(ಬಾಗಲೋಡಿ ವಾಙ್ಮಯ ಸಮೀಕ್ಷೆ ೧)

(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ – ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ – ಜಿ.ಟಿ. ನಾರಾಯಣ ರಾವ್) 
(ಭಾಗ ೧೨)

– ಕೆ. ಮಹಾಲಿಂಗ ಭಟ್

ಬಾಗಲೋಡಿ ದೇವರಾಯರಿಗೂ ನನಗೂ ಇರುವ ನಂಟು ಮೂರು ಅವಿಭಾಜ್ಯ ಗಂಟುಗಳಿಂದಾದುದು: ನಾವಿಬ್ಬರೂ ಕರಾವಳಿಯ ಶಿಶುಗಳು, ಸಾಹಿತ್ಯಾರಾಧಕರು ಮತ್ತು ವೈಯಕ್ತಿಕವಾಗಿ ಅವರು ಅಂದು (೧೯೪೨-೪೪) ನಡೆದಾಡಿ ಬೆಳಗಿದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂದು (೨೦೦೩) ನಾನೊಬ್ಬ ಯುವ ಕನ್ನಡ ಉಪನ್ಯಾಸಕ. ಅವರನ್ನು ನಾನು ಕಂಡಿಲ್ಲ. ಪ್ರಿಸಮ್ ಸಂಸ್ಥೆ ಪ್ರಕಟಿಸಿರುವ (೨೦೦೦) ಬಾಗಲೋಡಿ ದೇವರಾಯ – ಸಮಗ್ರ ಕತೆಗಳು ಎಂಬ ಕೃತಿಯಲ್ಲಿ ಪ್ರಕಟವಾಗಿರುವ ಅವರ ಚಿಂತನೆಯ ಹೊಳಹು ಸೆಳವುಗಳನ್ನು ಆಧರಿಸಿ ಈ ಸಮೀಕ್ಷೆ ಮಾಡಿದ್ದೇನೆ. ಸಮಗ್ರ ಕತೆಗಳು ಸಂಕಲನದಲ್ಲಿ ಬಾಗಲೋಡಿಯವರ ೨೬ ಕತೆಗಳಿವೆ. ಅವರ ಕತೆಗಾರಿಕೆ ತಂತ್ರ ಹಿಂದಿನ ತಲೆಮಾರಿನದು – ಉದಾಹರಣೆಗೆ ಮಾಸ್ತಿಯವರಲ್ಲಿ ಪ್ರಕಟವಾಗುವ ಅನನ್ಯತೆ. ಆದರೆ ಕಲೆಗಾರಿಕೆ ಇಪ್ಪತ್ತನೆಯ ಶತಮಾನದ ಸೂಕ್ಷ್ಮತೆಗಳಿಗೆ ವಿಶಿಷ್ಟ ಸ್ಪಂದನ.

ಬಾಗಲೋಡಿ ಛಾಪು: ಕೇವಲ ೨೦ ವರ್ಷ ಪ್ರಾಯದ ವಿದ್ಯಾರ್ಥಿಯೊಬ್ಬ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಆ ಮಗ್ಗುಲು ಮಗುಚುತ್ತಿದ್ದ ಕಾಲಖಂಡದಲ್ಲಿ ತನ್ನೂರು ಕಟ್ಟಿಕೊಟ್ಟ ಬದುಕನ್ನು ಜಾಣ್ಮೆಯಿಂದ ನೇಯ್ದು ಕತೆ ಮಾಡುತ್ತಿದ್ದ. ಮಂಗಳೂರಿನ ಬಳಿಯ ಕಿನ್ನಿಕಂಬಳವೆಂಬ ಹಳ್ಳಿಯಿಂದ ಬಂದಿದ್ದ ಆ ಯುವಕನ ಮೊದಲ ಕತೆಯೇ ಶುದ್ಧ ಫಟಿಂಗ. ಇದು ತನ್ನ ಕಾಲದಲ್ಲಿ ಕೈಗೆ ಸಿಕ್ಕಿದ್ದನ್ನಷ್ಟು ಬಾಚಿ ಓದಿಕೊಂಡಿದ್ದರ ಫಲವಿರಬೇಕು – ಈಗಾಗಲೇ ಹತ್ತು ಹಲವು ಗೀಚಿ ಬಿಸಾಕಿದ್ದ ತಯಾರಿಯೂ ಆಗಿದ್ದಿರಬೇಕು! ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ತಮ್ಮ ಜೀವನ ಪತ್ರಿಕೆಯಲ್ಲಿ ಇದನ್ನು ಪ್ರಕಟಿಸಿದ್ದು ಮಾತ್ರವಲ್ಲ, ಹುಚ್ಚ ಮುನಸೀಫ ಮತ್ತು ಇತರ ಕತೆಗಳು ಎಂಬ ಸಂಕಲನವನ್ನು ಎರಡು ವರ್ಷಗಳ ಬಳಿಕ ತಮ್ಮ ಜೀವನ ಕಾರ್ಯಾಲಯದಿಂದ ಪ್ರಕಟಿಸುವುದಕ್ಕೂ (೧೯೪೯) ಉತ್ಸಾಹ ತೋರಿದರು. ನವೋದಯ ಸಾಹಿತ್ಯದ ತೆರೆಯ ಮೇಲೆ ಪ್ರಗತಿಶೀಲ ಸಾಹಿತ್ಯದ ಚಿತ್ರ ಅರಳತೊಡಗಿದ ಕಾಲವದು. ಕತೆಗಾರನ ಇಪ್ಪತ್ತೆರಡನೆಯ ಎಳೆ ವರ್ಷಕ್ಕೇ, ತನ್ನ ಕಾಲದ ದೊಡ್ಡ ಸಾಹಿತಿ ಮಾಸ್ತಿಯವರ ಮುನ್ನುಡಿಯ ಆಸ್ತಿ, ಜೊತೆಗೆ ಬಂದ ಈ ಸಂಕಲನದ ಕತೆಗಳನ್ನು ಮುಂದಿನ ಮೂವತ್ತು ವರ್ಷಗಳ ಬಳಿಕವೂ ದೇವರಾಯರಿಗೆ ಮೀರಲಾಗಲಿಲ್ಲ ಎಂಬುದು ಮಾತ್ರ ಒಂದು ವಿಚಿತ್ರ ವಿಸ್ಮಯ!

ಬಾಗಲೋಡಿಯವರನ್ನು ‘ಬೇಡಿ’ ತಾನು ಕತೆ ಪಡೆದೆನೆಂದು ಮಾಸ್ತಿಯವರು ತಮ್ಮ ಸಜ್ಜನಿಕೆಗೆ ಸಹಜವಾಗಿ ಹೇಳಿಕೊಳ್ಳುತ್ತಾರೆ. ಜೊತೆ ಜೊತೆಗೇ ಅವರು ದೇವರಾಯರಲ್ಲಿ, “ಅವರದೇ ಆದ ಒಂದು ವಸ್ತು ವೈಶಿಷ್ಟ್ಯ, ಕಥನ ಪದ್ಧತಿ, ಉಚಿತ ಶೈಲಿ, ರಸಸಿದ್ಧಿಗಳಿಂದ ನಿರಾಯಾಸವಾಗಿ ಒಂದು ಮೇಲ್ಮಟ್ಟ ಮುಟ್ಟಿದ” ಸ್ಥಿತಿಯನ್ನೂ ಗುರುತಿಸುತ್ತಾರೆ. ಇದು ಕೇವಲ ಕಾಟಾಚಾರದ ಹೊಗಳಿಕೆ ಎನಿಸಿದಂತೆ ಇದಕ್ಕೆ ಬಾಗಲೋಡಿಯೊಳಗಿನ ಕತೆಗಾರನಲ್ಲಿದ್ದ “ಜೀವನವನ್ನು ಒಲಿದ ಕಣ್ಣಿಂದ ನೋಡಿ ಬಗೆಯರಳಿ ಗ್ರಹಿಸಿರುವುದು. ಆ ಒಲುಮೆಯ ಫಲವಾಗಿ ಇವರಿಗೆ ಆ ನಾಡ ನಡೆನುಡಿಯ ಸೊಗಸಿನ ಗುಟ್ಟು ತಾನಾಗಿ ಕೈ ಸೇರಿದ್ದ”ನ್ನೂ ಗಮನಿಸುತ್ತಾರೆ. ದೇವರಾಯರ ಕತೆಗಳ ದೇಸಿತನವನ್ನು, “ಇಲ್ಲಿಯ ವ್ಯಕ್ತಿಗಳು ಮಂಗಳೂರಿನ ಸುತ್ತಿನ ಕನ್ನಡ ಭೂಮಿಯಲ್ಲಿ ಎಲ್ಲಿಯಾದರೂ ಕಣ್ಣಿಗೆ ಕಾಣಬಹುದಾದಂಥವರು; ಇಲ್ಲಿಯ ಸನ್ನಿವೇಶಗಳು ನೇರವಾಗಿ ಅಲ್ಲಿಯ ಜೀವನದಿಂದ ಮೂಡಿರುವುವು” ಎಂಬುದಾಗಿ ವಿವರಿಸುತ್ತಾರೆ. ಕರಾವಳಿಯ ವಿವರಗಳೇ ಕತೆಯ ಶ್ರೇಷ್ಠತೆಯಾಗುವುದಿಲ್ಲ. “ಬಾಗಲೋಡಿಯವರು ತಾವು ಕಂಡ ಜೀವನದ ಒಳಗನ್ನು ನೋಡಿದ್ದಾರೆ, ಗ್ರಹಿಸಿದ್ದಾರೆ. ಆದ್ದರಿಂದ ಪ್ರಾಂತ ಜೀವನದ ಈ ಚಿತ್ರಗಳು ವಿಶ್ವಜೀವನದ ಚಿತ್ರಗಳೂ ಆಗಿವೆ”, ಎಂಬ ವಿಮರ್ಶೆಯ ಎಚ್ಚರವನ್ನು ಮಾಸ್ತಿಯವರು ಮರೆತಿಲ್ಲ. ತುಳುಮಣ್ಣಿನ ಮೂರಿ ಸೊಗಡುಗಳನ್ನಿರಿಸಿಕೊಂಡೇ ಮನುಷ್ಯನ ಅಂತರಂಗದ ವಿಚಿತ್ರ ವಾಸನೆಗಳನ್ನು ಹುಡುಕಾಡಿದ ಕತೆಗಾರನ ವ್ಯಕ್ತಿತ್ವವನ್ನು ಮಾಸ್ತಿ ಸೂಕ್ಷ್ಮವಾಗಿ ಕಂಡಿದ್ದಾರೆ; ಅದು ನಮ್ಮ ಈ ಓದಿನ ಜೊತೆಗಿನ ಒಂದು ಬೆಚ್ಚಗಿನ ಎಚ್ಚರವೂ ಆಗಿರಲಿ.

ಮಾಸ್ತಿ ಮೆಚ್ಚಿದ ಕತೆ

ಹುಚ್ಚ ಮುನಸೀಫ ಮತ್ತು ಇತರ ಕತೆಗಳು ಸಂಕಲನಕ್ಕೆ ಮೊದಲ ಕತೆಯ ಶೀರ್ಷಿಕೆಯನ್ನೇ ಜೋಡಿಸಿರುವುದು ಉದ್ದೇಶವಿಲ್ಲದ ಕ್ರಿಯೆಯಲ್ಲ; ಆ ಕತೆಯ ಜೀವಂತಿಕೆ ಲೇಖಕನಿಗೆ ಎಲ್ಲೋ ಒಂದಿಷ್ಟು ಹೆಚ್ಚು ಪ್ರಿಯವೆನಿಸಿರಬೇಕು. ಘಟ್ಟದ ಮೇಲಿನ ದಾರಿದ್ರ್ಯ ಪೀಡಿತ ಗೋಪಾಲಕರ ಬಳಗದಿಂದ ತುಳುನಾಡಿನ ಬಿಲ್ಲವ ಕುಟುಂಬ ಮಗುವೊಂದನ್ನು ಪಡೆದು ಬೆಳೆಸಿ ಮುನಸೀಫನನ್ನಾಗಿ ಮಾಡಿದರೂ ಆ ಜೀವದ ಅಂತರಂಗದಲ್ಲಿ ಪ್ರಾಣಿಜೀವಗಳ ಒಡನಾಟದ ಸೆಳೆತ ಕೊನೆಯುಸಿರಿನವರೆಗೂ ಹಾಸುಹೊಕ್ಕಾಗಿ ಹೋಯಿತು. ಬಿಡಲಾರದ ನೆರಳಿನಂತೆ ಹಿಂಬಾಲಿಸಿದ ಈ ನೆನಪು ಅವನ ವ್ಯಕ್ತಿತ್ವದ ಮೂಲಗುಣವಾಯಿತು. ಮುನಸೀಫನ ಬಾಳಿನ ವಿನ್ಯಾಸದ ಒಂದು ನಿಗೂಢ ಮೂಲವೇ ಈ ಗೋವುಗಳ ಜೊತೆಗಿನ ಜೀವನದ ವಾಸನೆಯಾಯಿತು. ಇದರ ವಿವರವನ್ನು ಆತ ಕೋರ್ಟಿಗೇ ಪ್ರಾಣಿಗಳನ್ನು ಕರೆಸಿ ಮಾತಾಡಿಸಿ ಸಾಕ್ಷ್ಯ ಪಡೆಯುವಲ್ಲಿ, ಜಾನುವಾರುಗಳ ಜೊತೆಗಾರಿಕೆ ಸಂಸಾರವನ್ನು ಕೆಡೆಸಿಬಿಟ್ಟರೂ ಅದು ಅವನ ವ್ಯಕ್ತಿತ್ವವನ್ನು ಆರ್ದ್ರವಾಗಿಯೇ ಉಳಿಸಿದ್ದರಲ್ಲಿ, ಕತೆ ಕೊಡುತ್ತ ಹೋಗುತ್ತದೆ. ಇಲ್ಲೊಂದು ವಿಶೇಷವನ್ನು ಗಮನಿಸಬೇಕು – ದೇವರಾಯರ ಕತೆಗಳು ಒಂದಿಲ್ಲೊಂದು ಬಗೆಯಲ್ಲಿ ಮಾನವನ ವ್ಯಕ್ತಿತ್ವಕ್ಕಿರುವ ಈ ‘ಮೂಲವಾಸನೆ’ಯ ನಿಗೂಢತೆಯನ್ನು ಹುಡುಕಿ ಹೋಗುತ್ತವೆ. ಈ ಮೂಲವಾಸನೆಯನ್ನು ಅಂತರಂಗ ಆವಾಹಿಸಿಕೊಳ್ಳುವ ರೀತಿಯನ್ನು ಕಾಣುವುದು; ಇದಕ್ಕೆ ಸಮಾಜ ತೋರಿಸುವ ಪ್ರತಿಕ್ರಿಯೆಗಳನ್ನು ಪೋಣಿಸುವುದು; ಇದರಲ್ಲಿ ದೇವರಾಯರ ಉದ್ದೇಶ ಒಂದು ವಿಶಿಷ್ಟ ಅಂತರಂಗವನ್ನೂ ಅದರ ಸೂಕ್ಷ್ಮಗಳನ್ನೂ ಬಗೆಯುವುದಾಗಿದೆ. ಎಂದೇ ಸಮಾಜದಲ್ಲಿ ಸಹಜವಾಗಿಯೇ ಇರುವ ವೈರುಧ್ಯಗಳು ಕೆರಳಿಸುವ ಅಪಾರ್ಥಗಳನ್ನು ತಮ್ಮ ವ್ಯಂಗ್ಯ ನೋಟದೊಳಗೆ ಕಂಡರಿಸುವುದೇ ದೇವರಾಯರ ಕತೆಗಳ ಭದ್ರ ನೆಲೆಯಾಗುತ್ತದೆ. ಮಾನವನ ಅಂತರಂಗ ಹಾಸುಹೊಕ್ಕಾಗಿಸಿ ರೂಢಿಸಿಕೊಂಡಿರುವ ‘ವಾಸನೆ’ಗಳ ಸ್ಥಿರ ನೆಲೆಗಳನ್ನು ಕಂಡ ವಿಸ್ಮಯವೇ ಕತೆಗಳ ಶೋಧದ ದಾರಿಯೂ ಆದಂತಿದೆ.

ಉದಾಹರಣೆಗೆ ‘ದನಗಳ ಒಲವಿನ ವಾಸನೆ’ ಮುನಸೀಫನನ್ನು ಸಮಾಜದ ಪಾಲಿಗೆ ಹುಚ್ಚನನ್ನಾಗಿಸಿದರೆ, ಪತ್ನಿಗೆ ಧೂರ್ತನನ್ನಾಗಿಸುತ್ತದೆ. ಇಲ್ಲಿ ನವ್ಯ ಜಾಯಮಾನದ ಮೊಗ್ಗುಗಳನ್ನು ಗುರುತಿಸಬಹುದು. ಈ ಶೋಧದಲ್ಲಿ ಬಾಳನ್ನು ಬಗೆಯುತ್ತ ಅಂತಿಮವಾಗಿ ಕತೆ ಭದ್ರ ಬೆರಗಲ್ಲೇ ನಿಲ್ಲುವುದರಿಂದ ನವೋದಯದ ಹಳೆಯ ಬೇರುಗಳೂ ಇವೆ. ಸಮಾಜದ ಆಷಾಢಭೂತಿತ್ವವನ್ನು ಆಸ್ಫೋಟಿಸುವಲ್ಲಿ ಪರಿಣಾಮಕಾರೀ ವ್ಯಂಗ್ಯ ಬಳಸುವುದು ಕಟ್ಟು ಪಾಡುಗಳನ್ನು ಮೀರುವ ಹುಂಬತನದಂತೆ ಕಂಡರೂ, ಆಳದಲ್ಲಿ ಪಾತ್ರಗಳ ಎದೆಗಾರಿಕೆ ಆಗುವ ಮಾನವೀಯ ಕಾಳಜಿ, ದೇವರಾಯರಲ್ಲಿ ಪ್ರಗತಿಶೀಲರನ್ನು ನೆನಪಿಸಬಲ್ಲದು. ಹೀಗೆ ದೇಶದ ಸಂಕ್ರಮಣ ಕಾಲಘಟ್ಟದಲ್ಲಿ ಬರೆಯತೊಡಗಿದ ಅವರಲ್ಲಿ ಕನ್ನಡ ಸಾಹಿತ್ಯ ಚಹರೆಗಳ ಸಂಕ್ರಮಣ ಸ್ಥಿತಿಗಳೂ ಕಾಣುವುದು ಒಂದು ವಿಶೇಷವೆನಿಸುತ್ತದೆ.

ಸಮುದಾಯವೋ ಅದರ ಸಾಮೂಹಿಕ ನಾಡಿಯೋ ಬಾಗಲೋಡಿಯವರ ಕತೆಗಳ ಪ್ರಧಾನ ಆಸಕ್ತಿಯಲ್ಲ. ಹಾಗೆಂದು ಸಮುದಾಯ ಕಟ್ಟಿಕೊಟ್ಟ ಸಂಸ್ಕೃತಿಯೊಂದರ ‘ಕ್ಯಾನ್ವಾಸ್’ಅನ್ನು ಅವರು ಕತೆಯಲ್ಲಿ ಇರಿಸಿಕೊಂಡವರೇ. ಹುಚ್ಚ ಮುನಸೀಫ ಕತೆಯ ನಿರೂಪಕ ಮತ್ತೆ ಮತ್ತೆ ತಾನೋರ್ವ ತುಳುನಾಡಿಗ ಎಂದು ಹೇಳಿ ತನ್ನ ಭಿನ್ನ ಬಗೆಯ ಕನ್ನಡವನ್ನೂ ಸಾಂಸ್ಕೃತಿಕ ಪ್ರತ್ಯೇಕತೆಯನ್ನೂ ಗುರುತಿಸಿಕೊಳ್ಳುತ್ತಾನೆ. ತುಳುನಾಡಿನ ಜಾನುವಾರು ಜಾತ್ರೆಯನ್ನೂ ಇಲ್ಲಿಗೆ ಇಳಿದು ಬಂದ ಘಟ್ಟದವರನ್ನೂ ಒಳಗೊಂಡೇ ಕತೆ ಬೆಳೆಸುತ್ತಾನೆ. ತುಳುನಾಡಿನ ಜಾತಿವ್ಯವಸ್ಥೆಯ ವಿವರಗಳು ಇಲ್ಲಿ ಸಹ ಜತೆಗಾಗಿ ಕೂಡಿಕೆಯಾಗಿವೆ.

ಕೆಲವು ಕತೆಗಳಲ್ಲಿ ತುಳುನಾಡಿನ ಗೇಣಿ ಪದ್ಧತಿಯ ವಿವರ ಒಂದು ಅನುಕೂಲವಾಗಿ ಬರುತ್ತದೆ. ತುಳುನಾಡಿನ ನಿರೂಪಕ ನೇರವಾಗಿ ಅಥವಾ ಸುಪ್ತವಾಗಿ ಅವರ ಕತೆಗಳಲ್ಲಿ ಇದ್ದಾನೆ. ಆದರೆ ಕರಾವಳಿ ಸಂಸ್ಕೃತಿ ಅದ್ದಿ ತೆಗೆದ ಸ್ಥಿತಿಯಲ್ಲಿ ಕಣ್ಣಿಗೆ ಕೋರೈಸುವಂತೆ ಕತೆಗಳಲ್ಲಿ ಇಲ್ಲ. ಅದೊಂದು ‘ಅಡುಗೆಮನೆ’ ಮಾತ್ರ; ಮೂಗಿಗೆ ಹೊಡೆಯುವುದು ಮಾನವ ವ್ಯಕ್ತಿತ್ವದ ಒಳಮೂರಿಗಳೇ. ಕರಾವಳಿ ಸಂಸ್ಕೃತಿ-ಸಂಬಂಧೀ ಅಡಿ ಟಿಪ್ಪಣಿಗಳಿಗೆ, ವಿಶಿಷ್ಟ ಭಾಷಾ ಬಳಕೆಯ ವಿವರಗಳಿಗೆ ಕತೆಗಳಲ್ಲಿ ಅಡ್ಡಪಂಕ್ತಿಗಳಿವೆ. ಒಟ್ಟು ಕಟ್ಟಿಕೊಳ್ಳುವ ಭಾಷೆ, ಅದರ ನುಡಿಗಟ್ಟು, ಹಾಗೂ ಕತೆಯಲ್ಲಿ ನಡೆದಾಡುವ ಪಾತ್ರಗಳು – ಇವುಗಳಿಗೆ ಹೊರ ಚಹರೆಯಲ್ಲಿ ತುಳುನಾಡೇ ಅಸ್ತಿತ್ವವಾಗುವಷ್ಟರ ಮಟ್ಟಿಗೆ ಮಾತ್ರ ಕತೆಗಳು ಜಾಗರೂಕವಾಗಿವೆ.

ಅಂಗಿ-ಅಂತರಂಗ

ದೇವರಾಯರ ಕತೆಗಳಲ್ಲಿ ಸಂಪ್ರದಾಯದ ಕಥನ ಕ್ರಮ ಕೇವಲ ಹೊರಗಿನ ಅಂಗಿ. ಅದು ವರ್ತಮಾನದ ನಿಗಿನಿಗಿ ವಿಮರ್ಶೆಯಾಗುವುದು ಕರ್ತವ್ಯಪ್ರಜ್ಞೆಯ ಆಧುನಿಕ ವಿಚಕ್ಷಣ ಗುಣದಿಂದಾಗಿ, ಮುನಸೀಫನ ‘ಹುಚ್ಚು’ ವರ್ತನೆಯಲ್ಲಿ ಬ್ರಿಟಿಷರು ಕೊಟ್ಟ ಆಧುನಿಕ ನ್ಯಾಯಾಲಯಗಳ ಮಿತಿಗಳು ಸ್ಪಷ್ಟವಾಗಿ ಕಾಣುತ್ತವೆ. ಮುನಸೀಫನಿಗೆ ದನಗಳ ಕೆಲಸದ ಬೆಳ್ಳಿ ಜೊತೆ ಸಂಬಂಧವಿರಬೇಕೆಂದು ಭ್ರಮಿಸುವ ಹೆಂಡತಿ ಮತ್ತು ಒಡೆದು ಹೋದ ಅವರ ಸಂಸಾರದ ಮೇಲೆ ಕತೆ ಕಟ್ಟುವ ವಿವರಗಳು ೨೦ನೆಯ ಶತಮಾನದ ತಲ್ಲಣಗಳಲ್ಲಿ ಬೇರು ಬಿಟ್ಟಿರುವುದರ ಫಲಗಳು.

ಶುದ್ಧ ಫಟಿಂಗ ಕತೆಯಲ್ಲಿ ಮಾನವನ ಒಳವಾಸನೆಯನ್ನು ಸುತ್ತಲಿನವರು ಗ್ರಹಿಸುವಲ್ಲಿ ಸಂಭವಿಸುವ ಎಡವಟ್ಟುಗಳಿವೆ. ಹುಸೇನ ಮತ್ತವನ ಕುಟುಂಬವನ್ನು ಶುದ್ಧ ಫಟಿಂಗರೆಂದುಕೊಂಡರೂ ಕಳ್ಳತನ ಅವರು ಬಿಡಲಾರದ ಪ್ರವೃತ್ತಿಯೆಂದು ಸಾಧಿಸಿಕೊಂಡರೂ ಅವು ಸುಳ್ಳಾದುದನ್ನು ಕತೆ ತೋರಿಸುತ್ತದೆ. ಮತ್ತೆ ಮಾನವೀಯತೆಯ ಕ್ಷಣಗಳು ಎಲ್ಲಿವೆಯೋ ಆ ತಟ್ಟಿನಲ್ಲಿ ಕತೆಗಳು ದ್ರವಿಸಿ ನಿಲ್ಲುತ್ತವೆ. ಮಾನವೀಯತೆಯ ನಿರ್ವಚನವನ್ನು ಸೋಗಲಾಡಿ ಸಮಾಜ ಗ್ರಹಿಸಲಾರದ ಸ್ಥಿತಿಯನ್ನು ಕತೆಗಳು ವ್ಯಂಗ್ಯವಾಗಿ ವಿನೋದದಲ್ಲಿ ನೋಡುತ್ತವೆ. ಬಾಗಲೋಡಿಯವರ ವ್ಯಂಗ್ಯ ಮೂಲತಃ ಸಮಾಜದ ‘ವೇಷ’ವನ್ನು ಸೀಳಿ ಹಾಕುವುದಕ್ಕೆ ಬಳಕೆಯಾಗುವ ಪ್ರಧಾನ ಹರಿತವೇ ಹೊರತು ಕತೆಯ ಆಕರ್ಷಣೆಗಾಗಿ ಬಂದ ವಿನೋದವಲ್ಲ. ಸಂಸ್ಕೃತ ಶಬ್ದಗಳನ್ನು ವಿಶಿಷ್ಟ ಶೈಲಿಯಲ್ಲಿ ಬಳಸಿ ಕತೆಗಳಲ್ಲಿ ಅವರು ಸಾಧಿಸುವ ವಿನೋದ ನಗುವಿನ ಮುಗುಳನ್ನೇನೋ ತರಿಸಬಲ್ಲದು. ಈ ಗುಣ ಮೇಲ್ನೋಟಕ್ಕೇ ಸೆಳೆಯುತ್ತದೆ ಕೂಡ. ಇದು ಶೈಲಿಯ ಲಕ್ಷಣವೇ ಹೊರತು ಅಂತಿಮಗುರಿ ಅಲ್ಲ. ಮೇಲೆ ಹೇಳಿದ ಲೋಕಸಂಬಂಧೀ ವಿಮರ್ಶೆಯ ಗುರಿಯಾಗಿಯೇ ಈ ವಿನೋದ ವ್ಯಂಗ್ಯಗಳಿಗೆ ಗಮ್ಯದಾರಿ ಅರಳಿಕೊಂಡಿದೆ. ತುಳುನಾಡಿನ ಬ್ಯಾರಿಗಳನ್ನೂ ತುಳುವರನ್ನೂ ಅವರೊಳಗಿನ ಸಂಬಂಧಗಳನ್ನೂ ಬ್ಯಾರಿ ಜನಾಂಗದ ಬಗಗೆ ಇತರ ಜನಾಂಗಗಳು ಹೊಂದಿರುವ ದೃಷ್ಟಿಕೋನಗಳನ್ನೂ ಶುದ್ಧ ಫಟಿಂಗ ಕತೆ ಒಳಗೊಳ್ಳುತ್ತದೆ. ಆದರೆ ಈ ದೃಷ್ಟಿಕೋನಗಳು ಅಂತಿಮವಲ್ಲ ಎಂಬುದಾಗಿ ನಿರೂಪಿಸುವಲ್ಲಿ ಕತೆಕಟ್ಟುವ ಮನಸ್ಸಿನ ಉದಾರವಾದೀ ಚಿಂತನೆಯೇ ಇಳಿದು ಬಂದಿದೆ.

ಕರಾವಳಿಯ ಬದುಕು

ಕರಾವಳಿಯ ಬದುಕಿನ ಬಗೆಗೆ ಪ್ರೀತಿಯ ಕಣ್ಣುಳ್ಳದ್ದು ಈ ಮನಸ್ಸು. ಮಾನವೀಯತೆ ಎಂಬುದು ಈ ಮನಸ್ಸಿಗೆ ಪ್ರಧಾನ ಆವೇಶವೂ ಹೌದು. ಮಾನವನ ಅಂತರಂಗದಲ್ಲಿ ಸ್ತಂಭದಂತೆ ತಳ ಊರಿದ ‘ವಾಸನೆ’ಯನ್ನು ವ್ಯಕ್ತಿತ್ವ ವಿಶೇಷತೆಯಾಗಿ ಗೌರವಿಸುವ ಗುಣವೂ ಈ ಮಾನವೀಯತೆ ಆಗಬಲ್ಲದು. ಸಂಪ್ರದಾಯದ ವಿವರಗಳ ಅರಿವು ಇದ್ದಾಗಲೂ ಆಧುನಿಕ ಒಲವು ಈ ಮನಸ್ಸಿಗೆ ಹೊರತಾಗದು. ಈ ಕರ್ತೃಪ್ರಜ್ಞೆಗಿರುವ ನಿರ್ಭೀತ ಗುಣ ಅಥವಾ ಸಾತ್ತ್ವಿಕ ಪರವಾಗಿರುವ ‘ಉದ್ಧಟತೆ’ ಕತೆಯೊಳಗೆ ಪಾತ್ರಗಳಿಗೂ ಮತ್ತೆ ಮತ್ತೆ ಇಳಿದು ಬರುವುದಿದೆ. ಇದೊಂದು ನಿರಾಧಾರ ಪ್ರಮೇಯವಲ್ಲ. ದೇವರಾಯರ ಹೆಚ್ಚಿನ ಕತೆಗಳೂ ಒಂದಲ್ಲ ಒಂದು ಬಗೆಯ ಉದ್ಧಟನನ್ನೋ ಹಠಮಾರಿಯನ್ನೋ ಒಳಗೊಳ್ಳುವುದನ್ನು ಜಾಗರೂಕತೆಯಿಂದ ಗಮನಿಸಬೇಕು. ಈ ಉದ್ಧಟತೆ ಇನ್ನೊಂದರ್ಥದಲ್ಲಿ ತನ್ನ ವ್ಯಕ್ತಿತ್ವಕ್ಕಂಟಿದ ವಾಸನೆಗೆ ಪಾತ್ರ ತೋರಿಸುವ ನಿಷ್ಠೆಯೂ ಹೌದು. ಶುದ್ಧ ಫಟಿಂಗದಲ್ಲಿ ಹುಸೇನ ಕೊನೆಗೂ ಫಟಿಂಗತನ ಕಳೆದುಕೊಳ್ಳುವ ಮೊಂಡನಾಗುವುದು, ಮುನಸೀಫ ತನ್ನ ತೆವಲು ಬಿಡದ ಗುಮ್ಮನಗುಸಕನಾಗುವುದು ಉದಾಹರಣೆಗಳು. ಪ್ರತಿಯೊಂದು ಕತೆಯೂ ಈ ನಿಟ್ಟಿನಲ್ಲಿ ತೋರಿಸುವ ಅನುರೂಪತೆ ಕತೆ ಕಟ್ಟುವ ಒಂದು ಬಲಶಾಲೀ ಪತ್ತಿನ ಲಕ್ಷಣವೇ ಹೊರತು ‘ಪುನರಾವರ್ತನೆ’ ಆಗುವಷ್ಟು ಜಾಳುತನ ಅಲ್ಲ.

ಸತ್ಯಮೇವ ಜಯತೇ… ಎಂಬ ಬೋಧಪ್ರದವಾದ ಕತೆಯು ಶೀರ್ಷಿಕೆಯಲ್ಲಿಯ ಹಳೆ ಬಣ್ಣ ಗಮನಿಸಬೇಕು. ಭಾರತದ ಪರಂಪರೆಯ ಕಥಾಸಂಪ್ರದಾಯಕ್ಕೆ ಬಾಗಲೋಡಿಯವರು ಕಥನಕ್ರಮಕ್ಕಾಗಿ ಭಾಷಾಶೈಲಿ, ತಂತ್ರ ಆನಿಕೊಳ್ಳುತ್ತಾರೆ. ಹೌದು, ಆದರೆ ಅದು ಒಂದು ತಾಂತ್ರಿಕ ಆವರಣವೇ ಹೊರತು ಅಂತರಂಗವಲ್ಲ ಎಂಬುದನ್ನು ನಾವು ಇನ್ನೊಮ್ಮೆ ನೆನಪಿಸಿಕೊಳ್ಳಬೇಕು. ಇದು ಪುರಾಣ, ಇತಿಹಾಸಗಳನ್ನು ಅವರು ಒಳಗೊಳ್ಳುವ ಕ್ರಮವೂ ಹೌದು. ಅಂದರೆ ಪೌರಾಣಿಕ ಕತೆಗಳಂತೆ, ಐತಿಹಾಸಿಕ ಕತೆಗಳಂತೆ ದೇವರಾಯರ ಕತೆಗಳು ಸೋಗು ಹಾಕುತ್ತವೆಯೇ ವಿನಾ ಮಾನವ ಬದುಕಿನ ವ್ಯಾಖ್ಯಾನದ ಚಟದಿಂದ ದೂರ ಹೋಗುವುದಿಲ್ಲ. ಇಲ್ಲೆಲ್ಲ ವ್ಯಂಗ್ಯದ ಧಾಟಿ ತನ್ನ ಸಿಂಚನ ಬೀರಿಕೊಂಡೇ ಇರುತ್ತದೆ. ಹಾಗಾಗಿ ಶೀರ್ಷಿಕೆ-ಶೈಲಿ-ತಂತ್ರಗಳಿಂದ ತೊಡಗಿ, ನಿರೂಪಣೆಯ ಕ್ರಮಗಳು ಕೂಡ ಈ ಪುರಾತನ ಸೋಗನ್ನು ಹೆಚ್ಚು ಕಾಲ ಇರಿಸಿಕೊಳ್ಳದೆ ಕಳಚಿಕೊಳ್ಳಬೇಕಾಗುತ್ತದೆ. ಸತ್ಯಮೇವಜಯತೇ… ಎಂಬ ಬೋಧಪ್ರದವಾದ ಕತೆಯು ಶೀರ್ಷಿಕೆ ಪುರಾತನ ಪಳೆಯುಳಿಕೆಯಂತೆ ಕಂಡರೂ ಅದು ಅಂತಿಮವಾಗಿ ಒಂದು ಹರಿತ ವ್ಯಂಗ್ಯವಾಗಿಯೇ ಅರಳುತ್ತದೆ. ಇದು ಎಲ್.ಎಸ್. ಶೇಷಗಿರಿರಾಯರು ಸಾಹಿತ್ಯ ಅಕಾಡೆಮಿಯ ಸಂಕಲನಕ್ಕಾಗಿ ಆರಿಸಿದ ಕತೆ. ಇಲ್ಲಿ ಸತ್ಯ ಯಾವುದೆಂಬ ನೋಟವೂ ಕತೆಯ ಅಂತಿಮ ಬೋಧನೆಯೂ ಒಂದು ತೀವ್ರ ವಿಡಂಬನೆ ಆಗಿಬಿಡುವುದು ಎದ್ದು ಕಾಣುವ ಸಂಗತಿ. ಮಾನವನ ಮೂಲ ಮೂರಿ ಕಾಮ. ಇದಕ್ಕೆ ಎರವಾಗುವುದು ನಿಜವಾಗಿಯೂ ಒಂದು ಸಾಧನೆಯೇ? ಸಿದ್ಧಿಯೇ? ಎಂಬ ವಿಮರ್ಶೆಯನ್ನು ತನ್ನ ಚರ್ಚೆಯಾಗಿ ಕತೆ ಒಳಗಡೆ ಇಟ್ಟುಕೊಳ್ಳುತ್ತದೆ. ಸಂಪ್ರದಾಯದ ನಂಬಿಕೆಗಳನ್ನು ಪ್ರಶ್ನಿಸುವ ಕತೆಗಾರನ ಜಿಜ್ಞಾಸೆ ಒಬ್ಬ ಶ್ರದ್ಧಾಳುವಿನದಲ್ಲ; ವೈಚಾರಿಕ ಕರ್ತೃಪ್ರಜ್ಞೆಯದು. ಶಿಷ್ಯ ವಜ್ರಧರ್ಮನ ಕಠೋರ ಕಾಮ ನಿಯಂತ್ರಣದೆದುರು ಗುರುವೇ ಪಾಪಪ್ರಜ್ಞೆಯ ಕೀಳರಿಮೆಯಿಂದ ನರಳತೊಡಗಿದಾಗ, ರಸಿಕ ಶಿಷ್ಯ ಪುಷ್ಪಧರ್ಮನ ಒಂದು ಉದ್ದೇಶಪೂರ್ವಕ ಸುಳ್ಳು ಈ ಗುರುವಿಗೆ ಸುಖ ಮರಣ ಕೊಡುತ್ತದೆ. ಮಹಾಚಳಿಯಲ್ಲಿ ಕೈಗೊಂಡ ವಜ್ರಧರ್ಮನ ಕಠೋರ ಸಾಧನೆಗೆ ಅಂತಿಮವಾಗಿ ಸ್ವರ್ಗದಲ್ಲಿ ಸಿಕ್ಕ ಉಡುಗೊರೆ ‘ಫ್ರಿಜ್‍ವಾಸ’. ಪುಷ್ಪಧರ್ಮನ ‘ಸ್ತ್ರೀಲಾಲಸೆ’ಗೆ ಸ್ವರ್ಗ ಕೊಟ್ಟ ಶಿಕ್ಷೆ ‘ಅಪ್ಸರೆಯರ ಮನೆ ಹಿಂದೆ ಗುಡಿಸಲ ವಾಸ!’ ಈ ಹರಿತ ವಿನೋದವೇ ಕತೆ ಮೂಡಿಸುವ ಅಂತಿಮ ಬೋಧನೆ.

ಅಜ್ಜ ನೆಟ್ಟ ಮರ ಮತ್ತು ಅವರವರ ಸುಖದುಃಖ ಕತೆಗಳಲ್ಲಿ ಕಿರಿಯರು ಬೆಳೆದಂತೆ ಮೂಲಪ್ರವೃತ್ತಿಯಲ್ಲಿ ಸಂಭವಿಸುವ ಮಹಾವೈರುಧ್ಯಗಳಿಗೆ ಕಾರಣಗಳನ್ನು ಹಿರಿಯರಲ್ಲೇ ಕಾಣಲಾಗುತ್ತದೆ. ಹಳೆಯ ಮರವನ್ನು, ಹಳೆಯ ಮುದುಕಿಯನ್ನು ಸಂಪಿಗೆರಾಯರು ತಿರಸ್ಕರಿಸಿದ್ದು ಮಗು ಶ್ರೀನಿವಾಸನಿಗೆ ನೋವಾಗುತ್ತದೆ. ಶ್ರೀನಿವಾಸನೇ ಬೆಳೆದು ನಿಂತಾಗ ಹಳೆಯವರಾದ ತಂದೆ ಮನೆಯನ್ನು ಕ್ಷುಲ್ಲಕವಾಗಿ ಕಾಣುವುದನ್ನು ಕತೆ ಹೇಳುತ್ತದೆ. ಅವರವರ ಸುಖದುಃಖವು ಗಿರಡ್ಡಿ ಗೋವಿಂದರಾಜರು ಮರೆಯಬಾರದ ಹಳೆಯ ಕತೆಗಳು ಎಂಬ ತಮ್ಮ ಸಂಕಲನದಲ್ಲಿ ಮರೆಯಲಾಗದೆ ಸೇರಿಸಿಕೊಂಡ ಕತೆ. ಇಲ್ಲಿ ಸಣ್ಣ (ಕಿನ್ನಿ) ಕಂಬಳವಾಸಿಯಾದ ನಿರೂಪಕ ತನ್ನ ಸಹಪಾಠಿ ಶಂಭುವಿನ ಮೂಲವಾಸನೆಯಲ್ಲಾದ ಮಹಾಪಲ್ಲಟವನ್ನು ಗಮನಿಸುತ್ತ ಹೋಗುತ್ತಾನೆ. ಚಿಕ್ಕಪ್ಪನ ದುಃಸ್ಥಿತಿಯಲ್ಲಿ ಅಪ್ಪ ಸಹಾಯ ಮಾಡಬೇಕೆಂದು ಈ ಎಳೆಯ ಶಂಭುವಿನ ಪರೋಪಕಾರೀ ಪ್ರವೃತ್ತಿ ಬಯಸಿತ್ತು. ಅಪ್ಪ ತನ್ನ ಸುಖದುಃಖವನ್ನೇ ನೋಡಿಕೊಂಡ. ಕಾಲ ಬದಲಿತು. ಶಂಭು ಕಲಿತು ಮದರಾಸಿನಲ್ಲಿ ವಕೀಲನಾದಾಗ ಅವನೂ ಹೀಗೆಯೇ ಬದಲಾಗಿದ್ದ! ಸರಳ ಸುಂದರ ಮೂಲ ಪ್ರವೃತ್ತಿಗಳು ಕಾಲಗತಿಯಲ್ಲಿ ಹೇಗೆ ಕೆಟ್ಟು ದುರ್ವಾಸನೆ ಬೀರಿದುವೋ ಎಂಬ ವಿಸ್ಮಯವೇ ಕತೆಯ ಶೋಧಕ್ಕೆ ತಳಪಾಯ. ಕತೆಗಳನ್ನು ಕಟ್ಟುವ ಕತೆಗಾರನ ಬಾಲ್ಯವೂ ತಾಯಿಯ ಪ್ರೀತಿ ಇಲ್ಲದೆ ಬೆಳೆದದ್ದು; ಈ ಕರ್ತೃಪ್ರಜ್ಞೆಗಿರುವ ಹಠಮಾರಿತನ, ಎದೆಗಾರಿಕೆಗಳು ಮನೆಯ ಜನ ಸಮೂಹದಿಂದ ಪ್ರತ್ಯೇಕವಾಗಿ ಸಿಡಿವ ಸ್ಫೋಟಕತೆಯಾಗಿ ಎಲ್ಲೋ ಕಾಲದ ಮೂಲೆಯಲ್ಲಿ ಆಗಿದ್ದಿರಬೇಕು. ಮನೆಯಿಂದ ಸಿಡಿವ ಹುಡುಗರು ದೇವರಾಯರ ಕತೆಗಳಲ್ಲಿ ಮತ್ತೆ ಮತ್ತೆ ಬರುತ್ತಾರೆ. ಅದು ಸಂಪಿಗೆರಾಯನ ಮಗನೂ ಆಗಿರಬಹುದು. ಶಂಭುವೂ ಆಗಿರಬಹುದು. ಹಲವು ಕತೆಗಳಲ್ಲಿ ಕಾಣಿಸುವ ಈ ಬಗೆಯ ಪಾತ್ರ ಬೆಳೆವಣಿಗೆ ಕೆಲವೊಮ್ಮೆ ಮಾನವೀಯ ಆತ್ಮವನ್ನು ಕೆಡಿಸಿಕೊಳ್ಳುವ ಮಟ್ಟಕ್ಕು ಹೋಗುವುದಕ್ಕೆ ಶಂಭುವಿನಂಥವರೇ ಸಾಕ್ಷಿ. ಕತೆಗಾರನ ಬ್ರಾಹ್ಮಣ ಹಿನ್ನೆಲೆಯೂ ಅಜ್ಜ ನೆಟ್ಟ ಮರದಂಥ ಮೇಲ್ವರ್ಗದ ಕುಟುಂಬ ಚಿತ್ರಣದಲ್ಲಿ ಸ್ಪಷ್ಟ ನೆರವಾಗಿ ಬರುತ್ತದೆ. ಬಹುಕತೆಗಳ ಹಿನ್ನೆಲೆ ಸಾಂಸ್ಕೃತಿಕವಾಗಿ ಬ್ರಾಹ್ಮಣ ನಡವಳಿಕೆಯದ್ದೇ. ಈ ಸಂಸ್ಕೃತಿ ಕಡೆದ ಪ್ರಜ್ಞೆಯ ಪ್ರಧಾನ ಅಭಿವ್ಯಕ್ತಿಯಾಗಿಯೇ ಬಹಳಷ್ಟು ಕತೆಗಳಿವೆ. ಆದರೆ ಮಡಿವಂತಿಕೆಯ ಪ್ರಶ್ನೆ ಬಂದಾಗ ಎಲ್ಲವನ್ನೂ ಪ್ರಶ್ನಿಸಿ ಸಿಡಿಸುವ ‘ಸಹೃದಯೀ ಉದ್ಧಟತೆ’ಯೇ ಕತೆಗಾರನಲ್ಲಿ ಗೆಲ್ಲುತ್ತದೆ.

ಕಥನತಂತ್ರ

ದೇವರಾಯರ ಸಾಹಿತ್ಯದ ಓದು ವಿಶಾಲ ವ್ಯಾಪ್ತಿಯದು. ಆಂಗ್ಲ ಸಾಹಿತ್ಯದ ಅಭ್ಯಾಸ ಅವರಿಗೆ ಚೆನ್ನಾಗಿ ಇತ್ತು. ಆದರೆ ತಮ್ಮ ಕಥನಕ್ರಮಕ್ಕೆ ಅವರು ಪಾಶ್ಚಾತ್ಯ ತಂತ್ರಗಳಿಗೆ ಬಲು ಕಡಿಮೆ ವಾಲಿದರು; ಪಾಶ್ಚಾತ್ಯ ವಿದ್ಯಾಭ್ಯಾಸದೊಂದಿಗೆ ಬಂದ ಉದಾರವಾದೀ ದೃಷ್ಟಿಕೋನ ಮತ್ತು ವೈಚಾರಿಕ ಮನೋಭಾವಕ್ಕೆ ಹೆಚ್ಚು ಒಲಿದರು. ಆಲ್ಡಸ್ ಹಕ್ಸ್ಲೀಯ ಸರ್ ಹರ್ಕ್ಯುಲಿಸ್ ಕತೆಯನ್ನು ಓದಿದರು. ತಾವು ತುಳುನಾಡಿನ ಅರಸು ಮನೆಯೊಳಗಿನ ದುರಂತವಾಗಿ ಬರೆದ ವೀರಬೀಡು ಬಲಭೀಮೈಯ ಅರಸು ಕತೆಯನ್ನು ಬರೆದರು! ಕತೆಗಳ ಕರ್ತೃವಿನ ವೈಯಕ್ತಿಕತೆಯನ್ನು ಕತೆಯ ಮೂಲಕ ಕಟ್ಟುವ ನಮ್ಮ ಜಾಯಮಾನವನ್ನು ಮರೆಯದಿರೋಣ. ಕುಳ್ಳತನ ಕತೆಗಾರನನ್ನು ಕತೆಗಳಲ್ಲಿ ಅಲ್ಲಲ್ಲಿ ಕಾಡುವಂಥದೇ. ಈ ದೈಹಿಕಸ್ಥಿತಿಯ ನೆನಪನ್ನು ಕಳಚಿಕೊಂಡ ನಿರೂಪಕ ಅವರ ಜೀವನದ ಅಂತಿಮ ಹಂತದ ಕತೆಗಳಲ್ಲಷ್ಟೇ ಬರುತ್ತಾನೆ. ಆರಂಭದ ಕತೆಗಳಲ್ಲಿ ಕುಳ್ಳತನವೋ ದುರ್ಬಲತೆಯೋ ಪುಕ್ಕಲುತನವೋ ಕತೆಯೊಳಗಿನ ನಿರೂಪಕನಲ್ಲಿ ಎದ್ದು ಕಾಣುತ್ತವೆ. ಕತೆಯ ಪ್ರಧಾನ ಪಾತ್ರಗಳ ಎದೆಗಾರಿಕೆಗೆ ವಿರುದ್ಧವಾದ ಸ್ಥಿತಿ ಇದು. ತನ್ನ ವ್ಯಕ್ತಿತ್ವದೊಳಗಿನ ಕುಳ್ಳತನವನ್ನೂ ಎದೆಗಾರಿಕೆಯನ್ನೂ ದೇವರಾಯರ ಕತೆಗಳಲ್ಲಿ ಹಂಚಿಕೊಂಡಂತೆ ಕಾಣುವ ವಿಚಿತ್ರವಿದು! ಅವರವರ ಸುಖ ದುಃಖದಲ್ಲಿ “ನಾನು ಮೊಂಡು ಮೂಗಿನ ವಾಮನಾವತಾರಿಯೆಂದು ಒಪ್ಪಿಕೊಳ್ಳುವ ಸತ್ಯಪ್ರಿಯತೆ ನನ್ನಲ್ಲಿದೆ” ಎಂದು ನಿರೂಪಕ ಗುಟ್ಟಾಗಿ ಹೇಳುತ್ತಾನೆ. ಇದು ‘ರಮ’ಳ ಬಗ್ಗೆ ಅವನಿಗಿದ್ದ ಸುಪ್ತ ಅನುಕಂಪದ ಜೊತೆಯಾಗಿ ಬರುತ್ತದೆ. ವೀರಬೀಡು…. ಕತೆಯಲ್ಲಿ ನಿರೂಪಕನಲ್ಲ, ಮುಖ್ಯ ಪಾತ್ರವೇ ಮಹಾಕುಳ್ಳನಾಗುತ್ತದೆ. ದೇಹದಲ್ಲಿದ್ದ ಕುಳ್ಳತನ ವ್ಯಕ್ತಿತ್ವದ ಚರ್ಯೆ, ಯೋಚನೆಗಳಿಗೆ ಹಬ್ಬಿ ‘ಕುಳ್ಳತನದ ರಾಜಕಾರಣ’ಕ್ಕೂ ಇಳಿಯುತ್ತದೆ! ರಾಜ ಕುಳ್ಳನಾದಾಗ ಅವನು ಅರಮನೆಯವರನ್ನೇ ಅದಕ್ಕಾಗಿ ಕುಳ್ಳರನ್ನಾಗಿಸುತ್ತ ಹೋಗುತ್ತಾನೆ. ಕುಳ್ಳತನದ ಪರ ಸಿದ್ಧಾಂತಗಳನ್ನು ಪ್ರಚುರಪಡಿಸುತ್ತಾನೆ! ದೇಹದ ಪ್ರವೃತ್ತಿ ಒಂದು ರಾಜ್ಯವನ್ನೇ ಹಬ್ಬುವ ‘ವಾಸನೆ’ಯಾಗುತ್ತದೆ. ಆದರೆ ಈ ಕುಳ್ಳ ದಂಪತಿಗಳಿಗೆ ಜನಿಸಿದ ಮಗನೋ ಎಲ್ಲರಂತೆ ಎತ್ತರಕ್ಕೆ ಬೆಳೆದ. ಮಹಾ ಉದ್ಧಟನೂ ಆದ. ಮನೆಗೆದುರಾಗಿ ಬೆಳೆದ ಈ ಪ್ರವೃತ್ತಿ ಹೆತ್ತವರ, ಮನೆಯೊಳಗಿನ ಕುಳ್ಳತನವನ್ನೇ ಹೃದಯ ವಿದ್ರಾವಕವಾಗಿ ಗೇಲಿ ಮಾಡುವ ಮಟ್ಟಕ್ಕೂ ಏರಿದಾಗ ಹೆತ್ತವರ ಮರಣದ ದುರಂತ ಅನಿವಾರ್ಯವಾಗುತ್ತದೆ. ಕತೆ ಬರೆವ ಕರ್ತೃಪ್ರಜ್ಞೆ ಆಧುನಿಕವಾಗಿ ಯೋಚಿಸುವ ಪರಿಣಾಮವಾಗಿಯೇ ಈ ಕತೆ, ಕುಸಿಯುತ್ತ ಹೋಗುವ ಅರಸೊತ್ತಿಗೆಯ ವಿವರ ವಿವರಗಳನ್ನೂ ಅದರ ಕೊನೆಯ ಕುಳ್ಳ ಪ್ರತಿನಿಧಿಯ ಅಧಃಪತನವನ್ನೂ ದುರಂತ ರಾಜಕಾರಣದ ಸೂಕ್ಷ್ಮಗಳಾಗಿ ಕಾಣಿಸುವ ಶಕ್ತಿ ಹೊಂದಿದೆ. ಮತ್ತೆ ಬಾಗಲೋಡಿಯವರು ಇದನ್ನು ತುಳುನಾಡಿನ ಬಡ ಪಾಳೇಗಾರಿಕೆಯ ಚಾರಿತ್ರಿಕ ವಿವರಗಳ ಕ್ಯಾನ್ವಾಸಿನಲ್ಲಿ ಕಟ್ಟುತ್ತಾರೆ.

ದೇವರಾಯರ ಕತೆಗಳನ್ನು ಕಟ್ಟುವ ಮನಸ್ಸು ಕರಾವಳಿಯಿಂದ ಜೀವನ ವಿವರ ಹೆಕ್ಕುವುದಿದ್ದರೂ ಅದು ಜಾಗತಿಕ ಸ್ಥಿತ್ಯಂತರಗಳ ಸಂಬಂಧಗಳನ್ನು ಮರೆಯದೆ ಗಮನಿಸಬಲ್ಲದು. ಅಜ್ಜ ನೆಟ್ಟ ಮರ, ಶುದ್ಧ ಫಟಿಂಗ ಹಾಗೂ ಇತರ ಹಲವು ಕತೆಗಳಲ್ಲಿ ಎರಡನೆಯ ಮಹಾಯುದ್ಧ ಸಂಬಂಧದ ಆರ್ಥಿಕ ಏರುಪೇರುಗಳು ಸ್ಥಳೀಯ ಮಾನವ ಜೀವನಕ್ಕೆ ಹೊಸ ಆಸೆ ದುಃಖಗಳನ್ನು ತರುವ ಸಣ್ಣ ಸಣ್ಣ ವಿವರಗಳಿವೆ. ದೇವರಾಯರು ಕತೆ ಕಟ್ಟುವ ಕಾಲದ ಸಕಾಲಿಕ ಕಂಪನವೂ ಇದು ಹೌದು. ಕತೆಗಳ ಸಾಮಾಜಿಕ ನೆಲೆಗೆ ಇಂಥ ವಿಶಾಲತೆ ಇರುವುದರಿಂದಲೇ ವೀರಬೀಡುವಿನ ಕುಳ್ಳ ಅರಸನ ಎತ್ತರದ ಮಗ ಪಾಶ್ಚಾತ್ಯ ಪ್ರಭಾವಕ್ಕೊಳಗಾಗುವುದು ಕತೆಯಲ್ಲಿ ಪ್ರಧಾನವಾಗಿದೆ. ಪರಂಗಿಯವರ ಸಂಪರ್ಕದ ವಿವಿಧ ಬಗೆಯ ವಿವರಗಳು ಹಲವಾರು ಕತೆಗಳಲ್ಲಿ ನೇರವಾಗಿಯೋ ಪರೋಕ್ಷವಾಗಿಯೋ ಬಂದು ಹೋಗುತ್ತವೆ. ಕುತೂಹಲವೆಂದರೆ ಪಾಶ್ಚಾತ್ಯ ವಿದ್ಯಾಭ್ಯಾಸ ಮತ್ತು ಜೀವನಕ್ರಮದ ಸಂಪರ್ಕ ದೇವರಾಯರನ್ನು ವೈಯಕ್ತಿಕವಾಗಿ ಪ್ರತಿಷ್ಠಿತ ಹುದ್ದೆಗಳಿಗೆ ಏರಿಸಿತ್ತಾದರೂ ಅವರ ಕತೆಯ ಹಲವಾರು ಪಾತ್ರಗಳಿಗೆ ಅದು ಮಾನವ ಚೈತನ್ಯದ ಬೆಳಗುವಿಕೆಯನ್ನು ಉಂಟುಮಾಡುವುದಿಲ್ಲ! ಇದು ಅವರವರ ಸುಖದುಃಖ ಕಂಡ ಶಂಭುವೇ ಇರಬಹುದು; ಕುಳ್ಳರಸನ ಮಗನೇ ಇರಬಹುದು!

ಆಧುನಿಕ ಚಿಂತನಕ್ರಮವಾಗಿ ಒಲಿದು ಬಂದ ಮಾರ್ಕ್ಸ್ ವಾದದ ಉಲ್ಲೇಖವೂ ಆ ವಿದ್ಯಾಭ್ಯಾಸ ಕ್ರಮದ ‘ಸೈಡ್ ಇಫೆಕ್ಟ್’ ಎನಿಸಿದ ನಿರುದ್ಯೋಗವೂ ಭೀಮಸೇನ ಹೆಂಗರುಳನ್ನು ಕಂಡುದು ಕಥೆಯಲ್ಲಿದೆ. ಇಲ್ಲಿ ಭೀಮಸೇನ ಒಬ್ಬ ಹುಂಬ ಧೈರ್ಯವಂತ. ನಿರೂಪಕನ ವ್ಯಕ್ತಿತ್ವಕ್ಕೆ ಪೂರ್ತಿ ಭಿನ್ನವಾಗಿ ಬಲು ಬಲಿಷ್ಠ ನಿರುದ್ಯೋಗಿಯಾದ ಈ ಬ್ರಹ್ಮಚಾರಿ ಸಂದರ್ಶನಕ್ಕೆ ಹೋದುದು, ಅಲ್ಲಿ ‘ಬಾಸ್’ನ ಮಗಳಿಗೆ ವಿವಾಹಯೋಗ್ಯ ವರ ಸಿಗದಿದ್ದುದು! ಈ ಜೊತೆ ಪ್ರಸಂಗಗಳನ್ನು ಅತ್ಯಂತ ವಿನೋದದ ಧಾಟಿಯಲ್ಲಿ ಕತೆ ಹೇಳುತ್ತದೆ. ಕ್ಲೀಷೆ ಅನ್ನಿಸುವ ಹಿಮ್ಮಿಂಚು, ಪತ್ರ ದಿನಚರಿಯಂಥ ಕಥಾತಂತ್ರಗಳು ದೇವರಾಯರಲ್ಲಿ ಇಲ್ಲವೆಂಬಷ್ಟು ಕಡಿಮೆ. ಅವು ಭಾರತೀಯ ಕಥನ ಕ್ರಮಗಳಲ್ಲಿ ಅಪರೂಪ. ಈ ಕತೆಯಲ್ಲಿ ಮಾತ್ರ ‘ಪತ್ರ’ದ ಮೂಲಕ ಕತೆ ಅರಳುವಲ್ಲಿ ಅಪೂರ್ವ ಕಥನತಂತ್ರ ಕಾಣಬಹುದು. ‘ಅಯ್ಯೋ ದೇವರೇ’ ಎಂಬ ಉದ್ಗಾರದ ಬದಲಿಗೆ ‘ಅಯ್ಯೋ ಕಾರ್ಲ್ ಮಾರ್ಕ್ಸ್’ ಎನ್ನುವ ನಾಸ್ತಿಕ ನಿರುದ್ಯೋಗಿ ಭೀಮಸೇನ ಆಗಿಬಿಟ್ಟಿದ್ದಾನೆ! ತಮ್ಮ ಸ್ವಂತ ನಂಬಿಕೆಯಾದ ನಾಸ್ತಿಕತೆಯೂ ದೇವರಾಯರ ವ್ಯಂಗ್ಯದಿಂದ ಪಾರಾಗಿಲ್ಲ!

ಆರಾಧನಾ ಎಂಬ ಹೊಸ ಸ್ಥಿತಿ

ಮೊದಲ ಕಥಾಸಂಕಲನದಲ್ಲಿ ಮಾಸ್ತಿಯವರು ಬಾಗಲೋಡಿಯವರಿಗೆ ಕೇಂದ್ರ ಸರಕಾರದ ಉನ್ನತ ಹುದ್ದೆ ಸಿಕ್ಕಿದ್ದರ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದರು. ವರ್ಷಗಳಿಷ್ಟು ಉರುಳಿದುವು. ಈ ಹರ್ಷ ಸ್ವತಃ ಕತೆಗಾರನಿಗೇ ಉಳಿಯದಾಯಿತು. ಬಾಗಲೋಡಿಯವರ ಮರಣಾಸನ್ನ ವೇದನೆಯ ಸ್ಥಿತಿಯಲ್ಲಿ ಎರಡನೆಯ ಕಥಾಸಂಕಲನ ಬಂದಿತು. ‘ಓಂ ಯದ್ಯತ್ಕರ್ಮ ಕರೋಮಿತತ್ತದಖಿಲಂ ಶಂಭೋತ್ತವಾರಾಧನಂ ಶ್ರೀ’ (ಓ ದೇವರೇ! ನಾನು ಮಾಡುವುದೆಲ್ಲವೂ ನಿನ್ನ ಪೂಜೆಯೇ) ಎಂಬ ವಾಕ್ಯವನ್ನು ಸಂಕಲನದ ಆರಂಭದಲ್ಲೇ ಪ್ರತ್ಯೇಕ ಪುಟದಲ್ಲಿ ಮುದ್ರಿಸುವಷ್ಟರ ಮಟ್ಟಿಗೆ ಕತೆಗಾರ ಬದಲಿದ್ದ. ಈ ಬದಲಾವಣೆ ಕತೆಯನ್ನೇ ಬದಲಿಸುವ ಮಟ್ಟಿಗೂ ಬೆಳೆದಿತ್ತು. ಫ್ರೆಂಚ್ ಸಾಹಿತಿ ಅನಾತೋಲ್ ಫ್ರಾನ್ಸ್‍ನ ಕತೆಯನ್ನು ಅವಲಂಬಿಸಿ ಬರೆದ ಆರಾಧನಾ ಕತೆ ಇಲ್ಲಿ ಪುಸ್ತಕದ ಶೀರ್ಷಿಕೆಗೇರಿದ ಲೇಖಕನ ಒಲವಿನ ಸೃಷ್ಟಿ. ಅದು ಜೀವನ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ರೂಪವೇ ಇಲ್ಲಿ ಬದಲಾಗಿದೆ. “ಆ ಕಾಲದಲ್ಲಿ ನಾನೂ ಫ್ರಾನ್ಸ್‍ನಂತೆಯೇ ನಿರೀಶ್ವರವಾದಿ ಎಂದು ಒಣಜಂಭದಿಂದ ನಟಿಸುತ್ತಿದ್ದೆ. ಆದರೆ ಈಗ ಭಗವಂತನ ಮುನಿಸಿನ ಪೆಟ್ಟು ತಿಂದು ಹಣ್ಣಾಗಿ, ದೇವರ ಭಯವುಂಟಾಗಿದೆ – ಜ್ಞಾನದ ಆರಂಭವೂ ಆಗಿದೆಯೋ ಏನೋ? ಆದುದರಿಂದ ಈ ಕಥೆಯ ತತ್ತ್ವವೇ ಬದಲಾಗಿದೆ” – ಇದು ಮೊದಲ ಸಂಕಲನ ಬಂದ ಕೇವಲ ಐದು ವರ್ಷದ ಬಳಿಕ ೧೯೫೪ರಲ್ಲಿ ಮಂಗಳೂರಿನ ವಸಂತ ಪ್ರೇಮಿ ಮಂಡಲಿ ಆರಾಧನಾ (ಏಳು ಕತೆಗಳು) ಪ್ರಕಟಿಸುವ ಕಾಲದ ಲೇಖಕನ ಮನಃ ಸ್ಥಿತಿ. ಉನ್ನತ ಉದ್ಯೋಗದ ಪ್ರೊಬೇಷನರಿ ಅವಧಿಯಲ್ಲೇ ಜೀವನ್ಮರಣ ಸ್ಥಿತಿ ತಲಪಿದ ಅನಾರೋಗ್ಯದ ಫಲ ಲೇಖಕನ ಮನ ತಿರುಚಿದ ಪರಿಣಾಮವಿದು!

ಈ ಅನಾರೋಗ್ಯದ ಹಂತದಲ್ಲೇ ಗೆಳೆಯ ಎಂ. ಜನಾರ್ದನರ ಸಹಾಯದಿಂದ ಯೋಧನ ಪುನರಾಗಮನ, ಕಲ್ಲು ಮನಸ್ಸಿನ ರಾಜಮ್ಮ ಮತ್ತು ಪವಾಡ ಪುರುಷದಂಥ ಸಮರ್ಥ ಕತೆಗಳು ಹೊರಬರುತ್ತವೆ. ಮೇಲೆ ಲೇಖಕ ಸ್ವತಃ ಹೇಳಿದ ಐದು ತತ್ತ್ವಗಳು – ದೇವರು, ಧರ್ಮ, ಮನುಷ್ಯ, ಜೀವನ ಮತ್ತು ಮರಣ – ದೇವರಾಯರ ಕತೆಗಳಲ್ಲೇನು, ಮಾನವ ಬಾಳನ್ನು ಅವಲಂಬಿಸಿದ ಎಲ್ಲ ಸೃಜನಶೀಲ ಪ್ರಕಾರಗಳ ಮಿಡಿತಗಳು ಕೂಡ. ಆದ್ದರಿಂದ ಒಂದು ಖಿನ್ನತೆಗೊಳಗಾದ ಕರ್ತೃಪ್ರಜ್ಞೆಯ ಆಕ್ರಂದನವಾಗಿ ಮಾತ್ರ ಈ ಮಾತನ್ನು ನಾವು ಒಪ್ಪಬಹುದೋ ಏನೋ ?!

ಸ್ಥಿತ್ಯಂತರಣ?

ಬಾಗಲೋಡಿ ದೇವರಾಯರ ವ್ಯಕ್ತಿತ್ವದಲ್ಲಾದ ಪ್ರಬಲ ಪರಿವರ್ತನೆ ಕತೆಗಳ ಅಂತರಂಗದಲ್ಲಿ ಏನಾದರೂ ಸ್ಥಿತ್ಯಂತರ ತಂದಿತೇ ಎಂಬ ಸೂಕ್ಷ್ಮದೃಷ್ಟಿ ಉಳಿಸಿಕೊಂಡು ಮುಂದಿನ ಕತೆಗಳನ್ನು ಓದಬೇಕು. ಇನ್ನೂ ಉಳಿದಿದೆಯೇ ಮಾನವನೊಳಗಿನ ಮೂಲ ವಾಸನೆಗಳ ಹುಡುಕಾಟ? ಆ ಪಾತ್ರಗಳ ಉದ್ಧಟತೆ? ಮನೆಯೆದುರು ಸಿಡಿವ ನಿಲುವು? ಸಂಪ್ರದಾಯ-ಸೋಗಲಾಡಿತನಗಳನ್ನು ಸೀಳಿ ಬಿಸಾಡುವ ಕೆಚ್ಚು? ಎಂಬ ಪ್ರಶ್ನೆಗೆ ಆಶ್ಚರ್ಯಕರವಾದ ಉತ್ತರ “ಹೌದು”! ಕತೆಗಳ ಆಳದ ಆತ್ಮ ಹಾಗೆಯೇ ಇದೆ – ಬಾಗಲೋಡಿಯವರೊಳಗಿನ ಕತೆಗಾರನ ಸೃಷ್ಟಿಕ್ರಮದಲ್ಲಿ ಬಲುದೊಡ್ಡ ಪರಿವರ್ತನೆ ಕಾಣುವುದಿಲ್ಲ. ಹಿಂದೆಲ್ಲ ಅಂತರಂಗದ ಮೂಲವಾಸನೆಗೆ ಒಂದು ಕಾರಣವಿದೆಯೇ? ಎಂಬ ಪ್ರಶ್ನೆಗೆ ಬೆರಗಷ್ಟೇ ಕತೆಯ ನಿಲವಾಗಿತ್ತು. ಆಗೆಲ್ಲ ಮಾನವನನ್ನು ‘ತನ್ನೊಳಗೆ ತಾನೇ’ ಆಗಿ ಕತೆ ಕಾಣುತ್ತಿತ್ತು. ಈಗ ‘ಇಲ್ಲ – ಅದನ್ನೂ ನಿಯಂತ್ರಿಸುವ ಇನ್ನೊಂದೇನಾದರೂ ಮಾನವನಾಚೆಗೂ ಇರಬಹುದೇ?’ ಎಂಬಷ್ಟರಮಟ್ಟಿಗೆ ಕೊಂಚ ಜರಗಾಟವಿದೆ, ಅಷ್ಟೇ!

ಬರ್ಲಿನಿನಿಂದ ಭಾಗೀರಥಿಗೆ ಕತೆಯಲ್ಲಿ ಎಷ್ಟೆಲ್ಲ ಅಡೆತಡೆಗಳಿದ್ದರೂ ಭಾರತದ ಮಣ್ಣಲ್ಲಿ ಲೀನವಾಗುವತ್ತ ಜರ್ಮನ್ ವಿದ್ವಾಂಸನ ಮೂರು ತಲೆಮಾರುಗಳು ಹೇಗೆ ಬಂದೇ ಬಂದುವು ಎಂಬುದನ್ನು ಬಾಗಲೋಡಿ ಸಾಧಿಸುತ್ತಾರೆ. ಭಾರತದ ಸೆಳೆತದ ವಾಸನೆ, ಭಾರತಕ್ಕಾಗಿ ತನ್ನ ಸಂಸಾರವನ್ನು ಧಿಕ್ಕರಿಸುವ ಹಠದ ಗುಣ ಇಲ್ಲಿಯೂ ಬಂದಿವೆ. ಹಾಗೆಯೇ, ಭಾರತದ ಆಧ್ಯಾತ್ಮಿಕತೆ ಕುರಿತು ಹೆಮ್ಮೆ, ವಿಧಿಯ ತೀರ್ಮಾನಗಳನ್ನು ಜ್ಯೋತಿಷ್ಯವಾಣಿ ನುಡಿಯಬಲ್ಲದೆಂಬ ನಂಬಿಕೆ ಕತೆಕಟ್ಟುವಲ್ಲಿ ಹೊಸದಾಗಿ ಬಂದಿವೆ! ಭಾರತದ ಕಡೆಗೆ ಬಂದ ಈ ಪಾತ್ರಗಳು ಉದ್ಧಾರ ಹೊಂದುತ್ತವೆ ಎಂಬುದಾಗಿಯೂ ಕರ್ತೃಪ್ರಜ್ಞೆಗೆ ನಂಬಿಕೆ ಇದೆ.

ಎಷ್ಟೋ ಬಾರಿ ಬೆಕ್ಕಿನಂತೆ ಸಾವಿನ ದವಡೆಯಿಂದ ಪಾರಾಗಿದ್ದ ಯೋಧ. ಆತನ ತಾಯಿ ದೇವರನ್ನು ಮರೆತ ಕ್ಷಣಕ್ಕೆ ಮಡಿದ ಚಿತ್ರ ಯೋಧನ ಪುನರಾಗಮನ ಕತೆಯಲ್ಲಿದೆ. ಆಸ್ಪತ್ರೆ ಹಾಸಿಗೆಯಲ್ಲಿ ಈ ಕತೆ ಕಟ್ಟಿದ್ದ ಬಾಗಲೋಡಿಯವರಿಗೆ ಬದುಕನ್ನೂ ಆಯುಸ್ಸನ್ನೂ ಕಾಣುವುದು ಕಷ್ಟ ಎಂಬ ದಿಗ್ಭ್ರಮೆ ಸಹಜವೇ! ಅವರ ವಿದೇಶಾನುಭವವೇ ಕತೆಯಾಗಿ ಅರಳಿ, ಇಂಗ್ಲೆಂಡಿನ ಹಳ್ಳಿಯೊಂದರ ಜೀವನ ಚಿತ್ರಣವನ್ನೂ ಹೊಂದಿ, ಪಾಶ್ಚಾತ್ಯ ಅನುವಾದವೆಂಬಂತೆ ಭಾಸವಾಗುವ ಕತೆ ಇದು! ಇಲ್ಲಿಯ ಕಥಾಹಂದರ ನಿಜಘಟನೆಗಳನ್ನಾಧರಿಸಿದ್ದೆಂದು ಅಡಿಟಿಪ್ಪಣಿ ಕೊಟ್ಟು ತನ್ನ ಆಸ್ತಿಕತೆಯನ್ನು ಕತೆಗಾರ ಸಾಬೀತುಪಡಿಸಿಕೊಳ್ಳುತ್ತಾನೆ. ಬರ್ಲಿನಿನಿಂದ ಬಾಗೀರಥಿಗೆ ಕತೆಗೂ ಇಂಥದೇ ಅಡಿ ಟಿಪ್ಪಣಿ ಬಂದಿದೆ! ಈ ಎಲ್ಲ ಅವಸ್ಥಾಂತರಗಳ ನಡುವೆಯೂ ದೇವರಾಯರ ಸಹಜ ವ್ಯಂಗ್ಯ ಧಾಟಿ ಮತ್ತು ಎಲ್ಲಿ ಮಾನವೀಯತೆಯ ತಟ್ಟು ಇದೆಯೋ ಆ ಕಡೆಗೇ ಕತೆ ಹರಿವ ಗುಣ ಉಳಿದುಕೊಂಡೇ ಬಂದಿವೆ. ಇದಕ್ಕೊಂದು ಸಮರ್ಥ ಉದಾಹರಣೆ ಹುಲಿ ಜೋಯಿಸರ ಕಥೆ.

ಇದರಲ್ಲಿ ಹುಲಿ ಜೋಯಿಸ ಮತ್ತವನ ಜ್ಯೋತಿಷ್ಯ ಸತ್ಯವಾದುದು. ಜೀವನದ ವಿನ್ಯಾಸಕ್ಕೆ ಇದು ವಿಧಿ ಒದಗಿಸುವ ಚೌಕಟ್ಟು ಎಂಬ ಕರ್ತೃಪ್ರಜ್ಞೆ ನಂಬಿಕೆಯ ಗುಣವನ್ನೂ ಮೀರಿ ಕತೆ ಕಟ್ಟುವಲ್ಲಿರುವ ಮಾನವೀಯತೆಯ ಶಕ್ತಿಗಳು ಚಿಗುರುತ್ತವೆ. ಭವಿಷ್ಯವಾಣಿಯನ್ನು ನಿಷ್ಠುರವಾಗಿ ಹೇಳುವವ ಹುಲಿ ಜೋಯಿಸ. ಅವನು ಸತ್ಯವನ್ನೇ ಕಾಣುತ್ತಾನೆ, ಕೆಂಡದಂತೆ ಹೇಳುತ್ತಾನೆ. ಆದರೆ ತನ್ನ ಮರಣಪೂರ್ವದಲ್ಲಿ ಆತ ಉದ್ದೇಶಪೂರ್ವಕ ಸುಳ್ಳು ಭವಿಷ್ಯವನ್ನು ಹೇಳಿ ಬಸುರಿಯೋರ್ವಳನ್ನು ಬದುಕಿಸುತ್ತಾನೆ. ಈ ಕತೆ ‘ಮಾನವೀಯತೆ’ ಎಂಬ ಮೌಲ್ಯವನ್ನು ವಿವರಿಸುವ ಬಲವುಳ್ಳದ್ದು. ಮೂಗುತಿ ಹಾಕುವ ಆಚರಣೆ ಇಲ್ಲಿ ಸಾಂಪ್ರದಾಯಿಕ ನಂಬಿಕೆಯಾಗದೆ ಜೀವ ಉಳಿಸುವ ತಂತ್ರವಾಗುತ್ತದೆ. ಜ್ಯೋತಿಷ್ಯವಾಣಿಯ ಶಕ್ತಿ ಒಂದು ನಂಬುಗೆಯ ಹಂತದಲ್ಲೇ ನಿಲ್ಲದೆ ‘ಕಾವ್ಯಸತ್ಯ’ವೆಂಬ ಹಾಗೆ ಕತೆಯೊಳಗೆ ಸಮರ್ಥನೆ ಪಡೆಯುತ್ತದೆ. ಬಸುರಿಯ ಸಂಸಾರ ಒಡೆಯಲು ಆಕೆಯ ಗಂಡ ಯುದ್ದಕ್ಕೆ ತೆರಳಿ ಪರಂಗಿ ಸಂಪರ್ಕ ಪಡೆದುದೇ ಕತೆಯ ವಿಶಾಲ ಸಮಾಜಗ್ರಹಿಕೆಯಲ್ಲಿ ಕಾಣುವ ವಿಶಿಷ್ಟ ಕಾರಣವಾಗಿದೆ. ಇಲ್ಲಿ ಹುಲಿ ಜೋಯಿಸನೇ ಮಹಾ ಉದ್ಧಟ. ಜ್ಯೋತಿಷ್ಯದ ಸತ್ಯವೇ ಅವನ ರಕ್ತಕ್ಕೆ ಬೆಸೆದುಹೋದ ಮೂಲವಾಸನೆ! ದೇವರಾಯರ ಕಥನಕ್ರಮದ ಅಂತರಂಗ ಅವೇ ಹಳೆಯ ವಿಶಿಷ್ಟ ಪಟ್ಟುಗಳನ್ನು ಕಳೆದುಕೊಂಡಿಲ್ಲ! ತುಳುನಾಡಿನ ‘ಬಲಿಮೆ’ (ಜ್ಯೋತಿಷ್ಯ) ಪದ್ಧತಿಯ ಸಂಸ್ಕೃತಿ ವಿವರಗಳು ಕತೆಗಾರನನ್ನು ಕಥನದುದ್ದಕ್ಕೆ ಪೋಷಿಸಿದ್ದೂ ಇಲ್ಲಿಯ ಇನ್ನೊಂದು ಅಂಥ ಬಾಗಲೋಡಿ ಗುಣವೇ.

[ವಿಸೂ: ಈ ಲೇಖನದ ಉದ್ದವನ್ನು ಗಣಿಸಿ ಉತ್ತರಾರ್ಧವನ್ನು ಮುಂದಿನ ಕಂತಿನಲ್ಲಿ ಪ್ರಕಟಿಸುತ್ತಿದ್ದೇನೆ]

(ಮುಂದುವರಿಯಲಿದೆ)