(ಗೋವಿಂದಾಯ ನಮಃ ಭಾಗ ಎರಡು)
[ನಾಲ್ಕು ವಾರಗಳ ಹಿಂದೆ ಗತಿಸಿದ ನನ್ನ ಎರಡನೇ ಸೋದರಮಾವ – ಎ.ಪಿ. ಗೋವಿಂದಯ್ಯನವರ ಸ್ಮೃತಿ ಮಾಲಿಕೆಯಲ್ಲಿ ಇದು ಮೂರನೇದು. ನನ್ನದು ಸೇರಿದಂತೆ ಹಿಂದಿನೆರಡು ಅಥವಾ ಮಾವನ ಮಗ ರಾಧಾಕೃಷ್ಣನದೂ ಸೇರಿಸಿ ಹೇಳುವುದಿದ್ದರೆ ಮೂರರಲ್ಲೂ ಕನಿಷ್ಠ ಒಂದು ತಲೆಮಾರಿನ ಅಂತರದ ಬೆರಗಿದೆ. ಆದರೆ ಇಲ್ಲಿ ವರ್ಷಗಳ ಲೆಕ್ಕದಲ್ಲಿ ಹೇಳುವುದಿದ್ದರೆ ಗೋವಿಂದನಿಗೆ ಸುಮಾರು ಎರಡೇ ವರ್ಷ ಕಿರಿಯ, ಬಾಲ್ಯದ ಬಹುತೇಕ ಸಿಹಿ ಕಹಿಗಳನ್ನು ಒಟ್ಟಿಗೇ ಅನುಭವಿಸಿದ ಒತ್ತಿನ ತಮ್ಮ ಗೌರೀಶಂಕರರ ಅನುಭವ ಬೇರೇ ಸ್ತರದ್ದು. ಅದರ ಚಂದ ನೀವೇ ಓದಿ ನೋಡಿ – ಅಶೋಕವರ್ಧನ]
ನಾನು ಮಂಗಳೂರಿನಿಂದ ಪುತ್ತೂರ ಬಳಿಯ ನಮ್ಮ ಹಳ್ಳಿಮನೆಗೆ (ಜಿಂಕೆ ಮನೆ) ಹೋದಾಗೆಲ್ಲ, ಅಕ್ಕಪಕ್ಕದಲ್ಲೇ [ಚಿತ್ರ:ಸ್ವಂತ ಗ್ರಂಥಸಂಗ್ರಹದೆದುರು ಗೋವಿಂದ] ಮೂರೂ ಸೋದರರ ಮನೆಗಳಿಗೆ ಲೋಕಾಭಿರಾಮ ಮಾತುಕತೆಗೆಂದೇ ಹೋಗುವುದಿತ್ತು. ನನ್ನ ಚಿಕ್ಕ – ಅಣ್ಣ ಗೋವಿಂದನಿಗೆ, ಎರಡು ಮೂರು ವರ್ಷಗಳ ಹಿಂದೆ ಧ್ವನಿ ಬಿದ್ದು ಹೋಗಿತ್ತು. ಆ ನೆನಪಿನಲ್ಲೇ ಸುಮಾರು ಒಂದೂವರೆ ವರ್ಷದ ಹಿಂದೊಂದು ಸಂಜೆ, ಅವನ ಮನೆಗೆ ಹೋಗಿದ್ದೆ. ಜಗುಲಿಯ ಪಟ್ಟಾಂಗದಲ್ಲಿ ಅತ್ತಿಗೆ ಮಾಲತಿಯೂ ಇದ್ದಳು. ನಾನು ಎಂದಿನಂತೆ ಹರಟೆ, ಊರ ಸುದ್ದಿಗಿಳಿದಿದ್ದೆ. ಗಂಟಲ ಸಮಸ್ಯೆ ಇದ್ದರೂ ಮಾತುಪ್ರಿಯ ಗೋವಿಂದ ಗುಸಗುಸ ಧ್ವನಿ ಸೇರಿಸಬೇಕಿತ್ತು, ಯಾಕೋ ನಿರಾಸಕ್ತನಾಗಿದ್ದ. ಮಾಲತಿ ಹೇಳಿದಳು “ಅವರಿಗೆ ಹೊಟ್ಟೆ ಉರಿ. ವಾಯು, ಆಮ್ಲದ ಉಪದ್ರವ. ಹಾಗಾಗಿ ಪುತ್ತೂರಿಗೆ ಹೋಗಿ [ಚಿತ್ರ: ಚೇತನದಲ್ಲಿ ಗೌರೀಶಂಕರ]
ಕುಟುಂಬದ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು ಬಂದಿದ್ದಾರೆ. ವೈದ್ಯರ ಅಭಿಪ್ರಾಯದಂತೆ, ಏನೋ ವಾಯುಕಾರಕ ತಿಂಡಿ ತಿಂದ ಕಾರಣ ಇರಬೇಕು. ಆಹಾರದ ವಿಚಾರದಲ್ಲಿ ಎಚ್ಚರ ವಹಿಸತಕ್ಕದ್ದು….” ಇತ್ಯಾದಿ. ಗೋವಿಂದ ಬಿಗಿದ ತುಟಿ ಬಿಚ್ಚಿ, ಸ್ವಲ್ಪ ಲಘು ಧಾಟಿಯಲ್ಲೇ “ವೈದ್ಯರಿರುವುದು ನಮ್ಮಂಥ ಮುದುಕರಿಗೆ ಬುದ್ಧಿ ಹೇಳಲು. ಕಳೆದ ೮೦ ವರ್ಷಗಳಿಂದ ತಿಂದು ಜೀರ್ಣಿಸಿಕೊಂಡ [ಚಿತ್ರ: ಕಾರಂತ ವೇದಿಕೆಯಲ್ಲಿ ಗೌರೀಶಂಕರ] ತೊಂದರೆ, ಅಪಥ್ಯವಾಗುವುದೆಂದರೆ ಹಾಸ್ಯಾಸ್ಪದ. ಆಗಲಿ, ಅವರ ಬುದ್ಧಿವಾದದಂತೆ, ಮಾಲತಿಯ ಅಪ್ಪಣೆ ಪಾಲಿಸಿ, ನೀರು ಕುಡಿದು ಕುಳಿತುಕೊಂಡಿದ್ದೇನೆ…” ಗುಸುಗುಸು ಧ್ವನಿ, ಮುಸಿಮುಸಿ ನಗು. ತಮ್ಮ ರಾಮನಾಥ ಮತ್ತು ಅಣ್ಣನ ಮಗ ಸದಾಶಿವ ಬಂದ ಮೇಲೆ, ಗೋವಿಂದ ಪ್ರಾರಂಭದ ಹಿಂಜರಿಕೆ ಕಳೆದು, ಹರಟೆ ಕೊಚ್ಚುವುದರಲ್ಲಿ ಸೇರಿಕೊಂಡ. ಎಂದಿನಂತೆಯೇ ಚುರುಕಾಗಿ ಸಂಜೆ ಕಳೆಯಿತು.
ಎರಡು ವಾರ ಕಳೆದು ಇನ್ನೊಮ್ಮೆ ಹೋದಾಗ, ಗೋವಿಂದನನ್ನು ಪುತ್ತೂರಿನ ಶುಶ್ರೂಷಾಗೃಹಕ್ಕೆ ಸೇರಿಸಿದ್ದಾರೆಂದೂ ಜೀರ್ಣಾಂಗ ತಪಾಸಣೆಗೆ ಒಳಪಡಿಸಿದ್ದಾರೆಂದೂ ತಿಳಿಯಿತು. [ಚಿತ್ರ: ಚೇತನ ಹೊಸರೂಪ] ಆಹಾರ ಸೇವನೆಯಲ್ಲಿ ತೊಡಕುಂಟಾಗಿ, ಸೇವನೆಯೇ ಕಡಿಮೆಯಾಗಿ, ನಿತ್ರಾಣ ಕಾಡಿತ್ತಂತೆ. ಮತ್ತೊಂದೆರಡು ದಿನಗಳಲ್ಲೇ ವೈದ್ಯರ ಸಲಹೆಯಂತೆ, ಹೆಚ್ಚಿನ ತಪಾಸಣೆಗೆ ಮಂಗಳೂರಿಗೆ ಒಯ್ದರು. ಅಲ್ಲಿ ತಜ್ಞ ವರದಿ ಬಂದಾಗ ಆಘಾತ ಕಾದಿತ್ತು – ಗಂಟಲಿನ ಧ್ವನಿಪೆಟ್ಟಿಗೆಯ ಬಳಿ ಕ್ಯಾನ್ಸರ್! ಸುಮಾರು ಒಂದು ವರ್ಷದಿಂದಲೇ ಇದ್ದಿರಬಹುದಾದ ಅದಕ್ಕೆ ಮಹಾ ಚಿಕಿತ್ಸೆಯೇ ಆಗಬೇಕಿತ್ತು. ಆದರೆ ಪರಿಸ್ಥಿತಿಯ ತುಲನೆಯಲ್ಲಿ, ತತ್ಕಾಲೀನ ಕಿರು ಶಸ್ತ್ರಚಿಕಿತ್ಸೆಯನ್ನಷ್ಟೇ ಮಾಡಿ, ಉಸಿರಾಟಕ್ಕೆ ಕೊಳವೆ ಜೋಡಿಸಿ, ಆಹಾರಕ್ಕೆ ನಾಳಗಳನ್ನು ಹೊಟ್ಟೆಗೇ ಇಳಿಸಿ, ವಿಶ್ರಾಂತಿಗೆ ಬಿಟ್ಟುಕೊಟ್ಟರು. ಮನೆಯಲ್ಲಿ ಹಾಸಿಗೆ ವಿಶ್ರಾಂತಿಯೇ ಹೆಚ್ಚಾಯ್ತು. ಅತ್ತಿಗೆ ಮಾಲತಿಯ ಹಗಲಿರುಳು ಸೇವೆ, ಎಲ್ಲರ ಕಾಳಜಿಗಳನ್ನು ಮೀರಿ ಅಕ್ಟೋಬರ್ ೨೩ಕ್ಕೆ ಗೋವಿಂದ ತನ್ನ (ಜನನ ೧೮-೧೨-೧೯೩೧) ಸುದೀರ್ಘ ಇಹದ ಪಯಣ ಮುಗಿಸಿದ.
ಗೋವಿಂದ (ಅಥವಾ ನಮ್ಮ ಸೋದರರ ಮಕ್ಕಳಿಗೆಲ್ಲ ಖುಷಿ ತರುವ ಗೋವಿಂದಪ್ಪಚ್ಚಿ) ನನಗಿಂತ ಸುಮಾರು ಮೂರು ವರ್ಷಗಳಿಗೆ ಹಿರಿಯ. ಆದರೆ ಆತನ ಹಿರಿತನದ ‘ಹೇರಿಕೆ’ ನನಗೆಂದೂ ಆಗಿರಲಿಲ್ಲ. ಚಿಕ್ಕಂದಿನಿಂದಲೇ ನನಗೆ ಆತ ಮೋಜಿನ ಗೆಳೆಯ. ಮಕ್ಕಳಾಟದ ಜಗಳ, ಕೋಪಗಳ ಹೊರತಾಗಿ ನಾವು ಯಾವತ್ತೂ ಜತೆಯಾಗಿಯೇ ಬೆಳೆದವರು. ನನ್ನ ಮಟ್ಟಿಗೆ ಆತ ಸಮಾನನೆಂಬ ಭಾವನೆ ಇದ್ದರೂ ಆತನಿಗೆ ನಾನು ಸದಾ ಚಿಕ್ಕ ತಮ್ಮನೆಂಬ ವಿಪರೀತ ಕಾಳಜಿ. [ಚಿತ್ರ: ಸೋದರ, ಸೋದರಿಯರ ಪೂರ್ಣಬಲ]
ನನ್ನ ನೆನಪಿನಂತೆ, ಅದು ನಾನು ಸಂಟ್ಯಾರು ಶಾಲೆಗೆ (ಐದನೆಯ ತರಗತಿಯವರೆಗಷ್ಟೇ ಇದ್ದ ಏಕೋಪಾಧ್ಯಾಯ ದೊಡ್ಡಿ) ಸೇರುವ ದಿನ. ಬಿಗಿಯಾದ ಚಡ್ಡಿ ತೊಡಿಸಿ, ಶುಭ್ರ ಅಂಗಿಯನ್ನು ಒಳ ತುರುಕಿ, ತಲೆಗೊಂದು ಕಪ್ಪು ಟೊಪ್ಪಿ ಇಟ್ಟು, ಗೋವಿಂದ ನನ್ನ ಕೈ ಹಿಡಿದು ಬಹಳ ಸಂಭ್ರಮದಲ್ಲೇ ಶಾಲೆಗೆ ಒಯ್ದ. ಶಾಲೆಯ ಮಾಸ್ತರರು (ರಾಮಕೃಷ್ಣ ಹೊಳ್ಳರು – ಊರಿಗೆಲ್ಲ ತಿಳಿದಂತೆ ಸಣ್ಣ ಮಾಸ್ಟರು) ನಮ್ಮ ಹಿಂಗಾವಲಿಗೆ ಎಂಬಂತೆ ಇರುತ್ತಿದ್ದರು. ಶಾಲೆಯಲ್ಲಿ ಏನು ಮಾಡಬೇಕು, ಎಲ್ಲಿ ಕುಳಿತುಕೊಳ್ಳತಕ್ಕದ್ದು, ಎಂಬ ವಿವರಗಳನ್ನೆಲ್ಲ ಪಿಸುಗುಟ್ಟುತ್ತಾ ಚಿಕ್ಕ ತಮ್ಮನನ್ನು ಒಂದನೆಯ ಕ್ಲಾಸಿನಲ್ಲಿ ಸೇರಿಸಿದ ಹಿರಿತನದ ಹೆಮ್ಮೆ ಗೋವಿಂದನದು. ಆದರೂ ನನ್ನ ಮಟ್ಟಿಗೆ ಆತ ಕೇವಲ ‘ಗೋವಿಂದ’. ನಮ್ಮೊಳಗಿನ ಈ ಭಾವ ಕೊನೆಯ ದಿನಗಳ ತನಕವೂ ನಡೆದು ಬಂತು .[ಚಿತ್ರ: ರಾಮನಾಥ, ರಮಾ ಅತ್ತಿಗೆ, ಗೋವಿಂದ]
ಅಮ್ಮನಿಗೆ ಅಚ್ಚು, ಅಜ್ಜಿಗೆ ಮೆಚ್ಚು
ನಮ್ಮ ಅಜ್ಜಿ – ಅಪ್ಪನ ಅಮ್ಮ, ಎಲ್ಲರೂ ಕರೆಯುತ್ತಿದ್ದಂತೆ ಅಮ್ಮಯ್ಯನಿಗೆ ಗೋವಿಂದನೊಂದಿಗೆ ಸದಾ ಮಾತಿನ ಕಲಹ. ಅಂತಿಮ ಜಯ ಮಾತ್ರ ಅಜ್ಜಿಯದೇ. ಹಾಗೆಂದು ಕೇಳಿದರೆ ಅಜ್ಜಿಯ ಮೆಚ್ಚಿನ ಪುಳ್ಳಿ ಗೋವಿಂದನೇ. ಅಮ್ಮನಿಗೂ ಗೋವಿಂದನೆಂದರೆ ಅಚ್ಚುಮೆಚ್ಚು. ಆದರೆ ಆತನ ತಂಟೆ ತಡೆಯದಾದಾಗ ಮಾತ್ರ ಬಾಳೆರೆಂಬೆಯ ಚಡಿಯೇಟು ಬೀಳುವುದಿತ್ತು. ಆ ಕ್ಷಣಕ್ಕೆ ಆತ ಅಳುತ್ತಾ ದೂರ ಓಡಿದರೂ “ನನಗೆ ನೋವಾಗಲೇ ಇಲ್ಲ” ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದ. ಆದಿತ್ಯವಾರಗಳಂದು ಮಕ್ಕಳಿಗೆಲ್ಲ ಎಣ್ಣೆ ಮಜ್ಜನ. ಆ ದಿನಗಳಲ್ಲಿ ಅಮ್ಮ ಗೋವಿಂದರ ಜಟಾಪಟಿ ನಿಶ್ಚಿತ. ಪೆಟ್ಟು ತಿಂದ ಗೋವಿಂದನನ್ನು ಮತ್ತೆ ಅಮ್ಮಯ್ಯ ಸಾಂತ್ವನಿಸಿ, ಸ್ವತಃ ಸ್ನಾನ ಮಾಡಿಸುತ್ತಿದ್ದರು. ಎಣ್ಣೆ ಮಜ್ಜನವೇನಿದ್ದರೂ ಸಂಟ್ಯಾರ್ ಶಾಲೆಯ (೫ನೇ ತರಗತಿ) ಗಡಿ ದಾಟುವವರೆಗೆ ಮಾತ್ರ. ಅನಂತರ ‘ಪ್ರೌಢ’ ಶಾಲೆಯವರಾದ್ದರಿಂದ ಪಾರಾಗಿಬಿಟ್ಟೆವು.
ಪ್ರಾಥಮಿಕ ಶಾಲೆಯ ದಿನಗಳ ಅನಂತರ ಆತ ಪುತ್ತೂರಿನ ಬೋರ್ಡು ಹೈಸ್ಕೂಲಿಗೆ ಸೇರಿದ. ಬ್ರಾಹ್ಮಣರ ಹಾಸ್ಟೆಲ್ಲಿನಲ್ಲಿ ವಾಸ, ಎರಡು ವಾರಗಳಿಗೊಮ್ಮೆ ಮನೆಗೆ ಬರುತ್ತಿದ್ದ. ಮನೆಗೆ ಬಂದಾಗ ಹೈಸ್ಕೂಲಿನ ವೈಭವ, ಹಾಸ್ಟೆಲ್ ಜೀವನದ ಬವಣೆ ಇತ್ಯಾದಿ ವಿವರಿಸಿ ನನ್ನಲ್ಲಿ ದಿಗಿಲು ಹುಟ್ಟಿಸುತ್ತಿದ್ದ. ಎರಡೇ ವರ್ಷಗಳಲ್ಲಿ ನಾನು ಕೂಡಾ ಹೈಸ್ಕೂಲು, ಬ್ರಾಹ್ಮಣರ ಹಾಸ್ಟೆಲ್ಲಿಗೆ ಆತನನ್ನು ಹಿಂಬಾಲಿಸಲು ಅಣಿಯಾದೆ. ಇಲ್ಲಿಯೂ ಗೋವಿಂದನ ಅಕ್ಕರೆಯ ಮಾರ್ಗದರ್ಶನ ಮತ್ತು ರಕ್ಷಣೆ. ನಮ್ಮ ದೊಡ್ಡಣ್ಣನೂ (ತಿಮ್ಮಪ್ಪಯ್ಯ) ಆಗ ಹತ್ತನೇ ತರಗತಿಯಲ್ಲಿ ಕಲಿಯುತ್ತ ಹಾಸ್ಟೆಲ್ಲಿನಲ್ಲೇ ಇದ್ದ. ಆದರೆ ಆತ ಬಹಳ ಕಠಿಣ ಶಿಸ್ತಿನ ಅಸಾಮಿ. ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡಿ, ಎಲ್ಲಾ ವಿಧದ ವ್ಯಾಯಾಮ ಆಸನಗಳನ್ನು ಮಾಡುತ್ತಿದ್ದ. ಗೋವಿಂದನ ದಯೆಯಿಂದ ದೊಡ್ಡಣ್ಣನ ಶಿಸ್ತು ನನ್ನ ಮಟ್ಟಿಗೆ ರಿಯಾಯಿತಿಗೊಳಪಟ್ಟಿತ್ತು. ಗೋವಿಂದ ಮಾತ್ರ ದೊಡ್ಡಣ್ಣನ ತೃಪ್ತಿಗೆ ವ್ಯಾಯಾಮದ ಅಣಕು ಪ್ರದರ್ಶನ ಮಾಡುತ್ತಿದ್ದ. ಗೋವಿಂದ ಸಂಟ್ಯಾರು ಶಾಲೆಯಲ್ಲಿ ಸ್ವಲ್ಪ ತುಂಟನೇ ಆಗಿದ್ದ. ಮಾಸ್ಟರರ ಗದರಿಕೆ, ಬೆತ್ತದ ರುಚಿ ಅವನಿಗಾದದ್ದಿತ್ತು. ಆದರೆ ಹೈಸ್ಕೂಲಿನಲ್ಲಿ ಆತ ಎಂದೂ ತಪ್ಪಿತಸ್ತನಾಗಲಿಲ್ಲ. ಹಾಸ್ಟೆಲ್ ವಾರ್ಡನ್ ಶ್ರೀ ವಾಸುದೇವರಾಯರಿಗೆ ಗೋವಿಂದ ಮೆಚ್ಚಿನ ಬಾಲಕ. ಡ್ರಿಲ್ ಮಾಸ್ಟರು ಶ್ರೀ ರಾಮಣ್ಣ ಶೆಟ್ಟಿಯವರು ಮಾತ್ರ “ಹಾ, ಕಣ್ಣೋಜಿ” (ಪ್ರೀತಿಯಿಂದ ‘ಮೈಗಳ್ಳಾ’ ಎಂದಂತೆ) ಎಂದು ಈತನನ್ನು ಬೊಟ್ಟು ಮಾಡಿದ್ದರು.
ಗೋವಿಂದನಿಗೆ ಹಾಸ್ಟೆಲ್, ಶಾಲೆಗಳಲ್ಲಿ ಬಹುಮಂದಿ ಗೆಳೆಯರು. ಗೆಳೆತನಕ್ಕೆ ಯಾವುದೇ ಜಾತಿ, ಮತ, ತರಗತಿಯ ಬೇಧಗಳು ಇರಲಿಲ್ಲ. ದಿನವಿಡೀ ಗೆಳೆಯರೊಡನೆ ಮಾತನಾಡುತ್ತಿದ್ದ. [ಚಿತ್ರ: ಗೋವಿಂದ] ಆತನ ಗೆಳೆಯರಿಗೆ ನಾನು ‘ಗೋವಿಂದನ ತಮ್ಮ’ ಎಂದಷ್ಟೇ ಗುರುತು! ಗೋವಿಂದ ದೊಡ್ಡವನಾದ ಮೇಲೂ ಉಳಿಸಿಕೊಂಡ ಗೆಳೆತನ ಬೆಳೆಸುವ ಅಭ್ಯಾಸಕ್ಕೊಂದು ಸಣ್ಣ ಉದಾಹರಣೆ….
ಗೃಹಸ್ಥನಾಗಿದ್ದ ಗೋವಿಂದ ಅದೊಂದು ದಿನ, ಅಂದಿನ ಜನಪ್ರಿಯ ಪತ್ರಿಕೆ ‘ನವಭಾರತ’ವನ್ನು ಪುತ್ತೂರು ಪೇಟೆಯಲ್ಲಿ ಕೊಂಡು ಓದುತ್ತಿದ್ದ. ಅದರಲ್ಲಿ ಯಾವುದೋ ವಿದೇಶೀ ಗಂಡುಹೆಣ್ಣಿನ ಜೋಡಿಯ ಫೋಟೋ ಹಾಕಿ, ಅಡಿಯಲ್ಲಿ ಕೀಳಭಿರುಚಿಯ ಮಾತು ಮುದ್ರಿಸಿದ್ದರು. ಇದನ್ನು ಓದಿದ ಸ್ವಲ್ಪ ಸಮಯದಲ್ಲೇ ಅಲ್ಲೇ ಆ ಜೋಡಿ, ಬೆನ್ನ ಮೇಲೆ ಚೀಲ ಹೇರಿಕೊಂಡು ಹೋಗುತ್ತಿರುವುದು ಕಣ್ಣಿಗೆ ಬಿತ್ತು. ಅವರು ಪ್ರವಾಸಿಗಳ ಕುತೂಹಲದಲ್ಲಿ ರಸ್ತೆಯ ಎರಡೂ ಪಕ್ಕದ ಅಂಗಡಿಗಳನ್ನು ನೋಡುತ್ತ, ನಿಧಾನವಾಗಿ ಸಾಗಿದ್ದರು. ಗೋವಿಂದನಿಗೆ ಪರಮಾಶ್ಚರ್ಯ. [ಚಿತ್ರ: ಗೋವಿಂದನ ತಮ್ಮ]
ಪತ್ರಿಕೆಯ ಕುಚೇಷ್ಟೆಗೆ ಕಾರಣವಾದ ಯಾವುದೇ ಆಕ್ಷೇಪಕರ ನೋಟ ಅಥವಾ ಚರ್ಯೆ ಅವರಲ್ಲಿ ಕಾಣಲಿಲ್ಲ. ಪತ್ರಿಕೆಯ ಟೀಕೆಯ ಕುರಿತು ಗೋವಿಂದ ಮರುಗಿದ. ಒಡನೆಯೇ ಆ ಜೋಡಿಯನ್ನು ಭೇಟಿಯಾಗಿ, ಗೌರವಪೂರ್ವಕ ವಂದಿಸಿ, ರಸ್ತೆಯ ಪಕ್ಕಕ್ಕೆ ಕರೆದು ಮಾತನಾಡಿಸಿದ. ಅವರು ತಮ್ಮ ಕೈಯಲ್ಲೂ ಹಿಡಿದುಕೊಂಡಿದ್ದ ನವಭಾರತದ ಸಚಿತ್ರ ವರದಿ ತೋರಿಸಿ, ಕನ್ನಡದಲ್ಲಿ ಏನು ಬರೆದಿದ್ದಾರೆ ಎಂದು ಕೇಳಿದರು. ಗೋವಿಂದ ಸಂಕೋಚದಲ್ಲೇ ವರದಿಯ ಸಾರಾಂಶ ಹೇಳಿದ. ಅವರು ಈ ಮೊದಲೂ ಹೀಗೆ ವಿನಾಕಾರಣ ಕುಚೇಷ್ಟೆ ನಡೆಸಿದ ಪ್ರಕರಣಗಳನ್ನು ನೆನೆಸಿ ನೊಂದುಕೊಂಡರು. ಗೋವಿಂದ ಅವರನ್ನು ತನ್ನ ಮಿತಿಯಲ್ಲಿ ಸಮಾಧಾನಿಸಿದ. ಇಂಥ ಕೀಳು ಅಭಿರುಚಿಯ ವರದಿ ಮತ್ತು ಕೆಲವು ಊರ ಮಂದಿಗಳಿಂದ ಭಾರತದ ಕುರಿತು ವಿದೇಶಿಯರಿಗೆ ಮೂಡಬಹುದಾದ ಕೆಟ್ಟ ಅಭಿಪ್ರಾಯದ ಬಗ್ಗೆ ತನ್ನ ವಿಷಾದವನ್ನೂ ಹೇಳಿ, ಅವರನ್ನು ತನ್ನ ಸಂಟ್ಯಾರು ಮನೆಗೇ ಆಹ್ವಾನಿಸಿದ್ದ. ಅವರು ಒಂದು ದಿನಕ್ಕೆ ಗೋವಿಂದನ ಆತಿಥ್ಯ ಸ್ವೀಕರಿಸಿ, ತಮ್ಮ ಕೃತಜ್ಞತೆ ಹೇಳಿ ನಡಿಗೆ ಮುಂದುವರಿಸಿದ್ದರು.
ವಿದೇಶೀಯರ ಆತಿಥ್ಯದ ವಿಚಾರ ನಮ್ಮ ಅಪ್ಪನ ಮೂಲಕ ಅವರ ಆತ್ಮೀಯರಾಗಿದ್ದ ಶಿವರಾಮ ಕಾರಂತರಿಗೆ ಮುಟ್ಟಿತು. ಕಾರಂತರು ಗೋವಿಂದನನ್ನು ಕರೆದು ಎಚ್ಚರಿಕೆಯ ಮಾತು ಹೇಳಿದರು. ತಿರುಗಾಡಿ ವಿದೇಶೀಯರೆಲ್ಲ ಸಂಭಾವಿತರಿರಬೇಕಿಲ್ಲ. ಅವರಲ್ಲಿ ಹಲವು ತರದ ದುಶ್ಚಟ, ಮಾದಕ ಪದಾರ್ಥ ಸೇವನೆ ಮತ್ತು ಅದರ ಕಳ್ಳ ವ್ಯವಹಾರಗಳ ನಿಷ್ಣಾತರೂ ಇರುತ್ತಾರೆ. ಅವರ ಪೂರ್ವಾಪರ ಪರಿಚಯವಿಲ್ಲದೆ ಮನೆಗೆ ಆಹ್ವಾನಿಸುವುದು ಹಿತವಲ್ಲ, ಎಂದು ಸೌಮ್ಯವಾಗಿಯೇ ಎಚ್ಚರಿಸಿದರು. ಇದು ಸದ್ಯ ನನ್ನ ನೆನಪಿಗೆ ಬರುವ ಒಂದು ಘಟನೆ ಮಾತ್ರ. ಆದರೆ ಗೋವಿಂದನ ಸ್ವಭಾವವೇನೂ ಕಾರಂತ ನುಡಿಗಳಿಂದ ಬದಲಲಿಲ್ಲ. ಗೋವಿಂದನ ಗೆಳೆಯರೆಲ್ಲಾ ಸಂಭಾವಿತರು, ಸುಶಿಕ್ಷಿತರು, ಹಾಗೂ ಆತನ ಕುರಿತು ಬಹಳ ಗೌರವ ಮತ್ತು ಪ್ರೀತಿ ಇರುವವರು. ಇಂಥಾ ಗೆಳೆತನವೇ ಆತನ ಜೀವನೋಲ್ಲಾಸವನ್ನು ಕೊನೆಯ ದಿನದವರೆಗೂ ಉಳಿಸಿಕೊಟ್ಟಿತು.
ಔಪಚಾರಿಕ ಕಲಿಕೆಗೆ ಒಗ್ಗದಿಕೆ
ಗೋವಿಂದ ಶಾಲಾ ಕಾಲೇಜುಗಳಲ್ಲಿ ಸಾಮಾನ್ಯ ವಿದ್ಯಾರ್ಥಿ. ದಡ್ಡನಲ್ಲ, ಏಕಾಗ್ರಚಿತ್ತದಿಂದ ಪಾಠಗಳನ್ನು ಅಧ್ಯಯನಿಸಲು ಸ್ವಲ್ಪ ಆಲಸಿ. ಪಠ್ಯೇತರ ವಿಷಯದಲ್ಲಿ ವಿಪರೀತ ಆಸಕ್ತಿ ತೋರುತ್ತಿದ್ದ. ತರಗತಿಯಲ್ಲಿ ಹಿಂದೆ ಬಿದ್ದರೂ ಚರಿತ್ರೆ, ಭೂವಿಜ್ಞಾನ, ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ಸಾಕಷ್ಟು ಪ್ರಾವೀಣ್ಯ ಗಳಿಸಿದ್ದ. ನಮ್ಮ ಮನೆಯಲ್ಲಿದ್ದ ಮತ್ತು ಅಪ್ಪ ಖಾಯಂ ತರಿಸುತ್ತಿದ್ದ Modern review ಪತ್ರಿಕೆಯ ಹಳೆಯ ಸಂಚಿಕೆಗಳನ್ನು ಗೋವಿಂದ ಬಹಳ ಆಸಕ್ತಿಯಿಂದ ಓದಿ, ಹಲವಾರು ಕೌತುಕದ ವಿಚಾರಗಳನ್ನು ನಮ್ಮಲ್ಲಿ ಹಂಚಿಕೊಳ್ಳುತ್ತಿದ್ದ. ಜಯಕರ್ನಾಟಕ, ಕಾರಂತರು ಪ್ರಕಟಿಸುತ್ತಿದ್ದ ವಸಂತ ಮಾಸ ಪತ್ರಿಕೆ, ಅಪ್ಪನ ಸಂಗ್ರಹದಲ್ಲಿದ್ದ ಅಸಂಖ್ಯ ಪುಸ್ತಕಗಳನ್ನು ಬಹಳ ಕುತೂಹಲದಲ್ಲಿ ಅಧ್ಯಯನ ಮಾಡುತ್ತಿದ್ದ. ಮುಂದೆ ಈ ಓದಿನ ಹರಹು ಮತ್ತು ವೈವಿಧ್ಯ ಪರೋಕ್ಷವಾಗಿ ಆತನ ಕೈಹಿಡಿದಾಕೆಯ ಸಾಹಿತ್ಯಕೃಷಿಗೂ ಅನುಕೂಲವಾಗಿ ಒದಗಿತ್ತು.
ಪುತ್ತೂರಿನ ಹಾಸ್ಟೆಲ್ ದಿನಗಳಲ್ಲಿ ವಿದ್ಯಾರ್ಥಿಗಳು ‘ಭವನದ ಪತ್ರಿಕೆ’ ಎಂಬ ಕೈ ಬರಹದ ಮಾಸ ಪತ್ರಿಕೆ ನಡೆಸುತ್ತಿದ್ದರು. ಅದರಲ್ಲಿ ಗೋವಿಂದ ಬರೆದ ‘ಪ್ರೇತದ ಆಸೆ’ ಎಂಬ ಸಣ್ಣ ಕತೆ ಪ್ರಕಟಗೊಂಡಿತ್ತು. ಕಥಾ ಸಾರಾಂಶ ಹೀಗಿತ್ತು: ಬ್ರಿಟಿಷ್ ದುರಾಡಳಿತೆಯ ವಿರೋಧ ಜನ ದಂಗೆಯೆದ್ದಿದ್ದರು. ಅದರ ದಮನ ಕಾಲದಲ್ಲಿ ಜನನಾಯಕ ಮಡಿದಿದ್ದ. ಆತನ ಅಸ್ತಿಪಂಜರವನ್ನು ಸರಕಾರೀ ಆಸ್ಪತ್ರೆಯ ಒಂದು ಕೋಣೆಯಲ್ಲಿ, ಕನ್ನಡಿಗೂಡು ಮಾಡಿ ನೇತು ಹಾಕಿದ್ದರು. ಆ ಕೋಣೆಯನ್ನು ಓರ್ವ ಸ್ತ್ರೀರೋಗಿಗೆ ಕೊಟ್ಟಿದ್ದರು. ಆಕೆ ನಿದ್ರಿಸಿದ್ದಾಗ ನಡುರಾತ್ರಿಯಲ್ಲಿ ಅಸ್ತಿಪಂಜರದ ಪ್ರೇತಾತ್ಮ ಹೊರಬಂದು, ಅವಳಲ್ಲಿ ತನ್ನ ಪೂರ್ವವೃತ್ತಾಂತವನ್ನು ಹೇಳಿತು. ಕೊನೆಯಲ್ಲಿ, ಆ ರೋಗಿಷ್ಠೆ ಮೃತ ದಳವಾಯಿಯ ಹೆಸರನ್ನು ಕೂಗುತ್ತ ನಿದ್ರೆ ತಿಳಿದೆದ್ದಳು. ನಸುಗಾಳಿಯಲ್ಲಿ ಅಸ್ತಿಪಂಜರ ಕಟಕಟನೆ ಹಲ್ಲುಕಿಸಿದು ನಕ್ಕಂತಿತ್ತು. ಆಕೆ ಪ್ರಜ್ಞೆ ತಪ್ಪಿ ಬಿದ್ದಳು…..
ಕಥೆ ಬಹಳ ರೋಚಕವಾಗಿತ್ತು. ಕಥೆಯನ್ನು ಭವನವಾಸಿಗಳೂ ಉಪಾಧ್ಯಾಯರುಗಳೂ ಬಹಳ ಮೆಚ್ಚಿಕೊಂಡರು. ಗೋವಿಂದನ ಸಾಹಿತ್ಯಾಸಕ್ತಿ ಮತ್ತು ಸಾಧನೆಗೆ ಇದೊಂದು ಸಣ್ಣ ನಿದರ್ಶನ. ಅತಿ ವಿಷಾದಕರ ಸಂಗತಿಯೆಂದರೆ ಈ ಹವ್ಯಾಸವನ್ನು ಆತ ಮುಂದುವರಿಸಲೇ ಇಲ್ಲ. ಮುಂದುವರಿಸಿದ್ದರೆ ಆತನೊಬ್ಬ ಸೃಜನಶೀಲ ಲೇಖಕನಾಗಬಹುದಿತ್ತು.
ಸಾಹಿತ್ಯಪ್ರೇಮಿ
ನಮ್ಮ ಮನೆಯಲ್ಲಿ ಅಪ್ಪನ ಸಣ್ಣ ಪುಸ್ತಕ ಸಂಗ್ರಹವಿತ್ತು. ಆ ಕಾಲಕ್ಕೆ ಪ್ರಸಿದ್ಧವೆನಿಸಿದ್ದ ಅನೇಕ ಇಂಗ್ಲಿಷ್ ಪುಸ್ತಕಗಳನ್ನು ನಮ್ಮಪ್ಪ ಓದಿ ಹೇಳಿ, ಕನ್ನಡದಲ್ಲಿ ವಿವರಿಸುತ್ತಿದ್ದರು. ನಾವೆಲ್ಲ ಮಕ್ಕಳು ಸುತ್ತುವರಿದು ಬಹಳ ಆಸಕ್ತಿಯಿಂದ ಕೇಳುತ್ತಿದ್ದೆವು. ಚಾರ್ಲ್ಸ್ ಡಿಕನ್ಸನ ಆಲಿವರ್ ಟ್ವಿಸ್ಟ್, ಎ ಟೇಲ್ ಆಫ್ ಟೂ ಸಿಟೀಸ್, ಡೇವಿಡ್ ಕಾಪರ್ ಫೀಲ್ಡ್ ಗಳನ್ನೆಲ್ಲ ಅಪ್ಪನಿಂದಲೇ ಕೇಳಿದ್ದೆವು. ಗೋವಿಂದನಿಗೆ ಇಂಗ್ಲಿಷ್ ಸಾಹಿತ್ಯದ ಪರಿಚಯ ಮತ್ತು ಆಸಕ್ತಿ ಬೆಳೆದದ್ದು ಹೀಗೇ.
ಕನ್ನಡ ಸಾಹಿತ್ಯದಲ್ಲಿ ಅವನಿಗೂ ಮರಿಕೆ ಮನೆಯ ಎಲ್ಲರಿಗೂ ಶಿವರಾಮ ಕಾರಂತರು ಪ್ರಥಮ ಆಯ್ಕೆ. ಮರಳಿ ಮಣ್ಣಿಗೆ ಕಾದಂಬರಿಯನ್ನು ಪುತ್ತೂರ ಹಾಸ್ಟೆಲ್ ದಿನಗಳಲ್ಲೆ (ಸುಮಾರು ೧೧ರಿಂದ ೧೫ರ ಹರಯ) ಗೋವಿಂದ ಓದಿ, ಮೆಚ್ಚಿಕೊಂಡಿದ್ದ. ಹಾಸ್ಟೆಲ್ ಗ್ರಂಥಾಲಯದ ಎರವಲು ಪ್ರತಿಯನ್ನು ಆತ ಮನೆಗೊಯ್ದು ಏಕಮಾತ್ರ ಅಕ್ಕನಿಗೂ (ಉಳಿದ ಐದೂ ಮಂದಿ ತಂಗಿಯಂದಿರು) ಓದಿಸಿದ್ದ. ಶಿವರಾಮ ಕಾರಂತರ ಹೆಚ್ಚಿನ ಎಲ್ಲ ಕಾದಂಬರಿಗಳದ್ದೂ ನಿಷ್ಠಾವಂತ ಓದುಗ ಗೋವಿಂದ. ಈಚಿನ ದಿನಗಳಲ್ಲಿ, ಆತ ಇನ್ನಷ್ಟು ಹಚ್ಚಿಕೊಂಡ ಕಾದಂಬರಿಕಾರ – ಎಸ್.ಎಲ್. ಭೈರಪ್ಪ. ಭಾರತೀಯ ಸಂಸ್ಕೃತಿಯ ತಳಸ್ಪರ್ಷೀ ವಿಶ್ಲೇಷಣೆಯೇ ಆತನಿಗೆ ಭೈರಪ್ಪ ಕೃತಿಗಳ ಮೆಚ್ಚುಗೆಗೆ ಪ್ರಬಲ ಕಾರಣ. ಪತ್ರಿಕೆಗಳಲ್ಲಿ ಆತನ ಮುಖ್ಯ ಒಲವು The Hindu ಮತ್ತು ಬಲಪಂಥೀಯ ವಿಚಾರಗಳನ್ನು ಪೋಷಿಸುವ Organizer. ಮಹಾತ್ಮ ಗಾಂಧಿ, ರಾಜಗೋಪಾಲಾಚಾರಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಪಂಡಿತ್ ನೆಹರು ರಾಜಕೀಯ ವಲಯದಲ್ಲಿ ಗೋವಿಂದನಿಗೆ ಆರಾಧ್ಯರು. ವರ್ತಮಾನದ ರಾಜಕೀಯ ವಿದ್ಯಮಾನಗಳನ್ನು ಹಿಂದಿನ ದಿನಗಳೊಂದಿಗೆ ತುಲನೆ ಮಾಡಿ ಭಾರತ ದೇಶದ ಭವಿಷ್ಯದ ಕುರಿತು ಯಾವತ್ತೂ ಮರುಗುತ್ತಿದ್ದ.
ಅಪ್ಪನ ಹಳೆಯ ಪುಸ್ತಕಗಳ ಸಂಗ್ರಹದಲ್ಲಿದ್ದ ‘ಲೇ ಮಿಸರೆಬಲ್ಸ್’ (ವಿಕ್ಟರ್ ಹ್ಯೂಗೋ) ಕಾದಂಬರಿಯ ಇಂಗ್ಲಿಷ್ ಅನುವಾದದ ಎರಡನೇ ಭಾಗ ಮಾತ್ರ ಇತ್ತು. ಜೀರ್ಣಾವಸ್ಥೆಯಲ್ಲಿದ್ದ ಅದನ್ನು ಗೋವಿಂದ ಆಳವಾಗಿ ಓದಿ, ಕತೆಯನ್ನು ನಮಗೆ ಸಾಭಿನಯ ಹೇಳುತ್ತಿದ್ದ. ಆ ಕಾದಂಬರಿಯ ಪೂರ್ಣ ಆವೃತ್ತಿ ಅಂದಿನ ಮಂಗಳೂರಿನಲ್ಲೂ ಲಭ್ಯವಿರಲಿಲ್ಲ. ಅದಕ್ಕಾಗಿ ಇಂಗ್ಲೆಂಡಿನ ಪ್ರಕಾಶಕರಿಗೆ (ನೆಲ್ಸನ್ಸ್ ಕ್ಲಾಸಿಕ್ಸ್) ಗೋವಿಂದ ಪತ್ರ ಬರೆದು, ಎರಡೂ ಭಾಗಗಳನ್ನು ತರಿಸಿಕೊಂಡು, ಓದು ಪೂರ್ಣಗೊಳಿಸಿದ್ದ. ಇದು ಮುಂದೆ ನಮ್ಮಪ್ಪನಿಗೆ ಅದನ್ನು ಕನ್ನಡಕ್ಕೆ ‘ದುಃಖಾರ್ತರು’ ಎಂದೇ ಅನುವಾದಿಸಲೂ ಒದಗುವಂತಾದ್ದು ಒಂದು ವಿಶೇಷ.
[೧೯೬೦ರಲ್ಲಿ ಪುತ್ತೂರಿನ ಪೊಪ್ಯುಲರ್ ನ್ಯೂಸ್ ಏಜನ್ಸೀಸ್ ಮೊದಲ ಮುದ್ರಣ ಮಾಡಿದ ‘ದುಃಖಾರ್ತರು’ ಸುಮಾರು ಮೂರು ದಶಕಗಳ ಕಾಲ ಅಲಭ್ಯವಿತ್ತು. ಅದರ ಸಾರ್ವಕಾಲಿಕ ಕುತೂಹಲೀ ಕತೆ, ಅದಕ್ಕೂ ಮಿಗಿಲಾದ ಮೌಲ್ಯಗಳನ್ನು ಗೌರವಿಸುವಂತೆ, ಅಜ್ಜನದೇ ಅನುವಾದ ಎಂಬ ಪ್ರೀತಿಯಲ್ಲೂ ನಾನು ೨೦೦೨ರಲ್ಲಿ ಅದರ ದ್ವಿತೀಯ ಮುದ್ರಣವನ್ನು ನನದೇ ಅತ್ರಿ ಬುಕ್ ಸೆಂಟರ್ ಹೆಸರಿನಲ್ಲಿ (ಕೇವಲ ೧೦೦೦ ಪ್ರತಿ) ಪ್ರಕಟಿಸಿದೆ. ೩೨೦ ಪುಟಗಳ ಉದ್ಗ್ರಂಥಕ್ಕೆ ಕೇವಲ ಎಪ್ಪತ್ತು ರೂಪಾಯಿ ಬೆಲೆ ನಿಗದಿಸಿದೆ. ಆದರೆ ವರ್ತಮಾನದ ನಿರಭಿಮಾನಿ ಕನ್ನಡಿಗರಿಂದಾಗಿ ಇಂದಿಗೂ ನನ್ನಲ್ಲಿ ಮುನ್ನೂರಕ್ಕೂ ಮಿಕ್ಕು ದುಃಖಾರ್ತರು ಪ್ರತಿಗಳು ಆರ್ತವಾಗಿ, ಬಣ್ಣ ಕಂದುತ್ತ ಬಿದ್ದಿವೆ – ಅಶೋಕವರ್ಧನ]
ಗೋವಿಂದ, ಸರ್ ಅರ್ಥರ್ ಕಾನನ್ ಡಾಯ್ಲನ ಹೌಂಡ್ ಆಫ್ ದಿ ಬಾಸ್ಕರ್ ವಿಲ್ಲಿ, ಸೈನ್ ಆಫ್ ಫ಼ೋರ್, ಶೆರ್ಲಾಕ್ ಹೋಮ್ಸನ ಅನೇಕ ಕತೆಗಳನ್ನೂ ಮರಿಕೆ ಮನೆಯ ಅಕ್ಕಿ ಕೋಣೆಯಲ್ಲಿ, ಅಪ್ಪಟ ಕನ್ನಡದ್ದೆಂಬಂತೆ ಅಭಿನಯ ಪೂರ್ವಕ ನಮಗೆಲ್ಲ ಹೇಳುತ್ತಿದ್ದ. ಇವೆಲ್ಲ ಆತನಿನ್ನೂ ಪ್ರೌಢಶಾಲೆ ದಾಟುವ ಮೊದಲ ಸಾಹಸಗಳು. ಇಂದು ನನ್ನಲ್ಲಿ ಪುಂಖಾನುಪುಂಖವಾಗಿ ಬರುವ ಇಂಥ ನೆನಪುಗಳಷ್ಟೇ ಗೋವಿಂದನ ವೈವಿಧ್ಯಮಯ ಆಸಕ್ತಿ, ಸಾಹಿತ್ಯ ಪ್ರೀತಿಗೆ ಸಾಕ್ಷಿ.
ಅರ್ಜುನ ವಿಷಾದ ಯೋಗ: ಗೋವಿಂದನಿಗೆ ಕಾಲೇಜು ವಿದ್ಯಾಭ್ಯಾಸಕ್ಕೆ ಮನೆಯವರೆಲ್ಲರ ಒತ್ತಾಯವಿದ್ದರೂ ಅದ್ಯಾಕೋ ವಿಪರೀತ ಅಳುಕು. ದೂರದ ಮಂಗಳೂರು, ಮಲೆಯಾಳಿ ತಮಿಳು ಅಧ್ಯಾಪಕರು, ಇಂಗ್ಲಿಷಿನಲ್ಲಿ ಬೋಧನೆ, ಭವ್ಯ ಕಟ್ಟಡ ಎಲ್ಲ ನೋಡಿ ಗೋವಿಂದ ಇದು ತನ್ನಿಂದಾಗದು ಎಂದು ಮನಸ್ಸಲ್ಲೇ ನಿರ್ಧರಿಸಿದ್ದ. ಆದರೆ ಈ ಹಂತದಲ್ಲಿ ನಮ್ಮ ಭಾವ (ಮೊದಲು ಸೋದರತ್ತೆಯ ಮಗ, ಅನಂತರ ಅಕ್ಕನ ಗಂಡನೂ ಹೌದು) – ಜಿಟಿ ನಾರಾಯಣ ರಾವ್ ಪ್ರವೇಶವಾಯ್ತು.
‘ನಾರಾಯಣ’ ನಮಗೆಲ್ಲ ಮೆಚ್ಚಿನ ಮಾರ್ಗದರ್ಶಿ. ನಮ್ಮಪ್ಪನಿಗೂ ಆತನ ಮಾತು ಅಂತಿಮ. ಆತ ಗೋವಿಂದನನ್ನು ತನ್ನ ಮಂಗಳೂರು ಮನೆಗೆ ಕರೆಸಿ ಧೈರ್ಯ ತುಂಬಿದ. “ಕಾಲೇಜು ವಿದ್ಯಾಭ್ಯಾಸ ನಿನ್ನ ವ್ಯಕ್ತಿ ವಿಕಸನಕ್ಕೆ ಅವಶ್ಯ. ಅದು ಬದುಕನ್ನು ಎದುರಿಸಲು ಆತ್ಮಸ್ಥೈರ್ಯ ಕೊಡುತ್ತದೆ. ಕಾಲೇಜು ವಿದ್ಯಾಭ್ಯಾಸ ಕಷ್ಟವಲ್ಲ, ಅಧ್ಯಾಪಕರುಗಳು ನಿನ್ನ ಹಿತೈಷಿಗಳು. ಅಪ್ಪ ಉದಾರಿ, ನಿನ್ನ ವಿದ್ಯಾಭ್ಯಾಸ ಆತನಿಗೆ ಹೊರೆಯಲ್ಲ. ಮತ್ತೆಂದೂ ನಿನ್ನ ಸಂದೇಹಗಳಿಗೆ ನಾನಿದ್ದೇನಲ್ಲಾ…” ಎಂದಿತ್ಯಾದಿ ಸುಮಾರು ಒಂದು ಗಂಟೆಗೂ ಮಿಕ್ಕು ಧೈರ್ಯ ತುಂಬಿದ್ದ. ಭಾರತ ಯುದ್ಧಪೂರ್ವದಲ್ಲಿನ ಗೀತೋಪದೇಶವನ್ನು ಮನದಲ್ಲಿಟ್ಟುಕೊಂಡು, ನಾರಾಯಣ ಮುಂದಿನ ದಿನಗಳಲ್ಲಿ ಇದನ್ನು ‘ಗೋವಿಂದ ವಿಷಾದ ಯೋಗ’ ಎಂದೇ ನೆನೆಸುತ್ತಿದ್ದ. ಗೋವಿಂದ ಸಂತ ಅಲೋಶಿಯಸ್ ಕಾಲೇಜಿನ ಪದವೀಧರ. ಗೋವಿಂದನ ಕಾಲೇಜ್ ಸೇರುವಲ್ಲಿ ಸಣ್ಣಪುಟ್ಟ ಹಿಂಜರಿಕೆ ಕಾಣಿಸಿದರೂ ಕೊನೆಯಲ್ಲಿ ಆತನ ವ್ಯಕ್ತಿತ್ವಕ್ಕೊಂದು ಸ್ಥೈರ್ಯ, ಸ್ಫುಟತ್ವ ಬಂದದ್ದು ನಿಶ್ಚಯ. ಅಲ್ಲಿ ಅವನ ಸಾಹಿತ್ಯಪ್ರೇಮವೂ ಅಪಾರ ವಿಕಸಿಸಿತು. ಅದರೊಡನೆ ಆತ ತನ್ನ ಅಂತರಂಗಕ್ಕೊಪ್ಪುವ ಅಧ್ಯಾಪಕ ವೃತ್ತಿಯನ್ನು ಮಡಿಕೇರಿಯಲ್ಲಿ ಕಂಡುಕೊಂಡ. ಅಲ್ಲಿದ್ದ ದಿನಗಳಲ್ಲೇ ಮದುವೆಯೂ ಆಗಿ, ಸ್ವಂತಂತ್ರ ಮನೆಯನ್ನೂ ಮಾಡಿ, ದೃಢ ಗೃಹಸ್ಥನೂ ಆದ. ಆತ ಶಿಷ್ಯ ವೃಂದಕ್ಕೆ ಆಪ್ತ ‘ಸರ್’, ನೆರೆಕರೆಯವರಿಗೆ ಮಾತ್ರವೇನು ಬಂಧುಗಳಿಗೂ ನೆಚ್ಚಿನ ಮೇಷ್ಟ್ರು!
ನಾರಾಯಣನ ಮಾತಿನಲ್ಲಿ “ಗೋವಿಂದ ಸೌಂದರ್ಯ ಮೀಮಾಂಸೆಯಲ್ಲಿ ನಿಷ್ಣಾತ.” ಆ ಕಾರಣದಿಂದ ವಿವಾಹಯೋಗ್ಯ ಕಾಲದಲ್ಲಿ ನಮ್ಮ ಅಪ್ಪ, ಅಮ್ಮ, ಅಣ್ಣಾದಿಗಳು ಸೂಚಿಸಿದ ಯಾವುದೇ ವಧುಪ್ರಸ್ತಾವಗಳನ್ನು ಸಮ್ಮತಿಸಲಿಲ್ಲ. [ಚಿತ್ರ: ಕಲ್ಯಾಣದ ಈಚಿನ ಅಣಕ!] ಆ ಹಂತದಲ್ಲಿ ಒಂದು ಆಕಸ್ಮಿಕವೆಂಬಂತೆ, ಪುತ್ತೂರಿನ ಹೋಟೆಲ್ ಉದ್ಯಮಿ ಕೃಷ್ಣ ಭಟ್ಟರು ದೂರದ ಧಾರವಾಡದ ಸಂಬಂಧ ಒಂದನ್ನು ಪ್ರಸ್ತಾವಿಸಿ, ಹುಡುಗಿಯ ಫೋಟೋ ಕೊಟ್ಟರು. ಗೋವಿಂದ ಅದನ್ನು ಬಲು ಸಂಭ್ರಮದಿಂದಲೇ ಮನೆಯ ಎಲ್ಲರಿಗೂ ತೋರಿಸಿದ. ಅವನ ಒಪ್ಪಿಗೆಯೇ ನಮ್ಮದೂ ಎಂಬ ಭಾವ ಎಲ್ಲರದೂ ಇತ್ತು. ಆದರೆ ಆಕೆ ಅಥವಾ ಆ ಕುಟುಂಬದ ಯಾವುದೇ ಪರಿಚಯ, ಸಂಬಂಧಗಳ ಎಳೆ ತಿಳಿಯದೆ ಒಪ್ಪುವುದು ಹೇಗೆಂಬುದು ಸಮಸ್ಯೆಯಾಗುಳಿಯಿತು. ಇಲ್ಲಿ ಮತ್ತೆ ಸಂಧಾನಕ್ಕೆ ಒದಗಿದವನು (ಭಾವ) ನಾರಾಯಣ! ಗೋವಿಂದ, ನಾರಾಯಣರು (ನರ-ನಾರಾಯಣರು!) ಧಾರವಾಡಕ್ಕೆ ಹೋಗಿ ಬಂದರು. ಎಲ್ಲರೂ ಪರಸ್ಪರ ಮೆಚ್ಚಿಕೊಂಡದ್ದು, ಸಂಭ್ರಮದ ಮದುವೆಯಾದದ್ದು, ಮಡಿಕೇರಿಯಲ್ಲಿ ದಾಂಪತ್ಯದ ಮೊದಲ ದಿನಗಳನ್ನು ಕಳೆದದ್ದು, ಸಂಸಾರ ವಿಕಸನದ (ಮಗ ರಾಧಾಕೃಷ್ಣ, ಮಗಳು ಲಲಿತ) ಕಾಲಕ್ಕಾಗುವಾಗ ತನ್ನ ಪಾಲಿನ ಕೃಷಿಭೂಮಿಗೇ ಮರಳಿ ಮನೆ ಕಟ್ಟಿ ನಿಂತದ್ದು ಎಲ್ಲ ಗೋವಿಂದನ ಜೀವನದ ಉತ್ತುಂಗ ಪರ್ವಕಾಲ.[ಚಿತ್ರ: ಚೇತನ ಪೂರ್ವರೂಪ]
ಗೋವಿಂದನಿಗೆ ಎಲ್ಲ ಲಲಿತಕಲೆಗಳ ಒಲವು ಇತ್ತು; ಸಂಗೀತದ್ದು ತುಸು ಹೆಚ್ಚೇ ಇತ್ತು. ಆತನದು ರಾಗತಾಳಗಳನ್ನು ಹೆಸರಿಸುವ ಪಾಂಡಿತ್ಯ ಅಲ್ಲ, ಗಾಢವಾಗಿ ಭಾವಸಾಂತ್ವನ ಪಡೆಯುವ ರಸಿಕತೆ. ಸಿನಿ ಲೋಕದಲ್ಲಿ ಪಂಕಜ್ ಮಲ್ಲಿಕ್, ಸೈಗಲ್ ಆತನ ನೆಚ್ಚಿನ ಗಾಯಕರು. ಸೈಗಲ್ ಅಭಿನಯದ ಸ್ಟ್ರೀಟ್ ಸಿಂಗರ್ ನೋಡಲು ಗೋವಿಂದ ವಿದ್ಯಾರ್ಥಿ ದೆಸೆಯಲ್ಲೇ (ಆ ಕಾಲದಲ್ಲಿ ದೂರದ) ಮಂಗಳೂರಿಗೂ ಹೋದದ್ದಿತ್ತು. ಮರಿಕೆ ಮನೆಯಲ್ಲಿದ್ದ ಗ್ರಾಮಾಫೋನಿನಲ್ಲಿ ಪಂಕಜ್ ಮಲ್ಲಿಕನ ಗಾನದೋಸೆಗಳನ್ನು ಬಹುತೇಕ ಸವೆಸಿದ್ದು ಗೋವಿಂದನೇ. ಆತನ ಕಲಾಪ್ರೀತಿ ಏನಿದ್ದರೂ ಸ್ವಾಂತಸುಖಾಯ, ಇತರರ ಮೆಚ್ಚುಗೆ ಗಳಿಸುವ ಪ್ರದರ್ಶನದ್ದಾಗಿರಲೇ ಇಲ್ಲ.
ಪಂಕಜ್ ಮಲ್ಲಿಕ್ ನಟನೆಯ ‘ಡಾ| ಕೊಟ್ನಿಸ್’ ಗೋವಿಂದನಿಗೆ ಪುತ್ತೂರಿನ ಅರುಣ ಥಿಯೇಟರಿನಲ್ಲಿ ಮೊದಲ ಪ್ರಯತ್ನದಲ್ಲಿ ಸಿಗದಾಗ, ಪುನಃ (ಮರಿಕೆಯಿಂದ ನಾಲ್ಕು ಮೈಲು ದೂರ) ಹೋಗಿ ನೋಡಿ ಬಂದಿದ್ದ. ಸಾಲದ್ದಕ್ಕೆ, ಚೀನಾದ ರೋಗಿಗಳಿಗೆ ಧನ್ವಂತರಿಯೇ ಆಗಿ ಜೀವನ ಕಳೆದ ಕೊಟ್ನೀಸರ ಕರುಣಾಜನಕ ಜೀವನ ಕತೆಯನ್ನು ಬಹಳ ಉದ್ವೇಗಪೂರ್ಣವಾಗಿ ನಮಗೆಲ್ಲ ಹೇಳಿದ್ದ.
ಭೀಮಸೇನ ಜೋಷಿ, ಅವರ ಶಿಷ್ಯ ಮಾಧವ ಗುಡಿ ಗೋವಿಂದನಿಗೆ ಅಚ್ಚುಮೆಚ್ಚು. ಅವರ ಸಂಗೀತದ ಸೊಲ್ಲುಗಳು ಇವನ ಗುಂಜನದಲ್ಲಿ ಸದಾ ಬರುತ್ತಿತ್ತು. ಸುಬ್ಬಲಕ್ಷ್ಮಿಯೇ ಮೊದಲಾದ ಕರ್ನಾಟಕ ಸಂಗೀತಗಾರರ ಬಗ್ಗೆ ಇವನಿಗೆ ಒಲವೇನೋ ಇತ್ತು. ಆದರೆ ಪಾಂಡಿತ್ಯ ಪ್ರದರ್ಶನದ ಬಾಗು ಬಳಕುಗಳಲ್ಲಿ ಅವರು ಕಾಲವ್ಯಯ ಮಾಡುತ್ತಾರೆ ಎಂಬ ಗೊಣಗೂ ಇತ್ತು. ತಡೆಯಿಲ್ಲದೆ ಹರಿಯುವ ರಾಗಧಾರೆ, ಮಧುರ ಜೇನಿನ ಎಳೆಯ ಪ್ರಭಾವ ಕೇಳುಗನಿಗಾಗಬೇಕು ಎಂದೇ ಗೋವಿಂದ ಆಶಿಸುತ್ತಿದ್ದ. ಈ ಕಾರಣದಿಂದಲೇ ಯಕ್ಷಗಾನದಲ್ಲಿ ಆತ ಸಾಂಪ್ರದಾಯಿಕ ಭಾಗವತಿಕೆಗಿಂತಲೂ ಕಾಲಾನುಗತಿಯಲ್ಲಿ ಚಾಲ್ತಿಗೆ ಬಂದ ಭಾಗವತರನ್ನು ಮೆಚ್ಚಿಕೊಳ್ಳುತ್ತಿದ್ದ. ಕಾಳಿಂಗ ನಾವಡ ಗೋವಿಂದನಿಗೆ ಬಹಳ ಹಿಡಿಸಿದ್ದರು.[ಚಿತ್ರ: ಎ.ಪಿ. ಸುಬ್ಬಯ್ಯನವರ ವಿಶ್ವರೂಪ]
ಅರ್ಥದಾರಿಗಳಲ್ಲೂ ಪ್ರಸಿದ್ಧ ಶೇಣಿ ತರ್ಕಸರಣಿಗಿಂತ, ತೂಕದ ಮಿತ ಮಾತಿನ, ಮೆಲು ದನಿಯ ದೇರಾಜೆಯೇ ಇವನ ಆಯ್ಕೆ. ನಾವು ಪುತ್ತೂರ ಹಾಸ್ಟೆಲ್ಲಿನಲ್ಲಿದ್ದ ಕಾಲದಲ್ಲಿ ತಿರುಗಾಟದಲ್ಲಿ ಬಂದ ಜಯಕರ್ನಾಟಕ ನಾಟಕ ಮಂಡಳಿಯ ನಾಟಕ ನೋಡಲು ನನ್ನನ್ನೂ ಗೋವಿಂದ ಕರೆದುಕೊಂಡು ಹೋಗಿದ್ದ.
[ಅಶೋಕವರ್ಧನ – ನಾನಿನ್ನೂ ಶಾಲಾ ಬಾಲಕನಾಗಿದ್ದ ಕಾಲದಲ್ಲಿ, ಅದೊಂದು ವರ್ಷ ಪುತ್ತೂರ ಜಾತ್ರೆಗೆ ಹಿರಣ್ಣಯ್ಯ ಮಿತ್ರ ಮಂಡಳಿ ಬಂದು ಬೀಡುಬಿಟ್ಟಿತ್ತು. ನನಗೆ ಅವರ ನಾಟಕ ಸರಣಿ – ಲಂಚಾವತಾರ, ಭ್ರಷ್ಟಾಚಾರ, ಅನಾಚಾರ, ಮಕ್ಮಲ್ ಟೋಪಿ…..ಗಳನ್ನು ತೋರಿದವನೇ ಗೋವಿಂದ. ಮಡಿಕೇರಿ ಶಾಲಾ ವಾರ್ಷಿಕೋತ್ಸವದ ಚೂರುಪಾರು ನಾಟಕ ನೋಡಿದ್ದ ನನಗೆ ಮೊದಲ ಬಾರಿಗೆ “ಅಬ್ಬಬ್ಬಾ! ನಾಟಕಗಳೆಂದರೆ ಹೀಗೂ ಉಂಟು” ಎಂದು ಅನ್ನಿಸಿತ್ತು.] [ಚಿತ್ರ: ಅಪ್ಪನ ಚತುರ್ಬಲ]
ಕೃಷಿಕನಾಗಿ ಗೋವಿಂದ
ಭೂವ್ಯವಸಾಯದಲ್ಲಿ ನಮ್ಮ ದೊಡ್ಡಣ್ಣನಿಗಿದ್ದ ಆಸಕ್ತಿ ಗೋವಿಂದನಿಗಿರಲಿಲ್ಲ. ದೊಡ್ಡಣ್ಣನಂತೆ ದೈಹಿಕ ಶ್ರಮವೂ ಈತನಿಗಸಾಧ್ಯವಿತ್ತು. ಪಶುಸಂಗೋಪನೆಯಲ್ಲಿ ಮನೆಗೆ ಬೇಕಾದ ಹಾಲು, ತೋಟಕ್ಕೆ ಬೇಕಾದ ಗೊಬ್ಬರದ ಮಟ್ಟಿಗೆ ಶ್ರದ್ಧೆಯಿಂದಲೇ ಕೆಲಸ ನಡೆಸಿದ್ದ. ಮತ್ತೆ ಕಾಲದ ಅಗತ್ಯಗಳಿಗೆ ತಕ್ಕಂತೆ ಇವುಗಳಲ್ಲೆಲ್ಲ ಮಾಲತಿ, ರಾಧಾಕೃಷ್ಣರ ಸಹಕಾರ ಈತನಿಗೆ ಧಾರಾಳ ಒದಗಿದೆ.
ಗೋವಿಂದ ಸಂಟ್ಯಾರು ಮನೆಯಲ್ಲಿ (ಚೇತನ) ನೆಲೆಸಿದ ಸ್ವಲ್ಪ ಕಾಲದಲ್ಲೇ ಅವನನ್ನು ಅವ್ಯಕ್ತ ಕಾಯಿಲೆಯೊಂದು ಅಮರಿಕೊಂಡಿತ್ತು. ಅನಿಯತವಾಗಿ ಕಾಣಿಸಿಕೊಳ್ಳುತ್ತಿದ್ದ ಎದೆಗಳ ಸ್ನಾಯು ಸೆಳೆತ ಈತನನ್ನು ಕೆಲವು ವರ್ಷಗಳ ಕಾಲ ಹಿಂಡಿ ಹಿಪ್ಪೆ ಮಾಡಿತು. ಅದು ಯಾವುದೇ ಔಷಧೋಪಚಾರಗಳಿಗೆ (ಅಲೋಪಥಿ, ಆಯುರ್ವೇದ, ಹೋಮಿಯೋಪಥಿ, ಮಾಲೀಶು ಇತ್ಯಾದಿ) ದಕ್ಕದೆ, ಜಗ್ಗದೆ ಸತಾಯಿಸಿತ್ತು. ಕೊನೆಗೆ ಅದರಿಂದ ಆತ ಪಾರಾದದ್ದು ಮಂತ್ರಾಲಯದ ರಾಘವೇಂದ್ರರ ಮೇಲಿನ ಭಕ್ತಿಯಿಂದ. ಆ ಕಾಲದಲ್ಲಿ ವ್ಯರ್ಥ ಚಿಕಿತ್ಸೆಗಳಿಗೆ ಮಾಡಿದ ಆರ್ಥಿಕ ಹೊರೆ ತಗ್ಗಿಸಿಕೊಳ್ಳಲು, ಗೋವಿಂದ ತನ್ನ ಭೂಮಿಯ ಒಂದು ಸಣ್ಣ ಪಾಲನ್ನೇ ಮಾರಬೇಕಾಯ್ತು. [ಚಿತ್ರ: ಗೋವಿಂದ ಅಪರಕರ್ಮ]
ಮುಂದುವರಿದು ಅರವತ್ತರ ಹರಯದಲ್ಲೂ ಆತನಿಗೆ ಇನ್ನೊಂದೇ ದೈಹಿಕ ಸಮಸ್ಯೆ ಬಲು ದೀರ್ಘ ಕಾಲ ಕಾಡಿತು. ಆ ಉದ್ದಕ್ಕೆ ಚಿಕಿತ್ಸೆ, ದೈನಂದಿನ ವಹಿವಾಟುಗಳ ನಿರ್ವಹಣೆಗಳಿಗೆಲ್ಲ ಆತ ಮತ್ತೆ ಮಂತ್ರಾಲಯದ ದೈವ ಕಾರುಣ್ಯವನ್ನೇ ನೆಚ್ಚಿ ತೃಪ್ತಿ ಕಂಡುಕೊಳ್ಳುತ್ತಿದ್ದ. ಈ ಎಲ್ಲ ಸಂಕಟಗಳ ನಡುವೆಯೂ ಹೊರಗಿನವರಿಗೆ ಗೋವಿಂದನ ಮುಗುಳು ನಗೆಯ ಸ್ವಾಗತ, ಆದರೋಪಚಾರಗಳು ಎಂದೂ ಕಡಿಮೆಯಾದದ್ದಿಲ್ಲ. ಅದರಲ್ಲಿ ಮುಖ್ಯವಾಗಿ ಮಾಲತಿ, ಮತ್ತೆ ಮನೆಯವರೆಲ್ಲರ ಸಹಕಾರ ಅಪಾರ. ಲೋಕ ಕಂಡಂತೆ, ಗೋವಿಂದನ ಕೌಟುಂಬಿಕ ಜೀವನ ಸಂತೋಷ, ಸಂತುಷ್ಟಿಯದ್ದೇ ಆಗಿತ್ತು.
ನನಗೆ ಜನ್ಮ, ಪುನರ್ಜನ್ಮಗಳಲ್ಲಿ ನಂಬಿಕೆಯಿದೆ. ಇಂಗ್ಲಿಷ್ ಕವಿ ವಿಲಿಯಂ ವರ್ಡ್ಸ್ ವರ್ತ್ ತನ್ನ ಇಮ್ಮಾರ್ಟಾಲಿಟಿ ಆಫ್ ಹ್ಯೂಮನ್ ಸೋಲ್ ಪದ್ಯದಲ್ಲಿ ಹೇಳಿರುವಂತೆ, ನಾವು ದೇವರ ಮನೆಯಿಂದ ಪವಿತ್ರಾತ್ಮರಾಗಿ ಮನುಷ್ಯ ಲೋಕಕ್ಕೆ ಬಂದೆವು. ದೇವರು ನೀಡಿದ ಅವಧಿ ಕಳೆಯಲು ದೇವರ ಸನ್ನಿಧಿಗೆ ಮರುಪ್ರಯಾಣ ಮಾಡುತ್ತೇವೆ. ಅದರಂತೆ ಗೋವಿಂದ ದೇವರ ಮನೆಗೇ ಹಿಂದಿರುಗಿದ್ದಾನೆ ಎಂದೇ ನನ್ನ ದೃಢ ನಂಬಿಕೆ ಮತ್ತು ಆಶಯ.
ಗೋವಿಂದಾಯ ನಮಃಸಂತೋಷವಾಯಿತು.ಪಂಡಿತಾರಾಧ್ಯ ಮೈಸೂರು
best in the series.