆ. (ಮತ್ತೆ ತೆಂಗಿನ ಮರಕುಟ್ಟುವುದಕ್ಕೇ ಮರಳಿದ್ದೆ.)
ನನ್ನ ತೆಂಗಿನ ಕಡಿಕೀಸಿನಲ್ಲಿ ದೇವಕಿಯ ಸಾಗುವಾನಿ ಕೆಲಸ ನಿಧಾನಿಸಿತ್ತು. ಒಮ್ಮೆ ನನ್ನ ತೆಂಗಿನ ತುಣುಕುಗಳೆಲ್ಲ ಜಗುಲಿಯ ಜಾಗ ಖಾಲಿ ಮಾಡಿದಮೇಲೆ ಅಲ್ಲಿಗೆ ಸಾಗುವಾನಿ ಬೊಡ್ಡೆ ತಂದೆವು. ಇಷ್ಟರಲ್ಲಿ ಟೈಮ್ ಪಾಸಿಗೆಂದು (ಮರ ಕೆತ್ತುವ) ರುಚಿ ನೋಡಿದ್ದ ನಾನು ಅಮಲುಕೋರನೇ ಆಗಿದ್ದೆ! ಸಾಗುವಾನಿ ಬೊಡ್ಡೆಯ ಒಂದು ಮಗ್ಗುಲಲ್ಲಿ ಒಂದಿಂಚು ಉಳಿ ಸುತ್ತಿಗೆಯೊಡನೆ ದೇವಕಿ, ಇನ್ನೊಂದು ಮಗ್ಗುಲಿನಲ್ಲಿ ಅರ್ಧ ಇಂಚು ಉಳಿ, ಹಳೆ ಮರದ ಕೊರದಿನೊಂದಿಗೆ ನಾನು ಲಟಲಟಾಯಿಸಿದೆವು. ಮತ್ತೆ ಬೇಗನೆ ಎರಡನೇ ಸುತ್ತಿಗೆಯನ್ನೇ ಕೊಂಡು, ಇಬ್ಬರೂ ಕೆಲಸ ಮುಂದುವರಿಸಿದೆವು.
ಸಾಗುವಾನಿಯಲ್ಲಿ ಸಾಮಾನ್ಯ ತೊಗಟೆ ಕಳಚಿದಾಗ ಕಾಣಿಸುವ ಕಂದು/ಕೆಂಪು ಭಾಗ ಗಟ್ಟಿ ಮತ್ತು ವಿವಿಧ ರೇಖಾ ವಿನ್ಯಾಸಗಳುಳ್ಳದ್ದು. ಅದರಲ್ಲೇ ಕಾಣಿಸುವ ನಿಸ್ತೇಜ ಬಿಳಿ ಅಥವಾ ಹಳದಿ ಭಾಗ ಬೊಳುಂಬು, ಅಂದರೆ ಮಿದುವಾದ, ಹುಳ ಕೊರೆಯುವ, ಬೇಗ ಕುಂಬಾಗುವ ಭಾಗ. ದೇವಕಿ ತೊಗಟೆಯನಂತರ ಬೊಳುಂಬನ್ನು ಎಷ್ಟು ದಪ್ಪವಾದರೂ ಸರಿ, ಕೆತ್ತಿ ತೆಗೆಯಬೇಕೆನ್ನುವ ಶುದ್ಧ ತತ್ತ್ವದವಳು. ಆದರೆ ಅವಳು ಜೀವಮಾನಕ್ಕಂಟಿದ ಮತ್ತು ಅನಿರ್ದಿಷ್ಟ ಕೆಲಸದ ಅವಧಿಯ ಗೃಹಿಣಿ-ವೃತ್ತಿಯ ಆವಶ್ಯಕತೆಗಳಲ್ಲಿ ಹೆಚ್ಚು ಕಾಲ ಮರ ಕೆತ್ತುವಲ್ಲಿ ಕಳೆಯಲಾಗುತ್ತಿರಲಿಲ್ಲ. ನಾನೋ ಮೂವತ್ತಾರೇ ವರ್ಷ `ಹಣ ತರುವ’ ಕೆಲಸ ಮಾಡಿದ ನೆಪದಲ್ಲಿ ಶೇಷಾಯುಷ್ಯವನ್ನೆಲ್ಲ `ನಿವೃತ್ತ’ನೆಂಬ ಸೋಮಾರಿ ಪೀಠವನ್ನು ಅಲಂಕರಿಸಿದವ. ಸಹಜವಾಗಿ ಮರ ಕುಟ್ಟುವಲ್ಲಿ ಹೆಚ್ಚು ಕಾಲ ಕಳೆಯುವುದಾಗುತ್ತಿತ್ತು. ನನಗೆ ಪ್ರಾಥಮಿಕವಾಗಿ ಮೂಲಮರದಲ್ಲಿ ದೃಢವಾಗಿ ಇರುವವುಗಳನ್ನೆಲ್ಲ ಉಳಿಸಿಕೊಳ್ಳುವುದೇ ಲಕ್ಷ್ಯ. ಗರಗಸದ ಕೊಯ್ತ, ಜೆಸಿಬಿಯ ಜಡಿಪೆಟ್ಟು ಹಾಗೂ ಕೀಳು ಜಂಝಾಟದಲ್ಲಿ ಘಾಸಿಕೊಂಡ, ಕಲ್ಲು ಹುಳಗಳ ಒಡನಾಟದಲ್ಲಿ ಹಾಳುಬಿದ್ದ ಭಾಗಗಳನ್ನಷ್ಟೇ ಕಳಚಿ, ಉಳಿದೆಲ್ಲವನ್ನೂ ನಯಗೊಳಿಸುವುದೇ ಕೆಲಸ. ದೇವಕಿ ನಡುನಡುವೆ ಅನ್ಯಕಾರ್ಯಾರ್ಥ ಅತ್ತ ಹೋದಾಗ, ಆಕೆ ಅರ್ಧಕ್ಕೆ ಕೆತ್ತಿ ನಿಲ್ಲಿಸಿದ್ದನ್ನೂ ನಾನು ನಯಗೊಳಿಸಿ ಬಿಡುತ್ತಿದ್ದೆ. ಈ ವಿಚಾರದಲ್ಲಿ ನಮ್ಮಲ್ಲಿ ಸಣ್ಣ ಮಾತಿನ ಕಟಿಪಿಟಿಯೂ ನಡೆಯುತ್ತಿತ್ತು. ಈ ವೇಳೆಗೆ ಹೆರಿಗೆ ಪೂರ್ವದ ದಿನಗಳನ್ನು ಕಳೆಯಲೆಂದು (ಸೊಸೆ) ರಶ್ಮಿ ನಮ್ಮನೆಗೆ ಬಂದಳು. ಸಹಜವಾಗಿ ದೇವಕಿಗೆ ಕೆಲವೇ ವಾರಗಳಲ್ಲಿ ಬರಲಿರುವ ಪುಳ್ಳಿಯ ಸ್ವಾಗತಕ್ಕೆ ಸಿದ್ಧತೆ, ರಶ್ಮಿಯೊಡನೆ ಪಟ್ಟಾಂಗ, ಪಾಕವೈವಿಧ್ಯಗಳ ಲಹರಿ ಹೆಚ್ಚಾಯ್ತು. ನಾನು ಸಾಗುವಾನಿ ಬೊಡ್ಡೆಯೊಡನೆ ಜಟಾಪಟಿಯ ಪೂರ್ಣ ಸ್ವಾತಂತ್ರ್ಯ ಪಡೆದ ಉತ್ಸಾಹದಲ್ಲಿ ಲಟಕಟ ಮುಂದುವರಿಸಿಯೇ ಇದ್ದೆ! (ಇಂದು ಪುಳ್ಳಿ ಆಭಾ, ಕೈಗೆ ಸಿಕ್ಕಿದ್ದನ್ನೆಲ್ಲ ಲಟಪಟ ಕುಟ್ಟುವಾಗ, ಗರ್ಭದಲ್ಲೇ ಚಕ್ರವ್ಯೂಹ ಪ್ರವೇಶಿಸುವ ತಂತ್ರ ಕೇಳಿಕೊಂಡ ಅಭಿಮನ್ಯುವಿನ ಕತೆಯನ್ನು ರಶ್ಮಿ ನೆನಪಿಸಿಕೊಳ್ಳುತ್ತಾಳೆ!)
ಈ ಹಂತದಲ್ಲಿ ಬೊಡ್ಡೆಯ ಕಾಂಡದ ಅಂಶ ಪೀಠವಾಗಿ, ಬೇರಮೊತ್ತ ಶೋಭಾಯಮಾನ ಶಿಖರವಾಗಿ ಸ್ಪಷ್ಟಗೊಂಡಿತ್ತು. ಅದು ದಶ ದಿಕ್ಕುಗಳಿಗೂ ತನ್ನ ಬಲವಾದ ಕವಲುಗಳನ್ನು ಚಾಚಿತ್ತು. ಬೆಳವಣಿಗೆಯ ಹಂತದಲ್ಲಿ ಮಣ್ಣಿನಲ್ಲಿ ನುಸುಳಿ, ಕಲ್ಲನ್ನು ಬಳಸಿ, ನೀರನ್ನು ಅರಸಿ ಬಿಟ್ಟ ಉಪೋಪ ಬೇರುಗಳು, ತಳೆದ ವಿವಿಧ ರೂಪಗಳು ಸ್ಫುಟಗೊಳ್ಳುತ್ತಲಿತ್ತು. ಬೇರು ಎಳತರಲ್ಲಿ ಅಡ್ಡಿಗೆ ತಡವರಿಸಿದಾಗ ನೆರಿಗೆಗಳು ಮೂಡಿದ್ದಿರಬೇಕು. ಬಳಸು ಮಾರ್ಗದಲ್ಲೇ ಬಲಿತಾಗ, ಅದೇ ಅನಪೇಕ್ಷಿತವನ್ನು ಆವರಿಸಿಕೊಂಡದ್ದೂ ಕಾಣುತ್ತಿತ್ತು. ಅಂಥವನ್ನು ನಾಜೂಕಿನಲ್ಲಿ ಕಳಚಿದಾಗ ಆಕರ್ಷಕ ಗುಹೆಗಳಂಥ ರಚನೆಗಳೇ ಅನಾವರಣಗೊಳ್ಳುತ್ತಿತ್ತು. ಕೆಲವೆಡೆಗಳಲ್ಲಿ ಎತ್ತೆತ್ತಲೋ ಹೊರಟ ಎರಡು ಎಳೆಗಳು, ಊಹೆಗೆ ನಿಲುಕದ ಪರಿಸ್ಥಿತಿಯಲ್ಲಿ ತಿರುಗಿ, ಪರಸ್ಪರ ಸಂಧಿಸಿ ಬೆಸೆದುಕೊಂಡದ್ದೂ ಇತ್ತು. ಆ ನಡುವಣ ಮಣ್ಣುಕಸ ಕಳೆದಾಗ ಮತ್ತೊಂದೇ ಅಸಂಗತ ಸೌಂದರ್ಯ ತೆರೆದುಕೊಳ್ಳುತ್ತಿತ್ತು. ರಕ್ಕಸ, ಬೊಡ್ಡೆ ಎಂದೆಲ್ಲ ನಾವು ಕನಿಷ್ಠವಾಗಿ ಕಂಡಿದ್ದ ಸಾಗುವಾನಿ ಗುತ್ತಿ, ಈಗ ತನ್ನ ಅಸಂಖ್ಯ ತೋಳು ಚಾಚಿ, ವಿವಿಧ ನಾಟ್ಯಭಂಗಿಗಳನ್ನೂ ಮುದ್ರೆಗಳನ್ನೂ ಮೆರೆವಂತೆ ಕಾಣತೊಡಗಿತು. ಆ ಲಾಲಿತ್ಯಕ್ಕೆ ಮನಸೋತು, ಲಲಿತಕವಿ ಜಯದೇವನ ನೆನಪಿಗೂ ಸಾಗರಗಳ ಜೀವ ವಿಶೇಷ ಅಕ್ಟೋಪಸ್ಸಿನ ಸಾಮ್ಯಕ್ಕೂ ಏಕನಾಮದಲ್ಲಿ ಸಲ್ಲುವಂತೆ `ಅಷ್ಟಪದಿ’ ಎಂದೇ ಹೆಸರಿಸಿದೆವು.
ಅಷ್ಟಪದಿಯ ಕಾಂಡ ಅಥವ ತಳ ನಾನೊಮ್ಮೆ ಕೆತ್ತಿದ್ದು ಸಾಕಾಗಿರಲಿಲ್ಲ. ಹಾಗಾಗಿ ಪೀಠದ ಚೌಕಾಸಿ ಮತ್ತೆಯೂ ಬೇರೆಬೇರೆ ಹಂತಗಳಲ್ಲಿ ಮತ್ತು ರೀತಿಯಲ್ಲಿ ಮಾಡಿದ್ದಿತ್ತು. ಒಮ್ಮೆ ಜಗುಲಿಯ ಒರಟು ನೆಲದಲ್ಲಿ ಸ್ವಲ್ಪ ನೀರು, ಮಣ್ಣು ಚೆಲ್ಲಿ, ಕಾಂಡವನ್ನು ಅದರಲ್ಲೇ ನಾಲ್ಕೆಂಟು ಗಿರಕಿ ಹೊಡೆಸಿದೆ. ಮತ್ತೆ ಕವುಚಿ ಹಾಕಿ ಹೆಚ್ಚು ಕೆಸರು ಹತ್ತಿದ ಅಂಶಗಳನ್ನು ಕಣ್ಣಂದಾಜಿನಲ್ಲಿ ತೆಳುವಾಗಿ ಕೆತ್ತಿದ್ದೆ. ಇನ್ನೊಮ್ಮೆ ಮಟ್ಟಸ ಹಲಿಗೆ, ಮೀಟರ್ ಉದ್ದದ ರೀಪನ್ನೆಲ್ಲ ಅದರ ಮೇಲೆ ಆಚೆ ಈಚೆ ಆಡಿಸಿ, ಕಣ್ಣಂದಾಜಿನಲ್ಲಿ ಎಲ್ಲೆಲ್ಲೋ ಕೆತ್ತಿ ನೋಡಿದೆ – ಊಹೂಂ. ಕೊನೆ ಪ್ರಯತ್ನವಾಗಿ, ದೊಡ್ಡ ಅರದಲ್ಲಿ ಗಂಟೆಗಟ್ಟಳೆ ಉಜ್ಜಿ, ರಾಶಿ ಮರದಹುಡಿ ಉದುರಿಸಿದ್ದೂ ಆಯ್ತು. ಆದರೆ ಇಂದೂ ಮರಳು ಕಾಗದ ಉಜ್ಜುವಾಗ, ಹೊಳಪು ಬರಿಸಲು ಬಟ್ಟೇ ಎಳೆಯುವಾಗ – ಗಡಗಡಗಡಗಡ; “ಅಷ್ಟಪದಿ ನಿಜಕ್ಕೂ ಕುಣೀತಾನಾ?” ದೇವಕಿಪ್ರಶ್ನೆ. ಕೆರೆಮಣೆಯೂ ಸೇರಿದಂತೆ ಅಸಂಖ್ಯ ಕೈಕಸುಬುಗಳ ಸರದಾರ ಗೆಳೆಯ ಪಿವಿ ಉಪಾಧ್ಯರನ್ನು ಕೇಳಿದೆ. ನನ್ನ ತೆಂಗಿನ ತುಂಡುಗಳ ಕಾಲದಲ್ಲಿ ಇಂಥದ್ದೇ ಸಮಸ್ಯೆಗೆ ಅವರು ತಳವನ್ನು ಮುಗ್ಗಾಲಾಗಿಸಲು ಸೂಚಿಸಿದ್ದರು. ಈಗ ಇದಕ್ಕೆ “ತಳದಲ್ಲಿ ಮೂರು ಗಟ್ಟಿ ರಬ್ಬರಿನ ಬುಶ್” ಶಿಫಾರಸು ಮಾಡಿದ್ದಾರೆ, ನೋಡಬೇಕು.
ಜೆಸಿಬಿ ಎಳೆತಕ್ಕೆ ತುಂಡಾದ ಬೇರಿನ ಕಡೆಗಳು ಇನ್ಸುಲೇಶನ್ ಹರಿದ ದೂರವಾಣಿ ಕೇಬಲ್ಲಿನಂತೇ ಕಾಣುತ್ತಿತ್ತು. ಹೊರನೋಟಕ್ಕೆ ಸುಸ್ಥಿತಿಯಲ್ಲಿ ಉಳಿದಂತೆ ಕಾಣುವ ಹಂತದಿಂದ ಕತ್ತರಿಸಿ ತುದಿಯನ್ನು ಉರುಟು ಮಾಡುವ ಕೆಲಸಕ್ಕಿಳಿದೆ. ಉಳಿ ಇಟ್ಟು ಬಡಪೆಟ್ಟು ಕೊಟ್ಟರೆ, ಸ್ಪ್ರಿಂಗ್ ಮೆಟ್ಟಿದಂತೆ ಉಳಿ ಜಿಗಿಯುತ್ತಿತ್ತು. ಹೇಗೋ ಒಂದು ಹಂತಕ್ಕೆ ಕಡಿದರೂ ಜೆಸಿಬಿ ತುಯ್ತದ ಪರಿಣಾಮ ಬೇರಿನ ಒಳಗೆ ಹೆಚ್ಚು ಉದ್ದಕ್ಕೆ ಮುಂದುವರಿದದ್ದು ಕಾಣುತ್ತಿತ್ತು. ಅರ ಹಚ್ಚಿ ನಯಮಾಡಲು ತೊಡಗಿದರೆ ಚಕ್ಕೆಗಳೇ ಸಿಡಿಯುತ್ತಿದ್ದವು. ಇನ್ನಷ್ಟು ಮತ್ತಷ್ಟು ಕಡಿದು, ಗಂಟೆಗಟ್ಟಳೆ ಅರದಲ್ಲಿ ಉಜ್ಜಿ ರೂಪ ಕೊಟ್ಟು ಮುಗಿದ ಫಲ – ಹಲವು `ಮೊಂಡುಗೈ’ಗಳನ್ನೇ ನೋಡಬಹುದು.
ಸುತ್ತಲೂ ಚಾಚಿಕೊಂಡ ಕೈಗಳಿಗೇನೋ (ಬೇರುಗಳೇ) ನಾನು ಸ್ವತಂತ್ರವಾಗಿಯೇ ಸುರೂಪಿ ಚಿಕಿತ್ಸೆ ಕೊಟ್ಟೆ. ಆದರೆ ಕೇಂದ್ರದತ್ತ ಸರಿಯುತ್ತಿದ್ದಂತೆ ಹೊಸ ಸಮಸ್ಯೆಗಳು ಕಾಣಿಸಿದವು. ಪುಟ್ಟ ದೊಡ್ಡ ಸ್ಟೂಲ್ಗಳಲ್ಲಿ ಕುಳಿತು ನೋಡಿದ್ದಾಯ್ತು, ನಿಂತು ಸೊಂಟ ನೋಯಿಸಿಕೊಂಡದ್ದೂ ಆಯ್ತು. ಅದರ ಕೈಗಳ ಸಂದಿನಲ್ಲಿ ಇರುಕಿಕೊಂಡು ಅಷ್ಟಾವಕ್ರ ಭಂಗಿಯಲ್ಲಿ ಕುಟ್ಟಿದೆ, ಕೀಸಿದೆ. ಕೆಲವು ಸಂದುಗಳನ್ನು ನನ್ನ ಕೈ ಅಲ್ಲ, ಸಪುರ ಉಳಿಗೂ ಮುಟ್ಟುವುದು ಕಷ್ಟವಾಗುತ್ತಿತ್ತು. ಹಾಗೆಂದು ಬಿಡುಬೀಸು ಕೆತ್ತಿ ಅಷ್ಟಪದಿಯನ್ನು ನನ್ನನುಕೂಲದ ರೂಪಕ್ಕಿಳಿಸುವುದಕ್ಕೆ ಮನ ಒಪ್ಪಲಿಲ್ಲ. ಉದ್ದ ಕತ್ತಿನ ಉಳಿಯೋ ಹರಿತಗೊಳಿಸಿದ ಸ್ಕ್ರೂ ಡ್ರೈವರ್ರೋ ಚೂರಿಯೋ ಬಾಯಿಕೊಟ್ಟ ಹ್ಯಾಕ್ಸ ಬ್ಲೇಡೋ ತೂರಿ, ಚೂರುಚೂರೇ ಮಿದು ಭಾಗ ಮತ್ತು ಕಲ್ಲುಮಣ್ಣುಗಳನ್ನು ಬೇರ್ಪಡಿಸುತ್ತ ಬಂದೆ. ಆ ಸಂದುಗಳ ತಳ, ಅಡ್ಡ ಮಾಟೆಗಳ ಆಳವನ್ನು ಪೂರ್ಣ ನಯ ಮಾಡುವುದು ನನ್ನ ಮಿತ ಹತ್ಯಾರುಗಳಿಗೆ ಇನ್ನೂ ದಕ್ಕಿಲ್ಲ. ಕೆಲವು ಮಿದು ಭಾಗಗಳು ಇನ್ನೆಲ್ಲೋ ತೆರೆದುಕೊಳ್ಳುವ ಗುಹಾಮಾರ್ಗವಾದದ್ದೂ ಇದೆ. ಅವುಗಳನ್ನು ನೋಡುವ ಕ್ರಮ ಬದಲಿಸಿದಂತೆಲ್ಲ ಹೆದ್ದಾರಿಗಳ ವಿವಿಧ ಸೇತುರೂಪಗಳು ಕಾಣಿಸಿದ್ದಿದೆ, ವಿಶಿಷ್ಟ ಜೀವಿಗಳು ಮತ್ತು ಅಮೂರ್ತ ಭಾವಗಳೂ ಮೂರ್ತೀಭವಿಸಿದ್ದೂ ಇದೆ!
ಕೆತ್ತಿದ ಮರದ ಚಕ್ಕೆ, ಒಕ್ಕಿದ ಕಲ್ಲಚೂರು, ಮಣ್ಣನ್ನು ಕೆಲವು ಸಂದುಗಳಿಂದ ಸುಲಭದಲ್ಲಿ ತೆಗೆಯುವುದಕ್ಕೆ ಆಗುತ್ತಿರಲಿಲ್ಲ. ಬ್ರಷ್, ಚಂಡಿ ಬಟ್ಟೆಗಳು ಸಾಲದೆನ್ನಿಸಿದಾಗ ಕಷ್ಟದಲ್ಲಿ ಎರಡು ಬೆರಳನ್ನೇ ತೂರಿ ಗೀರುಗಾಯ ಮಾಡಿಕೊಂಡದ್ದು, ಉಗುರು ಸುಲಿದದ್ದೂ ಇದೆ. ಕೆಲವೊಮ್ಮೆ ಮರದ ಹುಡಿ, ದೂಳೆಂದು ತುಟಿ ಚೂಪು ಮಾಡಿ ಊದಿದಾಗ ಬೇರಜಾಲದ ಇನ್ಯಾವುದೋ ಮೂಲೆಯಲ್ಲಿ ಅದು ಮರುಸುಳಿದು, ಸ್ವಲ್ಪ ನನ್ನದೇ ಕಣ್ಣು ಮೂಗಿಗೆ ಹಾರಿ ಕಂಗಾಲು ಮಾಡುವುದೂ ಇತ್ತು. ಅಷ್ಟಪದಿಗೆ ಮರಳು ಕಾಗದ ಉಜ್ಜುವ ಹಂತದಲ್ಲಿ ನನಗೆರಡು ಮೂರು ಬಾರಿ ದಿನವಿಡೀ ಸೋರು ಮೂಗು ಬರುತ್ತಿದ್ದದ್ದಕ್ಕೆ ಸಾಗುವಾನಿ ಮರದ ಹುಡಿಯೇ ಕಾರಣವಿರಬೇಕು. ಮತ್ತೆ ಈ ದಿನಗಳಲ್ಲಿ ದೇವಕಿಗೂ ಹಿಡಿದುಕೊಂಡ ಅನಿಶ್ಚಿತ ಒಣ ಕೆಮ್ಮೂ ಒಟ್ಟಾರೆ ಮರಕೆತ್ತಿದ ದೂಳಿನದೇ ಪರಿಣಾಮವಿರಬೇಕು. ಇದರ ನಿವಾರಣೆಗೆ ಮೇಲಿನ ಹೊರಜಗುಲಿಯಲ್ಲಿ ಕೆತ್ತನೆ ನಡೆಸಿದ್ದಾಗ ಬೆನ್ನ ಬದಿಗೆ ಪೆಡೆಸ್ಟಲ್ ಫ್ಯಾನ್ ಹೊಂದಿಸಿಕೊಂಡಿದ್ದೆ. ಇದು ನನಗೆ ತಂಪು ನೀಡುವುದರೊಡನೆ, ಮರದ ಹುಡಿ ಉದುರುತ್ತಿದ್ದಂತೆಲ್ಲ ದೂರ ತಳ್ಳಿಬಿಡುತ್ತಿತ್ತು. ಮತ್ತೆ ಹೊತ್ತು ಹೊತ್ತಿನ ಕೆಲಸದ ಕೊನೆಯಲ್ಲಿ ವ್ಯಾಕ್ಯೂಮ್ ಕ್ಲೀನರ್ ಹಾಕಿ ಅಷ್ಟಪದಿಯನ್ನೂ ಜಗುಲಿಯ ಎಲ್ಲ ಮೂಲೆಗಳನ್ನೂ ಚೊಕ್ಕವಿಟ್ಟುಕೊಳ್ಳುವುದು ಅನಿವಾರ್ಯವೇ ಆಯ್ತು.
ಅಷ್ಟಪದಿಯ ಮೈಮೇಲೇ ಅಡ್ಡಾದಿಡ್ಡಿ ಕುಳಿತು, ತಲೆ ಓರೆಮಾಡಿ, ಉಳಿಯ ತುದಿಯಲ್ಲೇ ದೃಷ್ಟಿಯನ್ನು ಕೀಲಿಸಿ ಸುತ್ತಿಗೆಯಲ್ಲಿ ಕುರುಡೇಟು ಹಾಕುವಾಗ ಎಷ್ಟೊ ಸಲ ಕೈಗಂಟುಗಳಿಗೆ ಪೆಟ್ಟು ಬಿದ್ದದ್ದೂ ಇದೆ. ಕೆಲವೊಮ್ಮೆ ನಿಯಂತ್ರಿತ ಪೆಟ್ಟೆಂದುಕೊಳ್ಳುತ್ತ ಸುತ್ತಿಗೆಯ ಮಂಡೆಗೆ ಸಮೀಪ ಹಿಡಿದು ಉಳಿಗೆ ಗುದ್ದಹೋಗಿ ಬೆರಳನ್ನೇ ಹಗುರಕ್ಕೆ ಜಜ್ಜಿಗೊಂಡದ್ದೂ ಇದೆ. ಸಣ್ಣಪುಟ್ಟ ಊತ, ರಕ್ತ ಜಿನುಗಿದ್ದು, ಕೆತ್ತುವ ಕೆಲಸಕ್ಕೆ ಒಂದೆರಡು ದಿನ ಕಡ್ಡಾಯ ರಜೆ ಮಾಡಿದ್ದೂ ಇತ್ತು. ವೈದ್ಯರ ಬಳಿ ಚಿಕಿತ್ಸೆಗೆ ಓಡುವಂತಾಗದಿದ್ದದ್ದು ಅದೃಷ್ಟವೇ ಸರಿ.
ಅಷ್ಟಪದಿಯ ಗಟ್ಟಿ ಅಂಶವನ್ನು ಅನಾವರಣಗೊಳಿಸುವುದರಲ್ಲಿ ರಮ್ಯ ಪತ್ತೇದಾರಿ ಕತೆಯ ಅಸಂಗತ ಸುಳುಹುಗಳನ್ನು ನಾನು ಕಾಣುತ್ತಿದ್ದೆ. ಗಿಡದ ಪೋಷಕಾಂಶ ಮತ್ತು ನೀರಿನ ಪೂರೈಕಾ ನಾಳವೇ ಬೇರು ಎನ್ನುವುದೆಲ್ಲರಿಗೂ ತಿಳಿದ ವಿಷಯವೇ. ಅದು ಬಹು ಕೋಮಲ ಎಳೆಯಾಗಿ ಭೂಮಿಯೊಳ ಹೊಕ್ಕರೂ ನಿರಂತರ ಕವಲೋಪಕವಲುಗಳನ್ನು ಮೂಡಿಸುತ್ತ ನಿರಂತರ ಅನ್ವೇಷಣೆಯಲ್ಲೂ ಇರುತ್ತದೆ, ಗಟ್ಟಿಗೊಳ್ಳುತ್ತಲೂ ಇರುತ್ತದೆ. ಗಿಡದ ಎಳೆತನದಲ್ಲಿ ಬೀಡಾಡಿ ಜಾನುವಾರು ಸೊಪ್ಪು, ದಂಟುಗಳಿಗೆ ಬಾಯಿ ಹಾಕಿ ಜಗ್ಗಿದ್ದು, ಮುಂದೆ ಅವೇ ಮೈ ತುರಿಕೆಯಾದಾಗ ಕಾಂಡವನ್ನೇ ಬಲವಾಗಿ ದೂಡಿದ್ದು, ಮಳೆ ನೆಲವನ್ನೇ ಅಭದ್ರ ಮಾಡಿದ್ದು, ಬೀಸಿದ ಗಾಳಿ ಸಮೂಲ ಕಿತ್ತೊಗೆಯುವಂತೆ ತುಯ್ದದ್ದು, ರೆಂಬೆ ಕೊಂಬೆಗಳು ಹೆಚ್ಚುತ್ತ, ಬಲಿಯುತ್ತ ಹೋದಂತೆಲ್ಲ ಭಾರ ಹೆಚ್ಚಿದ್ದು ಮುಂತಾದವೆಲ್ಲ ಬೇರಿನ ರೂಪಣೆಯಲ್ಲೂ ದೃಢತೆಯಲ್ಲೂ ಅವಶ್ಯ ಪರಿಣಾಮ ಬೀರಿದ್ದಿರಬೇಕು. ಕೆತ್ತುವಾಗ ಕಾಣಿಸಿದ ಬೂದಿಯ ಕರಿ, ಸರಳವಾಗಿ ಯಾವುದೋ ಬಚ್ಚಲೊಲೆಯದ್ದೋ ಅನೂಹ್ಯ ಸಾಕ್ಷ್ಯನಾಶದ್ದೋ? ಇನ್ನೆಲ್ಲೋ ನನ್ನ ಉಳಿಯ ಬಾಯಿ ಮುರಿದ ಸಿಮೆಂಟ್ ತುಂಡು ಕೇವಲ ಸಣ್ಣ ಮನೆ ರಿಪೇರಿಯದ್ದೋ ಘನ ಮಹಲು ಕುಸಿದು ಸಂಭವಿಸಿದ ದುರಂತದ್ದೋ? ಅದೊಂದು ಬೇರ ಪೊಟರೆ, ಖಾಲಿಯೂ ನುಣ್ಣಗೂ ಇತ್ತು. ಅದಕ್ಕೆ ಮಣ್ಣ ಮಾಟೆಯ ಸಂಪರ್ಕವಿದ್ದು ಇಲಿ ಸಂಸಾರ ವೃದ್ಧಿಸಿದ್ದೂ ಇರಬಹುದು, ವಿಷದ ಹಾವೇ ನೆಲೆಸಿ ವಠಾರದ ಭಯಕಾರಕವಾದದ್ದೂ ಇದ್ದಿರಬಹುದಲ್ಲವೇ? ಇನ್ನು ಭಾವನಾತ್ಮಕ ನೆಲೆಯಲ್ಲಿ ಹೋದರಂತೂ ಅದೆಷ್ಟು ಸರಸ, ವಿರಸ, ಜನನ, ಮರಣ ಎಂದೆಲ್ಲ ವಿಸ್ತರಿಸುವ ಅಸಂಗತ ಸಾವಿರದಲ್ಲಿ ಪಸರಿಸಿರಬಹುದಾದ ಈ ಬೇರುಗಳ ಜಿಡುಕನ್ನು ಸುಸಾಂಗತ್ಯಕ್ಕೆ ಕಲ್ಪಿಸಿಕೊಳ್ಳುವಾಗ ಮೂಡುವ ಬೆರಗು ಸಣ್ಣದಲ್ಲ. ಆವೆಲ್ಲದರ ಜತೆಗೆ, ವರ್ತಮಾನದಲ್ಲಿ ಅನಾವರಣಗೊಳ್ಳುತ್ತಿದ್ದ ಅಷ್ಟಪದಿಯ ರೂಪ ನನ್ನನ್ನು ಅದರಲ್ಲೇ ಇನ್ನಷ್ಟು ಹೊತ್ತು ಕಳೆಯುವಂತೆ, ಮತ್ತಷ್ಟು ವೇಗದಲ್ಲಿ ಕೆಲಸ ನಡೆಸುವಂತೆ ಪ್ರೇರಿಸುತ್ತಲೇ ಇತ್ತು.
ಗಹನ ಸಂದುಗಳನ್ನು ಸಪುರ ಉಳಿಯಲ್ಲಿ, ಪುಟ್ಟ ಹರಕು ಚೂರಿಯಲ್ಲಿ, ಕೆಲವೊಮ್ಮೆ ಬಳುಕುವ ಬರಿಯ ಹ್ಯಾಕ್ಸಾ ಬ್ಲೇಡಿನಲ್ಲಿ ಹಗುರಕ್ಕೆ ಕೆರೆಸಿಯೇ ಸ್ಫುಟಗೊಳಿಸುತ್ತಿದ್ದೆ. ಉಳಿದಂತೆ ಒರಟು ಮೈಗಳಿಗೆಲ್ಲ ದೊಡ್ಡ ಹಲ್ಲಿನ ಮರದ ಅರ, ಸಣ್ಣ ಕಚ್ಚುಗಳ ಲೋಹದ ಅರ ಮತ್ತು ಎರಡು ನಮೂನೆಯ ಮರಳು ಕಾಗದ ಉಜ್ಜಾಟ. ಇದು ಕಳೆದ ಆರೆಂಟು ತಿಂಗಳಿನಿಂದ ನಡೆದೇ ಇದೆ. ತೆಳು ಬಿರುಕುಗಳನ್ನು, ಕಡಿ ಹಾಗೂ ಜಜ್ಜು ಗಾಯಗಳನ್ನು ಕೆತ್ತಿ, ನಯಗೊಳಿಸಿದೆ. ಒಂದೆರಡು ಬಲವಾದ ಬಿರುಕನ್ನು ನಿವಾರಿಸುವುದೆಂದರೆ ಅಷ್ಟಪದಿಯ ರೂಪವನ್ನೇ ಕಳೆಯುವುದಾಗುತ್ತದೆ. ಅವಕ್ಕೆ ಮಾತ್ರ ಮೇಣವೋ ಮತ್ತೊಂದೋ ತುಂಬುವ ಹೊಳಹು ಹಾಕಿದ್ದೇನೆ. ಸಹಜವಾಗಿ ಎಲ್ಲಾ ಮೈಯೂ ಮೃದು ಅಲೆಸಂಚಾರದ ಬಳುಕುಗಳು; ನೇರ ಸಪಾಟು ಅಷ್ಟಪದಿಯಲ್ಲಿ ಹುಡುಕಿದರೂ ಸಿಗದು.
ಹೀಗೊಂದು ನಗೆಹನಿಯನ್ನು ನೀವು ಕೇಳಿರಬಹುದು – ಸಂಜೆಯ ವಿಹಾರಕ್ಕೆ ಜತೆಯಲ್ಲಿ ಹೋಗಲು ಸಜ್ಜಾಗಿ ಕಾದಿದ್ದ ಪತಿರಾಯನ ಅಸಹನೆಯ ಧ್ವನಿ ಏರಿತ್ತಂತೆ. ಒಳಗಿನಿಂದ ಮೇಕಪ್ ಸುಂದರಿ ಉಲಿದಳಂತೆ “ಒಂದು ಗಂಟೆಯಿಂದಲೇ ಹೇಳ್ತಾ ಇದ್ದೇನೆ, ಐದು ಮಿನಿಟಿನಲ್ಲಿ ಬರ್ತೇನೇಂತ”. ನನ್ನ ಕತೆಯದೂ ಅದೇ ಸ್ಥಿತಿ. ಇನ್ನೇನು ಸೂಕ್ತ ಲೇಪ, ಮರದ ಬಾಳ್ತನಕ್ಕಾಗಿ ಪಾರದರ್ಶಕ ಪೇಂಟ್ (ಟಚ್ ವುಡ್), ಹೊಳೆತಕ್ಕಾಗಿ ದಪ್ಪ ಬಟ್ಟೆಯಲ್ಲಿ ಮಾಲಿಷ್.- ಒಂದೆರಡು ದಿನಗಳ ಕೆಲಸ, ಅಂದುಕೊಳ್ಳುತ್ತಲೇ ಆರೆಂಟು ತಿಂಗಳು ಕಳೆದಿದೆ. ಈಗ ಹೊಳೆಯುತ್ತಿದೆ – ಅಷ್ಟಪದಿಯ ಪರಿಷ್ಕರಣ `ಎಂದೂ ಮುಗಿಯದ ಕತೆ.’ ಸಮಯಮಿತಿ, ಎಲ್ಲೋ ಪ್ರದರ್ಶನಕ್ಕಿಡುವ ಚಪಲಗಳೇನೂ ನನಗೆ ಇಲ್ಲವಾದ್ದರಿಂದ, ಅದು ನಡೆಯುತ್ತಿರಲಿ, ಸದ್ಯ ಈ ಕಥನವನ್ನು ಇಲ್ಲಿಗೇ ಮುಗಿಸುತ್ತೇನೆ.
ವಿದೇಶದಲ್ಲೋರ್ವ ಭಾರೀ ಮರವನ್ನೇ ಅಡ್ಡ ಹಾಕಿ ಕಾಷ್ಠ ಶಿಲ್ಪ ಮಹಾಕಾವ್ಯವನ್ನೇ (ಹೆಸರಿನ ಮೇಲೆ ಚಿಟಿಕೆ ಹೊಡೆದು ನೋಡಿ) ಮಾಡಿದ್ದಾನೆ! ಇಂಥವೆಲ್ಲ ಹವ್ಯಾಸೀ, ಯೋಜನೆಗಳಾಗುವುದು ಅಸಾಧ್ಯ, ಕಷ್ಟ. ನಮ್ಮದೇನಿದ್ದರೂ ಒಂದು ಗುತ್ತಿ ಅಥವಾ ತುಂಡು ಕೊರಡು, ಬಿಡು ಸಮಯದ ಕೆಲಸ. `ಕಸದಿಂದ ರಸಮಾಡುವ’, ಅಂದರೆ ವಿಶೇಷ ಹಣ ಅಥವಾ ಸಾಮಗ್ರಿಗಳ ಖರೀದಿಯನ್ನವಲಂಬಿಸದ, ಹಾಗಾಗಿ ಮುಂದೆ ವಾಣಿಜ್ಯ ಆಸಕ್ತಿಗಳನ್ನೂ ಹುಟ್ಟಿಸದ, ಎಲ್ಲಕ್ಕೂ ಮುಖ್ಯವಾಗಿ ಸ್ವಂತ ದೇಹಶ್ರಮಕ್ಕೆ ಕಲಾನಂದದಾಯಿಯಾದ ಹವ್ಯಾಸ. ನೀವೂ ಯಾಕೆ ಒಂದು ಕೈ ನೋಡಬಾರದು? ತುಳುನಾಡವಲಯದಲ್ಲಿ, ಪರ್ವಕಾಲದಲ್ಲಿ (ವಿಷು), ಮರವೊಂದರ (ಹಾಲೆ) ಕೆತ್ತೆ ತೆಗೆದು, ಕಾಯಿಸಿ ಕಷಾಯ ಮಾಡಿ ಸೇವಿಸುವುದು ಒಂದು ಸಾಂಪ್ರದಾಯಿಕ ಮತ್ತು ಆರೋಗ್ಯದಾಯೀ ಚಟುವಟಿಕೆಯಾಗಿಯೇ ರೂಢಿಯಲ್ಲಿದೆ. ಎಸೆದ ತೆಂಗಿನ ಬೊಡ್ಡೆಗಳಿಂದ ಚತುರ್ಮುಖರನ್ನೂ ಸಾಗುವಾನಿ ಬೇರಬೊಡ್ಡೆಯಿಂದ ಅಷ್ಟಪದಿಯನ್ನೂ ರೂಪಿಸುವಲ್ಲಿ ನಾವೂ ಅಸಂಖ್ಯ ಕೆತ್ತೆ ತೆಗೆದಿದ್ದೇವೆ. ಆ ಕಾಯಕ ಬಿಸಿಯಲ್ಲಿ ಕಲಾ ಕಷಾಯ ಮಾಡಿ, ಸೇವಿಸುತ್ತಲೇ ಇದ್ದೇವೆ. ಅಮಿತ ಮಾನಸೋಲ್ಲಾಸಕ್ಕೆ ನೀವೂ ಯಾಕೆ ಕುಡಿಯಬಾರದು?
(ಸದ್ಯಕ್ಕೆ ಸರಣಿ ಮುಗಿಯಿತು)
ತನ್ನ ಕಾವ್ಯಕೆ ಮಹಾಕವಿ ತಾ ಮಣಿಯುವಂತೆ ಅಭಿನವ ಜಯದೇವನಂತೆ, ಅಭಾಮನ್ಯುವಿನ ಆಜನ್ಮ ಕಲಾಸ್ಫರಣೆ ಓದಿ ಸಂತೋಷವಾಯಿತು.
ತೊಂಬಾಚೆನ್ನಾಗಿ ಬರೆದಿದ್ದೀರಿ.ಅಭಾಳ ಅಭಿಮನ್ಯುಪರ್ವ ತುಂಬಾ ಖುಷಿ ಕೊಟ್ಟಿತು
“ಬೇಲೆ ದಾಂತಿನ ಆಚಾರಿ…” ಗಾದೆಯನ್ನೇ ಸುಳ್ಳು ಮಾಡುವಲ್ಲಿ ನೀವು ವಹಿಸಿದ ಪರಿಶ್ರಮ ನಿಜಕ್ಕೂ ಅನುಕರಣೀಯ!!! ನಿಮ್ಮ ಕಾಷ್ಟಶಿಲ್ಪ ಕೆತ್ತನೆ ಹುಚ್ಚು ಹೊಳೆಯಾಗಿ ಹರಿಯುತ್ತಿರಲಿ… ಅಷ್ಟಾವಕ್ರನೂ ತನ್ನ ವಕ್ರತೆಯಿಂದಲೇ ಪ್ರಸಿದ್ಧಿಗೆ ಬಂದದ್ದು ನಿಜವಷ್ಟೆ! ನಿಮ್ಮ ಪುಳ್ಳಿಗೂ ಈ ಕೌಶಲ ದಾಟಿಸುವಲ್ಲಿ ನೀವು ಖಂಡಿತಾ ಸಫಲರಾಗಿದ್ದೀರಿ.