(‘ಪಡ್ಡಾಯಿ’ ಚಿತ್ರ ನಿರ್ಮಾಣದ ಅನಧಿಕೃತ ಕಥನ – ೨)
ಮನೆ, ಮನೆ – ಯಾಕ್ಟಿಂಗ್ ಸೂಪರ್ರ್!
ಸಿನಿಮಾಕ್ಕೆ ದೊಡ್ಡ ಹಣಕಾಸಿದ್ದರೆ ಮನೆ, ಪರಿಸರದ ‘ಆಯ್ಕೆ’ ಸುಲಭ. ಕತೆಗೆ ಬೇಕಾದ ಪರಿಸರ, ಮನೆಯನ್ನು, ಚುರುಕಾಗಿ ತತ್ಕಾಲೀನವಾಗಿ ಕಟ್ಟುವ ನಿಪುಣರು ಈ ಉದ್ಯಮದಲ್ಲಿದ್ದಾರೆ. ಈ ರಚನೆಗಳು ನಿರ್ದಿಷ್ಟ ಉದ್ದೇಶ ಮತ್ತು ಸನ್ನಿವೇಶದಲ್ಲಿ ಕ್ಯಾಮರಾ ಕಣ್ಣಿಗೆ ಮಾತ್ರ ಸಾಚಾ ಸಾಬೀತಾಗುತ್ತವೆ. ಆದರೆ ಕಿರು ಬಜೆಟ್ಟಿನ ‘ಪಡ್ಡಾಯಿ’ ಸಹಜವಾಗಿರುವ ವ್ಯವಸ್ಥೆಗಳನ್ನೇ ತಮ್ಮ ಅಭಿವ್ಯಕ್ತಿಗೆ ಒಗ್ಗಿಸಿಕೊಳ್ಳಬೇಕಿತ್ತು. ಹೆಚ್ಚಾಗಿ ಅಂಥವು ನಿತ್ಯ ಬಳಕೆಯ ಸ್ಥಳಗಳೂ ಆಗುವುದರಿಂದ ಅನುಮತಿ, ಸಣ್ಣಪುಟ್ಟ ತಿದ್ದುಪಡಿ, ಸಂಭಾವನೆ ಇತ್ಯಾದಿ ಚೌಕಾಶಿಗಳನ್ನು ಮಾಡಿಕೊಳ್ಳುವುದು ಅವಶ್ಯ. ಕಡೇ ಗಳಿಗೆಯಲ್ಲಿ ಯಾವ್ಯಾವುದೋ ಕಾರಣಕ್ಕೆ ಕೆಲವೊಮ್ಮೆ ಅವು ತಪ್ಪುವುದು, ಚಿತ್ರ ತಂಡ ರಾಜೀ ಮಾಡಿಕೊಳ್ಳುವುದು – ಎಂದೂ ಮುಗಿಯದ ಕತೆ. ನಾಲ್ಕೈದು ಮನೆ, ಕಡಲ ಕೊರೆತದ ಹಾವಳಿ, ಮಾರುಕಟ್ಟೆ, ವಾಹನಗಳು, ಮಾಲ್, ರಸ್ತೆ, ‘ಮುಂಬೈ’, ಎಲ್ಲಕ್ಕೂ ಮುಖ್ಯವಾಗಿ ಅಸಲಿ ಮೀನುಗಾರಿಕಾ ಚಟುವಟಿಕೆಗಳೆಲ್ಲಕ್ಕೆ ಸ್ಥಳ, ಜನ ನಿಶ್ಚಯವಾದಮೇಲೇ ಚಿತ್ರೀಕರಣಕ್ಕೆ ಮುಹೂರ್ತ. ಇಲ್ಲವಾದರೆ ದಿನ ಬಾಡಿಗೆ ಲೆಕ್ಕದ ಕ್ಯಾಮರಾಗಳೇ ಚಿತ್ರದ ಕಿರು ಬಜೆಟ್ಟನ್ನು ಪೂರ್ಣ ಆಪೋಷಣ ತೆಗೆದುಕೊಂಡಾವು.
ಮನೆ, ದೃಶ್ಯಗಳ ಕುರಿತು ನನ್ನ ಅನುಭವ ಕಡತವನ್ನು ತೆರೆದಿಟ್ಟು, ಅಭಯನನ್ನು ಒಂದೆರಡು ಸಲ ನಾನು ಓಡಾಡಿಸಿದ್ದಿತ್ತು. ಅಲ್ಲದೆ ಇತರ ಕೆಲಸಗಳಿಗೆ ಆತ ನಾಕೆಂಟು ಸಲ ಮಂಗಳೂರು – ಉಡುಪಿ ಓಡಾಡಿದಾಗಲೂ ನಾನು ಇದ್ದೂ ಇಲ್ಲದೆಯೂ ಹುಡುಕಾಟ ನಡೆದೇ ಇತ್ತು. ರಾಷ್ಟ್ರೀಯ ಹೆದ್ದಾರಿ ಹೆಸರು ದೊಡ್ಡದು. ಆದರೆ ಕಲ್ಪಿತ ರಾಷ್ಟ್ರೀಯತೆಗೆ ಎಲ್ಲ ಪ್ರಾದೇಶಿಕ ಚಹರೆಗಳೂ ಪ್ರಾಕೃತಿಕ ಸೌಂದರ್ಯವೂ ಅಳಿದು ಹೋಗುವುದು ನನಗೆ ಒಪ್ಪಿಗೆಯಿಲ್ಲ. ಕಣ್ಕಟ್ಟಿ ವೇಗೋತ್ಕರ್ಷ ಸಾಧಿಸಿ, ಊರೂರು ಸಂಪರ್ಕಿಸುವುದಷ್ಟೇ ಬೇಕಾದವರಿಗೆ ಹೆದ್ದಾರಿ ಸರಿ. ಪಡ್ಡಾಯಿಯದೋ ಪಕ್ಕಾ ಪ್ರಾದೇಶಿಕ ಸನ್ನಿವೇಶ. ಇದಕ್ಕೆ ಹೆದ್ದಾರಿಗೆ ಬಹುತೇಕ ಸಮರೇಖೆಯಲ್ಲಿ, ಆದರೆ ಸದಾ ಒಂದು ಮಗ್ಗುಲಲ್ಲಿ ಸಮುದ್ರವನ್ನಿಟ್ಟುಕೊಂಡೇ ಓಡುವ ಮೀನುಗಾರಿಕಾ ದಾರಿಗಳು ತುಂಬ ಸಹಕಾರಿ. ಉಚ್ಚಿಲ, ಉಳ್ಳಾಲ ಮತ್ತೆ ಬೈಕಂಪಾಡಿಯಿಂದ ಮುಂದೆ ಮಲ್ಪೆಯವರೆಗೂ ನಾವು ಕಣ್ಣಿಗೇ ಚೌಕಟ್ಟು ಕಟ್ಟಿಕೊಂಡಂತೆ ಓಡಾಡಿದೆವು. ಅಲ್ಲಲ್ಲಿ ನಿಂತು, ವಿಚಾರಿಸಿ, ತುಸು ಅಲೆದು ಜಾಲಾಡಿದ್ದು ಸ್ವಲ್ಪ ಏನಲ್ಲ. ಈ ಪರಿಸರ ಚೆನ್ನಾಗಿದೆ ಆದರೆ ಮನೆ ಪೋಷ್. ಮನೆ ಅಡ್ಡಿಯಿಲ್ಲ ಆದರೆ ಕಡಲ ದೃಶ್ಯ ದೂರ. ನಮಗೆಲ್ಲ ಸರಿ ಎಂದರೆ ಮನೆಯವರು ಒಪ್ಪಲ್ಲ. ಮನೆಯವರು ಉತ್ಸಾಹ ತೋರಿಸಿದಲ್ಲಿ ಒಳಗೆ ಕಿಷ್ಕಿಂಧೆ – ಬೆಳಕು ಕೊಡುವುದು ಹೇಗೆ, ಕ್ಯಾಮರಾ ಇಡುವುದು ಎಲ್ಲಿ? ಇನ್ನು ಸಿನಿಮಾ ಎಂದದ್ದೇ ಕೆಲವರಿಗೆ ಮನೆ ಏನು, ಜತೆಗೇ ‘ಸೂಪರ್ ಯಾಕ್ಟರ್’, ‘ಗಾನಕೋಕಿಲೆ’ಯರನ್ನೂ (ಮನೆ ಮಗನೋ ಮಗಳೋ) ಉಚಿತವಾಗಿ ಒದಗಿಸುವ ಉಮೇದು! ಇನ್ನು ಕೆಲವರ ‘ಬಡತನ’ಕ್ಕೋ “ಸಿನಿಮಾದವರಲ್ಲವೇ” ಎಂಬ ದುರಾಸೆಗೋ ತಂಡ ಒಪ್ಪಿಕೊಂಡಿದ್ದಲ್ಲಿ ಹೊಸ ನಿರ್ಮಾಪಕರನ್ನೇ ಹುಡುಕಬೇಕಾಗುತ್ತಿತ್ತು.
ಹುಡುಕಾಟದ ಒಂದು ಸರ್ಕೀಟಿನಲ್ಲಿ ನಾನು ನನ್ನ ಸೈಕಲ್ಲನ್ನು ಕಾರಿಗೇರಿಸಿ ಒಯ್ದಿದ್ದೆ. ಆಗ ಸಸಿಹಿತ್ಲು (ಮುಂಡ) ಭೂಶಿರವನ್ನು ಅಭಯನಿಗೆ ತೋರಿಸಬೇಕೆಂದಿದ್ದೆ. ಆದರೆ ಅದು ಸರಕಾರೀಕರಣಗೊಂಡ ಮೇಲೆ ಒಂಬತ್ತೂವರೆಯವರೆಗೆ ಗೇಟ್ ಬಂದ್ ಎಂದು ಅಂದು ತಿಳಿಯಿತು. ಎಂಟು ಗಂಟೆಗೇ ಅಲ್ಲಿದ್ದ ನಮಗೆ ತಪ್ಪಿತು. ಗಾದೆ ಇರಬಹುದು – ಹೊಳೆ ನೀರಿಗೆ ದೋಣಿಯವನ ಅಪ್ಪಣೆಯೇ? ಆದರೆ ಇಲ್ಲಿ ಕಡಲಿಗೇ ಬೀಗ ಹಾಕಿದ್ದಾರೆ!! ಕಾಪು ದೀಪಸ್ತಂಭ, ಹತ್ತೆಂಟು ಯುವಕ ಮಂಡಲಗಳ ರಂಗುರಂಗಿನ ‘ಬೀಚಾಭಿವೃದ್ಧಿ’, ರಿಸಾರ್ಟುಗಳ ಅಬ್ಬರ ಎಲ್ಲ ನಮ್ಮ ಆಯ್ಕೆಗೆ ದೂರ. ಕೊಳುವೈಲು, ಕೊಳಚೆಕಂಬಳ, ಹಳೆಯಂಗಡಿ, ಉದ್ಯಾವರಾದಿಗಳಲ್ಲಿ ವಿಚಾರಣೆ ನಡೆಸಿ, ಮಲ್ಪೆಯಲ್ಲಿ ಸೈಕಲ್ ಸಮೇತ ನಾನು ಕಳಚಿಕೊಂಡಿದ್ದೆ. ಅಭಯ ಇತರ ಕೆಲಸಗಳಿಗೆ ಉಡುಪಿಯತ್ತ ಮುಂದುವರಿದ.
ನನ್ನ ಕಾಲು ಮಂಗಳೂರತ್ತ ಸೈಕಲ್ ಪೆಡಲುತ್ತಿದ್ದರೂ ನೋಟ ಅರಸುತ್ತಿದ್ದದ್ದು, ಮನದ ಲೆಕ್ಕಾಚಾರಗಳೆಲ್ಲ ಸಿನಿಮಾದ್ದೇ. ಕೆಲವನ್ನು ನನ್ನ ಪುಟ್ಟ ಕ್ಯಾಮರಾದಲ್ಲಿ ದಾಖಲಿಸಿಕೊಳ್ಳುತ್ತಲೂ ಇದ್ದೆ. ಬೆಳಿಗ್ಗೆ ಅಭಯನ ಜತೆ ನಾನು ಹೊರಟಾಗ ದೇವಕಿ, “ಅಭಯನ ಉಡುಪಿ ಹೋಟೆಲಿನ ಕೋಣೆಗೊಂದು ಹೆಚ್ಚಿನ ಗಿರಾಕಿ” ಎಂದಿದ್ದಳು. ಅದನ್ನು ಸುಳ್ಳು ಮಾಡಿ ನಾನು ಸಂಜೆ ಮನೆ ಸೇರಿದ್ದೆ! ಅಭಯ ಈ ಸಿನಿಮಾಕ್ಕೆ ತಯಾರಿ ಹಂತದ ಪ್ರಚಾರವನ್ನು ನಿರಾಕರಿಸಿದ್ದ. ನನಗೋ ಅಂದಂದು ಕಂಡದ್ದರಲ್ಲಿ ಕೆಲವನ್ನಾದರೂ ಸಾಮಾಜಿಕ ಹಿತ ದೃಷ್ಟಿಯಿಂದ ಅಂದದ್ದೇ ಪ್ರಚುರಿಸಿಬಿಡುವ ಉತ್ಸಾಹ. ಹಾಗಾಗಿ ಸಿನಿಮಾ ಸುದ್ದಿಯನ್ನು ಮಾತ್ರ ಮರೆಯಲ್ಲಿಟ್ಟು, ಅನುಭವಗಳ ಕೆಲವು ಟಿಪ್ಪಣಿಗಳನ್ನು ಪ್ರಕಟಿಸುತ್ತಲೇ ಬಂದೆ. ಅವು ಇಂದು ಪರೋಕ್ಷವಾಗಿ ಈ ಸಿನಿ-ನಿರ್ಮಾಣ ಕಥನಕ್ಕೂ ಸಹಕಾರಿಯಾಗಿವೆ.
ಮಲ್ಪೆ ಮೀನ ದಕ್ಕೆ, ಮಾರುಕಟ್ಟೆ
ಮಲ್ಪೆ ಮೀನುಗಾರಿಕಾ ಬಂದರ್ ನನಗೆ ನಾಲ್ಕು ವರ್ಷಗಳ ಹಿಂದಿನ ಪರಿಚಯ. ಅಂದು ‘ಸಕ್ಕರೆ’ ಸಿನಿಮಾದ ಚಿತ್ರೀಕರಣ ನಡೆದದ್ದೂ ಇಲ್ಲೇ. ಹೀರೋ ಗಣೇಶ್ಗೆ ಮಾಸ್ ಮಾದರ ‘ಗೂಂಡಾಗಳು’ ಗೂಸಾ ಕೊಡುತ್ತಿದ್ದ ದೃಶ್ಯಗಳು. ಇಲ್ಲಿ ಕೊಟ್ಟ ಹಾಗೆ ಮಾಡಿದ್ದಕ್ಕೂ ಅಲ್ಲಿ ಅನುಭವಿಸಿದಂತೆ ಮಾಡಿದ್ದಕ್ಕೂ ನಿಜದಲ್ಲಿ ಸಮಯದ ಅಂತರ ಕೆಲವೊಮ್ಮೆ ಕಾಲರ್ಧ ಗಂಟೆ – ನನಗಂತೂ ವಿಶಿಷ್ಟ ಅನುಭವ. ಈಗ ಅದೇ ಸ್ಥಳದಲ್ಲಿ – ಪಡ್ಡಾಯಿ ಚಿತ್ರೀಕರಣ ಎನ್ನುವಾಗ, ನಡುವೆ ಎಲ್ಲೋ ಒಂದು ದಿನ, ನೋಡುವ ಕುತೂಹಲಕ್ಕೆ ನಾನು ಮೋಟಾರ್ ಸೈಕಲ್ಲೇರಿ ಹೋಗಿದ್ದೆ.
ಮಂಗಳೂರಿನ ಮೀನುಗಾರಿಕೆ ಉಳ್ಳಾಲ, ಬೆಂಗ್ರೆಗಳೊಡನೆ ಚದುರಿಹೋದಂತಿದೆ. ಎಲ್ಲಕ್ಕು ಕೇಂದ್ರವಾಗಬೇಕಿದ್ದ ನೇತ್ರಾವತಿ ತೀರದ ಹಳೆ ಬಂದರ್, ಅವ್ಯವಸ್ಥೆಯಲ್ಲಿ ಮುಳುಗಿಹೋಗಿದೆ. ಅದಕ್ಕೆ ಹೋಲಿಕೆಯಲ್ಲಿ ಮಲ್ಪೆಯದ್ದು ತುಂಬಾ ದೊಡ್ಡದಾಗಿಯೂ ಹೆಚ್ಚು ವ್ಯವಸ್ಥಿತವಾಗಿಯೂ ಇದೆ. ಹಲವು ಅಂಕಣಗಳಲ್ಲಿ, ಅಪಾರ ಸಂಖ್ಯೆಯಲ್ಲಿ ಇಲ್ಲಿ ದೋಣಿ ಚಟುವಟಿಕೆಗಳನ್ನೂ ಮೀನು ವಹಿವಾಟನ್ನೂ ಕಾಣಬಹುದು. ಶಾಲೆಯಲ್ಲಿ (ನಾನ್ ವೆಜ್) ಮಾಷ್ಟ್ರುಗಳು ಬಯ್ಯುವಾಗ ಮೀನ ಮಾರುಕಟ್ಟೆ ಉಲ್ಲೇಖ ಯಾರು ಕೇಳಿಲ್ಲ. ಆದರೆ ಅದು ನಿಜದಲ್ಲಿ ಹೇಗಿರುತ್ತದೆ ಎಂಬ ಅನುಭವ ನನಗೆ ಮಲ್ಪೆಯಲ್ಲಿ ದಕ್ಕಿತು. ಕಡಲ ಅರಬ್ಬಾಯಿಗೆ ಇದು ದೂರ. ಆದರೆ ಬೋಟುಗಳ ಫಟ್ಫಟಾ, ದೋಣಿ ತಂದ ಸಮೃದ್ಧ ‘ಫಸಲು’ ಗೋರುವವರ ಹುಯ್ಲು, ದಂಡೆಯಲ್ಲಿ ಸಣ್ಣ ಪುಟ್ಟ ವಿಂಗಡಣೆಗಳನ್ನು ಗುಪ್ಪೆ ಹಾಕಿಕೊಂಡು ಹರಾಜುವ ಮಂದಿಯ ಬೊಬ್ಬೆ, ಊರಿನ ತಿರುಗಾಡಿ ವ್ಯಾಪಾರಕ್ಕೆ ಬುಟ್ಟಿ ತುಂಬಿಕೊಳ್ಳುವ ಮತ್ಸ್ಯಗಂಧಿಯರ ಕಚಪಿಚ, ಹೆಚ್ಚು ಓಡಾಟ ಕಷ್ಟವೆನ್ನಿಸಿ ಇಲ್ಲೇ ಸಾಲುಗಟ್ಟಿ ಕುಳಿತು ಬಿಡಿ ಗಿರಾಕಿ ಹುಡುಕುವ ಬಾಯಮ್ಮರ ಕರೆ ಕಿವಿ ತುಂಬುವಷ್ಟಿತ್ತು. ಬೋಟಿನ ಮೀನ ರಾಶಿ ಕ್ರೇಟು ತುಂಬಿ ಹರಿದು ದಕ್ಕೆ ರಾಶಿಯಾಗುತ್ತಿದ್ದಂತೆ, ವಿಶಿಷ್ಟಗಳನ್ನು ಆಯುವವರು, ಸಾಮಾನ್ಯವನ್ನು ಮತ್ತೆ ಕ್ರೇಟು ತುಂಬುವವರು, ತುಸು ಆಚೀಚೆ ತರಹೇವಾರಿ ಗುಪ್ಪೆಗಳಲ್ಲಿಟ್ಟು ಹರಾಜಿಗೆ ಕೂಗುವವರು, ಎಡೆಯಲ್ಲಿ ಒಂದೆರಡು ಅತ್ತಿತ್ತ ಉದುರುವುದು, ಜಂಗುಳಿ ಅದನ್ನು ನಿರ್ಲಕ್ಷ್ಯದಲ್ಲಿ ತುಳಿದೋ ಕಾಲಿನಲ್ಲೇ ಸರಿಸಿಯೋ ‘ಮಾಲು, ವಹಿವಾಟು’ಗಳ ಗದ್ದಲದಲ್ಲೇ ಕಳೆದುಹೋಗುವುದು ನಡೆದೇ ಇತ್ತು. ಆದರೆ ಇವೆಲ್ಲವನ್ನು ಹೊಸದಾಗಿ ನೋಡುತ್ತಿದ್ದ ನನಗೆ ಅಲ್ಲಲ್ಲಿ ಮೊಳದುದ್ದದ ಮೀನುಗಳು ಮತ್ತು ಕೆಂಪು ಮೀನುಗಳು ವಿಶೇಷವಾಗಿ ಬಿಡುಗಣ್ಣಿಂದ ನನ್ನನ್ನು ಇರಿಯುವಂತೇ ಕಾಣಿಸುತ್ತಿತ್ತು. ಇಲ್ಲ, ಅವು ಗೊಂಬೆಯಷ್ಟೇ ಸತ್ಯ ಎಂದು ಸಮಾಧಾನಿಸಿಕೊಳ್ಳುತ್ತಿದ್ದೆ. ಅಷ್ಟೇನೂ ಬೇಡಿಕೆಯಿಲ್ಲದ ಸತ್ತ ಏಡಿಗಳ ಗುಪ್ಪೆಯೊಂದರ ಅಂಚಿನಲ್ಲಿದ್ದ ಒಂದನ್ನು ಯಾರೋ ಮೆಟ್ಟಿ ಞರಕ್ಕಿಸಿದಾಗ ನನಗೆ ನೋವಿನ ಧ್ವನಿ ಕೊಡುವ ಹಾಗಾಗಿತ್ತು. ಅವೆಲ್ಲದರ ಮಿಶ್ರ ಹಸಿ ಗಮಲಿಗೆ ದೋಣಿಗಳ ಕಲ್ಲೆಣ್ಣೆ ಕಮಟು, ಜನರ ಬೆವರವಾಸನೆ, ಅಲ್ಲಿ ಇಲ್ಲಿ ಮಡುಗಟ್ಟಿದ ರಕ್ತಮಿಶ್ರಿತ ನೀರು, ಆಚೆ ಹರಿವು ಮರೆತ ಚರಂಡಿ ದುರ್ನಾತ ಕಲಸಿಹೋಗಿ ನನಗೊಮ್ಮೆ ಉಫ್ ಎನ್ನುವ ಸ್ಥಿತಿ. ಆಗ…
ಜಂಗುಳಿಯ ಯಾವುದೋ ಮೂಲೆಯಲ್ಲಿ, ರಣಗುಡುವ ಬಿಸಿಲಿನಲ್ಲಿ, ರಂಗಿನ ಕೊಡೆಯಡಿಯಲ್ಲಿ ಸಿನಿ-ಕ್ಯಾಮರಾ, ಅದರ ಬೆನ್ನು ಬಿದ್ದಂತೆ ವಿಷ್ಣು, ಅಭಯ ದುರುಗುಟ್ಟುವುದು ಕಂಡೆ. ಅವರ ಕ್ಯಾಮರಾದ ನೇರಕ್ಕೆ ದೃಷ್ಟಿ ಬೆಳೆಸಿದಾಗ ಸಾಲುಗಟ್ಟಿ ಕುಳಿತ ಮೀನಕ್ಕಂದಿರ ಎಡೆಯಲ್ಲಿ ತಮ್ಮದೂ ಹಡಬೆ ಚೆಲ್ಲಿ “ಬಲೇ ಬಲೇ” ಎನ್ನುವ ‘ಪಡ್ಡಾಯಿ’ಯ ಸುಗಂಧಿ (ಬಿಂದು ರಕ್ಷಿದಿ) ಮತ್ತು ಪ್ರಮೀಳಾ (ಮಲ್ಲಿಕಾ ಜ್ಯೋತಿಗುಡ್ಡೆ)ರನ್ನು ಗುರುತಿಸಿದೆ. ಅನಂತರ ನಿಧಾನಕ್ಕೆ ಅಭಯನ ಸಹಾಯಕ ರಕ್ಷಿತ್ ಗುರುತಿಸಿದೆ. ಕ್ಯಾಮರಾ ಚಾಲೂ ಆಗುವ ಮೊದಲು ಎತ್ತರಿಸಿದ ಧ್ವನಿಯಲ್ಲಿ “ಸೈಲೆನ್ಸ್” ಬೊಬ್ಬಿರಿವ ರಕ್ಷಿತ್ ಇಲ್ಲಿ ಮಾರುಕಟ್ಟೆ ಗದ್ದಲಕ್ಕೆ ಸೋತಿದ್ದರು. ಇನ್ನೋರ್ವ ಸಹಾಯಕ ಪ್ರಯಾಗ್ ಮತ್ತು ಕೆಲವು ನಟರನ್ನೇ ‘ಸ್ವಯಂಸೇವಕ’ರಾಗಿ ಬಳಸಿಕೊಂಡು, ಸಂತೆಯ ಜನಗಳು ಕನಿಷ್ಠ ಕ್ಯಾಮರಾ ದೃಷ್ಟಿಗಾದರೂ ಅಡ್ಡ ಬರದಂತೆ ಸುಧಾರಿಸುತ್ತಿದ್ದರು. ಇವೆಲ್ಲ ನನಗ್ಯಾಕೆ ಎಂದು ತುಸು ಆಚೆಗೊಬ್ಬ ಪೋಲಿಸ್ ಅಧಿಕಾರಿ, ಆಗಾಗ ಟೊಪ್ಪಿ ತೆಗೆದು ಬೆವರೊರೆಸುತ್ತ, ತುಂಡು ನೆರಳು ಹುಡುಕುತ್ತಲಿದ್ದ. “ಈತನಾದರೂ ಸಿನಿ-ತಂಡಕ್ಕೆ ಸಂತೆ ಸುಧಾರಿಸುವಲ್ಲಿ ಸಹಾಯ ಮಾಡಬಾರದೇ” ಎಂದು ನನ್ನಲ್ಲಿ ಗೊಣಗು ಹುಟ್ಟಿತ್ತು. ಅಷ್ಟರಲ್ಲಿ ಪಕ್ಕದಲ್ಲೇ ಚೌಕುಳಿ ಕಂಬಾಯಿ ಉಟ್ಟು, ತಲೆಗೊಂದು ಕಿರುವಸ್ತ್ರ ಸುತ್ತಿದ್ದ ಹರಕು ಗಡ್ಡದ ಮೀನುಗಾರ “ಪಾಪ, ಸಂತೋಷ್ ಬಿಸಿಲಿಗೆ ಬಾಡಿ ಹೋಗಿದ್ದಾರೆ ಸಾರ್!” ಎಂದ. ಅರೆ, ಇದು ಪರಿಚಿತ ಧ್ವನಿ, ಎಂದು ಮೀನುಗಾರನ ಮುಖ ನೋಡಿದರೆ ಚಂದ್ರಹಾಸ ಉಳ್ಳಾಲ್, ಅಲ್ಲಲ್ಲ, ‘ಪಡ್ಡಾಯಿಯ ಬನ್ನಂಜೆ’! ಬಾಡಿದ ‘ಪೋಲಿಸ್’ ಕೂಡಾ ಇಲ್ಲಿ ಠಕ್ಕೇ – ಸಂತೋಷ್ ಶೆಟ್ಟಿ!
ಬಹುತೇಕ ಸೂರ್ಯ ಪಡ್ಡಾಯಿಗೆ ವಾಲುವವರೆಗೂ ಪೂರ್ವಾಹ್ನದ ಚಿತ್ರೀಕರಣ ನಡೆದೇ ಇತ್ತು. ಅನಂತರ ಸ್ವಲ್ಪ ಆಚೆಗೆ ತಂಡದ ವ್ಯವಸ್ಥಾಪಕ ಶಬರೀಶ ಹೆಬ್ಬಾರ್ ಕಷ್ಟದಲ್ಲಿ ಒಂದಷ್ಟು ಖಾಲೀ ಜಾಗ ಹಿಡಿದು ತತ್ಕಾಲೀನ ಬಿಸಿಲ ಮರೆ ಕಟ್ಟಿ, ನಾಲ್ಕು ಕುರ್ಚಿ ಹಾಕಿ, ತಂಡಕ್ಕೆ ಊಟದ ವ್ಯವಸ್ಥೆ ಮಾಡಿದ್ದರು. ಅಲ್ಲೇ ಅಂಚಿನಲ್ಲಿ ಕಸ ತುಂಬಿ ಹರಿವು ಮರೆತ ವೈತರಣೀ, ಇತ್ತ ಆಗಾಗ ಬೀಸುಗಾಳಿಗೆ ಬಣ್ಣ ಕೊಡುವ ದೂಳು, ನಲಿದಾಡುವ ಪ್ಲ್ಯಾಸ್ಟಿಕ್ ತೊಟ್ಟೆ. ಕೆಲವು ಕಲಾವಿದರು ಕುರ್ಚಿ ಸಾಲದೇ ಒಂದೂವರೆ ಕಾಲಿನಲ್ಲಿ ನಿಂತೇ ಇದ್ದರೆ, ನೆರಳಿನ ತುಣುಕೂ ಸಿಗದ ಧ್ವನಿಗ್ರಹಣದ ಜೆಮಿ ಡಸಿಲ್ವಾ ಲಾರಿಯೊಂದರ ಮರೆ ಸೇರಿದ್ದರು. ನಾನೂ ಎಡೆಯಲ್ಲಿ ತೂರಿಕೊಂಡು ಸರಳವೇ ಆದರೂ ಹೊಟ್ಟೆಯ ಕೊರತೆ ನೀಗಿಕೊಂಡೆ.
ಅಪರಾಹ್ನದ ಚಿತ್ರೀಕರಣ ತುಸು ಆಚೆಗೆ ವಿರಮಿಸಿದ್ದ ಬೋಟು ಸಾಲುಗಳ ನಡುವೆ ನಡೆಯುವುದಿತ್ತು. ಉರಿಉರಿ ಬಿಸಿಲು, ಬಹುತೇಕ ನಿರ್ಜನ ಕಟ್ಟೆಗಳ ಎರಡೂ ಮಗ್ಗುಲಿನಲ್ಲಿ ಒತ್ತೊತ್ತಾಗಿ ನಿಂತ ಬೋಟುಗಳು ನಸು ಗಾಳಿಯಲ್ಲಿ ಒಂದಕ್ಕೊಂದು ಹಗುರಾಗಿ ಮೈ ಒರಸುತ್ತ ತೂಕಡಿಸುವ ಸಮಯ. ಚಿತ್ರೀಕರಣದ ಉದ್ದಕ್ಕೆ ಬಿಡುವಾದಗೆಲ್ಲ ಕಾರ್ಕಳದಿಂದ ಬಂದು ವಿಚಾರಿಸಿಕೊಂಡು ಹೋಗುತ್ತಿದ್ದ ನಿರ್ಮಾಪಕ ನಿತ್ಯಾನಂದ ಪೈ ಅಲ್ಲಿಗೆ ಬಂದಿದ್ದರು. ಈಗ ‘ಮಫ್ತಿಯಲ್ಲಿದ್ದ ಪೊಲಿಸ್ ಅಧಿಕಾರಿ’ (ಸಂತೋಷ್ ಶೆಟ್ಟಿ) ಉಡುಪಿಯ ಸಂಬಂಧಿಕರಲ್ಲಿ ಊಟ ಮುಗಿಸಿ, ಸ್ವಂತ ಕಾರಿನಲ್ಲಿ ಬಂದು ಕಾದಿದ್ದರು. ಕನಿಷ್ಠ ಬಟ್ಟೆಯಲ್ಲಿದ್ದ ‘ಕೋರ್ಟಿನ ಪೀವನ್ ರಾಕೇಶ’ನನ್ನು (ಅವಿನಾಶ್ ರೈ) ಪ್ರಸಾದನಕಾರ ಇನ್ನಷ್ಟು ‘ಬಳಲಿಸುವ’ ಕೆಲಸ ನಡೆಸಿದ್ದರು. ‘ಪೊಲಿಸ್’ ಸಹಾಯಕರಾಗಿ ಕಾಣಲು ಇದ್ದ ಇಬ್ಬರು ಬಟ್ಟೆ ಬದಲಿಸಲು ಯಾವುದೋ ಬೋಟಿನ ಕ್ಯಾಬಿನ್ ಹೊಕ್ಕಿದ್ದರು. ಸನ್ನಿವೇಶ, ಸ್ಥಳ, ಕ್ಯಾಮರಾದ ನಿಲುಗಡೆ ಎಂದೇನೇನೋ ಓಡಾಟ, ಚರ್ಚೆಗಳಲ್ಲಿ ಅಭಯ, ವಿಷ್ಣು ಮತ್ತಿತರರು ಮುಳುಗಿದ್ದರೂ ಆಗೀಗ “ಕ್ಯಾಮರಾ, ಲೈಟಿನವರು ಯಾಕೆ ಬರಲಿಲ್ಲ, ಈ ಶಬರೀಶ್ ಎಲ್ಲಿ…” ಎಂದು ಗೊಣಗೂ ಕೇಳುತ್ತಿತ್ತು.
ಅತ್ತ ಅವಸರದಲ್ಲಿ ತನ್ನ ಊಟ ಮುಗಿಸಿದ್ದೇ ಶಬರೀಶ್ ಬೈಕೇರಿ, ಬಂದರದ ಬಾಡಿಗೆ ಟೆಂಪೋ ನಿಲ್ದಾಣಕ್ಕೆ ಧಾವಿಸಿದ್ದರು. ಬೆಳಿಗ್ಗೆ ತಮ್ಮ ಎರಡು ‘ನಿರ್ಮಾಣ ವಾಹನ’ಗಳಿಗೆ ತಂಗಲು ಎಲ್ಲೆಲ್ಲೋ ಜಾಗ ಹುಡುಕಿ, ಕೊನೆಯಲ್ಲಿ ಗಳಿಸಿದ್ದ ಜಾಗವದು. ಅಲ್ಲೂ ಊಟ, ವಿಶ್ರಾಂತಿಗೆಂದು ಚದುರಿದ್ದ ಸಿಬ್ಬಂದಿಗಳನ್ನು ಜಾಗೃತಗೊಳಿಸಿ, ಪುನಃ ವಾಹನ ಹೊರಡಿಸುವಾಗಲೇ ತಿಳಿಯಿತು – ಯಾರೋ ಕಿಡಿಗೇಡಿಗಳು ಎಲ್ಲ ಚಕ್ರಗಳ ಗಾಳಿ ಬಿಟ್ಟಿದ್ದರು! ಮತ್ತೆ ಶಬರೀಶ ಬೈಕೋಡಿಸಿ, ಎಲ್ಲೋ ಗಾಳಿ ತುಂಬುವವನನ್ನು ಹುಡುಕೀ ತಂದೂ.! ಮತ್ತೆ ಚಿತ್ರೀಕರಣ ಶುರುವಾಗುವಾಗ ನಾನು ಸುಸ್ತು. ನನ್ನದೇನಿದ್ದರೂ ಬಹುತೇಕ ವ್ಯವಸ್ಥಿತ ವೃತ್ತಿರಂಗದ ಅನುಭವ. ಸಿನಿಮಾ ರಂಗದ ಅಷ್ಟು ಸಣ್ಣ ಗೊಂದಲ ಕಂಡೇ “ಸಾಕಪ್ಪಾ ಸಾಕು” ಎಂದುಕೊಂಡೆ. ಮುಂದಿನ ವಿವರಗಳಿಗೆ ನಿಲ್ಲದೆ, ಎಲ್ಲರಿಗೂ ಶುಭ ಹಾರೈಸಿ ಮಂಗಳೂರಿಗೆ ಮರಳಿದ್ದೆ.
ಕಡಲ ಕೊರೆತದಲ್ಲಿ ಮೂಸೋಡಿ ಪುರಾಣ!
ಪೂರ್ವ ತಯಾರಿಯ ದಿನಗಳಲ್ಲಿ ನಾನು ಅಭಯನಿಗೆ ಕೆಲವು ಕಡಲ ಕೊರೆತಕ್ಕೀಡಾದ ಮನೆಗಳನ್ನು ತೋರಿಸಿದ್ದೆ. ಆದರೆ ಚಿತ್ರೀಕರಣದ ದಿನ ಬಂದಾಗ ತಿಳಿಯಿತು – (ಕಾಲ ಮಾತ್ರವಲ್ಲ,) ಕಡಲೂ ಕಾಯುವುದಿಲ್ಲ! ಉಚ್ಚಿಲದಲ್ಲಂದು ಹತ್ತಿಪ್ಪತ್ತಡಿ ಆಚೆ ಉಲ್ಲೋಲ ಕಲ್ಲೋಲ ನಡೆಸಿದ್ದ ಸಮುದ್ರದಲೆಗಳು ದಂಡೆ ಮುಟ್ಟುವಾಗ ಕಿಲಕಿಲನೆ ನಕ್ಕಂತಿತ್ತು. ಬಿಂಕದಲ್ಲಿ ತಲೆ ಎತ್ತಿ ನಿಂತಂತಿದ್ದ ಹೊಸ ಮಹಡಿ ಕಟ್ಟಡವೊಂದು “ಎಲ್ಲೋ ಪಾದ ತೊಳೆಯಲು ಬಂದಿವೆ” ಎಂದು ಗತ್ತಿನಲ್ಲೇ ಇತ್ತು. ಆದರೆ ಇಂದು ಅದರ ‘ತಲೆ’ ಮಣಿಯುವುದರೊಡನೆ ಪೂರ್ಣ ದೇಹ ಹುಡಿಯಾಗಿಹೋಗಿತ್ತು!
ನಾಲ್ಕೈದು ಬೇಸಗೆಗಳಲ್ಲಿ ವಿಸ್ತಾರ ಮರಳ ಹಾಸು ತೆರೆದಿಡುತ್ತ ಬಂದ ಉಳ್ಳಾಲ ಕಡಲಂಚಿನಲ್ಲೊಂದು ಚಂದದ ಪುಟ್ಟ ಮನೆ. ಅದರ ಯಜಮಾನನೆಂದು ಭ್ರಮಿಸಿದ್ದ ಬಡಪಾಯಿ ಖರೀದಿಸಿದ್ದ ಘನ ‘ನಿವೇಶನ’, ಕಟ್ಟಿಸಿದ್ದ ಗಟ್ಟಿ ಮನೆ, ತೋಡಿಸಿದ್ದ ಬಾವಿ, ಇಳಿಸಿದ್ದ ಪಂಪು, ಮೇಲಿರಿಸಿದ್ದ ಟಾಂಕು, ನೆಟ್ಟ ತೆಂಗು, ಅರಳಿಸಿದ ಮಲ್ಲಿಗೆ ಎಂದಿತ್ಯಾದಿ ಎಲ್ಲ ಈಗ ‘ಅನುಪಮೇಯ ಯಜಮಾನ’ನ (ಕಡಲು/ ಪ್ರಕೃತಿ) ಹೊಡೆತಕ್ಕೆ ಕುರುಹುಳಿಯದೆ ಅಳಿಸಿ ಹೋಗಿತ್ತು. ಇಂಥ ಬಿಡಿ ಚಿತ್ರಗಳ ಮೊತ್ತವೇ ಸಂಗಮಿಸಿದಂತೆ…
ಮಂಜೇಶ್ವರದ ಪುಟ್ಟ ಹೊಳೆಯೊಂದರ ಅಳಿವೆಯ ದಕ್ಷಿಣ ದಂಡೆಯಲ್ಲಿರುವ ಮೀನುಗಾರರದೇ ಪುಟ್ಟ ಹಳ್ಳಿ ಮೂಸೋಡಿ. ಹೊಳೆಯ ಉತ್ತರ ದಂಡೆಯಲ್ಲಿನ ಪ್ರಾಕೃತಿಕ ಹಾಸು ಬಂಡೆಗಳ ಎಡೆಯಲ್ಲಿ ಇನ್ನೂ ಚಲಾವಣೆಯಲ್ಲಿರುವ ಮೀನುಗಾರಿಕಾ ಬಂದರ ಮಂಜೇಶ್ವರದ್ದೇ. ಅದರ ಸೌಕರ್ಯ ನಂಬಿಯೇ ಮೂಸೋಡಿಯ ಕಿನಾರೆಯಲ್ಲಿ ಮೀನುಗಾರರ ಹಳ್ಳಿ ಬೆಳೆದಿರಬೇಕು. ಈ ವಲಯಕ್ಕೆ ಉಪ್ಪಳದಿಂದಷ್ಟೇ ದಾರಿ ಸಂಪರ್ಕ. ಅಲ್ಲಿಗೆ ಮೊದಲ ಬಾರಿಗೆ ನಾನು ಅಭಯ ಇಬ್ಬರೇ ಕಾರೇರಿ ಹೋಗಿದ್ದೆವು. ದಾರಿ ಸುಮಾರು ನಾಲ್ಕು ಕಿಮೀ ಓಟದ ಕೊನೆಯಲ್ಲಿ ನಮ್ಮ ಕಾರಿಗೆ, ಪಶ್ಚಿಮಕ್ಕೊಂದು ನೇರ ನುಣ್ಣನ್ನ ಕವಲು ತೋರಿತ್ತು. ಆದರೆ ಅದು ಒಮ್ಮೆಗೆ ಐದಾರು ಅಡಿ ಉಸುಕಿನಲ್ಲಿ ಕುಸಿದು ಬೊಬ್ಬಿಡುವ ಅಲೆಗಳಲ್ಲಿ ಮಟಮಾಯವಾಗಿತ್ತು. ಕಾರನ್ನು ಹಿಂದೆ ನಿಲ್ಲಿಸಿ ಮತ್ತೆ ಅಲ್ಲಿ ನೋಡಿದ್ದು, ಕೇಳಿದ್ದು ಸ್ವಲ್ಪವೇ!
ಆ ದಾರಿ ಇನ್ನಷ್ಟು ಪಶ್ಚಿಮಕ್ಕೆ ಬಂದು, ಎಡ ಬಲಕ್ಕೂ ಸುಸ್ಥಿತಿಯ ಕವಲು ಹೊಂದಿತ್ತಂತೆ. ದೀಪಕಂಬ, ಕೊಳಾಯಿಸಾಲು, ಇಕ್ಕೆಲಗಳಲ್ಲೂ ಅಸಂಖ್ಯ ಮನೆಗಳು, ವಠಾರ, ಅಂಗಡಿ ಇತ್ಯಾದಿಗಳೆಲ್ಲ ಇಂದು “ಇದ್ದವು” ಖಾತೆಗೆ ಸೇರಿಹೋಗಿವೆ. ಅವಕ್ಕೆ ಸ್ಥಳೀಯಾಡಳಿತದ ಅನುಮತಿ, ವಿವಿಧ ಇಲಾಖೆಗಳ ಪೂರೈಕೆ, ಅಧಿಕೃತ ಅನಧಿಕೃತ ರುಸುಮು, ಲೆಕ್ಕವಿಲ್ಲದ ಶ್ರಮ, ಕಡುಕಷ್ಟದಲ್ಲಿ ಗಳಿಸಿದ ಹಣ ಹೀಗೆ ಏನೇನೋ ವಿನಿಯೋಗವಾಗಿತ್ತು. ಇಂದು ಎಲ್ಲವನ್ನೂ ಯಾವುದೇ ನೋಟೀಸು ಬಿಡದೇ ರಸೀದಿ ಕೊಡದೇ ಕಡಲು ಒಯ್ಯುತ್ತಲೇ ಇದೆ. ಅಲೆಗಳ ಆಟೋಪ “ಇನ್ನಷ್ಟು, ಮತ್ತಷ್ಟು…” ಎಂದೇ ಚಪ್ಪರಿಸುತ್ತಿದ್ದಂತೇ ಕೇಳುತ್ತಿತ್ತು.
ಉಳ್ಳಾಲದ ನಾಗರಿಕ ವಲಯಗಳ ಕಡಲಕೊರೆತವೂ ಬಹುತೇಕ ಇಂಥದ್ದೇ ಚಿತ್ರ. ಇಲ್ಲಿನ ತೋರಿಕೆಯ ಕಡಲಕೊರೆತಗಳು ವ್ಯಕ್ತಿ ಮಿತಿಯಲ್ಲಿ ದಾರುಣ. ಆದರೆ ಇವು, ಸರಕಾರಗಳು ಉಪಪರಿಣಾಮಗಳ ಅರಿವಿದ್ದೂ ಕೈಗೊಂಡ ದೊಡ್ಡ ಯೋಜನೆಗಳ ಫಲ. ಇಲ್ಲಿ ಮಂಜೇಶ್ವರ ಮೀನುಗಾರಿಕಾ ಬಂದರಿನ ವಿಸ್ತರಣೆ, ಉಳ್ಳಾಲದಲ್ಲಿ ನೇತ್ರಾವತಿ ಅಳಿವೆ ಬಾಗಿಲಿಗೆ ಹಾಕುತ್ತಿರುವ ಭಾರೀ ತಡೆಗೋಡೆ. ಅವು ಸುದೂರದಲ್ಲಿ ಕಲಕಲಿಸಿಕೊಂಡಿದ್ದ ಅಲೆಗಳನ್ನು ಹೊಸದೇ ದಿಕ್ಕಿಗೆ ತಿರುವಿಬಿಡುತ್ತಿವೆ, ಕೊರೆತ ಅನಿವಾರ್ಯವಾಗಿದೆ. ಈ ಕುರಿತು ಖ್ಯಾತ ಸಾಕ್ಷ್ಯಚಿತ್ರಕಾರ ಶೇಖರ್ ದತ್ತಾತ್ರಿ ಪಾಂಡಿಚೇರಿಯ ಉದಾಹರಣೆ ಕೊಟ್ಟು ನಡೆಸಿದ ವೈಜ್ಞಾನಿಕ ಅಧ್ಯಯನದ ವಿಡಿಯೋ ನೋಡಿ: India’s disappearing beaches ಕಡಲು ಅಲ್ಲಿ ವಂಚಿಸಿದ ತನ್ನ ಚಟುವಟಿಕೆಯನ್ನು ನಿರ್ಭಾವದಿಂದ ಇಲ್ಲಿ ನಡೆಸಿದೆ. ನಿಜದಲ್ಲಿ ಇವು ಪ್ರಾಕೃತಿಕ ವಿಕೋಪ ಅಲ್ಲ ಎನ್ನುವ ಧೈರ್ಯ ಮತ್ತದನ್ನು ಚುರುಕಾಗಿ ಪರಿಹರಿಸುವ ಬದ್ಧತೆ ‘ಜನಸರ್ಕಾರ’ಗಳಿಗೆ ಇಲ್ಲದಿರುವುದು ನಿಜಕ್ಕೂ ಪ್ರಜಾಸತ್ತೆಯ ದುರಂತ!
ಮತಾಂಧ ಪುಡಾರಿಗಳೇ ಕೇಳಿ:
ಮುರಿದೊರಗಿದ ಮನೆಗಳ ವಠಾರದಲ್ಲಿ ನಿರ್ಜನ ಎನ್ನಲಾಗದಂತೆ, ತುಸು ಒಳಕ್ಕಿದ್ದ ಒಂದು ಮನೆ ಇನ್ನೂ ವಾಸದ ಲಕ್ಷಣಗಳನ್ನು ಉಳಿಸಿಕೊಂಡಿತ್ತು. ಅದರ ಯಜಮಾನ – ರಶೀದ್, ಮೀನುಗಾರ. ಆತ ತನ್ನ ಮನೆಯವರನ್ನು ಒಳನಾಡಿನ ಭದ್ರ ನೆಲೆಗೆ ಕಳಿಸಿದರೂ ಆಶಾವಾದಿಯಾಗಿ, ಬಹುತೇಕ ಮನೆ ಸಾಮಗ್ರಿಗಳನ್ನು ಉಳಿಸಿಕೊಂಡೇ ಕಾವಲು ನಡೆಸಿದ್ದ, ಸಮುದ್ರದ ಕರುಣೆಯನ್ನು ಕಾದೇ ಇದ್ದ. ನಾವು ಹೋದಂದು ಆತ ತುಸು ಆತಂಕದಲ್ಲಿ ಎಲ್ಲಿಗೋ ಹೊರಡುವವನಿದ್ದ. ಅದರಲ್ಲೂ ನಾವು ನಾಲ್ಕೇ ಮಾತಾಡಿಸಿದಾಗ ನಮಗಾದ ರೋಮಾಂಚನ ಅಪೂರ್ವ.
ಆ ಮನೆ, ಬಹುತೇಕ ಸಾಮಾನು ಮತ್ತಲ್ಲಿನ ಸಂಸಾರ ಎಲ್ಲವೂ ರಶೀದನದ್ದೇ. ಆದರೆ ಇದ್ದ ಒಂದು ಟೀವಿ ಮತ್ತೆ ಕೆಲವು ಬಟ್ಟೆಬರಿ ಆತನ ಮಿತ್ರನದ್ದಂತೆ. ಮಿತ್ರ ಇವನಿಗೆ ದೋಣಿ ಹಾಗೂ ಮೀನುಗಾರಿಕೆಯ ಪಾಲುಗಾರನೂ ಹೌದು. ಆತನ ಮನೆ ತುಸು ಒಳನಾಡಿನಲ್ಲಂತೆ. ಮೀನುಗಾರಿಕಾ ರಜಾದಿನಗಳನ್ನು ಬಿಟ್ಟು ಉಳಿದಂತೆ ಅವನು ಈ ಮನೆಯ ಸಹವಾಸಿ ಅಷ್ಟೆ. ಅನಿರೀಕ್ಷಿತ ಕಡಲ ಕೊರೆತದಿಂದ ಮನೆಗೆರಗಿದ ಆತಂಕ, ಮನೆಯವರ ದೂರ ರವಾನೆಗಳ ನಿರ್ವಹಣೆಯಲ್ಲಿ ರಶೀದ್ ವ್ಯಸ್ತನಾಗಿದ್ದ. ಜತೆಗೇ ಸಹಾಯಕ್ಕೊದಗಿದ್ದ ಪಾಲುದಾರ ಮಿತ್ರ, ನಿನ್ನೆ ಆಕಸ್ಮಿಕವಾಗಿ ರಸ್ತೆ ಅಪಘಾತಕ್ಕೆ ಸಿಕ್ಕಿ, ತೊಡೆ ಮುರಿದು, ಆಸ್ಪತ್ರೆ ಸೇರಿದ್ದ. ಆತನ ಬಂಧುಗಳು, ಮಂಗಳಾಪುರದ ಆಸ್ಪತ್ರೆ ಓಡಾಟ ನಡೆಸಲರಿಯದ ಮುಗ್ದರು. ಈಗ ರಶೀದನಿಗೆ ಡಬ್ಬಲ್ ಡ್ಯೂಟಿ – ರಾತ್ರಿ ಮನೆ ಕಾವಲು, ಹಗಲು ಮಿತ್ರನ ಆರೈಕೆ. ನಂಬಿದರೆ ನಂಬಿ – ಆ ಗೆಳೆಯ ಓರ್ವ ಹಿಂದೂ! ನಮ್ಮನ್ನು ಮತ್ತಷ್ಟು ಕಲಕಿದ್ದು ಈ ಮನುಷ್ಯನ (ಬ್ಯಾರಿ ಅಲ್ಲ, ಹಿಂದೂ ಅಲ್ಲ) ಸೌಜನ್ಯ – ನಾವು ತಲೆಯೊಳಗೆ ನಮ್ಮ ಚಲನಚಿತ್ರದ ಲಕ್ಷ್ಯ ಇಟ್ಟುಕೊಂಡೇ (hidden agenda?) ಐದೇ ಮಿನಿಟಿಗೆ ಮಾತಾಡಿಸಿದ್ದರೂ ಆತ ಕಷ್ಟ ವಿಚಾರಿಸಿದ್ದಕ್ಕೇ ಪ್ರೀತನಾಗಿ, ಪ್ರಾಮಾಣಿಕವಾಗಿ ಕೇಳಿದ್ದ “ಎರಡು ಚಾ ಮಾಡಿ ಕೊಡ್ಲಾ?
ಪೆಸಿಫಿಕ್ ಸಾಗರದ ಕೊಳಚೆ ಮಹಾಖಂಡದ ಪ್ರತಿನಿಧಿ ಪ್ರಕೃತಿ ತನ್ನ ಬಲದೊಡನೆ (ಭೂಕಂಪ, ಅಗ್ನಿಪರ್ವತ, ಸುನಾಮಿ ಇತ್ಯಾದಿ) ಒಗ್ಗದಿಕೆಯನ್ನೂ ಪ್ರಕಟಿಸುವುದು (ಬರ, ಮಹಾಪ್ರವಾಹ) ಕೇಳಿದ್ದೇವೆ. ೧೯೮೮ರಲ್ಲೇ ವಿಜ್ಞಾನಿಗಳು ಪೆಸಿಫಿಕ್ ಮಹಾಸಾಗರ ತನ್ನೊಡಲಿಗೆ ಬಂದ ‘ನಾಗರಿಕ ಕಚಡಾ’ಗಳನ್ನು (ಪ್ಲ್ಯಾಸ್ಟಿಕ್, ಫೋಮ್ ಮುಂತಾದವು) ಕಡೆದಿಟ್ಟು ತೇಲಿಬಿಟ್ಟಿರುವ ಭಾರೀ ‘ಬೆಣ್ಣೆಮುದ್ದೆ’ಗಳನ್ನು (ಅಂದಾಜಿನಂತೆ ಅಂಥಾ ಒಂದು ತೆಪ್ಪದ ವಿಸ್ತೀರ್ಣ ಏಳು ಲಕ್ಷ ಚದರ ಕಿಲೋಮೀಟರ್!) ಗುರುತಿಸಿದ್ದಾರೆ. ಮತ್ತದು ನಿಸ್ಸಂದೇಹವಾಗಿ ವಿಸ್ತರಿಸುತ್ತಲೇ ಇದೆ. ಇಂದು ಆ ಮಹಾ ಕೊಳಚೆ ಮಂಡಲದ ಕಿರು ಪ್ರತಿನಿಧಿ, ಮೂಸೋಡಿ ದಂಡೆಗೂ ಭೇಟಿ ಕೊಟ್ಟದ್ದನ್ನು ನಾವು ಕಾಣಬಹುದು! ಉನ್ನತ ಅಲೆಗೈಗಳು ಇನ್ನೂ ಪೂರ್ಣ ಜಲಗರ್ಭ ಸೇರದ ನೆಲದಲ್ಲಿ, ತತ್ತರಗುಟ್ಟುತ್ತಿರುವ ತೆಂಗಿನ ತಗ್ಗುಗಳಲ್ಲಿ, ಸೋತು ಒರಗಿದ ಬೇಲಿಗಳ ಉದ್ದಕ್ಕೆ, ಕುಡಿನೀರ ಬಾವಿಯ ಆಳದಲ್ಲೂ ತುಂಬಿಟ್ಟಿವೆ – ಹಳೆ ಚಪ್ಪಲಿ, ಹರಕು ಜಂಬದಚೀಲ, ಅಡಿಕಿತ್ತ ಬೂಟು, ಫೋಮು, ಥರ್ಮಕೋಲು, ಕೆಟ್ಟ ಟ್ಯೂಬ್ ಲೈಟುಗಳು ಇತ್ಯಾದಿ ಇತ್ಯಾದಿ!
ಉಡುಪಿಯ ಸವಿಜೇನುಗೂಡು!
ನನ್ನ ಯಕ್ಷಗಾನದ (ಕೇವಲ ಉತ್ತಮ ರಸಿಕನ ನೆಲೆಯಲ್ಲಿ) ಆಸಕ್ತಿಗೆ ಕಾಲಕಾಲಕ್ಕೆ ಒಳ್ಳೆಯ ಪೋಷಣೆಯನ್ನು ನೀಡಿದವರಲ್ಲಿ ನಾನು ಎಷ್ಟೂ ವ್ಯಕ್ತಿಗಳನ್ನು ಹೆಸರಿಸಬಲ್ಲೆ. ಆದರೆ ಆ ಎಲ್ಲರನ್ನೂ ಮೀರಿ ಒಂದು ಆದರ್ಶವಾಗಿ, ಹುಟ್ಟು ಸಂಸ್ಕಾರಗಳ ಕುರಿತ ನಮ್ಮೆಲ್ಲ ಭ್ರಮೆಗಳನ್ನು ಸುಳ್ಳಾಗಿಸಿದ ಅದ್ಭುತ ಗುರುವಾಗಿ, ಅತ್ಯುತ್ತಮ ವ್ಯಕ್ತಿಯಾಗಿ ಕಾಲಮಾನದಲ್ಲಿ ಸದಾ ಬೆಳೆಯುತ್ತಲೇ ಕಾಣಿಸಿದವರು ಬನ್ನಂಜೆ ಸಂಜೀವ ಸುವರ್ಣ – ಉಡುಪಿ ಯಕ್ಷಗಾನ ಕೇಂದ್ರದ ಅದ್ವಿತೀಯ ಜೀವನಾಡಿ. ಇದಕ್ಕೆ ಸಾಕ್ಷಿ ನನ್ನ ಜಾಲತಾಣದ ಯಕ್ಷಗಾನ ವಿಭಾಗದಲ್ಲಿ ಎಷ್ಟೂ ಇವೆ (ಉದಾ: ಯಕ್ಷಗಾನ ಪುನರುತ್ಥಾನದ ಸಿಂಹಗುರುತುಗಳು , ರಣಘೋಷ ಹೀಗೊಂದ್ಉ ಯಕ್ಷಗಾನ, ಮಹಾಲಿಂಗರು ಕಂಡ ಸಂಜೀವರ ಸಾಹಸ).
ಸಂಜೀವರ ಸರಳ ಕೌಟುಂಬಿಕ ಚಿತ್ರಣ ಕೊಡುವವರು “ಮಡದಿ (ವೇದ) ಮತ್ತೆರಡು ಮಕ್ಕಳು” (ಶಿಶಿರ, ಶಾಂತನು) ಎಂದಷ್ಟೇ ದಾಖಲಿಸಿಯಾರು. ಆದರೆ ಅವರೊಡನೆ ಸಂಪರ್ಕಕ್ಕೆ ಬಂದಾಗೆಲ್ಲ ನನಗಂತು ಅದು ಸುಳ್ಳಾಗಿಯೇ ಕಾಣಿಸಿದೆ. ಹೌದು, ತನ್ನ ಗಳಿಕೆಯ ಯಾವುದನ್ನೇ ಬಯಸಿ ಸಂಗ್ರಹಿಸ ಬಂದವರನ್ನು ಇವರು ಸಹಜವಾಗಿ ತನ್ನ ಕುಟುಂಬದ ಭಾಗವಾಗಿಸಿಕೊಳ್ಳುತ್ತಾರೆ; ಯಕ್ಷಗಾನ ಕೇಂದ್ರವನ್ನು ಆರೋಗ್ಯಪೂರ್ಣ ಜೇನುಗೂಡಾಗಿಸಿದ್ದಾರೆ. ಆ ಆದರ್ಶದ ಸಾಧನೆಯಲ್ಲಿ ಅವರ ನಿಜ ಕುಟುಂಬದ ಸದಸ್ಯರು (ಮಡದಿ – ಸುರೂಪ ತಜ್ಞೆ, ಮತ್ತೆರಡು ಮಕ್ಕಳು – ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು), ಇತರ ಗುರುವೃಂದ (ಸದ್ಯ ನನಗೆ ತಿಳಿದಂತೆ ಮದ್ಲೆಗಾರ ಕೃಷ್ಣಮೂರ್ತಿ ಮತ್ತಿತರರು) ಕೂಡಾ ಎಷ್ಟು ಆಳವಾಗಿ ತೊಡಗಿಕೊಂಡಿದ್ದಾರೆಂದು ಪಡ್ಡಾಯಿ ಚಿತ್ರದ ದೃಶ್ಯವೊಂದಕ್ಕೆ ಅವರು ತೆತ್ತುಕೊಂಡ ಕ್ರಮದಲ್ಲಿ ಮತ್ತೆ ಕಂಡುಕೊಂಡೆ.
ಮಂಗಳೂರಿನಿಂದ ನಾನು ಸಪತ್ನೀಕನಾಗಿ ಉಡುಪಿಗೆ ಬಸ್ಸಿನಲ್ಲಿ ಹೋಗಿ, ಇಂದ್ರಾಳಿಯಲ್ಲಿಳಿದೆ. ನಮ್ಮೊಡನೆ ನಾಲ್ಕೈದು ಶಾಲಾಮಕ್ಕಳೂ ಇಳಿದರು. ಅವರ ಮಾತು ಕೇಳಿ ಕುತೂಹಲದಲ್ಲಿ ವಿಚಾರಿಸಿದೆವು. ಕೊಪ್ಪ, ತೀರ್ಥಳ್ಳಿಯೇ ಮೊದಲಾದ ಹುಟ್ಟೂರಿನ ಅವರೆಲ್ಲ ಸದ್ಯ ‘ಬನ್ನಂಜೆ ಕುಟುಂಬ’ದ್ದೇ ಸದಸ್ಯರು. ಸುವ್ಯವಸ್ಥಿತ ಎರಡು ಮಹಡಿಯ ಸ್ವಂತ ಕಟ್ಟಡದಲ್ಲಿರುವ ಯಕ್ಷಗಾನ ಕೇಂದ್ರ, ತನ್ನ ಸ್ಥಳಾವಕಾಶದ ಮಿತಿ ನೋಡಿಕೊಂಡು, ಯಕ್ಷಾಸಕ್ತಿಯ ಎಲ್ಲೆಲ್ಲಿನ ಬಡಮಕ್ಕಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಉಚಿತವಾಗಿ ಅಶನ, ವಸನ, ವಸತಿ ಮತ್ತು ಯುಕ್ತ ಸಾರ್ವಜನಿಕ ಶಾಲಾ ಶಿಕ್ಷಣ ಕೊಟ್ಟು, ಯಕ್ಷಶಿಕ್ಷಣವನ್ನು ಕಲಿಸುತ್ತಿದೆ. ಉತ್ತಮ ಸಂಸ್ಕಾರಯುಕ್ತ ಕಲಾವಿದರನ್ನು ಸಮಾಜಕ್ಕೆ ಕೊಡುತ್ತಿದೆ. ಆ ಮಕ್ಕಳು ದಿನದ ಶಾಲಾ ಶಿಕ್ಷಣ ಮುಗಿಸಿ, ‘ಮನೆ’ಗೆ ಮರಳುತ್ತಿದ್ದರು.
ಅಂದು ಬನ್ನಂಜೆ ಸಂಜೀವ ಸುವರ್ಣರು ತನ್ನ ವಿಸ್ತೃತ ಸೇವಾತತ್ಪರತೆಯಲ್ಲಿ (ಉಜ್ಜೈನಿಯಲ್ಲಿ) ರಾಷ್ಟ್ರೀಯ ನಾಟಕ ಶಾಲಾ ವಿದ್ಯಾರ್ಥಿಗಳಿಗೆ, ಸುಮಾರು ಎರಡು ತಿಂಗಳ ಕಾಲ ಯಕ್ಷ-ಶಿಕ್ಷಣ ಕೊಡಲು ಹೋಗಿದ್ದರು. ಆದರೆ ಮೂಲಸ್ಥಾನದ ಕಲಾಪಗಳು ಯಾವುದೇ ಅಡೆತಡೆಯಿಲ್ಲದೆ ಸಹಜವಾಗಿ ನಡೆದಿದ್ದವು. ಆಗಷ್ಟೇ ಗೂಡಿಗೆ ಮರಳಿದ ಮಕ್ಕಳ ಮೆಲುದನಿಯ ಸಹಜ ಕಲಕಲದೊಡನೆ, ಎಲ್ಲೋ ಬಾಯಿತಾಳ ಜತೆಗೆ ಹೆಜ್ಜೆ ಬಡಿವ ಸದ್ದು, ಮತ್ತೆಲ್ಲೋ ಶ್ರುತಿ ಪೆಟ್ಟಿಗೆಯ ಗುಂಜನದೊಡನೆ ಚೆಂಡೆ ಹದಗೊಳಿಸುವ ನುಡಿತಗಳು ಕೇಳುತ್ತಿತ್ತು. ನಾನು ಹೀಗೇ ಎಲ್ಲ ಗ್ರಹಿಸುತ್ತ ಮಹಡಿ ಮೆಟ್ಟಲೇರಿದ್ದೆ. ಇಳಿದು ಬರುತ್ತಿದ್ದ ಶಿಶಿರ ನನ್ನ ಕಂಡು, ಮುಖ ಅರಳಿಸಿ, “ಓ ಆಗಲೇ ಬಂದ್ರಾ! ಮಣಿಪಾಲದ ಕೆಲವು ಕುಟುಂಬ ಸದಸ್ಯರಿಗೆ ತರಬೇತಿ ಕೊಡ್ತಾ ಇದ್ದೆ” ಎಂದಿದ್ದ. ಎರಡನೇ ಮಾಳಿಗೆಯಲ್ಲಿ ಇನ್ಯಾರೋ ಅನುಭವೀ ಸದಸ್ಯ ಮತ್ತೊಬ್ಬನಿಗೆ ಕನ್ನಡಿ ಎದುರು ಹೆಚ್ಚಿನ ತರಬೇತಿ ಕೊಡುತ್ತಿದ್ದ. ಉಳಿದಂತೆ ವಸತಿ ಕೊಠಡಿಗಳಲ್ಲಿ ಕೆಲ ಮಕ್ಕಳು ಶಾಲೆಯದೋ ಮತ್ತೊಂದೋ ಕೆಲಸಗಳಲ್ಲಿ ನಿರತರಾಗಿದ್ದರು. ಕೆಳಗಿನ ಕೋಣೆಯೊಂದರಲ್ಲಿ ತೆಂಕುತಿಟ್ಟಿನ ಸವ್ಯಸಾಚಿ ಪೃಥ್ವೀರಾಜ ಕವತ್ತಾರ್, ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ತಮ್ಮ ಬಳಗದೊಡನೆ ‘ಪಡ್ಡಾಯಿ’ ಚಿತ್ರೀಕರಣಕ್ಕಾಗಿ ಸಜ್ಜಾಗುತ್ತಿದ್ದರು. ವೇದಿಕೆಯ ಇನ್ನೊಂದು ಮಗ್ಗುಲಿನ ಹಜಾರದಲ್ಲಿ ತತ್ಕಾಲೀನ ಚೌಕಿ ಸಜ್ಜುಗೊಳಿಸಿ, ತೆಂಕುತಿಟ್ಟಿನ ನಾಲ್ಕೈದು ಪ್ರಸಿದ್ಧ ವೇಷಗಾರರು ಬಣ್ಣಗಾರಿಕೆಯಲ್ಲಿ ನಿರತರಾಗಿದ್ದರು. ಈ ಎಲ್ಲದರ ಮಥಿತಾರ್ಥವನ್ನು ದಾಖಲಿಸುವಂತೆ ರಂಗದಲ್ಲೂ ಎದುರಿನಂಗಳದಲ್ಲೂ ದೀಪ, ಮರೆ, ಕ್ಯಾಮರಾದೊಡನೆ ಪರಿಣತರೂ ಪ್ರೇರಿತ ಪ್ರೇಕ್ಷಕರೂ ಸಜ್ಜುಗೊಳ್ಳುತ್ತಿದ್ದವು. ಪ್ರಸ್ತುತ ಯಕ್ಷಗಾನ ಕೇಂದ್ರ ಬಡಗುತಿಟ್ಟಿನ ಕಲಾಪಕ್ಕಷ್ಟೇ ಸೀಮಿತಗೊಂಡಿದ್ದರೂ ಕಲೋದ್ದೇಶದ ಯಾವುದೇ ಅನ್ಯ ಚಟುವಟಿಕೆಗಳನ್ನು ನಿರಾಕರಿಸುವುದಿಲ್ಲ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗುವಂತೆ ಸನ್ನಿವೇಶ ಕಾವು ಪಡೆದಿತ್ತು. ನಾನು ಹೋದಂದು ಸಂಜೆ ತೊಡಗಿದ ಸಿನಿಮಾ ಕಲಾಪ ಸುಮಾರು ಏಳು ಗಂಟೆಯ ಉದ್ದಕ್ಕೆ ನಡೆಯಿತು!
ಯಕ್ಷಗಾನ ಬಳಸಿಕೊಂಡ ಹೆಚ್ಚಿನ ಚಲನಚಿತ್ರಗಳು, ಸಾಮಾನ್ಯವಾಗಿ ಅವನ್ನು ‘ಗ್ರಾಮ್ಯ ಮನರಂಜನಾ’ ಸ್ತರದಲ್ಲಿ ಗ್ರಹಿಸುವುದು ಕಂಡಿದ್ದೇನೆ. ಯಕ್ಷಗಾನದ ಬಣ್ಣ, ರಾಗ, ಕುಣಿತ, ಅಭಿನಯ, ಮಾತಿನ ಸ್ವಾರಸ್ಯಗಳೆಲ್ಲ ಯಾವುದೇ ಮಾಧ್ಯಮಕ್ಕೂ ಹೆಚ್ಚಿನ ಗೌರವ ತಂದುಕೊಂಡುವದರಲ್ಲಿ ಸಂದೇಹವೇ ಇಲ್ಲ. ಮತ್ತೆ, ಸಿನಿಮಾದಲ್ಲಿ ಅಳವಡಿಸಿಕೊಂಡ ಯಕ್ಷಗಾನ ಕಥಾನಕದ ಮೌಲ್ಯ ಚಿತ್ರಕತೆಯಲ್ಲಿ ಪ್ರತಿಬಿಂಬಿತವಾಗುವುದೂ ಇದೆ. ‘ಪಡ್ಡಾಯಿ’ ಈ ಎರಡೂ ವಿಚಾರಗಳನ್ನು ನಿರಾಕರಿಸದೆ, ಮೂರನೆಯ ಸಾಧ್ಯತೆಯನ್ನು ದುಡಿಸಿಕೊಳ್ಳುತ್ತದೆ. (ವಿವರಗಳನ್ನು ಸಿನಿಮಾದಲ್ಲೇ ಗ್ರಹಿಸಿ!) ಯಾವುದೋ ಕಾಲದ ವಿದೇಶೀ ಅರಸೊತ್ತಿಗೆಯ ಕಥಾನಕ (ಮ್ಯಾಕ್ಬೆತ್) ಇಂದು ನಮ್ಮ ಮೀನುಗಾರ ಸಮುದಾಯದ ನಡುವೆ ‘ಮರು ಅಭಿವ್ಯಕ್ತಿ’ ಪಡೆಯಬಹುದಾದರೆ, ಯಕ್ಷಗಾನರೂಪೀ ಮಹಾಭಾರತ ಯಾಕಾಗದು! ಸಿನಿಮಾದಲ್ಲಿ ಹಲವು ‘ಸಹಜ ಪ್ರದರ್ಶನ’ಗಳ ಪ್ರಾಸಂಗಿಕ ತುಣುಕಾಗಿ ಯಕ್ಷಗಾನ ಕಾಣುವುದಿತ್ತು. ಚಿತ್ರೀಕರಣಕ್ಕಾಗಿಯೇ ಇಲ್ಲಿ ಪ್ರದರ್ಶನ ನಡೆದುದುದರಿಂದ ನಿಜ ಯಕ್ಷ ಕಲಾವಿದರು ಆ ತುಣುಕುಗಳನ್ನಷ್ಟೇ ಪ್ರದರ್ಶಿಸಿದರು. ನನ್ನ ಕ್ಯಾಮರಾ ಮಿತಿಯಲ್ಲಿ ನಾನು ಮತ್ತಷ್ಟು ಚಿಕ್ಕ ಹೋಳುಗಳಲ್ಲಿ ಕೊಡುತ್ತಿದ್ದೇನೆ: ಚೌಕಿಯ ಪ್ರಾರ್ಥನೆ, ಅಶ್ವತ್ಥಾಮನ ರೌದ್ರ, ದೃಷ್ಟದ್ಯುಮ್ನನ ಅಸಹಾಯಕತೆ, ಅರ್ಜುನನ ಶಸ್ತ್ರಸನ್ಯಾಸ, ಭೀಮ- ದುಶ್ಶಾಸನರ ಮುಖಾಮುಖಿ. ಜತೆಗೇ ‘ಯಕ್ಷ ಪ್ರೇಕ್ಷಣೆ’ಯ ಅಂಶವಾಗಿ ನಾವು ಕ್ಯಾಮರಾವನ್ನೂ ಎದುರಿಸಿದೆವು.
ಇವಕ್ಕೆಲ್ಲ ಸಿನಿಮಾ ವ್ಯಾಕರಣದಂತೆ ಚೌಕಟ್ಟು ನಿರ್ಮಾಣ, ಬೆಳಕಿನ ಸಂಯೋಜನೆ, ಮಾತಿನ ಚಮತ್ಕಾರ, ಧ್ವನಿಯ ಸೆಳೆತವೇ ಮೊದಲಾದವು ಸಂಯೋಜನೆಗೊಳ್ಳುವ ಅನಿವಾರ್ಯತೆಯಲ್ಲಿ ಅಪಾರ ತಾಳ್ಮೆ ಮತ್ತು ಸಮಯ ಕೇಳುತ್ತವೆ. ಯಕ್ಷಗಾನ ಕೇಂದ್ರದ ಸಕಲ ಸದಸ್ಯರು (ಪ್ರಾಥಮಿಕ ಶಾಲಾ ಮಕ್ಕಳಿಂದ ತೊಡಗಿ ಹಿರಿಯರಾದ ವೇದ ಬನ್ನಂಜೆ, ಕೃಷ್ಣಮೂರ್ತಿಯವರವರೆಗೂ) ಸಂಜೆ ಆರೂವರೆ ಗಂಟೆಯಿಂದ ಅಪರಾತ್ರಿ ಒಂದೂವರೆ ಗಂಟೆವರೆಗೂ ತಮ್ಮ ಊಟ, ಅಧ್ಯಯನ, ವಿಶ್ರಾಂತಿಗಳನ್ನು ಸಹಜವೆನ್ನುವಂತೆ ಚಿತ್ರೀಕರಣಕ್ಕೆ ಹೊಂದಿಸಿಕೊಂಡರು. ‘ಪ್ರೇಕ್ಷಣೆಯ’, ‘ಸಭೆಯ’ (ಈ ಎರಡು ವಿಭಾಗದಲ್ಲಿ ನಾವೂ ಭಾಗಿಗಳು!) ಅಭಿನಯ ಕೊಟ್ಟು ಸಹಕರಿಸಿದ್ದರು. ಸಂಜೀವರು ದೈಹಿಕವಾಗಿ ಉಜ್ಜೈನಿಯಲ್ಲಿದ್ದರೂ ಮಾನಸಿಕವಾಗಿ ಇಲ್ಲೇ ಇದ್ದವರಂತೆ ಚರವಾಣಿಯಲ್ಲಿ ವೇದರ ಮೂಲಕ ವಿಚಾರಿಸಿಕೊಳ್ಳುತ್ತ ತೋರಿದ ಕಾಳಜಿಯಂತೂ ಅಪೂರ್ವ.
ಬೆಂಗ್ರೆಯಲ್ಲಿ ಡ್ರೋನ್
ಅಂದು ಬೆಂಗ್ರೆಯ ಕಡಲ ಕಿನಾರೆಯ ಟೆಟ್ರಾಪೋಡ್ (ಕಾಂಕ್ರೀಟಿನ ಭಾರೀ ಮುಗ್ಗಾಲಿನ ರಚನೆ) ಗೋಡೆಯ ಮೇಲೆ ಚಿತ್ರೀಕರ ನಡೆಯುವುದಿತ್ತು. ಅಲ್ಲಿನ ಪಾತ್ರ ನಿರ್ವಹಣೆಗೆಂದೇ ಬೆಂಗಳೂರಿನಿಂದ ಗೆಳೆಯ ರವಿಭಟ್ಟರು ಬಂದಿದ್ದರು. ‘ಪಡ್ಡಾಯಿ’ಯ ಮಂಜೇಶ (ಶ್ರೀನಿಧಿ) ಕಡಲ ಒಯ್ಯಲಿನಷ್ಟೇ ತನ್ನ ಗಾಢ ದುಃಖವನ್ನು ಸದಾಶಿವನಲ್ಲಿ (ರವಿ ಭಟ್) ನಿವೇದಿಸಿಕೊಳ್ಳುವುದನ್ನು ಸೆರೆ ಹಿಡಿಯಲು ಅಭಯ ವಿಶೇಷವಾಗಿ ಡ್ರೋನ್ ಬಳಸಿದ್ದ. ಹಿಂದೆ ಅಭಯ ಬ್ಯಾರೀಸ್ ಬಳಗದ ಜಾಹೀರಾತು ಚಿತ್ರವೊಂದಕ್ಕಾಗಿಯೂ ಡ್ರೋನ್ ಬಳಸಿದ್ದನ್ನು ನಾನು ಕಂಡಿದ್ದೆ. ಆದರೆ ಅಲ್ಲಿ ಕೇವಲ ದೃಶ್ಯ ವೈಭವಕ್ಕಾಗಿ ಬಳಕೆಯಾಗಿದ್ದ ತಾಂತ್ರಿಕ ವೈಶಿಷ್ಟ್ಯ ಇಲ್ಲಿ ಹೆಚ್ಚಿನ ಭಾವ ಪ್ರಚೋದನೆಗಾಗಿ ಬಂದದ್ದು ನನಗೆ ಹೆಚ್ಚು ಕುತೂಹಲ ಮೂಡಿಸಿತ್ತು. ಮುಂದೆ ರವಿಭಟ್ಟರ ಹಾಗೂ ಡ್ರೋನಿನ ‘ದಿನ’ವನ್ನು ಸದುಪಯೋಗ ಪಡಿಸುವಂತೆ ತಂಡ ಮಂಗಳೂರು ಬಂದರಿನ ‘ತೇಲು ಹೋಟೆಲ್’ ಕಡೆ ಹೊರಟಿತ್ತು. ನಾನು ಸೈಕಲ್ ಸವಾರಿಯ ಭಾಗವಾಗಿ ಅಲ್ಲಿದ್ದವನು, ಮನೆಗೆ ಮರಳಿದ್ದೆ.
ಪ್ರಥಮ ಪ್ರದರ್ಶನದ ಸಂಭ್ರಮ
ಅಭಯನ ಹಿಂದಿನ ನಾಲ್ಕೂ ಸಿನಿಮಾಗಳು ಚಿತ್ರ ಮಂದಿರಗಳಲ್ಲಿ ಮಹಾ ಓಡದಿದ್ದರೂ ನಿರ್ಮಾಪಕರ ಕೈಕಚ್ಚಿಲ್ಲವಂತೆ! ಅಂದರೆ ವಿವಿಧ ಸ್ಪರ್ಧೆಗಳಲ್ಲಿ ಗೆದ್ದಾಗ ಪ್ರಶಸ್ತಿಯೊಡನೆ ಬರುವ ಮೊತ್ತ, ಅನುದಾನ (ಸಬ್ಸಿಡಿ), ವಿವಿಧ ಟೀವೀ ಛಾನಲ್ಲುಗಳೂ ಸೇರಿದಂತೆ ಖಾಸಾ ಪ್ರಸಾರಕರಿಗೆ ಪ್ರದರ್ಶನ ಹಕ್ಕುಗಳ ಮಾರಾಟ ಎಂಬಿತ್ಯಾದಿ ಮೂಲಗಳು ಹಾಕಿದ ಹಣವನ್ನು ಬಡ್ಡಿಗೆ ಮೋಸವಿಲ್ಲದಂತೆ ಮರಳಿಸಿವೆ. ಹಿಂದಿನ ಕಥಾವಸ್ತುಗಳಿಂದ ಹೆಚ್ಚು ಗಂಭೀರ ವಿಚಾರದ, ಸಹಜವಾಗಿ ಮತ್ತೆ ದೊಡ್ಡ ಪ್ರೇಕ್ಷಕವೃಂದವನ್ನು ತಲಪಲಾಗದ ಕತೆಯೆಂದು ಯೋಚಿಸಿಯೇ ತೊಡಗಿದ ಚಿತ್ರ ಪಡ್ಡಾಯಿ. ಇದರ ಸಣ್ಣ ಹಣದ ವ್ಯವಸ್ಥೆಯನ್ನು ಪೂರ್ತಿ ಸಿನಿಮಾಕ್ಕೆ ಉಪಯೋಗಿಸಬೇಕು. ಪ್ರಚಾರ, ಮರುಗಳಿಕೆ ಏನಿದ್ದರೂ ಪ್ರಶಸ್ತಿ, ಬಾಯ್ಮಾತುಗಳಿಂದಲೇ ಆಗಬೇಕು ಎಂದೇ ನಿರ್ಧರಿಸಿದ್ದ. ಹಾಗಾಗಿ ತಯಾರಿಯ ಹಂತದಲ್ಲಿ ಪ್ರಚಾರದ ಅಂಶವನ್ನು ನಿರ್ಮಾಪಕರು, ಅಭಯ ಸೇರಿದಂತೆ ಇಡಿಯ ತಂಡ ಬಳಸಲೇ ಇಲ್ಲ. ಸ್ಪರ್ಧೆ, ಪ್ರಶಸ್ತಿಗಳೆಲ್ಲಕ್ಕೆ ಪ್ರಶಸ್ತವಾಗುವಂತೆ ೨೦೧೭ರ ವರ್ಷಾಂತ್ಯದೊಳಗೆ ಪ್ರದರ್ಶನ ಪ್ರಮಾಣ ಪತ್ರವನ್ನು (ಎ – ಸರ್ಟಿಫಿಕೇಟ್) ಗಳಿಸಿದ್ದೂ ಆಯ್ತು. ಅಭಯ ಬೆಂಗಳೂರಿನ ದೂರದಲ್ಲಿ “ಎಲ್ಲ ಮುಗಿಸಿದೆ. ಆದರೆ ಥಿಯೇಟರಿಗೆ ನಿಧಾನದಲ್ಲಿ” ಎಂದಾಗ, ಮಂಗಳೂರಿನ ನಮಗಿಬ್ಬರಿಗೆ ಕನಿಷ್ಠ ಅವನ ಮನೆಗೇ ಹೋಗಿ, ಗಣಕದ ಪರದೆಯಲ್ಲಾದರೂ ನೋಡಬಾರದೇಕೆ ಎನ್ನುವ ಕಾತರ! ಅದೃಷ್ಟಕ್ಕೆ ಹತ್ತಿರದಲ್ಲೇ ಬೆಂಗಳೂರು ಚಿತ್ರೋತ್ಸವ ಮತ್ತದರಲ್ಲಿ ಪಡ್ಡಾಯಿಯ ಪ್ರಥಮ ಪ್ರದರ್ಶನಕ್ಕೆ ಮುಹೂರ್ತವೂ ಒದಗಿತು. ನಾವು ಬೆಂಗಳೂರಿಗೇ ಹೋದೆವು.
ಹತ್ತನೇ ವರ್ಷದಲ್ಲಿ ನಡೆಯುತ್ತಿರುವ ಬೆಂಗಳೂರು ಚಿತ್ರೋತ್ಸವಕ್ಕೆ ಅಂತಾರಾಷ್ಟ್ರೀಯ ಮನ್ನಣೆಯಿದೆ. ಇಲ್ಲಿ (ಇಂಥಲ್ಲಿ) ಪ್ರದರ್ಶನಾವಕಾಶ ಕೋರಿ, ದೇಶವಿದೇಶಗಳಿಂದ ಸಾವಿರಾರು ಚಿತ್ರಗಳು ಬರುತ್ತವೆ. ಅವುಗಳಲ್ಲಿ ಸ್ಥಳೀಯ ಆಯ್ಕಾ ಸಮಿತಿ, ತನ್ನದೇ ಮಾನದಂಡ ಹಾಗೂ ಸಮಯಮಿತಿಗಳ ಜರಡಿಯಲ್ಲಿ ನೂರಿನ್ನೂರರಷ್ಟನ್ನು ಮಾತ್ರ ಆಯ್ದುಕೊಳ್ಳುತ್ತದೆ. ಅದರಲ್ಲಿ ಖ್ಯಾತನಾಮರ ಹಲವು ಚಿತ್ರಗಳು (ಕ್ಲಾಸಿಕ್ಸ್) ಕೇವಲ ಪ್ರದರ್ಶನಕ್ಕಿದ್ದವು. ಸ್ಪರ್ಧೆಗೆಂದೇ ಬಂದ (ಹೊಸವು) ಚಿತ್ರಗಳಲ್ಲಿ ಪ್ರಾಥಮಿಕ ಯೋಗ್ಯತಾನುಸಾರ ಮೂರು ವಲಯಗಳಲ್ಲಿ ಪರಿಗಣಿಸಿ ಪ್ರದರ್ಶನ ದಿನಾಂಕ ಹಾಗೂ ಸಮಯವನ್ನು ನಿಶ್ಚಯ ಮಾಡಿದ್ದರು. ಪಡ್ಡಾಯಿ ರಾಜ್ಯದ ಚಿತ್ರವೇ ಆದರೂ ಏಷ್ಯಾ ವಲಯಕ್ಕೆ ಸ್ವೀಕೃತವಾಗಿತ್ತು. ಆ ವಿಭಾಗದಲ್ಲಿ ದೊಡ್ಡ ಹಣಕಾಸಿನ, ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯರ ಪ್ರಯೋಗಗಳ ಜತೆ ಭಾರತದಿಂದ ಅವಕಾಶ ಗಿಟ್ಟಿಸಿದ ಮೂರೇ ಚಿತ್ರಗಳಲ್ಲಿ (ಎರಡೂ ಹಿಂದಿ) ಪಡ್ಡಾಯಿ ಒಂದು. ಆದರೆ ಕೊನೆಯಲ್ಲಿ, ಕಣಕ್ಕೆ ಆಯ್ಕೆಯಾದ ಒಟ್ಟಾರೆ ಎಂಟು ಹತ್ತು ಚಿತ್ರಗಳಲ್ಲಿ ಪಡ್ಡಾಯಿಯೂ ಒಂದು ಎನ್ನುವ ಗೌರವ ಮಾತ್ರ ಪಡ್ಡಾಯಿಗೆ ದಕ್ಕಿತು. ಅದೇನೇ ಇರಲಿ…
ಚಿತ್ರೋದ್ದಿಮೆ ತನ್ನದೇ ಮಾನದಂಡಗಳಲ್ಲಿ ಚಿತ್ರಗಳನ್ನು ಕ್ಲಾಸ್ (ಗಂಭೀರ ವೀಕ್ಷಕರದ್ದು) ಮತ್ತು ಮಾಸ್ (ಸಾರ್ವಜನಿಕರದ್ದು) ಎಂದು ಎರಡಾಗಿಸಿ ನೋಡುತ್ತದೆ. ಆ ಲೆಕ್ಕದಲ್ಲಿ ಅಭಯನ ‘ಸಕ್ಕರೆ’ (ಬಿ. ಸುರೇಶ್ ನಿರ್ಮಾಣ, ಮುಖ್ಯಪಾತ್ರದಲ್ಲಿ ಗಣೇಶ್ ಮತ್ತು ದೀಪಾ ಸನ್ನಿಧಿ) – ಮಾಸ್ ವರ್ಗದ್ದು. ಬೆಂಗಳೂರಿನಲ್ಲಿ ಅದರ ಬಿಡುಗಡೆಯ ‘ವೈಭವ’ ನೋಡಲು ನಾನು ದೇವಕಿಯೂ ಹೋಗಿ ಬೆರಗಾಗಿದ್ದೆವು. (ನೋಡಿ: ನಾಲ್ಕು ಸಕ್ಕರೆ ಹನಿಗಳು ) ಅದು ನಡೆದದ್ದು ಸ್ವತಂತ್ರ ಥಿಯೇಟರ್ ಒಂದರಲ್ಲಿ. ಆದರೆ ಪಡ್ಡಾಯಿ ಕ್ಲಾಸ್ ವರ್ಗದ್ದು ಮತ್ತು ಬೆಂಗಳೂರು ಚಿತ್ರೋತ್ಸವದ ಸನ್ನಿವೇಶವೂ ಕ್ಲಾಸ್ ವರ್ಗದ್ದೇ! ಫೆಬ್ರುವರಿ ೨೨ರಿಂದ ಮಾರ್ಚ್ ೧ರವರೆಗೆ ಬೆಂಗಳೂರಿನ ಪ್ರತಿಷ್ಠಿತ ಒರಾಯನ್ ಮಾಲಿನ, ಪೀವಿಯಾರ್ (ಮಲ್ಟಿಪ್ಲೆಕ್ಸ್) ಬಳಗದ ಹನ್ನೆರಡು ಬೃಹತ್ ಬೆಳ್ಳಿತೆರೆಗಳಲ್ಲಿ ಬೆಳಕು ಹರಿದಲ್ಲಿಂದ ರಾತ್ರಿಯ ಆಳಕ್ಕೆ ಪ್ರದರ್ಶಿತಗೊಳ್ಳುವ ನೂರಾರು ಚಲನಚಿತ್ರಗಳ ಹಬ್ಬವಿದು. ಇಲ್ಲಿ ಪಡ್ಡಾಯಿಯ ಪ್ರಥಮ ಪ್ರದರ್ಶನದ ಬೇರೊಂದೇ ಬಗೆಯ ವೈಭವವನ್ನು ಅನುಭವಿಸುವ ಉತ್ಸಾಹದಲ್ಲಿ ನಾವು ಹಿಂದಿನ ದಿನವೇ ‘ಅ(ಭಯ)ರ(ಶ್ಮಿಯರ)ಮನೆ’ ಸೇರಿಕೊಂಡಿದ್ದೆವು.
೨೫ರ ಬೆಳಿಗ್ಗೆ ಅಭಯನೊಡನೇ ಹತ್ತು ಗಂಟೆಯ ಸುಮಾರಿಗೇ ಪೀವಿಯಾರ್ (ಮಲ್ಟಿಪ್ಲೆಕ್ಸ್ ಸಂಸ್ಥೆ) ಗೇಟು ತಲಪಿದ್ದೆವು. ಉತ್ಸವಕ್ಕಾಗಲೇ ಮೂರನೇ ದಿನದ ಉತ್ಸಾಹ. ಅಲ್ಲಿನ ಅಪಾರ ಜನಸ್ತೋಮ ತೀವ್ರ ಚಲನಶೀಲ. ಹೆಚ್ಚಿನವರಿಗೆ ಕೈಯಲ್ಲಿ ಚಿತ್ರೋತ್ಸವದ ವೇಳಾಪಟ್ಟಿ ಹಿಡಿದು, ಕತ್ತು ಕೊಕ್ಕರೆಯಾಗಿಸಿ, ತಮ್ಮ ಆಯ್ಕೆಯ ಸ್ಕ್ರೀನ್ ಎಲ್ಲೆಂದು ಗುರುತಿಸಿ, ಸರತಿ ಸಾಲಿಗೆ ಸೇರುವ ಆತುರ. ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುವ ಚಿತ್ರಗಳಿಗೆ ‘ಕ್ಲಾಸ್ ಮತ್ತು ಮಾಸ್’ ವರ್ಗೀಕರಣ ಸಲ್ಲುವುದಿಲ್ಲ. ಇಲ್ಲಿ ಏನಿದ್ದರೂ ವಿಷಯಕ ವರ್ಗೀಕರಣ. ಅದೇನಿದ್ದರೂ ವೈಚಾರಿಕವಾಗಿ ಉತ್ತಮ ಸಿನಿಮಾವಂತೂ ಆಗಿರಲೇಬೇಕೆಂಬ ಭರವಸೆ. ಈ ಅರಿವಿದ್ದೇ ಬೆಂಗಳೂರೇನು ದೇಶವಿದೇಶಗಳ ಸಿನಿಮಾಸಕ್ತರೂ ತಿಂಗಳುಗಳ ಮೊದಲೇ ಯೋಜನೆ ಹಾಕಿ ಉತ್ಸವಗಳಲ್ಲಿ ಭಾಗಿಗಳಾಗುತ್ತಾರೆ. ದಿನವಿಡೀ ಸಿನಿಮಾ ನೋಡುತ್ತಾ ಬಿಡುವುಗಳಲ್ಲಿ ಚಾ ಚಾಟ್ ದುಕಾನುಗಳಲ್ಲಿ ಸಮಾನ ಮನಸ್ಕರೊಡನೆ ಹರಟುತ್ತಾ ಬದಲಾವಣೆ ಬೇಕೆನ್ನಿಸಿದಾಗ ಸಿನಿ-ಸಂಬಂಧದ ವಿವಿಧ ಪ್ರದರ್ಶನಗಳಲ್ಲಿ ಗಸ್ತುಹೊಡೆಯುತ್ತಾ ಗಂಭೀರ ಗೋಷ್ಟಿಗಳಲ್ಲಿ ಭಾಗಿಯಾಗುತ್ತಾ ಇರುತ್ತಾರೆ. ಸಿನಿಮಾ ಲೋಕದಲ್ಲಿ ಗಂಭೀರ ಕೆಲಸ ಮಾಡಿ, ಅತಿ ಗಣ್ಯ ವ್ಯಕ್ತಿಗಳಾಗಿದ್ದೂ ಬೆಳ್ಳಿ ಬೆಳಕಿಗೆ ಬಾರದ ಎಷ್ಟೊ ಖ್ಯಾತನಾಮರು ಉತ್ಸವಗಳಲ್ಲಿ ಭಾಗಿಗಳಾಗುತ್ತಾರೆ. ರಸಿಕರಿಗೆ ಅವರೊಡನೆ ಅನೌಪಚಾರಿಕ ಮಾತುಕತೆಯಲ್ಲಿ ತೊಡಗಿಕೊಳ್ಳುವ ಅವಕಾಶವಂತೂ ಅನ್ಯತ್ರ ಅಲಭ್ಯ. ಕೊನೆಯಲ್ಲಿ ರಸಿಕರು, ಚಿತ್ರ ಹಬ್ಬದ ಸ್ಫೂರ್ತಿ-ಪ್ರಸಾದವನ್ನು ಹಿಡಿದು ತಮ್ಮ ನೆಲೆಗಳಿಗೆ ಮರಳಿದ ಮೇಲೂ ನೆನಪುಗಳನ್ನು ಚಿರಸ್ಫೂರ್ತಿಯ ಸೆಲೆಯಾಗಿಸಿ, ತಾವು ಸಂತೋಷಪಡುವುದರೊಡನೆ ಸಂಪರ್ಕಕ್ಕೆ ಬಂದವರಿಗೆ ಸುಖದಾಯಿಗಳಾಗುತ್ತಾರೆ. ಉತ್ತಮ ಚಿತ್ರಗಳ ಚಟದಾಸರಾಗಿ, ಇನ್ನೊಂದೇ ಚಿತ್ರೋತ್ಸವ ಎಲ್ಲಿ, ಎಂದು ಅರಸುತ್ತಿರುತ್ತಾರೆ! (ಚಿತ್ರೋತ್ಸವದ ಕುರಿತು ನನ್ನ ಇನ್ನೊಂದೇ ಕಥನ, ೨೦೦೯ರ ‘ಗೋವಾ ಚಿತ್ರೋತ್ಸವ’ದ್ದು ಮೂರು ಭಾಗಗಳಲ್ಲಿದೆ. ಆಸಕ್ತ ಓದುಗರು ಇಲ್ಲೇ ಚಿಟಿಕೆ ಹೊಡೆದು, ಈಗಲೇ ಪ್ರಾರಂಭಿಸಬಹುದು!) ಅಂಥಾ ಗದ್ದಲದ ಭಾಗವಾದ…
ಪಡ್ಡಾಯಿ ಒಂಬತ್ತನೇ ತೆರೆಯ ಮೇಲೆ, ಹನ್ನೊಂದೂಮುಕ್ಕಾಲಕ್ಕೆ ಪ್ರದರ್ಶನಕ್ಕೆ ಬರಲಿತ್ತು. ಸಾಕಷ್ಟು ಮುಂದಾಗಿಯೇ ಬಂದಿದ್ದ ನಮಗೆ ಉತ್ಸವದಲ್ಲಿ ಪಡ್ಡಾಯಿಗೇ ಒಂದು ಪ್ರತ್ಯೇಕ ಕಳೆ ಕೂಡಿ ಬಂದಂತೇ ಕಾಣಿಸಿತು. ಕಾರಣ ಇಷ್ಟೇ: ‘ಪಡ್ಡಾಯಿ’ ನಟವರ್ಗದ – ಅವಿನಾಶ್ ರೈ, ಮೋಹನ್ ಶೇಣಿ, ಬಿಂದು ರಕ್ಷಿದಿ, ಸದಾಶಿವ ರೈ ಮತ್ತೂ ಕೆಲವು ನೀನಾಸಂ ಕಲಾವಿದರೂ ಚಿತ್ರೋತ್ಸವದಲ್ಲಿ ಸ್ವಯಂಸೇವಕರಾಗಿ ದುಡಿಯುತ್ತಿದ್ದರು. ಅವರು ಪಡ್ಡಾಯಿ ಪ್ರದರ್ಶನಕ್ಕೆ ಮಾತ್ರ ತಮ್ಮ ಜವಾಬ್ದಾರಿಗಳನ್ನು ಇತರರಿಗೆ ಹಂಚಿ, ನಮ್ಮೊಡನೆ ಸೇರಿಕೊಂಡಿದ್ದರು. ಬೆಂಗಳೂರಿನಲ್ಲೇ ಇದ್ದ ಕ್ಯಾಮರಾದ ವಿಷ್ಣು, ಧ್ವನಿಯ ಜೆಮಿ, ಸಂಗೀತದ ಮಣಿಕಾಂತ್, ಸಂಕಲನಕಾರ ಪ್ರಶಾಂತ್, ಸಹಾಯಕರಾಗಿದ್ದ ರಕ್ಷಿತ್, ಪ್ರಯಾಗ್ ಆದಿಯಾಗಿ ಹಲವರೂ ಬಂದಿದ್ದರು. ಮಂಗಳೂರಿನ ದೂರದಿಂದ ‘ಐತ’ ಪಾತ್ರಧಾರಿಯಾಗಿದ್ದ ಪ್ರಭಾಕರ್ ಮತ್ತು ಉಡುಪಿಯಿಂದ ನಿರ್ದೇಶನ ಸಹಾಯಕ ಬಳಗದ ಚಂಚಲಾ ಭಟ್ ಕೂಡಾ ಬಂದಿದ್ದರು. ಶಂಕರಿಯಮ್ಮ ಪಾತ್ರಧಾರಿಯಾಗಿದ್ದ ವಾಣೀ ಪೆರಿಯೋಡಿಗೆ ಅನಿವಾರ್ಯ ಕಾರಣಗಳಿಗೆ ಬಂಟ್ವಾಳದಿಂದ ಬರಲಾಗದಿದ್ದರೂ ಬೆಂಗಳೂರಿನಲ್ಲೇ ಇದ್ದ ಪತಿ – ಉಮಾಶಂಕರ್ ಮತ್ತು ಎರಡು ಮಕ್ಕಳನ್ನು ವೀಕ್ಷಣೆ ತಪ್ಪಿಸಿಕೊಳ್ಳದಂತೆ ಕಳಿಸಿದ್ದರು. ಇಲ್ಲಿ ‘ಮಾಸ್’ನ ಹುಸಿ ಅಬ್ಬರವಿರಲಿಲ್ಲ ಆದರೆ ‘ಕ್ಲಾಸ್’ನ ಕೃತಕವಲ್ಲದ ಆನಂದವಂತೂ ಇದ್ದೇ ಇತ್ತು. ಓಣಿಯ ಜಂಗುಳಿಯಲ್ಲಿ ಒಬ್ಬೊಬ್ಬರನ್ನೇ ಗುರುತಿಸಿ, ಹತ್ತಿರ ಮಾಡಿಕೊಳ್ಳುವುದು, ಕುತೂಹಲದ ಕಟ್ಟೆಯಂಚಿನಲ್ಲಿ ತುಳುಕಿದಂತೆ ಮೆಲು ಮಾತಾಡುವುದು, ಒಳ ಸೇರಿದ್ದೇ ಕಿರು ಔಪಚಾರಿಕ ಕಲಾಪದಲ್ಲಿ ‘ಪರೀಕ್ಷಕರನ್ನು’ ಎದುರಿಸಿದ್ದು, ವೀಕ್ಷಣೆ ಮುಗಿದ ಮೇಲೆ ಸಂತೃಪ್ತರೊಡನೆ ಇನ್ನು ಮುಗಿಯದಂತೆ ಮಾತಾಡುತ್ತಲೇ ಇದ್ದು ಥಿಯೇಟರ್ ನೌಕರರಿಂದ ಸೌಮ್ಯವಾಗಿ ಹೊರ ನೂಕಿಸಿಕೊಂಡದ್ದು ಹೇಳಿದಷ್ಟು ಮುಗಿಯದು.
ಪಡ್ಡಾಯಿಯ ಅಂಕುರಾರ್ಪಣೆಯಿಂದ ಪ್ರಥಮ ಪ್ರದರ್ಶನದವರೆಗೆ ನನ್ನದೇನಿಲ್ಲದಿದ್ದರೂ ಎಲ್ಲ ನನ್ನದೇ ಎನ್ನುವ ಭಾವ ಗಾಢವಾಗಿರುವುದರಿಂದ ನಾನು ಚಿತ್ರ ವಿಮರ್ಶೆ ಮಾಡಲಾರೆ. ಆದರೆ ಗುರುತು ಸಿಕ್ಕ ಮಂದಿಗಿಂತಲೂ ಎಷ್ಟೋ ಹೆಚ್ಚಿಗೆ ಜನ ಪಡ್ಡಾಯಿಯನ್ನು ನಮ್ಮ ಜತೆಯಲ್ಲೇ ವೀಕ್ಷಿಸಿದ್ದರು. ಚಿತ್ರೋತ್ಸವಗಳ ಬಳಕೆಯಲ್ಲಿ ಪಳಗಿದ ಈ ದೇಶವಿದೇಶದ ರಸಿಕರು, ಸುಮಾರು ೨೫೦ ಚಿತ್ರಗಳ ಪಟ್ಟಿಯಲ್ಲಿ, ಪ್ರಾದೇಶಿಕತೆ, ಕಥಾಸೂಕ್ಷ್ಮ, ನಿರ್ದೇಶಕನ ಹಿನ್ನೆಲೆಗಳನ್ನೇ ನೋಡಿ, ವಿಭಿನ್ನ ವೇಳಾಪಟ್ಟಿಯಲ್ಲಿ ಇದಕ್ಕೆ ಸಮಯ ಹೊಂದಿಸಿಕೊಂಡು ಥಿಯೇಟರ್ ಬಹುತೇಕ ತುಂಬುವಂತೆಯೇ ಬಂದಿದ್ದರು ಎನ್ನುವುದೇ ಒಂದು ವಿಶೇಷ. ಹಾಗೆ ಬಂದವರಲ್ಲಿ ಅದರಲ್ಲಿ ತುಳುವರು ತುಂಬ ಕಡಿಮೆಯಿದ್ದರು. (ಚಿತ್ರೋತ್ಸವದಲ್ಲಿ ಇಂಗ್ಲಿಷ್ ಬಿಟ್ಟು ಬೇರೆಲ್ಲ ಭಾಷಾ ಚಿತ್ರಗಳಿಗೂ ಇಂಗ್ಲಿಷ್ ಸಬ್-ಟೈಟ್ಲ್ಸ್ ಇರುತ್ತದೆ) ಅವರೆಲ್ಲ ಒಳ್ಳೆಯ ಚಿತ್ರಕ್ಕೆ ‘ಭಾಷೆಯತಡೆ’ ಎಂಬುದಿಲ್ಲ ಎನ್ನುವುದನ್ನು ಸಾರುವಂತೆ, ಚಿತ್ರವನ್ನು ಮುಕ್ತವಾಗಿ ಮೆಚ್ಚಿ ನುಡಿಯುತ್ತಿದ್ದಾಗ ಅಭಯ ಧನ್ಯತೆಯ ಭಾರದಲ್ಲಿ ಬಗ್ಗಿ ಹೋದ.
ವಿಶೇಷ ಸ್ಪಷ್ಟೀಕರಣ: ನಾನು ಅಭಯನ ಚಿತ್ರ ತಂಡದ ಭಾಗವಲ್ಲ. ಆದರೆ ಚಿತ್ರೀಕರಣದುದ್ದಕ್ಕೆ ನನ್ನ ಅನುಕೂಲಕ್ಕೆ ಸಿಕ್ಕಷ್ಟರಲ್ಲಿ ಎಂದಿನಂತೆ ನನ್ನದೇ ಚಿತ್ರ, ಟಿಪ್ಪಣಿಗಳನ್ನು ಮಾಡಿಕೊಂಡುಬಂದೆ. ಅಭಯ ಮೊದಲೇ ಒಂದು ಮನವಿ ಮಾಡಿದ್ದ “ಚಿತ್ರೀಕರಣದ ಸುದ್ದಿ ಮಾತ್ರ ಸಾರ್ವಜನಿಕ ಮಾಡಬೇಡಿ.” ಅದನ್ನು ಪಾಲಿಸುವಂತೆ, ಆಗೀಗ ನಾನು ಫೇಸ್ ಬುಕ್ಕಿನಲ್ಲಿ ಪ್ರಕಟಿಸಿದ (ಚಿತ್ರ) ಟಿಪ್ಪಣಿಗಳಲ್ಲಿ ಚಿತ್ರೀಕರಣದ ಸುದ್ದಿಯನ್ನು ಮರೆಸಿದ್ದೇನೆ. ಮತ್ತೆ ಈಗಲೂ ಈ ಲೇಖನವನ್ನು ಮುಂದಾಗಿ (ಪ್ರಕಟಣೆಯ ಹಿಂದಿನ ದಿನ) ಅಭಯನಿಗೆ ತೋರಿಸಿದ್ದೂ ಇಲ್ಲ. ಹಾಗಾಗಿ ಇದು ಚಿತ್ರ ನಿರ್ಮಾಣದ ಅಧಿಕೃತ ದಾಖಲೆ ಅಲ್ಲ. ಇದರ ಅಭಿಪ್ರಾಯಗಳೇನಿದ್ದರೂ ಪೂರ್ಣ ನನ್ನವೇ, ಅಭಯನದ್ದಲ್ಲ.
ಚಿತ್ರವೊಮದರ ತಯಾರಿಯ ತೆರೆಯ ಹಿಮದಿನ ಕತೆ ಚಿತ್ರದಷ್ಟೇ ರೊಮಾಂಚಕಾರಿ. ಅದರಲ್ಲಿ ಭಾಗವಹಿಸಿದವರು ಹೀಗೆ ಕಥನವಾಗಿ ನಿರೂಪಿಸಿದ್ದು ತುಂಬ ಉಪಯುಕ್ತ. ನಿಮಗೆ ಧನ್ಯವಾದಗಳು. ಅಭಿನಂದನೆಗಳು
ಈ ಲೇಖನ ಸಿನಿಮಾ ಚಿತ್ರೀಕರಣದಷ್ಟೇ ರೋಮಾಂಚನಕಾರಿಯಾಗಿದೆ.. ನೀವು ಚಿತ್ರತಂಡದ ಭಾಗವಲ್ಲ ಎಂದು ವಿಶೇಷ ಸ್ಪಷ್ಟೀಕರಣ ಯಾಕೆ ಕೊಟ್ಟಿರೆಂದು ಗೊತ್ತಾಗಿಲ್ಲ… ನನ್ನ ಪ್ರಕಾರ ನೀವು ತಂಡದ ಭಾಗವೇ ಆಗಿದ್ದೀರಿ… ಲೊಕೇಶನ್ ಹುಡುಕುವ ಅತ್ಯಂತ ಕಷ್ಟದ ಕೆಲಸಕ್ಕೆ ನೀವು ನಿರ್ದೇಶಕರೊಂದಿಗೆ ಕೈಜೋಡಿಸಿದ್ದೀರಿ… ಅಭಯರು ನೂರು ಅರ್ಥಗಳನ್ನು ಮೌನವಾಗಿ ಹೇಳುವ ದ್ರಶ್ಯರೂಪಕಗಳನ್ನು ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ (ಉದಾಹರಣೆಗೆ ಪರ್ ಫ್ಯೂಮ್ ಬಾಟಲ್ ರೂಪಕ)…. ನೀವೂ ಲೇಖನದಲ್ಲಿ ಅದ್ಭುತ ಭಾಷಾರೂಪಕಗಳನ್ನು ಮೂಡಿಸುತ್ತೀರಿ… ಉದಾಹರಣೆಗೆ “ಇಲ್ಲಿ ಕಡಲಿಗೆ ಬೀಗ ಹಾಕಿದ್ದಾರೆ”……” ಶಾಂತ ಸಾಗರದಲ್ಲಿ ನಾಗರಿಕ ಕಚಡಾ “……ಇತ್ಯಾದಿ…. . ಮಾನವ ನಿರ್ಮಿತ ಕಡಲ್ಕೊರೆತದ ಸಂತ್ರಸ್ತ ರಶೀದನ ಮಾನವೀಯತೆ, ಯಕ್ಷಗಾನದ ಬನ್ನಂಜೆ ಸಂಜೀವ ಸುವರ್ಣರ ತಾಯ್ತನ ಎಲ್ಲವೂ ನನಗೆ ಇಷ್ಟವಾಯಿತು…. ಆದರೆ ಸಿನಿಮಾದ ವಿಮರ್ಶೆ ಬರೆಯಲಾರೆ ಎಂದು ಹೇಳಿ ನಮ್ಮನ್ನು ನಿರಾಸೆಗೊಳಿಸಿದ್ದೀರಿ…ಬರೆಯುತ್ತೇನೆ ಎಂದ ದಿನೇಶ್ ಅಮೀನ್ ರೂ ಪತ್ತೆ ಇಲ್ಲ
‘ಮನೆ ಮಾತ’ನ್ನು ಸಾರ್ವಜನಿಕದಲ್ಲಿ ಹೇಳುವುದು ಸರಿಯಲ್ಲ 🙂
ಅಭಯನ ಸ್ವಂತಿಕೆಯನ್ನು ಗಮನಿಸುತ್ತ ಬಂದಿದ್ದೇನೆ.ನಿಮ್ಮ ಟಿಪ್ಪಣಿಗಳು ಆತನ ಕ್ರಿಯಾಶೀಲತೆಯನ್ನು ಪರೋಕ್ಷರೂಪದಲ್ಲಿ ತೆರೆದಿಟ್ಟಿದೆ.ಓದಿ, ಶಿಷ್ಯನ ಬಗ್ಗೆ ಹೆಮ್ಮೆ ಎನಿಸಿತು.